ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

Date: 02-04-2023

Location: ಬೆಂಗಳೂರು


''ಪಂಪನಿಂದ ಹಿಡಿದು ಹೊಸಬರ ಕವಿತೆಗಳನ್ನೂ ಕೂಡ ನಾನು ಓದುತ್ತೇನೆ. ವಿಜಯ ಕರ್ನಾಟಕದ ಅನುದಿನ ಕಾವ್ಯಕ್ಕೆ ಕವಿತೆಗಳನ್ನು ವ್ಯಾಖ್ಯಾನ ಮಾಡುತ್ತೇನೆ. ಇದರ ಉದ್ದೇಶ ಕಾವ್ಯ ಪ್ರೀತಿಯನ್ನು ಬೆಳೆಸುವುದು. ದಿನನಿತ್ಯ ಬೆಳಗ್ಗೆ ಎದ್ದ ತಕ್ಷಣ ಕಾವ್ಯ ನಮ್ಮ ಬದುಕಿಗೆ ಸಕಾರತ್ಮಕ ಆಲೋಚನೆಗಳನ್ನು ಕೊಡಲಿ ಅಂತ,'' ಎನ್ನುತ್ತಾರೆ ಎಚ್. ಎಸ್. ಸತ್ಯನಾರಾಯಣ. ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ “ಎಚ್. ಎಸ್. ಸತ್ಯನಾರಾಯಣ ಅವರ ಸಾಹಿತ್ಯಿಕ ಬದುಕಿನ ಯಾನ”ವನ್ನು ಕಟ್ಟಿಕೊಟ್ಟಿದ್ದಾರೆ.

ಮೊದಲನೇ ಹಾರೆಯೇಟಿಗೆ ಕಲ್ಲು ಸಿಕ್ಕಿತೆಂದು ಬಾವಿ ಅಗೆಯುವುದನ್ನು ನಿಲ್ಲಿಸಿದರೆ ನೀರು ಸಿಕ್ಕೀತೇ ಬಾಯಾರಿಕೆ ನೀಗೀತೆ... ಎಲ್ಲ ಅಡೆತಡೆಗಳನ್ನು ಮೀರಿ ಬಾವಿ ಅಗೆದರೆ ನೀರು ಸಿಕ್ಕು ಬಾಯಾರಿಕೆ ನೀಗುತ್ತದೆ. ಇದಕ್ಕೆ ಅನ್ವರ್ಥವಾಗಿ ಇರುವವರು ಡಾ. ಎಚ್. ಎಸ್. ಸತ್ಯನಾರಾಯಣ ಗುರುಗಳು. ಇವರು ಹುಟ್ಟಿದ್ದು ಆಗಸ್ಟ್, 1, 1969 ಚಿಕ್ಕಮಗಳೂರಿನಲ್ಲಿ. ಎಸ್. ಎಸ್. ಎಲ್. ಸಿ.ಯಲ್ಲಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣರಾದವರು ಅಂತಿಮ ಬಿ. ಎ. ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿ ಪ್ರೊ. ತೀ. ನಂ. ಶ್ರೀ ಚಿನ್ನದ ಪದಕ ಮತ್ತು ಹಲವು ನಗದು ಬಹುಮಾನವನ್ನು ಪಡೆದುಕೊಂಡರು. ಕನ್ನಡ ಎಂ. ಎ. ಪರೀಕ್ಷೆಯಲ್ಲಿ ತೃತೀಯ ಶ್ರೇಣಿ ಪಡೆದವರು.ಇವರ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕುರಿತ 'ಕಥನ ಸಾಹಿತ್ಯದ ಸಾಂಸ್ಕೃತಿಕ ನೆಲೆಗಳು' ಎಂಬ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಹಲವಾರು ಅಂತಾರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇವರು ರಚಿಸಿದ ಸಂಗೊಳ್ಳಿರಾಯಣ್ಣ ವ್ಯಕ್ತಿ ಚಿತ್ರವು ಐದನೇ ತರಗತಿಗೆ ಕನ್ನಡ ಪಠ್ಯವಾಗಿದೆ. ಯುವ ಜನಾಂಗ ಮತ್ತು ಧಾರ್ಮಿಕ ಸಾಮರಸ್ಯ ಹಾಗೂ ಕನ್ನಡಕ್ಕೆ ಅನ್ನ ಬ್ರಹ್ಮನ ಸ್ಥಾನ ಎಂಬ ಲೇಖನಗಳು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿವೆ. ಇವರ ಪ್ರಕಟಿತ ಕೃತಿಗಳು ಅಪೂರ್ವ ಒಡನಾಟ, ಕುವೆಂಪು, ಅಲಕ್ಷಿತರೆದೆಯ ದೀಪ, ಅಕ್ಷರ ಲೋಕದ ಆನೆ, ನುಡಿಚಿತ್ರ, ಕಣ್ಣೋಟ, ಗಿರೀಶ್ ಕಾರ್ನಾಡ್ ಬದುಕು-ಬರಹ, ಮಕ್ಕಳಿಗಾಗಿ ಮಾಸ್ತಿ. ನಾಡಿನಾದ್ಯಂತ ನಾಲ್ಕು ಸಾವಿರಕ್ಕೂ ಅಧಿಕ ಉಪನ್ಯಾಸ ನೀಡುವ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುವ ಸಾಹಿತ್ಯ ಪರಿಚಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಲವು ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ, ಹೊರನಾಡಿನ ಕನ್ನಡಪರ ಸಂಘಟನೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಹಲವಾರು ಸಂಸ್ಥೆಗಳಲ್ಲಿ ರಾಷ್ಟ್ರಮಟ್ಟದ, ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸದಾ ಹಸನ್ಮುಖಿ, ಮಲೆನಾಡಿನ ಶ್ರೀಮಂತ ಪರಂಪರೆಯ ರಾಯಭಾರಿಯಂತಿರುವ ಇವರು ಎಸ್. ಎಸ್. ಎಲ್. ಸಿ. ಯಲ್ಲಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣರಾದರೂ ಮುಂದೆ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದ್ದು ಹೇಗೆ ಎಂಬ ಅವರ ಬದುಕಿನ ಯಾನವನ್ನು ಅವರದೇ ಮಾತುಗಳಲ್ಲಿ ಓದಿಕೊಳ್ಳಿ...

'ನನ್ನ ತಂದೆ ಶ್ರೀನಿವಾಸ ಎಚ್. ಕೆ. ತಾಯಿ ಇಂದಿರಮ್ಮ. ಅಪ್ಪ ಅಮ್ಮನಿಗೆ ನಾವು ನಾಲ್ಕು ಜನ ಮಕ್ಕಳು. ಅಪ್ಪ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ನಂತರ ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿ ಬಂತು. ಆಗ ಅಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡ್ತಾ ಇದ್ರು. ಅಮ್ಮ ಅನಕ್ಷರಸ್ಥೆ ಆದರೂ ನಾಲ್ಕು ಮಕ್ಕಳನ್ನು ಓದಿಸಿದ್ದು ಅಮ್ಮನೇ. ಚಿಕ್ಕಂದಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ವಿ. ಹಂಚಿನ ಹಳೇ ಮನೆ. ಬಾಡಿಗೆಯನ್ನು ತುಂಬಲು ಮನೆಯ ಓನರ್ ಒಂದು ಪಾಸ್ ಬುಕ್ ಕೊಟ್ಟು ಪೋಸ್ಟ್ ಆಫೀಸಿನಲ್ಲಿ ಡೆಪಾಸಿಟ್ ಮಾಡಲು ಹೇಳಿದ್ರು. ಓನರ್ ಐದಾರು ವರ್ಷಕ್ಕೊಮ್ಮೆ ಕೂಡ ಬರುತ್ತಿರಲಿಲ್ಲ. ಎಷ್ಟೋ ವರ್ಷಗಳಿಂದ ಆ ಜಾಗಕ್ಕೆ ಕಂದಾಯ ಕಟ್ಟಿರಲಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ನೀವು ಕಂದಾಯ ಕಟ್ಟಿ ನಾಲ್ಕೈದು ಸಾವಿರ ಕಟ್ಟಿದ್ರೆ ಇಷ್ಟು ದೊಡ್ಡ ಜಾಗ ನಿಮ್ಮದೇ ಆಗತ್ತೆ ಅಂತ ಎಷ್ಟು ಒತ್ತಾಯ ಮಾಡಿದರೂ ನಮ್ಮ ಅಮ್ಮ ಓಪುತ್ತಿರಲಿಲ್ಲ. ಅವರು ನಮಗೆ ಬಾಡಿಗೆಗೆ ಇರಲು ಕೊಟ್ಟಿದ್ದಾರೆ. ನಾವು ಇದ್ದಷ್ಟು ದಿನ ಬಾಡಿಗೆ ಕಟ್ಟುತ್ತೇವೆ ಎನ್ನುತ್ತಿದ್ದರು. ತುಂಬ ಕಡು ಬಡತನದಲ್ಲಿ ಕಸಗುಡಿಸಿ, ನೆಲ ಒರೆಸಿ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದರೂ ಯಾರ ಹಣವನ್ನು ಅಮ್ಮ ಮುಟ್ಟುತ್ತಿರಲಿಲ್ಲ. ನಮ್ಮದಲ್ಲದ್ದು ನಮಗ್ಯಾಕೆ ಅಂತ ಹೇಳುತ್ತಿದ್ದರು. ತುಂಬ ಸ್ವಾಭಿಮಾನದಿಂದ ಬದುಕಿದವರು ಅಮ್ಮ. ಆ ಮನೆ ಖಾಲಿ ಮಾಡುವ ಹೊತ್ತಿಗೆ ನಾನು ಪ್ರಥಮ ಪಿಯುಸಿಯಲ್ಲಿ ಇದ್ದೆ. ನಾನು ಮೂರು ತಿಂಗಳು ಮಗುವಿದ್ದಾಗ ಆ ಮನೆಗೆ ಹೋಗಿದ್ದೆವು. ಅಲ್ಲಿ ಎತ್ತರದ ನೀಲಾಂಜನ ದೀಪವನ್ನು ಕೊಕ್ಕೆ ಹಾಕಿ ದೇವರ ಮನೆಯಲ್ಲಿ ತೂಗು ಹಾಕಿ ಇದನ್ನು ನೀವು ಪ್ರತಿದಿನ ಉರಿಸಬೇಕು ಅಂತ ಬಾಡಿಗೆ ಕೊಡುವಾಗ ಮನೆಯ ಓನರ್ ಹೇಳಿದ್ದರಂತೆ. ಅದರಂತೆ ನಮ್ಮ ತಾಯಿ ನಮ್ಮ ದೇವರುಗಳನ್ನು ಅಲ್ಲೇ ಇಟ್ಟು ಪೂಜೆ ಮಾಡ್ತಾ ಬಂದಿದ್ದರು. ಅಕ್ಕ ಪಕ್ಕದವರು ಇಷ್ಟು ವರ್ಷ ಬಳಸಿದ್ದೀರಲ್ಲ ಆ ದೀಪವನ್ನಾದರೂ ತಗೊಂಡ್ ಹೋಗಿ ಅಂದ್ರೂ ನಮ್ಮಮ್ಮ ಅದೇ ಉತ್ತರ ಹೇಳಿ ನಮ್ಮಮ್ಮ ಅಲ್ಲೇ ಬಿಟ್ಟು ಬಂದಿದ್ರು. ನಮ್ಮದಲ್ಲದ್ದು ನಮಗ್ಯಾಕೆ? ಅವರು ನಮಗೆ ದೀಪ ಹಚ್ಚಲು ಕೊಟ್ಟಿದ್ರು. ಇಷ್ಟು ದಿನ ಹಚ್ಚಿದ್ದೇವೆ, ಇನ್ನು ಮುಂದೆ ಬಂದವರು ಬಳಸುತ್ತಾರೆ ಎನ್ನುವ ಈ ತರದ ಗುಣಗಳನ್ನು ನೋಡ್ತಾ ಬೆಳೆದವನು ನಾನು. ನಮ್ಮ ತಾಯಿಯ ತಾಯಿ ಅಂದ್ರೆ ನಮ್ಮಜ್ಜಿ ಕಮಲಜ್ಜಿ ಮಹಾ ಸ್ವಾಭಿಮಾನದ ಅಜ್ಜಿ. ಅವರೂ ಆಸ್ಪತ್ರೆಯಲ್ಲಿ ಆಯಾ ಆಗಿದ್ದವರು. ಅವರ ಸಂಪರ್ಕದಿಂದಲೇ ಅಮ್ಮನಿಗೂ ಅಲ್ಲೇ ಕೆಲಸ ಸಿಕ್ಕಿದ್ದು. ಅವರು ತೀರಿಕೊಂಡಾಗ ಅವರಿಗೆ ನೂರಾ ಎರಡು ವರ್ಷಗಳು. ನಾನು ಸತ್ತಾಗ ನನ್ನ ಹಣದಿಂದಲೇ ಸಂಸ್ಕಾರ ಮಾಡಬೇಕು ಅಂತ ಅವರು ಆಗಲೂ 70000/- ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿ ಇಟ್ಟಿದ್ದರು. ಅಷ್ಟು ಮಹಾನ್ ಸ್ವಾಭಿಮಾನಿ'.

'ನನಗೆ ಆಗಿನಿಂದಲೇ ಸಾಹಿತ್ಯದ ಪ್ರೀತಿ ಬಹಳ ಇತ್ತು ನಾನು ಒಂಭತ್ತನೇ ತರಗತಿಯಲ್ಲಿ ಓದುವಾಗಲೇ ಎಸ್. ಎಲ್. ಭೈರಪ್ಪನವರ ಗೃಹಭಂಗ ಓದಿ ಅವರಿಗೆ ಕಾಗದ ಬರೆಯುತ್ತಿದ್ದೆ. ಆದರೆ ಶಾಲಾ ಓದಿನಲ್ಲಿ ಯಾಕೋ ಆಸಕ್ತಿ ಬರಲೇ ಇಲ್ಲ. ಕವಿತೆ ಬರೆಯುವ ಆಸೆ ಇತ್ತು. ನಾನು ಆರನೇ ತರಗತಿಯಲ್ಲಿ ಬೇಂದ್ರೆ ಅವರ ಮನೆಗೆ ಹೋಗಿದ್ದೆ. ಪು. ತಿ. ನ, ಕಾರಂತ, ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇವರ ಪುಸ್ತಕಗಳನ್ನು ಓದುತ್ತಿದ್ದೆ. ಯಾವುದೇ ಒಂದು ಸಾಹಿತ್ಯದ ಕಾರ್ಯಕ್ರಮವಿದ್ದರೂ ಹೋಗುತ್ತಿದ್ದೆ. ಚಿಕ್ಕಮಗಳೂರಿಗೆ ಯಾರೇ ಸಾಹಿತಿಗಳು ಬಂದರೂ ಶ್ರದ್ದೆಯಿಂದ ಹೋಗಿ ಅವರನ್ನು ಭೇಟಿ ಮಾಡಿ, ಅವರ ಮಾತುಗಳನ್ನು ಕೇಳಿಕೊಂಡು ಅವರು ಹೇಳಿದ ಪುಸ್ತಕಗಳನ್ನು ಲೈಬ್ರರಿಯಿಂದ ತಂದು ಓದುತ್ತಿದ್ದೆ. ಬೇರೆ ಪುಸ್ತಕಗಳನ್ನು ಕೂಡ ಓದುತ್ತಿದ್ದೆ. ಆದರೆ ಶಾಲಾ ಪುಸ್ತಕಗಳನ್ನು ಓದುತ್ತಿರಲಿಲ್ಲ. ನಮ್ಮ ತಾಯಿ ತುಂಬ ಕಷ್ಟಜೀವಿ. ನಾನು ಎಸ್. ಎಸ್. ಎಲ್. ಸಿ ಓದುವಾಗ ನಾಲ್ಕು ವಿಷಯಗಳಲ್ಲಿ ಅನುತ್ತಿರ್ಣನಾಗಿದ್ದೆ. ನಮ್ಮಮ್ಮನಿಗೆ ವಿಷಯ ಗೊತ್ತಾದರೂ ನನ್ನನ್ನು ಹೊಡೆಯಲಿಲ್ಲ ಒಂದು ಮಾತು ಬೈಯಲಿಲ್ಲ. ಒಂದು ದಿನ ತುಳಸಿ ಕಟ್ಟೆ ಹತ್ತಿರ ಕರೆದುಕೊಂಡು ಹೋಗಿ ನೋಡು ಮಗು ಓದದೇ ಇದ್ದರೆ ನೀನು ನನ್ನ ಹಾಗೆ ಯಾರದ್ದೋ ಹೊಲಸು ಬಳಿಯುವ ಕೆಲಸ ಮಾಡಬೇಕಾಗತ್ತೆ ಎಂದರು. ನೀನು ಓದಬೇಕು ಅಂತ ಅಮ್ಮ ಅವತ್ತು ಹೇಳಿದ ಒಂದೇ ಮಾತಿಗೆ ನಾನು ಅಮ್ಮನಿಗೆ ಪ್ರಮಾಣ ಮಾಡಿದೆ. ಆಗಿನಿಂದ ಹಠಕ್ಕೆ ಬಿದ್ದು ಓದಿ ಪಾಸ್ ಆದೆ. ನಾಲ್ಕು ವಿಷಯಗಳಲ್ಲಿ ಫೇಲ್ ಆದವ ಡಿಗ್ರಿನಲ್ಲಿ ತೀ. ನಂ. ಶ್ರೀ. ಪ್ರತಿಷ್ಠಿತ ಚಿನ್ನದ ಪದಕದೊಂದಿಗೆ ಮನೆಗೆ ಹೋದೆ. ಹಿಗ್ಗಿನ ಬುಗ್ಗೆ ಅಂತ ಪುಸ್ತಕ ಇತ್ತು. ಅದರಲ್ಲಿ ಬರೀ ಕನ್ನಡದ ಹಾಡುಗಳು ಇರುತ್ತಿದ್ದವು ಅಂತವನ್ನೆಲ್ಲ ಹೆಚ್ಚು ಓದುತ್ತಿದ್ದೆ. ಲೆಕ್ಕ ವಿಜ್ಞಾನ ಅಂದ್ರೆ ಏನೂ ಗೊತ್ತಾಗುತ್ತಿರಲಿಲ್ಲ. ಸಾಹಿತಿ ಆಗ್ತೀನಿ ಅಂದುಕೊಂಡವನಲ್ಲ ಆದರೆ, ಚೆನ್ನಾಗಿ ಓದಿಕೊಂಡು ಇರಬೇಕು ಅನ್ನುವ ಆಸೆ ಇತ್ತು. ಕುವೆಂಪು ನೂರಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರಂತೆ. ಬೇಂದ್ರೆ ಎರಡೂವರೆ ಸಾವಿರ ಪದ್ಯಗಳನ್ನು ಬರೆದಿದ್ದಾರಂತೆ ಅವನ್ನು ನಾನು ಓದಬೇಕು. ನಾನು ಒಬ್ಬ ಒಳ್ಳೆಯ ಓದುಗ ಆಗಬೇಕು. ಎಷ್ಟೊಂದು ಸಾಹಿತ್ಯ ಇದೆ ಒಟ್ಟಾರೆ ಎಲ್ಲವನ್ನು ಓದಬೇಕು ಎಂಬುದು ನನ್ನ ಬಹುದಿನಗಳ ಆಸೆ. ಈಗಲೂ ನನ್ನನ್ನು ನಾನು ಸಾಹಿತ್ಯದ ವಿದ್ಯಾರ್ಥಿ, ಓದುಗ ಅಂತಲೇ ಹೇಳಿಕೊಳ್ಳೋಕೆ ಇಷ್ಟಪಡುತ್ತೇನೆ. ನಂತರ ವಿಮರ್ಶಕ. ಚಿಕ್ಕಂದಿನಿಂದಲೂ ನಾನು ದೊಡ್ಡ ಸಂಬಳ ತರುವ ಅಧಿಕಾರಿಯಾಗಬೇಕು ಎಂದು ಕನಸು ಕಂಡವನಲ್ಲ. ಎಂ. ಎ. ಗೆ ಬಂದಾಗ ಸಾಹಿತ್ಯ ಲೋಕ ಎಷ್ಟು ಚೆನ್ನಾಗಿದೆ ಅಂತ ಆಗ ನಾನು ವಿಮರ್ಶೆಯನ್ನು ಆಯ್ಕೆ ಮಾಡಿಕೊಂಡೆ. ವಿಮರ್ಶೆ ಅಂದರೆ ಒಂದು ಕೃತಿ ನಾವು ಓದುತ್ತೇವಲ್ಲ ಅದು ನಮ್ಮೊಳಗೆ ಒಂದು ಜಿಜ್ಞಾಸೆಯನ್ನು ಉಂಟುಮಾಡುತ್ತದೆ. ನಿಜವಾಗಲೂ ಒಂದು ಒಳ್ಳೆಯ ಪುಸ್ತಕ ಆಗಿದ್ರೆ ಆಗ ನನ್ನಲ್ಲಿ ಹುಟ್ಟುವ ಪ್ರತಿಕ್ರಿಯೆಗಳನ್ನೆಲ್ಲ ಒಂದು ಕಡೆ ಹಿಡಿದಿಡುವುದು ವಿಮರ್ಶೆಯ ಮುಖ್ಯ ಉದ್ದೇಶ. ವಿಮರ್ಶೆ ಎಂದರೆ ನಮ್ಮ ಪ್ರತಿಕ್ರಿಯೆಗಳನ್ನು ಶಿಸ್ತು ಬದ್ಧವಾಗಿ ದಾಖಲಿಸುವುದು ಅಂತ ಹಾ. ಮಾ. ನಾಯಕ್, ಜಿ. ಎಚ್. ನಾಯಕ್, ಟಿ. ವಿ. ವೆಂಕಟಾಚಲಶಾಸ್ತ್ರಿಗಳು ಇಂತಹ ಘಟಾನುಘಟಿಗಳೆಲ್ಲ ನಮಗೆ ಪಾಠ ಮಾಡಿದ್ರು. ಛಂದಸ್ಸು, ವ್ಯಾಕರಣ ಹೇಳಿಕೊಟ್ಟಿದ್ರು. ಎಂ. ಎ. ಓದುವಾಗಿನಿಂದಲೇ ನಿರಪೇಕ್ಷ ಮನೋಭಾವದಿಂದ ಭಾಷಣಗಳನ್ನು ಶುರು ಮಾಡಿದೆ. ನಾನು ಎಂ. ಎ. ದ್ವಿತೀಯ ವರ್ಷ ಇರುವಾಗ ಪ್ರಬಂಧಗಳನ್ನು ಮಂಡಿಸುತ್ತಿದ್ದೆ. ಒಮ್ಮೆ ಚೆನ್ನವೀರ ಕಣವಿ ಅವರನ್ನು ಸಂದರ್ಶನ ಮಾಡಿ ಮರಳುವ ಸಂದರ್ಭದಲ್ಲಿ ಅವರನ್ನು ಕೊನೆಗೆ ಒಂದು ಪ್ರಶ್ನೆ ಕೇಳಿದೆ. ನೀವು ಹಿರಿಯರಾಗಿ ನಮಗೆಲ್ಲ ಏನು ಸಂದೇಶ ಕೊಡುತ್ತೀರಾ? ನಾವೆಲ್ಲ ಹೇಗೆ ಕನ್ನಡ ಸೇವೆ ಮಾಡಬೇಕು? ಅಂದಾಗ ಅವರು ಹೇಳಿದ್ದು, "ಕನ್ನಡದ ಸೇವೆ ಯಾರು ಮಾಡಲಿ ಬಿಡಲಿ ಅದಕ್ಕೆ ಏನೂ ಆಗಲ್ಲ. ಅದರ ಪಾಡಿಗೆ ಅದು ಇರತ್ತೆ. ಆದರೆ ಆಟೋದವರು, ಸಾಹಿತಿಗಳು, ಸಿನೆಮಾ ನಟರು ಎಲ್ಲರೂ ಒಂದೊಂದು ರೀತಿಯ ಸೇವೆ ಮಾಡುತ್ತಾರೆ. ನೀನು ಕನ್ನಡ ಸಾಹಿತ್ಯ ಓದಿದ್ದೀಯಲ್ಲ. ಕನ್ನಡದ ಬಗ್ಗೆ ಎಲ್ಲೇ ಮಾತನಾಡಲು ಕರೆದರೂ ಆ ಕಾರ್ಯಕ್ರಮ ದೊಡ್ಡದು ಚಿಕ್ಕದು ಅನ್ನದೇ ಹೋಗಿ ಮಾತಾಡ್ತಾ ಇರು. ನೀನು ಏನು ಶ್ರದ್ಧೆಯಿಂದ ಓದಿಕೊಂಡಿದ್ದೀಯೋ ಅದನ್ನು ಹಂಚು. ನೀನು ಮಾಡುವ ಸೇವೆಗೆ ಪ್ರತಿಯಾಗಿ ಅವರಿಂದ ಏನನ್ನೂ ನಿರೀಕ್ಷೆ ಮಾಡಬೇಡ" ಅಂತ ಹೇಳಿದ ಮಾತುಗಳು ನನಗೆ ಭಾಷಣ ಮಾಡಲು ಸ್ಫೂರ್ತಿಯಾಯಿತು. ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡು ನಾಡಿನಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ಮಾಡಿದ್ದೇನೆ. ಕನ್ನಡ ನಾಡಿನಲ್ಲಿ ನಾನು ಭಾಷಣ ಮಾಡದ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು ಯಾವುದೂ ಇಲ್ಲ. ಎಲ್ಲಿಗೆ ಕರೆದರೂ ಹೋಗುತ್ತೇನೆ. ಯಾವುದೇ ಭಾಷಣಕ್ಕೆ ಹೋದರೂ ಒಂದು ಸಿದ್ಧತೆ ಮಾಡಿಕೊಂಡು ಹೋಗಿರುತ್ತೇನೆ. ಅದು ವೈಯಕ್ತಿಕವಾಗಿ ನಮ್ಮನ್ನು ಬೆಳೆಸುತ್ತೆ. ನಾನು ನಿಂತು ತೇಜಸ್ವಿ, ರಾಜರತ್ನಂ ಅವರ ಬಗ್ಗೆ ಮಾತನಾಡುತ್ತೇನೆ ಅಂದರೆ ಅವರ ಬಗ್ಗೆ ಪೂರ್ತಿಯಾಗಿ ನಾನು ಓದಲೇಬೇಕು. ಹಾಗಾಗಿ ಟಿಪ್ಪಣಿ, ಪೂರ್ವ ಸಿದ್ಧತೆಗಳು ಬಹಳ ಮುಖ್ಯ. ನನಗೆ ಹಾ. ಮಾ. ನಾಯಕ ಅವರು ಒಂದು ಕಿವಿಮಾತಿನ ವಿವೇಕ ಹೇಳಿದ್ದರು; "ಮೊದಲು ಸಾಹಿತ್ಯವನ್ನು ಚೆನ್ನಾಗಿ ಓದಿ ವಿದ್ವತ್ ಅನ್ನು ಗಳಿಸಿಕೋ, ನಂತರ ಮಿಕ್ಕಿದ್ದೆಲ್ಲ ನಿನ್ನ ಹುಡುಕಿಕೊಂಡು ಬರುತ್ತದೆ" ಎಂದಿದ್ರು.

'ಪಂಪನಿಂದ ಹಿಡಿದು ಹೊಸಬರ ಕವಿತೆಗಳನ್ನೂ ಕೂಡ ನಾನು ಓದುತ್ತೇನೆ. ವಿಜಯ ಕರ್ನಾಟಕದ ಅನುದಿನ ಕಾವ್ಯಕ್ಕೆ ಕವಿತೆಗಳನ್ನು ವ್ಯಾಖ್ಯಾನ ಮಾಡುತ್ತೇನೆ. ಇದರ ಉದ್ದೇಶ ಕಾವ್ಯ ಪ್ರೀತಿಯನ್ನು ಬೆಳೆಸುವುದು. ದಿನನಿತ್ಯ ಬೆಳಗ್ಗೆ ಎದ್ದ ತಕ್ಷಣ ಕಾವ್ಯ ನಮ್ಮ ಬದುಕಿಗೆ ಸಕಾರತ್ಮಕ ಆಲೋಚನೆಗಳನ್ನು ಕೊಡಲಿ ಅಂತ. ನಂತರ ಈ ಕಾವ್ಯ ಪರಂಪರೆ ಇದೆಯಲ್ಲ ಹಳೆಗನ್ನಡ, ಜಾನಪದ, ಎಷ್ಟೋ ಕಾವ್ಯಗಳೊಂದಿಗೆ ಹೊಸಬರು ಮತ್ತು ಸಾಮಾನ್ಯರು ಪ್ರತಿನಿತ್ಯ ಒಡನಾಡುವುದಕ್ಕೆ ಆಗುವುದಿಲ್ಲ. ಆದ್ದರಿಂದ ಈ ಮೂಲಕ ಅವರ ಗಮನ ಸೆಳೆದು ಅವರಲ್ಲಿ ಕಾವ್ಯಾಸಕ್ತಿ ಮೂಡಿಸುವ ಉದ್ದೇಶ ನನ್ನದು. ಓದಿದವರಿಗೆ ಓದು ನಮ್ಮ ಬದುಕಿಗೆ ಮೌಲ್ಯವನ್ನು ತಂದುಕೊಡುತ್ತಿದೆ ಅನ್ನಿಸಬೇಕು. ನಾನು ಕಂಡುಕೊಂಡ ದಾರಿ ಇದು. ಯುವ ತಲೆಮಾರು, ಹಿರಿಯರದ್ದು ಎರಡೂ ( ಕಣ್ಣೋಟ ಎನ್ನುವ ವಿಮರ್ಶಾ ಸಂಕಲನದಲ್ಲಿ ಹಿರಿಯರ ಒಂದು ಭಾಗವಿದ್ದರೆ ಹೊಸ ಚಿಗುರು ಅಂತ ಇನ್ನೊಂದು ಭಾಗವನ್ನು ಮೂವತ್ತು ಯುವ ಲೇಖಕರ ಬಗ್ಗೆ ಬರೆದಿದ್ದೇನೆ) ಮತ್ತು ವರ್ತಮಾನದ್ದನ್ನೂ ಒಳಗೊಳ್ಳಬೇಕು. ಹೊಸಬರು ಕಾವ್ಯ, ಕತೆ, ನಾಟಕ, ಖಂಡಕಾವ್ಯಗಳನ್ನು, ಮಹಾಕಾವ್ಯ, ಗಜಲ್, ಹಾಯ್ಕು ಮುಂತಾದ ಪ್ರಕಾರಗಳ ಪ್ರಯೋಗಶೀಲತೆಗೆ ಒಡ್ಡಿಕೊಳ್ಳುತ್ತಿದ್ದಾರೆ. ಹೊಸ ಹೊಸ ರೂಪಕಗಳನ್ನು ಬಳಸಿಕೊಂಡು ಬರೆಯುತ್ತಿದ್ದಾರೆ. ಈಗಿನ ಯುವಕರಿಗೆ 'ಹಿಂದಣ ಹೆಜ್ಜೆಯ ನರಿತಲ್ಲದೆ ನಿಂದ ಹೆಜ್ಜೆಯನರಿಯಲಾರದು' ಎಂದು ಅಲ್ಲಮಪ್ರಭುಗಳು ಹೇಳಿದಂತೆ ನಿಂದ ಹೆಜ್ಜೆ ಅಂದರೆ ವರ್ತಮಾನವನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಹಿಂದಣ ಹೆಜ್ಜೆ ಅಂದ್ರೆ ಪರಂಪರೆಯನ್ನು ಮೊದಲು ಓದಿರಬೇಕು. ಮೊದಲು ಚೆನ್ನಾಗಿ ಓದಬೇಕು... ಎಷ್ಟು ಓದುತ್ತಾ ಹೋಗುತ್ತೀರೋ ಅನುಭವದ ಜಗತ್ತು ಅಷ್ಟು ವಿಸ್ತಾರವಾಗುತ್ತಾ ಹೋಗುತ್ತದೆ. ವಸುಂಧರಾ. ಆರ್ ಎನ್ನುವವರ ಜೊತೆಗೆ ಮಯೂರ (ಸುಧಾಂಶು)ಎಂಬ ಪ್ರೀತಿಯ ಮಗನೊಟ್ಟಿಗೆ ಸಂಸಾರ ಸಾಗರ ಅಚ್ಚುಕಟ್ಟಾಗಿ ಪ್ರೀತಿಯಿಂದ ನಡೆದುಕೊಂಡು ಬರುತ್ತಿದೆ. ನನ್ನ ಸಾಹಿತ್ಯ ಸೇವೆಗೆ ಮನೆಯ ಎಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇದೆ' ಎನ್ನುತ್ತಾರೆ ಡಾ. ಎಚ್. ಎಸ್. ಸತ್ಯನಾರಾಯಣ ಗುರುಗಳು.

ಪ್ರಸ್ತುತ ಕಾಲಮಾನದಲ್ಲಿ ಮೌಲ್ಯಗಳ ಗಣಿಯಂತಿರುವ ಇವರು ಸಾಹಿತ್ಯದ ಹೊರತಾಗಿ ಓಡಾಟ, ಹಾಡುವುದು, ರುಚಿಯಾದ ಅಡುಗೆ ಮಾಡುವಂಥ ಹವ್ಯಾಸಗಳಲ್ಲಿ ಒಳ್ಳೆಯ ಅಭಿರುಚಿಯನ್ನು ಹೊಂದಿದ್ದಾರೆ. ಇವರ ಆತ್ಮೀಯ ಆತಿಥ್ಯ, ಪ್ರೀತಿ ತುಂಬಿದ ಮಾತುಗಳು ಯಾವತ್ತೂ ನೆನಪಿನಲ್ಲುಳಿಯುತ್ತವೆ. ಇವರ ಸಾಹಿತ್ಯದ ಸೇವೆ ಸಾಹಿತ್ಯಾಸಕ್ತರಿಗೆ ಯಾವಾಗಲೂ ಲಭ್ಯವಾಗಲಿ. ಯುವ ಓದುಗರನ್ನು ಬರಹಗಾರರನ್ನು ಇವರು ಪ್ರೋತ್ಸಾಹಿಸುವ ರೀತಿಯಂತೂ ಅನನ್ಯವಾದುದು. ಸದಾ ಒಂದಿಲ್ಲೊಂದು ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡೇ ಇರುವ ಇವರಿಗೆ ದೇವರು ಒಳ್ಳೆಯ ಆರೋಗ್ಯ ದೀರ್ಘ ಆಯುಷ್ಯವನ್ನು ಕೊಟ್ಟು ಕಾಪಾಡಲಿ.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...