‘ನಾದಮಯ’ದ ಹಿಂದಿನ ಕಥೆ..

Date: 04-04-2021

Location: ಬೆಂಗಳೂರು


ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳ ನಿರ್ದೇಶನದ ಮೂಲಕ ಪರಿಚಿತರಿರುವ ಪಿ.ಶೇಷಾದ್ರಿ ಅವರು ‘ಅಕ್ಕರದ ತೆರೆ’ ಅಂಕಣದ ಮೂಲಕ ಚಿತ್ರರಂಗದ ಮಹತ್ವದ ಘಟನೆಗಳನ್ನು ಓದುಗರ ಮುಂದಿಡುತ್ತಿದ್ದಾರೆ. ಈ ಬಾರಿಯ ಅಂಕಣದಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಕಂಠದಲ್ಲಿ ಮೂಡಿಬಂದ ‘ನಾದಮಯ’ ಗೀತೆ ರೂಪುಗೊಂಡ ಬಗೆಯನ್ನು ವಿವರಿಸಿದ್ದಾರೆ.

ಸಿನಿಮಾದಲ್ಲಿ ಒಂದು ಹಾಡು ಸೃಷ್ಟಿಯಾಗುವ ಹಿನ್ನೆಲೆಯ ಕಥೆಯನ್ನು ಹೇಳುತ್ತಿದ್ದೆ. ಜೀವನಚೈತ್ರ ಚಿತ್ರದ ಪ್ರಮುಖ ತಿರುವಿನ ಸನ್ನಿವೇಶಕ್ಕೆ ಒಂದು ಹಾಡುಬೇಕಿತ್ತು. ಎಲ್ಲರೂ ಅದರ ಕುರಿತೇ ಚಿಂತಿಸುತ್ತಿದ್ದಾಗ, ಡಾ.ರಾಜ್‍ಕುಮಾರ್ ಅವರಿಗೆ ಒಂದು ಹೊಳಹು ಹೊಳೆಯಿತು. ಅವರು ನಿರ್ದೇಶಕರ ಬಳಿ ಬಂದು ಅದನ್ನು ಹೇಳತೊಡಗಿದರು:

‘ಜೀವನಚೈತ್ರ’ ಸಿನಿಮಾದ ಮುಖ್ಯಪಾತ್ರ ವಿಶ್ವನಾಥನಿಗೆ ಆರಂಭದಿಂದಲೂ ಸಂಗೀತದ ಜ್ಞಾನ ಇರುತ್ತದೆ. ಯಾತ್ರೆಗೆ ಹೋದ ಸಮಯದಲ್ಲಿ ಆದ ಅಪಘಾತದಿಂದಾಗಿ ನೆನಪಿನ ಶಕ್ತಿ ಕಳೆದುಕೊಂಡು ಹಿಮಾಲಯದಲ್ಲಿ ಅಲೆದು ಸುಸ್ತಾಗಿ ಒಂದೆಡೆ ಮಲಗಿದ್ದಾಗ ಅವನ ಮುಖದ ಮೇಲೆ ಹಿಮಬಿಂದುಗಳ ಸಿಂಚನವಾಗುತ್ತದೆ. ಆ ತಣ್ಣನೆಯ ಸ್ಪರ್ಶಕ್ಕೆ ಆತ ಎದ್ದು ಕೂರುತ್ತಾನೆ. ತಾನು ಇಷ್ಟು ಹೊತ್ತು ಪರಿವೆಯಿಲ್ಲದೆ ಮಲಗಿದ್ದು ಹಿಮದ ನಡುವೆ ಎಂಬುದು ಅವನ ಅರಿವಿಗೆ ಬರುತ್ತದೆ. ಆಗ ಅವನ ಪ್ರಜ್ಞೆಗೆ ಸುಂಯ್ ಎನ್ನುವ ಹಿಮಗಾಳಿಯ ಸದ್ದು, ನದಿಯ ಜುಳು ಜುಳು ನಾದ, ಹಕ್ಕಿಗಳ ಇಂಚರ ಸಂಗೀತದ ಸ್ವರದಂತೆ ಕೇಳಿಸಿ ಪುಳಕಿತನಾಗುತ್ತಾನೆ. ಅವನ ಸುಪ್ತಪ್ರಜ್ಞೆಯಲ್ಲಿ ಹುದುಗಿದ್ದ ಸಂಗೀತದ ಜ್ಞಾನ ಜಾಗೃತಿಗೆ ಬಂದು ನಿಧಾನವಾಗಿ ಸ್ವರ ಸಂಚಾರ ಆರಂಭಿಸುತ್ತಾನೆ. ಕೊನೆಗೆ ಅದೇ ಹಾಡಾಗಿ ಪರಿವರ್ತಿತವಾಗುವುದರೊಂದಿಗೆ ಅವನ ನೆನಪಿನ ಶಕ್ತಿ ಮರಳಿ ಬರಲು ನೆರವಾಗುತ್ತದೆ...

ಅಣ್ಣಾವ್ರು ಹೇಳಿದ ಈ ಸನ್ನಿವೇಶ ಎಲ್ಲರಿಗೂ ಇಷ್ಟವಾಯಿತು. ಅದಕ್ಕಾಗಿ ಒಂದು ವಿಶಿಷ್ಟ ರಾಗವೊಂದನ್ನು ಸಂಯೋಜಿಸಬೇಕು ಮತ್ತು ಅದಕ್ಕೆ ಉದಯಶಂಕರ್ ಅವರಿಂದ ಸಾಹಿತ್ಯ ಬರೆಸುವುದು ಎಂದು ತೀರ್ಮಾನವಾಯಿತು. ನಿರ್ದೇಶಕರ ಆಣತಿಯಂತೆ ಸಂಗೀತ ನಿರ್ದೇಶಕ ಉಪೇಂದ್ರಕುಮಾರ್ ಅವರು ರಾಗ ಸಂಯೋಜನೆಯಲ್ಲಿ ನಿರತರಾದರು. ಕೆಲವು ದಿನ ಕಳೆಯಿತು. ಅದೇಕೋ ಅವರು ಸಂಯೋಜಿಸಿದ ಯಾವ ರಾಗವೂ ಒಪ್ಪಿತವಾಗಲಿಲ್ಲ. ಇದನ್ನೆಲ್ಲ ಗಮನಿಸುತ್ತಿದ್ದ ಡಾ.ರಾಜ್‍ಕುಮಾರ್ ಅವರ ಸಹೋದರ ವರದಪ್ಪನವರು ಒಂದು ಕ್ಷಣ ಯೋಚಿಸಿ ಹೇಳಿದರು.

‘ನೀವೆಲ್ಲಾ ಒಪ್ಪುವುದಾದರೆ ನಾನೊಂದು ಹಾಡನ್ನು ಸೂಚಿಸುತ್ತೇನೆ.’

‘ಯಾವುದು ಹೇಳಿ?’

‘ಇದರ ಧ್ವನಿಮುದ್ರಣ ಆಗಿ ಸುಮಾರು ಇಪ್ಪತ್ತು ವರ್ಷಗಳೇ ಕಳೆದುಹೋಗಿವೆ. ಇದನ್ನು ‘ಅಮೃತವರ್ಷಿಣಿ’ ಅನ್ನುವ ಚಿತ್ರಕ್ಕೆ ಮದರಾಸಿನಲ್ಲಿ ರೆಕಾರ್ಡ್ ಮಾಡಲಾಗಿತ್ತು. ಆದರೆ ಇತರೆ ಕಾರಣಗಳಿಂದ ಆ ಚಿತ್ರ ಸೆಟ್ ಏರದೇ ಇದ್ದುದರಿಂದ ಅದಕ್ಕಾಗಿ ರೆಕಾರ್ಡ್ ಮಾಡಿದ್ದ ಹಾಡುಗಳೂ ಹಾಗೇ ಉಳಿದು ಹೋದವು. ಅದು ಮದರಾಸಿನಲ್ಲಿರುವ ಅರುಣಾಚಲಂ ಸ್ಟುಡಿಯೋ ಅಂತ ನನ್ನ ನೆನಪು. ನೀವುಗಳು ಹೇಗಾದರೂ ಮಾಡಿ ಆ ಹಾಡನ್ನು ಹುಡುಕಿ ಒಮ್ಮೆ ಕೇಳಿ ನೋಡಿ. ನಿಮಗೂ ಅದು ಸೂಕ್ತ ಅನ್ನಿಸಿದರೆ ನಂತರ ಮುಂದುವರಿಯಬಹುದು..’ ಎಂದರು. ತಮ್ಮನ ಮಾತಿಗೆ ಅಣ್ಣನೂ ಹೂಂಗುಟ್ಟಿದರು.

ಸರಿ, ಮುಂದಿನ ಪ್ರಯಾಣ ಮದರಾಸಿನತ್ತ. ಅಲ್ಲಿ ಸಾಲಿಗ್ರಾಮನಲ್ಲಿದ್ದ ಸ್ಟುಡಿಯೋಗೆ ಹೋಗಿ ಕೇಳಿದಾಗ ಅವರು ಈ ರೆಕಾರ್ಡಿಂಗ್ ವಿಚಾರವನ್ನೇ ಮರೆತುಬಿಟ್ಟಿದ್ದರು. ಯಾವ ದಿನಾಂಕದಲ್ಲಿ ಧ್ವನಿಮುದ್ರಣಗೊಂಡಿದ್ದು, ಯಾರದ್ದು ಎಂದೆಲ್ಲಾ ವಿವರ ಕೇಳಿದರು. ಇವರಿಗೆ ಅವ್ಯಾವೂ ನೆನಪಿನಲ್ಲಿರಲಿಲ್ಲ. ಸ್ಟುಡಿಯೋ ಕೂಡ ಆಧುನೀಕರಣಗೊಂಡಿದ್ದರಿಂದ ಹಳೆಯ ರೆಕಾರ್ಡ್‍ಗಳನ್ನೆಲ್ಲಾ ಯಾವುದೋ ಗೋಡೌನ್‍ಗೆ ತುಂಬಿ ಅದನ್ನು ಅವರು ಮರೆತೂ ಬಿಟ್ಟಿದ್ದರು.

ನೀವು ಹೇಳುತ್ತಿರುವ ಚಿತ್ರದ ಹಾಡುಗಳು ನಮಗೆ ನೆನಪಿಲ್ಲ. ರೆಕಾರ್ಡಿಂಗ್ ಇರುವ ಸ್ಪೂಲ್‍ಗಳನ್ನು(ಮ್ಯಾಗ್ನೆಟಿಕ್ ಧ್ವನಿಸುರಳಿ) ಒಂದು ಮೂಟೆಯಲ್ಲಿ ಕಟ್ಟಿಟ್ಟಿದ್ದೇವೆ. ಬೇಕಿದ್ದರೆ ಅಲ್ಲಿ ಹುಡುಕಿಕೊಳ್ಳಿ, ಅದು ಸಿಗುತ್ತದೆ ಎಂಬ ನಂಬಿಕೆ ನಮಗಿಲ್ಲ ಎಂದರಂತೆ. ಇವರು ಹಲವು ದಿನ ಅಲ್ಲಿ ಕುಳಿತು ಇದ್ದ-ಬದ್ದ ಎಲ್ಲಾ ಸ್ಪೂಲ್‍ಗಳನ್ನೆಲ್ಲಾ ಕೇಳಿ ಕೇಳಿ ಶೋಧಿಸಿ ನೋಡಿದ ಮೇಲೆ ಆ ಹಾಡು ಸಿಕ್ಕಿತಂತೆ! ಅದೂ ಶಿಥಿಲವಾದ ಸ್ಥಿತಿಯಲ್ಲಿ. ಹೇಗೋ ಅದನ್ನು ಕ್ಲೀನ್ ಮಾಡಿಸಿ ತಂದು ಹಾಡನ್ನು ಕೇಳಿಸಿದರಂತೆ.

ತೋಡಿ ರಾಗದಲ್ಲಿದ್ದ ಆ ಹಾಡು ಹೀಗಿತ್ತು:

‘ನಾದಮಯಾ„„„, ಈ ಲೋಕವೆಲ್ಲಾ ನಾದಮಯಾ….
ಕೊಳಲಿಂದ ಗೋವಿಂದ ಆನಂದ ತಂದಿರಲು,
ನದಿಯ ನೀರು, ಮುಗಿಲ ಸಾಲು, ಮರಳಿ ಸ್ವರದಿ ಬೆರೆತು
ಚಲನೆ ಮರೆತು ನಿಂತಿರಲು,

ನಾದಮಯಾ„„„, ಈ ಲೋಕವೆಲ್ಲಾ ನಾದಮಯಾ„„„
ಸ್ವರಗಳ ಮಾಧುರ್ಯ, ರಾಗದ ಸೌಂದರ್ಯ
ಮೃಗಗಳ ಕುಣಿಸೆ ಖಗಗಳ ತಣಿಸೆ

ಸಡಗರದಿಂದ, ಗಗನದ ಅಂಚಿಂದ

ಸುರರು ಬಂದು ಹರಿಯ ಕಂಡು
ಹರುಷದಿ, ಭುವಿಯೆ ಸ್ವರ್ಗ ಎನುತಿರಲು
ನಾದಮಯಾ...ಈ ಲೋಕವೆಲ್ಲಾ ನಾದಮಯಾ
ಸ ಮ ಗ ರಿ ದಮನಿಸ ನಾದಮಯಾ
ನಿ ದ ಮ ಗರಿಸ ದಾಮಗರಿಸ ಮಗರಿಸ ನಾದಮಯಾ...

ಹೀಗೆ ಆ ಹಾಡು ಸುಮಾರು ಒಂಬತ್ತು ನಿಮಿಷಗಳಷ್ಟು ದೀರ್ಘವಾಗಿತ್ತು. ಮತ್ತು ಕರ್ನಾಟಿಕ್ ಶೈಲಿಯಲ್ಲಿತ್ತು. ಇಷ್ಟು ದೀರ್ಘವಾದುದನ್ನು ಚಿತ್ರದಲ್ಲಿ ಅಳವಡಿಸಿದರೆ ಪ್ರೇಕ್ಷಕನಿಗೆ ರುಚಿಸುವುದೆ? ಈ ಪ್ರಶ್ನೆ ಎಲ್ಲರಿಗೂ ಇದ್ದೇ ಇತ್ತು. (ಅರುಣಾಚಲಂ ಸ್ಟುಡಿಯೋದಲ್ಲಿ ಇದರ ಸಂಗೀತ ಸಂಯೋಜನೆ ಮಾತ್ರ ಸಿದ್ಧವಾಗಿತ್ತಾ, ಸಾಹಿತ್ಯವನ್ನು ಬರೆಸಿದ್ದರೇ ಎಂಬ ಬಗ್ಗೆ ನನಗೆ ಖಚಿತವಾದ ಮಾಹಿತಿಯಿಲ್ಲ.) ಆದರೆ ಇದೇ ರಾಗ ಸಂಯೋಜನೆಯನ್ನು ಆಧಾರವಾಗಿ ಇಟ್ಟುಕೊಂಡು ಮತ್ತೆ ವಾದ್ಯ ನುಡಿಸುವವರನ್ನು ಕರೆಸಿ ಹಾಡನ್ನು ಇಲ್ಲಿಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಉಪೇಂದ್ರಕುಮಾರ್ ನಿರ್ದೇಶನದಲ್ಲಿ ಮರುಮುದ್ರಣ ಮಾಡಲಾಯಿತು. ಇದರ ಸಾಹಿತ್ಯದ ಕ್ರೆಡಿಟ್ ಉದಯಶಂಕರ್ ಅವರ ಹೆಸರಿನಲ್ಲಿದೆ. ಈ ಹಾಡು ಧ್ವನಿಮುದ್ರಣಗೊಂಡು, ಹಿಮಾಲಯದಲ್ಲಿ ಚಿತ್ರೀಕರಣಗೊಂಡು, ಸಂಕಲನ ಮುಗಿಸಿ ಬಂದಾಗ ನೋಡಿದ ನಾಲ್ಕು ಪ್ರೇಕ್ಷಕರಲ್ಲಿ ನಾನೂ ಒಬ್ಬನಾಗಿದ್ದೆ. ಇತರ ಮೂವರೆಂದರೆ ಡಾ.ರಾಜ್‍ಕುಮಾರ್, ನಾಗಾಭರಣ ಮತ್ತು ಹಂಸಲೇಖ. ಅಷ್ಟೂ ಜನ ಪ್ರಸಾದ್ ಲ್ಯಾಬ್‍ನಲ್ಲಿ ಈ ಹಾಡನ್ನು ನೋಡಿದೆವು. ಅದಕ್ಕೆ ಒಂದು ಕಾರಣವಿತ್ತು. 1992ನೇ ಇಸವಿಯಲ್ಲಿ ‘ಆಕಸ್ಮಿಕ’ದ ಚಿತ್ರದ ತಯಾರಿ ನಡೆದಿತ್ತು. ಹಂಸಲೇಖ ಸಂಗೀತ ಸಂಯೋಜನೆಯಲ್ಲಿ ಭಾಗಿಯಾಗಿದ್ದರು. ಆಗ ಒಮ್ಮೆ ಡಾ.ರಾಜ್ ಈ ಹಾಡಿನ ಪ್ರಸ್ತಾಪ ತೆಗೆದರು. ಒಮ್ಮೆ ಲ್ಯಾಬ್‍ಗೆ ಹೋಗಿ ಈ ಹಾಡನ್ನು ನೋಡಿಕೊಂಡು ಬರೋಣ ಎಂದು ಹೇಳಿ ನಮ್ಮನ್ನು ಕರೆದುಕೊಂಡು ಹೋದರು. ಹಾಡಿನ ಆರಂಭಕ್ಕೆ ಬಳಸಿದ್ದ ಶಬ್ದವಿನ್ಯಾಸ ಅವರಿಗೆ ಅಷ್ಟೊಂದು ತೃಪ್ತಿಕೊಟ್ಟಂತಿರಲಿಲ್ಲ. ನಂತರ ಅದನ್ನು ಸಿದ್ಧಮಾಡಿಕೊಡುವಂತೆ ಹಂಸಲೇಖರನ್ನು ಕೇಳಿದರು. ಅವರು ಅದನ್ನು ವಿನ್ಯಾಸ ಮಾಡಿಕೊಟ್ಟರು.

ಇಷ್ಟೆಲ್ಲಾ ಇತಿಹಾಸವಿರುವ ಈ ಗೀತೆ ಚಿತ್ರ ಬಿಡುಗಡೆಯಾದಾಗ ಎಲ್ಲರ ಮನಸೆಳೆದದ್ದು ನಿಮಗೆಲ್ಲಾ ಗೊತ್ತೇ ಇದೆ. ಇಷ್ಟೇ ಆಗಿದ್ದರೆ ನಾನು ಇದನ್ನು ಇಲ್ಲಿ ಪ್ರಸ್ತಾಪಿಸುತ್ತಿರಲಿಲ್ಲ. ಮರುವರ್ಷವೇ ಇನ್ನೂ ಒಂದು ಹಂತಕ್ಕೆ ಏರಿದ ಈ ಗೀತೆ ನಲವತ್ತನೇ ರಾಷ್ಟ್ರೀಯ ಚಲನಚಿತ್ರಪ್ರಶಸ್ತಿಯಲ್ಲಿ ಡಾ.ರಾಜ್‍ಕುಮಾರ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರ ಪ್ರಶಸ್ತಿ ಕೂಡ ದೊರಕಿಸಿಕೊಟ್ಟಿತು! ಸುಮಾರು ಐದು ದಶಕಗಳ ಕಾಲ ಡಾ.ರಾಜ್‍ಕುಮಾರ್ ಅವರು ಅನೇಕ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಎಲ್ಲರ ಮನಗೆದ್ದಿದ್ದರೂ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆತದ್ದು ಮಾತ್ರ ಗಾಯನಕ್ಕೆ!!

ಈ ಅಂಕಣದ ಹಿಂದಿನ ಬರೆಹಗಳು:

ಕಾದಂಬರಿ ಕತಾವಸ್ತುವಿನ ಹುಡುಕಾಟದಲ್ಲಿ ‘ರಾಜ್‌’

ರವೀಂದ್ರನಾಥ್ ಠ್ಯಾಗೂರ್ ನಿರ್ದೇಶಿಸಿದ ಸಿನಿಮಾ!

ಮಾಧ್ಯಮದಿಂದ ಮಾಧ್ಯಮಕ್ಕೆ - ತೆರೆ ಐದು

ವೆತೆಗಳ ಕಳೆಯುವ ಕತೆಗಾರ! - ತೆರೆ ಮೂರು

ವೆತೆಗಳ ಕಳೆಯುವ ಕತೆಗಾರ! - ತೆರೆ ಎರಡು

ಜಗತ್ತಿನಲ್ಲಿ ಮೊಟ್ಟ ಮೊದಲು ಕಥೆ ಹೇಗೆ ಹುಟ್ಟಿರಬಹುದು?

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...