ಕನ್ನಡದ ಓದುಗರ ಪಾಲಿಗೆ ಅರೆ ಆತ್ಮಚರಿತ್ರೆಯಂತಿರುವ ‘ರನ್ನಿಂಗ್ ನವೆಲಿಸ್ಟ್’

Date: 09-02-2024

Location: ಬೆಂಗಳೂರು


"ಒಂದು ಕೆಲಸವನ್ನು ಆರಂಭಿಸುವುದು, ಅದರಲ್ಲು ಬೆಳಗೆದ್ದು ಓಟವನ್ನು ಪ್ರಾರಂಭಿಸುವುದು ನಿಜಕ್ಕೂ ಬೇಸರವೆನ್ನಿಸುವ ಕೆಲಸ. ವಯಸ್ಸಿನ ಒಂದು ಹಂತವನ್ನು ದಾಟಿದ ನಂತರ ಸಹಜವಾಗಿಯೇ ದೇಹ ಇಲ್ಲಸಲ್ಲದ ನೆಪಗಳನ್ನು ಹೇಳಲು ಪ್ರಾರಂಭಿಸುತ್ತದೆ. ಅಂತಹ ನೆಪಗಳನ್ನೆಲ್ಲ ದಾಟಿಕೊಂಡು ಓಡುವುದು ಸುಲಭ ಸಾಧ್ಯದ ಮಾತಲ್ಲ," ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ‘ಸಿರಿ ಕಡಲು’ ಅಂಕಣದಲ್ಲಿ ರವಿಕುಮಾರ ಹಂಪಿ ಅವರ ಅನುವಾದಿತ ‘ರನ್ನಿಂಗ್ ನವೆಲಿಸ್ಟ್’ ಕೃತಿ ಕುರಿತು ಬರೆದ ಓಟ ಮತ್ತು ಬರವಣಿಗೆ ಲೇಖನ.

ನಾನು ಬರೆಯಲು ಏನೂ ಇಲ್ಲದಿರುವಾಗಲೂ ಕೂಡ ನನ್ನ ಅಭ್ಯಾಸ ತಪ್ಪಬಾರದೆಂದು ಬರೆಯುವ ಟೇಬಲ್ಲಿಗೆ ಗಂಟೆಗಟ್ಟಲೆ ಕಚ್ಚಿ ಕೂತು ನನ್ನ ಕ್ಷಮತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದೆ ಎಂದು ಜಪಾನಿನ ಖ್ಯಾತ ಕಾದಂಬರಿಕಾರ ರೇಮಂಡ್ ಶಾಂಡ್ಲರ್ ಹೇಳಿದ್ದನ್ನು ಹರಾಕು ಮರಾಕಮಿ ಉದಾಹರಿಸುತ್ತಾರೆ. ಇವರ What I talk about, when I talk about ಎಂಬ ವಿಶಿಷ್ಟವಾದ ಪುಸ್ತಕವನ್ನು ರವಿಕುಮಾರ ಹಂಪಿ ರನ್ನಿಂಗ್ ನವೆಲಿಸ್ಟ್ ಎಂದು ಅನುವಾದಿಸಿ ಕನ್ನಡದ ಓದುಗರಿಗೆ ನೀಡಿದ್ದಾರೆ. ಕನ್ನಡದ ಓದುಗರ ಪಾಲಿಗೆ ಅರೆ ಆತ್ಮಚರಿತ್ರೆಯಂತಿರುವ ಈ ಅನುಭವ ಕಥನ ಹೊಸರೀತಿಯ ಓದನ್ನು ನೀಡುತ್ತದೆ.

ಅದೆಷ್ಟು ಸಲ ನಾವು ನಮ್ಮಿಷ್ಟದ ಕೆಲಸವನ್ನು ಇಲ್ಲಸಲ್ಲದ ನೆಪ ಹೇಳಿ ಮುಂದೂಡುತ್ತಲೇ ಇರುತ್ತೇವೆ ಎಂಬುದನ್ನು ಗಮನಿಸಿದರೆ ಇದೊಂದು ಮೋಟಿವೇಶನಲ್ ಪುಸ್ತಕ ಎನ್ನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಜೀವನೋಪಾಯಕ್ಕಾಗಿ ಬಾರ್ ನಡೆಸುವ ಒಬ್ಬ ವ್ಯಕ್ತಿ ತನ್ನ ಏರು ಯೌವನದ ದಿನಗಳು ದಾಟಿದ ನಂತರ ತಾನು ಓಟಗಾರನಾಗಬೇಕು ಎಂದು ಜೀವನೋಪಾಯಕ್ಕೆ ಇದ್ದ ಏಕೈಕ ಆಧಾರವಾದ ಬಾರ್ ಅನ್ನು ಮುಚ್ಚಿ ತನ್ನ ಗಮನವನ್ನು ಓಡುವುದರ ಕಡೆಗೆ ಕೇಂದ್ರಿಕರಿಸಿಕೊಳ್ಳುವ ಪ್ರಕ್ರಿಯೆ ಒಂದು ಅದ್ಭುತವಾದ ಹೋರಾಟವನ್ನು ಪ್ರತಿನಿಧಿಸುತ್ತದೆ.

ನಾನು ಓಟ ಪ್ರಾರಂಭಿಸಿದಾಗ ನನಗೆ ಮೂವತ್ಮೂರು ವರ್ಷಗಳು. ತರುಣನಲ್ಲದಿದ್ದರೂ ಮುದುಕನಲ್ಲದ ವಯಸ್ಸು ಅದೇ ವಯಸ್ಸಿನಲ್ಲಿ ಅಲ್ಲವೇ ಜೀಸಸ್ ಶಿಲುಬೆಗೇರಿದ್ದು? ಅದೇ ವರ್ಷದಲ್ಲಿ ಅಲ್ಲವೇ ಫಿಟ್ಕೆರಾಲ್ಡ್ ಇಳಿತ ಶುರುವಾಗಿದ್ದು? ಆ ವಯಸ್ಸು ಬದುಕಿನ ತಿರುವಿನಂಥಹದ್ದು. ಅದೇ ವಯಸ್ಸಿನಲ್ಲಿ ನಾನು ಓಟಗಾರನಾದ್ದು ಮತ್ತು ತಡವಾಗಿಯಾದರೂ ಕಾದಂಬರಿಕಾರನಾಗಿ ಬದುಕು ಪ್ರಾರಂಭಿಸಿದ್ದು ಎನ್ನುವ ಹರುಕಿ ಮುರಾಕಮಿಯವರು ತಮ್ಮ ಓಟಗಾರ ಮತ್ತು ಕಾದಂಬರಿಕಾರನ ಬದುಕನ್ನು ಬಿಚ್ಚಿಡುತ್ತಾ ಹೋಗುತ್ತಾರೆ.

ಒಂದು ಕೆಲಸವನ್ನು ಆರಂಭಿಸುವುದು, ಅದರಲ್ಲು ಬೆಳಗೆದ್ದು ಓಟವನ್ನು ಪ್ರಾರಂಭಿಸುವುದು ನಿಜಕ್ಕೂ ಬೇಸರವೆನ್ನಿಸುವ ಕೆಲಸ. ವಯಸ್ಸಿನ ಒಂದು ಹಂತವನ್ನು ದಾಟಿದ ನಂತರ ಸಹಜವಾಗಿಯೇ ದೇಹ ಇಲ್ಲಸಲ್ಲದ ನೆಪಗಳನ್ನು ಹೇಳಲು ಪ್ರಾರಂಭಿಸುತ್ತದೆ. ಅಂತಹ ನೆಪಗಳನ್ನೆಲ್ಲ ದಾಟಿಕೊಂಡು ಓಡುವುದು ಸುಲಭ ಸಾಧ್ಯದ ಮಾತಲ್ಲ. ಮೊದಮೊದಲಿಗೆ ತಾನೂ ಸಾಕಷ್ಟು ಆಲಸ್ಯ ಅನುಭವಿಸಿದೆ ಎನ್ನುವ ಕಾದಂಬರಿಕಾರರು ತಮ್ಮ ಮನಸ್ಸನ್ನು ಓಟಕ್ಕಾಗಿ ಸಿದ್ಧಗೊಳಿಸಲು ಬಹಳಷ್ಟು ಶ್ರಮವಹಿಸಿದ್ದನ್ನು ಇಲ್ಲಿ ಹೇಳುತ್ತ ಹೋಗುತ್ತಾರೆ. ಅದಕ್ಕಾಗಿ ಅವರು ಓಲಂಪಿಕ್ ಓಟಗಾರನಾಗಿ ನಿವೃತ್ತರಾದ ತೋಶಿಹಿಕೊ ಸೆಕೊರವರನ್ನು ಸಂದರ್ಶಿಸಿ ಅನೇಕ ಪ್ರಶ್ನೆಗಳನ್ನು ಕೇಳಿ ತಮ್ಮಿಂದಲೂ ಓಟ ಸಾಧ್ಯ ಎಂಬುದನ್ನು ದೃಢಪಡಿಸಿಕೊಳ್ಳುತ್ತಾರೆ. ಓಟ ಪ್ರಾರಂಭಿಸಿದ ದಿನಗಳಲ್ಲಿ ಯಾರಾದರೂ ತಮ್ಮನ್ನು ಗಮನಿಸಬಹುದು ಎಂದು ಮುಜುಗರ ಪಟ್ಟುಕೊಳ್ಳುತ್ತಿದ್ದುದನ್ನು ನೆನಪಿಸಿಕೊಳ್ಳುತ್ತ, ಸುದೀರ್ಘ ಓಟದಲ್ಲಿ ಎಷ್ಟು ವೇಗವಾಗಿ ಓಡುತ್ತೇವೆ ಎಂಬುದಕ್ಕಿಂತ ಎಷ್ಟು ಸಮಯ ವಿಶ್ರಾಂತಿ ತೆಗೆದುಕೊಳ್ಳದೇ ಓಡುತ್ತೇವೆ ಎಂಬುದು ಮುಖ್ಯ ಎಂಬುದನ್ನು ಉಲ್ಲೇಖಿಸುತ್ತಾರೆ.

ಯಾವ ಕೆಲಸವಾದರೂ ಸರಿ ಅಲ್ಲಿ ನಮ್ಮ ಕ್ಷಮತೆಯ ಅರಿವಾಗಬೇಕಿದ್ದಲ್ಲಿ ನಾವು ಆ ಕಾರ್ಯದಲ್ಲಿ ನಮ್ಮ ಮನಸ್ಸಿನಿಂದ ತೊಡಗಿಸಿಕೊಳ್ಳಬೇಕಾಗುತ್ತದೆ. ಎನ್ನುವ ಕಾದಂಬರಿ ಕಾರರು ಪ್ರತಿ ದಿನದ, ಪ್ರತಿ ವಾರದ ಹಾಗೂ ಆಯಾ ತಿಂಗಳಿನ ಓಟವನ್ನು ದಾಖಲಿಸುತ್ತ ಹೋಗುತ್ತಾರೆ. ಒಂದು ಕೆಲಸದಲ್ಲಿ ದಾಖಲಿಕರಣ ಎಷ್ಟು ಮುಖ್ಯವೆಂಬುದು ಕಾದಂಬರಿಕಾರರಾದ ಅವರಿಗೆ ಸಂಪೂರ್ಣ ಅರಿವಿದೆ.ಜೂನ್ ನಲ್ಲಿವಾರಕ್ಕೆ 36 ಮೈಲುಗಳಂತೆ 156 ಮೈಲುಗಳನ್ನು, ಜುಲೈನಲ್ಲಿ ವಾರಕ್ಕೆ43 ಮೈಲುಗಳಂತೆ 183 ಮೈಲುಗಳನ್ನು ಅಗಷ್ಟ್ ನಲ್ಲಿವಾರಕ್ಕೆ 50 ಮೈಲುಗಳಂತೆ 217 ಮೈಲುಗಳನ್ನು ದಾಖಲಿಸಿ ತಮ್ಮ ಓಟ ಹೇಗೆ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತ ಸಾಗಿದೆ ಎಂಬುದನ್ನು ವಿವರಿಸಿದ್ದಾರೆ. ನ್ಯೂಯಾರ್ಕ್ ಮ್ಯಾರಾಥಾನ್ ಗಾಗಿ ಕಠಿಣ ತರಬೇತಿ ಪಡೆಯುತ್ತಿದ್ದ ಕಾದಂಬರಿ ಕಾರರು ಅದು ಹೇಗೆ ನೀರಸವಾಗಿ, ಯಾವುದೇ ಸಾಧನೆಯಿಲ್ಲದೆ, ಗುರಿಯನ್ನೂ ತಲುಪಲಾಗದೆ ಮುಕ್ತಾಯಗೊಂಡಿತು ಎಂಬುದನ್ನು ಭಾವೋದ್ವೇಗ ಇಲ್ಲದಂತೆ ವಿವರಿಸಲು ಸಾಧ್ಯವಾಗಿದ್ದು ಓಟದಿಂದಲೇ ಎಂಬತಮ್ಮ ನಂಬಿಕೆಯನ್ನು ಹೇಳುತ್ತಾರೆ.

ನಿಯಮಿತವಾದ ಹಾಗೂ ನಿರ್ದಿಷ್ಟವಾದ ಓಟದಿಂದಾಗಿ ತಮ್ಮ ದುಶ್ಚಟಗಳು ಕಡಿಮೆಯಾಗಿ ಪರಿಪೂರ್ಣ ಮಾನವನಾಗಲು ಸಾಧ್ಯವಾಗಿದ್ದನ್ನು ಹರುಕಿ ಮುರಾಕಮಿ ಸ್ಮರಿಸುತ್ತಾರೆ. ಓಟವು ತಮ್ಮ ದೈನಂದಿನ ಕುಡಿತವನ್ನು ಕಡಿಮೆ ಮಾಡಿ ನಂತರ ಆ ದುಶ್ಚಟವನ್ನು ಬಿಡುವಂತೆ ಮಾಡಿದ್ದಕ್ಕಾಗಿ ಓಟಕ್ಕೆ ಕೃತಜ್ಞರು ಅವರು. ಅದೇ ರೀತಿ ಸಾಮಾಜಿಕವಾಗಿ ಒಂದು ಅಸ್ತಿತ್ವವನ್ನು ರೂಪಿಸಿಕೊಳ್ಳಲು ಬರಹ ಕೂಡ ಬೆಂಗಾಲವಾಗಿ ನಿತಿದ್ದಕ್ಕೆ ಅವರಿಗೆ ಹೆಮ್ಮೆಯಿದೆ. ಓಟದ ತಯಾರಿಯನ್ನು ಹೇಗೆ ಶೃದ್ಧೆಯಿಂದ ಮಾಡುತ್ತಿದ್ದರೋ ಹಾಗೆ ಕಾದಂಬರಿಯನ್ನು ಬರೆಯಲೂ ಮತ್ತು ಯಾವುದಾರೂ ಸಾರ್ವಜನಿಕ ಸ್ಥಳಗಳಿಗೆ ಉಪನ್ಯಾಸ ಮಾಡಲು ಹೋಗಲು ಸಹ ಅಷ್ಟೇ ತಯಾರಿ ಮಾಡಿಕೊಳ್ಳುತ್ತಿದ್ದುದನ್ನು ವಿವರಿಸಿದ್ದಾರೆ. ಪ್ರತಿ ವರ್ಷ ಎರಡು ಓಟಗಳನ್ನು ಕಡ್ಡಾಯವಾಗಿ ಓಡಬೇಕೆಂದು ನಿರ್ಧರಿಸಿಕೊಂಡು ಅದಕ್ಕಾಗಿ ಕಠಿಣ ಶ್ರಮ ವಹಿಸಿ ತಿಂಗಳುಗಟ್ಟಲೆ ಸತತ ಅಭ್ಯಾಸ ಮಾಡುತ್ತ, ಅದಕ್ಕಾಗಿ ಬೇರೆ ದೇಶಗಳಲ್ಲಿ ವಾಸಿಸುತ್ತ, ಅಲ್ಲಿಯ ಹವಾಮಾನದಲ್ಲಿ ತರಬೇತಿ ಪಡೆಯುವುದು ನಿಜಕ್ಕೂ ಅಂದುಕೊಂಡಷ್ಟು ಸರಾಗವೇನಲ್ಲ. ಆದರೆ ನ್ಯೂಯಾರ್ಕ್ ಮಾರಾಥಾನ್ ಗಾಗಿ ವರ್ಷಗಟ್ಟಲೆ ಶ್ರಮಿಸಿದ್ದನ್ನು ಹಾಗೂ ಪ್ರತಿ ಹಂತದ ಶ್ರಮವನ್ನು ದಾಖಲಿಸಿದ್ದಾರೆ. ನಂತರ ನ್ಯೂಯಾರ್ಕ್ ಮ್ಯಾರಾಥಾನ್ ನಲ್ಲಿ ಅವರ ಕಾಲು ಸೆಳೆತಕ್ಕೊಳಗಾಗಿ ಓಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದಾಗಲೂ ಅದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ, ವ್ಯವಹಾರಿಕವಾಗಿ ತೆಗೆದುಕೊಂಡು ಮುಂದಿನ ಓಟಕ್ಕಾಗಿ ಸಜ್ಜುಗೊಳ್ಳಲು ಪುಟಿದೇಳುವುದು ಒಬ್ಬ ಆಟಗಾರನಿಗಿರಬೇಕಾದ ನೈಜ ತಾಕತ್ತು ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಅದೇ ಸಮಯದಲ್ಲಿ ಅವರು ಜಪಾನಿನ ಪ್ರಸಿದ್ಧ ಹಾಗೂ ಜನಪ್ರೀಯ ಯಶಸ್ವಿ ಕಾದಂಬರಿಕಾರರೂ ಆಗಿದ್ದರು ಎಂಬುದನ್ನು ಮರೆಯುವಂತಿಲ್ಲ. ಆ ಕಾರಣಕ್ಕಾಗಿ ಓಟದಷ್ಟೇ ಓದಿಗೆ ಮತ್ತು ಬರವಣಿಗೆಗೂ ಅವರು ಹೆಚ್ಚಿನ ಸಮಯ ಮೀಸಲಿಡಬೇಕಾಗಿದ್ದು ಅದನ್ನೂ ತಮ್ಮ ದಿನಚರಿಯ ಭಾಗವಾಗಿ ರೂಢಿಸಿಕೊಂಡರು. ಓಟದಲ್ಲಿ ಹೇಗೆ ವಿರಾಮವಿಲ್ಲದೆ ದೀರ್ಘಕಾಲ ನೋಡುವುದು ಮುಖ್ಯ ಎಂದುಕೊಳ್ಳುತ್ತಿದ್ದರೋ ಹಾಗೆ ಕಾದಂಬರಿಯಂತದ ಸುದೀರ್ಘ ಬರವಣಿಗೆಯಲ್ಲಿ ಕೂಡ ನಾಲ್ಕಾರು ತಾಸು ಅವಡುಗಚ್ಚಿ ಕುಳಿತು ಬರೆಯಬೇಕಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು.

ಒಬ್ಬ ವ್ಯಕ್ತಿ ಏಕಕಾಲದಲ್ಲಿ ಓಟಗಾರನಾಗಿರುತ್ತ ಕಾದಂಬರಿಕಾರನೂ ಆಗಿರುವುದು ಅಂದುಕೊಂಡಷ್ಟು ಸುಲಭವೇನಲ್ಲ. ಮೇಲ್ನೋಟಕ್ಕೆ ಎರಡೂ ವಿಭಿನ್ನ ಕ್ಷೇತ್ರಗಳೆಂದು ಅನ್ನಿಸಿದರೂ ಅವು ಒಂದಕ್ಕೊಂದು ಪೂರಕವಾಗಿ ತಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಹೇಗೆ ಸಹಾಯಕವಾಯಿತು ಎಂಬುದನ್ನು ಹೇಳುವ ಮಾತುಗಳಲ್ಲಿ ಕಾಣುವ ಆತ್ಮವಿಶ್ವಾಸವನ್ನು ಇಂದಿನ ಲೇಖಕರು ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ.

ಒಂದಿಷ್ಟು ಅನುವಾದ ನಿಷ್ಠ ಭಾಷೆ ಪುಸ್ತಕದ ಸರಾಗ ಓದಿಗೆ ತುಸು ತಡೆಯೊಡ್ಡುತ್ತದೆ. ಅನುವಾದದ ಶಿಷ್ಟತೆಯನ್ನು ತುಸು ಬದಿಗಿರಿಸಿ ಅದನ್ನು ಕನ್ನಡಿಕರಣಕೊಳಿಸುವಾಗ ಸ್ಥಳಿಯ ಸೊಗಡನ್ನು ರೂಢಿಸಿಕೊಂಡಿದ್ದರೆ ಪುಸ್ತಕ ಮತ್ತಿಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂದೆನಿಸಿದರೂ ಅಂಕಿ ಅಂಶಗಳಿಂದ ಕೂಡಿದ, ಭಾಗಶಃ ಆತ್ಮಚರಿತ್ರೆಯಂತೆ ಕಾಣುವ ಹಾಗೂ ಡಾಕ್ಯುಮೆಂಟರಿಯಂತೆಯೂ ಓದಬಹುದಾದ ಅಥವಾ ಮೋಟಿವೇಶನಲ್ ಪುಸ್ತಕವನ್ನಾಗಿಯಾದರೂ ಪರಿಗಣಿಸಬಹುದಾದ ಈ ಪುಸ್ತಕ ಕನ್ನಡದ ಗಂಭೀರ ಓದುಗರಿಗೆ ಹಾಗೂಪುಸ್ತಕ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡುವುದಿಲ್ಲ.

- ಶ್ರೀದೇವಿ ಕೆರೆಮನೆ

ಈ ಅಂಕಣದ ಹಿಂದಿನ ಬರಹಗಳು:
ಉದಯಿಸುತ್ತಿರುವ ಸೂರ್ಯನೊಂದಿಗೆ ಹೆಜ್ಜೆಯಿಡುವ ತವಕದಲ್ಲಿ
ನವಿರು ಹಾಸ್ಯದೊಳಗೆ ಚುಚ್ಚುವ ಮೊನಚಿದೆ
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ನೆನಪಿನ ಕೋಶದೊಳಗೆ ಸಿಹಿ ತುಂಬುವ ಕೋಲ್ಜೇನು
ಆಂಗ್ಲ ಸಾಹಿತ್ಯದ ಓದಿಗೆ ಮೊದಲ ಮೆಟ್ಟಿಲಾಗಬಲ್ಲ ಅನುವಾದಿತ ಕತೆಗಳು
ಮಗುವಾಗಿಸುವ ಸುಂದರ ಹೂ ಮಾಲೆ
ಬಸವಳಿದ ಬಾಳಿಗೆ ಬೆಳಕು ನೀಡಬೇಕಿದೆ ಕಂದೀಲು
ಕಿರಿದರಲ್ಲೇ ಮೆರೆವ ಹಿರಿತನದ ಚುಟುಕುಗಳು
ಹಾಸ್ಯದ ಲೇಪನವಿಟ್ಟು ಮಕ್ಕಳ ಮನಸ್ಥಿತಿಯನ್ನು ಬಿಂಬಿಸುವ ಕಥೆಗಳು
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ
ತಣ್ಣಗೆ ಕಥೆಯಾಗಿ ಹರಿಯುವ ಗಂಗಾವಳಿ
ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

 

MORE NEWS

ವಿಶ್ವ ತಾಯ್ಮಾತಿನ ದಿವಸ

21-02-2024 ಬೆಂಗಳೂರು

"ತಾಯ್ಮಾತು ಎಂದರೇನು ಎನ್ನುವುದಕ್ಕೆ ವಿಶ್ವಸಂಸ್ತೆ ಹಲವು ಅಂಶಗಳನ್ನು ಹೇಳುತ್ತದೆ. ವ್ಯಕ್ತಿಯೊಬ್ಬರು ಮಗುವಾಗಿದ್ದಾ...

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು

21-02-2024 ಬೆಂಗಳೂರು

"ಮುಟ್ಟು ಎಂಬ ಪದ ಹೀಗೆ ಜೀವವಿರೋಧಿ ನೆಲೆಯ ಭಿನ್ನ ರೂಪಕಗಳಲ್ಲಿ ಬಳಕೆ ಆಗುತ್ತದೆ. ತನ್ಮೂಲಕ ಮನುಷ್ಯ ಸಮಾಜದ ಮನೋದೈಹ...

ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ

18-02-2024 ಬೆಂಗಳೂರು

"ಘಾಂದ್ರುಕ್ ಕಾದಂಬರಿ ಇದಕ್ಕಿಂತಲೂ ಭಿನ್ನವಾಗಿ ಬದುಕಿನ ಸತ್ಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತದೆ. ಪಲ್ಲಟಗ...