ಮಗುವಾಗಿಸುವ ಸುಂದರ ಹೂ ಮಾಲೆ

Date: 29-12-2022

Location: ಬೆಂಗಳೂರು


“ಇಡೀ ಪುಸ್ತಕದ ಕಥೆಗಳು ಆಸಕ್ತಿದಾಯಕವಾಗಿ ಓದಿಸಿಕೊಳ್ಳುತ್ತವೆ. ದೆವ್ವದ ಕಥೆ ಬಂದರೂ ಆ ದೆವ್ವವನ್ನು ಓಡಿಸುವ ಮಂತ್ರ ಎಷ್ಟೊಂದು ಸುಲಭದ್ದು. ಬರೀ ಘಾಚರ್ ಘೋಚರ್ ಎಂದರಾಯಿತು. ಆಕಾಶ ಸೇರಬೇಕೆಂದರೆ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಪಟಿಸಿದರಾಯಿತು. ಹೀಗಾಗಿ ಇಲ್ಲಿ ಯಾವುದೂ ಅತಿರೇಕ ಎನ್ನಿಸಿಕೊಳ್ಳುವುದಿಲ್ಲ. ಎಲ್ಲವೂ ಸೀದಾಸಾದಾ ನಮ್ಮ ಮನೆಯಲ್ಲಿಯೇ ನಡೆಯುತ್ತಿರುವಷ್ಟು ಆತ್ಮೀಯ” ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಲೇಖಕ ರಘುನಾಥ ಚ. ಹ ಅವರ ‘ಪುಟ್ಟಲಕ್ಷ್ಮಿ ಕಥೆಗಳು’ ಕೃತಿಯ ಕುರಿತು ಬರೆದಿದ್ದಾರೆ.

ಪುಟ್ಟಲಕ್ಷ್ಮಿ ಕಥೆಗಳು
ಲೇಖಕ- ರಘುನಾಥ ಚ ಹ
ಬೆಲೆ-80
ಪ್ರಕಾಶನ-ಅಂಕಿತ ಪುಸ್ತಕ

ಚಿಕ್ಕ ಮಕ್ಕಳ ಲೋಕವೇ ಬೇರೆ ರೀತಿಯದ್ದು. ಕಂಡಿದ್ದೆಲ್ಲವೂ ಅಚ್ಚರಿಯ ವಿಷಯವೇ. ನಾನು ಮೂರನೇ ತರಗತಿಯಲ್ಲಿದ್ದಾಗ ನನ್ನ ಪಕ್ಕದ ಮನೆಯಲ್ಲಿ ದೀಪಾ ಕೊಡ್ಲೆಕೆರೆ ಎನ್ನುವ ನಾಲ್ಕನೆ ತರಗತಿಯ ಗೆಳತಿಯೊಬ್ಬಳಿದ್ದಳು. ಅವಳ ತಂದೆ ಅಲ್ಲೇ ಸಮೀಪದ ಮತ್ತೊಂದು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಅವರು ನಮ್ಮ ಹೆಸರಾಂತ ಕಥೆಗಾರರಾಗಿರುವ ಚಿಂತಾಮಣಿ ಕೊಡ್ಲೆಕೆರೆ ಹಾಗೂ ಮಹಾಬಲಮೂರ್ತಿ ಕೊಡ್ಲೆಕೆರೆಯವರ ಚಿಕ್ಕಪ್ಪ. ನಾನು ದೀಪಾ ಆಗಲೇ ಕವನ ಬರೆಯುತ್ತೇವೆಂದು ಏನೇನೋ ಬರೆಯುತ್ತಿದ್ದೆವು. ಆಗ ನಾವಿದ್ದ ಅಮ್ಮಿನಳ್ಳಿ ಎಂಬ ಪುಟ್ಟ ಊರಿನ ಹೊರಗಿರುವ, ಗಣಪತಿ ಮೂರ್ತಿಯನ್ನು ಮುಳುಗಿಸುವ ದೊಡ್ಡ ಹಳ್ಳದ ಸಂಕದ ಮೇಲೆ ದೆವ್ವಗಳು ಓಡಾಡುತ್ತವೆ ಎಂಬ ಪ್ರತೀತಿಯಿತ್ತು. ಅಥವಾ ನಮ್ಮ ಹುಡುಗಾಟವನ್ನು ಕಡಿಮೆ ಮಾಡಲು ನಾವು ವಾಸವಾಗಿದ್ದ ಮನೆಯ ಓನರ್ ತೇಜಕ್ಕ ನಮ್ಮನ್ನು ಹೆದರಿಸಲೆಂದು ಹೇಳಿದ್ದಳೋ ಗೊತ್ತಿಲ್ಲ. ಅಂತೂ ನಾವಿಬ್ಬರೂ ಅದನ್ನು ನಂಬಿಕೊಂಡು ಸಂಕದ ಮೇಲಿರಬಹುದಾದ ದೆವ್ವದ ಕುರಿತು ಒಂದು ಕವಿತೆ ಬರೆದ ನೆನಪು. ನನ್ನ ಅಪ್ಪ ‘ನನ್ನ ಮಗಳೂ ಕವಿತೆ ಬರಿತಿದ್ದಾಳೆ’ ಎಂದು ಹೆಮ್ಮೆ ಪಟ್ಟರೂ ನಂತರ ನಿಧಾನವಾಗಿ ದೆವ್ವವನ್ನು ನಂಬ್ತೀಯಾ ನೀನು ಎಂದು ಕೇಳಿದ್ದರು. ಅವರೇ ಕಲಿಸಿಕೊಟ್ಟ ಪಾಠ. ಇಲ್ಲ ಎಂದಿದ್ದೆ. ಹಾಗಿದ್ದರೆ ನಂಬದ ವಿಷಯಗಳ ಬಗ್ಗೆ ಬರೆದು ಮೂಢನಂಬಿಕೆ ಪ್ರದರ್ಶಿಸಬಾರದು’ ಎಂದಿದ್ದರು ಅಲ್ಲಿಗೆ ನನ್ನ ಮೊದಲ ಕವಿತೆ ಎಲ್ಲೋ ಕಳೆದು ಹೋಯ್ತು.

ಆದರೂ ಈ ದೆವ್ವದ ಕುರಿತಾದ ಕಥೆಗಳು ನಂಬದೇ ಹೋದರೂ ಯಾವತ್ತೂ ನನಗೆ ಅತ್ಯಾಸಕ್ತಿಯ ವಿಷಯವೇ. ಹೀಗಾಗಿ ಪುಟ್ಟಲಕ್ಷಿö್ಮಯ ಮೊದಲ ಕಥೆ ಓದುತ್ತಲೇ ಖುಷಿಯಾಗಿಬಿಟ್ಟಿತು. ದುಬಾಕು ದೆವ್ವ ಚಿಕ್ಕ ಮಕ್ಕಳ ತಿಂಡಿಯನ್ನೆಲ್ಲ ತಿಂದು ಟಿಫಿನ್ ಬಾಕ್ಸ್ಗೆ ಕಲ್ಲು ಮಣ್ಣು ತುಂಬಿಸಿ, ನಂತರ ಪುಟ್ಟಲಕ್ಷ್ಮಿಯ ಪೋಚರ್ ಘೋಚರ್‌ಗೆ ಹೆದರಿ ಜೆಸಿಬಿಯಾದ ದೆವ್ವದ ಕಥೆೆಷ್ಟು ಖುಷಿಕೊಟ್ಟಿತೆಂದರೆ ನನಗೆ ಮತ್ತೊಮ್ಮೆ ಬಾಲ್ಯಕ್ಕೆ ಜಿಗಿದ ಅನುಭವವಾಯಿತು. ಎರಡನೇ ಕಥೆ ಕಾಗೆ ಮರಿಯ ಹೊಟ್ಟೆ ನೋವು ಕೂಡ ಕಾಗೆಯ ಮರಿಯೊಂದು ಶಾಲೆಗೆ ಹೋಗುವ, ದಾರಿಯಲ್ಲಿ ಕೋಕಾ ಕುಡಿದು ಹೊಟ್ಟೆ ನೋವು ಬರಿಸಿಕೊಳ್ಳುವ ವಿಶಿಷ್ಟ ಕಥೆಯುಳ್ಳದ್ದು. ಬುಸ್ ಬುಸ್ ಹೆದ್ದಾರಿಯಂತೂ ಹಾವಿನ ರೂಪದ ಹೆದ್ದಾರಿಯ ಕಥೆ. ಪುಟ್ಟಲಕ್ಷ್ಮಿಯನ್ನು ತಿನ್ನಲು ಬಂದ ದೆವ್ವದ ಹೊಟ್ಟೆಯೊಳಗೆ ಸೋಪಿನ ಗುಳ್ಳೆಗಳು ರಕ್ತದ ಕುದಿತವನ್ನು ಕಡಿಮೆ ಮಾಡಿ ಅದನ್ನು ಹೆದ್ದಾರಿಯನ್ನಾಗಿಸಿದ ಕಥೆ ಇದು. ಗಿಬಾಕು ಮತ್ತು ಕು ಬೇಂ ಶಿ ಮಾ ಗೋ ಅಗಿ ಚಂ ಕಥೆಯಲ್ಲಿ ಜೆಸಿಬಿ ಆಗಿ ಬದಲಾಗಿದ್ದ ದುಬಾಕು ದೆವ್ವದ ಅಣ್ಣ ಗಿಬಾಕು ಮನೆಗಳನ್ನೆಲ್ಲ ನುಂಗುವುದರಿಂದ ಈಗಿನ ಅಪಾರ್ಟಮೆಂಟ್‌ಗಳಾಗಿ ಬದಲಾಗುವ ಚಿತ್ರವಿದೆ. ಗಾಂಧಿ ತಾತನ ಕಾಡಿನ ಮಕ್ಕಳು ಕಥೆ ಎಷ್ಟೊಂದು ಕಾಲ್ಪನಿಕ, ಆದರೆ ಎಷ್ಟೊಂದು ವಾಸ್ತವ. ಇಲ್ಲಿ ಬರುವ ಹುಲಿ, ಆನೆ, ಜಿರಾಳೆಗಳು ಅದೆಷ್ಟು ಮನುಷ್ಯ ಲೋಕಕ್ಕೆ ಹೊಂದಿಕೊಡಂತಿದ್ದರೂ ಅವುಗಳು ಕಾಡಿನಲ್ಲಿ ಸ್ವತಂತ್ರವಾಗಿರುವುದೇ ಸಮಂಜಸವಾದುದು. ಈ ಕಥೆಯ ಪಾತ್ರವಾಗಿರುವ ಗಾಂಧಿತಾತ ಕೂಡ ಎಷ್ಟೊಂದು ಸಹಜ ಎನ್ನಿಸುವಂತಿದೆ. ತೀರಾ ಸಹಜವಾಗಿ ಫೋಟೊದಿಂದ ಎದ್ದು ಪ್ರಾಣಿಗಳಿರುವ ಮೂರು ಪೆಟ್ಟಿಗೆಯನ್ನು ಕೊಡುವುದು ಎಲ್ಲೂ ಅತಿರೇಖ ಅನ್ನುಸುವುದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಭಯವಾದರೆ, ಕೆಟ್ಟ ಕನಸುಗಳೇನಾದರೂ ಬಿದ್ದರೆ ಗಾಂಧಿತಾತನನ್ನು ನೆನಪಿಸಿಕೊಂಡು ನಿದ್ದೆ ಮಾಡು ಎನ್ನುವ ಪುಟ್ಟಲಕ್ಷ್ಮಿಯ ತಂದೆತಾಯಿಯರ ಮಾತು ನಿಜಕ್ಕೂ ದೊಡ್ಡ ಸಂದೇಶವನ್ನು ಹೇಳುತ್ತದೆಯೆಂದೇ ನನಗನ್ನಿಸುತ್ತದೆ. ಕಾಡುಪ್ರಾಣಿಗಳನ್ನು ಪಂಜರದಲ್ಲಿಟ್ಟು ಪ್ರದರ್ಶನದ ಗೊಂಬೆಗಳಂತೆ ಆಡಿಸುವ ನಾವು ಪುಟ್ಟಲಕ್ಷಿö್ಮಯ ಕನಸಿನಂತೆ ನಮ್ಮನ್ನೆಲ್ಲ ಪಂಜರದಲ್ಲಿಟ್ಟುಬಿಟ್ಟರೆ ಏನಾಗಬಹುದು ಎಂದು ಯೋಚಿಸಿದರೆ ಭಯವಾಗುತ್ತದೆ. ಹೀಗಾಗಿ ಪುಟ್ಟಲಕ್ಷ್ಮಿ ಎಲ್ಲ ಪ್ರಾಣಿಗಳನ್ನು ಕಾಡಿಗೆ ಬಿಟ್ಟುಬಿಡುವ ನಿರ್ಧಾರ ಮಾಡುತ್ತಾಳೆ. ಕಥೆಯ ದೃಷ್ಟಿಯಿಂದ ಹಾಗೂ ಅದರ ಒಳತಿರುಳಿನ ದೃಷ್ಟಿಯಿಂದ ಈ ಕಥೆ ತುಂಬಾ ಮಹತ್ವದ್ದೆನಿಸುತ್ತದೆ. ಕರೀಮಿಯ ಚುಕ್ಕಿಗಳ ಚೆಂಡಾಟ ಕಥೆಯಲ್ಲಿ ತನ್ನನ್ನು ಕರೀಮಿ ಎಂದ ನಕ್ಷತ್ರವನ್ನು ಹೊಡೆಯಲೆಂದು ಚೆಂಡು, ಕಲ್ಲುಗಳನ್ನೆಲ್ಲ ಎಸೆದು ನಂತರ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಹೇಳಿ ಚುಕ್ಕಿಗಳನ್ನೆಲ್ಲ ಚುಚ್ಚಿ ಗಾಯ ಮಾಡಿದ ಪುಟ್ಟಯ ಕತೆ ಖಂಡಿತವಾಗಿಯೂ ನಿಮಗೆ ನಿಮ್ಮ ಬಾಲ್ಯವನ್ನು ನೆನಪಿಸದಿದ್ದರೆ ಹೇಳಿ. ಅಪ್ಪನ ಹಾಗೆ ಕಪ್ಪು ಬಣ್ಣ ಹೊತ್ತುಕೊಂಡ ನನಗೆ ಅಮ್ಮನ ಹಾಗೆ ಬೆಳ್ಳಗಿರುವ ಅಣ್ಣನನ್ನು ಕಂಡರೆ ಅಸೂಯೆ. ಕಪ್ಪು ಬಣ್ಣವೇ ಚಂದ ಎಂದು ಪದೇ ಪದೇ ವಾದಿಸುತ್ತ, ದೇವರ ಶಿಲೆ ಕೂಡ ಕಪ್ಪು ಗೊತ್ತಾ? ಎಂದು ನನ್ನ ಮೇಲೆ ನಾನೇ ದೈವತ್ವವನ್ನು ಆರೋಪಿಸಿಕೊಳ್ಳುತ್ತಿದ್ದೆ. ಬಿಳಿಬಣ್ಣ ಸ್ವಲ್ಪ ಕೂಡ ಚಮದ ಅಲ್ಲ ಅಂತಿದ್ದೆ. ನಿನ್ನ ಮುಖದ ಮೇಲೆ ಒಂದು ಕಪ್ಪು ಮಚ್ಚೆ ಇದ್ದರೆ ಎಷ್ಟು ಚಂದ ಕಾಣ್ತದೆ, ಅದೇ ನನ್ನ ಮುಖದ ಮೇಲೆ ನಿನ್ನ ಬಿಳಿಬಣ್ಣದ ಮಚ್ಚೆ ಇಟ್ಟರೆ ಅಸಹ್ಯ ಎಂದಾಗಲೆಲ್ಲ ಅಣ್ಣ ನನ್ನ ಮುಗ್ಧತೆಗೆ ನಗುತ್ತಿದ್ದ. ಇಲ್ಲಿ ಪುಟ್ಟಲಕ್ಷ್ಮಿ ಕೂಡ ಹೊಟ್ಟೆಕಿಚ್ಚಿನಿಂದ ಸುಟ್ಟುಕೊಂಡೇ ನೀನು ಹೀಗೆ ಬಿಳುಚಿರೋದು ಎನ್ನುತ್ತಾಳೆ. ಬಣ್ಣಗಳ ತಾರತಮ್ಯವನ್ನು ವಿರೋಧಿಸುವ ಕಥೆ ಖುಷಿ ನೀಡುತ್ತದೆ. ಮತ್ತೂ ವಿಶಿಷ್ಟವೆಂದರೆ ಇಲ್ಲಿ ನಾವೆಲ್ಲ ಚಂದಮಾಮ ಎಂದು ಕರೆಯುವ ಚಂದ್ರ ಚಂದ್ರಮ್ಮನಾಗಿರುವುದು. ಗುಡಾಣ ಹೊಟ್ಟೆಯ ಸೋಮಾರಿ ಮೊಲ ತೀರಾ ಆಸಕ್ತಿದಾಯಕವಾಗಿದೆ. ಆಹಾರ ಹುಡುಕುವ ಸೋಮಾರಿತನಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಯಾಗಿ ನಿಂತ ಮೊಲಗಳ ಕಥೆ ಇದು. ಆದರೆ ಕೊನೆಯಲ್ಲಿ ಆ ಮೊಲ ಕಾಡನ್ನೆಲ್ಲ ಕಡಿದು ಬಿಟ್ಟಿದ್ದೀರಿ, ತಿನ್ನಲು ಏನೂ ಸಿಗದು ಎನ್ನುವ ಮಾತು ಮನಮುಟ್ಟುತ್ತದೆ. ಸ್ವಯಂವರ ಕಥೆಯಲ್ಲಿರಾಜನನ್ನು ಆರಿಸಲು ಪಟ್ಟದಾನೆಯ ಸೊಂಡಿಲಿಗೆ ಮಾಲೆ ನೀಡಿ ಅದು ಯಾರ ಕೊರಳಿಗೆ ಹಾಕುತ್ತದೋ ಅವನನ್ನು ರಾಜಎನ್ನಲಾಗುತ್ತಿತ್ತಂತೆ. ಅದು ರಾಜ್ಯಲಕ್ಷ್ಮಿಯ ಜೊತೆಗಾದ ಸ್ವಯಂವರ. ಆದರೆ ರಾಜನಾಗಬೇಕೆಂದು ಬಯಸಿದವರೆಲ್ಲ, ಮಾವುತನಿಗೆ, ಅವನ ಹೆಂಡತಿ ಮಗನಿಗೆ ಆಮಿಷ ಒಡ್ಡಿ ತನಗೇ ಮಾಲೆ ಹಾಕಬೇಕು ಎಂದು ಕೇಳಿಕೊಳ್ಳುತ್ತಿದ್ದರಂತೆ. ಕೊನೆಗೆ ಮಾವುತನನ್ನೂ ಅವನ ಪಟ್ಟದಾನೆಯನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದರಂತೆ. ಆದರೆ ಆನೆ ಮಾತ್ರ ಕಾರಣಿಕನೊಬ್ಬನಿಗೆ ಮಾಲೆ ಹಾಕಿತಂತೆ. ಈ ಕಥೆಯನ್ನು ಹೇಳಿದ ಪುಟ್ಟಲಕ್ಷ್ಮಿಯ ಅಜ್ಜಿ ಈಗ ಚುನಾವಣಾ ಕಣದಲ್ಲಿರುವವರೂ ಅಂತಹುದ್ದೇ ಅಭ್ಯರ್ಥಿಗಳು ಎನ್ನುತ್ತಾರಲ್ಲದೇ ಆನೆಯಂತೆ ಒಳ್ಳೆಯವನನ್ನು ಆರಿಸಿ ಎನ್ನುತ್ತಾರೆ. ಆದರೆ ಕೊನೆಯ ಮಾತು ನಮ್ಮೆಲ್ಲರನ್ನೂ ನಾಚಿಕೆ ಪಡುವಂತೆ ಮಾಡುತ್ತದೆ. ಹಿರಿಯರು ಮಾಡುವ ಗಲೀಜನ್ನೆಲ್ಲ ಚಿಕ್ಕ ಮಕ್ಕಳು ತೊಳೆಯುವಂತಹ ಕಾಲ ಬಂತಪ್ಪಾ ಎಂದು ಪುಟ್ಟ ಲಕ್ಷ್ಮಿ ಹೇಳುತ್ತಾಳೆ.

ನಾವು ಹಾಳು ಮಾಡಿ ಅದರ ಫಲವನ್ನು ಕಿರಿಯರು ಅನುಭವಿಸುವಂತೆ ಮಾಡುವ ನಮ್ಮ ದುರಾಸೆಗೆ, ಲಾಲಸೆಗೆ ಧಿಕ್ಕಾರವಿರಲಿ. ಲೈಟು ಕಂಬದ ಬೆಳಕಿನಲ್ಲಿ ಕಥೆಯಲ್ಲಿ ಶಾಲೆಗೆ ಹೋಗದ ರಾಜುವನ್ನು ಕನಸಿನಲ್ಲಿ ಬಂದ ಲೈಟ್‌ಕಂಬ ವಿಶ್ವೇಶ್ವರಯ್ಯನವರ ಕಥೆ ಹೇಳಿ ಶಾಲೆಗೆ ಹೋಗುವಂತೆ ಮನ ಒಲಿಸುತ್ತದೆ. ಮಾರನೆಯ ದಿನ ಶಾಲೆಗೆ ಬಂದವನನ್ನು ಪುಟ್ಟಲಕ್ಷ್ಮಿ ಅಕ್ಕರೆಯಿಂದ ಕರೆದುಕೊಂಡು ಹೋಗುತ್ತಾಳೆ. ಮಳೆರಾಯನ ವಿರುದ್ಧದ ದೂರಲ್ಲಿ ಕಾಲಕಾಲಕ್ಕೆ ಮಳೆ ಸುರಿಸದ ವರುಣನನ್ನು ದೇವಲೋಕದ ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡುವ, ಭೂಲೋಕದ ಜನ ಮರ ಕಡಿದು, ಪರಿಸರವನ್ನು ಮಾಲಿನ್ಯ ಮಾಡಿದ್ದರಿಂದ ಮಳೆಯಾಗುತ್ತಿಲ್ಲ ಎಂದು ತೀರ್ಮಾನಿಸುವ ಚಿತ್ರಣವಿದೆ. ಚುಕ್ಕಿ ಬೇಕಾ ಚುಕ್ಕಿಯಲ್ಲಿ ವೀಕೆಂಡ್‌ನಲ್ಲಿ ಭೂಲೋಕಕ್ಕೆ ಬರುವ ದೇವತೆಗಳ ಕಥೆ ನಗು ತರಿಸಿದರೂಮಳೆ ಸುರಿಸಲಾಗದಂತೆ ಎಡವಟ್ಟು ಮಾಡಿಕೊಂಡ ವರುಣ ದೇವಲೋಕದ ಬರಗಾಲಕ್ಕೂ ಕಾರಣನಾಗುತ್ತಾನೆ. ಇತ್ತ ಮಕ್ಕಳನ್ನು ಸಾಕಲಾಗದ ಚಂದ್ರಮ್ಮ ಚಿಕ್ಕಿಗಳನ್ನೆಲ್ಲ ಭೂಲೋಕಕ್ಕೆ ತಂದು ಮಾರಲು ಪ್ರಯತ್ನಿಸುತ್ತಾಳಾದರೂ ಗಾಜಿನ ಚೂರೆಂದು ಯಾರೂ ಕೊಳ್ಳುವುದಿಲ್ಲ. ನೂರು ರೂಪಾಯಿ ತಳ್ಳು ಎನ್ನುತ್ತ ಬಂದ ಪೋಲೀಸರು ಚಂದ್ರಮ್ಮನ ಕೈ ಎಳೆದಾಗಲೇ ಧೋ ಎಂದು ಮಳೆ ಸುರಿದು ಬುಟ್ಟಿ ಚಲ್ಲಾಪಿಲ್ಲಿಯಾಗುತ್ತದೆ, ಚುಕ್ಕಿಗಳು ಮಳೆಯಲ್ಲಿ ಕೊಚ್ಚಿ ಹೋಗುತ್ತದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಚಂದ್ರಮ್ಮನಿಗೆ ಫೋಲೀಸರು ಬೆತ್ತ ಬೀಸಿ ಎಚ್ಚರ ತಪ್ಪುವಂತಾಗುತ್ತದೆ. ಕಣ್ಣು ಬಿಟ್ಟರೆ ಗಾಳಿ ಮಳೆ ಬೆಳಕಿಂದ ಆಕಾಶ ಸೇರಿದ ಚಿಕ್ಕಿಗಳು ಹಾಗೂ ಚಂದ್ರಮ್ಮ ಖುಷಿಯಲ್ಲಿರುತ್ತವೆ. ಎಷ್ಟೊಂದು ತೀವ್ರತೆಯನ್ನು ಹೊಂದಿದೆ ಈ ಕಥೆ. ದೇವತೆಗಳೂ ಮನುಷ್ಯರಂತೆ ವೀಕೆಂಡ್ ಪಾರ್ಟಿ ಮಾಡುವುದು, ಕಲಬೆರಿಕೆ ಅಮೃತ, ಮೂಲಿಕೆಗಳು, ಮಕ್ಕಳನ್ನು ಮಾರಲೆತ್ನಿಸುವುದು ಮನಸ್ಸನ್ನು ತಟ್ಟುತ್ತದೆ. ಮಂಚದ ಕಾಲು ಕಥೆ ಹೇಳಿತು ಕಥೆಯಲ್ಲಿ ಅಪ್ಪ ಅಮ್ಮ ಕಥೆ ಹೇಳದಿದ್ದಾಗ ಮುನಿಸಿಕೊಂಡಿದ್ದ ಪುಟ್ಟ ಲಕ್ಷ್ಮಿಗೆ ಮಂಚದ ಕಾಲು ಕಾಡು ಕಡಿದು ನಾಡು ಮಾಡಿಕೊಂಡ ಮನುಷ್ಯನ ದುರ್ವತನೆಯನ್ನು ತಿಳಿಸುವ ಕಥೆ ಹೇಳುತ್ತದೆ. ಸೂರ್ಯನ ದೀಪದಲ್ಲಿ ವಿಶ್ರಾಂತಿ ಇಲ್ಲದೇ ದುಡಿದ ಸರ‍್ಯನಿಗೆ ದೇವಲೀಕದವರೆಲ್ಲ ಸನ್ಮಾನ ಮಾಡಿ ದೀಪದ ಕಾಣಿಕೆ ಕೊಟ್ಟರೆ ದಿನವಿಡೀ ಬೆಳಗುವ ಅದರಿಂದ ಕಿರಿಕಿರಿಯಾಗಿ ಸರ‍್ಯನ ಹೆಂಡತಿ ಅದನ್ನು ಒಡೆದು ಆ ಚೂರುಗಳೆಲ್ಲ ಚಂದ್ರ ಚುಕ್ಕಿಗಳಾದ ಕಥೆಯನ್ನು ರತ್ನಮ್ಮಜ್ಜಿ ಪುಟ್ಟಲಕ್ಷ್ಮಿಗೆ ಹೇಳುತ್ತಾಳೆ. ಚಾಕಲೇಟು ತಿಂದ ಟ್ಯೋಮಾಟೊ ಕಥೆಯಲ್ಲಿ ಗಿಡದಲ್ಲಿ ಬೆಳೆದ ಟೊಮಾಟೋ ಎಲ್ಲೆಲ್ಲಿಂದಲೋ ಬಂದು ತರಕಾರಿ ಅಂಗಡಿಯಿಂದ ಅಮ್ಮನ ಮುಖಾಂತರ ಪುಟ್ಟಲಕ್ಷಿö್ಮ ಮನೆಗೆ ಬರುತ್ತದೆ. ಗಾಯಗೊಂಡ ಟೋಮಾಟೋ ಸತ್ತೇ ಹೋಗುತ್ತೇನೆ, ಅದಕ್ಕೂ ಮೊದಲು ಒಂದು ಚಾಕಲೇಟು ತಿನ್ನಬೇಕು ಎಂದು ಪುಟ್ಟಲಕ್ಷ್ಮಿಯ ಬಳಿ ಕೇಳಿಕೊಳ್ಳುತ್ತದೆ.. ಚಕಲೇಟು ತಿಂದ ಟೋಮೇಟೊವನ್ನು ಪುಟ್ಟಲಕ್ಷ್ಮಿ ತೋಟದಲ್ಲಿ ಹುಗಿಯುತ್ತಾಳೆ. ಅದರಿಂದ ಎಷ್ಟೆಲ್ಲಾ ಟೋಮೇಟೋ ಗಿಡಗಳು... ಅವೆಲ್ಲ ಟೋಮೇಟೋ ಹಣ್ಣಿನಂತಹ ಚಾಕಲೇಟುಗಳನ್ನು ಬಿಡುತ್ತವೆ.

ಇಡೀ ಪುಸ್ತಕದ ಕಥೆಗಳು ಆಸಕ್ತಿದಾಯಕವಾಗಿ ಓದಿಸಿಕೊಳ್ಳುತ್ತವೆ. ದೆವ್ವದ ಕಥೆ ಬಂದರೂ ಆ ದೆವ್ವವನ್ನು ಓಡಿಸುವ ಮಂತ್ರ ಎಷ್ಟೊಂದು ಸುಲಭದ್ದು. ಬರೀ ಘಾಚರ್ ಘೋಚರ್ ಎಂದರಾಯಿತು. ಆಕಾಶ ಸೇರಬೇಕೆಂದರೆ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಪಟಿಸಿದರಾಯಿತು. ಹೀಗಾಗಿ ಇಲ್ಲಿ ಯಾವುದೂ ಅತಿರೇಕ ಎನ್ನಿಸಿಕೊಳ್ಳುವುದಿಲ್ಲ. ಎಲ್ಲವೂ ಸೀದಾಸಾದಾ ನಮ್ಮ ಮನೆಯಲ್ಲಿಯೇ ನಡೆಯುತ್ತಿರುವಷ್ಟು ಆತ್ಮೀಯ. ಪರಿಸರದ ಕುರಿತಾಗಿ, ಗಿಡಮರಗಳ ಕುರಿತಾಗಿ, ಶಾಲೆಗೆ ಹೋಗುವುದಕ್ಕಾಗಿ ಹೀಗೆ ಎಲ್ಲದಕ್ಕೂ ರಘುನಾಥ ಚ.ಹಾ ತುಂಬ ಚಂದದ ಅಷ್ಟೇ ಸರಳವಾದ, ಓದಲು ಒಂದಿಷ್ಟೂ ಬೇಸರವೆನಿಸದ ಕಥೆಗಳನ್ನು ಹೆಣೆದಿದ್ದಾರೆ. ಬುಟ್ಟಿಯಲ್ಲಿ ತುಂಬಿರುವ ಹತ್ತಾರು ಹೂಗಳನ್ನು ಹಣೆದು ಮಾಲೆ ಮಾಡಿದಂತೆ ಈ ಕಥೆಗಳಲ್ಲಿ ಪುಟ್ಟಲಕ್ಷ್ಮಿ ದಾರವಾಗಿ ಎಲ್ಲ ಕಥೆಗಳನ್ನು ಬೆಸೆದಿರುವ ರೀತಿಯೇ ಅಮೋಘವಾದ್ದು. ಇಲ್ಲಿನ ದೇವರುಗಳೂ ಕೂಡ ಅದ್ಭುತವನ್ನು ಸೃಷ್ಟಿಸುವುದಿಲ್ಲ. ನಮ್ಮಂತೆ ಸಹಜವಾಗಿದ್ದು ಆತ್ಮೀಯವಾಗುವವರು. ಅದಕ್ಕೂ ಹೆಚ್ಚಾಗಿ ಭಯಗೊಂಡಾಗ ಜಪಿಸುವ ಗಾಂಧಿತಾತನ ಹೆಸರು ತೀರಾ ಕುತೂಹಲ ಹುಟ್ಟಿಸುತ್ತದೆ. ಗಾಂಧಿಯನ್ನು ಕೊಂದವರನ್ನು ಪೂಜಿಸುವ ಈ ಕಾಲಘಟ್ಟದಲ್ಲಿ ಇಂತಹ ಕಥೆಗಳು ಇನ್ನಷ್ಟು ಬೇಕಿದೆ. ನಿಜ, ಪುಟ್ಟಲಕ್ಷಿö್ಮಯ ಗೆಳೆತನ ಬೇಕೆಂದರೆ ಈ ಕಥೆಗಳನ್ನು ಓದಲೇ ಬೇಕು, ಓದಿ ಮಗುವಾಗಲೇ ಬೇಕು.

ಶ್ರೀದೇವಿ ಕೆರೆಮನೆ

ಈ ಅಂಕಣದ ಹಿಂದಿನ ಬರಹಗಳು:
ಬಸವಳಿದ ಬಾಳಿಗೆ ಬೆಳಕು ನೀಡಬೇಕಿದೆ ಕಂದೀಲು
ಕಿರಿದರಲ್ಲೇ ಮೆರೆವ ಹಿರಿತನದ ಚುಟುಕುಗಳು
ಹಾಸ್ಯದ ಲೇಪನವಿಟ್ಟು ಮಕ್ಕಳ ಮನಸ್ಥಿತಿಯನ್ನು ಬಿಂಬಿಸುವ ಕಥೆಗಳು
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ
ತಣ್ಣಗೆ ಕಥೆಯಾಗಿ ಹರಿಯುವ ಗಂಗಾವಳಿ
ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...