ಕ್ರಿಯಾಪದಗಳು

Date: 09-11-2022

Location: ಬೆಂಗಳೂರು


ಯಾವುದೆ ಬಾಶೆಯಲ್ಲಿ ನಾಮಪದ ಮತ್ತು ಕ್ರಿಯಾಪದ ಇವುಗಳನ್ನು ಹೋಲಿಸಿದಾಗ ಹೆಚ್ಚಾಗಿ ಇರುವ ಪದಗಳೆಂದರೆ ನಾಮಪದಗಳು, ಕ್ರಿಯಾಪದಗಳು ಕಡಿಮೆ ಇರುತ್ತವ ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕ್ರಿಯಾಪದಗಳು’ ಬಗ್ಗೆ ಬರೆದಿದ್ದಾರೆ.

ಕ್ರಿಯಾಪದಗಳು:

ಸಾಮಾನ್ಯವಾಗಿ ಕ್ರಿಯಾಪದಗಳೆಂದರೆ ಅವು ಕ್ರಿಯೆಯನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ನಿಜ. ಕ್ರಿಯಾಪದಗಳು ಕ್ರಿಯೆಯನ್ನು ಸೂಚಿಸುತ್ತವೆ. ಆಡು, ಕೂಡು, ನೋಡು, ಹಾಡು.

ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಕ್ರಿಯಾಪದಗಳು ಕ್ರಿಯೆಯನ್ನು ಸೂಚಿಸುತ್ತವೆಯೆ ಹೊರತು ಹೆಸರಿಸುವುದಿಲ್ಲ. ಅಂದರೆ, ಆಡು ಇದು ಕ್ರಿಯಾಪದ, ಏಕೆಂದರೆ ಇಲ್ಲಿ ಒಂದು ಕೆಲಸ ಇಲ್ಲವೆ ಕ್ರಿಯೆಯನ್ನು ಸೂಚಿಸುವುದು ಕಾಣಿಸುತ್ತದೆ. ಇದನ್ನು ಈ ಮುಂದಿನ ವಾಕ್ಯವನ್ನು ಅವಲೋಕಿಸುವ ಮೂಲಕ ಸುಲಬವಾಗಿ ತಿಳಿದುಕೊಳ್ಳಬಹುದು. ಅವಳು ಆಡಿದಳು. ಇಲ್ಲಿ ಒಂದು ಕೆಲಸವನ್ನು ಇದು ಸೂಚಿಸುತ್ತದೆ. ಆದರೆ, ಇದನ್ನು ಹೆಸರಿಸುವುದಿಲ್ಲ. ಆಡುವುದನ್ನು ಹೆಸರಿಸುವುದಕ್ಕೆ ಇನ್ನೊಂದು ಬೇರೆಯದೆ ಆದ ಪದ ಇದೆ. ಆಟ. ಇದು ಆಡುವ ಕೆಲಸವನ್ನು ಹೆಸರಿಸುತ್ತದೆ. ಈ ವಾಕ್ಯ ಗಮನಿಸಿ, ಅವಳು ಆಟ ಆಡಿದಳು. ಇಲ್ಲಿ ಆಡು ಎಂಬುದು ಕೆಲಸವಾಗಿಯೂ ಆಟ ಎನ್ನುವುದು ಆ ಕೆಲಸವನ್ನು ಹೆಸರಿಸುವ ಹೆಸರಾಗಿಯೂ ಬಳಕೆಯಾಗಿವೆ.

ಯಾವುದೆ ಬಾಶೆಯಲ್ಲಿ ನಾಮಪದ ಮತ್ತು ಕ್ರಿಯಾಪದ ಇವುಗಳನ್ನು ಹೋಲಿಸಿದಾಗ ಹೆಚ್ಚಾಗಿ ಇರುವ ಪದಗಳೆಂದರೆ ನಾಮಪದಗಳು, ಕ್ರಿಯಾಪದಗಳು ಕಡಿಮೆ ಇರುತ್ತವೆ.

ಸರಿ, ಕ್ರಿಯಾಪದವನ್ನು ಗುರುತಿಸುವುದು ಹೇಗೆ? ಎಂಬ ಪ್ರಶ್ನೆಯನ್ನು ಹಾಕಿಕೊಳ್ಳೋಣ. ವಾಕ್ಯವೊಂದರಲ್ಲಿ ಸಾಮಾನ್ಯವಾಗಿ ಕ್ರಿಯಾಪದದ ಸ್ತಾನದಲ್ಲಿ ಇದು ಬರುತ್ತದೆ, ಸಹಜವಾಗಿ. ನಾಮಪದಗಳನ್ನು ಪರಿಚಯಿಸುವ ವೇಳೆಯಲ್ಲಿ ಹೇಳಿದಂತೆ ನಮಗೆ ಪರಿಚಿತವಾದ ಪದಗಳನ್ನು ಇದು ಕ್ರಿಯಾಪದ ಎಂದು ಗುರುತಿಸಲು ಸಾದ್ಯ, ಆದರೆ ಕನ್ನಡದಂತ ಬಾಶೆಯಲ್ಲಿ ದೊಡ್ಡ ಸಂಕೆಯ ಅಪರಿಚಿತ ಕ್ರಿಯಾಪದಗಳು ಇರುತ್ತವೆ. ಆಗ, ಹೊಸತಾಗಿ ಪದವೊಂದು ಎದುರಾದಾಗ ಅದು ನಾಮಪದವೊ ಕ್ರಿಯಾಪದವೊ ಎಂಬುದು ತಿಳಿದುಕೊಳ್ಳುವುದು ಕಶ್ಟವಾಗಬಹುದು. ಯಾವ ಪದವು ಕಾಲಪ್ರತ್ಯಯವನ್ನು ಪಡೆದುಕೊಳ್ಳುವುದೊ ಯಾವ ಪದವು ಲಿಂಗ-ವಚನ ಪ್ರತ್ಯಯಗಳನ್ನು ಪಡೆದುಕೊಳ್ಳುವುದೊ ಅದುವೆ ಕ್ರಿಯಾಪದವಾಗಿರುತ್ತದೆ. ಮಾಡು+-ದ್-+-ಅಳು=ಮಾಡಿದಳು. ಈ ಮಾಡಿದಳು ಎಂಬ ಪದದಲ್ಲಿ ಮಾಡು ಎಂಬುದು ಕ್ರಿಯಾಪದ. ಇದರ ಮೇಲೆ –ದ್- ಎಂಬ ಪ್ರತ್ಯಯವೊಂದು ಮೊದಲಿಗೆ ಬಂದಿದೆ. ಇದು ಕಾಲವನ್ನು ಹೇಳುತ್ತದೆ. ಈ ಪದದಲ್ಲಿ ಈ ಪ್ರತ್ಯಯದ ಮೂಲಕ ಸೂಚಿತವಾಗಿರುವ ಕಾಲ ಕಳೆದಕಾಲವಾಗಿದೆ, ಅಂದರೆ ಬೂತಕಾಲ. ಆನಂತರ ಬಂದಿರುವ ಪ್ರತ್ಯಯ –ಅಳು. ಇದು ಸ್ತ್ರೀಲಿಂಗ-ಏಕವಚನವನ್ನು ಸೂಚಿಸುತ್ತಿದೆ. ಈ ಪ್ರತ್ಯಯಗಳನ್ನು ಪಡೆದುಕೊಂಡರೆ ಅವುಗಳನ್ನು ಕ್ರಿಯಾಪದ ಎಂದೆನ್ನಲಾಗುವುದು.

ಮಾಡು+-ದ್-+-ಅಳು=ಮಾಡಿದಳು
ಮಾಡು+-ದ್-+-ಅನು=ಮಾಡಿದನು
ಮಾಡು+-ದ್-+-ಇತು=ಮಾಡಿತು
ಮಾಡು+-ದ್-+-ಅರು=ಮಾಡಿದರು
ಮಾಡು+-ದ್-+-ಅವು=ಮಾಡಿದವು

ಇದಕ್ಕೆದುರಾಗಿ ನಾಮಪದಗಳು ತೆಗೆದುಕೊಳ್ಳುವ ವಿಬಕ್ತಿ ಮತ್ತು ಬಹುವಚನ ಪ್ರತ್ಯಯಗಳನ್ನು ತೆಗೆದುಕೊಳ್ಳದೆ ಇರುವುದು ಕ್ರಿಯಾಪದವಾಗಿರುತ್ತದೆ ಎಂದೂ ಹೇಳಬಹುದು.

ಸಾಮಾನ್ಯವಾಗಿ ಕ್ರಿಯಾಪದಗಳನ್ನು ಗುಂಪಿಸುವುದು ಕಂಡುಬರುವುದಿಲ್ಲ. ಆದರೆ, ಕ್ರಿಯಾಪದಗಳ ಒಳರಚನೆಯನ್ನು ಅಂದರೆ ಅದರ ಅರ‍್ತವನ್ನು ಗಮನಿಸಿದಾಗ ಕ್ರಿಯಾಪದಗಳನ್ನು ಎರಡು ರೀತಿಯಲ್ಲಿ ಗುಂಪಿಸಲು ಸಾದ್ಯವಿದೆ. ಸಾಯು ಮತ್ತು ಕೊಲ್ಲು ಎಂಬ ಎರಡು ಪದಗಳನ್ನು ಗಮನಸಿ. ಕುತೂಹಲವೆಂಬಂತೆ ಈ ಎರಡೂ ಪದಗಳ ಪಲಿತಾಂಶವು ಇಲ್ಲವಾಗುವುದು ಆಗಿದೆ, ಆದರೆ, ಇವೆರಡರಲ್ಲಿ ಒಂದು ಮಹತ್ವದ ವ್ಯತ್ಯಾಸವಿದೆ. ಅದೆಂದರೆ, ಮೊದಲ ಪದದಲ್ಲಿ ಸಾವು ತಾನೆ ಗಟಿಸುತ್ತದೆ, ಅದನ್ನು ಇನ್ನೊಬ್ಬರು ಮಾಡುವುದಿಲ್ಲ. ಎರಡನೆ ಪದದಾಗ ಸಾವು ತನ್ನಶ್ಟಕ್ಕೆ ಗಟಿಸುವುದಿಲ್ಲ, ಬದಲಿಗೆ ಸಾವು ಗಟಿಸುವಂತೆ ಇನ್ನೊಬ್ಬರಾರೊ ಮಾಡುತ್ತಾರೆ. ಅಂದರೆ ಕೊಲ್ಲು ಎಂಬ ಕೆಲಸದ ಮೂಲಕ ಸಾವು ಗಟಿಸುತ್ತದೆ. ಆದ್ದರಿಂದಲೆ ಸಾವು ಕೆಲಸ ಗಟಿಸಿದಾಗ ಸಂಸ್ಕಾರದ ಕೆಲಸಗಳು ನಡೆಯುತ್ತವೆ, ಕೊಲ್ಲು ಕೆಲಸ ನಡೆದಾಗ ಪೋಲಿಸರ ಕೆಲಸ ಶುರುವಾಗುತ್ತದೆ. ಇವುಗಳ ನಡುವಿನ ವ್ಯತ್ಯಾಸವನ್ನು ಇನ್ನಶ್ಟು ಅರಿತುಕೊಳ್ಳುವುದಕ್ಕೆ ಇವುಗಳನ್ನು ವಾಕ್ಯದಲ್ಲಿ ಬಳಸಿ ಮಾಡೋಣ. ಅವನು ಸಾಯು+-ತ್-+-ಅನು= ಅವನು ಸತ್ತನು, ಕೊಲ್ಲು+-ತ್-+-ಅನು= ಅವನು ಕೊಂದನು. ಇವುಗಳನ್ನು ಬೇರೆ ವಾಕ್ಯವಾಗಿ ಬಳಸಿ ನೋಡೋಣ. *ಅವನನ್ನು ಸತ್ತನು ಮತ್ತು ಅವನನ್ನು ಕೊಂದನು, ಇವುಗಳಲ್ಲಿ ಮೊದಲನೆಯದು ವ್ಯಾಕರಣಾತ್ಮಕವಲ್ಲದ ವಾಕ್ಯವಾಗಿ ನಿಲ್ಲುತ್ತದೆ. ಎರಡನೆಯದು ವ್ಯಾಕರಣಾತ್ಮಕವಾಗಿದೆ. ಅಂದರೆ, ಇದು ಒಂದು ಬಗೆಯ ವಾಕ್ಯರಚನೆಯನ್ನು ಒಪ್ಪುವುದಿಲ್ಲ ಎಂದಾಗುತ್ತದೆ. ಇದಕ್ಕೆ ಕಾರಣ ಅದರೊಳಗೆ ಇರುವ ವಿವಿದ ಗಟಕಗಳು. ಅಂದರೆ, ಸಾಯುವ ಕೆಲಸ ನಡೆದಾಗ ವ್ಯಕ್ತಿ ತನ್ನಶ್ಟಕ್ಕೆ ಸಾಯುತ್ತದೆ. ಅಂದರೆ ಇದರಲ್ಲಿ ಒಂದು ಗಟಕ ಇದೆ. ಆದರೆ, ಕೊಲ್ಲುವ ಕೆಲಸ ನಡೆದಾಗ ಕೊಲ್ಲುವ ಕೆಲಸ ಮಾಡುವ ಒಬ್ಬರು ಮತ್ತು ಕೊಲ್ಲುವ ಕೆಲಸಕ್ಕೆ ಒಳಗಾಗುವ ಅಂದರೆ ಸಾವಿಗೆ ಒಳಗಾಗುವ ಇಲ್ಲವೆ ಸಾಯುವ ಒಬ್ಬರು ಹೀಗೆ ಎರಡು ಗಟಕಗಳು ಇರುತ್ತವೆ. ಈ ಎರಡರಲ್ಲಿ ಸಾವು ಪದದಲ್ಲಿ ಆಗುಗ ಗಟಕ ಇದೆ, ಅಂದರೆ ಆ ಕೆಲಸದ ಪರಿಣಾಮಕ್ಕೆ ಒಳಗಾಗುವ ಗಟಕ ಪದದೊಳಗೆ ಇದೆ. ಇನ್ನು ಕೊಲ್ಲು ಪದವನ್ನು ಗಮನಿಸಿದಾಗ ಆ ಪದ ಸೂಚಿಸುವ ಕೆಲಸದ ಪರಿಣಾಮಕ್ಕೆ ಒಳಗಾಗುವ ಒಂದು ಗಟಕ ಮತ್ತು ಆ ಕೆಲಸವನ್ನು ಮಾಡುವ ಇನ್ನೊಂದು ಗಟಕ ಇವೆರಡೂ ಇವೆ. ಹಾಗಾಗಿ, ಈ ಕ್ರಿಯಾಪದಗಳನ್ನು ಮಾಡುಗ ಗಟಕವಿಲ್ಲದ ಕ್ರಿಯಾಪದಗಳು ಮತ್ತು ಮಾಡುಗ ಗಟಕವಿರುವ ಕ್ರಿಯಾಪದಗಳು ಎಂದು ಗುರುತಿಸಬಹುದು. ಹೀಗೆಯೆ ಬೀಳು-ನೂಕು, ಉದುರು-ಕೀಳು ಇಂತಾ ಸಾಕಶ್ಟು ಪದಗಳನ್ನು ಕನ್ನಡದಲ್ಲಿ ಕಾಣಬಹುದು.

ಕನ್ನಡದಲ್ಲಿ ಕ್ರಿಯಾಪದಗಳ ರಚನೆಯನ್ನು ಗಮನಿಸಿ ನಾಮಪದಗಳನ್ನು ನೋಡಿದಂತೆ ಮೂಲಪದಗಳು ಮತ್ತು ರಚನೆಗಳೆಂದು ಗುಂಪಿಸಬಹುದು. ಹೋಗು, ಬಾ, ಕೂಡು, ನಿಲ್ಲು ಎಂಬ ಪದಗಳಲ್ಲಿ ಆಂತರಿಕ ರಚನೆ ಕಾಣಿಸುವುದಿಲ್ಲ. ಅವು ಒಂದೆ ಆಕ್ರುತಿಮಾತ್ಮಕ ಗಟಕವನ್ನು ಹೊಂದಿವೆ. ರಚನೆ ಇರುವ ಕ್ರಿಯಾಪದಗಳೆಂದರೆ ಪದವೊಂದರಲ್ಲಿ ಒಂದಕ್ಕಿಂತ ಹೆಚ್ಚು ಆಕ್ರುತಿಮಾತ್ಮಕ ಗಟಕಗಳು ಇರುವುದು. ಇದರಲ್ಲಿ ಪದಕ್ಕೆ ಪ್ರತ್ಯಯ ಹತ್ತಿಸಿ ಸಾದಿಸುವ ಸಾದಿತ ಕ್ರಿಯಾಪದಗಳು ಮತ್ತು ಎರಡು ಪದಗಳನ್ನು ಸೇರಿಸುವ ಮೂಲಕ ಹುಟ್ಟಿಸುವ ಸಮಾಸಪದಗಳು ಇರುತ್ತವೆ. ಮೂಲಪದಗಳಿಗೆ ಕೆಲವು ಪ್ರತ್ಯಯಗಳನ್ನು ಹತ್ತಿಸುವ ಮೂಲಕ ಬೇರೆ ಕ್ರಿಯಾಪದಗಳನ್ನು ಪಡೆಯಲು ಸಾದ್ಯ, ಹೊಳೆ+-ಇಸು=ಹೊಳೆಸು, ಎರೆ+-ಚು=ಎರಚು ಮೊದಲಾದ ಕ್ರಿಯಾಪದಗಳನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಮಾರುಹೋಗು, ಕರೆದೊಯ್ಯು ಇಂತಾ ಕ್ರಿಯಾಪದಗಳನ್ನು ಗಮನಿಸಿದಾಗ ಇವುಗಳಲ್ಲಿ ಎರಡು ಪದಗಳು ಇವೆ. ಮಾರು+ಹೋಗು ಮತ್ತು ಕರೆ+-ದ್-+ಒಯ್ಯು ಎಂಬ ಎರಡೆರಡು ಪದಗಳು ಕ್ರಮವಾಗಿ ಈ ಮೇಲಿನ ಪದಗಳಲ್ಲಿ ಇರುವುದು ಕಾಣಿಸುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...