ಕನ್ನಡ ಬೌದ್ಧಸಾಹಿತ್ಯದ ಭಾಷಾಂತರಗಳ ಸ್ವರೂಪ ಹಾಗೂ ರಾಜರತ್ನಂ ಭಾಷಾಂತರಗಳು

Date: 17-05-2021

Location: ಬೆಂಗಳೂರು


‘ಕನ್ನಡದಲ್ಲಿ ಬೌದ್ಧಸಾಹಿತ್ಯದ ಬಗೆಗೆ ಸಣ್ಣ ಕುತೂಹಲ ಹುಟ್ಟಿಸುವ ಭಾಷಾಂತರಗಳು ಆಧುನಿಕ ಸಾಹಿತ್ಯಸಂದರ್ಭದಲ್ಲಿ ಬಂದಿವೆ’ ಎನ್ನುತ್ತಾರೆ ಲೇಖಕಿ ತಾರಿಣಿ ಶುಭದಾಯಿನಿ. ಭಾಷಾಂತರಗಳ ಮೂಲವನ್ನು ಶೋಧಿಸುತ್ತಾ ಬರೆಯುವ ಅವರ ‘ಅಕ್ಷರ ಸಖ್ಯ’ ಅಂಕಣದಲ್ಲಿ ಈ ಬಾರಿ ಕನ್ನಡದಲ್ಲಿನ ಬೌದ್ಧಸಾಹಿತ್ಯ ಹಾಗೂ ರಾಜರತ್ಮಂ ಅವರ ಬೌದ್ಧ ಧರ್ಮದ ಗ್ರಂಥಗಳ ಭಾಷಾಂತರಗಳ ಕುರಿತು ವಿದ್ವತ್ ಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ವೈಶಾಖ ಶುದ್ಧ ಹುಣ್ಣಿಮೆಯ ದಿನವನ್ನು ಎಲ್ಲ ಶಾಂತಿಪ್ರಿಯರೂ ತಂಪುಹೊತ್ತಿನಲ್ಲಿ ನೆನೆಯುತ್ತಾರೆ. ಬುದ್ಧಪೂರ್ಣಿಮೆಯ ಅಂಗವಾಗಿ ಅನೇಕ ಕಾರ್ಯಕ್ರಮಗಳು ಸಹ ಇತ್ತೀಚಿನ ದಿನಗಳಲ್ಲಿ ಆಯೋಜನೆಗೊಳ್ಳುತ್ತಿದ್ದು ಬುದ್ಧಧರ್ಮದ ಆಶಯ, ಉಪದೇಶಗಳನ್ನು ಪಸರಿಸುವ ಕೆಲಸಗಳೂ ನಡೆಯುತ್ತಲಿವೆ. ಈ ದಿಸೆಯಲ್ಲಿ ಬುದ್ಧಸಾಹಿತ್ಯ ಕನ್ನಡದಲ್ಲಿ ಭಾಷಾಂತರಗೊಂಡ ಬಗೆಗೆ ಕುತೂಹಲ ಮೂಡಿ ಕನ್ನಡದಲ್ಲಿ ಈ ಭಾಷಾಂತರಗಳ ಹೆಜ್ಜೆಗುರುತುಗಳನ್ನು ನೋಡುವ ಆಸಕ್ತಿ ಉಂಟಾದ ಪರಿಣಾಮ ಈ ಲೇಖನ. ವಾಸ್ತವವಾಗಿ ಈ ಲೇಖನದ ಉದ್ದೇಶ ಸಮೀಕ್ಷೆಯಾಗಲೀ ವ್ಯಾಖ್ಯಾನವಾಗಲೀ ಅಲ್ಲ. ಕನ್ನಡದಲ್ಲಿ ಬಂದ ಭಾಷಾಂತರಗಳು ಯಾವ ಆಸಕ್ತಿಯಿಂದ ಉಂಟಾದವು? ಯಾವ ಯಾವ ಭಾಷೆಗಳಿಂದ ಬೌದ್ಧಪಠ್ಯಗಳು ಭಾಷಾಂತರಗೊಂಡಿವೆ? ಈ ಭಾಷಾ ಆಯ್ಕೆಗಳ ನಡುವೆ ಇರುವ ಯಜಮಾನಿಕೆಗಳ ಪಾವಿತ್ರ್ಯತೆಯ ಭಾವನೆಗಳು ಭಾಷಾಂತರವನ್ನೂ ಪ್ರಭಾವಿಸಿದವೇ? ಬೌದ್ಧಸಾಹಿತ್ಯದಲ್ಲಿ ಉಂಟಾದ ಆಸಕ್ತಿ ವ್ಯಕ್ತಿಶಃ ಉಂಟಾಗಿ ಆನಂತರ ಸಾಂಸ್ಥಿಕ ವಲಯಗಳಲ್ಲಿ ಹಬ್ಬಿದ ಪರಿಣಾಮ ಭಾಷಾಂತರಗಳು ಅದೇ ತಿರುವಿನಲ್ಲಿ ಬರುತ್ತದೆಯೋ ಎನ್ನುವುದನ್ನು ಕುತೂಹಲದಿಂದ ಗಮನಿಸುವುದೇ ಈ ಲೇಖನದ ಉದ್ದೇಶ.

ಕನ್ನಡದಲ್ಲಿ ಬೌದ್ಧಸಾಹಿತ್ಯದ ಬಗೆಗೆ ಸಣ್ಣ ಕುತೂಹಲ ಹುಟ್ಟಿಸುವ ಭಾಷಾಂತರಗಳು ಆಧುನಿಕ ಸಾಹಿತ್ಯಸಂದರ್ಭದಲ್ಲಿ ಬಂದಿವೆ. ಆದರೆ ಕನ್ನಡ ಸಾಹಿತ್ಯದಲ್ಲಿ ಬೌದ್ಧಸಾಹಿತ್ಯಕ್ಕೆ ಜೈನ, ಬ್ರಾಹ್ಮಣ, ವೀರಶೈವ ಸಾಹಿತ್ಯಗಳಿಗೆ ಸಿಕ್ಕ ಆದ್ಯತೆ ಸಿಗದೇ ಹೋದದಕ್ಕೆ ಚಾರಿತ್ರಿಕ ಕಾರಣಗಳಿವೆ ಎಂದು ಊಹಿಸಬಹುದು. ಬೌದ್ಧಧರ್ಮವನ್ನು ಪೋಷಿಸಿ ಬೆಳೆಸುವ ರಾಜಮನೆತನಗಳು ಕರ್ನಾಟಕದಲ್ಲಿ ಇಲ್ಲದೇ ಹೋದದ್ದು ಬೌದ್ಧಧರ್ಮದ ತತ್ವ ಮತ್ತು ಸಾಹಿತ್ಯಕ್ಕೆ ಆಶ್ರಯ ಸಿಗದಂತಾಯಿತು. ಎರಡನೆಯದಾಗಿ, ಬೌದ್ಧಧರ್ಮವು ವೈಚಾರಿಕವಾದ ಶ್ರಮಣ ಧರ್ಮವಾಗಿದ್ದು ಸಂನ್ಯಾಸಕ್ಕೆ ಆದ್ಯತೆಯನ್ನು ನೀಡಿತು ಎಂದು ಭಾವಿಸಿದ್ದುದು. ಇದರಿಂದ ಗೃಹಸ್ಥರು ಮತ್ತು ಹೆಂಗಸರು ಬೌದ್ಧಧರ್ಮದ ಆಸಕ್ತಿಯನ್ನು ಕಂಡುಕೊಳ್ಳದೇ ಹೋದದ್ದು ಕಾರಣವಿರಬಹುದು. ಈ ಬಾಹ್ಯ ಕಾರಣಗಳು ಬೌದ್ಧಧರ್ಮದ ಸಾಹಿತ್ಯವನ್ನು ಅನುಸಂಧಾನ ಮಾಡುವ ಆಸಕ್ತಿಗೆ ಪೂರಕವಾಗಿರಲಿಲ್ಲ ಎಂದು ಊಹಿಸಬಹುದು. ಚರಿತ್ರೆಯನ್ನು ಅವಲೋಕಿಸಿ ನೋಡಿದರೆ ಬೌದ್ಧಧರ್ಮ ಕನ್ನಡ ನಾಡಿನಲ್ಲಿ ಇದ್ದರೂ ರಾಜಾಶ್ರಯವಾಗಲೀ ಅದನ್ನು ಅನುಸರಿಸುವ ಗೃಹಸ್ಥ ಸಮುದಾಯಗಳಾಗಲೀ ಇಲ್ಲದುದರಿಂದ ಅದರ ಪ್ರಚಾರ ಕನ್ನಡ ಸಮುದಾಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ಬೌದ್ಧಧರ್ಮವು ವೈಚಾರಿಕವಾದ ಧರ್ಮವಾಗಿದ್ದರಿಂದ ಇದು ಕನ್ನಡ ಪ್ರವೇಶಿಸಲು ತಡವಾಗಿರಬಹುದು. ಆಚರಣಾತ್ಮಕವಾಗಿ ಸಹ ಬೌದ್ಧಧರ್ಮವು ಕನ್ನಡ ಸಮುದಾಯಗಳೊಳಗೆ ದೊಡ್ಡ ಪ್ರಮಾಣದಲ್ಲಿ ಪ್ರವೇಶ ಮಾಡಿರದ ಕಾರಣ ಧಾರ್ಮಿಕ ಶ್ರದ್ಧೆಯ ಕಾರಣಕ್ಕಾಗಿ ಬೌದ್ಧಪಠ್ಯಗಳನ್ನು ಅನುಸಂಧಾನ ಮಾಡುವ ಸಾಧ್ಯತೆ ಕಡಿಮೆಯಾಯಿತು.

ಆಧುನಿಕ ಕನ್ನಡದಲ್ಲಿ ಬುದ್ಧನ ವಿಷಯವಾಗಿ ಆಸಕ್ತಿ ಬೆಳೆಯತೊಡಗಿದ್ದು ಪ್ರಾಯಶಃ ಇಪ್ಪತ್ತನೆಯ ಶತಮಾನದ ಆರಂಭಕಾಲದಲ್ಲಿ. ಹೊಸ ಹೊಸ ಜ್ಞಾನಶಿಸ್ತುಗಳನ್ನು ಓದುವ ವಸಾಹತುಶಾಹಿ ರೆನೆಸಾನ್ಸಿನ ಸಂವೇದನೆಯನ್ನು ದೇಶೀಯ ಸಮುದಾಯಗಳು ರೂಢಿಸಿಕೊಳ್ಳುತ್ತಿದ್ದ ಪರಿಣಾಮವೊ ಏನೊ ಬೌದ್ಧಸಾಹಿತ್ಯವನ್ನು ಓದುವ ಕಡೆ ಹಲವಾರು ವಿದ್ವಾಂಸರ ಗಮನ ಹರಿಯಿತು. ಮೂಲತಃ ನಿರೀಶ್ವರವಾದ ಹಾಗೂ ಶೂನ್ಯವಾದದ ಪ್ರತಿಪಾದಕವಾಗಿದ್ದ ಬೌದ್ಧಧರ್ಮವು ಸ್ಥಳೀಯರಲ್ಲಿ ಆಸಕ್ತಿದಾಯಕ ಧರ್ಮವಾಗಿರದೇ ಹೋಗಿರಬಹುದು. ಬುದ್ಧನ ಜೀವನ ಮತ್ತು ಚರಿತ್ರೆಗಳತ್ತ ಆಸಕ್ತಿ ಮೂಡಿಸಿದ್ದು ಹಾಗೆ ನೋಡಿದರೆ ವಸಾಹತುಶಾಹಿ ಶಿಕ್ಷಣ ಪದ್ಧತಿಯೇ ಎನ್ನಬಹುದು. ಸರ್ ಎಡ್ವಿನ್ ಅರ್ನಾಲ್ಡ್ ಅವರ ‘ಲೈಟ್ ಆಫ್ ಏಷಿಯಾ’ ಕೃತಿಯಲ್ಲಿ ಬುದ್ಧನ ಬಗೆಗೆ ಗಮನ ಸೆಳೆಯಲಾಗಿತ್ತು. ಪಾಲ್ ಕಾರಸ್ ಅವರು ಗದ್ಯದಲ್ಲಿ ಬರೆದ ಪುಸ್ತಕಗಳು ಬುದ್ಧನ ಜೀವನ ಚರಿತ್ರೆಯನ್ನು ಮತ್ತೆ ದೇಶೀಯರಿಗೆ ಪ್ರಸ್ತುತ ಪಡಿಸಿದ್ದರಿಂದ ಬುದ್ಧಗಾಥೆ ಮತ್ತೆ ಜನಪ್ರಿಯವಾಯಿತು.

ಬೌದ್ಧಸಾಹಿತ್ಯವನ್ನು ಕನ್ನಡದಲ್ಲಿ ಎರಡು ಬಗೆಯಲ್ಲಿ ಗುರುತಿಸಬಹುದು. ಬೌದ್ಧ ಸಾಹಿತ್ಯವು ಬುದ್ಧನ ಹಾಗೂ ಅವನ ಹತ್ತಿರದ ಅನುಯಾಯಿಗಳ ಉಪದೇಶಗಳ ಕೃತಿಗಳು ಒಂದೆಡೆ ಇದ್ದರೆ ಬುದ್ಧನ ತತ್ವ ಮತ್ತು ಉಪದೇಶಗಳನ್ನು ವ್ಯಾಖ್ಯಾನಿಸಿ ಬರೆದ ಟೀಕುಗಳು, ತಾತ್ವಿಕ ಪಠ್ಯಗಳು ಇನ್ನೊಂದೆಡೆ ಇವೆ. ಇವನ್ನು ಆಸಕ್ತರು ಭಾಷಾಂತರಕ್ಕೆ ಎತ್ತಿಕೊಳ್ಳುತ್ತಾರೆ. ಬೌದ್ಧಸಾಹಿತ್ಯದಲ್ಲಿ ಎಲ್ಲರಿಗೂ ಎಟುಕುವಂತಿರುವ ಸಾಹಿತ್ಯವೆಂದರೆ ಬುದ್ಧನ ಜಾತಕ ಕತೆಗಳು. ಇವು ಬೋಧಿಸತ್ವನ ಜನ್ಮಾವಳಿಯ ಕತೆಗಳು. ಇವಕ್ಕೆ ಪಂಚತಂತ್ರದ ಸ್ವರೂಪವಿದ್ದು ಸಾಮಾನ್ಯರಿಗೂ ಮುಟ್ಟುವಂತಿವೆ. ಆದುದರಿಂದ ಇವು ಭಾಷಾಂತರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇನ್ನು ಮಹಾಯಾನಿಗಳು ಬರೆದ ಬುದ್ಧನ ಕುರಿತ ಕಾವ್ಯ, ಇತರೆ ಬೌದ್ಧಸಾಧಕರನ್ನು ಕುರಿತ ರಚನೆಗಳ ಭಾಷಾಂತರಗಳೂ ಆಗಿವೆ, ಮಾಧ್ಯಮ ಕಾರಿಕ(ನಟರಾಜ ಬೂದಾಳು), ಸರಹಪಾದ(ನಟರಾಜ ಬೂದಾಳು) ಇತ್ಯಾದಿ. ಅಶ್ವಘೋಷನ ‘ಸೌಂದರಾನಂದ’, ‘ಬುದ್ಧ ಚರಿತಮ್’, ‘ಬುದ್ಧ ಚರಿತ’ ಮುಂತಾದ ಕಾವ್ಯಗಳ ಭಾಷಾಂತರಗಳು ಕನ್ನಡದಲ್ಲಿ ನಡೆದಿವೆ. ಹೀಗೆ ಬೌದ್ಧ ಸಾಹಿತ್ಯದ ಪಠ್ಯಗಳನ್ನು ಆಕರವೆಂದು ಭಾವಿಸಿ ಕನ್ನಡದಲ್ಲಿ ಭಾಷಾಂತರಗಳು ನಡೆದಿವೆ. ಝೆನ್‍ಕತೆಗಳು/ತಾತ್ವಿಕತೆಗಳನ್ನು ಕುರಿತ ಭಾಷಾಂತರಗಳು ಕನ್ನಡದಲ್ಲಿ ಒಂದು ಪರಂಪರೆಯನ್ನು ಉಂಟು ಮಾಡಿವೆ. ಝೆನ್ ಕತೆಗಳನ್ನು ಕೆ.ವಿ.ಸುಬ್ಬಣ್ಣ, ಜಿ.ಎನ್.ರಂಗನಾಥರಾವ್ ಮೊದಲಾದವರು ಝೆನ್ ಬುದ್ಧವಾದಕ್ಕೆ ಪ್ರವೇಶಿಕೆಯನ್ನು ಒದಗಿಸುವ ಟಿಪ್ಪಣಿಗಳೊಂದಿಗೆ ಭಾಷಾಂತರಿಸಿದ್ದಾರೆ. ಇನ್ನು ಬುದ್ಧನನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ಬಂದ ಕೃತಿಗಳಲ್ಲಿ ಸೃಜನಶೀಲ ಸಾಹಿತ್ಯದ ಸಂಖ್ಯೆಯೇ ಜಾಸ್ತಿ ಇದೆ. ಅವು ಬೇರೊಂದು ಅಧ್ಯಯನಕ್ಕೆ ಯೋಗ್ಯವಾಗಿವೆ. ಗೋವಿಂದ ಪೈಗಳು ಮೂಲ ಪಾಲಿಪಠ್ಯಗಳಲ್ಲಿರುವ ಬುದ್ಧನ ಜೀವನಗಾಥೆಯನ್ನು ಓದಿಕೊಂಡು ಅದನ್ನು ಆಕರವಾಗಿಟ್ಟುಕೊಂಡು ‘ವೈಶಾಖಿ’ಯನ್ನು ರಚಿಸಿರುವುದು ಕನ್ನಡಕ್ಕೆ ಒಂದು ಬಗೆಯಲ್ಲಿ ಸಹಾಯಕವಾಗಿದೆ. ಆ ಕೃತಿಯ ಅಡಿಯಲ್ಲಿ ನೀಡಿರುವ ಟಿಪ್ಪಣಿಗಳು ಪೈ ಅವರ ಪಾಲಿ ಅಧ್ಯಯನವನ್ನು ಸೂಚಿಸುತ್ತದೆ.

ಕನ್ನಡದ ಬೌದ್ಧಸಾಹಿತ್ಯ ಅನುವಾದಗಳು ಮುಖ್ಯವಾಗಿ ಮೂರು ಬಗೆಗಳಲ್ಲಿವೆ ಎಂದು ಸ್ಥೂಲವಾಗಿ ಗುರುತಿಸಿಕೊಳ್ಳಬಹುದು. ಅವುಗಳೆಂದರೆ: ಮೊದಲನೆಯದಾಗಿ ವ್ಯಕ್ತಿನಿಷ್ಠ ಅನುವಾದಗಳು; ಇವು ಬೌದ್ಧಧರ್ಮದ ಬಗ್ಗೆ ಆಸಕ್ತಿ ಹೊಂದಿ ಬೌದ್ಧ ಆಕರಗಳನ್ನು ಅಭ್ಯಾಸ ಮಾಡಿ ಅಲ್ಲಿರುವ ಮೌಲಿಕವೆನಿಸುವ ಕೃತಿಗಳನ್ನು ಯಥಾವತ್ತಾಗಿ ಅಥವಾ ಸಂಗ್ರಹ ರೂಪದಲ್ಲಿ ಭಾಷಾಂತರಿಸುವುದು; ಎರಡನೆಯದು, ಅಂಬೇಡ್ಕರ್ ಅವರ ‘ಮತಾಂತರ’ದ ಪರ್ವದ ನಂತರ ಭಾರತದ ದಲಿತವರ್ಗಗಳು ಅಪಾರ ಪ್ರಮಾಣದಲ್ಲಿ ಬೌದ್ಧಧರ್ಮಕ್ಕೆ ಮತಾಂತರ ಹೊಂದಿ ಬುದ್ಧಧಮ್ಮವನ್ನು ಅಧಿಕೃತವಾಗಿ ತಮ್ಮದೆಂದು ಸ್ವೀಕರಿಸಿದ ನಂತರ ಬೌದ್ಧಧರ್ಮವನ್ನು ಅಭ್ಯಾಸ ಮಾಡತೊಡಗಿದ್ದ ಹಿನ್ನೆಲೆಯಲ್ಲಿ ಬೌದ್ಧಸಾಹಿತ್ಯವನ್ನು ತಂತಮ್ಮ ಭಾಷೆಗಳಿಗೆ ಭಾಷಾಂತರಿಸತೊಡಗಿದ್ದು. ಇದರಿಂದ ಆಧುನಿಕ ಕಾಲದಲ್ಲಿ ದಲಿತ-ಬೌದ್ಧ ಸಾಹಿತ್ಯ ಹಾಗೂ ಭಾಷಾಂತರಗಳು ಕಂಡುಬಂದವು. ಮೂರನೆಯದಾಗಿ, ಸಾಂಸ್ಥಿಕವಾದ ಭಾಷಾಂತರಗಳು-ಬೌದ್ಧಧರ್ಮವನ್ನು ಪ್ರಸಾರ ಮಾಡಲು ಹುಟ್ಟಿದ ಬೋಧಿಸಂಸ್ಥೆಯು ಪಾಲಿಭಾಷೆಯಿಂದ ಕನ್ನಡಕ್ಕೆ ಬೌದ್ಧಧರ್ಮದ ಮೂಲಪಠ್ಯಗಳನ್ನು ಭಾಷಾಂತರಿಸಿ ಕೊಡುವ ಯೋಜನೆ ಹಾಕಿಕೊಂಡು ಅದರಂತೆ ಭಾಷಾಂತರಗಳನ್ನು ಮಾಡಿಸಿತು. ನೇರವಾಗಿ ಪಾಲಿಯಿಂದ ಈ ಭಾಷಾಂತರಗಳು ನಡೆದವು. ಇದಲ್ಲದೆ ಬೌದ್ಧಸಾಹಿತ್ಯ ಎಂದು ಪ್ರಚಲಿತವಿರುವ ಸಾಹಿತ್ಯಪಠ್ಯಗಳನ್ನೂ ಈ ಸಂಸ್ಥೆಯ ವತಿಯಿಂದ ಭಾಷಾಂತರ ಮಾಡಲು ಉದ್ಯುಕ್ತವಾಯಿತು.

ಬೌದ್ಧಸಾಹಿತ್ಯ ಭಾಷಾಂತರಗಳನ್ನು ಧೋರಣೆಯ ದೃಷ್ಟಿಯಿಂದ ವ್ಯಷ್ಟಿ ಮತ್ತು ಸಾಂಸ್ಥಿಕ ಆಸಕ್ತಿಯ ದೃಷ್ಟಿಗಳಿಂದ ಆದವು ಎಂದು ಸ್ಥೂಲವಾಗಿ ಎರಡು ವಿಭಾಗಗಳನ್ನು ಮಾಡಿಕೊಳ್ಳಬಹುದು. ಈ ಭಾಷಾಂತರಗಳ ಹಿಂದಿನ ಧೋರಣೆಗಳು ವ್ಯಕ್ತಿಗೂ ಸಂಸ್ಥೆಗೂ ಭಿನ್ನವಾಗಿರುತ್ತವೆ. ವ್ಯಕ್ತಿ ಆಸಕ್ತಿಯಿಂದ ಮಾಡಿದ ಭಾಷಾಂತರಗಳಲ್ಲಿ ಜ್ಞಾನಪಿಪಾಸೆಯ ಧೋರಣೆಯು ಪ್ರಧಾನವಾಗಿದ್ದರೆ ಸಾಂಸ್ಥಿಕವಾಗಿ ಆದ ಭಾಷಾಂತರಗಳ ಹಿಂದೆ ಅನೇಕ ಧೋರಣೆಗಳು ಕೆಲಸ ಮಾಡುತ್ತವೆ. ಸಾಂಸ್ಥಿಕವಾದ ಭಾಷಾಂತರಗಳನ್ನು ಮಹಾಬೋಧಿ ಟ್ರಸ್ಟ್ ನಿರ್ವಹಿಸುತ್ತಾ ಬಂದಿದ್ದು ಅದರ ಮುಖ್ಯಧೋರಣೆ ಸಿಂಹಳೀಯ ಮಾದರಿಯಲ್ಲಿ ಮೂಲಬುದ್ಧನ ಉಪದೇಶಗಳಿರುವ ಪಾಲಿ ಭಾಷೆಯ ಪಠ್ಯಗಳನ್ನು ಭಾಷಾಂತರಕ್ಕೆ ಆಕರಗಳಾಗಿ ಬಳಸಬೇಕೆನ್ನುವುದಾಗಿದೆ. ಅವರು ಇದಕ್ಕಾಗಿ ಕನ್ನಡದ ಲಿಪಿಯಲ್ಲಿ ಪಾಲಿಪಠ್ಯಗಳನ್ನು ಒಂದೆಡೆಗೆ ಕೊಟ್ಟು ಭಾಷಾಂತರಗಳನ್ನು ಮಾಡಿಸಿದ್ದಾರೆ. ಈ ದ್ವಿಭಾಷಿಕ ಪಠ್ಯಗಳು ಪಾಲಿಯನ್ನು ನೆನಪಿಸಿಕೊಡಬೇಕೆನ್ನುವುದು ಇದರ ಹಿಂದಿನ ಉದ್ದೇಶ.

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದ ಬೌದ್ಧಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಲ್ಲೇಪುರಂ ಜಿ.ವೆಂಕಟೇಶ್ ಅವರು ಕೆಲವು ಮುಖ್ಯ ಅಂಶಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ಕನ್ನಡವು ಹಿಂದಿ ಮತ್ತು ಮರಾಠಿ ಭಾಷೆಗಳ ನಂತರ ಬೌದ್ಧ ಸಾಹಿತ್ಯಕ್ಕೆ ಆದ್ಯತೆ ನೀಡಿ ಅದರ ಓದಿಗೆ, ರಚನೆಗೆ ಉತ್ತೇಜನ ನೀಡುವ ಭಾಷೆಯಾಗಿದೆ. ಜಿ.ಪಿ.ರಾಜರತ್ನಂ, ಗೋವಿಂದ ಪೈ ಹಾಗೂ ಎಸ್.ಕೆ.ರಾಮಚಂದ್ರರಾವ್ ಈ ವಿದ್ವಾಂಸರು ಪಾಲಿಭಾಷೆಯನ್ನು ಶ್ರದ್ಧೆ, ಆಸಕ್ತಿಯಿಂದ ಕಲಿತು ಅಲ್ಲಿಂದ ಕನ್ನಡಕ್ಕೆ ಭಾಷಾಂತರಗಳನ್ನು ಮಾಡಿದ್ದಾರೆ. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ನಡೆದ ಈ ಚಟುವಟಿಕೆಗಳು ಕನ್ನಡದಲ್ಲಿ ಬೌದ್ಧಸಾಹಿತ್ಯದ ಅಭ್ಯಾಸಕ್ಕೆ ಇಂಬು ನೀಡಿದವು. ಅದರಲ್ಲೂ ಜಿ.ಪಿ.ರಾಜರತ್ನಂ ಹಾಗೂ ಎಸ್.ಕೆ.ರಾಮಚಂದ್ರರಾವ್ ಅವರು ಇಡೀ ಕರ್ನಾಟಕದಲ್ಲಿಯೇ ಬೌದ್ಧಸಾಹಿತ್ಯವನ್ನು ವೈಚಾರಿಕವಾಗಿ ಅಭ್ಯಾಸ ಮಾಡಿದುದಲ್ಲದೆ, ಅದರ ಪ್ರಚಾರಕ್ಕೂ ತಮ್ಮನ್ನು ಮೀಸಲಾಗಿರಿಸಿಕೊಂಡರು. (ದ ಹಿಂದೂ, 20 ಮಾರ್ಚ್ 2020).

ಪಾಲಿಯಿಂದ ಕನ್ನಡಕ್ಕೆ ಬಂದ ಮೊದಲ ಬೌದ್ಧಪಠ್ಯವೆಂದರೆ ಧಮ್ಮಪದ. ಇದನ್ನು ಕನ್ನಡಕ್ಕೆ ತರುವ ಸಾಹಸ ಮಾಡಿದ್ದು ಬಿದರೆ ಅಶ್ವತ್ಥ ನಾರಾಯಣಶಾಸ್ತ್ರಿಗಳು. ಇದಕ್ಕೂ ಮುನ್ನ ‘ಹಿತಬೋಧಿನಿ’ ಪತ್ರಿಕೆಯಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿಯೇ ಬುದ್ಧನ ಬಗ್ಗೆ ಲೇಖನಗಳನ್ನು ಬರೆದುದಾಗಿ ಧಮ್ಮಪದಕ್ಕೆ ಮುನ್ನುಡಿ ಬರೆದ ಎಂ.ಶಾಮರಾಯರು ಹೇಳಿದ್ದಾರೆ ಎಂದು ರಾಜರತ್ನಂ ಉಲ್ಲೇಖಿಸಿದ್ದಾರೆ(ವೈಶಾಖಶುಕ್ಲ ಹುಣ್ಣಿಮೆ). ‘ಸುಬೋಧ’, ‘ಪ್ರಬುದ್ಧ ಕರ್ಣಾಟಕ’, ‘ದೇಶೀಯ ವಿದ್ಯಾಶಾಲಾ’ ಪತ್ರಿಕೆಗಳಲ್ಲಿ ಧಮ್ಮಪದ, ಸುತ್ತನಿಪಾತ, ಅಂಬಷ್ಠ ಸೂತ್ರ ಮುಂತಾದ ಸುತ್ತಗಳ/ಸುತ್ತದ ಭಾಗಗಳ ಭಾಷಾಂತರಗಳು ಕನ್ನಡದ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ರಾಜರತ್ನಂ ತಮ್ಮ ಬೌದ್ಧ ಸಾಹಿತ್ಯದ ಭಾಷಾಂತರಗಳನ್ನು ಪ್ರಕಟಿಸುವ ಹೊತ್ತಲ್ಲೇ ಸುಬ್ಬರಾಯರೆಂಬುವವರು ಧಮ್ಮಪದವನ್ನು ಪ್ರಕಟಿಸಿದ್ದರು ಎಂದು ಸ್ವತಃ ರಾಜರತ್ಮಂ ಅವರೇ ದಾಖಲಿಸಿದ್ದಾರೆ. ರಾಜರತ್ನಂ ಅವರ ‘ಮೂರು ಪಾಲಿಸೂತ್ರಗಳು’, ಪಾಲಿಪಜ್ಜ ಪುಪ್ಫಂಜಲಿ’, ಬುದ್ಧನ ವರ್ಣವಾದ ಮುಂತಾದ ಕೃತಿಗಳಲ್ಲಿ ಬೌದ್ಧಸೂತ್ರಗಳ ಸಾರಸಂಗ್ರಹ, ಪಿಟಕಗಳ ಆಯ್ದ ಭಾಗಗಳ ಭಾಷಾಂತರಗಳನ್ನು ಕಾಣಬಹುದು.

ಇನ್ನು, ಬೌದ್ಧಸಾಹಿತ್ಯದ ಹೆಸರಿನಲ್ಲಿ ಭಾಷಾಂತರಗೊಂಡಿರುವುದು ಜಾತಕ ಕತೆಗಳು. ಇವು ಸಹ ಕನ್ನಡದ ಮೊದಲ ಬೀಡಿನ ಪತ್ರಿಕೆಗಳಾದ ‘ವಿದ್ಯಾದಾಯಿನಿ’, ‘ಸದ್ಧರ್ಮ’ ಹಾಗು ‘ದೇಶೀಯ ವಿದ್ಯಾಶಾಲಾ ಪತ್ರಿಕೆ’ ಮುಂತಾದವುಗಳಲ್ಲಿ ಆಗೊಮ್ಮೆ ಈಗೊಮ್ಮೆ ಭಾಷಾಂತರಗೊಂಡು ಪ್ರಕಟಗೊಂಡಿವೆ. ಆ ಕಾಲದ ಪತ್ರಿಕೆಗಳಾದ ‘ಜಯಕರ್ನಾಟಕ’, ‘ಪ್ರಬುದ್ಧ ಕರ್ನಾಟಕ, ‘ಸುಬೋಧ’, ‘ಸದ್ಧರ್ಮ’ ಮುಂತಾದವುಗಳಲ್ಲಿ ಹೊಸ ಶಿಕ್ಷಿತ ವಲಯವು ಬೌದ್ಧಸಾಹಿತ್ಯದ ಬಗೆಗೆ ತಳೆದ ಆಸಕ್ತಿಯ ಫಲವಾಗಿ ಅನೇಕ ಲೇಖನಗಳು ಪ್ರಕಟವಾಗಿವೆ. ಇವುಗಳಲ್ಲಿ ಹೆಚ್ಚಿನವು ಭಾಷಾಂತರಗಳು.

ಇನ್ನು ಬೌದ್ಧಸಾಹಿತ್ಯದ ಭಾಷಾಂತರಗಳಿಗೆ ಪ್ರಬಲವಾದ ವಾಂಛೆ ಬೆಳೆದಿದ್ದು ಅಂಬೇಡ್ಕರ್ ಅವರ ಮತಾಂತರ ಪ್ರಕ್ರಿಯೆಯಿಂದ ದಲಿತ ಸಮುದಾಯಗಳ ಮೇಲೆ ಉಂಟಾದ ಪ್ರಭಾವದಿಂದ. ಅಂಬೇಡ್ಕರ್ ಅವರ ಮತಾಂತರದ ನಿರ್ಧಾರವು ಪ್ರಜ್ಞಾಪೂರ್ವಕವಾಗಿತ್ತು. ಬೌದ್ಧಧರ್ಮವು ಜಾತಿಯ ಪ್ರಶ್ನೆಯನ್ನು ಎತ್ತಿ, ಅಂದಿನ ಶ್ರೇಷ್ಠವರ್ಣದವರ ಜೊತೆಗೆ ಚರ್ಚೆಗಳನ್ನು ಮಾಡಿತು. ತಾತ್ವಿಕವಾಗಿ ಜಾತಿ ಎನ್ನುವುದು ಗುಣವಿಶೇಷವಾಗಿರುತ್ತದೆ ಎನ್ನುವುದನ್ನು ಪ್ರತಿಪಾದಿಸಿತು. ಹುಟ್ಟಿನಿಂದ ಅಳೆಯುವ ಮಾನದಂಡವನ್ನು ಹೀಗೆ ಬದಲಾಯಿಸಿ ನೋಡಿದ ಬೌದ್ಧಧರ್ಮವು ಅಂಬೇಡ್ಕರ್ ಅವರಿಗೆ ಉತ್ತರ ಹೇಳಬಲ್ಲ ಪರ್ಯಾಯ ಧರ್ಮವಾಗಿ ಕಂಡಿತು. ಆದಕಾರಣ ಅವರು ಮತಾಂತರಕ್ಕೆ ಮುಂದಾದರು. ಇದರಿಂದ ಅಂಬೇಡ್ಕರ್ ಮೂಲಕ ಬೌದ್ಧಸಾಹಿತ್ಯವನ್ನು ನೋಡುವ ಹೊಸ ದೃಷ್ಟಿಕೋನವೊಂದು ದಲಿತ ಸಮುದಾಯಗಳಲ್ಲಿ ಬೆಳೆಯಿತು. ಕನ್ನಡದಲ್ಲಿ ಅಂಬೇಡ್ಕರ್ ಅವರ ಬರಹಗಳು ಭಾಷಾಂತರಗೊಳ್ಳುವ ಅಭಿಯಾನ ಆರಂಭವಾಗುತ್ತಿದ್ದಂತೆ ಅವರ ಸಾಹಿತ್ಯದ ಬಹುಮುಖ್ಯ ಪಠ್ಯಗಳಾದ ಬುದ್ಧನ ಚರಿತ್ರೆ, ಅವನ ಕಾಲದ ಚಾರಿತ್ರಿಕ ಸಂಗತಿಗಳು, ಜಾತಿ ಕುರಿತ ಬುದ್ಧನ ಚರ್ಚೆಗಳು, ಬ್ರಾಹ್ಮಣ್ಯ ವಿರೋಧಿ ನಡೆ, ಇತ್ಯಾದಿಗಳನ್ನು ಒಳಗೊಂಡ ವಾಙ್ಮಯವನ್ನು ಕನ್ನಡದಲ್ಲಿ ಭಾಷಾಂತರ ಮಾಡಲಾಗಿದೆ. ಇದರಿಂದ ಬೌದ್ಧಧರ್ಮದ ವೈಚಾರಿಕತೆಯನ್ನು ಧರ್ಮದ ಹೊರತಾಗಿ ವಸ್ತುನಿಷ್ಠವಾಗಿ ಚಾರಿತ್ರಿಕವಾಗಿ ಗ್ರಹಿಸುವುದು ಹೇಗೆಂಬ ಅಧ್ಯಯನದ ಮಾದರಿ ದೊರೆಯಿತು. ಕನ್ನಡದಲ್ಲಿ ದಲಿತರ ಬೌದ್ಧಮತಾಂತರವು ಅವರಿಗೆ ಎರಡೆರಡು ಅಸ್ಮಿತೆಗಳನ್ನು ಒದಗಿಸಿಕೊಟ್ಟಿತು. ವೈಚಾರಿಕತೆಯಿಂದ ಅಪ್ಪಿಕೊಂಡ ಧರ್ಮವು ಅವರಿಗೆ ಬೇಕಾದ ಪರಿಹಾರಗಳನ್ನು ಸೂಚಿಸುತ್ತಿತ್ತು. ಆದುದರಿಂದ ವಿದ್ಯಾವಂತ ದಲಿತರು ಬೌದ್ಧಧರ್ಮವನ್ನು ಪ್ರಜ್ಞಾಪೂರ್ವಕವಾಗಿ ಪ್ರವೇಶಿಸಿದರು. ಇದರಿಂದ ಬೌದ್ಧಧರ್ಮದ ಪಠ್ಯಗಳು, ಅಲ್ಲಿನ ಧ್ಯಾನಮಾರ್ಗಗಳನ್ನು ಅಭ್ಯಾಸ ಮಾಡತೊಡಗಿದರು. ಈ ಕಲಿಕೆಯು ಬೌದ್ಧಧರ್ಮವು ಎಲ್ಲಿ ಚೈತನ್ಯಶಾಲಿಯಾಗಿ ಚಟುವಟಿಕೆಗಳನ್ನು ನಡೆಸುತ್ತಿದೆಯೊ ಅಂತಲ್ಲಿ ನಡೆದಿದ್ದರಿಂದ ಬೌದ್ಧಪರಂಪರೆಯನ್ನು ಅರಿತು ದಲಿತಧಮ್ಮವಾಗಿ ಅದನ್ನು ಸ್ವೀಕರಿಸಲು ಸಹಾಯಕವಾಯಿತು. ವಿಪಶ್ಯನ ಧ್ಯಾನ ಕುರಿತ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವುದು, ಬುದ್ಧಧರ್ಮದ ಬಗೆಗೆ ಬರೆದ ಪುಸ್ತಕಗಳನ್ನು ಅನುವಾದಿಸುವುದು ಈ ಮುಂತಾದ ಚಟುವಟಿಕೆಗಳು ದಲಿತ-ಬುದ್ಧ ಸಂಘಟನೆಗಳಲ್ಲಿ ಕಾಣುತ್ತಿವೆ. ಇಲ್ಲಿ ಉಲ್ಲೇಖಿಸಬಹುದಾದ ಪುಸ್ತಕ ಎಂದರೆ ದಾಮೋದರ್ ಬಲವಂತರಾವ್ ಖೋಡೆ ಅವರು ಬರೆದ ‘ಬುದ್ಧ ಭಾರತ’ ಎನ್ನುವ ಪುಸ್ತಕವನ್ನು ವೆಂಕಟೇಶ ಪ್ರಸಾದ್ ಅವರು ಭಾಷಾಂತರ ಮಾಡಿದ್ದಾರೆ. ಇದನ್ನು ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದೆ.

ಕನ್ನಡದಲ್ಲಿ ಬೌದ್ಧಸಾಹಿತ್ಯವನ್ನು ಸಾಂಸ್ಥಿಕವಾಗಿ ಬೆಳೆಸಿದುದು ಮಹಾಬೋಧಿ ಸಂಸ್ಥೆ. ಇದು ಕನ್ನಡದಲ್ಲಿ ಬುದ್ಧನ ಉಪದೇಶಗಳನ್ನೂ ನಿಯಮಗಳನ್ನೂ ಒಳಗೊಂಡ ತಿಪಿಟಕಗಳನ್ನು ಭಾಷಾಂತರಿಸುವ ಯೋಜನೆ ಹೊಂದಿದೆ. ಹೀಗೆ ತಿಪಿಟಿಕಗಳನ್ನು ಸಂಪೂರ್ಣವಾಗಿ ಭಾಷಾಂತರಕ್ಕೆ ಎತ್ತಿಕೊಂಡಿದ್ದು ಮಹಾಬೋಧಿ ಸಂಘ. ‘ಬುದ್ಧವಚನ ಟ್ರಸ್ಟ್’ ಹೆಸರಿನ ಒಂದು ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಕನ್ನಡ ತಿಪಿಟಕ ಗ್ರಂಥಮಾಲೆಯನ್ನು ಭಾಷಾಂತರಿಸುವ ಯೋಜನೆಯನ್ನು ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಯೋಜಿಸಲಾಯಿತು. ಇದರ ಉದ್ದೇಶವೇ ಕನ್ನಡದಲ್ಲಿ ಬೌದ್ಧಸಾಹಿತ್ಯವನ್ನು ಪರಿಚಯಿಸುವುದು; ಅಂದರೆ ಮೂಲ(ಪಾಲಿ)ದಿಂದಲೇ ಬೌದ್ಧದರ್ಶನ/ತತ್ವಗಳನ್ನು ತಿಳಿಯಲು ಅನುಕೂಲವಾಗುವಂತೆ ಮಾಡುವುದು. ಮುಖ್ಯವಾಗಿ ಕನ್ನಡ ತಿಪಿಟಕ ಗ್ರಂಥಮಾಲೆಯನ್ನು ಮೂಲ ಪಾಲಿಯಿಂದ ತರಬೇಕೆನ್ನುವುದೇ ಈ ಯೋಜನೆಯ ಉದ್ದೇಶದ ಹಿರಿದಾಸೆಯಾಗಿತ್ತು. ಮಯನ್ಮಾರ್‍ದಲ್ಲಿ ನಡೆದ ಬೌದ್ಧಸಮ್ಮೇಳನದಲ್ಲಿ (1954-56) ಯೋಜಿಸಿ ಹೊರತಂದ ಪಾಳಿಭಾಷೆಯಲ್ಲಿರುವ ತಿಪಿಟಕಗಳನ್ನು ಆಧರಿಸಿ ಭಾಷಾಂತರ ಮಾಡುತ್ತೇವೆ ಎನ್ನುವುದು ಮಹಾಬೋಧಿ ಸಂಘದ ಹೇಳಿಕೆಯಾಗಿತ್ತು. ಇದೊಂದು ಬೃಹತ್ ಯೋಜನೆಯಾಗಿದ್ದು ಸುಮಾರು 150 ಸಂಪುಟಗಳನ್ನು ನಿರೀಕ್ಷಿಸಲಾಗಿತ್ತು. ಅದರ ಮೊದಲ ಅಂಗವಾಗಿ ಸುತ್ತ ಪಿಟಕದ ‘ದೀಘನಿಕಾಯ ಸಂಪುಟ’(1982)ವನ್ನು ಎಚ್.ವಿ.ಶ್ರೀರಂಗರಾಜು ಅವರು ಭಾಷಾಂತರಿಸಿದ್ದರು. ದೀಘನಿಕಾಯದ ಹದಿಮೂರು ಸುತ್ತಗಳು ಇದರಲ್ಲಿ ಸಂಗ್ರಹಗೊಂಡಿವೆ. ಇದೊಂದು ದೊಡ್ಡ ಯೋಜನೆಯಾಗಿದ್ದು ಪ್ರಾಯ: ದೀರ್ಘಕಾಲೀನ ಯೋಜನೆಯೂ ಆಗಿತ್ತು. ಈ ಭಾಷಾಂತರದ ಯೋಜನೆಯನ್ನು ಇಲ್ಲಿ ಉಲ್ಲೇಖಿಸಿದ ಕಾರಣವೆಂದರೆ ಪಾಲಿಭಾಷೆಯಿಂದ ಭಾಷಾಂತರಗಳು ಆಗಬೇಕೆನ್ನುವ ದೃಷ್ಟಿಯಿಂದ ಕನ್ನಡದಲ್ಲಿ ದಾಖಲೆಯಾಗಿ ನಿಲ್ಲುವ ಭಾಷಾಂತರ ಯೋಜನೆ ಇದು. ಇದರ ಮುಂದುವರೆದ ಭಾಗವಾಗಿ ‘ಧಮ್ಮಪದ’(1984)ವನ್ನು ಬಿ.ವಿ.ರಾಜಾರಾಂ ಅವರು ಅನುವಾದಿಸಿದ್ದಾರೆ. ಇದನ್ನು ಮಹಾಬೋಧಿ ಸಂಘವೇ ಪ್ರಕಟಿಸಿದೆ.

ಪಾಲಿ ಮತ್ತು ಸಂಸ್ಕೃತ ಭಾಷೆಗಳೂ ಭಾಷಾಂತರಗಳೂ

ಬೌದ್ಧಸಾಹಿತ್ಯ ಪಠ್ಯಗಳು ಮುಖ್ಯವಾಗಿ ಪಾಲಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿವೆ. ಭಾಷಾಂತರಕಾರರು ಈ ಭಾಷೆಗಳ ಆಕರಗಳನ್ನೇ ಅವಲಂಬಿಸಬೇಕು. ಈ ಭಾಷೆಗಳ ಆಯ್ಕೆಯು ಕುತೂಹಲಕಾರಿಯಾಗಿ ಭಾಷಾಂತರದ ಹಿಂದಿನ ಧೋರಣೆಯನ್ನು ಎತ್ತಿಹಿಡಿಯುತ್ತದೆ. ಬೌದ್ಧಸಾಹಿತ್ಯದಲ್ಲಿ ಕನ್ನಡಕ್ಕೆ ಬಂದಿರುವ ಪಠ್ಯಗಳು ಬುದ್ಧನ ಉಪದೇಶಗಳು ಮತ್ತು ಜಾತಕ ಕತೆಗಳು. ಬುದ್ಧನ ಉಪದೇಶಗಳು ಪಿಟಕ ಸಾಹಿತ್ಯದಲ್ಲಿ ಅಡಕವಾಗಿವೆ. ಅವನ್ನು ಕನ್ನಡಕ್ಕೆ ತರುವ ಭಾಷಾಂತರಕಾರರು ಅನಿವಾರ್ಯವೆಂಬಂತೆ ಪಾಲಿಗ್ರಂಥಗಳ ಮೊರೆಹೋಗಿದ್ದಾರೆ. ಮಹಾಯಾನೀ ಬುದ್ಧಪಠ್ಯಗಳನ್ನು ಅನುಸಂಧಾನ ಮಾಡುವ ವಿದ್ವಾಂಸರು ಸಂಸ್ಕೃತ ಮತ್ತು ಇಂಗ್ಲಿಷ್ ಅನುವಾದಗಳನ್ನು ನೆಚ್ಚಬೇಕು.

ಪಿಟಕಗಳನ್ನು ಭಾಷಾಂತರ ಮಾಡುವುದನ್ನು ಬೈಬಲ್ ಭಾಷಾಂತರದ ಚರಿತ್ರೆಯ ಜೊತೆಗಿಟ್ಟು ನೋಡಬೇಕು. ಏಕೆಂದರೆ ದೈವವಾಣಿಯನ್ನು ಮೂಲಭಾಷೆಯಲ್ಲಿಯೇ ತರಬೇಕೆನ್ನುವ ವಾದಗಳು ಅದರ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ ನಡೆದ ಭಾಷಾಂತರಗಳು ಇವನ್ನು ಬೆಂಬಲಿಸುವ ವಾದಗಳು ಮಾಡಿರುವ ವಾದಗಳಂತೆಯೇ ಬೌದ್ಧಪಠ್ಯಗಳನ್ನು ಪಾಲಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ತರುವ ಭಾಷಾಂತರಗಳ ಪ್ರಕರಣಗಳಿಗೆ ಅನ್ವಯಿಸುತ್ತದೆ.

ಬುದ್ಧ ಮೂಲತಃ ಸಂಸ್ಕೃತವನ್ನು ವಿರೋಧಿಸಿ ತನ್ನ ಅನುಯಾಯಿಗಳಿಗೆ ಪ್ರಾದೇಶಿಕ ಭಾಷೆ/ಉಪಭಾಷೆಗಳಲ್ಲಿ ತನ್ನ ಉಪದೇಶಗಳನ್ನು ಗ್ರಹಿಸಬೇಕೆಂದು ಹೇಳಿದುದರಿಂದ ಪಾಲಿ ಎಂಬ ಬಿಹಾರಿಮೂಲದ ಭಾಷೆಗೆ ಮಹತ್ವ ಬಂದಿತು. ಇದಕ್ಕೆ ಸಂಸ್ಕೃತದ ರೀತಿ ಶುದ್ಧಾಂಗವಾದ ವ್ಯಾಕರಣವಿಲ್ಲವಾದರೂ ಈ ಭಾಷೆ ಸಂಸ್ಕೃತಕ್ಕಿಂತ ಹಳೆಯದು ಎಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಯಮೇಳುತೇ ಎಂಬ ಕುಲಕ್ಕೆ ಸೇರಿದ ಇಬ್ಬರು ಭಿಕ್ಕುಗಳು(ಇವರು ಮೊದಲು ಬ್ರಾಹ್ಮಣರಾಗಿದ್ದು ನಂತರ ಬುದ್ಧನ ಅನುಯಾಯಿಗಳಾಗಿದ್ದವರು) ಬುದ್ಧನಲ್ಲಿ ಅವನ ಉಪದೇಶವನ್ನು ಸಂಸ್ಕೃತದಲ್ಲಿ ಸಂಗ್ರಹಿಸುತ್ತೇವೆ ಎಂದು ಕೇಳಿದರಂತೆ. “ಭನ್ತೇ, ಪರಿವ್ರಾಜಕರಾಗಿರುವ ಈ ಭಿಕ್ಷುಗಳು ನಾನಾ ಹೆಸರುಗಳಿಂದ ನಾನಾ ಗೋತ್ರಗಳಿಂದ ನಾನಾ ಜಾತಿಗಳಿಂದ ನಾನಾ ಕುಲಗಳಿಂದ ಬಂದಿರುವರು. ಇವರು ಬುದ್ಧನ ವಚನವನ್ನು ಕೆಡಿಸುತ್ತಿದ್ದಾರೆ. ಅಪ್ಪಣೆ ಕೊಟ್ಟರೆ ನಾವು ಬುದ್ಧವಚನವನ್ನು ವೇದದ ಭಾಷೆಯಲ್ಲಿ ಎತ್ತಿಬಿಡುತ್ತೇವೆ” ಭಗವಂತನಾದ ಬುದ್ಧನು ಇದಕ್ಕೆ ಪ್ರತಿಭಟಿಸಿದನು; “ಬುದ್ಧಿಹೀನರು ನೀವು.. ..ಬುದ್ಧವಚನವನ್ನು ವೇದದ ಭಾಷೆಯಲ್ಲಿ ಎತ್ತತಕ್ಕದ್ದಲ್ಲ. ಯಾರು ಹಾಗೆ ಎತ್ತುವರೊ ಅವರಿಗೆ ದುಷ್ಕೃತದ ದೋಷವುಂಟಾಗುವುದು. ಭಿಕ್ಷುಗಳೆ, ಬುದ್ಧವಚನವನ್ನು ನಿಮ್ಮ ಸ್ವಂತಭಾಷೆಯಲ್ಲಿ ಕಲಿಯುವುದಕ್ಕೆ ನಾನು ಅನುಜ್ಞೆ ಕೊಡುತ್ತೇನೆ”(ವಿನಯ ಪಿಟಕ-ಚುಲ್ಲವಗ್ಗದಲ್ಲಿ ಬರುವ ಪ್ರಸಂಗ)(ರಾಜರತ್ನಂ, 203).

ಬುದ್ಧನ ಅವಸಾನದ ನಂತರ ಹೀನಾಯಾನ ಶಾಖೆಯು ಬುದ್ಧನ ಉಪದೇಶಗಳನ್ನು ಗಾಸ್ಪೆಲ್ಲಿನ ರೀತಿ ಸಂರಕ್ಷಿಸಿಡುವ ಪ್ರಯತ್ನ ಮಾಡಿತು. ಬುದ್ಧನ ಉಪದೇಶಗಳ ಸಾರವು ಪಾಲಿ ಭಾಷೆಯಲ್ಲಿತ್ತು. ಆದುದರಿಂದ ಭಗವಾನ್ ಬುದ್ಧನ ಉಪದೇಶದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕೆಂದರೆ ಅದು ಪಾಲಿಭಾಷೆಯಲ್ಲಿರುವುದೇ ಸೂಕ್ತ ಎಂದು ಭಾವಿಸಿದ ಹೀನಾಯಾನಿಗಳು ಬೌದ್ಧಧರ್ಮಕ್ಕೆ ಸಂಬಂಧಿಸಿದ ಸೂಕ್ತಗಳು, ಆಚರಣಾತ್ಮಕ ನೀತಿಗಳನ್ನೆಲ್ಲ ಸಂಗ್ರಹಿಸಿ ಪಾಲಿಭಾಷೆಯಲ್ಲಿ ಬರೆದಿಡುವುದಕ್ಕೆ ಆರಂಭಿಸಿದರು. ಇದು ಸಾಧ್ಯವಾಗಿದ್ದು ಮೊದಲ ಸಹಸ್ರಮಾನದ ಹೊತ್ತಿಗೆ. ಅಂದರೆ ಈ ಮೊದಲು ಮೌಖಿಕವಾಗಿದ್ದ ಬೌದ್ಧಪಠ್ಯಗಳು ಲಿಖಿತರೂಪದಲ್ಲಿ ಬರಬೇಕೆನ್ನುವುದು ಈ ಸಮುದಾಯದ ಅಪೇಕ್ಷೆಯಾಗಿದ್ದಂತೆಯೇ ಇದು ಸಾಕಾರಗೊಂಡಿತು. ಇದಕ್ಕೆ ಸಿಂಹಳದೇಶದ ಬೌದ್ಧ ನಿಷ್ಠಾವಂತ ಅನುಯಾಯಿಗಳೇ ಹೆಚ್ಚಿನ ಆಸಕ್ತಿ ತೋರಿದರು ಎನ್ನಲಾಗುತ್ತದೆ. ಬುದ್ಧನ ಜೀವಿತ ಹಾಗೂ ಅವನ ಉಪದೇಶಗಳ ಚಾರಿತ್ರಿಕತೆಯನ್ನು ಈ ಪಂಥ ಗೌರವಿಸುತ್ತಿದ್ದುದರಿಂದ ಬುದ್ಧ ತನ್ನ ಉಪದೇಶಕ್ಕೆ ಬಳಸಿದ ಪಾಲಿಭಾಷೆಯ ಬಗೆಗೆ ಅತೀವವಾದ ಗೌರವ ಭಾವವನ್ನು ತಳೆದಿತ್ತು. ಈಗಲೂ ಮೂಲಬೌದ್ಧರು ಪಾಲಿಭಾಷೆಯ ಗ್ರಂಥಗಳನ್ನೇ ತಮ್ಮ ಪ್ರಮಾಣವನ್ನಾಗಿ ಮಾಡಿಕೊಳ್ಳುವುದಕ್ಕೆ ಬಯಸುತ್ತಾರೆ. ಬುದ್ಧನ ಅವಸಾನ ನಂತರ ಏಳುನೂರು ವರ್ಷಗಳ ನಂತರ ಅವನ ಉಪದೇಶ ಹಾಗು ತಾತ್ವಿಕತೆ ಕುರಿತು ರಚನೆಯಾದ ಸಂಸ್ಕೃತ ಪಠ್ಯಗಳು ಕಾಲಮಾನದ ಅಂತರದಲ್ಲಿ ಸಾಕಷ್ಟು ವ್ಯತ್ಯಯಗಳನ್ನು ಕಂಡಿದ್ದವು. ಬುದ್ಧನ ಜೀವನವು ಚಾರಿತ್ರಿಕ ಅಂಶಗಳಿಗಿಂತ ಮಿಥಿಕವೈಭವದಲ್ಲಿ ಸ್ವೀಕಾರಗೊಳ್ಳತೊಡಗಿತ್ತು. ಇದರಿಂದ ಬುದ್ಧನ ಮೂಲ ಉಪದೇಶಗಳು ಮಸಕಾಗಿವೆ ಎಂದು ಥೇರಾವಾದಿಗಳು ನಂಬುತ್ತಾರೆ. ಆದಕಾರಣ ಅವರಿಗೆ ವಿಶ್ವಾಸಾರ್ಹ ಪ್ರಮಾಣವೆಂದರೆ ಪಾಲಿಭಾಷೆಯಲ್ಲಿ ದೊರೆತ ತಿಪಿಟಕಗಳು.

ನಂತರದ ಬೆಳವಣಿಗೆಗಳಲ್ಲಿ ಮಹಾಯಾನವು ಬುದ್ಧನನ್ನು ದೇವನನ್ನಾಗಿ ಸ್ವೀಕರಿಸಿತು. ಅವನ ಚಾರಿತ್ರಿಕ ಹುಟ್ಟು, ಅಸ್ತಿತ್ವಕ್ಕಿಂತ ಅವನು ದೈವತ್ವದ ಸಾಧನೆಗೈದದ್ದು ಅವರಿಗೆ ಮುಖ್ಯವಾಯಿತು. ಈ ಭಾವನೆಯು ಬುದ್ಧನ ಉಪದೇಶಗಳನ್ನು ವಿಸ್ತರಿಸುವತ್ತ ಹೊರಳಿತು. ಬೌದ್ಧಧರ್ಮಕ್ಕೆ ಇನ್ನಷ್ಟು ಮತ್ತಷ್ಟು ಹೊಸ ಸಂಗತಿಗಳನ್ನು ಸೇರಿಸಲಾಯಿತು. ಕೆಲವು ಹೊಸ ಸೂತ್ರಗಳನ್ನು ಬೌದ್ಧಪದ್ಧತಿಗೆ ಸೇರಿಸಲಾಯಿತು. ಇಲ್ಲಿನ ಭಾಷೆ ಪ್ರಧಾನವಾಗಿ ಸಂಸ್ಕೃತವಾಗಿತ್ತು. ಸ್ಥಳೀಯ ಭಾಷೆಗಳಲ್ಲಿ ಬುದ್ಧನ ಅನಾವರಣಗೊಳ್ಳುತ್ತಿದ್ದ ಬಗೆಗೆ ಅಷ್ಟಾಗಿ ದಾಖಲೆಯಿಲ್ಲ. ಮಹಾಯಾನಿಗಳಲ್ಲಿ ಪಂಡಿತರು ಇದ್ದುದರಿಂದ ಇದಕ್ಕೆ ಆಸ್ಥಾನಮನ್ನಣೆ ಪಡೆಯಲು ಹಾಗು ಪ್ರತಿಷ್ಟಿತವರ್ಗಗಳಲ್ಲಿ ಬೌದ್ಧಧರ್ಮದ ತಿರುಳನ್ನು ಅಭಿವ್ಯಕ್ತಿಗೊಳಿಸುವುದಕ್ಕೆ ಇರುವ ಅವಕಾಶವಾಗಿ ಇದು ಕಂಡಿರಬೇಕು. ಸಂಸ್ಕೃತವು ಗೂಢವಾದ ತಂತ್ರ ಮತ್ತು ಸೂತ್ರಗಳ ಸಂಕೇತಗಳನ್ನು ಹಿಡಿದಿಡುವ ಭಾಷೆಯಾಗಿದೆ ಎಂದು ಈ ಪಂಥದವರು ಭಾವಿಸಿದ್ದರಿಂದ ತಮ್ಮ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸತೊಡಗಿದರು. ಇದಕ್ಕೆ ಬುದ್ಧಸಂಸ್ಕೃತ ಎನ್ನುವ ಹೊಸ ಭಾಷೆಯೇ ರೂಪುಗೊಂಡಿತ್ತು. ಶಾಸ್ತ್ರೀಯ ಸಂಸ್ಕೃತ ಮತ್ತು ಸಂಘಭಾಷೆಯಾದ ಸಂಸ್ಕೃತಗಳೆರಡರಲ್ಲಿಯೂ ಕೃತಿಗಳು ರಚನೆಯಾಗಿರುವುದು ವಿಶೇಷ. ಸೂತ್ರ, ಜಾತಕ, ಶಾಸ್ತ್ರ, ತಂತ್ರ, ಸ್ತೋತ್ರ ಈ ಮುಂತಾದ ಪ್ರಕಾರಗಳನ್ನು ಒಳಗೊಂಡ ಸಂಸ್ಕೃತ ಬರಹಗಳು ಸಂಸ್ಕೃತದ ಬುದ್ಧವಾಙ್ಮಯದಲ್ಲಿ ಕಾಣಬಹುದು.

ಬೌದ್ಧಸಾಹಿತ್ಯವು ಹೀಗೆ ಅಖಿಲ ಭಾರತೀಯವಾಗಿ ತನ್ನನ್ನು ತಾನು ನಿರೂಪಿಸಿಕೊಂಡು ಬೆಳೆಯುತ್ತಿದ್ದ ಹೊತ್ತಿನಲ್ಲಿ ಕನ್ನಡದ ಪ್ರತಿಕ್ರಿಯೆ ಹೇಗಿತ್ತು? ಕನ್ನಡ ಸಮಾಜದಲ್ಲಿ ಬೇರೂರಿದ್ದ ಜೈನಸಮಾಜದ ಧಾರ್ಮಿಕ ನಡವಳಿಕೆಗಳನ್ನೂ ಅವರ ಧಾರ್ಮಿಕ ಪಠ್ಯಗಳನ್ನೂ ಓದುವ ಚಾರಿತ್ರಿಕ ಸಂದರ್ಭದಲ್ಲಿದ್ದ ಕಾರಣ ಅವುಗಳನ್ನು ಅನುಸಂಧಾನ ಮಾಡುವುದು ಸಹಜವಾಗಿಯೇ ಸಾಮಯಿಕವೆನಿಸಿತ್ತು. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಜೈನಧರ್ಮದ ಪರಿಚಯ ಅನಿವಾರ್ಯ ಎನ್ನುವಂತಿರುತ್ತದೆ. ಪಂಪನಂತಹ ಕನ್ನಡದ ಪ್ರಾತಿನಿಧಿಕ ಕವಿಗಳು ಜೈನಧರ್ಮಕ್ಕೆ ಸೇರಿರುವುದರಿಂದ ಹಾಗೂ ಅಪಾರ ಪ್ರಮಾಣದ ಜೈನಸಾಹಿತ್ಯವು ಸೃಷ್ಟಿಯಾಗಿ ಒಂದು ಯುಗವೇ ಅದರ ಹೆಸರಿನಲ್ಲಿ ಕರೆಯಬೇಕಾದುದರಿಂದ ಜೈನರ ಧರ್ಮದ ತಿರುಳು, ಅದರ ಆಚರಣಾತ್ಮಕವಾದ ಸಂಗತಿಗಳನ್ನು ಅಭ್ಯಾಸ ಮಾಡುವ ಸಂದರ್ಭ ಒದಗಿ ಬಂದಿತು. ಜೈನಕವಿಗಳು ಕನ್ನಡದಲ್ಲಿ ಲೌಕಿಕ ಮತ್ತು ಆಗಮಿಕ ಎನ್ನುವ ಕಾವ್ಯಧಾರೆಗಳನ್ನು ಸೃಷ್ಟಿಸಿಕೊಂಡು ಅದನ್ನೊಂದು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದುದರಿಂದ ಆಗಮಿಕ ಕಾವ್ಯಗಳು ಅವರ ಸಾಹಿತ್ಯದ ಭಾಗವಾಯಿತು. ರಾಜಾಶ್ರಯವೊ ಅಥವಾ ತಮ್ಮ ಕಾವ್ಯಪ್ರತಿಭೆಯನ್ನು ತೋರಲೆಂದೊ ಬರೆದ ಕಾವ್ಯ ಒಂದೆಡೆ ಇದ್ದರೆ ಇನ್ನೊಂದೆಡೆ, ತಮ್ಮ ಧರ್ಮದ ತೀರ್ಥಂಕರರನ್ನೋ ಆಸನ್ನಭವ್ಯರಾದ ಜೀವಚೇತನಗಳನ್ನೊ ಕುರಿತು ಬರೆದರೆ ಧಾರ್ಮಿಕ ಋಣದಿಂದ ಮುಕ್ತರಾದಂತೆ ಎಂದು ಭಾವಿಸಿದಂತೆ ಈ ಸಂಪ್ರದಾಯ ಬೆಳೆದುಬಂದಿದೆ. ಹೀಗೆ ಸಾಹಿತ್ಯ ಚರಿತ್ರೆಯಲ್ಲಿ ಜೈನಕವಿಗಳು ಪ್ರಬಲರಾದ ಕಾರಣ ಅವರ ಗ್ರಂಥಗಳನ್ನು ಓದಲು ಬೇಕಾದ ಸಿದ್ಧತೆಗಳನ್ನು ಕನ್ನಡ ವಾಚಕವರ್ಗ ಹಾಗು ಪಂಡಿತ ವರ್ಗಗಳು ಮಾಡಿಕೊಳ್ಳಬೇಕಾಗಿತ್ತು. ಜೈನಕವಿಗಳು ತಮ್ಮ ಧಾರ್ಮಿಕ ಸಾಹಿತ್ಯಗಳ ಆಕರಗಳಿಗಾಗಿ ಮೊರೆಹೊಗುತ್ತಿದ್ದುದು ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳ ಗ್ರಂಥಗಳನ್ನು. ಆದುದರಿಂದ ಸಂಸ್ಕೃತದಂತೆಯೇ ಪ್ರಾಕೃತಭಾಷೆಯನ್ನು ಕಲಿಯುವ ಆಸಕ್ತಿಯನ್ನು ಕನ್ನಡದ ಈ ವರ್ಗ ತೋರಿಸಿತು. ಆದರೆ ಇದೇ ಆಸಕ್ತಿ ಪಾಲಿ ಭಾಷೆಯ ಬಗ್ಗೆ ಬೆಳೆಯಲಿಲ್ಲ. ಕಾರಣವೇನೆಂದರೆ ಪಾಲಿಯು ಬೌದ್ಧಧರ್ಮದ ಭಾಷೆಯಾಗಿದ್ದು, ಕನ್ನಡದ ನಾಡು, ನುಡಿಗಳಲ್ಲಿ ಬೌದ್ಧಧರ್ಮ ಭಾರತದ ಇತರೆ ನಾಡುಗಳಲ್ಲಿ ಪ್ರಭಾವಶಾಲಿಯಾಗಿ ಒಳಹೊಕ್ಕಂತೆ ಪ್ರವೇಶಿಸದಿರುವುದು.

ಕನ್ನಡದಲ್ಲಿ ನಡೆದ ಬೌದ್ಧಸಾಹಿತ್ಯದ ಭಾಷಾಂತರಗಳಲ್ಲಿ ಪಾಲಿಯಿಂದ ನಡೆದ ಅನುವಾದಗಳು, ಸಂಸ್ಕೃತ ಹಾಗೂ ಇಂಗ್ಲಿಷ್ ನಿಂದ ನಡೆದ ಅನುವಾದಗಳು ಎಂದು ಎರಡು ಧಾರೆಗಳನ್ನು ಕಾಣಬಹುದು. ಯುರೋಪಿನ ವಿದ್ವಾಂಸರು ಈ ದಿಸೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಅವರು ರಚಿಸಿದ ಅನೇಕ ಪುಸ್ತಕಗಳು ಸಹ ನಮ್ಮ ನಡುವೆ ಆಕರಗ್ರಂಥಗಳಾದವು. ಕನ್ನಡಕ್ಕೆ ಬಂದ ಬಹುಪಾಲು ಪಠ್ಯಗಳಲ್ಲಿ ಈ ಮೂರು ಭಾಷೆಗಳಲ್ಲಿ ಬಂದ ಆಕರ ಪಠ್ಯಗಳನ್ನು ಆಧರಿಸಿ ಭಾಷಾಂತರಗಳು ನಡೆದಿವೆ. ಇದರ ಜೊತೆಗೆ ಬೌದ್ಧವಿದ್ವಾಂಸರು(ಇದರಲ್ಲಿ ಪಾಶ್ಚಾತ್ಯ ಹಾಗೂ ಭಾರತೀಯ ಎರಡೂ ವರ್ಗಗಳು ಸೇರುತ್ತವೆ) ಬರೆದ ಕೃತಿಗಳನ್ನು ಕನ್ನಡದಲ್ಲಿ ಭಾಷಾಂತರಿಸುವ ಪ್ರಯತ್ನಗಳೂ ಆಗಿವೆ. ಬೌದ್ಧ ವಿದ್ವಾಂಸರಲ್ಲಿ ಅಗ್ರಪಂಕ್ತಿಯಲ್ಲಿರುವ ಧರ್ಮಾನಂದ ಕೋಸಾಂಬಿ, ರಾಹುಲ್ ಸಂಕೃತಾಯನ, ಡಿ.ಡಿ,ಕೊಸಾಂಬಿ ಮುಂತಾದವರ ಅಭ್ಯಾಸಪೂರ್ಣ ಗ್ರಂಥಗಳು ಕನ್ನಡಕ್ಕೆ ಭಾಷಾಂತರಗೊಂಡಿವೆ. ಪಾಲಿಭಾಷೆಯನ್ನು ಶ್ರದ್ಧೆಯಿಂದ ಕಲಿತ ಧರ್ಮಾನಂದ ಕೋಸಾಂಬಿಯವರು ಪಾಲಿಗ್ರಂಥಗಳನ್ನು ಆಧರಿಸಿ ಬುದ್ಧನ ಮೇಲೆ ಬರೆದ ಮರಾಠಿ ಗ್ರಂಥವು ಕನ್ನಡದಲ್ಲಿ ಒಂದು ಪ್ರಮುಖವಾದ ಆಕರ ಗ್ರಂಥವಾಗಿದೆ. ಪಾಲಿವಿದ್ವಾಂಸರೂ ಬೌದ್ಧಧರ್ಮಾಸಕ್ತರೂ ಆದ ಥಿಯೊಡಾರ್ ಶೆರ್‍ಬಾತ್‍ಸ್ಕಿ ಅವರ ‘ದಿ ಸೆಂಟ್ರಲ್ ಕನ್ಸೆಪ್ಶನ್ ಆಫ್ ಬುದ್ಧಿಸಂ’(ಅನುವಾದ: ಬಿ,ಆರ್. ಜಯರಾಮರಾಜೇ ಅರಸ್) ಕೃತಿಯನ್ನು ಕನ್ನಡಕ್ಕೆ ತರಲಾಗಿದೆ. ಇದೇ ರೀತಿ ‘ಧಮ್ಮ ಸಂಪುಟ-1’ ಎನ್ನುವ ಕೃತಿಯು ಗೊಯೆಂಕಾ ಅವರು ವಿಪಶ್ಶನ ಧ್ಯಾನದ ಕುರಿತು ಬರೆದ ಲೇಖನಗಳನ್ನು ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿ ಕನ್ನಡಕ್ಕೆ ತಂದಿದೆ. ಹೀಗೆ ಉತ್ಸಾಹಿಗಳು ಮತ್ತೆ ಮತ್ತೆ ಬುದ್ಧಧರ್ಮವನ್ನು ಅನುಸಂಧಾನ ಮಾಡುತ್ತಾ ಬಂದಿವೆ.

ಬೌದ್ಧಧರ್ಮವನ್ನು ಅನುಸಂಧಾನ ಮಾಡುವುದಾದರೆ ಪಾಲಿ ಭಾಷೆ ಕಲಿಯುವುದು ಅಗತ್ಯ ಎಂದು ಭಾವಿಸಿ ಕನ್ನಡದ ಭಾಷಾಂತರಕಾರರು ತಮ್ಮ ಭಾಷಾಂತರವನ್ನು ಮಾಡಿದ್ದಾರೆ. ಮೂಲ ಪಾಲಿಯನ್ನು ಕಲಿತು ಭಾಷಾಂತರ ಮಾಡಿದ ಕನ್ನಡದ ವಿದ್ವಾಂಸರು ಬೆರಳೆಣಿಕೆಯಷ್ಟು. ಪ್ರಾಯಶಃ ಪಾಲಿ ಪ್ರಾಚೀನ ಭಾರತದಲ್ಲಿ ಪ್ರಚಲಿತವಿದ್ದ ಜನಭಾಷೆಯಾಗಿದ್ದುದು. ಅದರ ವ್ಯಾಕರಣ ಪದ್ಧತಿಯನ್ನಾಗಲೀ ಉಚ್ಚಾರಣಾ ಪದ್ಧತಿಯಾಗಲೀ ಪ್ರಾದೇಶಿಕವಾಗಿ ಸೀಮಿತವಾಗಿದ್ದುದರಿಂದ ಅದು ತನ್ನ ಪ್ರಭಾವವನ್ನು ಬೀರಲು ಸಾಧ್ಯವಾಗಲಿಲ್ಲವೆನ್ನಬಹುದು. ಇಷ್ಟಾದರೂ ಕನ್ನಡದಲ್ಲಿ ಸಣ್ಣದಾಗಿ ಪಾಲಿಭಾಷೆಯನ್ನು ಕಲಿಯುವ ಆಸಕ್ತರ ಗುಂಪನ್ನು ಗುರುತಿಸಿಕೊಳ್ಳಬಹುದು. ಕನ್ನಡದಲ್ಲಿ ಪಾಲಿಯಿಂದ ಭಾಷಾಂತರಗೊಂಡಿರುವ ಬೌದ್ಧಪಠ್ಯಗಳಲ್ಲಿ ತಿಪಿಟಕಗಳಲ್ಲಿರುವ ಸೂತ್ರಗಳು ಹಾಗೂ ಜಾತಕ ಕತೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.

ಕನ್ನಡದ ಮಟ್ಟಿಗೆ ಪಾಲಿಭಾಷಿಕ ಕೃತಿಗಳು ಹಾಗೂ ಸಂಸ್ಕೃತ ಗ್ರಂಥಗಳು ಎರಡೂ ಆಕರಗಳಾಗಿವೆ. “ಪಾಲಿ ವಾಙ್ಮಯ ಆಧಾರದ ಮೇಲೆ ರಚಿತವಾಗಿರುವ ಬುದ್ಧ ಮತ್ತು ಬುದ್ಧಧಮ್ಮವನ್ನು ಕುರಿತು ಬಂದ ಪುಸ್ತಕಗಳಿಗೆಲ್ಲ ಸಂಸ್ಕೃತ ಗ್ರಂಥಗಳೇ ಆಧಾರವಾಗಿವೆ ಎಂದು ಬುದ್ಧಧರ್ಮ ಮತ್ತು ವಾಙ್ಮಯವನ್ನು ಅಭ್ಯಾಸ ಮಾಡಿದ ಎಚ್.ವಿ ಶ್ರೀರಂಗರಾಜು ಅವರು ಅಭಿಪ್ರಾಯ ಪಡುತ್ತಾರೆ. ಆದರೆ ಕನ್ನಡದಲ್ಲಿ ಪಾಲಿಯನ್ನು ಕಲಿತು ಮೂಲಬೌದ್ಧಪಠ್ಯಗಳನ್ನು ಭಾಷಾಂತರ ಮಾಡಿದ ವಿದ್ವಾಂಸರೂ ಇದ್ದಾರೆ. ಅವರಲ್ಲಿ ರಾಜರತ್ನಂ, ಎಸ್.ಕೆ.ರಾಮಚಂದ್ರರಾಯರು, ಎಚ್.ವಿ.ಶ್ರೀರಂಗರಾಜು ಅವರು ಮುಖ್ಯರು. ಇದರಿಂದ ಕನ್ನಡದಲ್ಲಿ ಸಹ ಬೌದ್ಧಪಠ್ಯಗಳ ಎರಡು ಧಾರೆಗಳನ್ನು ನೋಡಬಹುದು. ರಾಜರತ್ನಂ ಅವರು ಮಿಲಿಂದ ಪ್ರಶ್ನೆಯ ಪೂರ್ವದಲ್ಲಿ ಬರೆದ ಟಿಪ್ಪಣಿಯಲ್ಲಿ “ಸಿಂಹಳದ ಬೌದ್ಧರು ಹೀನಾಯಾನಿಗಳು, ಅವರ ಧರ್ಮಗ್ರಂಥಗಳಿರುವುದು ಪಾಲಿಭಾಷೆಯಲ್ಲಿ. ಮಹಾಯಾನಿಗಳ ಸಂಸ್ಕೃತಗ್ರಂಥಗಳಿಗೆ ಅವರು ಬೆಲೆ ಕಟ್ಟುವುದಿಲ್ಲ. ಆದರೆ ಸಂಸ್ಕೃತ ರೂಪದಲ್ಲಿ ಹಿಂದೂದೇಶದಿಂದ ಆಗಮಿಸಿದ ಮಿಲಿಂದ ಪ್ರಶ್ನೆಯಲ್ಲಿ ಅಭಿಧರ್ಮಪಿಟಕದ ಬೋಧೆಯೇ ರೂಪಭೇದದಿಂದ ತಿಳಿಸಲ್ಪಟ್ಟಿರುವುದಕ್ಕೆ ಮೆಚ್ಚಿ ಸಿಂಹಳೀಯ ಹೀನಾಯಾನಿಗಳು ಆ ಸಂಸ್ಕೃತ ಮೂಲವನ್ನು ತಮ್ಮ ಧರ್ಮಗ್ರಂಥಗಳ ಭಾಷೆಯಾದ ಪಾಲಿಯಲ್ಲಿ ಅನುವಾದ ಮಾಡಿ ತಮ್ಮದು ಮಾಡಿಕೊಂಡರೆಂದು ತೋರುತ್ತದೆ. ಆದರೆ ಈಗ ಪಾಲಿ ಮಿಲಿಂದವಲ್ಲದೆ ಸಂಸ್ಕೃತ ಮಿಲಿಂದ ದೊರೆಯುವುದಿಲ್ಲ. ಹೀಗೆ ರೂಪಾಂತರಗೊಂಡ ಪಾಲಿ ಮಿಲಿಂದದಲ್ಲಿ ಅನೇಕ ಸೇರ್ಪಡೆಗಳಾಗಿರುವ ಶಂಕೆ ಇದೆ” ಎಂದು ಬರೆದಿದ್ದಾರೆ. ಕುತೂಹಲಕಾರಿಯಾದ ಸಂಗತಿ ಎಂದರೆ ಬೌದ್ಧಧರ್ಮದ ತಾತ್ವಿಕತೆಗಳು ಆರಂಭದಿಂದಲೂ ಪಾಲಿ ಮತ್ತು ಸಂಸ್ಕೃತ ಭಾಷೆಗಳ ಜಗ್ಗಾಟದಲ್ಲಿ ವ್ಯಕ್ತಗೊಂಡಿದ್ದು. ಪ್ರಾದೇಶಿಕವಾಗಿ ಜನಸಾಮಾನ್ಯರಿಗೆ ಎಂದು ಉಪದೇಶಗಳನ್ನು ಪಾಲಿಭಾಷೆಯಲ್ಲಿ ಹೇಳಿದ ಬುದ್ಧನ ನಂತರ ಮಹಾಯಾನಿಗಳು ಬೌದ್ಧತಾತ್ವಿಕತೆಯನ್ನು ಬೆಳೆಸಿದ್ದು ಸಂಸ್ಕೃತದಲ್ಲಿ. ವಿಶಿಷ್ಟ ಎಂದರೆ ಮಹಾಯಾನದ ಪ್ರಮುಖ ಪಠ್ಯಗಳು ಮೊದಲು ಸೃಷ್ಟಿಯಾಗಿದ್ದು ದ್ರಾವಿಡಭಾಷೆಯನ್ನಾಡುವ ದಕ್ಷಿಣ ಭಾರತದಲ್ಲಿ. ಪ್ರಕಾಂಡ ಪಂಡಿತ ವರ್ಗವು ಬೌದ್ಧಮೀಮಾಂಸೆಯ ಚರ್ಚೆಯನ್ನು ಆರಂಭಿಸಿ ಸಂಸ್ಕೃತದಲ್ಲಿ ಈ ಹಿಂದೆ ಬಂದ ವೈದಿಕ ಪಠ್ಯಗಳ ಮಾದರಿಯಲ್ಲಿಯೇ ಪಠ್ಯಗಳನ್ನು ರಚಿಸಿದರು. ಈ ಹಂತವು ಬೌದ್ಧಧರ್ಮದ ದೃಷ್ಟಿಯಿಂದ ಇನ್ನೊಂದು ಮಹತ್ವದ ಹೊರಳನ್ನು ಸೂಚಿಸುತ್ತದೆ. ಆದರೆ ಇತ್ತೀಚೆಗೆ ಪುನಾ ಶ್ರೀಲಂಕಾದ ಬೌದ್ಧ ವಿಹಾರಗಳು ತಮ್ಮ ಪ್ರಾಮುಖ್ಯತೆಯನ್ನು ಸ್ಥಾಪಿಸಿದ್ದರಿಂದ ಪಾಲಿಭಾಷೆಯಲ್ಲಿ ರಚಿತವಾದ ಹಳೆಯ ಪಠ್ಯಗಳಿಗೆ ಮತ್ತೆ ಮನ್ನಣೆ ದೊರೆಯಿತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೌದ್ಧಸಾಹಿತ್ಯದ ಭಾಷಾಂತರಗಳನ್ನು ಗಮನಿಸಬೇಕು. ಬೌದ್ಧಪಠ್ಯಗಳನ್ನು ಆಕರಗಳಾಗಿ ಯಾವ ಭಾಷಿಕ ಪಠ್ಯಗಳನ್ನು ಎತ್ತಿಕೊಳ್ಳುತ್ತಾರೆ ಎನ್ನುವುದು ಮುಖ್ಯ. ಹೀಗೆ ಪಾಲಿ ಮತ್ತು ಸಂಸ್ಕೃತಗಳೆಂಬ ಆಕರ ಭಾಷೆಗಳು ಕನ್ನಡದಲ್ಲಿ ಬೌದ್ಧಸಾಹಿತ್ಯಕ್ಕೆ ಒದಗಿ ಬಂದಿವೆ.

ರಾಜರತ್ನಂ ಅವರ ಬೌದ್ಧಸಾಹಿತ್ಯ ಭಾಷಾಂತರಗಳು

ರಾಜರತ್ನಂ ಅವರ ಬೌದ್ಧ ಸಾಹಿತ್ಯ ರಚನೆಗಳು-ಚೀನಾದೇಶದ ಬೌದ್ಧಯಾತ್ರಿಕರು, ಧರ್ಮದಾನಿ ಬುದ್ಧ, ಭಗವಾನ್ ಬುದ್ಧ, ಮೂರು ಪಾಲಿಸೂತ್ರಗಳು, ಬುದ್ಧವಚನ ಪರಿಚಯ, ಮಿಲಿಂದ ಪ್ರಶ್ನೆ, ಪಾಲಿಪಜ್ಜ ಪುಪ್ಫಂಜಲಿ, ಬುದ್ಧನ ಕತೆಗಳು, ಜಾತಕ ಕತೆಗಳು, ಧರ್ಮಪದ, ಬುದ್ಧನ ವರ್ಣವಾದ, ಧರ್ಮಪದ ಪ್ರವೇಶಿಕಾ, ಶಾಕ್ಯ ಸಾಹಿತ್ಯ ಮಂಟಪದ ಪ್ರಕರಣ, ಧರ್ಮ-ಸಾಹಿತ್ಯ-ದೃಷ್ಟಿ, ವೈಶಾಖಶುಕ್ಲ ಪೂರ್ಣಿಮಾ, ಪಟಾಚಾರ, ಕರ್ಮ, ಮಹಾಕಾರುಣಿಕ ಬುದ್ಧ, ಬೋಧಿಸತ್ವನ ಕತೆಗಳು, ಗೌತಮ ಬುದ್ಧ(ಜೀವನ) ಮುಂತಾದವು.

ಪಾಲಿಯನ್ನು ಕಲಿತು ಬೌದ್ಧತತ್ವ ಮತ್ತು ಸಾಹಿತ್ಯಗಳನ್ನು ಅಭ್ಯಾಸ ಮಾಡುವುದಕ್ಕೆ ಒಂದು ಬೆಳಕಿಂಡಿಯನ್ನು ಕೊರೆದುಕೊಟ್ಟವರಲ್ಲಿ ಜಿ.ಪಿ.ರಾಜರತ್ನಂ ಅವರ ಪಾತ್ರ ದೊಡ್ಡದಿದೆ. ಮೊದಲಿಗೆ ತಮ್ಮ ಆಸಕ್ತಿಯಿಂದ ಚೀನಾದೇಶದಿಂದ ಭಾರತಕ್ಕೆ ಬೌದ್ಧಧರ್ಮದ ಗ್ರಂಥಗಳನ್ನು ಅರಸಿ ಬಂದ ಫಾಹಿಯಾನ್, ಹ್ಯುಯೆನ್ ತ್ಸಾಂಗ್ ಮುಂತಾದ ಯಾತ್ರಿಕರ ಬಗ್ಗೆ ಕಿರು ಪರಿಚಯದ ಟಿಪ್ಪಣಿಗೆಂದು ಓದು ಅಧ್ಯಯನ ಆರಂಭಿಸಿ ಅದು ಹಿರಿದಾಗಿ ಕನ್ನಡಿಗರ ಮುಂದೆ ಬಂದಿತು. ಇದರಿಂದ ಉತ್ತೇಜಿತರಾಗಿ ಬೌದ್ಧಧರ್ಮದ ಅಭ್ಯಾಸಕ್ಕೆ ತೊಡಗಿದವರು ರಾಜರತ್ನಂ ಅವರು. ತಮ್ಮ ಅಭ್ಯಾಸಕ್ಕೆ ಮೂಲ ಪಾಲಿಭಾಷೆಯ ಕಲಿಕೆ ಎಂದು ತಿಳಿದುಕೊಂಡು ಪಾಲಿಯನ್ನು ಕಲಿತು ಆನಂತರ ಮೂಲ ಪಾಲಿಯಲ್ಲಿದ್ದ ತಿಪಿಟಕಗಳ ಆಯ್ದ ಭಾಗಗಳನ್ನು ಕನ್ನಡಕ್ಕೆ ಭಾಷಾಂತರಿಸತೊಡಗಿದರು

ಪಾಲಿವಾಙ್ಮಯವು ಮುಖ್ಯವಾಗಿ ತಿಪಿಟಕಗಳು ಮತ್ತು ಅಟ್ಠಕತೆಗಳ ಕಂತೆಗಳನ್ನು ಹೊಂದಿದೆ. ಇದರಲ್ಲಿ ಪವಿತ್ರವಾದ ಗ್ರಂಥಗಳೆಂದರೆ ತಿಪಿಟಕಗಳೆ. ಇವುಗಳನ್ನು ಸುತ್ತ, ವಿನಯ ಮತ್ತು ಅಭಿಧಮ್ಮ ಪಿಟಕಗಳೆಂದು ವಿಭಾಗಿಸಿದ್ದು ಪ್ರತಿಯೊಂದರಲ್ಲೂ ಮತ್ತೆ ವಿವಿಧ ಶಾಖೆಗಳಿವೆ. ಬುದ್ಧನ ಹಾಗೂ ಅವನ ಶಿಷ್ಯರ ಉಪದೇಶಗಳನ್ನು ಹೊಂದಿರುವ ಸುತ್ತ(ಸೂತ್ರ)ವು ದೀಘ, ಮಜ್ಝಿ, ಸಂಯುಕ್ತ, ಅಂಗುತ್ತರ, ಮತ್ತು ಖುದ್ಧ ನಿಕಾಯಗಳಲ್ಲಿ ಹರಡಿದೆ. ಭಿಕ್ಷುಗಳಿಗೆ ನೀತಿ, ನಿಯಮಗಳ ಚೌಕಟ್ಟುಗಳು ವಿನಯಸುತ್ತದಲ್ಲಿ ಸಂಗ್ರಹವಾಗಿದ್ದು ಅದರಲ್ಲಿ ಪಾರಾಜಿತ, ಪಾಚಿತ್ತಿಯಾದಿ, ಮಹಾವಗ್ಗ, ಚುಲ್ಲವರ್ಗ ಮತ್ತು ಪರಿವಾರ ಪಾಠ ಎಂಬುದಾಗಿ ಪ್ರಕಟಗೊಂಡಿದೆ. ಅಭಿಧಮ್ಮ ಪಿಟಕದಲ್ಲಿ ಧರ್ಮ ಸಂಗಢಿಣಿ, ವಿಭಂಗ, ಧಾತಿ ಕಥಾ, ಪುಗ್ಗಲ ಪಂಕ್ತಿ, ಕಥಾವತ್ಥು, ಯಮಕ ಮತ್ತು ಪಟ್ಠಾನ ಎಂಬ ಏಳು ಪ್ರಕರಣಗಳಿವೆ ಎನ್ನಲಾಗಿದೆ. ಈ ಮಾಹಿತಿಯನ್ನು ಕನ್ನಡಿಗರಿಗೆ ನೀಡುತ್ತಾ ಅಲ್ಲಿರುವ ಸೂತ್ರಗಳ ಸಾರವನ್ನು ಭಾಷಾಂತರದ ಮೂಲಕ ಒದಗಿಸಿದವರು ರಾಜರತ್ನಂ ಅವರು.

ರಾಜರತ್ನಂ ಅವರ ಭಾಷಾಂತರಗಳಲ್ಲಿ ಧಮ್ಮಪದ, ಮೂರು ಪಾಲಿಸೂತ್ರಗಳು, ಬುದ್ಧನ ವರ್ಣವಾದ, ಧರ್ಮಪದ ಪ್ರವೇಶಿಕಾ, ಪಟಾಚಾರ, ಕರ್ಮ-ಈ ಮುಂತಾದವು ಪಾಲಿಯಲ್ಲಿರುವ ಪಿಟಕಗಳ ಸುತ್ತಗಳಲ್ಲಿ ಕೆಲವನ್ನು ವಿಷಯಾನುಕ್ರಮ ಆಯ್ದುಕೊಂಡು ಸಂಗ್ರಹ ಮತ್ತು ಭಾಷಾಂತರವನ್ನು ರಾಜರತ್ನಂ ಅವರು ಮಾಡಿದ್ದಾರೆ. ರಾಜರತ್ನಂ ಅವರ ಭಾಷಾಂತರಗಳಲ್ಲಿಯೇ ವಿಶಿಷ್ಟವೆನಿಸುವ ‘ಮಿಲಿಂದ ಪ್ರಶ್ನೆ’ ಕೃತಿಯು ಕನ್ನಡದಲ್ಲಿ ದೊರೆಯುವ ತಾತ್ವಿಕಪಠ್ಯಗಳಲ್ಲಿ ಮುಖ್ಯವಾದುದು. ಪಾಲಿಭಾಷೆಯಲ್ಲಿದ್ದ ಗಾಥೆ/ಗಾಥಾ ರೀತಿಯ ರಚನೆಗಳನ್ನು ಆಯ್ದು ಅವುಗಳನ್ನು ‘ಪಾಲಿಪಜ್ಜ ಪುಪ್ಫಂಜಲಿ’ ಎಂಬ ಹೆಸರಿನಲ್ಲಿ ಭಾಷಾಂತರ ಮಾಡಿದ್ದಾರೆ.

‘ಮೂರು ಪಾಲಿ ಸೂತ್ರಗಳು’(1937) ಎಂಬ ಭಾಷಾಂತರ ಕೃತಿಯು ದೀಘನಿಕಾಯವೆಂಬ ಪಾಲಿಗ್ರಂಥದಿಂದ ಆಯ್ದ ಮೂರು ಸೂತ್ರಗಳನ್ನು ಆಧರಿಸಿದುದು. ಇದರಲ್ಲಿ ಶ್ರಾಮಣ್ಯ ಫಲಸೂತ್ರ, ಅಂಬಷ್ಟ ಸೂತ್ರ ಹಾಗೂ ಸೋಣದಂಡ ಸೂತ್ರ ಎಂಬ ಸೂತ್ರಗಳನ್ನು ಭಾಷಾಂತರಕ್ಕೆ ಆಯ್ದುಕೊಳ್ಳಲಾಗಿದೆ. ಶ್ರಾಮಣ್ಯ ಫಲ ಸೂತ್ರವು ದೀಘನಿಕಾಯದ ಮೂವತ್ನಾಲ್ಕು ಸೂತ್ರಗಳಲ್ಲಿ ಎರಡನೆಯದು. ಇದರಲ್ಲಿ ಮನುಷ್ಯ ಸಂನ್ಯಾಸಿಯಾಗುವುದರಿಂದ ಏನು ಫಲ ಸಾಧಿಸಬಹುದು ಎನ್ನುವುದನ್ನು ಭಗವಾನರು ಈ ಸೂತ್ರದಲ್ಲಿ ವಿವರಿಸಿದ್ದಾರೆ. ಅಜಾತಶತ್ರು ಮತ್ತು ಭಗವಾನರ ನಡುವಿನ ಸಂಭಾಷಣೆಯನ್ನು ಇಲ್ಲಿ ಕೊಟ್ಟಿದೆ. ‘ಅಂಬಷ್ಟ ಸೂತ್ರ’ವು ಮತ್ತೆ ಮತ್ತೆ ಭಾಷಾಂತರಗೊಂಡ ಸೂತ್ರವಾಗಿದೆ. ಪ್ರಾಯಶಃ ಇದು ಜಾತಿ ಸಂಬಂಧಿತ ಸೂತ್ರವಾದ ಕಾರಣ ಇದಕ್ಕೆ ಪ್ರಾಮುಖ್ಯತೆ ಬಂದಿರಬಹುದು. ಇನ್ನು ಕೊನೆಯದಾದ ಸೋಣದಂಡ ಸೂತ್ರವು ದೀಘನಿಕಾಯದ ಸೂತ್ರಗಳಲ್ಲಿ ನಾಲ್ಕನೆಯದು. ಇದೂ ಸಹ ಜಾತಿವಾದಕ್ಕೆ ಸಂಬಂಧಿಸಿದ ಚರ್ಚೆಯನ್ನು ಒಳಗೊಂಡಿದೆ. ಈ ದೃಷ್ಟಿಯಿಂದ ಮಹತ್ವಪೂರ್ಣವೆನಿಸುವ ಈ ಸೂತ್ರಗಳ ಭಾಷಾಂತರಗಳು ಕನ್ನಡಕ್ಕೆ ವಿಶಿಷ್ಟವೆನಿಸುತ್ತವೆ.

‘ಪಾಲಿ ಪಜ್ಜ ಪುಪ್ಫಂಜಲಿ’(1937) ಕೃತಿಯನ್ನು ಬರೆಯುವಾಗ ರಾಜರತ್ನಂ ಅವರು, ‘ಪಾಲಿ ಸಾಹಿತ್ಯದಲ್ಲಿ ನಾನು ಓದಿ ಆನಂದಪಟ್ಟ ಭಾಗಗಳನ್ನು ನನಗೆ ಸಾಧ್ಯವಿದ್ದಷ್ಟು ಮಟ್ಟಿಗೆ ಕನ್ನಡದಲ್ಲಿ ತಿಳಿಸಬೇಕೆಂದು ಈ ಪ್ರಯತ್ನಕ್ಕೆ ತೊಡಗಿದ್ದೇನೆಂದು’ ಅರಿಕೆ ಮಾಡಿಕೊಂಡಿದ್ದಾರೆ. ಈ ಕೃತಿಯ ವಿಶಿಷ್ಟತೆ ಏನೆಂದರೆ ಒಂದು ಕಡೆ ಮೂಲ ಪಾಲಿ ಪದ್ಯಗಳನ್ನು ಕೊಟ್ಟಿದೆ; ಇನ್ನೊಂದು ಬದಿಯಲ್ಲಿ ಅವುಗಳ ಕನ್ನಡಾನುವಾದಗಳನ್ನು ಕೊಟ್ಟಿದೆ.

‘ಮಿಲಿಂದ ಪ್ರಶ್ನೆ’ಯು ವಾಸ್ತವವಾಗಿ ತಿಪಿಟಕವನ್ನು ಅಭ್ಯಾಸ ಮಾಡುವ ಬೌದ್ಧರ ದೃಷ್ಟಿಯಿಂದ ಮಹತ್ವದ ಕೃತಿಯಲ್ಲ. ಆದರೆ ಅದು ಅಭಿಧಮ್ಮ ಪಿಟಕದ ಭಾಗವೇ ಎಂದು ಭಾವಿಸಿ ಅದನ್ನು ಓದುವ ಅಧಿಕಾರವನ್ನು ಹೀನಾಯಾನ ಪಂಥವು ಅಧಿಕೃತಗೊಳಿಸಿದೆ. ಇದು ಬೌದ್ಧಧರ್ಮದ ಶಾಸ್ತ್ರೀಯ ಗ್ರಂಥ ಎನ್ನಲಾಗುತ್ತದೆ. ರಾಜರತ್ನಂ ಅವರು ಇದನ್ನು ಮೂಲ ಪಾಲಿಯಿಂದ ಭಾಷಾಂತರ ಮಾಡಿದ್ದಾರೆ. ಮಿಲಿಂದನೆಂಬ ದೊರೆ ನಾಗಸೇನನೆಂಬ ಭಿಕ್ಷು ಇವರಿಬ್ಬರ ನಡುವೆ ನಡೆದ ಚರ್ಚೆ, ಸಂಭಾಷಣೆಗಳನ್ನು ಕ್ರೋಢೀಕರಿಸಿ ಈ ರಚನೆಯನ್ನು ಮಾಡಲಾಗಿದೆ. ರಾಜರತ್ನಂ ಅವರ ಈ ಅನುವಾದವು ಅನೇಕ ಬಾರಿ ಪ್ರಕಟಣೆಯ ಭಾಗ್ಯ ಕಂಡಿದೆ. ಬೌದ್ಧಪಠ್ಯಗಳ ಕುರಿತು ತಿಳಿವಳಿಕೆ ನೀಡುವ ಗ್ರಂಥಗಳಲ್ಲಿ ಇದು ಪ್ರಮುಖವಾದುದು ಎನಿಸಿದೆ.

‘ಬುದ್ಧನ ವರ್ಣವಾದ’(1949) ಎನ್ನುವ ಕೃತಿಯು ವೃಷಲ ಸೂತ್ರ, ವಾಸಿಷ್ಠ ಸೂತ್ರ, ಅಗ್ರಜ್ಞ ಸೂತ್ರ, ಅಶ್ವಲಾಯನ ಸೂತ್ರ, ಅಂಬಷ್ಟ ಸೂತ್ರ, ಸೋಣದಂಡ ಸೂತ್ರ, ಪಿಸುಕಾರೀ ಸೂತ್ರ, ಹರಿಕೇಶೀಯ ಸೂತ್ರ, ಯಜ್ಞೀಯ ಸೂತ್ರ ಮುಂತಾಗಿ ಅನೇಕ ಸೂತ್ರಗಳು ಸುತ್ತಪಿಟಕಕ್ಕೆ ಸೇರಿದವು. ಜಾತಿ ಪ್ರಶ್ನೆಯನ್ನು ಕುರಿತು ಬುದ್ಧ ತನ್ನ ಜೀವಿತಾವಧಿಯಲ್ಲಿ ಅನೇಕ ಬಾರಿ ಚರ್ಚೆಗೆ ಕೂಡುವ ಪ್ರಸಂಗ ಬರುತ್ತದೆ. ಜಾತಿಯ ಅಸ್ತಿತ್ವವನ್ನು ನಿರಾಕರಿಸಿ ಶೀಲವನ್ನು ಪ್ರಮಾಣವನ್ನಾಗಿ ಮಾಡಿಕೊಳ್ಳಬೇಕೆನ್ನುವ ನಿಲುವು ಹೊಂದಿದ ಭಗವಾನ್ ಬುದ್ಧನು ಅನೇಕ ಉಚ್ಚಕುಲದವರ ಜೊತೆಗೆ ನಡೆಸಿದ ಚರ್ಚೆಗಳನ್ನು ಸುತ್ತವಾದದಲ್ಲಿ ಸಂಗ್ರಹಿಸಲಾಗಿದೆ. ಅವುಗಳಲ್ಲಿ ರಾಜರತ್ನಂ ಅವರು ಖುದ್ದಕ ನಿಕಾಯ(5ವಿಭಾಗ)ದ ಹದಿನೈದು ಗ್ರಂಥಗಳಲ್ಲಿ ಒಂದಾದ ಸುತ್ತ ನಿಪಾತವನ್ನು ಭಾಷಾಂತರದಲ್ಲಿ ಕೇಂದ್ರೀಕರಿಸಿದ್ದಾರೆ. ಸುತ್ತ ನಿಪಾತವು ಸಹ ಐದು ವಗ್ಗ(ವರ್ಗ)ಗಳಾಗಿ ವಿಂಗಡಿಸಲ್ಪಟ್ಟಿವೆ. ಇಲ್ಲಿ ಭಾಷಾಂತರಕ್ಕೆ ಎತ್ತಿಕೊಂಡಿರುವ ಬ್ರಾಹ್ಮಣ ಧಾರ್ಮಿಕ ಸೂತ್ರ, ವೃಪಲ ಸೂತ್ರ, ಮತ್ತು ವಾಸಿಷ್ಠ ಸೂತ್ರ ಎಂಬ ಮೂರೂ ಸೂತ್ರಗಳನ್ನು ಸುತ್ತನಿಪಾತದಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಮುಖ್ಯವಾಗಿ ಈ ಭಾಷಾಂತರವು ಜಾತಿ ಸಮಸ್ಯೆ ಉಲ್ಭಣವಾದ ಕಾಲದಲ್ಲಿ ಅಂದರೆ 1937-40 ರ ಅವಧಿಯಲ್ಲಿ ಬಂದಿರುವುದು ಗಮನಿಸಬೇಕಾದ ಸಂಗತಿ. ಪ್ರಾಯಶ: ರಾಜರತ್ನಂ ಅವರಿಗೆ ಜೈನಧರ್ಮೀಯರು ನಿಂದನೆ ಮಾಡಿ ಅವರ ಅಧ್ಯಯನದ ಅಧಿಕೃತತೆಯನ್ನು ಸಾರ್ವಜನಿಕವಾಗಿ ಪ್ರಶ್ನೆ ಮಾಡಿದ್ದು ಇದೇ ಅವಧಿಯಲ್ಲಿ. ಇದರಿಂದ ವರ್ತಮಾನಕ್ಕೆ ಸಂವಾದಿಯೆಂಬಂತೆ ಈ ಭಾಷಾಂತರಗಳು ಬಂದಿರುವುದು ಚರಿತ್ರೆಯ ದೃಷ್ಟಿಯಿಂದ ಗಮನಾರ್ಹ ಎಂದೇ ಹೇಳಬಹುದು.

ರಾಜರತ್ನಂ ಬೌದ್ಧಸಾಹಿತ್ಯದ ಭಾಷಾಂತರಗಳಲ್ಲಿ ಜನಪ್ರಿಯವಾದ ಕೃತಿಗಳೆಂದರೆ ಜಾತಕ ಕತೆಗಳು. ಬೋಧಿಸತ್ವನ ಜೀವನಗಳ ಪುನರ್ಭವಗಳನ್ನು ಹೇಳುವ ಜಾತಕ ಕತೆಗಳು ಪಂಡಿತ ಪಾಮರರಿಗೆಲ್ಲ ಮುಟ್ಟಬಲ್ಲ ಕತೆಗಳು. ‘ಜಾತಕ ಕತೆಗಳು’ ಎಂಬ ಹೆಸರಿನಲ್ಲಿ ಮೊದಲ ಕಂತಿನಲ್ಲಿ ಅರವತ್ತಾರು ಕತೆಗಳನ್ನು ಭಾಷಾಂತರಿಸಲಾಗಿದೆ. ಎರಡನೆಯ ಭಾಗದಲ್ಲಿ ಇನ್ನೂ ಐವತ್ತು ಕತೆಗಳನ್ನು ಭಾಷಾಂತರಿಸಲಾಗಿದೆ. ಇವುಗಳನ್ನು ಮೂಲ ಪಾಲಿಯಿಂದಲೇ ಆಯ್ದುಕೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಕೊನೆಯಲ್ಲಿ

ಕನ್ನಡದಲ್ಲಿ ಬೌದ್ಧಪಠ್ಯಗಳ ಭಾಷಾಂತರವು ಸಣ್ಣಧಾರೆಯಂತೆ ಇದ್ದರೂ ನಿರಂತರವಾಗಿ ಹರಿಯುತ್ತಾ ಇದೆ. ಬುದ್ಧನ ಉಪದೇಶಗಳು ಮತ್ತು ಜಾತಕ ಕತೆಗಳು ಕನ್ನಡದಲ್ಲಿ ಬಹುವಾಗಿ ಪ್ರಚಲಿತ ಇರುವಂತವು. ಈ ವಾಙ್ಮಯವನ್ನು ಪಾಲಿ ಮತ್ತು ಸಂಸ್ಕೃತಭಾಷೆಗಳೆರಡರಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಇಂಗ್ಲಿಷಿನಿಂದಲೂ ಭಾಷಾಂತರಗಳನ್ನು ಮಾಡಲಾಗುತ್ತಿದೆ. ಇಪ್ಪತ್ತನೇ ಶತಮಾನದ ಜ್ಞಾನಮೀಮಾಂಸೆಗಳಿಗೆ ಇಂಬು ನೀಡುವಂತೆ ಇರುವ ಎರಡು ಸಾವಿರ ವರ್ಷದಾಚೆಯ ಜ್ಞಾನಶಿಸ್ತು ಎನಿಸಿದ ಬೌದ್ಧಧರ್ಮವನ್ನು ಅಭ್ಯಾಸ ಮಾಡಲು ಇವತ್ತು ಜಾತಿ, ಮತ ಮೀರಿ ಜ್ಞಾನಪಿಪಾಸುಗಳು ಆ ಸಾಹಿತ್ಯದ ಬಗೆಗೆ ಆಸಕ್ತಿ ತೋರುತ್ತಿದ್ದಾರೆ. ಇದು ಬೌದ್ಧಧರ್ಮದ ಭಾಷಾಂತರಗಳನ್ನು ಬೆಳೆಸುವ ಅಂಶವಾಗಿದೆ.

ಆಕರಗಳು:

ಆದ್ಯರಂಗಾಚಾರ್ಯ. ಭಗವಾನ್ ಬುದ್ಧ(ಅನು). ಡೆಲ್ಲಿ: ಕೇಂದ್ರ ಸಾಹಿತ್ಯ ಅಕಾಡೆಮಿ, 1956
ಆರ್ಯ. ಬುದ್ಧ ಚರಿತೆ. ಅಶ್ವಘೋಷ ಕವಿಯ ಸಂಸ್ಕೃತ ಮಹಾಕಾವ್ಯ. ಕನ್ನಡ ಗದ್ಯಾನುವಾದ. ಅಥಣಿ: ವಿಮೋಚನಾ ಪ್ರಕಾಶನ, 2008
ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿ. ಧಮ್ಮ ಸಂಪುಟ-1. ಬೆಂಗಳೂರು: ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿ, 2017
ಜಯರಾಮರಾಜೇ ಅರಸ್. ನಿರ್ವಾಣ(ಅನು). ಬೆಂಗಳೂರು: ಕುವೆಂಪು ಭಾಷಾಭಾರತಿ, 2009
ಜಯರಾಮರಾಜೇ ಅರಸ್. ಬೌದ್ಧಧರ್ಮದ ಕೇಂದ್ರ ಪರಿಕಲ್ಪನೆ’(ಅನು). ಬೆಂಗಳೂರು: ಕುವೆಂಪು ಭಾಷಾಭಾರತಿ, 2011
ನಟರಾಜ ಬೂದಾಳು. ಸರಹಪಾದ. ಬೆಂಗಳೂರು: ಗೋಧೂಳಿ ಪ್ರಕಾಶನ, 2016
ರಾಜರತ್ನಂ, ಜಿ.ಪಿ. ಮೂರು ಪಾಲಿಸೂತ್ರಗಳು(ಅನು). ಬೆಂಗಳೂರು: ಶಾಕ್ಯ ಸಾಹಿತ್ಯ ಮಂಟಪ, 1937
ರಾಜರತ್ನಂ, ಜಿ.ಪಿ. ಪಾಲಿ ಪಜ್ಜ ಪುಪ್ಫಂಜಲಿ(ಅನು). ಬೆಂಗಳೂರು: ಶಾಕ್ಯ ಸಾಹಿತ್ಯ ಮಂಟಪ, 1937
ರಾಜರತ್ನಂ, ಜಿ.ಪಿ. ಜಾತಕ ಕಥೆಗಳು(ಅನು). ಬೆಂಗಳೂರು: ಶಾಕ್ಯ ಸಾಹಿತ್ಯ ಮಂಟಪ, 1941
ರಾಜರತ್ನಂ, ಜಿ.ಪಿ. ಬುದ್ಧನ ವರ್ಣವಾದ(ಅನು). ಬೆಂಗಳೂರು: ಶಾಕ್ಯ ಸಾಹಿತ್ಯ ಮಂಟಪ, 1949
ರಾಜರತ್ನಂ, ಜಿ.ಪಿ. ಮಿಲಿಂದ ಪ್ರಶ್ನೆ(ಅನು). ಬೆಂಗಳೂರು: ಕುವೆಂಪು ಭಾಷಾಭಾರತಿ, 2007
ರಾಜರತ್ನಂ, ಜಿ.ಪಿ. ವೈಶಾಖ ಶುಕ್ಲ ಪೂರ್ಣಿಮಾ. ಬೆಂಗಳೂರು: ಶಾಕ್ಯ ಸಾಹಿತ್ಯ ಮಂಟಪ, 1940
ರಾಜಾರಾಂ, ಬಿ.ವಿ. ಧಮ್ಮಪದ. ಬೆಂಗಳೂರು: ಮಹಾಬೋಧಿ ಸಂಘ, 2004 ನೇ ಮುದ್ರಣ
ವೆಂಕಟೇಶ ಪ್ರಸಾದ್, ಬಿ.ಎಸ್. ಬುದ್ಧ ಭಾರತ(ಅನು). ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 2005
ಶ್ರೀರಂಗರಾಜು, ಎಚ್.ವಿ. ವಿಜ್ಜಾಚರಣ ಸಂಪನ್ನ ಗೋತಮಬುದ್ಧ. ಧಾರವಾಡ: ಆನಂದ ಪಬ್ಲಿಕೇಷನ್ಸ್, 1980
ರಾಜರತ್ಮಂ, ಜಿ.ಪಿ. “ಬೌದ್ಧಧರ್ಮ”. ಅನಕೃ(ಸಂ). ಭಾರತೀಯ ಸಂಸ್ಕøತಿ ದರ್ಶನ. ಅ.ನ.ಕೃಷ್ಣರಾಯ(ಸಂ). ಬೆಂಗಳೂರು:
ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ, 1962

ಈ ಅಂಕಣದ ಹಿಂದಿನ ಬರೆಹಗಳು:

ಶ್ರದ್ಧೆಯ ಬೆಸೆವ ಭಾಷಾಂತರ

ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ

ಬೇಂದ್ರೆ ಅನುವಾದಗಳ ಅನುಸಂಧಾನ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ

ಇಂಗ್ಲಿಷ್ ಗೀತಗಳ ಪಯಣ

ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...