ಅಗೋಚರ ಕತೆಗಳ ಅಂತ್ಯವಿಲ್ಲದ ಸ್ವಗತಗಳು age of youth

Date: 28-05-2022

Location: ಬೆಂಗಳೂರು


"ಯಾವ ಘಟನೆಯೂ ಅನಿರೀಕ್ಷಿತವಾಗಿ ಸಂಭವಿಸುವುದಿಲ್ಲ. ದಿನನಿತ್ಯ ಘಟಿಸುವ ಪ್ರತಿಯೊಂದು ಸಂಗತಿಯ ಹಿಂದೆಯೂ ಕಾರ್ಯಕಾರಣ ಸಂಬಂಧವಿದೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಎಲ್ಲ ಘಟನೆಗಳೂ ಮುನ್ಸೂಚನೆಯೊಂದಿಗೇ ಆರಂಭವಾಗುತ್ತವೆ ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ ಅವರು ತಮ್ಮ ಬೆಳ್ಳಕ್ಕಿ ಸಾಲು ಅಂಕಣದಲ್ಲಿ ಈ ಬಾರಿ Age of Youth (Hello, My Twenties!) ವೆಬ್ ಸೀರಿಸ್ ಕುರಿತು ಬರೆದಿದ್ದಾರೆ.

"ಚಿಕ್ಕವಳಿದ್ದಾಗ ನಾನೇ ನನ್ನ ಜಗತ್ತಿನ ಕೇಂದ್ರಬಿಂದುವಾಗಿದ್ದೆ. ನಾನು ನಿದ್ರೆಗೆ ಜಾರಿದಾಗ ಇಡೀ ಜಗತ್ತೇ ತನ್ನ ಚಲನೆಯನ್ನು ನಿಲ್ಲಿಸಿಬಿಡುತ್ತದೆ ಎಂದುಕೊಂಡಿದ್ದೆ. ಜಗತ್ತು ನನ್ನಿಂದಾಗಿಯೇ ಜೀವಂತವಾಗಿದೆ ಎಂದು ಭಾವಿಸಿದ್ದೆ. ನಾನಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಜಗತ್ತಿನ ಪ್ರತಿಯೊಂದು ಸಂಗತಿಯೂ ನನ್ನನ್ನು ಸಂತೋಷ ಪಡಿಸಲೆಂದೇ ಅಸ್ತಿತ್ವದಲ್ಲಿದೆ ಎನ್ನುವುದು ಆ ದಿನಗಳ ನನ್ನ ಕಲ್ಪನೆಯಾಗಿತ್ತು. ಆದರೆ ಅದೇ ಜಗತ್ತು ನಾನಿಲ್ಲದೆಯೂ ನಿರಂತರವಾಗಿ ಚಲಿಸುತ್ತಿರುತ್ತದೆ ಎನ್ನುವುದು ನನ್ನ ಅರಿವಿಗೆ ಬಂದಿದ್ದು ಯಾವಾಗ, ನೆನಪಿಲ್ಲ. ನಾನು ಈ ಪ್ರಪಂಚದ ಕೇಂದ್ರಬಿಂದು ಅಲ್ಲವೆಂದು ಅರಿವಾಗಿದ್ದು ಯಾವಾಗ? ಪ್ರಪಂಚದಲ್ಲಿರುವ ಅಸಂಖ್ಯಾತ ಜನರಲ್ಲಿ ನಾನು ಕೂಡಾ ಒಬ್ಬಳು ಅಷ್ಟೇ ಎನ್ನುವ ವಾಸ್ತವ ನನ್ನ ಅರಿವಿಗೆ ಬಂದಿದ್ದು ಯಾವಾಗ? ಇನ್ನೊಬ್ಬ ವ್ಯಕ್ತಿಯನ್ನು ಕೇವಲ ನನ್ನದೆಂದುಕೊಂಡಿದ್ದ ಜಗತ್ತಿನ ಪ್ರಮುಖ ಆಕರ್ಷಣೆಯನ್ನಾಗಿಸಿಕೊಂಡಿದ್ದು ಯಾವಾಗ? ಎಷ್ಟೇ ಉತ್ಕಟವಾಗಿ ನಾನು ಆ ವ್ಯಕ್ತಿಯನ್ನು ಬಯಸಿದರೂ ಅವನು ಕೇವಲ ನನ್ನವನಾಗಲಾರ ಎನ್ನುವುದು ಅರ್ಥವಾಗಿದ್ದು ಯಾವಾಗ? ಕೋಪ-ಹತಾಶೆಗಳು ಆವರಿಸಿಕೊಂಡು ನನ್ನನ್ನೇ ನಾನು ದ್ವೇಷಿಸಿಕೊಳ್ಳಲು ಆರಂಭಿಸಿದ್ದು ಯಾವಾಗ? ನಾನು ಬೇರೆಯವರನ್ನು ದ್ವೇಷಿಸಿದಂತೆಯೇ ಅವರೂ ನನ್ನನ್ನು ದ್ವೇಷಿಸಬಲ್ಲರು. ನಾನು ನನ್ನನ್ನು ದ್ವೇಷಿಸಿಕೊಂಡಂತೆಯೇ ಬೇರೆಯವರ ದ್ವೇಷದಲ್ಲಿಯೂ ನಾನಿದ್ದೇನೆ." ಒಂದೊಂದು ನೋವಿನ ಸ್ವಗತದ ಹಿಂದೆಯೂ ಒಂದೊಂದು ಕತೆ!

Age of Youth (Hello, My Twenties!) ಇಪ್ಪತ್ತರ ವಯಸ್ಸಿನ ಆಸುಪಾಸಿನಲ್ಲಿರುವ ಹೆಣ್ಣುಮಕ್ಕಳ ಕತೆಗಳ ಸರಣಿ. ವಿದ್ಯಾಭ್ಯಾಸ, ಉದ್ಯೋಗಗಳ ಕಾರಣಕ್ಕಾಗಿ ಇವರೆಲ್ಲರೂ ಹೆತ್ತವರಿಂದ ದೂರವಾಗಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಸ್ವಭಾವ, ಜೀವನಶೈಲಿಗಳಲ್ಲಿರುವ ಅಂತರದಿಂದಾಗಿ ಸಹಜವಾಗಿಯೇ ಪರಸ್ಪರ ದೂರು-ಅಸಹನೆಗಳಿವೆ. ತಮ್ಮತಮ್ಮ ಇತಿಮಿತಿ, ದೌರ್ಬಲ್ಯಗಳ ಅರಿವಿದ್ದೂ ಇತರರೆದುರು ತೋರಿಸಿಕೊಳ್ಳದೇ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತ ಜತೆಯಾಗಿ ಬದುಕುತ್ತಿದ್ದಾರೆ. ಐದು ಜನರಿಗೆ ಸ್ಥಳಾವಕಾಶವಿರುವ ಆ ಮನೆಯಲ್ಲಿ ತಮ್ಮ ಆದಾಯಕ್ಕೆ ಅನುಗುಣವಾಗಿ ಖರ್ಚುವೆಚ್ಚಗಳನ್ನು ಸರಿದೂಗಿಸಿಕೊಳ್ಳಲು ಜತೆಗಿರುವ ಆ ಐವರು ಹೆಣ್ಣುಮಕ್ಕಳ ನಡುವೆ ಹೇಳಿಕೊಳ್ಳುವಂತಹ ಹೊಂದಾಣಿಕೆಯೇನಿಲ್ಲ. ಅವರನ್ನು ಒಟ್ಟಿಗೆ ಬಂಧಿಸಿಟ್ಟಿರುವುದು ಬದುಕಿನ ಅನಿವಾರ್ಯತೆಗಳೇ ಹೊರತು ಪ್ರೀತಿ-ವಿಶ್ವಾಸಗಳಲ್ಲ. ಆ ಮನೆ ನಿಜವಾದ ಅರ್ಥದಲ್ಲಿ ಮನೆಯೇ ಅಲ್ಲ. ಬೇರೆಬೇರೆ ಕಾರಣಗಳಿಗಾಗಿ ಆ ಮನೆಯ ಮೆಟ್ಟಿಲು ಹತ್ತಿದ ಆ ಹೆಣ್ಣುಮಕ್ಕಳ ನೋವು-ನಲಿವುಗಳಲ್ಲಿರುವ ಸಾಮ್ಯತೆಯಿಂದಾಗಿ ಕ್ರಮೇಣ ಅಲ್ಲೊಂದು ಸಾಮರಸ್ಯವೂ ಹುಟ್ಟಿಕೊಳ್ಳುತ್ತದೆ. ಆ ಸಾದೃಶ್ಯದಿಂದಾಗಿ ಅವರ ನಡುವೆ ಹುಟ್ಟಿಕೊಳ್ಳುವ ಸ್ನೇಹವೇ ಈ ಸರಣಿಯ ಕಥಾವಸ್ತು.

ಯಾರ ಬದುಕಿನ ಕತೆಗೂ ನಿಜದಲ್ಲಿ ಅಂತ್ಯವೆನ್ನುವುದಿಲ್ಲ. ಇಲ್ಲಿ ಮುಗಿದಂತೆ ಭಾಸವಾಗುವ ಕತೆ ಇನ್ನೆಲ್ಲೋ ಬೇರೆ ತಿರುವಿನಲ್ಲಿ ಮತ್ತೆ ಶುರುವಾಗಲು ಕಾಯುತ್ತಿರಬಹುದು; ಈ ಕ್ಷಣ ಆರಂಭವಾದ ಹೊಸ ಕತೆಯೊಂದು ದಿನಗಳು ಕಳೆದಂತೆ ಹಳತಾಗುತ್ತ ತನ್ನ ಚೆಲುವನ್ನು ಕಳೆದುಕೊಳ್ಳಬಹುದು; ಈ ಬದುಕಿಗೆ ಹಳತೆನ್ನಿಸುವ ಕತೆ ಇನ್ನೊಂದು ಬದುಕಿನಲ್ಲಿ ಹೊಚ್ಚಹೊಸದರಂತೆ ಹೊಳೆದು ಅಚ್ಚರಿ ಹುಟ್ಟಿಸಬಹುದು; ಇವರ ಬದುಕಿನ ಕತೆ ಅವರ ಬದುಕಿನದೂ ಆಗಿ, ಸಂಬಂಧಗಳ ಸ್ವರೂಪದಲ್ಲಿರುವ ಸಾಮ್ಯತೆಯೇ ನೀರಸವೆನ್ನಿಸಿಯೂಬಿಡಬಹುದು. ಅವರವರ ಬದುಕಿನ ಕತೆಗಳಿಗೆ ಸಂದರ್ಭಕ್ಕೆ ಅನುಗುಣವಾಗಿ ದೊರಕಿದ ಆರಂಭ, ವಿಸ್ತಾರ, ಅಂತ್ಯಗಳು ಆ ಸಮಯಕ್ಕೆ ಮಾತ್ರ ಸೀಮಿತ. ಮತ್ತೊಮ್ಮೆ ಅವು ಹುಟ್ಟಿಕೊಳ್ಳಲು ಹವಣಿಸುವ ಕ್ಷಣಗಳಲ್ಲಿ ಅವುಗಳ ಸ್ವಭಾವ, ಸ್ವರೂಪಗಳೆಲ್ಲವೂ ಈಗಿನ ಸಮಯ-ಸಂದರ್ಭಗಳ ಇತಿಮಿತಿಯಲ್ಲಿ ಇರುವಂಥವುಗಳು. ಹಾಗೆ ಏಕಾಂತಕ್ಕೆ ಮಾತ್ರ ಸೀಮಿತವಾಗಿ ಗುಟ್ಟು ಬಿಟ್ಟುಕೊಡದ ಕತೆಗಳು, ನೆನಪಿನಲ್ಲಿ ಮಾತ್ರ ಉಳಿದು ಅಗತ್ಯಕ್ಕೆ ತಕ್ಕ ವೇಷ ಧರಿಸಿ ದಿನನಿತ್ಯ ಜತೆಯಾಗುವ ಕತೆಗಳು, ಈ ಕ್ಷಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿಯೂ ಮುಂದೊಮ್ಮೆ ಬದುಕಿಗೆ ಆಧಾರವಾಗಬಲ್ಲಂತಹ ಸಂಗತಿಗಳಲ್ಲಿ ಅಡಗಿಕೊಂಡಿರುವ ಅಗೋಚರ ಕತೆಗಳು ಎಲ್ಲವೂ ಅಗತ್ಯಕ್ಕಿಂತ ಜಾಸ್ತಿ ಬೆನ್ನುಹತ್ತಿದರೆ ಭಯಾನಕವೇ!

"ಯಾವ ಘಟನೆಯೂ ಅನಿರೀಕ್ಷಿತವಾಗಿ ಸಂಭವಿಸುವುದಿಲ್ಲ. ದಿನನಿತ್ಯ ಘಟಿಸುವ ಪ್ರತಿಯೊಂದು ಸಂಗತಿಯ ಹಿಂದೆಯೂ ಕಾರ್ಯಕಾರಣ ಸಂಬಂಧವಿದೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಎಲ್ಲ ಘಟನೆಗಳೂ ಮುನ್ಸೂಚನೆಯೊಂದಿಗೇ ಆರಂಭವಾಗುತ್ತವೆ. ಯಾವುದೋ ಒಂದು ತಮಾಷೆ, ಹಾದುಹೋದ ಕಡೆನೋಟ, ಸುಲಭವಾಗಿ ಅರ್ಥೈಸಿಕೊಳ್ಳಲಾಗದ ನಿಟ್ಟುಸಿರು ಹೀಗೇ ಹಿಂದಿರುಗಿ ನೋಡಿದರೆ ನಡೆದ ಎಲ್ಲ ಘಟನೆಗಳ ಹಿಂದೆಯೂ ಒಂದು ಮುನ್ಸೂಚನೆಯಿದೆ. ಅದನ್ನು ಮೀರಿ ಮುಂದೆ ಸಾಗಿದ ನಂತರವೇ ಅದರ ಮಹತ್ವ ಅರ್ಥವಾಗುವುದು ವಿಪರ್ಯಾಸ" ಎನ್ನುವ ಅವಳ ಸ್ವಗತ ಮತ್ತೊಬ್ಬಳದೂ ಆಗಬಹುದು; ಆ ಐವರದೂ ಆಗಿರಬಹುದು; ಬದುಕಿನ ಘಟನೆಗಳ ಗಂಭೀರತೆಯನ್ನು ಕಡೆಗಣಿಸಿ ಎಲ್ಲವನ್ನೂ ಮರೆಯಲು ಯತ್ನಿಸುವ ಇನ್ಯಾರದ್ದೋ ಕೂಡಾ! ಮರೆಮಾಚಲು ಯತ್ನಿಸಿದಷ್ಟೂ ಇನ್ನಷ್ಟು ತೀವ್ರವಾಗಿ ಪ್ರಕಟಗೊಳ್ಳುವ ಘಟನೆಗಳಿಗೆಲ್ಲ ಬಿಡುಗಡೆಯ ಹಾದಿಯನ್ನು ಹುಡುಕಿಕೊಳ್ಳಲು ನೆರವಾಗುವುದೇ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಲು ಇರಬಹುದಾದ ಏಕೈಕ ಮಾರ್ಗ. ಯಾವ ಘಟನೆ ನಮ್ಮೊಳಗೆ ಕತೆಯಾಗಿ ಉಳಿದುಕೊಂಡಿತು, ಅದರ ಯಾವ ಪಾತ್ರ ನಮ್ಮನ್ನು ಬಂಧಮುಕ್ತಗೊಳಿಸಬಲ್ಲದು, ಯಾವ ಅಧ್ಯಾಯದ ಜೀವಂತಿಕೆ ನಮ್ಮ ಬದುಕಿಗೆ ಚೈತನ್ಯವನ್ನು ತುಂಬಬಲ್ಲದು ಎನ್ನುವುದು ನಮ್ಮನಮ್ಮ ಹೃದಯಕ್ಕಷ್ಟೇ ಗೊತ್ತಿರುವ ಸತ್ಯ. ನಮ್ಮ ಎಲ್ಲ ಸ್ವಗತಗಳಿಗೆ ಕಿವಿಯಾಗಬೇಕಾದವರೂ ನಾವೇ.

"ನಾನು ಯಾವುದನ್ನು ನೋಡಲು ಬಯಸುತ್ತೇನೆಯೋ ಅದನ್ನು ಮಾತ್ರ ನೋಡುತ್ತೇನೆ; ಅನಗತ್ಯ ಸಂಗತಿಗಳೆಡೆಗೆ ಗಮನ ಹರಿಸಿದಂತೆಲ್ಲ ನನ್ನ ದಾರಿ ಕಠಿಣವಾಗುತ್ತದೆ. ನಾನು ಏನನ್ನು ನಂಬಿಕೊಳ್ಳಲು ಬಯಸುತ್ತೇನೆಯೋ ಅದನ್ನು ಮಾತ್ರ ನಂಬುತ್ತೇನೆ; ಅದು ನನ್ನ ನೆಮ್ಮದಿಯನ್ನು ಕಾಪಾಡುತ್ತದೆ. ನಾನು ಯಾವುದನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆಯೋ ಅದನ್ನು ಮಾತ್ರ ನೆನಪಿನಲ್ಲಿ ಉಳಿಸಿಕೊಳ್ಳುತ್ತೇನೆ; ನನ್ನನ್ನು ರಕ್ಷಿಸಿಕೊಳ್ಳುವುದು ನನ್ನದೇ ಜವಾಬ್ದಾರಿ" ಹೀಗೊಂದು ಭರವಸೆಯನ್ನು ನಮಗೆ ನಾವೇ ಕೊಟ್ಟುಕೊಳ್ಳಲು ನೆರವಾಗುವ ಸ್ನೇಹಬಳಗ ಎಷ್ಟು ಜನರಿಗೆ ದೊರಕಲು ಸಾಧ್ಯ! ಯಾವ ಆಣೆ-ಪ್ರಮಾಣಗಳೂ ಕೆಲಸಕ್ಕೆ ಬಾರದಂತಹ ಒತ್ತಡದ ಪರಿಸ್ಥಿತಿಯಲ್ಲಿ ದಿನಗಳನ್ನು ಸಾಗಿಸುತ್ತಿರುವ ಅವರಿಗೆ ಪರಸ್ಪರರ ಸ್ನೇಹವೇ ಬದುಕಿಗೆ ಒದಗಿಬರುವ ಬಹುದೊಡ್ಡ ಆಸರೆ. ಯಾರ ಪ್ರೀತಿಯ ಮಾತು ಯಾವ ನೋವನ್ನು ಕಡಿಮೆ ಮಾಡಿತು, ಯಾವ ಸಂದರ್ಭ ಯಾರ ಸ್ನೇಹವನ್ನು ಗಟ್ಟಿಗೊಳಿಸಿತು, ಯಾವ ಕತೆ ಯಾರ ಹೃದಯವನ್ನು ಮೆತ್ತಗಾಗಿಸಿತು ಎನ್ನುವುದು ಪರಸ್ಪರರಿಗೆ ಅರಿವಾಗುವ ಮೊದಲೇ ಆ ಮನೆಯ ಪ್ರೀತಿ-ವಿಶ್ವಾಸಗಳ ಕಿಟಕಿ ತೆರೆದುಕೊಂಡಿದೆ. ದೈಹಿಕ ಅಂತರವಿದ್ದೂ ಹತ್ತಿರವೆನ್ನಿಸುವ ಸಂಬಂಧಗಳು, ಅಂತರವನ್ನು ಲೆಕ್ಕಿಸದೇ ಸಾಮೀಪ್ಯವನ್ನು ಭಾವಿಸಿಕೊಂಡ ಹೃದಯಗಳು, ಸಾಮೀಪ್ಯದ ಸಂಭಾವ್ಯತೆಯೇ ಇಲ್ಲದಿದ್ದರೂ ಪ್ರೀತಿಗಾಗಿ ತವಕಿಸುವ ಜೀವಗಳು, ತಮ್ಮತಮ್ಮ ಬದುಕಿನ ಸವಾಲುಗಳನ್ನು ಅಂಗೈಯಲ್ಲಿಟ್ಟುಕೊಂಡೇ ಸಹಾಯದ ಹಸ್ತ ನೀಡುವ ಒಡನಾಟಗಳು ಎಲ್ಲವೂ ಕಿಟಕಿಯ ಒಳಗೂ ಕಾಣಿಸುತ್ತಿವೆ; ಹೊರಗೂ! ದುಃಸ್ವಪ್ನದಂತೆ ಕಾಡುತ್ತಿರುವ ಎಲ್ಲರ ಕೆಟ್ಟ ಘಳಿಗೆಗಳನ್ನೂ ನೆನಪಿನಿಂದ ದೂರಮಾಡಲು ನೆರವಾಗುವ ಆ ಸ್ನೇಹದ ಕಿಟಕಿಯಿಂದಾಗಿ ಎಲ್ಲರ ಬದುಕುಗಳೂ ಬದಲಾಗಲಿವೆ.

"ಸಂದರ್ಭ-ಸನ್ನಿವೇಶಗಳೇ ಎಲ್ಲರ ಬದುಕುಗಳನ್ನೂ ನಿರ್ಧರಿಸುತ್ತವೆ. ಎದುರಿಗಿರುವವರು ನಮ್ಮನ್ನು ಅರ್ಥಮಾಡಿಕೊಳ್ಳದೇ ಇರುವಂತಹ ಸಂದರ್ಭಗಳಲ್ಲಿಯೂ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗಿರುವುದು ಅನಿವಾರ್ಯ" ಎಂದುಕೊಳ್ಳುತ್ತಲೇ ಪ್ರತಿಯೊಬ್ಬರೂ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳನ್ನೂ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಮರ್ಥಿಸಿಕೊಳ್ಳುವ ಆ ಸ್ನೇಹಿತೆಯರ ಕಥೆಯಲ್ಲೀಗ ಕನಸುಗಳೂ ಇವೆ; ಕಹಿನೆನಪುಗಳನ್ನು ಉಳಿಸಿಹೋದ ಬಾಲ್ಯ, ಸಂಕಟ ಉಂಟುಮಾಡುವ ಕೌಟುಂಬಿಕ ಜೀವನ, ಮುರಿದುಬಿದ್ದ ಸಂಬಂಧಗಳು, ನೆಮ್ಮದಿ ಕೆಡಿಸುವ ಆರ್ಥಿಕ ಸಂಕಷ್ಟ ಎಲ್ಲವನ್ನೂ ಸ್ವೀಕರಿಸುವ ಆತ್ಮವಿಶ್ವಾಸವಿದೆ. ಮನೆಯ ಮೆಟ್ಟಿಲೇರಿದ ಸಮಯದಲ್ಲಿ ಅವರಂದುಕೊಂಡಿದ್ದಂತೆ ಯಾವುದೂ ನಡೆಯದಿದ್ದರೂ, ಕೆಟ್ಟ ಆಯ್ಕೆಗಳು ಕೊಡಮಾಡಿದ ಪಶ್ಚಾತ್ತಾಪದ ಭಾವ ಕಾಡುತ್ತಿದ್ದರೂ, ತಾವು ಇಲ್ಲಿಗೆ ಬಂದಿರುವ ಕೆಲಸ ಮುಗಿಯುತ್ತಿದ್ದಂತೆಯೇ ಮೆಟ್ಟಿಲುಗಳನ್ನು ಇಳಿಯಲೇಬೇಕೆಂಬ ನೋವಿದ್ದರೂ ನಗುವಿಗೆ ಬರವಿಲ್ಲ. ಯಾವ ಸಂಬಂಧ ಯಾರೊಂದಿಗೆ ಎಷ್ಟು ಕಾಲ ಬಾಳುವ ಯೋಚನೆಯನ್ನು ಹೊತ್ತು ಭೂಮಿಗೆ ಬಂದಿದೆಯೋ ಯಾರಿಗೆ ಗೊತ್ತು! ಒಬ್ಬಳು ಅತಿ ಮುಗ್ಧೆಯಾದರೆ, ಇನ್ನೊಬ್ಬಳು ಚಂಚಲೆ; ಒಬ್ಬಳು ಹಣಕ್ಕಾಗಿ ಯಾರನ್ನು ಬೇಕಾದರೂ ಪ್ರೀತಿಸಬಲ್ಲವಳಾದರೆ, ಮತ್ತೊಬ್ಬಳು ತನ್ನನ್ನು ತಾನೂ ಪ್ರೀತಿಸಿಕೊಳ್ಳಲಾರದ ಮನಃಸ್ಥಿತಿಯವಳು; ಎಲ್ಲರ ಬದುಕುಗಳೂ ಬದಲಾವಣೆಗಾಗಿ ಕಾಯುತ್ತಿವೆ. ಹಾಗೆ ಎಲ್ಲರ ಬದುಕನ್ನೂ ಬದಲಾಯಿಸಬಲ್ಲ ಮನೆಯೊಂದು ತನ್ನೆಲ್ಲ ಕಟ್ಟುಕಟ್ಟಳೆಗಳ ಸಮೇತ ಹೊರಬಾಗಿಲನ್ನು ತೆರೆದು ಕಾಯುತ್ತಿದೆ. ಮೆಟ್ಟಿಲುಗಳನ್ನು ಹತ್ತುವ ಕೆಲಸ ಮಾತ್ರ ಬಾಕಿಯಿದೆ.

ಈ ಅಂಕಣದ ಹಿಂದಿನ ಬರಹಗಳು:
ಅವಶೇಷಗಳ ಅನ್ವೇಷಣೆ RAIN OR SHINE
ಗೆಲುವಿನ ಹಂಬಲದ ನೋವಿನ ಹಗರಣ SCAM 1992
ಅಂತ್ಯವಿಲ್ಲದ ಸಂಘರ್ಷಗಳ ಪೂರ್ವಚರಿತ್ರೆ ROCKET BOYS
ಏಕಾಂತದೊಂದಿಗೆ ಸರಳ ಸಂಭಾಷಣೆ STORIES BY RABINDRANATH TAGORE
ಬಂಧನಕ್ಕೂ ಬಿಡುಗಡೆಗೂ ಏಕೈಕ ರಹದಾರಿ MODERN LOVE
ಕೆಂಪು ಕೂದಲಿನ ರಾಜಕುಮಾರಿಯ ಕತೆ ANNE WITH AN E
https://www.bookbrahma.com/news/asahayaka-gadirekheya-kanasina-payana-crash-landing-on-you
ಮುಗುಳ್ನಗೆಯ ಆಲಿಂಗನ SOMETHING IN THE RAIN (KOREAN ROMANTIC DRAMA)
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...