ಶರಣ ಧರ್ಮದ ತಾತ್ವಿಕ ನೆಲೆಗಳು

Date: 13-02-2022

Location: ಬೆಂಗಳೂರು


‘ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳೇ ಅಂಗವಾಗಿವೆ, ಪಂಚಾಚಾರಗಳೇ ಪ್ರಾಣವಾಗಿವೆ, ಷಟ್‍ಸ್ಥಲಗಳೇ ಆತ್ಮವಾಗಿದೆ. ಆತ್ಮಸ್ವರೂಪಿಯಾದ ಷಟ್‍ಸ್ಥಲಗಳನ್ನು ಕುರಿತು ಬಸವಾದಿ ಶರಣರು ಹೊಸ ರೀತಿಯಿಂದ ಚಿಂತಿಸಿದ್ದಾರೆ’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ‘ಶರಣಧರ್ಮ’ ಅಂಕಣದಲ್ಲಿ ಲಿಂಗಾಯತ ಧರ್ಮದಲ್ಲಿನ ತಾತ್ವಿಕ ನೆಲೆಗಳ ಕುರಿತು ವಿಶ್ಲೇಷಿಸಿದ್ದಾರೆ.

ಶರಣರ ಧಾರ್ಮಿಕ ಪರಿಕಲ್ಪನೆಗಳಾದ ಧರ್ಮ-ದೇವರು-ದೇವಾಲಯ ವಿಶಿಷ್ಟವಾಗಿರುವಂತೆ ಅವರ ತಾತ್ವಿಕ ನೆಲೆಗಳು ಹೊಸ ದೃಷ್ಟಿಯಿಂದ ಕೂಡಿವೆ. 12ನೇ ಶತಮಾನದ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳು, ಷಟ್‍ಸ್ಥಲಗಳು ಮತ್ತು ಪಂಚಾಚಾರಗಳು ತಾತ್ವಿಕ ನಿಲವುಗಳಾಗಿವೆ. ಶರಣರಿಗಿಂತ ಪೂರ್ವದಲ್ಲಿ ಇದ್ದ ಆಗಮಗಳಲ್ಲಿ ಇವುಗಳ ಪ್ರಸ್ತಾಪವಿದೆ. ಆದರೆ ಅಲ್ಲಿದ್ದ ತತ್ವಗಳಿಗೂ ಬಸವಾದಿಶರಣರು ಸೃಷ್ಟಿಸಿದ ತತ್ವಗಳಿಗೂ ತುಂಬ ವ್ಯತ್ಯಾಸವಿದೆ. ಶಿವನ ಪರಿಕಲ್ಪನೆ ಭಾರತೀಯರಿಗೆ ತುಂಬ ಪ್ರಾಚೀನವಾದುದಾಗಿದೆ. ಆದರೆ ಶರಣರು ಒಪ್ಪಿಕೊಂಡ ಶಿವನು ಪುರಾಣದಲ್ಲಿ ತ್ರಿಶೂಲ ಹಿಡಿದ ಶಿವನಲ್ಲ, ಪ್ರತಿ ಸಾಧಕನೊಳಗಡೆಯಿರುವ ಅಂತಃಕರಣದ ಆತ್ಮನೇ ಪರಮಾತ್ಮನಾಗಿದ್ದಾನೆ, ಜೀವನೇ ಶಿವನಾಗಿದ್ದಾನೆ, ನರನೇ ಹರನಾಗಿದ್ದಾನೆ.

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳೇ ಅಂಗವಾಗಿವೆ, ಪಂಚಾಚಾರಗಳೇ ಪ್ರಾಣವಾಗಿವೆ, ಷಟ್‍ಸ್ಥಲಗಳೇ ಆತ್ಮವಾಗಿದೆ. ಆತ್ಮಸ್ವರೂಪಿಯಾದ ಷಟ್‍ಸ್ಥಲಗಳನ್ನು ಕುರಿತು ಬಸವಾದಿ ಶರಣರು ಹೊಸ ರೀತಿಯಿಂದ ಚಿಂತಿಸಿದ್ದಾರೆ. ಶರಣರಿಗಿಂತ ಪೂರ್ವದಲ್ಲಿದ್ದ ಈ ತತ್ವಗಳು ಹೊರಗಡೆ ಕಾಣಿಸಿಕೊಳ್ಳುವಂತವುಗಳಾಗಿದ್ದವು. ಆದರೆ ಬಸವಾದಿ ಶರಣರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಮೇಲೆ ಅವುಗಳು ಒಳಗಡೆ ಹೊಳೆಯತೊಡಗಿದವು. ಒಳಗಡೆ ಬೆಳಕು ನೀಡಿದ ಈ ತತ್ವಗಳನ್ನು ಕುರಿತು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ವಚನಸಾಹಿತ್ಯವು 12ನೇ ಶತಮಾನದಿಂದ 21ನೇ ಶತಮಾನದ ವರೆಗೆ ಬೆಳೆದುಬಂದಿದೆ. ಅಂದಿನಿಂದ ಇಂದಿನವರೆಗೆ ಸಾವಿರಾರು ವಚನಕಾರರಿದ್ದಾರೆ. ಆದರೆ ಲಿಂಗಾಯತ ಧರ್ಮಸ್ಥಾಪನೆಗೆ ಕಾರಣರಾದವರು 12ನೇ ಶತಮಾನದ ಬಸವಾದಿ ಶರಣರು. ಆದುದರಿಂದ ಇಲ್ಲಿ ಕೇವಲ 12ನೇ ಶತಮಾನದ ವಚನಕಾರರ ವಚನಗಳನ್ನು ಆಧರಿಸಿ ಈ ತತ್ವಗಳನ್ನು ವಿವರಿಸಲಾಗಿದೆ. ಬಸವೋತ್ತರ ಯುಗದ ತೋಂಟದ ಸಿದ್ಧಲಿಂಗ ಶಿವಯೋಗಿಗಳು, ಜೇವರ್ಗಿ ಷಣ್ಮುಖ ಶಿವಯೋಗಿಗಳು,ಗಣದಾಸಿವೀರಣ್ಣ ಈ ಮೊದಲಾದವರ ವಚನಗಳಲ್ಲಿ ಬಸವಾದಿ ಶರಣರು ಹೇಳಿರುವ ತತ್ವಗಳೇ ಇವೆ. ಅನೇಕ ಆಧುನಿಕ ವಚನಕಾರರೂ ಕೂಡ ಬಸವಾದಿ ಶರಣರಿಂದ ಪ್ರಭಾವಿತರಾಗಿದ್ದಾರೆ.

ಸ್ಪಷ್ಟತೆಗಾಗಿ ಇಲ್ಲಿ 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಬಸವೋತ್ತರ ಯುಗ ಹಾಗೂ ಆಧುನಿಕಯುಗದ ಕೆಲವು ವಚನಕಾರರಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದರೂ ಅವುಗಳನ್ನಿಲ್ಲಿ ಉದಾಹರಿಸಿಲ್ಲ. 13ನೇ ಶತಮಾನದ ಹೊತ್ತಿಗೆ “ಸಿದ್ಧಾಂತ ಶಿಖಾಮಣಿ ” ರಚನೆಯಾಗಿ ವೀರಶೈವ ಧರ್ಮವೆಂಬ ಹೆಸರು ಚಾಲನೆಗೆ ಬಂದಿರುವುದರಿಂದ ಲಿಂಗಾಯತ ಧರ್ಮದ ತಾತ್ವಿಕ ನಿಲುವುಗಳು ಹೇಗಿದ್ದವೆಂಬುದನ್ನು ತಿಳಿದುಕೊಳ್ಳುವುದು ತುಂಬ ಅಗತ್ಯವಿದೆ. ಆ ನಿಟ್ಟಿನಲ್ಲಿ ಇಲ್ಲಿಯ ಪ್ರಯತ್ನವಿದೆ. ಅಷ್ಟಾವರಣಗಳಾದ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದ-ವಿಭೂತಿ-ರುದ್ರಾಕ್ಷಿ-ಮಂತ್ರ ಇವೆಲ್ಲವುಗಳನ್ನು ಲಿಂಗಾಯತ ಧರ್ಮದಲ್ಲಿ ಒಳಗಡೆ ಕಂಡುಕೊಳ್ಳಲಾಗಿದೆ. ಅದೇ ರೀತಿ ಭಕ್ತ-ಮಾಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ ಷಟ್‍ಸ್ಥಲಗಳಿಗೆ ಬಸವಾದಿ ಶರಣರು ಹೊಸ ಆಯಾಮ ನೀಡಿದ್ದಾರೆ. ಲಿಂಗಾಚಾರ-ಶಿವಾಚಾರ-ಸದಾಚಾರ-ಗಣಾಚಾರ-ಭೃತ್ಯಾಚಾರದಂತಹ ಪಂಚಾಚಾರಗಳ ಬಗೆಗೆ ಚಿಂತಿಸಿದ ಶರಣರಲ್ಲಿ ಧಾರ್ಮಿಕ ಸಂಘಟನೆಯ ಶಿಸ್ತನ್ನು ಕಾಣಬಹುದಾಗಿದೆ. ಲಿಂಗಾಯತ ಧರ್ಮದ ತಾತ್ವಿಕ ನಿಲುವುಗಳು, ಮೊದಲಿದ್ದ ಮತ್ತು ಈಗಿರುವ ತಾತ್ವಿಕ ನಿಲುವುಗಳಿಗಿಂತ ಹೇಗೆ ಭಿನ್ನವಾಗಿವೆಯೆಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ಅಷ್ಟಾವರಣಗಳು:
ಲಿಂಗಾಯತ ಧರ್ಮದ ತತ್ವಗಳಲ್ಲಿ ಅಷ್ಟಾವರಣಗಳು ಪ್ರಮುಖವಾಗಿವೆ. ಕೇವಲ ಸಾಂಪ್ರದಾಯಿಕ ಆಚರಣೆಗಳಾಗಿದ್ದ ಈ ಧಾರ್ಮಿಕ ನೆಲೆಗಳಿಗೆ ಶರಣರು ಸಿದ್ಧಾಂತದ ರೂಪವನ್ನು ಕೊಟ್ಟರು. ಅವುಗಳನ್ನು ಧಾರ್ಮಿಕ ತತ್ವಗಳನ್ನಾಗಿ ರೂಪಿಸಿದರು. ಈಗಾಗಲೆ ಅಷ್ಟಾವರಣ-ಷಟ್‍ಸ್ಥಲ-ಪಂಚಾಚಾರಗಳ ಬಗೆಗೆ ಅನೇಕ ಲೇಖನಗಳು ಕೃತಿಗಳು ಪ್ರಕಟವಾಗಿವೆ. ಇಲ್ಲಿ ಮತ್ತೆ ಅವುಗಳನ್ನು ವಿವರಿಸುವ ಉದ್ದೇಶವಿಲ್ಲ. ತಮಗಿಂತ ಹಿಂದಿದ್ದ ಅಷ್ಟಾವರಣಗಳನ್ನು ಶರಣರು ಹೇಗೆ ವೈಜ್ಞಾನಿಕ ತಳಹದಿಯ ಮೇಲೆ ಕಟ್ಟಿದರೆಂಬುದನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ.

ಅಷ್ಟಾವರಣಗಳಲ್ಲಿ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಮುಖ್ಯವಾದವುಗಳಾಗಿದೆ. ದೀಕ್ಷೆ ಕೊಡುವವ ಗುರುವಾಗಿದ್ದು, ಗುಡಿಯಲ್ಲಿದ್ದದ್ದು ಲಿಂಗವಾಗಿತ್ತು. ಧರ್ಮಪ್ರಚಾರ ಮಾಡುವವ ಜಂಗಮವಾಗಿದ್ದ, ಭಕ್ತರು ಇಂತಹ ಗುರು-ಲಿಂಗ-ಜಂಗಮರ ಪೂಜಿಸಿ ಪಾದೋದಕ ತೆಗೆದುಕೊಂಡು ಪ್ರಸಾದ ಪಡೆಯುತ್ತಿದ್ದರು. ಪೂಜೆಯ ಸಮಯದಲ್ಲಿ ವಿಭೂತಿ-ರುದ್ರಾಕ್ಷಿ-ಮಂತ್ರಗಳ ಬಳಕೆಯಾಗುತಿತ್ತು. ಹೀಗೆ ಸಾಂಪ್ರದಾಯಿಕವಾಗಿದ್ದ ಈ ಅಷ್ಟಾವರಣಗಳನ್ನು ಶರಣರು ಚಲನಶೀಲಗೊಳಿಸಿದರು. ಹೇಗೆ ಹೊರಗೆ ಕಾಣುವ ದೇವಾಲಯವನ್ನು ನಿರಾಕರಿಸಿ, ತಮ್ಮ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡರೋ ಅದೇ ರೀತಿ ಅಷ್ಟಾವರಣಗಳನ್ನೂ ಕೂಡ ಅವರು ದೇಹವೆಂಬ ದೇವಾಲಯದಲ್ಲಿಯೇ ಕಂಡುಕೊಂಡರು. ತಾನೇ ಗುರು-ಲಿಂಗ-ಜಂಗಮವಾಗಬೇಕು, ತಾನೇ ವಿಭೂತಿ-ರುದ್ರಾಕ್ಷಿ ಧರಿಸಬೇಕು, ತಾನೇ ಮಂತ್ರವ ಜಪಿಸಬೇಕು, ತಾನೇ ಪಾದೋದಕ-ಪ್ರಸಾದವ ಸೇವಿಸಬೇಕೆಂದು ಲಿಂಗಾಯತ ಧರ್ಮ ಹೇಳುತ್ತದೆ. ಅಷ್ಟಾವರಣಗಳು ಹೊರಗಿನವುಗಳಲ್ಲ, ಅವು ಒಳಗಿನವುಗಳು ಎಂದು ಸ್ಪಷ್ಟಪಡಿಸುತ್ತದೆ.

ಶಿವಾಗಮಗಳಲ್ಲಿ ಪ್ರಮುಖವಾದ ಜ್ಞಾನಾಗಮದಲ್ಲಿ ಅಷ್ಟಾವರಣಗಳ ಬಗೆಗೆ ಪ್ರಸ್ತಾಪಿಸಲಾಗಿದೆ. ಆಗಮಗಳು ಬಸವಾದಿ ಶರಣರಿಗಿಂತ ಹಿಂದೆಯೇ ರಚನೆಯಾಗಿವೆ. ಅಲ್ಲಿ ಬಂದಿರುವ ಅಷ್ಟಾವರಣಗಳ ಪ್ರಸ್ತಾಪ ಹೀಗಿದೆ:

“ಗುರುರ್ಲಿಂಗಂ ಜಂಗಮಶ್ಚ ತೀರ್ಥಂ ಚೈವ ಪ್ರಸಾದಕಮ್
ಭಸ್ಮರುದ್ರಾಕ್ಷ ಮಂತ್ರಾಶ್ಚೇತ್ಸಷ್ಟಾವರಣ ಸಂಜ್ಞಿತಾಃ” ||
-ಜ್ಞಾನಾಗಮ (ಕ್ರಿಮಾಪಾದ II - 2)

ಈ ಶ್ಲೋಕದಲ್ಲಿ ಗುರು, ಲಿಂಗ, ಜಂಗಮ, ತೀರ್ಥ, ಪ್ರಸಾದ, ಭಸ್ಮ, ರುದ್ರಾಕ್ಷಿ, ಮಂತ್ರ ಈ ಅಷ್ಟಾವರಣಗಳ ಬಗ್ಗೆ ಉಲ್ಲೇಖಿಸಿ ಇವು ಭವದೋಷಗಳನ್ನು ನಿವಾರಿಸುತ್ತವೆಂದು ಹೇಳಲಾಗಿದೆ. ಇಲ್ಲಿ ಉಲ್ಲೇಖಿಸಿರುವ ಅಷ್ಟಾವರಣಗಳಿಗೂ, 12ನೇ ಶತಮಾನದಲ್ಲಿ ಶರಣರು ಹೇಳಿರುವ ಅಷ್ಟಾವರಣಗಳಿಗೂ ತುಂಬ ವ್ಯತ್ಯಾಸವಿದೆ. ಜ್ಞಾನಾಗಮದಲ್ಲಿ ಹೇಳಿರುವ ಈ ಅಷ್ಟಾವರಣಗಳು ಪೂಜೆಗೆ ಸಂಬಂಧಿಸಿದ ಭಸ್ಮ-ರುದ್ರಾಕ್ಷಿಗಳಾಗಿವೆ, ತೀರ್ಥ-ಪ್ರಸಾದಗಳಾಗಿವೆ. ಆದರೆ ಬಸವಾದಿ ಶರಣರು ಕಟ್ಟಿಕೊಂಡ ಅಷ್ಟಾವರಣಗಳು ಹೊರಗೆ ಕಾಣುವ ವಸ್ತುಗಳಾಗಿರದೆ, ಒಳಗಡೆ ಬೆಳೆದು ನಿಲ್ಲುವ ಸಾಧ್ಯತೆಗಳಾಗಿವೆ. ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಗುರು ಹೊರಗಿರದೆ, ಒಳಗಿನ ಅರಿವಾಗಿ ಬೆಳೆಯುತ್ತದೆ, ಲಿಂಗ ಹೊರಗಿರದೆ ಒಳಗಿನ ಆಚಾರವಾಗಿ ಬೆಳೆಯುತ್ತದೆ ಅದೇ ರೀತಿ ಜಂಗಮ ಹೊರಗಿರದೆ, ಒಳಗಿನ ಅನುಭಾವವಾಗಿ ಬೆಳೆದುನಿಲ್ಲುತ್ತದೆ.

ಜ್ಞಾನಾಗಮದಲ್ಲಿ ಹೇಳಿದ ಅಷ್ಟಾವರಣಗಳನ್ನೇ ನಂತರ 15 ನೇ ಶತಮಾನದಲ್ಲಿ ರಚನೆಯಾದ ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಲಾಗಿದೆ.

“ಯಥಾಗುರೌ ಯಥಾಲಿಂಗೇ ಭಕ್ತಿಮಾನ್ ಪರಿವರ್ತತೇ
ಜಂಗಮೇ ಚ ತಥಾ ನಿತ್ಯಂ ಭಕ್ತಿಂ ಕುರ್ಯಾದ್ವಿಚಕ್ಷಣಃ
ಏಕಏವ ಶಿವಃ ಸಾಕ್ಷಾತ್ ಸರ್ವಾನುಗ್ರಹಕಾರಕಃ
ಗುರುಜಂಗಮ ಲಿಂಗತ್ಮಾವರ್ತತೇ ಭುಕ್ತಿಮುಕ್ತಿದಃ ||”
-ಸಿದ್ಧಾಂಥ ಶಿಖಾಮಣಿ (-Iಘಿ, 58-59)

(ಪ್ರಕಟನೆ:- ಜಗದ್ಗುರು ಶ್ರೀ ಶಿವರಾತ್ರೇಶ್ವರ ಗ್ರಂಥಮಾಲೆ, ಮೈಸೂರು, 2004)

ಹೀಗೆ ಶಿವಾಗಮಗಳಲ್ಲಿ ಹೇಳಿರುವ ಅಷ್ಟಾವರಣಗಳ ಪ್ರಸ್ತಾಪವೇ 13ನೇ ಶತಮಾನದಲ್ಲಿ ರಚನೆಯಾದ ಸಿದ್ಧಾಂತ ಶಿವಾಮಣಿಯಲ್ಲಿ ಉಲ್ಲೇಖವಾಗಿದೆ. ಇವೇ ಅಷ್ಟಾವರಣಗಳನ್ನು ನಂತರದಲ್ಲಿ ಹುಟ್ಟಿಕೊಂಡ ವೀರಶೈವ ಧರ್ಮದಲ್ಲಿ ಅಳವಡಿಸಲಾಗಿದೆ. ಶೈವ-ವೀರಶೈವ ಧರ್ಮಗಳಲ್ಲಿ ಪ್ರಸ್ತಾಪವಾಗಿರುವ ಅಷ್ಟಾವರಣಗಳಿಗೂ, ಬಸವಾದಿ ಶರಣರಿಂದ 12ನೇ ಶತಮಾನದಲ್ಲಿ ಹುಟ್ಟಿದ ಅಷ್ಟಾವರಣಗಳಿಗೂ ತುಂಬ ವ್ಯತ್ಯಾಸವಿದೆ. ವೀರಶೈವಧರ್ಮದಲ್ಲಿ ಹೇಳಿರುವ ಅಷ್ಟಾವರಣಗಳಲ್ಲಿ ಹೊರಗೆ ಕಾಣುವ ದೀಕ್ಷಾಗುರು, ಮೋಕ್ಷಗುರು ಮುಖ್ಯರಾಗುತ್ತಾರೆ. ಅವರಿಗೆ ಇಷ್ಟಲಿಂಗ-ಸ್ಥಾವರಲಿಂಗ ಮುಖ್ಯವಾಗುತ್ತವೆ. ಜಾತಿಜಂಗಮ ಅಷ್ಟಾವರಣದ ಜಂಗಮನಾಗಿ ಕಾಣಿಸಿಕೊಂಡಿದ್ದಾನೆ.

ಶೈವಧರ್ಮದ ಅಷ್ಟಾವರಣಗಳಲ್ಲಿ ಹೊರಗಿನ ಪೂಜೆಗೆ ಮಹತ್ವ ನೀಡಲಾಗಿದೆ. ವಿಭೂತಿ ಧರಿಸುವುದು ರುದ್ರಾಕ್ಷಿ ಹಾಕಿಕೊಳ್ಳುವುದು, ಗುರುದೀಕ್ಷೆಪಡಿಯುವುದು, ಅನುಷ್ಠಾನಗೈಯುವುದು ಇಲ್ಲಿ ಮುಖ್ಯವಾಗುತ್ತದೆ. ದೀಕ್ಷೆಕೊಟ್ಟ ಗುರುವಿನ ಪಾದತೊಳೆದು ಕುಡಿಯುವ ತೀರ್ಥವೇ ಅವರ ಅಷ್ಟಾವರಣಗಳಲ್ಲಿ ಪಾದೋದಕವಾಗಿದೆ. ಸ್ಥಾವರಲಿಂಗಕ್ಕೆ ನೈವೇದ್ಯ ನೀಡಿ ನಂತರ ಊಟಮಾಡುವ ಅನ್ನವೇ ಪ್ರಸಾದವಾಗಿದೆ. ದೇವರ ಸ್ತುತಿ ಮಾಡುವುದೇ ಮಂತ್ರವಾಗಿದೆ. ಆದರೆ ಬಸವಾದಿ ಶರಣರು ಕಟ್ಟಿಕೊಂಡ ಅಷ್ಟಾವರಣಗಳು ಹೀಗೆ ಹೊರಗೆ ಕಾಣಿಸದೆ ಒಳಗಡೆಯೇ ನಡೆಯುವ ಸಾಧ್ಯತೆಗಳಾಗಿವೆ. 12ನೇ ಶತಮಾನದ ಬಸವಾದಿ ಶರಣರ ಪ್ರಭಾವ ಮುಂದೆ ಬಂದ ಕೆಲವು ವಚನಕಾರರ ಮೇಲಾಗಿದೆ. 16ನೇ ಶತಮಾನಾದ ಜೇವರ್ಗಿ ಷಣ್ಮಖಶಿವಯೋಗಿ 18ನೇ ಶತಮಾನದ ಕಡಕೋಳ ಮಡಿವಾಳಪ್ಪ ಮೊದಲಾದ ವಚನಕಾರರು ಶರಣರು ಹೇಳಿದ ಅಷ್ಟಾವರಣಗಳನ್ನೇ ಹೇಳಿದ್ದಾರೆ. 16-17ನೇ ಶತಮಾನದ ಕೆಲವು ವಚನಕಾರರು ವೀರಶೈವ ಧರ್ಮದಲ್ಲಿ ಕಾಣಿಸಿಕೊಂಡ ಅಷ್ಟಾವರಣಗಳ ಬಗೆಗೆ ಹೇಳಿದ್ದಾರೆ.

12ನೇ ಶತಮಾನದ ವಚನಕಾರರು ಹೇಳಿರುವ ಅಷ್ಟಾವರಣರಗಳು ವಿಶೇಷವಾಗಿವೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ. ಈ ಅಷ್ಟಾವರಣಗಳ ಬಗೆಗೆ ವಚನಕಾರರು ಹೊರ ಆವರಣಗಳ ಬಗೆಗೆ ಹೇಳುತ್ತಲೇ ಅವೆಲ್ಲವೂ ಒಳ ಆವರಣಗಳಾಗುತ್ತವೆಂದು ಸ್ಪಷ್ಟಪಡಿಸಿದ್ದಾರೆ. ಶೈವ-ವೀರಶೈವ ಧರ್ಮಗಳಲ್ಲಿ ಅಷ್ಟಾವರಣಗಳೆಂದರೆ ಹೊರಗೆ ಕಾಣುವ ಆವರಣಗಳೇ ಆಗಿವೆ. ಆದರೆ ಲಿಂಗಾಯತ ಧರ್ಮದಲ್ಲಿ ಅವು ಸಾಧಕನ ಪ್ರಾರಂಭ ಹಂತದಲ್ಲಿ ಹೊರಗೆ ಕಾಣಿಸಿ ಕೊಂಡರೂ, ಸಾಧನೆ ತೀವ್ರವಾದಂತೆ ಅವೆಲ್ಲಾ ತನ್ನೊಳಗಡೆ ಗೋಚರವಾಗುತ್ತವೆ. ಇಂತಹ ಅನೇಕ ಉದಾಹರಣೆಗಳನ್ನು ವಚನಗಳಲ್ಲಿ ಕಾಣಬಹುದಾಗಿದೆ.

ಗುರು:
ಅಷ್ಟಾವರಣಗಳಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ವೇದ-ಪುರಾಣ-ಆಗಮಗಳಲ್ಲಿ, ಇತರ ಧರ್ಮಗಳಲ್ಲಿ “ಗುರು ದೇವೋಭವಃ” ಎಂದು ಕರೆಯಲಾಗಿದೆ. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ವರ್ಣಿಸಿ ಹಾಡಲಾಗಿದೆ. ಈ ದೇಶದಲ್ಲಿ ವೈದಿಕ ಧರ್ಮವು ಶೈವಧರ್ಮದ ಮೇಲೆ ತನ್ನ ಆಚರಣೆಗಳನ್ನು ಹೇರಿತು. ಹೀಗಾಗಿ ಶೈವರಲ್ಲಿಯೂ ಯಜ್ಞ-ಯಾಗಗಳು ಪ್ರಾರಂಭವಾದವು, ಹೋಮ-ಹವನಗಳು ನಡೆಯತೊಡಗಿದವು. ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ಗುರುವಾಗುವ ಅಧಿಕಾರವಿರುವುದು ಬ್ರಾಹ್ಮಣನಿಗೆ ಮಾತ್ರ ಸಾಧ್ಯವಾಗಿತ್ತು. ಹೀಗಾಗಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರು ಮಾತ್ರ ಗುರುಸ್ಥಾನ ಪಡೆಯುತ್ತಿದ್ದರು. ಇತರ ಜಾತಿಗಳಲ್ಲಿ ಹುಟ್ಟಿದ ಎಷ್ಟೋ ಜನ ಗುರುಸ್ಥಾನಕ್ಕೆ ಅರ್ಹವಾದರೂ ಜಾತಿಯಾಧಾರಿತ ವ್ಯವಸ್ಥೆಯಲ್ಲಿ ಗುರುವಾಗಲು ಸಾಧ್ಯವಿರಲಿಲ್ಲ. ಹೀಗಾಗಿ ಶೈವಧರ್ಮಕ್ಕೆ ಪ್ರಾರಂಭದಲ್ಲಿ ಬ್ರಾಹ್ಮಣರೇ ಗುರುಗಳಾಗಿದ್ದರು, ನಂತರದಲ್ಲಿ ಜಾತಿಜಂಗಮರು (ಸ್ವಾಮಿಗಳು) ಗುರುಗಳಾದರು. 15ನೇ ಶತಮಾನದ ನಂತರ ಹೆಚ್ಚು ವ್ಯಾಪಕವಾಗಿ ಬೆಳೆದ ವೀರಶೈವ ಧರ್ಮದಲ್ಲಿ ಇಂದಿಗೂ ಜಾತಿಜಂಗಮರೇ ಗುರುಗಳಾಗಿದ್ದಾರೆ.

12ನೇ ಶತಮಾನದ ಶರಣರಲ್ಲಿ ಶೂದ್ರನಾಗಿದ್ದ ಅಲ್ಲಮಪ್ರಭು ಗುರುಸ್ಥಾನದಲ್ಲಿದ್ದ. ಹಿರಿಯ ವಚನಕಾರ ಮಾದಾರ ಚೆನ್ನಯ್ಯ ಗೋತ್ರ ಪುರುಷನಾಗಿದ್ದ. “ಬ್ರಾಹ್ಮಣ ಮಾತ್ರ ಗುರುವಾಗಲು ಸಾಧ್ಯ” ಎಂಬ ನಿಯಮವನ್ನು ಕಿತ್ತೊಗೆದ ಶರಣರು, ಅರ್ಹರಾದವರು ಯಾರು ಬೇಕಾದರೂ ಗುರುವಾಗಬಹುದೆಂದು ಹೇಳಿದರು ಮತ್ತು ಅದನ್ನು ಆಚರಣೆಗೆ ತಂದರು. ಹೀಗಾಗಿ ಶರಣರಿಂದ ಹುಟ್ಟಿದ ಲಿಂಗಾಯತ ಧರ್ಮದ ಗುರುವಿಗೂ, ಇತರ ಧರ್ಮಗಳಲ್ಲಿ ಕಾಣಿಸಿಕೊಳ್ಳುವ ಗುರುವಿಗೂ ತುಂಬ ವ್ಯತ್ಯಾಸವಿದೆ. ಇತರ ಧರ್ಮಗಳಲ್ಲಿ ಗುರುಸ್ಥಾನ ಹುಟ್ಟಿನಿಂದ ನಿರ್ಧರಿತವಾದರೆ, ಲಿಂಗಾಯತರಲ್ಲಿ ಅದು ಅರ್ಹತೆಯಿಂದ ಪ್ರಾಸ್ತವಾಗುತ್ತದೆ. ವಚನಚಳವಳಿಯ ಸಂದರ್ಭದಲ್ಲಿ ಸಿದ್ಧರಾಮನಿಗೆ ಲಿಂಗದೀಕ್ಷೆ ನೀಡಿದವರು ಚೆನ್ನಬಸವಣ್ಣ, ಈತ ವಯಸ್ಸಿನಿಂದ ಚಿಕ್ಕವ, ಜಾತಿಯಿಂದ ಜಂಗಮನಾಗಿರಲಿಲ್ಲ. ಅರ್ಹತೆಯಿಂದಲೇ ಬೆಳೆದು ನಿಂತಿದ್ದ. ಲಿಂಗಾಯತ ಧರ್ಮದ ಗುರು ಜಾತಿ ಬ್ರಾಹ್ಮಣನಾಗಿರಲಿಲ್ಲ, ಜಾತಿ ಜಂಗಮನೂ ಆಗಿರಲಿಲ್ಲವೆಂಬುದು ಕ್ರಾಂತಿಕಾರಕ ವಿಚಾರವಾಗಿದೆ. ಹೀಗಾಗಿ ಲಿಂಗಾಯತ ಧರ್ಮದಲ್ಲಿ ಬರುವ ಗುರುವಿಗೂ, ಇತರ ಧರ್ಮಗಳಲ್ಲಿ ಕಾಣ ಸಿಕೊಳ್ಳುವ ಗುರುವಿಗೂ ತುಂಬ ವ್ಯತ್ಯಾಸವಿದೆ.

“ಮಡಿಕೆಯ ಮಾಡುವಡೆ ಮಣ್ಣೆ ಮೊದಲು
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು
ಶಿವಪಥವನರಿವಡೆ ಗುರುಪಥವೆ ಮೊದಲು.....”
-ಬಸವಣ್ಣ (ಸ.ವ.ಸಂ.1, ವ:70)

ಬಸವಣ್ಣ ಇಲ್ಲಿ ಲೌಕಿಕ ಉದಾಹರಣೆಗಳ ಮೂಲಕ ಶಿವಪಥದ ದಾರಿಯನ್ನು ತೋರಿಸಿದ್ದಾರೆ. ಗಡಿಗೆ ಮಾಡಲು ಮಣ್ಣು ಮೊದಲುಬೇಕು, ತೊಡಿಗೆಮಾಡಲು ಹೊನ್ನು ಮೊದಲುಬೇಕು, ಅದೇ ರೀತಿ ಶಿವಪಥವರಿಯಲು ಗುರು ಮೊದಲು ಬೇಕು ಎಂದು ಹೇಳಿದ ಸರಳ ನುಡಿಯಲ್ಲಿ ಮಹತ್ವದ ವಿಚಾರವಡಗಿದೆ. ಇಲ್ಲಿ ಶಿವಪಥ ಅರಿಯಲು ಗುರುಪಥಬೇಕು. ಇದು ಬಹಳ ಮುಖ್ಯವಾಗಿದೆ. ಗುರುಪಥವೆಂದರೆ ಕೇವಲ ಗುರುವೊಬ್ಬ ಮಾತ್ರವಲ್ಲ. ಅಲ್ಲಿ ಒಂದು ಪಥವಿದೆ. ಪರಂಪರೆಯಿದೆ, ಪ್ರಕ್ರಿಯೆಯಿದೆ. ಇಂತಹ ಗುರುಪಥದಲ್ಲಿ ಸಾಧನೆ ಮಾಡಿದಾಗ ಹೊರಗಿನ ಗುರು ನೆಪಮಾತ್ರವಾಗಿ, ತನ್ನೊಳಗಿನ ಅರಿವೆಂಬ ಗುರು ಕಾಣಿಸಿಕೊಳ್ಳುತ್ತದೆ, ಆಗ ಗುರುಪಥದ ಅರ್ಥ ತೆರೆದುಕೊಳ್ಳುತ್ತದೆ. ಹೊರಗಿನ ಗುರು ದೀಕ್ಷೆಯ ಮೂಲಕ ಶಿಷ್ಯನಿಗೆ ಇಷ್ಟಲಿಂಗ ಕೊಡುತ್ತಾನೆ. ಇಷ್ಟಲಿಂಗಪೂಜೆ-ಧ್ಯಾನ-ಚಿಂತನೆಯ ಮೂಲಕ ಶಿಷ್ಯ ಗುರುವಾಗಿ ಬೆಳೆದುನಿಲ್ಲುತ್ತಾನೆ. ಆಗ ಆತನೊಳಗಡೆ ಇರುವ ಅರಿವೇ ಗುರುವಾಗಿ ಕಾಣಿಸಿಕೊಳ್ಳುತ್ತದೆ. ಆಗ ಗುರುವೆಂಬ ಹೊರಾವರಣ ಕಳಚಿ ಅರಿವೆಂಬ ಒಳ ಆವರಣ ಬೆಳೆದುನಿಲ್ಲುತ್ತದೆ.

“ಶಿಷ್ಯನೆಂಬ ವನಕ್ಕೆ ವಸಂತ ನೋಡಾ ಗುರು| ಶಿಷ್ಯನೆಂಬ ತಿಮಿರಕ್ಕೆ ಜ್ಯೋತಿ ನೋಡಾ ಗುರು” ಎಂದು ಸಿದ್ಧರಾಮ ಶಿವಯೋಗಿಗಳು ಗುರು ಮಹತ್ವವನ್ನು ಹೇಳಿದರೆ, “ಗುರುವೇ ಪರಶಿವನು, ಗುರುವಿನಿಂದಧಿಕ ದೈವವಿಲ್ಲ, ಗುರುವೇ ಕಲ್ಪವೃಕ್ಷ, ಕಾಮಧೇನು” ಎಂದು ಗಣದಾಸಿವೀರಣ್ಣ ಹೇಳಿದ್ದಾರೆ. “ಸತ್ಯವೇ ಗುರುವಾಗಿ ತೋರಿತು, ಚಿತ್ತವೇ ಲಿಂಗವಾಗಿ ತೋರಿತೆಂದು” ಕಡಕೋಳ ಮಡಿವಾಳಪ್ಪ ಹೇಳಿದ್ದಾರೆ. “ಗುರುವೇ ಪರಶಿವನಾಗಿದ್ದಾನೆ, ಗುರುಕೃಪೆಯಿಲ್ಲದವನ ಕರ್ಮಹರಿಯದು” ಎಂದು ಹೇಮಗಲ್ಲ ಹಂಪ ಹೇಳಿದ್ದಾರೆ.

“ಎನ್ನನರಿಯಿಸದಿರುವೆ, ಎನ್ನನರಿಯಿಸು ನಿನ್ನನರಿಯಿಸಬೇಡ
ಎನ್ನನರಿಯದವ ನಿನ್ನನರಿಯ
ಎನ್ನನರಿಯಿಸದೆ ನಿನ್ನನರಿಯಿಸಿದಡೆ
ನೀನೆನಗೆ ಗುರುವಲ್ಲ, ನಾ ನಿನಗೆ ಶಿಷ್ಯನಲ್ಲ
ಎನ್ನನರಿಯಿಸಿದಡೆ ನೀನೆನಗೆ ಗುರು, ನಾನಿನಗೆ ಶಿಷ್ಯ
ಮಸಣಪ್ರಿಯ ಗಜೇಶ್ವರಾ”
-ಗಜೇಶಮಸಣಯ್ಯಗಳ ಪುಣ್ಯ ಸ್ತ್ರೀ (ಸ.ವ.ಸಂ.5, ವ:764)

ಗಜೇಶಮಸಣ್ಣಯ್ಯನ ಪತ್ನಿ ಈ ವಚನದಲ್ಲಿ ಗುರುವಿಗೆ ಸವಾಲು ಹಾಕಿದ್ದಾಳೆ. ಗುರು ಇರುವುದು ಶಿಷ್ಯನಲ್ಲಿ ಅರಿವು ತುಂಬುವದಕ್ಕೆ, ಆದರೆ ಅನೇಕ ಗುರುಗಳು ಶಿಷ್ಯನಿಗೆ ಸರಿಯಾದ ತಿಳುವಳಿಕೆ ಕೊಡದೇ ಹೋದಾಗ ಅಂತವರು ಗುರುಗಳಲ್ಲವೆಂದು ಈ ಶರಣೆ ಹೇಳಿದ್ದಾಳೆ. ಬೇರೆ ಧರ್ಮಗಳಲ್ಲಿ ಗುರು ಬೇರೆ-ಶಿಷ್ಯ ಬೇರೆಯೆಂಬ ಭಾವನೆಯಿದೆ. ಏನಿದ್ದರೂ ಶಿಷ್ಯನಾದವ ಗುರುವಿನ ಗುಲಾಮನೇ ಆಗಿರುತ್ತಾನೆಂದು ನಂಬಿದ್ದ ವ್ಯವಸ್ಥೆಯಲ್ಲಿ ಗುರುವಿನ ಗುಲಾಮನಾಗುವ ಬದಲು, ಗುರುವಿನ ಸಮಾನನಾಗಬೇಕೆಂದು ಶರಣರು ತಿಳಿಸಿ ಹೇಳಿದ್ದಾರೆ. ಲಿಂಗಾಯತ ಧರ್ಮದಲ್ಲಿ ಶಿಷ್ಯನು, ಗುರುವಾಗಿ ಬೆಳೆಯುತ್ತಾನೆ. ಕಲಬುರಗಿ ಶ್ರೀ ಶರಣಬಸವೇಶ್ವರ ಗರ್ಭಗುಡಿಯಲ್ಲಿ ಜೋಡಿಮೂರ್ತಿಗಳಿವೆ. ಇವೇ ಕ್ಯಾಲೆಂಡರಗಳಲ್ಲಿ ಮುದ್ರಣವಾಗಿವೆ. ಈ ಜೋಡಿಮೂರ್ತಿಗಳು ಬೇರೆ ಯಾರವೂ ಆಗಿರದೆ ಗುರ-ಶಿಷ್ಯರ ಮೂರ್ತಿಗಳಾಗಿವೆ. ಗುರು ತನ್ನ ವಿನೋದಕ್ಕಾಗಿ ಅಷ್ಟಾವರಣಗಳಾಗಿ ಕಾಣಿಸಿಕೊಂಡಿದ್ದಾನೆಂದು ಹೇಳಿರುವ ಅಕ್ಕಮಹಾದೇವಿಯು ಗುರುವಿನ ಕರುಣದಿಂದ ಲಿಂಗವಕಂಡೆ, ಜಂಗಮನ ಕಂಡೆಯೆಂದು ಹೇಳಿದ್ದಾರೆ.

ಲಿಂಗ:
ಅಷ್ಟಾವರಣಗಳಲ್ಲಿ ಲಿಂಗಕ್ಕೆ ಮಹತ್ವದ ಸ್ಥಾನವಿದೆ. ಶೈವರು ಸ್ಥಾವರಲಿಂಗವನ್ನು ಪೂಜಿಸುತ್ತಿದ್ದರು. ಬಸವಾದಿ ಶರಣರು ಇಷ್ಟಲಿಂಗದ ಪರಿಕಲ್ಪನೆಯನ್ನು ಮೊದಲ ಬಾರಿಗೆ ಶೋಧಿಸಿದರು. ಹಿಂದೆ ಶೈವರಲ್ಲಿ ಅದೂ ಪಾಶುಪತರು ಚರಲಿಂಗವನ್ನು ಪೂಜಿಸುತ್ತಿದ್ದರು. ಚರಲಿಂಗವನ್ನು ಕರಸ್ಥಲದಲ್ಲಿಟ್ಟು ಪೂಜಿಸುತ್ತಿರಲಿಲ್ಲ, ಅದನ್ನು ಗದ್ದುಗೆಯ ಮೇಲಿಟ್ಟು ಪೂಜಿಸುತ್ತಿದ್ದರು. ಅವರು ಅದನ್ನು ಕೊರಳಲ್ಲಿ ಧರಿಸುತ್ತಿರಲಿಲ್ಲ. ಪೂಜೆಯ ನಂತರ ಕೆಲವರು ಅದನ್ನು ಸಣ್ಣಪೆಟ್ಟಿಗೆಯೊಳಗಿಡುತ್ತಿದ್ದರು. ಹೀಗೆ ಲಿಂಗವೆಂಬುದು ಒಂದೇ ರೀತಿಯದ್ದಾಗಿರಲಿಲ್ಲ, ಅವರ ಪೂಜೆಯ ವಿಧಾನವೂ ಒಂದೇಯಾಗಿರಲಿಲ್ಲ. ಶೈವರು ಸ್ಥಾವರಲಿಂಗ, ಚರಲಿಂಗವನ್ನು ಪೂಜಿಸಿದರೆ, 15ನೇ ಶತಮಾನದಲ್ಲಿ ಬಂದ ವೀರಶೈವರು ಚರಲಿಂಗ ಮತ್ತು ಇಷ್ಟಲಿಂಗಗಳೆರಡನ್ನೂ ಪೂಜಿಸತೊಡಗಿದರು. ಆದರೆ 12ನೇ ಶತಮಾನದ ಶರಣರು ಮತ್ತು ನಂತರದ ಲಿಂಗಾಯತ ಧರ್ಮದ ಅನುಯಾಯಿಗಳು ಕೇವಲ ಇಷ್ಟಲಿಂಗವನ್ನು ಮಾತ್ರ ಪೂಜಿಸಿದರು. ಹೀಗಾಗಿ ಇತರ ಧರ್ಮದವರ ಲಿಂಗಪೂಜೆಗೂ, ಶರಣರ ಲಿಂಗಪೂಜೆಗೂ ತುಂಬ ವ್ಯತ್ಯಾಸವಿದೆ.

ಶೈವರಲ್ಲಿ ಸ್ಥಾವರಲಿಂಗಗಳ ಪೂಜೆಯಿರುವಂತೆ, ಉದ್ಭವಲಿಂಗಗಳ ಪೂಜೆಯೂ ಇದೆ. ಲಿಂಗದಾಕರದಲ್ಲಿದ್ದ ಶಿಲೆಗಳೇ ಉದ್ಭವಲಿಂಗಗಳು. ಇಂತಹ ಶಿಲೆಯ ಭಾಗಗಳನ್ನು ಲಿಂಗಗಳ ಆಕಾರ ಮಾಡಿ ಪೂಜಿಸುವ ಪರಂಪರೆಯೂ ಶೈವರಲ್ಲಿತ್ತು. ವೀರಶೈವ ಧರ್ಮವನ್ನು ಪ್ರತಿಪಾದಿಸಿದ “ಸಿದ್ಧಾಂತ ಶಿಖಾಮಣಿ”ಯಲ್ಲಿ ಇಷ್ಟಲಿಂಗಕ್ಕೆ ಕರಸ್ಥಲ ಲಿಂಗವೆಂದು ಕರೆಯಲಾಗಿದೆ. ಕರಸ್ಥಲ ಲಿಂಗಪೂಜೆಯೇ ಶ್ರೇಷ್ಠವೆಂದು ಹೇಳಲಾಗಿದೆ. ಋಗ್ವೇದದಲ್ಲಿಯೇ ಇಷ್ಟಲಿಂಗದ ಬಗೆಗೆ ಹೇಳಲಾಗಿದೆಯೆಂದು ಆ ಶ್ಲೋಕವನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಆ ಶ್ಲೋಕ ಹೀಗಿದೆ:

“ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನಃ”
-ಋಗ್ವೇದ 10-60-12,7

ಇಲ್ಲಿ ಇಷ್ಟಲಿಂಗದ ಪ್ರಸ್ತಾಪವಿಲ್ಲ. ಅಪಾರ ಶಕ್ತಿಯುಳ್ಳ ಪರಶಿವನೇ ನನ್ನ ಹಸ್ತದಲ್ಲಿ ವಿರಾಜಮಾನನಾಗಿರುವೆಯೆಂದರೆ, ಇದು ಹಸ್ತ-ಮಸ್ತಕದ ವಿಚಾರವೇ ಹೊರತು ಇಷ್ಟಲಿಂಗದ ಪ್ರಸ್ತಾಪವಲ್ಲ. ಹೀಗಾಗಿ ಬಸವಾದಿ ಶರಣರು ಬರುವದಕ್ಕಿಂತ ಮೊದಲು ಇಷ್ಟಲಿಂಗದ ಪರಿಕಲ್ಪನೆ ಎಲ್ಲಿಯೂ ಅಧಿಕೃತವಾಗಿ ದಾಖಲಾಗಿಲ್ಲ. ಆದುದರಿಂದ ಇಷ್ಟಲಿಂಗದ ವೈಜ್ಞಾನಿಕ ಪರಿಕಲ್ಪನೆಯನ್ನು ಬಸವಾದಿ ಶರಣರು ಮೊದಲ ಬಾರಿಗೆ ಕಟ್ಟಿಕೊಟ್ಟರು.

“ಇಷ್ಟಲಿಂಗ” ಪದದಲ್ಲಿ ಎರಡು ಪದಗಳು ಕೂಡಿಕೊಂಡಿವೆ. “ಇಷ್ಟ” ವೆಂದರೆ ಪ್ರಿಯವಾದದ್ದು ಎಂಬ ಒಂದು ಅರ್ಥವಿದ್ದರೆ, ಪರಮಾತ್ಮ ಎಂಬ ಇನ್ನೊಂದು ಅರ್ಥವಿದೆ. ಲಿಂಗ ಎಂದರೆ ಚಿಹ್ನೆ, ಗುರುತು ಎಂಬರ್ಥಗಳಿವೆ. ಹೀಗಾಗಿ ಇಲ್ಲಿ ಇಷ್ಟಲಿಂಗವೆಂದರೆ ಪರಮಾತ್ಮನ ಚಿಹ್ನೆಯೇ ಆಗಿದೆ. ಆ ಪರಮಾತ್ಮನು, ಶಿವ ಅಥವಾ ರುದ್ರನಾಗಿರದೆ, ಆ ಪರಮಾತ್ಮನು, ಆತ್ಮನ ಸಾಧನೆಯ ಪ್ರತೀಕವಾಗಿದ್ದಾನೆ.

ಲಿಂಗಾಯತ ಧರ್ಮದಲ್ಲಿ ಕಾಣಿಸಿಕೊಳ್ಳುವ ಇಷ್ಟಲಿಂಗವು, ದೀಕ್ಷಾ ಸಂದರ್ಭದಲ್ಲಿ ಗುರುವು ಕೊಡುವ ಕರಸ್ಥಲ ಲಿಂಗವಾಗಿದ್ದರೂ, ಸಾಧಕ ಬೆಳೆದಂತೆಲ್ಲ ಇದು ತನ್ನೊಳಗಡೆಯೇ ಇರುವ ಪ್ರಾಣಲಿಂಗವಾಗಿ ಪರಿವರ್ತನೆಯಾಗುತ್ತದೆ. ಅದೇ ಮುಂದೆ ಜ್ಞಾನಲಿಂಗವಾಗಿ ಬೆಳೆಯುತ್ತದೆ. ಹೀಗೆ ಕರಸ್ಥಲಲಿಂಗವು, ಪ್ರಾಣಲಿಂಗವಾಗಿ-ಜ್ಞಾನಲಿಂಗವಾಗಿ ಬೆಳೆದುನಿಂತಿರುವುದು ಕೇವಲ ಲಿಂಗಾಯತ ಧರ್ಮದಲ್ಲಿ ಮಾತ್ರವೆಂಬುವದನ್ನು ಗಮನಿಸಬೇಕು.

ಶೈವರ ಸ್ಥಾವರಲಿಂಗ ಪೂಜೆಯ ನಂತರ ಕಾಲಕ್ರಮೇಣ ಕೆಲವು ಬದಲಾವಣೆಗಳಾದವು. ತನ್ನ ದೇವರು ತನ್ನೊಂದಿಗೇ ಇರಬೇಕೆಂಬ ಭಾವನೆ ಬಂದ ನಂತರ ಕೆಲ ಭಕ್ತರು ಸ್ಥಾವರಲಿಂಗಗಳನ್ನು ಹೆಗಲ ಮೇಲೆ, ತಲೆಯ ಮೇಲೆ ಹೊತ್ತು ಕೊಂಡು ಹೋದರು, ಆಗ ಅವು ಚರಲಿಂಗಗಳಾದವು. ನಂತರದಲ್ಲಿ ಅವುಗಳ ಗಾತ್ರವನ್ನು ತಗ್ಗಿಸಿ, ಭುಜ, ತಲೆ, ಹೊಟ್ಟೆ ಮೊದಲಾದ ಅಂಗಗಳ ಮೇಲೆ ಬಟ್ಟೆಯಲ್ಲಿ ಸುತ್ತಿ ಕಟ್ಟಿಕೊಳ್ಳುವ ಪರಿಪಾಠ ನಡೆಯಿತು. ಇಂತಹ ಚರಲಿಂಗಗಳ ಉಲ್ಲೇಖವನ್ನು ಗಮನಿಸಿದ ಕೆಲವರು, ಬಸವಣ್ಣನವರಿಗಿಂತ ಮೊದಲೇ ಇಷ್ಟಲಿಂಗದ ಪೂಜಾವಿಧಾನ ಇತ್ತೆಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ಇಷ್ಟಲಿಂಗದ ಪರಿಕಲ್ಪನೆ ಮಾತ್ರ ಬಸವಾದಿ ಶರಣರಿಂದಲೇ ಹುಟ್ಟಿಕೊಂಡಿತು.

“ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ
ಆ ಇಷ್ಟಲಿಂಗದಲ್ಲಿ ಭಾವ ಮನೋವೇದ್ಯವಾದಲ್ಲಿ ಸ್ವಾಯತಲಿಂಗ.
ಆ ಇಷ್ಟಲಿಂಗದ ಸುಖವು, ಅನುಪಮ ಪರಿಣಾಮ ಬೀರಿದಲ್ಲಿ ಸನ್ನಿಹಿತಲಿಂಗ
ಇಂತು, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳೆಂಬ ಲಿಂಗತ್ರಯಂಗಳು
ತನುತ್ರಯಗಳ ಮೇಲೆ ಆಯತ, ಸ್ವಾಯತ, ಸನ್ನಹಿತಂಗಳಾದ
ಶರಣನ ಪಂಚಭೂತಂಗಗಳಳಿದು ಲಿಂಗ ತತ್ವಂಗಳಾಗಿ
ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ
ಷಡಂಗಯೋಗವಾದುದು ಕಾಣಾ ಗುಹೇಶ್ವರಾ”
-ಅಲ್ಲಮಪ್ರಭು (ಸ.ವ.ಸಂ2, ವ:947)

ಅಲ್ಲಮಪ್ರಭು ಈ ವಚನದಲ್ಲಿ ಇಷ್ಟಲಿಂಗದ ಮೂಲಕ ಹುಟ್ಟಿಕೊಳ್ಳುವ ಆಯತಲಿಂಗ, ಸ್ವಾಯತಲಿಂಗ, ಸನ್ನಿಹಿತಲಿಂಗಗಳ ಬಗೆಗೆ ಹೇಳಿದ್ದಾರೆ. ಲಿಂಗತ್ರಯಗಳು ತನುತ್ರಯಗಳ ಮೇಲೆ ಆಯತ, ಸ್ವಾಯತ, ಸನ್ನಿಹಿತವಾದಾಗ ಪಂಚಭೂತಗಳಿಂದ ಲಿಂಗತತ್ವಗಳಾಗಿ ಪರಮಾತ್ಮನ ರೂಪದಲ್ಲಿ ಕಾಣಿಸಿಕೊಳ್ಳುತ್ತವೆಯೆಂದು ಹೇಳಿದ್ದಾರೆ. ಕೇವಲ ಇಷ್ಟಲಿಂಗ ಪೂಜೆಯಿಂದ ಮಾತ್ರ ಎಲ್ಲವೂ ಸಾಧ್ಯವಾಗುವುದಿಲ್ಲ, ಇಷ್ಟಲಿಂಗಕ್ಕೆ ಮನವನರ್ಪಿಸಿ ಭಾವಲಿಂಗದ ಮೂಲಕ ಜ್ಞಾನಲಿಂಗವನ್ನು ಕಂಡುಕೊಂಡಾಗ ಆತ್ಮ-ಪರಮಾತ್ಮನಾಗುವ ಬೆಳವಣೆಗೆ ಸಾಧ್ಯವಾಗುತ್ತದೆ. ಕೇವಲ ಪೂಜೆಯಿಂದೇನೂ ಆಗದೆಂದು ಅಲ್ಲಮಪ್ರಭು ಈ ಕೆಳಗಿನ ವಚನದಲ್ಲಿ ಹೇಳಿದ್ದಾರೆ.

“ಇಷ್ಟಲಿಂಗವ ಪೂಜಿಸಿದರಾಗಿ ನಿಷ್ಠೆ ನೆಲೆಗೊಳ್ಳದು,
ಬಹುಲಿಂಗವ ಪೂಜಿಸಿ ಭ್ರಮಿತರಾದರು
ಅನ್ಯಲಿಂಗವ ಪೂಜಿಸಿ ಭಿನ್ನರಾದರು
ಸ್ಥಾವರಲಿಂಗವ ಪೂಜಿಸಿ ಸಾವಿಂಗೊಳಗಾದರು
ಬಳ್ಳಲಿಂಗವೆಂದು ಪೂಜಿಸಿ ಏನುವನರಿಯದೆ ಹೋದರು
ಗುಹೇಶ್ವರನೆಂಬ ಲಿಂಗವ ಪೂಜಿಸಿ
ನಿಮ್ಮ ಶರಣರು ಅಲ್ಲಿಗಲ್ಲದೆ ಇಲ್ಲಿಗಲ್ಲದೆ ಹೋದರು ನೋಡಾ”
-ಅಲ್ಲಮಪ್ರಭು (ಸ.ವ.ಸಂ.2, ವ:969)

ಹೀಗೆ ಈ ವಚನದಲ್ಲಿ ಅಲ್ಲಮಪ್ರಭು ವಿವಿಧ ಬಗೆಯ ಲಿಂಗಪೂಜೆಗಳನ್ನು ಪ್ರಸ್ತಾಪಿಸಿ, ಅವುಗಳನ್ನು ಕೇವಲ ಪೂಜೆ ಮಾಡುವುದರಿಂದ ಫಲಸಿಗುವುದಿಲ್ಲ, ಎಲ್ಲವನ್ನೂ ಅರಿತು ಆಚರಿಸಬೇಕಾಗುತ್ತದೆಂದು ಹೇಳಿದ್ದಾರೆ. ಇಷ್ಟಲಿಂಗದ ಕೂಟವನ್ನು, ಪ್ರಾಣಲಿಂಗದ ಸಂಗವನ್ನು, ಭಾವಲಿಂಗದ ಸಮರಸವನ್ನು ತಿಳಿದುಕೊಳ್ಳಬೇಕಾದರೆ ಅನುಮಿಶ ಗುರುವಿನಿಂದ ಮಾತ್ರ ಸಾಧ್ಯವೆಂದು ಪ್ರಭು ಹೇಳಿದ್ದಾರೆ.

“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕೆ ಬಂದು ಚುಳಿಕಾದಿರಯ್ಯಾ”
-ಬಸವಣ್ಣ (ಸ.ವ.ಸಂ.1, ವ:744)

ಈ ವಚನದಲ್ಲಿ ಲಿಂಗದ ವಿರಾಟ ಸ್ವರೂಪವನ್ನು ಕೂಡಲಸಂಗಮದೇವಯ್ಯನ ಮೂಲಕ ವಿವರಿಸಲಾಗಿದೆ. ಅಗಮ್ಯ-ಅಗೋಚರ-ಅಪ್ರತಿಮವಾದ ಲಿಂಗವು ಕೂಡಲಸಂಗಮನ ಮೂಲಕ ಕರಸ್ಥಲಕೆ ಬಂದು ಕೈತುಂಬಿ ಕೊಂಡದ್ದನ್ನು ಹೇಳಲಾಗಿದೆ. ಹೃದಯದಲ್ಲಿದ್ದ ಶ್ರೇಷ್ಠ ಚಿದ್ಬೆಳಗು, ಹಸ್ತ-ಮಸ್ತಕ ಸಂಯೋಗದಿಂದ ಮಹಾಬೆಳಕಾಗುತ್ತದೆ. ಆ ಮಹಾಬೆಳಕನ್ನು ಭಾವದೊಳಗೆ ತುಂಬಿಕೊಂಡಾಗ ಅದು ಭಾವಲಿಂಗವಾಗುತ್ತದೆ. ಕಣ್ಣುಗಳಲ್ಲಿರುವ ಬೆಳಗನ್ನು ಕರಸ್ಥಲಕ್ಕೆ ತಂದಾಗ ಅದು ಇಷ್ಟಲಿಂಗದ ಮೂಲಕ, ಆತ್ಮನೊಳಗಿರುವ ಪರಮಾತ್ಮನ ದರ್ಶನವಾಗುತ್ತದೆಂದು ಬಸವಾದಿ ಶರಣರು ವಿವರಿಸಿದ್ದಾರೆ.

ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗವೆಂಬ ಭೇದ ಈ ಲಿಂಗಗಳಿಗಿಲ್ಲ. ಕರಸ್ಥಲದಲ್ಲಿ, ಮನಸ್ಥಲದಲ್ಲಿ, ಭಾವಸ್ಥಲದಲ್ಲಿ ವೇದ್ಯವಾದ ಬಳಿಕ ಸರ್ವಾಂಗಲಿಂಗವಾಗುತ್ತದೆಂದು ಬಸವಣ್ಣ ತನ್ನ ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ. ಸಾಕಾರದ ಮೂಲಕ ನಿರಾಕಾರವನ್ನು ಕಾಣುವ ಪ್ರಯತ್ನ ಇಲ್ಲಿದೆ. ನಿರಾಕಾರವಾದ ಆತ್ಮ, ಜೀವ, ಭಾವ ಮುಂತಾದವುಗಳನ್ನು ಇಷ್ಟಲಿಂಗದಲ್ಲಿಯೇ ಕಾಣುವುದು ಸೂಕ್ತವೆಂದು ಹೇಳಲಾಗಿದೆ. ಇಲ್ಲಿ ಪರಮಾತ್ಮನೇ ತನ್ನಕರಸ್ಥಲಕೆ ಬಂದು ಚುಳುಕಾದನೆಂದು ಹೇಳುವ ಮಾತು ಯಾವ ಧರ್ಮದಲ್ಲಿಯೂ ಸಿಗದು.

“ಕಾಯದ ಕರಸ್ಥಲಕೆ ಇಷ್ಟಲಿಂಗ ಸಾಯತವಿಲ್ಲದಿದ್ದಡೆ,
ನಿರವಯವಾದ ಜ್ಞಾನಯೋಗ ಕೂಟ ಸಾಧ್ಯವಾಗದು”

ಎಂದು ಹೇಳಿರುವ, ಚೆನ್ನಬಸವಣ್ಣ ತನ್ನ ಇನ್ನೊಂದು ವಚನದಲ್ಲಿ ಲಿಂಗ ಪೂಜೆಯ ವಿಧಾನವನ್ನು ತಿಳಿಸಿದ್ದಾರೆ.

“ಲಿಂಗವೆಂದು ಪೂಜಿಸಿದರೆ ಅಂಗದೊಡನೆ ಉಳಿಯಿತ್ತು
ಅಂಗದೊಡನೆ ಉಳಿದ ಲಿಂಗವ ಹಿಂಗಿ ಪೂಜಿಸಬೇಕು
ಹಿಂಗಿದ ಪೂಜಿಯನರಿದಡೆ ಪ್ರಾಣಲಿಂಗದ ಆಪ್ಯಾಯವನರಿಯಬೇಕು
ಪ್ರಾಣಲಿಂಗದಾಪ್ಯಾಯನವನರಿದಡೆ ಕೂಡಲಚೆನ್ನಸಂಗಯ್ಯಾನಲ್ಲಿ ಲಿಂಗೈಕ್ಯನಿಸುವ”
-ಚೆನ್ನಬಸವಣ್ಣ (ಸ.ವ.ಸಂ.3, ವ: 718)

ಈ ವಚನದಲ್ಲಿ ಚೆನ್ನಬಸವಣ್ಣನು ಅಂಗ-ಲಿಂಗ ಸಂಬಂಧವನ್ನು ಹೇಳಿದ್ದಾನೆ. ಅಂಗದೊಡನೆ ಉಳಿದ ಲಿಂಗವ ಹಿಂಗಿ ಪೂಜಿಸಬೇಕೆಂಬುದು ಮಹತ್ವದ ವಿಚಾರವಾಗಿದೆ. ಅಂಗವೇ ಲಿಂಗ, ಲಿಂಗವೇ ಅಂಗ ಎಂಬ ಮಾತು ಹುಸಿಯೆಂದು ಹೇಳಿರುವ ಚೆನ್ನಬಸವಣ್ಣ ಲಿಂಗವೆಂಬವಂಗೆ ಲಿಂಗವಿಲ್ಲ, ಜಂಗಮವೆಂಬವಂಗೆ ಜಂಗಮವಿಲ್ಲವೆಂದು ಹೇಳಿದ್ದಾರೆ. ಮತ್ತೆ ಮುಂದುವರಿದು ಲಿಂಗವೆನ್ನದವರಿಗೆ ಲಿಂಗವುಂಟು, ಜಂಗಮವೆನ್ನದವಂಗೆ ಜಂಗಮ ಉಂಟೆಂದು ತಿಳಿಸಿದ್ದಾರೆ.

“ಲಿಂಗ ಸಂಬಂಧ ಸೀಮೆ ನೋಡಾ, ಶರಣ ಸಂಬಂಧ ನಿಸ್ಸೀಮೆ ನೋಡಾ
ಲಿಂಗವು ಗಮ್ಯ, ಶರಣ ಅಗಮ್ಯ ನೋಡಾ
‘ಯದ್ಭಾವಂ ತದ್ಭವತಿ’ ಯೆಂಬುದಿಲ್ಲಾಗಿ
ಆದಿಲಿಂಗ, ಅನಾದಿಶರಣ ಕೂಡಲಚೆನ್ನಸಂಗಾ”
-ಚೆನ್ನಬಸವಣ್ಣ (ಸ.ವ.ಸಂ.3, ವ:537)

ಲಿಂಗಸಂಬಂಧಕ್ಕಿಂತ ಶರಣಸಂಬಂಧ ದೊಡ್ಡದೆಂದು ಚೆನ್ನಬಸವಣ್ಣ ಇಲ್ಲಿ ಹೇಳಿದ್ದಾರೆ. ಲಿಂಗ ಗಮ್ಯವಾದರೆ, ಶರಣ ಅಗಮ್ಯನಾಗಿದ್ದಾನೆಂದು ಹೇಳಿರುವ ಚೆನ್ನಬಸವಣ್ಣ ಲಿಂಗವೇ ಆದಿ, ಶರಣನೇ ಅನಾದಿಯೆಂದು ಸ್ಪಷ್ಟಪಡಿಸಿದ್ದಾರೆ. ಈ ಗುರು-ಲಿಂಗ-ಜಂಗಮದ ಮಹತ್ವವನ್ನು ಬಸವಣ್ಣ ಮಾತ್ರ ಬಲ್ಲನೆಂದು ಹೇಳಿದ್ದಾರೆ.

ಲಿಂಗಾಯತನಿಗೆ ಇಷ್ಟಲಿಂಗವೇ ಸರ್ವಸ್ವ ಇಂತಹ ಕಟ್ಟಿದ ಲಿಂಗವನ್ನು ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗುವವರಿಗೆ ಮೆಟ್ಟು ತೆಗೆದುಕೊಂಡು ಹೊಡೆಯೆಂದು ಅಂಬಿಗರ ಚೌಡಯ್ಯ ಹೇಳಿದ್ದಾರೆ. ಇಷ್ಟಲಿಂಗವ ಬಿಟ್ಟು, ಸ್ಥಾವರಲಿಂಗವ ಪೂಜಿಸುವದೆಂದರೆ ಗಂಡನನ್ನು ಬಿಟ್ಟು, ಮಿಂಡನನ್ನು ಕೂಡಿದಂತೆಂದು ಶರಣರು ಇಷ್ಟಲಿಂಗದ ಮಹತ್ವವನ್ನು ಕಟುವಾಗಿಯೇ ತಿಳಿಸಿದ್ದಾರೆ.

“ಏನೆಂಬೆ ಏನೆಂಬೆ ಕೊಟ್ಟ ದೇವರಂದವ
ಮನದಲ್ಲಿ ಘನಲಿಂಗನಾಯಿತ್ತು, ಧ್ಯಾನದಲ್ಲಿ ಭಾವಲಿಂಗವಾಯಿತ್ತು
ನೇತ್ರದಲ್ಲಿ ಶಿವಲಿಂಗವಾಯಿತ್ತು, ಹೃದಯದಲ್ಲಿ ಮಹಾಲಿಂಗವಾಯಿತ್ತು
ಎನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಅಳವಟ್ಟಿತ್ತು......”
-ಸಿದ್ಧರಾಮ (ಸ.ವ.ಸಂ.4, ವ:959)

ವಿವಿಧ ಲಿಂಗಗಳ ಪರಿಣಾಮವನ್ನು ಹೇಳಿರುವ ಶಿವಯೋಗಿ ಸಿದ್ಧರಾಮ ತನ್ನ ಕರಸ್ಥಲದಲ್ಲಿದ್ದ ಇಷ್ಟಲಿಂಗದ ಮಹತ್ವವನ್ನು ಕುರಿತು ವಿವಿಧ ರೀತಿಯಲ್ಲಿ ತಿಳಿಸಿದ್ದಾರೆ. ತನ್ನ ಗುರು ಚೆನ್ನಬಸವಣ್ಣನೆಂದು ಹೇಳಿಕೊಂಡಿರುವ ಸಿದ್ಧರಾಮ “ಲಿಂಗವ ಪೂಜಿಸಿ ಅಂಗವ ನಿರ್ವಯಲ ಮಾಡೆಹೆನೆಂಬವನ ಮುಖವ ನೋಡಲಾಗದೆಂದು” ಹೇಳಿದ್ದಾರೆ.

“ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು
ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು
ಇದಕ್ಕೆ ಗುರುವಿನ ಹಂಗೇಕೆ? ಲಿಂಗದ ಪೂಜೆ ಏಕೆ? ಸಮಯದ ಹಂಗೇಕೆ?
ತನ್ನ ತಾನರಿದವಂಗೆ ಏಣಾಂಕನ ಶರಣರ ಸಂಗವೇಕೆ?”
-ಅಮುಗೆ ರಾಯಮ್ಮ (ಸ.ವ.ಸಂ.5, ವ:621)

ಅಮುಗೆರಾಯಮ್ಮ ಈ ವಚನದಲ್ಲಿ ಇಷ್ಟಲಿಂಗದ ಮಹತ್ವವನ್ನು ಕುರಿತು ಬೇರೆ ರೀತಿಯಲ್ಲಿ ಹೇಳಿದ್ದಾರೆ. “ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು” ಎಂಬ ರೂಪಕ ಅದ್ಭುತವಾಗಿ ಬೆಳೆದುನಿಂತಿದೆ. ಕೈಯಿಲ್ಲದವನಿಗೆ, ಕಾಲಿಲ್ಲದವನಿಗೆ ಕುದುರೆ ಹೇಗೆ ನಿರುಪಯೋಗಿಯೋ ಹಾಗೆ ಭಕ್ತಿ-ಜ್ಞಾನ-ವೈರಾಗ್ಯವಿಲ್ಲದವನಿಗೆ ಇಷ್ಟಲಿಂಗವೇಕೆ? ಎಂದು ಅಮುಗೆ ರಾಯಮ್ಮ ಕೇಳಿದ್ದಾರೆ.

“ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ
ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕಲ್ಲದೆ?”
-ಮೋಳಿಗೆಯ ಮಹಾದೇವಿ (ಸ.ವ.ಸಂ.5, ವ: 1145)

ಈ ವಚನದಲ್ಲಿ ಮೋಳಿಗೆಯ ಮಹಾದೇವಿ ಎಲ್ಲರಿಗೂ ತಿಳಿಯುವಂತಹ ಉದಾಹರಣೆಯ ಮೂಲಕ ಇಷ್ಟಲಿಂಗದ ಮಹತ್ವವನ್ನು ತಿಳಿಸಿದ್ದಾರೆ. ಯಾವುದೇ ಕುಸುಮವಿರಲಿ, ಆ ಕುಸುಮಕ್ಕೆ ವಾಸನೆ ಇರುತ್ತದೆಯೇ ಹೊರತು, ಆ ಗಿಡಕ್ಕೆ ವಾಸನೆ ಇರುವುದಿಲ್ಲ. ಅದೇರೀತಿ ಇಷ್ಟಲಿಂಗ-ಪ್ರಾಣಲಿಂಗಗಳ ಪರಿಕಲ್ಪನೆಯಾಗಿದೆಯೆಂದು ವಿವರಿಸಿದ್ದಾರೆ.

“ಹಾಲ ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?”
-ಆದಯ್ಯ (ಸ.ವ.ಸಂ.6, ವ: 1149)

ಆದಯ್ಯ ಈ ವಚನದಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಲಿಂಗದ ಮಹತ್ವವನ್ನು ತಿಳಿಸಿದ್ದಾರೆ. ಹಾಲಿನಲ್ಲಿಯೇ ಬೆಣ್ಣೆ ಇದೆ; ಹೀಗಾಗಿ ಜಾಣರು ಹಾಲು ಕಾಸಿ ಬೆಣ್ಣೆ ಮಾಡಿಕೊಳ್ಳುತ್ತಾರೆ. ಆದರೆ ತಿಳುವಳಿಕೆಯಿಲ್ಲದವರು ಹಾಲ ಹಿಡಿದು ಬೆಣ್ಣೆಯ ಹುಡುಕುತ್ತ ಹೋಗುತ್ತಾರೆ. ಅದೇರೀತಿ ಇಷ್ಟಲಿಂಗವ ಧರಿಸಿದ ಬಳಿಕ ಪುಣ್ಯತೀರ್ಥಕ್ಕೆ ಹೋಗುವವರು ಮೂರ್ಖರು ಎಂದು ಹೇಳಿದ್ದಾರೆ.

“ಬಿತ್ತಿದ ಬೆಳೆಯ ಪೃಥ್ವಿನುಂಗಿದಾಗ
ಬಿತ್ತದ ವಟ್ಟ ಎಂತಪ್ಪುದೋ?
ಇಷ್ಟಲಿಂಗವ ಚಿತ್ತನುಂಗಿದಾಗ
ಭಕ್ತಿಯ ಹೊಲ ಎಂತಪ್ಪುದೋ?”
-ಗುಪ್ತಮಂಚಣ್ಣ (ಸ.ವ.ಸಂ.7, ವ:356)

ಈ ವಚನದಲ್ಲಿ ಗುಪ್ತಮಂಚಣ್ಣನವರು ಬಿತ್ತಿದ ಬೆಳೆಯನ್ನು ಪೃಥ್ವಿ ನುಂಗಿದರೇನು ಮಾಡಬೇಕು? ಎಂಬ ಪ್ರಶ್ನೆಯೊಂದಿಗೆ ಇಷ್ಟಲಿಂಗದ ಪ್ರಸ್ತಾಪ ಮಾಡಿದ್ದಾರೆ. ಇಷ್ಟಲಿಂಗವನ್ನು ಚಿತ್ತ ನುಂಗಬಾರದು, ಹಾಗಾದಾಗ ಭಕ್ತಿಯ ಹೊಲ ಬರುಡಾಗುತ್ತದೆ. ಈ ಕಾರಣಕ್ಕಾಗಿಯೇ ಶರಣರು ಲಿಂಗಕ್ಕೆ ಮನವನರ್ಪಿಸಬೇಕೆಂದು ಹೇಳಿದ್ದಾರೆ. ಇಲ್ಲಿದಿದ್ದರೆ ಇಷ್ಟಲಿಂಗವನ್ನೇ ಚಿತ್ತವೆಂಬ ಮನ ನುಂಗಿ ಬಿಡುತ್ತದೆಂದು ಎಚ್ಚರಿಸಿದ್ದಾರೆ. ಮಡಿವಾಳ ಮಾಚಿದೇವರು ತಮ್ಮ ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ. “ನಮಗೆ ಲಿಂಗವುಂಟು, ನಾವು ಲಿಂಗವಂತರೆಂದು ನುಡಿವವರು” (ವ:641) ಮತ್ತೆ ಮರಳಿ ಭವಿಶೈವ ದೈವಗಳಿಗೆ ಎರಗುವವರನ್ನು ಮಂಗ ಮಾನವರೆಂದು ಕರೆದಿದ್ದಾರೆ.

“ಕರಸ್ಥಲವೆಂಬ ದಿವ್ಯ ಭೂಮಿಯಲ್ಲಿ
ಮಹಾಘನಲಿಂಗ ನಿಕ್ಷೇಪವಾಗಿದೆ!
ಈ ದಿವ್ಯ ನಿಕ್ಷೇಪವ ಸಾಧಿಸುವಡೆ
ಅಂಜನಸಿದ್ಧಿಯಿಲ್ಲದೆ ಸಾಧಿಸಬಾರದು.....”
-ಜೇಡರದಾಸಿಮಯ್ಯ (ಸ.ವ.ಸಂ.7 ವ:779)

“ಇಷ್ಟಲಿಂಗ ಗುರುವಿನ ಹಂಗು,
ಚಿತ್ತ ಕಾಮನ ಹಂಗು
ಪೂಜೆ-ಪುಣ್ಯ ಮಹಾದೇವನ ಹಂಗು
ಎನ್ನ ದಾಸೋಹ ಆರ ಹಂಗೂ ಇಲ್ಲ
ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ
ಕಣ್ಣಿಯ ಮಾಡಬಲ್ಲಡೆ ಬಾ, ಎನ್ನ ತಂದೆ
-ನುಲಿಯ ಚಂದಯ್ಯ (ಸ.ವ.ಸಂ.7, ವ:1297)

ಈ ಎರಡು ವಚನಗಳು ಇಷ್ಟಲಿಂಗದ ಪ್ರಾಮುಖ್ಯತೆಯನ್ನು ಹೇಳುತ್ತವೆ. ಜೇಡರದಾಸಿಮಯ್ಯನವರಿಗೆ ಕರಸ್ಥಲವೇ ದಿವ್ಯಭೂಮಿಯಾಗಿದೆ. ಈ ದಿವ್ಯ ಭೂಮಿಯಲ್ಲಿ ಮಹಾಘನಲಿಂಗವೆಂಬ ನಿಕ್ಷೇಪವಿದೆ. ಅದನ್ನು ಸಾಧಿಸಿಬೇಕಾದರೆ, ಆ ನಿಕ್ಷೇಪವನ್ನು ಹೊರಗೆ ತೆಗೆಯಬೇಕಾದರೆ ವಿಭೂತಿಯೆಂಬ ದಿವ್ಯಾಂಜನವು ಬೇಕೆಂದು ಹೇಳುತ್ತಾರೆ. ಅಷ್ಟಾವರಣಗಳು, ಒಂದಕ್ಕೊಂದು ಪೂರಕವಾಗಿವೆ. ಇಲ್ಲಿ ಇಷ್ಟಲಿಂಗದಷ್ಟೇ ಪ್ರಾಮುಖ್ಯತೆಯನ್ನು ವಿಭೂತಿಗೆ ನೀಡಲಾಗಿದೆ.

ಇದೇ ರೀತಿ ಅಂಗ-ಲಿಂಗ-ಆತ್ಮ-ಅರಿವುಗಳಿಗಿರುವ ಸಂಬಂಧವನ್ನು ಬಿಬ್ಬಿಬಾಚಯ್ಯನವರು ಹೇಳಿದರೆ, ಡೋಹರಕಕ್ಕಯ್ಯ ಇಷ್ಟಲಿಂಗದ ಮೂಲಕ ತಾನು ಕಷ್ಟಕುಲದಿಂದ ಮೇಲೆದ್ದು ಪಾವನವಾದೆನೆಂದು ತಿಳಿಸಿದ್ದಾರೆ. ನೀಲಮ್ಮ ಲಿಂಗದಷ್ಟೇ ಅಂಗ ಮುಖ್ಯ, ಆಚರಣೆ ಮುಖ್ಯವೆಂದು ಹೇಳಿದ್ದಾರೆ. ಈ ಲಿಂಗಾಂಗ ಸಾಮರಸ್ಯದಲ್ಲಿ ಇಹ-ಪರದ ಸುಖಗಳಿವೆಯೆಂಬ ಮಹತ್ವದ ಮಾತನ್ನು ಹೇಳಿದ್ದಾರೆ. ನುಲಿಯ ಚೆಂದಯ್ಯನಿಗೆ ಇಷ್ಟಲಿಂಗವು ಗುರುವಿನ ಹಂಗಾಗಿ ಕಂಡಿದೆ. ಕಾಯಕವೇ ಪ್ರಮುಖವಾದದ್ದೆಂದು ನಂಬಿದ ಈ ಶರಣನಿಗೆ ಗುರು-ಲಿಂಗ-ಜಂಗಮದ ಹಂಗಿಲ್ಲ. ತನ್ನ ಕಣ್ಣಿಯ ಕಾಯಕದಲ್ಲೇ ಸರ್ವಸ್ವವನ್ನು ಕಂಡನುಲಿಯ ಚೆಂದಯ್ಯ ಎಲ್ಲ ಹಂಗುಗಳನ್ನು ಮೀರಿದ ಮುಗ್ಧ ಭಕ್ತರಾಗಿದ್ದಾರೆ. ಕಾಯಕವೇ ಚಂದಯ್ಯನವರಿಗೆ ಪೂಜೆಯಾಗಿ ಕಾಣಿಸಿದೆ, ದಾಸೋಹವೇ ಸಮಾನತೆಯ ಸಂಕೇತವಾಗಿದೆ.

ಹೀಗೆ ಇಷ್ಟಲಿಂಗ ಕುರಿತಂತೆ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದರೆ. ಇನ್ನೂ ನೂರಾರು ವಚನಗಳಲ್ಲಿ ಇಷ್ಟಲಿಂಗ-ಕರಸ್ಥಲಲಿಂಗಗಳ ಬಗೆಗೆ ವಿಷಯವಿದೆ. ಇಲ್ಲಿ ಕೆಲವು ವಚನಕಾರರ ವಚನಗಳನ್ನು ಮಾತ್ರ ಆಯ್ಕೆಮಾಡಿಕೊಂಡು ಇಷ್ಟಲಿಂಗದ ಮಹತ್ವವನ್ನು ಹೇಳಲಾಗಿದೆ. ಇಷ್ಟಲಿಂಗಕ್ಕೆ ಪ್ರಾರಂಭದಲ್ಲಿ ಅದು ನಿರ್ಜಿವ ವಸ್ತು ಎಂದೆನಿಸಿದರೂ ಅದು ಪ್ರಾಣಲಿಂಗವಾಗಿ ಬೆಳೆದಾಗ ಜೀವಕಳೆ ಬರುತ್ತದೆ.

ಜಂಗಮ:
ಅಷ್ಟಾವರಣಗಳಲ್ಲಿ ಮೂರನೆಯದಾದ “ಜಂಗಮ” ಪದ ಮೊದಲಿನಿಂದಲೂ ಚರ್ಚೆಗೆ ಗ್ರಾಸವಾಗಿದೆ. ಆಗಮಗಳಲ್ಲಿ “ಜಂಗಮ”ದ ಪ್ರಸ್ತಾಸವಿದೆ. ಜಂಗಮ ಪದದ ಮೂರಕ್ಷರಗಳಿಗೆ ವಿಶೇಷಾರ್ಥಗಳನ್ನು ವೀರಾಗಮದಲ್ಲಿ ಹೇಳಲಾಗಿದೆ.

“ಜಕಾರಾಜ್ಜನನಂ ದೂರಂ ಗಕಾರಾತ್ ಗತಿನಾಶನಮ್
ಮಕಾರಾನ್ಮರಣಂ ನಷ್ಟಂ ಜಂಗಮಸ್ತ್ರ್ಯಕ್ಷರಾತ್ಮಕಃ”
-ವೀರಾಗಮ.

“ದೀಕ್ಞಾ ಮಾರ್ತಿರ್ಗುರುರ್ದೇವೋ ಪೂಜಾ ಮೂರ್ತಿ ಸದಾಶಿವಃ
ದೀಕ್ಞಾ ಪೂಜಾ ಚ ಶಿಕ್ಷಾ ಚ ಸರ್ವಕರ್ತಾ ಚ ಜಂಗಮಃ”
-ವಾತುಲಾಗಮ.

ಜನನ-ಮರಣಗಳಿಂದ ದೂರವಿರುವ, ಮುಕ್ತಿಪಥವ ತೋರಿಸುವವನೇ ಜಂಗಮನೆಂದು ವೀರಾಗಮ ಹೇಳಿದರೆ, ಜಂಗಮ ತ್ರಿಮೂರ್ತಿಯಾಗಿದ್ದಾನೆಂದು ವಾತುಲಾಗಮ ಹೇಳಿದೆ. ದೀಕ್ಷಾಗುರು ಲಿಂಗದೀಕ್ಷೆ ನೀಡಿದರೆ, ಶಿಕ್ಷಾಗುರು ಶಿಕ್ಷಣ ನೀಡುತ್ತಾನೆ. ಆದರೆ ಜಂಗಮನು ದೀಕ್ಷಾ ಶಿಕ್ಷಣದ ಜತೆಗೆ ಮೋಕ್ಷ ಮಾರ್ಗವನ್ನೂ ತೋರಿಸುವದರಿಂದ ಆತ ತ್ರಿಮೂರ್ತಿಯಾಗಿದ್ದಾನೆ, ಕೈವಲ್ಯಪ್ರದಾಯಕನಾಗಿದ್ದಾನೆ, ಶಿವಸ್ವರೂಪಿಯಾಗಿದ್ದಾನೆಂದು ಆಗಮಗಳಲ್ಲಿ ಹೇಳಲಾಗಿದೆ.

ಜಂಗಮದಲ್ಲಿ ಬ್ರಹ್ಮಚಾರಿ, ಗೃಹಸ್ಥ, ನಿರಾಭಾರಿ ಎಂಬ ಮೂರು ರೀತಿಯ ವರ್ಗೀಕರಣವಿದೆ. ಆಗಮಗಳಲ್ಲಿ ಜಂಗಮನಿಗಿರಬೇಕಾದ ಅರ್ಹತೆಗಳನ್ನು ಮತ್ತು ಕರ್ತವ್ಯಗಳನ್ನು ಕುರಿತು ಹೇಳಲಾಗಿದೆ. ಜಪ, ತಪ, ಪೂಜೆ, ಶಿವಸಾಕ್ಷಾತ್ಕಾರ ಇವು ಜಂಗಮನ ಮುಖ್ಯ ಲಕ್ಷಣಗಳೆಂದು ಹೇಳಲಾಗಿದೆ. ಪರಮೇಶ್ವರರಾಗಮದಲ್ಲಿ ಜಂಗಮನಿಗೆ ಎಂಟು ರೀತಿಯ ಲಕ್ಷಣಗಳನ್ನು ಕುರಿತು ತಿಳಿಸಲಾಗಿದೆ. ಜಂಗಮನಾದವನು ಷಟ್‍ಸ್ಥಲ ಜ್ಞಾನಿಯಾಗಿರಬೇಕೆಂದು ಆಗಮಗಳಲ್ಲಿ ಹೇಳಲಾಗಿದೆ. ಹೀಗೆ ಬಸವಾದಿ ಶರಣರು ಬರುವದಕ್ಕಿಂತ ಮೊದಲೇ ಈ ನೆಲದಲ್ಲಿ ಗುರು-ಲಿಂಗ-ಜಂಗಮಗಳ ಬಗೆಗ ಚರ್ಚೆ ನಡೆದಿದೆ.

“ಜಂಗಮ” ಪರಿಕಲ್ಪನೆ ಶೈವಾಗಮಗಳಲ್ಲಿದೆಯೇ ಹೊರತು, ವೈಷ್ಣವಧರ್ಮದಲ್ಲಿಲ್ಲ. ಕನ್ನಡನಾಡಿನಲ್ಲಿ 15ನೇ ಶತಮಾನದ ಕಾಲಕ್ಕೆ ಈ ಪದಕ್ಕೆ ಬಹಳ ಮಹತ್ವ ಬಂದಂತಿದೆ ನೂರೊಂದುವಿರಕ್ತರು ಹುಟ್ಟಿಕೊಂಡ ಈ ಸಂದರ್ಭದಲ್ಲಿ ಜಂಗಮಸ್ಥಾನಕ್ಕೆ ಗೌರವ ಬಂದಿದೆ. ಶೈವ-ವೀರಶೈವ ಧರ್ಮಗಳಲ್ಲಿ ಬರುವ ಜಂಗಮರು ಜಾತಿಜಂಗಮರಾಗಿದ್ದಾರೆ. ಜಾತಿಯಲ್ಲಿ ಜಂಗಮರಾಗಿ ಹುಟ್ಟದವರು ಪೀಠಾಧಿಪತಿಗಳಾಗಲು ಜಂಗಮ ಮೂರ್ತಿಗಳಾಗಲು ಅರ್ಹರಲ್ಲವೆಂಬ ಕಟ್ಟಾಜ್ಞೆಯಿದೆ. ಅಂತಯೇ 15ನೇ ಶತಮಾನದ ನೂರೊಂದು ವಿರಕ್ತರ ಮಠಗಳಲ್ಲಿ ಜಾತಿಜಂಗಮರೇ ಜಂಗಮಮೂರ್ತಿಗಳಾಗಿ, ಪಟ್ಟಾಧ್ಯಕ್ಷರಾಗಿದ್ದಾರೆ. ಜಂಗಮರಲ್ಲಿ ಸ್ವಯಜಂಗಮ, ಚರಜಂಗಮ, ಪರಜಂಗಮ ಎಂಬ ಮೂರು ಹಂತಗಳನ್ನು ಆಗಮಗಳಲ್ಲಿ ಹೇಳಲಾಗಿದೆ.

ಶೈವ-ವೀರಶೈವ ಧರ್ಮಗಳಲ್ಲಿ ಬಂದಿರುವ ಜಂಗಮನಿಗೂ, ಲಿಂಗಾಯತ ಧರ್ಮದ ಜಂಗಮನಿಗೂ ತುಂಬ ವ್ಯತ್ಯಾಸವಿದೆ. ಬಸವಾದಿ ಶರಣರು ಸ್ಥಾಪಿಸಿದ ಈ ಧರ್ಮದಲ್ಲಿ ಎರಡು ರೀತಿಯ ಜಂಗಮರಿದ್ದಾರೆ. ಒಬ್ಬ ಹೊರಗೆ ಕಾಣುವ ಜಂಗಮ, ಮತ್ತೊಬ್ಬ ಒಳಗೆ ಕಾಣುವ ಜಂಗಮ. ಹೊರಗೆ ಕಾಣುವ ಜಂಗಮ ಇಹದಲ್ಲಿ-ಪರವನ್ನು ಹೇಗೆ ಕಾಣಬೇಕೆಂದು ತಿಳಿಸಿದರೆ, ಒಳಗೆ ಇರುವ ಜಂಗಮ ಅನುಭಾವ ತತ್ವದ ಪ್ರತೀಕವಾಗಿದ್ದಾನೆ. ಅರಿವು-ಗುರುವಾಗಿ, ಆಚಾರ-ಲಿಂಗವಾಗಿ, ಅನುಭಾವ-ಜಂಗಮವಾಗಿ ಒಳಗಡೆ ಕಾಣಿಸಿಕೊಳ್ಳುತ್ತದೆ. ಲಿಂಗಾಯತ ಧರ್ಮದಲ್ಲಿ ಜಂಗಮನ ಪ್ರಸ್ತಾಪ ಬರುತ್ತದಾದರೂ, ಅದು ಹೆಚ್ಚು ಒತ್ತು ನೀಡಿರುವುದು ಒಳಗಿನ ಜಂಗಮನಾಗಿರುವ ಅನುಭಾವಿಗೆ. ಲಿಂಗಾಯತ ಧರ್ಮದಲ್ಲಿ ಹೊರಗಿನ ಜಂಗಮಮೂರ್ತಿಗೆ ಜಾತಿಯ ಹಂಗಿಲ್ಲ. ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ, ಲಿಂಗದೀಕ್ಞೆ ಪಡೆದು, ಸಂಸ್ಕಾರ ಹೊಂದಿ ಅರ್ಹತೆ ಗಳಿಸಿಕೊಂಡವರು ಜಂಗಮರಾಗಬಹುದಾಗಿದೆ.

“ಜಂಗಮ” ಪದವು ಅಲ್ಲಮಪ್ರಭುವಿನ ವಚನಗಳಲ್ಲಿ ಹೆಚ್ಚು ಬಳಕೆಯಾಗಿದೆ. 51 ವಚನಗಳಲ್ಲಿ ಜಂಗಮ ಪದ ಬರುತ್ತದೆ.
“ಜಂಗಮ ಘನವೆಂಬೆನೆ? ಬೇಡಿ ಕಿರಿದಾಯಿತ್ತು.
ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ
ಮೂಡಿಸಿಕೊಂಡು ಕಿರಿದಾಯಿತ್ತು.........”
-ಅಲ್ಲಮಪ್ರಭು (ಸ.ವ.ಸಂ.2, ವ:480)

ಈ ವಚನದಲ್ಲಿ ಅಲ್ಲಮಪ್ರಭು ಹೊರಗಿನ ಮನುಷ್ಯರೂಪದ ಜಂಗಮ ಮತ್ತು ಸ್ಥಾವರ ರೂಪದ ಲಿಂಗವನ್ನು ನಿರಾಕರಿಸಿದ್ದಾರೆ. ಭಕ್ತರನ್ನು ಬೇಡಿತಿನ್ನುವ ಬೇಡಜಂಗಮರ ಬಗ್ಗೆ ಅಲ್ಲಮಪ್ರಭು ವಿಡಂಬನೆ ಮಾಡಿದ್ದಾರೆ. ಅದೇರೀತಿ ಸ್ಥಾವರಲಿಂಗವು ಕಲುಕುಟಿಗನಿಂದ ಸಿದ್ಧವಾಗಿದೆ. ಹೀಗಾಗಿ ಇವೆರಡನ್ನೂ ಪ್ರಭು, ಘನವೆಂದು ಒಪ್ಪುವುದಿಲ್ಲ. ಅಲ್ಲಮಪ್ರಭುವಿನ ಇನ್ನೊಂದು ವಚನದಲ್ಲಿ (ವ:96) ಗುರು. ಲಿಂಗ, ಜಂಗಮ ಇವು ಬೇರೆ ಬೇರೆಯಾದವುಗಳಲ್ಲವೆಂದು ಹೇಳಲಾಗಿದೆ. ಇವು ಬೇರೆ ಬೇರೆಯೆಂಬುದು ಅಜ್ಞಾನವೆಂದು ಪ್ರಭು ಹೇಳಿದ್ದಾರೆ.

“ಅಂಗದಲ್ಲಿ ಅಳವಟ್ಟಪ್ಪ ಆಚಾರವೆ ಲಿಂಗವೆಂದರಿದನು
ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು
ಈ ಎರಡರ ಸಂಗವೆ ತಾನೆಂದರಿದನು
ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು
ನಮ್ಮ ಗುಹೇಶ್ವರಲಿಂಗದಲ್ಲಿ
ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ”
-ಅಲ್ಲಮಪ್ರಭು (ಸ.ವ.ಸಂ.2, ವ:708)

ಬಸವಣ್ಣನ ಲಿಂಗವಾವುದು, ಬಸವಣ್ಣನ ಜಂಗಮವಾವುದೆಂದು ಅಲ್ಲಮಪ್ರಭು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ. ಒಳಗಿನಿಂದ ಬರುವ ಪವಿತ್ರವಾದ ಆಚಾರವೇ ಲಿಂಗ, ಮನದಲ್ಲಿ ಬೆಳಗುತ್ತಿರುವ ಅರಿವೇ ಜಂಗಮ, ದಾಸೋಹವೇ ಲಿಂಗ-ಜಂಗಮವೆಂದು ಬಸವಣ್ಣನ ನಿಲವಾಗಿತ್ತೆಂದು ಈ ವಚನದಲ್ಲಿ ಪ್ರಭು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಗುರು-ಜಂಗಮ ಹೊರಗಿಲ್ಲ ಒಳಗಿವೆ. ಅದೇರೀತಿ ಲಿಂಗ ಕೂಡ ಆಚಾರಲಿಂಗವಾಗಿ ಪ್ರಾಣಲಿಂಗವಾಗಿ ಒಳಗಡೆಯೇ ಇದೆಯೆಂದು ತಿಳಿಸಿ ಹೇಳಿದ್ದಾರೆ.

“ಅರಸು ಮುನಿದಡೆ ನಾಡೊಳಗಿರಬಾರದಯ್ಯಾ,
ಗಂಡ ಮುನಿದಡೆ ಮನೆಯೊಳಗಿರಬಾರದಯ್ಯ,
ಕೂಡಲಸಂಗಮದೇವಾ
ಜಂಗಮ ಮುನಿದಡೆ ನಾನೆಂತು ಬದುಕುವೆ?
-ಬಸವಣ್ಣ (ಸ.ವ.ಸಂ.1, ವ:825)

ಈ ವಚನದಲ್ಲಿ ಬರುವ ಜಂಗಮ, ಮೂರ್ತಿ ರೂಪನಾಗಿ ಕಾಣಿಸಿಕೊಂಡಿದ್ದಾನೆ. ಅದಕ್ಕೆ ಎರಡು ಉದಾಹರಣೆಗಳಿವೆ. ಅರಸು ಮುನಿದಡೆ ನಾಡೊಳಗಿರಬಾರದು ಮತ್ತು ಗಂಡ ಮುನಿದಡೆ ಮನೆಯೊಳಗಿರಬಾರದು ಎಂಬ ಈ ಹೇಳಿಕೆಗಳನ್ನು ಗಮನಿಸಿದಾಗ ಜಂಗಮನೆಂದರೆ ಹೊರಗಿನ ಜಂಗಮನೇ ಎನಿಸುತ್ತದೆ. ಇಂತಹ ಜಂಗಮ ಮುನಿದೊಡೆ ತಾನು ಬದುಕಲು ಸಾಧ್ಯವಿಲ್ಲವೆಂಬವದು. ಮುಂದಿನ ವಚನವನ್ನು ಗಮನಿಸಿದಾಗ, ಇವು ಮೂರೂ, ಹೊರಗಿನವುಗಳಲ್ಲವೆಂದೆನಿಸುತ್ತದೆ.

“ಲಿಂಗಜಂಗಮ, ಜಂಗಮ ಲಿಂಗವೆಂಬುದ
ಎನಗೆ ತೋರಿದವರಾರಯ್ಯ?
ಲಿಂಗವ ಪೂಜಿಸಿದಡೆ ಭವ ಹರಿಯದೆಂದು
ಜಂಗಮಮುಖ ಲಿಂಗವಾಗಿ ಒಂದು ಶಿಕ್ಷಿಸಿ, ರಕ್ಷಿಸಿ
ಎನ್ನ ಆದಿ ಅನಾದಿಯತೋರಿ,
ಪ್ರಾಣಲಿಂಗ ಜಂಗಮವೆಂದು ಎನಗೆ ಪ್ರತಿಷ್ಠಿಸಿ ತೋರಿದಿರಾಗಿ
ಕೂಡಲಸಂಗಮದೇವಾ
ನಿಮ್ಮಿಂದಲಾನು ಬದುಕಿದೆನು ಕಾಣಾ, ಪ್ರಭುವೆ”
-ಬಸವಣ್ಣ (ಸ.ವ.ಸಂ.1, ವ:1343)

ಲಿಂಗ-ಜಂಗಮಗಳ ಗಾಢ ಸಂಬಂಧವನ್ನು ಇಲ್ಲಿ ಬಸವಣ್ಣ ಹೇಳಿದ್ದಾರೆ. ಇಲ್ಲಿ ಬಳಸಿರುವ ಪ್ರಾಣಲಿಂಗ ಒಳಗಿನದು, ಈ ಪ್ರಾಣಲಿಂಗವೇ ಜಂಗಮವೆಂದು ನನಗೆ ಪ್ರಭು ತೋರಿಸಿದರೆಂದು ಬಸವಣ್ಣ ತಿಳಿಸಿದ್ದಾರೆ. ಅಲ್ಲಮಪ್ರಭು ಮತ್ತು ಬಸವಣ್ಣ ಈ ಇಬ್ಬರ ಈ ವಚನಗಳಲ್ಲಿ ಸಾಮ್ಯತೆಯಿದೆ. ಇಬ್ಬರೂ ಒಳಗಿನ ಜಂಗಮನನ್ನು ಕುರಿತೇ ಮಾತನಾಡಿದ್ದಾರೆ. ಇಲ್ಲಿ ಇವರಿಬ್ಬರೂ ಕಟ್ಟಿಕೊಟ್ಟಿರುವ ಜಂಗಮದ ಪರಿಕಲ್ಪನೆ ವಿನೂತನವಾದುದಾಗಿದೆ.

“ಆಚಾರವಿಡಿದು ಲಿಂಗ, ಅನುಭಾವವಿಡಿದು ಜಂಗಮ
ತನುವಿನ ಪ್ರಾಣ ಆಚಾರ, ಮನದ ಪ್ರಾಣ ಅನುಭಾವ.
ಇದು ಕಾರಣ ಕೂಡಲಚೆನ್ನಸಂಗಮದೇವಾ
ಲಿಂಗವನೂ ಜಂಗಮವನೂ ಬೇರರಸಲಿಲ್ಲ.”
-ಚೆನ್ನಬಸವಣ್ಣ (ಸ.ವ.ಸಂ.3, ವ:109)

ಈ ವಚನದಲ್ಲಿ ಚೆನ್ನಬಸವಣ್ಣನೂ ಕೂಡ ಲಿಂಗ-ಜಂಗಮ ಬೇರೆಬೇರೆಯಲ್ಲವೆಂದೇ ಹೇಳಿದ್ದಾರೆ. ಹೊರಗಿನ ಇಷ್ಟಲಿಂಗವು ಸಾಧನೆಯ ಮಾರ್ಗದಲ್ಲಿ ಮುನ್ನಡೆದಾಗ, ಒಳಗಿನ ಆಚಾರ ಲಿಂಗವಾಗುತ್ತದೆ. ಅದೇ ರೀತಿ ಹೊರಗಿನ ಮೂರ್ತರೂಪದ ಜಂಗಮನು, ಒಳಗೆ ಅನುಭಾವದ ಮೂಲಕ ಕಾಣಿಸಿಕೊಳ್ಳುತ್ತಾನೆ. ಕಾಯ-ಜೀವ ಇರುವಂತೆ ಲಿಂಗ-ಜಂಗಮಗಳಿವೆಯೆಂದು ಚೆನ್ನಬಸವಣ್ಣ ಹೇಳಿದ್ದಾರೆ. ಅದೇ ರೀತಿ ಜಂಗಮಕ್ಕೆ ಜಾತಿಯಿಲ್ಲವೆಂದು ತನ್ನ ಇನ್ನೊಂದು, ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ನಿರ್ದೇಹಿಯೇ ಜಂಗಮ, ನಿತೈಕ್ಯವೇ ಜಂಗಮನೆಂದು ತಿಳಿಸಿದ್ದಾರೆ.

“ಸಕ್ಕರೆಯ ಬಿಟ್ಟು ರುಚಿಯ ತೆಗೆಯಬಹುದೆ?
ಬೆಣ್ಣೆಯ ಬಿಟ್ಟು ಘತವ ತೆಗೆಯಬಹುದೆ?
ಭೂಮಿಯ ಬಿಟ್ಟು ಜಗವ ಮಾಡಬಹುದೆ?
ಜಂಗಮವಿರಹಿತ ಲಿಂಗವಿಲ್ಲ, ಲಿಂಗವಿರಹಿತ
ಜಂಗಮವಿಲ್ಲ ಕೇಳಾ, ಕಪಿಲಸಿದ್ಧ ಮಲ್ಲಿಕಾರ್ಜುನಾ”
-ಸಿದ್ಧರಾಮ (ಸ.ವ.ಸಂ.4, ವ: 767)

ಅಲ್ಲಮಪ್ರಭು-ಬಸವಣ್ಣ-ಚೆನ್ನಬಸವಣ್ಣ ಇವರೆಲ್ಲ ಹೇಳಿರುವಂತೆ ಸಿದ್ಧರಾಮನೂ ಕೂಡ “ಜಂಗಮವಿರಹಿತ ಲಿಂಗವಿಲ್ಲ ಲಿಂಗವಿರಹಿತ ಜಂಗಮವಿಲ್ಲ” ವೆಂದು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ಉದಾಹರಣೆಗಳನ್ನು ಕೊಟ್ಟಿದ್ದಾರೆ. ಸಕ್ಕರೆ ಬಿಟ್ಟರೆ ಸಿಹಿ ಇರುವದಿಲ್ಲ, ಬೆಣ್ಣೆ ಬಿಟ್ಟರೆ ತುಪ್ಪವಿರುವದಿಲ್ಲ, ಭೂಮಿಯ ಬಿಟ್ಟರೆ ಜಗವಿರುವುದಿಲ್ಲ ಅದೇರೀತಿ ಲಿಂಗಬಿಟ್ಟು-ಜಂಗಮವಿಲ್ಲ, ಜಂಗಮ ಬಿಟ್ಟು ಲಿಂಗವಿಲ್ಲವೆಂದು ಈ ವಚನದಲ್ಲಿ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಅಂದರೆ ಶರಣರ ಪ್ರಕಾರ ಗುರು-ಲಿಂಗ-ಜಂಗಮ ಪ್ರಾರಂಭದಲ್ಲಿ ಹೊರಗೆ ಕಂಡರೂ ಅವು ನಿಜವಾಗಿ ಬೆಳೆದು ನಿಲ್ಲುವದು ಭಕ್ತನ ಒಳಗಡೆಯೆಂದು ತಿಳಿಸಿಹೇಳಿದ್ದಾರೆ.

“ಕಂಥೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ.....”
-ಅಂಬಿಗರ ಚೌಡಯ್ಯ (ಸ.ವ.ಸಂ.6, ವ:90)

“ದಾಸಿ ವೇಶಿ ಮದ್ದು ಮಾಂಸ ಸುರೆಭಂಗಿ ಹೊಗೆ
ಅನ್ಯದೈವ ಭವಿಸಂಗ-ಉಳ್ಳನ್ನಕ್ಕ ಅವ
ಭಕ್ತನಲ್ಲ-ಜಂಗಮನಲ್ಲ”
-ಜೇಡರ ದಾಸಿಮಯ್ಯ (ಸ.ವ.ಸಂ.7, ವ:813)

ಈ ವಚನಗಳಲ್ಲಿ ಹೊರಗಿನ ಜಂಗಮನ ಅವಗುಣಗಳನ್ನು ತಿರಸ್ಕರಿಸಲಾಗದೆ. ಕಾವಿ ಉಟ್ಟಾಕ್ಷಣ ಜಂಗಮನಾಗಲಾರನೆಂದು ಚೌಡಯ್ಯ ಹೇಳಿದ್ದಾರೆ. ದಾಸಿ-ವೇಶಿಯರ ಸಂಗಮಾಡುವ ಭಕ್ತ-ಜಂಗಮರ ಮೇಳ ಹೇಗಿರುತ್ತದೆಂದರೆ, ಹಂದಿಗಳೆರಡು ಹಡಿಕೆಯ ತಿಂದು ಒಂದರ ಮುಖ ಒಂದು ಮೂಸಿ ನೋಡಿದಂತಿರುತ್ತದೆಂದು ದಾಸಿಮಯ್ಯ ಕಟುವಾಗಿ ವಿಡಂಬಿಸಿದ್ದಾರೆ.

“ಗುರುಮೂರ್ತಿಯ ಕಳೆ ಜಂಗಮದಲ್ಲಿಪ್ಪುದು
ಜಂಗಮಮೂರ್ತಿಯ ಕಳೆ ಲಿಂಗದಲ್ಲಿಪ್ಪುದು......”
-ಅರಿವಿನ ಮಾರಿತಂದೆ(ಸ.ವ.ಸಂ.6, ವ:397)

“ಅರಿವಿಲ್ಲದವಂಗೆ ಆಚಾರವಿಲ್ಲ, ಆಚಾರವಿಲ್ಲದವಂಗೆ ಅರಿವಿಲ್ಲ
ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವರಿಗೆ ಲಿಂಗವಿಲ್ಲ.
ಲಿಂಗವಿಲ್ಲದವಂಗೆ ಜಂಗಮವಿಲ್ಲ...”
-ಉರಿಲಿಂಗಪೆದ್ದಿ(ಸ.ವ.ಸಂ.6, ವ:1298)

ಮೊದಲಿನ ಎರಡು ವಚನಗಳಲ್ಲಿ ಲಿಂಗ-ಜಂಗಮ ಬೇರೆ ಬೇರೆಯಲ್ಲವೆಂದು ಮಾರಿತಂದೆ ಮತ್ತು ಉರಿಲಿಂಗಪೆದ್ದಿ ಹೇಳಿದ್ದಾರೆ. ಲಿಂಗವಿಲ್ಲದವಂಗೆ ಜಂಗಮವೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಶಿವಲೆಂಕ ಮಂಚಣ್ಣನು ನಪುಂಸಕಲಿಂಗ ನಾಸ್ತಿಯಾದಾಗ ಜಂಗಮದರಿವು ಬರುತ್ತದೆಂದು ತಿಳಿಸಿದ್ದಾರೆ. ಪುಲ್ಲಿಂಗವು ಅಹಂಭಾವದ ಸಂಕೇತವಾಗಿ, ಸ್ತ್ರೀಲಿಂಗವು ಮೌಢ್ಯತೆಯ ಸಂಕೇತವಾಗಿ, ನಪುಂಸಕಲಿಂಗವು ವೈರುಧ್ಯದ ಸಂಕೇತವಾಗಿ ಇಲ್ಲಿ ಬಳಕೆಯಾಗಿವೆ. ಹೀಗಾಗಿ ಅಹಂಭಾವ, ಮೌಢ್ಯತೆ, ವೈರುಧ್ಯಗಳನ್ನು ತೊರೆದಾಗ ಗುರು-ಲಿಂಗ-ಜಂಗಮ ಕಾಣ ಸಿಕೊಳ್ಳುತ್ತವೆಂದು ಶಿವಲೆಂಕ ಮಂಚಣ್ಣ ಹೇಳಿದ್ದಾರೆ.

“ಅಂಗದಲ್ಲಿ ಆಚಾರವ ತೋರಿದ, ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ, ಆ ಅರಿವೇ ಜಂಗಮವೆಂದು ತೋರಿದ..”
-ಅಕ್ಕಮಹಾದೇವಿ (ಸ.ವ.ಸಂ.5, ವ:2)

ಅಕ್ಕಮಹಾದೇವಿಯೂ ಕೂಡ ತನ್ನೊಳಗಡೆಯೇ ಜಂಗಮನಿದ್ದಾನೆಂದು ಹೇಳಿದ್ದಾರೆ. ಪ್ರಾಣದಲ್ಲಿ ನೆಲೆಗೊಂಡ ಅರಿವೇ ಜಂಗಮವೆಂದು ತಿಳಿಸಿದ್ದಾರೆ. “ಎನ್ನ ಪ್ರಾಣವೇ ಜಂಗಮ, ಎನ್ನ ಜೀವವೇ ಜಂಗಮ” ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ.

“ವ್ರತವಿಲ್ಲದ ಗುರವ ಪೂಜಿಸಲಾಗದು
ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು
ವ್ರತವಿಲ್ಲದವರ ಅಂಗಳ ಮೆಟ್ಟಲಾಗದು...”
-ಅಕ್ಕಮ್ಮ (ಸ.ವ.ಸಂ.5, ವ:579)

ಅಕ್ಕಮ್ಮ ಈ ವಚನದಲ್ಲಿ ವ್ರತದ ಬಗ್ಗೆ ಪ್ರಾಮುಖ್ಯತೆ ನೀಡಿದ್ದಾರೆ. ವ್ರತವೆಂದರೆ ಇಲ್ಲಿ ನಿಷ್ಠೆ-ಬದ್ಧತೆ ಎಂದರ್ಥವಾಗುತ್ತದೆ. ಶರಣಸಿದ್ಧಾಂತದ ಬಗೆಗೆ ನಿಷ್ಠೆ ತಾಳುವುದನ್ನೇ ವ್ರತವೆಂದು ಹೇಳಲಾಗಿದೆ. ಅಕ್ಕಮ್ಮ ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದೆಂದು ಹೇಳಿದ್ದಾರೆ.

“ಹೊನ್ನ ಹಿಡಿದವರು ಗುರುದ್ರೋಹಿಗಳು
ಹೆಣ್ಣ ಹಿಡಿದವರು ಲಿಂಗ ದ್ರೋಹಿಗಳು
ಮಣ್ಣ ಹಿಡಿದವರು ಜಂಗಮದ್ರೋಹಿಗಳು..”
-ಅಮುಗೆ ರಾಯಮ್ಮ (ಸ.ವ.ಸಂ.5, ವ:663)

“ಶ್ರಿಗುರು ಕಾರುಣ್ಯವುಳ್ಳ ಸದ್ಭಕ್ತರಿಗೆ
ಜಂಗಮಲಿಂಗವಾಗಿ ತೋರುವುದಯ್ಯಾ
ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ
ಮಾನವನಾಗಿ ತೋರುವುದಯ್ಯಾ.......”
-ಕಾಳವ್ವೆ (ಸ.ವ.ಸಂ.5, ವ:291)

ಈ ಇಬ್ಬರು ವಚನಕಾರ್ತಿಯರು ಇಲ್ಲಿ ನಿರ್ಭಿಡೆಯಿಂದ ಮಾತನಾಡಿದ್ದಾರೆ. ಹೊನ್ನು-ಹೆಣ್ಣು-ಮಣ್ಣಿಗಾಗಿ ಪರಿತಪಿಸುವವರು ಗುರು-ಲಿಂಗ-ಜಂಗಮ ದ್ರೋಹಿಗಳಾಗಿದ್ದಾರೆಂದು ಅಮುಗೆರಾಯಮ್ಮ ಸ್ಪಷ್ಟಪಡಿಸಿದ್ದಾರೆ. ಕಾಳವ್ವೆ ತನ್ನ ವಚನದಲ್ಲಿ ಬಹುಮಹತ್ವದ ವಿಚಾರ ತಿಳಿಸಿದ್ದಾರೆ. ನಿಜವಾದ ಸದ್ಭಕ್ತನಿಗೆ ಜಂಗಮ, ಲಿಂಗರೂಪದಲ್ಲಿ ಕಾಣಿಸುತ್ತದೆ. ಪಾಪಿಷ್ಠರಿಗೆ ಅದು ಮಾನವನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗೆ ನಿಷ್ಠುರ ಸತ್ಯಗಳನ್ನಿವರು ಹೇಳಿದ್ದಾರೆ.

“ಮಡದಿಯ ಜಂಗಮಕ್ಕೆ ಕೊಟ್ಟು ನೋಡಿದವರುಂಟೆ?
ಹಡೆದ ಮಕ್ಕಳಕೊಂದು ಜಂಗಮಕ್ಕೆ ಉಣಲಿಕ್ಕಿದವರುಂಟೆ?
-ಸತ್ಯಕ್ಕ (ಸ.ವ.ಸಂ.5, ವ:1222)

ಜಂಗಮ ವೇಷದಲ್ಲಿ ಬಂದು ಮಡದಿ-ಮಕ್ಕಳ ಕೇಳಿದವರನ್ನು ಸತ್ಯಕ್ಕ ವಿರೋಧಿಸಿದ್ದಾರೆ. ಜಂಗಮ ಹೊರಗಿಲ್ಲ, ಒಳಗಿದ್ದಾನೆಂದು ತಿಳಿಹೇಳಿದ್ದಾರೆ. ಕಳ್ಳ ವೇಷದ ಜಂಗಮರನ್ನು ವಿಡಂಬಿಸಿದ್ದಾಳೆ. ಹೀಗೆ ಶರಣರ ಅನೇಕ ವಚನಗಳಲ್ಲಿ “ಜಂಗಮ” ಪದ ಬಳಕೆಯಾಗಿದೆ. ಹೆಚ್ಚಿನ ವಚನಕಾರರರೆಲ್ಲ ಕಾವಿಧಾರಿ ಜಂಗಮನನ್ನು ತಿರಸ್ಕರಿಸಿ, ಅಂತರಂಗದಲ್ಲಿರುವ ಅನುಭಾವಿಯನ್ನೇ ಜಂಗಮನೆಂದು ತಿಳಿದುಕೊಂಡಿದ್ದಾರೆ. ಇದು ಲಿಂಗಾಯತ ಧರ್ಮದ ವಿಶಿಷ್ಟತೆಯಾಗಿದೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...