ಅಸ್ಥಿಪಂಜರ

Author : ಸುದರ್ಶನ ದೇಸಾಯಿ

Pages 160

₹ 65.00




Year of Publication: 2007
Published by: ಇಂದಿರಾ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸುದರ್ಶನ ದೇಸಾಯಿ ಅವರ ಪತ್ತೇದಾರಿ ಕಥಾ ‘ಅಸ್ಥಿಪಂಜರ’. ಹೊಸಳ್ಳಿಯಲ್ಲಿ ಮೂರು ವರ್ಷಗಳಿಂದ ಮಳೆ ಬಂದಿಲ್ಲ. ಕುಡಿಯಲು ನೀರಿಲ್ಲದೆ ಹಲವಾರು ಕುಟುಂಬಗಳು ಬೇರೆಡೆಗೆ ವಲಸೆ ಹೋದವು. ಆದರೆ ವೃದ್ಧರನ್ನೂ ಸೇರಿದಂತೆ ಕೆಲವರು ಎಲ್ಲೂ ಹೋಗಲಾರದೆ ಅಲ್ಲೇ ದಿನ ದೂಡುತ್ತಿದ್ದಾರೆ. ಸಿದ್ದಪ್ಪನೂ ಅವರಲ್ಲೊಬ್ಬ. ಅಂದು ಕುರಿಗಳನ್ನು ಕಾಯುತ್ತಾ ಕುಳಿತಿದ್ದ ಸಿದ್ದಪ್ಪ ಮಧ್ಯಾಹ್ನದ ಬಿರುಬಿಸಿಲಿಗೆ ಒಣಗಿಹೋಗಿದ್ದ. ಬಾಯಾರಿಕೆಯನ್ನು ತಡೆದುಕೊಳ್ಳಲಾರದೆ ಹತ್ತಿರವಿದ್ದ, ಹೊಕ್ಕು ತುಂಬುವ ಆ ಹಳೆಯ ಬಾವಿಯತ್ತ ಭಾರವಾದ ಹೆಜ್ಜೆ ಹಾಕಿದ. ಅಲ್ಲೇ ಆಡಿಕೊಂಡಿದ್ದ ಹುಡುಗರು ಕಲ್ಲುಗಳನ್ನೆತ್ತಿ ಬಾವಿಗೆ ಹಾಕಿದಾಗ ಉಂಟಾದ 'ಢಂ' ಎಂಬ ಶಬ್ದ ಕೇಳಿ ಸಿದ್ದಪ್ಪ ಅವರನ್ನು ಗದರಿಸಿ ಓಡಿಸುತ್ತಾನೆ. ಬಾವಿಯಲ್ಲಿ ನೀರು ಪಾತಾಳ ಕಂಡಿದೆ. ಹುಡುಗರು ಎಸೆದ ಕಲ್ಲುಗಳು ಬಿದ್ದುದರಿಂದ ಇದ್ದ ಸ್ವಲ್ಪ ನೀರಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು. ಒಳಗಿನ ನೂರಾರು ಮೆಟ್ಟಿಲುಗಳನ್ನು ಇಳಿದು ತಳ ತಲುಪಿದ ಸಿದ್ದಪ್ಪ ಎರಡೂ ಕೈಗಳಿಂದ ನೀರು ಹೊಡೆದು ಶುದ್ಧ ಮಾಡಿದ. ಎರಡೂ ಕೈಗಳನ್ನು ಕೂಡಿಸಿ ಬೊಗಸೆಯಲ್ಲಿ ನೀರು ತುಂಬಿ ಕುಡಿಯಲೆಂದು ಬಾಯಿ ಹತ್ತಿರ ತಂದಿದ್ದೇ ವಿಕಾರವಾಗಿ ಕಿರುಚಿಕೊಂಡು ತರಗೆಲೆಯಂತೆ ನಡುಗಿ ಮೂರ್ಛೆ ತಪ್ಪಿ ಬೀಳುತ್ತಾನೆ. ಬಾವಿಯ ಸಮೀಪವಿದ್ದ ಹುಡುಗರೆಲ್ಲಾ ಸಿದ್ದಪ್ಪನ ಕಿರುಚಾಟ ಕೇಳಿ ಹತ್ತಿರ ಬಂದು,ಅವನನ್ನು ಬಾವಿಯಿಂದ ಮೇಲೆ ಎತ್ತುತ್ತಾರೆ. ಆಸ್ಪತ್ರೆ ಸೇರಿದ ಸಿದ್ದಪ್ಪ ಮಾತಾಡುವಂತಾಗಲು ಬಹಳ ಸಮಯ ಬೇಕಾಗುತ್ತದೆ. ಸಿದ್ದಪ್ಪ ತನ್ನ ಬೊಗಸೆಯಲ್ಲಿದ್ದ ನೀರಿನಲ್ಲಿ ಏನನ್ನು ಕಂಡು ಹೆದರಿದ? ಪೋಲೀಸರು ಬಂದು ವಿಚಾರಿಸಿದಾಗ ತಿಳಿದಿದ್ದು: ಬಾವಿಯಲ್ಲಿ ಪ್ರತ್ಯೇಕ ಚೀಲಗಳಲ್ಲಿ ತುಂಬಿ ಕಟ್ಟಿದ್ದ ಎರಡು ಅಸ್ಥಿಪಂಜರಗಳಿದ್ದವು. ವೈದ್ಯರ ಅಭಿಪ್ರಾಯದಂತೆ ಅವು ಸುಮಾರು ಇಪ್ಪತ್ತೆಂಟು ವರ್ಷದ ಯುವಕ ಮತ್ತು ಇಪ್ಪತ್ತು ಇಪ್ಪತ್ತೆರಡರ ಯುವತಿಯ ಅಸ್ಥಿಪಂಜರಗಳು. ಸುಮಾರು ಹದಿನೆಂಟು ವರ್ಷಗಳ ಹಿಂದೆ ಆ ಹೆಣಗಳಿದ್ದ ಚೀಲಗಳಿಗೆ ಕಬ್ಬಿಣದ ಗುಂಡುಗಳು ಮತ್ತು ಡಂಬೆಲ್ ಗಳನ್ನು ಕಟ್ಟಿ ಬಾವಿಗೆ ಎಸೆಯಲಾಗಿತ್ತು. ಹಲವು ವರ್ಷಗಳಿಂದ ನೀರಿನಲ್ಲಿ ಕೊಳೆತ ಆ ಹೆಣಗಳ ಕೆಲವು ಅಸ್ಥಿಗಳೂ ತುಂಡಾಗಿದ್ದವು. ಮಕ್ಕಳು ಆಡುತ್ತಾ ಬಾವಿಗೆಸೆದ ಕಲ್ಲುಗಳಿಂದ ತಳದಲ್ಲಿದ್ದ ನೀರು ಅಲ್ಲಾಡಿ ಎಲುಬಿನ ತುಂಡುಗಳು ಮೇಲೆ ಬಂದಿದ್ದವು. ಸಿದ್ದಪ್ಪ ತನ್ನ ಬೊಗಸೆಯಲ್ಲಿ ಅವುಗಳನ್ನು ಕಂಡು ಬೆಚ್ಚಿಬಿದ್ದಿದ್ದ. ಪೋಲೀಸ್ ಅಧಿಕಾರಿಯಾದ ಧನಂಜಯ ತನಿಖೆ ಆರಂಭಿಸುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ಅವರ ಸ್ನೇಹಿತ ಹಾಗೂ ಖಾಸಗಿ ಪತ್ತೇದಾರ ಅಧೋಕ್ಷಜ ವಿಶ್ರಾಂತಿಗಾಗಿ ಧನಂಜಯರ ಮನೆಗೆ ಬರುತ್ತಾರೆ. ಧನಂಜಯರ ಕೋರಿಕೆಯಂತೆ ಅಧೋಕ್ಷಜ ಆ ಕೇಸನ್ನು ತಮ್ಮ ಕೈಗೆ ತೆಗೆದುಕೊಂಡು ಪತ್ತೇದಾರಿಕೆ ಶುರು ಮಾಡುತ್ತಾರೆ. ವೈದ್ಯರ ವರದಿ ಪ್ರಕಾರ ಆ ಎರಡು ವ್ಯಕ್ತಿಗಳನ್ನು ಒಂದೇ ಆಯುಧದಿಂದ ಒಂದೇ ಹೊಡೆತದಲ್ಲಿ ಸಾಯಿಸಲಾಗಿತ್ತು. ಅವರಿಬ್ಬರ ನಡುವೆ ಶಾರೀರಿಕ ಸಂಬಂಧವೇರ್ಪಟ್ಟ ಕುರುಹುಗಳಿದ್ದರಿಂದ ಅವರು ಪತಿಪತ್ನಿ ಅಥವಾ ಪ್ರಣಯಿಗಳಾಗಿದ್ದಿರಬೇಕು. ಅವರಿಬ್ಬರಿಗೂ ಸಮೀಪವರ್ತಿಯಾದ ಮತ್ತು ಅವರಿಬ್ಬರ ಮಿಲನವನ್ನು ದ್ವೇಷಿಸುತ್ತಿದ್ದ ಮೂರನೆಯ ವ್ಯಕ್ತಿ ಕೊಲೆ ಮಾಡಿರಬೇಕು ಎಂಬಲ್ಲಿಗೆ ಪ್ರಕರಣ ಬಂತು. ಹೊಸಳ್ಳಿಯ ಆಸುಪಾಸಿನ ಹಳ್ಳಿಗಳಲ್ಲಿ ಹದಿನೈದು ವರ್ಷಗಳಿಗೂ ಹಿಂದೆ ಮದುವೆಯಾದ ದಂಪತಿಗಳ ಮಾಹಿತಿ ಸಂಗ್ರಹಿಸುವ ಕೆಲಸ ಭರದಿಂದ ಸಾಗುತ್ತದೆ. ಕೊಲೆಗಾರನನ್ನು ಹುಡುಕುವ ಮೊದಲು ಸತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ಮುಂದಿನ ಕಥೆ ಬಹಳ ಚೆನ್ನಾಗಿದೆ. ಕೊನೆಯವರೆಗೂ ಓದುಗರು ಊಹಿಸಲಾಗದ ಕಥೆಯ ಬೆಳವಣಿಗೆ!! ಕೇವಲ ಹಳೆಯ ಎರಡು ಅಸ್ಥಿಪಂಜರಗಳ ಪರಿಶೀಲನೆಯಿಂದ ಸತ್ತ ವ್ಯಕ್ತಿಗಳ ಚಿತ್ರವನ್ನೂ ಬಿಡಿಸುತ್ತಾರೆ. ವಿಜ್ಞಾನ ಎಷ್ಟೊಂದು ಮುಂದುವರೆದಿದೆ!!

About the Author

ಸುದರ್ಶನ ದೇಸಾಯಿ
(14 January 1945 - 31 July 2012)

ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು  ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ  ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು.  ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು. ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ...

READ MORE

Related Books