ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ

Date: 01-05-2023

Location: ಬೆಂಗಳೂರು


''ನಾನು ಸ್ಕೂಟಿ ಓಡಿಸಬೇಕು ಅಂತ ಎರಡ್ಮೂರು ಸಲ ಅಪ್ಲಿಕೇಶನ್ ಹಾಕಿದೆ ರಿಜೆಕ್ಟ್ ಆಯ್ತು. ನಿನಗೆ ಕೈಯನ್ನೇ ಎತ್ತಲು ಆಗೋದಿಲ್ಲ ನಿಂಗ್ ಗಾಡಿ ಕೊಡೋದಕ್ಕೆ ಬರಲ್ಲ ಅಂತ ರಿಜೆಕ್ಟ್ ಮಾಡಿದ್ರು. ಕೊಟ್ಟು ನೋಡಬೇಕು, ಕೊಡದೆಯೇ ಗಾಡಿ ಓಡಿಸಲು ಬರೋದಿಲ್ಲ ಅಂತೀರಲ್ಲ ಅಂತ ಮರು ಪ್ರಶ್ನೆ ಮಾಡಿದ್ದೆ,'' ಎನ್ನುತ್ತಾರೆ ವಿಜಯಾ. ಅಂಕಣಗಾರ್ತಿ ಜ್ಯೋತಿ ಎಸ್. ತಮ್ಮ ಅಂಕಣದಲ್ಲಿ ‘ಅಂಗವೈಕಲ್ಯತೆಯನ್ನು ಮೀರಿ ಬದುಕಿನಲ್ಲಿ ಸಾಧನೆಯ ಛಲ ಹೊಂದಿರುವ ವಿಜಯಾ’ ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಸಾಧನೆಗೆ ಸಾಧಿಸುವ ಮನಸ್ಸೇ ಮೂಲ. ಗೆಲ್ಲಬೇಕೆಂಬ ಛಲವಿದ್ದಾಗ ಬಡತನ, ಹಣಕಾಸಿನ ತೊಂದರೆ, ಸಂಪನ್ಮೂಲಗಳ ಕೊರತೆ, ಅಂಗವೈಕಲ್ಯದಂತಹ ಸಮಸ್ಯೆಗಳು ಗೌಣವಾಗುತ್ತವೆ. ಅಂಗವೈಕಲ್ಯ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ ಛಲಗಾತಿಯೊಬ್ಬರ ಬದುಕಿನ ಪ್ರಯಾಣವನ್ನು ಇವತ್ತಿನ ನಿಮ್ಮ ಓದಿಗೆ ತಂದಿದ್ದೇನೆ. ಎಲ್ಲ ಅಂಗಾಂಗಳು ಸರಿಯಿದ್ದು ಅನುಕೂಲವಿದ್ದೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಬದುಕುತ್ತಿರುವವರಿಗೆ ಚಾಟಿ ಬೀಸುವಂತಿದೆ ಇವರ ಜೀವನ. ಕುಮಾರಿ ವಿಜಯ ಮೈಲಾರ ಕಳ್ಳಿಮಠರವರು ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದವರು. ತಂದೆ ವಿರೂಪಾಕ್ಷಯ್ಯ ತಾಯಿ ಶಾರದಾ. ಸವಾಲುಗಳನ್ನು ಮೆಟ್ಟಿ ಹೆಸರಿಗೆ ತಕ್ಕಂತೆ ವಿಜಯ ಸಾಧಿಸುತ್ತ ಗಟ್ಟಿಯಾಗಿ ನಿಂತಿರುವ ಮೂವತ್ನಾಲ್ಕರ ವಿಜಯಾರವರ ಮಾತುಗಳನ್ನು ಓದಿಕೊಳ್ಳಿ.

'ನಾವು ನಾಲ್ಕು ಜನ ಅಕ್ಕ ತಂಗಿಯರು, ಒಬ್ಬ ತಮ್ಮ. ನಾನು ನಾಲ್ಕು ತಿಂಗಳ ಮಗು ಇರುವಾಗ ಪೋಲಿಯೋ ಬಂದಿತು. ಇದರಿಂದಾಗಿ ಎದ್ದು ನಿಲ್ಲಲು ಸಾಧ್ಯವಿಲ್ಲ. ಎಡಗಾಲಿಗೆ ಸ್ಪರ್ಶವೂ ತಿಳಿಯುವುದಿಲ್ಲ. ಎಡಗೈ ಸ್ವಲ್ಪ ಬಳಸಬಹುದು. ನಮ್ಮ ಮನೆಯಲ್ಲಿ ನಾನೊಬ್ಬಳು ಮಾತ್ರ ಹೀಗಿರೋದು. ಅಕ್ಕಂದಿರು, ಬೇರೆ ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ನನಗೂ ಓದಬೇಕು ಅಂತ ತುಂಬ ಅನ್ನಿಸುತ್ತಿತ್ತು. ಅಪ್ಪನಿಗೆ ನಾನು ಶಾಲೆಗೆ ಹೋಗುತ್ತೇನೆ ಅಂತ ಹೇಳಿದೆ. ನಿನ್ನ ಪ್ರತೀದಿನ ಯಾರು ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಾರೆ? ಆಗಲ್ಲಮ್ಮ ಅಂದಿದ್ದರು. ನನಗೆ ಓದುವ, ಕಲಿಯುವ ತೀವ್ರ ಹಂಬಲವಿತ್ತು.. ಅಕ್ಕಂದಿರು ಶಾಲೆಗೆ ಹೋಗಿ ಬಂದಮೇಲೆ ಅವರ ಹತ್ತಿರ ಹೇಳಿಸಿಕೊಂಡು ಓದುವುದನ್ನು ಬರೆಯುವುದನ್ನು ಸ್ವಲ್ಪ ಕಲಿತೆ. ಮನೆಯಲ್ಲಿ ನ್ಯೂಸ್ ಪೇಪರ್ ಇರುತ್ತಿತ್ತು. ಅದರಲ್ಲಿ ಒಂದೊಂದೇ ಪದವನ್ನು ಕೂಡಿಸಿ ಓದುವುದನ್ನು ಕಲಿತುಕೊಂಡೆ. ಓದುವ ಆಸಕ್ತಿ ಕುಗ್ಗಲಿಲ್ಲ. ಅಪ್ಪನದ್ದು ಸಣ್ಣದೊಂದು ಅಂಗಡಿ ಇತ್ತು. ಅಪ್ಪನ ಜೊತೆಗಿದ್ದು ಅಂಗಡಿ ನೋಡಿಕೊಳ್ಳುತ್ತಿದ್ದೆ. ನಂತರ STD ಬೂತ್ ಆರಂಭ ಮಾಡಿದೆವು. ಮೂರ್ನಾಲ್ಕು ವರ್ಷ ಬಹಳ ಚೆನ್ನಾಗಿ ನಡೆಯಿತು. ನಂತರ ನನ್ನ ತಮ್ಮ ಅಕಾಲಿಕ ಮರಣ ಹೊಂದಿದ ಅದರ ಆಘಾತದಿಂದ ಚೇತರಿಸಿಕೊಳ್ಳಲು ತುಂಬ ಸಮಯ ಹಿಡಿಯಿತು. ಆಮೇಲೆ ಏನೂ ಮಾಡಲು ಮನಸ್ಸಾಗಲಿಲ್ಲ. ಅಂಗಡಿ ಮತ್ತೆ ಮಾಡಬೇಕು ಅಂದ್ರೆ ಹಣಕಾಸಿನ ತೊಂದ್ರೆ ಆಯ್ತು. ಆಗ ಸಾಕ್ಷರತಾ ಪ್ರೇರಕರಾದ ರಾಜೇಶ್ವರಿ ರವಿ ಸಾರಂಗಮಠ ಅವರು ಸಮೀಕ್ಷೆ ಮಾಡುತ್ತಾ ನಮ್ಮ ಮನೆಗೂ ಬಂದರು. ನನ್ನ ಬಗ್ಗೆಯೂ ಕೇಳಿದರು. ಸ್ವಲ್ಪ ಸ್ವಲ್ಪ ಓದೋಕೆ ಬರತ್ತೆ ನಾನು ಶಾಲೆಗೆ ಹೋಗಿಲ್ಲ ಅಂದೆ. ಅವರು ಸಾಕ್ಷರತಾ ಆಂದೋಲನದ ಬಗ್ಗೆ ತಿಳಿಸಿ ರಾತ್ರಿ ಶಾಲೆಯಲ್ಲಿ ಕಲಿಯೋದು ವಯಸ್ಸಾದವರಿಗೆ ವಿದ್ಯೆ ಕಲಿಸೋದು ಇತ್ಯಾದಿಯಾಗಿ ಹೇಳುತ್ತಾ ಹೋದರು. ಇದರಲ್ಲಿ ನೀನು ಸೇರುತ್ತೀಯಾ ಅಂದಾಗ ನನಗೆ ಓದುವ ಕನಸಿತ್ತಲ್ಲ ಹಾಗಾಗಿ ಖುಷಿಯಿಂದ 2011ರಲ್ಲಿ ಸೇರಿಕೊಂಡೆ. ಬಾಳಿಗೆ ಬೆಳಕು ಪುಸ್ತಕ, ಬರೆಯುವ ಪುಸ್ತಕ ಎಲ್ಲವನ್ನು ತಂದುಕೊಟ್ಟು ಆರು ತಿಂಗಳು ರಾಜೇಶ್ವರಿ ಮೇಡಂ ಮನೆಗೆ ಬಂದು ಪಾಠ ಹೇಳಿಕೊಡುತ್ತಿದ್ದರು. ನಂತರ NIOS ಪರೀಕ್ಷೆ ಬರೆಯಲು ಹೇಳಿದರು. ಪರೀಕ್ಷೆ ಬರೆದೆ, ರಿಸಲ್ಟ್ ಬಂತು. ಇಡೀ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿತ್ತು. 2013ರಲ್ಲಿ ಸಾಕ್ಷರತಾ ಕಲಿಕೆಯಲ್ಲಿ ಉತ್ತಮ ಕಲಿಕಾರ್ಥಿಯಾಗಿ ರಾಜ್ಯ ಪ್ರಶಸ್ತಿ ಬಂತು. SSLC ಓದಲು ಶಿಕ್ಷಣಾಧಿಕಾರಿಗಳಿಂದ ಅನುಮತಿ ಪಡೆದುಕೊಂಡು DIGEST, ಪುಸ್ತಕಗಳನ್ನು ತರಿಸಿಕೊಂಡು ಮನೆಯಲ್ಲೇ ಕುಳಿತು ಓದಿ ಹಾವೇರಿ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಎಕ್ಸಾಮ್ ಬರೆದೆ. ಮೂರು ವಿಷಯಗಳು ಪಾಸ್ ಆದವು. ಹೊರಗಡೆ ಹೋಗಬೇಕು ಅಂದ್ರೆ ಏನಾದರು ಕಾರಣ ಇರಬೇಕು. ಹೊರಗಡೆ ಹೋದರೆ ಹುಡುಗರು ನನ್ನ ನೋಡಿ ನಗುತ್ತಿದ್ದರು. ಅಪಹಾಸ್ಯ ಮಾಡುತ್ತಿದ್ದರು. ಹಾಗೇ ಪ್ರೀತಿ, ವಿಶ್ವಾಸ ಕಾಳಜಿ ತೋರಿಸುವವರೂ ಇದ್ದರು'.

'ನಾನು ಸ್ಕೂಟಿ ಓಡಿಸಬೇಕು ಅಂತ ಎರಡ್ಮೂರು ಸಲ ಅಪ್ಲಿಕೇಶನ್ ಹಾಕಿದೆ ರಿಜೆಕ್ಟ್ ಆಯ್ತು. ನಿನಗೆ ಕೈಯನ್ನೇ ಎತ್ತಲು ಆಗೋದಿಲ್ಲ ನಿಂಗ್ ಗಾಡಿ ಕೊಡೋದಕ್ಕೆ ಬರಲ್ಲ ಅಂತ ರಿಜೆಕ್ಟ್ ಮಾಡಿದ್ರು. ಕೊಟ್ಟು ನೋಡಬೇಕು, ಕೊಡದೆಯೇ ಗಾಡಿ ಓಡಿಸಲು ಬರೋದಿಲ್ಲ ಅಂತೀರಲ್ಲ ಅಂತ ಮರು ಪ್ರಶ್ನೆ ಮಾಡಿದ್ದೆ. ನನ್ನ ಸಲುವಾಗಿ ಅಪ್ಪ ನಮ್ಮೂರಿನಲ್ಲಿ ಮೂರು ಗಾಲಿಯ ಸೆಕೆಂಡ್ ಹ್ಯಾಂಡಲ್ ಸ್ಕೂಟರನ್ನು ಕೊಡಿಸಿದರು. ನಾನದನ್ನು ಮುಟ್ಟಲು ಇಲ್ಲ. ಅದರ ಎರಡು ಗಾಲಿ ಬಿಚ್ಚಿಟ್ಟು ನನ್ನ ಅಕ್ಕಂದಿರು ಓಡಿಸುತ್ತಿದ್ದರು. ಸರ್ಕಾರದಿಂದ ನಾನೆ ಗಾಡಿ ತಗೊಳ್ ಬೇಕು. ಅದರಿಂದಲೇ ಕಲಿಯಬೇಕು ಎನ್ನುವ ಹಠ ನನಗೆ. ಕೊನೆಗೂ ಸರ್ಕಾರದಿಂದ ಗಾಡಿ ತೆಗೆದುಕೊಂಡು ಚಂಬಣ್ಣನನ್ನು ಕರೆದುಕೊಂಡು ಹೋಗಿ ಗ್ರೌಂಡಿನಲ್ಲಿ ಓಡಿಸೋದು ಕಲಿತುಕೊಂಡೆ. ಕಲಿಯುವಾಗ ಎರಡು ಸಲ ಬಿದ್ದೆ. ಬಿದ್ದರೂ ಬಿಡಲಿಲ್ಲ ಕಲಿತು ಹಾವೇರಿಗೆ ಚಂಬಣ್ಣನನ್ನು ಕರೆದುಕೊಂಡು ಹೊರಟೆಬಿಟ್ಟೆ. ಅಮ್ಮ ಈಗ ಒಂದೂವರೆ ವರ್ಷದ ಹಿಂದೆ ಹೃದಯಾಘಾತದಿಂದ ತೀರಿಕೊಂಡರು. ಅಕ್ಕಂದಿರಿಗೆಲ್ಲ ಮದುವೆಯಾಗಿದೆ. ನನ್ನ ತಮ್ಮ 17ನೇ ವಯಸ್ಸಿಗೆ ತೀರಿಕೊಂಡ. ಈಗ ಅಪ್ಪನ ಆರೋಗ್ಯ ಸರಿ ಇಲ್ಲ. ಅಪ್ಪನನ್ನು ನೋಡಿಕೊಳ್ಳಬೇಕಿದೆ. ಅಪ್ಪನಿಗೆ ತಿಂಗಳಿಗೆ 1200/- ನನಗೆ 1400/- ರೂ ಮಾಸಾಶನ ಬರುತ್ತದೆ. ಇಷ್ಟರಲ್ಲೇ ಜೀವನ ಸಾಗಿಸಬೇಕಿದೆ. ನನ್ನ ಹವ್ಯಾಸಗಳು ರುಚಿಕಟ್ಟಾದ ಅಡುಗೆ ಮಾಡುವುದು, ಮನೆಕೆಲಸ ಮಾಡುವುದು, ಚಿತ್ರ ಬಿಡಿಸುವುದು, ರಂಗೋಲಿ ಹಾಕುವುದು, ಪುಸ್ತಕ, ಕಾದಂಬರಿಗಳನ್ನು ಓದೋದು, ಹಾಡು ಹೇಳೋದು, ಅತಿಥಿ ಸತ್ಕಾರ ಮಾಡುವುದು ತುಂಬ ಖುಷಿಯ ಸಂಗತಿ...'

'ಸಾಕ್ಷರ ಭಾರತ ಯೋಜನೆ' ವಿಜಯಾರ ಬಾಳಿಗೆ ಬೆಳಕು ನೀಡಿತು. ಅಂಗವೈಕಲ್ಯದಿಂದಾಗಿ ನಡೆದಾಡಲು ಆಗದೆ ಮನೆಯಲ್ಲೇ ಇದ್ದ ವಿಜಯ. 75% ವಿಕಲ ಚೇತನಳಾಗಿದ್ದ ವಿಜಯಾರಿಗೆ ಎಲ್ಲದಕ್ಕೂ ಬೆನ್ನೆಲುಬಾಗಿ ನಿಂತದ್ದು ಚಂಬಣ್ಣ. ವಿಜಯಳನ್ನು ಎಲ್ಲಿಗೇ ಹೋದರೂ ಎತ್ತಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಹಾವೇರಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ 2011ರಲ್ಲಿ ಜಿಲ್ಲಾ ಪ್ರಶಸ್ತಿ. ರಾಜ್ಯ ಸರ್ಕಾರದಿಂದ 2013ರಲ್ಲಿ ಉತ್ತಮ ಕಲಿಕಾರ್ಥಿ ಪ್ರಶಸ್ತಿ, 2014 ಸೆಪ್ಟೆಂಬರ್ 8 ರಂದು ದೆಹಲಿಯಲ್ಲಿ ನಡೆದ ಸಾಕ್ಷರತಾ ದಿನಾಚರಣೆಯಲ್ಲಿ ಉಪರಾಷ್ಟ್ರಪತಿಯಿಂದ ಸನ್ಮಾನ ಪಡೆದ ಹೆಮ್ಮೆ ವಿಜಯಾರದ್ದು. ಸಾಕಷ್ಟು ಸವಾಲುಗಳಿದ್ದರೂ, ಕಷ್ಟ, ಬಡತನದ ನಡುವೆಯೂ ಕಂಪ್ಯೂಟರ್ ಕಲಿತು ತನ್ನ ಸ್ವಂತ ದುಡಿಮೆಯಿಂದ ಜೀವನ ಸಾಗಿಸಬೇಕು ಎಂಬುದು ಈಕೆಯ ಕನಸು. ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿರೋದು ವಿಜಯ. ಸದಾ ಹೊಸತನಕ್ಕಾಗಿ ಹಂಬಲಿಸುವ ಮನಸ್ಸು, ಏನನ್ನಾದರೂ ಕಲಿಯಬೇಕೆಂಬ ತುಡಿತ, ಸ್ವಾವಲಂಬಿ ಬದುಕಿನ ಛಲದಿಂದಾಗಿ ತಮ್ಮ ಅರ್ಧ ದೇಹಕ್ಕೆ ಅಂಟಿದ ಅಂಗವೈಕಲ್ಯವನ್ನು ಮೀರಿ ಬೆಳೆದ ವಿಜಯಾರವರ ಜೀವನ ಇತರರಿಗೆ ಸ್ಫೂರ್ತಿಯಾಗಲಿ. ವಿಜಯಾರವರ ಈ ವಿಜಯ ಯಾತ್ರೆ ನಿರಂತರವಾಗಿರಲಿ ಎಂಬ ಆಸೆ ನಮ್ಮದು.

ಇವರ ಕಲಿಯುವ ಮನಸ್ಸಿಗೆ ಇನ್ನೂ ಹೆಚ್ಚಿನದನ್ನು ಸಾಧಿಸುವ ಹಂಬಲಕ್ಕೆ ಆಸರೆಯಾಗಬೇಕು, ಸಹಾಯ ಮಾಡಬೇಕೆಂಬ ಇಚ್ಛೆಯುಳ್ಳವರು ನಮ್ಮನ್ನು ಸಂಪರ್ಕಿಸಿದರೆ ವಿಜಯಾರವರ ಸಂಪರ್ಕ ಮಾಹಿತಿಯನ್ನು ಒದಗಿಸುತ್ತೇನೆ.

ಧನ್ಯವಾದಗಳೊಂದಿಗೆ...
ನಿರೂಪಣೆ : ಜ್ಯೋತಿ. ಎಸ್

 

 

 

 

 

 

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...