ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ

Date: 15-05-2022

Location: ಬೆಂಗಳೂರು


'ಮುತ್ಯಾ ನನಗೆ ಅವತ್ತು ಹೇಳಿದ ಮಾತುಗಳು ತಾತನ ದುರಾಸೆಗೆ ಹಿಡಿದ ಕನ್ನಡಿಯೇ ಆಗಿತ್ತು. ಮೇರುವನ್ನು ಕರಗಿಸಿ ಚಿನ್ನವಾಗಿಸಿ ಅದಕ್ಕೆ ದುಪ್ಪಟ್ಟು ಹಣವನ್ನು ತರುವ ಉದ್ದೇಶದಿಂದ ತಾತ ಮನೆ ಬಿಟ್ಟಿದ್ದ. ಆದರೆ ಹೋಗಿದ್ದು ಮಾತ್ರ ಹೋಗಬಾರದ ಕಡೆಗೆ' ಹೀಗೆ ನೆನಪಿನ ಸುರುಳಿಗಳನ್ನು ಬಿಡಿಸಿ ಪೊಣಿಸುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ ಅವರ ಬಾಲ್ಯದೊಂದಿಗೆ ಬೆರೆತ ಮುತ್ಯಾನ ಕಟುವಾಸ್ತವದ ಜಗತ್ತಿನ ಕುರಿತು ಬರೆದಿದ್ದಾರೆ.

ತಾತನ ಮುಂದಿನ ದಿನಗಳು ಮುತ್ಯಾ ಹೇಳಿದ ಹಾಗೆ ತೀರಾ ದುರ್ಭರವಾದವು. ಮುತ್ಯಾಗೆ ಮುಂದೇನಾಗುತ್ತೆ ಅಂತ ರಾತ್ರಿಯ ನಿದ್ದೆಯಲ್ಲಿ ಗೋಚರವಾಗಿತ್ತು ಅನ್ನಿಸುತ್ತೆ. ಅವಳ ಹುರಿದ ಕಾಳು ಮೊಳಕೆಒಡೆಯುವುದಿಲ್ಲ ಎಂಬ ಕನವರಿಕೆ ನನ್ನ ಕಾಡುತ್ತಲೇ ಇತ್ತು. ನಾನು ಮುತ್ಯಾಗೆ ಕೇಳಿದೆ ಅದ್ಯಾಕೆ ಹಾಗೆ ರಾತ್ರಿಯಿಡೀ ಬಡಬಡಿಸಿದೆ ಎಂದು. ಮುತ್ಯ ನನ್ನ ನೆತ್ತಿಯಮೇಲೆ ಕೈ ಆಡಿಸಿ ಅದು ಕನವರಿಕೆ ಅಲ್ಲ ಮಗೂ ಕಾಣಿಸಿದ್ದು ಎಂದಿದ್ದಳು. ಕಾಣಿಸಿತೇ? ತಾತನನು ಅವನಿಲ್ಲದೆಯೂ ನೀನು ನೋಡಿದೆಯಾ ಎಂದು ಅಚ್ಚರಿಯಲ್ಲಿ ಕೇಳಿದೆ. ಹೌದು ನಿನ್ನ ತಾತ ಏನು ಮಾಡುತ್ತಿದ್ದಾನೆ ಎಂದು ಅವನ ತಾಯಿಯಾದ ನನಗಲ್ಲದೆ ಬೇರೆ ಯಾರಿಗೆ ಗೊತ್ತಾಗಬೇಕು ಎಂದಳು ಮುತ್ಯಾ. ಅವಳ ಮಾತು ಒಗಟಿನ ಹಾಗಿತ್ತು.

ಮುತ್ಯಾ ನನಗೆ ಅವತ್ತು ಹೇಳಿದ ಮಾತುಗಳು ತಾತನ ದುರಾಸೆಗೆ ಹಿಡಿದ ಕನ್ನಡಿಯೇ ಆಗಿತ್ತು. ಮೇರುವನ್ನು ಕರಗಿಸಿ ಚಿನ್ನವಾಗಿಸಿ ಅದಕ್ಕೆ ದುಪ್ಪಟ್ಟು ಹಣವನ್ನು ತರುವ ಉದ್ದೇಶದಿಂದ ತಾತ ಮನೆ ಬಿಟ್ಟಿದ್ದ. ಆದರೆ ಹೋಗಿದ್ದು ಮಾತ್ರ ಹೋಗಬಾರದ ಕಡೆಗೆ. ತಾತಾ ಅಲ್ಲಿಗೆ ಹೋಗುತ್ತಿದ್ದಂತೆ ಕೆಟ್ಟಜನರು ತಾತನಿಂದ ಚಿನ್ನವನ್ನು ಕಸಿದುಕೊಂಡು ಹಣವನ್ನು ಕೊಡದೆ ಹೊಡೆದು ಅಟ್ಟಿಬಿಟ್ಟಿದರಂತೆ. ಇಷ್ಟನ್ನೂ ತಾನು ಕಂಡೆ ಎಂದಿದ್ದಳು ಮುತ್ಯಾ. ನನಗೆ ಯಾರಾದರೂ ತಾತನನ್ನು ಹೊಡೆದುಬಿಟ್ಟಿದ್ದರೆ ಎನ್ನುವ ಭಯ ಕಾಡಿತು. ಅಮ್ಮಮ್ಮನಂತೂ ಅವಳ ಮಾತಿಗೆ ಅಳಲಿಕ್ಕೆ ಶುರುಮಾಡಿದಳು. ಮುತ್ಯಾ ನೀನು ಹೇಳುವುದು ನಿನ್ನ ಕಲ್ಪನೆ ಮಾತ್ರ. ತಾತನಿಗೆ ಯಾರೂ ಹೊಡೆದಿರುವುದಿಲ್ಲ ಎಂದು ಅಮ್ಮಮ್ಮನಿಗೆ ಸಮಾಧಾನ ಆಗುವ ಹಾಗೆ ಮಾತಾಡಿದೆ. ಮುತ್ಯಾ ಯಾವ ಮುಲಾಜೂ ಇಲ್ಲದೆ ನಿನ್ನ ತಾಳಿ ಗಟ್ಟಿಇದೆ ಸಂಜೆಯ ಹೊತ್ತಿಗೆ ಬರುತ್ತಾನೆ. ಹಿತ್ತಲಿನಲ್ಲಿ ಅಮೃತ ಬಳ್ಳಿ ಎಲೆಗಳನು ತೆಗೆದಿಟ್ಟಿರು ಎಂದಳು ಕಠೋರವಾಗಿ. ನಿಮಗೆಕರುಣೆ ಇಲ್ಲವೇ ಇಂಥಾ ಮಾತುಗಳನ್ನು ಆಡುತ್ತಿದ್ದೀರಲ್ಲಾ ಎಂದು ಮುತ್ಯಾನನ್ನು ದೂಷಿಸಿದಳು. ಮುತ್ಯಾ ಭಾವೋದ್ವಿಗ್ನತೆ ಇಲ್ಲದೆ, `ಇವತ್ತಿನ ದಿನ ಇಷ್ಟಕ್ಕೆ ಆಗಿದೆ ಮುಂದಿನ ದಿನಗಳು ಮತ್ತಷ್ಟು ಕಠಿಣ, ನಾನು ಹೇಳಿದ ಈ ಮಾತುಗಳು ಸುಳ್ಳಾಗಲಿ ಎಂದು ದೇವರಲ್ಲಿ ಪ್ರಾರ್ಥಿಸು. ಸುಳ್ಳಾದರೆ ನನಗೂ ಸಂತಸವೇ’ ಎಂದಿದ್ದಳು. ಅಮ್ಮಮ್ಮ ಮುತ್ಯಾಳನ್ನು ದೂಷಿಸುತ್ತಾ ಎದ್ದು ಹೊರಟಳು. ರಾಮುಡು ಹೇಳುವುದನ್ನು ನಿಧಾನವಾಗಿ ಹೇಳಬೇಕಿತ್ತು ಎಂದಿದ್ದ. ಸತ್ಯ ಕಠೋರವೇ ಅದನ್ನು ಹಾಗೇ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಿಗೆ ಮನಸ್ಸು ಹದವಾಗುವುದಿಲ್ಲ ಎಂದಿದ್ದಳು.

ಗರುಡವೊಂದು ಆಕಾಶದಲ್ಲಿ ಹಾರುತ್ತಿತ್ತು. ನನ್ನ ಯೋಚನೆಗಳ ನಡುವೆಯೂ ಆ ಗರುಡ ಆಕಾಶದಲ್ಲಿ ಹೇಗೆ ಹಾರುತ್ತಿದೆ ಎನ್ನುವ ಯೋಚನೆ ಬಂತು. ಅದು ಮೇಲೆ ಹಾರುತ್ತಿದ್ದರೆ ಅದರ ಕೆಳಗೆ ನಾನು ಅದರ ನೆರಳಲ್ಲೆ ಓಡುತ್ತಿದ್ದೆ. ಸಂಜೆ ಅಸ್ತಮಾನದ ಸಮಯ ಸೂರ್ಯ ಪ್ರಖರತೆಯನ್ನು ಕಳಕೊಳ್ಳುತ್ತಿದ್ದ. ಹಾಗೆಂದು ತಣ್ಣಗಾಗಿರಲಿಲ್ಲ. ನಾನು ಹರಿ ಹರಿ ಎನ್ನುತ್ತಾ ನನ್ನ ಕೈಗಳನ್ನು ಎತ್ತಿ ಉಗುರುಗಳನ್ನು ಉಜ್ಜುತ್ತಿದ್ದೆ. ಉಗುರಿನ ಮೇಲೆ ಬಿಳಿಯದಾದ ಮಚ್ಚೆ ಮೂಡಿದರೆ ಅದೃಷ್ಟವಂತರೆಂದು ಆ ವಯಸ್ಸಿನಲ್ಲಿ ನನಗೆ ಯಾರೋ ಹೇಳಿ ನಂಬಿಕೆ ಬಂದುಬಿಟ್ಟಿತ್ತು. ಎರಡೂ ಕೈಗಳ ಉಗುರುಗಳನ್ನು ಒಂದಕ್ಕೊಂದು ಉಜ್ಜುತ್ತಾ ನಾನು ಅದೃಷ್ಟ ಪರೀಕ್ಷೆಗಿಳಿದಿದ್ದರೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಗರುಡ ನನ್ನ ಕಣ್ಣೆದುರೇ ಸರ್ರೆಂದು ನೆಲಕ್ಕಿಳಿದು ಓಡಾಡುತ್ತಿದ್ದ ಕೋಳಿಪಿಳ್ಳೆಯನ್ನು ಲಬಕ್ಕೆಂದು ಎತ್ತೊಯ್ದಿತ್ತು. ತನ್ನ ರೆಕ್ಕೆಯ ಕೆಳಗೆ ಭದ್ರವಾಗಿರುತ್ತಿದ್ದ ಮರಿಯನ್ನು ಎತ್ತೊಯ್ದಿದ್ದಕ್ಕೆ ತನ್ನದೆ ಭಾಷೆಯಲ್ಲಿ ಅರಚಿಕೊಂಡು ಗರುಡಕ್ಕೆ ಕೋಳಿ ಕೂಗತೊಡಗಿತ್ತು. ಅದೃಷ್ಟವನ್ನು ಹುಡುಕುತ್ತಾ ಹೊರಟ ನನಗೆ ನನ್ನ ಕಣ್ಣೆದುರೆ ಪುಟ್ಟ ಜೀವವೊಂದು ಆಕಾಶಕ್ಕೆ ಜಿಗಿದು ಬಿಟ್ಟಿತ್ತು. ನನಗೆ ಅಳು ಬಂದಿತ್ತು. ಆ ವಯಸ್ಸಿನಲ್ಲಿ ಅಪಾರವಾದ ಕರುಣೆ ಇತ್ತು. ಈಗಿನ ಹಾಗೆ ಮೊಂಡು ಬಿದ್ದಿರಲಿಲ್ಲ. (ಟಿವಿಯಲ್ಲಿ ಹೆಣವನ್ನು ನೋಡುತ್ತಾ ತಿನ್ನುತ್ತೇವಲ್ಲ ಹಾಗೆ) ಎಲ್ಲಿಯಾದರೂ ಪುಟ್ಟ ಹಕ್ಕಿಯೋ ಅಳಿಲೋ ಸತ್ತು ಬಿದ್ದಿದ್ದರೆ, ಅದನ್ನು ತಂದು ಅದರ ಬಾಯಿಗೆ ಹಾಲು-ನೀರು ಬಿಟ್ಟು, `ಮತ್ತೆ ಹುಟ್ಟಿ ಬಾ ನಿನ್ನ ಅಮ್ಮನಿನಗಾಗಿ ಕಾಯುತ್ತಿರುತ್ತಾಳೆ’ ಎಂದು ಗುಳಿ ತೋಡಿ ಹೂಳುತ್ತಿದ್ದೆ. ಅಷ್ಟೇ ಯಾಕೆ, ಊರವರೆಲ್ಲಾ ಸಿನೆಮಾ ಅಥವಾ ನಾಟಕ ನೋಡಲಿಕ್ಕೆ ಅಕ್ಕಪಕ್ಕದ ಊರುಗಳಿಗೆ ಬಂಡಿ ಕಟ್ಟಿ ಹೊರಡುವಗಲೂ ನನಗೆ ಇದೇ ಸಂಕಟ. ನಾನು ಬಂಡಿಯಲ್ಲಿ ಕೂತಿರುವಷ್ಟು ಹೊತ್ತೂ ಆ ಎತ್ತುಗಳು ನನ್ನ ಭಾರದಿಂದ ಕುಸಿಯುತ್ತಿವೆ, ಎಳೆಯಲಾಗದೆ ಒದ್ದಾಡುತ್ತಿವೆ ಅನ್ನಿಸಿ ಬಂಡಿಯಿಂದ ಜಿಗಿದು ಬಿಡುತ್ತಿದ್ದೆ. ಹಾಗೆ ಒಮ್ಮೆಜಿಗಿದು ಕಾಲಿಗೆ ಪೆಟ್ಟುಮಾಡಿಕೊಂಡಿದ್ದೆ ಕೂಡ. ಅಮ್ಮ ನನಗೆ, `ಇರೋದು ಗುಬ್ಬಿಯಷ್ಟು, ನಾವೆಲ್ಲಾ ಕೂತಿರಲ್ವಾ? ನಾವೇ ಅದಕ್ಕೆ ಭಾರ ಅಲ್ಲ ಇನ್ನು ನೀನು ಭಾರವಾ’ ಎಂದು ಕೈಹಿಡಿದು ಕೂಡಿಸಿಕೊಳ್ಳುತ್ತಿದ್ದಳು. ಒಂದೊಮ್ಮೆ ಬಂಡಿ ಹತ್ತಲು ನಿರಾಕರಿಸಿ ಮೂರು ಮೈಲು ನಡೆದೇ ಹೋಗಿದ್ದೆ. ಸಿನೆಮಾ ನೋಡುವ ಬದಲು ಸುಸ್ತಾಗಿ ನಿದ್ದೆ ಮಾಡಿಬಿಟ್ಟಿದ್ದೆ.

ಅಳುತ್ತಾ ನಿಂತಿದ್ದ ನನ್ನನ್ನು ರಾಮುಡು ಬಾ ಎಂದು ಕರೆದೊಯ್ದ. ಸಂಜೆ ನೆರಳುಗಳು ಉದ್ದುದ್ದ ಬೆಳೆಯುತ್ತಿದ್ದವು. ಎಲ್ಲದಕ್ಕೂಆಹಾರ ಬೇಕು. ಆಹಾರವನ್ನು ಅವು ಹುಡುಕಿಕೊಳ್ಳಲೇ ಬೇಕು ಎಂದ ರಾಮುಡು ನನ್ನ ಸಮಾಧಾನ ಮಾಡಲಿಕ್ಕೆ ನೋಡುತ್ತಿದ್ದ. ಅದಕ್ಕೆ ಅಷ್ಟು ಪುಟ್ಟ ಮರಿಯೇ ಬೇಕಿತ್ತಾ? ಎಂದೆ. ಹೌದು ಅದಕ್ಕೆ ಅದು ಆಹಾರ ದೇವರು ಎಲ್ಲಕ್ಕೂ ಒಂದೊಂದು ಆಹಾರವನ್ನು ಇಟ್ಟೇ ಇರುತ್ತಾನೆ. ಒಂದನ್ನು ತಿಂದೇ ಒಂದು ಬದುಕಬೇಕು. ನೀನು ಅನ್ನ ತಿಂತೀಯಾ ಅವೂ ಹಾಗೇ ಅಂದು ಬಿಟ್ಟರೆ ಏನು ಮಾಡುತ್ತೀಯ? ತಿನ್ನದೇ ಇದ್ದರೆ ನಿನ್ನ ಹೊಟ್ಟೆ ತುಂಬುವುದಾದರೂ ಹೇಗೆ? ಎಂದು ಬಗೆಬಗೆಯಾಗಿ ಹೇಳಿ ನನ್ನ ಸಮಾಧಾನ ಮಾಡಿದ. ಆದರೂ ಅದೊಂದು ದಾರುಣ ದೃಶ್ಯವಾಗಿ ನನ್ನ ಕಾಡತೊಡಗಿತ್ತು. ಸೂರ್ಯ ಕೆಂಪು ಕೆಂಪಾಗಿ ಕಣ್ಣಿಂದ ಮರೆಯಾದ. ಸತ್ತು ಹೋದ ಕೋಳಿಪಿಳ್ಳೆ ನನ್ನ ಕಣ್ಣೆದುರು ತನ್ನ ಅಳಲನ್ನು ತೋಡಿಕೊಳ್ಳುತ್ತಲೇ ಇತ್ತು.

ಮುತ್ಯಾ ಹೇಳಿದ ಹಾಗೆ ತಾತ ಸಂಜೆ ದಾಟಿದ ಹೊತ್ತಿಗೆ ಬಂದಿದ್ದ. ಮೈತುಂಬಾ ಹೊಡೆದ ಗುರುತುಗಳು ಗಾಯ. ಮೈ ಕೆಂಡದ ಹಾಗೆ ಸುಡುತ್ತಿತ್ತು. ತಟ್ಟಾಡುತ್ತಾ ಬಂದ ತಾತನನ್ನು ಊರವರು ಯಾರೋ ಮನೆಯ ವರೆಗೂ ದಾಟಿಸಿದ್ದರು. ತಾತನ ಸ್ಥಿತಿ ನೋಡಿ ಎಲ್ಲರಿಗೂ ಗಾಬರಿಯಾಗಿತ್ತು. ನಾರಾಯಣ ಎಂದು ಮುತ್ಯಾ ತನ್ನ ದುರ್ಬಲ ತೋಳುಗಳಲ್ಲಿ ಹಿಡಿದುಕೊಂಡಳು. ಅವಳ ಕಣ್ಣಾಲಿಗಳು ತುಂಬಿ ಬಂದಿದ್ದವು. ಅಮ್ಮಮ್ಮನಿಗೆ 'ನಿನ್ನ ಗಂಡ ಹೀಗೆ ಹಾಗೆ’ ಎಂದು ಕಥೋರವಾಗಿ ಹೇಳುತ್ತಿದ್ದ ಮುತ್ಯಾ ಬೇರೇನೆ, ಈ ಮುತ್ಯಾ ಬೇರೇನೇ ಅನ್ನಿಸಿಬಿಟ್ಟಿತ್ತು.

ಮಂಚದ ಮೇಲೆ ಮಲಗಿದ ತಾತನಿಗೆ ಮುತ್ಯಾ ಉಪ್ಪಿನ ಶಾಖವನ್ನು ಕೊಡುತ್ತಿದ್ದರೆ, ಅಮ್ಮಮ್ಮ ಅಮೃತ ಬಳ್ಳಿಯ ಎಲೆಗಳ ಕಷಾಯ ಮಾಡುತ್ತಿದ್ದಳು. ಮೌನ ಎಲ್ಲರ ಮಧ್ಯೆ ಇತ್ತು. ಕಣ್ಣೀರೂ ಮಾತೆಂದರೆ ಅದು ಮಾತ್ರಾಲ್ಲಿ ಮಾತಾಡುತ್ತಲೇ ಇತ್ತು. ಪದ್ದಿ ಚಿಕ್ಕಿ ತಣ್ಣೀರಬಟ್ಟೆಯನ್ನು ತಾತನ ಹಣೆ ಮೇಲೆ ಹಾಕಿದಳು. ತಾತ ಜ್ವರದ ತಾಪದಿಂದ ನಡುಗಿ ತಡೆದುಕೊಳ್ಳಲಾಗದೆ ಅದನ್ನು ಕಿತ್ತೆಸೆದ. ಮುತ್ಯಾ ನೆಲಕ್ಕೆ ಬಿದ್ದ ತಣ್ಣೀರ ಬಟ್ಟೆಯನ್ನು ತೆಗೆದು ಮತ್ತೆ ತಾತನ ಹಣೆಮೇಲೆ ಇಟ್ಟಳು. ಈಗಲೂ ಚಳಿಗೆ ನಡುಗಿದರೂ ತಾತ ಅದನ್ನು ತೆಗೆದೆಸೆಯಲಿಲ್ಲ. ಎಲ್ಲವನ್ನೂ ನೋಡುತ್ತಿದ್ದ ನಾನು, `ಮುತ್ಯಾಳ ಮಾತು ಹೇಗೆ ಸತ್ಯ ಆಯಿತು’ ಎಂದು ಯೋಚಿಸುತ್ತಾ ಕೂತಿದ್ದೆ.

ಪದ್ದಿ ಚಿಕ್ಕು ನನ್ನನ್ನು ಊಟಕ್ಕೆ ಕರೆದೊಯ್ದಳು. ಅವತ್ತಿನ ಊಟದಲ್ಲಿ ಅನ್ನ ಚಟ್ನಿ ಪುಡಿ, ಮೊಸರನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ನನಗೂ ಹಾಕಿ ತಾನೂ ತಟ್ಟೆಯನ್ನು ಇಟ್ಟುಕೊಂಡ ಚಿಕ್ಕುವನ್ನು, `ಚಿಕ್ಕು ತಾತ ಯಾಕೆ ಹೀಗೆಲ್ಲಾ ಮಾಡಿದರು’ ಎಂದು ಕೇಳಿದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅಮ್ಮಮ್ಮ, `ಇನ್ನೇನು ಮಾಡ್ತರೆ ಹುಟ್ಟಿದ್ದೆಲ್ಲಾ ಹೆಣ್ಣುಗಳೆ. ಸಾಕೆಂದರೂ ಬೇಕೆಂದು ಇವಳೊಬ್ಬಳು ಹುಟ್ಟಿಬಿಟ್ಟಳು. ಮನೆ ದಾಟಿಸದೆ ಬೇರೆ ದಾರಿಯಿಲ್ಲವಲ್ಲ’ ಎಂದು ಕಷಾಯ ತೆಗೆದುಕೊಂಡು ಹೊರಟಳು. ಪದ್ದಿ ಚಿಕ್ಕು ಅಳುತ್ತಾ ಊಟ ಮಾಡದೆ ಕೈತೊಳೆದುಬಿಟ್ಟಳು. ಹೆಣ್ಣಾದರೆ ಏನಾಯಿತು? ಅಮ್ಮ ಅಪ್ಪನೂ ನನ್ನ ಬಗ್ಗೆ ಹೀಗೇ ಯೋಚಿಸುತ್ತಾರಾ? ಒಂದು ಕ್ಷಣ ನನಗೆ ದಿಗ್ಭ್ರಮೆಯಾಯಿತು. ಕಣ್ಣೊರೆಸಿಕೊಂಡ ಚಿಕ್ಕು, `ಬೆಳೆಯುವ ಹುಡುಗಿ ತಿನ್ನು’ ಎಂದು ಬಲವಂತ ಮಾಡಿದಳು. ಅವತ್ತೆಲ್ಲಾ ಮುತ್ಯಾ ಅಮ್ಮಮ್ಮ ಯಾರೂ ಮಾತಾಡಲಿಲ್ಲ. ನಾನು ಚಿಕ್ಕುನ ಜೊತೆಯೇ ಮಲಗಿದೆ.

ಬೆಳಗ್ಗೆ ಏಳುವಾಗ ಅಮ್ಮಮ್ಮ ತಾತನ ಯೋಗದಲ್ಲಿ ಬದಲಾಗಿದೆ ಎಂದು ಪೂಜೆ ಮಾಡಿಸಲು ಯಾರನ್ನೋ ಕರೆಸುವುದಾಗಿ ಮಾತಾಡುತ್ತಿದ್ದಳು. ಮುತ್ಯಾಗೆ ಇದಕ್ಕೆಲ್ಲಾ ಯಾಕೆ? ನಮ್ಮ ದುರಾಸೆಯೇ ನಮ್ಮನ್ನು ತಿನ್ನುವುದು ಎನ್ನುವ ಮನಸ್ಥಿತಿ. ಅಮ್ಮಮ್ಮನಿಗೆ ತೀರಾ ನಿರಾಸೆ ಮಾಡಲಿಕ್ಕೆ ಅವಳಿಗೆ ಇಷ್ಟ ಇರಲಿಲ್ಲವಾದ್ದರಿಂದ ಬೇಡವೆನ್ನದೆ ಸುಮ್ಮನೆ ಉಳಿದಳು.

ತಾತ ಬಹುಬೇಗ ಸುಧಾರಿಸಿಕೊಂಡ. ತಾನು ಪೂಜೆಮಾಡಿಸುವೆ ಎಂದು ಅಂದುಕೊಂಡಿದ್ದಕ್ಕೇನೆ ತನ್ನ ಗಂಡನಲ್ಲಿ ಈ ಮಾರ್ಪಾಡು ಬಂತು ಎಂದು ಅಮ್ಮಮ್ಮ ನಂಬಿದ್ದಳು. ತನ್ನನ್ನು ಕಾಪಾಡಿದ ತಾಯಿ ತನ್ನ ಮಗನನ್ನು ಕಾಪಾಡಿಕೊಳ್ಳುವುದಿಲ್ಲವಾ ಇದಕ್ಕೆಲ್ಲಾ ಮುತ್ಯಾನೇ ಕಾರಣ ಎಂದು ನಂಬಿದ್ದ ರಾಮುಡು. ಮುತ್ಯಾ ನಂಬಿಕೆಗೂ ವಾಸ್ತವಕ್ಕೂ ಸಂಬಂಧವಿಲ್ಲ ಎಂದು ಹೇಳಲು ಯಾವಾಗಲೂ ಪ್ರಯತ್ನಿಸುತ್ತಲೇ ಇದ್ದಳು. ಕಣ್ಣಿಗೆ ಕಾಣುವುದನ್ನು ನಂಬಬೇಕು ಎನ್ನುವ ಅವಳ ಸಿದ್ಧಾಂತಕ್ಕೆ ಸಹಮತ ತೋರುವವರು ಯಾರೂ ಇರಲಿಲ್ಲ

ಅಮ್ಮಮ್ಮನ ತಯಾರಿ ಜೋರಾಗೇ ಇತ್ತು. ಹಜಾರದ ಮುಂಭಾಗಕ್ಕೆ ತಾಕಿದಂತೆ ಒಂದು ಪುಟ್ಟ ಕೊಠಡಿಯಿತ್ತು. ಯಾರಾದರೂ ಬರುತ್ತಾರೆ ಎಂದರೆ ಮಾತ್ರ ಆ ಕೋಣೆಯನ್ನು ತೆಗೆದು ಸ್ವಚ್ಚಮಾಡಲಾಗುತ್ತಿತ್ತು. ಹಾಗೆ ಸ್ವಚ್ಚ ಮಾಡುವಾಗ ಅಲ್ಲಿ ಹಾವುಗಳೂ ಇರುತ್ತಿದ್ದವಂತೆ. ಪದ್ದಿಚಿಕ್ಕು ಕಸಪರಿಕೆ ಮತ್ತು ಮೊರವನ್ನು ಹಿಡಿದು ಸ್ವಚ್ಚ ಮಾಡಲಿಕ್ಕೆ ಕೋಣೆಯೊಳಗೆ ಹೋದಾಗ ನಾನೂ ಹೋದೆ. ಆ ಕೋಣೆಯಲ್ಲಿ ಅಂಥಾ ವಿಶೇಷವಾದ್ದು ಏನೂ ಇರಲಿಲ್ಲ, ಮೂಲೆಯಲ್ಲಿ ಸುತ್ತಿಟಿದ್ದ ಚಾಪೆ ಕೆಳಗೆ ನೆಲದಲ್ಲಿ ಅನಾಥವಾಗಿ ಬಿದ್ದಿದ್ದ ದಿಂಬೊಂದನ್ನು ಬಿಟ್ಟು.

ಬರುತ್ತಿರುವವರು ಯಾರು? ಪದ್ದಿ ಚಿಕ್ಕುವಿನ ಮಾತುಗಳಿಂದ ಗೊತ್ತಾಗಿದ್ದು, ತಾತನ ದೋಷ ಪರಿಹಾರಕ್ಕೆ ಒಬ್ಬ ಮಹಾತ್ಮರು ಬರ್ತಾ ಇದಾರೆ ಅವರು ಉಳೀಲಿಕ್ಕೆ ಅಂತ ಈ ಕೋಣೆಯನ್ನು ಅನುವು ಮಾಡಿಕೊಡುತ್ತಿದ್ದಾಳೆ ಎಂದು. ಮಹಾತ್ಮ ಎಂದರೆ ನನಗೆ ಗೊತ್ತಿದ್ದು ಗಾಂಧಿ ಮಾತ್ರವೇ. ಅವರು ಸತ್ತು ಬಹಳ ವರ್ಷಗಳಾಗಿದ್ದವು ಎನ್ನುವುದು ನನ್ನ ಶಾಲೆಯ ಪುಸ್ತಕದಲ್ಲಿ ಓದಿ ಗೊತ್ತಿತ್ತು. ಈಗ ಅವರು ಹೇಗೆ ಬರುತ್ತಾರೆ ಎನ್ನುವುದು ನನ್ನ ಪ್ರಶ್ನೆಯಾಗಿತ್ತು. ಚಿಕ್ಕು ನನ್ನ ಗಲ್ಲವನ್ನು ಹಿಡಿದು ನಿನಗೆ ನಾನು ಹೇಗೆ ಹೇಳಲಿ? ಮಹಾತ್ಮ ಎಂದರೆ ಬರೀ ಗಾಂಧಿ ಮಾತ್ರ ಅಲ್ಲ. ದೊಡ್ಡ ಸಾಧನೆ ಸಿದ್ಧಿ ಪಡೆದುಕೊಂಡವರು ಎಂದಳು. ನಾಳೆ ಬರುವ ಅವರಿಗೆ ಕಾಯುತ್ತಾ ನನ್ನ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ ಕಲ್ಪನೆಗಳೊಂದಿಗೆ ಕಾಯುತ್ತಿದ್ದೆ.

ಬೆಳಗಿಗೆ ಕಣ್ಣನ್ನು ಉಜ್ಜುತ್ತಾ ಕೂತ ನನಗೆ ಸ್ನಾನ ಮುಗಿಸಿ ಸಡಗರದಿಂದ ಓಡಾಡುತ್ತಿದ್ದ ಮನೆಯ ಹಿರಿಯರು ಕಂಡರು. ನಿದ್ದೆಯನ್ನು ಮತ್ತಷ್ಟು ತಿಳಿ ಮಾಡಿಕೊಂಡು ನೋಡಿದೆ. ಎಲ್ಲವೂ ಶುಭ್ರವಾಗಿತ್ತು ಅಮ್ಮಮ್ಮ ನನ್ನ ಹತ್ತಿರಕ್ಕೆ ಬಂದು ಬೇಗ ಏಳು ಶಾಸ್ತ್ರಿಗಳು ಬರುವ ಹೊತ್ತಾಯಿತು ಎಂದಳು.

ಶುಭ್ರ ಕಚ್ಚೆ ಪಂಚೆ ಮೇಲೊಂದು ಶಲ್ಯ ಬಿಳಿಯ ವಸ್ತ್ರಧರಿಸಿದ ಕೈ ಬೆರಳುಗಳಲ್ಲಿ ಉಂಗುರಗಳು. ಢಾಳಾದ ವಿಭೂತಿ ನಡುವೆ ಕುಂಕುಮ; ದೊಡ್ಡ ಆಕೃತಿ. ಹೆಜ್ಜೆ ಇಟ್ಟರೆ ಇಟ್ಟ ಹೆಜ್ಜೆಯ ಕೆಳಗಿನ ಭೂಮಿ ಕಂಪಿಸಲೇ ಬೇಕು. ಅವರ ಹೆಸರು ನಾಗಪ್ಪ ಶಾಸ್ತ್ರಿಗಳು. ಹೆಸರಿಗೆ ರಾಜಪುರೋಹಿತ. ವಯಸ್ಸು ಎಂಬಂತ್ತು ದಾಟಿತ್ತು. `ಅವರು ಸಿಗುವುದೇ ಕಷ್ಟ, ಇನ್ನು ನಮ್ಮ ಕಷ್ಟ ತೀರಿತು’ ಎಂದು ಹೇಳಿಕೊಂಡು ಅಮ್ಮಮ್ಮ ಸಡಗರದಿಂದ ಓಡಿ ಬಂದಳು. ತಾತ ನೀರನ್ನು ಹಿಡಿದು ಅವರ ಕಾಲನ್ನು ತೊಳೆದರು. ತೊಳೆದ ನೀರನ್ನು ತಲೆಯ ಮೇಲೆ ಹಾಕಿಕೊಂಡರು. ನನಗೂ ಅವರ ಕಾಲಿಗೆ ಬೀಳುವಂತೆ ಹೇಳಿದರು. ಇಷ್ಟೆಲ್ಲಾ ನಡೆಯುವಾಗ ಬಂದ ಆ ವ್ಯಕ್ತಿಯ ಮುಖದಲ್ಲಿ ಹುಡುಕಾಟವಿತ್ತು. ಸುತ್ತಾ ನೋಡಿ ನಿಮ್ಮ ತಾಯಿ ಎಲ್ಲಿ ಎಂದರು. ಚಿಕ್ಕುಗೆ ಮುತ್ಯಾಳನ್ನು ಕರೆಯುವಂತೆ ತಾತ ಹೇಳಿದ. ಅಷ್ಟರಲ್ಲಿ ಊರವರು ಯಾರೋ ಮಗುವಿಗೆಹುಷಾರಿಲ್ಲ ಎಂದು ಬಂದರು. ನೈಮಿಥ್ಯವನ್ನು ಮಾಡುತ್ತಾ ಆಡುಗೆ ಮನೆಯಲ್ಲಿದ್ದ ಮುತ್ಯಾ ಬಂದಳು. ತನ್ನ ಕಾಲಿಗೆರಗುತ್ತಾಳೆ ಎನ್ನುವ ನಿರೀಕ್ಷೆಯಲ್ಲಿದ್ದ ನಾಗಪ್ಪಶಾಸ್ತ್ರಿಗಳಿಗೆ ಮುತ್ಯಾ ಮಗುವನ್ನು ಎತ್ತಿಕೊಂಡು ಒಳನಡೆದದ್ದಕ್ಕೆ ಅಸಮಧಾನವಾಗಿತ್ತು. ನನಗೋ ಗುರುವಿನ ನಿರೀಕ್ಷೆ ಬಲವಾಗತೊಡಗಿತ್ತು. ಮುತ್ಯಾ ನಮಸ್ಕರಿಸಬೇಕಿತ್ತು ಎಂತಲೂ ಅನಿಸಿತ್ತು.

ಮಗುವಿನ ಕಡೆಯವರನ್ನು ಮಾತಾಡಿಸಿ ಬಂದ ಮುತ್ಯಾ ನಾಗಪ್ಪ ಶಾಸ್ತ್ರಿಗಳಿಗೆ, `ಹೇಗಿದ್ದೀರಿ?’ ಎಂದಿದ್ದಳು. ಇಷ್ಟು ದೊಡ್ಡ ಗುರು ನಾನು ಇಲ್ಲಿರುವಾಗ ಗಣನೆಗೇ ತೆಗೆದುಕೊಳ್ಳದೆ ಹೋದ ಮುತ್ಯಾನ ಬಗ್ಗೆ ಕೋಪವೂ ಬಂದಿತ್ತು. `ದೊಡ್ಡವರಾದಿರಿ’ ಎಂದು ಗಡಸು ಧ್ವನಿಯಲ್ಲಿ ಹೇಳಿದಾಗ `ಗ್ರಹಗಳ ಸಂಚಾರವನ್ನೇ ಬದಲಿಸಲು ಬಂದಿರುವ ನೀವು ದೊಡ್ಡವರು ನಾನಲ್ಲ’ ಎಂದು ತನ್ನ ಮಡಿ ಸೀರೆಯನ್ನು ತಲೆಯ ಮೇಲೆಳೆದುಕೊಂಡು ಮುತ್ಯಾ ನಸು ನಕ್ಕಿದ್ದಳು. `ಅಂದರೆ ನಿಮ್ಮ ಮಾತಿನ ಅರ್ಥ ನನಗೆ ಶಕ್ತಿ ಇಲ್ಲವೆಂತಲಾ?’ ಎಂದು ತಮ್ಮ ಭಾರೀ ದೇಹದ ಮೇಲೆ ಬಲಹಾಕಿ ನಿಲ್ಲಲು ಯತ್ನಿಸಿದರು. ಮುತ್ಯಾ ಅವರನ್ನು ಕೂರುವಂತೆ ಹೇಳಿ, `ಯಜ್ಞ ದೇವ ಕಾಯುತ್ತಿದ್ದಾನೆ. ನಾನು ಹೋಗಬೇಕು. ಒಂದು ಸತ್ಯ, ಮನುಷ್ಯನಿಗೆ ಬೇಕಿರೋದು ಸಮಾಧಾನ ಮತ್ತು ತೃಪ್ತಿ ಅದಿಲ್ಲದಿರೋರನ್ನ ಯಾರೂ ಕಾಪಾಡಲಾರರು’ ಎಂದು ಒಳನಡೆದಿದ್ದಳು. ಅಮ್ಮಮ್ಮ ಒಳಗೇ ಬಂದು ಮುತ್ಯಾನ ಜೊತೆ ಜಗಳ ಆಡಿದ್ದಳು `ನಿಮಗೆ ನಿಮ್ಮಮಗನ ಜೀವನ ಸರಿಯಾಗುವುದು ಬೇಕಿಲ್ಲ’ ಎಂದು. `ಜೀವನ ಅದೆಲ್ಲಿರುತ್ತೆ, ನಾವು ಮಾಡಿದರೆ ಇರುತ್ತೆ. ನಾವು ಮಾಡಿದ ಹಾಗೆ ಇರುತ್ತೆ. ನಿನ್ನ ಆಸೆಯನ್ನು ತೆಗೆದು ಅವನ ಮೇಲೆ ಹಾಕು. ಬುದ್ಧಿಯನ್ನು ಕೈಲಿ ಹಿಡಿದುಕೊಳ್ಳಲಾಗದ ಅವನು ಮಾಡಬಾರದ್ದನ್ನು ಮಾಡುತ್ತಾನೆ. ಪಾಠ ಹೇಳುವವರೇ ಹೀಗಾದರೆ ಬೇರೆಯವರ ಪಾಡೇನೋ’ ಎಂದು ನಿಟ್ಟುಸಿರಿಟ್ಟಳು. `ನಿಮಗಿಷ್ಟ ಇಲ್ಲದಿದ್ದರೆ ಬರಬೇಡಿ. ಬಂದು ಸುಮ್ಮನೆ ಇಲ್ಲದಿದ್ದನು ಅಂದು ಕೆಡಿಸಬೇಡಿ’ ಎಂದು ಅಮ್ಮಮ್ಮ ಮುತ್ಯಾಗೆ ಬೈದಳು.

`ನಿನಗೆ ಎಲ್ಲವೂ ಸಿಗಬೇಕು, ಹಣ, ಕೀರ್ತಿ, ಉನ್ನತಿ... ಎಲ್ಲವೂ. ಹಾಗೆ ಮಾಡುತ್ತೇನೆ’ಎಂದ ನಾಗಪ್ಪಶಾಸ್ತ್ರಿಗಳ ಕೈಗಳನ್ನು ತಾತ ಕಣ್ಣಿಗೊತ್ತಿಕೊಂಡಿದ್ದ. ಶಾಸ್ತ್ರಿಗಳಿಗೆ ಸಮಾಧಾನ ಆಗಿರಲಿಲ್ಲ, `ನಿನ್ನ ಹಣೇಬರಹದ ವಿರುದ್ಧಹೋರಾಡು, ಗೆಲ್ಲುತ್ತೀಯ. ಅದಕ್ಕೆ ದಾರಿಯನ್ನು ನಾನು ತೋರುತ್ತೇನೆ’ ಎಂದಿದ್ದರು ಅಹಂನಿಂದ. ` ನಿನ್ನ ತಾಯಿಗೆ ಹೇಳು, ನಾನು ಶಕ್ತನಿದ್ದೀನಿ ಅಂತ’ ಎಂತಲೂ ಸೇರಿಸಿದ್ದರು.

ಮುತ್ಯಾಗೆ ಇದೆಲ್ಲ ಕ್ಷುಲ್ಲಕವಾಗಿ ಕಾಣುತ್ತಿತ್ತು. ಇಂಥಾ ದಾರಿಗಳು ತನ್ನ ಮಗನ ದಾರಿ ತಪ್ಪಿಸುತ್ತವೆ ಎಂದೇ ಅವಳು ನಂಬಿದ್ದಳು. ನಾನು ಮುತ್ಯಾಳ ಪಕ್ಕ ಕೂರುತ್ತಾ ಕೇಳಿದೆ. ಏನು ನಡೀತಾ ಇದೆ ಇಲ್ಲಿ? ಎಂದು. ಪ್ರಾರ್ಥಿಸು ಪ್ರಾರ್ಥನೆಯೊಂದೇ ನಮ್ಮನ್ನು ಸರಿಯಾದ ದಾರಿಗೆ ಒಯ್ಯುತ್ತದೆ. ಅದೇ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ. ಹೊರಗಿನ ಬೆಳಕು ಒಳಗಿನ ಕತ್ತಲೆಯನ್ನು ಓಡಿಸುವುದಿಲ್ಲ. ಒಳಗಿನ ಬೆಳಕು ಹೊರಗಿನ ಕತ್ತಲನ್ನು ಇಲ್ಲವಾಗಿಸುತ್ತದೆ. ಕತ್ತಲಲ್ಲಿ ಕಣ್ಣು ಮುಚ್ಚು ಬೆಳಕಿಗಾಗಿ ಬೇಡು; ಬೆಳಕು ಕಾಣುತ್ತದೆ. ಯಾಕೆಂದರೆ ಪ್ರಾರ್ಥನೆ ಪಾದರ್ಥವಲ್ಲ ಪರಾರ್ಥ’ ಎಂದಳು ಮುತ್ಯಾ. ಮುತ್ಯಾಳ ಮಾತು ಅರ್ಥವಾಗತೊಡಗಿದ್ದು ಆಕಸ್ಮಿಕ ಅಂತ ಅಂದುಕೊಳ್ಳಲಾರೆ. ಅವಳು ದಿನವಹೀ ತನ್ನ ಶಕ್ತಿಯನ್ನು ನನಗೆ ಕಳಿಸುತ್ತಿದ್ದಾಳೆ ಎಂದು ಅನ್ನಿಸಿದ್ದು ಸುಮ್ಮನೆ ಮಾತ್ರವಲ್ಲ. ಪಕ್ಕದಲ್ಲೇ ತಿಳಿನೀರ ಬುಗ್ಗೆ ಇಟ್ಟುಕೊಂಡು ತಾತ ಯಾಕೆ ದಾಹ ಎನ್ನುತ್ತಿದ್ದಾನೆ?! ಅದಕ್ಕೆ ತುಪ್ಪ ಹಾಕುವವರು ಬೆಂಕಿಯನ್ನು ದೊಡ್ಡದು ಮಾಡುತ್ತಾರೆ.

ನಾಗಪ್ಪ ಶಾಸ್ತ್ರಿಗಳು ಪೂಜೆ ಮಾಡಿಕೊಟ್ಟು ನಿನ್ನ ಜೀವನ ಸರಿಯಾಯಿತು ಎಂದುಕೋ ಎನ್ನುವಾಗ ಮುತ್ಯಾ ಇನ್ನೊಂದು ಯಡವಟ್ಟಿಗೆ ದಾರಿಯನ್ನು ತೋರುತ್ತಿದ್ದಾರೆ ಎಂದಳು. ಅವಳ ಮಾತಿನ ದಾಟಿಯಲ್ಲಿ ಹೋರಾಟದಕಿಚ್ಚು ಕಾಣುತ್ತಿತ್ತು. ಮುತ್ಯಾ ಯಾರ ಜೊತೆಯಲ್ಲಿ ಹೋರಾಡುತ್ತಿದ್ದಾಳೆ? ಯಾಕೆ ಹೋರಾಡುತ್ತಿದ್ದಾಳೆ? ಅನ್ನಿಸಿತು. ಮುಂದೆ ತಾತನ ಜೀವನದಲ್ಲಿ ನಡೆದದ್ದು ಮಾತ್ರ ಸಹಿಸಲಸಾಧ್ಯ ಘಟನೆ. ಅಂದು ನಾನು ಕೇಳಿದ್ದೆ; `ಮುತ್ಯಾ ಈ ಹೋರಾಟ ಯಾರ ವಿರುದ್ಧ?’ ಎಂದು. ನನ್ನ ಪ್ರಶ್ನೆಗೆ ಮುತ್ಯಾ ಕೊಟ್ಟ ಆತ್ಮಶಕ್ತಿಯ ಉತ್ತರ ಅದ್ಭುತ. ತೋರಿಸಿದ್ದು ಅವರ್ಣನೀಯ. ಒಮ್ಮೆಗೇ ಆಕಾಶದ ನಕ್ಷತ್ರಗಳೆಲ್ಲಾ ಸಳಸಳನೆ ಎಳೆಯಾಗಿ ನಿಂತು, ಬೆಳಕಿನ ಮಳೆ ಕರೆದೇಬಿಟ್ಟವು ಅನ್ನಿಸಿ ಮಾತಿಲ್ಲವಾಗಿ ಅವಳಿಗೆ ಅಂಟಿ ಕುಳಿತುಬಿಟ್ಟೆ.

ಈ ಅಂಕಣದ ಹಿಂದಿನ ಬರೆಹಗಳು:
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ

ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...