ನುಡಿಯ ಅಸ್ಪಶ್ಟತೆಯೋ? ಅರಿವಿನ ಅಸ್ಪಶ್ಟತೆಯೋ?

Date: 21-07-2021

Location: ಬೆಂಗಳೂರು


‘ನಮ್ಮ ನಾಡಿನ ಸದ್ಯದ ರಾಜಕೀಯ ಬರೆಹಗಳಲ್ಲಿ ‘ಕನ್ನಡ ನುಡಿ’ ಬಳಕೆಯಾಗುತ್ತಿರುವ ಬಗೆ ಮತ್ತು ಅದರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಆರ್ವೆಲ್‍ನ ವಿಚಾರಗಳು ನೆರವಾಗುತ್ತವೆ’ ಎನ್ನುತ್ತಾರೆ ಲೇಖಕ ಡಾ.ರಂಗನಾಥ್ ಕಂಟನಕುಂಟೆ. ಅವರ ‘ಮಾತಿನ ಮರೆ’ ಅಂಕಣದಲ್ಲಿ ಪ್ರಸಿದ್ಧ ಬ್ರಿಟಿಶ್ ಲೇಖಕ ಜಾರ್ಜ್ ಆರ್ವೆಲ್ ಅವರ ಪೊಲಿಟಿಕ್ಸ್ ಅಂಡ್ ದಿ ಇಂಗ್ಲಿಶ್ ಲ್ಯಾಂಗ್ವೆಜ್ ಲೇಖನದೊಂದಿಗೆ ಪ್ರಸ್ತುತ ಕರ್ನಾಟಕದ ರಾಜಕೀಯ ಸ್ಥಿತಿ-ಗತಿಗಳನ್ನು ವಿಶ್ಲೇಷಿಸಿದ್ದಾರೆ.

ಪ್ರಸಿದ್ಧ ಬ್ರಿಟಿಶ್ ಲೇಖಕ ಜಾರ್ಜ್ ಆರ್ವೆಲ್ 1946ರಲ್ಲಿ ‘ಪೊಲಿಟಿಕ್ಸ್ ಅಂಡ್ ದಿ ಇಂಗ್ಲಿಶ್ ಲ್ಯಾಂಗ್ವೆಜ್’ ಎಂಬ ಲೇಖನವನ್ನು ಬರೆದಿದ್ದಾನೆ. ಇದು 1946ರ ಏಪ್ರಿಲ್‍ನಲ್ಲಿ ‘ಹೊರೈಸನ್’ ಎಂಬ ಇಂಗ್ಲಿಶ್ ಪತ್ರಿಕೆಯಲ್ಲಿ ಮೊದಲು ಪ್ರಕಟವಾಯಿತು. ಆ ನಂತರ ಈ ಲೇಖನ ಅನೇಕ ಕಡೆ ಪ್ರಕಟವಾಗಿ ಸಾಕಶ್ಟು ಚರ್ಚೆಗೆ ಒಳಗಾಗಿದೆ. ಅಂದರೆ ಇಂದಿಗೆ ಎಪ್ಪತ್ತೈದು ವರುಶಗಳ ಹಿಂದೆ ಜಾರ್ಜ್ ಆರ್ವೆಲ್ ಬರೆದ ಈ ಲೇಖನ ಇಂದಿಗೂ ಪ್ರಸ್ತುತವೆನ್ನಿಸುತ್ತದೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ರಚನೆಯಾಗುತ್ತಿದ್ದ ರಾಜಕೀಯ ಬರೆಹಗಳು ಮತ್ತು ಭಾಶಣಗಳಲ್ಲಿ ಬಳಕೆಯಾಗುತ್ತಿದ್ದ ನೀರಸವಾದ ಇಂಗ್ಲಿಶ್ ಭಾಶೆಯ ಬಗೆಗೆ ಚರ್ಚಿಸಿದ್ದಾನೆ. ಈ ಕಾಲದಲ್ಲಿ ‘ಉಗ್ರರಾಶ್ಟ್ರೀಯವಾದ’ ಮತ್ತು ‘ಫ್ಯಾಸಿಸಂ’ ಎಂಬ ರಾಜಕೀಯ ಸಿದ್ಧಾಂತಗಳು ಯುರೋಪಿನಲ್ಲಿ ಅಧಿಕಾರದ ಗದ್ದುಗೆಗೇರಿದ್ದ ಕಾಲ. ಹಿಟ್ಲರ್-ಮುಸಲೋನಿಗಳಂತಹ ‘ದಿ ಗ್ರೇಟ್ ಡಿಕ್ಟೇಟರ್’ಗಳು ಆಳುತ್ತಿದ್ದ ಕಾಲ. ಇಂತಹ ಕಾಲದ ಇಂಗ್ಲಿಶ್ ಭಾಶೆ ಸವಕಲು ನುಡಿಗಟ್ಟುಗಳಿಂದ ಹೇಗೆ ಬಳಲುತ್ತಿತ್ತು ಎಂಬುದನ್ನು ಚರ್ಚಿಸಿದ್ದಾನೆ. ಈ ಬರೆಹದಲ್ಲಿ ಆರ್ವೆಲ್ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಂದಿನ ಭಾರತದ ಮತ್ತು ಕರ್ನಾಟಕದ ರಾಜಕೀಯ ಸಂದರ್ಭಕ್ಕೂ ಸರಿಯಾಗಿ ಹೊಂದುತ್ತವೆ. ನಮ್ಮ ನಾಡಿನ ಸದ್ಯದ ರಾಜಕೀಯ ಬರೆಹಗಳಲ್ಲಿ ‘ಕನ್ನಡ ನುಡಿ’ ಬಳಕೆಯಾಗುತ್ತಿರುವ ಬಗೆ ಮತ್ತು ಅದರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಆರ್ವೆಲ್‍ನ ವಿಚಾರಗಳು ನೆರವಾಗುತ್ತವೆ. ಹಾಗಾಗಿ ಈ ಲೇಖನದ ವಿಚಾರಗಳನ್ನು ಇಲ್ಲಿ ಚರ್ಚಿಸುವ ಮೂಲಕ ಕನ್ನಡದ ಬರೆಹಗಳ ಸಮಸ್ಯೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸಲಾಗುವುದು.

ಮೇಲೆ ಹೇಳಿದಂತೆ ಆರ್ವೆಲ್ ತನ್ನ ಲೇಖನದಲ್ಲಿ ರಾಜಕೀಯ ಬರೆಹಗಳು ಮತ್ತು ಮಾತುಗಳಲ್ಲಿ ಇಂಗ್ಲಿಶ್ ಭಾಶೆ ಅರ್ಥಹೀನವಾಗಿ ಬಳಕೆಯಾಗಿರುವುದನ್ನು ಚರ್ಚಿಸಿದ್ದಾನೆ. ಆತ ನೀಡಿರುವ ಉದಾಹರಣೆಗಳನ್ನು ಗಮನಿಸಿದರೆ ಅಲ್ಲಿ ಕೆಲವು ಸಮಸ್ಯೆಗಳು ಮೇಲ್ನೋಟಕ್ಕೆ ಗೋಚರಿಸುತ್ತವೆ. ಮುಖ್ಯವಾಗಿ ಗೋಜಲು ಗೋಜಲಾದ ಉದ್ದನೆಯ ವಾಕ್ಯಗಳು. ಆ ವಾಕ್ಯಗಳಲ್ಲಿ ಹಲವು ನುಡಿಗಟ್ಟುಗಳು, ಪರಿಕಲ್ಪನೆಗಳು ಮತ್ತು ಪರಿಭಾಶೆಗಳನ್ನು ಒಂದೇ ಉಸುರಿನಲ್ಲಿ ತುರುಕಿರುವುದು; ನೀರಸವಾದ ಮತ್ತು ಸವಕಲಾದ ನುಡಿಗಟ್ಟುಗಳನ್ನು ಬಳಸಿರುವುದನ್ನು ಕಾಣಬಹುದು. ಹಾಗೂ ಆ ಬರೆಹದಲ್ಲಿ ನಿಖರತೆ, ಸ್ಪಶ್ಟತೆಗಳಿಲ್ಲದೆ ಗೊಂದಲಗಳಿಂದ ಕೂಡಿರುವುದನ್ನು ಗಮನಿಸಬಹುದು. ಆರ್ವೆಲ್ ಇಂತಹ ಗೋಜಲು ಗೋಜಲಾದ ಬರೆಹಗಳನ್ನು ಬಹಳ ಜಾಣತನದಿಂದ ರಚಿಸಲಾಗಿರುತ್ತದೆ ಎನ್ನುತ್ತಾನೆ. ಅಂದರೆ ಆತನ ಪ್ರಕಾರ ಗೋಜಲು ಗೋಜಲಾದ ಬರೆಹಗಳು ಅನುದ್ದೇಶಿತವಾಗಿ ಬರೆದ ಬರೆಹಗಳಲ್ಲ. ಅವನ್ನು ಬಹಳ ಉದ್ದೇಶಪೂರಕವಾಗಿ ಬರೆಯಲಾಗಿರುತ್ತದೆ ಎನ್ನುತ್ತಾನೆ. ಇದನ್ನು ಪೂರ್ತಿ ಒಪ್ಪಲಾಗದಿದ್ದರೂ ಇದರಲ್ಲಿ ನಿಜವಿಲ್ಲದಿಲ್ಲ. ಕೆಲವು ಬರೆಹಗಳ ಬರೆಹಗಾರರಿಗೆ ತಾವು ಮಂಡಿಸುವ ವಿಚಾರದ ಬಗೆಗೆ ಸ್ಪಶ್ಟ ಅರಿವು ಇಲ್ಲದ ಕಾರಣಕ್ಕಾಗಿ ಗೊಂದಲ ಅಸ್ಪಶ್ಟತೆಗಳು ಗೋಚರಿಸುತ್ತವೆ. ಆದರೆ ಆ ಬರೆಹಗಳ ಸಮಸ್ಯೆಗಳನ್ನು ಒಪ್ಪಿಕೊಳ್ಳದೆ ಅವುಗಳ ಬಗೆಗೆ ತುಂಬಾ ಹೆಮ್ಮೆಪಡುತ್ತಾರೆ. ಇದಿರಲಿ.

ಹೀಗೆ ಒಂದು ವಾಕ್ಯದಲ್ಲಿ ಹಲವು ನುಡಿಗಟ್ಟುಗಳನ್ನು, ರೂಪಕಗಳನ್ನು ಬಳಸುವುದರಿಂದ ಉಂಟಾಗುವ ಸಮಸ್ಯೆಯೇನು? ಎಂಬುದು ಇಲ್ಲಿನ ಮುಖ್ಯ ಪ್ರಶ್ನೆ. ಅವುಗಳನ್ನು ಅನಗತ್ಯವಾಗಿ ಬರೆಹಗಳಲ್ಲಿ ಬಳಸುತ್ತಾ ಹೋದಂತೆ ಅರ್ಥಕಳೆದುಕೊಳ್ಳುತ್ತವೆ. ಅವುಗಳನ್ನು ಬೇಕಾಬಿಟ್ಟಿಯಾಗಿ ಬಳಸುವುದರಿಂದ ತೀವ್ರತೆಯನ್ನು ಕಳೆದುಕೊಂಡು ನೀರಸಗೊಳ್ಳುತ್ತವೆ. ಅಲ್ಲದೆ ಬರೆಹಗಳಲ್ಲಿ ಗೊಂದಲವನ್ನು, ಅಸ್ಪಶ್ಟತೆಯನ್ನೂ ಸೃಶ್ಟಿಸುತ್ತವೆ. ಇದು ವಿಚಾರವನ್ನು ಖಚಿತವಾಗಿ ತಿಳಿದುಕೊಳ್ಳಲು ತೊಡಕನ್ನುಂಟು ಮಾಡುತ್ತದೆ. ಕೊನೆಗೆ ಬರೆಹದ ಉದ್ದೇಶವೇ ಸತ್ತುಹೋಗುತ್ತದೆ. ಹಲವು ನುಡಿಗಟ್ಟುಗಳನ್ನು ಏಕಾಏಕಿ ಬರೆಹಗಳಲ್ಲಿ ತಂದು ಸುರಿದು ಗೊಂದಲ ಮೂಡಿಸುವುದು ವಿಶಯದ ಬಗೆಗೆ ಆಸಕ್ತಿಯೇ ಇಲ್ಲದಿರುವುದರ ಸಂಕೇತ ಎಂದು ಆರ್ವೆಲ್ ಅಭಿಪ್ರಾಯಪಡುತ್ತಾನೆ. ಅಂದರೆ ಬರೆಹದಲ್ಲಿ ಮೂಡುವ ಗೊಂದಲ ಭಾಶೆಯ ಸಮಸ್ಯೆಯಲ್ಲ. ಅದು ಲೇಖಕರ ಬೇಜವಾಬ್ದಾರಿತನದಿಂದ, ವಿಶಯ ಗ್ರಹಿಕೆಯ ದೋಶದಿಂದ ಹುಟ್ಟುವ ಸಮಸ್ಯೆ ಎನ್ನುವುದು ಸ್ಪಶ್ಟವಾಗುತ್ತದೆ. ತಮ್ಮ ಬರೆಹದ ಮೂಲಕ ಮಂಡಿಸಲು ಹೊರಟಿರುವ ವಿಚಾರದ ಬಗೆಗೆ ಗಂಭೀರವಾದ ಆಸಕ್ತಿಯಿಲ್ಲದೆ, ವಿಚಾರವನ್ನು ಸ್ಪಶ್ಟಪಡಿಸಿಕೊಳ್ಳದೇ ಲೇಖಕರು ಬರೆಯಲು ತೊಡಗುವುದು ಅಪ್ರಮಾಣಿಕತೆಯ ದ್ಯೋತಕ ಎನ್ನುತ್ತಾನೆ.

ಅಲ್ಲದೆ ಕೆಲವು ರಾಜಕೀಯ ಬರೆಹಗಳಲ್ಲಿ ತೋರಿಕೆಗಾಗಿ ಪರಿಭಾಶೆಗಳನ್ನು ಬಳಸಲಾಗುತ್ತಿರುತ್ತದೆ. ವಿಚಾರವನ್ನು ಪರಿಣಾಮಕಾರಿಯಾಗಿ ಮಂಡಿಸುವ ಉದ್ದೇಶಕ್ಕೆ ಬದಲಾಗಿ ಅವುಗಳನ್ನು ತಮ್ಮ ಬೌದ್ಧಿಕ ಪ್ರದರ್ಶನಕ್ಕಾಗಿ ಬಳಸುವುದನ್ನು ಗುರುತಿಸುತ್ತಾನೆ. ಹೀಗೆ ತೋರಿಕೆಯ ಉದ್ದೇಶದಿಂದಲೇ ಅನುಚಿತವಾಗಿ ನುಡಿಗಟ್ಟುಗಳನ್ನು ಬಳಸುವುದರಿಂದ ಬರೆಹಗಳು ಅಸ್ಪಶ್ಟಗೊಳ್ಳುತ್ತವೆ. ಅದರಲ್ಲಿಯೂ ರಾಜಕೀಯ ಸಿದ್ಧಾಂತಗಳ ಜಾರ್ಗನ್‍ಗಳನ್ನು ಬೌದ್ಧಿಕತೆಯ ಪ್ರದರ್ಶನಕ್ಕಾಗಿ ಬಳಸಲಾಗುತ್ತಿರುತ್ತದೆ. ಇಂತಹ ಬೌದ್ಧಿಕತೆಯ ವ್ಯಸನಕ್ಕಾಗಿ ಬಳಸುವ ಪರಿಭಾಶೆಗಳು ಬರೆಹದ ಸಹಜತೆಯನ್ನು ತಾಜಾತನವನ್ನು ನಾಶಮಾಡಿಬಿಡುತ್ತದೆ. ಅಲ್ಲದೆ ಇಂತಹ ಜಾರ್ಗನ್‍ಗಳನ್ನು ಅರ್ಥ ತಿಳಿದು ಬಳಸುವುದಕ್ಕಿಂತ ಹೆಚ್ಚಾಗಿ ಎಲ್ಲಿಯೋ ಕಿವಿಗೆ ಬಿದ್ದ ಪರಿಭಾಶೆಗಳನ್ನು ಬಳಸುವುದೇ ಹೆಚ್ಚಾಗಿರುತ್ತದೆ. ಅಂತಹ ಕಡೆಗಳಲ್ಲಿ ಬಳಕೆಯಾಗುವ ಜಾರ್ಗನ್ ಭಾಶೆ ಪರಿಣಾಮದಲ್ಲಿ ವಿಚಾರದ ಬಗೆಗೆ ದ್ವೇಶ ಮತ್ತು ಅಸಹನೆಯನ್ನುಂಟು ಮಾಡುತ್ತದೆ.

ಸಾಮಾನ್ಯವಾಗಿ ಮಾರ್ಕ್ಸ್ ವಾದದ ಬಗೆಗೆ ಅಸಹನೆಯಿರುವ ವಲಯಗಳಲ್ಲಿ ಮಾರ್ಕ್ಸ್ ವಾದಿ ಜಾರ್ಗನ್ ಅನ್ನು ಬಳಸಿದರೆ ಆ ಸಿದ್ಧಾಂತದ ಬಗೆಗೆ ಇನ್ನಶ್ಟು ಅಸಹನೆ ಉಂಟಾಗುತ್ತದೆ. ನಮ್ಮ ಸಂದರ್ಭದಲ್ಲಿ ವರ್ಗ ವಿಶ್ಲೇಶಣೆಯ ಪರಿಭಾಶೆ ಬಳಸಿ ಮಾತನಾಡಿದರೆ ಅದು ಜನಮನ್ನಣೆಯನ್ನು ಪಡೆಯುವುದಿಲ್ಲ. ಅದನ್ನು ಬಹಳ ಸುಲಭವಾಗಿ ನಿರಾಕರಿಸಲಾಗುತ್ತದೆ. ಹಾಗೆಯೇ ರಚನಾವಾದ ಮತ್ತು ನಿರಚನಾವಾದಿ ಸಿದ್ದಾಂತಗಳನ್ನು ವಿಪರೀತದ ಪರಿಭಾಶೆಗಳ ಮೂಲಕ ವಿವರಿಸಿದರೆ ಅದು ಯಾರಿಗೂ ಅರ್ಥವಾಗುವುದಿಲ್ಲ. ಉದಾಹರಣೆಗೆ ಗೋಪಿಚಂದ್ ನಾರಂಗ್ ಅವರ ‘ಸಂರಚನಾವಾದ, ರಚನೋತ್ತರವಾದ ಹಾಗೂ ಪ್ರಾಚ್ಯ ಕಾವ್ಯಮೀಮಾಂಸೆ’ ಎಂಬ ಕೃತಿಯನ್ನು ಡಾ. ತಿಪ್ಪೇಸ್ವಾಮಿಯವರು ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಆದರೆ ಕನ್ನಡದ ಅನುವಾದದಲ್ಲಿ ವಿಪರೀತವಾದ ಸಂಸ್ಕೃತ ಭಾಶೆಯ ಪರಿಕಲ್ಪನೆಗಳನ್ನು ಬಳಸಿ ಅನುವಾದಿಸಲಾಗಿದೆ. ಕೃತಿಯ ಹಲವು ಪುಟಗಳನ್ನು ಓದಿದರೂ ಅದರ ತಿರುಳೇನು ಎಂಬುದೇ ಅರ್ಥವಾಗುವುದಿಲ್ಲ. ಹಾಗೆ ಯಾವುದೇ ಬರೆಹ ಅರ್ಥವಾಗದೇ ಇದ್ದರೆ ಅನುವಾದದ ಉದ್ದೇಶವೇ ಸತ್ತುಹೋಗುತ್ತದೆ. ಕನ್ನಡದ ಹೆಸರಾಂತ ವಿಮರ್ಶಕ ಡಾ. ಸಿ. ಎನ್. ರಾಮಚಂದ್ರನ್ ಅವರ ಹಲವು ಬರೆಹಗಳು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ಅವರ ವಿಮರ್ಶೆಯ ಬರೆಹಗಳಲ್ಲಿ ಇಂಗ್ಲಿಶ್ ಪರಿಕಲ್ಪನೆಗಳು ಸಂಸ್ಕೃತಕ್ಕೆ ಅನುವಾದವಾಗಿ ಕನ್ನಡದ ಬರೆಹಗಳಲ್ಲಿ ಬಳಕೆಯಾಗುತ್ತವೆ. ಹಾಗಾಗಿ ಅವರ ಬಹುತೇಕ ಬರೆಹಗಳು ಓದುಗರನ್ನು ಆಕರ್ಶಿಸುವುದೇ ಇಲ್ಲ. ಅವರ ಬರೆಹದಲ್ಲಿ ಲಾಲಿತ್ಯವಾಗಲಿ ಸುಲಭ ಗ್ರಹಿಕೆಯ ಸಾಧ್ಯತೆಯಾಗಲಿ ಎದ್ದು ಕಾಣಿಸುವುದಿಲ್ಲ. ಓದು ಬಹಳ ಬೇಗ ಆಯಾಸಗೊಳಿಸುತ್ತದೆ.

ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ರಾಜಕಾರಣಿಗಳು ಬಳಸುವ ಭಾಶೆ ಬಹುತೇಕ ಸಂದರ್ಭದಲ್ಲಿ ಗೊಂದಲದಿಂದ ಇಲ್ಲವೇ ಅಸ್ಪಶ್ಟತೆಯಿಂದ ಕೂಡಿರುತ್ತದೆ. ಇದು ಅವರಿಗೆ ಭಾಶೆ ತಿಳಿದಿಲ್ಲದ ಕಾರಣಕ್ಕೆ ಹಾಗೆ ಬಳಸುವುದಲ್ಲ. ಅವರು ಉದ್ದೇಶಪೂರಕವಾಗಿಯೇ ಯಾವುದೇ ವಿಚಾರವನ್ನು ಅಸ್ಪಶ್ಟಗೊಳಿಸಿ ತಮ್ಮ ವಿಚಾರ ವ್ಯಕ್ತಮಾಡುವುದನ್ನು ಗಮನಿಸಬಹುದು. ಯಾಕೆಂದರೆ ತಮ್ಮ ಮಾತುಗಳಿಂದ ಇಕ್ಕಟ್ಟುಗಳಿಗೆ, ವಿವಾದಗಳಿಗೆ ಸಿಕ್ಕಿಕೊಳ್ಳವುದರಿಂದ ತಪ್ಪಿಸಿಕೊಳ್ಳಲು, ನಿಜ ಸಂಗತಿಯನ್ನು ಮರೆಮಾಚಲು ಇಂತಹ ಗೊಂದಲದ ಭಾಶೆಯನ್ನು ಬಳಸುತ್ತಾರೆ. ಇದನ್ನು ಆರ್ವೆಲ್ ಕೂಡ ತನ್ನ ಬರೆಹದಲ್ಲಿ ಸ್ಪಶ್ಟಪಡಿಸಿದ್ದಾನೆ. ಹಾಗಾಗಿಯೇ ರಾಜಕಾರಣಿಗಳು ಸಾರ್ವಜನಿಕ ಸಭೆಗಳಲ್ಲಿ ಮತ್ತು ಮಾಧ್ಯಮದ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುವಾಗ ಕೆಲಕಾಲ ಪದಗಳಿಗೆ ತಡಕಾಡುತ್ತಾರೆ. ನಂತರ ಸುಧಾರಿಸಿಕೊಂಡು ನಿಜವನ್ನು ತಿರುಚುತ್ತ ಮಾತನಾಡುತ್ತಾರೆ. ಹಾಗಾಗಿಯೇ ಅವರು ಏನು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಅವರು ಬೇರೆ ಸಂದರ್ಭಗಳಲ್ಲಿ ಅಶ್ಟೇನು ಗೊಂದಲದ ಭಾಶೆಯನ್ನು ಬಳಸುವುದಿಲ್ಲ. ಬಹಳ ಚನ್ನಾಗಿಯೇ ಮಾತನಾಡುತ್ತಾರೆ. ಆದರೆ ರಾಜಕೀಯದ ನಿಜ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪ ಮಾಡುವ ಹೊತ್ತಿನಲ್ಲಿ ಮಾತ್ರ ಗೊಂದಲ ನುಡಿಯನ್ನು ಬಳಸುತ್ತಾರೆ. ಆರ್ವೆಲ್ ಹೇಳುವಂತೆ ಯಾವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳಲು ಇಂತಹ ಗೊಂದಲ ಭಾಶೆಯ ಊರುಗೋಲನ್ನು ಪಡೆದುಕೊಳ್ಳುತ್ತಾರೆ ಎಂಬುದು ಇಲ್ಲಿನ ನಿಜಸಂಗತಿ. ಕಳೆದ ಒಂದು ವರ್ಶದ ಹಿಂದೆ ಕೆಲವು ಶಾಸಕರು ಒಂದು ಪಕ್ಶವನ್ನು ಬಿಟ್ಟು ಮತ್ತೊಂದು ಪಕ್ಶವನ್ನು ಸೇರಿಕೊಳ್ಳುವ ಹೊತ್ತಿನಲ್ಲಿ ಅವರು ಕೊಟ್ಟ ಸಮರ್ಥನೆ ಮಾತುಗಳನ್ನು ನೆನಪಿಸಿಕೊಂಡರೆ ಇದು ಅರ್ಥವಾಗುತ್ತದೆ. ಅಂದರೆ ಸಮಯಕ್ಕೆ ತಕ್ಕಹಾಗೆ ವರ್ತಿಸಲು ಅವರು ಉದ್ದೇಶ ಪೂರಕವಾಗಿಯೇ ಅಸ್ಪಶ್ಟ ಭಾಶೆಯನ್ನು ಬಳಸುತ್ತಿರುತ್ತಾರೆ. ಜನರನ್ನು ಹಾದಿ ತಪ್ಪಿಸುತ್ತಿರುತ್ತಾರೆ. ವಿಚಾರಗಳ ಬಗೆಗೆ ಸ್ಪಶ್ಟ ತಿಳುವಳಿಕೆಯಿಲ್ಲದೆ ಗೊಂದಲದ ಭಾಶೆ ಬಳಸುವ ಸಂದರ್ಭಗಳು ಕೆಲವೊಮ್ಮೆ ಬಂದರೂ ಸಾಮಾನ್ಯವಾಗಿ ಉದ್ದೇಶಪೂರಕವಾಗಿ ಸತ್ಯವನ್ನು ಬಚ್ಚಿಡಲು ಗೊಂದಲದ ಭಾಶೆ ಬಳಸುತ್ತಾರೆ. ಇದನ್ನು ಆರ್ವೆಲ್‍ನ ವಿಚಾರಗಳೂ ಕೂಡ ಖಚಿತಪಡಿಸುತ್ತವೆ.

ಹಾಗೆಯೇ ಮುಖ್ಯವಾಹಿನಿಯ ರಾಜಕೀಯ ವ್ಯವಸ್ಥೆಯನ್ನು ಸಮರ್ಥಿಸುವ ರಾಜಕೀಯ ಬರೆಹಗಳೂ ಕೂಡ ಇದೆ ಸಮಸ್ಯೆಯನ್ನು ಹೊಂದಿರುತ್ತವೆ. ಉದಾಹರಣೆಗೆ, ಹೊಸ ‘ರಾಶ್ಟ್ರೀಯ ಶಿಕ್ಶಣ ನೀತಿ-2020’ರಲ್ಲಿ ಬಳಕೆಯಾಗಿರುವ ಭಾಶೆ ಇಂತಹ ಅಸ್ಪಶ್ಟತೆ ಮತ್ತು ಅಸಂಖ್ಯ ಗೊಂದಲಗಳಿಂದ ಹಾಗೂ ನೀರಸ ನುಡಿಗಟ್ಟುಗಳಿಂದ ತುಂಬಿಹೋಗಿದೆ. ಭಾಶೆಯ ಬಗೆಗೆ ಕೊಂಚ ಅರಿವಿದ್ದವರಿಗೆ ಈ ಬರೆಹದಲ್ಲಿರುವ ಸಮಸ್ಯೆ ಎದ್ದು ಕಾಣಿಸುತ್ತದೆ. ರಾಜಕೀಯ ಪಕ್ಶಗಳ ಚುನಾವಣೆಯ ಪ್ರಣಾಳಿಕೆಗಳು ಕೂಡ ಇಂತಹದೇ ಲಕ್ಶಣವನ್ನು ಹೊಂದಿರುತ್ತವೆ. ಹಾಗೆಯೇ ರಾಜಕೀಯ ಪಕ್ಶಗಳ ಸಮರ್ಥನೆಗಿಳಿವ ಬರೆಹಗಳಲ್ಲಿಯೂ ಇಂತಹದೇ ಸಮಸ್ಯೆ ಕಾಣಿಸುತ್ತದೆ. ಮತ್ತೆ ನಮ್ಮ ಜನಪ್ರಿಯ ಸುದ್ದಿ ಮಾಧ್ಯಮಗಳ ಭಾಶೆ ಇಂತಹದೇ ಗೊಂದಲ ಮತ್ತು ಅಸ್ಪಶ್ಟತೆಗಳಿಂದ ಕೂಡಿರುತ್ತದೆ. ಇದು ಈಗಾಗಲೇ ಜನರ ಗಮನಕ್ಕೂ ಬಂದು ಮಾಧ್ಯಮಗಳನ್ನು ಉಪೇಕ್ಶೇ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಮುಖ್ಯವಾಹಿನಿ ರಾಜಕಾರಣವನ್ನು ವಿರೋಧಿಸುವ ಬಂಡುಕೋರ ರಾಜಕೀಯ ಬರೆಹಗಳಲ್ಲಿ ಮಾತ್ರ ಭಾಶೆ ಸ್ಪಶ್ಟವಾಗಿ ಬಳಕೆಯಾಗಿರುವುದನ್ನು ಆರ್ವೆಲ್ ಗುರುತಿಸಿದ್ದಾನೆ. ಹಾಗೆ ಗುರುತಿಸುತ್ತಲೇ ‘ಸರಳ, ನೇರ ಮತ್ತು ಸ್ಪಶ್ಟ ನುಡಿಯ ದೊಡ್ಡ ಶತ್ರು ಅಪ್ರಾಮಾಣಿಕತೆ’ ಎಂದು ಆರ್ವೆಲ್ ಗುರುತಿಸುತ್ತಾನೆ. ಅಂದರೆ ಎಲ್ಲಿ ಪ್ರಾಮಾಣಿಕತೆಯಿರುತ್ತದೆಯೋ ಅಲ್ಲಿ ನುಡಿ ಸ್ಪಶ್ಟ ಮತ್ತು ನಿಖರವಾಗಿರುತ್ತದೆ. ಅದಿಲ್ಲದೆ ಅಂತರಂಗ ನುಡಿಗೂ ಬಹಿರಂಗದ ಮಾತಿಗೂ ನಡುವೆ ಅಂತರವಿದ್ದಾಗ ನುಡಿ ಅಪ್ರಾಮಾಣಿಕವಾಗುತ್ತದೆ. ವಚನಕಾರರೂ ಇದೇ ನಿಲುವನ್ನು ಹೊಂದಿದ್ದರು. ಹಾಗಾಗಿಯೇ ವಚನಕಾರರು ಭಾವಶುದ್ಧತೆ ಮತ್ತು ಪ್ರಾಮಾಣಿಕತೆಯ ಬಗೆಗೆ ನಿರಂತರವಾಗಿ ಚಿಂತಿಸಿರುವುದನ್ನು ಗಮನಿಸಬಹುದು. ಅವರ ಪ್ರಜ್ಞಾಪೂರ್ವಕವಾದ ಪ್ರಯತ್ನದ ಕಾರಣಕ್ಕಾಗಿಯೇ ವಚನಗಳು ಇಂದಿಗೂ ಪ್ರಸ್ತುತವಾಗಿ ಉಳಿದಿವೆ.

ಆರ್ವೆಲ್ ರಾಜಕೀಯ ಎನ್ನುವುದು ‘ದೊಡ್ಡ ಸುಳ್ಳುಗಳ ಕಂತೆ, ದ್ವೇಶ ಮತ್ತು ಸಮೂಹ ಸನ್ನಿಯನ್ನು ಸೃಶ್ಟಿಸುವುದೇ ಅದರ ಉದ್ದೇಶವೆಂದು ಭಾವಿಸುತ್ತಾನೆ. ಅದರಲ್ಲಿಯೂ ಸರ್ವಾಧಿಕಾರ ಪ್ರಭುತ್ವಗಳು ಆಡಳಿತ ನಡೆಸುವಾಗ ದ್ವೇಶ ಮತ್ತು ಸಮೂಹ ಸನ್ನಿಯನ್ನು ಬೆಳೆಸುವುದು ರಾಜಕೀಯ ನಾಯಕರ ನಿಜವಾದ ಉದ್ದೇಶವಾಗಿರುತ್ತದೆ. ಹಾಗಾಗಿ ರಾಜಕೀಯ ಮೇಲಾಟದಲ್ಲಿ ಸಾಮಾಜಿಕ ಪರಿಸರ ಕಲುಶಿತವಾದಂತೆ ಆ ಸಮಾಜದ ಭಾಶೆಯೂ ಕೂಡ ಕಲುಶಿತಗೊಳ್ಳುತ್ತದೆ. ಅದರ ಪರಿಣಾಮವಾಗಿ ನುಡಿ ನರಳಬೇಕಾಗುತ್ತದೆ. ಅದರಲ್ಲಿಯೂ ಸರ್ವಾಧಿಕಾರಿ ನಾಯಕ ಕೇಂದ್ರಿತ ಆಳುವ ವ್ಯವಸ್ಥೆಯಿರುವ ದೇಶಗಳಲ್ಲಿ ಭಾಶೆ ಮತ್ತಶ್ಟು ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಹಿಟ್ಲರನ ಕಾಲದ ಜರ್ಮನ್, ಮುಸಲೋನಿಯ ಕಾಲದ ಇಟಾಲಿಯನ್, ಸ್ಟಾಲಿನ್ ಕಾಲದ ರಶ್ಯನ್ ಭಾಶೆ ಇಂತಹ ಸಮಸ್ಯೆಗಳನ್ನು ಎದುರಿಸದ ಬಗೆಗೆ ಆರ್ವೆಲ್ ಗಮನ ಗಮನ ಸೆಳೆಯುತ್ತಾನೆ. ಯಾವುದೇ ರಾಜಕೀಯ ಸಿದ್ದಾಂತಗಳು ಭಾಶೆಯನ್ನು ಭ್ರಶ್ಟಗೊಳಿಸಿದರೆ ಭಾಶೆ ಆಲೋಚನೆಯ ಕ್ರಮಗಳನ್ನು ಭ್ರಶ್ಟಗೊಳಿಸುತ್ತದೆ. ಇದು ಒಂದು ದೇಶದ ಮಾನಸಿಕ ಸ್ಥಿತಿಯನ್ನೇ ವಿಕಾರಗೊಳಿಸಿಬಿಡುತ್ತದೆ. ಸದ್ಯದ ಭಾರತದ ರಾಜಕೀಯ ಸಂದರ್ಭವನ್ನು ಗಮನಿಸಿದರೆ ಆರ್ವೆಲ್ ವಿಚಾರಕ್ಕೆ ಸೂಕ್ತ ಸಮರ್ಥನೆ ದೊರೆಯುತ್ತದೆ. ಹಿಂದೂ ಉಗ್ರರಾಶ್ಟ್ರೀಯವಾದ ಮುಂಚೂಣಿಗೆ ಬರುವ ಹಾದಿಯಲ್ಲಿ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಸನಾತನ ಪುರೋಹಿತಶಾಹಿಯು ಇಂದು ಇಡೀ ದೇಶದ ಆಲೋಚನೆ ಕ್ರಮವನ್ನೇ ಹದಗೆಡಿಸಿದೆ. ದೇಶದ ಬಹುಸಂಖ್ಯಾತ ಜನರ ಸಾಮಾನ್ಯ ವಿವೇಕವನ್ನೇ ನಾಶ ಮಾಡಿಬಿಟ್ಟಿದೆ. ಇದು ದೇಶದ ಜನರ ಮೆದುಳಿಗೆ ಅನೆಸ್ತೇಶಿಯಾ ನೀಡಿ ಅದನ್ನು ಕೆಲಸ ಮಾಡದಂತೆ ಮಾಡಲಾಗಿದೆ. ಅದು ಒಳಿತು ಮತ್ತು ಕೆಡುಕುಗಳ ನಡುವಿನ ವ್ಯತ್ಯಾಸವನ್ನೇ ಗುರುತಿಸದಂತೆ ಮಾಡಿದೆ. ಇದಕ್ಕೆ ಅಕ್ಶರಸ್ಥ ವರ್ಗ ಹೆಚ್ಚು ಬಲಿಯಾಗಿರುವುದು ದೊಡ್ಡ ದುರಂತ. ಅಂದರೆ ರಾಜಕೀಯ ಪ್ರೇರಿತ ಸ್ವಾರ್ಥದ ಸಿದ್ದಾಂತಗಳು ಒಂದು ದೇಶದ ಆಲೋಚನೆಯ ಕ್ರಮವನ್ನು ಹೇಗೆ ನಾಶ ಮಾಡಬಹುದು ಎಂಬುದಕ್ಕೆ ಇಂದಿನ ಭಾರತವೇ ತಾಜಾ ಎತ್ತುಗೆ.

ಆಶಾದಾಯಕ ಸಂಗತಿಯೆಂದರೆ ಭಾಶೆಯ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ ಎನ್ನುತ್ತಾನೆ ಆರ್ವೆಲ್. ಆತನ ಪ್ರಕಾರ ಒಂದು ದಿನದಲ್ಲಿ ಕ್ಶಣದಲ್ಲಿ ಇದನ್ನು ಬದಲಿಸಲು ಸಾಧ್ಯವಿಲ್ಲ. ರಾಜಕೀಯ ನಾಯಕರನ್ನು ತಿದ್ದಲು ಏಕಾಏಕಿ ಸಾಧ್ಯವಿಲ್ಲ. ಆದರೆ ಬರೆಹಗಾರರು ವೈಯಕ್ತಿಕವಾಗಿ ಕೊಂಚ ಎಚ್ಚರಿಕೆಯಿಂದ ಪ್ರಾಮಾಣಿಕವಾಗಿ ವರ್ತಿಸಿದರೆ ಭಾಶೆಯಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಭಾವಿಸುತ್ತಾನೆ. ಆ ಮೂಲಕ ನುಡಿ ಬಳಕೆಯ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಬಹುದು ಎನ್ನುತ್ತಾನೆ. ಇದು ನಿಜ ಕೂಡ. ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಹಾಗಾಗಿ ಇಂತಹ ಸಮಸ್ಯೆಯಿಂದ ಬಿಡುಗಡೆ ಪಡೆಯಲು ಲೇಖಕರು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿರುವ ಅಗತ್ಯವನ್ನು ಆರ್ವೆಲ್ ಒತ್ತಿ ಹೇಳಿದ್ದಾನೆ. ಅವನ ಪ್ರಕಾರ ಬರೆಹಗಾರರು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಹೀಗಿವೆ.

1. ನಾನೇನು ಹೇಳಲು ಬಯಸುತ್ತಿದ್ದೇನೆ?
2. ಯಾವ ನುಡಿಗಟ್ಟುಗಳು ನನ್ನ ವಿಚಾರಗಳನ್ನು ಅಭಿವ್ಯಕ್ತಿಪಡಿಸುವ ಶಕ್ತಿ ಹೊಂದಿವೆ?
3. ನನ್ನ ವಿಚಾರಗಳನ್ನು ಯಾವ ಪದಗಳು ಪರಿಣಾಮಕಾರಿಯಾಗಿ ಸಂವಹನ ಮಾಡುತ್ತವೆ?
4. ನಾನು ಬಳಸುತ್ತಿರುವ ನುಡಿಗಟ್ಟುಗಳು ತಾಜಾ ಆಗಿವೆಯೇ? ಇಲ್ಲವೇ ಹಳಸಲಾಗಿವೆಯೇ?
5. ನಾನು ಹೇಳಬೇಕಾಗಿರುವ ವಿಚಾರಗಳನ್ನು ಇನ್ನಶ್ಟು ಚುಟುಕಾಗಿ ಹೇಳಲು ಸಾಧ್ಯವೇ?
6. ತಾನು ಹೇಳಿರುವುದರಲ್ಲಿ ಯಾವುದಾದರೂ ವಿಚಾರಗಳನ್ನು ಕೈಬಿಡಲು ಸಾಧ್ಯವೇ?

ಎಂದು ಕೇಳಿಕೊಳ್ಳಬೇಕಾದ ಅಗತ್ಯವನ್ನು ಆರ್ವೆಲ್ ಹೇಳಿದ್ದಾನೆ. ಈ ಪ್ರಶ್ನೆಗಳನ್ನು ಕೇಳಿಕೊಳ್ಳದೇ ಮನಸ್ಸಿಗೆ ಬಂದದ್ದನ್ನೆಲ್ಲಾ ಬರೆಹದಲ್ಲಿ ತುಂಬಿದರೆ ಅದು ಸಹಜವಾಗಿಯೇ ಗೊಂದಲಗಳಿಂದ ಕೂಡಿರುತ್ತದೆ. ಹಾಗಾಗಿ ಬರೆಹಕ್ಕೆ ಮೊದಲು ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ತಮ್ಮ ವಿಚಾರಗಳನ್ನು ಖಚಿತಪಡಿಸಿಕೊಂಡು ಅದಕ್ಕೆ ತಕ್ಕನಾದ ಭಾಶೆಯನ್ನು ಸಿದ್ಧಗೊಳಿಸಿಕೊಂಡು ನಂತರ ಬರೆಹ ಮಾಡಬೇಕು ಎಂಬುದು ಆರ್ವೆಲ್‍ನ ಅಭಿಪ್ರಾಯ. ಆತನ ಈ ಪ್ರಶ್ನೆಗಳ ಜೊತೆಗೆ ತಾನು ಯಾರ ಪರವಾಗಿ ನಿಲುವು ತಾಳುತ್ತೇನೆ? ತಾನು ಯಾರಿಗಾಗಿ ಬರೆಯುತ್ತೇನೆ? ಎಂಬ ಪ್ರಶ್ನೆಗಳನ್ನೂ ಕೇಳಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಬಂಡವಾಳಶಾಹಿ ಮತ್ತು ಸರ್ವಾಧಿಕಾರಿ ವ್ಯವಸ್ಥೆಯಿಂದ ಸಮಾಜ ನರಳುತ್ತಿರುವಾಗ ನಾವು ಯಾರ ಪರ ಎನ್ನುವುದೂ ಕೂಡ ಸ್ಪಶ್ಟಪಡಿಸಿಕೊಳ್ಳಬೇಕಾದ ಸಂಗತಿ. ಹಾಗೆಯೇ ನಮ್ಮ ಓದುಗರು ಯಾರು ಎಂಬುದನ್ನು ಸ್ಪಶ್ಟಪಡಿಸಿಕೊಂಡು ಬರೆಯಬೇಕಾಗುತ್ತದೆ. ಕನ್ನಡದ ಸಂದರ್ಭದಲ್ಲಿ ಜಿ. ರಾಜಶೇಖರ್ ಅವರ ಬರೆಹಗಳು ಹಾಗೆ ಖಚಿತಪಡಿಸಿಕೊಂಡು ಬರೆಹ ಮಾಡಿರುವುದನ್ನು ಸಮರ್ಥಿಸುತ್ತವೆ. ಅವರ ಬಹುತೇಕ ರಾಜಕೀಯ ಬರೆಹಗಳು ಅಂತಹ ನಿಖರತೆಯನ್ನು ಸ್ಪಶ್ಟತೆಯನ್ನೂ ಹೊಂದಿವೆ. ಅವರು ಅನಗತ್ಯವಾಗಿ ತಮ್ಮ ಬರೆಹಗಳಲ್ಲಿ ಮಾತುಗಳಲ್ಲಿ ಏನನ್ನೂ ತುರುಕುವುದಿಲ್ಲ. ಬಹಳ ಎಚ್ಚರಿಕೆಯಿಂದ ಬರೆಹ ಮತ್ತು ಭಾಶಣಗಳನ್ನು ಮಾಡುತ್ತಾರೆ. ಅವರ ಬರೆಹಗಳಲ್ಲಿ ಆರ್ವೆಲ್‍ನ ಎಚ್ಚರ ಎದ್ದು ಕಾಣಿಸುತ್ತದೆ. ಇದಕ್ಕೆ ಅವರ ‘ಬಹುವಚನ ಭಾರತ’ ಕೃತಿಯ ಬರೆಹಗಳೇ ತಕ್ಕ ಎತ್ತುಗೆ. ಹಾಗೆಯೇ ಲಂಕೇಶರ ಟೀಕೆ-ಟಿಪ್ಪಣಿಗಳು ಖಚಿತತೆಯಿಂದ ಕೂಡಿದ್ದ ರಾಜಕೀಯ ಬರೆಹಗಳು. ‘ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂಬ ಹೇಳಿಕೆಯೇ ಇದಕ್ಕೆ ತಕ್ಕ ಎತ್ತುಗೆ. ಭಾಶೆಯನ್ನು ಗೊಂದಲವಿಲ್ಲದೆ ಖಚಿತವಾಗಿ ಬಳಸುವ ಬಗೆಗೆ ಲಂಕೇಶರಿಗೆ ಸ್ಪಶ್ಟ ಅರಿವಿತ್ತು.

ಇತ್ತೀಚಿನ ದಶಕಗಳಲ್ಲಿ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಅನೇಕ ರಾಜಕೀಯ ಸಾಂಸ್ಕೃತಿಕ ಬರೆಹಗಳು ಅಸ್ಪಶ್ಟತೆಯಿಂದ ಕೂಡಿರುತ್ತವೆ. ಉದಾಹರಣೆಗೆ ಮನುಚಕ್ರವರ್ತಿಯವರ ಬರೆಹಗಳು ಈ ಮಾದರಿಯವು. ಅವರ ಬಹುತೇಕ ಬರೆಹಗಳು ಅಸ್ಪಶ್ಟತೆ ಮತ್ತು ವಿಪರೀತ ಪರಿಭಾಶೆಗಳಿಂದ ಕೂಡಿರುತ್ತವೆ. ಅವರ ಬರೆಹಗಳನ್ನು ಓದುವಾಗ ಅವರು ಏನನ್ನು ಹೇಳುತ್ತಿದ್ದಾರೆ? ಎನ್ನುವುದೇ ಗೊತ್ತಾಗುವುದಿಲ್ಲ. ಡಿ. ಆರ್. ನಾಗರಾಜರ ‘ಸಾಹಿತ್ಯ ಕಥನ’ದ ಕೆಲವು ಲೇಖನಗಳು ಇದೇ ಸಮಸ್ಯೆಯನ್ನು ಹೊಂದಿವೆ. ಅವು ಅಪರಿಚಿತ ಪರಿಭಾಶೆಗಳಿಂದ ತುಂಬಿದ್ದು ‘ಬುದ್ಧಿವಂತರಿಗೆ ಮಾತ್ರ’ ಎನ್ನುವಂತಾಗಿದೆ. ಅತಿಯಾದ ಬೌದ್ಧಿಕ ಕಸರತ್ತಿನಿಂದ ಮಾಡಿರುವ ಯಾವುದೇ ಬರೆಹಗಳು ಈ ಸಮಸ್ಯೆಯನ್ನು ಎದುರಿಸುತ್ತವೆ. ಹಾಗೆಯೇ ಈಚಿನ ದಶಕಗಳ ಕನ್ನಡದ ಸಂಶೋಧನಾ ಬರೆಹಗಳೂ ಇದೇ ಸಮಸ್ಯೆಗಳಿಂದ ಬಳಲುತ್ತಿವೆ. ಆ ಬರೆಹಗಳಲ್ಲಿ ಔಚಿತ್ಯವೇ ಇಲ್ಲದೆ ಪರಿಕಲ್ಪನೆಗಳನ್ನು ತುರುಕಿರಲಾಗಿರುತ್ತದೆ. ಅವುಗಳ ಅರ್ಥ ವ್ಯಾಪ್ತಿಯನ್ನು ಸ್ಪಶ್ಟಪಡಿಸಿಕೊಳ್ಳದೆ ಬಳಸಲಾಗಿರುತ್ತದೆ. ಇದರಿಂದ ಓದುಗರಿಗೆ ಅನ್ಯಾಯ ಮಾಡುವುದು ಒಂದಾದರೆ ಅದಕ್ಕಿಂತ ಮೊದಲು ಅಂತಹ ಬರೆಹಗಳನ್ನು ಬರೆದ ಲೇಖಕರು ತಮಗೆ ತಾವೇ ವಂಚನೆ ಮಾಡಿಕೊಂಡಿರುತ್ತಾರೆ. ಅಂತಿಮವಾಗಿ ಅವರು ವಿಚಾರದ ವಿರೋಧಿಗಳಾಗಿಯೂ ಕಾಣಿಸುತ್ತಾರೆ. ಯಾವುದೇ ವಿಚಾರವನ್ನು ಪರಿಣಾಮಕಾರಿಯಾಗಿ ಸಂವಹನಿಸಲು ರೂಪಕಗಳು ಮತ್ತು ನುಡಿಗಟ್ಟಗಳನ್ನು ಬಳಸಲಾಗುತ್ತದೆ. ಆದರೆ ಅದನ್ನು ಅರ್ಥವೇ ಮಾಡಿಕೊಳ್ಳದೆ ರೂಪಕಗಳನ್ನು ಬಳಸಿದರೆ ಅವು ಯಾವುದೇ ವಿಚಾರವನ್ನು ಓದುಗರಿಗೆ ದಾಟಿಸುವುದಿಲ್ಲ. ಅವುಗಳನ್ನು ವಾಕ್ಯಗಳಲ್ಲಿ ಅಸಂಬದ್ಧವಾಗಿ ಜೋಡಿಸಿದರೆ ಆ ರೂಪಕಗಳು ಸಾಯುತ್ತವೆ. ಅಂತಹ ಬರೆಹ ಲೊಳಲೊಟ್ಟೆಯಾಗುತ್ತದೆ. ಇದರಿಂದ ಅಂತಿಮವಾಗಿ ಭಾಶೆ ಸತ್ವ ಕಳೆದುಕೊಳ್ಳುತ್ತದೆ.

ಆದರೆ ಇಂದಿನ ಕನ್ನಡದ ರಾಜಕೀಯ ಬರೆಹಗಳು, ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಅಧ್ಯಯನದ ಬರೆಹಗಳು ಇಂತಹದೇ ಸಮಸ್ಯೆಯಿಂದ ಬಳಲುತ್ತಿವೆ. ಕನ್ನಡದ ಬರೆಹಗಳಲ್ಲಿ ನೀರಸ ಪರಿಕಲ್ಪನೆಗಳನ್ನು ಅನುಚಿತವಾಗಿ ಬಳಸಿ ಬರೆಹಗಳನ್ನು ಗೊಂದಲಗೊಳಿಸಿರುವುದರಿಂದ ಅವು ಓದುಗರ ಗಮನವನ್ನು ಸೆಳೆಯುವಲ್ಲಿ ಸೋಲುತ್ತಿವೆ. ಅಲ್ಲದೆ ಕನ್ನಡದ ಬಹುತೇಕ ಬರೆಹಗಳಲ್ಲಿ ಸಂಸ್ಕøತದ ಪದಗಳು, ಪರಿಭಾಶೆ ಮತ್ತು ಪರಿಕಲ್ಪನೆಗಳನ್ನು ತುರುಕಲಾಗಿರುತ್ತದೆ. ಇದರಿಂದ ಕನ್ನಡ ನುಡಿಯ ಸಹಜ ಲಯ ನಾಶವಾಗುತ್ತದೆ. ಇದರಿಂದ ಕನ್ನಡದ ಬರೆಹ ವಿಪರೀತ ಪೆಡಸಾಗಿ ಸುಲಭವಾಗಿ ತಿಳಿಯುವ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ. ಕೊನೆಗೆ ಕನ್ನಡದ ಓದು ಕೇವಲ ಲಿಪಿಯ ಇಲ್ಲವೇ ಅಕ್ಶರದ ಓದು ಎನ್ನುವಂತಾಗಿ ಬಿಟ್ಟಿದೆ. ಇಂದಿನ ಸಾಹಿತ್ಯ ಸಂಸ್ಕøತಿಯ ಬರೆಹಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು ವಿದ್ಯಾರ್ಥಿಗಳಿಗೆ ಅದನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಅವರು ಕೇವಲ ವಾಕ್ಯಗಳನ್ನು ಮಾತ್ರ ಓದಿ ಅದರ ತಿರುಳುವ ಗ್ರಹಿಸಲು ಸಾಧ್ಯವಾಗದೇ ಪರದಾಡುತ್ತ ಬಹಳ ಬೇಗ ದಣಿವುಗೊಂಡು ಓದಿನಿಂದಲೇ ದೂರವಾಗುತ್ತಿದ್ದಾರೆ. ಅಂದರೆ ಕನ್ನಡದ ಎಶ್ಟೋ ಬರೆಹಗಳೇ ಓದುಗರನ್ನು ಕನ್ನಡದಿಂದ ದೂರ ಮಾಡುತ್ತಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪೂರ್ಣಚಂದ್ರ ತೇಜಸ್ವಿಯವರು ಯಾವ ಪರಿಭಾಶೆಯನ್ನೂ ಬಳಸದೇ ರಾಜಕೀಯ ವಿಚಾರಗಳನ್ನು ಮಂಡಿಸುತ್ತಿದ್ದರು. ಅವರ ರಾಜಕೀಯ ಬರೆಹಗಳು ಇಂದಿಗೂ ಹೊಸತನದಿಂದ ಕೂಡಿವೆ. ಪ್ರೊ. ನಂಜುಂಡಸ್ವಾಮಿಯವರು ಯಾವ ಪರಿಭಾಶೆಯನ್ನೂ ಬಳಸದೇ ರೈತರಿಗೆ ಜಾಗತೀಕರಣದ ಅಪಾಯಗಳ ಬಗೆಗೆ ತಿಳುವಳಿಕೆ ನೀಡುತ್ತಿದ್ದರು. ಆದರೆ ಇಂದು ಅದು ಸಾಧ್ಯವಾಗದೇ ಇರುವುದರಿಂದ ಚಳವಳಿಗಳು ದುರ್ಬಲವಾಗಿವೆ. ಇದರಿಂದ ಬಿಡುಗಡೆ ಪಡೆಯಬೇಕಾದರೆ ಭಾಶೆಯನ್ನು ಪ್ರಾಮಾಣಿಕವಾಗಿ ಬಳಸಬೇಕು. ವಿಚಾರವನ್ನು ಸ್ಪಶ್ಟಗೊಳಿಸಿಕೊಂಡು ನಿಜನುಡಿಯಬೇಕು. ಅನಗತ್ಯವಾಗಿ ಯಾವುದೇ ಪರಿಭಾಶೆ-ಪರಿಕಲ್ಪನೆ ಇಲ್ಲವೇ ಜಾರ್ಗನ್ ಗಳನ್ನು ಬಳಸಬಾರದು. ಆಗ ಭಾಶೆ ತನ್ನಿಂದ ತಾನೇ ‘ಮುತ್ತಿನಹಾರ’ದಂತಾಗುತ್ತದೆ. ಸ್ಪಟಿಕದ ಶಲಾಕೆಯಂತಾಗುತ್ತದೆ. ಮಾತು ‘ಜ್ಯೋತಿರ್ಲಿಂಗ’ವಾಗುತ್ತದೆ. ಜನರು ಅಂತಹ ನುಡಿಗೆ ತಲೆದೂಗುವಂತಾಗುತ್ತದೆ. ಸದ್ಯ ಅಂತಹ ಸಾಧ್ಯತೆಗಳ ಬಗೆಗೆ ಎಲ್ಲರೂ ಇಂದು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ. ಜಾರ್ಜ್ ಆರ್ವೆಲ್‍ನ ಬರೆಹ ಹೀಗೆ ಯೋಚಿಸುವಂತೆ ಮಾಡುತ್ತದೆ ಎಂಬುದೇ ಅದರ ಹೆಚ್ಚುಗಾರಿಕೆ.

ಈ ಅಂಕಣದ ಹಿಂದಿನ ಬರೆಹಗಳು:
ಸಂಕಟದ ಕಾಲದಲ್ಲಿ ಲೊಳಲೊಟ್ಟೆಯಾದ ಭಾಶೆ!
‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳುನುಡಿ’ಯಾದಾಗ…!
ಭಾಶಾಹೀನರ ಸಂಗ ಅಭಿಮಾನ ಭಂಗ
ಮುಸುಕು ನುಡಿ ಮತ್ತು ಆಹಾರದಲ್ಲಿ ಹಾಲಾಹಲ

ಸುಳ್ಳಿನ ಕೈಗಾರಿಕೆಗಳಲ್ಲಿ ಅರಿವಿನ ಹತ್ಯೆ
ಟ್ರಂಪಣ್ಣನ ಅಮೆರಿಕದಲ್ಲಿ ಸುಳ್ಳುಗಳ ಸುನಾಮಿ!
ಕೇಳ್ವಿಯೆಂಬ ಕೂರಲಗು ಮತ್ತು ಪ್ರಭುತ್ವ
ಹೊಸ ಶಿಕ್ಶಣ ನೀತಿ ಮತ್ತು ತಾಯ್ನುಡಿ ಕಲಿಕೆ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...