ಕಾರಂತರ ಬೆಟ್ಟದ ಜೀವ: ಕೃತಿ ಮತ್ತು ಪ್ರಕೃತಿ

Date: 23-05-2022

Location: ಬೆಂಗಳೂರು


'ಶಿವರಾಮ ಕಾರಂತರು ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಮಾನವ ಪ್ರಕೃತಿಯೊಂದಿಗೆ ನಡೆಸುವ ಹೋರಾಟದ ವಿಶಿಷ್ಟ ಚಿತ್ರಣವನ್ನು ನೀಡಿದ್ದಾರೆ' ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್ ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿ ಮತ್ತು ಪ್ರಕೃತಿಯ ಕುರಿತು ವಿಶ್ಲೇಷಿಸಿದ್ದಾರೆ.

ಶಿವರಾಮ ಕಾರಂತರ ‘ಬೆಟ್ಟದ ಜೀವ’ (1943) ಅವರ ಮುಖ್ಯ ಕಾದಂಬರಿಗಳಲ್ಲಿ ಒಂದು. “ಗಟ್ಟಿಯಾದ ಅನುಭವ, ಪ್ರಬುದ್ಧ ಜೀವನ ದೃಷ್ಟಿ, ವಸ್ತುನಿಷ್ಠ ಪ್ರಾಮಾಣಿಕತೆ, ಪ್ರಖರ ಸಾಮಾಜಿಕತೆ ಹಾಗೂ ನಿರ್ಭೀತಿಯ ನಿಲುವುಗಳಿಂದಾಗಿ ಕಾರಂತರ ಕಾದಂಬರಿಗಳು ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ಸಾಧನೆಯ ಅಂಗಗಳಾಗಿವೆ”(ಕನ್ನಡ ಕಥನ ಸಾಹಿತ್ಯ: ಕಾದಂಬರಿ) ಎಂಬ ಡಾ. ಜಿ. ಎಸ್. ಆಮೂರ ಅವರ ಮಾತು ಕಾರಂತರ ಎಲ್ಲಾ ಕಾದಂಬರಿಗಳಿಗೆ ಅನ್ವಯಿಸುವುದರೊಂದಿಗೆ ‘ಬೆಟ್ಟದ ಜೀವ’ಕ್ಕೆ ವಿಶೇಷವಾಗಿ ಅನ್ವಯಿಸುತ್ತದೆ. ಕಾರಂತರ ಬೆಟ್ಟದ ಜೀವ’ ಹಲವು ಕಾರಣಗಳಿಂದಾಗಿ ಹೆಸರು ಮಾಡಿರುವ ಕಾದಂಬರಿಯಾಗಿದೆ. ಅದರಲ್ಲಿ ಕಾದಂಬರಿಯ ವಸ್ತು ಮತ್ತು ತಂತ್ರ ಒಟ್ಟಾರೆಯಾಗಿ ಅಭಿವ್ಯಕ್ತಿ ಕೂಡ ಮುಖ್ಯವಾಗಿದೆ. ಈ ಕುರಿತು ಪ್ರಸ್ತುತ ಬರೆಹದ ಮೂಲಕ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ.

ಪ್ರತಿಯೊಂದು ಕಾದಂಬರಿಯೂ ಸಾಮಾನ್ಯವಾಗಿ ಒಂದು ಕಥೆಯನ್ನು ಹೇಳುತ್ತದೆ. ಕಥೆಯ ಪ್ರಾಧಾನ್ಯ ಕೃತಿಯಿಂದ ಕೃತಿಗೆ ಭಿನ್ನವಾಗಬಹುದಾದರೂ ಅದಿಲ್ಲದೆ ಕಾದಂಬರಿಯಿಲ್ಲ. ಕಥೆಯ ಅಂಶ ಕಾದಂಬರಿಗೆ ಮುಖ್ಯ ಎಂದೇ ಹೇಳಬಹುದು. ಓದುಗರನ್ನು, ಅವರ ಆಸಕ್ತಿಯನ್ನು ಹಿಡಿದಿಡುವಲ್ಲಿ ಕಥೆ ಪ್ರಮುಖ ಪಾತ್ರ ವಹಿಸುತ್ತದೆ. ಕಾದಂಬರಿಕಾರ ಏನನ್ನು ಹೇಳುತ್ತಿದ್ದಾನೆ? ಮತ್ತು ಹೇಗೆ ಹೇಳುತ್ತಿದ್ದಾನೆ? ಎಂಬ ಎರಡು ಪ್ರಶ್ನೆಗಳೇ ಅದರ ವಸ್ತು ಮತ್ತು ತಂತ್ರಕ್ಕೆ ನೀಡುವ ಉತ್ತರವಾಗುತ್ತದೆ. ವಸ್ತು ಎಂಬುದು ನೇರವಾಗಿ ಕಥೆಗೆ ಸಂಬಂಧಪಡುವ ಸಂಗತಿಯಾದರೆ, ತಂತ್ರ ಕಥನಕ್ಕೆ ಸಂಬಂಧಿಸುತ್ತದೆ. ಕಥೆ ಯಾವುದೇ ಇದ್ದರೂ ಹೇಗೆ ಹೇಳುವುದು ಎಂಬುದು ಕಾದಂಬರಿಕಾರ ಮೊದಲು ನಿರ್ಧರಿಸಬೇಕಾದ ಸಂಗತಿಯಾಗಿದೆ.

ಕಥೆಯನ್ನು ನಿರೂಪಿಸುವ ರೀತಿ ಅಥವಾ ತಂತ್ರ ಎರಡು ದೃಷ್ಟಿಯಿಂದ ಮಹತ್ವಪಡೆಯುತ್ತದೆ. ಮೊದಲನೆಯದು ಕೇಳುವವರ ಅಥವಾ ಓದುಗರ ಮನಸ್ಸನ್ನು ಹಿಡಿದು ನಿಲ್ಲಿಸುವಂತೆ ಕಥೆ ಹೇಳುವುದು. ಇದು ಕಾದಂಬರಿಯ ಪರಿಣಾಮದ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತದೆ. ಇನ್ನೊಂದು; ಕಾದಂಬರಿಕಾರ ತನ್ನ ಕೃತಿಯಲ್ಲಿ ಸಾಮಾನ್ಯವಾಗಿ ಕಥೆ ಹೇಳುವ ಉದ್ದೇಶವನ್ನು ಮಾತ್ರ ಇಟ್ಟುಕೊಂಡಿರುವುದಿಲ್ಲ. ಜೊತೆಗೆ ತನ್ನ ಜೀವನ ದೃಷ್ಟಿಯ ಮೂಲಕ ಸಾಧಿಯವಾಗುವ ಯಾವುದೋ ಅನುಭವ ವಿಶೇಷವನ್ನು ಸಂವಹನಗೊಳಿಸುತ್ತಿರುತ್ತಾನೆ. ಈ ಗುರಿಯನ್ನು ಅವನು ಹೇಗೆ ಸಾಧಿಸುತ್ತಾನೆ ಎನ್ನುವುದು ಅವನು ಹೇಗೆ ಪಾತ್ರ ಸೃಷ್ಟಿ ಮಾಡುತ್ತಾನೆ? ಹೇಗೆ ಸನ್ನಿವೇಶಗಳನ್ನು ನಿರೂಪಿಸುತ್ತಾನೆ? ಎಂಬುದನ್ನು ಅವಲಂಬಿಸಿರುತ್ತದೆ. ಇದನ್ನೇ ಸಾಮಾನ್ಯವಾಗಿ ತಂತ್ರ ಎನ್ನಲಾಗುತ್ತದೆ.

ಕಾದಂಬರಿಕಾರ ಕಥೆ ಹೇಳುವ ಕಾರ್ಯವನ್ನು ಎರಡು ರೀತಿಯಲ್ಲಿ ಸಾಧಿಸಬಹುದು. ವೃತ್ತಾಂತ ಮೊದಲನೆಯದಾದರೆ; ದೃಶ್ಯ ಚಿತ್ರಣ ಎರಡನೆಯದು ಎನ್ನಬಹುದು. ಮೊದಲನೆಯದರಲ್ಲಿ ಕಾದಂಬರಿಕಾರ ತಾನೇ ನಿರೂಪಕನಾಗಿ ನಡೆದ ಘಟನೆಗಳನ್ನು ವರ್ಣಿಸುತ್ತಾ ಹೋಗಬಹುದು. ಈ ತಂತ್ರವನ್ನು ಬಳಸುವಾಗ ಲೇಖಕ ತಾನೇ ಪಾತ್ರಗಳನ್ನು ಘಟನೆಗಳನ್ನು ವರ್ಣಿಸುತ್ತಾ ಹೋಗುತ್ತಾನೆ. ಇಲ್ಲಿ ಕತೆಗಾರನ ಧ್ವನಿ ಕಿವಿಗೆ ಬೀಳುತ್ತಲೇ ಇರುತ್ತದೆ. ಇಂಥಲ್ಲಿ ಪಾತ್ರಗಳು ಹಾಗೂ ಘಟನೆಗಳಿಗಿರುವ ಪ್ರಾಧಾನ್ಯವೇ ಕಥೆಗಾರನಿಗೂ ಇರುತ್ತದೆ. ಎರಡನೆಯ ರೀತಿಯಲ್ಲಿ ಕಾದಂಬರಿಕಾರ ದೃಶ್ಯಗಳನ್ನು ಚಿತ್ರಿಸುತ್ತಾನೆ. ನಾಟಕದ ಹಾಗೆ ತಮ್ಮ ಪಾತ್ರ ನಿರ್ವಹಣೆಯನ್ನು ಆಯಾ ಪಾತ್ರಗಳೇ ಮಾಡುತ್ತವೆ. ಇಲ್ಲಿ ಲೇಖಕ ನೇರವಾಗಿ ಏನನ್ನೂ ಹೇಳುತ್ತಿರುವುದಿಲ್ಲ. ಅವನ ಕಾರ್ಯ ಏನಿದ್ದರೂ ಪಾತ್ರಗಳ ಮೂಲಕ ಮಾತನಾಡುವುದು.

ಈ ಮೇಲಿನ ಎರಡು ತಂತ್ರಗಳಲ್ಲಿ ಒಂದೊಂದೂ ತನ್ನದೇ ಆದ ಪ್ರಯೋಜನವನ್ನು ಹೊಂದಿರುತ್ತದೆ. ವೃತ್ತಾಂತದ ವಿಧಾನ ಕಾದಂಬರಿಕಾರನಿಗೆ ಹೆಚ್ಚು ಸ್ವಾತಂತ್ರ್ಯವನ್ನು ನೀಡುತ್ತದೆ. ಅವನ ಕಾರ್ಯವನ್ನು ಸುಲಭಮಾಡುತ್ತದೆ. ಪ್ರತಿ ಹೆಜ್ಜೆಯಲ್ಲೂ ಅವನು ಓದುಗರ ಮಾರ್ಗದರ್ಶಿಯಾಗುವುದರೊಂದಿಗೆ, ಪಾತ್ರಗಳ ವಿಷಯವನ್ನು ಅವನು ಸ್ಪಷ್ಟವಾಗಿ ಹೇಳುತ್ತಿರುತ್ತಾನೆ. ದೃಶ್ಯವೂ ಕೆಲವೊಮ್ಮೆ ವೃತ್ತಾಂತಕ್ಕಿಂತ ಹೆಚ್ಚು ಆಸಕ್ತಿಯನ್ನುಂಟು ಮಾಡಬಹುದು. ಓದುಗರು ‘ಸಂಭಾಷಣೆಯ’ ಭಾಗಕ್ಕೆ ಧಾವಿಸುವುದು ಇದನ್ನು ಸೂಚಿಸುತ್ತದೆ. ಇದು ನಾಟಕಕಾರರು ಬಳಸುವ ತಂತ್ರವಾದರೂ ಕಾದಂಬರಿಗಲಲ್ಲಿಯೂ ಯಶಸ್ವಿಯಾಗಿ ಬಳಕೆಯಾಗುತ್ತದೆ. ನಾಟಕಕಾರನಿಗಿಲ್ಲದ ಒಂದು ಸೌಕರ್ಯ ಕಾದಂಬರಿಕಾರನಿಗಿರುತ್ತದೆ. ಅದೆಂದರೆ; ಆತ ಎರಡೂ ತಂತ್ರಗಳನ್ನು ಬಳಸಿಕೊಳ್ಳಬಹುದು. ಕಾದಂಬರಿಕಾರನ ಉದ್ದೇಶಕ್ಕನುಗುಣವಾಗಿ ಅವುಗಳ ಪ್ರಮಾಣ ನಿರ್ಧಾರವಾಗುತ್ತದೆ. ದೃಶ್ಯ ಮತ್ತು ವೃತ್ತಾಂತಗಳು ಒಂದಾದ ಮೆಲೆ ಒಂದು ಬರುವ ನಿರೂಪಣಾ ವಿಧಾನಗಳನ್ನೇ ಕಾದಂಬರಿಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ.

ವೃತ್ತಾಂತದ ಮಹತ್ವ ಇನ್ನೊಂದು ರೀತಿಯಲ್ಲಿಯೂ ಕಾಣಿಸುತ್ತದೆ. ಕಾದಂಬರಿಕಾರ ತನ್ನ ಕಾದಂಬರಿಯ ಎಲ್ಲಾ ಪಾತ್ರಗಳ ಸಮಗ್ರ ಜೀವನವನ್ನು ದೃಶ್ಯಗಳ ಮೂಲಕ ತೋರಿಸಲಾರ. ಅನಿವಾರ್ಯವಾಗಿ ಹಲವು ಸಂಗತಿಗಳನ್ನು ಅವನು ಸಂಕ್ಷಿಪ್ತವಾಗಿ ನಿರೂಪಿಸಬೇಕಾಗುತ್ತದೆ. ಪಾತ್ರಗಳ ಸಂಬಂಧವನ್ನು, ದೃಶ್ಯದ ಹಿನ್ನೆಲೆಯನ್ನು, ಘಟನೆಗಳ ಸೂಚನೆಯನ್ನು ಆತ ವೃತ್ತಾಂತದ ಮೂಲಕವೇ ಹೇಳುತ್ತಾನೆ. ಹೀಗಾಗಿ ದೃಶ್ಯದ ಸಿದ್ಧತೆಯೇ ವೃತ್ತಾಂತವಾಗುತ್ತದೆ. “ವೃತ್ತಾಂತ-ನಾಟಕೀಯ ತಂತ್ರಗಳು ಒಂದಕ್ಕೊಂದು ಪೋಷಕವಾಗಬೇಕು. ಪಾತ್ರ-ಘಟನೆಗಳು ಕಾದಂಬರಿಕಾರನ ಗುರಿಯ ಸಾಧನೆಗೆ ಸಹಾಯಕವಾಗಬೇಕು. ವರ್ಣನೆ-[ಪಾತ್ರ-ಸನ್ನಿವೇಶ-ಶೈಲಿಗಳನ್ನೆಲ್ಲ ತನ್ನ ಗುರಿಗೆ ಅಧೀನಪಡಿಸಿಕೊಂಡು ಪ್ರತಿಯೊಂದು ಅಂಶವನ್ನೂ ಚಿತ್ರಗಾರ ಬಣ್ಣಗಳನ್ನು ಎಚ್ಚರಿಕೆಯಿಂದ ಬಳಸಿದಂತೆ ಬಳಸಿಕೊಳ್ಳಬೇಕು.-ಇವೆಲ್ಲ ಕಾದಂಬರಿಯ ಕಲೆಯ ಅ-ಆ-ಇ-ಈ. ಇದಿಷ್ಟನ್ನು ಸಾಧಿಸಿದರೆ ಕಾದಂಬರಿ ಉತ್ಕೃಷ್ಟ ಕಲಾಕೃತಿಯಾಗುವುದು ಎಂದು ಹೇಳಲಾಗುವುದಿಲ್ಲ. ಆದರೆ ಅವುಗಳನ್ನು ಅಲಕ್ಷಿಸಿದರೆ ಕಾದಂಬರಿ ಕಲಾಕೃತಿಯಾಗಲು ಸಾಧ್ಯವಿಲ್ಲ” (ಎಲ್.ಎಸ್.ಶೇಷಗಿರಿರಾವ್; ಸಮಗ್ರ ವಿಮರ್ಶಾ ಸಾಹಿತ್ಯ 7; 76).

ವೃತ್ತಾಂತ ನಿರೂಪಣೆಯಲ್ಲಿ ಕೆಲವೊಮ್ಮೆ ಕಾದಂಬರಿಕಾರ ಯಾವುದಾದರೊಂದು ಪಾತ್ರದ ಹಿನ್ನೆಲೆಯಲ್ಲಿ ನಿಂತು ಕಥೆ ಹೇಳುವುದು ಅಷ್ಟು ತೃಪ್ತಿಕರವೆನಿಸುವುದಿಲ್ಲ. ಕ್ರಿಯೆ ಹೆಚ್ಚಿಗೆ ಇರುವ ಕೃತಿಗಳಲ್ಲಿ ಓದುಗ ಪಾತ್ರಗಳ ಮಾತು-ಕಾರ್ಯಗಳಿಂದ ಅರ್ಥ ಮಾಡಿಕೊಳ್ಳಬಹುದು. ಆದರೆ ಮಹಾಚಿತ್ರವೊಂದನ್ನು ನಿರೂಪಿಸುವಾಗ ಇದು ಸಾಧ್ಯವಾಗಲಿಕ್ಕಿಲ್ಲ. ಕೃತಿಯುದ್ದಕ್ಕೂ ನಿರೂಪಕ ಮಾರ್ಗದರ್ಶನ ಮಾಡಬೇಕಾಗುತ್ತದೆ. ಕೃತಿಯ ಪ್ರತಿಯೊಂದು ವಿವರವನ್ನೂ ಕಾದಂಬರಿಕಾರನೇ ವಿವರಿಸುವಾಗ ಉದ್ದಕ್ಕೂ ಅವನ ಇರುವಿಕೆ ಅಗತ್ಯ. ಇಂತಹ ಸಂದರ್ಭದಲ್ಲಿ ಕಾದಂಬರಿಕಾರ ಉತ್ತಮ ಪುರುಷ ಏಕವಚನದಲ್ಲಿ ಕಥೆಯನ್ನು ನಿರೂಪಿಸುತ್ತಾನೆ. ಹೀಗಾದಾಗ ಕಥೆ ಹೇಳುವ ವ್ಯಕ್ತಿ ಕೃತಿಯಲ್ಲಿ ನಮ್ಮ ಕಣ್ಣೆದುರೇ ಇರುತ್ತಾನೆ.

ಹೀಗೆ ಕಥೆಗಾರನೇ ಕಾದಂಬರಿಯ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯಾದಾಗ ಅದರ ನಿರೂಪಣೆಯಲ್ಲಿ ಎರಡು ರೀತಿಗಳನ್ನು ಕಾಣುತ್ತೇವೆ. ಕಥೆಯನ್ನು ಹೇಳುವ ವ್ಯಕ್ತಿ ಪ್ರಮುಖ ಪಾತ್ರವಾಗುವುದು ಒಂದಾದರೆ; ನಾಯಕ ಅಥವಾ ನಾಯಕಿ ತನ್ನ ಕಥೆಯನ್ನು ತಾನೇ ಹೇಳುವಂತೆ ನಿರೂಪಿಸುವ ಕ್ರಮ ಇನ್ನೊಂದು. ಈ ತಂತ್ರದಲ್ಲಿ ಅನೇಕ ಅನುಕೂಲಗಳಿವೆ. ಕಾದಂಬರಿಯ ಪಾತ್ರವೇ ಮಾತನಾಡುವುದರಿಂದ ನಿರೂಪಣೆಗೆ ನಾಟಕೀಯತೆ ಬರುವುದರೊಂದಿಗೆ ಚಿತ್ರಣ ಸ್ಪಷ್ಟವಾಗುತ್ತದೆ. ಓದುಗನಿಗೆ ಪರಿಚಿತ ವ್ಯಕ್ತಿಯೇ ಕೊನೆಯವರೆಗೂ ಮಾತನಾಡುತ್ತದೆ. ಸಹಜವಾಗಿ ನಿರೂಪಣೆಯ ಆಸಕ್ತಿ ಇಲ್ಲಿ ಹೆಚ್ಚುತ್ತದೆ ಹಾಗೂ ಲೇಖಕನ ದೃಷ್ಟಿಕೋನ ಸ್ಪಷ್ಟವಾಗುತ್ತದೆ.

ಆತ್ಮಕಥನದ ತಂತ್ರ ಎಲ್ಲ ಚಿತ್ರಗಳ ನಿರೂಪಣೆಗೂ ಯಶಸ್ವಿ ಎನಿಸದು. ಅದನ್ನೇ ತುಸು ಬದಲಾಯಿಸಿ ಬಳಸಿದಾಗ ಅಂದರೆ; ಕಾದಂಬರಿಯಲ್ಲಿ ತನ್ನ ಅನುಭವಗಳನ್ನು ಮಾತ್ರ ವರ್ಣಿಸದೆ, ಆ ಅನುಭವಗಳಿಗೆ ತನ್ನ ಮನಸ್ಸಿನ ಪ್ರತಿಕ್ರಿಯೆಗಳು, ಅದಕ್ಕೆ ಕಾರಣವಾಗುವ ಮನಸ್ಸು ಇವುಗಳ ಸಹಯೋಗವನ್ನು ಬಿಚ್ಚಿಡುತ್ತಾ ಹೋಗುವುದರ ಅದ್ಭುತ ಮಾದರಿಯಾಗಿ ಶಿವರಾಮ ಕಾರಂತರ ‘ಬೆಟ್ಟದಜೀವ’ ಕಾದಂಬರಿ ಕಂಡು ಬರುತ್ತದೆ. ಇದು ಗೋಪಾಲಯ್ಯನ ವೈಯಕ್ತಿಕ ಜೀವನದ ಕತೆಯಲ್ಲ. ನಿಸರ್ಗದ ಮಗುವಾಗಿ, ಅದರ ಭಾಗವಾಗಿ ಬದುಕುವ ಜೀವನದ ಕಲಾತ್ಮಕ ನಿರೂಪಣೆ. ಕೇವಲ ಗೋಪಾಲಯ್ಯನ ಜೀವನದ ಅನುಭವಗಳನ್ನು ಇಲ್ಲಿ ವರ್ಣಿಸಿದರೆ ಯಾವ ಪ್ರಯೋಜನವೂ ಇಲ್ಲ. ಪ್ರಕೃತಿಯ ಸನ್ನಿಧಿಯಲ್ಲಿ ಬಂದದ್ದನ್ನೆಲ್ಲವನ್ನೂ ಸಮತೂಕದ ಮನಸ್ಸಿನಿಂದ ಸ್ವಾಗತಿಸುತ್ತಾ, ಕಾಡು, ನದಿ, ಬಂಡೆ, ಬಯಲು, ಪ್ರಾಣಿಗಳು ಹೀಗೆ ನಿಸರ್ಗದ ಭಾಗವಾಗುವುದರಲ್ಲೆ ಸಾರ್ಥಕ್ಯ ಕಾಣುವ ‘ಬೆಟ್ಟದಜೀವ’ದ ಚಿತ್ರಣ ಇಲ್ಲಿದೆ.

ಶಿವರಾಮ ಕಾರಂತರು ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಮಾನವ ಪ್ರಕೃತಿಯೊಂದಿಗೆ ನಡೆಸುವ ಹೋರಾಟದ ವಿಶಿಷ್ಟ ಚಿತ್ರಣವನ್ನು ನೀಡಿದ್ದಾರೆ. ಅವರೇ ಮುನ್ನುಡಿಯ ಮಾತುಗಳಲ್ಲಿ ಹೇಳಿರುವಂತೆ; “ಘಟ್ಟದ ಬಳಿಯ ಕಗ್ಗಾಡಿನ ಜೀವನ ಚಿತ್ರವನ್ನು ಕೊಡಲು ಇಲ್ಲಿ ಯತ್ನಿಸಿದ್ದೇನೆ. ನಾಡಿನ ಕಾಡುಗಳೊಡನೆ ಸೆಣಸಾಡಿ ಜೀವನದ ನೆಲೆಯನ್ನು ನಿಲ್ಲಿಸಿದ ಹಳೆಯ ವೀರರ ಕೆಚ್ಚನೇ ಇಲ್ಲಿ ಇಂದಿನ ಕಥಾ ನಾಯಕ-ನಾಯಕಿಯರಲ್ಲಿ ಕಾಣಬಹುದು” ಎಂದಿದ್ದಾರೆ. ಇನ್ನೊಂದೆಡೆ; “ಮುಂದೆ ನಾನು ಪುತ್ತೂರಿನಲ್ಲಿ ನೆಲಸಿ ನಾಲ್ಕು ಸುತ್ತಲಿನ ಕೃಷಿಕ ಜೀವನ, ನಿತ್ಯ ಜೀವನ ನೋಡಿ ತಿಳಿಯುವ ಅವಕಾಶ ದೊರಕಿದ ಹಾಗೆ -ನನ್ನ ಬರಹಗಳಿಗೆ ಅನುಭವ ಪ್ರಧಾನ ಪ್ರೇರನೆ ಆಗತೊಡಗಿತು. ಅಂಥ ಬರಹ -‘ಬೆಟ್ಟದ ಜೀವ’. ಅದನ್ನು ನಾನು ಬರೆಯುವ ಮುಂಚೆ ‘ಕಡಬ’ ಎಂಬ ಹಳ್ಳಿಯಲ್ಲಿ ಬಾಲ ಪ್ರಪಂಚ ಬರೆಯಲು ತೊಡಗಿದ್ದೆ. ಆ ಗ್ರಾಮದ ಪೂರ್ವ ದಿಕ್ಕಿನಲ್ಲಿ ಸದಾ ಕಣ್ಣಿಗೆ ಹೊಡೆದು ಕಾಣಿಸುತ್ತಿದ್ದ ದೃಶ್ಯ-ಸುಬ್ರಹ್ಮಣ್ಯದ ಬೆಂಗಡೆಯಿದ್ದ ಕುಮಾರ ಪರ್ವತ ಶಿಖರ”. ಇದು ಕಾರಂತರನ್ನು ಇನ್ನಿಲ್ಲದಂತೆ ಆಕರ್ಷಿಸಿದೆ. ಕಡಬದ ತೆಂಕಣ ದಿಕ್ಕಿಗಿರುವ ಕಳಂಜಿಮಲೆ ಎಂಬ ಬೆಟ್ಟದ ಸಾಲಿನ ಭವ್ಯ ನೋಟವೂ ಅವರನ್ನು ಸೆಳೆದುಕೊಂದಿತು. ಗೆಳೆಯರೊಂದಿಗೆ ಅಲ್ಲೆಲ್ಲಾ ಸುತ್ತಾಡಿ, ಬೆಟ್ಟದ ಹಾದಿಯಲ್ಲಿ ಏರಿ ಇಳಿಯುವ ಸಾಹಸವನ್ನೂ ಮಾಡಿದರು. ಆಗ ಆ ದುರ್ಗಮ ಕಾಡಿನ ಮಧ್ಯೆ ಅವರೊಂದು ವಿಶಾಲ ಅಡಿಕೆ ತೋಟವನ್ನು ಕಾಣುತ್ತಾರೆ. ಏಳೆಂಟು ಎಕರೆ ಕಾಡನ್ನು ಸವರಿ ದೇರಣ್ಣಗೌಡ ಎಂಬ ಮುದುಕ ಅಲ್ಲಿ ಕೆಲವೇ ಕೂಲಿಗಳ ಜೊತೆ ನೆಲೆಸಿ ಅಡಿಕೆ ತೋಟವನ್ನು ಮಾಡಿದ್ದನು. ಅವನ ಸಾಹಸ ಇದೂ ಅವರನ್ನು ಮತ್ತೂ ಸೆಳೆಯಿತು. ಅದೇ ಪರಿಸರದಲ್ಲಿ ಅಡ್ಡಾಡುವಾಗ ‘ಕಟ್ಟ’ ಎಂಬಲ್ಲಿ ಗೋವಿಂದಯ್ಯ ಎಂಬ ಹಿರಿಯರೊಬ್ಬರು ಸಾಹಸದ ಕೃಷಿಕರಾಗಿರುವುದನ್ನು ಕಾಣುತ್ತಾರೆ. ಅವರ ಧೀಮಂತಿಕೆ, ನಡೆ, ನುಡಿ, ಸಾಹಸದಿಂದ ಬೆರಗುಗೊಂಡ ಕಾರಂತರು ಅವರ ಸಮಗ್ರ ಬದುಕಿನ ಚಿತ್ರಣವನ್ನು ಕಣ್ಣ ಮುಂದೆ ತಂದುಕೊಂಡು ‘ಬೆಟ್ಟದ ಜೀವ’ ಕಾದಂಬರಿಯನ್ನು ರಚಿಸಿದರು.

ಈ ಮೇಲಿನ ಘಟನೆಗಳು ಕಾದಂಬರಿಗೆ ವಸ್ತುವಿನ ಮೂಲವನ್ನು ಒದಗಿಸಿದರೆ ಅದರ ಹೆಸರು ಹೊಳೆದದ್ದು ಇನ್ನೊಂದೇ ಕಥೆ. ಅದನ್ನು ಅವರದೇ ಮಾತುಗಳಲ್ಲಿ ಕೇಳಬೇಕು; “ಕಾಡುಗಳನ್ನು ಸದಾ ಸುತ್ತಾಡುತ್ತಿದ್ದ ನನಗೆ ಆ ಆವರಣ ಪರಿಚಿತವಾದದ್ದು. ವ್ಯಕ್ತಿಗಳು ನವೀನರಲ್ಲ. ಹಳ್ಳಿಗೆ ಹೋಗಿ ಎಷ್ಟೋ ಗೆಳೆಯರ ಕೃಷಿಯ ಸಾಹಸದ ಕೆಲಸಗಳನ್ನು ನೋಡಿ ಮೆಚ್ಚಿದ್ದೇನೆ. ಅದರ ಚಿತ್ರ ಬರೆಯಬೇಕೆಂಬ ಆಸೆ ಮೂಡಿತ್ತು. ಒಮ್ಮೆ ನಾನು ಏನನ್ನಾದರೂ ಬರೆಯಬೇಕು ಎಂದು ಎಣಿಸಿಕೊಂಡು ಸ್ವಲ್ಪ ವಿಶ್ರಾಂತಿಯನ್ನರಸಿ ಕೊಡಗಿನ ಗೆಳೆಯರಾದ ಶ್ರೀ (ಜಿ. ಯಂ.) ಮಂಜುನಾಥಯ್ಯನವರ ಮನೆಗೆ ಹೊರಟೆ. ಹೊರಟಾಗ ಏನನ್ನೋ ಬರೆಯಬೇಕೆಂದು ಅನಿಸಿತ್ತು. ಆ ‘ಏನು’ ಎಂಬುದು ನಿಶ್ಚಯವಾಗಲಿಲ್ಲ. ಸಂಪಾಜೆಯ ಘಟ್ಟವನ್ನೇರಿ ಮಡಿಕೇರಿಗೆ ನಾಲ್ಕು ಮೈಲು ದೂರವಿರುವಾಗ ಬಸ್ಸು ಹಾಳಾಯಿತು. ಅಲ್ಲಿಯೇ ಕುಳಿತಿರಲಾರದೆ ಮಡಿಕೇರಿಗೆ ಮುಂದುವರಿದೆ. ಕಣ್ಣೆದುರಿಗೆ ನಿಂತಿದ್ದ ಗುಡ್ಡ ಮತ್ತು ಕಾಡುಗಳು ‘ಬೆಟ್ಟದ ಜೀವ’ ಎಂಬ ಹೆಸರನ್ನು ಸೂಚಿಸಿದವು. ಮಡಿಕೇರಿಯಲ್ಲಿ ಮಂಜುನಾಥಯ್ಯನವರ ಮೋಟರು ನನಗಾಗಿ ಕಾದಿತ್ತು. ಅವರ ಮನೆಯನ್ನು ಸೇರಿದ್ದಾಯಿತು. ಅದು ಕಾಫಿ ತೋಟಗಳಿಂದ ತುಂಬಿರುವ ಸುಂದರ ಗುಡ್ಡ ಬೆಟ್ಟಗಳ ನಡುವಣ ಸ್ಥಳ. ಅವರ ಮನೆಯಲ್ಲಿ ಕುಳಿತು, ಆರು ದಿನಗಳ ಕಾಲ ಗೀಚಿ, ಬ್ರಾಹ್ಮಣರ ಕಥೆಯೊಂದನ್ನು ಬರೆದು ಮುಗಿಸಿದೆ”. ಈ ಮಾತುಗಳು ಕಾದಂಬರಿಯ ಹೆಸರು ಹೊಳೆದ ಬಗೆ ಹಾಗೂ ಬರೆವಣಿಗೆ ಮಾಡಿದ ರೀತಿಯನ್ನು ಆಪ್ತವಾಗಿ ನಿರೂಪಿಸಿದೆ.

ಕಾರಂತರು ಈಗಾಗಲೇ ಹೇಳಿರುವಂತೆ ಅನುಭವವೇ ಅವರ ಕಾದಂಬರಿಗಳ ಮೂಲ ದ್ರವ್ಯ. ಅಂದರೆ ನಿತ್ಯ ಜೀವನದ ಎಲ್ಲ ಅನುಭವಗಳೂ ಕಾದಂಬರಿಯಾಗಬಹುದೇ? ಎಂಬ ಪ್ರಶ್ನೆಯನ್ನು ಇನ್ನೊಬ್ಬ ಕಾದಂಬರಿಕಾರರಾದ ವಿ. ಎಂ. ಇನಾಮದಾರ ಕೇಳಿದ್ದಾರೆ. ಅದಕ್ಕೆ ಕಾರಂತರು ನೀಡಿದ ಉತ್ತರ ಕುತೂಹಲಕಾರಿಯಾಗಿದೆ; “ಮಾಡಬಹುದು. ಅದಕ್ಕೆ ಬೇಕೆನ್ನುವಷ್ಟು ಅನುಭವ, ಬೇಕಾದಂಥ ಸಲಕರಣೆ ನಮ್ಮ ಅನುಭವದಲ್ಲಿದ್ದರೆ ಆಗುತ್ತದೆ. ಇಲ್ಲದಿದ್ದರೆ ಕಥೆ ಮುಂದೆ ಹೋಗುವುದಿಲ್ಲ. ಅರ್ಧ ಅಧ್ಯಾಯ, ಒಂದು ಅಧ್ಯಾಯಕ್ಕೆ ನಿಂತುಬಿಡುತ್ತದೆ. ಮುಂದೆ ಬುದ್ಧಿಪುರಸ್ಸರವಾಗಿ ಹೊಸೆದುಕೊಂಡು ಹೋಗಬಹುದು. ಆದರೆ ಆ ಸ್ಥಿಯಲ್ಲಿಯೂ ಅದನ್ನು ಬೆಳೆಯಿಸಬೇಕು ಎಂದೆನಿಸುವುದಿಲ್ಲ ನನಗೆ. ಹಾಗೆ ಒಂದೆರಡು ಕಾದಂಬರಿ, ಅಪೂರ್ಣವಾಗಿ, ಹಾಗೆಯೇ ಮೂಲೆ ಸೇರಿವೆ. ಯಾಕೆ ಎಂದು ನಾನು ಪ್ರಶ್ನೆ ಮಾಡಿಲ್ಲ. ತನ್ನಂತೆಯೇ ಅದಕ್ಕೆ ಪುಷ್ಟಿ ಕೊಡತಕ್ಕಂಥ ಸಾರ ಅದರ ಬುಡದಲ್ಲಿ ಇಲ್ಲ ಎನ್ನುವುದರಿಂದ ಎಂದು ನಾನು ತಿಳಿಯುವುದು”. ಹೀಗೆ ಅನುಭವ ದಟ್ಟವಾಗಿದ್ದಾಗ ಮಾತ್ರ ಕಾದಂಬರಿಯಾಗಿ ಮೂಡಿಬರಲು ಸಾಧ್ಯ ಎಂದೇ ಕಾರಂತರು ಪ್ರತಿಪಾದಿಸಿದ್ದಾರೆ. ‘ಬೆಟ್ಟದ ಜೀವ’ ಕಾದಂಬರಿ ಹೇಗೆ ತಮ್ಮ ಜೀವನದ ಅನುಭವದ ಮುಖಾಂತರವೇ ಹೊರಬಂದಿದೆ ಎಂಬುದನ್ನು ಅದರ ಮುನ್ನುಡಿಯಲ್ಲಿ ಅವರು ವಿವರಿಸಿದ್ದಾರೆ. ಅನುಭವ ಪ್ರಾಮಾಣಿಕವಾಗಿದ್ದಾಗ ಮಾತ್ರ ಕಾದಂಬರಿ ಪರಿಪೂರ್ಣವಾಗುತ್ತದೆ ಮತ್ತು ಯಶಸ್ವಿಯೂ ಆಗುತ್ತದೆ ಎಂಬ ಸಂಗತಿ ಈ ಚರ್ಚೆಯ ಮೂಲಕ ಹೊರಡುತ್ತದೆ.

ಮಾನವ ಮತ್ತು ನಿಸರ್ಗ ಪರಸ್ಪರ ಶತ್ರುಗಳೂ ಹೌದು ಮಿತ್ರರೂ ಹೌದು. ತನ್ನ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ; ಮುಖ್ಯವಾಗಿ ಕೃಷಿಗಾಗಿ ಮಾನವ ನಿಸರ್ಗವನ್ನು ಜಯಿಸುವ, ವಶಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ಈ ಕೆಲಸದಲ್ಲಿ ಅವನಿಗೆ ಕೆಚ್ಚು, ಶಕ್ತಿ ಮತ್ತು ಸಾಧನಗಳು ಅಪರಿಮಿತವಾಗಿರಬೇಕು. ಮತ್ತು ಸಂಘರ್ಷದಲ್ಲಿ ಮಾನವನೇ ಯಾವಾಗಲೂ ಗೆಲ್ಲುತ್ತಾನೆಂಬ ಖಾತ್ರಿಯೂ ಇಲ್ಲ. ಇಂತಹ ದಟ್ಟ ಅನುಭವದ ನೆಲೆಯಲ್ಲಿಯೇ ‘ಬೆಟ್ಟದ ಜೀವ’ ಕಾದಂಬರಿ ಮೂಡಿಬಂದಿದೆ. ಮಾನವ ಮತ್ತು ನಿಸರ್ಗದ ಸಂಘರ್ಷವನ್ನು ನಾಟಕೀಯವಾಗಿ ಚಿತ್ರಿಸುವುದರೊಂದಿಗೆ ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯ ವ್ಯವಸ್ಥೆಯನ್ನು ಹಾಗೂ ಪೀಳಿಗೆಗಳ ಅಂತರವನ್ನೂ ಇದು ದಾಖಲಿಸುತ್ತದೆ.

ಕಾದಂಬರಿಯ ನಿರೂಪಕ ಶಿವರಾಮಯ್ಯ ಕಾಡಿನ ಮಧ್ಯೆ ದಾರಿ ತಪ್ಪಿ ಕೆಳಬಯಲು ಗೋಪಾಲಯ್ಯನ ಮನೆಗೆ ಬರುತ್ತಾನೆ. ಅಲ್ಲಿ ಆತ ಕಳೆಯುವುದು ಕೇವಲ ನಾಲ್ಕಾರು ದಿನಗಳನ್ನು ಮಾತ್ರ. ಅಲ್ಲಿ ಮನೆಗೆ ಬಾರದೆ ಕಳೆದು ಕೊಂಡಿರುವ ಮಗನಿಂದಾಗಿ ಗೋಪಾಲಯ್ಯ-ಶಂಕರಿ ದಂಪತಿಗಳು ಪಡುವ ನೋವು, ಗೋಪಾಲಯ್ಯ ಕಾಡಿನ ಮಧ್ಯೆ ಕಟ್ಟಿಕೊಂಡ ಜೀವನ, ತನಗೆ ಏನೂ ಸಂಬಂಧವಿಲ್ಲದ ಅನಾಥನಾದ ನಾರಾಯಣಯ್ಯನಿಗೆ ಜಮೀನು ವಹಿಸಿ ಮದುವೆ ಮಾಡಿ ಅವರನ್ನು ನಡೆಸಿಕೊಳ್ಳುತ್ತಿದ್ದ ವಿಶ್ವಾಸದ ರೀತಿ ಇವೆಲ್ಲವೂ ನಿರೂಪಕನಾದ ಶಿವರಾಮಯ್ಯನ ಮೂಲಕವೇ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಕೃತಿಯ ರಮ್ಯ ರುದ್ರ ದೃಶ್ಯದಿಂದ ರೋಮಾಂಚನಗೊಳ್ಳುವ ಶಿವರಾಮಯ್ಯನಿಗೆ ಒಮ್ಮೆ ಗೋಪಾಲಯ್ಯ ಹೇಳುತ್ತಾನೆ; “ಎತ್ತರದ ಗುಡ್ಡದ ತುದಿಯನ್ನೇರಿದರೆ ಮನಸ್ಸಿಗೊಂದು ಹಿಗ್ಗು ಬರುವುದಿಲ್ಲವೇ? ನನ್ನಷ್ಟು ದೊಡ್ಡವನಾರು ಎನಿಸುತ್ತದೆ. ನೂರಾರು ಕಿರಿಯ ಜನರನ್ನು ಮೀರಿ ನಿಂತಂತೆ ಮನಸ್ಸಿಗೊಂದು ಹೆಮ್ಮೆಯುಂಟಾಗುವುದಿಲ್ಲವೇ” ಇದು ಗೋಪಾಲಯ್ಯ ಪ್ರಕೃತಿಯ ಮೇಲೆ ತಾನು ದಿಗ್ವಿಜಯ ಸಾಧಿಸಿದ್ದೇನೆಂಬ ಅಹಂಕಾರದಿಂದ ಆಡುವ ಮಾತುಗಳಾಗಿವೆ. ಆದರೆ ಶಿವರಾಮಯ್ಯ ಪ್ರಕೃತಿಯ ಎದುರು ವಿನೀತನಾಗಿ ಆಡುವ ಮಾತುಗಳು ಹೀಗಿವೆ: “ಪ್ರತಿಯೊಂದು ಬೆಟ್ಟವೂ ದೆವ್ವದಂತೆ ತಲೆ ತಿನ್ನುತ್ತಿದೆ. ಐದು ಅಡಿ ಗಾತ್ರದ ಮನುಷ್ಯ ಜೀವನವನ್ನು ಇರುವೆ ಎಂದು ತಿಳಿದು ಅಣಕಿಸುತ್ತದೆ. ಅಂತಹ ಬೆಟ್ಟಗಳೆಡೆಯಲ್ಲಿ ಮನುಷ್ಯ ತನ್ನ ಆಳ್ತನ ಮೆರೆಸಲು ನಿಂತರೆ ಅವನಿಗೆ ಜಯವೆಲ್ಲಿಯದು” ಈ ಎರಡು ಭಾವನೆಗಳ ಮಧ್ಯದ ಮುಖಾಮುಖಿಯೇ ‘ಬೆಟ್ಟದ ಜೀವ’ ಕಾದಂಬರಿಯ ಜೀವದ್ರವ್ಯವಾಗಿದೆ.

ಕಾರಂತರು ತಮ್ಮ ಜೀವನಾನುಭವವನ್ನು ಮಾತ್ರ ನೆಚ್ಚಿ ಹೇಗೆ ಕಾದಂಬರಿ ರಚನೆಯನ್ನು ಮಾಡಿದ್ದಾರೆ ಎಂಬುದನ್ನು ಕುರ್ತಕೋಟಿಯವರು ಒಂದೆಡೆ ಹೀಗೆ ವಿವರಿಸಿದ್ದಾರೆ; “...ತಟಸ್ಥ ಚಿತ್ತದಿಂದ ಜೀವನಾನುಭವವನ್ನು ಅಳೆದು, ತೂಗಿ, ಬೆಲೆಗಟ್ಟುವ ಒಂದು ವಿಧಾನ ಕಾರಂತರ ಈಗಿನ ಕಾದಂಬರಿಗಳಲ್ಲಿ ಕಂಡುಬರುತ್ತದೆ. ಆದರೆ ಅದಕ್ಕಾಗಿ ಕಾರಂತರು ರಾಜಕಾರಣ ಅಥವಾ ತತ್ವಶಾಸ್ತ್ರದಂತಹ ಯಾವುದೇ ಸಾಹಿತ್ಯೇತರವಾದ ಮಾನದಂಡವನ್ನು ಉಪಯೋಗಿಸುವುದಿಲ್ಲ. ಒಂದು ಅನುಭವಕ್ಕೆ ಇನ್ನೊಂದು ಅನುಭವ ಪ್ರಮಾಣವಾಗುವಂತೆ ಜೋಡಿಸಿ, ಅವುಗಳ ಪರಸ್ಪರ ಪ್ರತಿಕ್ರಿಯೆಯಲ್ಲಿ ಸತ್ಯ ತಾನಾಗಿ ಮೈದೋರುವಂತೆ ಈ ಕೃತಿಗಳ ಬಂಧವಿರುತ್ತದೆ. ಅನುಭವಗಳ ತಾರತಮ್ಯ ಕಾರಂತರಲ್ಲಿ ಆಳವಾಗಿ ಬೇರೂರಿದ ಮಾನವತಾವಾದದ ಪ್ರಜ್ಞೆಯಿಂದ ನಿರ್ಣೀತವಾಗುತ್ತದೆಂಬುದನ್ನು ಬೇರೆ ಹೇಳುವ ಕಾರಣವಿಲ್ಲ” (ಕಾರಂತ ಪ್ರಪಂಚ; 410) - ಎಂದಿದ್ದಾರೆ.

ಕಾರಂತರ ಕಾದಂಬರಿಗಳು ತಂತ್ರಕ್ಕಿಂತ ಅವುಗಳಲ್ಲಿ ಅಡಕವಾಗುವ ಅನುಭವದ ಸತ್ವವನ್ನೇ ಹೆಚ್ಚಾಗಿ ನೆಚ್ಚುತ್ತವೆ. ಬರೆವಣಿಗೆಯಲ್ಲಿ ಪ್ರಯೋಗಶೀಲರೇ ಆದರೂ ಕಾರಂತರು ಕಾದಂಬರಿಯ ತಂತ್ರದಲ್ಲಿ ವಿಶೇಷ ಪ್ರಯೋಗಗಳನ್ನು ಮಾಡಿಲ್ಲ ಎಂಬುದನ್ನು ಗಮನಿಸಬಹುದು. ಒಂದು ಕಾದಂಬರಿಯಲ್ಲಿ ಯಾವುದೋ ಒಂದು ತಂತ್ರವನ್ನು ಮಾತ್ರ ಹಚ್ಚಿಕೊಂಡು ಅವರು ನಿರೂಪಿಸಿದ್ದಾರೆ. ಅಂದಾಕ್ಷಣ ಎಲ್ಲ ಕಾದಂಬರಿಗಳಲ್ಲಿಯೂ ಅನುಭವಗಳನ್ನು ಒಂದೇ ಅಚ್ಚಿನಲ್ಲಿ ಹೊಯ್ಯುತ್ತಾರೆ ಎಂದರ್ಥವಲ್ಲ. ಬೆಟ್ಟದ ಜೀವದೊಂದಿಗೆ ಅವರ ಯಶಸ್ವೀ ಕಾದಂಬರಿಗಳಾದ ‘ಮರಳಿ ಮಣ್ಣಿಗೆ’ ಹಾಗೂ ‘ಅಳಿದ ಮೇಲೆ’ಗಳನ್ನು ಹೋಲಿಸಿದರೆ ಇವುಗಳ ತಂತ್ರ ಭಿನ್ನವಾಗಿರುವುದು ಮೇಲ್ನೋಟಕ್ಕೇ ಕಾಣಿಸುತ್ತದೆ. “ಆದರೆ ತಂತ್ರಕ್ಕೆ ಕಾರಂತರ ಕೃತಿಗಳಲ್ಲಿ ಎರಡನೆಯ ಸ್ಥಾನ. ಬಾಳಿನ ಕಲ್ಪನೆಯ ಗ್ರಹಿಕೆಯ (imaginative comprehension) ಯಾವ ಅಂಶ ಉತ್ಕಟವಾಗಿ ನಿರೂಪಣೆಯನ್ನು ಒಂದು ಕಾದಂಬರಿಯಲ್ಲಿ ಬೇಡುತ್ತದೋ ಅದರ ಸತ್ಯವೇ ಕಾದಂಬರಿಯ ಯಶಸ್ಸು-ಸೋಲುಗಳನ್ನು ನಿರ್ಧರಿಸುವಂತಾಗುತ್ತದೆ” (ಕಾರಂತ ಪ್ರಪಂಚ; 360)

‘ಬೆಟ್ಟದ ಜೀವ’ ಪ್ರಕಟವಾದ ಸಂದರ್ಭದಲ್ಲಿ ಇದೂ ಒಂದು ಕಾದಂಬರಿಯೇ ಎಂದು ಓದುಗರು ಸಂಶಯಪಟ್ಟಿದ್ದರು. ಕಥೆಯೇ ಕಾದಂಬರಿಯ ಮುಖ್ಯ ಭಾಗ ಎಂದು ತಿಳಿದುಕೊಂಡಿದ್ದ ಓದುಗರ ಉದ್ಘಾರ ಅದಾಗಿರಬಹುದು. ಇಂದು ಕಾದಂಬರಿ ಒಂದು ಸಾಹಿತ್ಯ ಪ್ರಕಾರವಾಗಿ ಪ್ರಬುದ್ಧವಾಗಿ ಬೆಳೆದು ನಿಂತಿರುವಾಗ; ಕಾದಂಬರಿಯ ಅರ್ಥವ್ಯಾಪ್ತಿ, ಸಾಧ್ಯತೆಗಳೂ ವಿಸ್ತಾರವಾಗಿವೆ. ಈ ಬೆಳಕಿನಲ್ಲಿ ನೋಡಿದಾಗ ‘ಬೆಟ್ಟದ ಜೀವ’ದ ನಿರೂಪಣಾ ತಂತ್ರದ ಆಧುನಿಕತೆ ಆಶ್ಚರ್ಯ ಹುಟ್ಟಿಸುತ್ತದೆ. ಸಾಂಪ್ರದಾಯಿಕ ನಿರೂಪಣಾ ತಂತ್ರದ ಬದಲಿಗೆ ವಾಸ್ತವಿಕತೆಯನ್ನೇ ತಂತ್ರದ ಕೇಂದ್ರವನ್ನಾಗಿ ಕಾದಂಬರಿ ಹೊಂದಿದೆ. ಪಾತ್ರ, ಘಟನೆ, ಆವರಣಗಳು ಆ ವಾಸ್ತವಿಕತೆಯನ್ನು ಪೋಷಿಸುವ ಪ್ರಮುಖ ಸಂಗತಿಗಳಾಗಿವೆ.

ಪ್ರಾಮಾಣಿಕತೆ ಕಾರಂತರ ಬರೆವಣಿಗೆಯ ಮೂಲ ಸ್ವಭಾವವೇ ಆಗಿರುವುದರಿಂದ ‘ಬೆಟ್ಟದ ಜೀವ’ದ ಭಾಷೆಯಲ್ಲಿ ಆಡಂಬರ-ಅಬ್ಬರಗಳು ಕಾಣುವುದಿಲ್ಲ. ಅಲ್ಲದೇ ತನ್ನ ಅನುಭವದ ಮಾತುಗಳನ್ನು ನೇರವಾಗಿ ಹೇಳುವುದರ ಬಗ್ಗೆ ಅವರಿಗೆ ಹಿಂಜರಿಕೆಯಿಲ್ಲ. ಪ್ರೀತಿ, ಸಿಟ್ಟು, ಆಸಕ್ತಿಗಳಿಲ್ಲದ ಜೀವನ ಅವರಿಗೆ ಅನಾಕರ್ಷಕ. ಹೀಗಾಗಿ ತಮ್ಮ ಸುತ್ತಲಿನ ಬದುಕಿನಲ್ಲಿ ಅವರು ಕಂಡುಂಡ ಅನುಭವಗಳನ್ನು ಕಾದಂಬರಿಯ ಮೂಲಕ ಶಾಶ್ವತಗೊಳಿಸಿದ್ದಾರೆ. ನಾಡಿನ ಜೀವನವನ್ನು ಕಾರಂತರಷ್ಟು ಗಾಢವಾಗಿ ಗಮನಿಸಿದ, ನಿರೂಪಿಸಿದ ಇನ್ನೊಬ್ಬ ಲೇಖಕ ಕನ್ನಡ ಸಾಹಿತ್ಯದಲ್ಲಿ ಅಪರೂಪ. ಮನುಷ್ಯ ಮತ್ತು ಅವನ ಬದುಕು ಕಾರಂತರ ಪ್ರಥಮ ಆಸಕ್ತಿ. ಹೀಗಾಗಿ ಅವರ ಅನೇಕ ಕಾದಂಬರಿಗಳು ಸಮಾಜಶಾಸ್ತ್ರ, ಮಾನವಶಾಸ್ತ್ರ, ಸಾಮಾಜಿಕ ಮಾನವಶಾಸ್ತ್ರಗಳ ಶಿಸ್ತಿನಿಂದ ತುಂಬಿಕೊಂಡಿವೆ. ಸಂಶೋಧನಾತ್ಮಕ ಮನೋಭಾವ ಅವರ ಸಹಜ ಗುಣವೇ ಆಗಿರುವುದರಿಂದ ಅವರಿಗೆ ವಸ್ತುವಿನ ಕೊರತೆ ಕಾಡಿಲ್ಲ. ವಾಸ್ತವದ ಚಿತ್ರಣವೇ ಕಾರಂತರ ಬರೆಹದ ಜೀವಾಳವಾಗಿರುವುದರಿಂದ ಅವರ ಕಾದಂಬರಿಗಳಲ್ಲಿ ಆದರ್ಶ ಮೌಲ್ಯಗಳನ್ನು ಹೊತ್ತ ಪಾತ್ರಗಳ ಚಿತ್ರಣ ಕಡಿಮೆ. ಇದಕ್ಕೆ ಕಾರಣವನ್ನೂ ಅವರೇ ಒಂದೆಡೆ ನೀಡಿದ್ದಾರೆ; “ಪ್ರತಿಯೊಂದರಲ್ಲೂ ನನಗೆ ಸಂಶಯವೇ ಇರುವುದರಿಂದ, ಸಮಾಜದಲ್ಲಿ ಒಪ್ಪಿತವಾದ ಯಾವುದೇ ಮೌಲ್ಯವನ್ನೂ ಒಪ್ಪದೆ ಇರುವ ಸ್ಥಿತಿಗೆ ಬಂದೆ, ಮೊದಲು ಕಣ್ಣು ಮುಚ್ಚಿ ಒಪ್ಪಿದ ಸ್ಥಿತಿಯಿಂದ. ನೀತಿಯ ಪ್ರಶ್ನೆಯೇ ಆಗಲಿ, ನಿಷ್ಠೆಯ ಪ್ರಶ್ನೆಯೇ ಆಗಲಿ, ದೊಡ್ಡವರು ಹೀಗೆ ಹೇಳಿದರು ಎಂದು ಒಪ್ಪತಕ್ಕಂಥ ಕಾಲವೊಂದಿತ್ತು. ಅದೇ ಭಾವನೆಯ ಆಧಾರದ ಮೇಲೆ ನಾಟಕಗಳನ್ನು ಬರೆದದ್ದುಂಟು. ಮುಂದೆ ಜೀವನದಲ್ಲಿ ಪ್ರತ್ಯಕ್ಷ ಕಂಡಾಗ ಅವರು ಹೇಳಿದ್ದಕ್ಕೂ ಜೀವನದಲ್ಲಿ ಇರುವುದಕ್ಕೂ ಇಷ್ಟು ಭಿನ್ನತೆ ಇರಲು ಏನು ಕಾರಣ? ಅವರು ಹೇಳಿದ್ದು ತಪ್ಪೇ? ಅವರು ಅಳತೆ ಮಾಡಿರುವುದು ತಪ್ಪೆ?” ಈ ಪ್ರಶ್ನೆಯನ್ನು ಕಾರಂತರು ಉದ್ದಕ್ಕೂ ಎದುರಿಸಿದ್ದಾರೆ. ಕಾದಂಬರಿ ರಚನೆಗೆ ಅಂತ ಮಾತ್ರವಲ್ಲ, ಅದು ಜೀವನಕ್ಕೆ ಅಂಟಿದ ಪ್ರಶ್ನೆಯೇ ಆಯಿತು ಎಂದಿದ್ದಾರೆ. ಹೀಗಾಗಿ ಅವರ ಕಾದಂಬರಿಗಳ ಪಾತ್ರ ಪ್ರಪಂಚ ರಕ್ತ ಮಾಂಸಗಳಿಂದ ಕೂಡಿದ ಸಾಮಾನ್ಯ ಮನುಷ್ಯರಿಂದಲೇ ತುಂಬಿಕೊಂಡಿದೆ. ಕೆಲವೆಡೆ ಕಾರಂತರ ಪಾತ್ರ ನಿರ್ಮಾಣ, ಪೋಷಣೆ ಹಾಗೂ ದರ್ಶನಗಳು ನವಿರಾಗಿವೆ, ಪ್ರತಿಭಾಪೂರ್ಣವಾಗಿವೆ. ಒಂದೇ ಮಾತಿನಲ್ಲಿ ಎರಡು ಜೀವಗಳ ಸಂಬಂಧ, ಚರಿತ್ರ, ಅವರು ಪರಸ್ಪರ ಬಾಳಿದ ಬಗೆಗಳನ್ನು ಸುಂದರವಾಗಿ ಅಭಿವ್ಯಕ್ತಿಸುತ್ತವೆ; “ಆ ದಂಪತಿಗಳು ಒಬ್ಬರು ಇನ್ನೊಬ್ಬರಿಗೆ ಬಿಟ್ಟುಕೊಟ್ಟು ಬಾಳಿದವರೇ ಹೊರತು ಕಿತ್ತುಕೊಂಡು ಬಾಳಿದವರಲ್ಲ”. ಈ ಒಂದು ಮಾತಿನಲ್ಲಿ ಬೆಟ್ಟದ ಜೀವದ ಗೋಪಾಲಯ್ಯ ಮತ್ತು ಶಂಕರಮ್ಮನ ಸಮಗ್ರ ದರ್ಶನವಾಗುತ್ತದೆ.

ಈ ದಾಂಪತ್ಯ ಜೀವಿಗಳ ಅಂತರಂಗ ಬಹಿರಂಗ ಚಿತ್ರಗಳು ತುಂಬಾ ಧ್ವನಿಪೂರ್ಣವಾಗಿ ಚಿತ್ರಿತವಾಗಿರುವ ಇನ್ನೊಂದು ಭಾಗವನ್ನು ಗಮನಿಸಬಹುದು; ಶಂಕರಮ್ಮನ ಸ್ವಲ್ಪ ಜೋರಾದ ಧ್ವನಿ ಮಲಗಿದ್ದ ಅತಿಥಿಯ ನಿದ್ದೆಗೆಡಿಸಿತೆಂದು ಗೋಪಾಲಯ್ಯ ಹೆಂಡತಿಯನ್ನು ಗದರುತ್ತಾರೆ; “ನಿನ್ನ ಗಂಟಲೆಂದರೆ ದೇವರ ಕೋಣೆಯ ಶಂಖ”. ಈ ಒಂದು ಮಾತಿನಲ್ಲಿ ತುಂಬಿರುವ ಅರ್ಥ ಅಪೂರ್ವವಾದುದು. ಗದರಿಸಿದ ಗೋಪಾಲಯ್ಯ ಗದರಿಸಿಕೊಂಡ ಶಂಕರಮ್ಮ ಆ ಬೆಟ್ಟದ ನಡುವಿನ ತಂಪು ನೆಲದಲ್ಲಿ ಸೊಂಪಾಗಿ ಬೆಳೆದು ತಲೆದೂಗುವ ಕಲ್ಪತರುಗಳಂತೆ ನಮ್ಮ ಮನದೆದುರು ಮೂಡಿನಿಲ್ಲುತ್ತಾರೆ.

‘ಬೆಟ್ಟದ ಜೀವ’ ಕಾದಂಬರಿಯ ಮುಕ್ತಾಯದಲ್ಲಿ ಬಂದಿರುವ ಒಂದು ಪ್ರಯೋಗದೆಡೆಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಗಮನ ಸೆಳೆದಿದ್ದಾರೆ; ಶಿವರಾಮಯ್ಯ ಪುಣೆಯಲ್ಲಿ ಕಂಡ ವ್ಯಕ್ತಿ ತನ್ನ ಮಗ ಶಂಬುವೇ ಆಗಿರಬೇಕೆಂದು ಗೋಪಾಲಯ್ಯನವರಿಗೆ ಭಾಸವಾದಾಗ ಅವರು ಪುಣೆಗೆ ಹೊರಡಲು ಸಿದ್ಧರಾಗುತ್ತಾರೆ. ಅಲ್ಲಿ ನಿರೂಪಕ ಹೇಳುತ್ತಾನೆ; “ಆಗಲೇ ಭಟ್ಟರು ಪುಣೆಯ ತನಕವೂ ಹೋಗಲು ಕಾಲು ಕಿತ್ತಂತೆಯೇ”. ಇಲ್ಲಿ ಬಂದಿರುವ ಕಾಲುಕೀಳು ಎಂಬ ಪಡೆನುಡಿಯ ಔಚಿತ್ಯ ತುಂಬಾ ಶಕ್ತಿಶಾಲಿಯಾದುದು. ಗುಡ್ಡಗಾಡಿನ ರುದ್ರ ಪ್ರಕೃತಿಗೆ ಅಂಜದೆ ಅಳುಕದೆ, ಸೆಣಸಿ, ಮಣಿಸಿ, ತನ್ನಿಚ್ಛೆಯಂತೆ ರಮಣೀಯವಾಗಿ ಪರಿವರ್ತಿಸಿ ಬೆಟ್ತವನ್ನೂ ಮೀರಿ ನಿಂತ ‘ಬೆಟ್ಟದ ಜೀವ’ ಗೋಪಾಲಯ್ಯನವರ ಅಂತರಂಗದ ಮಾನವೀಯ ದೌರ್ಬಲ್ಯದ ಶಕ್ತ ಚಿತ್ರಣವಿದು. ಮನುಷ್ಯ ಎಲ್ಲವನ್ನೂ ಮೀರಿ ನಿಲ್ಲಬಲ್ಲ. ಆದರೆ ಕರುಳಿನ ಸೆಳೆತವನ್ನಲ್ಲ. ಕಾಡಿನ ಯಾವ ಸಂಕಟಕ್ಕೂ ಬಗ್ಗದೇ ಹೋರಾಡಿ ಬೆಟ್ಟವನ್ನೇ ಮಣಿಸಿದ್ದ ಗೋಪಾಲಯ್ಯ ಕರುಳಿನ ಸೆಳೆತಕ್ಕೆ ತಾವೇ ಬಾಗಿದರು ಎಂಬ ಮಾತಿನ ಸೂಕ್ತ ನಿರೂಪಣೆ ಇದಾಗಿದೆ. ಇದರೊಂದಿಗೆ ಇನ್ನೊಂದು ಅರ್ಥ ಸಾಧ್ಯತೆಯನ್ನೂ ಈ ನುಡಿಗಟ್ಟು ಒಡಲೊಳಗಿಟ್ಟುಕೊಂಡಿದೆ. ಬೇರೆ ಯಾವ ಲೋಭ ಮೋಹಗಳಿಲ್ಲದೇ ಪ್ರಕೃತಿಯೊಂದಿಗೆ ಬೆರೆತು, ತನ್ಮಯರಾಗಿ ಬಾಳಿದ ‘ಬೆಟ್ಟದ ಜೀವ’ ಗೋಪಾಲಯ್ಯನವರಿಗೆ ನಾಲ್ಕು ದಿನಗಳ ಕಾಲಕ್ಕಾದರೂ ಆ ಪರಿಸರವನ್ನು ಬಿಟ್ಟು ಹೋಗಬೇಕೆಂದರೆ ‘ಕಾಲನ್ನು ಕಿತ್ತು’ ಹೊರಡಬೇಕಾಯಿತು. ಆ ಜೀವ ಅಷ್ಟು ಆಳವಾಗಿ ಬೆಟ್ಟಗಾಡಿನಲ್ಲಿ ಬೇರೂರಿತ್ತು ಎಂಬ ಭಾವದ ಸಶಕ್ತ ಸೂಚನೆ.

“ಕಾಲುಕಿತ್ತರು ಪ್ರಯೋಗ ಕಾದಂಬರಿಯ ಕೊಟ್ಟಕೊನೆಗೆ ಬಂದಿದೆ. ಎಂದೇ ಓದುಗನನ್ನು ಒಮ್ಮೆಲೇ ಕುತೂಹಲಭರಿತನನ್ನಾಗಿ ಮಾಡುತ್ತದೆ. ಗೋಪಾಲಯ್ಯನವರ ವ್ಯಕ್ತಿತ್ವದ ಪುನರವಲೋಕನಕ್ಕೆ ಪ್ರೇರಿಸುತ್ತದೆ. ಆಗ ಒಮ್ಮೆಲೇ ಕಾರಂತರು ಗೋಪಾಲಯ್ಯನವರ ಮನೆಯ ಮುಂದಣ ಬೆಟ್ಟವನ್ನು ಹಿಂದೆ ಒಂದೆಡೆ ಬಣ್ಣಿಸಿದುದು ನೆನಪಿನಲ್ಲಿ ಸುಳಿಯುತ್ತದೆ; “...ಬಾನಿನಲ್ಲಿ ಸೂರ್ಯ ತುಸುವಾಗಿ ಮೇಲೇರುತ್ತಾನೆ. ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗುಲಿನ ಹಸುರನ್ನೆಲ್ಲ ಬೆಳಕಿನಿಂದ ತೊಯ್ಯಿಸಿಬಿಟ್ಟವು. ಈ ಅಪೂರ್ವ ನೋಟ ಎಂದೂ ಮರೆಯುವಂಥದ್ದಲ್ಲ. ಈ ತನಕ ಕಠಿಣವೂ ನಿರ್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು” ಇದು ಬರೀ ಬೆಟ್ಟದ ಬಣ್ನನೆಯೇನು? ಇಲ್ಲಿ ಗೋಪಾಲಯ್ಯನ ಬಣ್ಣನೆಯೂ ಸೇರಿಲ್ಲವೇ?” (ಕಾರಂತ ಪ್ರಪಂಚ; 304).

ಕಾರಂತರ ಕಾದಂಬರಿಗಳಲ್ಲಿ ಸಂಭಾಷಣೆಯ ಅಂಶ ಕಡಿಮೆಯೇ ಎನ್ನಬಹುದು. ಈಗಾಗಲೇ ಚರ್ಚಿಸಿದಂತೆ ಲೇಖಕರೇ ಕಥೆಯನ್ನು ಹೇಳಿಕೊಂಡು ಹೋಗುವುದು ಹೆಚ್ಚು. ಸಂಭಾಷಣೆ ಬಂದರೂ ಪಾತ್ರಗಳ ಮಾತಿನ ಸರಣಿ ದೀರ್ಘ. ಸಂಭಾಷಣೆಯ ಸೊಗಸು ಅಲ್ಲಿ ಕಾಣುವುದು ಕಡಿಮೆ. ‘ಬೆಟ್ಟದ ಜೀವ’ ದಲ್ಲಿ ಗೋಪಾಲಯ್ಯ ಮತ್ತು ಶಂಕರಮ್ಮ ಗಳವಾಡಿದಂತೆ ಕಾಣುವ ಸಂಭಾಷಣೆಯಲ್ಲಿ ಆ ಎರಡು ಜೀವಗಳ ಒಲವಿನ ಬಾಳು ಸೊಗಸಾಗಿ ನಿರೂಪಿತವಾಗಿದೆ. ತಾನು ಹೇಗೆ, ಎಂತಹ ಅಡುಗೆ ಮಾಡಿದರೂ ಚೆನ್ನಾಗಿಲ್ಲವೆಂದು ಚೇಷ್ಟೆ ಮಾಡುವ ಗಂಡನೊಂದಿಗೆ ಶಂಕರಮ್ಮ ಹುಸಿಮುನಿಸಿನಿಂದ ದೂರುತ್ತಾಳೆ. ಆಗ ಗೋಪಾಲಯ್ಯ ಕೇಳುತ್ತಾರೆ;

“ಹೋಗಲಿ ಮಾಡಿದ ಅಡುಗೆ ಒಯಿನಾಗಿದೆ ಎಂದು ನಿನಗೆ ತಿಳಿಯುವುದು ಹೇಗೆ?”
“ಬಾಯಿಯಿಲ್ಲವೇ ನನಗೆ ತಿಂದು ನೋಡಲಿಕ್ಕೆ?”
“ಹೊ. ಮೊದಲು ಅಡುಗೆ ಮಾಡುತ್ತ ತಿಂದು ನೋಡಿ ಆಮೇಲೆ ಬಡಿಸುವ ಕ್ರಮವೋ ನಿನ್ನದು?..”
“ಹೌದು ಊಟಮಾಡಿ ಮಿಕ್ಕಿದ್ದನ್ನು ನಿಮಗೆ ಬಡಿಸುತ್ತೇನೆ. ಈಗಲಾದರೂ ಸಮಾಧಾನವಾಯಿತೋ?”
“ಸಮಾಧಾನವಾಗಿ ಪ್ರಯೋಜನವೇನು? ನಾನು ಅಡುಗೆ ಒಯಿನಾಗಿವೆಂದ ಮೇಲೂ ನೀನು ಹೊಟ್ಟೆತುಂಬ ತಿನ್ನುತ್ತೀಯಲ್ಲ-ಅದೇ ನನಗೆ ಆಶ್ಚರ್ಯ”
“ಹೌದು ನಿಮ್ಮ ನಾಲಿಗೆಯೂ ನನ್ನದೂ ಒಂದೇ ಏನು? ಒಬ್ಬರಿಗೆ ಹಾಗಲಕಾಯಿ ಕಹಿ, ಅದನ್ನು ಕಂಡರೆ ಆಗುವುದಿಲ್ಲ. ಹಾಗೆಂದು ಅದನ್ನು ರುಚಿಯೆಂದು ತಿನ್ನುವವರಿಲ್ಲವೇ?”
“ಈಗ ನನ್ನ ನಾಲಗೆ ನಿನ್ನ ನಾಲಗೆಗಳು ಬೇರೆಯೇನು? ಹಿಂದಿನ ಕಾಲದಲ್ಲಿ, ಪತಿವಾಕ್ಯವೆಂದರೆಪತ್ನಿಗೆ ಸ್ಪೂರ್ತಿಯಾಗಿತ್ತು. ನಾನು ಹುಳಿ ರುಚಿಯಲ್ಲ ಎಂದರೆ, ರುಚಿಯಲ್ಲವೆಂದು ನಂಬಿಬಿಡಬೇಕು, ರುಚಿಯಿದೆಯೆಂದರೆ ರುಚಿ ಉಂಟು ಎಂದು ತಿಳಿಯಬೇಕು. ಅದು ಧರ್ಮ”.
“ಅದಕ್ಕೆ ನೀವು ಪರಮೇಶ್ವರ ಭಟ್ಟರ ಮಗಳನ್ನು ಮದುವೆಯಾಗಬಾರದಿತ್ತು. ಜನ್ಕರಾಯನ ಮೊಮ್ಮಗಳನ್ನೋ ರಾಮದೇವರ ಮಗಳನ್ನೋ ಮದುವೆಯಾಗಬೇಕಿತ್ತು. ಆಗ ಹಿಂದಿನ ಕಾಲವೇ ಬರುತ್ತಿತ್ತು”.

ಈ ಸತಿ ಪತಿಗಳ ಸರಸ ಸಂಭಾಷಣೆಯಲ್ಲಿ ರಸಿಕತೆಯೊಂದಿಗೆ, ವೈಚಾರಿಕವಾಗಿ ಕಾರಂತರ ಸಮಕಾಲೀನವಾಗಿದ್ದ ಸ್ತ್ರೀ ಸಮಾನತೆಯ ಭಾವವೂ ಅಭಿವ್ಯಕ್ತವಾಗಿದೆ. ಗಂಡ ಹೇಳಿದ್ದೇ ವೇದವಾಕ್ಯವೆಂಬ, ಗಂಡ ಹಾಕಿದ ಗೆರೆಯನ್ನು ದಾಟಬಾರದೆಂಬ ಸಾಂಪ್ರದಾಯಿಕ ಸ್ವಭಾವದ ಹೆಣ್ಣು ತಾನಲ್ಲ ಎಂಬುದನ್ನು ಸೂಕ್ಷ್ಮವಾಗಿ ಶಂಕರಮ್ಮ ತಮ್ಮ ಮಾತುಗಳಲ್ಲಿ ವ್ಯಕ್ತಮಾಡಿದ್ದಾರೆ. ಆತ್ಯಂತಿಕವಾಗಿ ಇದು ಕಾರಂತರ ವೈಚಾರಿಕತೆಯೇ ಆಗಿದೆ. ಒಮ್ಮೊಮ್ಮೆ ಪ್ರಾದೇಶಿಕ ಮಾತಿನ ಬಳಕೆಯಿಂದ ಅರ್ಥಪೂರ್ಣ ವ್ಯಂಜಕತೆಯನ್ನು ಕಾರಂತರು ಸಾಧಿಸುತ್ತಾರೆ; “ಅವರು ಮೈಕೊಡವಿದರೆ ಆಗುವ ಕೆಲಸ ನನ್ನಿಂದ ನಾಲ್ಕು ದಿನ ದುಡಿದರೂ ಅಗದು” ಎಂಬ ಆಳುಮಗ ಬಟ್ಯನ ಮಾತು ಗೋಪಾಲಯ್ಯನ ವ್ಯಕ್ತಿತ್ವಕ್ಕೆ ಎಷ್ಟು ಸಮವಾಗಿ ಹೊಂದಿಕೆಯಾಗುತ್ತದೆ ಎಂಬುದನ್ನು ಗಮನಿಸಬಹುದು.

ಗದ್ಯಂ ಹೃದ್ಯಂ’ ಎಂದ ಮುದ್ದಣನ ಪ್ರದೇಶದವರೇ ಆದ ಕಾರಂತರ ಗದ್ಯ ನೇರ, ಸರಳ. ಗದ್ಯದ ಮುಖ್ಯ ಕಾರ್ಯವೇ ಸರಳವಾಗಿ, ಸ್ಪಷ್ಟವಾಗಿ ವಿಚಾರವನ್ನು ತಿಳಿಸುವುದು. ಈ ಪ್ರಧಾನ ಆಶಯಕ್ಕೆ ಚ್ಯುತಿ ಬಾರದಂತೆ, ಸೊಗಸು ಕಳೆಗೂಡುವಂತೆ, ಬೆಡಗು ವೈಯ್ಯಾರಗಳನ್ನು ಕೂಡಿಕೊಂಡಂತೆ ಕಾರಂತರು ಬೆಟ್ಟದ ಜೀವ ಕಾದಂಬರಿಯಲ್ಲಿ ಗದ್ಯವನ್ನು ಬಳಸಿದ್ದಾರೆ. ಈ ಕಾರಣದಿಂದಲೇ ‘ಬೆಟ್ಟದ ಜೀವ’ ಒಂದು ವಿಶಿಷ್ಟ ಕಲಾಕೃತಿಯಾಗಿ ಇಂದಿಗೂ ಉಳಿದಿದೆ.

ಈ ಅಂಕಣದ ಹಿಂದಿನ ಬರೆಹಗಳು:
ನಿಸರ್ಗ: ಪ್ರಾದೇಶಿಕ ಪರಿಸರದ ದಟ್ಟ ಚಿತ್ರಣ
ಚಂದ್ರಶೇಖರ ಕಂಬಾರರ ಚಕೋರಿ: ಕನಸುಗಳು ಕಾವ್ಯವಾಗುವ ಪರಿ
ದೇವನೂರರ ಒಡಲಾಳ: ದಲಿತ ಬದುಕಿನ ದರ್ಶನ
ವಾಸ್ತವ–ವಿಕಾಸಗಳ ನಡುವಿನ ಜೀಕುವಿಕೆ: ತೇಜಸ್ವಿಯವರ ಕರ್ವಾಲೊ
ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ
ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು
ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’
ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು
ಗ್ರಾಮಾಯಣ ಎಂಬ ಸಮಕಾಲೀನ ಪುರಾಣ
ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’
ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’
ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ
ಪುಸ್ತಕ ಲೋಕವೆಂಬ ಬದುಕಿನ ಬುತ್ತಿ
ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'
ಅಂಬಿಕಾತನಯದತ್ತರ ಸಖೀಗೀತ
ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...