ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು

Date: 23-04-2023

Location: ಬೆಂಗಳೂರು


''ಯಾವುದೇ ಜಾತಿ ಧರ್ಮವೆನ್ನದೆ ನಿರಾಶ್ರಿತ ಮಕ್ಕಳಿಂದ ವೃದ್ಧರವರೆಗೆ ಬಂಧುವಾಗಿ ನಿಂತಿರುವ ಯೋಗೇಶ್ ಎಲ್ಲರಿಗೆ ಮಾದರಿಯಾಗಿದ್ದಾರೆ. ಇವರ ಈ ಜನಸ್ನೇಹಿ ಆಶ್ರಮ 'ಜನರಿಂದ ಜನರಿಗಾಗಿ ಜನರೇ' ನಡೆಸುತ್ತಿರುವ ಆಶ್ರಮವಾಗಿದೆ. ನೇರವಾಗಿ ಸಮಾಜ ಸೇವೆ ಮಾಡಲಾಗದವರು ಇಂಥವರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಬಹುದು,'' ಎನ್ನುತ್ತಾರೆ ಅಂಕಣಗಾರ್ತಿ ಜ್ಯೋತಿ ಎಸ್. ಅವರು ಜನಸ್ನೇಹಿ ಯೋಗೇಶ್ ರವರ ಬದುಕಿನ ಪಯಣದ ಕುರಿತು ಬರೆದಿರುವ ಅಂಕಣ ನಿಮ್ಮ ಓದಿಗಾಗಿ.

'ಯಾರೂ ಇಲ್ಲದವರಿಗೆ ನಾವಿದ್ದೇವೆ' ಹೀಗೆನ್ನೆಲು ಸೆಕೆಂಡುಗಳು ಸಾಕು. ಆದರೆ ಈ ಮಾತನ್ನು ಉಳಿಸಿಕೊಳ್ಳಲು ಜೀವನವಿಡೀ ಶ್ರಮಿಸಬೇಕು. ಅಂಥ ಒಬ್ಬ ಶ್ರಮಜೀವಿಯಾದ ಜನಸ್ನೇಹಿ ಯೋಗೇಶ್ ರವರ ಬದುಕಿನ ಪಯಣ ಇವತ್ತಿನ ನಿಮ್ಮ ಓದಿಗೆ ತಂದಿದ್ದೇನೆ. ಇವರು ಹೆಸರಿಗೆ ತಕ್ಕಂತೆ ಜನಸ್ನೇಹಿಯೇ ಹೌದು. ಯಾಕೆಂದರೆ ರಸ್ತೆ ಬದಿ ಮಲಗಿದವರು, ಯಾರೂ ಇಲ್ಲದ ಅನಾಥರು, ನಿರ್ಗತಿಕರು ಇಂಥವರಿಗೆ ಇವರು ಸ್ನೇಹಿಯಾಗಿದ್ದಾರೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಜನರು ಕೊಡುವ ಧಾನ್ಯಗಳು, ದಿನಸಿ, ಹಣ್ಣು, ತರಕಾರಿಗಳು, ಹಣದಿಂದ ನೂರಾರು ದುರ್ಬಲರಿಗೆ ಆಸರೆಯಾಗಿದ್ದಾರೆ. ಬೆಂಗಳೂರಿನ ನೆಲಮಂಗಲದ ಸೊಂಡೆಕೊಪ್ಪ ಬಾಣಸವಾಡಿಯಲ್ಲಿರುವ ಅವರ ಆಶ್ರಮದ ಬಗ್ಗೆ ಅವರಾಡಿರುವ ಮಾತುಗಳನ್ನು ಆಲಿಸೋಣ ಬನ್ನಿ.

'ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಜಡೆಮಾಯಸಂದ್ರದ ಹತ್ತಿರ ಆನಡಗು ಗ್ರಾಮದ ಗಂಗಪ್ಪ ಗೌರಮ್ಮ ದಂಪತಿಯ ಮೂರು ಮಕ್ಕಳಲ್ಲಿ ಯೋಗೇಶ್ ಮೊದಲನೆಯ ಮಗ. ನನ್ನ ಹೆಸರು ಯೋಗೇಂದ್ರ. ಮನೆಯಲ್ಲಿ ಯೋಗೇಶ್ ಅಂತ ಕರೆಯುತ್ತಾರೆ. ಆಶ್ರಮ ಶುರು ಮಾಡಿದಾಗಿನಿಂದ ಕರ್ನಾಟಕದ ಜನತೆ ಪ್ರೀತಿಯಿಂದ ಜನಸ್ನೇಹಿ ಯೋಗೇಶ್ ಅಂತ ಕರೆಯುತ್ತಾರೆ. ಇವತ್ತು ಸಮಾಜದಲ್ಲಿ ತಮ್ಮ ಸ್ವಂತ ತಂದೆ ತಾಯಿಯರನ್ನೇ ಸರಿಯಾಗಿ ನೋಡಿಕೊಳ್ಳುವುದಿಲ್ಲ. ಒಂದು ಅಜ್ಜಿ ತಾತ ಇದ್ದರೆ ಕಷ್ಟ. ಇನ್ನು ಗಂಡ ಹೆಂಡತಿ ಇಬ್ಬರು ಮಕ್ಕಳಿದ್ದರೆ ಅವರು ಒಟ್ಟಿಗೆ ಇರೋಕೆ ಸರ್ಕಸ್ ಮಾಡುವ ಹಂತದಲ್ಲಿ ಎಷ್ಟೋ ಕುಟುಂಬಗಳು ಬಂದು ನಿಂತಿವೆ. ಹೀಗಿರುವಾಗ ಅಸಹಾಯಕರು, ನಿರಾಶ್ರಿತರು, ರಸ್ತೆಯಲ್ಲಿ ಮಲಗಿರುವವರು ಇವರಿಗೆಲ್ಲ ಆಸರೆ ಯಾರು? ಒಬ್ಬ ಟ್ಯಾಕ್ಸಿ ಚಾಲಕನಾಗಿದ್ದ ನಾನು, ಟ್ಯಾಕ್ಸಿ ಓಡಿಸುವ ಸಂದರ್ಭದಲ್ಲಿ ರಸ್ತೆ ಬದಿ ಮಲಗ್ತಾ ಇದ್ದವರನ್ನು, ಹಸಿವಿನಿಂದ ನರಳುವವರನ್ನು ನೋಡುತ್ತಿದ್ದೆ. ಎಷ್ಟೋ ಜನರು ಅಲ್ಲಲ್ಲೇ ಸತ್ತು ಹೋಗಿರುತ್ತಿದ್ದರು. ಸತ್ತು ಹೋದರೂ ಅವರನ್ನು ಯಾರೂ ಕೇರ್ ಮಾಡುವವರು ಇಲ್ಲ. ಎರಡು ಮೂರು ದಿನ ಆದಮೇಲೆ ಅಕ್ಕ ಪಕ್ಕದವರು ಮುನ್ಸಿಪಾಲಿಟಿಯವರಿಗೆ ವಿಚಾರ ತಿಳಿಸಿ ಅವರು ಬಂದು ಬಾಡಿಯನ್ನು ಎತ್ಕೊಂಡ್ ಹೋಗ್ತಾ ಇದ್ರು. ಯಾಕೆ ಇವರು ರಸ್ತೆಯಲ್ಲಿ ಮಲ್ಕೊಳ್ತಾರೆ? ಇವರನ್ನು ನೋಡಿಕೊಳ್ಳುವವರು ಯಾರೂ ಇಲ್ವಾ!? ನಾನು ಯಾಕೆ ಇಂತಹವರಿಗೆ ಸಹಾಯ ಮಾಡಬಾರದು ಅಂತ ಅನಿಸುತ್ತಿತ್ತು. ಆದರೆ ನನ್ನಲ್ಲಿ ಸಹಾಯ ಮಾಡುವ ಶಕ್ತಿ ಇರಲಿಲ್ಲ. ನಾನು ಟ್ಯಾಕ್ಸಿ ಓಡಿಸಿಕೊಂಡು ನನ್ನ ಬದುಕು ಸಾಗಿಸುವುದೇ ಕಷ್ಟವಿತ್ತು. FC ಕಟ್ಟಿದರೆ ಇನ್ಶೂರೆನ್ಸ್ ಕಟ್ಟೋಕೆ ಆಗುತ್ತಿರಲಿಲ್ಲ. ಇನ್ಶೂರೆನ್ಸ್ ಕಟ್ಟಿದರೆ Fc ಕಟ್ಟೋಕೆ ಒದ್ದಾಟವಿತ್ತು. ಪ್ರತಿದಿನ ಒಬ್ಬರಿಗೆ ಊಟ ಕೊಡಿಸುವ ಶಕ್ತಿ ಇತ್ತೇ ವಿನಃ ಬೇರೆ ಯಾವ ರೀತಿಯಿಂದಲೂ ಸಹಾಯ ಮಾಡೋಕೆ ಆಗ್ತಿರಲಿಲ್ಲ'

'ನಮ್ಮದು ಕಡು ಬಡತನದ ಕುಟುಂಬ. ಅಪ್ಪ ಕೂಲಿ ಮಾಡಿದ್ರೆ ಒಂದ್ ಹೊತ್ತು ಊಟ. ಇಲ್ಲ ಅಂದ್ರೆ ಅದೂ ಇಲ್ಲ. ನಾವು ಮೂರು ಜನರು ಮಕ್ಕಳು ಅದರಲ್ಲಿ ಮೊದಲನೆಯ ಮಗ ನಾನೆ. ಅಪ್ಪ ಅಲ್ಲಿ ಇಲ್ಲಿ ಕೂಲಿ ಮಾಡಿ ತುಂಬ ಕಷ್ಟಪಟ್ಟು ನಮ್ಮನ್ನೆಲ್ಲ ಸಾಕಿದ್ರು. ನಾನು ಶಾಲೆಗೆ ಹೋಗುವಾಗ ಹೇಳತೀರದ ಕಷ್ಟ. ಎರಡು ಮೂರು ಕಿ. ಮೀ. ನಡೆದುಕೊಂಡು ಹೋಗಬೇಕಿತ್ತು, ಜೊತೆಗೆ ಹಸಿವು ಬೇರೆ. ಬೆಳಗ್ಗೆ ಊಟ ಮಾಡಿದ್ರೆ ಮಧ್ಯಾಹ್ನಕ್ಕೆ ಇಲ್ಲ. ಮಧ್ಯಾಹ್ನ ತಿಂದರೆ ರಾತ್ರಿಗೆ ಊಟ ಇಲ್ಲ. ಹಾಕಿಕೊಳ್ಳಲು ಸರಿಯಾದ ಬಟ್ಟೆ ಇರುತ್ತಿರಲಿಲ್ಲ. ಹರಿದು ಹೋಗಿರುವ ಬಟ್ಟೆಗಳನ್ನು ತ್ಯಾಪೆ ಹಾಕಿ ಹೊಲೆದು ಅದನ್ನೆ ಹಾಕಿಕೊಂಡು ಹೋಗಬೇಕಿತ್ತು. ಇದರ ಮಧ್ಯೆ ವಿದ್ಯೆ ತಲೆಗೆ ಹತ್ತಲಿಲ್ಲ. ನಾನು ಏಳನೇ ತರಗತಿಗೆ ಶಾಲೆಗೆ ಹೋಗುದುವುದನ್ನು ನಿಲ್ಲಿಸಿಬಿಟ್ಟೆ. ನನಗೆ ಇವತ್ತಿಗೂ ಕನ್ನಡ ಭಾಷೆ ಬಿಟ್ರೆ ಬೇರೆ ಯಾವುದೂ ಬರಲ್ಲ. ಓದುತ್ತೇನೆ ಬರೆಯಲು ಕಷ್ಟಪಡುತ್ತೇನೆ. ಇವತ್ತು ನಾನು ಏನಾದ್ರೂ ಮಾಡ್ತಾ ಇದ್ದೇನೆ ಅಂದ್ರೆ ಅದಕ್ಕೆ ಸ್ಫೂರ್ತಿ ನನ್ನ ತಂದೆ ತಾಯಿ ಹಾಗೂ ಕರ್ನಾಟಕದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ, ನಂಬಿಕೆ. ಎಲ್ಲಾ ಜನರ ಪ್ರೀತಿಯನ್ನು ಕೊನೆತನಕ ಉಳಿಸಿಕೊಂಡು ಸಾವಿರಾರು ನಿರಾಶ್ರಿತರಿಗೆ ಆಶ್ರಯವಾಗಬೇಕು ಎನ್ನುವುದೇ ನನ್ನ ಕನಸು. 'ಯಾರೂ ಇಲ್ಲದವರಿಗೆ ನಾವಿದ್ದೇವೆ' ಎನ್ನುವ ಧ್ಯೇಯ ವಾಕ್ಯದೊಂದಿಗೆ 'ಜನಸ್ನೇಹಿ' ಎಂಬ ಹೆಸರಿಟ್ಟು ನಿರಾಶ್ರಿತರಿಗೆ ಆಸರೆಯಾಗಿ ನಿಲ್ಲುವ ಕಾರ್ಯವನ್ನು ಮಾಡಲು ನಿರ್ಧರಿಸಿದೆ. ಜೊತೆಗಿದ್ದ ಹಲವರು ಬಿಟ್ಟು ಹೋದರು. ರೋಗಿಗಳನ್ನ, ಹುಳು ಬಿದ್ದವರನ್ನೆಲ್ಲ ಮುಟ್ಟಬೇಕು ಎತ್ತಬೇಕು ನಮಗೂ ಆ ಖಾಯಿಲೆ ಬಂದರೆ ಅಂತ ದೂರ ಸರಿದರು. ಯಾರು ಕೈ ಬಿಟ್ಟರು ನಾನು ಬಿಡಲಿಲ್ಲ. ''ಜನಸ್ನೇಹಿ ನಿರಾಶ್ರಿತರ ಆಶ್ರಮ'' ಎಂಬ ಹೆಸರನ್ನು ಇಟ್ಟು ಏಕಾಂಗಿಯಾಗಿ ಸಂಸ್ಥೆಯನ್ನು ಪ್ರಾರಂಭಿಸಿದೆ. ಇಲ್ಲಿ ಯಾವುದೇ ಜಾತಿ, ಧರ್ಮ ಭೇದವಿಲ್ಲ. ಇದು ಸಂಪೂರ್ಣ ನಿರಾಶ್ರಿತರಿಗಾಗಿಯೇ ಮಾಡಿರುವ ಸಂಸ್ಥೆ. ನನಗೆ ಇದಕ್ಕೆಲ್ಲ ಸ್ಫೂರ್ತಿಯಾಗಿದ್ದು ಶಿವಕುಮಾರ ಸ್ವಾಮಿಗಳ ಆಶೀರ್ವಾದ. ತುಂಬ ಅವಮಾನಗಳನ್ನು ಎದುರಿಸಿದ್ದಕ್ಕೆ ಇವತ್ತು ನೆಮ್ಮದಿಯಾಗಿ ಇಲ್ಲಿ ನೂರು ಜನರು ಊಟ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ಹೆಸರು ಬೆಂಗಳೂರಿನಲ್ಲಿ ಮಾತ್ರವಲ್ಲ ಇಡೀ ಕರ್ನಾಟಕದ ಸಾಕಷ್ಟು ಜನರಿಗೆ ಗೊತ್ತಿದೆ'.

'ಯಾವುದೇ ಹೆಸರಲ್ಲಿ ನಮ್ಮ ಸಂಸ್ಥೆ ಒಂದು ರೂಪಾಯಿ ಕೂಡ ಅನುದಾನ ತೆಗೆದುಕೊಳ್ಳುವುದಿಲ್ಲ. ಹೊರಗಡೆ ಬಾಕ್ಸ್ ಇಟ್ಟು ಕಲೆಕ್ಷನ್ ಮಾಡಿಸುವುದಿಲ್ಲ. ಯಾರನ್ನೂ ಫೋನ್ ಮಾಡಿ ಹಣ ಕೇಳುವುದಿಲ್ಲ. ಹಣಕ್ಕಾಗಿ ಎಂಎಲ್ಎ, ಎಂಪಿ, ಗ್ರಾಮ ಪಂಚಾಯತ್ ಅಧ್ಯಕ್ಷರ ಹತ್ತಿರ ಕೂಡ ಹೋಗಿಲ್ಲ. ನಮ್ಮ ಸಂಸ್ಥೆ ನಡೆಯುತ್ತಿರುವುದು ಕರ್ನಾಟಕ ಜನತೆಯ ಪ್ರೀತಿಯಿಂದ. ಕರ್ನಾಟಕದ ಮೂಲೆ ಮೂಲೆಗಳಿಂದಲೂ ಅಕ್ಕಿ, ರಾಗಿ, ಬೇಳೆ ಕಾಳುಗಳು, ತರಕಾರಿ, ಹಣ್ಣುಗಳು ಇತ್ಯಾದಿಯಾಗಿ ಎಲ್ಲವನ್ನು ಕಳಿಸಿಕೊಡುತ್ತಿದ್ದಾರೆ. ಅರ್ಧ ಲೀಟರ್ ಹಾಲು ಕೊಟ್ಟರೂ ನಾನು ಪ್ರೀತಿಯಿಂದ ತೆಗೆದುಕೊಳ್ಳುತ್ತೇನೆ. ನಮ್ಮ ಆಶ್ರಮದಲ್ಲಿ ಎಂಟು ತಿಂಗಳ ಮಗುವಿನಿಂದ ನೂರಾ ಐದು ವರ್ಷದ ವೃದ್ಧರವರೆಗೂ ಎಲ್ಲಾ ವಯೋಮಾನದವರೂ ಇದ್ದಾರೆ. ಈಗ ಹತ್ತು ಜನರು ಮಕ್ಕಳು ಇದ್ದಾರೆ. ಅವರನ್ನು ಬರುವ ಜೂನ್ 2023ಕ್ಕೆ ಶಾಲೆ ಪ್ರಾರಂಭವಾದಾಗ ಶಾಲೆಗೆ ಸೇರಿಸಿ ಓದಿಸಬೇಕು ಎಂಬ ಕನಸಿದೆ. ಇದಕ್ಕಾಗಿ ನಾನು ಮತ್ತು ನಮ್ಮ ತಂಡ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದೇವೆ. ನಮಗೆ ಸಿಗುವ ಎಷ್ಟೋ ಜನರು ವರ್ಷಾನುಗಟ್ಟಲೆ ಸ್ನಾನ ಮಾಡಿರುವುದಿಲ್ಲ. ಟಿಬಿ, ಎಚ್ಐವಿ, ಕುಷ್ಠ ರೋಗ, ಹೃದಯದ ಖಾಯಿಲೆ, ಕೈ ಕಾಲು, ಕಣ್ಣು ಇಲ್ಲದ ಅಂಗವಿಕಲರು, ಮಾನಸಿಕ ಅಸ್ವಸ್ಥರು, ಕೆಲವರಿಗೆ ಕೈ ಕಾಲು ಕೊಳೆತು ಹುಳು ಬಂದಿರುತ್ತದೆ ಅಂತಹವರನ್ನೆಲ್ಲ ಕರೆದುಕೊಂಡು ಬಂದು ಹುಳುವನ್ನೆಲ್ಲ ಸ್ವಚ್ಛ ಮಾಡಿ ಸ್ನಾನ ಮಾಡಿಸಿ ಔಷಧಿ ಕೊಡಿಸಿ ಊಟ ಬಟ್ಟೆ ಕೊಟ್ಟು ನೋಡಿಕೊಳ್ಳುತ್ತಿದ್ದೇವೆ. ನಮ್ಮ ಸಂಸ್ಥೆ ಈಗ ಆರು ವರ್ಷದಿಂದ ಗೌರವವಾಗಿ ನಡೆದುಕೊಂಡು ಬಂದಿದೆ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ನಮ್ಮ ಫೇಸ್ಬುಕ್ ಪೇಜ್ ಅಕೌಂಟ್ (ಜನಸ್ನೇಹಿ ಯೋಗೇಶ್ )ನಲ್ಲಿ ಹಂಚಿಕೊಳ್ಳುತ್ತೇವೆ. ಜನರು ಗಮನಿಸುತ್ತಾರೆ. ಪ್ರತಿಯೊಂದು ವೀಡಿಯೋಗೂ ಅದರದ್ದೇ ಆದ ಶಕ್ತಿ ಇದೆ. ಎಷ್ಟೋ ಜನ ನಿರಾಶ್ರಿತರಿಗೆ ಅಣ್ಣನಾಗಿ, ತಮ್ಮನಾಗಿ, ಮಗನಾಗಿ ನಿಂತಿರುವ ಖುಷಿಯಿದೆ'.

'ಈ ಸಂಸ್ಥೆಯ ಮುಖಾಂತರ ಜನರಿಗೆ ಹೇಳುವುದು ಏನೆಂದರೆ ಬೀದಿಯಲ್ಲಿ ಬಿದ್ದಿರುವ ಯಾರೇ ಆದರೂ ಯಾರೂ ಇಲ್ಲದವರಿಗೆ ನಾವಿದ್ದೇವೆ ಅಂತ ಹೇಳುತ್ತೇನೆ. ಇವತ್ತು ನಮ್ಮ ಆಶ್ರಮದಲ್ಲಿ ಮಲಗಲು ಜಾಗವಿಲ್ಲ. ಆದರೂ ಇನ್ನೂ ನೂರು ಜನರು ಬಂದರೂ ನಾನು ಸೇರಿಸಿಕೊಳ್ಳುತ್ತೇನೆ. ಆದರೆ ಅವರು ಯಾರೂ ಇಲ್ಲದವರಾಗಿರಬೇಕು ಅನಾಥರಾಗಿರಬೇಕು. ಅಂತವರಿಗೆ ಮಾತ್ರ ನಾವು ಉಚಿತವಾಗಿ ಸೇವೆಯನ್ನು ಸಲ್ಲಿಸುತ್ತೇವೆ. ಮಕ್ಕಳು, ಸಂಬಂಧಿಕರು ಇದ್ದು ತಂದೆ ತಾಯಿಯನ್ನು ಕರೆದುಕೊಂಡು ಬಂದು ಬಿಡುತ್ತೇವೆ 1000/- 10,000/- 50,000/- ಕೊಡುತ್ತೇನೆ ಅಂದರೂ ಅಂತಹವರಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿ ತೀರಿಕೊಂಡವರ ಮನೆಯ ವಿಳಾಸ ಪತ್ತೆ ಹಚ್ಚಿ ವಿಚಾರ ತಿಳಿಸಿದರೂ ಎಷ್ಟೋ ಸಲ ಯಾರೂ ಬರುವುದಿಲ್ಲ. ಈವರೆಗೆ ಅಂತಹ ಐವತ್ತಕ್ಕೂ ಹೆಚ್ಚು ಮಂದಿಗೆ ಒಬ್ಬ ಮಗನಾಗಿ ನಿಂತು ಏನೆಲ್ಲಾ ಸಂಸ್ಕಾರ ಮಾಡಬೇಕೋ ಅದನ್ನು ಮಾಡಿದ್ದೇನೆ. ಕೆಲವರು ಬಂದು ಕರೆದುಕೊಂಡು ಹೋಗುತ್ತಾರೆ. ಡೆತ್ ಸರ್ಟಿಫಿಕೇಟ್ ಬೇಕಾಗಿರತ್ತೆ, ಅವರ ಹೆಸರಲ್ಲಿ ಇನ್ಶೂರೆನ್ಸ್ ಇರತ್ತೆ, ಆಸ್ತಿ ಪತ್ರಗಳಿಗೆ ಏನಾದರೂ ಸಹಿ ಬೇಕಾಗಿರತ್ತೆ. ಬಹುತೇಕ ಈ ಮೂರು ಕಾರಣಗಳನ್ನು ಬಿಟ್ಟರೆ ಬೇರೆ ಯಾವುದೇ ಕಾರಣಕ್ಕೂ ಯಾರೂ ಬರಲ್ಲ ಇಲ್ಲಿ. ಸಂಬಂಧಗಳಿಗೆ ಬೆಲೆ ಇಲ್ಲದಾಗಿದೆ. ಎಲ್ಲರೂ ದುಡ್ಡಿನ ಹಿಂದೆ ಓಡುತ್ತಿದ್ದಾರೆ. ತಂದೆ ತಾಯಿ ಜೊತೆಗೆ ಕೂತು ಒಂದು ಹೊತ್ತು ಊಟ ಮಾಡೋಕು ಯಾರಿಗೂ ಸಮಯ ಇಲ್ಲದಂತಾಗಿದೆ. ನನಗೆ ಮದುವೆಯಾಗಿ ಒಂಭತ್ತು ವರ್ಷವಾಯಿತು. ನನ್ನ ಹೆಂಡತಿ ಮಂಜುಳ ಅವರ ಸಂಪೂರ್ಣ ಬೆಂಬಲವಿದೆ. ನಮಗೆ ಇಬ್ಬರು ಮಕ್ಕಳು ಇದ್ದಾರೆ. ನನ್ನ ತಂದೆ ತಾಯಿ, ನಮ್ಮ ಕುಟುಂಬ, ನಮ್ಮ ತಂಡ ಎಲ್ಲರೂ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ನಾವೆಲ್ಲರೂ ಸೇರಿ ಈ ದೇವರ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ. ಸರ್ಕಾರದ ಯಾವುದೇ ಅನುದಾನವಿಲ್ಲದೇ, ಯಾವುದೇ ಗಣ್ಯ ವ್ಯಕ್ತಿಗಳ ಸಹಾಯವಿಲ್ಲದೇ ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು. ಆಶ್ರಮದ ಜಾಗಕ್ಕೆ ತಿಂಗಳಿಗೆ 25000/- ಬಾಡಿಗೆ ಕಟ್ಟುತ್ತೇನೆ. ನಾನು ಸತ್ತರೆ ಮಣ್ಣು ಮಾಡಲು ಜಾಗ ಕೂಡ ನನ್ನದು ಅಂತ ಇಲ್ಲ. ನಮ್ಮ ಮನೆ ಬಿದ್ದು ಹೋಗಿ ಆರು ತಿಂಗಳಾಯ್ತು ಇನ್ನೂ ಒಂದು ಶೀಟ್ ಕೂಡ ಹಾಕಿಲ್ಲ. ನನಗೆ ಇವತ್ತಿನವರೆಗೂ ನನ್ನದು ಅಂತ ಒಂದು ಸೈಟು, ಮನೆ ಇಲ್ಲ. ಜನರ ಪ್ರೀತಿ, ಸಹಕಾರ, ಸಹಾಯವೇ ಆಶ್ರಮದ ಭದ್ರ ಬುನಾದಿ. ಆಶ್ರಮದಲ್ಲಿ ಪ್ರತೀದಿನ ಭಜನೆ, ಆಟ, ಸಂಗೀತ ಕಾರ್ಯಕ್ರಮ ಮೂರು ಹೊತ್ತು ಊಟ ಎರಡು ಸಲ ಟೀ ನಿರಂತರವಾಗಿ ಆರು ವರ್ಷದಿಂದ ನಡೆದುಕೊಂಡು ಬಂದಿದೆ. ನನ್ನ ಆಸೆ 'ನಿರಾಶ್ರಿತರಿಗಾಗಿ ಬದುಕಬೇಕು.. ನಿರಾಶ್ರಿತರಿಗಾಗಿ ಸಾಯಬೇಕು' ಎಂಬುದು. ನನ್ನ ಜನರನ್ನು ಉಳಿಸೋಕೆ ನನಗೆ ಸಹಾಯ ಬೇಕು. ಮಕ್ಕಳಿಗೆ, ಬ್ಯಾಗ್, ಬಟ್ಟೆ, ಪುಸ್ತಕ ಯಾರು ಏನೇ ಕೊಟ್ಟರೂ ತೆಗೆದುಕೊಳ್ಳುತ್ತೇನೆ. ಈ ಆಶ್ರಮಕ್ಕೆ ಸಾವಿರಾರು ಜನರು ಬಂದು ಹೋಗಿದ್ದಾರೆ. ನಮ್ಮಲ್ಲಿ ಮನೋಜ್ ದಂಪತಿಗಳು ಇಬ್ಬರು ನರ್ಸ್ ಇದ್ದಾರೆ. ಅವರು ಇಪ್ಪತ್ನಾಲ್ಕು ಗಂಟೆ ನಮ್ಮ ಆಶ್ರಮದಲ್ಲೇ ಇದ್ದು ಸೇವೆ ಸಲ್ಲಿಸುತ್ತಾರೆ. ಯಾರಿಗೆ ಏನೇ ಸೇವೆ ಬೇಕಾದರೂ ಮಾಡುತ್ತಾರೆ. ಡಾಕ್ಟರ್ ಗಳು ವಾರಕ್ಕೆ ಒಂದೆರಡು ಸಲ ಬಂದು ಯಾರಿಗೆ ಯಾವ ಮೆಡಿಸಿನ್ ಬೇಕು ಅಂತ ಚೆಕ್ ಮಾಡಿ ನೋಡಿಕೊಂಡು ಹೋಗುತ್ತಾರೆ. ತುರ್ತು ಸೇವೆಗಾಗಿ ನಮ್ಮಲ್ಲಿ ಆಂಬುಲೆನ್ಸ್ ಇದೆ ನೆಲಮಂಗಲದ ಹತ್ತಿರದ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗುತ್ತೇವೆ. ಕೊನೆಯದಾಗಿ ಹೇಳೋದೇನೆಂದರೆ ಸಹಾಯ ಮಾಡಬೇಕು ಅಂತ ಮನಸ್ಸಿಲ್ಲ ಅಂದ್ರೂ ಪರವಾಗಿಲ್ಲ. ತಂದೆ ತಾಯಿಯರನ್ನು ಬೀದಿಗೆ ತಳ್ಳಬೇಡಿ. ಸತ್ತ ಮೇಲೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಿಥಿ ಮಾಡಿ ಅವರ ಫೋಟೋ ಮುಂದೆ ರಾಶಿ ಸುರಿದು ಪೂಜೆ ಮಾಡುವ ಬದಲು ಅವರಿದ್ದಾಗ ಪ್ರೀತಿಯಿಂದ ತಿನ್ನಿಸಿ, ಪೂಜಿಸಿ, ಗೌರವಿಸಿ' ಎನ್ನುತ್ತಾರೆ ಯೋಗೇಶ್.

ಯಾವುದೇ ಜಾತಿ ಧರ್ಮವೆನ್ನದೆ ನಿರಾಶ್ರಿತ ಮಕ್ಕಳಿಂದ ವೃದ್ಧರವರೆಗೆ ಬಂಧುವಾಗಿ ನಿಂತಿರುವ ಯೋಗೇಶ್ ಎಲ್ಲರಿಗೆ ಮಾದರಿಯಾಗಿದ್ದಾರೆ. ಇವರ ಈ ಜನಸ್ನೇಹಿ ಆಶ್ರಮ 'ಜನರಿಂದ ಜನರಿಗಾಗಿ ಜನರೇ' ನಡೆಸುತ್ತಿರುವ ಆಶ್ರಮವಾಗಿದೆ. ನೇರವಾಗಿ ಸಮಾಜ ಸೇವೆ ಮಾಡಲಾಗದವರು ಇಂಥವರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಬಹುದು. ಯೋಗೇಶ್ ರವರ ಈ ಆಶ್ರಮ ಯಾವುದೇ ತೊಂದರೆಯಿಲ್ಲದೆ ನಿರಂತರವಾಗಿ ನಡೆಯುತ್ತಿರಲಿ. ಇವರ ಈ ಆಶ್ರಮಕ್ಕೆ ಎಲ್ಲರ ಸಹಕಾರ ಮುಖ್ಯ. ಸಾಧ್ಯವಾದಷ್ಟು ಕೈ ಜೋಡಿಸೋಣ. "ಯಾರೂ ಇಲ್ಲದವರಿಗೆ ನಾವಿದ್ದೇವೆ ಎನ್ನುವವರೊಟ್ಟಿಗೆ ನಾವೆಲ್ಲರೂ ಇರೋಣ".

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...