About the Author

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.  

ನನ್ನವರ ಹಾಡು, ಹೋರಾಟ, ಮೂಡಲಕ ಕೆಂಪು ಮೂಡ್ಯಾನ, ನೂರು ಹನಿಗಳು, ದನಿಯೆತ್ತಿ ಹಾಡೇನ, ಬೆಳದಿಂಗಳು ಬಿಸಿಲಾತು, ಪ್ರತಿರೂಪ, ರೆಕ್ಕೆ ಮೂಡಿದಾಗ, ಬೆಳ್ಳಿ, ನರಬಲಿ, ಬೆಳ್ಳಕ್ಕಿ ಸಾಲು, ಬೀದಿ ನಾಟಕಗಳು, ವಿಚಾರ ಸಂಪದ, ಶಾಸನಗಳು, ಪ್ರಭುತ್ವ ಮತ್ತು ಜನತೆ, ಸಮುದಾಯ ಮತ್ತು ಸಂಸ್ಕೃತಿ. ಸಂಶೋಧನೆ-ಬಸವೇಶ್ವರ ಮತ್ತು ಪುರಂದರದಾಸರು, ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವಿಗಳು. ವಿಮರ್ಶೆ-ಹೊಸದಿಕ್ಕು, ವಚನ ಚಳವಳಿ, ಸಾಹಿತ್ಯ ಸಂಗಾತಿ, ಜಾನಪದ, ಅನಂತಮೂರ್ತಿ ಕೃತಿಗಳು, ದಲಿತ ಸೂರ‍್ಯ, ಕಲ್ಯಾಣನಾಡಿನ ಕೆಂಪು ಕವಿತೆಗಳು, ಆಯ್ದ ಕವನಗಳು, ಶರಣರ ಬಂಡಾಯ ವಚನಗಳು, ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 

ಸಬರದ ಅವರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪುರಸ್ಕಾರ, ಕುವೆಂಪು ಸಾಹಿತ್ಯ ಪುರಸ್ಕಾರ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 

ಬಸವರಾಜ ಸಬರದ

(20 Jun 1954)

Books by Author