ರಾಜಾರಾಂ ತಲ್ಲೂರು ಎಂಬ ನಾಗರಿಕ ಸಮಾಜದ ಪ್ರತಿನಿಧಿ

Date: 22-09-2021

Location: ಬೆಂಗಳೂರು


‘ರಾಜಾರಾಂರವರ ಬರೆಹಗಳನ್ನು ನಿರಂತರವಾಗಿ ಫಾಲೋ ಮಾಡುತ್ತ ಬಂದಿರುವ ನನಗೆ ಅವರು ನಮ್ಮ ಕಾಲದ ನಾಗರಿಕ ಸಮಾಜದ ಓರ್ವ ಸಮರ್ಥ ಪ್ರತಿನಿಧಿಯಾಗಿಯೇ ಕಂಡು ಬಂದಿದ್ದಾರೆ’ ಎನ್ನುತ್ತಾರೆ ಲೇಖಕ ನಿತ್ಯಾನಂದ ಬಿ. ಶೆಟ್ಟಿ. ಅವರ 'ಲೋಕೋಕ್ತಿ' ಅಂಕಣದಲ್ಲಿ ಹಿರಿಯ ಪತ್ರಕರ್ತ, ಲೇಖಕ ರಾಜಾರಾಂ ತಲ್ಲೂರು ಅವರ ಹೊಸ ಕೃತಿ ‘ನಮ್ದೇಕತೆ’ಯನ್ನು ಆಧರಿಸಿ ಯೋಚನೆ ಮಾಡಬಹುದಾದ ಕೆಲವು ಮಾತುಗಳನ್ನು ಬರೆದಿದ್ದಾರೆ.

ಪತ್ರಕರ್ತನಾಗಿ ತನ್ನ ವೃತ್ತಿಜೀವನವನ್ನು ಆರಂಭಿಸಿ, ಅನುವಾದದ ಕೆಲಸದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುತ್ತ, ಸಾಮಾಜಿಕ ಚಟುವಟಿಕೆಗಳಲ್ಲೂ ನಿರತರಾಗಿರುವ ರಾಜಾರಾಂ ತಲ್ಲೂರು ‘ಬುಕ್ ಬ್ರಹ್ಮ’ದ ಓದುಗರಿಗೂ ಫೇಸ್ ಬುಕ್‍ನ ಸದಸ್ಯರಿಗೂ ಚಿರಪರಿಚಿತರು. ‘ಬುಕ್ ಬ್ರಹ್ಮ’ದಲ್ಲಿ ಅವರು ಬರೆಯುತ್ತಿರುವ ಸಮಕಾಲೀನ ಕಲೆ ಮತ್ತು ಕಲಾವಿದರ ಕುರಿತ ಅಂಕಣ ‘ಈಚೀಚೆ, ಇತ್ತೀಚೆ’ ಆಧುನಿಕ ಕಲೆಯ ಕುರಿತು ತೀವ್ರ ಆಸಕ್ತಿ ಇರುವ ಕಲಾ ವಿಮರ್ಶಕನೊಬ್ಬನ ಪಕ್ವ ಬರವಣಿಗೆಗಳೇ ಆಗಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದವರಾದ ರಾಜಾರಾಂ ‘ನುಣ್ಣನ್ನ ಬೆಟ್ಟ’ (2017), ‘ತಲ್ಲೂರು ಎಲ್.ಎನ್’ (2018), ‘ಏನಿದು ಪೌರತ್ವ ಕಾಯಿದೆ?’ (2019) ‘ದುಪ್ಪಟ್ಟು’ (2020) ಮತ್ತು ಈಗ ‘ನಮ್ದೇಕತೆ’ (2021) ಪುಸ್ತಕಗಳ ಮೂಲಕ ಕನ್ನಡದ ಜನಸಮುದಾಯದ ವಿವೇಕವನ್ನು ಬೆಳಗುವ ಕೆಲಸ ಮಾಡಿದ್ದಾರೆ.

ರಾಜಾರಾಂ ಅವರ ‘ನುಣ್ಣನ್ನ ಬೆಟ್ಟ’ 2016-17ರ ನಡುವೆ ಜಿ.ಎನ್ ಮೋಹನ್ ಸಂಪಾದಕತ್ವದ ‘ಅವಧಿ’ಯಲ್ಲಿ ಬರೆದ ಅಂಕಣಗಳ ಸಂಕಲನ. 316 ಪುಟಗಳ ಪುಸ್ತಕ ಇದು. ‘ನಮ್ದೇಕತೆ’ ಪ್ರಜಾವಾಣಿ, ಆಂದೋಲನ, ವಾರ್ತಾಭಾರತಿಯಂಥ ದಿನಪತ್ರಿಕೆಗಳಿಗೆ; ನ್ಯಾಯಪಥ, ಸಮಾಜಮುಖಿಯಂಥ ನಿಯತಕಾಲಿಕಗಳಿಗೆ ಮತ್ತು ಅವಧಿ ವೆಬ್ ಪತ್ರಿಕೆಗೆ ಬರೆದ ಲೇಖನಗಳ ಸಂಕಲನ. 2017ರಿಂದ 2021ರ ಅವಧಿಯಲ್ಲಿ ರಾಜಾರಾಂ ಬರೆದಿರುವ ಲೇಖನಗಳು ಮತ್ತು ಫೇಸ್‍ಬುಕ್‍ನಲ್ಲಿ ಬರೆದಿರುವ ಕೆಲವು ಟಿಪ್ಪಣಿಗಳು ಮತ್ತು ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಶನ್‍ನ ವಿದ್ಯಾರ್ಥಿನಿಯೊಬ್ಬರು ಮಾಡಿರುವ ಸಂದರ್ಶನ, ಉಡುಪಿಯ ರೈತಸಂಘದಲ್ಲಿ ಮಾಡಿದ ಭಾಷಣ ‘ನಮ್ದೇಕತೆ’ಯಲ್ಲಿದೆ. ಕೊರೊನಾ ಸಾಂಕ್ರಾಮಿಕದ ಬಗ್ಗೆ, ಕೊರೊನಾದ ಕನ್ನಡಿಯಲ್ಲಿ ನಮ್ಮನ್ನು ನಾವೇ ಕಂಡದ್ದರ ಕುರಿತು, ನಗೆಪಾಟಲಿಗೆ ಅರ್ಹವಾಗಿರುವ ಭಾರತೀಯ ಮಾಧ್ಯಮಗಳ ಬಗ್ಗೆ, ಕೃಷಿ ಕಾಯಿದೆ, ಜಿಎಸ್‍ಟಿ ಕಾಯಿದೆಯ ಬಗ್ಗೆ ನಿದ್ದೆಯ ನಟನೆ ಮಾಡದ ಎಲ್ಲರ ಕಣ್ಣು ತೆರೆಸುವ ಲೇಖನಗಳು ಈ ಪುಸ್ತಕದಲ್ಲಿವೆ.

ಈ ಪುಸ್ತಕವನ್ನು ‘ನುಣ್ಣನ್ನ ಬೆಟ್ಟ’ ಪುಸ್ತಕದ ಮುಂದುವರಿಕೆ ಎಂದೂ ಕರೆಯಬಹುದು. ಪುಸ್ತಕದ ಮುಖಪುಟ ವಿನ್ಯಾಸವೂ ಮತ್ತು ಪುಸ್ತಕದೊಳಗಿನ ವಸ್ತು-ವಿಷಯವೂ ಈ ಮುಂದುವರಿಕೆಯನ್ನು ಸೂಚಿಸುವಂತಿದೆ. ಹಾಗಾಗಿ ಇದನ್ನು ‘ನುಣ್ಣನ್ನ ಬೆಟ್ಟ-ಸಂಪುಟ ಎರಡು’ ಎಂದರೂ ತಪ್ಪೇನಿಲ್ಲ.

ರಾಜಾರಾಂ ಅವರ ಈ ಎರಡೂ ಪುಸ್ತಕಗಳನ್ನು ಪರಿಚಯಿಸುವ, ವಿಮರ್ಶಿಸುವ ಕೆಲಸವನ್ನು ಮಾಡುವುದು ಈ ಲೇಖನದ ಉದ್ದೇಶ ಅಲ್ಲ. (ಕನ್ನಡದ ಜನರು ಅವುಗಳನ್ನು ಸ್ವತಃ ಓದಿ ಅವು ಕೊಡುವ ಅನುಭವವನ್ನು, ಅವು ಬಿತ್ತುವ ವಿಚಾರವನ್ನು ತಮ್ಮದಾಗಿಸಿಕೊಳ್ಳಬೇಕು.) ಅದರ ಬದಲಾಗಿ ತಮ್ಮ ಬರೆವಣಿಗೆಗಳ ಮೂಲಕ ರಾಜಾರಾಂ ಏನನ್ನು ಮಾಡುವುದಕ್ಕೆ ಹೊರಟಿದ್ದಾರೆ ಮತ್ತು ಅದನ್ನು ಅವರು ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ಭಾಷೆ-ಬರವಣಿಗೆ-ರಾಜಕಾರಣ-ಚಿಂತನೆಯಲ್ಲಿ ಆಸಕ್ತರಾಗಿರುವವರ ಗಮನ ಸೆಳೆಯುವುದಷ್ಟೇ ಈ ಲೇಖನದ ಉದ್ದೇಶ.

ಲೇಖನದ ಶೀರ್ಷಿಕೆಯಲ್ಲಿ ರಾಜಾರಾಂ ಅವರನ್ನು ನಾಗರಿಕ ಸಮಾಜದ ಪ್ರತಿನಿಧಿ ಎಂದು ಸಂಬೋಧಿಸಿರುವುದಕ್ಕೆ ಕೊಂಚ ವಿವರಣೆ ಬೇಕು. ನಮ್ಮ ಕಾಲದ ಯಾವುದೋ ಒಂದು ಸಮಾಜದಲ್ಲಿ ಪ್ರಭುತ್ವವೊಂದು ಅಪಾರವಾದ ಪ್ರೌಢಿಮೆಯನ್ನು, ಸಂಯಮವನ್ನು, ಅಪೂರ್ವವಾದ ಸೂಕ್ಷ್ಮತೆಯನ್ನು ಮತ್ತು ಸ್ಪಂದಿಸುವ ಗುಣವನ್ನು ಹೊಂದಿದ್ದರೆ ಅದರ ಹಿನ್ನೆಲೆಯಲ್ಲಿ ಕ್ರಿಯಾಶೀಲವಾದ ನಾಗರಿಕ ಸಮಾಜದ ಸಾರ್ಥಕ ಪಾಲ್ಗೊಳ್ಳುವಿಕೆ ಇರುತ್ತದೆ. ಇದನ್ನು ಹೀಗೂ ಹೇಳಬಹುದು. ಯಾವ ಸಮಾಜದಲ್ಲಿ ನಾಗರಿಕ ಸಮಾಜ ಸಂಪೂರ್ಣ ಜಾಗೃತಗೊಂಡ ಸ್ಥಿತಿಯಲ್ಲಿರುತ್ತದೋ ಆ ಸಮಾಜದ ಪ್ರಭುತ್ವ ತಕ್ಕಮಟ್ಟಿಗೆ ‘ಉತ್ತಮ ಪ್ರಭುತ್ವ’ವಾಗಿರುತ್ತದೆ. (ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂದ ಪುರಂದರದಾಸರ ಮಾತಿಗೆ ಎದುರಾಡುವ ಧೈರ್ಯ ಸಾಲದೆ.)

ಭಾರತದಂತಹ ದೇಶದಲ್ಲಿ ನಾಗರಿಕ ಸಮಾಜದ ಭಾಗವಾಗುವುದೆಂದರೆ ಸುಲಭದ ಮಾತಲ್ಲ. ಇಲ್ಲಿಯ ದಿನನಿತ್ಯದ ಸಂಕಟಗಳನ್ನು ಅರ್ಥ ಮಾಡಿಕೊಂಡು ಚಿಂತನೆಯ ನೆಲೆಗಟ್ಟಿನಲ್ಲಿ ಮುಖಾಮುಖಿಯಾಗದೇ ಇದ್ದವರು ನಾಗರಿಕ ಸಮಾಜದ ಪ್ರತಿನಿಧಿಗಳಾಗಲು ಸಾಧ್ಯವಿಲ್ಲ. ನಮ್ಮ ದೇಶದ ಈಗಿನ ದಿಕ್ಕೆಟ್ಟ ರಾಜಕೀಯ ಸನ್ನಿವೇಶದಲ್ಲಿ, ರಾಜಕೀಯ ಚಿಂತನೆ ಅಂದರೆ ಏನೆಂಬುದೇ ಗೊತ್ತಿಲ್ಲದ ಅಸ್ತವ್ಯಸ್ತ ಚಿತ್ತವೃತ್ತಿಯ ರಾಜಕೀಯ ನಾಯಕರು ಇರುವ ಕಲುಷಿತ ವಾತಾವರಣದಲ್ಲಿ ಅರ್ಥಪೂರ್ಣ ನಾಗರಿಕ ಸಮಾಜವಾಗುವುದೆಂದರೆ ಪ್ರತ್ಯಕ್ಷ ಪ್ರತಿಪಕ್ಷ ನಾಯಕನಾಗುವುದೇ ಆಗಿದೆ. (ನಾಗರಿಕ ಸಮಾಜದ ಕುರಿತ ವಿವರವಾದ ಚರ್ಚೆಗೆ ಇದೇ ಅಂಕಣದ ಹಿಂದಿನ ಸರಣಿ ಬರೆಹಗಳಾದ ಜಾತಿಸಮಾಜ-ನಾಗರಿಕಸಮಾಜ-ರಾಜಕೀಯ ಸಮಾಜವನ್ನು ಆಸಕ್ತರು ಗಮನಿಸಬಹುದು.) ರಾಜಾರಾಂರವರ ಬರೆಹಗಳನ್ನು ನಿರಂತರವಾಗಿ ಫಾಲೋ ಮಾಡುತ್ತ ಬಂದಿರುವ ನನಗೆ ಅವರು ನಮ್ಮ ಕಾಲದ ನಾಗರಿಕ ಸಮಾಜದ ಓರ್ವ ಸಮರ್ಥ ಪ್ರತಿನಿಧಿಯಾಗಿಯೇ ಕಂಡು ಬಂದಿದ್ದಾರೆ.

ಕನ್ನಡದಲ್ಲಿ ಗಂಭೀರವಾದ ವಿಷಯಗಳ ಬಗ್ಗೆ ಆಳವಾದ ವಿಷಯತಜ್ಞತೆಯಿಂದ ಬರೆಯಬಲ್ಲ ಬೆರಳೆಣಿಕೆಯ ಪತ್ರಕರ್ತರಲ್ಲಿ ರಾಜಾರಾಂರವರೂ ಒಬ್ಬರು. ರಾಜಾರಾಂ ವಿಷಯತಜ್ಞರಷ್ಟೇ ಅಲ್ಲ, ತಜ್ಞ ಓದುಗರೂ ಹೌದು. ಅವರು ಜಿಎಸ್‍ಟಿಯ ಬಗ್ಗೆ ಬರೆಯಲಿ, ಭಾರತ ಸರಕಾರ ಜಾರಿಗೆ ತರಲಿರುವ ನೂತನ ಮೀನುಗಾರಿಕೆಯ ಕುರಿತ ಕಾಯಿದೆಯೇ ಬಗ್ಗೆ ಬರೆಯಲಿ, ತಾವು ಬರೆಯಬೇಕೆಂದಿರುವ ವಿಷಯದ ಕುರಿತು ಅವರು ನಿಕಟ ಓದನ್ನು (ಕ್ಲೋಸ್ ರೀಡಿಂಗ್) ನಡೆಸುತ್ತಾರೆ. ಈ ನಿಕಟ ಓದನ್ನು ಅವರು ಯಾವುದೇ ಪೂರ್ವಗ್ರಹಗಳಿಲ್ಲದೆಯೇ ನಡೆಸುತ್ತಾರೆ. ಅದು ಕಾರಣವಾಗಿ ಅವರ ಬರೆವಣಿಗೆಯಲ್ಲಿ ಪರ-ವಿರೋಧಗಳ ಹಗ್ಗ ಜಗ್ಗಾಟಕ್ಕಿಂತಲೂ ಆಳವಾದ ವಿಶ್ಲೇಷಣೆ ಇದೆ. ರಾಜಕೀಯ ಸರಿತನಗಳಿಗಿಂತಲೂ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿ-ಗತಿಗಳ ವಾಸ್ತವಿಕತೆಯ ದಟ್ಟ ವಿಮರ್ಶೆ ಇದೆ. ಸಮಸ್ಯೆಗಿರುವ ಹಲವು ಮಗ್ಗುಲುಗಳನ್ನು ಹೊಚ್ಚಹೊಸದಾಗಿ ತೆರೆದು ತೋರಿಸುವ ಉಮೇದು ಇದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ 20ನೇ ಶತಮಾನದ ಆರಂಭದಿಂದ ಅನೇಕ ಬಗೆಯ ಸಾಮಾಜಿಕ–ರಾಜಕೀಯ ಚಿಂತನೆಗಳನ್ನು ನಡೆಸುತ್ತಾ ಬಂದ ಚಿಂತಕರನ್ನು ನಾವು ನೋಡಿದ್ದೇವೆ ಮತ್ತು ಅವರ ಬರೆಹಗಳನ್ನು ಓದಿದ್ದೇವೆ. ಡಿ.ವಿ ಗುಂಡಪ್ಪನವರು ಆಧುನಿಕ ಕರ್ನಾಟಕದಲ್ಲಿ ನಾವು ಗುರುತಿಸಬಹುದಾದ ಮೊದಲ ಪೀಳಿಗೆಯ ಸಾಮಾಜಿಕ-ರಾಜಕೀಯ ಚಿಂತಕರು. ಗುಂಡಪ್ಪನವರು ಮೇಲಾಗಿ ಪತ್ರಕರ್ತರೂ ಕೂಡ. ತಮ್ಮ ಕಾಲದ ಅನೇಕ ಪ್ರಮುಖ ಸಾಮಾಜಿಕ-ರಾಜಕೀಯ ಸಮಸ್ಯೆಗಳ ಕುರಿತು ತಮ್ಮ ಆಯ್ಕೆಯ ಸೈದ್ಧಾಂತಿಕ ನೆಲೆಯಲ್ಲಿ ಗುಂಡಪ್ಪನವರು ವಿಮರ್ಶಾತ್ಮಕವಾಗಿ ಬರೆದಿದ್ದಾರೆ. ಗುಂಡಪ್ಪನವರ ಬಳಿಕ ಸಾಮಾಜಿಕ-ರಾಜಕೀಯ ಚಿಂತನೆ ಕರ್ನಾಟಕದಲ್ಲಿ ಅಪಾರ ಪ್ರಮಾಣದಲ್ಲಿ ನಡೆದಿದೆ. ಕನ್ನಡದ ಅನೇಕ ಪ್ರಮುಖ ಸಾಹಿತಿಗಳು ಮತ್ತು ವಿಮರ್ಶಕರು ಕಾಲಕಾಲಕ್ಕೆ ತಮಗೆ ಮಹತ್ವವೆಂದು ಕಂಡುಬಂದ ಅನೇಕ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳಿಗೆ ಪ್ರತಿಸ್ಪಂದಿಸಿದ್ದಾರೆ ಹಾಗೂ ವಿಸ್ತೃತವಾಗಿ ಅವುಗಳ ಬಗ್ಗೆ ಬರೆದಿದ್ದಾರೆ. ಕನ್ನಡದಲ್ಲಿ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳ ಕುರಿತು ಬರೆದ ಲೇಖಕರಲ್ಲಿ ಹೆಚ್ಚಿನವರು ಕನ್ನಡ ಅಥವಾ ಇಂಗ್ಲಿಶ್ ಭಾಷೆಗಳ ಅಧ್ಯಾಪಕರು ಮತ್ತು ಪತ್ರಕರ್ತ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡ ಸಾಹಸಿಗಳು.

ರಾಜಾರಾಂ ಅಂತಹ ಒಬ್ಬ ಸಾಹಸಿ. ಸ್ವತಃ ತಾನೂ ಚಿಂತನೆ ನಡೆಸುತ್ತ, ತನ್ನ ಬರೆವಣಿಗೆಯ ಮೂಲಕವೇ ಓದುಗರೂ ಸ್ವತಂತ್ರವಾಗಿ ಆಲೋಚನೆ ನಡೆಸುವಂತೆ, ಹೊಸಹೊಸ ಪ್ರಶ್ನೆಗಳನ್ನು ಕೇಳುವಂತೆ ರಾಜಾರಾಂ ವಾಸ್ತವವನ್ನು ಬಿಡಿಸಿಬಿಡಿಸಿ ಇಡಬಲ್ಲರು. ‘ನಮ್ದೇಕತೆ’ ಪುಸ್ತಕದ “ಇದು ಮಸಣದಲ್ಲಿ ಮಾಂಸದ ಪಾಲಿಗೆ ಯುದ್ಧ...!” ಎಂಬ ಲೇಖನದಲ್ಲಿ (ಪು. 155-157) 2017ರ ಮಾರ್ಚ್‍ನಲ್ಲಿ ಸಿಎಜಿ ಕೃಷಿ ಇಲಾಖೆಯ ಕುರಿತು ಪ್ರಕಟಿಸಿರುವ ಒಂದು ವರದಿಯನ್ನು ಚರ್ಚೆಗೆ ಎತ್ತಿಕೊಳ್ಳುವ ರಾಜಾರಾಂ ಆ ವರದಿಯ ಕುರಿತು ತನ್ನ ಒಳನೋಟವನ್ನು ಕೊಡುವುದು ಹೀಗೆ: ‘ದೇಶದಲ್ಲಿ ರೈತರು ಹೇಳಹೆಸರಿಲ್ಲದೆ ಜೀವ ಕಳೆದುಕೊಳ್ಳುತ್ತಿರುವ ಈ ಹಂತದಲ್ಲಿ, ಕೇಂದ್ರ ಸರಕಾರದ ಕೃಷಿ ವಿಮೆ ಯೋಜನೆ ಹೇಗೆ ಕಾರ್ಯಾಚರಿಸುತ್ತಿದೆ ಎಂಬುದರ ಮೌಲ್ಯಮಾಪನ ಈ ವರದಿಯಲ್ಲಿದೆ. 1985ರಿಂದಲೂ ಬೇರೆಬೇರೆ ಹೆಸರುಗಳಲ್ಲಿ ಚಾಲ್ತಿ ಇರುವ ಬೆಳೆ ವಿಮೆ, ಈಗ 2016ರಿಂದೀಚೆಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನಾ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದೆ’. ( ರಾಜಾರಾಂ ಇಲ್ಲಿ ಹೇಳದೇ ಇರುವುದು ಏನೆಂದರೆ ಯೋಜನೆ ಹಳೆಯದು, ಹೆಸರು ಮಾತ್ರ ಹೊಸದು. ಇದನ್ನು ಹೆಚ್ಚು ವಿಸ್ತರಿಸಬೇಕಾಗಿಲ್ಲವಲ್ಲ!)

ಸಿಎಜಿ ವರದಿಯ ಸಾರವನ್ನು ಭಟ್ಟಿ ಇಳಿಸುವ ರಾಜಾರಾಂ ಹೀಗೆ ಹೇಳುತ್ತಾರೆ.

‘ರೈತನಿಗೆ ಬೆಳೆನಷ್ಟ ಸಂಭವಿಸದಂತೆ ನೋಡಿಕೊಳ್ಳಲು ಉದ್ದೇಶಿಸಿರುವ ಈ ಬೆಳೆ ವಿಮೆ ಯೋಜನೆಗಳು ತಮ್ಮ ಮೂಲ ಉದ್ದೇಶವನ್ನೇ ಮರೆತು, ಬ್ಯಾಂಕುಗಳಿಗೆ ಕೊಟ್ಟ ಬೆಳೆಸಾಲ ನಷ್ಟ ಆಗದಂತೆ ನೋಡಿಕೊಳ್ಳುವ ಯೋಜನೆಗಳಾಗಿಬಿಟ್ಟಿವೆ ಎಂಬುದಕ್ಕೆ ಅಂಕಿಅಂಶಗಳು ಲಭ್ಯವಿವೆ. ಎಲ್ಲ ವಿಧದ ರೈತರಿಗೆ ಸಿಗಬೇಕಾಗಿದ್ದ ಬೆಳೆಸಾಲವನ್ನು ಬ್ಯಾಂಕಿನಲ್ಲಿ ಸಾಲ ಮಾಡಿರುವ ರೈತರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಬ್ಯಾಂಕು ಸಾಲ ಇಲ್ಲದ ರೈತರು, ಇನ್ನೊಬ್ಬರ ಹೊಲದಲ್ಲಿ ತಮ್ಮ ಬೆಳೆ ಬೆಳೆದುಕೊಳ್ಳುವವರು, ಭೂರಹಿತ ಕೃಷಿ ಕೆಲಸಗಾರರು ಇವರೆಲ್ಲ ಸರ್ಕಾರದ ಲೆಕ್ಕದಲ್ಲೇ ಇಲ್ಲ! ಹಾಗಾಗಿ ಅವರಿಗೆ ವಿಮೆಯೂ ಇಲ್ಲ!

ಬೆಳೆವಿಮೆಯನ್ನು ಖಾಸಗಿ ವಿಮಾ ಕಂಪೆನಿಗಳಿಗೂ ವಹಿಸಲಾಗಿದೆ. ಅವುಗಳ ಮೇಲೆ ಸರಕಾರಕ್ಕೆ ಯಾವುದೇ ನಿಯಂತ್ರಣ ಇಲ್ಲ. ಯಾವುದೇ ವಿಮೆ ವಿತರಣೆ ಮಾಡದ ರಿಲಯನ್ಸ್, ಬಜಾಜ್, ಐಸಿಐಸಿಐಯಂತಹ ಕಂಪೆನಿಗಳನ್ನೂ ಸರಕಾರ ಇನ್ನೂ ವಿಚಾರಿಸಿಯೇ ಇಲ್ಲ. ಆದರೆ ಈ ಕಂಪೆನಿಗಳಿಗೆ 3622.79 ಕೋಟಿ ರೂಪಾಯಿಯನ್ನು ಸಬ್ಸಿಡಿ ನೀಡಲಾಗಿದೆ.

ಬೆಳೆಸಾಲದ ಲಾಭ ಪಡೆಯುತ್ತಿರುವುದು ರೈತರಲ್ಲ, ಬದಲಾಗಿ ಕಾರ್ಪೋರೇಟ್ ಫಾರ್ಮಿಂಗ್‍ನಲ್ಲಿರುವ ದೊಡ್ಡ ರೈತರು.

2016ರಲ್ಲಿ 8000 ಕೋಟಿಗೂ ಮಿಕ್ಕಿದ ದುಡ್ಡು ಕ್ಲೈಮ್ ಮೂಲಕ ರೈತರಿಗೆ ಸಿಗದೆ ಚಲಾವಣೆಗೆ ಬಂದಿಲ್ಲ’.

ಇಂತಹ ಇನ್ನೂ ಅನೇಕ ಅಪಸವ್ಯಗಳನ್ನು ದಾಖಲಿಸುವ ರಾಜಾರಾಂ ಕೊನೆಗೆ ಹೇಳುವ ಮಾತು ಬಹಳ ಮುಖ್ಯವಾದುದು.

“ಈ ಸಿಎಜಿ ವರದಿ ಬಂದಿರುವುದು ಕೇವಲ 9 ರಾಜ್ಯಗಳ ಆಡಿಟ್ ನಡೆಸಿ. ಉಳಿದ ರಾಜ್ಯಗಳ ಆಡಿಟೇ ನಡೆದಿಲ್ಲ (ಪು. 156-157)

ಯಾವ ಆಕ್ರೋಶವೂ ಇಲ್ಲದೆ ರಾಜಾರಾಂ ಮುಂದಿಡುವ ಸಿಎಜಿ ವರದಿಯ ಈ ಮುಖ್ಯ ಅಂಶಗಳು ಓದುಗನ ಬುದ್ಧಿ ಮತ್ತು ಹೃದಯವನ್ನು ತಣ್ಣಗೆ ಕೊರೆಯುವುದಕ್ಕೆ ತೊಡಗುತ್ತವೆ. ಪಕ್ಷನಿಷ್ಠೆಯನ್ನು ಮೀರಿದ ನಿಜವಾದ ದೇಶಭಕ್ತರು ಮಮ್ಮಲ ಮರುಗುವಂತೆ ಇದೆ ಈ ಲೇಖನ.

ಅದೇ ಪುಸ್ತಕದ “ಫ್ಲಾಟ್‍ಫಾರಂ ತಯಾರಿಲ್ಲದೆ ನುಗ್ಗಿದ ರೈಲಿದು GST”(145-148) ಎಂಬ ಲೇಖನದಲ್ಲಿ ರಾಜಾರಾಂ ನಮ್ಮ ಸದ್ಯದ ಅ-ನಾಯಕತ್ವವನ್ನು ವಿಶ್ಲೇಷಿಸುವ ಕ್ರಮ ಯಾವ ಸೂಕ್ಷ್ಮ ರಾಜಕೀಯ ಚಿಂತಕನಿಗೂ ಕಡಿಮೆಯದ್ದಲ್ಲ. ದೇಶವಾಸಿಗಳ ಕಿವಿಗೆ ಮತ್ತೆಮತ್ತೆ ಬಂದು ಅಪ್ಪಳಿಸಿದ ಕರ್ಣಾನಂದಕರ ಘೋಷಣೆಗಳೇನು, ಸತ್ಪ್ರಜೆಗಳು ಮುಗ್ಧವಾಗಿ ನಂಬಿದ್ದೇನು, ಪ್ರಪಂಚದುದ್ದಕ್ಕೂ ಡಂಗುರ ಬಾರಿಸಿದ್ದೇನು, ಮಾಧ್ಯಮಗಳು ಸೃಷ್ಟಿಸಿದ್ದೇನು ಮತ್ತು ಹಸಿಹಸಿ ವಾಸ್ತವ ಏನು ಎಂಬುದಕ್ಕೆ ಕೈಗನ್ನಡಿಯಂತಿದೆ ಈ ಲೇಖನ. ‘ಡಿಜಿಟಲ್ ಇಂಡಿಯಾ’ ಆಗುವುದರ ಧಾವಂತದಲ್ಲಿರುವ ನಮ್ಮ ಮುಂದೆ ದುರ್ಗಮವಾದ ಕಷ್ಟ-ನಷ್ಟದ ದಾರಿ ಹೇಗೆ ನಿಡಿದಾಗಿ ಮೈ ಚಾಚಿ ಮಲಗಿದೆ ಎಂಬುದನ್ನು ಕೆಲವೇ ಕೆಲವು ಸಾಲುಗಳಲ್ಲಿ ತೋರಿಸುತ್ತಾರೆ ರಾಜಾರಾಂ. ಸದ್ಯದ ರಾಜಕೀಯ ನಾಯಕತ್ವವನ್ನು ಸಕಾರಣವಾಗಿ ವಿಮರ್ಶೆಗೊಡ್ಡುವುದರೊಂದಿಗೆ ವಿರೋಧಪಕ್ಷಗಳಿಗಿರುವ ಅಧಿಕಾರದ ಹಪಾಹಪಿತನವನ್ನೂ ರಾಜಾರಾಂ ಇಲ್ಲೇ ಕುಟುಕುತ್ತಾರೆ. ಪುಟ 148ರಲ್ಲಿರುವ ಫೇಸ್‍ಬುಕ್‍ನಲ್ಲಿ ಅವರು ಬರೆದ ಮಳ್ಳೀ..ಮಳ್ಳೀ.. “ಮಂಚ”ಕ್ಕೆ ಕಾಲು ಎಷ್ಟು..? ಎಂಬ ಪುಟ್ಟ ಟಿಪ್ಪಣಿ ಭಾರತದ ವಿರೋಧಪಕ್ಷಗಳ ಬೌದ್ಧಿಕ ದಿವಾಳಿತನವನ್ನು ಮೆತ್ತಗೆ ಬಯಲಿಗೆಳೆಯುತ್ತದೆ. ವರ್ತಮಾನದ ಆಳುವ ನಾಯಕತ್ವ ಮತ್ತು ಪ್ರತಿ ನಾಯಕತ್ವವನ್ನು ಒಂದರ ಪಕ್ಕ ಇನ್ನೊಂದನ್ನು ಇಟ್ಟು ಕ್ರಿಟಿಕಲ್ ಆಗಿ ನೋಡುವ ಈ ವಿನ್ಯಾಸದಿಂದ ರಾಜಾರಾಂ ನಿಜವಾದ ಪತ್ರಕರ್ತನಿಗಿರಬೇಕಾದ ಸಮದರ್ಶೀ ಗುಣವನ್ನು ಒಂದು ಮೌಲ್ಯವಾಗಿಸುತ್ತಾರೆ.

‘ನಮ್ದೇಕತೆ’ ಪುಸ್ತಕದಲ್ಲಿರುವ ಬಹಳ ಮಹತ್ತ್ವದ ಭಾಗ ಎಂದರೆ ರಾಜಾರಾಂ ಅವರ ಭಾಷಣವೊಂದರ ಲಿಖಿತ ರೂಪ. ಉಡುಪಿ ಜಿಲ್ಲಾ ರೈತ ಸಂಘದ ಸದಸ್ಯರೂ ಆಗಿರುವ ರಾಜಾರಾಂ ಸೆಪ್ಟೆಂಬರ್ 2019ರಲ್ಲಿ ಉಡುಪಿಯಲ್ಲಿ ನಡೆದ ಜಿಲ್ಲಾ ರೈತಸಂಘದ ಸಭೆಯೊಂದರಲ್ಲಿ ಆಡಿದ್ದ ಮಾತುಗಳು ಕೃಷಿ ಬದಲಾವಣೆಯ ಸುಳಿವುಗಳು (ಪು.99) ಎಂಬ ಲೇಖನದಲ್ಲಿದೆ. ಈ ಭಾಷಣಕ್ಕೆ ಇರುವ ಮುನ್ನೋಟದ ಶಕ್ತಿ ಏನೆಂದರೆ ಇದು ಭಾರತ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆಗಿಂತ ಮೊದಲೇ ಇಂಥದ್ದೊಂದು ಆಘಾತವನ್ನು ನಿರೀಕ್ಷಿಸಿದ್ದು. ಭೂದಾಖಲೆಗಳ ಡಿಜಟಲೀಕರಣ ಯಾಕೆ ಆಗ್ತಿದೆ ಎಂಬುದನ್ನು ಮತ್ತು ಇದು ಯಾವುದರ ಮುನ್ಸೂಚನೆ ಎಂಬುದನ್ನು ಹೇಳುತ್ತ ರಾಜಾರಾಂ ಕಾರ್ಪೋರೇಟ್ ಫಾರ್ಮಿಂಗ್ ಬಂದರೆ ಏನಾಗಲಿದೆ ಎಂದು ಏಳು ಅಂಶಗಳನ್ನು ಪಟ್ಟಿ ಮಾಡುತ್ತಾರೆ.

ಇಲ್ಲಿಯ ತನಕ ಭೂಮಾಲಕ ಆಗಿದ್ದ ರೈತ ಭೂಹೀನ ಆಗಲಿದ್ದಾನೆ ಮತ್ತು ತನ್ನದೇ ಮಾಲಕತ್ವದ ಭೂಮಿಯಲ್ಲಿ ತಾನೇ ಕಾರ್ಮಿಕನಾಗಿ ದುಡಿಯಲಿದ್ದಾನೆ.

ದೊಡ್ಡ ಕಂಪೆನಿಗಳು ಭೂಮಿಯ ಮಣ್ಣಿನ ಗುಣ ಆಧರಿಸಿ ಅಲ್ಲಿ ಏನು ಬೆಳೆಯಬೇಕೆಂದು ತೀರ್ಮಾನಿಸಿ, ಊರೂರು ಗಾತ್ರಕ್ಕೇ ಒಂದೇ ವಿಧದ ಬೆಳೆ ಪದ್ಧತಿ ಅನುಸರಿಸುವುದರಿಂದ, ಸ್ಥಳೀಯ ಬೆಳೆ ವೈವಿಧ್ಯತೆಗಳು ಮ್ಯೂಸಿಯಂಗಳಿಗೆ ಸೀಮಿತ ಆಗಲಿವೆ.

ಕಾರ್ಪೊರೇಟ್ ಫಾರ್ಮಿಂಗ್‍ಗೆ ಅಧಿಕ ಇಳುವರಿಯ ಜೆನೆಟಿಕಲಿ ಮಾಡಿಫೈಡ್ ಬೀಜಗಳು ಬರಲಿವೆ. ಅವುಗಳ ಜೊತೆ ಅವುಗಳ ಸ್ವಾಮ್ಯದ ಕಾನೂನು ಇತ್ಯಾದಿಗಳೂ ನಿಮ್ಮೂರಿಗೆ ಬರಲಿವೆ.

ಸ್ಥಳೀಯ ಕಿರಾಣಿ ಅಂಗಡಿಗಳು ಹೋಗಿ, ಆ ಜಾಗದಲ್ಲಿ ಈ ಕಂಪೆನಿ ಮಾಲ್‍ಗಳು ಬಂದು ಕುಳಿತಾಗ, ಆಹಾರವಸ್ತುಗಳ ಬೆಲೆಯ ಮೇಲೆ ಈ ಕಂಪೆನಿಗಳಿಗೇ ಮೊನೊಪೊಲಿ ಇರುತ್ತದೆ. ಇದರಿಂದಾಗಿ ಕೂಲಿಯನ್ನು ನೆಚ್ಚಿರುವ ಭೂರಹಿತರು, ಮಹಿಳೆಯರು ಮತ್ತಿತರ ವರ್ಗಗಳಲ್ಲಿ ಬದುಕು ಕಷ್ಟ ಆಗಲಿದೆ. ಅವರ ಆಹಾರದ ಕೊರತೆ, ಸಾಮಾಜಿಕ ಸ್ಥಾನಮಾನದ ಸಮಸ್ಯೆಗಳು ಎದುರಾಗಲಿವೆ.

ಒಂದು ಹಂತ ದಾಟಿದ ಬಳಿಕ ಈ ಕಂಪನಿಗಳು ತಮ್ಮ ಲಾಭದ ಮೇಲೆ ಕಣ್ಣಿಟ್ಟು ಹೊರಟರೆ, ರೈತರಿಗೆ ಕೊಡಬೇಕಾದ್ದನ್ನು ನ್ಯಾಯಬದ್ಧವಾಗಿ ಕೊಡುತ್ತವೆ ಎಂಬ ಗ್ಯಾರಂಟಿ ಇಲ್ಲ.

ಸ್ಥಳೀಯವಾವಾಗಿ ಅವಶ್ಯಕತೆ ಇರುವ ಆಹಾರವಸ್ತುಗಳಲ್ಲಿ ಲಾಭ ಇಲ್ಲ ಎಂದಾದರೆ, ಕಂಪನಿಗಳು ಲಾಭ ತರುವ, ಎಕ್ಸ್ ಪೋರ್ಟ್ ಮಾಡಬಹುದಾದ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯತೊಡಗಬಹುದು. ಇದು ಸ್ಥಳೀಯ ಆಹಾರ ವಿನ್ಯಾಸದ ಮೇಲೇ ಪರಿಣಾಮ ಬೀರಬಹುದು.

ಈ ಏಳೂ ಅಂಶಗಳನ್ನು ಹೊಟ್ಟೆಗೆ ಅನ್ನವನ್ನಷ್ಟೇ ತಿನ್ನುವ ಯಾರೇ ಆದರೂ ಒಮ್ಮೆ ಕಣ್ಮುಂದೆ ತಂದುಕೊಂಡರೆ ಅವರು ಹಾಯಾಗಿ ಕಣ್ಣು ಮುಚ್ಚಿ ನಿದ್ದೆ ಮಾಡಿಯಾರೇ? ಎಲ್ಲವೂ ಚೆನ್ನಾಗಿದೆ, ಎಲ್ಲರೂ ನೆಮ್ಮದಿಯಿಂದಿದ್ದಾರೆ ಎಂದು ಬಡಬಡಿಸಿಯಾರೇ? ಕಾರ್ಪೋರೇಟ್ ಫಾರ್ಮಿಂಗ್ ಆರಂಭವಾದ ಬಳಿಕ ಏನೆಲ್ಲ ಅವಘಡಗಳು ಸಂಭವಿಸಬಹುದು ಮತ್ತು ನಮ್ಮ ಸಾಮಾಜಿಕ-ರಾಜಕೀಯ-ಆರ್ಥಿಕ ವಿನ್ಯಾಸಗಳು ಹೇಗೆ ಪಲ್ಲಟಗೊಳ್ಳಬಹುದು ಎಂಬುದರ ಮುಂಗಾಣ್ಕೆ ಈ ಲೇಖನದಲ್ಲಿದೆ.

ಸಮಸ್ಯೆಯನ್ನು ಮಾತ್ರ ವಿಷದ ಪಡಿಸುವವರಲ್ಲ ರಾಜಾರಾಂ. ಸಹಕಾರಿ ಸಂಘಗಳು ತುಳಿಯಬೇಕಾದ ಹೊಸ ದಾರಿ ಏನು ಎಂಬುದನ್ನೂ ಅವರು ವಿವರಿಸುತ್ತಾರೆ. ಗ್ರಾಮ/ತಾಲ್ಲೂಕು ಮಟ್ಟದಲ್ಲಿ ಫಾರ್ಮರ್ ಪ್ರೆಡ್ಯೂಸಿಂಗ್ ಕಂಪನಿಗಳನ್ನು ಸಹಕಾರಿ ತತ್ವದಲ್ಲಿ ಸ್ಥಾಪಿಸಿ, ಅದರ ಮೇಲಿನ ಹಿಡಿತ ಸ್ಥಳೀಯರಿಗೆ ತಪ್ಪಿ ಹೋಗದಂತೆ, ಕಾರ್ಪೋರೇಟ್ ಗಳು ಬಂದು ನಮ್ಮ ಊರಿನ ತೀರ್ಮಾನವನ್ನು ಅವರು ತೆಗೆದುಕೊಳ್ಳದಂತೆ ನಾವು ನಮ್ಮ ಸಂಘವನ್ನು ನಡೆಸಬೇಕು ಎಂಬುದನ್ನು ಅವರು ಹೇಳುತ್ತಿದ್ದಾರೆ. ಇದೇನೋ ಹೊಸ ವಿಚಾರ ಅಲ್ಲ. ಆದರೆ ಅದನ್ನು ಪರಿಣಾಮಕಾರಿಯಾಗಿ ಮಂಡಿಸುವುದರಲ್ಲಿ ಹೊಸತನ ಇದೆ.

ರಾಜಾರಾಂ ಅವರ ಎಲ್ಲ ಮಾತುಗಳನ್ನು ಪರಿಕಲ್ಪನಾತ್ಮಕವಾಗಿ ಹೇಳುವುದಿದ್ದರೆ,‘ಅಭಿವೃದ್ಧಿ ಎಂಬುದು ಬಂಡವಾಳಶಾಹಿಯ ಮಾತು, ಸರ್ವೋದಯ ಎಂಬುದು ಸಮಾಜವಾದದ ಮಾತು’ ಎಂಬ ಒಂದೇ ವಾಕ್ಯದಲ್ಲಿ ಹೇಳಬಹುದು. ಆದರೆ ರಾಜಾರಾಂ ಅವರಿಗೆ ಒಬ್ಬ ಪತ್ರಕರ್ತನಾಗಿ ತಾನೇನು ಮಾಡಬೇಕು ಎಂಬುದು ಗೊತ್ತಿದೆ. ಹಾಗಾಗಿ ಅವರು ಪರಿಕಲ್ಪನಾತ್ಮಕವಾದ (ಕಾನ್ಪೆಪ್ಚುವಲ್) ಮಾತನ್ನು ವಿವರಣಾತ್ಮಕವಾದ (ಡಿಸ್ಕ್ರಿಪ್ಟಿವ್) ಮಾತಾಗಿ ಅನುವಾದಿಸುತ್ತಾರೆ. ‘ಅಭಿವೃದ್ಧಿ’ ಎನ್ನುವುದು ಹೇಗೆ ಬಂಡವಾಳಶಾಹಿಯಾಗುತ್ತದೆ ಮತ್ತು ‘ಸರ್ವೋದಯ’ ಎನ್ನುವುದು ಹೇಗೆ ಸಮಾಜವಾದವಾಗುತ್ತದೆ ಎಂಬುದನ್ನು ಬಿಡಿಸಿಬಿಡಿಸಿ ಹೇಳುತ್ತಾರೆ. ಹಳೆಯ ಲೋಕಾನುಭವವನ್ನು ಸಂಕೀರ್ಣವಾದ ಹೊಸ ಸವಾಲುಗಳ ಇದಿರು ಮುಖಾಮುಖಿ ಮಾಡಿದಾಗಲೇ ಹಳೆಯ ವಿಚಾರದ ತೂಕ-ಮಹತ್ವ ತಿಳಿದು ಬರುವುದಲ್ಲವೇ?

ಭಾಷಣದ ಆರಂಭದಲ್ಲಿ ರಾಜಾರಾಂ ರೈತ ಸಂಘಟನೆ ಎಂಬುದು ಮೂಲತಃ ಕಷ್ಟ-ಸುಖ-ಜ್ಞಾನ-ಅನುಭವವನ್ನು ಹಂಚಿಕೊಳ್ಳುವ ಸಮುದಾಯ ಸಂಘಟನೆ ಆಗಬೇಕು ಎಂದು ಹೇಳುತ್ತಾರೆ. ಭಾಷಣದುದ್ದಕ್ಕೂ ಅವರು ಮಾತಾಡಿದ್ದು ಕಷ್ಟ-ಸುಖದ ಮಾತುಗಳನ್ನೇ. ನಮ್ಮ ದೈನಂದಿನ ಕಷ್ಟ-ಸುಖದ ಮಾತುಗಳನ್ನೂ ನಮ್ಮ ರಾಜಕೀಯವೇ ನುಂಗಿ ನೊಣೆದಿರುವುದನ್ನು ನಾವು “ಒಳ್ಳೆಯ ದಿನ” (ಅಚ್ಚೇ ದಿನ್) ಎಂದು ಕರೆಯಬಹುದೇ ಎಂಬ ಪ್ರಶ್ನೆಯನ್ನು ನಮ್ಮೊಳಗೆ ಹುಟ್ಟಿಸುವಂತೆ ಇದೆ ಈ ಭಾಷಣ.

ರಾಜಾರಾಂ ಅವರ ಎಲ್ಲ ಬರೆವಣಿಗೆಗಳಲ್ಲಿ ಕಂಡು ಬರುವ ಬಹಳ ಪ್ರಮುಖವಾದ ಅಂಶ ಭಾವಾವೇಶವಿಲ್ಲದೆ ಅಂಕಿ-ಅಂಶ ಸಹಿತವಾಗಿ ಮತ್ತು ತಾರ್ಕಿಕವಾಗಿ ವಾದ ಮಂಡಿಸುವ ಕ್ರಮ. ಪತ್ರಕರ್ತರಾದವರು ಭಾವಾವೇಶದಿಂದ ಕುಣಿದಾಡಿದರೆ ಜನರಿಗೆ ರಂಜನೆ ಸಿಗುತ್ತದೆಯೇ ಹೊರತು ಚಿಂತನೆಯಲ್ಲ ಎಂಬುದನ್ನು ರಾಜಾರಾಂ ತಮ್ಮ ಸಹೋದ್ಯೋಗಿಗಳನ್ನು ನೋಡಿಯೇ ಕಲಿತಿದ್ದಾರೆ. ಹಾಗಾಗಿ ಅವರ ಯಾವ ಬರೆಹಗಳಲ್ಲೂ ಸ್ವ-ಪ್ರಶಂಸೆ ಇಲ್ಲ, ಬೇಕಾಬಿಟ್ಟಿ ಉಪದೇಶಗಳಿಲ್ಲ, ಕರೆ ಕೊಡುವುದು ಮೊದಲೇ ಇಲ್ಲ. ತನಗಿಂತ ಭಿನ್ನವಾಗಿ ಯೋಚಿಸುವವರನ್ನು ಏಕಾಏಕಿ ತನ್ನ ರಾಜಕೀಯ ವಿರೋಧಿಗಳ ಜೊತೆಗೆ ಸಂಲಗ್ನಗೊಳಿಸುವ ಅವಿವೇಕಿತನವೂ ಇಲ್ಲ. ಇವೆಲ್ಲದರ ಬದಲಿಗೆ ಗಂಭೀರವಾದ ಚಿಂತನೆಯನ್ನು ನಡೆಸಿದ ಬಳಿಕ ಉದಿಸಿ ಬರುವಂತಹ ವಿವೇಕದ ಮಾತುಗಳಿವೆ. ಈ ಪುಸ್ತಕಗಳಲ್ಲಿ ಇವಿಷ್ಟೇ ಅಲ್ಲ ಕಿಚಾಯಿಸುವ ಶೀರ್ಷಿಕೆಗಳೂ, ವ್ಯಂಗ್ಯದ ಮಾತುಗಳೂ ಧಾರಾಳವಾಗಿವೆ. ಆದರೆ ರಾಜಾರಾಂರವರ ಚುಚ್ಚು ಮಾತುಗಳು ತನ್ನ ದೇಶದ, ತನ್ನ ಸಮಾಜದ ಕುರಿತ ಅಪ್ಪಟ ಕಾಳಜಿಯಿಂದ ಒಡಮೂಡಿರುವ ಚುಚ್ಚುಮದ್ದು ಆಗಿವೆಯೇ ವಿನಃ ಅವರ ಬರವಣಿಗೆಯಲ್ಲಿ ನಂಜು ಇಲ್ಲ. ವಿಷ ಇಲ್ಲದೆ ವಿಷಯವನ್ನು ಹೇಗೆ ಮಂಡಿಸಬಹುದು ಎಂಬುದನ್ನು ಕಲಿಯುವುದಕ್ಕಾದರೂ ರಾಜಾರಾಂ ಅವರ ಈ ಪುಸ್ತಕಗಳನ್ನು ಓದಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಪಿಸುವ ನಮ್ಮ ವ್ಯವಸ್ಥೆ ಇಡಿಯ ಕರ್ನಾಟಕದ ಪದವಿ ಕಾಲೇಜುಗಳ ಪಠ್ಯಕ್ರಮದಲ್ಲಿ ಇಂತಹ ಪುಸ್ತಕಗಳನ್ನು ಒಳಗೊಂಡಿದ್ದೇ ಆದಲ್ಲಿ ಮುಂದಿನ ತಲೆಮಾರುಗಳ ಭಾಷೆ ಮತ್ತು ಚಿಂತನೆ ನೇರ್ಪುಗೊಂಡೀತು.

ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡ ಸಾಹಿತ್ಯ ಸಂಶೋಧನೆಯ ನಿನ್ನೆ-ಇಂದು-ನಾಳೆಗಳ ‘ಮಾರ್ಗಾನ್ವೇಷಣೆ’
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ: ಭಾಗ-4

ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 3
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 2
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 1
‘ಸ್ವತಂತ್ರ ಭಾರತ’ ಎಂಬ ಇತ್ಯರ್ಥವಾಗದ ವಿದ್ಯಮಾನ
ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ–ಬೃಹತ್ ಕಾದಂಬರಿಯೊಂದರ ಮೊದಲ ಪುಟಗಳು
ಅನೇಕಲವ್ಯ – 3
ಅನೇಕಲವ್ಯ-2
ಅನೇಕಲವ್ಯ-1
‘ಇಂದಿರಾಬಾಯಿ’ ಯ ರಾಜಕೀಯ ಓದು

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...