ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓದುಗರ ಅಪೇಕ್ಷೆ ತಿಳಿಯುವಲ್ಲಿ ಸಹಾಯವಾಗಿದೆ

Date: 02-12-2021

Location: ಬೆಂಗಳೂರು


‘ಹಿರಿಕಿರಿಯರ ಅನೇಕ ವಿಮರ್ಶಾತ್ಮಕ ಪತ್ರಗಳಿಂದ ನನಗೆ ಓದುಗರ ಅಪೇಕ್ಷೆ, ರಸಾನುಭೂತಿ ಮತ್ತು ರಸಾನುಭವದ ಮಟ್ಟ ತಿಳಿಯುವುದರಲ್ಲಿ ಸಹಾಯವಾಗಿದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ ಲೇಖಕ ಜಿ.ಎನ್. ರಂಗನಾಥರಾವ್. ಅವರು ತಮ್ಮ ಪತ್ರತಂತು ಮಾಲಾ ಅಂಕಣದಲ್ಲಿ ಹಿರಿಕಿರಿಯ ಲೇಖಕರ ಮತ್ತು ಆಪ್ತರ ಪತ್ರಸಂವಾದಗಳ ಕುರಿತು ವಿಶ್ಲೇಷಿಸಿದ್ದಾರೆ.

ನಾನು 'ಪ್ರವಾ' ಸಾಪ್ತಾಹಿಕ ಪುರವಣಿ ಸಂಪಾದಕನಾದಾಗ ಮತ್ತು ಸುಧಾ, ಮಯೂರ ಸಂಪಾದಕನಾದಾಗ ನಮಗೆ ಬರೆಯುತ್ತಿದ್ದ ರಾಜರತ್ನಂ. ಸಾ.ಕೃ.ರಾಮಚಂದ್ರ ರಾಯರು, ಎಚ್ಚೆಸ್ಕೆ ಆದಿಯಾಗಿ ಬಹುತೇಕ ಎಲ್ಲರೂ ಹಿರಿಯ ಲೇಖಕರು. ನಾನಾದರೋ ಕಿರಿಯ. ತಲೆಮಾರಿನ ಅಂತರ ಎನ್ನುವುದು ಸಾಕಷ್ಟು ದೊಡ್ಡದಾಗಿಯೇ ಇತ್ತು. ನನ್ನದು ಪೌಂಡ್, ಎಲಿಯಟ್, ಲಾರೆನ್ಸ್, ಸಾತ್ರ್, ಕಾಫ್ಕಾ, ಕಮೂ ಇತ್ಯಾದಿ ಅನ್ಯ ಕುಲಗೋತ್ರಗಳ ಪ್ರಭಾವಗಳ ಸೆಳೆತಕ್ಕೊಳಗಾಗಿದ್ದ ನವ್ಯದ ಹಂಬಲದ ಮನಸ್ಸು. ನನ್ನ ಹಿರಿಯ ಲೇಖಕರ ಬರಹಗಳನ್ನು ಎಡಿಟ್ ಮಾಡುವುದು, ಅವರೊಡನೆ ಮಾತುಕತೆ ನಡೆಸುವುದು ಶುರುವಿಗೆ ಸ್ವಲ್ಪ ತ್ರಾಸದಾಯಕವೇ ಆಗಿತ್ತು. ಆದರೆ ನನ್ನ ಭಾಗ್ಯವೆಂದರೆ ಈ ಹಿರಿಯರು ‘ತಲೆಮಾರಿನ ಅಂತರ'ವನ್ನು ಮನ್ನಿಸಿಯೂ ನನ್ನೊಡನೆ ಸಹಕರಿಸಿದ್ದು. ಜನಾರ್ದನ ಗುರ್ಕಾರ್ ಅಂಥ ಹಿರಿಯ ಲೇಖಕರಲ್ಲಿ ಒಬ್ಬರು. ಸಾಹಿತ್ಯದಲ್ಲಿ ಸಾಕಷ್ಟು ವ್ಯವಸಾಯ ಮಾಡಿದವರು.
ಜನಾರ್ದನ ಗುರ್ಕಾರ್
ಮೈಸೂರು

28-05-1998

ಮಾನ್ಯ ಪ್ರಿಯ ಶ್ರೀ ಜಿ.ಎನ್.ರಂಗನಾಥ ರಾವ್

ಅವರಿಗೆ ಆತ್ಮೀಯ ವಂದನೆಗಳು.
ನಿಮಗೆ ಈ ಪತ್ರ ಅನಿರೀಕ್ಷಿತವಾಗಿದ್ದರೂ ಅನಪೇಕ್ಷಿತವೆನಿಸದೆಂದು ನಂಬಿ ಬರೆಯುತ್ತಿದ್ದೇನೆ. 29-12-97ರಂದು ನಿಮಗೆ ನಿಮ್ಮ ‘ಸ್ನೇಹ’ ಮನೆಯ ವಿಳಾಸಕ್ಕೆ ನನ್ನ ಪ್ರಬಂಧ ಸಂಕಲನ ‘ವಿಜಯೋತ್ತರ ಭಾರತ ಸ್ತೋತ್ರ' ಪ್ರತಿ ಕಳುಹಿಸಿದ್ದೆ. ಅದು ತಲುಪಿರಬಹುದೆಂದು ನೆನೆಯುತ್ತೇನೆ. ನಿಮ್ಮ ಮನೆಯ ವಿಳಾಸಕ್ಕೆ ಪತ್ರಿಕಾ ವಿಷಯದಲ್ಲಿ ವ್ಯವಹರಿಸಿದ್ದಕ್ಕೆ, ವ್ಯವಹರಿಸುತ್ತಿರುವುದಕ್ಕೆ ಅನ್ಯಥಾ ಭಾವಿಸದೇ -ತಪ್ಪಿದ್ದಲ್ಲಿ ಕ್ಷಮಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಈ ಪತ್ರದ ಜೊತೆ ನಿಮಗೆ ‘ಅರಳಿ ಆರೆಲೆ' ಎಂಬ ಕಾರ್ಕಳ ತಾಲ್ಲೂಕ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆಯೊಂದು ಹಾಗೂ ಟವಿ.ಭಾ.ಸ್ತೋತ್ರ;'ದ ಎರಡು ಪ್ರತಿ ಕಳುಹಿಸುತ್ತಿದ್ದೇನೆ. ಸಂಚಿಕೆ ನಿಮ್ಮ ಅವಗಾಹನೆಗೆ. ಉಳಿದ ಎರಡು ಪ್ರಬಂಧ ಸಂಕಲನ ಪ್ರತಿಗಳು ನಿಮ್ಮ ಯಾವುದಾದರೂ- ‘ಪ್ರಜಾವಾಣಿ'/ ‘ಸುಧಾ', ‘ಮಯೂರ'ದಲ್ಲಿ ವಿಮರ್ಶೆಗಾಗಿ.

ವೈಯಕ್ತಿಕವಾಗಿ ನಿಮ್ಮನ್ನು ಕಂಡಿಲ್ಲ. ಕಾಣುವುದು ಈಗಿನ ನನ್ನ ದೈಹಿಕ ಪರಿಸ್ಥಿತಿಯಲ್ಲಿ ಸಹಾಯಕರ-ಜೊತೆ ಇಲ್ಲದೆ ದುಸ್ತರ. ಆದ್ದರಿಂದ ಇದು ನನ್ನ ವೈಯಕ್ತಿಕ ದರ್ಶನವೆಂದೇ ಪರಿಗ್ರಿಹಿಸಿಕೊಳ್ಳಬೇಕಾಗಿ ವಿನಂತಿ.

ನಿಮ್ಮ ‘ಸೃಜನಶೀಲ' ಹಾಗೂ ‘ಹಿಂದಣ ಹೆಜ್ಜೆ'- ‘ಸುಧಾ' ಸಂಪಾದಕೀಯ ಸಂಕಲನ ಪ್ರಬಂಧಗಳು ಹಾಗೂ ಕನ್ನಡ ಸಾಹಿತ್ಯ ವಿಮರ್ಶೆ-ನಾಟಕ-ರಂಗಗಳ ವಿಮರ್ಶಾ ಲೇಖನಗಳ ಸಂಗ್ರಹ ಸಂಕಲನ. ಕೆಲವು ದಿನ-ತಿಂಗಳ ಹಿಂದೆ ‘ಕೊಂಡು' ಓದಿದ್ದೇನೆ. ನನ್ನ ಗ್ರಂಥ ಸಂಗ್ರಹದಲ್ಲಿ ಅವೆರಡೂ ಅಚ್ಚುಕಟ್ಟಾಗಿ ಸೇರಿಕೊಂಡಿವೆ. ಹೀಗಾಗಿ ಅವುಗಳನ್ನು ‘ಕೊಂಡು'- ‘ಆಡಿದ್ದೇನೆ', ಆಡುತ್ತಿದ್ದೇನೆಂದು ಧೈರ್ಯದಿಂದ ಹೇಳುತ್ತೇನೆ. ಎರಡೂ ಗ್ರಂಥಗಳು ಸಂಗ್ರಹಯೋಗ್ಯ, ಸಾರ್ಥಕವಾದವುಗಳು. ನೀವು ನವ್ಯ ಸಾಹಿತ್ಯದ ಪ್ರತಿಪಕ್ಷಿಯಾದರೂ ನವೋದಯದ ಕಕ್ಷಿಯಲ್ಲವೆಂಬುದು ಖಂಡಿತ. ‘ಹಿಂದಣ ಹೆಜ್ಜೆ'ಯಲ್ಲಿನ ‘ಅಂತಿಗೊನೆ' ಗ್ರೀಕ್ ನಾಟಕದ ತೌಲನಿಕ ಅಧ್ಯಯನ ನನಗೆ ಬಹಳ ಹಿಡಿಸಿತು. ಈ ಬಗೆಯ ವಿಚಾರಮಂಥನ ಹಿಂದೆ ಯಾರೂ ಮಾಡಿಲ್ಲ. ಆದರೆ ನಿಮ್ಮ ಪ್ರಶಾಂತ ಗಜಗಮನ ಶೈಲಿ-ಪ್ರವೇಶ ವಿವರಣೆ ಅನನ್ಯವಾದದ್ದು. ಹಾಗೂ ಬಿಳಿಪು ಕಾಗದದಲ್ಲಿ ಮುದ್ರಣಗೊಂಡ ಗ್ರಂಥ-ಮುದ್ರಣ ಹಾಗೂ ಗೆಟಪ್ ಚಂದವಾಗಿದೆ. ಎರಡೂ ಗ್ರಂಥಗಳೂ ಚಿಂತನಶೀಲವಾಗಿವೆ.

ದಿ.ಶ್ರೀ ಆಲನಹಳ್ಳಿಯವರ ಕೃತಿಗಳ ಬಗ್ಗೆ ವಿಶೇಷವಾಗಿ ಬರದಿದ್ದೀರಿ. ಎಲ್ಲವೂ ಸರಿಯೇ. ಅವರ ಕಥಾವಸ್ತುಗಳಲ್ಲಿ-ಕೊನೆಯಲ್ಲಿ ಅನಿವಾರ್ಯವಾಗಿ ದು:ಖಾಂತವಾಗಿರುವುದನ್ನು ಗಮನಿಸುವಂತಿದೆ. ಇದು ದೋಷವಲ್ಲದಿದ್ದರೂ-ಆನಂದೋಲ್ಲಾಸದ ಮುಕ್ತಾಯ ಅವರ ಕೃತಿಗಳಲ್ಲಿ ಕಡಿಮೆ. -ಇಲ್ಲವೆಂದೇ ಹೇಳಬೇಕು. ದು:ಖ, ತಪ್ಪುಗಳು, ಹಾಸ್ಯ, ವಿಡಂಬನೆಗಳ ಮುಖವಾಡ ಧರಿಸುವುದೂ ಸಾಹಿತ್ಯದಲ್ಲಿ ಕಾಣುತ್ತದಲ್ಲ, ಅದು ಅವರಲ್ಲಿಲ್ಲ. ನವ್ಯಪಂಥದವರಲ್ಲೂ ಇಲ್ಲ. ಇನ್ನು ಅಧ್ಯಾತ್ಮ-ವೇದಾಂತ ವಿಷಯಗಳಿಂದ ಈ ಜನ -ಸಾಹಿತಿಗಳು ದೂರದೂರವೇ ಇರುತ್ತಾರೆ.

‘ಹಿಂದಣ ಹೆಜ್ಜೆ'ಯಲ್ಲಿ ಎಜ್ರಾ ಪೌಂಡ್ ಒಂದು ಪರಿಚಯ ಕೂಡಾ ಮನಮುಟ್ಟಿತು. ನಿಮ್ಮ ತೂಕದ ಮಾತು, ಶೈಲಿ ಗಾಂಭೀರ್ಯಗಳಿಂದ ಬರವಣಿಗೆಗೆ ಅದರದೇ ಆದ ಬೆಲೆ ಬರುತ್ತದೆ. ಎಲಿಯಟ್ಟನಿಗೆ ಪ್ರಭಾವ ಬೀರಿದ್ದು ಪೌಂಡ್ ಸರಿ. ಇದೆಲ್ಲ ನಿಮ್ಮನ್ನು ಪುಸಲಾಯಿಸಲು ಬರೆದಿದ್ದೇನೆಂದು ತಿಳಿಯಬೇಡಿ. ತಿಳಿದರೆ ಅದನ್ನು ತಿದ್ದಲು ನನಗೆ ಸಾಧ್ಯವಿಲ್ಲ,

ಕಾರಣವಿಷ್ಟೇ- ನನ್ನೊಂದು ಕಿರು ಕಾದಾಂಬರಿ ‘ಯುಕ್ತ'ಎಂಬುದರ ಹಸ್ತ ಪ್ರತಿ ನಿಮ್ಮ ಪತ್ರಿಕೆ ‘ಮಯೂರ'ಕ್ಕೆ ಮೇ 98ರ ಮೊದಲವಾರದಲ್ಲಿ ರವಾನಿಸಿದ್ದೇನೆ. ಅದೊಂದು ವಿಶಿಷ್ಟ ಕಾದಂಬರಿ ನಿಮ್ಮ ಪತ್ರಿಕಾಲಯದ ಹಸ್ತಪ್ರತಿ ಪರಶೀಲಿಸುವವರು ಅದನ್ನು ತಿರಸ್ಕರಿಸುತ್ತಾರೋ ಪುರಸ್ಕರಿಸುತ್ತಾರೋ ತಿಳಿಯದು. ನೀವು ಒಂದಷ್ಟು ಸಹಾನುಭೂತಿ ಆ ಬಗ್ಗೆ ತೋರಿದಲ್ಲಿ ಉಪಕೃತನಾಗುತ್ತೇನೆ. ‘ಹೆತ್ತವರಿಗೆ ಹೆಗ್ಗಣ ಮುದ್ದು' ಅನ್ನುವ ಹಾಗೆ ನನಗೆ ಮೆಚ್ಚುಗೆ ಆಗಿದೆ. ‘ಮಯೂರ', ‘ಸುಧಾ' ಅಥವಾ ‘ಪ್ರಜಾವಾಣಿ' ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲು ಸಾಧ್ಯವಾದಲ್ಲಿ, ನಿಮ್ಮ ವೈಯಕ್ತಿಕ ಒಲವು ಒಂದಿಷ್ಟು ತೋರಿಸಿದರೆ ಸಹಾಯವಾಗುತ್ತದೆ.

ಈ ಬಗ್ಗೆ ಇನ್ನು ಹೆಚ್ಚು ಬರೆಯಲು ನನಗೂ ಮುಜುಗರ-ನಿಮಗೂ ಮುಜುಗರವಾದೀತು ಅದಕ್ಕೆ! ಈ ಬಗ್ಗೆ ಒಂದೆರಡು ಸಾಲು ಬರೆದೆಲ್ಲಿ ಸಮಾಧಾನವಾಗುವುದು.

ವಿಶ್ವಾಸವಿರಲಿ,
ಆದರಗಳೊಡನೆ
ನಿಮ್ಮ
ಜನಾರ್ದನ ಗುರ್ಕಾರ

-ಈ ಪತ್ರದಲ್ಲಿ ಗುರ್ಕಾರ್ ಅವರು ತೋರಿರುವ ವಿನಯ, ಸೌಜನ್ಯಗಳು, ಮೌಲ್ಯಗಳ ಬಗೆಗಿನ ಕಾಳಜಿ ನನ್ನನು ಯೋಚಿಸುವಂತೆ ಮಾಡಿತು. ಗುರ್ಕಾರರ ಕೃತಿಗಳನ್ನು ನಾನು ಓದಿದ್ದೆ. ಈ ಮೊದಲು ನಾನು ಅವರ ಕೆಲವು ಕೃತಿಗಳು ಪ್ರಕಟಿಸಿದ್ದೆ. ಆದರೆ ಅವರು ಈ ರೀತಿ ಪತ್ರ ಬರೆದದ್ದು ಇದೇ ಮೊದಲು. ಅವರು ಪತ್ರದಲ್ಲಿ ತಮ್ಮ ಹಾಗೂ ನನ್ನ ಕೆಲವು ಕೃತಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ನನ್ನ ಕೆಲವು ಕೃತಿಗಳನ್ನು ಕೊಂಡು ಓದಿ,"ಕೊಂಡಾಡಿ" ಅಚ್ಚುಕಟ್ಟಾಗಿ ತಮ್ಮ ಪುಸ್ತಕಗಳ ಕಪಾಟಿನಲ್ಲಿ ಇರಿಸಿರುವುದಾಗಿಯೂ ಬರೆದಿದ್ದಾರೆ. ನನ್ನ ವಿಮರ್ಶೆಯ ಬಗ್ಗೆ ಬರೆದಿದ್ದಾರೆ, ನನ್ನ ಅನುವಾದದ ಬಗ್ಗೆ ಬರೆದಿದ್ದಾರೆ. ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದನ್ನೆಲ್ಲ ಓದಿ ಸಹಜವಾಗಿಯೇ ನನಗೆ"ನಮ್ಮ ಹಿರಿಯರೂ ಹೀಗಿದ್ದಾರಲ್ಲ" ಎಂದು ಸಂತೋಷವಾಯಿತು. ಕೊನೆಯಲ್ಲಿ ಅವರು ತಾವು `ಮಯೂರದಲ್ಲಿ ಪ್ರಕಟಣೆಗಾಗಿ ಕಳುಹಿಸಿರುವ ಕೃತಿಯೊಂದನ್ನು ಪ್ರಸ್ತಾಪಿಸಿದ್ದನ್ನು ಕಂಡಾಗ ಕೊಂಚ ಮುಜಗರವಾಯಿತು-ಅದಕ್ಕಾಗಿ ಇಷ್ಟೊಂದು ಸುದೀರ್ಘ ಪೀಠಿಕೆಯೇ ಎಂದು. ಆದರೆ ಮುಂದಿನ ಸಾಲುಗಳಲ್ಲಿ ಈ ರೀತಿ ಬರೆಯುವುದರಲ್ಲಿ ತಮಗೂ ಮುಜುಗರವಾಗುತ್ತಿದೆಯೆಂದು ತಿಳಿಸಿರುವುದನ್ನು ಕಂಡಾಗ ನನಗೆ ಸ್ವಲ್ಪ ಹಾಯ್ ಎನಿಸಿತು-ಈತ ನನ್ನ ಕೃತಿಗಳ ಹೊಗಳಿಕೆಯಲ್ಲಿ ನನ್ನನ್ನು ಮುಜುಗರದಲ್ಲಿ ಸಿಲುಕಿಸುತ್ತಿಲ್ಲ ಎನ್ನಿಸಿ. ಸಂಪಾದಕನಾಗಿ ನನ್ನ ನಿರ್ಧಾರದಲ್ಲಿ ಪ್ರಭಾವಿಸುತ್ತಿಲ್ಲ ಎನ್ನುವ ಅವರ ಈ ಮಾತುಗಳು ಅವರ ಬಗ್ಗೆ ನನ್ನ ಗೌರವವನ್ನು ಹೆಚ್ಚಿಸಿತು. ಇದು ಹಿರಿಯರ ಶೈಲಿ.

ನನ್ನ ಅಂತ:ಕರಣವನ್ನು ಹೆಚ್ಚಾಗಿ ಕರಗಿಸಿದ, ನನ್ನ`ಅಹಂ'ನ್ನು ನಿರ್ವಾತಗೊಳಿಸಿದ ಇನ್ನೆರಡು ಪತ್ರಗಳೆಂದರೆ ಮಂಡ್ಯದ ಡಾ.ಬೆಸಗರಹಳ್ಳಿ ರಾಮಣ್ಣನವರದು ಮತ್ತು ಧಾರವಾಡದ ಎನ್ಕೆ ಅವರದು. ಕನ್ನಡ ಸಾಹಿತ್ಯ ಚರಿತ್ರೆಯ ಶೋಚನೀಯ ಮುಖವನ್ನು ನಾನೀಗ ಅನಾವರಣಗೊಳಿಸುತ್ತಿದ್ದೇನೆ.

ಡಾ.ಬೆಸಗರಹಳ್ಳಿ ರಾಮಣ್ಣ
ಮಂಡ್ಯ

6-5-98

ಗೆ,
ಶ್ರೀ ಜಿ.ಎನ್.ರಂಗನಾಥರಾಯರು,
ಕಾರ್ಯನಿರ್ವಾಹಕ ಸಂಪಾದಕರು,

‘ಪ್ರಜಾವಾಣಿ’, ‘ಸುಧಾ'
75,ಎಂ.ಜಿ.ರೋಡ್,
ಬೆಂಗಳೂರು-1.

ಸನ್ಮಾನ್ಯ ರಂಗನಾಥ ರಾಯರಿಗೆ ಡಾ.ಬೆಸಗರಹಳ್ಳಿ ರಾಮಣ್ಣನ ನಮಸ್ಕಾರಗಳು. ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಆರೋಗ್ಯ ಸುಧಾರಿಸುತ್ತಿದೆ. ಈಗ ನನಗೆ ತಮ್ಮಿಂದ ಒಂದು ಉಪಕಾರವಾಗಬೇಕು. ಏನೆಂದರೆ ನನ್ನ ಕತೆ ‘ಬುತ್ತಿ'ಗೆ ಬರಬೇಕಾದ ಸಂಭಾವನೆಯನ್ನು ಬೇಗಕೊಟ್ಟರೆ ನಾನು ಔಷಧಿ ಕೊಳ್ಳಲು ಅನುಕೂಲವಾಗುತ್ತದೆ. ದಯವಿಟ್ಟು ಚೆಕ್ ಕಳುಹಿಸಿಕೊಡಿ. ಬೇಸರಮಾಡಿಕೊಳ್ಳಬೇಡಿ. ‘ಬಡತನ' ತುಂಬ ಕೆಟ್ಟದ್ದು ಎಂದು ಈಗ ನನಗೆ ಅರಿವಾಗುತ್ತಿದೆ.

ಕನ್ನಡದ ಹುಚ್ಚು ಹಿಡಿದು, ಅಮೇರಿಕೆಗೆ ಹೋಗುವುದನ್ನು ಬಿಟ್ಟೆ. ಹೋಗಿದ್ದರೆ ಈಗ 6-7 ಕೋಟಿಗಳ ಒಡೆಯನಾಗಿರಬಹುದಿತ್ತು. ಆದರೆ ಯಾರಿಗೂ ನನ್ನ ಹೆಸರು ಗೊತ್ತಾಗುತ್ತಿರಲಿಲ್ಲ! ನನ್ನ ಕಷ್ಟದ ಕಾಲದಲ್ಲಿ ಕನ್ನಡಿಗ ಮಿತ್ರರು ನನ್ನನ್ನು ಕಾಪಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ನನ್ನ ಕೈಬಿಡಲಿಲ್ಲ. ನಿಮಂಥವರ ಆಶೀರ್ವಾದವಿರುವಾಗ ನನಗೆ ಭಯವಿಲ್ಲವೆಂದು ಭಾವಿಸಿದ್ದೇನೆ. ಒಮ್ಮೆ ಬಂದು ತಮ್ಮನ್ನು ಕಾಣಬೇಕೆಂಬ ಹಂಬಲವಿದೆ. ಬರುತ್ತೇನೆ.

ನಮಸ್ಕಾರಗಳೊಡನೆ,
ತಮ್ಮ ವಿಶ್ವಾಸಿ
ಬೆಸಗರಹಳ್ಳಿ ರಾಮಣ್ಣ

ಡಾ.ಬೆಸಗರಹಳ್ಳಿ ರಾಮಣ್ಣ ನವ್ಯ ಕಾವ್ಯದ ಪ್ರಭಾವ ಕನ್ನಡ ಸಣ್ಣ ಕಥೆಯ ಮೇಲೂ ದಟ್ಟೈಸುತ್ತಿದ್ದ ದಿನಗಳಲ್ಲಿ ಈ ಯಾವ ಪ್ರಭಾವಕ್ಕೂ ಒಳಗಾಗದೆ ತಾಜಾ ಮಣ್ಣಿನ ವಾಸನೆ ಸೂಸಿದ ಗ್ರಾಮೀಣ ಸೊಗಡಿನ ಕಥೆಗಳನ್ನು ಬರೆದು ವಿಮರ್ಶಕರ ಗಮನ ಸೆಳೆದ ಸಮರ್ಥ ಕಥೆಗಾರರು.1965ರ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ‘ಸುಗ್ಗಿ' ಕಥೆಗೆ ಪ್ರಥಮ ಬಹುಮಾನ ಪಡೆದ ರಾಮಣ್ಣನವರು ನಂತರ ಹಿಂದಿರುಗಿ ನೋಡಿದ್ದಿಲ್ಲ. ಅವರ ಕಥಾ ಪಯಣವೂ ಒಂದು ಯಶೋಗಾಥೆ. ಬೆಸಗರಹಳ್ಳಿಯವರ ಕಥೆಗಳ ಕೇಂದ್ರ ಬಿಂದು ನಮ್ಮ ಗ್ರಾಮ ಸಮಾಜ. ಎಂದೇ ಅವರ ಕಥೆಗಳಲ್ಲಿ ತಾಜಾ ಮಣ್ಣಿನ ವಾಸನೆ ಇದೆ. ಒಕ್ಕಲು ಮಕ್ಕಳ ನಿತ್ಯಬದುಕಿನ ರಗಳೆರೇಜಿಗೆಗಳನ್ನು. ಶೋಷಣೆಯನ್ನು ಚಿತ್ರಿಸುವಾಗ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವಾಗ ರಾಮಣ್ಣನವರ ಭಾಷೆ ಗ್ರಾಮೀಣ ಸೊಗಡನ್ನು ಉಳಿಸಿಕೊಂಡೂ ಸೊಕ್ಕುವುದಿಲ್ಲ. ಡಿ.ಆರ್.ನಾಗರಾಜ್ ಹೇಳಿರುವಂತೆ, ಗಾಢವಾದ ನೈತಿಕ ಕ್ರೋಧದ ನಿರುದ್ವಿಗ್ನ ದನಕ ಅವರ ಕತೆಗಳ ನಿಜದನಿಯಾಗಿದೆ. ಅವರ ‘ಗಾಂಧಿ' ಕಥೆ ತುಂಬ ಪ್ರಸಿದ್ಧವಾದ ಕಥೆ. ಗಾಂಧೀಜಿಯವರು ಪ್ರತಿಪಾದಿಸಿದ ಮೌಲ್ಯಗಳ ಅಧ:ಪತನವನ್ನು ತುಂಬಮಾರ್ಮಿಕವಾಗಿ ನಿರೂಪಿಸುವ ಈ ಕಥೇ ಇತ್ತೀಚಿನ ವರ್ಷಗಳಲ್ಲಿ ಪ್ರಕಟವಾಗಿರುವ ಎಲ್ಲ ಕನ್ನಡದ ಅತ್ಯುತ್ತಮ ಕಥೆಗಳಲ್ಲಿ ಸ್ಥಾನ ಪಡೆದಿರುವುದು ಅದರ ಅಂತ:ಸತ್ತ್ವ ಮತ್ತು ಪ್ರಸ್ತುತತೆಗೆ ದ್ಯೋತಕವಾಗಿದೆ `ಕನ್ನಂಬಾಡಿ'.ರಾಮಣ್ಣನವರ ಸಮಗ್ರ ಕಥೆಗಳ ಸಂಕಲನ.

ಬೆಸಗರಹಳ್ಳಿ ರಾಮಣ್ಣನವರ ಸೃಜನಶೀಲ ಪ್ರತಿಭೆ ಮತ್ತು ಕನ್ನಡ ಸಣ್ಣ ಕತೆಗೆ ಅವರು ನೀಡಿರುವ ಕೊಡುಗೆಗೆ ಸಲ್ಲಬೇಕಾದ ಗೌರವಮಾನ್ಯತೆಗಳು ಸಿಗಲಿಲ್ಲ. ಅವರ ಪತ್ರ ಸ್ವಯಂವೇದ್ಯವಾದದ್ದು. ವೈದ್ಯರಾಗಿ ಅವರು ವಿದೇಶಕ್ಕೆ ಹೋಗಿದ್ದರೆ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಮೆರೆಯಬಹುದಿತ್ತು. ಆದರೆ ದೇಶಭಾಷೆಗಳ ಪ್ರೀತಿಯಿಂದ ವಿದೇಶದ ಪ್ರಲೋಭನೆಯನ್ನು ತಿರಸ್ಕರಿಸಿದರು. ವೈದ್ಯರಾಗಿ ತಮ್ಮ ಜನಗಳ ಸೇವೆ ಅವರಿಗೆ ಮುಖ್ಯವಾಯಿತು. ಹಾಗೆಯೇ ಕನ್ನಡದ `ಹುಚ್ಚು' ಅವರನ್ನು ಕಟ್ಟಿಹಾಕಿತು. ಇದರ ಫಲವಾಗಿ ನಾಡಿನ ಜನತೆಗೆ ಅವರ ವೃತ್ತಿ ಪ್ರವೃತ್ತಿ ಎರಡರಿಂದಲೂ ಲಾಭವಾಯಿತು. ಆದರೆ ನಾಡು ಅವರಿಗೆ ಏನನ್ನು ಕೊಟ್ಟಿತು? ಅವರ ಪತ್ರ ಓದಿದಾಗ ನಾವು ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ‘ಕನ್ನಡ ಮಿತ್ರರು ತಮ್ಮನ್ನು ಕಾಪಾಡಿದ್ದಾರೆ' ಎನ್ನುವ ಅವರ ವಿನಯದ ಮುಂದೆ ನಾವು ಇನ್ನಷ್ಟು ಕುಬ್ಜರಾಗುತ್ತೇವೆ-ನಾಡುನುಡಿ ಒಬ್ಬ ಲೇಖಕನನ್ನು ಈ ಸ್ಥಿತಿಗೆ ಸಿಕ್ಕಿಸಿದ್ದಕ್ಕಾಗಿ. ಸಂಕೋಚ, ನಾಚಿಕೆ, ಪಾಪಪ್ರಜ್ಞೆಗಳಿಂದ ರಾಮಣ್ಣನವರ ಪತ್ರ ಇಂದಿಗೂ ನನ್ನ ಅಂತ:ಕರಣವನ್ನು ಬಾಧಿಸುತ್ತದೆ."ಇಂಡಿಯಾದ ಗ್ರಾಮೀಣ ಬದುಕಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸಿರುವ" ರಾಮಣ್ಣನವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗೌರವವನ್ನೂ ತೋರಿಸಿದಷ್ಟು ಕೃಪಣವಾಯಿತೆ ಕರ್ನಾಟಕ ಎಂದು ಮನಸ್ಸು ಭಾರವಾಗುತ್ತದೆ.

ಒಮ್ಮೆ ಬಂದು ತಮ್ಮನ್ನು ಕಾಣುವ ಹಂಬಲವಿದೆ' ಎಂದು ಬರೆದ ರಾಮಣ್ಣವರವನ್ನು ಮೊಖ್ತ ಭೇಟಿಯಾಗುವ ಕಾತರದಲ್ಲಿದ್ದೆ. ಆದರೆ ಆ ದಿನ ಬರಲೇ ಇಲ್ಲ. ನಾನು ದುರ್ದೈವಿ.

ಬೋಳಂತಕೋಡಿ ಈಶ್ವರಭಟ್ಟ
ಕರ್ನಾಟಕ ಸಂಘ,

ಪುತ್ತೂರು (ದ.ಕ)

ಶ್ರೀ ರಂಗನಾಥ ರಾವ್ ಅವರಿಗೆ,

ವಂದನೆಗಳು. ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಸೂಚನೆಯಂತೆ ‘ಕನ್ನಡವನ್ನು ಉಳಿಸಿ ಬೆಳೆಸಿದವರು' ಪುಸ್ತಕದ ಒಂದು ಪ್ರತಿ ಕಳುಹಿಸುತ್ತದ್ದೇನೆ. ನೀವು ಡಾ.ನಾ.ಮೊಗಸಾಲೆ ಮೂಲಕ ವಿಶ್ವಾಸದಿಂದ ಕಳಹಿಸಿದ ನಿಮ್ಮ ಪುಸ್ತಕ ಸಿಕ್ಕಿದೆ. ತುಂಬಾ ಖುಷಿಕೊಡುವ ಪುಸ್ತಕ. ಜೊತೆಗೇ, ಬುದ್ಧಿಯನೂ ಚುರುಕುಗೊಳಿಸುತ್ತದೆ. ಕೃತಜ್ಞತೆಗಳು.

ತಾ.23ರಂದು ಸಂಜೆ ಭೇಟಿಯಾಗೋಣ.

ಇಂತು
ನಿಮ್ಮ ವಿಶ್ವಾಸಿ,
ಈಶ್ವರ ಭಟ್ಟ

*********
ಎನ್.ಕೆ.ಕುಲಕರ್ಣಿ
ಧಾರವಾಡ

20-9-98 10 ಎ.ಎಂ.
ನನ್ನ ಅಕ್ಕರೆಯ, ಆದರಣೀಯ ಚಿರಂಜೀವರಾದ, ಮಾನನೀಯ ಶ್ರೀ ಜಿ.ಎನ್.ರಂಗನಾಥ ರಾವ್ ಅವರಲ್ಲಿ,

ಎನ್ಕೆಯ ಆನಂದದ, ಆಭಾರದ, ಅಭಿಮಾನ ಪೂರ್ವಕ ವಂದನೆಗಳು. ನಿಮ್ಮ ತಾ.12-9-98ರ ಪತ್ರ ಮೌಲಿಕವಾದ ಅಪರೂಪದ ಓಲೆ, ಕಾಯುತ್ತಿರುವ ಚಾತಕ ಪಕ್ಷಿಗೆ ಮೀಸಲು ಮಳೆಯ ಹನಿಯಂತೆ ಮುತ್ತಿನಂತಹ ನಿಮ್ಮ ಸ್ವಹಸ್ತ ಲಿಖಿತ, ಶುದ್ಧ ಸ್ನೇಹಮಯ ಪತ್ರ, ನನ್ನ ಹೃದಯಕ್ಕೆ ಶತಪತ್ರ ಕಮಲದ ತಂಪನ್ನು ನೀಡಿತು. ನನ್ನ ಮುಖ ನಿಮ್ಮ ಮಿಗಿಲಾದ ಭಾವನೆಗಳನ್ನೋದಿ ಅಗಲಾಯಿತು:ನನ್ನ ನಿರೀಕ್ಷೆಯ ನಿರಾಶೆಯಳಿದು ಹಗಲಾಯಿತು!

ಇಂದಿನ ‘ಪ್ರಜಾವಾಣಿ'ಯ 5ನೇ ಕಂತನ್ನು ಓದಿಯೇ ಬರೆಯಬೇಕೆಂದು ನಾಲ್ಕೈದು ದಿನ ಬರೆಯುವ ಚಾಪಲ್ಯವನ್ನು ಬಿಗಿಹಿಡಿದೆ. ಈ ಸಲದ ವಿನ್ಯಾಸ, ಹರಹು, ಮನೋಹರವಾದ ಸ್ಕೆಚ್‍ಚಿತ್ರ ಕಥೆಯ ಮುಂದುವರಿತಕ್ಕೆ ಕಳೆ ತಂದಿವೆ. ಹಿನ್ನೆಲೆಯಲ್ಲಿ ಐದಂತಸ್ತಿನ ಸಂಸ್ಕೃತ ಪಾಠಶಾಲೆಯ ಚಿತ್ರವೂ ಬಂದಿದ್ದರೆ ಇನ್ನೂ ಶೋಭೆ ಬರಬಹುದಿತ್ತು. ನಿಮ್ಮ ಕ್ಯಾಮರಾ ಮಿತ್ರರು ಅದನ್ನೆಲ್ಲ ಹಿಡಿದುಕೊಂಡು ಹೋಗಿದ್ದಾರೆ. ಆ ಕ್ಯಾಮರಾ ಚಿತ್ರಗಳ ಬಳಕೆಯೂ ಬರಬಹುದಲ್ಲವೆ?

ನನ ಮಾನ್ಯ ಮಮತೆಯ ಚಿರಂಜೀವರೇ, ನಿಮಗೆ ನಾನೆಷ್ಟು ಋಣಿ!ಮುಖ್ಯವಾಗಿ ನನ್ನ ಮುಸುರೆ ಮುಸುರೆ ಬರವಣಿಗೆಯನನ್ನು ಕುಶಲತೆಯಿಂದ ಎಡಿಟ್ ಮಾಡಿ ಕಥೆಯ ಸಾಗಣೆಯನ್ನು ರೋಚಕವಾಗಿಸಿದ್ದೀರಿ!ಇಷ್ಟೊಂದು ಕುಸುರಿಯ ಎಡಿಟಿಂಗ್ ನೋಡಿ ನನಗೆ ಪರಮಾನಂದ, ಪರಮಾಶ್ಚರ್ಯ ಕೂಡಾ!

"ನನ್ನಧಿಕಾರವಧಿಯಲ್ಲಿ ಪ್ರಜಾವಾಣಿ ಓದುಗರಿಗೆ ‘ಧಾರವಾಡಮಾಸ್ತರ್' ಕಾದಂಬರಿ ಕೊಡಲು ಸಾಧ್ಯವಾದುದು ನನ್ನ ಪುಣ್ಯ ವಿಶೇಷ ಹಾಗೂ ನನ್ನ ಹೆಮ್ಮೆಯ ಕೆಲಸವೆಂದು ಭಾವಿಸಿದ್ದೇನೆ" ಎಂದು ಬರೆದುದನ್ನೋದಿ ಮೂಕನಾಗಿಹೋದೆ. ನಿಮ್ಮ ಉದ್ಯಮಮನಸ್ಸು ಹೀಗೆ ನುಡಿಸಿದೆ, ನಿಮ್ಮ ದೊಡ್ಡ ಗುಣ ಇದು! ಇಂದು ರೇಡಿಯೋ, ಟಿ.ವಿ.ಗಳ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕವೂ ಬೇಂದ್ರೆ ಕಾವ್ಯ ಮನೆಮಾತಾಗಿ ಬಿಟ್ಟಿದೆ. ಬೇಂದ್ರೆ ಹೆಸರು ಕನ್ನಡಿಗರ ನಾಲಗೆಯ ಮೇಲೆ ನಲೆದಾಡುತ್ತಿದೆ. ಇಂತಹ ಸಮಯದಲ್ಲಿ ತಮ್ಮ ದೂರದೃಷ್ಟಿಯ, ನನ್ನ ಅದೃಷ್ಟದ ಫಲವಾಗಿ ಈಗ ಈ ಧಾರಾವಾಹಿ ಮೂಡಿತ್ತಿರುವುದು ನನ್ನ ಪುಣ್ಯ ನನ್ನವರೆ! ನೀವು ಧಾರವಾಡ ಲೋಕಕ್ಕಷ್ಟೆ ಅಲ್ಲ ಇಡಿಯ ಕನ್ನಡ ನಾಡಿನ ಜನಕ್ಕೆ ನೀಡಿದ ಮೌಲಿಕ ಸೇವೆ ಇದು!

ನನಗೆ ಮತ್ತೂ ಓಲೆಗಳು ಬರುತ್ತಲೇ ಇವೆ. ಬೆಳಗಾವಿಯ ಪ್ರೊ.ಪ್ರಲ್ಹಾದ ಕುಮಾರ ಭಾಗೋಜಿ, ಶ್ರೀ ಅನಂತ ಕಲ್ಲೋಳ ಅವರುಗಳು ಜನ ತುಂಬ ಉತ್ಸುಕತೆಯಿಂದ ಎದುರು ನೋಡುತ್ತಿದ್ದ ಧಾರಾವಾಹಿ ವಾರವಾರ ಮೂಡಿಬರುತ್ತಿರುವುದು ಒಂದು ಸುಯೋಗ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಾ.ಪಾಟೀಲ ಪುಟ್ಟಪ್ಪ, ಪ್ರೊ.ಹೇಮಗಿರಿಮಠ, ಡಾ.ಗೌರೀಶ ಕಾಯ್ಕಿಣಿ, ಮೊದಲಾದವರು ತುಂಬು ಹೃದಯದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೌರೀಶರಂತೂ "ನರಬಲಿ ಕಾವ್ಯದಿಂದ, ಮುಗದದ ಗ್ರಾಮೀಣ ದೃಶ್ಯದಿಂದ ಪ್ರತಿಲೋಮ ತಂತ್ರದಲ್ಲಿ ಕಥೆಯ ಉದ್ಭವವಾದುದು ತುಂಬ ಆಕರ್ಷಕವಾಗಿದೆ"ಎಂದೆಲ್ಲ ಬರೆದಿದ್ದಾರೆ.

ಪ್ರತಿಯೊಂದು ಕಂತೂ ಒಂದು ಅಧ್ಯಾಯವೇ ಆಗಿ ಅದಕ್ಕೊಂದು ಯೂನಿಟ್ ಮುಕ್ತಾಯ ಬರುತ್ತಿರುವುದು ಕಥಾ ಬಂಧಕ್ಕೆ, ನಿರೂಪಣಾ ಶಿಲ್ಪಕ್ಕೆ ಒಂದು ಸೊಬಗು, ಅಚ್ಚುಕಟ್ಟುತನ ತಂದಿದೆ. ಜ್ಞಾನಪೀಠ ಪ್ರಶಸ್ತಿ ಬಂದ ಮೇಲೆ ಮಹಾರಾಷ್ಟ್ರದ ಒಬ್ಬ ಡೈವೊರ್ಸಿ ಫ್ಯಾನ್ ಮಹಿಳೆ ಇವರ ಸಂಗಾತಿಯಾಗ ಬಯಸಿದ ಪ್ರಕರಣ ಎಲ್ಲಿ ಬರಬೇಕೆಂಬುನ್ನು ಸೂಚಿಸಿರುವುದು ಸರಿಹೋಯಿತಷ್ಟೆ? ‘ಮರಣೋತ್ತರ'ದ ಒಂದು ಪ್ರಕರಣವನ್ನು ತಮಗೆ ಸೂಕ್ತಕಂಡಂತೆ ಮಾಡಿರಿ.ಇಟ್ಟುಕೊಂಡರೆ ಒಳ್ಳೆಯದು. ಬಿಟ್ಟುಕೊಟ್ಟರೆ ಬಾಧಕವಿಲ್ಲ. ಅಂತೂ ದತ್ತೂ ಮಾಸ್ತರರನ್ನು ಜನಪ್ರಿಯಗೊಳಿಸಿದ ‘ಪ್ರಜಾವಾಣಿ'ಯ ಪ್ರತಿಧ್ವನಿಯಾಗಿ ಈ ಧಾರಾವಾಹಿ ತಮ್ಮ ಕೃಪೆಯಿಂದ ಪ್ರಕಾಶನ ಕಂಡುದು ನನ್ನ ಪುಣ್ಯ ವಿಶೇಷ. ಈ 86ರ ಎನ್ಕೆಯ ಹುಟ್ಟುಹಬ್ಬ ಕಾಣಿಕೆಯೋ ಎಂಬಂತೆ 23-8-98ಕ್ಕೇ ಮೊದಲಾಗಿಸಿದ್ದೀರಿ. 29-8-98ಕ್ಕೆ ನನಗೆ 85 ಪೂರ್ತಿಯಾಗಿ 86ರರಲ್ಲಿ ಕಾಲಿಟ್ಟಿದ್ದಾಗಿದೆ. ಇನ್ನೂ ಸಂತೋಷದಿಂದ ಬದುಕನ್ನೂ ಪ್ರೀತಿಸಿ, ಬದುಕಿನ ಸುಖದ ಅಂತ್ಯವನ್ನೂ ಸ್ವಾಗತಿಸುತ್ತೇನೆ.

"ಗದುಗಿನ ನಾರಣಪ್ಪ"ಎಂಬ ಶೀರ್ಷಿಕೆಯಲ್ಲಿ ಕುಮಾರವ್ಯಾಸನ ಕುರಿತೂ ಒಂದು ಕಾದಂಬರಿ ಹೊಳಹ ಹಾಕುತ್ತಿದ್ದೇನೆ. ನಿಮ್ಮ ಪ್ರೋತ್ಸಾಹದ ಸಂಜೀವಕಪತ್ರ (12-9-98)ನನಗೆ ಈ ಸ್ಫೂರ್ತಿ, ಪ್ರಚೋದನೆಗಳನ್ನು ನೀಡಿದೆ. ನಿಮ್ಮ ಕಾರ್ಯಬಾಹುಳ್ಯದ ಕಲ್ಪನೆ ಇಲ್ಲಿಯ ಮಿತ್ರ ಶ್ರೀ ಪ್ರೇಮಕುಮಾರರಿಂದ ನನಗೆ ಸ್ಫೂರ್ತಿ ಉಂಟಾಗಿದೆ. ಅಂತೇ ನೀವು ಮನೆಯಲ್ಲೇ ಬೆರಳಚ್ಚುಗಾರರನ್ನು ಅವಲಂಬಿಸದೇ ನಿಮ್ಮ ಹಸ್ತದಿಂದಲೇ ಪತ್ರಲೇಖನ ಮಾಡಿದ್ದೀರಿ! ಇದು ಹೆಚ್ಚಿನ ಮಮತೆ! ಇದಕ್ಕೆ ಎಂದಿಗೂ ಋಣಿಯಾಗಿರುವ,

ನಿಮ್ಮ
ಎನ್ಕೆ.

ಎನ್ಕೆ ಅವರನ್ನು ನಾನು ಅವರು ಬೆಂಗಳೂರು ಆಕಾಶವಾಣಿಯಲ್ಲಿದ್ದಾಗ ಮೊಖ್ತ ಭೇಟಿಯಾಗಿದ್ದೆ. ಆದರೆ ಅದಕ್ಕೂ ಮೊದಲು ಅವರ ‘ಸಾವಿನ ಉಡಿಯಲ್ಲಿ', ‘ಎರಡನೆಯ ಸಬಂಧ' ಮೊದಲಾದ ಕಾದಂಬರಿಗಳ ಓದಿನಿಂದ ಸೃಜನಶೀಲ ಬರಹಗಾರರಾಗಿ ಅವರು ನನಗೆ ಪರಿಚಿತರಾಗಿದ್ದರು.ಅವರ ಬೆಂಗಳೂರು ಆಕಾಶವಾಣಿಯಲ್ಲಿ ನಾಟಕ ವಿಭಾಗದಲ್ಲಿದ್ದಾಗ ನಾನು ಒಂದೆರಡು ಬಾರಿ ಧ್ವನಿ ಕಲಾವಿದನ ಪಾತ್ರಕ್ಕೆ ಆಡಿಷನ್ ಗೆ ಹೋಗಿ ವಿಫಲನಾದುದೂ ಉಂಟು. ನಿವೃತ್ತಿಯ ನಂತರ ಅವರು ಬೆಂಗಳೂರು ತೊರೆದು ತೌರೂರು ಧಾರವಾಡದಲ್ಲಿ ನೆಲೆಸಿದ್ದರು. ಅವರು ಬೇಂದ್ರೆಯವರ ಜೀವನವನ್ನು ಆಧರಿಸಿ ಒಂದು ಕಾದಂಬರಿ ಬರಯುತ್ತಿದ್ದಾರೆಂಬ ವಾಸನೆ ನನ್ನ ಮೂಗುಗೆ ಬಡಿದ್ದದೇ ನನಗೆ ಅದನ್ನು ಸಾಪುಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದರೆ ಲೇಸಾದೀತು ಎನ್ನಿಸಿತು. ಜೊತೆಗೆ ‘ಪ್ರವಾ' ಹುಬ್ಬಳ್ಳಿ ಆವೃತ್ತಿ ಪ್ರಸರಣಕ್ಕೂ ಸಹಾಯಕವಾದೀತು ಎನ್ನಿಸಿತು. ಧಾರವಾಡಕ್ಕೆ ಹೋಗಿ ಅವರನ್ನು ಕಾಣಲು ನಿರ್ಧರಿಸಿದೆ. ಧಾರವಾಡದಲ್ಲಿದ್ದ ಸಹೋದ್ಯೋಗಿ ಪ್ರೇಮಕುಮಾರ ಹರಿಯಬ್ಬೆ ಅವರಿಗೆ ನಾನು ಬರಲಿರುವ ಸುದ್ದಿಯನ್ನು ಮುಟ್ಟಿಸಲು ತಿಳಿಸಿದೆ. ಒಂದು ಭಾನುವಾರ ಮುಂಜಾನೆ ಅವರ ಮನೆಯಲ್ಲಿ ಎನ್ಕೆಯವರನ್ನು ಭೇಟಿಯಾದೆ. ಉಭಯಕುಶಲೋಪರಿ ನಂತರ ‘ದತ್ತೂ ಮಾಸ್ತರ' ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸಲು ‘ಪ್ರವಾ'ಗೆ ಕೊಡುವಂತೆ ವಿನಂತಿಸಿದೆ. ಕೆಲುವು ಶರತ್ತುಗಳ ಮೇಲೆ ಒಪ್ಪಿದರು. ‘ದತ್ತೂ ಮಾಸ್ತರ' ಧಾರವಾಹಿಯಾಗಿ ಪರಗೊಂಡು ನಮ್ಮ ಓದುಗರ ಮೆಚ್ಚುಗೆಗೆ ಪಾತ್ರವಾಯಿತು.

ಎನ್ಕೆ ನವೋದಯ ಕಾಲದ ಹಿರಿಯರು. ಸಾಮಾನ್ಯವಾಗಿ ಆ ಹಿರಿಯರಲ್ಲಿ ಇದ್ದ ಸ್ನೇಹ, ಆಪ್ತತೆಗಳು ಎನ್ಕೆ ಅವರಲ್ಲಿ ಒಂದು ತೂಕ ಹೆಚ್ಚಾಗಿಯೇ ಇತ್ತು. ಅದನ್ನು ಅವರು ನನ್ನ ಬಗ್ಗೆ ನನಗೆ ಸಂಕೋಚವಾಗುವಷ್ಟು ಧಾರಾಳವಾಗಿಯೇ ಬಳಸಿದ್ದಾರೆ. ಆದರೆ ಅವರ ಪತ್ರದಿಂದ ನನಗಾದ ಲಾಭವೆಂದರೆ ಅ ಕಡೆಯ ಪ್ರಲ್ಹಾದ, ಭಾಗೋಜಿ, ಪಾಟೀಲ ಪುಟ್ಟಪ್ಪ, ಗೌರೀಶ ಕಾಯ್ಕಿಣಿ ಅವರುಗಳ ಅಭಿಪ್ರಾಯ ತಿಳಿದಿತ್ತು. ಇದರಿಂದಾಗಿ ನನ್ನ ಆಯ್ಕೆ ಮತ್ತು ನಿರ್ಧಾರಗಳ ಬಗ್ಗೆ ನನ್ನಲ್ಲಿ ನನ್ನ ಆತ್ಮ ವಿಶ್ವಾಸ ಹೆಚ್ಚು ಬಲಗೊಂಡಿತು. ಈ ನಿಟ್ಟಿನಿಂದ ಹಿರಿಕಿರಿಯರ ಅನೇಕ ವಿಮರ್ಶಾತ್ಮಕ ಪತ್ರಗಳಿಂದ ನನಗೆ ಓದುಗರ ಅಪೇಕ್ಷೆ, ರಸಾನುಭೂತಿ ಮತ್ತು ರಸಾನುಭವದ ಮಟ್ಟ ತಿಳಿಯುವುದರಲ್ಲಿ ಸಹಾಯವಾಗಿದೆ.

27-1098
ಹಿತೈಷಿಗಳೇ,
ಹೇಗಿರುವಿರಿ?

ಕಳೆದವಾರದ ಸಾಪ್ತಾಹಿಕದ ನಮ್ಮವರು ಓದಿದೆ. ದಿವಾಕರ್ ಬಗೆಗೆ ಬರೆದಿರುವುದು ಯಥಾವತ್ತಾಗಿದೆ. ಒಂದು ಅಂಶವನ್ನಂತೂ ಚೆನ್ನಾಗಿ ಗುರುತಿಸಿದ್ದೀರಿ. ‘ಶತಮಾನದ ಕಥೆ'ಗಳಲ್ಲಿ ಅವರ ‘ಕೌರ್ಯ' ಸೇರದಿರುವ ಮಾತು. ಈ ಮಾತನ್ನ ‘ಸಂಪಾದನೆ' ನಡೆಯುವ ಹೊತ್ತಿನಲ್ಲೇ ಹೇಳಿದ್ದೆ. ಪ್ರಿಸಂ ರಂಗನಾಥ್ ನಿಮಗೆ ಗೊತ್ತಿರಬಹುದು. ಅವರ ಬಳಿ ಹೇಳಿ ಕಳಿಸಿದ್ದೆ. ಜಯಶ್ರೀ ಅವರ ಕಥೆ ‘ಕ್ರೌರ್ಯ'ಕ್ಕೆ ಸಬ್‍ಸ್ಟ್ಯೂಟ್ ಅಲ್ಲ. ದಿವಾಕರ್ ಅಪಖ್ಯಾತಿ ಬಂದೀತೆಂದು ಹೆದರಿದರು. ಆದರೆ ‘ಕ್ರೌರ್ಯ'ಸೇರದೇ ಇರುವುದಕ್ಕೆ, ಜಯಶ್ರೀ ಕಥೆ ಸೇರಿಸಿದ್ದಕ್ಕೆ ಆರೋಪ ಎದುರಿಸುತ್ತದ್ದಾರೆ.

ನಿಮ್ಮ ಗ್ರಹಿಕೆ ಓದಿ ತುಂಬಾ ಖುಷಿಪಟ್ಟೆ.
ವಿಶೇಷಾಂಕ ಕೂಡಾ ತುಂಬಾ ಚೆನ್ನಾಗಿ ಬಂದಿದೆ.
ಅಪಾರ ಅನುಭವ.ಶ್ರಮ ಸಾರ್ಥಕವಾಗಿದೆ.

ವಂದನೆಗಳು.
ವೀಶ್ವಾಸದ
ಲೋಕೇಶ ಅಗಸನಕಟ್ಟೆ
ಚಿತ್ರದುರ್ಗ

********

15-1-98

ಪ್ರಿಯ ಶ್ರೀ ರಂಗನಾಥ ರಾವ್,
‘ಪ್ರಜಾವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಸಂದರ್ಶನವೊಂದನ್ನು, ‘ಸುಧಾ'ದಲ್ಲಿ ನನ್ನ ಬಗ್ಗೆ ಪರಿಚಯ ಲೇಖನವೊಂದನ್ನು ಪ್ರಕಟಿಸಿದ್ದೀರಿ.

ಎರಡೂ ಲೇಖನಗಳು ಬಹು ಆತ್ಮೀಯವಾಗಿದೆ ಎಂದು ಹಲವರು ಮಿತ್ರರು ನನಗೆ ತಿಳಿಸಿದ್ದಾರೆ. ಅದಕ್ಕಾಗಿ ನಾನು ತಮಗೆ ನನ್ನ ಕೃತಜ್ಞತೆಯನ್ನು ಹೇಳುತ್ತೇನೆ. ‘ಸುಧಾ' ಲೇಖನವನ್ನು ಬರೆದವರು ನೀವೇ ಎಂದು ತಿಳಿದು ನನಗೆ ಹೆಚ್ಚಿನ ಹೆಮ್ಮೆ ಎನ್ನಿಸಿತು. ಸಹೃದಯ ಸ್ನೇಹಿತರ, ಸಜ್ಜನರ, ಸುಹೃದ್ ಮನಸ್ಸಿನ ವ್ಯಕ್ತಿಗಳು ಬರೆದ ಲೇಖನದಲ್ಲಿ ಒಂದು ಆತ್ಮೀಯತೆಯ ಸ್ಪರ್ಶವಿರುತ್ತದೆ. ಆ ಆತ್ಮೀಯತೆ ನನ್ನ ಮನಸ್ಸಿನ ಆಳದ ಭಾಗವನ್ನು ತಟ್ಟಿತು.

ನಿಮ್ಮ ಸ್ನೇಹಿತನಾಗಿ ಉಳಿಯುವ ಅರ್ಹತೆಯನ್ನು ನಾನು ಉಳಿಸಿಕೊಂಡು ಬರುತ್ತೇನೆ.

ನಿಮ್ಮವನೇ ಆದ,
ಎಂ.ಚಿದಾನಂದ ಮೂರ್ತಿ

ನಮಗೆ ತಿಳಿದಿರುವವರ ಬಗ್ಗೆ, ಅದರಲ್ಲೂ ಸಾಧಕರ ಬಗ್ಗೆ ಬರೆಯುವಾಗ ಪತ್ರಕರ್ತರು ಹೆಚ್ಚಿನ ಎಚ್ಚರ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಬಯಾಸ್ಡ್, ಸಹಾನುಭೂತಿಪರ ಎಂಬೆಲ್ಲ ಟೀಕೆಗಳಿಗೆ ತಲೆಯೊಡ್ಡಲು ಸಿದ್ಧವಾಗಿರಬೇಕಾಗುತ್ತದೆ. ದಿವಾಕರ್ ಅವರು ತಮ್ಮ ‘ಕ್ರೌರ್ಯ' ಕಥೆಯನ್ನು ಸೇರಿಸಿಕೊಳ್ಳದ ಬಗ್ಗೆ ನಾನು ಬರೆದಾಗ, ನನ್ನ ನಿರ್ಧಾರದ ಬಗ್ಗೆ ಖಚಿತವಾದ ನಿಲುವಿತ್ತಾದರೂ ದಿವಾಕರ್ ತಮ್ಮ ಕಥೆಯನ್ನು ಬಿಟ್ಟು ತಮ್ಮ ಶ್ರೀಮತಿಯವರ ಕಥೆಯನ್ನು ಸೇರಿಸಿದ್ದು ಸರಿಯಲ್ಲ ಎನ್ನುವ ನನ್ನ ತೀರ್ಮಾನ ದಿವಾಕರ್ ಅವರ ವಿಮರ್ಶನ ಪ್ರಜ್ಞೆಯನ್ನೇ ಅಲುಗಾಡಿಸುವ ರೀತಿಯಲ್ಲಿದ್ದು, ಹೆಂಡತಿಯ ಸಲುವಾಗಿ ಅವರು ಗುಣಾತ್ಮಕತೆಯಲ್ಲಿ ರಾಜಿ ಮಾಡಿಕೊಂಡರೇನೋ ಎಂದು ಅವರ ಪ್ರಮಾಣೀಕತೆಯನ್ನೇ ಅನುಮಾನಿಸುವ ರೀತಿಯದಾಗಿತ್ತು. ಬರೆದ ನಂತರವೂ ನಾನು ಹಾಗೆ ಬರೆಯಬಾರದಿತ್ತೇನೊ ಎಂಬ ಅಳುಕಿಗೂ ಕಾರಣವಾಗಿತ್ತು. ಆದರೆ ಲೋಕೇಶ ಅಗಸನಕಟ್ಟೆ ಅವರ ಪತ್ರ ಹಾಗೂ ಇನ್ನು ಕೆಲವರು ವೈಯಕ್ತಿಕವಾಗಿ ನನ್ನ ನಿಲುವು ಸರಿಯಾಗಿದೆ ಎಂದು ತಿಳಿಸಿದಾಗ ನನಗೆ ಹೆಚ್ಚುನ ನೈತಿಕ ಬಲ ಬಂದಂತಾಯಿತು. ತೀರ್ಮಾನಗಳನ್ನು ಕೈಗೊಳ್ಳುವಾಗ ಯಾರಾದರೂ ಇಂಥ ‘ದೌರ್ಬಲ್ಯಗಳಿಗೆ" ಈಡಾಗುವುದು ಮನುಷ್ಯ ಸಹಜವಾದದ್ದು ಅದನ್ನು ಎತ್ತಿ ತೋರುವುದು ವಿಮರ್ಶೆಯ ಕೆಲಸ. ಹಾಗೆ ಮಾಡಿದಾಗ ನಾಲ್ಕು ಜನ ರಸಿಕರಿಂದ ಅದು `ಸೈ'ಎನ್ನಿಸಿಕೊಂಡಲ್ಲಿ ವಿಮರ್ಶೆ ಗೆದ್ದಂತೆ. ನಾನು ಹಾಗೆ ಬರೆದಾಗ ನನ್ನ ವೃತ್ತಿಬಾಂಧವರೂ ಹಿತೈಷಿ ಮಿತ್ರರೂ ಆದ ದಿವಾಕರ್ ಏನಂದುಕೊಳ್ಳುವರೋ ಎನ್ನುವ ಅಳುಕು ನನ್ನಲ್ಲಿತ್ತು. ಆದರೆ ಶ್ರೀ ದಿವಾಕರ್ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಅಸಮಾಧಾನ ತೋರಿದವರಲ್ಲ, ಹಾಗೆ ನಡೆದುಕೊಂಡವರಲ್ಲ. ನನಗಂತೂ ‘ಸತ್ಯ'ವನ್ನು ಹೇಳಿದ ತೃಪ್ತಿ ಸಿಕ್ಕಿತ್ತು. ಲೋಕೇಶ್ ಅಗಸನಕಟ್ಟೆ ಅವರಂಥ ಪತ್ರಗಳು ವಿಮರ್ಶಕನಾಗಿ ನನ್ನ ನೈತಿಕ ನೆಲಗಟ್ಟಿಗೆ ಆಸರೆಯಾಗಿದ್ದವು.

ಮಾನಹಾನಿಗೆ ವೃತ್ತಿಬಾಂಧವರಾದ ಸಹೋದ್ಯೋಗಿಗಳು ನಡೆಸಿದ ಪ್ರಯತ್ನವನ್ನು ಹೇಳಿದ್ದೇನೆ. ಪ್ರಾಣಹಾನಿಗೆ ಸಂಬಂಧಿಸಿದಂತೆ ಒಂದು ಪತ್ರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.

ರಂಗನಾಥ ರಾವ್,
ಜಾತೀಯತೆಯ ಕ್ರಿಮಿಯೆ,
ಈ ತಿಂಗಳಲ್ಲಿ ಶ್ರೀ ರಾಜಾ ಶೈಲೇಶಚಂದ್ರರನ್ನು ಸಹಸಂಪಾದಕರನ್ನಾಗಿ ಮತ್ತು ಶ್ರೀ ಡಿ.ವಿ.ರಾಜಶೇಖರರನ್ನು ಸುದ್ಧಿ ಸಂಪಾದಕರನ್ನಾಗಿ ಮಾಡದಿದ್ದರೆ ನಿನ್ನ ಎರಡೂ ಮಕ್ಕಳನ್ನು ಅಪಹರಿಸಿ ನಿನಗೆ ನಿರಂತರ ಪುತ್ರಶೋಕ ಉಂಟುಮಾಡಲಿದ್ದೇವೆ.

ಎಚ್ಚರ ಇರಲಿ.
ಆದಿನಾರಾಣ ಶೆಟ್ಟಿ
ಅವೋಪ

2/2/98
ಅವೋಪ,37/650,13ನೇ ಕ್ರಾಸ್,
ಬಿ ಎಸ್ ಕೆ ಸೆಕೆಂಡ್ ಸ್ಟೇಜ್
ಬೆಂಗಳೂರು-560070.

ಪತ್ರ ಸ್ವಯಂವೇದ್ಯ. ಈ ಪತ್ರ ನನ್ನನ್ನು ವಿಚಲಿತಗೊಳಿಸಲಿಲ್ಲ. ಆದರೆ ಸರಳಾ ಸ್ವಲ್ಪ ಭೀತಳಾಗಿದ್ದಳು. ಮಾತೃ ಹೃದಯಕ್ಕೆ ಸಹಜವಾದ ಪ್ರತಿಕ್ರಿಯೆ ಅದಾಗಿತ್ತು. ಇದು ತಂಟೆಕೋರರ ಕಿತಾಪತಿ ಎಂದು ನಾನು ಸುಮ್ಮನಿರುವಂತೆಯೂ ಇರಲಿಲ್ಲ. ಆಡಳಿತವರ್ಗದ ಪಾತ್ರವೂ ಇದ್ದುದರಿಂದ ನಾನು ಮೇಲಿನ ಪತ್ರವನ್ನು ಅವರ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿತ್ತು. ನನ್ನಂತೆಯೇ ಆಡಳಿತವರ್ಗವನ್ನೂ ಪತ್ರ ವಿಚಲಿತಗೊಳಿಸಲಿಲ್ಲ. ಯಾವುದಕ್ಕೂ ನಾನು ಪೊಲೀಸರಿಗೆ ದೂರು ಕೊಡಬಹುದೆಂಬ ಸಲಹೆ ಅವರಿಂದ ಬಂತು. ಈ ಬಾಬಿನಲ್ಲಿ ಅವರಿಂದ ನನಗೆ ಹೆಚ್ಚಿನ ಬೆಂಬಲ ಸಿಗಲಾರದು ಎಂಬ ಸುಳಿವೂ ಸಿಕ್ಕಿತು. ಪತ್ರದಲ್ಲಿ ಹೆಸರಿಸಲಾಗಿರುವವರ ಜೊತೆ ಚರ್ಚಿಸಿದೆ. ಅವರು ಇದರಲ್ಲಿ ತಮ್ಮ ಪಾತ್ರ ಏನೂ ಇಲ್ಲವೆಂದು

ಹೇಳಿದರು. ಅಲ್ಲಿಗೆ ಅದನ್ನು ಬಿಟ್ಟುಬಿಟ್ಟೆ, ಮುಂದೊಂದು ದಿನ ಅದನ್ನು ಬರೆದ ಕಿಡಿಗೇಡಿ ಯಾರೆಂಬುದು ಗೊತ್ತಾಗಿ ಸಹೋದ್ಯೋಗಿಯೊಬ್ಬರ ಮುಖವಾಡ ಕಳಚಿ ಬಿತ್ತು. ನನ್ನ ಇಬ್ಬರು ಮಕ್ಕಳೂ ನನ್ನಿಂದಾಗಲೀ, ನನ್ನ ವೃತ್ತಿ ಸಂಬಂಧದಿಂದಾಗಲೀ ಏನನ್ನೂ ಬಯಸದೇ ಸ್ವಾವಲಂಬಿಗಳಾಗಿ ಚೆನ್ನಾಗಿದ್ದಾರೆ.
ಈ ಅಂಕಣದ ಹಿಂದಿನ ಬರಹಗಳು:
‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...