ಸಂಕಟದ ಕಾಲದಲ್ಲಿ ಲೊಳಲೊಟ್ಟೆಯಾದ ಭಾಶೆ!

Date: 11-06-2021

Location: ಬೆಂಗಳೂರು


‘ಸಾವು ಸಹಜವಾಗಿ ಬಿಟ್ಟರೆ ಅವುಗಳಿಗೆ ಪ್ರತಿಕ್ರಿಯಿಸುವ, ಮಿಡಿಯುವ ಸ್ಪಂದನಶೀಲ ಗುಣವೂ ಯಾಂತ್ರಿಕವಾಗಿ ಬಿಡುತ್ತದೆ, ಇಂದು ಸಂವೇದನಾಶೀಲವಾಗಿ ಸ್ಪಂದಿಸಲು ಸಾಧ್ಯವಾಗದಂತಹ ಶೂನ್ಯಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಲೇಖಕ ಡಾ.ರಂಗನಾಥ್ ಕಂಟನಕುಂಟೆ. ಅವರ ‘ಮಾತಿನ ಮರೆ’ ಅಂಕಣದಲ್ಲಿ ಫ್ರೆಂಚ್ ಲೇಖಕ ಆಲ್ಬರ್ಟ್ ಕಮೂ ಅವರ ಪ್ಲೇಗ್ ಕೃತಿಯಲ್ಲಿ ಭಾಶೆಯ ಕುರಿತು ಹೇಳುವ ಮಾತುಗಳನ್ನು ನೆನೆಯುತ್ತಾ ಸದ್ಯದ ಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.

“ಒಂದು ಕಾಲದಲ್ಲಿ ಹೃದಯದ ನೆತ್ತರಿನಲ್ಲಿ ಅದ್ದಿ ತೆಗೆದಿದ್ದ ಮಾತು ಈಗ ಅರ್ಥಶೂನ್ಯವಾಗಿ ಟೊಳ್ಳಾಗಿ ಕಾಣಿಸುತ್ತಿದ್ದವು. ಆದರೂ ಅವನ್ನೇ ಯಾಂತ್ರಿಕವಾಗಿ ನಕಲು ಮಾಡುತ್ತಿದ್ದೆವು. ಆ ನಿರ್ಜೀವ ಪದಗಳಿಂದ ನಾವು ಹಾಯುತ್ತಿರುವ ಬೆಂಕಿಕೊಂಡದ ಪರಿಚಯವನ್ನು ಮಾಡಿಕೊಡಲು ಪ್ರಯತ್ನಿಸುತ್ತಿದ್ದೆವು.”(ಆಲ್ಬರ್ಟ್ ಕಮೂ, ‘ಪ್ಲೇಗ್’, ಅನು-ಎಚ್.ಎಸ್. ರಾಘವೇಂದ್ರರಾವ್, ಪು.78)

ಪ್ರಸಿದ್ದ ಫ್ರೆಂಚ್ ಲೇಖಕ ಕಮೂ ತನ್ನ ‘ಪ್ಲೇಗ್’ ಕೃತಿಯಲ್ಲಿ ಮೇಲಿನಂತೆ ವಿವರಿಸಿದ್ದಾನೆ. ‘ಪ್ಲೇಗ್’ ನಂತಹ ಸಾಂಕ್ರಾಮಿಕ ರೋಗ ಸೃಶ್ಟಿಸಿದ ಸಮಸ್ಯೆಗಳು, ಏಕಾಂತವಾಸ, ಅದರ ನಿರ್ವಹಣೆ ಮತ್ತು ಸರಣಿ ಸಾವು-ನೋವುಗಳು ಹಾಗೂ ಜನರು ನಿತ್ಯ ಅನುಭವಿಸುತ್ತಿದ್ದ ನರಕ ಸದೃಶ ಸಂಕಟಗಳನ್ನು ಆಗ ಚಾಲ್ತಿಯಲ್ಲಿದ್ದ ಭಾಶೆಯ ಮೂಲಕ ವಿವರಿಸಲು ಸಾಧ್ಯವಿರಲಿಲ್ಲ ಎಂಬುದು ಕಮೂನ ವಿವರಣೆಯಿಂದ ಸ್ಪಶ್ಟವಾಗುತ್ತದೆ. ಅಂದರೆ ‘ಪ್ಲೇಗ್’ ಸೃಶ್ಟಿಸಿದ ದಾರುಣ ಬದುಕನ್ನು ಭಾಶೆಯಲ್ಲಿ ಹಿಡಿದಿಡಲು ಸಾಧ್ಯವೇ ಇರಲಿಲ್ಲ ಎಂಬುದು ಇಲ್ಲಿನ ತಾತ್ಪರ್ಯ. ಪ್ಲೇಗ್‍ನ ದಾಳಿ ಭಾಶೆ ಸೋಲುವಶ್ಟು ಭೀಕರವಾಗಿತ್ತು. ಇಂತಹ ಭೀಕರ ಸ್ಥಿತಿಯ ಕುರಿತು ವಿವರಿಸಲು ಬಳಸುವ ಭಾಶೆಗೆ ದಣಿವು ಬಂದು ಅದು ಯಾಂತ್ರಿಕವಾಗಿ ಬಳಕೆಗೊಳ್ಳತೊಡಗಿತು. ಅಂತಹ ಯಾಂತ್ರಿಕವಾದ ಮಾತು ಮತ್ತು ಬರೆಹಗಳಲ್ಲಿ ಯಾವುದೇ ಬಗೆಯ ಜೀವಂತಿಕೆ ಇರಲಿಲ್ಲ. ಬಹಳ ಯಾಂತ್ರಿಕ ಮತ್ತು ನಿರ್ಭಾವುಕವಾಗಿ ವಿಚಾರ ಸಂವಹನ ನಡೆಯುವ ಹಂತಕ್ಕೆ ಬಂದು ಮುಟ್ಟಿತ್ತು ಎಂಬುದು ಇಲ್ಲಿ ಸ್ಪಶ್ಟಗೊಳ್ಳುತ್ತದೆ. ‘ಪ್ಲೇಗ್’ನ ನಾಯಕ ಡಾ. ಬರ್ನಾಡ್ ರಿಯು ಜನರ ಸೇವೆಯಲ್ಲಿ ಹಗಲಿರುಳು ದುಡಿಯುತ್ತಿದ್ದರೂ ಅವನ ಭಾವನೆಗಳು ಮರಗಟ್ಟಿದಂತೆಯೇ ಇದ್ದುದನ್ನು ಗಮನಿಸಿದರೆ ಇದರ ಪರಿಚಯವಾಗುತ್ತದೆ.

ಭಾಶಿಕವಾಗಿ ಇಂತಹ ಬಿಕ್ಕಟ್ಟು ಸೃಶ್ಟಿಯಾಗಲು ಪ್ರಮುಖವಾಗಿ ಎರಡು ಕಾರಣಗಳಿವೆ. ಒಂದು ‘ಪ್ಲೇಗ್’ನಂತಹ ಸಾಂಕ್ರಾಮಿಕ ರೋಗ ಆವರಿಸಿರುವ ಕಾಲದಲ್ಲಿನ ಸಮಸ್ಯೆಗಳು ಯಾರ ಗ್ರಹಿಕೆಗೂ ನಿಲುಕದಶ್ಟು ಆಳ, ಗಂಭೀರ ಮತ್ತು ವಿಸ್ತಾರದಿಂದ ಕೂಡಿರುವುದು. ಅದರ ಪರಿಣಾಮಗಳ ಬಗೆಗೆ ಯಾರಿಗೂ ಸರಿಯಾದ ಅಂದಾಜು ಇರುವುದಿಲ್ಲ. ಅವನ್ನು ಸುಡುವಾಸ್ತವ ರೂಪದಲ್ಲಿ ಇಡಿಯಾಗಿ ನಿರೂಪಿಸಲು ಯಾರಿಗೂ ಸಾಧ್ಯವಿಲ್ಲದಿರುವುದು. ಅದಕ್ಕೆ ಸುಲಭವಾದ ಮತ್ತು ತುರ್ತಾದ ಪರಿಹಾರಗಳೂ ತಿಳಿದಿರುವುದಿಲ್ಲ. ಎಲ್ಲವೂ ಅನಿಶ್ಚಿತವಾಗಿರುತ್ತದೆ. ಇದರ ನಡುವೆ ನಿತ್ಯ ಹೆಣಗಳು ಬೀಳುತ್ತಲೇ ಇರುತ್ತವೆ. ಇಂತಹ ಹೊತ್ತಿನಲ್ಲಿ ವಾಸ್ತವವನ್ನು ಪ್ರಾಮಾಣಿಕವಾಗಿ ವಿವರಿಸಲಾಗದು. ಇಲ್ಲಿ ಮಾತು ಅಪೂರ್ಣ ಇಲ್ಲವೇ ಅರ್ಥಹೀನ ಎನ್ನಿಸುತ್ತವೆ. ವಸ್ತುಸ್ಥಿತಿ ಮಾತಿಗೆ ನಿಲುಕದ ಮಟ್ಟಕ್ಕೆ ತಲುಪಿಬಿಟ್ಟಿರುತ್ತದೆ. ಸಾಂಕ್ರಾಮಿಕ ಕಾಲದ ದುರಂತಗಳ ಸಂಕಟದ ಭಾರವನ್ನು ಧಾರಣ ಮಾಡಿಕೊಳ್ಳುವ ಸಾಮರ್ಥ್ಯವೇ ಭಾಶೆಗೆ ಇಲ್ಲದೇ ಹೋಗಿರುತ್ತದೆ. ಇನ್ನು ಎರಡನೆಯ ಕಾರಣವೆಂದರೆ, ಜನರು ಸಾವು ನೋವುಗಳನ್ನು ನಿತ್ಯ ಅನುಭವಿಸಿ ಮರಗಟ್ಟಿ ಹೋಗಿರುತ್ತಾರೆ. ಆಪ್ತರ ಬಂಧುಗಳ ಸಾವು ಕೇವಲ ಅಂಕಗಣಿತದ ಸಾಂಖ್ಯಿಕ ಸುದ್ದಿಯಾಗಿಬಿಟ್ಟಿರುತ್ತದೆ. ಮತ್ತು ಅದು ಎಲ್ಲರ ಮನೆ ಬಾಗಿಲನ್ನೂ ತಟ್ಟುತ್ತಿರುತ್ತದೆ. ಮನುಶ್ಯರ ಜೀವ ದೀಪದ ಹುಳುಗಳಿಗಿಂತ ಕಡೆಯಾಗಿಬಿಟ್ಟಿರುತ್ತದೆ. ಜನರ ಪ್ರಾಣ ಕಣ್ಣೆದುರೇ ದೇಹ ತೊರೆದು ಹೋಗುತ್ತಿರುತ್ತದೆ. ಎಲ್ಲವೂ ಕಣ್ಣೆದುರೇ ನಡೆಯುತ್ತಿದ್ದು ಅವುಗಳಿಗೆ ಜೀವಂತವಾಗಿ ಪ್ರತಿಕ್ರಿಯಿಸುವುದು ಸಾಧ್ಯವಿರುವುದಿಲ್ಲ. ಅಂತಹ ಹೊತ್ತಿನಲ್ಲಿ ಪ್ರತಿಕ್ರಿಯಿಸುವುದು ಯಾಂತ್ರಿಕ ಅಭ್ಯಾಸವಾಗಿಬಿಡುತ್ತದೆ. ಕಣ್ಣೆದುರೇ ನಡೆವ ಸಂಗತಿಗಳಿಗೆ ಸಂವೇದನಾಶೀಲವಾಗಿ ಸ್ಪಂದಿಸಲಾಗದಂತಹ ಸ್ಥಿತಿಯಿರುತ್ತದೆ. ಅಂತಹ ಹೊತ್ತಿನಲ್ಲಿ ಮಾತು ನಿರರ್ಥಕವೆನ್ನಿಸಿದರೂ ಆಶ್ಚರ್ಯವಲ್ಲ. ಅಲ್ಲದೇ ಬದುಕು ನಶ್ವರ ಶೂನ್ಯವೆನ್ನಿಸಿಬಿಟ್ಟಿರುವ ಸ್ಥಿತಿಯದು. ನಾಳೇ ನಾವೂ ಉಳಿದಿರುತ್ತೇವೆಯೋ ಇಲ್ಲವೋ ಎಂಬ ಸ್ಥಿತಿಯದು. ಇದು ಅತ್ಯಂತ ಭೀಕರ ಮತ್ತು ದಾರುಣ ಸ್ಥಿತಿ. ಧರೆ ಹತ್ತಿ ಉರಿವ ಹೊತ್ತಿನಲ್ಲಿ ಉರಿಯ ಆಶ್ರಯ ಪಡೆದ ಸ್ಥಿತಿ. ಇದನ್ನು ಬರೀ ಮಾತುಗಳಲ್ಲಿ ವ್ಯಕ್ತಮಾಡುವುದು ಬಹಳ ಕಶ್ಟ. ಇಂತಹ ಹೊತ್ತಿನಲ್ಲಿ ಏನೇ ಮಾತನಾಡಿದರೂ ಅದರಲ್ಲಿ ಮತ್ತೆನೋ ಸೋರಿಹೋಗುತ್ತಿರುತ್ತದೆ.

ಕೋವಿಡ್-19ರ ಈ ಕಾಲದಲ್ಲಿ ಪ್ರಪಂಚದಲ್ಲಿ ಇದೇ ಪರಿಸ್ಥಿತಿ ಸೃಶ್ಟಿಯಾಗಿದೆ. ವಿಶೇಶವಾಗಿ ನಮ್ಮ ದೇಶದಲ್ಲಂತೂ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಲಾಹಲವನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿದ್ದ ಕಡಲು ಒಮ್ಮೆಲೆ ಸ್ಪೋಟಗೊಂಡಾಗ ಅದರ ಪರಿಣಾಮಗಳು ಅನೂಹ್ಯವಾಗಿರುತ್ತವೆ. ಹಾಗೆಯೇ ಸಾಮಾಜಿಕ ಆರ್ಥಿಕ ರಾಜಕೀಯ ರೋಗಗಳನ್ನು, ಆಳುವವರ ಸಂವೇದನಾ ಶೂನ್ಯತೆಯನ್ನು ಒಡಲಲ್ಲಿ ಹುದುಗಿಸಿಟ್ಟುಕೊಂಡಿದ್ದ ದೇಶದ ಮೇಲೆ ಕೋವಿಡ್ ವೈರಾಣು ದಾಳಿ ಮಾಡಿದ್ದು ಅಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಇಡೀ ದೇಶವೇ ತತ್ತರಿಸಿ ಹೋಗಿ ತೀವ್ರ ಗಾಬರಿ ಮತ್ತು ಆತಂಕದಲ್ಲಿದೆ. ಇಂತಹ ಹೊತ್ತಿನಲ್ಲಿ ಮಾತು ವ್ಯರ್ಥವೆನ್ನಿಸುತ್ತದೆ. ಮತ್ತೆ ಮಾತನಾಡಲು ಉತ್ಸಾಹವೂ ಇರುವುದಿಲ್ಲ. ಅಲ್ಲದೆ ಕೆಲವರಿಗೆ ತಮ್ಮ ಒಳಹೊರಗಿನ ಕುದಿಯನ್ನು ವ್ಯಕ್ತಗೊಳಿಸಲು ಭಾಶೆ ಸಾಲದು ಎನ್ನಿಸುತ್ತದೆ. ಭಾಶೆಗೂ ಮಿಗಿಲಾದ ಮತ್ತೇನೋ ಒಂದು ಸಾಧನ ಬೇಕೆನಿಸುತ್ತದೆ. ಬಲವಂತವಾಗಿ ಮಾತನಾಡಿದರೂ ನಿರ್ಭಾವುಕ ಎನ್ನಿಸುತ್ತದೆ. ಅಲ್ಲದೆ ತೀವ್ರ ಆಘಾತದಲ್ಲಿರುವಾಗ ಮಾತು ಸಹಜವಾಗಿ ಹೊರಡದು. ಅಂತಹ ಆಘಾತ ಸ್ಥಿತಿ ಸದ್ಯ ದೇಶದಲ್ಲಿದೆ.

ಆದರೆ ಕಮೂ ಇಂತಹ ಆಘಾತಕ್ಕೆ ಆತಂಕಕ್ಕೆ ಕಾರಣವೇ ಇಲ್ಲವೆನ್ನುತ್ತಾನೆ. ಯಾಕೆಂದರೆ “ಜಗತ್ತಿನಲ್ಲಿ ಎಶ್ಟು ಬಾರಿ ಯುದ್ಧಗಳು ನಡೆದಿವೆಯೋ, ಅಶ್ಟೇ ಬಾರಿ ಪ್ಲೇಗುಗಳೂ ಬಂದಿವೆ. ಆದರೂ ಯುದ್ಧ ಮತ್ತು ಪ್ಲೇಗು ಬಂದಾಗ ನಾವು ಸನ್ನದ್ಧರಾಗಿರುವುದಿಲ್ಲ. ಅವು ಆಗಮಿಸಿದಾಗ ಆಶ್ಚರ್ಯಚಕಿತರಾಗುತ್ತೇವೆ.” ಎನ್ನುತ್ತಾರೆ. ಅಂದರೆ ಪ್ಲೇಗ್, ಕೊರೊನಾ ಮತ್ತು ಯುದ್ಧಗಳು ಅನಿರೀಕ್ಶಿತವೇನಲ್ಲ. ಅವುಗಳ ಬಗೆಗೆ ಸೂಕ್ತ ಕಾಳಜಿ ವಹಿಸದೇ ಮೂರ್ಖತನ ಪ್ರದರ್ಶಿಸುವುದು ತಪ್ಪು ಎಂಬುದು ಕಮೂ ಮಾತಿನ ಇಂಗಿತ. ಅವನ ಮಾತನ್ನು ನಮ್ಮ ಇಂದಿನ ದಿನಗಳಿಗೆ ಅನ್ವಯಿಸಿಕೊಳ್ಳಬಹುದು. ಅಂದರೆ ಕೋವಿಡ್‍ನಂತಹ ಸಾಂಕ್ರಾಮಿಕ ರೋಗವನ್ನು ಎದುರಿಸಲು ನಮ್ಮ ದೇಶ ಸಿದ್ದವಾಗಿರಲಿಲ್ಲ. ಮತ್ತೆ ಅದು ಎರಗಿ ಒಂದು ವರ್ಶ ಕಳೆದರೂ ಅದನ್ನು ಎದುರಿಸಲು ಆಳುವವರು ಇಂದಿಗೂ ಸನ್ನದ್ಧವಾಗಿಲ್ಲ. ಇದರ ಪರಿಣಾಮವಾಗಿ ಸಾವುಗಳು ಕಣ್ಣೆದುರಿನ ವಾಸ್ತವವಾಗಿದೆ. ಎಲ್ಲರನ್ನೂ ಸಾವು ಸುತ್ತುವರಿದಿದೆ. ಬಂಧು ಬಳಗಗಳಲ್ಲಿ, ಗೆಳೆಯರ ಕೂಟಗಳಲ್ಲಿ ಯಾರ್ಯಾರದೋ ಸಾವುಗಳು ಸಂಭವಿಸಿ ಅವು ನಿತ್ಯವೂ ದಾಳಿಯಿಡುತ್ತಿವೆ. ಜನರು ಹಸಿವಿನಿಂದ ನರಳುತ್ತಿದ್ದಾರೆ. ದುಡಿಮೆಯಿಲ್ಲದೆ ಮಾನಸಿಕವಾಗಿ ದಿಕ್ಕೆಟ್ಟ ಸ್ಥಿತಿಯಲ್ಲಿದ್ದಾರೆ. ಮನುಶ್ಯರು ಯಕಶ್ಚಿತ್ ಹುಳುಗಳಂತೆ ಸಾಯುತ್ತಿದ್ದಾರೆ. ಇಂತಹ ದೃಶ್ಯಗಳು ನಿತ್ಯವೂ ಕಣ್ಣುಗಳನ್ನು ಕುಕ್ಕುತ್ತಿದ್ದರೆ ಮನಸ್ಸು ಸಂವೇದನೆ ಕಳೆದುಕೊಳ್ಳುವುದು ಸಹಜ. ಎಂದೋ ಒಂದು ದಿನ ಎದುರಾಗುತ್ತಿದ್ದ ಸಾವು ನಿತ್ಯದ ಬದುಕಾಗಿಬಿಟ್ಟರೆ ಜನರ ಮನಸ್ಸು ಹೇಗೆ ಸ್ಪಂದಿಸಬಹುದು? ಬರಿದಾದ ಕಣ್ಣುಗಳಿಂದ ಇನ್ನೆಶ್ಟು ನೀರು ಸೇದಲು ಸಾಧ್ಯ?

ಸಾವು ಸಹಜವಾಗಿಬಿಟ್ಟರೆ ಅವುಗಳಿಗೆ ಪ್ರತಿಕ್ರಿಯಿಸುವ, ಮಿಡಿಯುವ ಸ್ಪಂದನಶೀಲ ಗುಣವೂ ಯಾಂತ್ರಿಕವಾಗಿಬಿಡುತ್ತದೆ. ಇಂದು ಸಂವೇದನಾಶೀಲವಾಗಿ ಸ್ಪಂದಿಸಲು ಸಾಧ್ಯವಾಗದಂತಹ ಶೂನ್ಯಸ್ಥಿತಿ ನಿರ್ಮಾಣವಾಗಿದೆ. ಅಂದರೆ ಜನರು ನಿತ್ಯ ಅನುಭವಿಸುವ ಸಂಕಟ ಮಾತಿಗೂ ಮೀರಿದ ಸ್ಥಿತಿಯಲ್ಲಿದೆ. ಸಾವಿನ ಸುದ್ದಿಗಳು ನಿತ್ಯ ಬಂದು ಅಪ್ಪಳಿಸುವಾಗ ಅವುಗಳಿಗೆ ಪ್ರತಿಕ್ರಿಯಿಸುವುದು ಸಾಧ್ಯವಿಲ್ಲದಂತಾಗುತ್ತದೆ. ಇಂದು ಸತ್ತವರಿಗೆ ಗೌರವ ತೋರಲು ನಮನಗಳು, ಶ್ರದ್ಧಾಂಜಲಿ, ಸಂತಾಪಗಳು, ಓಂ ಶಾಂತಿ ಮುಂತಾದ ಪದಗಳನ್ನು ಬಳಸಲಾಗುತ್ತಿದೆ. ನಿತ್ಯ ಸಂಭವಿಸುವ ಸಾವುಗಳಿಗೆ ಅದದೇ ಪದಗಳನ್ನು ಬಳಸಿ ಅವು ಭಾವತೀವ್ರತೆಯನ್ನು ಕಳೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ಒಂದೋ ಕಡುಮೌನದಲ್ಲಿ ಬಿದ್ದು ನರಳಬೇಕು. ಇಲ್ಲವೇ ಅದದೇ ಸವಕಲು ಪದಗಳಲ್ಲಿ ಯಾಂತ್ರಿಕವಾಗಿ ಪ್ರತಿಕ್ರಿಯಿಸಬೇಕು. ಹಾಗಿಲ್ಲದೆ ಬೇರೆ ದಾರಿಗಳಿಲ್ಲ. ಅಂತಹ ಸ್ಥಿತಿ ಇಂದು ಸೃಶ್ಟಿಯಾಗಿದೆ. ‘ಪ್ಲೇಗ್’ನಂತಹ ಸಾಂಕ್ರಾಮಿಕ ರೋಗ ಹಬ್ಬಿದ್ದ ದಿನಗಳಲ್ಲಿಯೂ ಇಂತಹ ಪರಿಸ್ಥಿತಿ ಇದ್ದದ್ದು ನಿಜ. ಹಾಗಾಗಿ ಕಮೂ ತನ್ನ ಕೃತಿಯಲ್ಲಿ ಭಾಶೆಯನ್ನು ಕುರಿತು ನಿರೂಪಿಸುವ ಬಗೆ ಇಂದಿಗೂ ಪ್ರಸ್ತುತವಾಗಿದೆ. ಇಂದಿನಾ ಕೋವಿಡ್ ಕಾಲದಲ್ಲಿಯೇ ಅಂತಹದೇ ಸ್ಥಿತಿ ಸೃಶ್ಟಿಯಾಗಿದೆ. ಇಲ್ಲಿ ಸಾವು ನೋವು ವಿಶಾದ ದುಃಖ ಹತಾಶೆ ಸಂಕಟ ಆಕ್ರೋಶ ಸಿಟ್ಟು ಎಲ್ಲವೂ ಒಟ್ಟಿಗೆ ಒತ್ತರಿಸಿ ಬಂದರೂ ಮಾತು ಹೊರಡದ ಸ್ಥಿತಿಯಿದೆ. ಸದ್ಯದ ಪರಿಸ್ಥಿತಿ ಎಲ್ಲರ ಕೈಮೀರಿ ಹೋಗಿರುವುದರಿಂದ ಅಸಹಾಯಕತೆ ವಿಪರೀತ ಬಾಧಿಸುತ್ತದೆ. ರೋಗಿಯೊಬ್ಬರು ತಾನು ಸಾಯುವುದು ಖಚಿತವೆಂದು ತಿಳಿದು ತನ್ನ ‘ಕಾಪಾಡಿ ಕಾಪಾಡಿ’ ಎಂದು ಬೇಡುವ ಹೊತ್ತಿನಲ್ಲಿ ಅಸಹಾಯಕ ವೈದ್ಯರು ಹೇಗೆ ಪ್ರತಿಕ್ರಿಯಿಸಬಹುದು? ಹಾಗೆಯೇ ದೇಶವೇ ಮಸಣವಾಗಿ ಬದಲಾಗಿರುವಾಗ ನಾಳೆ ಎಲ್ಲವನ್ನೂ ಸರಿಮಾಡಿ ಸ್ವರ್ಗ ಸೃಶ್ಟಿಸುತ್ತೇವೆ ಎಂಬ ಆಳುವವರ ಮಾತು ನೈಜವಾದುದೇ? ಹಾಗೆಯೇ ತಮ್ಮ ಶಕ್ತಿ ಅಧಿಕಾರ ಬಳಸಿ ಸಂಭವಿಸಬಹುದಾದ ತೀವ್ರ ಹಾನಿಯನ್ನು ತಡೆಯದೆ ಸತ್ತವರ ಮುಂದೆ ಕಣ್ಣೀರು ಸುರಿಸುವ ಆಳುವವರ ವರ್ತನೆಯನ್ನು ಪ್ರಾಮಾಣಿಕವೆನ್ನಲಾದೀತೇ? ಹಾಗೆಯೇ ಇಂದಿನ ಮಾಧ್ಯಮಗಳನ್ನು ಗಮನಿಸಿದರೆ ಅವುಗಳ ಭಾಶೆಯ ಯಾಂತ್ರಿಕತೆಯ ಸ್ವರೂಪ ಪರಿಚಯವಾಗುತ್ತದೆ. ಇಂದಿನ ಮಾಧ್ಯಮಗಳ ಭಾಶೆ ದಣಿದಿದ್ದು ಮನಸ್ಸನ್ನು ಕಲಕುವ ಬದಲು ಇನ್ನಶ್ಟು ಹಿಂಸಾತ್ಮಕ ಮತ್ತು ಹಾಸ್ಯಾಸ್ಪದವೂ ಆಗಿ ಬದಲಾಗಿದೆ. ಹಾಗೆಯೇ ಜನರ ಭಾಶೆಗೂ ಕೂಡ ಗರಬಡಿದಂತಿದೆ. ಅದು ಲವಲವಿಕೆಯ ಹಾದಿಗೆ ಸದ್ಯಕ್ಕೆ ಮರಳುವ ಲಕ್ಶಣಗಳೇ ಕಾಣುತ್ತಿಲ್ಲ. ಎಲ್ಲೆಲ್ಲಿಯೂ ದುಗುಡದ ಕಾರ್ಮೋಡಗಳೇ ಹಬ್ಬಿವೆ.

ಹಾಗಾಗಿ ಇಂತಹ ಹೊತ್ತಿನಲ್ಲಿ ಎಲ್ಲರ ಮಾತು ‘ಲೊಳಲೊಟ್ಟೆ’ಯಾಗಿ ಕಂಡರೆ ಅದನ್ನು ಸಹಜ ಬೆಳವಣಿಗೆಯೆಂದೇ ಭಾವಿಸಬೇಕು. ಇಂತಹ ಹೊತ್ತಿನಲ್ಲಿ ಗಾಢವಾಗಿ ಸಂವೇದಿಸಿ ಮಾತನಾಡಲು ಸಾಧ್ಯವಿಲ್ಲ. ಇಲ್ಲಿ ಮಾತಿಗಿಂತ ಮೌನವೇ ವಾಸಿ ಎನ್ನಿಸುತ್ತದೆ. ಅಲ್ಲದೆ ನಮ್ಮ ದೇಶದಲ್ಲಿ ಈಚಿನ ರಾಜಕೀಯ ವಿದ್ಯಮಾನಗಳಿಂದ ಮಾತು ಈ ಮೊದಲೇ ಸೋತು ಸತ್ತ ಸ್ಥಿತಿಯಲ್ಲಿತ್ತು. ಈಗ ಅದು ಇನ್ನಶ್ಟು ಸೊರಗಿದಂತೆ ಭಾಸವಾಗುತ್ತದೆ. ಅದನ್ನು ಈ ಕೆಳಗಿನಂತೆ ವಿವರಿಸಿಕೊಳ್ಳಬಹುದೆನಿಸುತ್ತದೆ.

ಸಾವಿನ ವ್ಯಾಪಾರಸ್ಥರ
ಸುಳ್ಳುಗಳ ಸುನಾಮಿಯಲಿ
ಮಾತು ಮಲಿನವಾಗಿ
ಸೋತಿತ್ತು; ಅದು
ಸತ್ತೂ ಇತ್ತು

ಈಗ, ನಾಡಿಗೆ ನಾಡೇ ಮಸಣವಾಗಿ
ಕಾಯಗಳೇ ನಿಗಿನಿಗಿ ಕೆಂಡವಾಗುವಾಗ
ಮನ ಬಾಯ್ದೆರೆದರೆ
ನುಡಿ ಸತ್ವವಿಲ್ಲದ ಲೊಳಲೊಟ್ಟೆ!

ಎಲ್ಲರ ಕಿವಿ ನಾಲಗೆ ಹೃದಯಗಳಲಿ
ಹೆಣಗಳೇ ತುಂಬಿ ಉಸಿರಾಡುವಾಗ
ಕಣ್ಣುಗಳಲಿ ಚಿತೆಗಳೇ ಉರಿವಾಗ
ಮಾತು ಸೂತಕ

ಮತ್ತೆ
ಕಂಡ ಕಾಣದ ಎಲ್ಲ ದುಃಖವನು
ಕಣ್ಣೀರ ಕೊಳಗಳನು
ಅಳಿದ ಉಸಿರುಗಳ ನೋವನು
ಉಳಿದ ಜೀವಗಳ ಸಂಕಟವನು
ಅದರೆಲ್ಲ ಸಿಕ್ಕಲುಗಳನು
ನಿರ್ವಂಚನೆಯಲಿ
ನಿಜ ನುಡಿವ ಕಸುವು
ನುಡಿಗಿಲ್ಲ!

ಮತ್ತೆ
ಲಜ್ಜೆಗೆಟ್ಟು ನುಡಿದವರ ಮುಖವಾಡಗಳು
ಚಿತೆಗಳಲಿ ಉರಿದು ಬೂದಿಯಾಗಿ
ಇಲ್ಲಿ ಎಲ್ಲವೂ ಬೆತ್ತಲೆ

ಈಗ ಈ ಮಸಣದಲ್ಲಿ ಮಾತು
ಲೊಳಲೊಟ್ಟೆ! ಪ್ರಾಣಘಾತಕ!!

ಮೌನದ ಆವುಗೆಗಳಲಿ
ಬೇಯುವ ಜೀವಗಳ ತಂಪುಗೊಳಿಸಿದ
ನೀರದೀವಿಗೆಗಳು
ಮಾತಿಗೆ ಮತ್ತೆ ಜೀವ ನೀಡಬೇಕಶ್ಟೆ.

ಎಂದು ಅನ್ನಿಸಿಬಿಡುತ್ತದೆ. ಇಡೀ ದೇಶವೇ ಮಸಣದಂತೆ ಇರುವಾಗ ಅದರ ನಡುವೆ ಮಾತನಾಡುವುದು ಕಡುಕಶ್ಟದ ಕೆಲಸ. ಇಂತಹ ಸನ್ನಿವೇಶದಲ್ಲಿ ಜೀವಂತವಾಗಿ ಸ್ಪಂದಿಸುವುದು ಬಹುದೊಡ್ಡ ಸವಾಲು. ಇಲ್ಲಿ ಕೊಂಚ ಹದತಪ್ಪಿದರೂ ಮಾತು ಯಾಂತ್ರಿಕವಾಗುತ್ತದೆ. ನೀರಸವಾಗುತ್ತದೆ. ಅಪ್ರಮಾಣಿಕವಾಗುತ್ತದೆ. ಅಮಾನವೀಯವೂ ಆಗುತ್ತದೆ. ಹಾಗಾಗಿ ಜನರು ಮನಸ್ಸಿನ ಆಳಕ್ಕಿಳಿದು ಸ್ಪಂದಿಸಲಾಗದ ಸ್ಥಿತಿಯಲ್ಲಿರುತ್ತಾರೆ. ಭಾಶೆ ಸಂವೇದನಾಶೀಲತೆಯನ್ನು ಅರ್ಥವಂತಿಕೆಯನ್ನು ಕಳೆದುಕೊಳ್ಳುವುದೇ ಹೆಚ್ಚು.

ಆದರೆ ಇಲ್ಲಿನ ಮತ್ತೊಂದು ಗತಿತಾರ್ಕಿಕ ಸತ್ಯವೇನೆಂದರೆ ಮಾತು ಇಲ್ಲವೇ ನುಡಿ ಅತ್ಯಂತ ಹೆಚ್ಚು ಸಂವೇದನಾಶೀಲಗೊಳ್ಳಬೇಕಾದುದು ಇದೇ ಕಾಲದಲ್ಲಿ. ಅದು ಕಾಲದ ಅಗತ್ಯವೂ ಕೂಡ. ಸತ್ತಂತಿರುವ ಜನರನ್ನು ಜೀವನದ ಬಗೆಗೆ ಭರವಸೆಯನ್ನು ಮೂಡಿಸಬೇಕಿರುತ್ತದೆ. ಸದಾ ನಕಾರಾತ್ಮಕವಾಗಿ ಚಿಂತಿಸುವುದಕ್ಕೆ ಬದಲಾಗಿ ಸಕಾರಾತ್ಮಕವಾಗಿ ಯೋಚಿಸುವುದನ್ನು ತಿಳಿಸಿಕೊಡಬೇಕಿರುತ್ತದೆ. ಇದನ್ನು ಸಾಧಿಸಲು ಮಾನವರಿಗೆ ಭಾಶೆ ಹೊರತುಪಡಿಸಿದರೆ ಬೇರೆ ಯಾವ ಸಾಧನವೂ ಇಲ್ಲ. ಭಾಶೆಯನ್ನೇ ಮತ್ತೆ ಜೀವಂತಗೊಳಿಸಬೇಕಾಗುತ್ತದೆ. ಇದು ಸಾಧ್ಯವಾಗಬೇಕಾದರೆ ಜನರು ಇಂತಹ ಸ್ಥಿತಿಯಿಂದ ಹೊರಬರುವ ದಾರಿಗಳು ಕಾಣಿಸಿಕೊಳ್ಳಬೇಕು. ಬದುಕಿನಲ್ಲಿ ಭರವಸೆ ಮೂಡಬೇಕು. ಜನರು ಕ್ರಿಯಾಶೀಲವಾಗಬೇಕು. ಆಗ ಮಾತ್ರವೇ ನುಡಿ ಮತ್ತೆ ತನ್ನ ಚಲನಶೀಲತೆಯನ್ನು ಜೀವಂತಿಕೆಯನ್ನೂ ಪಡೆದುಕೊಳ್ಳಲು ಸಾಧ್ಯ. ಇಲ್ಲವಾದರೆ ನುಡಿ ಒಂದು ಯಾಂತ್ರಿಕ ಸ್ಪಂದನೆ ಮಾತ್ರವಾಗಿರುತ್ತದೆ. ಅಂದರೆ ಭೀಕರವಾದ ಸಾಂಕ್ರಾಮಿಕ ರೋಗದ ಮತ್ತು ಇದರ ಜೊತೆಗೆ ಕೈಜೋಡಿಸಿರುವ ಆಳುವವರ ಕಬಂಧ ಬಾಹುಗಳ ಹಿಡಿತ ತಪ್ಪಬೇಕು. ಜನರು ತಮ್ಮೊಳಗೆ ಪರಸ್ಪರ ಪ್ರೀತಿಸಿಕೊಳ್ಳುವ ಕೂಡುವ ಬೆರೆಯುವುದನ್ನು ಮಾಡಬೇಕು. ಸಾವಿನ ಸೂತಕಗಳಿಂದ ಜನರು ಹೊರಬರಬೇಕು. ಆಗ ನುಡಿಗೆ ಮರುಜೀವ ಬರುತ್ತದೆ. ‘ಪ್ಲೇಗ್’ ನಿವಾರಣೆಯ ನಂತರ ಜನಜೀವನ ಸಹಜ ಸ್ಥಿತಿಗೆ ಮರಳಿದ ಮೇಲೆ ‘ನುಡಿ’ ಉಸಿರಾಡುವುದನ್ನು ಕಮೂ ತನ್ನ ಕೃತಿಯಲ್ಲಿ ವಿವರಿಸಿದ್ದಾನೆ. ಹಾಗೆ ಇಂದೂ ಕೂಡ ಕೋವಿಡ್ ನಿಂದ ಮುಕ್ತಗೊಂಡು ಜನರ ಜೀವನ ಸಹಜ ಸ್ಥಿತಿಗೆ ಬಹಳ ಬೇಗ ಮರಳಲಿ ಎಂಬುದಶ್ಟೇ ಸದ್ಯದ ಅಪೇಕ್ಶೆ.

ಈ ಅಂಕಣದ ಹಿಂದಿನ ಬರೆಹಗಳು:
‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳುನುಡಿ’ಯಾದಾಗ…!
ಭಾಶಾಹೀನರ ಸಂಗ ಅಭಿಮಾನ ಭಂಗ
ಮುಸುಕು ನುಡಿ ಮತ್ತು ಆಹಾರದಲ್ಲಿ ಹಾಲಾಹಲ

ಸುಳ್ಳಿನ ಕೈಗಾರಿಕೆಗಳಲ್ಲಿ ಅರಿವಿನ ಹತ್ಯೆ
ಟ್ರಂಪಣ್ಣನ ಅಮೆರಿಕದಲ್ಲಿ ಸುಳ್ಳುಗಳ ಸುನಾಮಿ!
ಕೇಳ್ವಿಯೆಂಬ ಕೂರಲಗು ಮತ್ತು ಪ್ರಭುತ್ವ
ಹೊಸ ಶಿಕ್ಶಣ ನೀತಿ ಮತ್ತು ತಾಯ್ನುಡಿ ಕಲಿಕೆ

 

 


MORE NEWS

ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕ...

31-07-2021 ಬೆಂಗಳೂರು

ಸನಾತನ ಧರ್ಮದ ನಂಬಿಕೆಗಳೊಂದಿಗೆ ಘರ್ಷಣೆಗಳಿಗೆ ಇಳಿಯುತ್ತಲೇ ಸಂಕೀರ್ಣ ವ್ಯವಸ್ಥೆಯ ಚಿತ್ರಣ ನೀಡುವ ಕಾದಂಬರಿ-ಸಂಸ್ಕಾರ. ಸಿ...

‘ಹಾರುವ ಹಕ್ಕಿ ಮತ್ತು ಇರುವೆ...’ ಅ...

30-07-2021 ಬೆಂಗಳೂರು

‘ಹಾರುವ ಹಕ್ಕಿ ಮತ್ತು ಇರುವೆ’ ಸಂಕಲನದ ಕತೆಗಳ ಸಾಮಾಜಿಕ ಆವರಣ ಪಿಂಜಾರ ಸಮುದಾಯದ ಅನುಭವ ಲೋಕದಿಂದ ಮೂಡಿದ್ದ...

ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ...

27-07-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...