ಪೂರ್ವಿ

Author : ಗಣೇಶ ಪಿ. ನಾಡೋರ

Pages 76

₹ 70.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕಾದಂಬರಿಗಳು ಕೇವಲ ಪ್ರೌಢ ವಯಸ್ಸಿನವರಿಗೆ ಮಾತ್ರವಲ್ಲ ಮಕ್ಕಳು ಕೂಡಾ ಓದಬಹುದು ಎಂದು ಜಗತ್ತಿಗೆ ಹೇಳಿಕೊಟ್ಟ ಕಾದಂಬರಿ ಇದು. ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಬರೆಯಲ್ಪಟ್ಟ ಈ ಕಾದಂಬರಿ ಸುಂದರ ಮುಖಪುಟದ ಜೊತೆಗೆ, ಉತ್ತಮ ರೇಖಾ ಚಿತ್ರಗಳನ್ನು ಕೂಡಾ ಹೊಂದಿದ್ದು ಮನಸ್ಸಿಗೆ ಇನ್ನಷ್ಟು ಮುದ ನೀಡುತ್ತವೆ. ಪ್ರತೀ ಪುಟದಲ್ಲಿ ಕಾಣಸಿಗುವ ವರ್ಣ ಚಿತ್ರಗಳು, ವಿಶಿಷ್ಟ ವಿನ್ಯಾಸಗಳು ಮಕ್ಕಳಿಗೆ ಈ ಕಾದಂಬರಿಯನ್ನು ಓದಲು ಮತ್ತಷ್ಟು ಪ್ರೇರಣೆಯನ್ನು ನೀಡುತ್ತವೆ. ಪೂರ್ವಿ ಎನ್ನುವ ಹೆಣ್ಣು ಈ ಕಥೆಯ ಕಥಾ ನಾಯಕಿ. ಅಪ್ಪನ ಪ್ರೀತಿಗಾಗಿ ಹಂಬಲಿಸುವ ಮಗು ಏನೆಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ, ಆ ಕಷ್ಟಗಳಿಂದಲೇ ಪೂರ್ವಿ ಹೇಗೆ ತನ್ನ ಜೀವನವನ್ನು ರೂಪಿಸುತ್ತಾಳೆ ಎಂಬುದು ಈ ಕಾದಂಬರಿಯ ಸಾರಾಂಶ. ಪೂರ್ವಿ ಮುಂದೆ ಬೆಳೆದು ಹೇಗೆ ತನ್ನಂತ ಮಕ್ಕಳ ಬದುಕಿಗೆ ಮತ್ತು ಅವರ ಕಷ್ಟಗಳಿಗೆ ಆಸರೆಯಾಗುತ್ತಾಳೆ ಎಂಬ ಅಂಶ ಮತ್ತಷ್ಟು ರೋಚಕವಾಗಿ ಮೂಡಿ ಬಂದಿದೆ. ಕಂಪ್ಯೂಟರ್‍ ಮತ್ತು ಸ್ಮಾರ್ಟ್ ಫೋನ್‍ಗಳಲ್ಲೇ ಕಾಲ ಕಳೆಯುವ ಮಕ್ಕಳ ಕೈಗೆ ಪುಸ್ತಕದ ರುಚಿ ಹಿಡಿಸಲು ಇದೊಂದು ಅತ್ಯುತ್ತಮ ಪುಸ್ತಕ.

About the Author

ಗಣೇಶ ಪಿ. ನಾಡೋರ
(23 December 1969)

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಹುಟ್ಟಿದ್ದು: 23 ಡಿಸೆಂಬರ್ 1969. ತಂದೆ ಆರ್. ಪಲವೇಸಮುತ್ತು ನಾಡಾರ್ ತಮಿಳುನಾಡಿನ ಚೆಟ್ಟಿಕುಳಂ ಮೂಲದವರು. ತಾಯಿ ಮಹಾದೇವಿ ಹರಿಕಂತ್ರ ನಾಡಾರ್‌ ಗೋಕರ್ಣ ಸಮೀಪದ ತೊರೆಗಜನಿಯವರು. ಇಲ್ಲಿಯವರೆಗೆ ಮಕ್ಕಳಿಗಾಗಿ 15 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 'ಬೆಳ್ಳಕ್ಕಿ ಮತ್ತು ಬುಲ್ ಬುಲ್', 'ನೆಗೆತ', 'ಕರಿಮುಖ' 'ಆಟ' ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ, ಸಂಧ್ಯಾ ಸಾಹಿತ್ಯ ವೇದಿಕೆಯ ಮೇವುಂಡಿ ಮಲ್ಲಾರಿ ವಿಶೇಷ ಪುರಸ್ಕಾರ, ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಸಂದಿವೆ. ಜೀವನೋಪಾಯ ಕ್ಕಾಗಿ ಹೈದರಾಬಾದಿನ ...

READ MORE

Reviews

ಪೂರ್ವಿ ಇದು ಲೇಖಕರಾದ ಗಣೇಶ ಪಿ. ನಾಡೋರ ಅವರು ಮಕ್ಕಳ ಮೇಲಿನ ತಮ್ಮ ಅಸೀಮವಾದ ಪ್ರೀತಿಯಿಂದ ಬರೆದಿರುವ ನಾಲ್ಕನೇ ಕಿರು ಕಾದಂಬರಿ. ಈ ಕಾದಂಬರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಡುವ ಸ್ಥಳೀಯವಾದ ಭಾಷಾ ಶೈಲಿಯನ್ನು ಕಾದಂಬರಿಯ ಪಾತ್ರಗಳ ಸಂಭಾಷಣೆಯಲ್ಲಿ ಸಮರ್ಥವಾಗಿ ಲೇಖಕರು ಬಳಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಆಚೆಗಿನ ಜನರಿಗೆ ಈ ಕೃತಿಯಲ್ಲಿನ ಕೆಲವು ಪದಗಳು ಅರ್ಥವಾಗದೆ ಇರಬಹುದು. ಆದರೂ ಅದು ತೊಡಕಾಗದಂತೆ ಕಾದಂಬರಿಯ ಕೊನೆಯಲ್ಲಿ ಅಂತಹ ಅರ್ಥವಾಗದ ಪದಗಳಿಗೆ ಅರ್ಥವನ್ನು ನೀಡಿದ್ದಾರೆ.

ಈ ಕಾದಂಬರಿಯ ಕೇಂದ್ರ ಬಿಂದು ಪೂರ್ವಿ ಎನ್ನುವ ಒಬ್ಬ ಪುಟ್ಟ ಹೆಣ್ಣು ಮಗು. ಅವಳಿಗೆ ಒಬ್ಬಳು ತಂಗಿ. ಅವಳೇ ಪತ್ತು. ಪೂರ್ವಿ ಬಹಳ ದಿನಗಳ ಕಾಲ ಅಪ್ಪ ಮೀನು ಹಿಡಿಯಲು ತುಂಬಾ ದೂರದ ಊರಿಗೆ ಹೋಗಿದ್ದಾರೆ, ಬರುವುದು ತಡವಾಗುತ್ತದೆ ಎಂದು ತನ್ನ ಅಮ್ಮ ಹೇಳಿದ ಸುಳ್ಳನ್ನು ತುಂಬಾ ದಿನಗಳ ಕಾಲ ನಂಬಿರುತ್ತಾಳೆ. ಆದರೆ ವಾಸ್ತವವಾಗಿ ಅವಳ ಅಪ್ಪ ಕುಡಿತದ ದುಶ್ಚಟದಿಂದ ಒಮ್ಮೆ ಮೀನು ಹಿಡಿಯಲು ಹೋದಾಗ ನೀರಿಗೆ ಬಿದ್ದು ಸಾವನ್ನಪ್ಪಿರುತ್ತಾನೆ. ನಂತರ ಆಕೆಗೆ ತನ್ನ ತಂದೆ ಸತ್ತುಹೋಗಿ ಬಹಳ ದಿನಗಳಾಗಿರುವ ಸಂಗತಿ ತಿಳಿಯುತ್ತದೆ. ತಂದೆಯ ಪ್ರೀತಿಗಾಗಿ ಹಂಬಲಿಸುವ ಪೂರ್ವಿಯ ಪಾತ್ರ ಓದುಗರನ್ನು ಸೆಳೆಯುತ್ತದೆ. ತಂದೆಯ ಪ್ರೀತಿಗಾಗಿ ಹಂಬಲಿಸುವ ಪೂರ್ವಿಗೆ ಈ ಕಾದಂಬರಿಯಲ್ಲಿ ಬರುವ ದೊಡ್ಡಪ್ಪನ ಪಾತ್ರದ ಮೇಲೆ ಅಪಾರವಾದ ಪ್ರೀತಿ. ಈ ದೊಡ್ಡಪ್ಪನೂ ಕೂಡ ಪೂರ್ವಿ ಮತ್ತು ಪತ್ತು ಅವರ ಮೇಲೆ ನಿಷ್ಕಲ್ಮಶವಾದ ಪ್ರೀತಿಯನ್ನು ತೋರಿಸುತ್ತಾನೆ. ಕಾದಂಬರಿ ಕೊನೆಯಲ್ಲಿ ಒಮ್ಮೆ ದೊಡ್ಡಪ್ಪ ಹೇಳಿದ ಮಾತುಗಳಿಂದ ಪ್ರೇರಿಪಿತಳಾದ ಪೂರ್ವಿ ತಾನು ದೊಡ್ಡವಳಾದ ಮೇಲೆ ತನ್ನಂತೆಯೇ ತಂದೆ ಇಲ್ಲದವರಿಗೆ ತಾನೇ ತಂದೆಯ ಪ್ರೀತಿ ನೀಡುವಂತಾಳಾಗಬೇಕು ಎಂದು ಸಂಕಲ್ಪ ಮಾಡುತ್ತಾಳೆ. ಈ ಸಂಗತಿ ಸಹೃದಯಿ ಓದುಗರ ಮನಸ್ಸು ತಟ್ಟದೇ ಬಿಡುವುದಿಲ್ಲ.

ಸರಿಯಾಗಿ ಅರಿವಿಲ್ಲದವರು ಕನ್ನಡದಲ್ಲಿ ಒಳ್ಳೆಯ ಮಕ್ಕಳ ಸಾಹಿತ್ಯದ ಕೊರತೆಯಿದೆ ಎಂದು ಬೊಗಳೆ ಬಿಡುತ್ತಾರೆ. ಆದರೆ ಕೆಲವು ವರ್ಷಗಳಿಂದ ಶ್ರೀ ತಮ್ಮಣ್ಣ ಬೀಗಾರ, ಶ್ರೀಮತಿ ವಿಜಯಶ್ರೀ ಹಾಲಾಡಿ, ಶ್ರೀ ಅಕ್ಕಿಮಂಗಲ ಮಂಜುನಾಥ್ ಮತ್ತು ಶ್ರೀ ಗಣೇಶ ಪಿ. ನಾಡೋರ... ಮುಂತಾದವರು ಸದ್ದಿಲ್ಲದೆ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಸಲ್ಲಿಸಿದ್ದಾರೆ.

ಈ ಕೃತಿಯ ಲೇಖಕರಿಗೆ, ಪ್ರಕಾಶಕರಿಗೆ ನನ್ನ ನಮನಗಳು. ಒಂದು ಒಳ್ಳೆಯ ಪುಸ್ತಕ ಓದಿದ ಖುಷಿ ನನ್ನದು. ನೀವೂ ಓದಿ ನೋಡಿ, ನಿಮಗೆ ಇಷ್ಟವಾಗುತ್ತದೆ.

ಧನಪಾಲ ನಾಗರಾಜಪ್ಪ, ನೆಲವಾಗಿಲು
ಕುಂಭೀರ್ಗಾಮ್, ಅಸ್ಸಾಂ

Related Books