ಕವಿ ವಿಲಿಯಂ ವರ್ಡ್ಸ್‌ವರ್ತ್ ಸಾಹಿತ್ಯ ಪ್ರೇಮ

Date: 16-02-2023

Location: ಬೆಂಗಳೂರು


“ಕವಿ ವಿಲಿಯಂ ವರ್ಡ್ಸ್‌ವರ್ತ್ ಮಳೆಬಿಲ್ಲನ್ನು ಒಂದು ರೂಪಕವಾಗಿಸಿಕೊಂಡು ಆ ಮೂಲಕ ನಿಸರ್ಗದೊಂದಿಗೆ ಆತನ ಬಾಂಧವ್ಯದ ಸುಖವನ್ನು ವರ್ಣಿಸುವಲ್ಲಿ ಕವಿಗೆ ನಿಸರ್ಗದ ಬಗ್ಗೆ ಇರುವ ಗೌರವ ಕಾಣುತ್ತದೆ. ಮಳೆಬಿಲ್ಲು ಯಾರಿಗೆ ತಾನೇ ಇಷ್ಟವಿಲ್ಲ. ಆ ಕುರಿತ ಕವನಗಳೆಷ್ಟೋ ಕಥೆಗಳೆಷ್ಟೋ ಜಾಗತಿಕ ಸಾಹಿತ್ಯದಲ್ಲಿ ಮೂಡಿಬಂದಿವೆ,” ಎನ್ನುತ್ತಾರೆ ಲೇಖಕಿ ನಾಗರೇಖ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ‘ಮಗು ಮನುಷ್ಯನ ತಂದೆ- ವಿಲಿಯಂ ವರ್ಡ್ಸ್‌ವರ್ತ್ಕುರಿತು ವಿಶ್ಲೇಷಿಸಿದ್ದಾರೆ.

ನಮ್ಮ ನಿತ್ಯದ ಬದುಕು ಒಂದು ರೀತಿಯ ಗೋಳು. ದಿನಬೆಳಗಾದರೆ ಕಾಡುವ ಅದೇ ಅದೇ ಪ್ರಶ್ನೆಗಳು, ಉತ್ತರಗಳು. ಯಾಂತ್ರಿಕತೆಯ ಉರುಳಿಗೆ ಒಡ್ಡಿಕೊಂಡ ನಮ್ಮ ಕತ್ತುಗಳು, ಸ್ವಲ್ಪ ಆಚೀಚೆ ಜರುಗಿದರೂ ಸಾಕು ಕುತ್ತಿಗೆಯೇ ಉರುಳಬಹುದಾದ ಜಂಜಾಟದ ಜೋಕಾಲಿ ಈ ಬದುಕು. ಇದು ನಮ್ಮ ಜಗತ್ತು. ಮಾನವ ಜಗತ್ತು. ಏಕತಾನತೆ ಎಂದರೆ ಏನು ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಅದು ಮನುಷ್ಯನೊಬ್ಬನ ಬದುಕು. ಆದರೆ ಈ ಜಗದ ನಿಲುವು ಅದಕ್ಕೆ ತದ್ವಿರುದ್ಧ. ಸದಾ ಹೊಸತಾಗುವುದು, ನಳನಳಿಸುವುದು, ತನ್ನನ್ನು ಬ್ಯಾಲೆನ್ಸಿಂಗ್ ಮಾಡಿಕೊಳ್ಳುವುದು ಹೀಗೆ ಎಲ್ಲದರಲ್ಲೂ ನಮ್ಮ ಈ ನಿಸರ್ಗಮಾತೆ ಅಚ್ಚುಕಟ್ಟು. ತನ್ನ ಕಕ್ಷೆಯಲ್ಲಿ ಬರುವ ಎಲ್ಲದ್ದಕ್ಕೂ ಆಕೆ ಈ ಪಾಠವನ್ನೂ ಕಲಿಸುತ್ತಾಳೆ. ಆದರೆ ಬುದ್ದಿವಂತ ಮಾನವ ತನ್ನ ಜಗತ್ತಿನಲ್ಲಿ ಈ ನಿತ್ಯ ನೂತನತೆಯನ್ನು ಬಂಧನದ ಪಾಡಾಗಿಸಿಕೊಂಡಿದ್ದಾನೆ. ಇದು ನಮ್ಮ ಯಾಂತ್ರಿಕ ಬದುಕಿನ ಸುಖ. ಇಡೀ ಭೂಮಂಡಲವನ್ನೇ ತನ್ನ ಕುಣಿತಕ್ಕೆ ಪ್ರಾಂಗಣವಾಗಿಸಿಕೊಳ್ಳುವ ಮನುಷ್ಯನ ದುರಾಸೆ ಆತನ ಎಲ್ಲ ವೇದನೆಗಳಿಗೆ ಕಾರಣವಾಗಿದೆಯಲ್ಲವೇ? ನಾವು ಮುಗ್ಧರಾಗಬೇಕಿದೆ. ಪ್ರಕೃತಿಯ ಮುಂದೆ ನಾವೆಲ್ಲ ಶಿಶುಗಳಾಗಬೇಕಿದೆ. ಹಾಗೇ ಇರುವುದೇ ಲೇಸು. ಇದನ್ನು ‘ನಿಸರ್ಗದ ಕವಿ’ ಎಂದೇ ಖ್ಯಾತನಾದ ಇಂಗ್ಲೀಷ ಕವಿ ವಿಲಿಯಂ ವರ್ಡವರ್ತ ಆ ಚಿರಂತನತೆಯನ್ನು ತಾನು ಮೈಗೂಡಿಸಿಕೊಳ್ಳಬಯಸುವ ಇರಾದೆಯನ್ನು ವ್ಯಕ್ತಗೊಳಿಸುತ್ತಾನೆ. ವ್ಯಕ್ತಿತ್ವ ನಿರ್ಮಾಣದಲ್ಲಿ ಬಾಲ್ಯದ ಅನುಭವಗಳು ಮತ್ತು ನಡವಳಿಕೆಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ಕವಿತೆ ವಿಶಿಷ್ಟವಾಗಿ ವರ್ಣಿಸುತ್ತದೆ.

My heart leaps up when I behold.
My heart leaps up when I behold
A rainbow in the sky:
So was it when my life began,
So it is now I am a man,
So be it when I shall grow old,
Or let me die,
The child is father of the man:
And I could wish my days to be
Bound each to each by natural piety”

ನನ್ನದೆ ಹೊಡೆದುಕೊಳ್ಳುತ್ತದೆ
ಕಂಡಾಗಲೆಲಾ ಆಗಸದಲ್ಲಿ ಕಾಮನ ಬಿಲ್ಲು
ಹಾಗಿರುವುದು ನನ್ನ ಬದುಕು ಶುರುವಾದಾಗಿನಿಂದ
ಹಾಗೇ ಇದೆ ಇನ್ನೂ ನಾನು ಗಂಡಸಾದರೂನು
ಹಾಗೇ ಇರುವುದು ನನ್ನ ವಯಸ್ಸು ಮಾಗಿ ಮುದುಕನಾದರೂ
ಹಾಗಲ್ಲದಿದ್ದರೆ ಸಾವಾದರೂ ಬರಲಿ
ಮಗುವೆಂದರೆ ಮನುಷ್ಯನ ತಂದೆ.
ಮತ್ತು ಬಯಸುತ್ತೇನೆ ನಾನು
ನನ್ನ ದಿನಗಳು ನಿಸರ್ಗ ನಿಯಮದಂತೆ
ಒಂದಕ್ಕೊಂದು ನಿಷ್ಠವಾಗಿರಬೇಕೆಂದು.

ಕವಿ ವಿಲಿಯಂ ವರ್ಡ್ಸ್‌ವರ್ತ್ ಮಳೆಬಿಲ್ಲನ್ನು ಒಂದು ರೂಪಕವಾಗಿಸಿಕೊಂಡು ಆ ಮೂಲಕ ನಿಸರ್ಗದೊಂದಿಗೆ ಆತನ ಬಾಂಧವ್ಯದ ಸುಖವನ್ನು ವರ್ಣಿಸುವಲ್ಲಿ ಕವಿಗೆ ನಿಸರ್ಗದ ಬಗ್ಗೆ ಇರುವ ಗೌರವ ಕಾಣುತ್ತದೆ. ಮಳೆಬಿಲ್ಲು ಯಾರಿಗೆ ತಾನೇ ಇಷ್ಟವಿಲ್ಲ. ಆ ಕುರಿತ ಕವನಗಳೆಷ್ಟೋ ಕಥೆಗಳೆಷ್ಟೋ ಜಾಗತಿಕ ಸಾಹಿತ್ಯದಲ್ಲಿ ಮೂಡಿಬಂದಿವೆ. ಮಳೆಬಿಲ್ಲು ಅಥವಾ ಕಾಮನ ಬಿಲ್ಲು ನಿಸರ್ಗ ಸುಂದರ ಕೊಡುಗೆ. ಖುಷಿ ಮತ್ತು ಸಂಭ್ರಮದ ಸಂಕೇತ. ಬದುಕಿನ ಕ್ಷಣಗಳನ್ನು ಬಣ್ಣಗಳ ಲೋಕವಾಗಿಸುವ ಈ ಮಳೆಬಿಲ್ಲು ಬದುಕಿನಲ್ಲಿ ಭರವಸೆಯ ಆಶಾಕಿರಣ ಕೂಡಾ. ಇದು ನಿತ್ಯನೂತನ ಸಂಗತಿಯೆಡೆಗೆ ಮನಸ್ಸನ್ನು ಸೆಳೆಯುತ್ತದೆ. ಏಕತಾನತೆಯ ಬದುಕಿಗೆ ಮಳೆಬಿಲ್ಲು ಚೈತನ್ಯದ ಸೆಲೆಯಾಗುತ್ತದೆ. ನಿಸರ್ಗದ ಅನುಭೂತಿಗೆ ಅದರೊಂದಿಗಿನ ಅನುಸಂಧಾನವೇ ಮೂಲ. ಮನುಷ್ಯರಂತೆ ಅಥವಾ ಜೀವಿಗಳಂತೆ ನುಡಿಗೊಡದೇ ಇದ್ದರೂ ಮೌನದಲ್ಲೇ ಮಾತಾಗುವ ಪ್ರಕೃತಿಯ ಸಂಗತಿಗಳನ್ನು ಕಾಣಲು ಆ ಕಣ್ಣು ಬೇಕು. ಕೇಳಲು ಆ ಕಿವಿ ಬೇಕು. ಕವಿ ಮೊದಲ ಬಾರಿ ಮಳೆಬಿಲ್ಲು ಕಂಡಾಗ ಎಷ್ಟು ಪ್ರಫುಲ್ಲಿತನಾಗಿದ್ದ ಎನ್ನುವುದನ್ನು ಹೇಳುತ್ತಲೇ ಬದುಕಿನ ಕೊನೆಯವರೆಗೂ ಆದೇ ಭಾವ ಹೊಂದಲು ಬಯಸುತ್ತಾನೆ. ತನ್ಮೂಲಕ ಎಂದಿಗೂ ಬದಲಾಗದ ಆನಂದವನ್ನು ಸ್ಥಾಯಿಯಾಗಿಸಿಕೊಳ್ಳಲು, ಬದುಕಿನುದ್ದಕ್ಕೂ ಪ್ರಕೃತಿಯೊಂದಿಗೆ ಬೆರೆತುಕೊಂಡಿರಲು ಬಯಸುತ್ತಾನೆ.

ವರ್ಡ್ಸ್‌ವರ್ತ್ ಜಗತಿಗೆ ನೀಡಿದ ವಿಶಿಷ್ಟ ಹೇಳಿಕೆ ಈ ಕವಿತೆಯನ್ನು ಹೆಚ್ಚು ಪ್ರಸಿದ್ಧಗೊಳಿಸಿದೆ. ಅದೇ ಮಗು ಮನುಷ್ಯನ ತಂದೆ ಎನ್ನುವಲ್ಲಿ ವಿರೋಧಾಭಾಸದ ಕಾಣುತ್ತದೆ. ಕಾರಣ ಪುಟ್ಟ ಮಗುವೆಂದೂ ತಂದೆಯಾಗಲು ಸಾಧ್ಯವಿಲ್ಲ ಅಲ್ಲವೇ? ಆದರೆ ಅದರಲ್ಲಿಯ ಸೂಕ್ಷ್ಮ ಹೇಳಿಕೆಯನ್ನು ಗಮನಿಸಿದಾಗ ಭೂತ ವರ್ತಮಾನ ಮತ್ತು ಭವಿಷ್ಯದ ಚಿತ್ರಣಗಳು ದೊರಕುತ್ತವೆ. ವರ್ತಮಾನದ ತಂದೆ ತನ್ನ ಭೂತಕಾಲದಲ್ಲಿ ಮಗುವಾಗಿದ್ದ. ಹಾಗೇ ವರ್ತಮಾನದ ಮಗುವೊಂದು ತನ್ನ ಭವಿಷ್ಯದಲ್ಲಿ ತಂದೆಯಾಗುತ್ತದೆ.ಹಾಗಾಗಿ ಪ್ರತಿವ್ಯಕ್ತಿಯೂ ದಾಟಿಬರುವ ಈ ಹಂತಗಳು ಅವರ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಹೆಚ್ಚಾಗಿ ಬಾಲ್ಯದಲ್ಲಿ ಮಗು ಹೊಂದಿರುವ ಗುಣ ವೈಶಿಷ್ಟö್ಯಗಳು, ಸಾಮರ್ಥ್ಯಗಳು, ನಡವಳಿಕೆಗಳು ಆ ಮಗು ದೊಡ್ಡದಾಗುತ್ತಾ ಆತನ ವ್ಯಕ್ತಿತ್ವವನ್ನು ರೂಪಿಸುತ್ತವೆ ತಂದೆಯಾದಾಗ ತೋರಬಹುದಾದ ಗುಣ ವಿಶೇಷಣಗಳು ಅವರ ಬಾಲ್ಯದಲ್ಲಿಯೇ ಇರುತ್ತದೆ. ಹಾಗೆ ಮುದುಕನಲ್ಲೂ ಇರುವ ಮಗುತನ ನಾಶವಾಗದೇ ಇರಬೇಕು. ಈ ಎರಡೂ ನೋಟಗಳನ್ನು ಈ ಕವಿತೆಯಲ್ಲಿ ವರ್ಡವರ್ತ ಹಿಡಿದಿಟ್ಟಿದ್ದಾರೆ.

ಕೇವಲ ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿ ರಕ್ತ ಮಾಂಸ ಧಾರೆಯೆರೆದು ಜೀವ ನೀಡಿದರೆ ಈ ಭೂಮಿಗೆ ಬಂದ ಕ್ಷಣದಿಂದ ಸಾಯುವವರೆಗೆ ನಿಸರ್ಗದ ತಾಯಿಯ ಮಡಿಲಲ್ಲೇ ಮನುಷ್ಯ ಬದುಕನ್ನು ಕಾಣುತ್ತಾನೆ. ಆಕೆಯ ಮಡಲಲ್ಲಿ ನಿತ್ಯವೂ ಎಳೆಯ ಮಗುವಾಗುವುದನ್ನು ಪ್ರಕೃತಿಯ ಎಲ್ಲ ಜೀವ ಜಂತುಗಳು ಕಲಿಯಲೇಬೇಕಾದ ಪಾಠ. ಹೆತ್ತ ತಾಯಿ ಕೈಬಿಟ್ಟರೂ ಈ ಹೊತ್ತ ಈ ಭೂಮಾತೆ ಕೈಬಿಡಳು.

- ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಸ್ತ್ರೀತ್ವದ ಹಿರಿಮೆ ಸಾರುವ ಕಿಶ್ವರ ನಹೀದ ಕವಿತೆ “THE GRASS IS REALLY LIKE ME”
ಸಿಡಿಮದ್ದಿನ ದನಿ ಮಾಯಾ ಎಂಜೆಲ್ಲೋರ “I KNOW WHY THE CAGE BIRD SINGS''
ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ್ಲವಗಳು- ಹಕಲ್ಬರಿ ಫಿನ್
ಜನರೇಶನ್ ಗ್ಯಾಪ್‌ನ ಮೇಲೊಂದು ಟಿಪ್ಪಣಿ “ಫಾದರ್ ವಿಲಿಯಮ್” ಕವಿತೆ.
ಬ್ರೆಕ್ಟ್‌ನ ’THE CRUTCHES’ - ಪರಾವಲಂಬಿ ಬದುಕಿಗೆ ಒಂದು ಪಾಠ
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...