ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು

Date: 31-10-2022

Location: ಬೆಂಗಳೂರು


ಬ್ರಾಹ್ಮಣ ಗುರು ಗೋವಿಂದಭಟ್ಟ ಮುಸ್ಲಿಮ್ ಕುಲದ ಶರೀಫನಿಗೆ ಜನಿವಾರ ಹಾಕುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗದ ದುರಿತ ಕಾಲದಲ್ಲಿ ನಾವಿಂದು ಬದುಕಿದ್ದೇವೆ ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ‘ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು’ ಕುರಿತು ಬರೆದಿದ್ದಾರೆ.

ಕಸವರಮೆಂಬುದು ನೆರೆ ಸೈ
ರಿಸಲಾರ್ಪೊಡೆ ಪರವಿಚಾರಮಂ ಪರಧರ್ಮಮುಮಂ
ಕಸವೇಂ ಕಸವರಮೇನುಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ

ಮನುಷ್ಯನ ನಿಜವಾದ ಸಂಪತ್ತು ಯಾವುದೆಂದರೆ : ಪರರ ವಿಚಾರಗಳನ್ನು, ಪರರ ಧರ್ಮವನ್ನು ಸೈರಿಸುವಂಥ ಸಹನಾಗುಣ ಹೊಂದಿರುವುದು ಆಗಿದೆ. ಅದಿಲ್ಲದಿದ್ದರೆ ನಿಮ್ಮಬಳಿ ಅದೆಷ್ಟೇ ರಸವಿರಲಿ ಬಂಗಾರವೇ ಇದ್ದರೂ ದುಃಖದ ಆಗರ. ಸೌಹಾರ್ದತೆ ಕುರಿತಾಗಿ ಕನ್ನಡದ ಮೊಟ್ಟಮೊದಲ ಮಾತುಗಳಿವು. ಅವು ಬರೀ ಮಾತುಗಳಲ್ಲ ಬೀಜದ ಮಾತುಗಳು. ಅಂದರೆ ಅಜಮಾಸು ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಕನ್ನಡದ ನೆಲದಲ್ಲಿ ಪ್ರೀತಿ, ಸಾಮರಸ್ಯ, ಮನುಷ್ಯ ಮನುಷ್ಯರ ನಡುವೆ ಇರಬೇಕಾದ ಸೌಹಾರ್ದ ಬದುಕಿನ ಇಂತಹ ಮಾತಿನ ನುಡಿಗಟ್ಟುಗಳು ಹುಟ್ಟಿಕೊಂಡಿವೆ. ದೊರೆ ಅಮೋಘವರ್ಷ ನೃಪತುಂಗನ ನಾಡಿನ ಕವಿರಾಜ ಮಾರ್ಗಕಾರ ಶ್ರೀವಿಜಯ ಬರೆದ ಅಮೋಘ ನುಡಿಗಳಿವು. ಇಂದಿನ ನಮ್ಮ ಕಲ್ಯಾಣ ಕರ್ನಾಟಕದ ಸೇಡಂ ತಾಲೂಕಿನ ಮಳಖೇಡವೇ ಅಂದಿನ ಚಕ್ರವರ್ತಿ ನೃಪತುಂಗನ‌ ಮಾನ್ಯಖೇಟ. ಅದು ರಾಷ್ಟ್ರಕೂಟರ ರಾಜಧಾನಿ.

ನೃಪತುಂಗನ ನಂತರದ್ದು ಜೈನಯುಗ ಅರ್ಥಾತ್ ಪಂಪಯುಗ. ಅದು " ಮನುಷ್ಯ ಜಾತಿ ತಾನೊಂದೇ ಒಲಂ " ಎಂಬ ಮನುಷ್ಯ ಕೇಂದ್ರಿತ ಜೀವ ಸಂವೇದನೆಯ ಯುಗ. ತದನಂತರದು ಸಮ ಸಮಾಜದ ಕನಸು ಕಂಡದ್ದು., ಇವನಾರವ, ಇವನಾರವ ಎಂದೆನಿಸದೇ ಇವ ನಮ್ಮವ ಎಂದೆನಿಸಿದ ವಚನ ಚಳವಳಿ. ಜಾತಿ, ಮತ, ಧರ್ಮ, ಹೆಣ್ಣು ಗಂಡೆಂಬ ತಾರತಮ್ಯ ನೀಗಿದ ಅಪ್ಪಟ ಮನುಷ್ಯನ ಹುಡುಕಾಟದ ಮನ್ವಂತರ. ತರುವಾಯ ಎಲ್ಲ ಬಗೆಯ ಜೀವಪರ ಸಾಮರಸ್ಯಕ್ಕೆ ಮುಖಾಮುಖಿಯಾದುದೇ ತತ್ವಪದಗಳ ಆಂದೋಲನ. ಸೋಜಿಗವೆಂದರೆ ಸಾಹಿತ್ಯ ಚರಿತ್ರೆಕಾರರು ಲೋಕೋಪಯೋಗಿ ತತ್ವಪದಗಳನ್ನು ಕಡೆಗಣಿಸಿದರು. ಅಧೀನ‌ ಸಂಸ್ಕೃತಿಯ ಕಣ್ಣಲ್ಲಿ ಕಾಣಲೂ ಹಿಂದೇಟು ಹಾಕಿದರು.

ಹಾಗೆ ನೋಡಿದರೆ ತತ್ವಪದಕಾರರು, ಸೂಫಿ ಸಂತರು, ದಾಸರು, ಕಾಲಜ್ಞಾನಿಗಳು ಸೌಹಾರ್ದ ಸಾಮ್ರಾಜ್ಯ ನಿರ್ಮಿಸಿದ ಸಾಮ್ರಾಟರು. ಅದು ಅಕ್ಷರಶಃ ಸೌಹಾರ್ದ ಸಂಸ್ಕೃತಿಯ ಯುಗವೇ ಹೌದು. ಕುಲ ಮತ ಧರ್ಮ ಪಂಥದ ಗೋಡೆಗಳ ಅಪಸವ್ಯಗಳನ್ನು ಕಿತ್ತೆಸೆದ ಪೃಥಕ್ಕರಣ ಮಾರ್ಗ. ಲೋಕಮಾನಸಕ್ಕೆ ಅನುಭಾವದ ಮಹಾಬಯಲು ಕಾಣಿಸಿದ ಯುಗಮಾನ. ವಚನೋತ್ತರ ಕಾಲದ ಅಂತರಂಗ ಶುದ್ಧಿಯ ಮತ್ತು ಸೌಹಾರ್ದ ಬದುಕಿನ ಒಳಬೆಳಕು ತೋರಿಸಿದ್ದು ತತ್ವಪದಗಳು.

ಒಂದೆರಡು ಜಿಲ್ಲೆಗಳನ್ನು ಹೊರತು ಪಡಿಸಿದರೆ ಒಂದು ಅಂದಾಜಿನ ಪ್ರಕಾರ ಅರ್ಧಸಾವಿರ ಮಂದಿ ತತ್ವಪದಕಾರರು ಬಾಳಿ ಬದುಕಿದ ನಾಡು ಕರ್ನಾಟಕ. ದಲಿತ, ಮುಸ್ಲಿಮರಾದಿಯಾಗಿ ಎಲ್ಲಾ ಜಾತಿಯ ತತ್ವಪದಕಾರರು ಭಾವೈಕ್ಯದ ಬಾಳು ಬದುಕಿದ್ದಾರೆ. ಅವರೆಲ್ಲರೂ ಸೌಹಾರ್ದ ಸಂಸ್ಕೃತಿಯ ಸೌರಭ ಸೂಸಿದ್ದಾರೆ. ಕನ್ನಡ, ತೆಲುಗು, ಉರ್ದು, ಮರಾಠಿ ಭಾಷೆಗಳಲ್ಲಿ ಪದಗಳ ಬೆಡಗಿನ ಸಡಗರ ಮತ್ತು ಸಾಮರಸ್ಯ ಮೆರೆದ ಸಂತರು. ಧರ್ಮ ಸಮನ್ವಯದ ಐಕ್ಯತೆಯನ್ನು ಬದುಕಿ ತೋರಿದ ಮಹಂತರು. ಸಗರನಾಡಿನ ಕೃಷ್ಣೆಯ ಒಂದು ದಡ ವಚನ ವಾಙ್ಮಯ ತುಂಬಿಕೊಂಡಿದ್ದರೆ ಇನ್ನೊಂದು ದಡದಲ್ಲಿ ದಾಸರ ಕೀರ್ತನೆಗಳು ತುಂಬಿ ಹರಿದಿವೆ. ಕಾಲಜ್ಞಾನದ ಕೊಡೇಕಲ್ ಬಸವಣ್ಣ, ವಚನಯುಗದ ಅದ್ಯ ವಚನಕಾರ ದೇವರ ದಾಸಿಮಯ್ಯ, ಮೋನಪ್ಪಯ್ಯಗಳು ಸೌಹಾರ್ದಪಥದ ಮಹಾ ಪಥಿಕರು.

ಬ್ರಾಹ್ಮಣ ಗುರು ಗೋವಿಂದಭಟ್ಟ ಮುಸ್ಲಿಮ್ ಕುಲದ ಶರೀಫನಿಗೆ ಜನಿವಾರ ಹಾಕುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗದ ದುರಿತ ಕಾಲದಲ್ಲಿ ನಾವಿಂದು ಬದುಕಿದ್ದೇವೆ. ಆದರೆ ಎರಡು ಶತಮಾನಗಳ ಹಿಂದೆ ಸನಾತನ ಧರ್ಮ ಬಲಾಢ್ಯವಾಗಿದ್ದ ಕಾಲಘಟ್ಟದಲ್ಲಿ ಇಂತಹದ್ದೊಂದು ಸೌಹಾರ್ದದ ಕ್ರಾಂತಿ ಕರ್ನಾಟಕದಲ್ಲಿ ಜರುಗಿದೆ. ಪ್ರಾಯಶಃ ಇಡೀ ದೇಶದಲ್ಲೇ ಕೋಮುಸೌಹಾರ್ದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಮತ್ತೊಂದು ಸಿಗಲಾರದು.

" ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರ ನೂಕಿದ ಭವಭಾರ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದು " ಅಂದೇ ಶಿಶುನಾಳ ಶರೀಫ ಎರಡು ಶತಮಾನಗಳ ಹಿಂದೆಯೇ ಎದೆತುಂಬಿ ಹಾಡಿದ್ದಾನೆ. ಧರ್ಮಪ್ರಭುತ್ವದ ಅವಧಿಯಲ್ಲಿ ಸಾಮರಸ್ಯದ ಇಂತಹ ಅನೇಕ ನಿದರ್ಶನಗಳು ಕರ್ನಾಟಕದ ಬಹುತೇಕ ಕಡೆ ದೊರಕುತ್ತವೆ.

ಓಂ ಏಕಲಾಕ್ ಐಂಸಿ ಹಜಾರ್ ಪಾಚೋ ಪೀರ ಪೈಗಂಬರ್ ಮೌನದೀನ್
ಜೀತಾ ಪೀರ ಮೌನ್ದೀನ್ ಕಾಶೀಪತಿ ಗಂಗಾಧರ ಹರ ಹರ ಮಹಾದೇವ

ಇವು ಹದಿನಾರನೇ ಶತಮಾನದ ತಿಂಥಿಣಿ ಮೋನಪ್ಪಯ್ಯನೆಂಬ ವಿಶ್ವಕರ್ಮ ಸಂತನ ಜೈಕಾರ ವಚನದ ಸದಾಶಯ ನುಡಿಗಳು. ಸಗರನಾಡಿನ ಈ ಸಂತ ಕೋಮು ಸೌಹಾರ್ದದ ಗಟ್ಟಿತನಕ್ಕೆ ಜಗಜಟ್ಟಿ ನಿದರ್ಶನ. ಮೋನಪ್ಪಯ್ಯ ದೇವಸ್ಥಾನದ ಹೆಬ್ಬಾಗಿಲಲ್ಲಿ ಇವತ್ತಿಗೂ ಇದೇ ಘೋಷವಾಕ್ಯಗಳು ಕರ್ನಾಟಕದ ಸೌಹಾರ್ದ ಬದುಕಿನ ಪ್ರತೀಕದಂತೆ ರಾರಾಜಿಸುತ್ತಿವೆ. ಹಾಗೆ ನೋಡಿದರೆ ಅದು ಹಿಂದೂಗಳ ದೇವಸ್ಥಾನವಲ್ಲ ಆದರೆ ಮುಸ್ಲಿಮರ ದರ್ಗಾ ಕೂಡ ಅಲ್ಲ. ಮಸೀದಿ ಮಂದಿರ ಎರಡರ ಸಮನ್ವಯ ಸಾರುವ ವಾಸ್ತುಶಿಲ್ಪ ದೈವದ ರಚನೆಯಾಗಿದೆ. ಹಿಂದೂ ಮುಸ್ಲಿಂ ಭಾವೈಕ್ಯದ ಶ್ರದ್ಧಾಕೇಂದ್ರ. ಅದು ಕರ್ನಾಟಕದ ಮಣ್ಣಿನ ಕಣ ಕಣದಲ್ಲೂ ಹಾಸು ಹೊಕ್ಕಾದ ಸೌಹಾರ್ದತೆಯ ಪ್ರಖರ ಸಂಕೇತ. ಇಂತಹ ಸಂಕೇತದ ಅನೇಕ ದೈವಮಂದಿರಗಳು ಈ ಭಾಗದಲ್ಲಿವೆ.

ತನುವೆಂಬ ಮಸೂತಿಯೊಳಗ ಪಂಚತತ್ವಗಳ ಪಂಜೆಯ ಕೂಡಿಸಿ ಅಲಾಯಿ ಆಡುವ ಮೊಹರಮ್ ಹಬ್ಬ ಈಗಲೂ ಕರ್ನಾಟಕದ ನಾನಾಕಡೆ ಭಾವಪೂರ್ಣವಾಗಿ ಜರುಗುತ್ತದೆ. ಹಿಂದೂ ಮುಸ್ಲಿಮ್ ಕುಲಾಚಾರಗಳನು ತಿರಸ್ಕರಿಸುವ ಸಿದ್ಧಾಂತದ ಮೇಲೆ ಇಂತಹ ಹಬ್ಬ ಜಾತ್ರೆಗಳು ಜರುಗುತ್ತವೆ.

ಧರ್ಮಪ್ರಜ್ಞೆಯನ್ನು ಸಹಿತ ಒರೆಗೆ ಹಚ್ಚುವಲ್ಲಿ ತತ್ವಪದಕಾರರು ಹಿಂದೆ ಬಿದ್ದಿಲ್ಲ.
" ಫಕೀರನಾಗಬೇಕಾದರೆ ಮನಃಧಿಕ್ಕಾರ ಮಾಡಿಕೊಂಡಿರ ಬೇಕೆಂದು "
ಕಡಕೋಳ ಮಡಿವಾಳಪ್ಪ ತನ್ನ ಒಡನಾಟದ ಅನುಭಾವಿ ಕವಿ ಚೆನ್ನೂರ ಜಲಾಲ ಸಾಹೇಬನಿಗೆ ಹೇಳಿದರೆ, ಜಲಾಲ ಸಾಹೇಬ ಮಾರುತ್ತರಿಸುವುದು ಹೀಗೆ :
" ಜಂಗಮನಾಗಬೇಕಾದರೆ ಮನಃ ಲಿಂಗ ಮಾಡಿಕೊಂಡಿರಬೇಕು "
ಹೀಗೆ ಇಬ್ಬರ ನಡುವೆ ಸಹೃದಯ ಸಂವಾದ ಏರ್ಪಡುತ್ತದೆ. ಅದು ಅವರಿಬ್ಬರ ಅನುಭಾವದ ಅನುಭೂತಿ ಮತ್ತು ಅನುಸಂಧಾನ ಕ್ರಿಯೆ.

ಕಡಕೋಳ ಮಡಿವಾಳಪ್ಪನ ಶಿಷ್ಯ ಚೆನ್ನೂರು ಜಲಾಲ ಸಾಹೇಬ ಕನ್ನಡದ ಮೊಟ್ಟಮೊದಲ (೧೭೭೦ - ೧೮೫೦) ಮುಸ್ಲಿಂ ತತ್ವಪದಕಾರ. ಜಲಾಲ ಸಾಹೇಬರ ಇನ್ನೊಂದು ರಚನೆ ಹೀಗಿದೆ.
" ಸಬ್ ಕಹತೇ ಈಶ್ವರ ಅಲ್ಲಾ
ಇದರ ಭೇದ ಯಾರಿಗೂ ತಿಳಿದಿಲ್ಲಾ
ವೇದಶಾಸ್ತ್ರಕ್ಕೆ ನಿಲುಕಿಲ್ಲ
ವೇದ ಶಾಸ್ತ್ರ ಕುರಾನ ಪಡತೇ ಹೈ
ಗುರುಮನಿ ಕೀಲಿ ಸಿಗಲಿಲ್ಲ "
ತತ್ವಸಿದ್ಧಾಂತಗಳ ಸಂಘರ್ಷ ಮತ್ತು ಸೂಕ್ಷ್ಮ ವಿಡಂಬನೆಗಳು ಇಲ್ಲಿ ಢಾಳಾಗಿ ಕಂಡರೂ ಕೋಮು ಸೌಹಾರ್ದದ ನೆಲೆಗಳನ್ನು ಯಥೇಚ್ಛವಾಗಿ ಗುರುತಿಸಬಹುದು.

ಶಿಶುನಾಳ ಶರೀಫನ ಖಾದರಲಿಂಗ ಪ್ರಜ್ಞೆ ಹಾಗೆಯೇ ಕಡಕೋಳ ಮಡಿವಾಳಪ್ಪನ ಜೀತಪೀರ ಮಹಾಂತನೆಂಬ ಫಕೀರ ಪ್ರಜ್ಞೆಗಳಿಗೆ ಮಹತ್ವದ ಜೀವಪಾರಮ್ಯ ಪ್ರಾಪ್ತಿ. ಅಂತೆಯೇ ಅವು ಸೌಹಾರ್ದ ಬದುಕಿನ ಜೀವಾಳವೇ ಆಗಿವೆ. ಇದು ಕೇವಲ ಸಾಕ್ಷೀಪ್ರಜ್ಞೆಯ ಮಾತಲ್ಲ.

ಬಂದಗೀ ಕರ್ತಾ ಕರಕೇ ಝೂಟಾ ತಿಳಿಯದು ನಿಜ ಘನದಾಟಾ/
ಮರ್ಮ ನ ಕಳತಾ ಕರಣೇ ಖೋಟಾ/
ಕೇಳಿ ಶ್ರೀಗುರುವಿಗೆ ನೀಟಾ//
ಹೀಗೆ ಭಗವಂತನ ನಿಜ ಮರ್ಮದ ಅರ್ಥ ಹೇಳಿದ್ದು ಕನ್ನಡ ಮರಾಠೀ ಬಂಧುತ್ವದ ಮಹೀಪತಿ ದಾಸರು. ಇಂದಿಗೂ ದಖನಿ ಛಾಯೆಯ ಉರ್ದು, ಮರಾಠಿ ಮೋಡಿಯ ಹಿಂದಿ ಭಾಷಾ ಸಂಸ್ಕೃತಿಗಳು ಕನ್ನಡದ ಬದುಕಿನ ತುಂಬಾ ಹಾಸು ಹೊಕ್ಕಾಗಿವೆ. ಘಮ ಘಮಿಸುವ ಸೂಜಿಮಲ್ಲಿಗೆಯ ಹೂವರಳಿದಂತಹ ಖಮ್ಮನೆಯ ಉರ್ದು ಮಾತಾಡುವ ಮುಸ್ಲಿಮೇತರ ಅನೇಕರು ಇಲ್ಲಿರುವುದು ಸರ್ವೇ ಸಾಮಾನ್ಯ. ಇದು ಶತಮಾನಗಳ ಅಂತರದ ಗತಿತ ಕಥನವಲ್ಲ. ಪ್ರಸ್ತುತ ದಿನಮಾನಗಳಲ್ಲಿಯೂ ಅವುಗಳ ಅನುಷ್ಠಾನ ಪ್ರಕ್ರಿಯೆಗೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ಇಂದಿಗೂ ಕಲಬುರ್ಗಿಯ ಬಂದೇನವಾಜ ಉರುಸಿನಲ್ಲಿ ಮತ್ತು ದರ್ಗಾದ ನಿತ್ಯದ ದರುಶನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಹಿಂದೂಗಳ ಸಕ್ಕರೆ ಲೋಬಾನದ ತುಂಬಿ ಉಕ್ಕುವ ಅಕ್ಕರೆಯ ಮಹಾಪೂರ. ಇವು ಕೋಮು ಸೌಹಾರ್ದತೆಗಾಗಿ ಸರಕಾರೀ ಯಂತ್ರಗಳ ತೋರಿಕೆಯ ಆಚರಣೆಗಳಲ್ಲ. ಜನರ ದಿನನಿತ್ಯದ ನಿಸರ್ಗ ಸುಬಗ ಬದುಕಿನ ಭಾಗವೇ ಆಗಿದೆ. ಅದು ನಿಕ್ಕಿ ನಿಕ್ಕಿ ಆಚರಣೆಗಳ ನಿಗಿ ನಿಗಿ ಸತ್ಯ.

ಕರ್ಜಗಿಯ ಸೈಫುಲ್ಲಾ ಮುಲ್ಕ್ ದರ್ಗಾ, ನೀಲೂರು ಮಹಿಬೂಬ ಸುಬಾನಿ ದರ್ಗಾ, ಹೈದ್ರಾ ದರ್ಗಾಗಳ ಸೂಫಿ ದೈವಗಳು ಬಹುಪಾಲು ಹಿಂದೂ ವೀರಶೈವ, ಲಿಂಗಾಯತರ ಪಾಲಿನ ಉಪಾಸನಾ ದೇವರುಗಳು. ಅಷ್ಟೇ ಯಾಕೆ ಕೆಲವರ ಮನೆದೇವರುಗಳು. ಹಾಗೇನೇ ಅನೇಕ ಮಂದಿ ಮುಸಲ್ಮಾನರು ಹಿಂದೂ ದೈವದ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಭಸ್ಮ ವಿಭೂತಿ ಧರಿಸುತ್ತಾರೆ. ಮೊಹರಮ್ ಹಬ್ಬದಲ್ಲಿ ಬಹಳಷ್ಟು ಮಂದಿ ಹಿಂದೂಗಳೇ ಫಕೀರರಾಗಿ ಅಲಾಯಿ ಹಬ್ಬ ಸಂಭ್ರಮಿಸುತ್ತಾರೆ. ಉರ್ದು ಆ ಭಾಗದ ಜನರು ಆಡುವ ಪರಿಸರ ಭಾಷೆ.

ಇವತ್ತಿಗೂ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆಯ ಸಂದರ್ಭದಲ್ಲಿ ಗದ್ದುಗೆಗೆ ಮುಸ್ಲಿಂ ಧರ್ಮದ ಹಸಿರು ಗಲ್ಲೀಫದ ಗೌರವ ಸಲ್ಲುತ್ತದೆ. ಅಲ್ಲಿನ ಸ್ವಾಮೀಜಿಯವರು ಸುತ್ತುವ ರುಮಾಲು ಸಹಿತ ಹಸಿರು ನಿಶಾನೆಯದು. ಲಾಂಛನಕ್ಕೆ ಶರಣೆಂಬೆನೆಂಬ ಅಂತಃಕರಣ ಧುಮ್ಮಿಕ್ಕುವ ಅನುಭಾವ ಪರಂಪರೆಯ ಮಾನವೀಯ ಪಥ. ಹೀಗೆ ಭಾವೈಕ್ಯತೆ ಮತ್ತು ಸೌಹಾರ್ದತೆಯ ಸೇತುಬಂಧ. ಎಡ-ಬಲ ಪಂಥಗಳೆರಡರ ಅತಿರೇಕಗಳನ್ನು ಮೀರಿದ ಲೋಕಪಂಥದ ಬೆರಗಿನ ಮಹಾಬಯಲೇ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ನೆಲ.

ವರ್ತಮಾನದ ಅಲ್ಲೆಲ್ಲೋ ಕರಾವಳಿ ಕಡೆಗೆ ಕೆಲವು ಮತಾಂಧರಿಂದ ಮನುಷ್ಯತ್ವದ ಮೇಲೆ ಆಕ್ರಮಣ ಜರುಗಿ, ಕೋಮು ಗಲಭೆ ಕಂಡುಬಂದರೆ ಇಡೀ ಕರ್ನಾಟಕವೇ ದಳ್ಳುರಿಖೋರರ ನಾಡೆಂದು ಭಾವಿಸಬೇಕಿಲ್ಲ. ಕನ್ನಡನಾಡ ಚರಿತ್ರೆ ಓದಿಕೊಂಡವರಾಗಿದ್ದರೇ ಖಂಡಿತಾ ಕೋಮು ಹಿಂಸೆಗೆ ಅವಕಾಶವಿಲ್ಲ.. ಗತೇತಿಹಾಸ ಅರಿಯದ ಅಂಥವರಿಂದಾಗಿ ಅನೇಕ ಅವಗಡಗಳಿಗೆ ನಾಡು ಈಡಾಗುತ್ತಲಿದೆ.

" ಸರ್ವ ಜನಾಂಗದ ಶಾಂತಿಯತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ "
ಇದು ಕುವೆಂಪು ಬಿತ್ತಿದ ಸೌಹಾರ್ದದ ಬೀಜಮಂತ್ರ. ಭಾರತವೆಂಬ ಬಹುತ್ವದ ಧರ್ಮಪಾಲನೆಯೇ ಕರ್ನಾಟಕದ ನೆಲಧರ್ಮ. ಅಂತಹ ನೆಲದ ತುಂಬೆಲ್ಲ ಸಾಮರಸ್ಯದ ಪರಿಮಳ ತುಂಬಿ ತುಳುಕಬೇಕು. ನಾಡಿನ ತುಂಬಾ ಭಾವೈಕ್ಯತೆಯ ಚೆರಗ ಚೆಲ್ಲಬೇಕು. ಬರುವ 2023ರ ಜನವರಿ ತಿಂಗಳ ಮೊದಲ ವಾರದಲ್ಲಿ ಮೂರು ದಿನಗಳ ಕಾಲ ಹಾವೇರಿಯಲ್ಲಿ ಜರುಗಲಿರುವ ಅಖಿಲ ಭಾರತ ಎಂಬತ್ತಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ ಅಂತಹದ್ದೊಂದು ಸೌಹಾರ್ದ ನೆಲೆಯ ಸಮ್ಮೇಳನಕ್ಕೆ ಸಾಕ್ಷಿಯಾಗಲಿ. ಧರೆಗೆ ದೊಡ್ಡವರಾದ ಶಿಶುನಾಳ ಶರೀಫ, ಕನಕದಾಸ, ಸರ್ವಜ್ಞ, ವಚನಕಾರ ಅಂಬಿಗರ ಚೌಡಯ್ಯ ಬಾಳಿ ಬದುಕಿದ ಸೌಹಾರ್ದ ಸಂಸ್ಕೃತಿಯ ನೆಲ ಹಾವೇರಿ.

ಇಂತಹ ಮನುಷ್ಯ ಪ್ರೀತಿಯ ಮುಂದುವರಿಕೆಯಂತೆ ಹಾವೇರಿ ನೆಲದವರಾಗಿ ಆಧುನಿಕ ಕರ್ನಾಟಕದ ಪ್ರಾತಃಸ್ಮರಣೀಯರು ಅನೇಕರಿದ್ದಾರೆ. ಅವರಲ್ಲಿ ಮೈಲಾರ ಮಹಾದೇವ, ಹೊಸಮನಿ ಸಿದ್ದಪ್ಪ, ಗುದ್ಲೆಪ್ಪ ಹಳ್ಳಿಕೇರಿ, ಸಂಗೂರು ಕರಿಯಪ್ಪ, ಕೆ. ಎಫ್. ಪಾಟೀಲ, ವಿ. ಕೃ. ಗೋಕಾಕ, ಪದ್ಮಭೂಷಣ ಪುಟ್ಟರಾಜ ಗವಾಯಿಗಳು, ಗಂಗೂಬಾಯಿ ಹಾನಗಲ್, ಚಂಪಾ, ಪಾಟೀಲ ಪುಟ್ಟಪ್ಪ, ಗಳಗನಾಥ, ಸಕ್ರಿ ಬಾಳಾಚಾರ್ಯ, ಜುಬೇದಾಬಾನು ಸವಣೂರು, ಹಲಗೇರಿ ಜಟ್ಟೆಪ್ಪ... ಹೀಗೆ ಸಾಲು ಸಾಲು ಹೆಸರುಗಳು ಹಾವೇರಿ ನೆಲದ ಹಸಿರು ಮತ್ತು ಉಸಿರಾಗಿವೆ. ಈ ಎಲ್ಲರೂ ಸೌಹಾರ್ದ ಪಥದ ಮಹಾಪಥಿಕರೇ ಹೌದು.

- ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...