ಗೋಕಾಕರ ‘ಭಾರತ ಸಿಂಧುರಶ್ಮಿ’: ಜನಮನ ಅಭೀಪ್ಸೆಗಳ ಸಂಕೇತ

Date: 01-03-2022

Location: ಬೆಂಗಳೂರು


‘ಜನಮನದ ಅಭೀಪ್ಸೆಗಳ ಸಂಕೇತವಾಗಿರುವ ಭಾರತ ಸಿಂಧುರಶ್ಮಿಯಲ್ಲಿನ ಗೃಹಸ್ಥ ಪಾತ್ರಗಳು ಕಠೋರ ವಾಸ್ತವವನ್ನು ವಿವರಿಸುವ ಕೆಚ್ಚನ್ನು ಪಡೆದುಕೊಂಡಿವೆ’ ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ 'ಬದುಕಿನ ಬುತ್ತಿ' ಅಂಕಣದಲ್ಲಿ ವಿ.ಕೃ.ಗೋಕಾಕರ ‘ಭಾರತ ಸಿಂಧುರಶ್ಮಿ’ಯ ಕುರಿತು ವಿಶ್ಲೇಷಿಸಿದ್ದಾರೆ.

ವಿನಾಯಕ ಎಂಬ ಕಾವ್ಯನಾಮದಿಂದ, ವಿ. ಕೃ. ಗೋಕಾಕ ಎಂಬ ಸಂಕ್ಷಿಪ್ತ ನಾಮದಿಂದ ಹೆಸರಾದ ವಿನಾಯಕ ಕೃಷ್ಣರಾವ್ ಗೋಕಾಕ ಅವರ ‘ಭಾರತ ಸಿಂಧುರಶ್ಮಿ’ ಎರಡು ಸಂಪುಟಗಳಲ್ಲಿ, ಹನ್ನೆರಡು ಕಾಂಡಗಳಲ್ಲಿ ಹರಡಿ ನಿಂತ ಮೂವತ್ತೈದು ಸಾವಿರ ಸಾಲುಗಳನ್ನು ಹೊಂದಿರುವ ಮಹಾಕಾವ್ಯ. 1982-83 ರಲ್ಲಿ ಮೊದಲ ಬಾರಿಗೆ ಇದು ಪ್ರಕಟವಾಯಿತು. ಸರಳ ರಗಳೆಯಿಂದ ಹದಗೊಳಿಸಿಕೊಂಡಿರುವ ತಮ್ಮ ಪದ್ಯ ವಿಧಾನವನ್ನು ಗೋಕಾಕರು ಸಂಕೀರ್ಣ ಛಂದಸ್ಸು ಎಂದು ಕರೆದಿದ್ದಾರೆ. ಋಗ್ವೇದ ಭಾರತ ಸಿಂಧು ರಶ್ಮಿಯ ಆಧಾರ ಸ್ತಂಭವಾಗಿದೆ. ಸಂಸ್ಕೃತ ಮೂಲದ ಇತಿಹಾಸಗಳಾದ ರಾಮಾಯಣ, ಮಹಾಭಾರತಗಳನ್ನು ಆಧರಿಸಿ ಭಾರತೀಯ ಭಾಷೆಗಳಲ್ಲಿ ಹಲವು ಮಹಾಕಾವ್ಯಗಳು ರಚನೆಯಾಗಿವೆ. ಆದರೆ ಹೀಗೆ ಋಗ್ವೇದದ ವಸ್ತುವನ್ನು ಸಮಕಾಲೀನ ಮಹಾಕಾವ್ಯದ ವಸ್ತುವನ್ನಾಗಿ ದುಡಿಸಿಕೊಂಡಿರುವ ಕಾವ್ಯ ಎಂಬ ಹೆಗ್ಗಳಿಕೆ ಇದರದು. “ಆಡು ಮಾತಿನ ಲಯವನ್ನು ಸಾಧಿಸಲೆತ್ನಿಸುವ, ಉಪಮೆ, ಉತ್ಪ್ರೇಕ್ಷೆಗಳಿಂದ ತುಂಬಿಕೊಂಡ ಸರಳ ಗಂಭೀರ ಭಾಷೆಯಲ್ಲಿ ವೈದಿಕ ಯುಗದ ಕಥಾನಕವೊಂದು ಅರಳಿ ಬಂದಿದೆ. ವೈದಿಕ ಸಾಹಿತ್ಯ, ಪುರಾಣಗಳು ಮತ್ತು ಇತಿಹಾಸದ ಅಧ್ಯಯನದ ಮೂಲಕ ಗೋಕಾಕರು ವೈದಿಕ ಪರಂಪರೆಯ ಆಳಕ್ಕೆ ಧುಮುಕುವ ಸಾಹಸ ಮಾಡಿದ್ದಾರೆ. ಸಂಕೀರ್ಣ ಯುಗವೊಂದರ ಸಾಮಾಜಿಕ, ರಾಜಕೀಯ ಸಂದರ್ಭದ ಹಿನ್ನೆಲೆಯಲ್ಲಿ ವಿಶ್ವರಥ (ವಿಶ್ವಾಮಿತ್ರರ ಮೊದಲ ಹೆಸರು) ಎದುರಿಸಿದ ಪಾರಮಾರ್ಥಿಕ ಸಮಸ್ಯೆಗಳನ್ನೂ ತನ್ನ ಯುಗದ ಪರಿವರ್ತನೆಯಲ್ಲಿ ಆತ ವಹಿಸಿದ ಪಾತ್ರವನ್ನೂ ಚಿತ್ರಿಸುವಾಗ ಗೋಕಾಕರು ತಮ್ಮ ಸಮಕಾಲೀನ ಸಂಕೀರ್ಣ ಯುಗವನ್ನು ಧ್ವನಿಸುತ್ತಾರೆ” ಎಂಬ ಪ್ರೊ.ಎಚ್. ಆರ್. ಅಮರನಾಥರ ಮಾತು ಮಹಾಕಾವ್ಯದ ಸೈದ್ಧಾಂತಿಕ ಹಿನ್ನೆಲೆಯನ್ನು ಪರಿಚಯಿಸುತ್ತದೆ.

ಭಾರತ ಸಿಂಧುರಶ್ಮಿಯಲ್ಲಿ ಪೀಠಿಕಾ ಸಂಧಿಯನ್ನು ಹೊರತುಪಡಿಸಿದಂತೆ 1. ಪೂರ್ವಾಪರ ಕಾಂಡ 2. ಉತ್ಸರ್ಪಣಕಾಂಡ 3. ಮನುಕುಲಹಂಸಕಾಂಡ 4. ಸಪ್ತಸಿಂಧೂ ಕಾಂಡ 5. ಕಾನ್ಯಕುಬ್ಜರಾಜ್ಞೀಕಾಂಡ 6. ಋಷ್ಯಾಶ್ರಮಕಾಂಡ 7. ದಾಶರಾಜ್ಞಕಾಂಡ 8. ಅಶ್ವಮೇಧಕಾಂಡ 9. ಭಾರತ ವಿಸ್ತರಣ ಕಾಂಡ 10. ತ್ರಿಶಂಕು ಪ್ರಜ್ಞಾಕಾಂಡ 11. ಕ್ರಾಂತದರ್ಶನ ಕಾಂಡ ಹಾಗೂ 12. ಶರದಃಶತಮ್ ಕಾಂಡ ಎಂಬ ಹನ್ನೆರಡು ಕಾಂಡಗಳಿವೆ. ರಚನೆಯ ದೃಷ್ಟಿಯಿಂದ ಈ ಮಹಾಕಾವ್ಯದಲ್ಲಿ ನಾಲ್ಕು ಭಾಗಗಳನ್ನು ಗುರುತಿಸಬಹುದು. ಸೃಷ್ಟಿಯ ಹುಟ್ಟು (1, 2, 3 ಕಾಂಡಗಳು); ವಿಶ್ವಾಮಿತ್ರನ ಜನನ, ವಿದ್ಯಾಭ್ಯಾಸ ಹಾಗೂ ಪರ್ಯಟನಗಳು (4,5,6 ಕಾಂಡಗಳು); ದಾಶರಾಜ್ಞ ಯುದ್ಧ ಹಾಗೂ ಅದರ ಪರಿಣಾಮಗಳು (7, 8, 9 ಕಾಂಡಗಳು) ಹಾಗೂ ಪರಿಪೂರ್ಣತೆಯತ್ತ ವಿಶ್ವಾಮಿತ್ರನ ವಿಕಾಸ (10, 11, 12 ಕಾಂಡಗಳು). ಮಹಾಕಾವ್ಯದ ಆಕಾರ ಪೂರ್ವ ಮತ್ತು ಪಶ್ಚಿಮದ ಮಾದರಿಗಳಬೆಸುಗೆಯಾಗಿದೆ. ಭಾರತೀಯ ಮಹಾಕಾವ್ಯಗಳು ಒಳಗೊಳ್ಳುವ ಅಷ್ಟಾದಶ ವರ್ಣನೆಗಳೊಂದಿಗೆ ಹೋಮರ್ ಮೊದಲಾದವರ ಮಹಾಕಾವ್ಯಗಳಲ್ಲಿ ಕಂಡುಬರುವ ಮಹೋಪಮೆಗಳೂ ಇಲ್ಲಿವೆ.

ಭಾರತ ಸಿಂಧುರಶ್ಮಿಯ ವಸ್ತು ಪುರಾತನ, ಅದರ ಧ್ವನಿ ಸಮಕಾಲೀನ ಹಾಗೂ ಸಂದೇಶ ಸಾರ್ವಕಾಲಿಕ. ಪುರಾ ಪ್ರಜ್ಞೆಯಲ್ಲಿ ಆಧುನಿಕ ಸಂವೇದನೆ ಇದರ ಸ್ವಾರಸ್ಯ;
ದರ್ಶನ ವೃದ್ಧಿ, ವರಮಂತ್ರ ಸಿದ್ಧಿ, ಮಹೋನ್ನತವಾದ
ಜೀವನದ ಸಂಸಿದ್ಧಿ ದ್ರಷ್ಟಾರರರ್ಕವನು
ತುಂಬಿರಲು, ಪುಣ್ಯ ಚರಿತೆಯು ಗಣ್ಯ ಕೃತಿಯಾಗಿ
ಇಂದ್ರಿಯ ಗ್ರಾಹ್ಯ-ಅತೀಂದ್ರಿಯ ಗ್ರಾಹ್ಯವಾಗಿರಲು
ಐತಿಹ್ಯ, ಕಲ್ಪನಾರಮೆಯ ರಸವೀಡಾಗಿ
ಸರಸತಿಯ ಪಾಡಾಗಿ, ಮಾಹೇಶ್ವರಿಯ ನಾಡಾಗಿ
ಮಹಾಂಕಾಳಿಯ ಕಹಳೆ ಮೆರೆಯುತಿಹುದೀ ಕಾವ್ಯ

ಕಾವ್ಯದ ಪೀಠಿಕಾ ಸಂಧಿ ಸುಂದರವಾಗಿ ಕಾವ್ಯದ ಒಳಹೊರಗನ್ನು ತೆರೆದಿಡುತ್ತದೆ. ಕಾವ್ಯದ ವಸ್ತುವಿಸ್ತಾರ, ಕಾಲಗತಿಯ ಆಗುಹೋಗುಗಳು, ಕಾವ್ಯದ ಸಾರ ಸಂದೇಶ, ಕಾವ್ಯದ ರಚನಾ ಶಿಲ್ಪ ಇವೆಲ್ಲವುಗಳ ಚಿತ್ರಣ ಇಲ್ಲಿದೆ. ಕವಿಯ ವೇದಸಾಧನೆ, ಭಾರತ ಸಂಸ್ಕೃತಿಯ ಆರ್ಷೇಯತೆ, ಮಹಾಕಾವ್ಯದ ತಂತ್ರ, ಶೈಲಿ, ಛಂದಸ್ಸು, ತಾಳ ಲಯಗಳು, ಕಾವ್ಯದ ಭಾಷಾ ವೈಶಿಷ್ಟ್ಯ, ಮುಕ್ತ ಛಂದದ ಬಂಧುರತೆ, ಕಾವ್ಯದ ದಶಾಂಗಗಳು, ಕುಕವಿ ಕುವಿಮರ್ಶಕರಿಗೆ ಕವಿಯ ಮಾತು, ಏಳು ವರ್ಷಗಳ ಕಾವ್ಯ ಸಮಾಧಿ ಇವೆಲ್ಲವೂ ಸೇರಿ ಕಾವ್ಯದ ತಾಂತ್ರಿಕ ಚಿತ್ರಣ ಸ್ಪುಟಗೊಳ್ಳುತ್ತದೆ;

ಪೌರವ - ಭಾರತ ಕುಲದ ರಾಜನ್ಯ, ವಿಶ್ವರಥ
ಸಮಷ್ಟಿಯ ಶಿಲ್ಪಿ, ಯುಗಪ್ರವರ್ತಕ ಪುರುಷ,
ಗಾಯತ್ರಿ ಮಂತ್ರ ದ್ರಷ್ಟಾರ, ವಿಶ್ವಾಮಿತ್ರ
ಎಂದು ಪಡೆಯುತ ಬ್ರಹ್ಮಪದವಿಯ, ವಿಕಾರವಶ
ಸೃಷ್ಟಿಯ ಸೃಜಿಸಿ ತ್ಯಜಿಸಿದನು, ಅನ್ಯಾದೃಶ ಮಂತ್ರ-
ಸೃಷ್ಟಿ ಸ್ವಾಮ್ಯಾರ್ಜನವ ಘೋಷಿಸುವುದೀ ಕೃತಿಯು

ಎನ್ನುವ ಮೂಲಕ ಕಾವ್ಯದ ನಾಯಕನಾದ ವಿಶ್ವಾಮಿತ್ರನ ಗುಣವಿಶೇಷಗಳನ್ನು ಸ್ತುತಿಸಿದ್ದಾರೆ. ಪ್ರಾಚೀನ ಭಾರತೀಯ ಮಹಾಕಾವ್ಯಗಳ ಪಾತ್ರಗಳಲ್ಲಿ ವಿಶ್ವಾಮಿತ್ರನ ಸ್ಥಾನ ಅದ್ವಿತೀಯವಾದುದು. ಮಹರ್ಷಿಯಾಗಬೇಕಾಗಿದ್ದ ವಿಶ್ವಾಮಿತ್ರ ವಿಧಿಯ ಸಂಕಲ್ಪದಿಂದ ರಾಜನಾಗುತ್ತಾನೆ. ಆದರೆ ತನ್ನ ಕರ್ತೃತ್ವ ಶಕ್ತಿ ಹಾಗೂ ಇಚ್ಛಾಶಕ್ತಿಗಳ ಬಲದಿಂದ ವಿಧಿಯನ್ನೇ ಎದುರಿಸಿ ಹೊಸ ವ್ಯಕ್ತಿತ್ವ ಹಾಗೂ ಹೊಸ ಹೆಸರುಗಳನ್ನು ಗಳಿಸಿ ವಿಶ್ವಾಮಿತ್ರನಾಗುತ್ತಾನೆ. ಅವನ ಜೀವನ ಕ್ರಿಯೆಗೆ ಮಹತ್ವದ ತಿರುವು ಕೊಡುವ ಘಟನೆ ವಶಿಷ್ಟನ ಆಶ್ರಮದಿಂದ ನಂದಿನಿಯನ್ನು ಅಪಹರಿಸಲು ಅವನು ಮಾಡಿದ ಪ್ರಯತ್ನ ಹಾಗೂ ಅನುಭವಿಸಿದ ಸೋಲು;

ಒಂದು ಪಾಠವ ಕಲಿತೆ ಮಹರ್ಷಿಗಳಡಿಯಲ್ಲಿ
ಸಪ್ತಸೈಂಧವದ ಚಕ್ರಾಧಿಪತ್ಯವ ಗೆಲಲು
ಮೊದಲು ಬೇಕಿಹುದು ಚೈತನ್ಯ ಬಲ, ಚಂದ್ರ ಬಲ,
ತಾರಾಬಲವ ಮೀರುತಾತ್ಮಬಲವೊಂದಿಹುದು
ತಾ ದೈವಬಲವಾಗಿ ಆತ್ಮಬಲವಿರೆ ಕ್ಷಾತ್ರ
ಸಂಧಿಸಿರುವುದು ತಾನೆ ಮೊದಲು ಬೇಕು ತಪಸ್ಸು

ಹೊಸ ಅರಿವಿನ ಹಿನ್ನೆಲೆಯಲ್ಲಿ ವಿಶ್ವರಥ ರಾಜ್ಯ ತ್ಯಾಗ ಮಾಡಿ ಋಷಂಗು ತೀರ್ಥದಲ್ಲಿ ಘೋರ ತಪಸ್ಸನ್ನಾಚರಿಸುತ್ತಾನೆ. ಈ ತಪಸ್ಸು ಮೇನಕೆಯಿಂದ ಭಂಗವಾದರೂ ಈ ಹೊಸ ಅನುಭವ ಅವನ ಅಧ್ಯಾತ್ಮಿಕ ವಿಕಾಸ ಮುಂದುವರಿಯಲಿಕ್ಕೆ ಸಹಕಾರಿಯಾಗುತ್ತದೆ. ಅವನ ತಪಸ್ಸು ಯಶಸ್ವಿಯಾಗಿ ವಿಶ್ವಮಾತೆ ಅದಿತಿಯ ಪ್ರಸಾದದಿಂದ ಅವನಿಗೆ ಗಾಯತ್ರಿ ಮಂತ್ರದ ಸಾಕ್ಷಾತ್ಕಾರವಾಗುತ್ತದೆ. ವಿಶ್ವರಥನ ಜೀವನದ ಧ್ಯೇಯ ಸ್ಪಷ್ಟವಾಗುತ್ತದೆ. ಸಪ್ತಸಿಂಧೂಗಳನ್ನು ಒಟ್ಟುಗೂಡಿಸಿ ರಾಷ್ಟ್ರವೊಂದನ್ನು ಕಟ್ಟಬೇಕೆಂಬ ಅವನ ಸಂಕಲ್ಪ ಈಗ ಮಾನವನ ಪರಮ ಕಲ್ಯಾಣದತ್ತ ತಿರುಗುತ್ತದೆ. ಮಾನವ ದೇವನಾಗಬೇಕು. ಭೂಮಿ ಸ್ವರ್ಗವಾಗಬೇಕು ಎಂಬುದು ಅವನ ಹೊಸ ಸಂಕಲ್ಪವಾಗುತ್ತದೆ. ವಿಶ್ವಾಮಿತ್ರನ ಆಧ್ಯಾತ್ಮಿಕ ದರ್ಶನ ಅವನ ರಾಷ್ಟ್ರೀಯ ದರ್ಶನವನ್ನೂ ಒಳಗೊಳ್ಳುವಷ್ಟು ವಿಶಾಲವಾಗುತ್ತದೆ.

ಸಪ್ತ ಸಿಂಧೂ ದೇಶವನ್ನು ಒಂದು ರಾಷ್ಟ್ರವನ್ನಾಗಿ ಪರಿವರ್ತಿಸಬೇಕೆಂಬ ವಿಶ್ವಾಮಿತ್ರನ ಕನಸು ತೃತ್ಸುಭರತ ಸುದಾಸನ ಮೂಲಕ ನನಸಾಗುತ್ತದೆ. ಸುದಾಸನ ಸಹೋದರಿ ಸಾಂಕೃತಿಯನ್ನು ವಿಶ್ವರಥ ಮದುವೆಯಾಗಿದ್ದ. ‘ಸುದಾಸ’ ಆತನ ಹೆಸರೇ ಹೇಳುವಂತೆ ಮಿಶ್ರ ಸಂಸ್ಕೃತಿಯ ಪ್ರತಿನಿಧಿ. ದಾಶರಾಜ್ಞ ಯುದ್ಧದಲ್ಲಿ ಸುದಾಸ ಆರ್ಯ ಅರಸುಗಳನ್ನು ಸೋಲಿಸುತ್ತಾನೆ. ಇಡೀ ಸಪ್ತಸಿಂಧೂದೇಶ ಅವನ ಸ್ವಾಮಿತ್ವಕ್ಕೆ ಒಳಗಾಗುತ್ತದೆ. ಸೋತ ರಾಜರು ಈಶಾನ್ಯ, ದಕ್ಷಿಣಗಳತ್ತ ಸರಿಯುತ್ತಾರೆ. ಸಪ್ತಸಿಂಧೂದೇಶ ಭರತವರ್ಷವಾಗುತ್ತದೆ. ಆರ್ಯರ ಹಾಗೂ ದಾಸರ ಸಂಸ್ಕೃತಿಗಳ ಬೆಸುಗೆಯಲ್ಲಿ ಹೊಸ ಸಂಸ್ಕೃತಿಯೊಂದು ಹುಟ್ಟಿಕೊಂಡು ಹೊಸ ರಾಷ್ಟ್ರವೊಂದು ಜನ್ಮ ತಾಳುತ್ತದೆ.

ಭಾರತವರ್ಷದ ಸ್ಥಾಪನೆ ವಿಶ್ವಾಮಿತ್ರ ಕನಸಿನ ಒಂದು ಭಾಗ ಮಾತ್ರ. ವಿಶ್ವರಥ ಅರಸನಾಗುವುದಕ್ಕಿಂತ ಮೊದಲೇ ಇಕ್ಷ್ವಾಕು ವಂಶದ ತ್ರಿಶಂಕು ಸತ್ಯವ್ರತನತ್ತ ಆಕರ್ಷಿತನಾಗಿರುತ್ತಾನೆ. ಯಾದವರೊಡನೆ ಉಪದಾನವಿಯನ್ನು ಅಪಹರಿಸಿ ದಸ್ಯುಖಂಡವನ್ನು ಸೇರಿದ್ದ ಸತ್ಯವ್ರತನನ್ನು ಧರ್ಮದ ದಾರಿಗೆ ಮರಳಿ ತರಲು ವಿಶ್ವರಥನೇ ಮುಂದಾಗಿರುತ್ತಾನೆ. ಹೆಂಡತಿ ಸತ್ಯರಥೆ ತೀರಿಕೊಂಡಾಗ ಸತ್ಯವ್ರತ ಅವಳ ಇಚ್ಛೆಯನ್ನು ಪೂರೈಸಲು ಸದೇಹ ಸ್ವರ್ಗಕ್ಕೆ ಹೋಗಬಯಸಿ ವಿಶ್ವಾಮಿತ್ರನ ಸಹಾಯವನ್ನು ಯಾಚಿಸುತ್ತಾನೆ. ಈ ಸವಾಲನ್ನು ಸ್ವೀಕರಿಸುವುದರೊಂದಿಗೆ ವಿಶ್ವಾಮಿತ್ರನ ಜೀವನದಲ್ಲಿ ಎರಡನೆಯ ಮಹಾಘಟನೆ ನಡೆಯುತ್ತದೆ. ತನ್ನ ತಪಃಪ್ರಭಾವದಿಂದ ಸತ್ಯವ್ರತನನ್ನು ಸ್ವರ್ಗಕ್ಕೇರಿಸಲು ವಿಶ್ವಾಮಿತ್ರ ಸಿದ್ಧನಾಗುತ್ತಾನೆ. ಆಗ ಆತನಾಡುವ ಮಾತುಗಳನ್ನು ಗಮನಿಸಬೇಕು;

ಧಾರೆಯೆರೆವೆನು ತಪೋಬಲ ಸರ್ವಸಿದ್ಧಿಗಳನು
ನಿನ್ನೆದೆಯ ಹಂಬಲದ ಮಿಡಿಗಾಯಿ ಮಾಗಲೆಂದು
ಆಪದ್ಭಂಧು ಅಚ್ಚುಮೆಚ್ಚಿರುವ ನೇಹಿಗನು ನೀನು
ಸಾಹಸವ ಕೈಗೊಳುವೆ ಸ್ನೇಹಋಣ ನೀಗಲೆಂದು

ಇದರಲ್ಲಿ ವಿಶ್ವಾಮಿತ್ರ ವಿಫಲನಾದಾಗ ಪ್ರತಿಸ್ವರ್ಗವನ್ನೇ ಕಟ್ಟಲು ಆತ ಮನಸ್ಸು ಮಾಡುತ್ತಾನೆ. ಆದರೆ ಅವನು ಕಟ್ಟುವ ಹೊಸ ಸ್ವರ್ಗ ವಿಕೃತಿಗಳಿಂದ ತುಂಬಿರುತ್ತದೆ. ಇದು ಅವನು ಅನುಭವಿಸುವ ಎರಡನೆಯ ಸೋಲು. ಪತನದ ಹಾದಿಯಲ್ಲಿರುವ ವಿಶ್ವಾಮಿತ್ರನನ್ನು ಬ್ರಹ್ಮ ಎಚ್ಚರಿಸುತ್ತಾನೆ;

ನಿನ್ನ ಸಂಕಲ್ಪವಿದೆ ದಿವ್ಯತಮವೆಂಬ ಜಲ್ಪ
ಅತಲಪಾತಾಲಕ್ಕೆ ನಿನ್ನನೊಯ್ಯುವುದು ಅಲ್ಪ
ದಿವ್ಯಪ್ರಜ್ಞೆಗೆ ದಾರಿಯಾಗುವುದೆ ನರಗೆ ಶ್ರೇಯ
ದಿವ್ಯ ನೋಂಪಿಗೆ ನೇಗಿಲಾಗುವುದೆ ಅವಗೆ ಪ್ರೇಯ

ಎಚ್ಚೆತ್ತ ವಿಶ್ವಾಮಿತ್ರ ಮತ್ತೆ ತನ್ನ ಅಧ್ಯಾತ್ಮ ಯಾತ್ರೆಯನ್ನು ಮುಂದುವರಿಸುತ್ತಾನೆ. ಕ್ರಾಂತದರ್ಶನನಾಗುತ್ತಾನೆ. ಆತ ತನ್ನ ಮಗನಾದ ಪ್ರಜಾತಿಯೊಂದಿಗೆ ಹಿಮವತ್ ಪ್ರದೇಶಕ್ಕೆ ಹೊರಡುವ ಮೊದಲು ತನ್ನ ಮಕ್ಕಳಿಗೆ ಹೇಳುತ್ತಾನೆ;

ನಾನು ರಾಜ್ಯವ ತೊರೆದೆ. ನಾನು ಬೆಂಬಲಿಸಿರುವ
ಸುದಾಸ ನೃಪ ಭಾರತದ ಚಕ್ರವರ್ತಿಯಿಹ
ನಾನು ಬೆನ್ನುಕಟ್ಟಿರುವ ಸತ್ಯವ್ರತ ಗುರಿಕಂಡ
ನನ್ನ ಪುಣ್ಯವ ಕ್ಷಯಿಸಿ ಮತ್ತೆ ತುಂಬುವುದು ಕೊಡ

ಅವನ ಹೊಸ ಸಾಧನೆಗಳನ್ನು ತೋರಿಸುವ ಎರಡು ಘಟನೆಗಳು ಭಾರತ ಸಿಂಧುರಶ್ಮಿಯಲ್ಲಿ ವರ್ಣವಾಗಿವೆ. ನರಮೇಧದಿಂದ ಶುನಃಶೇಫನ ವಿಮೋಚನೆ ಹಾಗೂ ಅಮಿಷಗಳ ತಿರಸ್ಕಾರ. ಇದುವರೆಗಿನ ವಿವೇಚನೆ ಕಾವ್ಯನಾಯಕನಾದ ವಿಶ್ವಾಮಿತ್ರನನ್ನು ಮಾತ್ರ ಕೇಂದ್ರೀಕರಿಸಿ ನಡೆಸಿದ್ದಾಗಿದೆ. ವಿನಾಯಕರ ಮಹಾಕಾವ್ಯದ ಸಮೀಕ್ಷೆಗೆ ಉತ್ತಮ ಮಾರ್ಗವೆಂದರೆ; ಘಟನೆಗಳಿಗಿಂತ ಪಾತ್ರಗಳ ಮೂಲಕ ಪ್ರವೇಶಿಸುವುದು ಮತ್ತು ಮುಂದುವರಿಯುವುದು. ಭಾರತ ಸಿಂಧುರಶ್ಮಿಯಲ್ಲಿ ವಿಶ್ವಾಮಿತ್ರ, ಸುದಾಸ ಮೊದಲಾದ ಇನ್ನೂರಕ್ಕೂ ಹೆಚ್ಚು ಪಾತ್ರಗಳು ಸಂಪ್ರದಾಯಬದ್ಧವಾದ ವಾತಾವರಣದಲ್ಲಿ ಬೆಳೆದುಬಂದಿರುವುದಾದರೂ ಇವು ತಮ್ಮದೇ ಆದ ಗುಣ ಸ್ವಭಾವಗಳನ್ನು ಮೇಳೈಸಿಕೊಂಡು ಶೋಭಿಸುತ್ತವೆ. ಇದರಲ್ಲಿನ ಸುದೇವಿ ಮೊದಲಾದ ಸ್ತ್ರೀಪಾತ್ರಗಳು ಕವಿಯ ಸ್ವತಂತ್ರ ನಿರ್ಮಿತಿಗಳಾಗಿ ಅಭ್ಯಾಸಿಗಳ ಮೆಚ್ಚುಗೆ ಪಡೆಯುತ್ತವೆ. ಭಾರತೀಯ ಸಂಸ್ಕಾರದ ದೃಷ್ಟಿಯಿಂದ ಇವು ಹೀಗೆಯೇ ಚಿತ್ರಿತವಾಗಬೇಕೆಂಬ ಆಶಯ ಕವಿಯಲ್ಲಿರುವಂತೆ ಕಾಣುತ್ತದೆ. ಹೀಗಾಗಿ ಪಾತ್ರ ಚಿತ್ರಣದಲ್ಲಿ ಅದರಲ್ಲೂ ಸ್ತ್ರೀಪಾತ್ರ ಚಿತ್ರಣದಲ್ಲಿ ಕ್ರಾಂತಿಕಾರಕತೆ ಕಾಣ ಸುವುದಿಲ್ಲ. ಈ ಕಾರಣದಿಂದಲೆ ಸುದಾಸನ ರಾಣ ಸುದೇವಿ, ಸಂಪ್ರದಾಯ ವಿಧಿಯನ್ನು ಹಲವು ಸಂದರ್ಭಗಳಲ್ಲಿ ಪ್ರತಿಭಟಿಸುವ ಅವಕಾಶವಿದ್ದರೂ ವಿಧಿಯಿಲ್ಲದೇ ಪುರುಷ ಶಕ್ತಿಯ ಪ್ರಭಾವಕ್ಕೆ ತಲೆಬಾಗಬೇಕಾಗಿ ಬರುತ್ತದೆ.

“ವೇದ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿಯ ಸನಾತನ ಶಿಶು ಎಂದು ಭಾವಿಸಿದ ವಿನಾಯಕರು ಪಾಶ್ಚಾತ್ಯ ಜ್ಞಾನಭಂಡಾರದ ತಾತ್ವಿಕ ಮೌಲ್ಯಗಳನ್ನು ಗಾಢವಾಗಿ ರೂಢಿಸಿಕೊಂಡವರು. ಸಂಕೀರ್ಣತೆಯ ಉಪಾಸಕರಾಗಿ ಕಾವ್ಯದಲ್ಲಿ ನವ್ಯತೆಯನ್ನು ಆಶಿಸಿದ ಇವರ ಭಾರತ ಸಿಂಧುರಶ್ಮಿಯಲ್ಲಿ ನಾವು ಸಮನ್ವಯ ಪ್ರಜ್ಞೆ ಪ್ರಗತಿಮುಖವಾಗಿ ಅರಳಿರುವುದನ್ನು ಕಾಣುತ್ತೇವೆ” ಎಂಬ ಡಾ. ಟಿ. ವಿ. ಸುಬ್ರಹ್ಮಣ್ಯ ಅವರ ಮಾತು ಮುಖ್ಯವಾದುದು. ಪೂರ್ವಕಡಲ ಪಯಣಿಗರ ಸಾಹಸದ ಕಥೆಯೊಂದಿಗೆ ಅಯಾಸ್ಯನ ಪ್ರಾಚೀನ ಪ್ರಜ್ಞೆಯನ್ನು ಸಮೀಕರಿಸುವುದರ ಮೂಲಕ ಇತಿಹಾಸದ ಎಳೆಯೂ ಇಲ್ಲಿದೆ. ಸಂಕೀರ್ಣತೆಯ ಉಪಾಸಕರಾದ ಕವಿಯಲ್ಲಿ ವಿಶ್ವಾಮಿತ್ರನ ಪಾತ್ರದ ಸಂಕೀರ್ಣ ವ್ಯಕ್ತಿತ್ವದತ್ತಣ ಆಕರ್ಷಣೆ ಆಶ್ಚರ್ಯಕರವೇನಲ್ಲ.

ಮಣ್ಣಲ್ಲಿ ಹುಟ್ಟಿ ಮಣ್ಣಾಗುವ ಪೂರ್ಣಸಿದ್ಧಿ ಮಾನವರಂತೆ ಆದಿತ್ಯರಿಗೆ ಸಾಧ್ಯವಿಲ್ಲವೆಂಬ ಮಹಾ ಅರಿವಿನ ಮೂಲಕ ಸಪ್ತಮ ಮನುವಾದ ವೈವಸ್ವತನು ಗಮನ ಸೆಳೆಯುತ್ತಾನೆ. ‘ಮಾನವನಿಗೆ ಮಾತ್ರ ವಿಕಸನ ಜೀವನ ಸಾಧ್ಯ’ ಎಂಬ ಸತ್ಯದ ಅರಿವು ಅವನ ಆನಂದಾನ್ವೇಷಣೆಯಲ್ಲಿ ಉಂಟಾಗಿ ಮನುಕುಲದ ಮಹೋನ್ನತಿ ಸ್ಪಷ್ಟವಾಗುತ್ತದೆ.

ಆರ್ಯ-ದಸ್ಯು ಸಂಸ್ಕೃತಿಗಳನ್ನು ತಮ್ಮದೇ ಆದ ರೀತಿಯಲ್ಲಿ ಪೋಷಿಸುವ ಕಣ್ವ ಭಾರದ್ವಾಜ, ಶಂಡಾಕರ್ಮರಂತಹವರನ್ನೂ ಕೆಡುಕಿಗೆ ಚಾಲನೆಯನ್ನು ಕೊಡುವ ರೌಹಿಣಾದಿಗಳನ್ನೂ ಇಲ್ಲಿ ಕಾಣುತ್ತೇವೆ. ವಸಿಷ್ಠ, ವಾಮದೇವ, ಜಮದಗ್ನಿ, ಪರಶುರಾಮ ಮೊದಲಾದ ಋಷಿವರರನ್ನೂ ಆರುಂಧತಿ, ರೇಣುಕೆ, ಸತ್ಯವತಿ ಮೊದಲಾದ ಋಷಿಪತ್ನಿಯರನ್ನೂ ಇಲ್ಲಿ ಕಾಣುತ್ತೇವೆ. ಸುದೇವಿ, ಸಾಂಕೃತಿ, ಸತ್ಯರಥೆ, ಊರ್ವೀದೇವಿ ಮುಂತಾದ ಕ್ಷತ್ರಿಯ ರಮಣಿಯರನ್ನು ಒಳಗೊಂಡ ಇದು ಒಟ್ಟಿನಲ್ಲಿ ಅತ್ಯಂತ ಸಂಕೀರ್ಣವಾದ ಗ್ರಹಿಕೆಗೆ ಮಾತ್ರ ಸಾಧ್ಯವಾಗುವ ದರ್ಶನವಾಗಿದೆ.

ಜನಮನದ ಅಭೀಪ್ಸೆಗಳ ಸಂಕೇತವಾಗಿರುವ ಭಾರತ ಸಿಂಧುರಶ್ಮಿಯಲ್ಲಿನ ಗೃಹಸ್ಥ ಪಾತ್ರಗಳು ಕಠೋರ ವಾಸ್ತವವನ್ನು ವಿವರಿಸುವ ಕೆಚ್ಚನ್ನು ಪಡೆದುಕೊಂಡಿವೆ. ವಿಶ್ವಾಮಿತ್ರನ ವ್ಯಕ್ತಿತ್ವವನ್ನು ಮೀರುವಂತಹ ವಾಮದೇವ, ಪರಶುರಾಮ ಇತ್ಯಾದಿ ಪಾತ್ರಗಳು ಇಲ್ಲಿ ಕಂಡುಬಂದರೂ ಅವು ಘಟನೆ ಪ್ರಸಂಗಗಳಲ್ಲಿ ನಿಲ್ಲುವಂಥವಲ್ಲ. ಹುಟ್ಟಿನಿಂದಲೇ ಇವರು ಸಿದ್ಧಪುರುಷರಾಗಿ ಮಾನವ ಕಲ್ಯಾಣದಲ್ಲಿ ಆಸಕ್ತಿಯುಳ್ಳವರಾಗಿ ತೋರುತ್ತಾರೆ.

ಪುರುಷ ಪ್ರಾಬಲ್ಯಕ್ಕೆ ಬಲಿಯಾದ ದುರಂತ ಜೀವಿಗಳಾಗಿ ಮಹಾಕಾವ್ಯದಲ್ಲಿ ಕವಿಯ ಸ್ವತಂತ್ರ ನಿರ್ಮಿತಿಯ ಪಾತ್ರಗಳಿವೆ. ಇದಕ್ಕೆ ಉದಾಹರಣೆಯಾಗಿ ದುರಂತ ಜೀವನಕ್ಕೆ ತಾನು ಬಲಿಯಾದರೂ ಸತ್ಯವ್ರತನಲ್ಲಿ ಮತ್ತೆ ಮಾನವೀಯತೆಯನ್ನು ತುಂಬಿದ ಉಪದಾನವಿಯನ್ನು ಮತ್ತು ಇದಕ್ಕೆ ತದ್ವಿರುದ್ಧವಾಗಿ ಸ್ತ್ರೀ ಶೋಷಣೆಯ ವ್ಯಕ್ತಿಯಾಗಿಯೇ ಉಳಿದುಕೊಳ್ಳುವ ಅಪಾಲೆಯರನ್ನು ನೋಡಬಹುದು. ಮಹಾಕಾವ್ಯದಲ್ಲಿ ಮೂಡಿಬಂದಿರುವ ಕೆಲವು ಮಹತ್ವದ ವಿಷಯಗಳನ್ನು ಗಮನಿಸಬೇಕು;

ಚತುರ್ವರ್ಣಗಳು: ಚಾತುರ್ವಣ್ಯ ಪದ್ಧತಿಯ ಬಗ್ಗೆ ಗೋಕಾಕರು ಪೀಠಿಕಾ ಸಂಧಿಯಲ್ಲಿ ಹೀಗೆ ಹೇಳಿದ್ದಾರೆ- ಗುಣದಂತೆ ವರ್ಣ ಜನ್ಮದೊಲಲ್ಲ ನೈಸರ್ಗಿಕ ಸಿದ್ಧಿಯಾಯ್ತು ಚಾತುರ್ವರ್ಣ್ಯ. ಮಹಾಕಾವ್ಯದ ಮೊದಲ ಕಾಂಡದ ಎರಡನೆಯ ಸಂಧಿಯಲ್ಲಿ ಸೋಮಪ್ರಿಯ ಸೋಮಾರಿಗಳ ಸಮಸ್ಯೆ ಬಗೆಹರಿಸಲು ಸಪ್ತರ್ಷಿಗಳ ಸಲಹೆಯಂತೆ ಸ್ವಾಯಂಭೂ ಮನು ಚಾತುರ್ವರ್ಣ್ಯ ಪದ್ಧತಿಯನ್ನು ಜಾರಿಗೆ ತಂದ ವಿಷಯ ಬರುತ್ತದೆ;

ಸಪ್ತರ್ಷಿಗಳು ನಡೆಯಿಸಿದರು ಜನಗಣನೆಯನು
ಜನಗಣತಿಯನಲ್ಲ; ತೂಗಿ ನೋಡಿದರವರ
ಒಲವು ನಿಲುವುಗಳನ್ನು, ಗುಣ ಪ್ರತಿಭೆಗಳನ್ನು
ಅವರವರ ಪ್ರವೃತ್ತಿ ನಿವೃತ್ತಿ ದಿಶೆಯರಿತು
ಸೂಕ್ಷ್ಮಾಂತಃಕರಣವನು ತಿಳಿದು ಸಪ್ತರ್ಷಿ
ನಿಯಮಿಸಿದರಾ ರಾಜ್ಯದೊಳಗಿರುವ ಪ್ರತಿಯೋರ್ವ
ವ್ಯಕ್ತಿಗನುರೂಪವಿಹ ಕ್ಷೇತ್ರವನು. ಇಹರೆಂದು
ಸಮಾವಿಷ್ಟ ಜಾನಪದರೆಲ್ಲರು ವ್ಯವಸ್ಥೆಯಲಿ

ವ್ಯಕ್ತಿ, ರಾಷ್ಟ್ರ, ಮಾನವನಾದ ಮಾಧವನಲ್ಲಿ ಪರಿವರ್ತನೆ ಆ ಮೂಲಕ ಇಡೀ ಮನುಕುಲದ ಉದ್ಧಾರ ಮಹಾಕಾವ್ಯದ ಕೇಂದ್ರ. ಒಬ್ಬ ವ್ಯಕ್ತಿಯ ಗುಣಗಣನೆಯೇ ಅವನ ವರ್ಣವನ್ನು ನಿಗದಿಪಡಿಸುತ್ತಿತ್ತೇ ಹೊರತು ಅದು ಜನ್ಮತಃ ಇರಲಿಲ್ಲ. ಆದರೆ ಕಾಲ ಕಳೆದಂತೆ ಈ ವ್ಯವಸ್ಥೆಯ ವಿಕೃತ ರೂಪವಾಗಿ ಒಬ್ಬ ವ್ಯಕ್ತಿಯ ಭವಿಷ್ಯವನ್ನು ಆನುವಂಶಿಕವಾಗಿ ನಿರ್ಧರಿಸುವ ಪದ್ಧತೆ ಬಂದಿತು;

ಗುಣಗಣನೆಯಿಂದಾಯ್ತು ಚತುರ್ ವರ್ಣ ವ್ಯವಸ್ಥೆ
ಬೆನ್ನು ಕಟ್ಟಿತು ತನ್ನ ಹುಟ್ಟೆಂದೆಸೆಯಲಿಲ್ಲ
ವ್ಯಕ್ತಿಯಾಗುತ ಬ್ರಹ್ಮವಿದ, ಕ್ಷತ್ರಿಯ, ವೈಶ್ಯ
ಶೂದ್ರರ ಮಕ್ಕಳೆದ್ದಿಹರು, ಮೇಲಿನ ವರ್ಗಕ್ಕೆ ಹೊಕ್ಕು
ಮೆಲನವಳಿದಿಹರು ಕ್ಷತ್ರಿಯ, ವೈಶ್ಯ, ಬ್ರಹ್ಮವಿದ
ಗುಣವಿಲ್ಲದಲೆ, ಶೂದ್ರ ಪಂಥಲಿಕೆಯ ತುಳಿದು
ಸ್ವಭಾವ-ಸ್ವಗುಣದಂತಿರಲು ವರ್ಗೀಕರಣ
ಮೇಲು ಕೀಳ್ಮೆಯ ಭಾವವಿರದೆ ಬಾಳಿದನು
ವ್ಯಕ್ತಿ ಸಮುದಾಯದಲಿ...

ಮಹರ್ಷಿ ಅರವಿಂದರು ಕಂಡ ವ್ಯವಸ್ಥೆಯ ಹೊಸ ಬೆಳಕಿನಲ್ಲಿ ಗೋಕಾಕರು ತಮ್ಮ ದರ್ಶನವನ್ನು ಕಟ್ಟಿದ್ದಾರೆ. ಒಂದೇ ವ್ಯಕ್ತಿಯಲ್ಲಿ ನಾಲ್ಕೂ ವರ್ಣಗಳೂ ಆತ್ಮಶಕ್ತಿಯ ರೂಪಗಳಾಗಿ ಅಂತಸ್ತಗೊಂಡಿರುತ್ತವೆ. ಪ್ರತಿ ವ್ಯಕ್ತಿಯೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ತನ್ನ ವ್ಯಕ್ತಿತ್ವದ ಅಂಗಗಳನ್ನು ಅರಿತುಕೊಳ್ಳಬೇಕು. ಶ್ರೀ ಅರವಿಂದರ ಈ ತತ್ವವು ಭಾರತ ಸಿಂಧುರಶ್ಮಿಯಲ್ಲಿ ಪರಶುರಾಮನ ಮಾತುಗಳಲ್ಲಿ ಅಭಿವ್ಯಕ್ತವಾಗುತ್ತದೆ;

ನನ್ನ ರಾಷ್ಟ್ರದೊಳಿರುವ ಓರ್ವೊರ್ವ ವ್ಯಕ್ತಿಯಲಿ
ಚತುರ್ವರ್ಣ ಬೆರೆಯುವವು ಬ್ರಾಹ್ಮಪ್ರಜ್ಞೆಯ ಜೊತೆಗೆ
ಕ್ಷಾತ್ರಮಯ ಕರ್ಮ ಕೌಶಲದ ವಿಕಸನವಹುದು
ಆದರ್ಶದೊಂದು ಮುಖ, ಪ್ರತಿಯೊರ್ವನಿಹ ವೈಶ್ಯ
ತನ್ನದೆಂಬುವ ಬಾಳಿನೋರಣಗಳನು ಕಾಪಿಡುತ,
ಹೊಟ್ಟೆ ಬಟ್ಟೆ, ನೆತ್ತು ಬುತ್ತಿಗಳ ಹವಣರಿತು
ಮನೆಯ ಮಠವಾಗಿಸು, ಮಠದ ಮನೆಯಂದದಲಿ
ಚಂದದ ತವರಾಗಿಸುತ, ವುಅಕ್ತಿ ವ್ಯಕ್ತಿಯು ಶೂದ್ರ
ತನ್ನ ದೇಹದ ಶುಚಿಯ, ಅಂತಃಕರಣ ರುಚಿಯ
ರಕ್ಷಿಸುತ ಬ್ರಹ್ಮ ಪದವಿಗೆ ಚತುರ್ಮುಖಿ ವ್ಯಕ್ತಿ
ವಿಕಸನ ಮಾರ್ಗದಲಿ ಚತುರೋಪಾಸನೆಗಳನು
ಸಾಧಿಸುತ, ಮುಂದೊಂದು ದಿನ ಅರ್ಹನಾಗುವನು

ಹೀಗೆ ವ್ಯಕ್ತಿ ವಿಕಾಸಕ್ಕೆ ಅನುಕೂಲಕರವಾಗಿದ್ದ ವ್ಯವಸ್ಥೆಯ ಚಿತ್ರಣವನ್ನು ಕವಿ ಗೋಕಾಕರು ನೀಡಿದ್ದಾರೆ. ಯುದ್ಧ- ಸಮಕಾಲೀನ ಸಮಾಜ ಯುದ್ಧದಿಂದ ಮಲೆತಿದೆ. ಯುದ್ಧವೆಂಬುದು ಸಾಮಾನ್ಯ ಸಂಗತಿಯಾಗಿದೆ. ನಮ್ಮ ಕಾವ್ಯ ಪ್ರಪಂಚ ಯುದ್ಧದ ದುರಂತವನ್ನು ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದ್ದರೂ ನಾವು ಬುದ್ಧಿ ಕಲಿತಿಲ್ಲ. ಮೃತ್ಯುಂಜಯ ಹೋಮದ ನಂತರ ಶಂಯು ಪ್ರಶ್ನಿಸುತ್ತಾನೆ;

ಅನಿವಾರ್ಯವೆ
ಯುದ್ಧ, ಮಾರ್ಮಲೆತ, ಹಿಂಸೆ, ಸ್ಪರ್ಧೆ, ಪ್ರತಿಸ್ಪರ್ಧೆಗಳು?
ಅದಕ್ಕೆ ವಿಶ್ವಾಮಿತ್ರರು ಉತ್ತರಿಸುತ್ತಾರೆ;

ಬೆಳೆದಿಲ್ಲ
ಮಾನವನು ಯುದ್ಧ ಸಂಸ್ಥೆಯ ಮೀರಿ ಅದಕಂತೆ
ಅನಿವಾರ್ಯವಿಂದಿಗಿದೆ ಇಂದಿನ ಚತುರಂಗ ಬಲ
ಬಂದಿರಲು ದೈವಬಲ ಪರೀಕ್ಷಣದ ಗಳಿಗೆ
ಶ್ರೀಮನ್ನಿಯೋಜಿತ ಅಮೃತ ಅವಧಿ ಬರಬಹುದೊಮ್ಮೆ
ರಾಜನ್ಯಸಭೇಯರು ಲಕ್ಷಿಸಿ ಕುಲದ ಸಂಹಾರ
ಶಾಂತಿಪಾಠವನುಸುರಿ. ಸಮರವಲ್ಲ ಸಮೀಖ್ಶೆ
ಸಂಧಾನವೇ ಮಾರ್ಗವೆಂದು ಘೋಷಿಸಬಹುದು

ಹೀಗೆ “ಆಧುನಿಕ ಯುಗದ ಯಾವ ಪ್ರಶ್ನೆಯೂ ಈ ಕಾವ್ಯದ ಒಂದಿಲ್ಲೊಂದು ಪಾತ್ರವನ್ನು ಕಾಡದೆ ಬಿಟ್ಟಿಲ್ಲ. ಉತ್ತರ ಕಾಣದೆ ದಾರಿಗೆಟ್ಟಿಲ್ಲ. ತನ್ನ ಸಂಕೀರ್ಣತೆಯನ್ನು ಕಳೆದುಕೊಂಡು ನುಣುಚಿಕೊಂಡಿಲ್ಲ” ಎಂಬ ಆರ್. ಜಿ. ಕುಲಕರ್ಣಿಯವರ ಮಾತು ಕಾವ್ಯದ ಒಡಲಿನಲ್ಲಿ ಸತ್ಯವಾಗುತ್ತದೆ. ಸಮಕಾಲೀನ ದೇಶದ, ವಿಶ್ವದ ಹಲವು ಸಮಸ್ಯೆಗಳ ಚರ್ಚೆ ಇಲ್ಲಿ ಬಂದಿದೆ. ಶಂಡಾಕರ್ಮ ರೋಹಿಣರ ರಾಜ್ಯದಲ್ಲಿ ನಡೆಯುವ ಅನುಭವಗಳ ಸಾಂಕೇತಿಕತೆಯನ್ನು ಗ್ರಹಿಸಿದರೆ ಇಂದಿನ ಮೌಲ್ಯರಹಿತ ಜೀವನದ ಸಕೃದ್ದರ್ಶನವಾಗುತ್ತದೆ. ದಾಶರಾಜ್ಞ ಯುದ್ಧದಲ್ಲಿ ಹೋರಿಗಳಂತೆ ಪಾಲ್ಗೊಂಡ ರಾಜರು ಇಂದಿನ ರಾಜಕಾರಣ ಗಳ ಹಾಗೂ ರಾಜಕೀಯದ ನೆಪಪನ್ನು ತರುತ್ತಾರೆ. ತ್ರಿಶಂಕುವಿನ ಅನುಭವಗಳೂ ಇಂದಿನ ಮಾನವನ ಅತಂತ್ರ ಸ್ಥಿತಿಯ ದ್ಯೋತಕವೇ ಆಗುತ್ತದೆ. ಇಂದ್ರಿಯ ಸುಖಕ್ಕೆ ಮರುಳಾಗಿ ಎಲ್ಲ ಮೌಲ್ಯಗಳನ್ನೂ ಧಿಕ್ಕರಿಸುವ ಮನುಷ್ಯನ ಪ್ರವೃತ್ತಿಗೆ ಕಿರ್ಮೀರಪುರ ಪ್ರತೀಕವಾಗಿದೆ.

ಭಾರತೀಯ ಮಹಾಕಾವ್ಯವೊಂದರ ಶಾಸ್ತ್ರೀಯ ಆವರಣದಲ್ಲಿ ಪಾಶ್ಚಾತ್ಯ ಪ್ರಭಾವವನ್ನು ಸ್ವೀಕರಿಸಿ ರೂಢಿಸಿಕೊಂಡಿರುವ ವಿನಾಯಕರು, ಪ್ರಾರಂಭದ ಹಂತದಲ್ಲಿ ಕಾವ್ಯ ವಸ್ತುವನ್ನು ಸೃಷ್ಟಿಪೂರ್ವ ಸ್ಥಿತಿಯಿಂದ ಮಾನವ ಸೃಷ್ಟಿಯವರೆಗೆ ಶಾಸ್ತ್ರೀಯ ಹಿನ್ನೆಲೆಯಲ್ಲಿ ರೂಪಿಸಿದ್ದಾರೆ. ಮುಗ್ಧ ಸರಳ ರೀತಿಯಲ್ಲಿ ಹುಟ್ಟಿ ಬೆಳೆದ ಮನುಷ್ಯ ಇದ್ದಕ್ಕಿದ್ದಂತೆ ಜಟಿಲ ಹಾಗೂ ಸಂಕೀರ್ಣತೆಯ ಮನಃಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಆದಿಮ-ಆದಿಮೆಯರ ಕಥೆ ಕವಿಯ ಸ್ವತಂತ್ರ ಕಲ್ಪನೆಯಾಗಿ ಮೂಡಿಬಂದು ಕಾವ್ಯಕ್ಕೆ ಮೆರಗು ತಂದಿದೆ. ಮಾನವನ ಆಕಾಂಕ್ಷೆ ಹಾಗೂ ಅದರ ಈಡೇರಿಕೆಯ ಹೋರಾಟದ ವಿಸ್ತಾರಪೂರ್ಣವಾದ ಅಭ್ಯಾಸ ಈ ಕಾವ್ಯದಲ್ಲಿ ತುಂಬುರೂಪದಲ್ಲಿ ಮೂಡಿಬಂದು ಕನ್ನಡದ ಮಟ್ಟಿಗಂತೂ ಒಂದು ನವೀನ ಸ್ವರೂಪವನ್ನು ಒದಗಿಸಿರುವ ಮಹಾಕಾವ್ಯ ರೂಪೀ ರಚನೆ ಇದಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಚಂದ್ರಶೇಖರ ಕಂಬಾರರ ಚಕೋರಿ: ಕನಸುಗಳು ಕಾವ್ಯವಾಗುವ ಪರಿ
ದೇವನೂರರ ಒಡಲಾಳ: ದಲಿತ ಬದುಕಿನ ದರ್ಶನ
ವಾಸ್ತವ–ವಿಕಾಸಗಳ ನಡುವಿನ ಜೀಕುವಿಕೆ: ತೇಜಸ್ವಿಯವರ ಕರ್ವಾಲೊ
ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ
ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು
ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’
ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು
ಗ್ರಾಮಾಯಣ ಎಂಬ ಸಮಕಾಲೀನ ಪುರಾಣ
ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’
ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’
ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ
ಪುಸ್ತಕ ಲೋಕವೆಂಬ ಬದುಕಿನ ಬುತ್ತಿ
ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'
ಅಂಬಿಕಾತನಯದತ್ತರ ಸಖೀಗೀತ
ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...