ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...

Date: 22-12-2022

Location: ಬೆಂಗಳೂರು


“ಜಾರಿ ಬೀಳುವ ಅವಳ ಸೆರಗ ಮರೆಯಲ್ಲಿ ನನಗರಿವಿಲ್ಲದೇ ಸೆರೆಯಾಗಿ ಹೋದೆ. ಅವಳ ಮಧುರ ಮಾತುಗಳ ಮಧುವನದಲಿ ನನ್ನ ತನುಮನವೆಲ್ಲ ಕರಗಿ ಹೋಯಿತು. ಅವಳೊಬ್ಬಳು ಮಾತ್ರ ನನ್ನನ್ನು ಇವತ್ತಿಗೂ ಶ್ರೀಶೈಲ ಅಂತ ಕರೆಯೋದು. ಅದರಲ್ಲೂ ಅವಳ ದೇಸೀಯ ದನಿಯಲಿ ''ಸಿರಸೈಲ" ಅಂತ ಕರೆಯುತ್ತಾಳೆ. ಹಾಗೆ ಕರೆಯುತ್ತಲೇ ಶತಮಾನದಂತಹ ನೆನಪಿನ ಬುತ್ತಿ ನಿಧಾನದಲಿ ಬಿಚ್ಚ ತೊಡಗಿದಳು” ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, 'ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು’ ಲೇಖನವನ್ನು ಬರೆದಿದ್ದಾರೆ.

ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ಆದರೆ...

ಅಚಾನಕ್ಕಾಗಿ ಮೊನ್ನೆ ಜಾತ್ರೆಯಲ್ಲಿ ಸಿಕ್ಕಳು. ಕನಸಲ್ಲಿ ಕಂಡಂಗಾಯಿತು. ಅವಳ ಎಲ್ಲಾ ನೆನಪುಗಳು ನನಗಂತೂ ಪೂರ್ಣ ಮರೆತೇ ಹೋಗಿತ್ತು. ಹೆಸರು ಸಹಿತ. ಆದರೆ ಅವಳೇ ಖುದ್ದು ಹಿಂದಿನದನ್ನೆಲ್ಲಾ ಹೇಳುತ್ತ, ಹೇಳುತ್ತಾ ಹೋದಂತೆ ಮರೆತು ಹೋದ ಒಂದೊಂದೇ ದ್ಯಾಸಗಳು ಅವಳೆದೆಯ ದಾಸವಾಳಗಳಂತೆ ಅರಳಿ ನಿಂತವು. ಎಲ್ಲವನ್ನು ಎಳೆ ಎಳೆಯಾಗಿ ಹೇಳುತ್ತಿದ್ದಂತೆ ನೆನಪಿನ ಚಿತ್ರಗಳು ನನ್ನ ಕಣ್ಮುಂದೆ ಹಾಳತವಾಗಿ ಸುಳಿಯ ತೊಡಗಿದವು. ರೇಷ್ಮೆ ಸೀರೆಯ ಸೆರಗು ಪದೆಪದೇ ಜಾರುವುದನ್ನು ತಿರು ತಿರುಗಿ ಸರಿಪಡಿಸಿಕೊಳ್ಳುತ್ತಿದ್ದಳು. ಜಾರಿ ಬೀಳುವ ಅವಳ ಸೆರಗ ಮರೆಯಲ್ಲಿ ನನಗರಿವಿಲ್ಲದೇ ಸೆರೆಯಾಗಿ ಹೋದೆ. ಅವಳ ಮಧುರ ಮಾತುಗಳ ಮಧುವನದಲಿ ನನ್ನ ತನುಮನವೆಲ್ಲ ಕರಗಿ ಹೋಯಿತು. ಅವಳೊಬ್ಬಳು ಮಾತ್ರ ನನ್ನನ್ನು ಇವತ್ತಿಗೂ ಶ್ರೀಶೈಲ ಅಂತ ಕರೆಯೋದು. ಅದರಲ್ಲೂ ಅವಳ ದೇಸೀಯ ದನಿಯಲಿ ''ಸಿರಸೈಲ" ಅಂತ ಕರೆಯುತ್ತಾಳೆ. ಹಾಗೆ ಕರೆಯುತ್ತಲೇ ಶತಮಾನದಂತಹ ನೆನಪಿನ ಬುತ್ತಿ ನಿಧಾನದಲಿ ಬಿಚ್ಚ ತೊಡಗಿದಳು.

ಸಿರಸೈಲ ನೀ ಬಾರಾವೀ ಕಿಲಾಸ್ ಓದ್ತಿದ್ದಿ. ನಾ ಅದೇ ಆಗ ಮದವಿ ಮಾಡ್ಕೊಂಡು ಬಂದಿದ್ದೆ. ನಾ, ನಿನಕಿಂತ ದೀಡು ವರ್ಷ ದೊಡ್ಡಾಕಿ. ನಾ ತುಸು ಕಪ್ಪಿದ್ದೆ. ನೀ ಕಡ್ಲಿಬ್ಯಾಳಿ ಬಣ್ಣದ್ಹಂಗ ಭಾಳ ಛೆಂದ್ಇದ್ದಿ. ನನಕಿಂತ ಜರಾ ಬೆಳ್ಳಗಿದ್ದಿ. ನಿನ್ನ ಕಾಲೇಜ್ ಸೂಟಿ ಇದ್ದಾಗ ಒಂದ್ಸಲ ಬಂಬೈ ಕಡೀಂದ ಒಬ್ಬ ಇಂಗ್ರೇಜಿ ಹುಡುಗ ಬಂದಿದ್ದ. ಅಂವ ಪಸಂದಾಗಿ ಇಂಗ್ಲಿಷ್ ಮಾತಾಡತಿದ್ದ. ನನಗ ಅವ್ನ ಹೆಸರು ನೆಪ್ಪಿಲ್ಲ. ನಮ್ಮೂರ ಹೆಣ್ಮಗಳೇ ಅವ್ನ ಕರ್ಕೊಂಬದ್ದಿದ್ಳು. ಮದ್ಲೇ ಸುಂದರ ಹರೇದ ಹುಡುಗ. ಎಂಥವರಿಗೂ ಅವ್ನ ಮ್ಯಾಲ ಮನಸಾಗೊವಷ್ಟು ಅಂವ ಚೆಲುವ. ನಮಗ್ಯಾರಿಗೂ ಇಂಗ್ಲೀಷ್, ಹಿಂದಿ ಬರ್ತಿರಲಿಲ್ಲ. ನಮ್ಮೂರಾಗ ನೀನೊಬ್ನೇ ಅವ್ನ ಸಂಗಾಟ ಹಿಂದಿ, ಇಂಗ್ಲೀಷ್ ದಾಗ ಮಾತಾಡ್ತಿದ್ದಿ. ಅದು ನನಗ ಪಕ್ಕಾ ನೆಪ್ಪದ. ನೀವಿಬ್ರೂ ಮಾತಾಡೊದನ್ನು ಕೇಳುವಲ್ಲಿ ನನಗ ಕಂಡಾಪಟಿ ಖುಷಿಯ ಸಾಕ್ಷಾತ್ಕಾರ ಆಗ್ತಿತ್ತು. ಹೀಗೆ ಮುಂಬೈನ ತುಂಟು ಹುಡುಗನ ಕುರಿತು ಮತ್ತೆ ಮತ್ತೆ ಪಂಟು ಹೊಡೆದಂತೆ ಆಕೆ ಹೇಳುತ್ತಿದ್ದರೆ ನನಗೇಕೋ ಜಲಸಿ. ಅದನ್ನಾಕೆ ಥಟ್ಟಂತ ಗ್ರಹಿಸಿದಳು. ಅವಳು ಬಹಳೇ ಸಂವೇದನಾಶೀಲೆ. ಕೂಡಲೇ ಕೊಲ್ಲಾಪುರದ ತನ್ನ ಗಂಡನ ಕುರಿತು ಹೇಳಲು ಟಾಪಿಕ್ ಚೇಂಜ್ ಮಾಡಿಬಿಟ್ಟಳು.

ಅವೆಲ್ಲಾ ಥೀಸ್, ಚಾಳೀಸ್ ವರ್ಷಗಳ ಹಿಂದಿನ ಮಾತುಗಳು ಅಂತ ಮಾತಿಗೊಮ್ಮೆ ನೆನಪಿಸುತ್ತಿದ್ದಳು. ಆಕೆ ಹದಿವಯದಲಿ ನನ್ನೊಂದಿಗೆ ಕಳೆದ ಕೆಲವು ಚೆಂದದ ಚಣಗಳನ್ನು ಅಗ್ದೀ ರಸವತ್ತಾಗಿ ಹೇಳ ತೊಡಗಿದಳು. ಒಳಗೊಳಗೆ ನನ್ನ ತುಡುಗು ಮನಸು ಅದನ್ನೇ ಆಕೆ ಮುಂದುವರೆಸಲೆಂದು ಹಂಬಲಿಸುತ್ತಿತ್ತು. ಆದರೆ ಅದನ್ನವಳು ಭಾಳ ಶ್ಯಾಣೇತನದಿಂದಲೇ ನಿಭಾಯಿಸುತ್ತಿದ್ದಳು. ಅಬ್ಬಾ ! ಅವಳ ನೆನಪುಗಳು ಅದೆಷ್ಟು ಸೊಗಸು ಮತ್ತು ಪೊಗದಸ್ತಾಗಿದ್ದವೆಂದರೆ ಜಸ್ಟ್ ಕೆಲವೇ ನಿಮಿಷಗಳ ಕೆಳಗೆ ಘಟಿಸಿದ ತಾಜಾತನದಲ್ಲಿ ಅದ್ದಿ ಅದ್ದಿ ತೆಗೆದ ಬ್ರೇಕಿಂಗ್ ನ್ಯೂಸ್ ತರಹ ಫಳ ಫಳ ಹೊಳೆಯತೊಡಗಿದವು. ತಾಸೊಪ್ಪತ್ತು ನಾನು ದೂಸರಾ ಮಾತಾಡದೇ ತನ್ಮಯನಾಗಿ ಕೇಳ ತೊಡಗಿದೆ. ನಡು ನಡುವೆ ನನಗೆ ಅರ್ಥವಾಗದ ಮರಾಠಿ ಗಾದೆಗಳನ್ನೇ ಹೇಳುತ್ತಿದ್ದಳು. ರಸಾನುಭೂತಿಗೆ ಭಂಗವಾದೀತೆಂದು ಅವಳ ಮಾತುಗಳಿಗೆ ಶರಣಾಗತನಾಗಿ ಸಾಧುತ್ವದಲಿ ಆಲಿಸತೊಡಗಿದೆ. ಅಷ್ಟಕ್ಕೂ ನನಗೀಗ ಪ್ರಶ್ನಿಸುವ ಮತ್ತು ಪ್ರತಿಕ್ರಿಯಿಸುವ ರೋಗ ಕಡಿಮೆಯಾಗಿದೆ.

ತಾನು ಹೇಳುವ ಅವೆಲ್ಲವೂ ಪ್ರಮಾಣ ಪತ್ರದಂತೆ ಇದ್ದು, ನಾ ಖರೇ ಹೇಳ್ತೀನಿ ಸಿರಸೈಲ ನೀ ಭಾಳ ಶ್ಯಾಣೇ ಇದ್ದೀ. ಪ್ರಾಮಾಣಿಕ ಮತ್ತು ಸುಪ್ರೀತನಾಗಿದ್ದಿ. ಹಾಗಂತ ತನ್ನ ಪ್ರಾಮಾಣಿಕ ಅಭಿವ್ಯಕ್ತಿಗೆ ಪುಷ್ಟಿ ದೊರಕಿಸಿಕೊಳ್ಳುತ್ತಿದ್ದಳು. ಅವಳೇನು ಹೆಚ್ಚು ವಿದ್ಯಾವಂತೆಯಲ್ಲ. ಹಾಗಂತ ಅನ್ಪಡ್ ಅಂತು ಖಂಡಿತಾ ಅಲ್ಲ. ಆದರೆ ಯಾವುದೇ ಸುಶಿಕ್ಷಿತ ಮಹಿಳೆಗಿಂತ ಕಮ್ಮೀ ಇಲ್ಲದಂತೆ ನಾಗರಿಕ ಪ್ರಜ್ಞೆ ತುಂಬಿ ನಿರರ್ಗಳವಾಗಿ ಮಾತಾಡುತ್ತಿದ್ದಳು. ಹೌದು ಅವಳ ಮಾತುಗಳಿಗೆ ಪೌರ್ಣಿಮೆಯ ಅವರ್ಣನೀಯ ಸೊಗಸು. ಸಹಸ್ರ ಚಂದ್ರಮಗಳ ಸೊಬಗು ತುಂಬಿ ಬಂದಿತ್ತು. ಮೇಲಾಗಿ ರುಚಿಕರ ಜವಾರಿತನದ ಮಾಧುರ್ಯವಿತ್ತು.‌ ಅದಕ್ಕೆಂದೇ ಬಹಳ ಹೊತ್ತು ಆಕೆಯ ನಾಟೀ ಮಾತುಗಳ ಪರಿಮಳ ಪ್ರೀತಿಯನ್ನು ಕೋಮಲ ಚಿತ್ತಚೀಲದ ತುಂಬಾ ತುಂಬಿಸಿಕೊಂಡೆ.

ನನ್ ಗಂಡನಿಗೆ ಕೊಲ್ಲಾಪುರದಲ್ಲಿ ಸರ್ಕಾರಿ ನೌಕರಿ. ಕೈತುಂಬಾ ಛೊಲೋ ಪಗಾರ. ಅವಂದು ಇಂಗ್ರೇಜಿ ಕಡೆಯ ಊರು. ಅದು ಹಜರಿ ಖಾಜೇಶನ ಝಳಕಿ ಹತ್ತಿರದ ಹಳ್ಳಿ. ನನ್ ಗಂಡ ಭಾರಿ ಕುಡುಕ ಮತ್ತು ಭಯಂಕರ ಸ್ಟ್ರಿಕ್ಟ್. ಅವನಿಗೆ ಸ್ನೇಹ, ಪ್ರೀತಿ, ಅಂತಃಕರಣಗಳ ಪರಿಚಯವೇ ಇರ್ಲಿಲ್ಲ. ನಿನಗೆ ಆಗಾಗ ಕೇಳಿದಂತೆ ಹೋಗಿ, ಹೋಗಿ ಅವನಿಗೆ ಕೇಳಿದ್ದೆ "ನನ್ನನ್ನು ಪ್ರೀತಿಸುತ್ತಿಯಾ" ಅಂತ. ನನಗೆ ಕಪಾಳ ಮೋಕ್ಷ ಮಾಡಿ ಅಂವ ಹೇಳಿದ್ದಿಷ್ಟು. " ನೀನು ನನ್ನ ಸೇವಕಿ ಆಯ್ ಮೀನ್ ದಾಸಿ " ಅಂತ ಕೊಳಕು ಇಂಗ್ಲಿಷಿನಲ್ಲಿ ಕಿರುಚಿದ್ದ. ಅವನು ದಾರೂ ಕುಡಿದ ಗಬ್ಬುವಾಸನೆ ನನ್ನ ಮೊದಲ ರಾತ್ರಿಯೇ ಪರಿಚಯವಾಯ್ತು. ಅವನ ಪಾಲಿಗೆ ನಾನೊಂದು ನಿತ್ಯಭೋಗದ ವಸ್ತು. ನನ್ನನ್ನು ವಸ್ತುವಿನಂತೆ ಬಳಕೆ ಮಾಡುತ್ತಿದ್ದ.

ನಾನು ಮನೆಯಾಚೆ ಹೋಗದ ಹಾಗೆ ನನ್ನನ್ನು ಮನೆಯಲ್ಲೇ ಸೆರೆಯಾಳಿನಂತೆ ಕಟ್ಟಿಹಾಕಿ ಕೊಂಡಿದ್ದ. ಅವನೆಂತಹ ಕಟುಕನಾಗಿದ್ದನೆಂದರೆ ನನ್ನಪ್ಪ ತೀರಿಕೊಂಡಾಗ ಅಪ್ಪನ ಹೆಣಕ್ಕು ಸಹಿತ ನಾನು ಹೋಗದಂತೆ ಕಟ್ಟಪ್ಪಣೆ ವಿಧಿಸಿದ ಮಹಾಕ್ರೂರಿ. ಆ ರಾತ್ರಿಯೂ ಅವನು ನನ್ನನ್ನು ಬಿಡಲಿಲ್ಲ. ಅದನ್ನು ಹೇಳುವಾಗ ಅವಳಿಗರಿವಿಲ್ಲದೇ ಕೆಂಡದ ಕಣ್ಣೀರು ಕಣ್ತುಂಬಿ ಹರಿದವು. ಸಿರಸೈಲ ನಿನ್ನಲ್ಲಿ ತಾಯ್ತನ ಇರೋದರಿಂದ ನಿನ್ನೆದುರು ಎಲ್ಲವನ್ನೂ ಖುಲ್ಲಾ ಖುಲ್ಲಾ ಹೇಳಬೇಕೆನಿಸುತ್ತಿದೆ, ಎಂದು ಕಣ್ಣೊರೆಸಿಕೊಳ್ಳುತ್ತಾ ನುಡಿದಳು. ಕೆಲವು ಹೇಳಬಾರದ ಕಹಿಸತ್ಯಗಳನ್ನು ಹೇಳಲು ಹಿಂಜರಿಕೆ ತೋರಲಿಲ್ಲ. ನನ್ನ ಗಂಡನ ತಾಯಿ ನನ್ನತ್ತೆ ಗುರ್ಬಾಯಿ ಒಂದಿನ " ನಿನ್ನ ಗಂಡನಿಗೆ ಹೇಳಿ ಎರಡು ತಾಳಿ ಮಾಡಿಸಿಕೋ " ಅಂದಳು. ಅದನ್ನು ಅವನಿಗೆ ಹೇಳಿದ್ದೆ ತಡ ನಿನಗೆ ನಾನೊಬ್ನೆ ಗಂಡ, ಇಬ್ರಲ್ಲಾ ಅಂತ ಹೇಳಿ ನನ್ ಬಾಯಿ ಮುಚ್ಚಿಬಿಟ್ಟ.

ತಡವರಿಸಿದಂತೆ ತನ್ನ ಎಡಗೈ ತೋರಿಸಿದಳು. ಅವಳ ಗಂಡನ ಹೆಸರನ್ನು ಅವನೇ ಖುದ್ದಾಗಿ ನಿಂತು ಅಚ್ಚೆ ಹಾಕಿಸಿದ್ದು. ಅದು ಅವಳು ಸಾಯೋಮಟ ಇರಲೆಂಬುದು ಅವನ ಕಟ್ಟಾಜ್ಞೆಯಂತೆ. ಅದನ್ನು ಸಾಬೀತು ಪಡಿಸುವ ಸ್ವರದಲ್ಲಿ ಸಾರಿದಳು. ಹುಚ್ಚು ಹರೆಯದಲ್ಲಿ ಅವಳ ಮೇಲಿನ ಹುಚ್ಚುಪ್ರೀತಿಗಿಂತ ಸಂಶಯದ ಅಪನಂಬುಗೆಯೇ ಹೆಚ್ಚು ಇತ್ತೆಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದಳು. ಅಚ್ಚೆಯ ಅವನ ಹೆಸರು ಮುಚ್ಚಿ ಹೋಗುವಂತೆ ಒಮ್ಮೆ ಎರಡೂ ಕೈ ತುಂಬಾ ಕೆಂಪು ಬಳೆಗಳನ್ನು ಹಾಕಿಸಿಕೊಂಡು ಮಲಗಿದ್ದೆ. ಕುಡಿದು ಬಂದು ನಿಶೆಯಲ್ಲಿ ತನ್ನ ಬೂಟುಗಾಲಿಂದ ಬಳೆಗಳನ್ನು ತುಳಿದು ಕೈ ತುಂಬಾ ನೆತ್ತರು ಸುರಿಸಿದ್ದ. ದಶಕಗಳ ಹಿಂದೆ ಅದೇ ಕೈಗಳ ತುಂಬಾ ನೀನು ಹನಿಸಿದ್ದ ಗೆಳೆತನದ ಜೇನುಪ್ರೀತಿಯ ಸುರಲೋಕ ನೆನಪಾಗಿ ಅವತ್ತು ಇಡೀದಿನ ಅತ್ತಿದ್ದೆ.

ಗಾಜಿನ ಬಳೆಚೂರುಗಳು ನೆಟ್ಟ ಗಾಯದ ಗುರುತುಗಳು ಈಗಲೂ ತನ್ನ ಕೈಗಳ ಮೇಲೆ ಇರುವುದನ್ನು ತೋರಿಸಿದಳು. ತನಗೆ ಮೂರುಮಂದಿ ಹೆಣ್ಣು ಮಕ್ಕಳು ಹುಟ್ಟಿದ ಮೇಲೂ ಅವನ ಅನುಮಾನದ ಸೈತಾನ ಬುದ್ದಿ ಕಮ್ಮಿ ಆಗಲಿಲ್ಲ. ಜೀವ ಕಾಠರಸಿ ಸಣ್ಣ ಸಣ್ಣ ಮಕ್ಕಳನ್ನು ಕರಕೊಂಡು ಸಾಯಲು ಹೊರಟಿದ್ದೆ. ದೂರದ ದಾರಿಯಲ್ಲಿ ಖತರ್ನಾಕ್ ಪಾದೆಗಳು ಇರುವುದನ್ನು ಎಚ್ಚರಿಸಿ ಬಾಬಾನ ದರ್ಗಾದ ದರವೇಶಿ ಸಂತನೊಬ್ಬ ತನ್ನನ್ನು ಮತ್ತು ಮಕ್ಕಳನ್ನು ಕಾಪಾಡಿದ ಹೃದಯ ವಿದ್ರಾವಕ ಕತೆ ವಿವರಿಸಿದಳು. ಇಂತಹ ಇನ್ನೂ ಹತ್ತಾರು ಕತೆಗಳನ್ನು ಹೇಳಿದಳು. ಸಾವಿನಪ್ಪನಂತಹ ಆ ಎಲ್ಲ ಕತೆಗಳಲ್ಲಿ ಅವಳೇ ದುರಂತ ನಾಯಕಿ. ಆದರೆ ಸುಖಾಂತ್ಯದ ಸಂಗತಿಯೊಂದಿಗೆ ತನ್ನ ಜೀವನ ಕಥನ ಮುಗಿಸುವಂತೆ ಕಂಡುಬಂತು.

ದೇವರ ತೇರು ಎಳೆಯುವ ಗೋದೂಳಿ ಸಮಯ ಸಮೀಪಿಸಿತು. ಹಿಂಡು ಹಿಂಡು ಕಾರುಗಳ ದಂಡು ಜಾತ್ರೆಯಲ್ಲಿ ಧೂಳೆಬ್ಬಿಸುತ್ತಾ ಫೇರಿ ಹಾಕ ತೊಡಗಿದವು. ಬಿಗುವಾನಿನ ಭಗವಾನ್ ಬಂದರೆಂದು ಜನ " ಭಗವಾನ್ ಮಲ್ಲಿನಾಥ ಮಹಾರಾಜಕೀ ಜೈ " ಎಂದು ಜೈಕಾರ ಹಾಕ ತೊಡಗಿದರು. ಪೋಲಿಸ್ ವಾಹನಗಳು ದಾರಿ ಭೇದಿಸುತ್ತಾ ಓಡುತ್ತಿದ್ದವು. ಜಾತ್ರೆಯ ತುಂಬೆಲ್ಲ ಮಿಂಚಿನ ಸಂಚಾರ. ಅದನ್ನೆಲ್ಲ ಅವಳು ಮುಂಚಿತವಾಗಿಯೇ ನಿರೀಕ್ಷಿಸಿದಂತಿತ್ತು. ಮೊಬೈಲ್ ಮೂಲಕ ತನ್ನ ಕಾರು ಡ್ರೈವರನಿಗೆ ಅದೇನೋ ಮರಾಠಿಯಲ್ಲಿ ಹೇಳಿದಳು. ಅವನು ನಾವಿದ್ದ ಜಾಗಕ್ಕೆ ಕಾರು ತಂದು ನಿಲ್ಲಿಸಿದ.

ತಾನು ಭಗವಾನ್ ಮಹಾರಾಜ ಅವರ ದರುಶನಕ್ಕೆ ಬಂದಿರುವುದಾಗಿ ಮೆಲುದನಿಯಲಿ ಉಸುರಿದಳು. ಭಗವಾನ್ ಮಹಾರಾಜರು ನಮ್ಮ ಪಾಲಿನ ದೇವರು. ಕಳೆದ ಆರು ವರ್ಷಗಳಿಂದ ನನ್ನ ಗಂಡ ಭಗವಾನ್ ಅವರ ಪರಮ ಭಕ್ತನಾಗಿದ್ದಾನೆ. ಅವನೀಗ ಕುಡಿಯುವುದನ್ನು ತ್ಯಜಿಸಿದ್ದಾನೆ. ಅವನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ನನಗಂಡ ಸೋಟ ಅಲ್ಲ, ಲಪೂಟ ಅಲ್ಲವೇ ಅಲ್ಲ ಅನ್ನೋ ಸಮಾಧಾನ. ಅದನ್ನ ನನಗ ಭಗವಾನರು ಮನವರಿಕೆ ಆಗುವಂತೆ ತಿಳಿಸಿಕೊಟ್ರು. ನಮ್ಮ ಇಡೀ ಕುಟುಂಬವೇ ಈಗ ಬಿಗುವಾನ್ ಭಗವಾನರ ಆರಾಧಕ ಕುಟುಂಬವಾಗಿದೆ ಅಂದಳು. ಅದ್ಯಾಕೋ ನನಗೆ ದು. ನಿಂ. ಬೆಳಗಲಿ ಅವರ ಮೌನಕ್ರಾಂತಿ ಕಾದಂಬರಿ ನೆನಪಾತು. ನಾನು ಮಹಾಮೌನಿಯಾದೆ. ಬದುಕೆಂದರೆ ಕತೆ ಕಾದಂಬರಿಗಳ ವಸ್ತುವೇ ಎಂದು ಗೊಂದಲಿಗನಾದೆ. ಅಂದಹಾಗೆ ಅವಳ ಹೆಸರು ಹೇಳದಿದ್ದರೆ ಓದುಗ ದೊರೆಗಳಿಗೆ ದೊಡ್ಡ ದ್ರೋಹವಾದೀತು. ಅವಳು ನನ್ನ ಬಾಲ್ಯದ ಗೆಳತಿ. ಕ್ಷಮೆ ಇರಲಿ ಅವಳ ಹೆಸರು ಅಂಬಾಬಾಯಿ. ಕ್ಷಮೆ ಯಾಕಂದ್ರೇ ಅಂಬವ್ವ ಎನ್ನೋದು ನನ್ನ ಪ್ರೀತಿಯ ಮಹಾಕವಿ ಬೇಂದ್ರೆ ಅವರ ತಾಯಿಯ ಹೆಸರು. ನನ್ನ ಗೆಳತಿ ಅಂಬಾಬಾಯಿ ಅವಳೀಗ ಅಂಬಾಭವಾನಿಯೇ ಆಗಿದ್ದಾಳೆ. ಅವಳ ಮೋಹ ಸಂವಹನಶೀಲ ಗುಣಗಳು ನನ್ನನ್ನು ಮತ್ತೆ ಮತ್ತೆ ದೂರ ತೀರಕೆ ಕರೆದೊಯ್ಯುತಿವೆ. ದೇವತೆ ಅಂಬಾಬಾಯಿ ಮತ್ತೆ ಭಗವತ್ಕಥನ ಶುರು ಮಾಡಿದಳು.

ಭಗವಾನರ ಕೃಪೆಯಿಂದ ನನ್ನ ಗಂಡ ನನ್ನನ್ನು ಅತ್ಯಂತ ಪ್ರೀತಿಯಿಂದ ಗೌರವಿಸುತ್ತಿದ್ದಾನೆ. ನನಗೀಗ ಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ನಾನೀಗ ಒಬ್ಬಳೇ ಎಲ್ಲಿ ಬೇಕಾದಲ್ಲಿ ತಿರುಗಾಡುತ್ತೇನೆ. ನಮಗೆ ಒಳ್ಳೆಯ ಕಾರ್ ಡ್ರೈವರ್ ಸಿಕ್ಕಿದ್ದಾನೆ. ಅದಕ್ಕೆಲ್ಲ ಪುಣೆ ಬಳಿಯ ಬಿಗುವಾನ್ ಆಶ್ರಮದ ಭಗವಾನ್ ಮಹಾರಾಜರ ಅನುಗ್ರಹವೇ ಕಾರಣ. ಇನ್ನೇನು ಬಿಗುವಾನ ಮಹಾರಾಜರ ಹವಾ ಕುರಿತು ಅವಳು ಹೆಚ್ಚು ಹೆಚ್ಚು ವಿವರಿಸ ಬಹುದೆಂದು ನಾನು ತೀವ್ರವಾದ ನಿರಾಸಕ್ತಿ ತೋರಿದೆ. ಅದು ಅವಳಿಗೆ ಅರ್ಥವಾಗಿ ಭಗವಾನರ ಭೆಟ್ಟಿಗೆ ಹೋದಳು. ಹೋಗುವ ಮುನ್ನ ನನ್ನ ಸೆಲ್ ನಂಬರ್ ಪಡೆದಳು. ಜಾತ್ರೆಯ ಸುತ್ತಲೂ ಕತ್ತಲು ಕವಿಯ ತೊಡಗಿತು. ಕಪ್ಪುಕತ್ತಲೆ ಭೇದಿಸಿಕೊಂಡು ಪಾದಗಟ್ಟೆ ಸೇರಲು ತೇರು ಬೆರಗಿನಿಂದ ಸಾಗಿತು. ಬೆಡಗಿನ ಪಾದಗಟ್ಟೆ ಮುಟ್ಟಲು ತಿಳಿಬೆಳಕಿನ ದಾರಿ ಹುಡುಕುತ್ತಾ ತೇರು ಸಾಗುತ್ತಲೇ ಇದೆ. ದೇವರ ತೇರಿಗೆ ಪಾದಗಟ್ಟೆ ಇನ್ನೂ ಸಿಕ್ಕಿಲ್ಲ.

- ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...