ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು.

Date: 11-04-2023

Location: ಬೆಂಗಳೂರು


''ಚಂದ್ರ ಬರೆದ ಚಿತ್ರಗಳನ್ನು ಅವಳು ವಿಮರ್ಶೆ ಮಾಡುತ್ತಿದ್ದುದೂ ಹೀಗೆ. ಒಮ್ಮೆ ಸ್ವಪ್ನ ಸುಂದರಿ ಎಂದು ಶೀರ್ಷಿಕೆಯ ಚಿತ್ರವನ್ನು ಅವನು ಬರೆದಿದ್ದ. ಬೆಟ್ಟ ಗುಡ್ಡಗಳ ನಡುವೆ ತೀರಾ ಸಣ್ಣ ಸೊಂಟದ ಹೆಣ್ಣು ಅರೆನಗ್ನಳಾಗಿ ಹಕ್ಕಿಯನ್ನು ಹಿಡಿಯುತ್ತಿದ್ದಾಳೆ. ಉಳಿದ ಬಟ್ಟೆ ಕೂಡಾ ನೆಪಕ್ಕೆ ಮಾತ್ರವೇ ಇದೆ,” ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ನಡೆಯದ ಬಟ್ಟೆ ಅಂಕಣದಲ್ಲಿ ‘ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು’ ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

`ಸ್ವ ಮರುಕಕ್ಕೆ ಒಳಗಾಗಿ ಬದುಕನ್ನು ನರಕ ಮಾಡಿಕೊಂಡವರ ಕಥೆಗಳನ್ನು ನಾನು ಕೇಳಿದ್ದೇನೆ ತೇಜೂ. ಅಂಥಾದ್ದೊಂದು ಸ್ಥಿತಿ ಬಾರದ ಹಾಗೆ ಜೀವನದುದ್ದಕ್ಕೂ ನನ್ನನ್ನು ನಾನೇ ಕಾಪಾಡಿಕೊಂಡು ಬಂದಿದ್ದೇನೆ. ಪಾಪ ಅಂತ ನನ್ನ ಬಗ್ಗೆ ನನಗೇ ಅನ್ನಿಸಿಬಿಟ್ಟರೆ ಅದಕ್ಕಿಂತ ಹೀನಾಯ ಸ್ಥಿತಿ ಇನ್ನೊಂದಿದ್ಯಾ? ಆ ಡಾಕ್ಟರ್‌ಗೆ ಅವತ್ತು ಸ್ವ ಮರುಕವಾಗಿರಲಿಕ್ಕೂ ಸಾಕು. ಮನುಷ್ಯನಿಗೆ ಮಾತ್ರವೇ ಇರುವ ಗೀಳಿದು. ಅದನ್ನು ದಾಟುವಾಗ ನಾನೆಷ್ಟು ನಯವಾಗಿ ಹೆಜ್ಜೆ ಇಟ್ಟಿದ್ದೇನೆ-ಜಾರದಿರುವಂತೆ. ಗೊತ್ತು ನನ್ನೊಳಗೆ ಈ ಎಚ್ಚರಿಕೆ ಇಲ್ಲದಿದ್ದರೆ ಇಡೀ ಜಗತ್ತಿನಲ್ಲಿ ನಾನು ಮಾತ್ರ ಕಾಣುತ್ತೇನೆ. ನನ್ನ ಅಳು, ನಗು, ಹಳವಂಡಗಳು... ಓಹ್ ದೇವರೇ ಅದೇ ನಮ್ಮ ಆಪೇಕ್ಷಿತ ಸ್ಥಿತಿಯಾಗಿಬಿಟ್ಟರೆ... ಯಾರ ಪ್ರಶ್ನೆಗಳು, ಯಾವ ಉತ್ತರಗಳೂ ನನ್ನ ಕಿವಿಗೇ ಬೀಳುತ್ತಿರಲಿಲ್ಲ. ಅಹಂ ಕೂಡ ಸ್ವ ಮರುಕದ ಅಣ್ಣನೋ ತಮ್ಮನೋ ಅನ್ನಿಸಿದ್ದು ಚಂದ್ರನ ಜೊತೆ ಜೀವಿಸಲಿಕ್ಕೆ ಶುರು ಮಾಡಿದೆನಲ್ಲಾ ಆಗಲೇ. ಮದುವೆಗೆ ಮುಂಚೆ ಇದ್ದ ತೀವ್ರತೆ ನಂತರ ಕಡಿಮೆಯಾಗಿತ್ತು. ಎಂದೂ ಅವನು ನನ್ನ ಮಾತುಗಳನ್ನು ಕೇಳಲಿಲ್ಲ, ಬದಲಿಗೆ ಕೇಳಿದಂತೆ ನಟಿಸುತ್ತಿದ್ದ. ನನ್ನದೂ ಜಾಸ್ತಿ ಆಗಿದ್ದಿರಬೇಕು; ಅಗತ್ಯಕ್ಕಿಂತ ಹೆಚ್ಚೇ ಮಾತಾಡುತ್ತಿದ್ದೆ. ಅಂತಾರಾಷ್ಟ್ರೀಯ ಮನ್ನಣೆಯಿಂದ ಜಗತ್ತಿನ ಎಲ್ಲವೂ ತನ್ನ ಹತ್ತಿರವೇ ಇದೆ ಅಂತ ಅವನಿಗೆ ಅನ್ನಿಸಿರಲೂ ಸಾಕು. ಅವನ ಸುತ್ತಾ ಇದ್ದ ಜನಗಳು ಅವನನ್ನು ಹಾಡಿ ಹೊಗಳುತ್ತಿದ್ದರು. ಅದನ್ನೇ ನಾನೂ ಮಾಡಬೇಕು ಎಂದು ನಿರೀಕ್ಷಿಸುತ್ತಿದ್ದ. ಬೇರೆ ಯಾರಾಗಿದ್ದರೂ ಹಾಗೇ ಮಾಡುತ್ತಿದ್ದರು ಕೂಡಾ. ಕಲೆಯ ಒಳಹೊರಗುಗಳು ಗೊತ್ತಿರುವ ನನಗೆ ಅರ್ಥ ಆಗುತ್ತಿದ್ದುದನ್ನು ಹೇಳುತ್ತಿದ್ದೆ. ಅದವನಿಗೆ ಇಷ್ಟ ಆಗುತ್ತಿರಲಿಲ್ಲ ಎಂದೂ ಗೊತ್ತಿತ್ತು. ಮುಂದಿನ ದಿನಗಳಲ್ಲಿ ಅದು ವಿಚಿತ್ರ ಕಾಂಪ್ಲೆಕ್ಸ್ ಆಗಿಬಿಟ್ಟಿತು. ಎಲ್ಲವನ್ನೂ ಮರೆಮಾಚುತ್ತಿದ್ದನಾದ್ದರಿಂದ ಅವನೇನೆಂದು ಅಳತೆ ಮಾಡಲಿಕ್ಕೆ ಆಗುತ್ತಲೇ ಇರಲಿಲ್ಲ. ಯಾಕೆ ಆರಂಭದ ದಿನಗಳ ಆ ತಿಳಿತನ ಕಳೆದುಹೋಗಿತ್ತು. ಅವನಲ್ಲಿ ದೊಡ್ಡ ಕಲಾವಿದನಾಗುವ ಎಲ್ಲ ಲಕ್ಷಣಗಳೂ ಇದ್ದವು. ಆರಂಭದಲ್ಲಿ ಒಂದಿಷ್ಟು ದಿನ ಅವನ ಜೊತೆ ಮಾತಾಡುವಾಗ ಭಯ ಆಗುತ್ತಿತ್ತು. ನನ್ನ ಮೇಲೆ ಯಾರ ಮಾತುಗಳು ಪ್ರಭಾವ ಬೀರಲಾರವು ಎಂದು ಅವನು ಅನ್ನುತ್ತಿದ್ದರೆ ಅವನಿಗೆ ಹೇಳಬೇಕಾದ ಮಾತುಗಳೆಲ್ಲ ಗಂಟಲಲ್ಲೇ ಉಳಿದ ಹಾಗಾಗುತ್ತಿತ್ತು. ದಿನ ಕಳೆದಂತೆಲ್ಲಾ ಅವನು ಹಾಗೆ ಗರ್ವದ ಮಾತನ್ನಾಡಿದರೆ ನಗಬೇಕು, ಗೇಲಿ ಮಾಡಬೇಕು ಅನ್ನಿಸಿಬಿಡುತ್ತಿತ್ತು. ಅವನ ಹೊಟ್ಟೆಗೆ ಬೆನ್ನಿಗೆ, ಕಂಕುಳಿಗೆ ಕಚಗುಳಿ ಇಟ್ಟುಬಿಡುತ್ತಿದ್ದೆ. ಅವನಿಗೆ ಇನ್ನಷ್ಟು ಕೋಪ ಬಂದು ಇನ್ನೂ ಹುಡುಗಾಟವನ್ನು ಬಿಟ್ಟಿಲ್ಲವಲ್ಲ ಎನ್ನುತ್ತಿದ್ದ. ನಿನ್ನೆದುರು ನಾನು ಯಾವತ್ತೂ ಹುಡುಗಿಯೇ ಚಂದ್ರ ಎನ್ನುವ ನನ್ನ ಮಾತಿಗೆ ಕರಗಿಬಿಡುತ್ತಿದ್ದ. ಕರಗುವುದು ಅವನ ಮೂಲಗುಣವೇ ಎನ್ನುವುದು ಈಗಲೂ ನನ್ನ ನಂಬಿಕೆಯೆ.

ಒಂದು ಗಿಡ ಮರವಾಗುವ ಕಾಲವಿದೆಯಲ್ಲಾ ಅದನ್ನು ಗಣಿಸಿದರೆ ಒಂದು ಬಯಲು ದಟ್ಟವಾದ ಕಾಡಾಗುವ ಕಾಲವನ್ನು ನಿರ್ಣಯಿಸಲಿಕ್ಕೆ ನನಗೆ ನಿನಗೆ ಆಗುತ್ತದೆ ಎಂದು ಭಾವಿಸಿದ್ದೀಯಾ? ಅದು ಪ್ರಕೃತಿ ತುಂಬಿಕೊಳ್ಳುವುದು ಹೇಗೆಂದು ಅದಕ್ಕೆ ಗೊತ್ತಿದೆ. ಮರವನ್ನು, ಮರವಿಲ್ಲದ ಕಡೆ ಗಿಡವನ್ನು, ಅದೂ ಇಲ್ಲದ ಕಡೆ ಒಬ್ಬೆಯನ್ನು, ಇದ್ಯಾವುದೂ ಇಲ್ಲ ಎಂದ ಕಡೆ ಹುಲ್ಲನ್ನು ಸೃಷ್ಟಿ ಮಾಡುತ್ತದೆಯಲ್ಲಾ? ಅದೆಂಥಾ ಕಲಾಕಾರ ಹೇಳು. ಸಣ್ಣದಾಗಿ ಯೋಚನೆ ಮಾಡಿದ್ರೂ ನಮ್ಮ ಅಹಂಕಾರವನ್ನು ಒಡೆದು ಹಾಕುತ್ತೆ. ಆದರೆ ನಾವು ಮನುಷ್ಯರಿಗೆ ಇಂಥಾ ಕಲೆಯೊಂದು ಸಿದ್ಧಿಸಿದ್ದಿದ್ದರೆ ಉದುರಿ ಹೋದ ಕಡೆಯೇ ಚಿಗುರುವ ಹುನ್ನಾರವನ್ನು ಸ್ವಯಂ ಆಗಿ ರೂಪಿಸಿಕೊಂಡು ಬಿಡುತ್ತಿದ್ದೆವು. ಆದರೂ ನಾವೇನೂ ಸಾಮಾನ್ಯ ಅಲ್ಲ ಎಲ್ಲೆಲ್ಲಿ ಸಾಧ್ಯವಾಗುತ್ತೋ ಅಲ್ಲೆಲ್ಲಾ ರಂಗನ್ನು ತುಂಬಿಕೊಳ್ಳುತ್ತೇವೆ, ಉತ್ಸಾಹ, ಪ್ರೀತಿ ಎಲ್ಲವನ್ನೂ ತುಂಬಿಕೊಳ್ಳುತ್ತೇವೆ, ಅದಕ್ಕಿಂತ ಹೆಚ್ಚಾಗಿ ದ್ವೇಷ, ಅಸೂಯೆಯನ್ನೂ- ಇಡೀ ಜಗತ್ತು ಇರುವುದೇ ನಮಗಾಗಿ ಮಾತ್ರ ಎನ್ನುವ ಸ್ವಾರ್ಥವನ್ನು. ಯಾವ ಖಿನ್ನತೆಯಿಂದ ಬಳಲಿ ಬೆಂಡಾಗಿ, ಅಲೆದಲೆದು ಎದೆಯಿಂದ ಹೊಡೆದೋಡಿಸಲು ಅಚಲವಾಗಿ ಎದೆಯೊಡ್ಡಿ ನಿಂತು ಅಷ್ಟೆಲ್ಲಾ ಪ್ರಯತ್ನಪಟ್ಟೆನೋ, ಅದರಿಂದ ಬಿಡುಗಡೆ ಆದ ಮೇಲೆ ನಿರಾಳವಾಗಿದ್ದೆನಾ, ಸುಖವಾಗಿದ್ದೆನಾ ಎಂದರೆ ಊಹುಂ, ಅಂಥದ್ದೇ ಒಂದು ದಟ್ಟವಾದ ಭಾವ ನನ್ನೊಳಗನ್ನು ತುಂಬದೆ ನನಗೆ ಉಳಿಗಾಲವಿಲ್ಲ ಅನ್ನಿಸಿತ್ತಲ್ಲ್ಲ ಆಗ ಶುರುವಾಯ್ತು ನೋಡು ಕೊರಗು. ದುಃಖವಾದರೂ ಸರಿಯೇ ತೀವ್ರವಾಗಿಲ್ಲದೆ ಹೋದರೆ, ಗಾಢವಾಗದೆ ಆ ಕ್ಷಣಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದೇ ನನ್ನ ಬಹು ದೊಡ್ಡ ವೀಕ್‌ನೆಸ್ಸಾ ಗೊತ್ತಿಲ್ಲ. ತುಂಬಿಕೊಳ್ಳಲಾಗದ ಕೊರಗನ್ನು ಏನನ್ನಲಿ ತೇಜೂ- ಅದೇನಾ ಶೂನ್ಯ? ಅಲ್ಲೂ ನಾನು ಆಕಾಶದ ಅವಕಾಶದಲ್ಲಿ ನಕ್ಷತ್ರಗಳ ಹಾಗೆ ನನ್ನ ಹೆಜ್ಜೆ ಗುರುತುಗಳಿಗಾಗಿ ಹಂಬಲಿಸಿಬಿಟ್ಟೆನಾ!

ಶೂನ್ಯ ಎಂದರೆ ಏನೂ ಇಲ್ಲದೇ ಇರುವುದಲ್ಲವೆ. ಹಾಗಾದರೆ ನನ್ನೊಳಗೆ ಏನೋ ಖಾಲಿಯಾಯಿತು ಇನ್ನೇನೋ ಬೇಕು ಎನ್ನುವ ಹಂಬಲ ಆ ಕ್ಷಣಗಳಲ್ಲಿ ತುಂಬಿತ್ತಲ್ಲ, ಅದೇನದು? ನನ್ನ ದೇಹಕ್ಕೆ ಯೌವ್ವನ ಮೂಡಿ ಬಯಕೆಯೊಂದು ಹುಟ್ಟ್ಟುವಾಗ ಆಗುವ ಬದಲಾವಣೆ ನನ್ನದೇ ಗಮನಕ್ಕೆ ಬರುತ್ತಿರುವಾಗ ನಿಶ್ಚಿತವಾಗಿ ನಾನು ಬಾಲ್ಯವನ್ನು ಕಳಕೊಳ್ಳುತ್ತಿದ್ದೇನೆ ಎನ್ನಿಸಿತ್ತು. ಇಲ್ಲ ಖಾಲಿ ಹಾಳೆ ಎಂದರೆ ಅದು ನಿರ್ವಾತವಲ್ಲ, ನನ್ನ ಕಲ್ಪನೆಯನ್ನು ಮೂರ್ತಗೊಳಿಸಲಿಕ್ಕೆ ಇರುವ ಮಾಧ್ಯಮ. ಬರಬೇಕು ಖಾಯಿಲೆಗಳು, ಇಲ್ಲದಿದ್ದರೆ ನಮಗೇ ನಮ್ಮಿರುವಿನ ಸುಳಿವುಗಳನ್ನು ಬಿಟ್ಟುಕೊಡದೆ ಹೋಗುತ್ತವೆ. ಅವು ಬಂದಿದೆ, ಕೊನೆವರೆಗೂ ನಿಮ್ಮ ಜೊತೆಯೇ ಇರುತ್ತವೆ, ಅವುಗಳ ಜೊತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ನಂಬಿಸುವ ಡಾಕ್ಟರ್‌ಗಳು ಇರಬೇಕು, ಕೊನೆಯದಾಗಿ ಎಲ್ಲವನ್ನೂ ಬಟ್ಟೆಗಂಟಿದ ದೂಳಿನ ಹಾಗೆ ಕೊಡವಿಕೊಂಡು ನಾವು ನಾವಾಗೆ ಎದ್ದು ನಿಲ್ಲುವ ಅನುಭವಕ್ಕೆ. ನೀನೇ ಹೇಳು ಮರದ ಕಾಂಡದಲ್ಲಿ ಕಾಣಿಸಿಕೊಳ್ಳುವ ಗಂಟು ಸಹಜವಾ, ಅಸಹಜವಾ ಎಂದು ಯಾರಾದರೂ ಹುಡುಕಿದ್ದಾರಾ? ನನ್ನ ನಡವಳಿಕೆಯಲ್ಲಿ ಮಾತ್ರ ಯಾಕೆ ಅದನ್ನು ಹುಡುಕಬೇಕು? ಯಾವುದೂ ಕೊನೆಗೊಳ್ಳಬೇಕಾದ ಅವಶ್ಯಕತೆಯಿಲ್ಲ. ಕೊನೆಗೊಂಡಾಗ ಹುಟ್ಟುವುದು ಶೂನ್ಯವೂ ಅಲ್ಲ. ಶಬ್ದವೊಂದು ತನ್ನ ಧ್ವನಿ ತರಂಗಗಳನ್ನು ಅನಂತಕ್ಕೆ ಬಿಟ್ಟು ಲಯವಾಗಿ ಕಂಪನವಾಗಿ ಉಳಿದುಬಿಡುತ್ತದೆ, ಹಾಗೆ ನಾನು. ಹಾಳೆಯೊಂದರ ಮೇಲೆ ಬಣ್ಣದಲ್ಲಿ ಅದ್ದಿದ ಬ್ರಷ್ ಅನ್ನು ಇಟ್ಟರೆ ಅದು ಪೇಂಟಿಂಗ್, ಅದೇ ಹಾಳೆಯನ್ನು ಮಡಚಿ ತುದಿಗಳನ್ನು ಎಳೆದು ಒತ್ತಿದರೆ ಅದು ದೋಣಿಯೋ, ಮೀನೋ, ಚೀಲವೋ ಅಥವಾ ನನ್ನ ಕಲ್ಪನೆಯ ಏನೂ ಆಗಬಹುದು. ಕಾಗದಕ್ಕೆ ಏನೂ ಆಗುವ ಗುಣವಿರುವಾಗ ಅದನ್ನು ನಿರ್ಧಾರ ಮಾಡಬೇಕಾದ ಮನಸ್ಸೊಂದು ನಿಶ್ಚಿತವಾಗಿ ಏನೂ ಆಗಬಲ್ಲ ಗುಣವನ್ನು ಇರಿಸಿಕೊಂಡೇ ಇರುತ್ತದೆ. ಪ್ರಶ್ನೆ ಖಂಡಿತಾ ಅದಲ್ಲ. ಮಡಚುವ ಮುನ್ನಾ ಸ್ಥಿತಿ ಏನಿದೆ ಅದು ಏನೂ ಆಗಬಹುದಾದ ಅಪಾರವಾದ ಸಾಧ್ಯತೆ. ಒಮ್ಮೆ ಅದಕ್ಕೆ ಆಕಾರ ಬಂದು ಬಿಟ್ಟರೆ ಅದು ಅದೇ. ನನ್ನ ಮತ್ತು ಚಂದ್ರನ ನಡುವೆ ಆಗಿದ್ದೂ ಅದೇ. ಅನಂತ ಸಾಧ್ಯತೆಯ ಸಂಬಂಧವೊಂದನ್ನು ನಾವೇ ಅರ್ಥದ ಹಂಗಿಗೆ ಸಿಲುಕಿಸಿದೆವು... ಅದಲ್ಲದೆ ಹೋಗಿದ್ದಿದ್ದರೆ...’ ಶ್ಯಾಮುವಿನ ಈ ಮಾತುಗಳು ಮನಕಲಕಿದ್ಯಾಕೆ?

ಚಂದ್ರ ಶ್ಯಾಮುವನ್ನು ಬಿಡಬೇಕೆಂದು ಖಂಡಿತಾ ಬಯಸಿರಲಿಲ್ಲ. ಅದು ನನಗೆ ಚೆನ್ನಾಗಿ ಗೊತ್ತು. ಜಗತ್ತು ನಿರೀಕ್ಷಿಸುವ ಹಾಗೆ ಅವರಿಬ್ಬರ ಮಧ್ಯೆ ವೈಯಕ್ತಿಕವಾಗಿ ಅಂಥಾ ಭಿನ್ನಭಿಪ್ರಾಯ, ಜಗಳ ಇರಲಿಲ್ಲ. ಹಾಗಾದರೆ ಅವರಿಬ್ಬರ ಮಧ್ಯೆ ಬಿಟ್ಟು ಹೋಗುವ ಮಾತು ಶುರುವಾದದ್ದು ಹೇಗೆ?! ಮದುವೆಯಾಗಬೇಕು ಎನ್ನುವ ತೀರ್ಮಾನಕ್ಕೆ ಇಬ್ಬರೂ ಬಂದಾಗ ಚಂದ್ರನ ಮನೆಯಲ್ಲಿ ಯಾವ ತಕರಾರೂ ಇರಲಿಲ್ಲ. ಆದರೆ ಶ್ಯಾಮು ಮನೆಯಲ್ಲಿ ಜಾತಿ, ವಯಸ್ಸು, ಕೆಲಸ ಎಂತೆಲ್ಲಾ ದೊಡ್ಡ ಗಲಾಟೆ ನಡೆದು ಹೋಯಿತು. ಮದುವೆ ಆಗುವವಳು ನಾನು. ಇದರ ಬಗ್ಗೆ ನೀವೆಲ್ಲಾ ಯಾಕೆ ಯೋಚನೆ ಮಾಡ್ತೀರ? ಹಣವೋ, ಜಾತಿಯೋ, ವಯಸ್ಸೋ ಕಡೆಗೆ ಸಮಾಜವೋ ಅದೇನಿದ್ರೂ ನಾನೇ ಫೇಸ್ ಮಾಡ್ತೀನಿ ಎಂದು ಎಲ್ಲರ ಬಾಯಿ ಮುಚ್ಚಿಸಿದ್ದಳು. ಅಷ್ಟರ ಹೊತ್ತಿಗೆ ಶ್ಯಾಮೂಗೆ ಒಳ್ಳೊಳ್ಳೆ ಸಂಬಂಧಗಳು ಬಂದಿದ್ದವು. ಮೊದಲಿನಿಂದಲೂ ನೋಡಿದ್ದೇವೆ ಹೊಂದಾಣಿಕೆಯ ಸ್ವಭಾವದ ಹುಡುಗಿ ಎಂದೆಲ್ಲಾ ಕೇಳಿಕೊಂಡ ಬಂದವರನ್ನು ಶ್ಯಾಮು ಸಾರಾಸಗಾಟಾಗಿ ತಿರಸ್ಕರಿಸಿದ್ದರು. `ಅವರ ಮಕ್ಕಳಿಗೆ ತಾಯಿ ಮಾತ್ರ ಆಗಿ ಉಳಿಯುವುದು ನನಗೆ ಬೇಕಿಲ್ಲ. ನನ್ನ ಆಸಕ್ತಿಯನ್ನು ಪೋಷಣೆ ಮಾಡಲಿಲ್ಲ ಅಂದರೆ ಮತ್ತೆ ಬಾಲ್ಯ ಕಂಡ ನರಕವನ್ನು ಮದುವೆ ಆದ ಮೇಲೂ ಕಾಣಬೇಕಾಗುತ್ತದೆ’ ಎಂದಿದ್ದಳು. ಮಗಳು ಓಡಿ ಹೋಗಿ ಯಾವನ್ನೋ ಮದುವೆ ಆದಳು ಎಂದು ಜನ ಅಂದುಕೊಳ್ಳುವ ಬದಲು ನಾವೆ ನಿಂತು ಮದುವೆ ಮಾಡಿದೆವು ಎನ್ನುವ ತೃಪ್ತಿ ಸಿಗಲಿ ಎಂದು ಕಮಲತ್ತೆ ಮತ್ತು ಮಾವ ನಿರ್ಧರ ಮಾಡಿದ್ದರು. ಎಲ್ಲದರ ಪರಿಣಾಮ ಶ್ಯಾಮು ಚಂದ್ರನ ಜೀವನ ಆರಂಭವಾಯಿತು. ಅವರಿಬ್ಬರ ಮಧ್ಯೆ ಸಾಮಾನ್ಯ ಗಂಡ ಹೆಂಡಿರ ಸಂಬಂಧ ಇರಲಿಲ್ಲ. ಇಬ್ಬರೂ ಒಂದೇ ಫೀಲ್ಡ್ನಲ್ಲಿ ಕೆಲಸ ಮಾಡುವವರು. ಕಲೆ ಇಬ್ಬರ ಮನೆಯ ಆಸ್ತಿ ಎನ್ನುವಂತೆ ಪ್ರಕೃತಿ ನೀಡಿಬಿಟ್ಟಿತ್ತು. ಇದನ್ನು ಇಬ್ಬರೂ ಪರಸ್ಪರ ಒಪ್ಪಿಕೊಂಡಿದ್ದರು. ಶ್ಯಾಮು ತನ್ನೊಳಗಿನ ಕತ್ತಲಿಗೆ ಬೆಳಕಾಗಿ ಚಂದ್ರನನ್ನು ಕಂಡುಕೊಳ್ಳುತ್ತಿದ್ದರೆ, ಚಂದ್ರ ತನ್ನ ಅಸ್ತಿತ್ವಕ್ಕಾಗಿ ರಾತ್ರಿಗಳನ್ನು ಆಶ್ರಯಿಸುವ ಹಾಗೆ ಶ್ಯಾಮುವನ್ನು ಆಶ್ರಯಿಸಿದ್ದ. ಹೊರಗಿನ ಜಗತ್ತು ಇಬ್ಬರ ದಾಂಪತ್ಯವನ್ನು ಕೊಂಡಾಡಿತ್ತು. ಮದುವೆ ಎನ್ನುವ ವ್ಯವಸ್ಥೆಗೆ ವಿಶೇಷ ಅರ್ಥ ಸಿಕ್ಕಿತೇನೋ ಎನ್ನುವಂತಿದ್ದರು. ಕಮಲತ್ತೆಯಂತೂ ಅಳಿಯನ ಗುಣಗಾನ ಮಾಡಿದ್ದೇ ಮಾಡಿದ್ದು. ಇದೊಂದು ವಿಷಯದಲ್ಲಿ ತನ್ನ ಮಗಳು ಅದೃಷ್ಟ ಮಾಡಿದ್ದಳು. ನಮ್ಮ ಕುಟುಂಬದಲ್ಲೇ ಕಾರು ಅಂತ ಕಂಡವರಿರಲಿಲ್ಲ. ನಮ್ಮ ಶ್ಯಾಮೂದೇ ಮೊದಲ ಕಾರು ಎಂದು ಬದಿಕಿದ್ದಷ್ಟು ದಿನವೂ ನೆನೆಸಿಕೊಳ್ಳುತ್ತಿದ್ದರು.

ಒಮ್ಮೆ ಶ್ಯಾಮು ಯಾಕೋ ಖಿನ್ನತೆಯಲ್ಲಿದ್ದಳು. ಮತ್ತೆ ಅವಳ ಖಿನ್ನತೆ ಮರುಕಳಿಸಿತಾ ಎನ್ನುವ ಭಯ ಆವಾರಿಸಿತ್ತು. ಏನಾಯ್ತೆ ಎಂದಿದ್ದೆ. `ನೀನೇ ನನ್ನ ಕ್ಯಾನ್ವಾಸ್’ ಎಂದು ಚಂದ್ರ ಅವಳ ದೇಹದ ಭಾಗಗಳ ಮೇಲೆ ಚಿತ್ರಗಳನ್ನು ಬರೆದದ್ದನ್ನು ಶ್ಯಾಮು ತೋರಿಸಿದ್ದಳು. ನಾನು ತಮಾಷಿ ಮಾಡಿ ನಕ್ಕಿದ್ದೆ, `ಮಾರಾಯ್ತಿ ನಿನ್ನ ಅವನು ಒಂದು ಪೇಂಟಿಂಗ್ ಎಂದು ಮಾರದಿದ್ದರೆ ಸಾಕು’ ಎಂದು. ನನ್ನನ್ನು ಮಾರುತ್ತಾನೋ ಇಲ್ಲವೋ ತಿಳಿಯದು ಆದರೆ ನಾನೊಂದು ವಸ್ತುವಾದೆನಲ್ಲಾ ಎಂದಿದ್ದಳು. ಅರೆ ನಾನು ತಮಾಷಿ ಮಾಡ್ದೆ ಮಾರಾಯ್ತಿ ಅದನ್ನ ಇಷ್ಟು ಸೀರಿಯಸ್ಸಾಗಿ ಯಾಕೆ ತಗೋತೀಯ ಅಂದಿದ್ದೆ. ಶ್ಯಾಮು ಮನಸ್ಸಿನಲ್ಲಿ ಅವತ್ತು ಏನೆಲ್ಲಾ ಸಂಗತಿಗಳು ಇದ್ದವೋ ತಿಳಿಯದು. ಆದರೆ ಅದೇ ಮುಂದಿನ ಎಲ್ಲಾ ಸಂಗತಿಗಳಿಗೂ ಬೀಜವಾಗಿಬಿಟ್ಟಿತೇ! ಶ್ಯಾಮುಗೆ ಕೆಲಸತ್ಯಗಳು ಗೋಚರಿಸಿಬಿಟ್ಟಿದ್ದವು. ನಾವು ಹೆಣ್ಣು ಮಕ್ಕಳೇ ಹೀಗೆ ಬಹು ಬೇಗ ಸತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ಭಾವುಕವಾಗಿ ಮರೆಮಾಚುತ್ತೇವೆ. ಅವುಗಳಿಗೆ ಬೇರೆಯದೆ ಅರ್ಥವನ್ನು ಕೊಟ್ಟುಕೊಂಡು ಸಮಾಧಾನ ಮಾಡಿಕೊಳ್ಳುತ್ತೇವೆ’ ಎಂದು ತನ್ನೊಳಗನ್ನು ತಾನೇ ಅರಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಳು.

ಇದಕ್ಕಿಂತಲೂ ಅವಳ ಖೇದ ಬೇರೆಯೇ ಇತ್ತು. ಆರಂಭದಲ್ಲಿ ಚಂದ್ರ ನನ್ನ ತೋಳುಗಳಲ್ಲಿ ಕರಗಿಹೋಗುತ್ತಿದ್ದ. ಎಷ್ಟೋ ವೇಳೆ ನಾವಿಬ್ಬರೂ ಬೇರೆ ಬೇರೆ ಅಂತ ಅನ್ನಿಸಲೇ ಇಲ್ಲ. ಅದು ಬಹಳ ದಿನ ಇರಲಿಲ್ಲ ತಾನ್ಯಾರು ಎನ್ನುವ ಅರಿವು ಜಾಗೃತ ಆಗಿಬಿಟ್ಟಿರುತ್ತಿತ್ತು. ಇದು ಸದಾ ಕಾಲಕ್ಕೂ ಗಂಡಾತರವೇ. ನಾನು ಹೀಗೆ ಹೇಳಿದರೆ ಇವಳಿಗೇನಾಗಿದೆ? ಏನೂ ಇಲ್ಲದ ಸ್ಥಿತಿಯಿಂದ ಕೋಟ್ಯಾಂತರ ರೂಪಾಯಿಯವರೆಗೂ ದುಡಿದಿದ್ದಾರೆ, ಒಳ್ಳೆಯ ಹೆಸರು, ಮನೆ, ಮಗಳು, ವಿದೇಶ ಪ್ರಯಾಣ ಸುಖ ಭೋಗ ಎಲ್ಲಾ ಇದೆಯಲ್ಲಾ, ಇದಕ್ಕಿಂತ ಏನು ಬೇಕು? ಇನ್ನೂ ಏನಾದರೂ ಬೇಕು ಎಂದುಕೊಳ್ಳುವುದು ದುರಾಸೆ ಅಲ್ಲವೇ ಎಂದು ಕೇಳುತ್ತಾರೆ. ಬದುಕಲಿಕ್ಕೆ ಎಲ್ಲಾ ಬೇಕು. ಚಂದ್ರ ನೀನು ನಾನು ನೋಡಿದವ ಅಲ್ಲ ಅಂತ ಅನ್ನಿಸಿದರೆ ಏನು ಮಾಡಲಿ ಎಂದು ಕೇಳಿದ್ದೆ. ಅದಕ್ಕವನು ಅತಿಯಾಗಿ ಯೋಚನೆ ಮಾಡಬೇಡ, ಆರಂಭದ ಆವೇಶ ಸಹಜ ಆದರೆ ಅದನ್ನು ಕೊನೆಯವರೆಗೂ ಇರಲಿ ಎನ್ನುವುದು ಅಸಹಜ. ಮಾಗುವಿಕೆ ಇದ್ದಿದ್ದೇ. ಜೀವನದ ಜೊತೆ ಜವಾಬ್ದಾರಿ ಬೇರೆ ಇರುತ್ತೆ ಎಂದಿದ್ದ. ಪ್ರೀತಿಯ ಹಿಂದೆ ಹೊರಟವರು ಹುಚ್ಚು ಕುದುರೆಯೇರಿ ಹೊರಟುಬಿಡಬೇಕು, ವಾಪಾಸು ಬರಲಾರದಷ್ಟು ದೂರಕ್ಕೆ. ಯಾರ ತೋಳು ಯಾವುದು ಎಂದು ಗೊತ್ತಾಗದಷ್ಟು ಕರಗಿಹೋಗಬೇಕು. ವಿಚಿತ್ರ ಅಂದರೆ ಆಮೇಲಾಮೇಲೆ ನಾವು ತೋಳುಗಳಲ್ಲಿ ಕರಗುವ ಹೊತ್ತಿನಲ್ಲೂ ಪ್ರೇಮಿಗಳಾಗಲಿಲ್ಲ. ಪ್ರೇಮವನ್ನೂ ಅರಗಿಸಿಕೊಳ್ಳಲಿಕ್ಕೂ ದೊಡ್ಡ ತಾಕತ್ತು ಬೇಕು. ತಾದ್ಯಾತ್ಮ ಬೇಕು. ಬಾಯಾರಿದರೆ ನೀರು ಕುಡಿವ ಸಹಜತೆ ಬೇಕು ಎನ್ನಿಸುತ್ತಿತ್ತು. ನನ್ನ ಭಾವತೀವ್ರತೆ ಅವನ ಜವಾಬ್ದಾರಿ ಎರಡೂ ಬೇರೆಯದೆ ದಿಕ್ಕು. ಜಗತ್ತಿನ ಯಶಸ್ಸು ತನ್ನ ಕೈಗೆ ಸಿಗಲಿ ಎಂದು ಅವನು ಭಾವಿಸಿದರೆ ನಾನು ಮಾತ್ರ ಪ್ರೀತಿಯ ಸಾಫಲ್ಯತೆಯ ಬಗ್ಗೆ ಯೋಚಿಸುತ್ತಿದ್ದೆ. ಆಗ ನನಗೆ ಚಂದ್ರ ಅಪರಿಚಿತ ಅನ್ನಿಸುತ್ತಿತ್ತು. ಅವನ ಜೊತೆ ಮಲಗುವಾಗಲೂ ನಾನು ಇಷ್ಟ ಪಟ್ಟ ಗಂಡÀಸಿನ ಜೊತೆ ಇದ್ದೇನೆ ಅನ್ನಿಸದೆ ಅಪರಿಚಿತನ ಜೊತೆ ಇದ್ದೇನೆ ಎನ್ನಿಬಿಡುತ್ತಿತ್ತು. ಸೆರಗು ತೆರೆಯಲಾಗದೆ ಒದ್ದಾಡಿಬಿಡುತ್ತಿದ್ದೆ. ಬೆತ್ತಲಾಗುವ ಕಾಲು ಕಾಣಾದಿರಲಿ ಎಂದು ಬಟ್ಟೆ ಹೊಚ್ಚುವಾಗ ಯಾಕೆ ಎನ್ನುತ್ತಿದ್ದ ಚಂದ್ರ. ಕಾಲು ಕಾಣುತ್ತಿದೆ ಎಂದಾಗ ಅವನಿಗೆ ಅಚ್ಚರಿಯಾಗುತ್ತಿತ್ತು. ಕಂಡರೆ ಏನೀಗ ಕಾಣಲಿ ಬಿಡು. ಇಷ್ಟು ಅರಿತ ಮೇಲೂ ನಿನ್ನ ನಾಚಿಕೆ ಕಡಿಮೆ ಆಗಲಿಲ್ಲವಲ್ಲಾ!’ ಎಂದು ರೇಗಿಸುತ್ತಿದ್ದ. ಅದು ನಾಚಿಕೆ ಅಲ್ಲ ಅಪರಿಚಿತತೆ ಎಂದು ಅವನಿಗೆ ಹೇಗೆ ಹೇಳಲಿ? ಈಗಲೂ ನನಗೆ ಎಲ್ಲವನ್ನೂ ನೆನೆಸಿಕೊಂಡು ತಪ್ಪೆಲ್ಲಾಗಿದೆ? ಇದೆಲ್ಲಾ ನನ್ನ ವ್ಯಕ್ತಿತ್ವದ್ದೆ ದೋಷವಾ? ಅದಕ್ಕಾಗೆ ಚಂದ್ರ ನನ್ನಿಂದ ದೂರ ಆದ... ಅಲ್ಲಲ್ಲ ನಾನೇ ದೂರ ಮಾಡಿಕೊಂಡೆನಾ? ಎಂದೆನ್ನಿಸಿದರೆ ಅದಕ್ಕೆ ಪರಿಹಾರ ಯಾವುದು ತೇಜೂ. ಅದಕ್ಕಾಗಿ ನನ್ನ ಹುಡುಕಾಟದ ಪ್ರಯತ್ನಗಳು ಹೇಗೆಲ್ಲಾ ಇತ್ತಲ್ಲವಾ?’ ಎಂದು ಆಳದ ಬಾವಿಯಿಂದ ಎದ್ದುಬಂದ ಬಿಂದಿಗೆ ನೀರು ತುಳುಕಿಸುವಂತೆ ಮಾತಾಡಿದ ಶ್ಯಾಮು ಬದುಕಿನಿಂದ ಬಯಸಿದ್ದಾದರೂ ಏನನ್ನು?!

ಅವಳು ಯಾವಾಗಲೂ ಹೀಗೆ ಏನೋ ಒಂದನ್ನು ಹುಡುಕುವ ಉತ್ಸಾಹದಲ್ಲೇ ಇರುತ್ತಿದ್ದಳು. ಅವಳ ತುಂಬಾ ಯಾವ ಶಕ್ತಿ ಪ್ರವಹಿಸುತ್ತಿತ್ತು. `ಚಂದ್ರಾ... ಚಂದ್ರಾ... ಎನ್ನುತ್ತಾ ಅವನ ಹಿಂದೆ ಓಡಾಡುವಾಗ ಪುಟ್ಟ ಮಗುವೊಂದು ತನ್ನ ಕಾಲಿಗೆ ಕಟ್ಟಿದ ಗೆಜ್ಜೆಯ ಶಬ್ದಕ್ಕೆ ತಾನೇ ಮೋಹಗೊಂಡಂತೆ ಇರುತ್ತಿದ್ದೆ. ಘನ ಗಂಭೀರವಾಗಿ ಕುಳಿತಿರುತ್ತಿದ್ದ ಚಂದ್ರ ಕೂಡಾ ಒಮ್ಮೊಮ್ಮೆ ನನಗಿಂತಲೂ ಚಿಕ್ಕವನಾದ ಮಗುವಿನ ಹಾಗನ್ನಿಸಿಬಿಡುತ್ತಿದ್ದ. ಅವನ ಕಣ್ಣುಗಳಲ್ಲಿ ನನ್ನ ಬಿಂಬವನ್ನು ನೋಡುತ್ತಾ ಅವನ ಕಪ್ಪು ಕಣ್ಣಿನ ಒಳಸುಳಿಗೆ ಸಿಕ್ಕವಳಂತೆ ಮುದ್ದಿಸುತ್ತಿದ್ದೆ. ಅವನಿಗೂ ನನ್ನ ಅದು ಇಷ್ಟವಾಗುತ್ತಿತ್ತು. ಚಂದ್ರನಿಗೂ ನನಗೂ ವಯಸ್ಸಿನ ಅಂತರ ತುಂಬಾ ಇತ್ತು. ಅವರ ಅಪ್ಪ ಅಮ್ಮ ಏನೂ ಗೊತ್ತಿದವರು. ಅವನ ಹುಟ್ಟಿದ ದಿನವನ್ನೂ ಹೇಗೆ ಗುರುತಿಟ್ಟುಕೊಳ್ಳುತ್ಟಾರೆ? - ಬರಗಾಲ ಬಂದಿತ್ತಲ್ಲ ಆ ಉಗಾದಿಯ ಮುಂಚೆ ನೀನು ಹುಟ್ಟಿದ್ದು ಅಂದಿದ್ದರು ಶ್ಯಾಮು, ಇನ್ಯಾರು ನನ್ನ ಹುಟ್ಟಿದ ದಿನ ಇಂಥಾದ್ದು ಎಂದು ಹೇಳಬೇಕು? ಎಂದು ನಗುತ್ತಿದ್ದ. ಅವನ ನಗುವಲ್ಲಿದ್ದದ್ದು ದುಃಖವಾ? ಅಥವಾ ತನ್ನ ಅಸ್ತಿತ್ವದ ಭಾಗವಾದ ಹುಟ್ಟಿನ ಮೂಲದಲ್ಲೇ ಇದ್ದ ಇಗ್ನೋರೆನ್ಸಾ? ಹೀಗಾಗಿ ಪಕ್ಕಾ ಎಷ್ಟು ವರ್ಷ ದೊಡ್ಡವನು ಎನ್ನುವುದಕ್ಕೆ ಲೆಕ್ಕ ಇಲ್ಲ. ಸುಮಾರು ಹತ್ತು ವರ್ಷಗಳು ಇರಬಹುದು. ಸಣ್ಣವಳು ಎಂದು ಕರುಣೆಯಿಂದ ನೋಡುತ್ತಿದ್ದ, ತುಂಬಾ ಕೇರ್ ಮಾಡ್ತಾ ಇದ್ದ. ಅತ್ಯಂತ ಪುಟ್ಟ ಮಗುವನ್ನು ರಮಿಸುವಂತೆ, ನಿನಗೇನು ಬೇಕು ಎನ್ನುತ್ತಿದ್ದ. ಕೆಲವೊಮ್ಮೆ ದೊಡ್ಡವರೇ ಮಕ್ಕಳ ವಿಷಯಕ್ಕೆ ನಿರ್ಧಾರ ಮಾಡುವ ಹಾಗೆ ನಡೆದುಕೊಳ್ಳುತ್ತಿದ್ದುದು ಅವನ ಜೀವಕ್ಕೆ ಸಣ್ಣ ತುಣುಕಿನ ಹಾಗೆ ಅಂಟಿಕೊಂಡುಬಿಡಬೇಕು ಎನ್ನುವಷ್ಟು ಸಂತೋಷ ಕೊಡುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನಾನು ದೊಡ್ಡವಳು ಎನ್ನುವ ಹಾಗೆ, `ನಿನ್ನ ಜೀವನದ ನಿರ್ಧಾರ ನೀನೇ ಮಾಡಬೇಕು ಶ್ಯಾಮು’ ಎಂದು ಎದ್ದು ಹೋಗುತ್ತಿದ್ದ. ನನಗೆ ದುಃಖ ಅನ್ನಿಸುತ್ತಿತ್ತು. ಎಷ್ಟೋ ವೇಳೆ ಯಾವುದೋ ಪಾರ್ಟಿಗೆ ಅಂತ ಕರೆದುಕೊಂಡು ಹೋಗಿ ನನ್ನ ಒಬ್ಬಳನ್ನೇ ಬಿಟ್ಟು ಬಂದುಬಿಡುತ್ತಿದ್ದ. ನಾನು ಕಂಗಾಲಾಗಿ ಅಲ್ಲಿದ್ದವರನ್ನು ಚಂದ್ರ ಎಲ್ಲಿ? ಎಂದು ಕೇಳುತ್ತಿದ್ದರೆ ಅವರೆಲ್ಲಾ ನಗುತ್ತಿದ್ದರು. ಕಷ್ಟ ಪಟ್ಟು ಮನೆಗೆ ಬಂದರೆ ತನ್ನ ಪಾಡಿಗೆ ತಾನು ಬಿಯರ್ ಅನ್ನು ಕುಡಿಯುತ್ತಾ ಕೂತಿರುತ್ತಿದ್ದ. ಇಲ್ಲಾ ಕ್ಯಾನ್ವಾಸ್‌ನ ಮೇಲೆ ಹುಚ್ಚಾ ಪಟ್ಟೆ ಗೀಚುತ್ತಿರುತ್ತಿದ್ದ. ಯಾಕೆ ನನ್ನ ಬಿಟ್ಟು ಬಂದೆೆ ಚಂದ್ರಾ? ಎಂದು ಕೇಳಿದರೆ, `ನಿನ್ನ ನೀನು ನೋಡಿಕೊಳ್ಳುವುದು ಯಾವಾಗ? ನಾನು ಸದಾ ನಿನ್ನ ಜೊತೆ ಇರೋಕ್ಕಾಗುತ್ತಾ’ ಎಂದಿದ್ದ. ಮುಂದೊಂದು ದಿನ `ನಾನೇನು ಯಂತ್ರಾನಾ ಸದಾ ನಿನ್ನ ಪ್ರೀತಿಸ್ತಾ ಕುತ್ಕೊಳ್ಳೋಕ್ಕೆ’ ಎಂದಿದ್ದನಲ್ಲಾ ಆ ನೋವು ನನ್ನ ನರಗಳನ್ನು ಮೀಟಿ ವಿಚಿತ್ರವಾದ ಯಾತನೆಯನ್ನು ತಂದುಬಿಟ್ಟಿತ್ತು’ ಶ್ಯಾಮು ಹೇಳಿದ್ದು ಯಾರ ಬಗ್ಗೆ? ಅವಳ ಆರಾಧನೆಯ ಚಂದ್ರನ ಬಗ್ಗೆನೇನಾ? ದಿನ ಕಳೆದಂತೆ ಹಿಡಿದ ಚಿಟ್ಟೆಯ ರೆಕ್ಕೆಯ ಹುಡಿಯಲ್ಲಿ ಅಡಕವಾಗಿದ್ದ ಬಣ್ಣಗಳನ್ನು ಹುಡುಕಲು ಹೊರಡುವಷ್ಟು ಸೂಕ್ಷ್ಮವಾಗುತ್ತಿದ್ದಳಾ? ಇಲ್ಲದಿದ್ದರೆ ಇಂಥಾ ಮಾತುಗಳು ಹೇಗೆ ಅಲ್ಲವಾ!

ಚಂದ್ರ ಬರೆದ ಚಿತ್ರಗಳನ್ನು ಅವಳು ವಿಮರ್ಶೆ ಮಾಡುತ್ತಿದ್ದುದೂ ಹೀಗೆ. `ಒಮ್ಮೆ ಸ್ವಪ್ನ ಸುಂದರಿ ಎಂದು ಶೀರ್ಷಿಕೆಯ ಚಿತ್ರವನ್ನು ಅವನು ಬರೆದಿದ್ದ. ಬೆಟ್ಟ ಗುಡ್ಡಗಳ ನಡುವೆ ತೀರಾ ಸಣ್ಣ ಸೊಂಟದ ಹೆಣ್ಣು ಅರೆನಗ್ನಳಾಗಿ ಹಕ್ಕಿಯನ್ನು ಹಿಡಿಯುತ್ತಿದ್ದಾಳೆ. ಉಳಿದ ಬಟ್ಟೆ ಕೂಡಾ ನೆಪಕ್ಕೆ ಮಾತ್ರವೇ ಇದೆ. ಅದನ್ನು ನೋಡಿ ಜಗತ್ತೆಲ್ಲಾ ಚಂದ್ರನನ್ನು ಮೆಚ್ಚಿಕೊಂಡುಬಿಟ್ಟಿತ್ತು. ಆದರೆ ಶ್ಯಾಮು `ಹಕ್ಕಿಯನ್ನು ಹಿಡಿಯುವ ಹೆಣ್ಣು ಅರೆನಗ್ನ ಯಾಕಿರಬೇಕು? ಮತ್ತೆ ಆವಳ ಸೊಂಟ ಇಷ್ಟು ತೆಳು ಹೇಗೆ? ಇರುವ ಬಟ್ಟೆಯಾದರೂ ಯಾಕೆ? ಅದು ಇದ್ದರೂ ಒಂದೆ ಇಲ್ಲದಿದ್ದರೂ ಒಂದೇ’ ಎಂದೆಲ್ಲಾ ಕೇಳಿದ್ದೆ. ಚಂದ್ರ ನಗುತ್ತಾ ನನ್ನ ತಲೆಯ ಮೇಲೆ ಮೊಟಕಿ, `ಶ್ಯಾಮು ಚಿತ್ರಗಳಿಗೆ ಬರಿಯ ಲಾಜಿಕ್ ಹುಡುಕುತ್ತಾ ಹೋದರೆ ಹೇಗೆ? ನನ್ನ ಒಳಗೆ ಕಲ್ಪನೆ ಏನಿದೆ ಅದನ್ನು ಬರೆಯುವೆ’ ಎಂದ. `ನಿನ್ನ ಮನಸ್ಸಿನಲ್ಲಿ ಹೆಣ್ಣಿನ ನಗ್ನ ಸ್ಥಿತಿ ಆಕರ್ಷಕ ಅದು ನಿನಗೆ ಮಾತ್ರವಲ್ಲ ಜಗತ್ತಿಗೆ ಕೂಡಾ ಅಂತ ಅನ್ನಿಸಿದ್ದರಿಂದ ಇಂಥಾ ಚಿತ್ರವನ್ನು ಬರೆದೆಯಲ್ಲವೇ? ಅದೊಂದು ಚಟ, ಹೆಣ್ಣನ್ನು ಹೀಗೆ ಚಿತ್ರಿಸುವುದರಿಂದ ತಮ್ಮನ್ನು ತಾವು ರಸಿಕರು ಎಂದು ತೋರಿಸಿಕೊಳ್ಳುವುದು. ಚಂದ್ರ ನೀನೂ ಇದಕ್ಕೆ ಹೊರತಾಗಲಿಲ್ಲವಲ್ಲ. ಸಲ್ಲದ ಕಡೆ ತೆರೆದ ಮೈಯ್ಯಿಂದ ಯಾವ ಹೆಣ್ಣು ಓಡಾಡುತ್ತಾಳೆ? ಅರೆಬರೆ ಬಟ್ಟೆ ನಿನ್ನ ಮನಸ್ಸನ್ನು ಕೆರಳಿಸಿದರೆ ನಗ್ನತೆ ಸುಖ ಕೊಡುತ್ತದೆ. ಹೀಗೆ ವಿಪರೀತಕ್ಕೆ ಎಳೆಯುವ ನಿನ್ನ ಮನಸ್ಸನ್ನು ಕೇಳಿಕೋ, ನೀನು ಹೀಗೆ ಬರೆದಿದ್ದೀಯಲ್ಲಾ ಇದು ಸರಿಯಾ ಎಂದು? ನಿನ್ನ ಮನಸ್ಸು ಜ್ವಾಲಾಮುಖಿಯಂತೆ ಸಿಡಿಯದಿದ್ದರೆ ನಾನು ಕೇಳಿದ್ದು ಕೊಡುವೆ’ ಎಂದಿದ್ದೆ. ಚಂದ್ರನಿಗೆ ಕೋಪಬಂದಿತ್ತು. `ಅರೆ! ಯಾವಹೆಣ್ಣು ಹೀಗೆ ಓಡಾಡುವುದಿಲ್ಲವೋ?’ ಎಂದಿದ್ದ. `ನಿಜ ಓಡಾಡುವವರು ಓಡಾಡಲಿ, ಓಡಾಡುವ ಕೆಲ ಮಂದಿಯನ್ನು ಮಾತ್ರ ನಾವು ಹೇಳಬೇಕೋ ಅಥವಾ ನಿಜವಾದ ಮನುಷ್ಯರ ಭಾವಗಳ ಜೊತೆ ಇರಬೇಕೋ? ಕಲೆಯ ಉದ್ದೇಶ ಹಸಿಹಸಿಯಾಗಿ ಹೇಳುವುದಾ ಅಥವಾ ಸೂಕ್ಷ್ಮ ಸ್ಥಿತಿಯನ್ನು ತೆರೆದಿಡುವುದಾ?’ ಎಂದಿದ್ದೆ. `ನನ್ನ ಚಿತ್ರವನ್ನು ಹೀಗೆ ಯಾರೂ ವಿಮರ್ಶಿಸಿರಲಿಲ್ಲ’ ಎಂದ. ಅದಕ್ಕೆ ನಾನು ನಗುತ್ತಾ, `ಇರಲಿ ಬಿಡು ಏನೀಗ? ಯಾರೂ ಮಾಡಲಿಲ್ಲ ಅಂದರೆ ನಾನು ಮಾಡಬಾರದು ಎಂದೇನಾದರೂ ಇದೆಯಾ? ಜಗತ್ತು ನಿನಗೆ ಹೇಳಲಾರದ್ದನ್ನು ನಾನು ಹೇಳುವೆ. ನಾನು ಹೇಳಬಲ್ಲೆ ಕೂಡಾ ಯಾಕೆಂದರೆ ನಾನು ನಿನ್ನ ಪ್ರೀತಿಸುತ್ತೇನೆ. ನಿನಗಾಗದಿದ್ದರೂ ನಿನ್ನ ತೋಳುಗಳಲಿ ಹುಚ್ಚು ಹುಚ್ಚಾಗಿ ಕರಗಿ ಹೋಗುವ ನನಗೆ, ನಿನ್ನನ್ನು ಘನಗೊಳಿಸುವುದೂ ಗೊತ್ತಿದೆ’ ಎಂದಾಗ ಚಂದ್ರ ಕೋಪದಲ್ಲಿ ನನ್ನನ್ನು ಜರೆದಿದ್ದ. ನಾನು ಇದನ್ನು ಅವನಿಂದ ನಿರೀಕ್ಷಿಸಿರಲಿಲ್ಲ. ನಾನೂ ಹಟಕ್ಕೆ ಬಿದ್ದವಳಂತೆ ಏನೆಲ್ಲವನ್ನೂ ನೆನಪಿಸಿದ್ದೆ.

`ನೆನಪಿಸಿಕೋ, ಆ ದಿನ ನಾನು ಮೊದಲ ಬಾರಿಗೆ ನಿನ್ನೆದುರು ನಗ್ನವಾಗಿದ್ದೆ. ಅಲ್ಲಿ ಮೈ ಮುದುರಿಕೊಳ್ಳುವ ನಾಚಿಕೆಯಿತ್ತು. ನಿನಗೆ ಸರ್ವವನ್ನೂ ಅರ್ಪಣೆ ಮಾಡಿಕೊಳ್ಳಬೇಕೆನ್ನುವ ಬಿಸುಪು ಎದೆಯಾಂತರಾಳದಲ್ಲಿದ್ದರೂ ಸಂಕೋಚ ಮತ್ತೆ ಮತ್ತೆ ಬಟ್ಟೆಯನ್ನು ತಡವುವಂತೆ ಮಾಡುತ್ತಿತ್ತು. ನಿನ್ನ ಕಣ್ಣುಗಳಲ್ಲಿನ ನನ್ನ ಬಗೆಗಿನ ಮೆಚ್ಚುಗೆ ಕೂಡಾ ನನ್ನ ಚಕ್ಕುಲಿ ಹುಳದಂತೆ ಸುತ್ತಿ ಸುತ್ತಿ ಮಲಗುವಂತೆ ಮಾಡಿತ್ತು. ಗೋಡೆಗಳ ನಡುವೆ ಗಂಡಸನ್ನು ಕೂಡಲಿಕ್ಕೆ ಬರುವ ಹೆಣ್ಣು ಮೈತುಂಬಿದ ಬಟ್ಟೆಯಲ್ಲಿರುವಾಗ ಬಯಲಿನಲ್ಲಿ ಈ ಹೆಣ್ಣು ಹೇಗೆ ಬಿಡುಬೀಸಾಗಿ ನಡೆಯುತ್ತಾಳೆ?’ ಎಂದಿದ್ದೆ. ಚಂದ್ರನಿಗೆ ಯಾವುದೂ ಇಷ್ಟವಾಗಲಿಲ್ಲ. `ಅದು ನನ್ನ ಕಲ್ಪನೆ, ಅದನ್ನು ಅದ್ಭುತ ಎಂದು ಜಗತ್ತು ಕೊಂಡಾಡಿದೆ. ನಿನಗೆ ಹೊಟ್ಟೆಕಿಚ್ಚು’ ಎಂದುಬಿಟ್ಟಿದ್ದ. ನೋವಾಯಿತು, ಮೊದಲ ಸಲ ನನ್ನನ್ನು ಆತುಕೊಂಡು ಕಣ್ಣೊಳಗೆ ಕಣ್ಣನ್ನಿರಿಸಿ, `ಶ್ಯಾಮು ಈಗ ಹೇಳು ನನ್ನುಸಿರು ನಿನ್ನುಸಿರು ಬೇರೆ ಬೇರೆಯಾ’ ಎಂದು ಕೇಳಿದ್ದನಲ್ಲಾ? ಅವತ್ತು ಇಬ್ಬರ ಉಸಿರೂ ಬೆರೆತುಹೋಗಿ ಗಾಳಿಗೆ ಬೇರೆ ಮಾಡಿ ನೋಡುವ ಹುಕಿ ಹುಟ್ಟಿತ್ತು. ಅವನು ಹೇಳಿದ್ದ `ನನ್ನುಸಿರು ನಿನ್ನೊಳಗೆ ಆಡುತ್ತಿದೆ’ ಎಂದು. ಜಗತ್ತಿನ ಎಲ್ಲವೂ ನಮ್ಮೊಳಗೆ ಅಡಕವಾಗಿದೆ ಎನ್ನುವಂತೆ ನಕ್ಕಿದ್ದೆವು. ಅವನಿಗೆ ನಾನು ಹೇಗೆ ನೆನಪಿಸಲಿ, ಅವತ್ತಿನ ಅವನ ಮಾತುಗಳನ್ನು. ಮರೆತಿದ್ದೀಯ ನಿನ್ನುಸಿರು ನನ್ನುಸಿರು ಈಗಲೂ ಪರಸ್ಪರ ಆಡುತ್ತಿದೆ ಎನ್ನುವುದನ್ನು? ಒಮ್ಮೆ ಎರಡು ನದಿಗಳು ಸೇರಿ ಹೋದಮೇಲೆ ಹೇಗೆ ಬೇರೆ ಮಾಡುವುದು?’

ಶ್ಯಾಮುವಿನ ಈ ಮಾತುಗಳು ಚಂದ್ರನಿಗೆ ಯಾಕೆ ತಾಕಲಿಲ್ಲ? ಚಿಕ್ಕವಳಿದ್ದಾಗಿನಿಂದಲೂ ಹೀಗೆ, ಜಗತ್ತು ಅವಳ ಕ್ರಿಯೆಯನ್ನು ಮೂರ್ಖತನದ್ದು ಎಂದು ಪದೇ ಪದೇ ಸಾಬೀತು ಪಡಿಸುವ ಹಂಬಲದಲ್ಲಿತ್ತು. ಗಿಳಿಯ ಹಿಡಿಯ ಬಲ್ಲೆಯಾ ಎನ್ನುವ ಅವಿವೇಕಿಗಳ ಗೊಡವೆ ನನಗೇಕೆ ಎನ್ನುವಂತೆ ಕಡು ಹಸಿರು ಎಲೆಗಳನ್ನು ತಂದು ಅರೆಯುತ್ತಿದ್ದಳು. ಗಿಳಿಗೆ ಹಸಿರು ಬಣ್ಣ ಅಲ್ಲವಾ ಎಂದು ಅದನ್ನು ಸೋಸಿ ಇರಿಸಿಕೊಳ್ಳುತ್ತಿದ್ದಳು. ಪೇಪರನ್ನು ಅದರಲ್ಲಿ ಅದ್ದಿ ಒಣಗಿಸಿ, ಹಕ್ಕಿ ಮಾಡುತಿದ್ದಳು. ಕೊಕ್ಕಿಗೆ ಪಾರಿಜಾತದ ತೊಟ್ಟು ಸಿಕ್ಕಿಸುತ್ತಿದ್ದಳು.

ನೆನಪಿದೆ ಶ್ಯಾಮು ಹೀಗೆ ಕಾಗದದ ದೋಣಿಗಳನ್ನು ನೀರಲ್ಲಿ ತೇಲಿಬಿಟ್ಟ ಹಾಗೆ, ಹಸಿರು ಬಣ್ಣದ ಕಾಗದದ ಹಕ್ಕಿಗಳನ್ನು ಗಾಳಿಗೆ ಒಡ್ಡಿ ಹಾರು ಹಾರು ಎಂದು ಹೇಳುತ್ತಿದ್ದುದು. ಅವು ಹಾರದೇ ಇದ್ದಾಗ ಅವಳು ಬೇಸರಿಸಿಕೊಂಡಿರಲಿಲ್ಲ ಬದಲಿಗೆ ಇದನ್ನು ಹಾರುವಂತೆ ಮಾಡುವುದು ಹೇಗೆಂದು ದಾರಿಗಳನ್ನು ಹುಡುಕುತ್ತಿದ್ದಳು. ಒಂದು ದಿನ ಇನ್ನೂ ಬೆಳಗ್ಗೆ ಕಣ್ಣೆ ಬಿಡದಿರುವ ನನ್ನ ಬಡಿದೆಬ್ಬಿಸಿದ್ದಳು. ಕಣ್ಣನ್ನು ಉಜ್ಜುತ್ತಾ ಏನೇ ನಿನ್ನ ಗೋಳು ಎಂದು ಕೇಳುವ ಮೊದಲೇ ನನ್ನ ಹಕ್ಕಿ ಹಾರುತ್ತಿದೆ ಎಂದಿದ್ದಳು. ನಿನ್ನ ಹಕ್ಕಿ ಯಾವುದೇ ಎಂದು ನಿದ್ದೆ ಕಣ್ಣುಗಳನ್ನು ಕಷ್ಟಪಟ್ಟು ಎಚ್ಚರಿಸುತ್ತಾ ಕೇಳಿದಾಗ ನನ್ನ ಅನಾಮತ್ತಾಗಿ ಎಳೆದುಕೊಂಡು ಓಡಿದ್ದಳು. ಮುಚ್ಚಿಟ್ಟುಕೊಂಡ ನಮ್ಮಯ ಹಕ್ಕಿಗಳೆಲ್ಲಾ ಬಯಲಿಗೆ ಬಂದು, ಹಿತ್ತಲಿನ ಮಾವಿನ ಮರದಲ್ಲಿ ನೇತಾಡುತ್ತಿದ್ದವು. ಕಣ್ಣುಜ್ಜಿಕೊಂಡು ನೋಡಿದೆ, ಹತ್ತಾರು ಕಾಗದದ ಹಕ್ಕಿಗಳು ದಾರ ಕಟ್ಟಿಸಿಕೊಂಡು ಗಾಳಿಗೆದುರಾಗಿ ಹಾರುತ್ತಿದ್ದವು. ಅವುಗಳನ್ನೇ ತದೇಕ ನೋಡುತ್ತಿದ್ದ ಶ್ಯಾಮುವಿನ ಕಣ್ಣಲ್ಲಿ ಹೆಮ್ಮೆ ಇತ್ತು. ಅಸಾಧ್ಯವಾದದ್ದು ಜಗತ್ತಿನಲ್ಲಿ ಎಲ್ಲಾದರೂ ಇದೆಯಾ? ಎನ್ನುವಂತಿತ್ತು ಅವಳ ನಗು. ನನಗವತ್ತು ಅವಳು ತುಂಬಾ ಮೆಚ್ಚುಗೆಯಾಗಿದ್ದಳು, ಖುಷಿಯಿಂದ ನಾನವಳನ್ನು ತಬ್ಬಿ ಮುತ್ತುಕೊಟ್ಟಿದ್ದೆ.

- ಪಿ. ಚಂದ್ರಿಕಾ

ಈ ಅಂಕಣದ ಹಿಂದಿನ ಬರೆಹಗಳು:
ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...