ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ

Date: 14-06-2022

Location: ಬೆಂಗಳೂರು


'ಮುತ್ಯಾ ನನ್ನ ಹಾಗೆ ಚಿಕ್ಕ ಹುಡುಗಿ... ಅಲ್ಲಲ್ಲ ನಾನೇ ಆಗಿ ನನ್ನೆದುರು ಕುಳಿತಿದ್ದಾಳೆ! ಅವಳಲ್ಲಿ ಸಾಕ್ಷಾತ್ತು ನನ್ನನ್ನೆ ನೋಡಿದ್ದೆ. ‘ಒಳಗಿನ ಶಕ್ತಿಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡು, ನೀನು ನಾನಾಗುತ್ತೀಯ. ಹೊರಗಿನ ಶಕ್ತಿಗೆ ಇಂಬುಕೊಡು ಎಲ್ಲಾ ಬಾಗಿಲುಗಳು ತೆರೆಯುತ್ತವೆ’ ಎಂದಳು' ಎಂದು ತಮ್ಮ ಮುತ್ಯಾನ ನೆನಪುಗಳನ್ನು ತೆರೆದಿಡುತ್ತಾರೆ ಲೇಖಕಿ ಪಿ ಚಂದ್ರಿಕಾ. ಅವರು ತಮ್ಮ 'ತೇಲುವ ಪಾದಗಳು' ಅಂಕಣದಲ್ಲಿ ಬಾಲ್ಯದ ಅನುಭವಗಳೊಂದಿಗೆ ಬೆರೆತುಹೋಗಿರುವ ಮುತ್ಯಾ ಬಗ್ಗೆ ಬರೆದಿದ್ದಾರೆ.

'ಮಗೂ ಆತ್ಮ ಶಕ್ತಿಗೂ ಮಿಗಿಲಾಗಿದ್ದು ಮತ್ತೊಂದಿದೆ ಅನ್ನಿಸೊಲ್ಲ. ನನ್ನ ಪ್ರಕಾರ ಅದೇ ನಮ್ಮ ಕೈ ಹಿಡಿದು ನಡೆಸುವ ದೇವರು. ಅದು ಸುಖೋಷ್ಣ. ಹೇಗೆ ಗೊತ್ತಾ ಚಳಿಗಾಲದಲ್ಲಿ ನಿನ್ನದೇ ಎರಡು ಕೈಗಳನ್ನು ಒತ್ತಿಟ್ಟುಕೋ ನಡುಕವನ್ನು ಕಡಿಮೆ ಮಾಡಿಬಿಡಬಲ್ಲ ಚೈತನ್ಯ ಹುಟ್ಟುತ್ತದೆ. ಬಿಡಿಬಿಡಿಯಾಗಿದ್ದ ನಿನ್ನ ಕೈಗಳು ಕೊಡಲಾಗದ್ದನ್ನು ನಿನ್ನದೇ ಎರಡೂ ಕೈ ಸೇರಿ ಕೊಟ್ಟಿತ್ತಲ್ಲ! ಇದಕ್ಕೆ ಏನನ್ನುತ್ತೀಯಾ? ಒಂದು ತಿಳಿದುಕೋ ಬೇರೆಯವರು ಇದನ್ನು ಕೊಡಲಾರರು. ಮತ್ತು ಎಷ್ಟು ದೂರವೂ ಅವರು ಬರಲಾರರು ಕೂಡಾ. ಹಾರುವ ಹಕ್ಕಿಗೆ ಎರಡು ಬದಿಯ ರೆಕ್ಕೆಗಳು ಕೊಡುವ ವಿಶ್ವಾಸ ಅದು. ಅದನ್ನು ಈ ನಾಗಪ್ಪ ಶಾಸ್ತ್ರಿ ಕೊಡುತ್ತಾನಂತೆ; ನಿನ್ನ ತಾತ ತೆಗೆದುಕೊಳ್ಳುತ್ತಾನಂತೆ. ಅಹಂಕಾರಿಗಳು ಮಾತ್ರ ಆಡುವ ಮಾತದು. ಪ್ರಕೃತಿ ನಮಗೆ ಕೊಡುತ್ತದೆ ನಾವು ತೆಗೆದುಕೊಳ್ಳಬೇಕು. ಇದೆಲ್ಲಾ ನಿರ್ಧಾರ ಮಾಡುವುದು ನಾನು ನೀನು ಅಂದುಕೊಂಡಿದ್ದೀಯಾ? ಅಲ್ಲ ಮಗೂ, ನೀನು ಯಾವತ್ತೂ ಪ್ರಕೃತಿಯ ಆಯ್ಕೆ. ಈ ಭೂಮಿಯ ಮೇಲೆ ಇದ್ದ ಅಳಿದ ಮತ್ತು ಇರುವ ಯಾವ ಜೀವವೂ ಇದನ್ನು ಅಲ್ಲಗಳೆದಿಲ್ಲ ಮನುಷ್ಯನೊಬ್ಬನನ್ನು ಹೊರತುಪಡಿಸಿ...’

ಮುತ್ಯಾ ಮಾತಾಡುತ್ತಲೇ ಇದ್ದಳು. ಯಾಕೆ ಮುತ್ಯಾ ಕೆಲವೊಮ್ಮೆ ವಿಪರೀತ ಮಾತಾಡುತ್ತಾಳೆ?! ಅಚ್ಚರಿ ಎಂದರೆ ಅವಳು ಹೇಳುವುದು ದೊಡ್ಡ ದೊಡ್ಡ ಮಾತಾದಾಗಲೂ ನನ್ನ ಸಣ್ಣ ತಲೆಯೊಳಗೆ ಯಾವುದೋ ಬೆಳಕು ಹರಿಯುವಂತೆ ಮಾಡುತ್ತಿತ್ತು. ಇದರ ಮೇಲೆ ಹೇಳುತ್ತಾಳೆ, 'ನಾನು ನಿನ್ನ ಗುರುವಲ್ಲವೆಂದು’. ಹಾಗಾದರೆ ಅವಳೇನು ಎನ್ನುವ ಪ್ರಶ್ನೆ ನನ್ನ ಕಾಡುತ್ತಲೇ ಇತ್ತು.

ಅವಳೇನು? ಅವಳ್ಯಾರು? ಅವಳೆಲ್ಲಿಂದ ಬಂದಳು? ಅವಳ್ಯಾಕೆ ಬಂದಳು? ನನ್ನ ಮನಸ್ಸಿನಲ್ಲಿ ಗೊಂದಲವೋ ಗೊಂದಲ. ಮುತ್ಯಾ ಪಕ್ಕದಲ್ಲಿ ಗೊರಕೆ ಹೊಡೆಯುತ್ತಿದ್ದಳೆ. ಹಗ್ಗದ ಮಂಚ ಹಳೆಯ ಸೀರೆಗಳನ್ನು ತುಂಬಿಸಿಕೊಂಡು ತೊಟ್ಟಿಲಾಗುತ್ತದೆ. ಅದರಲ್ಲಿ ಒಬ್ಬರೇ ಮಲಗಲು ಸಾಧ್ಯ. ಆದರೆ ನಾನು ಮುತ್ಯಾ ಇಬ್ಬರೂ ಮಲಗಲು ಆಗುತ್ತಿತ್ತು ಕಾರಣ ಕೃಶವಾದ ಅವಳ ದೇಹ. ಅವಳ ಗೊರಕೆಯ ಸದ್ದಿಗೆ ದೂರದಲ್ಲಿ ಗೂಬೆಯ ಧ್ವನಿಯೊಂದು ಮಾರ್ದನಿಕೊಟ್ಟಂತೆ ನುಡಿಯಿತು. ಮುತ್ಯಾ ಅದರೊಂದಿಗೆ ಮಾತಾಡಲಿಕ್ಕೆ ಇಷ್ಟೊಂದು ಜೋರಾಗಿ ಗೊರಕೆ ಹೊಡೆಯುತ್ತಿದ್ದಾಳೆ ಅನ್ನಿಸಿತು. ಸುತ್ತಾ ಗವ್ವೆನ್ನುವ ಕತ್ತಲೆ, ಮಿಂಚುಹುಳುಗಳು ದಾರಿ ತೋರಿಸುವ ಹಾಗೆ ಹರಿದಾಡುತ್ತಿದ್ದವು. ಸಂಜೆಯಾಯಿತೆಂದರೆ ಆರಿ ಹಾಕಿದ್ದ ಅಮ್ಮಮ್ಮ ಬಟ್ಟೆಗಳನ್ನು ತೆಗೆದಿಡುವಂತೆ ಹೇಳುತ್ತಿದ್ದಳು. ಮಿಂಚುಹುಳುಗಳು ಬೆಳಗಾಗುವುದರೊಳಗೆ ಬಟ್ಟೆಗಳನ್ನು ತಮ್ಮ ಬಾಲದಿಂದ ಸುಡುತ್ತವೆ ಎಂದು ಅವಳು ನಂಬಿದ್ದಳು. ನಾನಿದನ್ನು ಸುಳ್ಳೆಂದು ಅವಳೊಂದಿಗೆ ವಾದ ಮಾಡಿದ್ದೆ. ಯಾಕೆಂದರೆ ನಮ್ಮ ಮೇಷ್ಟ್ರು ಹೇಳಿದ್ದರು, `ರಾಸಾಯನಿಕ ಕ್ರಿಯೆಯಿಂದಾಗಿ ಈ ಬೆಳಕು ಅದರ ಬಾಲದಲ್ಲಿ ಮೂಡುತ್ತದೆ’ ಎಂದು. ಒಂದು ವೇಳೆ ಅಮ್ಮಮ್ಮನೇ ಸರಿಯಾದರೆ, ಇಂಥಾ ಹುಳುಗಳು ನನ್ನ ತಾಕಿದರೆ ನನ್ನ ಮೈ ಸುಡುವುದಿಲ್ಲವಾ? ಮಿಂಚುಹುಳುವೊಂದು ಮುತ್ಯಾನ ಸೀರೆಯ ಮೇಲೆ ಕೂತು ಬೆಳಕು ಚೆಲ್ಲುತ್ತಿತ್ತು. `ಬೆಳಗಾಗಿ ಎದ್ದು ನೋಡುತ್ತೇನೆ ಮುತ್ಯಾನ ಸೀರೆ ಸುಡದಿದ್ದರೆ ನಾನು ಗೆದ್ದ ಹಾಗೆ. ಸುಟ್ಟಿದ್ದರೆ ಅಮ್ಮಮ್ಮ ಗೆದ್ದ ಹಾಗೆ’ ಎಂದುಕೊಳ್ಳುತ್ತಾ ಅದನ್ನು ಓಡಿಸಲು ಹೋದೆ. ಉದ್ದೇಶವಿಲ್ಲದೆ ಮುತ್ಯಾನಿಗೆ ನನ್ನ ಕೈಯ ಪೆಟ್ಟುಬಿತ್ತು. ಅಷ್ಟು ದೀರ್ಘವಾಗಿ ಗೊರಕೆಯನ್ನು ಹೊಡೆಯುತ್ತಾ ಮಲಗಿದ್ದ ಮುತ್ಯಾ ನನ್ನ ಸಣ್ಣ ತಾಕಿಗೆ ಎಚ್ಚರಗೊಂಡುಬಿಟ್ಟಳು. ಸರ್‍ರನೆ ತಿರುಗಿ ಏನಾಯಿತು ಎಂದಳು. ಅವಳ ಮಾತು ಕಿವಿದೆರೆಗೆ ಬಿದ್ದರೂ ನನ್ನ ಕಣ್ಣುಗಳು ಕೇಂದ್ರೀಕೃತವಾಗಿತ್ತು.

`ನಾನು ಯಾರು ಎನ್ನುವುದೇ ಪ್ರಶ್ನೆಯಾದರೆ ನೋಡಿಕೋ’ ಎನ್ನುವಂತಿತ್ತು ಇಡೀ ದೃಶ್ಯ. ಕೃಶವಾಗಿದ್ದ ಅವಳ ಎದೆಗಳನ್ನು ಎಷ್ಟು ಸಲ ನೋಡಿಲ್ಲ? ಆ ದೃಶ್ಯಕ್ಕೂ ನಾನೀಗ ನೋಡುತ್ತಿರುವ ದೃಶ್ಯಕ್ಕೂ ಒಂದಕ್ಕೊಂದು ಸಂಬಂಧವಿದೆಯಾ? ಎಂದರೆ ಯಾವ ಸಂಬಂಧವೂ ಇಲ್ಲ. ಚಿತ್ರವತ್ತಾಗಿ ಅವಳೆದೆಯ ಮೇಲೆ ಘನೀಭವಿಸಿದ ಆ ಎರಡು ಸಂಗತಿಗಳು ನನ್ನ ಕಣ್ಣೊಳಗೆ ಇಳಿದೂ ಕಣ್ಣು ಮುಚ್ಚಿದರೂ ಪ್ರಖರವೇ ಆಗುತ್ತಿತ್ತು.

`ಏನಾಯಿತು?’ ಎಂದು ತಿರುಗಿದವಳ ಎದೆಯ ಮೇಲಿನ ಸೆರಗು ಜಾರಿತ್ತು. ಎದೆಗಳ ಮೇಲೆ ಒಂದೆಡೆ ಸೂರ್ಯ, ಇನ್ನೊಂದೆಡೆಗೆ ಚಂದ್ರ ದೀಪ್ತವಾಗಿದ್ದರು. ಬತ್ತಿದೆದೆಗಳ ಮೇಲೆ ಈ ಚಿತ್ತಾರ ಹೇಗೆ ಬಂದಿತು? ಆಕಾಶದಲ್ಲಿ ನಕ್ಷತ್ರಗಳೆಲ್ಲಾ ಒಂದರ ಪಕ್ಕ ಒಂದು ಕೈ ಜೋಡಿಸಿಕೊಂಡು, ಓಲಾಡತೊಡಗಿದವು. ಢೀ ಕೊಡುತ್ತಾ ಚಿಮ್ಮಿ ಎಗರಿ ತೊನೆಯತೊಡಗಿದವು. ಹಾಲು ಬಣ್ಣದ ಬೆಳಕ ತೂರುತ್ತಾ `ನೋಡು ಇದೇ ಇದೇ ನಿನ್ನ ಮುತ್ಯಾ ಹೇಳಿದ್ದು’ ಎಂದು ತೋರಿಸತೊಡಗಿದವು. ಮುತ್ಯಾನ ಹಾಗೆ ನನ್ನ ಎದೆಯ ಮೇಲೂ ಸೂರ್ಯ ಚಂದ್ರ ಇರಬಹುದೇ ಇದ್ದರೆ ಏನು ಗತಿ? ಅನ್ನಿಸಿತು. ಒಂದೆಡೆ ತಣ್ಣಗೂ ಇನ್ನೊಂದೆಡೆಗೆ ಬಿಸಿಯೂ ಆದಂತೆನ್ನಿಸಿ ಮೆಲ್ಲಗೆ ಅಂಗಿಯನ್ನು ಜಗ್ಗಿ ನನ್ನ ಎದೆಗಳನ್ನು ನೋಡಿಕೊಂಡೆ. ಇದ್ಯಾವ ಭೀತಿ ನನ್ನ ಆವರಿಸಿತ್ತು? ದೇವರೇ ನನ್ನ ಎದೆಯ ಮೇಲೆ ಸೂರ್ಯ, ಚಂದ್ರರಿಲ್ಲದಿರಲಿ ಎನ್ನುವ ಪ್ರಾರ್ಥನೆ ನನ್ನ ಒಳಗನ್ನೂ ಮೀರಿ ಕೇಳತೊಡಗಿತೇನೋ ಎನ್ನುವ ಭಾಸವಾಯಿತು. ಮುತ್ಯಾ ಯಾವುದರ ಅರಿವೇ ಇಲ್ಲದೆ, `ಏನಾಯಿತು ಮಗು’ ಎಂದಳು ಮೂರನೆ ಸಲ. `ಮೊದಲು ನಿನ್ನ ಸೆರಗನ್ನು ಸರಿಮಾಡಿಕೋ ಮುತ್ಯಾ’ ಎಂದು ಕಣ್ಣನ್ನು ಮುಚ್ಚಿ ಅಳತೊಡಗಿದೆ. ಜೀಕುತ್ತಿದ್ದ ನಕ್ಷತ್ರಗಳು ಸ್ತಬ್ಧವಾದವು. ಸಳಸಳನೆ ಮಳೆಗರೆಯುತ್ತಿದ್ದ ಬೆಳಕೂ ಸ್ತಬ್ಧವಾಯಿತು. ಮುತ್ಯಾಗೆ ಆಗುತ್ತಿದ್ದುದರ ಬಗ್ಗೆ ಅರಿವಾಯಿತೋ ಏನೋ ಗೊತ್ತಿಲ್ಲ. ಸೀರೆಯ ಸೆರಗನ್ನು ತನ್ನ ಎದೆಯ ಮೇಲೆ ಹೊದ್ದುಕೊಂಡಳು. ಉಳಿದ, ಅಳಿದ ಮಕ್ಕಳ ಸಾಕ್ಷಿಯಾಗಿದ್ದ ಆ ಮೊಲೆಗಳೆರಡೂ ನಿನ್ನ ಮುತ್ಯಾ ಇದೇ ಎಂದು ಪರಿ ಪರಿಯಲ್ಲಿ ಹೇಳಿದ್ದವು. ಮುತ್ಯಾನ ಎದೆಗೆ ಮುಖ ಹಚ್ಚಲಿಕ್ಕ ಹೆದರಿ ನನ್ನ ಮಂಡಿಗಳ ಮಧ್ಯ ಮುಖವನ್ನು ಹುದುಗಿಸಿ ಅಳುತ್ತಿದ್ದೆ. ಮುತ್ಯಾ ಸಮಾಧಾನ ಮಾಡದೆ ನನ್ನ ನೋಡುತ್ತಿದ್ದವಳು ಮತ್ತೆ ಪಕ್ಕಕ್ಕೆ ಮಲಗಿ ಬಿಟ್ಟಳು. ಈಗ ನನಗೆ ಗೊಂದಲವೋ ಗೊಂದಲ. ಮುತ್ಯಾ ಮಲಗೇ ಇದ್ದಳಾ? ನಾನು ಇದುವರೆಗೂ ನೋಡಿದ್ದೆಲ್ಲವೂ ಭ್ರಮೆಯಾ? ಮುತ್ಯಾ ಬೇಕೆಂದೆ ಇದೆಲ್ಲಾ ಮಾಡುತ್ತಿದ್ದಾಳಾ? ಅವಳು ನನಗೆ ಏನನ್ನು ಹೇಳಬಯಸಿದ್ದಾಳೆ? ನಾನವಳಿಂದ ಏನನ್ನು ಕಲಿಯಬೇಕಿದೆ ಎನ್ನುವ ಎಲ್ಲ ಪ್ರಶ್ನೆಗಳು ಸಾಲುಸಾಲು ಗಟ್ಟಿ ನನ್ನ ಸುತ್ತುವರೆಯತೊಡಗಿದವು.

ಅಡುಗೆ ಮನೆಯಲ್ಲಿ ಎಂದಿನಂತೆ ತನ್ನ ಕೆಂಪು ಸೀರೆಯನ್ನು ಬೋಳು ತಲೆಯ ಮೇಲೆ ಹೊದ್ದು ಸೊಂಟಕ್ಕೆ ಸಿಕ್ಕಿ ಕೆಲಸ ಮಾಡುತ್ತಿದ್ದ ಮುತ್ಯಾನ ಬಳಿಗೆ ಹೋಗಿದ್ದೆ. ನನ್ನ ಸಮಸ್ಯೆಗಳು ಇತ್ತೀಚೆಗೆ ಜಟಿಲಗೊಳ್ಳತೊಡಗಿದ್ದವು. ಮುತ್ಯಾ ನನ್ನ ನೋಡಿ ನಕ್ಕು, `ನನ್ನ ಸೀರೆಯನ್ನು ಒಗೆದು ಆರಿ ಹಾಕಿದ್ದೇನೆ, ನಿನ್ನ ಅಮ್ಮಮ್ಮ ಹೇಳುವುದು ಸುಳ್ಳೇ’ ಎಂದು ನಕ್ಕಳು. `ಮುತ್ಯಾ ನನ್ನ ಯಾಮಾರಿಸ ಬೇಡ, ನೆನ್ನೆ ಆಗಿದ್ದು ಏನು? ಕನಸಾ ಭ್ರಮೆಯಾ?’, ನನ್ನ ಮಾತಿನ ಒಳ ಮರ್ಮವನ್ನು ಅರಿಯುವ ಹಾಗೆ ಮುತ್ಯಾ ಗಂಭೀರಳಾಗಿ, `ಹಣ್ಣನ್ನು ಕತ್ತರಿಸಿದರೆ ಒಳಗಿನ ತಿರುಳಿನ ದರ್ಶನ ಆಗುತ್ತೆ. ನಿನ್ನ ಕತ್ತರಿ ಹರಿತವಿರಬೇಕು’ ಎಂದಳು. ಹಾಗಾದರೆ ನೆನ್ನೆ ನಾನು ನೋಡಿದ್ದು ಬ್ರಹ್ಮಾಂಡವನ್ನೇ? ಎಂದೆ. ಯಾಕಾಗಿರಬಾರದು? ಎಂದಳು ಸಾರಿಗೆ ಉಪ್ಪು ಹಾಕುತ್ತಾ. ನಾನವಳನ್ನು ಮಡಿಯಲ್ಲಿದ್ದಾಳೆ ಎನ್ನುವುದನ್ನೂ ಮರೆತು ಕೈ ಹಿಡಿದು ಎಳೆಯುತ್ತಾ, `ನಿಜ ಹೇಳು ನೆನ್ನೆ ನಾನು ನೋಡಿದ್ದು ಸತ್ಯವಾ?’ ಎಂದೆ. ನಗುತ್ತಾ ನನ್ನ ಕೈಗಳನ್ನು ಪಕ್ಕಕ್ಕೆ ತಳ್ಳುತ್ತಾ, `ಸದ್ಯ ಯಾರೂ ನೋಡಲಿಲ್ಲ, ಮಡಿಯಲ್ಲಿದ್ದೀನಿ, ಯಾರಾದರೂ ನೋಡಿದ್ದಿದ್ದರೆ ಮತ್ತೊಮ್ಮೆ ಸ್ನಾನ ಮಾಡಬೇಕಾಗಿತ್ತು’ ಎಂದಳು. ನನ್ನ ತಪ್ಪು ಅರಿವಿಗೆ ಬಂತು. ಪೆಚ್ಚಾದ ನನ್ನ ಮುಖವನ್ನು ನಿರುಕಿಸುತ್ತಾ, `ನೆನ್ನೆ ನೀನು ನೋಡಿದ್ದು ಅಕ್ಷರಶಃ ಸತ್ಯ, ಯಾಕೆಂದರೆ ನೀನು ನೋಡಿದ್ದೀಯ. ಕಣ್ಣಿಗಿಂತ ಪ್ರಮಾಣೀಕರಿಸಬಹುದಾದ ಅಂಗ ಮತ್ತೊಂದಿಲ್ಲ’ ಎಂದಳು ಸಹಜವಾಗಿ. `ಇಲ್ಲ ಮುತ್ಯಾ ನೀನು ನನಗೆ ಏನನ್ನು ಹೇಳಲು ಯತ್ನಿಸಿದ್ದು ಅನ್ನುವುದನ್ನು ಬಿಡಿಸಿ ಹೇಳಲೇ ಬೇಕು. ಹೀಗೆ ಒಗಟೊಗಟಾಗಿ ಹೇಳಿಬಿಟ್ಟರೆ ನಾನು ಸಣ್ಣವಳು ಹೇಗೆ ಅರ್ಥವಾದೀತು?’ ಎಂದೆ. `ನಿನ್ನ ತಾತನಿಗೂ ಇದನ್ನೇ ಹೇಳಲು ಯತ್ನಿಸಿದೆ. ಅವನಿಗೆ ಇದ್ಯಾವುದೂ ಕಾಣಲಿಲ್ಲ. ನೀನು ವಯಸ್ಸಿನಲ್ಲಿ ಅವನಿಗಿಂತ ತುಂಬಾ ಚಿಕ್ಕವಳು ನಿನಗೆ ಕಾಣಲಿಕ್ಕಾಯಿತು. ಅಂದರೆ ನೀನು ಅದ್ಭುತವಾಗಿ ಬದುಕನ್ನು ನಡೆಸಬಲ್ಲೆ ಎಂದ ಹಾಗಾಯಿತು. ನಿನಗೆ ನಾನು ದೊಡ್ಡವಳು ಎನ್ನುವ ಭ್ರಮೆಯೂ ಬೇಡ. ನಿನಗೆ ಕಾಣಲಿಕ್ಕಾಯಿತು ಕಂಡೆ ಅಷ್ಟೇ’ ಎಂದಳು ಮುತ್ಯಾ. `ಮುತ್ಯಾ ನನ್ನ ಯಾಮಾರಿಸುವ ಕೆಲಸ ಮಾಡಬೇಡ’ ಎಂದೆ. ಮುತ್ಯಾ ಗಂಭೀರಳಾದಳು, `ನನ್ನ ಎದೆಯಮೇಲೆ ಮೂಡಿದ್ದನ್ನು ನೋಡಿ ನಿನ್ನ ಎದೆಯ ಮೇಲೆ ಅದೇ ಇರಬಹುದಾ ಎಂದು ನೋಡಿಕೊಂಡೆ ಅಲ್ಲವೇ? ಕಾಣಲಿಲ್ಲ ಕಾರಣ ಏನು ಗೊತ್ತಾ?’ ಎಂದಳು ಮುತ್ಯಾ. ಆಗ ತಾನೆ ಚಿಗಿಯುತ್ತಿದ್ದ ನನ್ನ ಎದೆಗಳು ನನ್ನನ್ನು ದೈಹಿಕವಾಗಿ ಕುಗ್ಗಿಸುವ ಹಾಗೆ ಮಾಡುತ್ತಿದ್ದವು. ನಾನು ನೆಲವನ್ನು ನೋಡುತ್ತಾ ನಾಚಿದೆ. ನನ್ನ ತಲೆಯನ್ನು ಮೇಲೆತ್ತಿ, `ಮಗು ನಮ್ಮೊಳಗೆ ಎಲ್ಲವೂ ಇದೆ ಎಂದು ನಾನು ನಂಬುತ್ತೇನೆ ಒಳಗಿನ ಬ್ರಹ್ಮಾಂಡಕ್ಕೆ ನಾವೇ ಅಧಿಪತಿಗಳು ಅದನ್ನು ತಿಳಿದುಬಿಟ್ಟರೆ ಆತ್ಮವಿಶ್ವಾಸ ಹುಟ್ಟುತ್ತದೆ. ಹುಟ್ಟುತ್ತದೆ ಎಂದರೆ ಯಾವುದೂ ಇಲ್ಲದ್ದು ಅಂತಲ್ಲ ಬೀಜ ನೆಲಕ್ಕೆ ಬಿದ್ದು ತೇವದ ಸಂಪರ್ಕಕ್ಕೆ ಬಂದ ತಕ್ಷಣ ಮೊಳಕೆಯೊಡೆಯುತ್ತಲ್ಲಾ ಹಾಗೆ. ಒಳಗಿನದ್ದು ಒಳಗೆ ಉಳಿಯಲ್ಲ ಹೊರಗೆ ಬರುತ್ತದೆ. ಆದು ಯಾವ ರೀತಿಯಲ್ಲಿ ಪ್ರಕಟ ಆಗುತ್ತೆ ಅನ್ನುವುದು ಮುಖ್ಯ. ಸರಿಯಾದ ಕ್ರಮದಲ್ಲಿ ಪ್ರಕಟವಾದರೆ ನಿನ್ನನ್ನು ನೀನು ಅರಿತುಕೊಳ್ಳುತ್ತೀಯೆ. ಇಲ್ಲದಿದ್ದರೆ ನಿನ್ನ ತಾತನ ಹಾಗೆ ಇನ್ನೊಬ್ಬರ ಮೇಲೆ ಆಧಾರಪಟ್ಟು, ಯಾರೋ ಮಾಡುತ್ತಾರೆ ಎಂದು ಕಾಯುತ್ತಿರುತ್ತೀಯೆ’ ಎಂದಳು. ನನಗೆ ಆತ್ಮವಿಶ್ವಾಸದ ಬಗ್ಗೆ ಏನೋ ಒಂದು ಸೂಚನೆ ಸಿಕ್ಕ ಹಾಗೆ ಅನ್ನಿಸಿತು. ಮುತ್ಯಾನ ಮುಖವನ್ನು ನೋಡಿದೆ, `ಪಂಚಭೂತದಿಂದ ಆದ ದೇಹದಲ್ಲಿ ಪಂಚಭೂತಗಳು ನೆಲೆಯಾಗದೇ ಇರುತ್ತದೆಯಾ ಮಗೂ’ ಎಂದಳು.

ಇಷ್ಟೆಲ್ಲಾ ಮಾತಾಡುವಾಗ ಮುತ್ಯಾ ಏನೋ ಬದಲಾಗುತ್ತಿದ್ದಾಳೆ ಅನ್ನಿಸಿತು. ಹೀಗೆಲ್ಲಾ ಅನ್ನಿಸಿದ್ದು ನಿಜವೇ ಇರಬಹುದಾ ಅಥವಾ ನನ್ನ ಮನಸ್ಸಿನ ಭ್ರಾಂತಿಯಾ ಗೊತ್ತಿಲ್ಲ. ನಾನು ಮುತ್ಯಾನ ಜೊತೆ ಸೇರಿ, ಸೇರಿ ನಾನೂ ಅವಳ ಹಾಗೆ ಆಗುತ್ತಿದ್ದೇನೆ ಎನ್ನುವ ಗಾಢವಾದ ನಂಬಿಕೆಯಾ ಗೊತ್ತಿಲ್ಲ. ಮುತ್ಯಾ ನನ್ನ ಹಾಗೆ ಚಿಕ್ಕ ಹುಡುಗಿ... ಅಲ್ಲಲ್ಲ ನಾನೇ ಆಗಿ ನನ್ನೆದುರು ಕುಳಿತಿದ್ದಾಳೆ! ಅವಳಲ್ಲಿ ಸಾಕ್ಷಾತ್ತು ನನ್ನನ್ನೆ ನೋಡಿದ್ದೆ. `ಒಳಗಿನ ಶಕ್ತಿಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡು, ನೀನು ನಾನಾಗುತ್ತೀಯ. ಹೊರಗಿನ ಶಕ್ತಿಗೆ ಇಂಬುಕೊಡು ಎಲ್ಲಾ ಬಾಗಿಲುಗಳು ತೆರೆಯುತ್ತವೆ’ ಎಂದಳು. ಮುತ್ಯಾ ತಾತನ ಬಗ್ಗೆ ಯಾಕೆ ಅಸಮಾಧಾನ ಹೊಂದಿದ್ದಳು ಎನ್ನುವುದರ ಅರಿವು ನನಗೆ ಬಂದಿತ್ತು.

‘ನಮ್ಮ ಬದುಕೇ ಹೀಗೆ, ಕಿಟಕಿ ಬಾಗಿಲುಗಳೇ ಇಲ್ಲದ ಸುಣ್ಣದ ಗೂಡೆ. ನೀರು ತಾಕಿದರೂ ಸುಟ್ಟು ಹೋಗುತ್ತೇವೆ ಎನ್ನುವುದರ ಅರಿವೇ ಇರುವುದಿಲ್ಲ. ಒಡೆದು ಹೊರಗೆ ಬಾರದಿದ್ದರೆ ಹಕ್ಕಿಗೆ ಜೀವನವಿಲ್ಲ ಇನ್ನು ಕೆಲವು ಮೊಟ್ಟೆಯಲ್ಲಿರುವುದೇ ತಪ್ಪಾಯಿತು ಎನ್ನುವ ಹಾಗೆ ಸತ್ತೇ ಹೋಗುತ್ತವೆ- ರೇಶ್ಮೆ ಹುಳದ ಹಾಗೆ. ಜೀವನ ವರವೋ ಶಾಪವೋ ಗೊತ್ತಿಲ್ಲ ನಿಯಮ ಏನೇ ಇದ್ದರೂ ಬೆಳಕಿನ ಕಿಂಡಿಗಳನ್ನು ಹುಡುಕುವುದಷ್ಟೇ ನನ್ನ ಕರ್ತವ್ಯ’ ಎಂದಳು.

ಮುತ್ಯಾಳ ಮಾತುಗಳು ಈಗಲೂ ಕಿವಿಯಲ್ಲಿ ಮಾರ್ದನಿಗೊಡುತ್ತವೆ. ನನ್ನೊಳಗಿನ ಬ್ರಹ್ಮಾಂಡವನ್ನು ಕಂಡಿದ್ದೇನೆ. ನಿಭಾಯಿಸಲಾಗದೆ ಒದ್ದಾಡಿದ್ದೇನೆ. ಆದರೆ ನಿಗೂಢತೆ ಬೆನ್ನತ್ತಿದ ನನ್ನ ಪಯಣಕ್ಕೆ ನಿಶ್ಚಿತವಾದ ಚಾಲನೆ ಸಿಕ್ಕಿದ್ದು ಅವಳಿಂದಲೇ. ಎಲ್ಲಕ್ಕೂ ಅವಳೇ ಸಾಕ್ಷಿ ಅವಳೆ ಸತ್ವ.

ಈ ಅಂಕಣದ ಹಿಂದಿನ ಬರೆಹಗಳು:
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...