ಟಾಲ್‍ಸ್ಟಾಯ್ ಎಂಬ ಬೂರ್ಜ್ವಾ ವೃಕ್ಷದ ನೆರಳು- (ಟಾಲ್‍ಸ್ಟಾಯ್ ಕನ್ನಡಾನುವಾದಗಳು)

Date: 12-07-2021

Location: ಬೆಂಗಳೂರು


‘ರಷ್ಯಾಸಾಹಿತ್ಯದೆಡೆಗೆ ಒಲವು ಬೆಳೆಯುತ್ತಿದ್ದಂತೆ ಕನ್ನಡಕ್ಕೆ ಆಕರ್ಷಣೆ ಎನ್ನಿಸಿದ್ದು ಟಾಲ್‍ಸ್ಟಾಯ್ ಎಂಬ ರಷ್ಯಾದ ದೈತ್ಯ ಲೇಖಕ’ ಎನ್ನುತ್ತಾರೆ ಲೇಖಕಿ ತಾರಿಣಿ ಶುಭದಾಯಿನಿ. ಅವರು ತಮ್ಮ 'ಅಕ್ಷರ ಸಖ್ಯ' ಅಂಕಣದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ರಷ್ಯನ್ ಸಾಹಿತ್ಯದ ಪ್ರಭಾವ ಹಾಗೂ ಟಾಲ್ ಸ್ಟಾಯ್ ಕೃತಿಗಳ ಅನುವಾದದ ಕುರಿತು ವಿಶ್ಲೇಷಿಸಿದ್ದಾರೆ.

ಕನ್ನಡದ ಅನುವಾದ ಚರಿತ್ರೆಯಲ್ಲಿ ರಷ್ಯನ್ ಸಾಹಿತ್ಯಕ್ಕೆ ಅದರದೇ ಆದ ಮೌಲ್ಯವಿದೆ. ಪೌರ್ವಾತ್ಯ ಸಮಾಜದ ಪ್ರತಿಬಿಂಬದಂತಿರುವ ರಷ್ಯನ್ ಸಮಾಜ ಹಾಗು ಚಿಂತನೆಗಳು ಅನುವಾದಗಳಿಗೆ ಬೇಕಾದ ಮೂಲಭೂತ ಸಾಮ್ಯತೆ, ಪರಿಚಿತತೆಯನ್ನು ಉಂಟು ಮಾಡುತ್ತವೆಯಾದ್ದರಿಂದ ಸ್ಲಾವೊನಿಕ್ ಭಾಷೆಯಾದ ರಷ್ಯದಿಂದ ಬಹಳಷ್ಟು ಭಾಷಾಂತರಗಳು ಕನ್ನಡಕ್ಕೆ ಬಂದವು. ಕನ್ನಡದ ಭಾಷಾಂತರ ಚಟುವಟಿಕೆಗಳು ಆರಂಭಗೊಳ್ಳತೊಡಗಿದ ಅರ್ಧ ಶತಮಾನದುದ್ದಕ್ಕು ಇಂಗ್ಲಿಷ್ ಮತ್ತು ಸೋದರ ಭಾರತೀಯ ಭಾಷೆಗಳ ಪಠ್ಯಗಳ ಭಾಷಾಂತರ ನಡೆಯಿತು. ಅಲ್ಲಿಂದ ಇಲ್ಲಿಗೆ; ಇಲ್ಲಿಂದ ಅಲ್ಲಿಗೆ' ಎನ್ನುವ ಚಲನೆಯಲ್ಲಿ ಭಾಷಾಂತರ ನಡೆದಿದ್ದು ಆರಂಭಕಾಲದ ಫಸಲು ಕಾಣುವ ಉತ್ಸಾಹಿಗಳ ಯತ್ನದಿಂದ ಎನ್ನಬಹುದು. ಕುತೂಹಲಕಾರಿಯಾದ ಅಂಶವೇನೆಂದರೆ ಇತರೆ ಭಾಷೆಗಳ ಬಗ್ಗೆ ಭಾಷಾಂತರವು ಉಂಟುಮಾಡುವ ಸಹಜ ಕುತೂಹಲವು ಯುರೋಪಿಯನ್ ಭಾಷೆಗಳ ಅನುಸಂಧಾನಕ್ಕೆ ತೊಡುಗುವುದನ್ನು ತಡವಾಗಿ ಆರಂಭಿಸಿದ ಸಂಗತಿ. ಇಂಗ್ಲಿಷ್ ಹೊರತು ಪಡಿಸಿ ಇತರೆ ಯುರೋಪಿಯನ್ ಭಾಷಾಸಾಹಿತ್ಯದ ಅನುವಾದಗಳೆಲ್ಲ ಕನ್ನಡವನ್ನು ಪ್ರವೇಶಿಸಿದ್ದು ಹೆಚ್ಚೂ ಕಡಿಮೆ ಅನುವಾದ ಸಾಹಿತ್ಯ ಚರಿತ್ರೆ ಆರಂಭವಾದ ಒಂದು ಶತಮಾನದ ನಂತರ. ಅದರಲ್ಲಿಯೂ ರಷ್ಯನ್ ಸಾಹಿತ್ಯವು ಕನ್ನಡಕ್ಕೆ ಅನುವಾದಗೊಳ್ಳತೊಡಗಿದ್ದು ಇಪ್ಪತ್ತನೆಯ ಶತಮಾನದ ಮೂರನೇ ದಶಕದ ಹೊತ್ತಿಗೆ. ಈ ಅನುವಾದದ ಆಯ್ಕೆಯ ಧೋರಣೆ ಆಶ್ಚರ್ಯವನ್ನುಂಟು ಮಾಡುತ್ತದೆ. ಪ್ರಾಯಶ: ಇಂಗ್ಲಿಷ್ ಶಿಕ್ಷಣಕ್ಕೆ ತೆರೆದುಕೊಂಡ ಮೊದಲ ತಲೆಮಾರು ಗ್ರಹಿಸಿದ ಅನುವಾದದ ಸತ್ವ ಹಾಗು ಪಾಕಗಳಿಗು ಇಪ್ಪತ್ತನೆಯ ಶತಮಾನದ ಹೊಸ ಶಿಕ್ಷಿತ ವರ್ಗ ಅನುವಾದವನ್ನು ಅನುಸಂಧಾನ ಮಾಡತೊಡಗಿದ್ದಕ್ಕು ವ್ಯತ್ಯಾಸಗಳಿದ್ದವು. ಈ ಪಲ್ಲಟವು ಆಗುವುದಕ್ಕೆ ಪ್ರಾಯಶ: ಗ್ರಾಜುಯೇಶನ್ ಶಿಕ್ಷಣವು ದೇಶೀಯ ಸಂಸ್ಥಾನಗಳಲ್ಲಿ ಪ್ರೋತ್ಸಾಹವನ್ನು ಪಡೆದುಕೊಳ್ಳುತ್ತಾ ಇದ್ದುದು ಒಂದು ಕಾರಣವಿರಬಹುದು. ಇಂಗ್ಲಿಷ್ ಶಿಕ್ಷಣದ ವಿಸ್ತೃತವಾದ ಅವಧಿಯಲ್ಲಿ ಬ್ರಿಟನ್ ಹೊರತು ಪಡಿಸಿ ಇತರೆ ವಿದೇಶೀ ಶಿಕ್ಷಣದ ಅವಕಾಶಗಳಿಗೆ ದೇಶೀಯರು ತೆರೆದುಕೊಳ್ಳುತ್ತಿದ್ದುದು ಸಹ ಯುರೋಪಿಯನ್ ಸಾಹಿತ್ಯ ಹಾಗು ಜ್ಞಾನಶಿಸ್ತುಗಳತ್ತ ಆಸಕ್ತಿ ಬೆಳೆಸಲು ಕಾರಣವಾಗಿರಬಹುದು. ಹತ್ತೊಂಬತ್ತನೆ ಶತಮಾನದ ಭಾಷಾಂತರಗಳ ಪ್ರೇರಣೆಯಿಂದ ಹುಟ್ಟಿದ ಕಾದಂಬರಿ, ಮತ್ತಿತರ ಕಥನ ಸಾಹಿತ್ಯಗಳು ವ್ಯಾಪಕವಾಗಿ ಬೆಳೆಯುತ್ತಿದ್ದ ವಾಚಕವರ್ಗಕ್ಕೆ ಹೊಸಬಗೆಯ ಲೋಕಗ್ರಹಿಕೆಗೆ ಅವಕಾಶ ಮಾಡಿಕೊಟ್ಟಿತ್ತಷ್ಟೆ. ಅದರ ಮುಂದಿನ ಹಂತದಲ್ಲಿ ಈ ಓದುವ ರುಚಿಯನ್ನು ಇಂಗ್ಲಿಷ್ ಮತ್ತು ಸಂಸ್ಕೃತ ಕ್ಲಾಸಿಕ್ ಮಾದರಿಗಳನ್ನೆ ನೋಡುವುದಕ್ಕಿಂತ ಯುರೋಪಿನ ದೈತ್ಯ ಪ್ರತಿಭೆಗಳತ್ತ ನೋಡುವುದು ಉಚಿತ ಎಂದು ಅನುವಾದಕರಿಗೆ ಅನ್ನಿಸಿರಬಹುದು. ಪ್ರೌಢವೂ ಜೀವನದೃಷ್ಟಿ ವಿಶೇಷತೆಯೂ ಇರುವ ಯುರೋಪಿಯನ್ ಸಾಹಿತ್ಯವನ್ನು ದೇಶೀಯ ಭಾಷೆಯಲ್ಲಿ ತರುವುದು ತಮ್ಮ ಕರ್ತವ್ಯ ಎಂಬಂತೆ ಅನುವಾದಕರು ಯುರೋಪಿಯನ್ ಸಾಹಿತ್ಯದ ಅನುವಾದದಲ್ಲಿ ತೊಡಗಿದರು. ಇದರ ಪರಿಣಾಮವಾಗಿ ಫ್ರೆಂಚ್, ಗ್ರೀಕ್, ರಷ್ಯಾ, ಜರ್ಮನ್ ಮುಂತಾದ ಸಾಹಿತ್ಯಪಠ್ಯಗಳು ಇಲ್ಲಿಗೆ ಬರಲಾರಂಭಿಸದವು. ಇವುಗಳ ಜೊತೆಗೆ ಜಗತ್ತಿನ ಸಾಹಿತ್ಯವನ್ನು ತರುವ ಯತ್ನವೂ ಮಿಳಿತಗೊಂಡು ಚೀನೀ, ಜಪಾನೀ ಮುಂತಾದ ಭಾಷೆಗಳ ಸಾಹಿತ್ಯವೂ ಕನ್ನಡಕ್ಕೆ ಅನುವಾದಗಳ ಮೂಲಕ ಬರತೊಡಗಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಷ್ಯಾ ಸಾಹಿತ್ಯಪಠ್ಯಗಳ ಅನುವಾದಗಳನ್ನು ಗಮನಿಸಬೇಕು.

ರಷ್ಯಾ ಸಾಹಿತ್ಯವು ಕನ್ನಡಕ್ಕೆ ಬಂದಿದ್ದು ಬಹುತೇಕ ಇಂಗ್ಲಿಷಿನ ಮೂಲಕವೇ. ಮೈಸೂರಿನ ಗಂಗೋತ್ರಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಪಾಶ್ಚಾತ್ಯಭಾಷೆಗಳನ್ನು ಕಲಿಸುವ ಸರ್ಟಿಫಿಕೇಟ್ ಕೋರ್ಸ್ ಹಾಗು ಪದವಿ ಕೋರ್ಸ್‍ಗಳನ್ನು ತೆರೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದರಿಂದ ವಿದೇಶೀ ಭಾಷೆಯ ವಿಭಾಗಗಳು ಸಮಾನಾಂತರವಾಗಿ ಕಲಿಕೆಯ ಜೊತೆಗೆ ಭಾಷಾಂತರಗಳನ್ನು ಮಾಡಲು ಪ್ರೋತ್ಸಾಹ ನೀಡಿದವು. ಆಸಕ್ತರು ನೇರವಾಗಿ ರಷ್ಯಾಭಾಷೆಯನ್ನು ಕಲಿತು ಅನುವಾದ ಮಾಡಿದವರಂತೆಯೇ ರಷ್ಯನ್ ಕ್ಲಾಸಿಕ್‍ಗಳನ್ನು ಇಂಗ್ಲಿಷಿನ ಮೂಲಕ ಓದಿಕೊಂಡು ಅವನ್ನು ಕನ್ನಡಕ್ಕೆ ತರುವ ಸದಾಶಯದಿಂದ ಅನುವಾದದ ಪ್ರಯತ್ನ ಮಾಡಿದವರು ಹೆಚ್ಚಿನವರು.

ರಷ್ಯಾ ಸಾಹಿತ್ಯದ ಬರಮಾಡಿಕೊಳ್ಳುವಿಕೆಯ ಕ್ಲಾಸಿಕ್ ಕೃತಿಗಳ ಪರಿಚಯಿಸುವ ಆಶಯ ಹೇಗೆ ಕೆಲಸ ಮಾಡಿತೊ ಹಾಗೆಯೇ ರಷ್ಯಾ ಕ್ರಾಂತಿಯ ನಂತರ ಅಧಿಕಾರಕ್ಕೆ ಬಂದ ಕಮ್ಯುನಿಸ್ಟ್ ಪಕ್ಷವು ರಷ್ಯಾದ ಹೊಸ ಚಹರೆಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ರಷ್ಯಾಸಾಹಿತ್ಯ ಹಾಗು ಐಡಿಯಾಲಾಜಿಯನ್ನು ಸಾರುವ ಪಠ್ಯಗಳ ಭಾಷಾಂತರಕ್ಕೆ ಸಾಂಸ್ಥಿಕ ಪ್ರೋತ್ಸಾಹವನ್ನು ನೀಡಿತು. ಇಪ್ಪತ್ತನೆಯ ಶತಮಾನದ ಮೂರನೇ ದಶಕದಲ್ಲಿ ಎದ್ದ ಪ್ರಗತಿಶೀಲ ವಿಚಾರಧಾರೆಯು ರಷ್ಯಾಕ್ರಾಂತಿಯ ಪೂರಕಪಠ್ಯಗಳನ್ನು ಭಾರತೀಯ ಭಾಷೆಗಳಿಗೆ ಪರಿಚಯಿಸಲಾರಂಭಿಸಿತ್ತು. ಕನ್ನಡದ ನವೋದಯದ ಸುಗ್ಗಿಕಾಲ ಮುಗಿಯುತ್ತಿದ್ದಂತೆ ಪ್ರಗತಿಶೀಲ ಪಂಥ ಮುನ್ನೆಲೆಗೆ ಬಂದಾಗ ಕನ್ನಡದಲ್ಲಿ ರಷ್ಯಾದ ಪಠ್ಯಗಳನ್ನು ಓದುವುದಕ್ಕೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿತು. ಪ್ರಗತಿಶೀಲ ಸಾಹಿತ್ಯದ ಮುಂಚೂಣಿ ಬರಹಗಾರರಿಗೆ ಸ್ಫೂರ್ತಿಯಾಗಿದ್ದ ಕಮ್ಯುನಿಸಂನ ಐಡಿಯಾಲಾಜಿಯು ಸಹಜವಾಗಿಯೇ ಅವರ ಸಾಹಿತ್ಯಕ್ಕೆ ಪ್ರೇರಣೆ ನೀಡುವುದರ ಜೊತೆಗೆ ಅನುವಾದಗಳಿಗೆ ಸಹ ಪ್ರೇರಣೆ ನೀಡಿತು ಎನ್ನಬಹುದು. ಸತ್ಯನಾರಾಯಣ ಬ್ಯಾನರ್ಜಿಯವರು ಬರೆದ ‘ರಷ್ಯಾ ಟುಡೇ’ ಎನ್ನುವ ಪುಸ್ತಕವನ್ನು 1942ರಲ್ಲಿ ಡಿ.ಎಸ್.ಶರ್ಮ ಅವರು ಕನ್ನಡಕ್ಕೆ ತಂದಿದ್ದರು. ಅನಕೃ ಸಂಪಾದಕತ್ವದಲ್ಲಿ ಪ್ರಗತಿಶೀಲ ಲೇಖಕರ ಸಂಘವು ಹೊರಬಂದ ಮ್ಯಾಕ್ಸಿಂಗಾರ್ಕಿ(1944) ಎಂಬ ಗಾರ್ಕಿಯ ಬದುಕು-ಬರಹವನ್ನು ಕುರಿತು ಬಂದ ಪುಸ್ತಕವು ಸುದೀರ್ಘವಾಗಿ ರಷ್ಯಾದ ಕೆಂಪುಸಿದ್ಧಾಂತದ ಮೆಚ್ಚುಗೆಯ ಹಿನ್ನೆಲೆಯಲ್ಲಿ ಗಾರ್ಕಿಯನ್ನು ನಿರೂಪಿಸಿತ್ತು. ಈ ಬೆಳವಣಿಗೆಗಳು ಹಾಗು ನಿರಂಜನ ಅವರಂತಹ ಸೈದ್ಧಾಂತಿಕ ಮನೋಧೋರಣೆಯ ಸಾಹಿತಿಗಳು ಹೊಂದಿದ್ದ ರಷ್ಯಾ ಸೈದ್ಧಾಂತಿಕ ಒಲವು ಕನ್ನಡದ ಸಂದರ್ಭದಲ್ಲಿ ರಷ್ಯಾಪಠ್ಯಗಳ ಹಾಗು ಜಾಗತಿಕ ಪಠ್ಯಗಳ ಜೊತೆ ನಿರಂತರ ಸಂಪರ್ಕವನ್ನು ಏರ್ಪಡಿಸಿ, ಭಾಷಾಂತರಗಳಿಗೆ ಪ್ರೇರಣೆಯಿತ್ತಿವೆ ಎಂದು ಊಹಿಸಬಹುದು. ಟಾಲ್‍ಸ್ಟಾಯ್ ಕ್ರಾಂತಿಪೂರ್ವ ರಷ್ಯಾದ ಲೇಖಕನಾಗಿದ್ದರಿಂದಲೊ ಏನೊ ಅವನ ಬಗ್ಗೆ ಪ್ರಗತಿಶೀಲರು ವಿಶೇಷ ಆಸಕ್ತಿಯನ್ನು ತೋರಲಿಲ್ಲ.

ರಷ್ಯಾಸಾಹಿತ್ಯದೆಡೆಗೆ ಒಲವು ಬೆಳೆಯುತ್ತಿದ್ದಂತೆ ಕನ್ನಡಕ್ಕೆ ಆಕರ್ಷಣೆ ಎನ್ನಿಸಿದ್ದು ಟಾಲ್‍ಸ್ಟಾಯ್ ಎಂಬ ರಷ್ಯಾದ ದೈತ್ಯ ಲೇಖಕ. ಯುರೋಪಿನ ಸಾಹಿತ್ಯದ ದೃಷ್ಟಿಯಿಂದಲೂ ರಷ್ಯಾದ ಸಾಹಿತ್ಯದ ದೃಷ್ಟಿಯಿಂದಲೂ ಸಾಹಿತ್ಯಿಕ ದೈತ್ಯ ಎನ್ನಿಸಿಕೊಳ್ಳುವಂತೆ ಕ್ಲಾಸಿಕ್ ಮೇಲೆ ಕ್ಲಾಸಿಕ್ ಕೃತಿಗಳನ್ನು ಕೊಟ್ಟ ಈ ಲೇಖಕ ತನ್ನ ಸೈದ್ಧಾಂತಿಕ ನಿಲುವಿನ ಕಾರಣದಿಂದಲೂ ಅಷ್ಟೇ ಮುಖ್ಯನಾದವನು. ಭಾರತೀಯ ಹಿನ್ನೆಲೆಯಿಂದ ಟಾಲ್‍ಸ್ಟಾಯ್ ಎಂಬ ಲೇಖಕ ಕಾಣಿಸಿಕೊಂಡಿದ್ದು ಮಹರ್ಷಿಯಾಗಿ! ತನ್ನ ಜೀವನವನ್ನೆ ಒಂದು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡ ಲೇಖಕ ತನ್ನ ಜೀವಮಾನದಲ್ಲಿ ಧರ್ಮ, ರಾಜಕಾರಣ, ಯುದ್ಧ, ಕುಟುಂಬಗಳೆಂಬ ಸಂಸ್ಥೆಗಳು ಒಬ್ಬ ಮನುಷ್ಯನ ಜೀವನವನ್ನು ರೂಪಿಸಿವೆಯೊ ಅಥವಾ ಅವನನ್ನು ಹಾಳುಗೆಡುವುತ್ತಿವೆಯೊ ಎನ್ನುವ ಸಂದೇಹದಿಂದ ನೈತಿಕ ಜಿಜ್ಞಾಸೆಗಳನ್ನು ಮಾಡುತ್ತಾ ಹೋದ. ಹೀಗೆ ತನ್ನನ್ನು ತಾನು ಪ್ರಯೋಗಕ್ಕೆ ಒಡ್ಡಿಕೊಂಡ ಕಾರಣದಿಂದ ಮಹಾತ್ಮಾಗಾಂಧಿಯವರಿಗೆ ಆದರ್ಶಪ್ರಾಯವಾದ. ಟಾಲ್‍ಸ್ಟಾಯ್ ಅವರ ಶ್ರಮ ಮತ್ತು ಆಸ್ತಿಯ ಹಂಚುವಿಕೆ ಗಾಂಧೀವಾದಿಗಳು ಹಾಗು ಮಾರ್ಕ್ಸ್ ವಾದಿಗಳಿಗಿಬ್ಬರಿಗೂ ಸಮಾನವಾದ ಆಸಕ್ತಿಯ ಅಂಶವಾಗಿದ್ದವಲ್ಲವೆ? ಟಾಲ್‍ಸ್ಟಾಯ್ ಎಂಬ ಲೇಖಕ ಮತ್ತು ಚಿಂತಕನನ್ನು ಈ ನೆಪಗಳಿಂದಲಾದರೂ ದೇಶೀಯ ಸಂದರ್ಭದಲ್ಲಿ ನೆನೆಯಬೇಕೆನಿಸುತ್ತದೆ.

ಇಪ್ಪತ್ತನೆಯ ಶತಮಾನದ ಗಾಂಧಿರಾಜಕಾರಣದ ಸತ್ವಗಳಲ್ಲಿ ಟಾಲ್‍ಸ್ಟಾಯ್ ಚಿಂತನೆಗಳ ಕೊಡುಗೆ ಹೆಚ್ಚಿನದು. ಹೀಗೆ ಗಾಂಧಿಯವರನ್ನು ಪ್ರಭಾವಿಸಿದ ಯುರೋಪಿನ ಲೇಖಕ ತನ್ನ ಪ್ರಭಾವವನ್ನು ಬೀರಿದ್ದು ನೈತಿಕತೆಯ ಚರ್ಚೆಯಿಂದ. ಆದುದರಿಂದ ಗಾಂಧಿಯವರ ಪ್ರಭಾವ ಭಾರತೀಯರ ಮೇಲೆ ಬಲಗೊಳ್ಳುತ್ತಾ ಬಂದಂತೆ ಟಾಲ್‍ಸ್ಟಾಯ್ ಎಂಬ ಲೇಖಕನೂ ಭಾರತೀಯರ ಮನಸ್ಸಿನಲ್ಲಿ ನಿಲ್ಲತೊಡಗಿದ. ಟಾಲ್‍ಸ್ಟಾಯ್ ಆಶ್ರಮ ಕಟ್ಟಿದ ಉದಾಹರಣೆಯಿಂದ ಗಾಂಧಿ ತಮ್ಮ ಆಶ್ರಮಗಳನ್ನು ಕಟ್ಟಿಕೊಂಡರು. ವ್ಯಕ್ತಿಶಃ ನೈತಿಕತೆಯಿಂದ ಸಾಮಾಜಿಕವಾಗಿ ಪರಿಣಾಮ ಬೀರಲು ಸಾಧ್ಯವಿದೆ ಎನ್ನುವ ನಂಬುಗೆಯನ್ನು ಗಾಂಧೀಜಿ ಬಲಗೊಳಿಸಿಕೊಂಡರು. ಹೀಗೆ ಗಾಂಧಿ ನಂಬಿದ ತತ್ವಗಳಿಗೆ ಹತ್ತಿರವಿದ್ದ ಟಾಲ್‍ಸ್ಟಾಯ್ ಸಹಜವಾಗಿಯೇ ಗಾಂಧೀ ಅನುಯಾಯಿಗಳಿಗೆ ಹತ್ತಿರದ ಬಂಧುವಿನಂತೆ ಗೋಚರಿಸಿ ಅವನ ಸಾಹಿತ್ಯವನ್ನು ಅನುವಾದಗಳ ಮೂಲಕ ಅನುಸಂಧಾನ ಮಾಡುವ ಯತ್ನಗಳಿಗೆ ಇಂಬು ಸಿಕ್ಕಿತು. ಹೀಗಾಗಿ ಟಾಲ್‍ಸ್ಟಾಯ್ ಬರೆದ ಹಾಗು ಅವನ ದರ್ಶನಗಳ ಕುರಿತು ಬರೆದ ಲೇಖನಗಳು ಬಿಡಿಬಿಡಿಯಾಗಿ ಅನುವಾದಗೊಂಡು ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ ಎನ್ನುವುದನ್ನು ಆಸಕ್ತರು ಗಮನಿಸಬಹುದು.

ಟಾಲ್‍ಸ್ಟಾಯ್ ಎಂಬ ಲೇಖಕ ತನ್ನ ಸಾಹಿತ್ಯಿಕ ಕಾರಣಗಳಿಂದ ಹೊರತಾಗಿಯೂ ಅನುವಾದಕ್ಕೆ ಆಸಕ್ತಿಯನ್ನು ಉಂಟು ಮಾಡಿದ್ದ ಎನ್ನುವುದು ಮುಖ್ಯವೆನಿಸುತ್ತದೆ. ಕನ್ನಡದಲ್ಲಿ ಟಾಲ್‍ಸ್ಟಾಯ್ ಅವರನ್ನು ‘ಮಹರ್ಷಿ’ ಎಂಬ ವಿಶೇಷಣದೊಂದಿಗೆ ಸಂಬೋಧಿಸುವುದನ್ನು ನೋಡಬಹುದು. ಅಂದರೆ ಟಾಲ್‍ಸ್ಟಾಯ್ ಅನುವಾದಗಳಿಗೆ ಅವನ ನೈತಿಕ ಸಿದ್ಧಾಂತ ಮತ್ತು ನಿಲುವುಗಳು ಪ್ರಬಲವಾದ ಪ್ರೇರಣೆಯಾಗಿ ಒದಗಿದ್ದವು ಎನ್ನಬಹುದು. ಟಾಲ್‍ಸ್ಟಾಯ್ ಕತೆಗಳು ಕನ್ನಡದಲ್ಲಿ ಆಸಕ್ತಿ ಮೂಡಿಸಿದ್ದು ಮುಖ್ಯವಾಗಿ ಅವನು ಬರೆದ ಫೇಬಲ್ಸ್ ಹಾಗು ನೀತಿಯ ಸಣ್ಣಕತೆಗಳ ಮೂಲಕ. ಹೀಗೆ ಟಾಲ್‍ಸ್ಟಾಯ್ ಅನುವಾದಗಳ ಹಿಂದೆ ಒಂದು ಮಾದರಿ ನೈತಿಕತೆಯಿರುವುದರಿಂದ ಟಾಲ್‍ಸ್ಟಾಯ್ ಮಹರ್ಷಿಯಾಗಿ ಕನ್ನಡದ ಮನಸ್ಸುಗಳನ್ನು ಮುಟ್ಟಿದ್ದಾನೆ(ಟಾಲ್‍ಸ್ಟಾಯ್ ಅವರ ಕಾದಂಬರಿ ‘ಮನೆಯ ಸುಖಶಾಂತಿ’ ಯನ್ನು ಅನುವಾದಿಸಿರುವ ಹ.ಪಿ.ಜೋಶಿಯವರು ‘ಮಹರ್ಷಿ ಟಾಲ್‍ಸ್ಟಾಯ್ ಅವರ ಕಾದಂಬರಿ’ ಎಂದು ಹೇಳಿ ಲೇಖಕನಿಗೆ ಸಲ್ಲಬೇಕಾದ ಗೌರವವನ್ನು ಕೊಟ್ಟಿದ್ದಾರೆ).

ಟಾಲ್‍ಸ್ಟಾಯ್(1828-1910) ಹತ್ತೊಂಬತ್ತನೆಯ ಶತಮಾನದ ಚೈತನ್ಯವನ್ನು ಹೀರಿ ಬೆಳೆದ ಲೇಖಕ. ಅವನು ಇದ್ದ ರಷ್ಯಾದ ಕಾಲವು ಅರಸೊತ್ತಿಗೆಯ ಕಾಲವಾಗಿತ್ತು. ಊಳಿಗಮಾನ್ಯ ಪದ್ಧತಿ ಬೇರೂರಿದ್ದ ಸಮಾಜದ ಅತ್ಯುನ್ನತ ಶ್ರೇಣಿಯಲ್ಲಿ ಹುಟ್ಟಿದ್ದ ಟಾಲ್‍ಸ್ಟಾಯ್ ತಾನು ಪ್ರತಿನಿಧಿಸುವ ಶ್ರೀಮಂತವರ್ಗವನ್ನು ಇನ್ನಿಲ್ಲದಂತೆ ವಿಮರ್ಶಿಸಿದ್ದು ಬದುಕಿನ ವ್ಯಂಗ್ಯ. ಟಾಲ್‍ಸ್ಟಾಯ್ ತಾನು ಬರೆದಿದ್ದು ಬದುಕಿದ್ದು ಎರಡರ ನಡುವೆ ಅಂತರಗಳಿವೆಯೇ? ಕಲೆ ಎಂದರೆ ಜೀವನದಿಂದ ಹೊರತಾದುದೆ? ಎಂಬೆಲ್ಲ ಜಿಜ್ಞಾಸೆಗಳನ್ನು ಸತತವಾಗಿ ಮಾಡುತ್ತ ಹೋದ. ಸಾಹಿತ್ಯಕ್ಕೆ ಬೇಕಾದ ಪ್ಯಾಶನ್ ಅವನ ಕೃತಿಗಳಲ್ಲಿ ಧಾರಾಳವಾಗಿ ಇದ್ದರೂ ಪ್ರಕಟವಾಗಿ ಟಾಲ್‍ಸ್ಟಾಯ್ ಅದನ್ನು ಒಪ್ಪುತ್ತಿರಲಿಲ್ಲ. ಅದನ್ನು ಹತ್ತಿಕ್ಕಿ ನಿಲ್ಲುವುದೇ ಒಂದು ನೈತಿಕ ಹೋರಾಟ ಎಂದು ಅವನು ಭಾವಿಸಿದ್ದ ಹಾಗಾಗಿ ತನ್ನ ಶ್ರೇಷ್ಠ ಕೃತಿಗಳ ಬಗ್ಗೆಯೇ ಒಂದು ಬಗೆಯ ಉಡಾಫೆಯನ್ನು ತಳೆದಿದ್ದ. ಬದುಕಿದ್ದಾಗಲೇ ಚರ್ಚ್ ಹಾಗು ಪ್ರಭುತ್ವಗಳನ್ನು ವಿಮರ್ಶಿಸಿ ಅವುಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಪೀಟರ್ಸಬರ್ಗ್ ಪಟ್ಟಣದ ಬುದ್ಧಿಜೀವಿ, ಸಾಹಿತಿಗಳಿಂದಲೂ ಸಮಾನದೂರ ಕಾಯ್ದುಕೊಂಡುದರಿಂದ ವ್ಯಕ್ತಿವಾದಿಯಾಗಿ, ಅರಾಜಕ ನಿಲುವಿನ ವ್ಯಕ್ತಿಯಾಗಿ ರಷ್ಯಾದ ಜನರಿಗೆ ಕಂಡ. ಹೀಗೆ ವೈರುಧ್ಯಗಳನ್ನು ಗೆಲ್ಲುವ ಯುದ್ಧಗಳನ್ನು ತನಗೆ ತಾನೇ ಹಾಕಿಕೊಂಡು ಹೊರಟ ಟಾಲ್‍ಸ್ಟಾಯ್ ಅಸ್ತಿತ್ವವಾದಿಗಳು ಚಿಂತಿಸಿದ ಆತ್ಮಹತ್ಯೆಯ ಬಗ್ಗೆಯೂ ಚಿಂತಿಸಿದ. ತನ್ನ ಜೀವನ ಹಾಗು ಬರಹಗಳಿಗೆ ಯಾವುದೇ ಅರ್ಥವಿಲ್ಲವೆಂದು ಭಾವಿಸಿ ಸ್ವತಃ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಕೊನೆಗೆ ಜೀವನದ ಸತ್ಯಗಳನ್ನು ದಿನನಿತ್ಯ ಅರಿತು ಬಾಳುವ ಸಾಮಾನ್ಯರ ಜೀವನವೇ ಆದರ್ಶಪ್ರಾಯವಾದುದೆಂದು ಆ ಬದುಕಿಗೆ ಮರಳಲು ಇಚ್ಛಿಸಿದವನು. ಟಾಲ್‍ಸ್ಟಾಯ್ ಅವರ ಈ ಧೋರಣೆಗಳು ಕನ್ನಡ ನವೋದಯ ಮನಸ್ಥಿತಿಗೆ ಹತ್ತಿರವಿದ್ದಂತವು. ಕನ್ನಡದ ನವೋದಯ ಲೇಖಕರಲ್ಲಿ ಟಾಲ್‍ಸ್ಟಾಯ್ ಪ್ರಭಾವ ದಟ್ಟವಾಗಿಯೇ ಇದೆ. ಶ್ರೀಸಾಮಾನ್ಯವೇ ಭಗವದ್ ಮಾನ್ಯಂ ಎಂಬ ಕುವೆಂಪು ಅರಿವು, ಸಾಮಾನ್ಯತಾ ಪಾತ್ರಗಳ ಮೂಲಕ ಜೀವನ ದರ್ಶನ ಮಾಡಬೇಕೆನ್ನುವ ಮಾಸ್ತಿಯವರಲ್ಲಿ ಟಾಲ್‍ಸ್ಟಾಯ್ ಪ್ರಭಾವ ಇತ್ತು. ಪ್ರಗತಿಶೀಲ ಸಾಹಿತ್ಯದ ನಂತರ ಬಂದ ನವ್ಯರು ಟಾಲ್‍ಸ್ಟಾಯ್‍ನನ್ನು ಎತ್ತಿಕೊಂಡಿದ್ದು ಅವನ ಕಾದಂಬರಿ ಎನ್ನುವ ಪ್ರಕಾರದ ಕುರಿತ ಧೋರಣೆಗಳ ಕಾರಣದಿಂದ. ಟಾಲ್‍ಸ್ಟಾಯ್ ಬರೆದ ‘ಅನ್ನಾ ಕರೆನಿನಾ’ ಮತ್ತು ‘ವಾರ್ ಅಂಡ್ ಪೀಸ್’ ಎಂಬ ಯುರೋಪಿಯನ್ ಕ್ಲಾಸಿಕ್ ಕೃತಿಗಳ ಪ್ರಭಾವಗಳನ್ನು ಒಂದೆಡೆ ಇಟ್ಟುಕೊಂಡು ಕಾದಂಬರಿಯೆಂಬ ಪ್ರಕಾರವು ತಳೆಯುವ ನೈತಿಕ ಧೋರಣೆಗಳನ್ನು ಕನ್ನಡದ ವಿಮರ್ಶೆ ಚರ್ಚಿಸಿತು. ಅನಂತಮೂರ್ತಿಯವರಲ್ಲಿ ಗಾಂಧಿವಾದದ ಅನುಸಂಧಾನ ನಡೆದು ಅಲ್ಲಿ ಟಾಲ್‍ಸ್ಟಾಯ್ ತಳೆದ ನೈತಿಕ ನಿಲುವಿನ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿತ್ತು.

ಹೀಗೆ ಬಿಟ್ಟೂ ಬಿಡದೆ ಟಾಲ್‍ಸ್ಟಾಯ್ ಕನ್ನಡದ ಪ್ರಜ್ಞೆಯಲ್ಲಿ ಉಸಿರಾಡುತ್ತಲೇ ಇದ್ದ. ಟಾಲ್‍ಸ್ಟಾಯ್ ಸಾಹಿತ್ಯವು ತನ್ನ ಆಕರ್ಷಣೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿಯು ಹೊಂದಿತ್ತು. ಟಾಲ್‍ಸ್ಟಾಯ್‍ನ ‘ವಾರ್ ಅಂಡ್ ಪೀಸ್’, ‘ಏ ಕನ್‍ಫೆಶನ್’, ‘ಅನಾ ಕರೆನಿನಾ’, ಹಾಗು ಅನೇಕ ಕತೆಗಳ ಮೂಲಕ ಮತ್ತೊಮ್ಮೆ ಮಗದೊಮ್ಮೆ ಕನ್ನಡಕ್ಕೆ ಅನುವಾದಗೊಳ್ಳುತ್ತಲೇ ಬಂದಿದ್ದು ಮತ್ತೆ ಮತ್ತೆ ಟಾಲ್‍ಸ್ಟಾಯ್‍ನ ಅನುಸಂಧಾನ ಕನ್ನಡಕ್ಕೆ ಎಷ್ಟೊಂದು ಆಪ್ಯಾಯಮಾನವಾಗಿದೆ ಎನ್ನುವುದನ್ನು ಸೂಚಿಸುತ್ತಿದೆ.

ಟಾಲ್‍ಸ್ಟಾಯ್ ಎಂಬ ಮಹಾನ್ ಲೇಖಕನ ಕೃತಿಗಳ ಕನ್ನಡಾನುವಾದಗಳು ಮತ್ತೆ ಮತ್ತೆ ಯುಗಪೂರ್ತಿ ನಡೆಯುತ್ತಾ ಬಂದಿರುವುದು ಅನುವಾದದ ಒಂದು ಮೂಲಭೂತ ಆಕರ್ಷಣೆಯನ್ನು ಎತ್ತಿಹೇಳುವಂತಿದೆ. ಭಾಷಾಂತರವು ನಡೆಯುವುದು ಒಂದು ಮನುಷ್ಯನ ಮೂಲಭೂತ ಗುಣಗಳು ವಿಭಿನ್ನ ದೇಶಕಾಲಗಳಲ್ಲಿ ಚಿತ್ರಿಸಿದಾಗಲೂ ಇರುವ ಸಾಮ್ಯತೆ ಮತ್ತು ಅದರಿಂದ ಒದಗುವ ಸಾಮಾನ್ಯೀಕರಣ; ಇನ್ನೊಂದು, translatability ಅಂದರೆ ಅನುವಾದಕ್ಕೆ ಒಗ್ಗುವಂತಹ ಪಠ್ಯಗುಣ. ಮೊದಲ ಅಂಶವನ್ನು ಗಮನಿಸುವುದಾದರೆ ಟಾಲ್‍ಸ್ಟಾಯ್ ಸಾಹಿತ್ಯದಲ್ಲಿರುವ ಮೂಲಭೂತ ಗುಣ ಎಂದರೆ ಎಲ್ಲರಿಗು ಮುಟ್ಟುವಂತಹ ಸಾಮಾನ್ಯ ಮನುಷ್ಯತ್ವದ ಭಾವನೆಗಳು. ಟಾಲ್‍ಸ್ಟಾಯ್ ಚಿಂತಿಸಿದ್ದು ದೇವರು ಮತ್ತು ಮನುಷ್ಯನ ನಡುವೆ ಇರುವ ಸಂಬಂಧದ ಸ್ವರೂಪ, ಪ್ರಕೃತಿ ಮತ್ತು ಮನುಷ್ಯನ ನಡುವೆ ಇರುವ ಸಂಬಂಧ ಎಂತಹುದು ಎಂಬ ಶೋಧಮನೋವೃತ್ತಿ ಇವುಗಳನ್ನು ಕುರಿತು. ಇವು ಜಗತ್ತಿನ ಎಲ್ಲ ತಾತ್ವಿಕತೆಗಳ ಮೂಲಭೂತ ಪ್ರಶ್ನೆಗಳಾಗಿರುವಂತೆಯೇ ಮನುಷ್ಯನ ಆದಿಮ ಸಂಗತಿಗಳೂ ಆಗಿರುವುದರಿಂದ ಇವನ್ನು ತೀವ್ರವಾಗಿ ಚಿಂತಿಸಿದ ಟಾಲ್‍ಸ್ಟಾಯ್ ಪ್ರಸ್ತುತತೆಯನ್ನು ಅನುವಾದಗಳು ಮನಗಂಡಿವೆ. ಟಾಲ್‍ಸ್ಟಾಯ್ ತನ್ನ ತಾತ್ವಿಕ ಜಿಜ್ಞಾಸೆಯನ್ನು ಸಾಹಿತ್ಯದ ಮೂಲಕ ಹಾಯಿಸಿದ್ದರಿಂದ ಅವು ಇನ್ನಷ್ಟು ಪರಿಣಾಮಕಾರಿ ಎನ್ನಿಸಿದವು. ಈಗಾಗಲೇ ಈ ಲೇಖನದ ಆರಂಭದಲ್ಲಿ ಚರ್ಚಿಸಿದ ನೈತಿಕತೆಯ ಪ್ರಶ್ನೆ. ಇದನ್ನು ಟಾಲ್‍ಸ್ಟಾಯ್ ಸಾಹಿತ್ಯ ಎಷ್ಟು ತೀವ್ರವಾಗಿ ಮಾಡುತ್ತದೆ ಎಂದರೆ ಅದು ಎಲ್ಲರಿಗು ಅನ್ವಯಿಸುವಂತೆ ಇರುತ್ತದೆ. ಟಾಲ್‍ಸ್ಟಾಯ್ ಎತ್ತುವ ನೈತಿಕತೆಯ ಪ್ರಶ್ನೆ ಸಾಮಾಜಿಕವಾಗಿ ನಿರೂಪಿತವಾದುದೊ ಅಥವಾ ನಮ್ಮೊಳಗೆ ಹುಟ್ಟಬೇಕಾದ ಆಧ್ಯಾತ್ಮಿಕ ಸಂಗತಿಯೊ ಎನ್ನುವುದರ ಜಿಜ್ಞಾಸೆಯಾಗಿ ಅದರ ಪ್ರಭಾವ ಕನ್ನಡದ ಬರಹಗಾರರ ಮೇಲೆ ಆಗಿದ್ದು ಅದನ್ನು ಇತರ ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವ ಆಸೆಯಿಂದ ಅನುವಾದಗಳು ನಡೆದಿವೆ ಎಂದು ಊಹಿಸಬಹುದು. ಈ ನಿಟ್ಟಿನಲ್ಲಿ ಟಾಲ್‍ಸ್ಟಾಯ್ ಅವರ ‘ಎ ಕನ್‍ಫೆಶನ್’ ಕೃತಿಯನ್ನೆ ಉದಾಹರಣೆಯಾಗಿ ನೋಡುವುದಾದರೆ ಕನ್ನಡದ ಬೇರೆ ಬೇರೆ ಕಾಲಘಟ್ಟಕ್ಕೆ ಸೇರಿದ ಲೇಖಕರು ಅನುವಾದಕ್ಕೆ ಎತ್ತಿಕೊಂಡಿದ್ದನ್ನು ಗಮನಿಸಬಹುದು. ಆಧ್ಯಾತ್ಮಿಕ ಆಸಕ್ತಿ ಹೊಂದಿದ್ದ ಹಲಸಂಗಿ ಗೆಳೆಯರ ಗುಂಪಿಗೆ ಸೇರಿದ ಸಿಂಪಿ ಲಿಂಗಣ್ಣ ಅವರು ಟಾಲ್‍ಸ್ಟಾಯ್ ಅವರ ಕನ್‍ಫೆಶನ್ ಕೃತಿಯನ್ನು ‘ಬಾಳಿನ ಬೆಳಕು’(1936) ಎಂದು ಅನುವಾದ ಮಾಡಿದ್ದಾರೆ. ಅಂತರಂಗಶುದ್ಧಿ ಮತ್ತು ಬಹಿರಂಗಶುದ್ಧಿಗಳ ತೀವ್ರ ಜಿಜ್ಞಾಸೆ ನಡೆಯುತ್ತಿದ್ದ ವೇಳೆಯಲ್ಲಿ ಈ ಪುಸ್ತಕವು ಒಂದು ಆಕರವಾಗಿ ಒದಗಿ ಬಂದಿತೆಂಬುದು ಮುಖ್ಯ. ಅಧ್ಯಯನ ಮಂಡಲದ ಅನುವಾದ ಹಾಗು ಓಎಲ್‍ಎನ್(ಬಿನ್ನಪ) ಅನುವಾದಗಳು ಟಾಲ್‍ಸ್ಟಾಯ್ ಅವರ ತಾತ್ವಿಕ ಜಿಜ್ಞಾಸೆಯ ಕುರಿತು ಇರುವ ಆಸಕ್ತಿಯನ್ನು ಹೇಳುವಂತಿವೆ. ಅಲ್ಲದೆ ಟಾಲ್‍ಸ್ಟಾಯ್ ಸಾಹಿತ್ಯವು ಕನ್ನಡದಲ್ಲಿ ರೂಪಾಂತರಗೊಂಡು ಅನುವಾದದ ಬೇರೊಂದು ರೂಪದಲ್ಲಿ ಬಂದಿವೆ. ಶ್ರೀನಂದ ಅವರ ‘ಆಹಿಂತಕ’, ಎನ್.ಮೂರ್ತಿರಾಯರ ‘ಕಾಶೀಯಾತ್ರೆ’, ಚಂದ್ರಶೇಖರ ಕಂಬಾರರ ‘ಬೆಪ್ಪುತಕ್ಕಡಿ ಬೋಳೇಶಂಕರ’ ಇಂತಹ ಯಶಸ್ವಿ ಪ್ರಯತ್ನಗಳಲ್ಲಿ ಹೆಸರಿಸಬಹುದಾದವು. ರೂಪಾಂತರಗಳು ಒಂದರ್ಥದಲ್ಲಿ ಮೂಲಲೇಖಕರ ಜೊತೆ ನಡೆಸುವ ಅನುಸಂಧಾನವೇ ಆಗಿರುತ್ತದೆ.

ಕನ್ನಡಕ್ಕೆ ಟಾಲ್‍ಸ್ಟಾಯ್ ಹಲವಾರು ಪ್ರಕಾರಗಳಲ್ಲಿ ಬಂದಿದ್ದಾನೆ. ಸಾಹಿತ್ಯದ ವಿರಾಟ್ ಲೇಖಕನಾಗಿರುವ ಟಾಲ್‍ಸ್ಟಾಯ್ ಕತೆ, ಕಾದಂಬರಿ, ನಾಟಕ, ಲೇಖನ, ಅನುವಾದ ಹೀಗೆ ಹಲವಾರು ಕ್ಷೇತ್ರಗಳಲ್ಲಿ ದೈತ್ಯಕೆಲಸಗಳನ್ನು ಮಾಡಿದ್ದಾನೆ. ಟಾಲ್‍ಸ್ಟಾಯ್ ಬರೆದ ಮಹಾನ್ ಕಾದಂಬರಿಗಳಾದ ‘ವಾರ್ ಅಂಡ್ ಪೀಸ್’ ಕೃತಿಯನ್ನು ಕೈಯಲ್ಲಿ ಹಿಡಿದು ಓದುವುದೇ ದುಸ್ತರ ಎನ್ನುವಂತೆ ಇದೆ. ಇಂತಹ ಕೃತಿಗಳನ್ನು ಒಮ್ಮೆ ಓದಿ ಅದನ್ನು ಅನುವಾದಕ್ಕಾಗಿ ಎತ್ತಿಕೊಳ್ಳುವುದು ಅನುವಾದಕರ ಮಟ್ಟಿಗೆ ಸಾಹಸದ ಕೆಲಸವೇ ಸರಿ. ವಿಚಿತ್ರ ಎಂದರೆ ಟಾಲ್‍ಸ್ಟಾಯ್ ಕಷ್ಟ ಎಂದಾಗಲೀ ಅಥವಾ ಅವನ ಕೃತಿ ವಿಸ್ತಾರದ ದೃಷ್ಟಿಯಿಂದಾಗಲೀ ಅನುವಾದಕರು ಅವನನ್ನು ಬಿಟ್ಟಿಲ್ಲ! ಹಾಗೆ ನೋಡಿದರೆ ಜಗತ್ತಿನ ಅನೇಕ ಭಾಷೆಗಳಲ್ಲಿ ಮೇಲಿಂದ ಮೇಲೆ ಟಾಲ್‍ಸ್ಟಾಯ್ ಕಾದಂಬರಿಗಳು ಅನುವಾದಗೊಳ್ಳುತ್ತಲೇ ಇವೆ. ಕನ್ನಡದಲ್ಲಿಯೂ ಟಾಲ್‍ಸ್ಟಾಯ್‍ನನ್ನು ಅನವಾದ ಮಾಡುವ ಪ್ರಯತ್ನಗಳು ನಿರಂತರವಾಗಿವೆ. ಟಾಲ್‍ಸ್ಟಾಯ್ ಕೃತಿಗಳ ಕನ್ನಡದ ಅನುವಾದಗಳ ಬಗ್ಗೆ ಸಿನಿಕರಾದ ಇಂಗ್ಲಿಷ್ ಪಂಡಿತವರ್ಗ ಎಷ್ಟೇ ಆಕ್ಷೇಪ, ನಿರ್ಲಕ್ಷ್ಯಗಳನ್ನು ತೋರಿದರೂ ಈ ಪ್ರಯತ್ನಗಳು ನಿಂತಿಲ್ಲವೆನ್ನುವುದು ಟಾಲ್‍ಸ್ಟಾಯ್ ಅನುವಾದಗಳ ಕುರಿತ ಆಸಕ್ತಿ, ಶ್ರದ್ಧೆಗಳನ್ನು ತೋರುತ್ತದೆ.

ಕನ್ನಡದಲ್ಲಿ ಟಾಲ್‍ಸ್ಟಾಯ್ ಅನುವಾದಗಳು ಬರಲಾರಂಭಿಸಿದ್ದು ಮೂವತ್ತರ ದಶಕದಲ್ಲಿ. ಎಲ್.ಗುಂಡಪ್ಪನವರು ಅನುವಾದಿಸಿದ ‘ಟಾಲ್‍ಸ್ಟಾಯ್ ಕತೆಗಳು’(1934), ರಾಜರತ್ನಂ ಅನುವಾದಿಸಿದ ‘ಬೆಪ್ಪುತಕ್ಕಡಿ ಐವಾನ್’(1934?), ಸಿಂಪಿ ಲಿಂಗಣ್ಣನವರ ‘ಬಾಳಿನ ಬೆಳಕು’(1936), ಶ್ರೀನಂದ ರೂಪಾಂತರಿಸಿದ ಟಾಲ್‍ಸ್ಟಾಯ್ ಕತೆ ‘ವಾಟ್ ಮೆನ್ ಲಿವ್ ಬೈ’ ‘ಅಹಿಂತಕ’(1934) ಎಂಬ ದೃಷ್ಯರೂಪಕ, ಹಿಂದಿಯಲ್ಲಿ ಪ್ರೇಮಚಂದರು ಅನುವಾದಿಸಿದ್ದ ಟಾಲ್‍ಸ್ಟಾಯ್ ಅವರ ಏಳುಕತೆಗಳನ್ನು ಹಿಂದಿಯಿಂದ ಕನ್ನಡಕ್ಕೆ ತಂದು ತಮ್ಮ ಅರವಿಂದ ಗ್ರಂಥಾಲಯದಿಂದ ಪ್ರಕಟಿಸಿದ ಸಿಂಪಿ ಲಿಂಗಣ್ಣನವರ ‘ಲಿಯೊ ಟಾಲ್‍ಸ್ಟಾಯ್ ಪವಿತ್ರಜೀವನ’(1936) ಕೃತಿ ಹೀಗೆ ಟಾಲ್‍ಸ್ಟಾಯ್ ಕೃತಿಗಳ ಅನುವಾದಗಳು ಕನ್ನಡಿಗರಿಗೆ ದೊರಕಿದವು. ಇದಾದ ನಂತರ ನಲವತ್ತು. ಐವತ್ತು ಅರವತ್ತನೇ ದಶಕಗಳಲ್ಲಿ ಟಾಲ್‍ಸ್ಟಾಯ್ ಅನುವಾದಗಳು ಅನುವಾದಕರ ಆಸಕ್ತಿಯನ್ನು ಅನುಸರಿಸಿ ನಡೆಯುತ್ತಲೇ ಇದ್ದವು. ಆನಂತರ ಸ್ವಲ್ಪ ಸಮಯದ ನಂತರ ಇಪ್ಪತ್ತೊಂದನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಮತ್ತೆ ಟಾಲ್‍ಸ್ಟಾಯ್ ಅನುವಾದಕ್ಕೆ ಚಾಲನೆ ಸಿಕ್ಕಿದೆ. ಮತ್ತೆ ಮತ್ತೆ ಟಾಲ್‍ಸ್ಟಾಯ್‍ನನ್ನು ಓದುವ ಆಸಕ್ತಿ ಉಂಟಾಗಿದ್ದು ಕಾಣುತ್ತದೆ. ಟಾಲ್‍ಸ್ಟಾಯ್ ಅವರ ಕನ್ನಡ ಅನುವಾದಕರಲ್ಲಿ ಎದ್ದುಕಾಣುವ ಹೆಸರುಗಳೆಂದರೆ ಎಲ್.ಗುಂಡಪ್ಪ, ಜಿ.ಪಿ.ರಾಜರತ್ನಂ, ಆನಂದ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಹ.ಪಿ.ಜೋಶಿ, ಸಿಂಪಿ ಲಿಂಗಣ್ಣ, ಶೆಣೈ, ರಾಮಚಂದ್ರ ಕೊಟ್ಟಲಗಿ, ಗೋಪಾಲಕೃಷ್ಣರಾವ್, ದೇಜಗೌ, ಸಿಪಿಕೆ, ಓ.ಎಲ್.ನಾಗಭೂಷಣಸ್ವಾಮಿ, ಜನಾರ್ಧನ ಭಟ್, ವಿ.ವಿ ಉಪಾಧ್ಯಾಯ, ಟಿ.ಪಿ.ಅಶೋಕ, ಶ್ರೀನಿವಾಸ ಸುತ್ರಾವೆ, ಎಚ್.ಎಚ್.ಅಣ್ಣೇಗೌಡ, ಪ.ವಿ.ಚಂದ್ರಶೇಖರ, ಜ.ನಾ.ತೇಜಶ್ರೀ, ಮಾಧವ ಚಿಪ್ಪಳಿ, ಜಯಪ್ರಕಾಶ ನಾರಾಯಣ -ಹೀಗೆ ಎಲ್ಲ ತಲೆಮಾರಿಗೆ ಸೇರಿದ ಅನುವಾದಕರಿದ್ದಾರೆ. ಹೀಗೆ ಒಂದು ಯುಗವನ್ನು ಆವರಿಸಿಕೊಂಡಂತೆ ಅವನ ಪ್ರಭಾವ ಇರುವುದನ್ನು ಕಾಣಬಹುದು.

ಕನ್ನಡಕ್ಕೆ ಆಕರ್ಷಣೆ ಎನ್ನಿಸಿದ ಟಾಲ್‍ಸ್ಟಾಯ್ ಕತೆಗಳು ಆತನ ನೈತಿಕ ನಿಲುವಿನ ಧೋರಣೆಯನ್ನು ಎತ್ತಿಹಿಡಿಯುವಂತವು. ಟಾಲ್‍ಸ್ಟಾಯ್ ಕಥಾಕಣಜದಲ್ಲಿ ಸಣ್ಣಕತೆಗಳನ್ನು ಆತ ಬರೆದಿದ್ದಾನೆ. ಆದರೆ ಅವುಗಳಿಗಿಂತ ಹೆಚ್ಚಾಗಿ ಫೇಬಲ್ಸ್ ತರ ಇರುವ ಕತೆಗಳು ಅನುವಾದಕರ ಆಯ್ಕೆಯಾಗಿವೆ. ಟಾಲ್‍ಸ್ಟಾಯ್ ಕತೆಗಳನ್ನು ಅನುವಾದಿಸಿದ ಎಲ್.ಗುಂಡಪ್ಪ ಅವರ ಸಂಗ್ರಹದಲ್ಲಿ ಇರುವ ಇಪ್ಪತ್ತು ಕತೆಗಳಲ್ಲಿ ಬಹುತೇಕ ನೀತಿಯನ್ನು ಎತ್ತಿಹಿಡಿಯುವ ಕತೆಗಳಾಗಿವೆ. ‘ಕಡೆಗಣಿಸಿದ ಕಿಡಿ ಮನೆಯನ್ನು ಸುಡುತ್ತದೆ’, ‘ಮರಿಪಿಶಾಚಿ ರೊಟ್ಟಿಯ ಚೂರನ್ನು ಸಂಪಾದಿಸಿದ ಬಗೆ’, ‘ಪಶ್ಚಾತ್ತಾಪಿಯಾದ ಪಾಪಿ’, ‘ಬೆಪ್ಪುತಕ್ಕಡಿ ಐವಾನ್’ ಮುಂತಾದ ಕತೆಗಳಿವೆ. ಇದರ ಜೊತೆಗೆ ‘ಮನುಷ್ಯರು ಜೀವಿಸುವುದು ಏತಕ್ಕಾಗಿ?’, ‘ದೇವರಿಗೂ ಸತ್ಯ ಗೋಚರಿಸುವುದು’ ಈ ರೀತಿಯ ಕತೆಗಳು ಬಹಳ ಸಾರಿ ಪುನಾರವರ್ತನೆಯಾಗಿ ಅನುವಾದಗಳಲ್ಲಿ ಬಂದಿವೆ. ಗುಂಡಪ್ಪನವರ ಆಯ್ಕೆಗಳು ಒಂದು ಮಾದರಿಯಾಗಿ ಚಾರಿತ್ರಿಕವಾದಂತೆ ಅದೇ ಮಾದರಿಯನ್ನು ಅನುಸರಿಸಿ ಟಾಲ್‍ಸ್ಟಾಯ್ ಕತೆಗಳು ಕನ್ನಡಕ್ಕೆ ಬಂದಿವೆ.

ಕನ್ನಡದಲ್ಲಿ ಬಂದ ಟಾಲ್‍ಸ್ಟಾಯ್‍ನ ಕತೆಗಳು ಆತನ ಬರವಣಿಗೆಯ ಉತ್ತರಾರ್ಧದಲ್ಲಿ ಬರೆದ ಕತೆಗಳು ಎನ್ನಲಾಗುತ್ತದೆ. ಆ ಘಟ್ಟದಲ್ಲಿ ಟಾಲ್‍ಸ್ಟಾಯ್ ಅನಾವಶ್ಯಕ ಕಲೆಗಾರಿಕೆಯನ್ನು ಬಿಟ್ಟು ಸರಳವಾಗಿ ಕತೆ ಹೇಳುವುದನ್ನು ರೂಢಿಸಿಕೊಂಡಿದ್ದ. ಅದನ್ನು ಕನ್ನಡದ ಮನಸ್ಸು ಇಷ್ಟಪಟ್ಟಿರುವುದರಿಂದಲೇ ಅನುವಾದಗಳು ನಡೆದಿವೆ ಎಂದು ಊಹಿಸಬಹುದು. ಟಿ.ಪಿ.ಅಶೋಕರು ಗುರುತಿಸುವಂತೆ, “ಈ ಕತೆಗಳಲ್ಲಿ ಪ್ರಜ್ಞಾಪೂರ್ವಕ ಕಲೆಗಾರಿಕೆಯಾಗಲೀ ಕುಸುರಿ ಕೆಲಸದ ಕಸುಬುಗಾರಿಕೆಯಾಗಲೀ ಕಂಡುಬರುವುದಿಲ್ಲ. ಹಿರಿಯನೊಬ್ಬ ತನ್ನ ಮಕ್ಕಳು, ಮೊಮ್ಮಕ್ಕಳು, ನೆರೆಹೊರೆಯವರೊಂದಿಗೆ ಹಂಚಿಕೊಂಡ ಅನುಭವ ಕಥನಗಳಂತಿರುವ ಈ ಬರಹಗಳು ಸರಳತೆಯಿಂದ ಮನಮುಟ್ಟುತ್ತದೆ”(ಮಾಧವ ಚಿಪ್ಪಳಿ ಅವರ ಟಾಲ್‍ಸ್ಟಾಯ್ ಕತೆಗಳಿಗೆ ಬರೆದ ಮುನ್ನುಡಿಯಲ್ಲಿ). ಪ್ರಾಯಶ: ಈ ಕಾರಣಗಳಿಂದಲೇ ಟಾಲ್‍ಸ್ಟಾಯ್ ಕತೆಗಳು ಮತ್ತೆ ಮತ್ತೆ ಅನುವಾದಗೊಳ್ಳಲು ಪ್ರೇರಣೆಯಾಯಿತೇನೊ.

ಕೆಲವು ಅನುವಾದಕರು ಟಾಲ್‍ಸ್ಟಾಯ್‍ನ ತಮ್ಮ ಇಷ್ಟದ ಒಂದು ಅಥವಾ ಕೆಲವು ಕತೆಗಳನ್ನು ಅನುವಾದ ಮಾಡಿರುವುದುಂಟು. ಟಾಲ್‍ಸ್ಟಾಯ್ ಕತೆಗಳನ್ನು ಕನ್ನಡಕ್ಕೆ ತಂದ ಅನುವಾದಗಳಲ್ಲಿ ನನ್ನ ಗಮನಕ್ಕೆ ಬಂದವು ಎಂದರೆ ಜಿ.ಪಿ.ರಾಜರತ್ನಂ ಅವರ ‘ಬೆಪ್ಪುತಕ್ಕಡಿ ಐವಾನ್’(1934?), ಸಿಂಪಿ ಲಿಂಗಣ್ಣನವರ ‘ಲಿಯೊ ಟಾಲ್‍ಸ್ಟಾಯ್ ಪವಿತ್ರ ಜೀವನ’(1936), ಎಸ್.ಕೆ.ಕರೂರ್ ಅವರ ‘ನವರತ್ನಗಳು’(1946), ಈಶ್ವರಭಟ್ಟ ಅನುವಾದಿಸಿದ ‘ನಾಲ್ಕು ಕತೆಗಳು’(1954), ಎಸ್.ಎಸ್.ನವಕಾನ ಅವರ ಅನುವಾದ -‘ದೇವರ ಸಾಮ್ರಾಜ್ಯದಲ್ಲಿ ಮತ್ತು ಇತರ ಕತೆಗಳು’(1956), ವಿ.ಎ.ಶೆಣೈ ಅವರ ‘ದೇವರ ನ್ಯಾಯ’(1960), ಜನಾರ್ದನಭಟ್ ಅವರ ‘ಟಾಲ್‍ಸ್ಟಾಯ್ ಹೇಳಿದ ಕಥೆಗಳು(1997), ಓ.ಎಲ್.ಎನ್ ಅವರ ‘ಲಿಯೊ ಟಾಲ್‍ಸ್ಟಾಯ್ ಮೂರು ಕಥೆಗಳು)ಸಾವು, ಫಾದರ್ ಸರ್ಗಿಯಸ್, ಕ್ರೂಟರ್ಸ್ ಸೊನಾಟಾ)(2007), ಎರಡು ರಷ್ಯನ್ ನೀಳ್ಗತೆಗಳು(ಲಿಯೊ ಟಾಲ್‍ಸ್ಟಾಯ್‍ನ ‘ಫಾದರ್ ಸರ್ಗಿಯಸ್’ ಹಾಗು ನಿಕೊಲಾಯ್ ಗೊಗಲ್‍ನ ‘ಓವರ್ ಕೋಟ್’(2008), ಮಾಧವ ಚಿಪ್ಪಳಿಯವರ ‘ಆರು ಟಾಲ್‍ಸ್ಟಾಯ್ ಕತೆಗಳು’(2009) ಮುಂತಾದವು. ಇದರ ಜೊತೆಗೆ ಎಲ್.ಗುಂಡಪ್ಪನವರು ಅನುವಾದಿತ ಟಾಲ್‍ಸ್ಟಾಯ್ ಕತೆಗಳು ಮತ್ತೆ ಮತ್ತೆ ಬೇರೆ ಬೇರೆ ಪ್ರಕಾಶನಗಳಿಂದ ಬೇರೆ ಬೇರೆ ಕಾಲದಲ್ಲಿ ಪ್ರಕಟಿತಗೊಂಡಿವೆ.

ಕನ್ನಡದ ಸಂದರ್ಭದಲ್ಲಿ ನೋಡುವಾಗ ಟಾಲ್‍ಸ್ಟಾಯ್ ಬರೆದ ಕಾದಂಬರಿಗಳು ತಮ್ಮ ಜನಪ್ರಿಯತೆಯನ್ನು ಬಿಟ್ಟುಕೊಟ್ಟಿಲ್ಲ. ಕ್ಲಾಸಿಕ್ ಪಠ್ಯಗಳನ್ನು ಕನ್ನಡಿಗರು ಕನ್ನಡದಲ್ಲಿ ಓದಲಿ ಎಂಬ ದೃಷ್ಟಿಯಿಂದ ಟಾಲ್‍ಸ್ಟಾಯ್‍ನ ಹಲವಾರು ಕಾದಂಬರಿಗಳು ಅನುವಾದಗೊಂಡಿವೆ. ಅವುಗಳಲ್ಲಿ ಮುಖ್ಯವಾಗಿ ‘ಅನಾ ಕರೆನಿನಾ’ ಮತ್ತು ‘ವಾರ್ ಅಂಡ್ ಪೀಸ್’ ಎಂಬ ಕೃತಿಗಳು ಮುಂಚೂಣಿಯಲ್ಲಿವೆ. ಟಾಲ್‍ಸ್ಟಾಯ್ ಜನಪ್ರಿಯನಾಗಿದ್ದು ತನ್ನೆರೆಡು ಬೃಹತ್ ಕಾದಂಬರಿಗಳಿಂದ. ‘ಅನಾ ಕರೆನಿನಾ’ ಹಾಗು ‘ವಾರ್ ಅಂಡ್ ಪೀಸ್’ ಕೃತಿಗಳು ಕಾದಂಬರಿ ರೂಪದಲ್ಲಿರುವ ಮಹಾಕಾವ್ಯಗಳೆಂಬಂತೆ ಅವುಗಳ ಸ್ಥಾನವನ್ನು ಗುರುತಿಸುವುದುಂಟು. ಕನ್ನಡದಲ್ಲಿ ‘ಅನಾ ಕರೆನಿನಾ’ ಅಥವಾ ‘ವಾರ್ ಅಂಡ್ ಪೀಸ್’ ಕಾದಂಬರಿಗಳನ್ನು ಓದುವುದು ಖಂಡಿತ ಒಂದು privilege. ಇಂಗ್ಲಿಷಿನಲ್ಲಿಯೇ ಈ ಕಾದಂಬರಿಗಳ ಬಹಳಷ್ಟು ಅನುವಾದಗಳು ಬಂದಿದ್ದು ಕನ್ನಡದಲ್ಲಿ ಯಾವ ಪಠ್ಯವನ್ನು ಆಧರಿಸಿ ಅನುವಾದ ಮಾಡುತ್ತಾರೆ ಎನ್ನುವುದು ಸೂಕ್ಷ್ಮಸ್ತರದಲ್ಲಿ ಮುಖ್ಯವಾಗುತ್ತದೆ. ಈ ಎರಡು ದೈತ್ಯಕೃತಿಗಳನ್ನು ಕನ್ನಡದಲ್ಲಿ ತಂದ ಸಾಹಸಿಗರಲ್ಲಿ ಮೊದಲಿಗರಾಗಿ ನಿಲ್ಲುವವರು ದೇಜಗೌ ಅವರು. ಅವರು ‘ಅನಾ ಕರೆನಿನಾ’, ‘ಯುದ್ಧ ಮತ್ತು ಶಾಂತಿ’ ಹಾಗು ‘ಪುನರುತ್ಥಾನ’ ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇಲ್ಲಿಯೇ ದಾಖಲಿಸಬಹುದಾದ ಸಂಗತಿ ಎಂದರೆ ದೇಜಗೌ ಅವರ ಅನುವಾದಗಳು ಕನ್ನಡದ ಓದುಗರಿಗೆ ಟಾಲ್‍ಸ್ಟಾಯ್‍ನ ಕ್ಲಾಸಿಕ್ ಕೃತಿಗಳ ಬಗ್ಗೆ ಉಂಟು ಮಾಡುವ ಭಾವಗಳನ್ನು ಲೆಕ್ಕಹಾಕುವುದಕ್ಕಿಂತ ಅವುಗಳ ಚಾರಿತ್ರಿಕ ಮಹತ್ವವನ್ನು ಗಮನಿಸಬಹುದೆನಿಸುತ್ತದೆ. ದೇಜಗೌ ಅವರದು ನೇರ ಅನುವಾದದ ಶೈಲಿ. ಹಾಗಾಗಿ ಅವರು ಪದಶಃ ಅನುವಾದಗಳಲ್ಲಿ ಕಳೆದು ಹೋಗುತ್ತಾರೆ. ಅನಾ ಕರೆನಿನಾ ಕಾದಂಬರಿಯ ‘ ಕಿಟ್ಟಿ, ನೀನು ಮಜೂರ್ಕ ಕುಣಿಯುವುದಿಲ್ಲವೆ?”, “ಇಲ್ಲ, ಎಂದು ಕಿಟ್ಟಿ ಸಗದ್ಗದಳಾಗಿ ನುಡಿದಳು”( ಅನಾ ಕರೆನಿನಾ, ಪು.110). ಹೀಗೆ ಪದಶಃ ಅನುವಾದಗಳು ಓದಿಗೆ ಸರಾಗವನ್ನು ಉಂಟು ಮಾಡುವುದಿಲ್ಲ. ಪ್ರಾಯಶಃ ಕ್ಲಾಸಿಕ್ ಬೇಕಾದ ಘನಭಾಷೆಯನ್ನು ಭಾವಿಸಿದ್ದರಿಂದ ಕಾದಂಬರಿ ದೂರ ಹೋಯಿತು ಎನ್ನಿಸುತ್ತದೆ. ಆದರೆ ತೇಜಶ್ರೀ ಅನಾ ಕರೆನಿನಾ ಕೃತಿಯ ಸಂಗ್ರಹಾನುವಾದವನ್ನು ಮಾಡಿರುವುದು ಆಡುಗನ್ನಡಕ್ಕೆ ಹತ್ತಿರವಿದ್ದು ಓದಿಸಿಕೊಂಡುವ ಹೋಗುತ್ತದೆ. ಓ.ಎಲ್.ನಾಗಭೂಷಣಸ್ವಾಮಿ ಅವರು ಅನುವಾದಿಸಿದ ‘ಯುದ್ಧ ಮತ್ತು ಶಾಂತಿ’ ಕೃತಿಯು ಟಾಲ್‍ಸ್ಟಾಯ್‍ನ ‘ಲೂಸ್ ಬ್ಯಾಗಿ ಮಾನ್‍ಸ್ಟರ್’ ಎಂದೇ ನಿರ್ದೇಶಿತವಾದ ‘ವಾರ್ ಅಂಡ್ ಪೀಸ್’ ಎಂಬ ಬೃಹತ್ ಕೃತಿ. ಮೂಲಕೃತಿಯ ಆಶಯವನ್ನು ಕನ್ನಡದಲ್ಲಿ ಪುನರ್ನಿಮಾಣ ಮಾಡುವಲ್ಲಿ ಯಶಸ್ವಿಯಾಗಿದೆ. ಇಂಗ್ಲಿಷ್ ಕಾದಂಬರಿ ಓದಲಾಗದವರು ಕನ್ನಡದಲ್ಲಿ ಓದಿ ಕೃತಿಯನ್ನು ಆಸ್ವಾದಿಸಬಹುದು; ಟಾಲ್‍ಸ್ಟಾಯ್‍ನನ್ನು ಕನ್ನಡದ ಮೂಲಕ ನೋಡಬಹುದು.

ಟಾಲ್‍ಸ್ಟಾಯ್ ಇತರೆ ಕಾದಂಬರಿಗಳು ಕನ್ನಡಕ್ಕೆ ಬಂದಿವೆ. ಅವುಗಳಲ್ಲಿ ಗಮನಕ್ಕೆ ಬಂದವು ಎಂದರೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅನುವಾದಿಸಿದ ‘ಮಲೆನಾಡವರು’(ದ ಕೊಸಾಕ್ಸ್ ಕಾದಂಬರಿ ಅನುವಾದ)(1947), ಎಲ್. ಗುಂಡಪ್ಪ ಅವರ ‘ಕುಟುಂಬ ಸೌಖ್ಯ’(1951), ಹ.ಪಿ.ಜೋಶಿ ಅವರ ‘ಮನೆಯ ಸೌಖ್ಯ’(1951), ಗೋವಿದಂದ ವೆಂಕಟೇಶ ಚುಳಕಿ ಅವರ ‘ಸ್ಮಶಾನ ವೈರಾಗ್ಯ’(ದ ಕ್ರೂಝರ್ ಸೊನಾಟಾ ಕೃತಿ)(1969), ಬೈರಕೂರು ವೆಂಕಟೇಶ ಅವರ ‘ಭೂತಾಟಿಕೆ’(ದ ಡೆವಿಲ್ ಕೃತಿ)(1970), ಉಪಾಧ್ಯಾಯ ಅವರು ಸಂಗ್ರಹಿಸಿ ಅನುವಾದಿಸಿದ ‘ರಿಸರಕ್ಷನ್; ಕಾದಂಬರಿಯ ಅನುವಾದ ‘ಪುನರ್ಜನ್ಮ’(1983) ಮುಂತಾದವು.

ಕನ್ನಡದಲ್ಲಿ ಜನಪ್ರಿಯವಾಗಿರುವ ಟಾಲ್‍ಸ್ಟಾಯ್ ಕೃತಿ ಎಂದರೆ ಅವನ ಆತ್ಮಕಥೆ. ಆನಂದರು ಇದನ್ನು ‘ಕೌಂಟ್ ಲಿಯೊ ಟಾಲ್‍ಸ್ಟಾಯ್ ಅವರ ಆತ್ಮಕಥೆ’(ಶೈಶವ, ಬಾಲ್ಯ, ಯೌವನ)(1958) ಎಂದು ಅನುವಾದಿಸಿದ್ದಾರೆ. ಈ ಅನುವಾದಕ್ಕೆ ಇರುವ ಗುಣವೆಂದರೆ ಅದು ಸರಳವಾದ ಕನ್ನಡದಲ್ಲಿ ಅನುವಾದಿಸಲ್ಪಟ್ಟಿರುವುದು. ಕನ್ನಡದಲ್ಲಿ ಟಾಲ್‍ಸ್ಟಾಯ್‍ನ ದನಿ ಕೇಳಿದಂತೆ ಅನ್ನಿಸುವ ನಿರೂಪಣೆ ಇಲ್ಲಿದೆ. ಆದ್ದರಿಂದಲೊ ಏನೊ ಇಂದಿಗೂ ಆನಂದರ ಈ ಕೃತಿ ಮರುಮುದ್ರಣಗೊಳ್ಳುತ್ತಾ ಇದೆ. ಇದೇ ವರ್ಗಕ್ಕೆ ಸೇರಿದ ‘ಎ ಕನ್‍ಫೆಶನ್’ ಕೃತಿಯು ತಾತ್ವಿಕ ಕೃತಿಯಾದರೂ ವ್ಯಕ್ತಿಶಃ ನಿರೂಪಣೆಯ ಕಾರಣದಿಂದ ಆತ್ಮಕಥನಕ್ಕೆ ಹತ್ತಿರವಾಗಿದ್ದು ಕನ್ನಡದ ಓದುಗರಿಗೆ ಅನೇಕ ಕಾಲಘಟ್ಟಗಳಲ್ಲಿ ಅನುವಾದಗೊಂಡು ತಲುಪಿದೆ. ಟಾಲ್‍ಸ್ಟಾಯ್‍ನ ‘ವೈಸ್ ಥಾಟ್ಸ್ ಫಾರ್ ಎವೆರಿಡೇ’ ಎನ್ನುವ ಕೃತಿಯ ಅನುವಾದವನ್ನು ಇತ್ತೀಚೆಗೆ ಜಯಪ್ರಕಾಶ ನಾರಾಯಣ ಅವರು ‘ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ’ (2017) ಎಂಬುದಾಗಿ ಮಾಡಿದ್ದಾರೆ.

ಟಾಲ್‍ಸ್ಟಾಯ್ ಬಹುಪಾಲು ಅನುವಾದಗಳು ಕನ್ನಡದಲ್ಲಿ ಆಗಿರುವುದು ವ್ಯಕ್ತಿಶಃ ಆಸಕ್ತಿಗಳಿಂದ. ಟಾಲ್‍ಸ್ಟಾಯ್‍ನನ್ನು ಓದುವುದು ಒಂದು ಶ್ರೇಷ್ಠ ಅಭಿರುಚಿಯ ಪ್ರತೀಕ ಎಂಬ ಭಾವನೆಯಲ್ಲಿ ಜಾಗತಿಕ ಓದುಗರು ಅವನನ್ನು ಓದಲಾರಂಭಿಸುತ್ತಾರೆ. ಈ ಪ್ರಜ್ಞೆಯ ಭಾಗವಾಗಿ ಕನ್ನಡದ ಟಾಲ್‍ಸ್ಟಾಯ್ ಓದುಗರು ಸಹ ಟಾಲ್‍ಸ್ಟಾಯ್‍ನನ್ನು ಅನುಸಂಧಾನ ಮಾಡಿದ್ದಾರೆ. ಟಾಲ್‍ಸ್ಟಾಯ್ ಓದುವವರು ಮೊದಲಿಗೆ ಒಬ್ಬ ಅಸಾಧಾರಣ ಓದುಗನಾಗಿರಬೇಕು. ಟಾಲ್‍ಸ್ಟಾಯ್ ಕೃತಿಗಳ ಗಾತ್ರ ಹಾಗು ಅವುಗಳೊಳಗೆ ಇರುವ ಅಭಿಜಾತ ಸಾಹಿತ್ಯದ ಸೊಗಸು ಹಾಗು ಅದರ ಘನತೆಗಳನ್ನು ಅರಿಯುವ ಓದಿನ ಹಿನ್ನೆಲೆಯಿದ್ದರೆ ಟಾಲ್‍ಸ್ಟಾಯ್ ಬಗ್ಗೆ ಒಂದು ಅಭಿರುಚಿ ಬೆಳೆಯುತ್ತದೆ. ಇದಕ್ಕೆ ಅಪಾರವಾದ ಶ್ರದ್ಧೆ ಬೇಕು. ಇದನ್ನು ಕನ್ನಡದಲ್ಲಿ ಕೆಲವು ಚೇತನಗಳು ಕೈಗೊಂಡಿದ್ದಾರೆ. ಟಾಲ್‍ಸ್ಟಾಯ್ ಅಭಿಯಾನವು ತಮ್ಮ ಸ್ವಸಂತೋಷಕ್ಕೆ ಎಂದು ಹೊರಟು ಅದನ್ನು ಇತರೆ ಜನಕ್ಕೂ ಕಾಣಿಸುವ ಸದುದ್ದೇಶದಿಂದ ಟಾಲ್‍ಸ್ಟಾಯ್ ಅನುವಾದಗಳು ಕನ್ನಡಕ್ಕೆ ಒದಗಿವೆ. ಇದನ್ನು ಹೊರತು ಪಡಿಸಿ ಸಾಂಸ್ಥಿಕವಾಗಿ ಟಾಲ್‍ಸ್ಟಾಯ್ ಅನುವಾದಗೊಂಡಿರುವುದು ವಿಶ್ವವಿದ್ಯಾಲಯಗಳು ಅವನ ಕೃತಿಗಳನ್ನು ಇಡಿಯಾಗಿ, ಬಿಡಿಬಿಡಿಯಾಗಿ ಪಠ್ಯಗಳನ್ನು ಪದವಿ ತರಗತಿಗಳಿಗೆ ಪಠ್ಯಕ್ರಮದಲ್ಲಿ ಸೇರಿಸುತ್ತಾ ಬಂದಿದ್ದರಿಂದ. ಕರ್ನಾಟದಲ್ಲಿ ಅನುವಾದ ಸಾಹಿತ್ಯ ಅಕಾಡೆಮಿ ಪ್ರಾರಂಭವಾದಾಗಿನಿಂದ ಅನುವಾದಗಳನ್ನು ಸಾಂಸ್ಥಿಕವಾಗಿ ಶಿಸ್ತುಬದ್ಧವಾಗಿ ಮಾಡಿಸ ತೊಡಗಿತು. ಇದೇ ಮುಂದೆ ಕುವೆಂಪು ಭಾಷಾಭಾರತಿ ಪ್ರಾಧಿಕಾರವಾಗಿ ಮಾರ್ಪಟ್ಟು ಅಲ್ಲಿ ಅನುವಾದ ಚಟುವಟಿಕೆಗಳು ನಡೆಯತೊಡಗಿದಾಗ ಮತ್ತೊಮ್ಮೆ ಟಾಲ್‍ಸ್ಟಾಯ್ ಕೃತಿಗಳು ಅನುವಾದದ ದೃಷ್ಟಿಗೆ ಬಿದ್ದವು. ಈ ದಿಸೆಯಲ್ಲಿ ಆನಂದರು ಅನುವಾದಿಸಿದ ಟಾಲ್‍ಸ್ಟಾಯ್ ಆತ್ಮಕತೆಯ ಮರುಮುದ್ರಣವಾಯಿತು. ಓ.ಎಲ್.ನಾಗಭೂಷಣಸ್ವಾಮಿ ಅವರ ‘ಯುದ್ಧ ಮತ್ತು ಶಾಂತಿ’ ಅನುವಾದಿತ ಕೃತಿ ಬಂದಿತು. ಆ.ನಾ.ತೇಜಶ್ರಿಯವರು ಸಂಗ್ರಹಿಸಿ ಅನುವಾದಿಸಿದ ‘ಅನಾ ಕರೆನಿನಾ’ ಕೃತಿ ಬಂದಿತು. ಹೀಗೆ ಮತ್ತೆ ಮತ್ತೆ ಟಾಲ್‍ಸ್ಟಾಯ್ ಕನ್ನಡದ ಕಿಟಕಿಯಲ್ಲಿ ನೋಡಿದಾಗ ಕಾಣಿಸಿಕೊಳ್ಳುವ ಚುಕ್ಕಿಯಾಗಿದ್ದಾನೆ. ನಾವೆಂತು ಆಕಾಶದ ಚಂದ್ರನನ್ನು ನೋಡಿ ಚಂದಮಾಮ ಎಂದು ಭಾವಿಸಿ ಕರೆಯುವೆವೊ ಹಾಗೆ ಟಾಲ್‍ಸ್ಟಾಯ್ ಋಷಿಯಾಗಿ, ಕತೆ ಹೇಳುವ ಅಜ್ಜನಾಗಿ ನಮಗೆ ಬಂಧುವಾಗಿ ಉಳಿದಿದ್ದಾನೆ. ದೂರದ ರಷ್ಯಾಮನುಷ್ಯನಾಗಿ ಅಲ್ಲ; ಎಲ್ಲರಿಗು ಸಲ್ಲುವ ಮಾನವನಾಗಿ.
*********
ಟಾಲ್‍ಸ್ಟಾಯ್ ಅನುವಾದಗಳು ಕನ್ನಡಕ್ಕೆ ಯಾವ ಯಾವ genreಗಳಲ್ಲಿ ಬಂದಿವೆ?-ಎನ್ನುವುದನ್ನು ಗಮನಿಸುವುದು-ಸಣ್ಣಕತೆ, ಆತ್ಮಕತೆ, ಕಾದಂಬರಿ, ಲೇಖನಗಳು- ರೂಪಾಂತರ -ಬೆಪ್ಪುತಕ್ಕಡಿ ಬೋಳೇಶಂಕರ ನಾಟಕವಾಗಿ ಕಂಬಾರರು ಮಾಡಿದ್ದು-ಮಾಸ್ತಿ ಅವರ ಕತೆ ‘ಟಾಲ್‍ಸ್ಟಾಯ್ ಮತ್ತು ಭೂಜ್ರ್ವವೃಕ್ಷ’(?)/-

ಟಾಲ್‍ಸ್ಟಾಯ್ ಲೇಖನ-‘ಕಲೆ ಮತ್ತು .. ..’ – ಕನ್ನಡದಲ್ಲಿಯೂ ಕಲೆಗಾಗಿ ಕಲೆ ಎನ್ನುವ ಚರ್ಚೆಯನ್ನು ಗಂಭೀರವಾಗಿ ಮಾಡಲು ಪ್ರೇರೇಪಣೆ ಮಾಡಿತು. ಯು.ಆರ.ಅನಂತಮೂರ್ತಿ ಅವರ ಚರ್ಚೆ ನೋಡಿ-ಟಿ.ಪಿ.ಅಶೋಕ-ನವ್ಯಕಾದಂಬರಿಯ ಪ್ರೇರಣೆಗಳು ಪುಸ್ತಕದಲ್ಲಿ-

ಟಾಲ್‍ಸ್ಟಾಯ್ ಬಗ್ಗೆ- ಈ ಲೇಖಕ ಕಮ್ಯುನಿಸ್ಟ್ ಪೂರ್ವ ರಷ್ಯಾಕ್ಕೆ ಸೇರಿದವನು-ಊಳಿಗಮಾನ್ಯ ಪದ್ಧತಿ ಸರ್ವೇಸಾಧಾರಣವಾಗಿದ್ದ ಸಮಾಜ ಅದು. ರಾಜಮನೆತನಗಳು ಹಾಗು ವರ್ಗವಿವಕ್ಷೆಗಳು ಢಾಳಾಗಿದ್ದವು.

ಟಾಲ್‍ಸ್ಟಾಯ್ ಅನುವಾದಗಳು-

ಕತೆಗಳು- ಎಲ್.ಗುಂಡಪ್ಪ ಅವರ ‘ಟಾಲ್‍ಸ್ಟಾಯ್ ಕತೆಗಳು’( 1934?), ಓ.ಎಲ್.ನಾಗಭೂಷಣಸ್ವಾಮಿ ಅವರ ‘ಲಿಯೊ ಟಾಲ್‍ಸ್ಟಾಯ್ ಮೂರು ಕತೆಗಳು’(2007), ಮಾಧವ ಚಿಪ್ಪಳಿಯವರ ‘ಆರು ಟಾಲ್‍ಸ್ಟಾಯ್ ಕತೆಗಳು’(2009)

ತಾನು ಬರೆದಿದ್ದು ಬೇರೆ ಬದುಕಿದ್ದು ಬೇರೆ ಎನ್ನುವ ಕಂದರಗಳನ್ನು ಕುರಿತು ಜಿಜ್ಞಾಸೆ ಮಾಡಿದ.

ಈ ಹಿನ್ನೆಲೆಯಲ್ಲಿ ಟಾಲ್‍ಸ್ಟಾಯ್ ಎಂಬ ಮಹಾನ್ ಲೇಖಕನ ಕೃತಿಗಳ ಅನುವಾದಗಳನ್ನು ಗಮನಿಸಬಹುದು

ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡ ಬೌದ್ಧಸಾಹಿತ್ಯದ ಭಾಷಾಂತರಗಳ ಸ್ವರೂಪ ಹಾಗೂ ರಾಜರತ್ನಂ ಭಾಷಾಂತರಗಳು
ಶ್ರದ್ಧೆಯ ಬೆಸೆವ ಭಾಷಾಂತರ

ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ

ಬೇಂದ್ರೆ ಅನುವಾದಗಳ ಅನುಸಂಧಾನ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ

ಇಂಗ್ಲಿಷ್ ಗೀತಗಳ ಪಯಣ

ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...