‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

Date: 25-11-2021

Location: ಬೆಂಗಳೂರು


‘ಸಂಪಾದಕೀಯ ಪತ್ರಿಕೆಯ ಆತ್ಮವಿದ್ದಂತೆ. ಸತ್ಯವನ್ನು ನುಡಿಯುವ ನ್ಯಾಯವನ್ನು ಎತ್ತಿಹಿಡಿದು ಅನ್ಯಾಯವನ್ನು ಖಂಡಿಸುವ, ಓದುಗರ ಪ್ರಜ್ಞೆಗೆ ಸಾಣೆ ಹಿಡಿಯವ, ಸತ್ಯದ ಪರ ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರ ತಮ್ಮ ‘ಪತ್ರತಂತು ಮಾಲಾ’ ಅಂಕಣದಲ್ಲಿ ನಾಡಿನ ಹಿರಿಯ ಲೇಖಕರು, ಓದುಗರು ಬರೆದ ಪತ್ರ ಸಂವಾದಗಳನ್ನು ದಾಖಲಿಸಿದ್ದಾರೆ.

ನಾನು ಪ್ರಜಾವಾಣಿ, ಸುಧಾ, ಮಯೂರ ಅಸೋಸಿಯೇಟೆಡ್ ಎಡಿಟರ್ ಆದ ನಂತರ ಸಂಪಾದಕೀಯ ಬರೆಯುವುದು ಹೊರತು, ನನ್ನ ಅಂಕಿತದಲ್ಲಿ ಪ್ರತ್ಯೇಕ ಅಂಕಣ ಬರೆಯುತ್ತಿರಲಿಲ್ಲ. ಆದರೆ ಆಗಾಗ್ಗೆ ಲೇಖನಗಳನ್ನು ಬರೆಯುತ್ತದ್ದದ್ದುಂಟು. ಒಮ್ಮೆ ಪ್ರತಿ ಭಾನುವಾರ ನಮ್ಮ ಸಾಂಸ್ಕೃತಿಕ ವ್ಯಕ್ತಿಗಳ ಬಗ್ಗೆ ‘ವ್ಯಕ್ತಿಚಿತ್ರ’ ಮಾದರಿಯ ಲೇಖನಗಳನ್ನು ಬರೆಯ ಬೇಕೆನ್ನಿಸಿತು. ಈ ಬಗ್ಗೆ ಪ್ರಧಾನ ಸಂಪಾದಕರ ಜೊತೆ ಚರ್ಚಿಸಿದೆ. ಅವರು ಅನುಮತಿ ಇತ್ತರು. ಆ ವೇಳೆಗಾಗಲೇ ಎಚ್ಚೆಸ್ಕೆ ಮೊದಲಾದವರು ವ್ಯಕ್ತಿಚಿತ್ರ ರಚನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ನನ್ನದು ನನ್ನತನದಿಂದ ಭಿನ್ನವಾಗಿರಬೇಕಲ್ಲವೆ?ಎಂದೇ ನಾನು ಕಾರ್ಟೂನಿಷ್ಟರ ಮಾಧ್ಯಮವಾದ ‘ಕ್ಯಾರಿಕೆಚೂರ್' ಮಾದರಿಯ ಶೈಲಿಯನ್ನು ಅಳವಡಿಸಿಕೊಂಡೆ. ಅಂದರೆ ವ್ಯಕ್ತಿಯ ಅಂತ:ಸತ್ವವನ್ನು ಬಿಂಬಿಸುವದರ ಜೊತೆಗೆ ಅವರ ಅವರ ಬಾಹ್ಯ ನಡೆ, ನುಡಿ ಚಹರೆಗಳನ್ನು ಸ್ವಲ್ಪ ಭೂತಗನ್ನಡಿಯಲ್ಲಿ ನೋಡಿ ಚಿತ್ರಿಸುವ ಬಗೆ. ಈ ಬರಹಗಳಲ್ಲಿ ನಾನು ಭಾಷೆಯನ್ನು ಕ್ಯಾರಿಕೆಚೂರಿಸ್ಟನ ಮೊನಚಾದ ನಿಬ್ಬಿನಂತೆ ಚೂಪಾಗಿ ಬಳಸಿದ್ದೆ. ನನ್ನ ಈ ಮಾದರಿಯ ಬಹಗಳಿಗೆ ಬಂದ ಪ್ರತಿಕ್ರಿಯೆಗಳಲ್ಲಿ ಒಂದು:

ಚಂದ್ರಶೇಖರ ತಾಳ್ಯ
5-2-96

ಪ್ರಿಯ ಶ್ರೀ ಜಿ.ಎನ್.ಆರ್. ಅವರಿಗೆ,
ಇಂದು ಪ್ರಜಾವಾಣಿಯಲ್ಲಿ ನಿಸಾರ್ ಬಗ್ಗೆ ಬರೆದ ನಿಮ್ಮ ಬರಹ ತುಂಬಾ ಚೆನ್ನಾಗಿತ್ತು. ನನ್ನ ಸಂತೋಷವನ್ನು ನಿಮಗೆ ತಿಳಿಸಲೇಬೇಕೆಂದು ಈ ಪತ್ರ ಬರೆಯುತ್ತಿರುವೆ. ಅನಂತ್-ಜಯಂತ್ ಬಗ್ಗೆ ಬರೆದದ್ದೂ ಸೊಗಸಾಗಿತ್ತು. ಆಗಲೇ ಪತ್ರ ಬರೆಯಬೇಕೆಂದುಕೊಂಡೆ. ಈಗ ಸುಮ್ಮನಿರಲು ಸಾಧ್ಯವಿಲ್ಲ ಅನ್ನಿಸಿ, ಬರೆದೇ ಬಿಟ್ಟೆ. ಈ ರೀತಿಯ ಬರಹ ನಿಮ್ಮಿಂದ ಹೆಚ್ಚು ಬರಲಿ. ಪ್ರಜಾವಾಣಿಗೆ ಶೋಭೆ ತರುವಂಥದು.

ನಿಮ್ಮ
ಚಂದ್ರಶೇಖರ ತಾಳ್ಯ

**********
ಸಂಪಾದಕೀಯ ಪತ್ರಿಕೆಯ ಆತ್ಮವಿದ್ದಂತೆ. ಸತ್ಯವನ್ನು ನುಡಿಯುವ ನ್ಯಾಯವನ್ನು ಎತ್ತಿಹಿಡಿದು ಅನ್ಯಾಯವನ್ನು ಖಂಡಿಸುವ, ಓದುಗರ ಪ್ರಜ್ಞೆಗೆ ಸಾಣೆ ಹಿಡಿಯವ, ಸತ್ಯದ ಪರ ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ. ನಾನು ‘ಸುಧ’ ಪತ್ರಿಕೆಯ ಸಂಪಾದಕತ್ವದ ಹೊಣೆ ವಹಿಸಿಕೊಂಡಾಗ ಅದರಲ್ಲಿ ಸಂಪಾದಕೀಯ ಅಂಕಣ ನಿಂತುಹೋಗಿತ್ತು ಇ.ಆರ್.ಸೇತೂರಾಂ ಅವರು ಸಂಪಾದಕರಾಗಿದ್ದಾಗ ‘ಸುಧ’ದಲ್ಲಿ ಸಂಪಾದಕೀಯ ಬರೆಯುತ್ತಿದ್ದರು. ಅವರ ನಿವೃತ್ತಿಯೊಂದಿಗೆ ಸಂಪಾದಕೀಯವೂ ನಿಂತು ಹೋಯಿತು. ಸೇತೂರಾಂ ನಂತರ ಸಂಪಾದಕರಾದ ಶ್ರೀ ಎಂ.ಬಿ.ಸಿಂಗ್ ಅವರು ಸಂಪಾದಕೀಯವನ್ನು ಏಕೆ ನಿಲ್ಲಿಸಿದರೋ ತಿಳಿಯದು. ನಾನು ಸಂಪಾದಕೀಯ ಅಂಕಣವನ್ನು ಮತ್ತೆ ಶುರುಮಾಡಿದೆ. ನಾನೇ ಬರೆಯುತ್ತಿದ್ದೆ. ಬಹುತೇಕ ಸಾಹಿತ್ಯ, ಸಾಹಿತ್ಯಕ ಚರ್ಚೆಗಳು, ರಂಗಭೂಮಿ, ಚಲನಚಿತ್ರ, ಕಲೆ, ಶಿಕ್ಷಣ ಹೀಗೆ ಸಾಂಸ್ಕೃತಿಕ ವಿಷಯಗಳ ಮೇಲೆ ಬರೆಯುತ್ತಿದ್ದೆ. ಓದುಗರಿಗೆ ಇದು ಇಷ್ಟವಾಯಿತು. ಸಾಹಿತಿ ಕಲಾವಿದರಿಗೂ ನಿದರ್ಶನವಾಗಿ ಮೇಲೆ ಕೊಟ್ಟಿರುವ ಕವಿ ಎಸ್.ವಿ.ಪರಮೇಶ್ವರ ಭಟ್ಟರ ಲೇಖನವನ್ನು ಗಮನಿಸಬಹುದು.

ನಾಲ್ಕು ವರ್ಷಗಳ ನಂತರ ಬಡ್ತಿ ಪಡೆದು ‘ಪ್ರಜಾವಾಣಿ'ಗೆ ವಾಪಸಾದೆ. ಪ್ರಜಾವಾಣಿ ಜೊತೆಗೆ ‘ಸುಧಾ’, ‘ಮಯೂರ'ಗಳ ಹೊಣೆಯೂ ನನದೇ ಆಗಿತ್ತು. ‘ಪ್ರಜಾವಾಣಿ’ಯಲ್ಲಿ ಒಂದು ಸಂಪಾದಕೀಯ ಪ್ರತಿದಿನ ಬರೆಯುತ್ತಿದ್ದೆ. ‘ಸುಧಾ'ದಲಿ ವಾರಕ್ಕೊಂದು, ‘ಮಯೂರ'ದಲ್ಲಿ ತಿಂಗಳಿಗೊಂದು. ಒಮ್ಮೆ ಗೆಳೆಯ ಮಾವಿಕೆರೆ ರಂಗನಾಥನ್ ಅವರು ‘ಸುಧಾ’ ಸಂಪಾದಕೀಯಗಳಿಗೆ ಸಾಂಸ್ಕೃತಿಕವಾಗಿ ಸಾರ್ವಕಾಲಿಕ ಐತಿಹಾಸಿಕ ಮಹತ್ವವಿದೆಯಾದ್ದರಿಂದ ಅವೆಲ್ಲವನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಅಗತ್ಯವಿದೆ ಎಂದು ಸಲಹೆಮಾಡಿದರು. ಸ್ವಲ್ಪ ದಿವಸ ಈ ಬಗ್ಗೆ ಯೋಚಿಸಿದೆ. ನನಗೆ ತಿಳಿದಂತೆ ಮುಖ್ಯವಾಹಿನಿಯ ಪತ್ರಕರ್ತರು ಯಾರೂ ತಮ್ಮ ಸಂಪಾದಕೀಯಗಳ ಸಂಕಲನವನ್ನು ಅಲ್ಲಿಯವರೆಗೆ ಪ್ರಕಟಿಸಿರಲಿಲ್ಲ. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ‘ಜೀವನ' ನಿಯತಕಾಲಿಕಕ್ಕೆ ತಾವು ಬರೆದ ಸಂಪಾದಕೀಯಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಿದ ಮೊದಲಿಗರು. ಮಾಸ್ತಿಯವರ ಸಂಪಾದಕೀಯಗಳು ಐದು ಸಂಪುಟಗಳಲ್ಲಿ ಪ್ರಕಟವಾಗಿವೆ. ಖ್ಯಾತ ಪತ್ರತಕರ್ತ ಖಾದ್ರಿ ಶಾಮಣ್ಣನವರ ಕೆಲವು ಸಂಪಾದಕೀಯಗಳು ಅವರ ಆಯ್ದ ಬರಹಗಳ ಸಂಕಲನ `ಅರ್ಪಣ'ದಲ್ಲಿ ಸಂಕಲಿತವಾಗಿವೆ.ಬಿ.ವಿ.ವೈಕುಂಠರಾಜು ಅವರ ತಮ್ಮ`ವಾರಪತ್ರಿಕೆ'ಗೆ ಬರೆಯುತ್ತಿದ್ದ `ಸಂಪಾದಕನ ಡೈರಿ' ಪುಸ್ತಕರೂಪದಲ್ಲಿ ಪ್ರಕಟವಾಗಿದೆ. ಮಾವಿನಕೆರೆಯವರ ಸಲಹೆ ಬಗ್ಗೆ ಸಾಕಷ್ಟು ಯೋಚಿಸಿದೆ. ಕೊನೆಗೆ ಹಿರಿಯರೂ ಆಪ್ತರೂ ಆದ ಶ್ರೀ ಎಲ್.ಎಸ್ ಶೇಷಗಿರಿ ರಾಯರ ಸಲಹೆ ಕೇಳಿದೆ. ಅವರು ತರಬಹುದು, ಸಂಕೋಚಪಡಬೇಡಿ, ನಿಮ್ಮ ಸಂಪಾದಕೀಯಗಳು ಪುಸ್ತಕ ರೂಪದಲ್ಲಿ ಅಗತ್ಯ ಬರಬೇಕು ತನ್ನಿ ಎಂದು ಪ್ರೋತ್ಸಾಹಿಸಿದರು. ಅಲ್ಲದೆ ಮೌಲಿಕವಾದ ಮುನ್ನುಡಿಯನ್ನು ಬರೆದುಕೊಟ್ಟರು. ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಕೆ.ಎನ್.ಹರಿಕುಮಾರ್ ಸಂಪಾದಕೀಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಅನುಮತಿ ಇತ್ತರು. ಸಲಹೆಮಾಡಿದ ಮಾವಿನಕೆರೆ ರಂಗನಾಥನ್ ಅವರೇ ತಮ್ಮ ಪುರೋಗಾಮಿ ಪ್ರಕಾಶನದ ಮೂಲಕ ಪ್ರಕಟಿಸಿದರು. ಹೀಗೆ `ಸೃಜನಶೀಲ' ಸಂಪಾದಕೀಯಗಳ ಸಂಗ್ರಹ ಬೆಳಕು ಕಂಡಿತು.`ಚಿಲಿಪಿಲಿ' ನನ್ನ ಎರಡನೆಯ ಸಂಪಾದಕೀಯ ಸಂಗ್ರಹ. ಇದು `ಪ್ರಜಾವಾಣಿ'ಗೆ ಬರೆದ ಲಲಿತ ಲಹರಿಯ ಮೂರನೆಯ ಸಂಪಾದಕೀಯಗಳು. ಕವಿಗಳೂ ವಿದ್ವಾಂಸರೂ ಆದ ಪಿ.ಎಸ್.ರಾಮಾನುಜನ್ ಅವರ ಮುನ್ನುಡಿಯನ್ನೊಳಗೊಂಡ ‘ಚಿಲಿಪಿಲಿ’ಯನ್ನು ಲಲಿತ ವಾಚಿಕೆಗಳು ಎಂದು ಕರೆದಿದ್ದೇನೆ. ಈ ಬಗೆಯ ಬರಹಗಳಿಗೆ ವಾಹಕರಿಂದ ಯಾವರೀತಿಯ ಪ್ರತಿಕ್ರಿಯೆ ಬರಬಹುದೆಂಬ ಕುತೂಹಲವೂ ಇತ್ತು. ಓದುಗರಿಂದ ಬಂದ ಮೆಚ್ಚುಗೆಯ ಪ್ರತಿಕ್ರಿಯೆಯಿಂದ ಸಂಪಾದಕೀಯ ಬರೆವ ಉತ್ಸಾಹ ಮತ್ತಷ್ಟು ಗರಿಗೆದರಿತು.

ಪ್ರೊ.ಜಿ.ವೆಂಕಟಸುಬ್ಬಯ್ಯ
ಬೆಂಗಳೂರು

6-9-96
ಪ್ರಿಯ ರಂಗನಾಥ ರಾಯರೇ,

ಇಂದು ‘ಸೃಜನಶೀಲ' ಪುಸ್ತಕವನ್ನು ಓದಿ ಪೂರೈಸಿದೆ. ಆಗಾಗ್ಗೆ ಕೆಲವು ಪುಟಗಳನ್ನು ಓದುತ್ತಿದ್ದು ಇಂದು 115 ರಿಂದ ಹಿಡಿದು ಕೊನೆಯತನಕ ಒಂದೇ ಒಬ್ಬೆಯಲ್ಲಿ ಓದಿಬಿಟ್ಟೆ. ಅಂದರೆ ಪುಸ್ತಕವೇ ಓದಿಸಿಕೊಂಡಿತು ಎಂದು ಅರ್ಥ. ಆ ಬಳಿಕ ಶ್ರೀ ಶೇಷಗಿರಿರಾಯರ ಅಭಿಪ್ರಾಯವಿರುವ ಮುನ್ನುಡಿಯನ್ನು ಓದಿದೆ. ಇದು ನನ್ನ ಪದ್ಧತಿ. ಗ್ರಂಥ ಮೊದಲು ಆಮೇಲೆ ಮುನ್ನುಡಿ.

ಓದಿನಲ್ಲಿ ನನಗೆ ಉಂಟಾದ ಸಂತೋಷವನ್ನು ನಿಮಗೆ ತಿಳಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ. ಶ್ರೀ ಶೇಷಗಿರಿ ರಾಯರು ಹೇಳಿರುವ ಪ್ರತಿಯೊಂದು ಮಾತೂ ಸತ್ಯವಾದುದು. ಆ ಮಾತುಗಳ ಜೊತೆಗೆ ನಾನು ಇನ್ನೊಂದು ಮಾತನ್ನು ಸೇರಿಸಬೇಕು ಎನ್ನುತ್ತಿದೆ ನನ್ನ ಮನಸ್ಸು. ಅದು ಬರಹದ ನಿಷ್ಠೆಗೆ ಸಂಬಂಧಿಸಿದ್ದು. ಈ ಸತ್ಯನಿಷ್ಠೆ ಎಲ್ಲ ಲೇಖನಗಳಲ್ಲಿ ಕಾಣುವ ಏಕ ಸೂತ್ರ. ಎಲ್ಲಿಯೂ ಒಂದು ಉನ್ನತಿಗೆ ಮುಟ್ಟದ ವಿಷಯದ ಬಗ್ಗೆ ಬರಹ ಹೊರಳಿಲ್ಲ. ಇದು ಸತ್ವವನ್ನು ಕಾಪಾಡುವ ಕಾಪಾಡಿಕೊಳ್ಳುವ ಬಗೆ. ಇದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.

ಈ ಎಲ್ಲ ಲೇಖನಗಳನ್ನೂ ಓದುವ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ.

ಇಂತಿ ನಿಮ್ಮವ
ಜಿ.ವೆಂಕಟಸುಬ್ಬಯ್ಯ

*********
ಪತ್ರಿಕೆಗಳು, ಓದುಗರು ಮತ್ತು ಲೇಖಕರ ನಡುವಣ ಸಂಬಂಧ ಅವಿನಾಭಾವ ಸಂಬಂಧವಿದ್ದಂತೆ. ಕವಿ, ಅಂಕಣಕಾರರಾಗಿ ಎಚ್ಚೆಸ್ಕೆ ಎಂದೇ ಪ್ರಸಿದ್ದರಾದ ಎಚ್.ಎಚ್.ಕೃಷ್ಣಸ್ವಾಮಿ ಅಯ್ಯಂಗಾರ್ ಅವರಿಗೂ ‘ಪ್ರಜಾವಾಣಿ' ಬಳಗಕ್ಕೂ ಒಂದು ರೀತಿಯ ಕರುಳುಬಳ್ಳಿಯ ಸಂಬಂಧ. ಪತ್ರಿಕೆ ಹಂಚುವ ಕಾರ್ಯದೊಂದಿಗೆ ‘ಸಾಹಿತ್ಯ ಪರಿಚಾರಕನ' ಕಾರ್ಯ ಆರಂಭಿಸಿದ ಎಚ್ಚೆಸ್ಕೆ ಪ್ರಜಾವಾಣಿ ಪ್ರಾರಂಭವಾದಾಗ ಅದರಲ್ಲಿ ಅಂಕಣಕಾರರಾಗಿ ಸಂಭವಿಸಿದರು. ನಂತರ 1965ರಲ್ಲಿ ‘ಸುಧಾ' ಶುರುವಾದಾಗ ಅದರಲ್ಲಿ ‘ಸಮದರ್ಶಿ'ಯಾಗಿ, ‘ಎಚ್ಚೆಸ್ಕೆ' ಆಗಿ ಸುದ್ದಿಯ ಹಿನ್ನೆಲೆ, ವ್ಯಕ್ತಿವಿಷಯ, ವ್ಯಕ್ತಿ ಚಿತ್ರಗಳ ಅಂಕಣ ಬರೆಯಲಾರಂಭಿಸಿದರು. ಒಬ್ಬ ಲೇಖಕ, ಮೂರು ಅಂಕಣಗಳು. ಅದೂ ಒಂದು ವಾರಕ್ಕೆ ಮೂರು ಲೇಖನಗಳು. ಜೊತೆಗೆ ಪ್ರಜಾವಾಣಿಗೆ ವಾಣಿಜ್ಯ ಕುರಿತು ವಾರಕ್ಕೊಂದು ಲೇಖನ. ಎಂಥ ಸೃಜನಶೀಲ ಪ್ರತಿಭೆಯೂ ಏದುಸಿರು ಬಿಡಬೇಕಾದಂಥ ಹೊರೆ. ಆದರೆ ಎಚ್ಚೆಸ್ಕೆಗೆ ಅದು ಹೊರಯಾಗಿರಲಿಲ್ಲ, ಲಿಲಾಜಾಲವಾದ ಪ್ರವೃತ್ತಿಯಾಗಿತ್ತು. ಈ ಎಚ್ಚೆಸ್ಕೆ ‘ಸುಧಾ'ಕ್ಕೆ ಬರೆದ ವ್ಯಕ್ತಿ ಚಿತ್ರಗಳ ಸಂಖ್ಯೆಯನ್ನು ಲೆಕ್ಕವಿಟ್ಟವರಿಲ್ಲ. ಅದರಲ್ಲಿ 306 ವ್ಯಕ್ತಿ ಚಿತ್ಗಳನ್ನೊಳಗೊಂಡ ಮೊದಲ ಸಂಪುಟ 1998ರಲ್ಲಿ ಪ್ರಕಟವಾಯಿತು. ಮುಂದಿನ ಸಂಪುಟಗಳು ಪ್ರಕಟವಾದುವೋ ಇಲ್ಲವೋ ತಿಳಿಯದು. ವ್ಯಕ್ತಿ ಚಿತ್ರಗಳ ಸೃಷ್ಟಿಯ ಈ ಮಹಾನುಭಾವನಿಗೆ 75 ವರ್ಷ ತುಂಬಿತು. ಮೈಸೂರಿನಲ್ಲಿ ಒಂದು ಸನ್ಮಾನ ಸಮರಂಭವೂ ನಡೆಯಿತು. ಆಗ ನಾನು ಸುಧಾ ಸಂಪಾದಕನಾಗಿದ್ದೆ. ನೂರಾರಕ್ಕೂ ಮಿಗಿಲಾದ ವ್ಯಕ್ತಿಚಿತ್ರಗಳನ್ನು ಬರೆದ ಈ ವ್ಯಕ್ತಿ ಚಿತ್ರಕಾರನ ವ್ಯಕ್ತಿತ್ವ ಸುಧಾ ಓದುಗರಿಗೆ ತಿಳಿಯ ಬೇಡವೆ? ತಿಳಿಸಲು ಇದು ಸುಸಮಯ ಎನ್ನಿಸಿತು. ನಾನು ಎಚ್ಚೆಸ್ಕೆ ಅವರಿಗೆ ಫೋನ್ ಮಾಡಿ "ಈ ವಾರ ನೀವು ವ್ಯಕ್ತಿ ಚಿತ್ರ ಬರೆಯುವುದು ಬೇಡ. ರಜೆ ತೆಗೆದುಕೊಳ್ಳೀ" ಎಂದು ತಿಳಿಸಿದೆ. ಸನ್ಮಾನ ಸಮಾರಂಭ ಏರ್ಪಾಟಾಗಿದ್ದ ವಾರದ ಸಂಚಿಕೆಯಲ್ಲಿ ಅವರ `ವ್ಯಕ್ತಿ ಚಿತ್ರ ' ಅಂಕಣದಲ್ಲಿ ನಾನು ಎಚ್ಚೆಸ್ಕೆ ಅವರ ವ್ಯಕ್ತಿ ಚಿತ್ರವನ್ನು ನನ್ನದೇ ಶೈಲಿಯಲ್ಲಿ ಬರೆದು ಓದುಗರ ಮುಂದೆ ಅನಾವರಣಗೊಳಿಸಿದೆ. ಇದು ಎಚ್ಚೆಸ್ಕೆ ಅವರಿಗೆ ಅನಿರೀಕ್ಷಿತ, ಆಶ್ಚರ್ಯಕರ
ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್
ಮೈಸೂರು
24-5-1996

ಮಾನ್ಯ ಮಿತ್ರರಾದ ಶ್ರೀ ರಂಗನಾಥ ರಾವ್ ಅವರೆ,
ಈ ವಾರದ ‘ಸುಧಾ' ತೆರೆದು ನೋಡಿದಾಗ ಆಶ್ಚರ್ಯ ಕಾದಿತ್ತು. ನನ್ನ ಅಂಕಣದ ಅಪಹರಣ ಅದೂ ಸ್ವಯಂ ಸಂಪಾದಕರಿಂದಲೇ! ಯಾರಲ್ಲಿ ಮೊರೆಹೋಗಬೇಕು?
ಆದರೆ ಅಪಹರಣದಿಂದ ನಷ್ಟವಾಗಿಲ್ಲ. ಪ್ರತಿಯಾಗಿ ಅಪರಿಮಿತ ಸಂತೋಷ. ಜೊತೆಗೆ ಅಪಾರ ಕೀರ್ತಿ ಲಾಭ. ‘ಜೀವಮಾನದ ಆಕಾಂಕ್ಷೆಗಳಲ್ಲೊದೆಂದರೆ ‘ಸುಧಾ'ದಲ್ಲಿ ‘ವಾರದ ವ್ಯಕ್ತಿ'ಯಾಗುವುದು, ಎಂದು ಡಾ.ಪ್ರಭುಶಂಕರ ಒಮ್ಮೆ ಉದ್ಗರಿಸಿದ್ದರು. ಈ ವಾರ ನನಗೇ ಆ ಯೋಗ ಒದಗಿ ಬಂದಿದೆ. ಹೀಗಿರುವಾಗ ನಾನು ನಿಮ್ಮ ವಿರುದ್ಧ ಖಟ್ಲೆ ಹೋಡುವುದು ಅಸಾಧ್ಯ. ಪ್ರತಿಯಾಗಿ ನಾನೇ ಪರಿಹಾರ ನೀಡಬೇಕಾದೀತು! ಆದರೆ ನಿಮ್ಮ ಪ್ರೀತಿ ವಿಶ್ವಾಸಗಳಿಗೆ ನಾನು ಏನು ತಾನೇ ಕೊಡಬಲ್ಲೆ? ಕೃತಜ್ಞತೆ, ಧನ್ಯವಾದಗಳು ಎಂಬ ಮಾತುಗಳು ನನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಲಾರವು. ಅದಕ್ಕೂ ಮೀರಿದ್ದು ನನ್ನ ಸಂತೋಷ. ನಮ್ರವಾಗಿ ನಿಮಗೆ ವಂದನೆ ಸಲ್ಲಿಸುತ್ತೇನೆ.

ಸುಂದರವಾದ ಆತ್ಮೀಯ ಶೈಲಿ ನಿಮ್ಮದು. ಹಾಸ್ಯ, ಫನ್ನು-ಪನ್ನು ಎಲ್ಲವನ್ನೂ ಒಳಗೊಂಡ ಬರಹ. ನನಗೆ ಆದ ಆನಂದವನ್ನು ವರ್ಣಿಸಲಾರೆ ನಿಮ್ಮ ಒಳ್ಳೆಯ ಮಾತುಗಳಿಗೆ ನಾನು ಅರ್ಹ ಎಂಬುದನ್ನು ಸಾಬೀತು ಪಡಿಸಲು ಮುಂದೆಯೂ ಪ್ರಾಮಾಣೀಕವಾಗಿ ಶ್ರಮಿಸುತ್ತೇನೆ. ನೀವು ಬರೆದಿರುವ ಹಾಗೆ ಸುಧಾ-ಪ್ರಜಾವಾಣಿಗಳು ನನ್ನ ಬದುಕಿನ ಒಂದು ಅವಿಭಾಜ್ಯ ಭಾಗವಾಗಿವೆ. ಈ ಸಂಬಂಧ ಹೀಗೇ ಉಳಿಯಲಿ ಎಂದುಕೊಳ್ಳುತ್ತೇನೆ. ನಿಮ್ಮ ಒಳ್ಳೆಯ ಮಾತುಗಳಿಗಾಗಿ ಮತ್ತೊಮ್ಮೆ ವಂದನೆಗಳು.

ನೀವೆಲ್ಲ ಕ್ಷೇಮವೆಂದು ನಂಬಿದ್ದೇನೆ,
ವಂದನೆಗಳೊಂದಿಗೆ,
ಎಚ್ಚೆಸ್ಕೆ

ಮುಂದೆ ಎಚ್ಚೆಸ್ಕೆಯವರು ತಾವು ಬರೆದ ವ್ಯಕ್ತಿ ಚಿತ್ರಗಳ ಸಂಪುಟವನ್ನು ಪ್ರಕಟಿಸಿದಾಗ, ಅದರಲ್ಲಿ ನಾನು ಬರೆದ ತಮ್ಮ ವ್ಯಕ್ತಿ ಚಿತ್ರವನ್ನು ಶುರುವಿನಲ್ಲೇ ಪ್ರಕಟಿಸಿ, ಐ ಆಮ್ ಎಲೇಟೆಡ್ ಎನ್ನುವಂತೆ ಮಾಡಿದ್ದರು.

ಎಚ್.ಎಸ್.ವೆಂಕಟೇಶ ಮೂರ್ತಿ
14.8.96
ಪ್ರಿಯ ಜಿ.ಎನ್.ಆರ್

ನಿಮ್ಮ ‘ಸೃಜನಶೀಲ'ವನ್ನು ಓದಿದೆ. ಸಾರ್ಥಕ ಬದುಕು ಯಾವುದು ಎಂಬ ಬಗ್ಗೆ ನಿಮಗೆ ಒಂದು ಗೀಳಿನಂಥ ಚಿಂತನೆ ಇದೆ. ಅದು ಪುಸ್ತಕದ ಉದ್ದಕ್ಕೂ ಕಾಣಿಸುತ್ತದೆ. ಯಾವುದು ಸ್ಥಾವರ? ಯಾವುದು ಜಂಗಮ? ದೇಹ, ದೇವಾಲಯ, ಮಠ, ಯಾವುದೇ ವ್ಯವಸ್ಥೆ ನಿಮ್ಮ ದೃಷ್ಟಿಯಲ್ಲಿ ಸ್ಥಾವರ. ‘ಸಂಸ್ಕೃತಿ' ಜಂಗಮ. ನೀವು ಉದ್ದಕ್ಕೂ ಕೀರ್ತಿಸುವುದು ಸಂಸ್ಕೃತಿಯಲ್ಲಿ ಬೆರೆತು ಹೋದ ಜೀವಿಗಳನ್ನು. ಅಳಿದುಹೋಗುವ ತಮ್ಮ ದೇಹಕ್ಕೂ ಸಾಂಸ್ಕೃತಿಕ ನೆಲೆಯಲ್ಲಿ ಒಂದು ಪ್ರಾತಿನಿಧ್ಯವನ್ನು ನಿರ್ಮಿಸಿ ಹೋಗುವವರನ್ನು. ಇದು ನನ್ನ ಮನಸ್ಸಿಗೆ ತುಂಬ ಹಿಡಿಸಿದೆ. ಒಂದು ಕವಿತೆ, ಒಂದು ವಿಚಾರ, ಒಂದು ಮಧುರವಾದ ಪಲುಕು, ಒಂದು ಅವಿಸ್ಮರಣೀಯ ನೆನಪು, ಒಂದು ಮಹತ್ವದ ಸಾಧನೆ-ಇವೆಲ್ಲ ಇಂಥ ಪ್ರತಿನಿಧಿಗಳಾಗುತ್ತವೆ.

ಸಂಸ್ಕೃತಿಯಲ್ಲಿ ಬೆರೆತು ಉಳಿಯುವ ‘ತುಡಿತ'ನಿಮ್ಮ ಪುಸ್ತಕ ಓದಿದಾಗ ಜಾಗೃತ ಆಗುತ್ತದೆ.

ನಿಮ್ಮ ಪ್ರೀತಿಯ,
ಎಚ್ಚೆಸ್ವಿ

ಉದಯೋನ್ಮುಖ ಲೇಖಕರು ತಮ್ಮ ಚೊಚ್ಚಲು ಕೃತಿಗಳಿಗೆ ಮುನ್ನುಡಿ ಬರೆಸುವುದು ಸಾಮಾನ್ಯ. ಪ್ರ.ವಾ/ಸುಧಾಗಳಲ್ಲಿ ಕಥೆ, ಕವಿತೆಗಳನ್ನು ಪ್ರಕಟಿಸಿದ ಉದಯೋನ್ಮೂಖ ಲೇಖಕರು ಕೆಲವರು ತಮ್ಮ ಚೊಚ್ಚಲು ಕೃತಿಗೆ ಮುನ್ನಡಿ ಬರೆಯವಂತೆ ನನ್ನನ್ನು ಕೇಳಿದ್ದುಂಟು. ತಮ್ಮ ರಚನೆಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರ ಕೈಯ್ಯಲ್ಲಿ ಮುನ್ನುಡಿ ಬರೆಸಿದರೆ ಅದಕ್ಕೊಂದು ಮನ್ನಣೆ ಎಂದೋ ಏನೋ ಭಾವಿಸಿ ಮುನ್ನುಡಿ ಕೇಳುತ್ತಿದ್ದರು. ಪತ್ರಿಕೆಗಳಲ್ಲಿ ಕೆಲವೊಮ್ಮೆ 'ಅಭಾವ' ಪರಿಸ್ಥಿತಿ ಉಂಟಾದಾಗ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ಏಕೆಂದರೆ ಆಯಾ ಅಂಕಣಗಳನ್ನು ಖಾಲಿ ಬಿಡುವಂತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಓದುಗರಿಂದ ‘ಇದು ನಿಮ್ಮ ಪತ್ರಿಕೆ ಮಟ್ಟ'ದ್ದಲ್ಲ ಎಂಬಂಥ ಟೀಕೆಟಿಪ್ಪಣಿಗಳು ಪತ್ರಮುಖೇನ. ಇಲ್ಲವೇ ಖಾಸಗಿಯಾಗಿ ಕೇಳಿಬರುತ್ತಿದ್ದವು. ಮುನ್ನುಡಿ ಬರೆದಲ್ಲಿ ನಾನೇ ಪ್ರಕಟಿಸಿದ ರಚನೆಯನ್ನು ಆ ಮುಲಾಜಿಗಾಗಿ ಮೆಚ್ಚಿಕೊಂಡಲ್ಲಿ ಅದು ಅಪ್ರಮಾಣಿಕವಾಗುತ್ತಿತ್ತು. ಕಟುವಾಗಿ ವಿಮರ್ಶಿಸಿದಲ್ಲಿ ಅದು ನಮ್ಮ ಆಯ್ಕೆಯ ‘ಮಾನದಂಡ'ವನ್ನು ಪ್ರಶ್ನಿಸಲು ಆಸ್ಪದ ನೀಡಬಹುದು. ಈ ಮುಜುಗರವೇ ಬೇಡ ಎಂದು ‘ನಾನು ಮುನ್ನುಡಿ ಬರೆಯುವಷ್ಟು ದೊಡ್ಡವನಲ್ಲ. ಹಿರಿಯ ಸಾಹಿತಿಗಳ ಕೈಯ್ಯಲ್ಲಿ ಬರೆಸಿ'ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ವಯಸ್ಸು, ಅನುಭವ, ಸಾಹಿತ್ಯ ಸಾಧನೆ ಎಲ್ಲದರಲ್ಲೂ ನನಗಿಂತ ದೊಡ್ಡವರಾದ ಮಹಾನಭಾವರೊಬ್ಬರು ತಮ್ಮ ಪುಸ್ತಕಕ್ಕೆ ಬ್ಲರ್ಬ್ ಬರೆದುಕೊಡುವಂತೆ ಕಿರಿಯನಾದ ನನ್ನನ್ನು ಕೇಳಿದಾಗ ನಾನು ಪೇಚಿಗೆ ಸಿಲುಕಿದೆ.

ಪ್ರೊ.ಜಿ.ವೆಂಕಟಸುಬ್ಬಯ್ಯ
ಬೆಂಗಳೂರು
1-8-1996

ಪ್ರಿಯ ರಂಗನಾಥ ರಾವ್ ಅವರಿಗೆ ನಮಸ್ಕಾರಗಳು,
ಈ ಹಿಂದೆ ನಾನು ರಚಿಸಿರುವ ಇಗೋ ಕನ್ನಡ ನಿಘಂಟನ್ನು ಕುರಿತು ಒಂದು ವಿನಂತಿಯನ್ನು ತಮ್ಮ ಮುಂದೆ ಇಟ್ಟಿದ್ದೆ. ಈ ಪುಸ್ತಕಕ್ಕೆ ಬ್ಲರ್ಬ್ ತಮ್ಮ ಮುಖೇನ ಬರಬೇಕೆಂಬದು ನನ್ನ ಆಸೆ. ಈಗ ಮುದ್ರಣ ಕೊನೆಯ ಘಟ್ಟವನ್ನು ತಲುಪಿದೆ. ಈ ಪತ್ರದೊಡನೆ ನನ್ನ ಜೀವನ ಪರಿಚಯದ ಸಣ್ಣ ಟಿಪ್ಪಣಿಯನ್ನು ತಮಗೆ ಕಳಿಸುತ್ತಿದ್ದೇನೆ. ದಯಮಾಡಿ ಸೋಮವಾರ, ಇದನ್ನು ಪರಿಶೀಲಿಸಿ ಬ್ಲರ್ಬ್ ಸಿದ್ಧಪಡಿಸಿಕೊಡಬೇಕಾಗಿ ಪ್ರಾರ್ಥನೆ.

ಈ ಬಗೆಯ ರಚನೆ ಕನ್ನಡಕ್ಕೆ ಹೊಸದು ಎಂಬುದು ತಮಗೆ ಗೊತ್ತೇ ಇದೆ. ಭಾಷಾ ಶಾಸ್ತ್ರಜ್ಞರು ಇದನ್ನು ಸಾಮಾಜಿಕ ಅಧ್ಯಯನ ಎಂದು ಪರಿಗಣಿಸುತ್ತಾರೆ. ಉಪಾಧ್ಯಾಯ ವರ್ಗಕ್ಕೂ ವಿದ್ಯಾರ್ಥಿ ವರ್ಗಕ್ಕೂ ಇದು ವರದಾನವಾಗಿದೆ. ಸಾರ್ವಜನಿಕರಲ್ಲಿಯೂ ಆಸಕ್ತಿಯುನ್ನು ಕೆರಳಿಸಿದೆ. ಇವುಗಳನ್ನು ಕುರಿತ ತಮ್ಮ ವಿಶ್ಲೇಷಣೆಯಿಂದ ಕೂಡಿದ ಬ್ಲರ್ಬ್ ನನಗೆ ತುಂಬ ಬೆಲೆಬಾಳುವಂಥದು. ಪುಸ್ತಕವು ಡೆಮಿ 1/8 ಆಕಾರದಲ್ಲಿ ಸುಮಾರು 500 ಪುಟಗಳಷ್ಟಾಗಬಹುದು. ಪುಟದಲ್ಲಿ 30 ಸಾಲುಗಳಿರುತ್ತವೆ. ಮುದ್ರಣ ಲೇಔಟಿಗೆ ಹೊಂದುವಂತೆ ಬ್ಲರ್ಬ್ 15ಸಾಲುಗಳಷ್ಟಾದರೆ ಸಾಕು. ದಯಮಾಡಿ ನನಗೆ ಈ ಉಪಕಾರಮಾಡಬೇಕೆಂದು ಮತ್ತೊಮ್ಮೆ ವಿನಂತಿ. ಸೋಮವಾರ ನಾನು ಯಾರನ್ನಾದರೂ ತಮ್ಮ ಬಳಿಗೆ ಈ ಲೇಖನಕ್ಕಾಗಿ ಕಳಿಸುತ್ತೇನೆ. ಈ ತೊಂದರೆಯನ್ನು ಕ್ಷಮಿಸಬೇಕಾಗಿ ವಿನಂತಿ.

ಇಂತು ತಮ್ಮವ
ಜಿ.ವೆಂಕಟಸುಬ್ಬಯ್ಯ

ಹಾ.ಮಾ.ನಾಯಕರ ‘ಸಂಪ್ರತಿ' ಅಂಕಣ ಐದು ವರ್ಷಗಳಿಗೂ ಹೆಚ್ಚುಕಾಲ ಪ್ರಕಟವಾದಾಗ ನಾನು ಅದನ್ನು ನಭೂತೋ-ನಭವಿಷ್ಯತಿ ಎಂದುಕೊಂಡಿದ್ದೆ. ನಾನು ‘ಸುಧಾ'ದಲ್ಲಿದ್ದಾಗ ಶ್ರೀ.ಪಿ.ರಾಮಣ್ಣ(ಕಿಡಿ ಶೇಷಪ್ಪನವರ ತಮ್ಮ) ‘ಪ್ರ.ವಾ' ಅಸೋಸಿಯೇಟೆಡ್ ಎಡಿಟರ್ ಆಗಿದ್ದರು. ಆಗ ಶ್ರೀ ಡಿ.ವಿ.ರಾಜಶೇಖರ್ ‘ಸಾಪು' ಸಂಪಾದಕರಾಗಿದ್ದರು. ರಾಜಶೇಖರ್ ಪ್ರಾರಂಭಿಸಿದ ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ' ‘ಸಂಪ್ರತಿ'ಯ ದಾಖಲೆಯನ್ನು ಮುರಿಯಿತು. ನಾನು 1994ರಲ್ಲಿ ‘ಪ್ರ.ವಾ'ಗೆ ಮರಳಿ ಬಂದಾಗಲೂ ಅದು ನಡೆಯುತ್ತಿತ್ತು. ಬದಲಾವಣೆ ತರುವ ಹುಮ್ಮಸ್ಸಿನಲ್ಲಿ ನಾನು ಅದನ್ನು ನಿಲ್ಲಿಸಲಿಲ್ಲ, ಮುಂದುವರಿಸಿದೆ. 1991ರ ಮೇ 12ರಿಂದ ಶುರುವಾದ ಈ ಅಂಕಣ ಶತಮಾನದ ಕೊನೆಯವರೆಗೆ, ಸುಮಾರು ಹದಿನೈದು ವರ್ಷಗಳ ಕಾಲ ನಡೆದು ಕನ್ನಡ ಪತ್ರಿಕೋದ್ಯಮದಲ್ಲಿ ಎಲ್ಲ ದಾಖಲೆಗಳನ್ನೂ ಮುರಿಯಿತು. ಕರ್ನಾಟಕದ ಮೂಲೆಮೂಲೆಗಳಿಂದ ಕನ್ನಡ ಪದಗಳ ಬಗ್ಗೆ, ಪ್ರಯೋಗ, ಮೂಲ, ಅರ್ಥ ಹೀಗೆ ಹಲವಾರು ಪ್ರಶ್ನೆಗಳನ್ನೆತ್ತಿ ಓದುಗರು ಜಿ.ವೆಂಕಟಸುಬ್ಬಯ್ಯನವರಿಂದ ಪರಿಹಾರ ಬಯಸುತ್ತಿದ್ದರು. ನಾನು ಹೀಗೆ ಬಂದ ಪತ್ರಗಳನ್ನೆಲ್ಲ ಒಮ್ಮೆ ಕಣ್ಣು ಹಾಯಿಸಿ ‘ಜಿವಿ'ಅವರಿಗೆ ಕಳುಹಿಸುತ್ತಿದ್ದೆ.. ಪತ್ರಬರೆದವರಂತೆಯೇ, ‘ಜಿವಿ'ಯವರ ಉತ್ತರ ಏನಿರಬಹುದೋ ಎಂದು ನಾನೂ ಕುತೂಹಲದಿಂದ ಕಾಯುತ್ತಿದ್ದೆ. ಪ್ರತಿವಾರ ನಿಗದಿತ ದಿನ ‘ಜಿವಿ'ಯವರ ಕವರ್ ಬಂದಂತೆ ನಾನೇ ಅದನ್ನು ತೆರೆದು ಓದಿ ನನ್ನ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಂಡು ‘ಸಾಪು'ಸಂಪಾದಕರಿಗೆ ಕಳಹಿಸುತ್ತಿದ್ದೆ. ವೆಂಕಟಸುಬ್ಬಯ್ಯನವರ ಈ ಪದಕೋಶ ಮುಂದೆ ಸಾಮಾಜಿಕ ನಿಘಂಟು ಎಂದೇ ಪ್ರಸಿದ್ದವಾಗಿ ಮೂರುನಾಲ್ಕು ಮುದ್ರಣಗಳನ್ನು ಕಂಡಿತು. ವೆಂಕಟಸುಬ್ಬಯ್ಯನವರು ನನ್ನಿಂದ ಏಕೆ ಬ್ಲರ್ಬನ್ನು ಬಯಸಿದರೋ ತಿಳಿಯದು. ಪ್ರತಿವಾರ ಪ್ರಕಟಿಸುತ್ತಿದ್ದ ಪತ್ರಿಕೆಯನ್ನು ಈ ಮೂಲಕ ಸ್ಮರಿಸುವದೋ, ಭಾಷೆ ಬಗ್ಗೆ ಕನ್ನಡ ಪತ್ರಿಕೆಯೊಂದು ತೋರಿದ ಕಾಳಜಿಯನ್ನು ಎತ್ತಿ ತೋರುವುದೋ ಅಥವಾ ಓದುಗರ ಪ್ರತಿಕ್ರಿಯೆ ಸಂಪಾದಕನಾಗಿ ನನಗೆ ಉಳಿದವರಿಗಿಂತ ಹೆಚ್ಚು ತಿಳಿದಿರುತ್ತದೆ ಎನ್ನುವ ಕಾರಣದಿಂದಾಗಿಯೋ ನನ್ನಿಂದ ಬ್ಲರ್ಬ್ ಬಯಸಿರಬಹುದು.. ನಾನು ವೆಂಕಟಸುಬ್ಬಯ್ಯನವರ ಅಂಕಣದ ಮಹತ್ವವನ್ನು, ಅದರ ಜನಪ್ರಿಯತೆಯನ್ನು ಅರಿತಿದ್ದರಿಂದ ಬಹಳ ಸಂಕೋಚದಿಂದಲೇ ಬ್ಲರ್ಬ್ ಬರೆದುಕೊಟ್ಟೆ. ‘ಜಿವಿ" ಬಹಳ: ಸಂತೋಷದಿಂದ ಈ ಕಿರಿಯನ ನುಡಿಗಳನ್ನು ಸ್ವೀಕರಿಸಿದರು. ಪತ್ರಕರ್ತನಾಗಿ ನನ್ನ ಸೇವಾದಿನಗಳ ಅವಿಸ್ಮರಣೀಯ ಸಮಯಗಳಲ್ಲಿ ಇದೂ ಒಂದು.

ನೆನಪಿಗೆ ಬರುವ ಇಂಥ ಅನೇಕ ಸಂಗತಿಗಳಲ್ಲಿ ಎಲವೂ ಸಂತೋಷ, ಉತ್ಸಾಹಗಳನ್ನು ಕೊಡುವ ‘ಸ್ಮರಣೆ'ಗಳೇ ಆಗಿರುವುದಿಲ್ಲ. ಕೆಲವು ಸ್ಮರಣೀಯ ಸಂಗತಿಗಳಲ್ಲಿ ಕಹಿ, ವಿಷಾದಗಳು ತುಂಬಿದ್ದು, ಬದುಕಿನಲ್ಲಿನ ‘ಕೇಡು'- ‘ದುಷ್ಟತನ' (ಇವಿಲ್) ಅಂಶಗಳ ಕಾರಣದಿಂದಾಗಿ ಮರೆಯಬೇಕೆಂದರೂ ಮರೆಯಲಾಗದೆ ತೊಳಲಾಡುವಂತಾಗುತ್ತದೆ. ಅಥವಾ ಮರೆಯುವ ಪ್ರಜ್ಞಾಪೂರ್ವಕ ಯತ್ನದಲ್ಲಿ ಅದು ಸುಪ್ತ ಮನಸ್ಸಿನಲ್ಲಿ ಅಡಗಿ ಬೇರೊಂದು ರೂಪದಲ್ಲಿ ಕಾಡಬಹುದು. ಖಾಸಗಿ ಜೀವನದಂತೆ ವೃತ್ತಿ ಜೀವನದಲ್ಲೂ"(ಅ)ವಿಸ್ಮರಣೀಯ ಘಟನೆಗಳು ಒಂದೆರಡು ಸಲ ನನ್ನನ್ನು ಬಾಧಿಸಿದ್ದುಂಟು.

ಪತ್ರಕರ್ತರಿಗೆ ಲಾಗಾಯ್ತಿನಿಂದಲೂ ವ್ಯವಸ್ಥೆಯಿಂದ, ಪ್ರಭಾವಿ ವ್ಯಕ್ತಿಗಳಿಂದ ಪ್ರಾಣ ಹಾನಿ, ಮಾನಹಾನಿ ಬೆದರಿಕೆಗಳು ಇದ್ದದ್ದೇ. ಆದರೆ ಹೊಸ ಶತಮಾನದ ಉದಯಕ್ಕೆ ನಿಕಟಪೂರ್ವದಲ್ಲೇ ಪತ್ರಕರ್ತರಿಗೆ ಸಹದ್ಯೋಗಿಗಳಿಂದಲೇ ಇಂಥ ಬೆದರಿಕೆ ಉಂಟಾದದ್ದು ಬದಲಾದ ಕಾಲ ‘ಮಾನ'ದ ಮನಸ್ಥಿತಿಯನ್ನು ಬಿಂಬಿಸುವ ಒಂದು ಹೊಸ ವಿದ್ಯಮಾನ. ಎಂಬತ್ತು, ತೊಂಬತ್ತರ ದಶಕಗಳಲ್ಲಿ ಕಂಪ್ಯೂಟರೀಕರಣ, ವಿದ್ಯುನ್ಮಾನ ಕ್ಷೇತ್ರದ ಆಧುನಿಕ ತಂತ್ರಜ್ಞಾನ ಭಾರತೀಯ ಪತ್ರಿಕೋದ್ಯಮದಲ್ಲಿ ಆಮೂಲಾಗ್ರವಾಗಿ ಬದಲಾವಣೆಗಳನ್ನು ತಂದಿತು. ಪತ್ರಿಕೆಗಳ ಆಡಳಿತ ವಿಭಾಗ, ಸಂಪಾದಕೀಯ ವಿಭಾಗ, ಮುದ್ರಣ ವಿಭಾಗ ಹೀಗೆ ಪ್ರಮುಖ ವಿಭಾಗಗಳಲ್ಲಿ ಬದಲಾವಣೆಯ ಬಿರಿಗಾಳಿ ಹಿಂದಿನದೆಲ್ಲವನ್ನೂ ಗುಡಿಸಿಹಾಕುವಷ್ಟು ರಭಸವಾಗಿ ಬೀಸಿತ್ತು. ಕಾರ್ಪೊರೆಟ್ ಶೈಲಿಯ ಆಡಳಿತದಿಂದಾಗಿ ಆಡಳಿತ ವರ್ಗ ಮತ್ತು ನೌಕರರ ಸಂಬಂಧವೂ ಮೊದಲಿನಂತಿರಲಿಲ್ಲ. ಮೊದಲಿನ ಕಟ್ಟುನಿಟ್ಟು, ಬಿಗುಮಾನಗಳು ಹೋಗಿದ್ದವು. ಆಡಳಿತ ವರ್ಗದೊಂದಿಗೆ ನೌಕರರಿಗೆ ಸಂವಹನ-ಸಂಪರ್ಕಗಳು ಸಲೀಲಸಾಗಿದ್ದವು. ಈ ಸಲಿಗೆ, ಸಲೀಸುಗಳು ಪತ್ರಿಕೆಯ ಸುಧಾರಣೆಗಿಂತ ಹೆಚ್ಚಾಗಿ ಚಾಡಿಛಿದ್ರಗಳಂಥ, ಪ್ರಭಾವ ವಶೀಲಿಬಾಜಿಯಂಥ ಕೆಟ್ಟಪ್ರವೃತ್ತಿಗಳ ಮೇಲಾಟಕ್ಕೆ ಬಳಕೆಯಾದದ್ದೇ ಹೆಚ್ಚು.

ಕಾಲದ ಪ್ರಭಾವದಿಂದಾಗಿಯೋ ಏನೋ ಹೊಸತಲೆಮಾರಿನ ಪತ್ರಕರ್ತರು ಕೆಲವು ವಿಷಯಗಳಲ್ಲಿ ಹೆಚ್ಚು ಪ್ರಜ್ಞಾವಂತರಾಗಿದ್ದರು, ಇದು ಕೆಲವೊಮ್ಮೆ ಪೂರ್ವಗ್ರಹಗಳಿಗೆ ಆಸ್ಪದಮಾಡಿಕೊಡುತ್ತಿತ್ತು. ನವಜಾಗೃತಿಯ ಫಲವೆನ್ನಬಹುದಾದ, ನನ್ನನ್ನು ಗುರುಯಾಗಿಸಿಕೊಂಡ ಗುರುತರವಾದ ಎರಡು ಘಟನೆಗಳು ನಾನು ಮರೆಯಬೇಕೆನಿಸಿರೂ ಮರೆಯಲಾಗದ, ‘ವಿಸ್ಮರಣೀಯ' ಸಂಗತಿಗಳು-`ಮಾನಹಾನಿ-ಪ್ರಾಣಹಾನಿ'ಬೆದರಿಕೆಯವು. ಒಂದನ್ನು ಈಗ ಹೇಳುತ್ತೇನೆ ಮತ್ತೊಂದನ್ನು ಮುಂದೆ ಪ್ರಸಂಗ ಬಂದಾಗ ಹೇಳುವೆ.

ಒಂದು ಸಂದರ್ಭದಲ್ಲಿ ಪೂರ್ವಗ್ರಹಪೀಡಿತರಾದ ನನ್ನ ಸಹದ್ಯೋಗಿಗಳು ಕೆಲವರು ಹೊರಗಿನವರು ಒಬ್ಬಿಬ್ಬರೊಂದಿಗೆ ಸೇರಿಕೊಂಡು ನನ್ನ ಮೇಲೆ ಕೆಲವು ಆರೋಪಗಳನ್ನು ಮಾಡಿ ಪತ್ರಿಕೆಯೊಂದರಲ್ಲಿ ಬರೆದರು. ಇದು ಸಹದ್ಯೋಗಿಗಳಿಂದಲೇ ನನಗೆ ತಿಳಿಯಿತು. ಲೇಖನದಲ್ಲಿ ಮಾಡಿರುವ ಆರೋಪಗಳೇನೆಂದೂ ಅವರೇ ಹೇಳಿದರು. ನಾನು ಆ ಲೇಖನ ಓದುವ ಗೋಜಿಗೆ ಹೊಗಲಿಲ್ಲ. ನನ್ನ ಆತ್ಮಸಾಕ್ಷಿ ಶುದ್ಧವಾಗಿತ್ತು. ಬರೆದವರು ಪೂರ್ವಗ್ರಹ ಮತ್ತು ಪೂರ್ವಾಗ್ರಹ ಪೀಡಿತರು, ಹಾಗೂ ದುಡುಕಿನ ಕ್ಷಣದಲ್ಲಿ ಬರೆದಿದ್ದಾರೆ ಎಂಬುದು ನನಗೆ ಅರಿವಾಗಿತ್ತು. ನಾನು ಅಲಕ್ಷಿಸಿದ್ದರೂ ಲೇಖಕ ವಲಯ ಇದನ್ನು ಗಮನಿಸಿತ್ತು.

ಡಾ.ಮಲ್ಲಿಕಾ ಘಂಟಿ
12-12-96
ಸೊಂಡೂರು

ಆತ್ಮೀಯ ಹಿರಿಯರಿಗೆ,
ನಮಸ್ಕಾರಗಳು. ಬೆಂಗಳೂರಿಗೆ ಬಂದಾಗ ಬಂದಿದ್ದೆ. ತಾವು ಮೀಟಿಂಗ್‍ನಲ್ಲಿದ್ದರಂತೆ. ಹೀಗಾಗಿ ಕಾಣಲಾಗಲಿಲ್ಲ. ದೀಪಾವಳಿ ವಿಶೇಷಾಂಕ ಚೆನ್ನಾಗಿ ಬಂದಿದೆ. ಪದ್ಯ ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ಯಾಕೆ ಇತ್ತೀಚೆಗೆ ಪುಸ್ತಕ ಕಳಿಸುತ್ತಿಲ್ಲ. ನಿಮ್ಮ ಒತ್ತಾಸೆಯಿಂದ ನಾನು ಒಂದಿಷ್ಟು ವ್ಯಕ್ತಿಯಾಗಿ ಬೆಳೆದಿರುವೆ. ಈ ಋಣ ಮರೆಯಲಾರದ್ದು, ತೀರಿಸಲಾರದ್ದು. ಹಿಂದೊಮ್ಮೆ ‘ಹಾಯ್ ಬೆಂಗಳೂರಿ'ನಲ್ಲಿ ನಿಮ್ಮ ಬಗ್ಗೆ ಬಂದಾಗ ನಾನು ತುಂಬಾ ದು:ಖಪಟ್ಟೆ. ನನ್ನಂಥವರನ್ನು ಜಾತಿ, ಗೋತ್ರ ನೋಡದೆ ಪರಿಚಯಿಸಿದ, ಬರೆಯುವ ಚೈತನ್ಯ ತುಂಬಿದ ನಿಮ್ಮ ಹಿರಿದಾದ ವ್ಯಕ್ತಿತ್ವಕ್ಕೆ ಈ ಜನರು ಗೌರವ ಕೊಡಲಿಲ್ಲವಲ್ಲ ಎನ್ನುವ ನೋವು. ಜಗತ್ತೇ ಹೀಗೆ ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ನೋಡುವುದು. ತಮ್ಮ ಸೌಜನ್ಯ, ನಯ-ವಿನಯ ವ್ಯಕ್ತಿತ್ವದಿಂದ ನಾನಂತೂ ತುಂಬಾ ಪಡೆದುಕೊಂಡಿರುವೆ. ಎಲ್ಲವನ್ನೂ ಕೀಳು ಜಾತಿ ರಾಜಕಾರಣದಿಂದ ನೋಡುವವರಿಗೆ ನಿಮ್ಮ ಹೃದಯ ವೈಶಾಲ್ಯದ ತಂಪು ಅರ್ಥವಾಗದು. ಇಷ್ಟೆಲ್ಲದರ ಮಧ್ಯೆಯೂ ನೀವು ನೆಮ್ಮದಿಯಿಂದ ಹಿಡಿದ ಕೆಲಸ ಮಾಡಿಮುಗಿಸುವ ಸ್ಥೈರ್ಯ ಉಳಿಸಿಕೊಂಡಿರಿವಿರಲ್ಲ! ಅದು ನಮಗೆ ಅನುಕರಣೀಯ. ಒಂದೆರಡು ಸಲ ದೂರದರ್ಶನದ ಕಾರ್ಯಕ್ರಮದಲ್ಲಿ ತಮ್ಮನ್ನು ನೋಡಿದೆ. ಕಿರಿಯರು ಬೆಳೆಯಲು ಹಿರಿಯರ ಬದುಕಿನ ಬುತ್ತಿಯೇ ಆಧಾರ. ಆ ಬುತ್ತಿ ನಿಮ್ಮ ವ್ಯಕ್ತಿತ್ವದಲ್ಲಿದೆ. ಅದನ್ನು ಬೇಕಾದಲೊಮ್ಮೆಮ್ಮೆ ಬಿಟ್ಟಿ ಉಣ್ಣುವ ಹೃದಯವಂತಿಕೆ ನಮ್ಮಲ್ಲಿರಬೇಕಷ್ಟೆ. ಎಷ್ಟೋ ಸಲ ಹಿರಿಯರಾದ ಸಿದ್ದಲಿಂಗ ಪಟ್ಟಣಶೆಟ್ಟಿಯವರ ಮುಂದೆ ನನ್ನ ಮನದ ತುಡಿತವನ್ನು ಬಿಚ್ಚಿಟ್ಟಿರುವೆ. ನನ್ನ ಬೆಳವಣಿಗೆಯಲ್ಲಿ ಅವರ ಒತ್ತಾಸೆಯೂ ಸೇರಿಕೊಂಡಿದೆ. ಮಗಳಂತೆ ನನಗೆ ಉಣಬಡಿಸಿದ ಆ ಹೃದಯವಂತಿಕೆ ಮತ್ತು ಬುದ್ಧಿಯ ಹಸಿವನ್ನು ಹಿಂಗಿಸಿರುವ ನಿಮ್ಮ ವ್ಯಕ್ತಿತ್ವ ಸದಾ ನನ್ನ ನೆನಪಿನಲ್ಲುಳಿಯುವುದರಿಂದ ಇಡುವ ಒಂದೊಂದು ಹೆಜ್ಜೆಯೂ ತಮ್ಮ ನೆನಿಕೆ ಇರುತ್ತದೆ. ತುಂಬ ಭಾವುಕಳಾಗಿ ಬರೆಯುತ್ತಿರುವೆ ಕ್ಷಮಿಸಿರಿ. ಬಸವರಾಜ ಕಟ್ಟೀಮನಿಯವರ ನಂತರ ಅತ್ಯಂತ ಆತ್ಮೀಯವಾಗಿ ಕಂಡವರಲ್ಲಿ ನೀವು ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಪ್ರಮುಖರು. ಹೀಗಾಗಿ ಒಂದೊಂದು ಸಲ ಭಾವುಕತೆ ನನ್ನ ಕೈಯ್ಯನ್ನು ಸಡಿಲಿಸಿ ಏನೆಲ್ಲ ಬರೆಯಲು ಹಚ್ಚುತ್ತದೆ. ಯಾವುದೇ ನಿಂದನೆಗಳಿಗೆ ಒಳಗಾಗುವ ವ್ಯಕ್ತಿತ್ವ ನಿಮ್ಮದಲ್ಲ. ಅದನ್ನೆಲ್ಲ ಮೆಟ್ಟಿದ ಪರಿಪೂರ್ಣತೆಯ ಕಡೆಗೆ ಹರಿಯುವ ನಿಮ್ಮ ಜೀವಂತಿಕೆಯ, ಕ್ರಿಯಾಶೀಲತೆ ನಮ್ಮಂಥ ಕಿರಿಯರಲ್ಲಿ ಶಕ್ತ ತುಂಬಿ ಮುನ್ನಡೆಸಬಲ್ಲದು. ಬದುಕಿನ ಸಾರ್ಥಕ್ಯಕ್ಕೆ ಇನ್ನೇನು ಬೇಡಲಿ. ಒಂದು ಸಾಲಿನ ಕಾಗದ ಬರೆಯುವ ಬಿಡುವುನಿಮಗೆ ಸಿಗಲಿ. ಹಳೆಯ ದಿನಗಳ ಕೊಳೆಯ ತೊಳೆದು 1997ರ ಹೊಸ ವರ್ಷದ ಜೀವಜಲ ಒಸರಿ ನಿಮ್ಮನಮ್ಮೆಲ್ಲರ ಹೃದಯ ಹಗುರಗೊಳಿಸಲೆಂದು ಮುಂಗಡವಾಗಿಯೇ ಶುಭಾಶಯ ತಿಳಿಸುತ್ತಿರುವೆ.

ಸೋದರಿ
ಮಲ್ಲಿಕಾ ಘಂಟಿ

ಕರ್ನಾಟಕದ ಉದ್ದಗಲ ನನಗೆ ಸಾಹಿತಿಗಳು ಕಲಾವಿದರ ಸ್ನೇಹಬಳಗವಿತ್ತು. ಅವರ ಬೆಂಬಲ, ಸಹಕಾರ, ಪ್ರೀತಿ-ವಿಶ್ವಾಸಗಳಿಂದಾಗಿ ನಾನು ಕನ್ನಡ ಪತ್ರಿಕೋದ್ಯಮದಲ್ಲಿ ಕೆಲವು ಹೆಜ್ಜೆಗಳನ್ನು ಮೂಡಿಸುವುದು ಸಾಧ್ಯವಾಯಿತು. ಈ ಬಳಗದಲ್ಲಿ ನನ್ನ ನಿರ್ಧಾರಗಳನ್ನು ಪ್ರಶ್ನಿಸುವವರು, ಒಪ್ಪದವರು ಇರಲಿಲ್ಲ ಎಂದೆಲ್ಲ. ಅಭಿಪ್ರಾಯ ಭೇದಗಳನ್ನು ಬಹಿರಂಗವಾಗಿ ಹೇಳಿದ್ದುಂಟು, ನನ್ನೊಡನೆ ಚರ್ಚಿಸಿದ್ದುಂಟು. ಆದರೆ ಇವರ್ಯಾರೂ ನನ್ನ ಪ್ರಮಾಣಿಕತೆಯನ್ನು(ಇಂಟೆಗ್ರಿಟಿ)ಅನುಮಾನಿಸಲಿಲ್ಲ ಎಂಬುದೊಂದೇ ನಾನು ವೃತ್ತಿಜೀವನದಲ್ಲಿ ಗಳಿಸಿದ ಸಮಾಧಾನ.

ಕವಿಗಳು, ಸಾಹಿತಿಗಳು ಮತ್ತು ಪತ್ರಕರ್ತರ ನಡುವಣ ಸಂಬಂಧ ಪತ್ರಿಕೆಯ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾಗುತ್ತದೆ. ಈ ಸಂಬಂಧ ಇತ್ಯಾತ್ಮಕವಾಗಿ, ಗುಣಾತ್ಮಕವಾಗಿ ಬೆಳೆಯ ಬೇಕಾದರೆ ಪತ್ರಕರ್ತರು ಮುಖ್ಯವಾಗಿ ಮುಕ್ತಮನಸ್ಸಿನವರಾಗಿರಬೇಕು, ಪೂರ್ವಗ್ರಹ (ಪ್ರಿಜುಡಿಸ್) ಮತ್ತು ಪೂರ್ವಾಗ್ರಹಗಳೆರಡರಿಂದಲೂ ಮುಕ್ತವಾಗಿರಬೇಕು. ಜೊತೆಗೆ ಪತ್ರಿಕೆಯ ಆಡಳಿತ ಹಾಗೂ ಸಂಪಾದಕೀಯ ವೀಭಾಗದಲ್ಲೂ ಇಂಥ ಗುಣವನ್ನು ಪ್ರೇರೇಪಿಸುವ ಪರಂಪರೆ ಇರಬೇಕು. ಪ್ರಜಾವಾಣಿಯಲ್ಲಿ ಇಂಥದೊಂದು ಪರಂಪರೆ ಇದ್ದು, ಅದು ನನ್ನನ್ನು ಬೆಳೆಸಿತು. ಅದನ್ನು ಸಾಹಿತಿ ಕಲಾವಿದರೂ ಓದುಗರೂ ಗರುತಿಸಿದ್ದರು.

ಟಿ.ಎಸ್.ಸತ್ಯನ್
ಮೈಸೂರು

ಡಿಸೆಂಬರ್ 26,96.

ಪ್ರಿಯ ಶ್ರೀ ರಂಗನಾಥ ರಾಯರಿಗೆ,
ನಮಸ್ಕಾರಗಳು. ಕುಶಲವಷ್ಟೆ?

ತಮ್ಮ ಒಲವಿನ ಹೊಸವರ್ಷದ ಶುಭಾಶಯಗಳನ್ನು ಒಳಗೊಂಡ ಕಾರ್ಡ್ ನನ್ನ ಕೈಸೇರಿದೆ. ಬಹಳ ಸಂತೋಷವಾಯಿತು. ನಿಮ್ಮ ಸ್ನೇಹವನ್ನು-ನಿಮ್ಮೊಡನೆ ಕೆಲಸಮಾಡಿದ ದಿನಗಳನ್ನು ಸದಾಕಾಲ ನೆನೆಯುತ್ತೇನೆ. ನನ್ನ ಆರೋಗ್ಯ ಉತ್ತಮಗೊಂಡಿದೆ. ಸೋಮಾರಿಯಾಗಿ ಕುಳಿತಿರಲು ಮನಸ್ಸಿಗಾಗದರಿಂದ, ಏನಾದರೂ ಮಾಡುತ್ತಿರುತ್ತೇನೆ. ನನ್ನ ‘ನೆನಪುಗಳು'ಬರೆಯುತ್ತಿರುತ್ತೇನೆ. ಎರಡು ವಾರಕ್ಕೊಮ್ಮೆ ಅವು ಅಚ್ಚಾಗುತ್ತದೆ. ಆರಂಭಿಸಿ 16 ತಿಂಗಳುಗಳಾದವು. ಈ ಹೊಸ ವರುಷದಲ್ಲಿ ನಿಮಗೆ ಆರೋಗ್ಯ ಶಾಂತಿ ಮತ್ತು ಸುಖ ದೊರಕಲೆಂದು ಹಾರೈಸುತ್ತೇನೆ.

ತಮ್ಮವ
ಸತ್ಯನ್

**********

ತಿರುಮಲೇಶ್
ಹೈದರಾಬಾದು
22-2-1997
ಪ್ರಿಯ ರಂಗನಾಥ ರಾವ್,

ನಾನು ಪ್ರತಿಬಾರಿಯೂ ಅನಂತರಾಯರಲ್ಲಿ ನಿಮ್ಮ ಕುರಿತು ವಿಚಾರಿಸುತ್ತಲೇ ಇರುತ್ತೇನೆ. ನೀವು ಪತ್ರಿಕೆಯ ಕೆಲಸ ಕಾರ್ಯಗಳಲ್ಲಿ ಮುಳುಗಿರುತ್ತೀರಿ ಎಂದು ತಿಳಿದು ನನಗೆ ಸಂತೋಷವಾಗುತ್ತದೆ. ತುಂಬ ಶ್ರದ್ಧೆಯಿಂದ ಕೆಲಸ ಮಾಡುವವರ ಬಗ್ಗೆ ನನಗೆ ನಿಜಕ್ಕೂ ಗೌರವ, ಯಾಕೆಂದರೆ ಒಂದು ವಿಧದಲ್ಲಿ ಇಲ್ಲಿ ನಾನೂ ಹೀಗೇ ವರ್ತಿಸಿಕೊಂಡು ಬರುವವ, ಇರಲಿ.

ಪ್ರಿಯ ರಂಗನಾಥ್, ನನಗೆ ನಿಮ್ಮ ಜೊತೆ ಯಾವ ಮನಸ್ತಾಪವೂ ಇಲ್ಲ. ದಯವಿಟ್ಟು ಅಂಥ ಭಾವನೆ ಇಟ್ಟುಕೊಳ್ಳಬೇಡಿ, ನಾವು ಓರಗೆಯವರು ಮಾತ್ರವಲ್ಲ ಗೆಳೆಯರು ಕೂಡ. ನಾನು ಪ್ರಜಾವಾಣಿಗೆ ಮಾತ್ರವಲ್ಲ ಉಳಿದ ಜನಪ್ರಿಯ ಪತ್ರಿಕೆಗಳಿಗೂ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆನೆ, ವಿನಾ ಬೇರೆನೂ ಇಲ್ಲ. ಆದರೆ ಈಗ ಮತ್ತೆ ಶುರು ಮಾಡಬೇಕೆಂದಿದ್ದೇನೆ.

ಬರೆಯಲು ನೀವು ನನ್ನನ್ನು ಯಾವತ್ತೂ ಆಗ್ರಹಿಸುತ್ತಿದ್ದವರು. ಪುಸ್ತಕ ವಿಮರ್ಶೆಯೊಂದನ್ನುಳಿದು ಬೇರೇನಾದರೂ-ಕತೆ, ಕವಿತೆ-ಲೇಖನ ಕಳಿಸಲೆ? ಒಂದು ವರ್ಷಕಾಲ ಪುಸ್ತಕ ವಿಮರ್ಶೆ ಮಾಡಿ ಆಗ್ರಹಕ್ಕೆ ತುತ್ತಾದ್ದು ನೆನಪಿದೆಯೆ? ಸಾಹಿತ್ಯಕ್ಕೆ ಸಂಬಂಧಿಸಿ ತಿಂಗಳಿಗೊಂದು ಲೇಖನ ಬರೆಯಲು ಒಮ್ಮೆ ಸೂಚಿಸಿದ್ದಿರಿ, ನಾನು ಅದನ್ನೂ ಮಾಡಲಿಲ್ಲ. ಹೀಗೆ ನಿಮಗೆ ಋಣಿಯಾಗಿರುವುದಕ್ಕೆ ನನಗೆ ಇರುವಷ್ಟು ಕಾರಣಗಳು ನಿಮ್ಮ ಮೇಲೆ ಸಿಟ್ಟಾಗುವುದಕ್ಕೆ ಇಲ್ಲ! ಬೆಂಗಳೂರಿಗೆ ಬಂದಾಗ ನಿಮ್ಮ ಭೇಟಿಗೆ ಪ್ರಯತ್ನಿಸುವೆ.

ಬಿಡುವು ಮಾಡಿ ಒಂದು ಕಾಗದ ಹಾಕಿ.
ನಿಮ್ಮ ಪ್ರೀತಿಯ
ತಿರುಮಲೇಶ್
(ಕೆ.ವಿ.ತಿರುಮಲೇಶ್)

***********
ಕೆ.ಎಸ್.ನಿಸಾರ್ ಅಹಮದ್
ಬೆಂಗಳೂರು
26-6-97

ಆತ್ಮೀಯರಾದ ಶ್ರೀ ಜಿ.ಎನ್.ರಂಗನಾಥ ರಾವ್ ಅವರಿಗೆ- ನಮಸ್ಕಾರಗಳು.

ದಿನಾಂಕ 21-6-97ರ ನಿಮ್ಮ ಪತ್ರ ಈ ದಿನ ಕೈಸೇರಿದೆ. ನಿಮ್ಮ ಅಪೇಕ್ಷೆಯಂತೆ ‘ಪ್ರಜಾವಾಣಿ' ದೀಪಾವಳಿ ಸಂಚಿಕೆಗೆ ನನ್ನ ಕವಿತೆಯನ್ನು ಜುಲೈ 10ರ ಹೊತ್ತಿಗೆ ಕಳಿಸಿಕೊಡುತ್ತೇನೆ. ಎಂದಿನಂತೆ ನನಗೆ ಕವನ ಕಳಿಸಲು ಕೇಳಿದ್ದಕ್ಕೆ ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನನ್ನ ಬರವಣಿಗೆಯ ಆರಂಭದ ದಿನಗಳಲ್ಲಿ ಹಾಗೂ ಅನಂತರ ‘ಪ್ರಜಾವಾಣಿ' ಮತ್ತು ಅದರ ಸಹಪ್ರಕಟಣೆಗಳಾದ ‘ಸುಧಾ'- ‘ಮಯೂರ' ನನಗೆ ನೀಡಿದ ಬೆಂಬಲ, ಉತ್ತೇಜನ ಅಷ್ಟಿಷ್ಟಲ್ಲ. ಎರಡೂವರೆ ದಶಕಗಳ ಮುಂಚೆ ನನ್ನನ್ನು ಮತ್ತೆ ನನ್ನ ಜೊತೆಗಾರ ಲೇಖಕರನ್ನ ಜನ ಗುರುತಿಸುತ್ತಿದ್ದುದು ‘ಪ್ರಜಾವಾಣಿ' ಬಳಗದ ಬರಹಗಾರರೆಂದು. 60ನೆಯ ದಶಕದಲ್ಲಿ ‘ಪ್ರಜಾವಾಣಿ'ಯಲ್ಲಿ ನಾನು ಪುಸ್ತಕಗಳ ರಿವ್ಯೂ ಮಾಡುತ್ತಿದ್ದದ್ದು, ‘ಸುಧಾ' ಪ್ರಾರಂಭವಾದ ಕೆಲವೇ ಸಮಯದಲ್ಲಿ ಅದರ ‘ಗ್ರಂಥಾಂತರಂಗ' ಪ್ರಪ್ರಥಮವಾಗಿ ಪುಸ್ತಕ ವಿಮರ್ಶೆಯನ್ನು ಶುರುಮಾಡಿದ್ದು ನನ್ನ, ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯುವ ಹೆಮ್ಮೆಯ ಸಂಗತಿ. ಆಗ ಶ್ರೀ ಎಂ.ಬಿ.ಸಿಂಗ್, ವೈಎನ್ಕೆ, ಮತ್ತೆ ಈಗ ನೀವು ನನ್ನ ಬಗೆಗೆ ತೋರಿದ, ತೋರುತ್ತಿರುವ ವಿಶ್ವಾಸಗಳನ್ನ ನೆನೆದರೆ ಕಣ್ಣು ತೇವಗೊಳ್ಳುತ್ತದೆ. ಇದನ್ನೆಲ್ಲ ಬರೆಯಲು ಕಾರಣ: ‘ಪ್ರಜಾವಾಣೀ' ಆಚರಿಸುತ್ತಿರುವ ಸುವರ್ಣ ಸಂವತ್ಸರದ ಶುಭದೆಸಗೆ. ಈ ಪತ್ರಿಕೆಯನ್ನು ಹಾಗೂ ಸಹ ಪ್ರಕಟಣೆಗಳನ್ನು ಸ್ಥಾಪಿಸಿ ಬೆಳೆಸಿದ ಮಹನೀಯರಾದ ಕೆ.ಎನ್.ಗುರುಸ್ವಾಮಿ. ಇ.ಕೆ.ಎ.ನೆಟ್ಟಕಲ್ಲಪ್ಪ ಅವರಿಗೆ, ಉತ್ತರೋತ್ತರ ಉತ್ಕರ್ಷಕ್ಕೆ ಕಾರಣರಾದ, ಆಗುತ್ತಿರುವ ಶ್ರೀ ಕೆ,ಎನ್.ಹರಿಕುಮಾರ್ ಮತ್ತು ಸಹೋದರರಿಗೆ ಹಾಗೂ ಹಿಂದಿನ, ಇಂದಿನ ಸಂಪಾದಕವರ್ಗದ ಎಲ್ಲ ಕರ್ಮಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆ ಹಾಗೂ ವಂದನೆ ಸಲ್ಲಿಸುವೆ. ಅಂದಹಾಗೆ, ನಿಮ್ಮ ಕಾಲದಲ್ಲಿ ‘ಪ್ರಜಾವಾಣಿ'ಕ್ರೀಡೆಗಳ ಬಗ್ಗೆ, ವಾಣಿಜ್ಯದ ಬಗ್ಗೆ ನಿಯತವಾಗಿ ವಾರವಾರ ವಿಶೇಷ ಪುರವಣಿಗಳನ್ನು ತರುತ್ತಿರುವುದು ದಾಖಲೆಗೆ ತಕ್ಕದ್ದಾಗಿದೆ. ಹೊಸ ಆಯಾಮ ದಕ್ಕಿಸಿರುವ ನಿಮಗೆ(ಮುಜುಗರ ಪಡುತ್ತೀರೆಂದು ಗೊತ್ತು)ನನ್ನ ವಿಶೇಷ ಅಭಿನಂದನೆ. ಕನ್ನಡಿಗರ ಕಣ್ಮಣಿ "ಪ್ರಜಾವಾಣಿ" ಶತೋತ್ತರ ವರ್ಷಗಳಲ್ಲಿ ಸಾಗಲೆಂದು ಹಾರೈಸುವೆ.

ವಂದನೆಗಳೊಂದಿಗೆ
ಇತಿ ಇಮ್ಮ ವಿಶ್ವಾಸದ
ಕೆ.ಎಸ್.ನಿಸಾರ ಅಹಮದ್
*******
ವಿಷ್ಣು ನಾಯ್ಕ

ಅಂಬಾರಕೊಡ್ಲ

5-1-1998
ಮಾನ್ಯ ಜಿ.ಎನ್.ರಂಗನಾಥ ರಾವ್ ಅವರಿಗೆ, ನಮಸ್ಕಾರಗಳು.

ನನ್ನ ಮತ್ತು ನಮ್ಮ ರಾಘವೇಂದ್ರ ಪ್ರಕಾಶನದ ಕುರಿತು ಡಿಸೆಂಬರ 6ರ ‘ಪ್ರಜಾವಾಣಿ'ಯಲ್ಲಿ ತಾವು ಬರೆದ ಲೇಖನವನ್ನು ಓದಿ ಸಂತೋಷಪಟ್ಟಿದ್ದೇನೆ. ತಮ್ಮಂಥ ಪ್ರಾಜ್ಞ-ಪ್ರಬುದ್ಧ ಪತ್ರಿಕೋದ್ಯಮಿಯ ಪ್ರಶಂಸೆಗೆ ಪಕ್ಕಾಗುವಂಥ ಕನ್ನಡದ ಕೈಂಕರ್ಯ ನನ್ನಿಂದ ಸಾಧ್ಯವಾದುದಕ್ಕೆ ಒಂದು ಬಗೆಯ ಧನ್ಯತಾ ಭಾವವೂ ಉಂಟಾಗಿದೆ. ಆದರೆ ನಾನು ಮಾಡಿದ್ದೆಲ್ಲ ನನ್ನ ಎದೆಯ ಸಮಾಧಾನಕ್ಕಾಗಿ. ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಜೀವನಾಡಿಯಾಗಿ ರಾಘವೇಂದ್ರ ಪ್ರಕಾಶನ ನಿಲ್ಲಬೇಕು:ಸಾಧ್ಯವಾದಲ್ಲಿ ಹೊರಜಿಲ್ಲೆಗಳಿಗೂ ಅದರ ಸೇವೆ ಸಲ್ಲಬೇಕು ಎಂಬ ಉದ್ದೇಶದೊಂದಿಗೆ ನಾನು ಮಾಡಿದ ಒಂದು ವಿನಮ್ರ ಪ್ರಯತ್ನವನ್ನು ಗುರುತಿಸಿ ‘ಪ್ರಜಾವಾಣಿ'ಯಂಥ ಪ್ರಬುದ್ಧ ದೈನಿಕದಲ್ಲಿ ನನ್ನ ಕುರಿತು ಬರೆಯುವ ಔದಾರ್ಯ ತೋರಿದ ನಿಮ್ಮ ಹೃದಯವಂತಿಕೆ ದೊಡ್ಡದು. ದಯವಿಟ್ಟು ನನ್ನ ಕೃತಜ್ಞತೆಗಳನ್ನು ಸ್ವೀಕರಿಸಿರಿ.

ಕಾಯ್ಕಿಣಿಯವರ ಸಂಪುಟಗಳ ಜೊತೆಯಲ್ಲಿ ನನ್ನ 6ನೆಯ ಕವನ ಸಂಕಲನದ ಒಂದು ಪ್ರತಿಯನ್ನು(ಕಳಕೊಂಡ ಕವಿತೆ')ಕಳಿಸಿದ್ದೆ.ಅದನ್ನು ತಾವು ಗಮನಿಸಿದ್ದೀರಿ ಎಂದುಕೊಂಡಿದ್ದೇನೆ.ಕಳೆದ 30 ವರ್ಷಗಳಿಂದ `ಪ್ರಜಾವಾಣಿ'ಯನ್ನ ಖರೀದಿಸಿ ಓದುತ್ತಾಬಂದಿರುವ ನಾನು ಯಾವ ಪತ್ರಿಕೆಯನ್ನು ಎದೆಯಾರ ಪ್ರೀತಿಸುವೆನೋಆ ಪತ್ರಿಕೆಯಲ್ಲೇ ನೀವು ನನ್ನ ಕುರಿತು ಬರೆದ ಬಗ್ಗೆ ಹೆಚ್ಚಿನ ಸಂತೋಷ ಸಹಜವಾಗಿಯೇ ಆಗಿದೆ.ಇನ್ನೊಮ್ಮೆ ಧನ್ಯವಾದಗಳು.

ಹೊಸ ವರ್ಷದ ಶುಭಾಶಯಗಳೊಂದುಗೆ,
ತಮ್ಮ ವಿಶ್ವಾಸದ
ವಿಷ್ಣು ನಾಯ್ಕ
ಪ್ರಧಾನ ಸಂಚಾಲಕರು

******
ಶರಣಬಸವ ಆರ್.ಐ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಷನ್ ರಸ್ತೆ,
ಹೊಸಪೇಟೆ.

2 ಮಾರ್ಚ್ 98

ಶ್ರೀಯುತ ರಂಗನಾಥ ರಾಯರಿಗೆ,
ವಿನಯಪೂರ್ವಕ ನಮನಗಳು.

ಸರ್, ಮೊದಲಿಗೆ ನಿಮ್ಮನ್ನು ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್(97-98)ಸಿಕ್ಕಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದಿಸುತ್ತೇನೆ. ಮೊನ್ನೆ ಇಲ್ಲಿಯ ಪುಸ್ತಕ ಪ್ರದರ್ಶನವೊಂದರಲ್ಲಿ ನಿಮ್ಮ ‘ಸೃಜನಶೀಲ' ಕೊಂಡು ಓದಿದೆ. ಮೊದಲಿನಿಂದಲೂ ಪ್ರಜಾವಾಣಿಯ ಸಂಪಾದಕೀಯಗಳನ್ನು ಮಿಸ್ ಮಾಡಿಕೊಳ್ಳದ ನನಗೆ (ಅದರಲ್ಲೂ ನೀವು ಬರೆಯುವ ತಿಳಿಹಾಸ್ಯ ಹಾಗೂ ಆರೋಗ್ಯಕರ ವ್ಯಂಗ್ಯದ ಕಾಲಂ ನನಗೆ ಇಷ್ಟ)ಪುಸ್ತಕ ರೂಪದಲ್ಲಿ ಸುಮಾರು 7-8 ವರ್ಷಗಳ ಹಿಂದಿನ ವಿಮರ್ಶಾತ್ಮಕ ಸಂಗತಿಗಳನ್ನು ಮೆಲುಕುಹಾಕುವಂತೆ ಮಾಡಿದೆ.

ಸರಳ ಭಾಷೆ, ತುಲನಾತ್ಮಕ ವಿಮರ್ಶೆ ಪುಸ್ತಕವನ್ನು ಓದಿಸಿಕೊಂಡು ಹೋಗುತ್ತದೆ. ನನಗೆ "ಅಂತರಂಗ-ಬಹಿರಂಗ"ಕ್ಕಿಂತ ಈ ಪುಸ್ತಕ ಹಿಡಿಸಲು ಕಾರಣವೆಂದರೆ, ಇಲ್ಲಿ ವೈಯಕ್ತಿಕ ಅಭಿಪ್ರಾಯಗಳ ಒತ್ತಡ ಕಂಡುಬರುವುದಿಲ್ಲ ‘ಸೃಜನಶೀಲ'ದ ಮುಂದಿನ ಆವೃತ್ತಿಗಳು ಹೊರಬರಲಿ ಎಂದು ಆಶಿಸುತ್ತೇನೆ. ಅಂದ್ಹಾಗೆ ನನ್ನ ಹೆಸರು ನೀವು ಎಲ್ಲೋ ಕೇಳಿದ ಹಾಗಿರಬಹುದು. ನಾನು ನಿಮ್ಮ ಕ್ರೀಡಾ ಪುರವಣಿಗೆ ‘ಪದಕ್ರೀಡೆ'ಮಾಡಿ ಕಳಿಸುತ್ತಿದ್ದೆ. ನಂತರ ಸಮಯದ ಅಭಾವದಿಂದ ಕಂಟಿನ್ಯೂ ಆಗಲಿಲ್ಲ(ಬ್ಯಾಂಕ್ ಆಫೀಸರನ ಕೊರತೆ ಇದು) ನಿರಾಶೆ ಮಾಡಿದ್ದಕ್ಕೆ ಕ್ಷಮೆ ಇರಲಿ.

ದಯವಿಟ್ಟು ಉತ್ತರಿಸಿ,
ಇಂತಿ ತಮ್ಮ
ಶರಣಬಸವ ಆರ್.ಟಿ.

*******
ಎಸ್.ಶೇಷಾದ್ರಿ ಕಿನಾರ, ಶಿವಮೊಗ್ಗ
ದಿನಾಂಕ24-4-98

ಪ್ರಿಯ ಶ್ರೀ ಜಿ.ಎನ್.ಆರ್
ಆತ್ಮೀಯ ವಂದನೆಗಳು.
ನಾವೆಲ್ಲ ಕುಶಲ. ನೀವು ಮನೆಯವರು ಕುಶಲವೇ?
‘ಇಗೋ ಕನ್ನಡ ಸಾಹಿತ್ಯ ಜೀವಿ" ಓದಿದೆ. ನುಡಿ ಚಿತ್ರ ತುಂಬ ಹಿಡಿಸಿತು. ವ್ಯಕ್ತಿಗಳನ್ನು ನೋಡದಿದ್ದರೂ ಅವರ ವ್ಯಕ್ತಿತ್ವ, ರೂಪು, ರೀತಿ. ರಿವಾಜು ಇವುಗಳನ್ನುಕಣ್ಣಿಗೆ ಕಟ್ಟುವಂತೆ ಬರೆದಿರುವಿರಿ. ಇಂಥ ನುಡಿಚಿತ್ರಗಳು ಆಗಾಗ್ಗೆ ನಿಮ್ಮಿಂದ ಬಂದಿವೆ. ಹೋಲಿಕೆಗಾಗಿ ಹೇಳುತ್ತಿದ್ದೇನೆ: ಎಚ್ಚೆಸ್ಕೆ ಒಬ್ಬ ಒಳ್ಳೆ ನುಡಿಚಿತ್ರಕಾರರು. ಆ ನಂತರ ತುಂಬ ಸರಳವಾಗಿ, ಆದರೆ ಗಾಢವಾಗಿ ಮನಮುಟ್ಟುವಂತೆ ಹೇಳಬಲ್ಲವರು ನೀವು. ಇಂಥ ಅನೇಕ ನಿಮ್ಮಿಂದ ಬರಲಿ. ವಂದನೆಗಳು,

ಪ್ರೀತಿಯಿಂದ
ಇತಿ
ಶೇಷಾದ್ರಿ ಕಿನಾರ
********
ಬರಗೂರು ರಾಮಚಂದ್ರಪ್ಪ
ಬೆಂಗಳೂರು

ದಿನಾಂಕ:28-4-98
ಮಿತ್ರರಾದ ಶ್ರೀ ಜಿ.ಎನ್.ಆರ್ ಅವರಿಗೆ

ತಾವು ವಿಶ್ವಾಸದಿಂದ ಪ್ರಕಟಿಸಿರುವ ನನ್ನ ಸಂದರ್ಶನವನ್ನು ನೋಡಿದೆ. ತಮಗೆ ಧನ್ಯವಾದಗಳು ಎಂದರೆ ಸಾಕೆ ಎಂದು ನನಗೆ ನಾನೇ ಕೇಳಿಕೊಳ್ಳುವಂತಾಗಿದೆ. ಇದು ಸಂಕೋಚದ ಸಂಗತಿಯೂ ಹೌದು. ಒಟ್ಟಿನಲ್ಲಿ ನಿಮ್ಮ ಸ್ನೇಹ ದೊಡ್ಡದು.

ಇಂತು ವಿಶ್ವಾಸಿ
ಬರಗೂರು ರಾಮಚಂದ್ರಪ್ಪ

ಈ ಅಂಕಣದ ಹಿಂದಿನ ಬರಹಗಳು:
‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...