ಸ್ತ್ರೀತ್ವದ ಹಿರಿಮೆ ಸಾರುವ ಕಿಶ್ವರ ನಹೀದ ಕವಿತೆ “The grass is really like me””

Date: 19-01-2023

Location: ಬೆಂಗಳೂರು


“ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿ ಕಣ್ಣಿಗೆ ಕಟ್ಟುವಂತೆ ಈ ಪಾಕಿಸ್ತಾನಿ ಕವಯತ್ರಿ ಬಹಳ ಪರಿಣಾಮಕಾರಿಯಾಗಿ ಬಣ್ಣಿಸುತ್ತಾರೆ. ಸ್ತ್ರೀವಾದದ ತಾತ್ವಿಕತೆಯನ್ನು ಇವರ ಕವಿತೆಗಳು ಬಣ್ಣಿಸುವ ಪರಿ ಅನುಪಮ. ಮಹಿಳೆಯ ದೇಹ, ಆಕೆಯ ತಾಯ್ತನ, ಘನತೆ, ನಿಷ್ಠೆ ಎಲ್ಲವನ್ನೂ ತಮ್ಮ ಅನುಕೂಲಸಿಂಧು ಧೋರಣೆಯಿಂದ ಬಳಸಿಕೊಳ್ಳುವ ಪುರುಷನ ಸ್ವಾರ್ಥ ಮತ್ತು ಆಳುವ ಗುಣದ ವಿರುದ್ಧ ಕಟು ವಿರೋಧವನ್ನು ನಹೀದ ವ್ಯಕ್ತಗೊಳಿಸುತ್ತಾರೆ ಎನ್ನುತ್ತಾರೆ ಲೇಖಕಿ ನಾಗರೇಖ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ‘The grass is really like me’ ಕಿಶ್ವರ ನಹೀದ ಅವರ ಕವನದ ಕುರಿತು ವಿಶ್ಲೇಷಿಸಿದ್ದಾರೆ.

ಒಂದು ದೇಶದ ಪ್ರಗತಿ ಮತ್ತು ಸ್ಥಾನಮಾನ ಗುರುತಿಸಲು ಹಲವು ಮಾನದಂಡಗಳಿವೆ. ಅದರಲ್ಲಿ ಒಂದು ಆ ದೇಶದ ಮಹಿಳೆಯರ ಸ್ಥಾನಮಾನ. ಜಾಗತಿಕ ಮಟ್ಟದಲ್ಲಿ ಸಾಧಿಸಿದ ಉತ್ಕರ್ಷ, ಮುನ್ನಡೆ ಏನೇ ಇದ್ದರೂ ಆ ದೇಶದ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ, ಹಕ್ಕುಗಳು, ಗೌರವ ಸಿಗದೆ ಹೋದಲ್ಲಿ ಆ ದೇಶ ಸಾಂಸ್ಕೃತಿಕವಾಗಿ ಮುಂದುವರೆಯಲಾರದು ಎಂಬುದು ಸತ್ಯ. ಇದು ಸಮಾಜಶಾಸ್ತಜ್ಞರು ಒಪ್ಪುವ ಮಾತು. ಹಾಗೂ ಪ್ರತಿಯೊಂದು ದೇಶದ ಮಹಿಳೆಯೂ ತನ್ನದೇ ಆದ ದೇಶಿ ಚಿಂತನೆಗಳನ್ನು ಹೊಂದಿದ್ದರೂ ಅಭಿವ್ಯಕ್ತಿರಾಹಿತ್ಯ ವ್ಯವಸ್ಥೆಯಲ್ಲಿ ನಿರಂತರ ಕುಬ್ಜಳಾಗುತ್ತಾ, ಸಂಕೀರ್ಣ ಸಾಂಸೃತಿಕ ಸಂರಚನೆಗಳನ್ನು ಒಪ್ಪಿಕೊಳ್ಳುತ್ತಾ ಸಾಗುತ್ತಾಳೆ. ಆದರೆ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಕಾಲಘಟ್ಟದಲ್ಲಿ ನಿಂತು ನೋಡುತ್ತಲೇ ಸಾಮಾಜಿಕ ವ್ಯವಸ್ಥೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಲು ಸಿದ್ದರಾಗಬೇಕಿದೆ. ಅದರಲ್ಲೂ ಮಹಿಳಾ ಶೋಷಣೆ, ದೌರ್ಜನ್ಯ, ಲಿಂಗತ್ವ ರಾಜಕಾರಣ, ಮಹಿಳಾ ಪ್ರತ್ಯೇಕತೆ ಕುರಿತಾಗಿ ಆಧುನಿಕ ಜಗತ್ತಿನಲ್ಲಿ ಎಲ್ಲ ಜನಾಂಗದ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಾದ ಮತ್ತು ದನಿ ಎತ್ತಬೇಕಾದ ಸಂದರ್ಭ. ಅಂತಹ ಒಂದು ದನಿಯಾಗಿ ನಿಂತವರು ಕಿಶ್ವರ ನಹೀದ. ಸಂಪ್ರದಾಯ ಮತ್ತು ಧಾರ್ಮಿಕ ಕಟ್ಟಳೆಗಳಿಂದ ಮಹಿಳೆಯ ಪ್ರಾತಿನಿಧ್ಯವನ್ನು ನಿರಾಕರಿಸಿದ ದೇಶದ ಮಹಿಳಾ ಪ್ರಜೆಯಾಗಿ ಕಿಶ್ವರ ನಹೀದ ಮಹಿಳಾ ಅಸ್ತಿತ್ವದ ಅಸ್ಮಿತೆಯ ದನಿಯಾಗಿ ಹೊರಹೊಮ್ಮಿದ್ದಾರೆ.

ಅವರ ““We sinful women”” ಅವರ ಬಹಳ ಪ್ರಸಿದ್ಧ ಕವಿತೆ. ಪಾಕಿಸ್ತಾನಿ ಮಹಿಳೆಯರ ದೀನ ಹತಾಶೆಯ ಆಕ್ರಂದನವನ್ನು ಅಕ್ಷರ ಜಗತ್ತಿಗೆ ಪರಿಚಯಿಸುವ ಆತ್ಮ ವಿಶ್ವಾಸವನ್ನು ಇಲ್ಲಿ ಕಾಣಬಹುದು.
“We sinful women
Who are not awed by the grandeur of those who
Wear gowns” ಈ ಸಾಲು ಅಭಿವ್ಯಕ್ತಿಸಿದ ಆಕಾಂಕ್ಷೆಗಳ ಮಟ್ಟ ಹಾಕುವ ನಿರ್ದಿಷ್ಟ ಸಮಾಜದ ನಿಲುವುಗಳು ಮಹಿಳಾ ವಿರೋಧಿ ಎನಿಸುವುದಿಲ್ಲವೇ?

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿ ಕಣ್ಣಿಗೆ ಕಟ್ಟುವಂತೆ ಈ ಪಾಕಿಸ್ತಾನಿ ಕವಯತ್ರಿ ಬಹಳ ಪರಿಣಾಮಕಾರಿಯಾಗಿ ಬಣ್ಣಿಸುತ್ತಾರೆ. ಸ್ತ್ರೀವಾದದ ತಾತ್ವಿಕತೆಯನ್ನು ಇವರ ಕವಿತೆಗಳು ಬಣ್ಣಿಸುವ ಪರಿ ಅನುಪಮ. ಮಹಿಳೆಯ ದೇಹ, ಆಕೆಯ ತಾಯ್ತನ, ಘನತೆ, ನಿಷ್ಠೆ ಎಲ್ಲವನ್ನೂ ತಮ್ಮ ಅನುಕೂಲಸಿಂಧು ಧೋರಣೆಯಿಂದ ಬಳಸಿಕೊಳ್ಳುವ ಪುರುಷನ ಸ್ವಾರ್ಥ ಮತ್ತು ಆಳುವ ಗುಣದ ವಿರುದ್ಧ ಕಟು ವಿರೋಧವನ್ನು ನಹೀದ ವ್ಯಕ್ತಗೊಳಿಸುತ್ತಾರೆ.

“The grass is really like me” ಎಂಬ ಗಜಲ್ ಕವಿತೆಯಲ್ಲಿ ಮಹಿಳೆ ಎದುರಿಸುವ ಬದುಕಿನ ಸವಾಲುಗಳನ್ನು,ಅನಾದಿ ಕಾಲದಿಂದ ಬಂದಿರುವ ತನ್ನ ಶೋಷಿತ ನೆಲೆಯನ್ನು ಧಿಕ್ಕರಿಸುವ ಬಲವನ್ನು, ಆಕೆ ಪಡೆಯಬೇಕಾದದ್ದು ಎಷ್ಟು ಅನಿವಾರ್ಯ. ಮತ್ತು ಆ ಗತಿಯತ್ತ ತನ್ನ ಹೆಜ್ಜೆಯನ್ನು ದೃಢಪಡಿಸಿಕೊಳ್ಳಬೇಕಾದ ಅನಿವಾರ್ಯತೆಯ ಅಗತ್ಯತೆಯನ್ನು, ಹಾಗೂ ಮಹಿಳೆಯಲ್ಲಿನ ತಾಳುವ ಬಾಳುವ ಗುಣದ ಭೂತತ್ವ ನಿಲುವನ್ನು ಮನಗಾಣಿಸುತ್ತದೆ ಈ ಕವಿತೆ.

“The grass is also like me
It has to unfurl underfoot to fulfil itself
But what does its wetness manifest
A scorching sense of shame
Or the heat of emotions?”

ನಹೀದ ಹೆಣ್ಣನ್ನು ಹುಲ್ಲಿಗೆ ಉಪಮೀಕರಿಸುತ್ತಾರೆ. ಹುಲ್ಲು ಹೆಣ್ಣಿನಂತೆ ಎನ್ನುವಲ್ಲಿ ಮಹಿಳೆಯರ ಸಾರ್ವತ್ರಿಕ ದನಿಯಾಗಿ ಅವರ ದನಿಯಲ್ಲಿನ ನೋವಿನ ಮಿಡಿತವಾಗಿ ಕಾಣಬಹುದು. ದಿನವೂ ಅವರಿವರ ಕಾಲಿನಡಿಯಲ್ಲಿ ಸಿಕ್ಕು ಅಪ್ಪಚ್ಚಿಯಾದರೂ ಮತ್ತೆ ಮತ್ತೆ ಅರಳುವ ಹುಲ್ಲು ಹೇಗೋ ಹಾಗೇ ಹೆಣ್ಣು ಕೂಡಾ ಪುರುಷ ಪ್ರಾತಿನಿಧ್ಯದ ಈ ಜಗತ್ತಿನಲ್ಲಿ ತುಳಿತಕ್ಕೊಳಗಾಗುತ್ತಲೇ ಇದ್ದರೂ ತನ್ನ ಬದುಕಿನ ಅರ್ಥವನ್ನು ಮತ್ತೆ ಮತ್ತೆ ಸ್ಥಾಪಿಸುತ್ತಾಳೆ. ಧರ್ಮ ರಾಜಕೀಯ, ಸಾಂಸ್ಕೃತೀಕರಣದ ಹೆಸರಿನಲ್ಲಿ ಮಹಿಳೆ ಹೀಗೆ ಇರಬೇಕೆಂಬ ಕಡ್ಡಾಯದ ಹೇರುವಿಕೆಯನ್ನು ಮೌನವಾಗಿ ಸ್ವೀಕರಿಸುವ ಮಹಿಳೆ ಒಡಲೊಳಗೆ ಒಂದು ಸುಡು ಬೆಂಕಿಯನ್ನು ಇಟ್ಟುಕೊಂಡೇ ಬದುಕುತ್ತಾಳೆ. ಹುಲ್ಲು ಹೇಗೆ ತನ್ನ ಆರ್ದ್ರತೆಯಿಂದ ಬಿಸಿಲಿನ ಝಳವನ್ನು ಸಹಿಸುವುದೋ ಹಾಗೇ ಹೆಣ್ಣು ಅವಮಾನದ ಬೆಂಕಿಯನ್ನು ಸಂಯಮದಿಂದ ಸಹಿಸುತ್ತಾಳೆ. ಭಾವನೆಗಳ ಉರಿಯನ್ನು ತಾನೇ ತಂಪಾಗಿಸಿಕೊಳ್ಳುತ್ತಾಳೆ. ಇದು ಹೆಣ್ಣಿನ ನಿಜವಾದ ಅಂತಃಸತ್ವ.

“The grass is also like me
As soon as it can raise its head
The lawnmover
Obsessed with flatting it into velvet
Mows it down again”

ಸಣ್ಣಗೆ ಚಿಗುರಿದ ಹುಲ್ಲು ಇನ್ನೇನು ತಲೆ ಎತ್ತಿ ನಡೆಯಬೇಕು ಎನ್ನುವಷ್ಟರಲ್ಲಿ ಹುಲ್ಲುಹಾಸನ್ನು ಹದಗೊಳಿಸುವ ಹುಲ್ಲುಗತ್ತರಿ ಅದನ್ನು ಮೆತ್ತಗೆ ಮಾಡುವ ನೆಪದಲ್ಲಿ ಹುಲ್ಲಿನ ಎತ್ತರಕ್ಕೇರುವ ತವಕವನ್ನು ದಮನಿಸಿ ಪುನಃ ಕತ್ತರಿಸಿ ಹಾಕುತ್ತದೆ. ಹಾಗೇ ಹೆಣ್ಣಿನ ಸಾಮರ್ಥ್ಯ ಮತ್ತು ಆಕೆಯಲ್ಲಿನ ಕೌಶಲ್ಯವನ್ನು ದಮನಿಸಲಾಗುತ್ತದೆ. ಸ್ತ್ರೀತ್ವದ ಸಾರ್ಥಕತೆಯನ್ನು ನಿರ್ದಿಷ್ಟ ಚೌಕಟ್ಟಿನಲ್ಲಿಯೇ ಕಟ್ಟಬಯಸುವ ಸಮಾಜ ಹೇಗೆ ಮಹಿಳೆಯ ಉತ್ಕರ್ಷವನ್ನು ನಿರಾಕರಿಸುತ್ತಿದೆ ಮತ್ತು ನಿಯಂತ್ರಿಸುತ್ತಿದೆ ಎಂಬುದು ಇಲ್ಲಿ ಸೂಕ್ಷ್ಮವಾಗಿ ಬಂದಿದೆ. ತನ್ನ ಅಸ್ತಿತ್ವಕ್ಕಾಗಿ ತನ್ನತನವನ್ನು ಸ್ಥಾಪಿಸಿಕೊಳ್ಳುವುದಕ್ಕಾಗಿ ಹೆಣ್ನು ನಿರಂತರ ಬಯಸುತ್ತಾಳೆ. ಪುರುಷ ಜಗತ್ತು ಹೆಣ್ಣನ್ನು ಕಾಣುವ ರೀತಿ ಅವಳ ಸ್ವಾತಂತ್ಯ್ರವನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಕುಣಿಸುವ ರೀತಿಯ ವಿರುದ್ಧ ನಹೀದ ಸಿಡಿದೇಳುತ್ತಾರೆ. ಪುರುಷ ಸ್ವಭಾವ ಇಲ್ಲಿ ವಿಡಂಬನೆಯಾಗಿದೆ. ಆದರೆ ಹೆಣ್ಣು ಭೂಮಿಯಂತೆ ಬದುಕನ್ನು ಹೇಗಿದ್ದರೂ ಸಹ್ಯವಾಗಿಸುತ್ತಾಳೆ, ಚೇತನವಾಗಿಸುತ್ತಾಳೆ. ಯಾವ ಅಡ್ಡಿ ಆತಂಕಗಳು, ನೋವು ನಿರಾಶೆಗಳು ಆಕೆಯ ಸೃಷ್ಟಿಮೂಲದ ಸ್ವಭಾವವನ್ನು ತಡೆಯಲಾರವು. ಭೂಮಿ ತನ್ನಲ್ಲಿಯ ಸಣ್ಣ ಸಾಧ್ಯತೆಗಳಿಗೂ ಹೇಗೆ ಶ್ರೇಷ್ಠವಾದ ಫಲವನ್ನು ನೀಡಿ ಬದುಕನ್ನು ಸುಂದರವಾಗಿಸುವುದೋ ಹಾಗೇ ಹೆಣ್ಣು ಕೂಡಾ ತನಗೆ ಒದಗಿದ ಸೀಮಿತ ಅವಕಾಶದಲ್ಲಿ ಅಪರಿಮಿತ ಸಾಧ್ಯತೆಯನ್ನು ತೋರುತ್ತಾಳೆ. ಅಂತೆ ನಹೀದ ಹೇಳುತ್ತಾರೆ

“But neither the earth’s nor woman’s
Desire to manifest life dies”

ಆದರೆ ಎಲ್ಲರಲ್ಲೂ ಈ ಶಕ್ತಿ ಇದೆ ಎನ್ನಲು ಸಾಧ್ಯವಿಲ್ಲ. ನೋವು ಅವಮಾನ ಹಿಂಸೆಗಳನ್ನು ತಡೆದುಕೊಳ್ಳದ ಅಸಹಾಯಕ ಮಹಿಳೆಯರು ಇರುವರು. ಆದರೆ ಈ ಸೋಲುವಿಕೆ ಪುರುಷ ಜಗತ್ತಿನ ವಿಜಯವನ್ನು ಪ್ರೋತ್ಸಾಹಿಸುತ್ತದೆ. ಸೋತ ಹುಲ್ಲು ನೆಲಕ್ಕುರುಳುತ್ತದೆ. ಅವು ಕೇವಲ ಒಣ ಹುಲ್ಲು ಅಷ್ಟೇ. ಹಸಿ ಹುಲ್ಲು ಆಗಲಾರವು. ಹಾಗೇ ಸೋತ ಹೆಣ್ಣಿನ ಅಧೀನತೆ ಪುರುಷ ಪ್ರಧಾನ ಜಗತ್ತಿಗೆ ಇನ್ನಷ್ಟು ದಾರಿ ಮಾಡಿಕೊಡುತ್ತದೆಯಷ್ಟೇ.

“Those who cannot bear the scorching defeat of their courage
Are grafted on to the earth
That’s how they make way for the mighty
But they are merely straw not grass
The grass is really like me.

ಹೆಣ್ಣು ತನ್ನತನವನ್ನು ತೊಡಿಕೊಳ್ಳುವ ಜಾಗೃತ ಅಸ್ಮಿತೆಯನ್ನು ನಿರ್ಮಿಸಿಕೊಳ್ಳುವ ಅಗತ್ಯವಿದೆ. ವ್ಯವಸ್ಥಿತವಾಗಿ ನಿರ್ಮಿಸಿದ ಪಾಲಿಗೆ ಬಂದಿದ್ದನ್ನು ಸ್ವೀಕರಿಸುತ್ತಾ ಅದೇ ಬದುಕು ಎಂದು ಬ್ರಮಿಸಿದ ನಿರ್ದಿಷ್ಟ ಜನಾಂಗದ ಸ್ತ್ರೀಸಮುದಾಯ ತನ್ನ ಪ್ರತಿಭಟನೆ ಮತ್ಯು ಹೋರಾಟಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಕವಿತೆ ವ್ಯಕ್ತಪಡಿಸುತ್ತದೆ.

“I am not that woman”” ನಹೀದ ಬರೆದ ಇನ್ನೊಂದು ಮಹತ್ವದ ಕವಿತೆ. ಹೆಣ್ಣನ್ನು ಆಕೆಯ ವ್ಯಕ್ತಿತ್ವವನ್ನು ಅದೆಷ್ಟು ಉರಿಗಳು ಸುತ್ತಲೂ ಸುಡುವ ಪ್ರಯತ್ನ ಮಾಡುತ್ತಲೇ ಇರುತ್ತವೆ. ಆಕೆಯನ್ನು ಸರಕಂತೆ ಬಳಸುವ ಆಕೆಯ ವ್ಯಕ್ತಿತ್ವವನ್ನು ಮಾರಿ ಹೆಸರು ಹಣದ ಆಮಿಷಕ್ಕೆಳೆಸಿ ರೂಪದರ್ಶಿಯಾಗಿಸಿ ಅಂಗಾಗಗಳ ಪ್ರದರ್ಶನಕ್ಕೆಳೆಸಿ ಸ್ತ್ರೀತ್ವವ ಸೆರೆಯಾಳಾಗಿಸಿದ ಪರಿಪರಿಯ ಚಿತ್ರಣವನ್ನು ನೀಡಿ ತಾನು ಆ ಹೆಣ್ಣಲ್ಲ ಎಂಬ ದಿಟ್ಟ ಮನೋಧೈರ್ಯವನ್ನು ವ್ಯಕ್ತಗೊಳಿಸುತ್ತಾ, ತಂಗಾಳಿಯಂತೆ ಹೊರ ಜಗತ್ತಿನಲ್ಲಿ ಸ್ವೇಚ್ಛೆಯಿಂದ ವ್ಯವಹರಿಸುವ ಗಂಡು ಹೆಣ್ಣನ್ನು ನಾಲ್ಕು ಗೋಡೆಗಳಿಗೆ ಸೀಮಿತವಾಗಿಸಿದ ಬಗ್ಗೆ ಕಠೋರ ತೀಕ್ಷ್ಣ ವಿರೋಧವನ್ನು ವ್ಯಕ್ತಗೊಳಿಸಿ, ಪುರುಷನ ದೌರ್ಜನ್ಯವನ್ನು“I am not that woman” ಕವನದಲ್ಲಿ ಖಂಡಿಸುತ್ತಾರೆ. ಆಧುನಿಕ ಪಾಶ್ಚಾತ್ಯ ಜಗತ್ತಿನ ಮಹಿಳಾ ಶೋಷಣೆ ಒಂದು ಬಗೆಯಾದರೆ ಪೌರಾತ್ಯದ ದೇಶಗಳಲ್ಲಿಯ ಶೋಷಣೆ ಇನ್ನೊಂದು ಬಗೆಯದು. ಆ ಎರಡೂ ಮುಖಗಳನ್ನು ಇಲ್ಲಿ ಮುಖಾಮುಖಿಯಾಗಿಸುತ್ತಾರೆ.

“I am not that woman
Selling you socks and shoes!
Remember me, I am the one you hid
In your walls of stone, while you roamed
Free as the breeze, not knowing
That my voice cannot be smothered by stones.”

ಮಹಿಳಾ ಸಾಹಿತ್ಯವನ್ನು ಕೇಂದ್ರವಾಗಿ ತೆಗೆದುಕೊಂಡರೆ ಸ್ತ್ರೀವಾದದ ಮೂಲ ಬೇರು ಇರುವುದೇ ಇಂತಹ ಸಾಹಿತ್ಯ ತನ್ನ ಸ್ತ್ರೀತ್ವದ ಮೂಲನೆಲೆಯನ್ನು ಬಿಂಬಿಸುವ ರೀತಿಯಲ್ಲಿ,, ಇದು ಬರೀಯ ಸಂವೇದನೆಯ ಅಭಿವ್ಯಕ್ತಿಯಲ್ಲ ಬದಲಿಗೆ ದಿಟ್ಟ ವಿರೋಧದ ತುಡಿತ.

ಕಾವ್ಯ ಮುಖೇನ ಒಂದು ಜನಾಂಗದ ಮಹಿಳಾ ಸಮುದಾಯದ ದನಿಯಾಗಿ ಗುರುತಿಸಕೊಂಡವರು ಕಿಶ್ವರ ನಹೀದ. ಪಾಕಿಸ್ತಾನಿ ಕಾವ್ಯ ಪ್ರಪಂಚದಲ್ಲಿ ಮುಖ್ಯ ಸಾಲಿನಲ್ಲಿ ಕಾಣಿಸಿಕೊಳ್ಳುವ ಮಹಿಳಾ ಅಸ್ಮಿತೆಯ ಕಾವ್ಯ ಬರೆದು ಜಾಗತಿಕ ಮಟ್ಟದಲ್ಲಿ ಹೆಸರಾದವರು ಕಿಶ್ವರ ನಹೀದ. ಉರ್ದುವಿನಲ್ಲಿ ಬರೆದ ಅವರ ಕವಿತೆಗಳು ಸ್ಪಾನಿಷ್ ಮತ್ತು ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿರುವುದು ಅವರ ಕಾವ್ಯದ ಸತ್ವವನ್ನು ಜಾಗತಿಕ ನೆಲೆಯಲ್ಲಿ ಗ್ರಹಿಸುವಂತೆ ಮಾಡಿದೆ.

- ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಸಿಡಿಮದ್ದಿನ ದನಿ ಮಾಯಾ ಎಂಜೆಲ್ಲೋರ “I KNOW WHY THE CAGE BIRD SINGS''
ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ್ಲವಗಳು- ಹಕಲ್ಬರಿ ಫಿನ್
ಜನರೇಶನ್ ಗ್ಯಾಪ್‌ನ ಮೇಲೊಂದು ಟಿಪ್ಪಣಿ “ಫಾದರ್ ವಿಲಿಯಮ್” ಕವಿತೆ.
ಬ್ರೆಕ್ಟ್‌ನ ’THE CRUTCHES’ - ಪರಾವಲಂಬಿ ಬದುಕಿಗೆ ಒಂದು ಪಾಠ
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...