About the Author

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಂಬೇಡ್ಕರ್ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ದಲಿತ ಬಂಡಾಯ ಸಾಹಿತ್ಯದೊಂದಿಗೆ ಬೆಸೆದುಕೊಂಡು ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಸಂಸ್ಕೃತಿ, ಸಮಾಜ ಸೇವೆ ಮತ್ತು  ರಂಗಭೂಮಿಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಮುಖ ಆಸಕ್ತಿ ಕವಿತೆಯಾದರೂ ಕತೆ, ನಾಟಕ, ಅನುವಾದ, ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ದುಡಿದು ಇದುವರೆಗೆ 38 ಪುಸ್ತಕಗಳನ್ನು ಹೊರತಂದಿದ್ದಾರೆ.  

ಮತ್ತೆ ಮಳೆ ಬರುವ ಮುನ್ನ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಬುದ್ಧ ಬೆಳದಿಂಗಳು ಪ್ರಮುಖ ಕವಿತಾ ಸಂಕಲನಗಳು. ಮೋಹದ ದೀಪ, ಪಾಪಪ್ರಜ್ಞೆ, ಕಥೆಗಳು. ಕೆಂಡ ಮಂಡಲ, ಬಹುರೂಪಿ - ನಾಟಕಗಳು ಹಾಗೂ ವೈಚಾರಿಕ ಬರಹಗಳಾದ, ಒಂದು ಕೊಡ ಹಾಲಿನ ಸಮರ, ಅಪರಿಮಿತದ ಕತ್ತಲೆ, ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಇವರ ಇತರ ಪ್ರಮುಖ ಗದ್ಯ ಕೃತಿಗಳು.    

ಇವರ ಕವಿತೆಗಳು ಅನೇಕ ಭಾರತೀಯ ಭಾಷೆಗಳೂ ಸೇರಿದಂತೆ ಇಂಗ್ಲೀಷ್, ಸ್ಪ್ಯಾನಿಷ್, ಫ್ರೆಂಚ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡು ಕೊಲಂಬಿಯಾ, ಇಸ್ರೇಲ್ ಹಾಗೂ ಆಸ್ಟ್ರಿಯಾ ದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ವೆನೆಜುಯೇಲಾ ದೇಶದ ಸರ್ಕಾರ 2005 ರಲ್ಲಿ ವಿಶ್ವ ಕಾವ್ಯ ಮಾಲೆ (world poetry series) ಅಡಿಯಲ್ಲಿ ‘ಪೊಯೆಮಾಸ್ - ಮೂಡ್ನಾಕೂಡು’ ಎಂಬ ಇವರ ಸ್ಪ್ಯಾನಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದೆ. ಸ್ಪ್ಯಾನಿಷ್ ಭಾಷೆಗೆ ಗ್ರಂಥರೂಪದಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಕವಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ. 

ಇದಲ್ಲದೆ, ಎರ್ಬಾಚೆ ಪಬ್ಲಿಷರ್ಸ್ ಲಿವರ್ಪೂಲ್, ಬ್ರಿಟನ್ ಮತ್ತು ಯೋಡಾ ಪ್ರೆಸ್, ದೆಹಲಿ ಇವರು ‘ಬಿಫೋರ್ ಇಟ್ ರೆಯಿನ್ಸ್ ಅಗೆಯ್ನ್’ ಎಂಬ ಇಂಗ್ಲಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದ್ದಾರೆ ಹಾಗೂ ಹಿಂದಿ, ಉರ್ದು, ತೆಲುಗು, ಮರಾಠಿ ಭಾಷಾಂತರಗೊಂಡ ಕವಿತಾ ಸಂಗ್ರಹಗಳೂ ಪ್ರಕಟಗೊಂಡಿವೆ. ಇವರ ಕವಿತೆಗಳು ಶಾಲಾಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಕ ಪಠ್ಯಗಳಾಗಿವೆ. ಕನ್ನಡದ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲದೆ ಹಲವಾರು ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತಾವಾಚನ, ಪ್ರಬಂಧ ಮಂಡನೆ ಮಾಡಿರುತ್ತಾರೆ.

ಇವರು ರಂಗಾಯಣ ರೆಪರ್ಟರಿಗೆ ‘ಬಹುರೂಪಿ’ ಎಂಬ ಕಾವ್ಯನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರಲ್ಲದೇ, ಪೂಚಂತೇ ಅವರ ಕುರಿತ ‘ಮಾಯಾಲೋಕ’ ಎಂಬ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ‘ಜರ್ನಲ್ ಆಫ್ ಕಾಮನ್‍ವೆಲ್ತ್ ಲಿಟರೇಚರ್’ ಎಂಬ ಬ್ರಿಟನ್ನಿನ ಪ್ರತಿಷ್ಟಿತ ಸಾಹಿತ್ಯ ಪತ್ರಿಕೆ 2019 ರ ವಿಶೇಷ ಸಂಚಿಕೆಯಲ್ಲಿ ಇವರ ಸಂದರ್ಶನವನ್ನು ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ವಾರಂಬಳ್ಳಿ ಕಾವ್ಯ ಪ್ರಶಸ್ತಿ, ಶಿರಸಂಗಿ ಲಿಂಗರಾಜ ಸಾಹಿತ್ಯ ಪ್ರಶಸ್ತಿ ಹಾಗೂ ಬೇಂದ್ರೆ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ. ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2009) ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2014) ಗಳಿಗೂ ಭಾಜನರಾಗಿರುತ್ತಾರೆ.  ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು 2019 ರಲ್ಲಿ ಇವರ ಸಮಗ್ರ ಸಾಹಿತ್ಯವನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ.

ಫೆಬ್ರವರಿ 2010 ರಲ್ಲಿ 2ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಏಪ್ರಿಲ್ 2011 ರಲ್ಲಿ ಭಾಲ್ಕಿಯಲ್ಲಿ ನಡೆದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಮತ್ತು ಜೂನ್ 2011 ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ. “ಔಟ್‍ಲುಕ್” ಇಂಗ್ಲೀಷ್ ವಾರಪತ್ರಿಕೆ ತನ್ನ 26, ಏಪ್ರಿಲ್ 2021 ರ ಅಂಬೇಡ್ಕರ್ ವಿಶೇಷ ಸಂಚಿಕೆಗಾಗಿ ನಡೆಸಿದ ಸಮೀಕ್ಷೆಯಲ್ಲಿ ‘ಭಾರತವನ್ನು ಪುರ್ನನಿರ್ಮಾಣ ಮಾಡುವ 50 ದಲಿತ ಸಾಧಕರ ಪಟ್ಟಿ’ಯಲ್ಲಿ ಇವರನ್ನು ಹೆಸರಿಸಲಾಗಿದೆ. ಅಲ್ಲದೇ ಕರ್ನಾಟಕ ವಿಚಾರವಾದಿ ವೇದಿಕೆಯು 2021ನೇ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮೂಡ್ನಾಕೂಡು ಚಿನ್ನಸ್ವಾಮಿ

(22 Sep 1954)

Books by Author

Books about Author

BY THE AUTHOR