ಕಡಲ ಕಿನಾರೆಯ ಸಡಗರದ ಚಿತ್ರಗಳು

Date: 14-09-2022

Location: ಬೆಂಗಳೂರು


ಆಗಷ್ಟೆ ದಣಿದು ಬಂದು ನಿಂತ ಹಡಗುಗಳು ವಿಶ್ರಾಂತಿ ಪಡೆಯುತ್ತಾ ಮರಳಿಗೆ ಬೆನ್ನು ಆನಿಸಿ ಮಲಗಿದ್ದವು. ಒಂದಷ್ಟು ಹಡಗುಗಳು ತಿಂಗಳಾನುಗಟ್ಟಲೆ ಕಡಲ ಸಹವಾಸವೆ ಬೇಡವೆಂಬಷ್ಟು ಬೇಜಾರಿನಲ್ಲಿ ಹೊಟ್ಟೆ ಕೆಳಮಾಡಿ ಮಲಗಿ ಗಾಳಿಗೆ ಬೀಸಿ ಬರುವ ಮರಳಿನಲ್ಲಿ ಹೂತು ಹೋಗಿದ್ದವು. ಮತ್ತೊಂದಿಷ್ಟು ಇನ್ನೇನು ನಮ್ಮ ಪಯಣ ಸದ್ಯದಲ್ಲೆ ಶುರುವಾಗುತ್ತದೆ ಎಂಬ ಉತ್ಸಾಹದಲ್ಲಿ ತಮ್ಮ ಪತಾಕೆಯನ್ನು ಪೂರ್ತಿಯಾಗಿ ರಾರಾಜಿಕೊಂಡು ತನ್ನ ಒಡೆಯ ನಾವಿಕನಿಗೆ ಕಾದು ನಿಂತಿದ್ದವು ಎನ್ನುತ್ತಾರೆ ಲೇಖಕ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ ಕರಾವಳಿ ಪ್ರವಾಸದ ಸೊಗಸಿನ ಬಗ್ಗೆ ಬರೆದಿದ್ದಾರೆ.

ಹೊನ್ನಾವರ ಹತ್ತಿರದ ಕರ್ಕಿಯಲ್ಲಿ ಬಡಗಣಿ ನದಿಯು ಅರಬ್ಬಿಯೊಂದಿಗೆ ಬೆಸೆತು ಬೆರೆಯುವ ಮೊದಲೆ ಅರಬ್ಬಿ ತಾನೇ ಹರಿಬಿದ್ದು ಕರೆಯಲು ಬಂದಂತೆ ತನ್ನ ಹಿನ್ನೀರ ಹರಿಸಿ ಪಾವನಕುರ್ವಾ ಹಿಂಬದಿಗೆ ನುಗ್ಗಿ ಅರೆ ಸವಳು ನೀರನ್ನು ಶೇಖರಿಸುತ್ತದೆ‌. ಆ ಹಿನ್ನಿರಿಗೆ ಎದುರಾಗಿ ಬಂದು ಬಡಗಣಿ ನದಿಯು ಬೆಸೆತು ಅರಬ್ಬಿ ಅಬ್ಧಿ ಸೇರುತ್ತದೆ. ಪಾವಿನಕುರ್ವೆ ಕಡಲ ತಡಿಗೆ ಹೋಗಲು ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗೆ ಈ ಹಿನ್ನೀರ ಸಂಗ್ರಹವಿದೆ. ನಮ್ಮ ಪಯಣ ಈ ಸೇತುವೆ ಮೇಲಿನಿಂದ ಶುರುವಾಗಬೇಕಿತ್ತು. ಸೇತುವೆ ದುರಸ್ತಿ ಕಾಮಗಾರಿ ಆರಂಭವಾಗಿದ್ದರಿಂದ ಕಟ್ಟಿಗೆಯಿಂದ ಮಾಡಿದೆ ಉದ್ದನೆಯ ನಾವೆಯೊಂದನ್ನು ಹತ್ತಿ ನಮ್ಮ ಪಯಣ ಶುರು ಮಾಡಿದೆವು. ನದಿ ಮತ್ತು ಸಮುದ್ರ ಒಟ್ಟಾಗಿ ಕೂಡುವ ಇಂತಹ ಒಂದು ಸಂಗಮದ ನೀರಿನ ಮೇಲ್ಮೈಯಲ್ಲಿ ಅಲುಗಾಡದಂತೆ ನಾಜೂಕು ಬ್ಯಾಲೆನ್ಸ್ ದಿಂದ ಆ ಉದ್ದನೆಯ ನಾವೆಯೊಳಗೆ ಕೂತು ದಾಟುವುದೆ ರೊಮಾಂಚನ ಎನಿಸಿತು. ಉದ್ದನೆಯ ಕೋಲೊಂದು ನೀರಿನ ಆಳಕ್ಕೆ ಹಾಕಿ ನೆಲಮುಟ್ಟಿಸಿ ಹಿಂದಕ್ಕೆ ತಳ್ಳಿ ಇಡೀ ನಾವೆಯನ್ನು ಮುಂದಕ್ಕೆ ತಳ್ಳುವ ಆ ನಾವಿಕನ ಸಾಹಸ ಮೆಚ್ಚುವಂತದ್ದು.

ಅಂತೂ ಹಿನ್ನೀರು ದಾಟಿದ ಮೇಲೆ ಕುರುಚಲು ಕಾಡಿನಿಂದ ಕೂಡಿದ ಹಸಿರು ಪ್ರದೇಶ ಶುರುವಾಯಿತು. ಸುಮಾರು ಒಂದು ಕಿಮೀ ದೂರ ಕ್ರಮಿಸಿದ ಮೇಲೆ ಪಾವಿಂಕರ್ವ ಬೀಚ್ ಗೆ ತಲುಪಿದೆವು. ಅಬ್ಬಾ! ಅದೆಷ್ಟು ಅನಂತ ಅಬ್ಧಿ ಈ ಅರಬ್ಬಿ. ಈ ಕಡಲ ತಡಿಯಲಿ ಎಲ್ಲರೂ ಬಂದು ನಿಂತೆವು. ಇಲ್ಲಿಂದ ನಮ್ಮ ಅಸಲಿ ಚಾರಣ ಶುರು. ಇದು ಕಡಲ ಕಿನಾರೆಯಂಚಲೆ ಸಾಗುವ ಚಾರಣ. ಈ ಪಾವಿಂಕರ್ವ ಕಿನಾರೆಯಲ್ಲಿ ನಿಂತು ಅನಂತ ಸಮುದ್ರದೆಡೆಗೆ ಕಣ್ಣು ಹಾಯಿಸಿದಾಗ ನೀಲಿ ಸಮುದ್ರಕ್ಕೆ ದೃಷ್ಟಿ ಬೊಟ್ಟು ಇಟ್ಟಂತೆ ಅಲ್ಲೊಂದು ಸಣ್ಣ ದ್ವೀಪ ಕಾಣುತ್ತದೆ. ಅದರ ಹೆಸರು ಬಸವರಾಜ ದುರ್ಗಾ ಐಸ್ಲ್ಯಾಂಡ್. ಇಲ್ಲಿ ಕೋಟೆ ಇದೆ ಅಂತ ಸ್ಥಳಿಯರು ಹೇಳಿದರು. ಆದರೆ ನಾವೇನು ಅಲ್ಲಿಗೆ ಹೋಗಲು ಸಾಹಸ ಮಾಡಲಿಲ್ಲ. ಈಗ ಇಡೀ ಕಡಲೇ ಬಂದು ಕಾಲ ಕೆಳಗಿನ ಮರಳನ್ನು ಸರಸಿ ಸರಸವಾಡುತಿತ್ತು. ಎಲ್ಲರಿಗೂ ಆಯಾಸವಾಗದಿರಲೆಂದು ಕಿತ್ತಳೆ ಕೊಟ್ಟರು ಟೀಂ ಲೀಡರ್. ಕಾಡು ನಾಡು ಸುತ್ತುತ್ತಿದ್ದ ನಮಗೆ ಈ ಕಡಲ ಕಿನಾರೆ ಚಾರಣ ಹೊಸತಾಗಿತ್ತು. ಇಲ್ಲಿಂದ ಕರಾವಳಿ ಕಿನಾರೆಯೆಡೆಗೆ ನಮ್ಮ ಪಯಣ ಸಾಗಿತು. ಆಗಷ್ಟೆ ದಣಿದು ಬಂದು ನಿಂತ ಹಡಗುಗಳು ವಿಶ್ರಾಂತಿ ಪಡೆಯುತ್ತಾ ಮರಳಿಗೆ ಬೆನ್ನು ಆನಿಸಿ ಮಲಗಿದ್ದವು. ಒಂದಷ್ಟು ಹಡಗುಗಳು ತಿಂಗಳಾನುಗಟ್ಟಲೆ ಕಡಲ ಸಹವಾಸವೆ ಬೇಡವೆಂಬಷ್ಟು ಬೇಜಾರಿನಲ್ಲಿ ಹೊಟ್ಟೆ ಕೆಳಮಾಡಿ ಮಲಗಿ ಗಾಳಿಗೆ ಬೀಸಿ ಬರುವ ಮರಳಿನಲ್ಲಿ ಹೂತು ಹೋಗಿದ್ದವು. ಮತ್ತೊಂದಿಷ್ಟು ಇನ್ನೇನು ನಮ್ಮ ಪಯಣ ಸದ್ಯದಲ್ಲೆ ಶುರುವಾಗುತ್ತದೆ ಎಂಬ ಉತ್ಸಾಹದಲ್ಲಿ ತಮ್ಮ ಪತಾಕೆಯನ್ನು ಪೂರ್ತಿಯಾಗಿ ರಾರಾಜಿಕೊಂಡು ತನ್ನ ಒಡೆಯ ನಾವಿಕನಿಗೆ ಕಾದು ನಿಂತಿದ್ದವು. ಹೀಗೆ ಎಲ್ಲವನ್ನು ಅವಲೋಕಿಸಿಕೊಂಡು ಸಾಗುತ್ತಾ ಸಿಂಹಾವಲೋಕನದಂತೆ ತಿರುಗಿ ನೋಡಿದರೆ ನಮ್ಮ ಹೆಜ್ಜೆ ಗುರುತುಗಳನ್ನು ಕಡಲ ಅಲೆಗಳು ಅಪ್ಪಳಿಸಿ ಅಳಿಸಿಹಾಕಿ ಹೊಸ ಹೆಜ್ಜೆಯ ಗುರುತಿಗೆ ಆಕ್ರಮಣ ಮಾಡಲು ಹಾತೊರೆಯುತ್ತಿದ್ದವು. ಎಡಕ್ಕೆ ಕಡಲು ಬಲಕ್ಕೆ ಒಂದಷ್ಟು ಮರಗಳ ದಟ್ಟ ಕಾಡು‌. ಹೆಜ್ಜೆ ಹಾಕುತ್ತಿರುವುದು ಕರಾವಳಿ ಕಿನಾರೆ ದಾಟಿ ಬಂದ ಸರಸ್ವತಿ ಬೀಚ್‌ನಲ್ಲಿ. ಅದ್ಯಾಕೆ ಈ ಹೆಸರುಗಳು ಇಟ್ಟರೊ ಗೊತ್ತಿಲ್ಲ. ಎಲ್ಲಿಂದ ಎಲ್ಲಿಯವರೆಗೆ ಇದರ ಹೆಸರು ಎನ್ನುವಷ್ಟು ಅಳತೆ ಮಾಡಲು ಸಹ ನಿಖರತೆ ಸಿಗುವುದಿಲ್ಲ ಅಷ್ಟೊಂದು ಅಂಟಿಕೊಂಡೆ ಇರುವಂತ ಕಡಲ ತಡಿ ಇದು. ಅಲೆ ಬಿಟ್ಟು ಹೋದ ಬುರುಗಿನ ಗುಳ್ಳೆಗಳನ್ನು ಒಡೆಯುತ್ತಲೆ ಮುಂದಿನ ಹೆಜ್ಜೆ ಕಿತ್ತಿಡುವಾಗ ಅಡ್ಡ ಬಂದ ಅಲೆಗೆ ಎಡುವುತ್ತಲೆ ಸಾಗಿದಾಗ ನಾವೀಗ ಇರುವುದು ಬ್ರಹ್ಮ ಬೀಚ್ ನಲ್ಲಿ ಅಂತ ಗೂಗಲ್ ಮ್ಯಾಪ್ ತೋರಿಸುತ್ತಿತ್ತು. ಬ್ರಹ್ಮ ಬೀಚ್ ನ ತುದಿಗೆ ಬಂದು ತಲುಪಿದಾಗ ಮುಂದೆ ಬೀಚ್ ಇಲ್ಲ ದೊಡ್ಡ ದೊಡ್ಡ ಕಲ್ಲು ಬಂಡೆ ಎದುರಿಗೆ ಹೊರ್ಬಾಗ್ ಬೆಟ್ಟ. ಒಂದಷ್ಟು ಹೊತ್ತು ಇಲ್ಲಿ ಕಾಲಕಳೆದು ಕಿತ್ತಳೆ ತಿಂದು ದಣಿವಾರಿಸಿಕೊಂಡು ಪೋಟೊ ಗೆ ಪೋಸು ಕೊಟ್ಟೆವು.

ಮುಂದಿನ ದಾರಿ? ಈಗ ಬೆಟ್ಟ ಹತ್ತಬೇಕು. ಈ ಹೊರ್ಬಾಗ್ ಬೆಟ್ಟ ಹತ್ತಲು ಇಕ್ಕಲು ಕಲ್ಲುಗಳ ನಡುವೆ ಪೊದೆಗಳನ್ನು ಸರಿಸುತ್ತಾ ದಾರಿ ಹುಡುಕಿಕೊಂಡು ಹತ್ತಬೇಕು. ಅಂತೂ ಬೆಟ್ಟದ ಮೇಲ್ಭಾಗವನ್ನು ತಲುಪಿದ್ದಾಯಿತು. ಈಗ ಕಲ್ಲು ಕಣಿವೆ ಶುರುವಾದಂತೆ ಅನ್ನಿಸಿತು. ಕರಿ ಕಲ್ಲಿಗೆ ಅಪ್ಪಳಿಸುವ ದೊಡ್ಡ ದೊಡ್ಡ ಬಿಳಿ ಅಲೆಗಳು ಹೊರಡಿಸುವ ಶಬ್ದವನ್ನು ಶಾಂತ ವಾತಾವರಣ ಇಮ್ಮಡಿಸಿ ಕೊಡುತ್ತಿತ್ತು. ಈಗ ಬೆಟ್ಟ ಇಳಿದು ಕೊಂಡರು ತಡಿಗೆ ಹೋಗಲು ಇಕ್ಕಟ್ಟಾದ ದಾರಿಯೊಂದು ಕಾಣಿಸಿತು. ಈಗ ಮಣ್ಣಿನಿಂದ ಮರಳಿಗೆ ಮರಳಿದೆವು. ಅಲ್ಲೊಂದು ತೋಟವಿತ್ತು. ಅಲ್ಲೆ ಕೂತು ಸ್ವಲ್ಪ ಹೊತ್ತು ದಣಿವಾರಿಸಿಕೊಂಡೆವು. ಅಲ್ಲೊಂದು ಬಾವಿಯೂ ಇತ್ತು. ಸಿಹಿ ನೀರಿನ ಆಕರವೂ ಇತ್ತು. ತೋಟದ ಮಾಲಿಕ ನಮಗೆಲ್ಲ ಆತಿಥ್ಯವನ್ನು ನೀಡಿದರು. ಇದು ರಾಮನಗಿಂಡಿ ಬೀಚ್. ಇಲ್ಲಿ ತುಂಬಾ ಹೊತ್ತು ಕೂತೆವು. ಹೊಟ್ಟೆ ಚುರುಗುಟ್ಟುತ್ತಿತ್ತು. ಮೊಸರು ಶೇಂಗಾ ಚಟ್ನಿ ಚಪಾತಿಯನ್ನು ನಮ್ಮ ಲೀಡರ್ ಹಂಚಿದರು. ತಿಂದು ಹೊಟ್ಟೆ ತಣ್ಣಗಾಗಿಸಿಕೊಂಡು ಈಗ ಇಲ್ಲಿಂದ ಹೆಜ್ಜೆ ಕಿತ್ತಿಟ್ಟೆವು. ಕಡಲ ಅಲೆಗಳ ಅಬ್ಬರವನ್ನು ನಿಯಂತ್ರಿಸಲೆಂದೆ ಗಟ್ಟಿ ಕಲ್ಲುಗಳ ಗೊಂಚಲನ್ನೆ ತನ್ನ ಕಿನಾರೆಯಂಚಿಗೆ ಹಾಕಿಕೊಂಡಂತಿದೆ. ಇಡೀ ರಾಮನಗಿಂಡಿ ಬೀಚ್ ದಾಟಿ ಶಿವ ಬೀಚ್ ತಲುಪುವವರೆಗೂ ಉತ್ಸಾಹ ಇಮ್ಮಡಿಸುತ್ತಿತ್ತು ಯಾಕಂದ್ರೆ ಆಗಷ್ಟೆ ಹೊಟ್ಟೆ ತನ್ನ ಒಡಲನ್ನು ತುಂಬಿಕೊಂಡು ಶಾಂತವಾಗಿತ್ತು. ಇಡೀ ಶಿವ ಬೀಚ್ ಮಣ್ಣು ಮಿಶ್ರಿತ ಮರಳಿನಿಂದ ಕೂಡಿದ್ದು ಇದೊಂತರ ಅದ್ಭುತವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿದೆ. ಎಡಕ್ಕೆ ಕಡಲು ಎದುರಿಗೆ ಕಲ್ಲು ಬೆಟ್ಟ ಬಲಕ್ಕೆ ಹಸಿರು ಕಾಡು. ಕಡಲ ನಾದ ಬಿಟ್ಟರೆ ಬೇರಾವುದೆ ಒಂದೆ ಒಂದು ಸದ್ದೂ ಸಹ ಬಾರದಷ್ಟು ನಿಶ್ಚಿಂತ ವಾತಾವರಣ ನಮ್ಮನ್ನು ಏಕಧ್ಯಾನಸ್ಥವಾಗಿ ಸಾಗಲು ಅನುವು ಮಾಡಿಕೊಡುತ್ತದೆ.

ಶಿವ ಬೀಚ್ ಎದುರಿಗಿರುವ ಕಡಲನ್ನೆ ಕಣ್ಗಳಲ್ಲಿ ತುಂಬಿಕೊಳ್ಳುತ್ತಾ ಈಗ ಬೆಟ್ಟಕ್ಕೆ ಲಗ್ಗೆ ಇಟ್ಟೆವು. ಇಡೀ ಬೆಟ್ಟ ಕಾಡಿನಿಂದ ಆವೃತವಾಗಿತ್ತು. ಹೆಸರೂ ಗೊತ್ತಿಲ್ಲದ ಅನೇಕ ವಿವಿಧ ಜಾತಿಯ ಮರಗಳನ್ನು ನಾನು ನೋಡಿದ್ದೂ ಸಹ ಇಲ್ಲಿಯೆ ಎಂಬಷ್ಟು ಹೊಸತನ ಒಂದು ಬೀಸುತ್ತಿತ್ತು. ಎತ್ತರೆತ್ತರದ ಮರಗಳ ಬುಡದಲ್ಲಿ ಎದೆಯೆತ್ತರದ ಪೊದೆಯ ಗೊಂಚಲು. ಹುಡುಕಿ ಹೊರಟ ಕಾಲು ದಾರಿ ಅಸ್ಪಷ್ಟತೆ ನಮ್ಮನ್ನು ದಿಕ್ಕು ತಪ್ಪಿಸುತ್ತದೆ ಎನ್ನುವ ಗುಮಾನಿಯೊಂದಿಗೆ ಹೆಜ್ಜೆ ಹಾಕುತ್ತಲೆ ಮತ್ತದೆ ಅರಬ್ಬಿ ಸಮುದ್ರ ಅಲೆಗಳ ಸದ್ದು ಕೇಳಿಸತೊಡಗಿತು. ಈಗ ಬೆಟ್ಟ ಇಳಿಯುವುದಿತ್ತು. ಬೆಟ್ಟ ಇಳಿದು ಉಸುಕಿನ ಧರಾತಲಕ್ಕೆ ಕಾಲಿಟ್ಟಾಗ ಧಾರೇಶ್ವರ ಬೀಚ್ ಲಿ ನಮ್ಮ ಪಯಣ ಶುರುವಾಗಿತ್ತು. ಅತಿ ಉದ್ದನೆಯ ಅಬ್ಧಿ ತಟದಲ್ಲಿ ಕಡಲ ಬೇಟೆಗಾರರನ್ನು ಭೇಟಿಯಾಗುತ್ತಾ ಅವರ ಬದುಕಿನ ಬವಣೆಗಳನ್ನೆಲ್ಲಾ ಹರವಿಕೊಂಡು ಇಡೀ ಕಡಲ ಜೀವಿಗಳ ಕಣ್ಣೀರಿನ ಹೊಳೆಯನ್ನೆ ಎಡವಿಕೊಂಡು ಹೆಜ್ಜೆ ಹಾಕುತ್ತಾ ಹಂದಿಗೋಣ ಬೀಚ್ ತಲುಪಿದೆವು. ಇಲ್ಲಿ ಎಡಕ್ಕೆ ಎತ್ತರೆತ್ತರದ ಮರಗಳು ಮತ್ತು ಅವುಗಳು ಉದುರಿಸಿದ ಒಣಗಿದೆಲೆಗಳು ಮತ್ತು ಇಡೀ ಬೀಚ್ ನಡುವೆ ಇರುವ ಒಂದೆ ಒಂದು ಹೊಟೆಲ್ ಕಮ್ ಸಣ್ಣ ಹೋಮ್ ಸ್ಟೇ ಒಂದು ಅತಿ ಚೆಂದವಾಗಿ ಕಾಣುತ್ತಿತ್ತು. ಅದರ ವಿನ್ಯಾಸ ಪೂರ್ತಿ ಮರದ ಕಟ್ಟಿಗೆಯಿಂದ ಮಾಡಲ್ಪಟ್ಟು ಮೇಲೆ ಹೆಂಚು ಹಾಕಿದ ಮಾಳಿಗೆಯಿಂದ ಸುಸಜ್ಜಿತಗೊಳಿಸಲಾಗಿತ್ತು. ಅತಿಯಾದ ಬಯಲು ಹೊಂದಿರುವ ಬೀಚ್ ಏರಿಯಾ ಶುರುವಾಯಾತು. ಆಗಾಗ ಸಿಗುವ ಕಪ್ಪೆ ಚಿಪ್ಪುಗಳು ವಿಧವಿಧವಾದ ಕಡಲ ಕಲ್ಲುಗಳು ಅಲ್ಲೊಬ್ಬ ಇಲ್ಲೊಬ್ಬ ಸಿಗುವ ಕೂಡಲೇ ಬೇಟೆಗಾರರು ತಟಸ್ಥವಾಗಿ ನಿಂತ ಶರಧಿ ನಾವೆಗಳು ಆಗಷ್ಟೆ ದಡ ತಾಕಿದ ಅಲೆಗಳು ಎಲ್ಲವೂ ನಮ್ಮ ನಡಿಗೆಗೆ ಹುಮ್ಮಸ್ಸು ತುಂಬಿಕೊಡುತ್ತಿದ್ದವು. ಈಗ ಅಳ್ವೆಕೊಡಿ ಬೀಚ್ ನಲ್ಲಿ ನಮ್ಮ ಚಾರಣ ನಡೆಯುತ್ತಿತ್ತು. ಅಳ್ವೆಕೊಡಿ ಬೀಚ್ ದಿಂದ ಅಳ್ವೆದಂಡೆ ಬೀಚ್ ವರೆಗೂ ಇರುವ ಇಡೀ ಕಡಲ ಕಿನಾರೆಯನ್ನು ನಾನೊಬ್ಬನೆ ಹೆಜ್ಜೆ ಹಾಕಿದೆ. ಎಲ್ಲರೂ ಹಿಂದೆ ಮುಂದೆ ಎಂದು ಚದುರಿಬಿಟ್ಟಿದ್ದರು. ಸೌಮ್ಯಾ ಸಂಜೆ ಐದರ ಆಸುಪಾಸಾಗಿತ್ತು. ನೇಸರ ಇಡೀ ಶರಧಿಯ ಒಳಹೊಕ್ಕು ತಂಪುಗೊಳ್ಳಲು ಹಪಾಹಪಿಸುತ್ತಿದ್ದ. ನಾನು ಹಾಕಿದ ಹೆಜ್ಜೆಗಳನ್ನೆಲ್ಲಾ ಅಳಿಸಿಹಾಕಿ ಅಲೆಗಳು ಆಟವಾಡುತ್ತಿದ್ದವು. ಒಂದು ಸಂಪೂರ್ಣ ಶರಧಿಯ ಪರಿಪೂರ್ಣತೆಯನ್ನು ಇಡೀ ಏಕಾಂತ ಎದೆಗೆಳೆದುಕೊಂಡು ಅನುಭವಿಸುತ್ತಿತ್ತು. ಅನಂತ ಜೀವಿಗಳ ಕಣ್ಣೀರನ್ನೆ ಒಡಲೊಳಗಿಟ್ಟುಕೊಂಡು ಉಪ್ಪುನೀರನ್ನೆ ತುಂಬಿಕೊಂಡಿರುವ ಜಲನಿಧಿ ಎಂಬ ಕಣ್ಣ ಕಿನಾರೆಯಲ್ಲಿ ನಾಜೂಕು ನಡಿಗೆ ಭರದಿಂದ ಸಾಗಿತ್ತು. ಅಳ್ವೆದಂಡೆ ಬೀಚ್ ತಲುಪಿದಾಗ ಸಂಜೆ ಆರು. ಇಲ್ಲಿ ಕಡಲ ಹಿನ್ನೀರು ಊರ ಸಿಹಿ ನೀರು ಒಟ್ಟಾಗಿ ಒಂದಾಗುವ ಸಂಗಮವಿದೆ. ದೊಡ್ಡ ದೊಡ್ಡ ಮೀನುಗಳು ನೋಡುಲು ಕಾಣಸಿಗುತ್ತವೆ. ಪಕ್ಕದ ಶಹರದಲ್ಲೆ ಮೀನು ಮಾರುಕಟ್ಟೆ ಇದ್ದುದ್ದರಿಂದ ಇಲ್ಲಿ ಕಡಲ ಬೇಟೆಗಾರರ ಸಂಖ್ಯೆಯೂ ಮತ್ತು ಸಣ್ಣ ಸಣ್ಣ ನಾವೆಗಳು ಹೆಚ್ಚಾಗಿವೆ. ಈ ಸಣ್ಣ ಹಿನ್ನೀರ ತೊಂದರೆಯನ್ನೂ ಈಜಿ ದಾಟಬಹುದು. ಇಲ್ಲವೆ ಎದೆ ಎತ್ತರದ ನೀರಲ್ಲಿ ನಡೆದೂ ಸಾಗಬಹುದು ಆದರೆ ಲಗೇಜ್ ಕ್ಯಾಮೆರಾ ಇದ್ದಾಗ ರಿಸ್ಕ್ ಜಾಸ್ತಿ. ಹಾಗಾಗಿ ಇವರು ಐದು ಹತ್ತು ರೂಪಾಯಿಯಲ್ಲಿ ಈ ಕಡೆಯಿಂದ ಆ ಕಡೆಗೆ ಒಂದು ನಿಮಿಷದಲ್ಲಿ ಬಿಟ್ಟು ಬಿಡುತ್ತಾರೆ. ನಾವೂ ಸಹ ಅನುಭವಕ್ಕಿರಲೆಂದು ಅಂತಾರೆ ಒಂದು ನಾವೆಯಲ್ಲಿ ಹತ್ತಿ ಇಳಿದಾಯಿತು. ಈಗ ಶುರುವಾಗಿದ್ದು ಕುಮಟಾ ಬೀಚ್. ಇದು ಕುಮಟಾಗೆ ಹತ್ತಿರವಿರುವುದರಿಂದ ಜನಜಂಗುಳಿ ಜಾಸ್ತಿ ಅದರಲ್ಲೂ ಸಂಜೆಯಾದರೆ ಸಾಕು ಸೂರ್ಯಾಸ್ತ ನೋಡಲು ಜನ ಓಡೋಡಿ ಬರುತ್ತಾರೆ. ಇಡೀ ಬೀಚ್‌ನಲ್ಲಿ ನಾವು ಸಾಕೆನಿಸುವಷ್ಟು ಐಡಿಯಾಗಳನ್ನು ನೋಡಬಹುದು. ಅವುಗಳ ಚಲನವಲನ ಅವುಗಳ ಆಹಾರ ಸಂಗ್ರಹಣೆ ಮತ್ತು ಆಹಾರ ಸಂಪಾದನೆ ಜೊತೆ ಜೊತೆಗೆ ಜೀವ ರಕ್ಷಣೆ ಮಾಡಿಕೊಳ್ಳುವ ಪರಿ ತುಂಬಾ ಅಚ್ಚರಿ ಮೂಡಿಸುವಂತದ್ದು. ಇವೆಲ್ಲವನ್ನೂ ನೋಡುತ್ತಲೆ ಇಡೀ ಸೂರ್ಯಾಸ್ತ ನೋಡಿ ವನ್ನಳ್ಳಿ ಬೀಚ್‌ನ ಕಲ್ಲು ಬೆಟ್ಟವೇರಿ ಎಲ್ಲರೂ ಒಟ್ಟಾಗುವವರೆಗೂ ಕಾದು ಕುಳಿತು ಹರಟೆ ಹೊಡೆದಾಗ ಸಂಜೆ ಏಳಾಗಿತ್ತು.

ಇಲ್ಲಿಂದ ನಮ್ಮ ಟೀಂ ಲೀಡರ್ ರಾತ್ರಿ ತಂಗಲು ವ್ಯವಸ್ಥೆ ಮಾಡಿದ್ದ ಕಡಲ ತಡಿಯ ಪರ್ಣಕುಟೀರ ಎಂಬ ಗೆಸ್ಟ್ ಹೌಸ್‌ಗೆ ಕರೆದುಕೊಂಡು ಹೋದರು. ಪರ್ಣಕುಟೀರ ತಲುಪಿದಾಗ ರಾತ್ರಿ ಒಂಬತ್ತರ ಆಸುಪಾಸು. ಒಂದು ಬೆಚ್ಚನೆಯ ಸ್ನಾನ ಮಾಡಿ, ಸಣ್ಣ ಸ್ನ್ಯಾಕ್ಸ್ ದೊಂದಿಗೆ ಫೈರ್ ಕ್ಯಾಂಪ್ ಲಿ ಜೊತೆಯಾದೆ. ಸಾಕೆನಿಸುವಷ್ಟು ಹೊತ್ತು ಚಳಿ ಕಾಯಿಸಿಕೊಂಡು ಭರ್ತಿ ಊಟ ಮಾಡಿ ಕತ್ತಲ ರಾತ್ರಿಯ ಕಡಲ ಕಿನಾರೆಯಲ್ಲಿ ಬೆಳದಿಂಗಳ ಚಂದಿರನ ನೋಡುತ್ತಾ ಅಲೆಗಳು ಅಬ್ಬರದ ಸದ್ದಿನಲ್ಲೆ ಬೀಚ್ ಪಕ್ಕದಲ್ಲೆ ಹಾಕಿದ ಟೆಂಟ್‌ನಲ್ಲಿ ನಿದ್ರೆಹೋದೆ.

ಬೆಳಿಗ್ಗೆ ಎದ್ದಾಗ ಬೆಳಗಿನ ಜಾವ ಐದೂವರೆ ಆಗಿತ್ತು. ಪರ್ಣಕುಟೀರದ ಎದುರಿಗಿನ ನಿರ್ವಾಣ ಬೀಚ್‌ನಲ್ಲಿ ಹಾಕಿದ್ದ ತಾತ್ಕಾಲಿಕ ಟೆಂಟ್ ಒಳಗಡೆ ಗಡತ್ತಾದ ನಿದ್ದೆಯ ತುಕುಡಿಯನ್ನು ಬಿಟ್ಟು ಕಣ್ಣುಜ್ಜಿಕೊಂಡು ಹೊರಗೆ ಬಂದಾಗ ಅಲೆಗಳು ಅಬ್ಬರದಿಂದ ಭೋರ್ಗರೆಯುತ್ತಿದ್ದವು. ಚಂದಿರ ತನ್ನ ಇಡೀ ಬೆಳದಿಂಗಳನ್ನು ಬಳಿದು ಬಳಿದು ಅಬ್ಬರಿಸುವ ಅಲೆಗಳ ಮೈಗೆ ಸಾರುತ್ತಿದ್ದನು‌. ಕಡಲಿಗೆ ಮುಖ ಮಾಡಿ ಕೂತವನ ಕಾಲಿಗೆ ಅಲೆಗಳು ತಾಕಿ ತಾಕಿ ಹೋಗುತ್ತಿದ್ದವು. ಶಂಖ, ಕಪ್ಪೆ ಚಿಪ್ಪು, ರಂಗೋಲಿ ಕಲ್ಲುಗಳು, ವಿಧವಿಧವಾದ ರಂಗುರಂಗಿನ ಕಲ್ಲುಗಳು, ನಕ್ಷತ್ರ ಮೀನುಗಳು ಹೀಗೆ ಏನೇನೊ ಶರಧಿ ತನ್ನ ದಡದಲ್ಲಿ ಮಲಗಿಸಿಕೊಂಡಿತ್ತು. ಒಂದೊಂದೆ ಹೆಕ್ಕುತ್ತಾ ಬೆಳಗಿನ ವಾಕ್ ಮುಗಿಸಿ ಸ್ನಾನ ಮಾಡುವಷ್ಟರಲ್ಲೆ ತಿಂಡಿ ಸಿದ್ಧವಾಗಿತ್ತು. ಟಿಫಿನ್ ನಂತರ ಮತ್ತದೆ ಬ್ಯಾಗು ಕಿತ್ತಳೆ ನೀರಿನ ಬಾಟಲ್ ದೊಂದಿಗೆ ಪರ್ಣಕುಟೀರದ ನಿರ್ವಾಣ ಬೀಚ್ನಿಂದ ನಮ್ಮ ನಡಿಗೆ ಶುರುವಾಯಿತು.

ಕಡಲ ತಡಿಯ ಉದ್ದಕ್ಕೂ ಅಲ್ಲಲ್ಲಿ ಸಿಗುವ ಹೊಟೆಲ್‌ಗಳು ಕೆಫೆಗಳು ಕಡಲ ಪ್ರಿಯರಿಗೆ ಆಯಾಸವನ್ನು ತಣಿಸುತ್ತಿದ್ದವು. ಕಿರ್ಬೆಲೆ ಮತ್ತು ಕಾಗಲ್ ಕೋಟೆ ಇರುವ ದೊಡ್ಡ ಬೆಟ್ಟವೊಂದು ಕೂಡಲೇ ತಡಿಗೆ ಮೈಮುರಿದುಕೊಂಡು ಮಲಗಿತ್ತು. ಈಗ ಆ ಇಡೀ ಬೆಟ್ಟದ ಮೈಮೇಲೆ ಓಡಾಡಿ ಕಡಲ ಅಲೆ ಹುಡಕಬೇಕಿತ್ತು. ಈಗ ಸಮುದ್ರಕ್ಕೆ ಬೆನ್ನು ಮಾಡಿ ಹಸಿರು ಬೆಟ್ಟದ ಹಾದಿ ಹಿಡಿದು ಹೊರಟೆವು. ಅಘನಾಶಿನಿ - ನಿರ್ವಾಣ ಕೂಡಲೇ ತಡಯ ಚಾರಣ ಹಾದಿ ಅಂತ ಅದರ ಹೆಸರು. ಬೆಟ್ಟದ ಬೈತಲೆ ಆದಂತೆ ಆಗಿತ್ತು ಆ ಕಾಲುದಾರಿ. ಎದೆ ಎತ್ತರದ ಹುಲ್ಲು ಆಕಾಶದೆತ್ತರ ಕಾಣುವ ಮರಗಳ ನಡುವೆ ಹೆಜ್ಜೆ ಕಿತ್ತಿ ಗುತ್ತಾ ಬೆಟ್ಟದಲ್ಲಿ ದಾರಿಯೂ ತಪ್ಪಿದ್ದಾಗಿತ್ತು. ಮತ್ಯಾವುದೊ ಜನಧ್ವನಿಗೆ ನಿರ್ಜನ ಕಾಡಿನಲ್ಲಿ ತರಂಗ ಬೆನ್ನು ಹತ್ತಿ ಸದ್ದು ಬಂದ ಕಡೆಗೆ ವಾಲಿ ಬೆಟ್ಟ ಇಳಿಯಲಾರಂಭಿಸಿದೆವು. ಕೆಳಗೆ ಒಂದು ಮನೆ ಕಾಣಿಸುತು. ದುಬು ದುಂಡು ಅಂತ ಬೆಟ್ಟ ಇಳಿದು ಆ ಮನೆಗೆ ಲಗ್ಗೆ ಇಟ್ಟಿದ್ದೆ ತಡ ಅಲ್ಲಿದ್ದ ನಾಯಿ ಒಂದೆ ಸಮನೆ ಬೊಗಳಲು ಶುರುವಿಟ್ಟುಕೊಂಡಿತು. ಆ ಮನೆಯವವರೆ ಬೀಚ್‌ಗೆ ದಾರಿ ತೋರಿಸಿದರು. ಅಲ್ಲಿಂದ ಹೆವನ್ ಬೀಚ್‌ನ ಅಂಗಳಕ್ಕೆ ಬಂದೆವು. ತುಂಬಾ ಹೊತ್ತು ಇಲ್ಲಿಯೆ ಕಾಲ ಕಳೆದೆವು. ಯಾಕೆಂದರೆ ಮುಂದೆ ಯಾವ ಕಡೆ ಹೋಗಬೇಕು ದಾರಿ ಗೊತ್ತಿರಲಿಲ್ಲ.

ಆ ಕಡೆ ಬೆಟ್ಟ ದಾಟಿ ಅಗಸ್ತ್ಯ ಬೀಚ್ ಮತ್ತು ಗುಹೆಗಳು ಇದ್ದವಂತೆ.. ಆ ದಾರಿ ಹಿಡಿದು ಹೊರಟಿದ್ದೆವು. ಆದರೆ ಕಾಡ ಹಾದಿಯೊಳಗೆ ಹೇಗ್ ಹೇಗೊ ಹೋಗಿ ಅಘನಾಶಿನಿ ಮತ್ಸ್ಯ ಯಕ್ಷಿಣಿ ಹೊಳೆಬೀರ ಗುಡಿಯ ಹತ್ತಿರ ಇರುವ ಯಾವುದು ಮನೆಯ ನಾಯಿಯ ಎದುರು ನಿಂತು ಬಿಟ್ಟಿದ್ದೆ. ಈಗ ಅದು ಗುರಾಯಿಸುವ ನೋಟಕ್ಕೆ ಅರ್ಧ ತಣ್ಣಗೆ ಆಗಿದ್ದೆ. ಜೋರು ಧ್ವನಿ ಮಾಡಿ ಮನೆಯವರಿಗೆ ಕರೆಯುವಂತೆಯೂ ಇಲ್ಲದಂತಾಗಿತ್ತು ನನ್ನ ಪರಿಸ್ಥಿತಿ. ಅದ್ಹೇಗೊ ಅಲ್ಲೊಂದು ಸಣ್ಣ ಹುಡುಗ ಬಂದು ಏ ಬೈರಾ ಬಾ ಲಾ ಇತ್ಲಾಗೆ ಅಂದ ನಾಯಿ ದಾರಿ ಮಾಡಿಕೊಟ್ಟಿತು. ಈಗ ಅಲ್ಲಲ್ಲಿ ಇರುವಂತ ಮನೆಗಳ ಆರಂಕಣಗಳ ಅಂಗಗಳನ್ನು ತುಳಿದುಕೊಂಡು ಅಘನಾಶಿನಿ ನದಿ ಶರಧಿಯನ್ನು ಸೇರುವಂತ ಕಡಲ ತೀರದ ಅಘನಾಶಿನಿ ತಟದಲ್ಲಿ ಹೆಜ್ಜೆ ಹಾಕುತ್ತಿದ್ದವು. ಅದೊಂದು ಅದ್ಭುತವಾದ ಸಂಗಮ ದೃಶ್ಯ. ಒಂದು ಕಡೆ ಸಿಹಿ ನೀರಿನ ಭೋರ್ಗರೆತ. ಇನ್ನೊಂದು ಕಡೆ ಅನಂತ ಕಡಲಿನ ಚರಾಚರಗಳೆಲ್ಲವುಗಳ ದುಃಖದ ಕಣ್ಣೀರಿನ ಶರಧಿ. ನಡು ಮಧ್ಯಾಹ್ನದ ನಡಿಗೆ ಜೋರಾಯ್ತು. ಮಟ ಮಟ ಮಧ್ಯಾಹ್ನದ ಹೊತ್ತಿಗೆಲ್ಲಾ ಅಘನಾಶಿನಿ ಸನ್ ಸೆಟ್ ಪಾಯಿಂಟ್ ತಲುಪಿದ್ದೆವು. ಅಲ್ಲಿಂದ ನಮ್ಮ ಇಡೀ ಟೀಮ್ ಬಂದು ಮೇಲೆ ಅಘನಾಶಿನಿ ಜೆಟ್ಟಿ ಕಡೆಗೆ ಹೆಜ್ಜೆ ಹಾಕಿದೆವು.

ಅಘನಾಶಿನಿ ಜೆಟ್ಟಿ ಇದು ಒಂದು ಬಂದರು ಅನ್ನಬೇಕೊ ಇಲ್ಲ ನದಿ ದಾಟಿಸುವ ಹಡುಗಗಳ ತಂಗುದಾಣವೆನ್ನಬೇಕೊ ಗೊತ್ತಿಲ್ಲ. ದೊಡ್ಡ ದೊಡ್ಡ ಲಂಗರುಗಳು ಅಂಗಾತ ಬಿದ್ದು ಮೈ ಒಣಗಿಸಿಕೊಳ್ಳುತ್ತಿದ್ದವು. ಜೆಟ್ಟಿಯಲ್ಲಿ ದೊಡ್ಡದೊಂದು ಹಡಗು ಬಂತು ಅದರಲ್ಲಿ ನಮ್ಮ ಇಡೀ ಟೀಮ್ ಕುಳಿತುಕೊಂಡೆವು. ಈಗ ಅಘನಾಶಿನಿ ಮೈಮೇಲೆ ನಮ್ಮ ತೇಲಾಟ ಶುರುವಾಯಿತು. ಇಡೀ ಸಿಹಿ ನೀರಿನ ಅಘನಾಶಿನಿ ಕಡಲೊಟ್ಟಿಗೆ ಬೆಸೆಯುವ ತವಕದಲ್ಲಿ ಹರಿಯುವ ಪರಿಪೂರ್ಣ ಸಂಗಮ ಸ್ಥಾನದಲ್ಲಿ ನಮ್ಮ ಹಡಗು ಓಲಾಡುತ್ತಲೆ ತೇಲಿಕೊಂಡು ಈ ಕಡೆಯಿಂದ ಆ ಡೆಂಗೆ ದಾಟಿಸುವಲ್ಲಿ ಯಶಸ್ವಿಯಾಯಿತು. ಈಗ ತದಡಿ ಮೀನು ಮಾರುಕಟ್ಟೆ ಅಷ್ಟೆ ಅಲ್ಲ ನೂರಾರು ಹಡಗು ತಂಗಿದ ಸಣ್ಣ ಬಂದರು ಗೆ ಬಂದು ನಿಂತಿದ್ದೆವು. ಲಂಗರಿಗೆ ಸರಪಳಿಯ ಕೊಕ್ಕೆಯನ್ನು ಸಿಕ್ಕಿಸಿ ಹಡಗನ್ನು ತಟಸ್ಥಗೊಳಿಸಿದ ಅಂಬಿಗ ಎಲ್ಲರೂ ಕಡೆ ತಲೆಗೈವತ್ತು ರೂಪಾಯಿ ಪಡೆದುಕೊಂಡು ನಮಗೆ ಇಳಿಸಿದ.

ಇಡೀ ಮೀನು ಮಾರುಕಟ್ಟೆಯ ದಟ್ಟ ವಾಸನೆ ಮೂಗಿಗೆ ಬಡಿಯುತ್ತಿತ್ತು. ನಮ್ಮ ಕಡೆ ಹೊಲದ ರಾಶಿ ಆರಿ ಹಾಕಿದಂತೆ ಅಲ್ಲಿ ಮೀನುಗಳ ರಾಶಿ ಹಾಕಿದ್ದರು. ನೂರಾರು ತರಹದ ಲಕ್ಷಾಂತರ ಮತ್ಸ್ಯ. ಮಿಲ್‌ಗಳಲ್ಲಿ ಬೇಳೆಯನ್ನು ಆರಲು ಹಾಕಿದಂತೆ ಇಡೀ ಮಾರುಕಟ್ಟೆಯ ಪ್ರಾಂಗಣಗಳು ಮೀನಿನಿಂದ ಆವೃತವಾಗಿದ್ದವು. ಈಗ ನಮ್ಮ ನಡಿಗೆ ಕಡಲ ತೀರದ ಕಲ್ಲುಗಳು ಮೇಲೆ. ಹೌದು ಅದು ಗಾಡ್ಸ್ ಓನ್ ಬೀಚ್. ಅಲ್ಲಿ ಮಾನವ ನಿರ್ಮಿತ ಕೃತಕ ಸಿಮೆಂಟ್ ಕಲ್ಲುಗಳನ್ನು ಕಡಲ ತಡಿಗೆ ಹಾಕಲಾಗಿದೆ. ಅಲೆಗಳನ್ನು ನಿಯಂತ್ರಿಸಲೆಂದು ಈ ಯೋಜನೆ ಹೂಡಲಾಗಿದೆ. ಅದರ ಪಕ್ಕದಲ್ಲೆ ರಸ್ತೆಯೂ ಮಾಡಲಾಗಿದ್ದು. ಇಡೀ ಕಡಲ ಕಿನಾರೆ ನೋಡಿಕೊಂಡು ಸಾಗಬಹುದಾಗಿದೆ. ಒಂದೊಂದು ಕಡೆ ಕಲ್ಲಿನ ಮೇಲೆಯೆ ಸಾಗಬೇಕು. ಚೆಂದದ ಅನುಭವ ಈ ಗಾಡ್ ಓನ್ಸ್ ಬೀಚ್ ನೀಡಿತು. ಅಲ್ಲಿಂದ ಶ್ರೀ ಬಂಟಕಲ್ ಬೀರದೇವ ಟೆಂಪಲ್ ಮತ್ತು ಶ್ರೀ ಅಳವಿ ಆಂಜನೇಯ ಟೆಂಪಲ್ ಮಧ್ಯೆ ಬಂದು ನಿಂತೆವು. ಹೊಟ್ಟೆ ಚುರುಗುಟ್ಟುತ್ತಿತ್ತು. ಹೊಟ್ಟೆಗೆ ಒಂದಷ್ಟು ಊಟ ಹಾಕಿ ಅಲ್ಲಿಂದ ಬರ್ಡ್ ವ್ಯೂವ್‌ಲಿ ನೋಡಿದಾಗ ನಾವೇ ನಡೆದು ಬಂದ ಅಘನಾಶಿನಿ ದಾಟಿ ಕಾಣುವ ಹೆವನ್ ಬೀಚ್ ಮತ್ತು ಅಗಸ್ತ್ಯರ ಬೀಚ್ ಹಾಗೂ ಆ ಬೆಟ್ಟ ಪರ್ವತಗಳು ಬಿಸಿಲು ಜಳದಲ್ಲಿ ತಣ್ಣಗೆ ಮಲಗಿದ್ದವು.

ಈಗ ಅಲ್ಲಿಂದ ನಾವು ಕಡಲ ತಡಿಗೆ ಅಂಟಿಕೊಂಡ ಅಗಲವಾದ ರಸ್ತೆಯಲ್ಲಿ ನಡೆಯತೊಡಗಿದೆವು. ಒಂದು ಕಡಲ ಹಿನ್ನೀರ ಸೇತುವೆ ದಾಟಿಕೊಂಡು ಬೆಳ್ಕನ ಬೀಚ್ ವ್ಯೂವ್ ಪಾಯಿಂಟ್ ತಲುಪಿದೆವು. ಅಲ್ಲಿಂದ ಬಲಕ್ಕೆ ಇರುವ ಪ್ಯಾರಡೈಸ್ ಬೀಚ್ ಚಾರಣ ಪಥ ಆರಿಸಿಕೊಂಡು ನಡೆಯತೊಡಗಿದೆವು. ಅದೊಂದು ಅದ್ಭುತವಾದ ಪಯಣ. ದಟ್ಟ ಕಾಡು ಹೊಕ್ಕೆವು. ಒಂದಲೆಯ ಶಬ್ಧವೂ ಇಲ್ಲ. ಎಲ್ಲಾ ಬರಿ ಎಲೆಯ ಸದ್ದೆ! ಅಲ್ಲಲ್ಲಿ ಹಾಕಿದ ಪಥ ಫಲಕಗಳನ್ನೆ ಫಾಲೊ ಮಾಡಿಕೊಂಡು ಪ್ಯಾರಡೈಸ್ ಬೀಚ್‌ನ ದೊಡ್ಡ ದೊಡ್ಡ ಕಲ್ಲುಗಳ ಮಧ್ಯೆ ಬಂದು ನಿಂತಿದ್ದೆವು. ಬೆಟ್ಟದಿಂದ ಇಳಿದು ಕಡಲ ಕಿನಾರೆ ನೋಡಿದೆವು. ದೊಡ್ಡ ದೊಡ್ಡ ಹಡಗು ದೂರದಲ್ಲಿ ನಿಂತಿದ್ದು ಕಾಣುತ್ತಿದ್ದವು. ಅಲ್ಲಿಂದ ಮತ್ತೆ ಬೆಟ್ಟ ಹತ್ತಿಕೊಂಡು ಸ್ಮಾಲ್ ಹೆಲ್ ಬೀಚ್ ನ ಭಯಂಕರ ದುರ್ಗಮ ಹಾದಿಯಲ್ಲಿ ನಡೆಯತೊಡಗಿದವು. ಕಾಡು ಬೆಟ್ಟ ಕಿನಾರೆ ಅಲೆಗಳು ಅಪ್ಪಳಿಸುವ ಸದ್ದು ಪರ್ವತ ಹಸಿರು ಹಸಿ ಎಲ್ಲಾನೂ ಮೇಳೈಸಿ ಒಟ್ಟಿಗೆ ನಮ್ಮ ಚಾರಣದ ಗಂಟುಬಿಗಿದಿದ್ದವು.

ಈಗ ಹಾಫ್ ಮೂನ್ ಬೀಚ್‌ನ ಪಥದಲ್ಲಿದ್ದೆವು. ಎರಡೂ ಕಡೆ ಬೆಟ್ಟದಿಂದ ಆವೃತವಾದ ನಡುಮಧ್ಯೆ ಸಣ್ಣ ಕಿನಾರೆ ಅರ್ಧ ಚಂದ್ರನಂತೆ ಗೋಚರಿಸುವ ಇದು ಅಲೆಗಳು ಅಪ್ಪಳಿಸಿ ಬಿಡುವ ಬುರುಗಿನಿಂದ ಶ್ವೇತ ಅಲೆಗಳನ್ನು ಒಡಲೊಳಗಿಳಿಸಿಕೊಂಡು ಗೋಚರಿಸುತ್ತದೆ. ಅಲ್ಲಲ್ಲಿ ಸಣ್ಣ ವ್ಯಾಪಾರ ಮಳಿಗೆಗಳಿಗೆ ಜಾಗೆ ಕೊಟ್ಟು ಅರ್ಧ ಚಂದ್ರ ಪೂರ್ತಿಯಾಗಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ತುಂಬಾ ಹೊತ್ತು ಇಲ್ಲೆ ಕಳೆದು ಅಲ್ಲಿಂದ ಮತ್ತೆ ಕಾಡು ಬೆಟ್ಟದ ಹಾದಿ ಹಿಡಿದೆವು. ದಟ್ಟ ಕಾಡಿನಲ್ಲಿ ಮಟ್ಟಸವಾದ ಒಂದು ದಾರಿಯೂ ಇಲ್ಲ. ಯಾವ ಕಡೆ ನೋಡಿದರೂ ಬರಿ ಹಸಿರು. ಜನ ಹೆಚ್ಚಾಗಿ ಓಡಾಡಿದ್ದರಿಂದ ಚಾರಣದ ಪಥ ಅಚ್ಚೊತ್ತಿದಂತಿತ್ತು. ಈಗ ನಮ್ಮ ಪಯಣ ಪ್ರಸಿದ್ಧ ಗೋಕರ್ಣದ ಓಂ ಬೀಚ್‌ಗೆ ದೌಡಾಯಿಸುತ್ತಿತ್ತು.

ವಿದೇಶಿಯರು ತಮ್ಮ ಮೋಜು ಮಸ್ತಿಗೆ ಆರಿಸಿಕೊಂಡಿರುವ ಜಾಗೆ ಈ ಗೋಕರ್ಣದ ಓಂ ಬೀಚ್. ಪ್ರವಾಸಕ್ಕೆ ಹೋದಾಗ ಕಾಣಸಿಗದ ನೂರೆಂಟು ದೃಶ್ಯಗಳು ಚಾರಣ ಮಾಡುವಾಗ ಹಸಿರುತಪ್ಪಲದ ನಡುವಲ್ಲಿ ಸಣ್ಣಗೆ ಸೇದಿ ಬಿಟ್ಟ ಹೊಗೆಯಲ್ಲಿ ಕಾಣಸಿಗುತ್ತದೆ. ಮಳಿಗೆಗಳು ಕೆಫೆಗಳು ಎಲ್ಲವೂ ಸಾಲುಸಾಲಾಗಿ ಕಾಣಸಿಗುತ್ತವೆ ಇಲ್ಲಿ. ಈಗ ನಮ್ಮ ಕಾಲುಗಳು ಓಂ ಬೀಚ್‌ನ ಬರ್ಡ್ ವ್ಯೂವ್ ಪಾಯಿಂಟ್‌ ಬಂದು ನಿಂತಿದ್ದವು. ಹಿಂದಿ ಓಂ ಅಕ್ಷರದ ಹೋಲಿಕೆ ಇರುವ ಈ ಬೀಚ್ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವೂ ಹೌದು. ಇಡೀ ಓಂ ಬೀಚ್ ತುಂಬೆಲ್ಲಾ ವಿದೇಶಿ ದೇಶಿಯರ ಮೋಜು ಮಸ್ತಿ ನೋಡುತ್ತಲೆ ನಾವು ಸ್ವಲ್ಪ ಹೊತ್ತು ನೀರಲ್ಲಿ ಆಟವಾಡಿದೆವು. ತುಂಬಾ ಹೊತ್ತು ಅಲ್ಲೆ ಕಳೆದು ಅಲ್ಲಿಂದ ಪ್ರೈವೇಟ್ ವಾಶ್ ರೂಮ್‌ಲಿ ಮತ್ತೊಮ್ಮೆ ಸ್ನಾನ ಮಾಡಿ ಅಲ್ಲಿಂದ ಆತ್ಮ ಲಿಂಗ ದರ್ಶನಕ್ಕೆ ಹೋದೆ.

ಗೋಕರ್ಣ ಇದರ ಇತಿಹಾಸ ನಿಮಗೆ ಎಲ್ಲೆಂದರಲ್ಲೆ ಹೇಗೆಂದರೆ ಹಾಗೆ ಸಿಕ್ಕೆ ಸಿಗುತ್ತದೆ. ಇಲ್ಲಿ ರಾವಣ ಶಿವನ ಆತ್ಮಲಿಂಗವನ್ನು ಗಣೇಶನ ಸಂಚಿಗೆ ಸಿಕ್ಕು ಪ್ರತಿಷ್ಠಾನ ಮಾಡಿದ. ಭಯಂಕರ ಶಿವಭಕ್ತರ ಸಾಲಲ್ಲಿ ನಿಲ್ಲುವ ರಾವಣ ಶಿವನ ಆತ್ಮಲಿಂಗವನ್ನೆ ಇಲ್ಲಿಯವರೆಗೆ ತಂದಿದ್ದು ಆಶ್ಚರ್ಯವೇ ಸರಿ. ಇಡೀ ದೇವಾಲಯ ಆತ್ಮಲಿಂಗ ಎಲ್ಲವೂ ನೋಡಿಯಾಯ್ತು. ಸರೊ ರಾತ್ರಿ ಒಂಬತ್ತಕ್ಕೆ ಬಸ್ ಸ್ಟಾಪ್ ಹತ್ತಿರ ನಮ್ಮ ಬಸ್ ಬಂತು. ಅಲ್ಲಿಂದ ಬಸ್ ಹತ್ತಿ ಮಲಗಿದ ನೆನಪು ಎಚ್ಚರಾದಾಗ ಬೆಳಗು ಬೆಂಗಳೂರಿಗೆ ರವಾನೆ ಮಾಡಿತ್ತು.

ಮೌನೇಶ ಕನಸುಗಾರ
mouneshkanasugara01@gmail.com

ಈ ಅಂಕಣದ ಹಿಂದಿನ ಬರೆಹಗಳು:
ಮೌನಕಣಿವೆಯ ದಟ್ಟ ಕಾನನದೊಳಗೆ...
ಸಾವನದುರ್ಗದ ನೆತ್ತಿಯ ಮೇಲೆ…
ಕುಮಾರಪರ್ವತದ ಚಾರಣ
ವಿಭೂತಿ ಜಲಪಾತದ ವೈಭವ
ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದು…
ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...