ಬರೆಯುವ ನನ್ನ ಬಲಗೈಯೇ ಮುರಿದಿದೆ....

Date: 15-06-2023

Location: ಬೆಂಗಳೂರು


''ನನಗೋ ಓದದೇ, ಬರೆಯದೇ ಬದುಕಿರಲು ಸಾಧ್ಯವೇ ಇಲ್ಲ. ಬೇಕಾದರೆ ಬರೆಯದೇ ಇರಬಲ್ಲೆ. ಒಂದೇ ಒಂದುದಿನ ಓದದೇ ಇದ್ರೇ ನನ್ನಂತಹ ಕುಡುಮಿಗೆ ಅದೇನೋ ಚಡಪಡಿಕೆ. ಉಸಿರು ಕಟ್ಟಿದ ಏದುಸಿರಿನ ಸ್ಥಿತಿ ಎದುರಿಸಿದಂತಾಗುತ್ತದೆ. ಕಡೆಯ ಪಕ್ಷ ಪ್ರಜಾವಾಣಿ ಸೇರಿದಂತೆ ಒಂದೆರಡು ಪತ್ರಿಕೆಗಳನ್ನಾದರೂ ಓದಲೇಬೇಕು,” ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, “ ಬರೆಯುವ ನನ್ನ ಬಲಗೈಯೇ ಮುರಿದಿದೆ...” ಕುರಿತು ಲೇಖನವನ್ನು ಬರೆದಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದ ಕಂಡಾಪಟಿ ಹೈರಾಣಾಗಿದ್ದು ದೈಹಿಕವಾಗಿ ತತ್ತರಿಸಿ ಹೋಗಿದ್ದೇನೆ. ಬರೆಯುವ ಬಲಗೈ ಭುಜಕ್ಕೆ ಫ್ರ್ಯಾಕ್ಚರ್. ಕೂಡಲೇ ಅಲ್ಲದಿದ್ದರೂ ಆದಷ್ಟು ಬೇಗನೆ ಆಪರೇಷನ್ ಮಾಡದಿದ್ದರೆ ನಂತರದ ದಿನಗಳಲ್ಲಿ ಬರೆಯುವ ಬಲಗೈ ಪರಿಸ್ಥಿತಿ ಘನಗಂಭೀರವೆಂದು ಭುಜತಜ್ಞ ವೈದ್ಯರ ತುರ್ತುಸಲಹೆ. ಅದೂ ಬೆಂಗಳೂರಿನ "ಸಾಕ್ರಾ" ವರ್ಲ್ಡ್ ಹಾಸ್ಪಿಟಲ್ ಭುಜತಜ್ಞ ವೈದ್ಯ ಡಾ. ಬಿ. ಎಚ್. ಬ್ಯಾನರ್ಜಿ ಅವರ ಕರಾರುವಾಕ್ಕಾದ ಇರಾದೆ. ಅವರ ಸೂಕ್ತ ಸಲಹೆ ಮೇರೆಗೆ ಬೆಂಗಳೂರಿನ ಮಾರತ್ತಹಳ್ಳಿ ಸರಹದ್ದಿನ 'ಸಾಕ್ರಾ' ಹೈಟೆಕ್ ಆಸ್ಪತ್ರೆಯಲ್ಲಿ ಡಾ. ಬಿ. ಎಚ್. ಬ್ಯಾನರ್ಜಿ ಅವರಿಂದಲೇ ಆಪರೇಷನ್ ಮಾಡಿಸಿಕೊಂಡೆ.

ಹಾಗೆಂದು ಈಗ ಪೂರ್ಣ ಪ್ರಮಾಣದ ಆರೋಗ್ಯಸೌಖ್ಯ ಲಭ್ಯವಾಗಿದೆಯೆಂದು ಹೇಳಲಾಗದು. ಆಪರೇಷನ್ ಆದಮೇಲೆ ಕೆಲವು ದಿನಗಳವರೆಗೆ ಬಲಗೈಗೆ ಪೂರ್ಣ ಪ್ರಮಾಣದಲ್ಲಿ ಸೂಕ್ತ ವಿಶ್ರಾಂತಿ ನೀಡಬೇಕು. ಕೈಗೆ ಸದಾ ತೂಗುಪಟ್ಟಿ ಸ್ಲಿಂಗ್ ಹಾಕಿಕೊಂಡಿರಬೇಕು. ಯಾವುದೇ ಕಾರಣಕ್ಕು ಆಪರೇಷನ್ ಆಗಿರುವ ಬಲಗೈ ಮೇಲಕ್ಕೆ ಎತ್ತಕೂಡದು. ಒಂದೇ ಬದಿಯ ಎಡ ಹೋಳುಮೈಯಲ್ಲೇ ಮಲಗಿರಬೇಕು. ದಿನದಲ್ಲಿ ಕೈಗೆ ನಾಕೈದು ಬಾರಿ ನಾಕೈದು ಬಗೆಯ ಸರಳವಾದ ವ್ಯಾಯಾಮ ನಿಯಮಿತವಾಗಿ ಮಾಡುವುದು. ಹೀಗೆ ಒಂದಷ್ಟು ಮಾರ್ಗಸೂಚಿಗಳ ಜೊತೆಗೆ ಬರೆಯುವುದನ್ನು ಕೆಲವು ದಿನಗಳ ಕಾಲ ನಿಲ್ಲಿಸಬೇಕೆಂದು ವೈದ್ಯರ ಕಟ್ಟುನಿಟ್ಟಿನ ಸಲಹೆಗಳು.

ನನಗೋ ಓದದೇ, ಬರೆಯದೇ ಬದುಕಿರಲು ಸಾಧ್ಯವೇ ಇಲ್ಲ. ಬೇಕಾದರೆ ಬರೆಯದೇ ಇರಬಲ್ಲೆ. ಒಂದೇ ಒಂದುದಿನ ಓದದೇ ಇದ್ರೇ ನನ್ನಂತಹ ಕುಡುಮಿಗೆ ಅದೇನೋ ಚಡಪಡಿಕೆ. ಉಸಿರು ಕಟ್ಟಿದ ಏದುಸಿರಿನ ಸ್ಥಿತಿ ಎದುರಿಸಿದಂತಾಗುತ್ತದೆ. ಕಡೆಯ ಪಕ್ಷ ಪ್ರಜಾವಾಣಿ ಸೇರಿದಂತೆ ಒಂದೆರಡು ಪತ್ರಿಕೆಗಳನ್ನಾದರೂ ಓದಲೇಬೇಕು. ಅವುಗಳ ಸಂಪಾದಕೀಯ, ನಿಯತ ಬರಹಗಳನ್ನು ನಿತ್ಯವೂ ಓದಿದರೆ ಜೀವ ಹಗುರಗೊಂಡ ಒಂದು ತೆರದ ಹಳಾರ. ಸಣ್ಣದೊಂದು ಸಮಾಧಾನವೆಂದರೆ ಆಪರೇಷನ್ ಆದ ಒಂದೆರಡು ದಿನ ಹೊರತು ಪಡಿಸಿದರೆ ಓದಿಗೆ ಯಾವುದೇ ನಿರ್ಬಂಧಗಳಿರಲಿಲ್ಲ., ಆದರೆ ಬರೆಯಲು ನಿರ್ಬಂಧ ಇತ್ತು. ಬರಹಾರಣ್ಯದ ಏಕಾಂತದಲ್ಲೇ ಬೆರೆತು ಹೋಗುವ ನನಗದು ಅಕ್ಷರಶಃ ದುಸ್ತರವಾಯಿತು.

ಕಳೆದ ಎರಡು ವರುಷಗಳಿಂದ ಬುಕ್ ಬ್ರಹ್ಮ ಮತ್ತು ಕರ್ನಾಟಕ ಸಂಧ್ಯಾಕಾಲ ಪತ್ರಿಕೆಗಳಿಗೆ ರೊಟ್ಟಿಬುತ್ತಿ ಮತ್ತು ಮುಖಾಬಿಲೆ ಹೆಸರಿನ ಅಂಕಣಗಳನ್ನು ನಿಗದಿತ ಅವಧಿಗೆ ತಪ್ಪದೇ ಬರೆಯುತ್ತಾ ಬಂದಿದ್ದೇನೆ. ಒಂದೆರಡು ವಾರಗಳ ಕಾಲ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಸಂಪಾದಕರಿಗೆ ತಿಳಿಸಿದೆ. ಮೊದಲು ನಿಮ್ಮ ಆರೋಗ್ಯ ಮುಖ್ಯ, ಅದು ಸರಿಯಾದ ಮೇಲೆಯೇ ಅಂಕಣ ಬರೆಯಿರೆಂದು ಅವರು ಪ್ರೀತಿ, ಸಹಾನುಭೂತಿ ತೋರಿದರು.

ಆಪರೇಷನ್ ಆಗಿ ನಾಕೈದು ದಿನಗಳು ಕಳೆದಿತ್ತು. ಯಾರಿಗೂ ಗೊತ್ತಾಗದಂತೆ ಒಳಗಿಂದೊಳಗೆ ಎಡಗೈಯಿಂದ ಬರೆಯುವ ಕಾರ್ಯಕ್ಕೆ ಕೈ ಹಾಕಿದೆ. ಅದೂ ಎಂದಿನಂತೆ ಮೊಬೈಲ್ ಮೂಲಕವೇ ಕಾರ್ಯಾಚರಣೆ. ಏನೋ ಎಡಚೆಡಚು, ಕಚಿಬಿಚಿ ಅನಿಸಿತು. ಗುದುಮುರಗಿ ಹಾಕಿ ಹಾಕಿ ಏಳೆಂಟು ನೂರು ಪದಗಳನ್ನು ಬಿಟ್ಟೂ ಬಿಟ್ಟು ಮೂರು ದಿನಗಳಲ್ಲಿ ಬರೆದು ಮುಗಿಸಿದೆ. ಅಜಮಾಸು ಮೂರು ದಶಕಗಳ ಹಿಂದೆ ಚಿತ್ರದುರ್ಗದ ನನ್ನ ಸನ್ಮಿತ್ರ ಸಾಹಿತಿ ಬಿ. ಎಲ್. ವೇಣು ಓಡುವ ಸ್ಕೂಟರ್ ಮೇಲಿಂದ ಬಿದ್ದು ಬರೆಯುವ ಆತನ ಬಲಗೈ ಮುರಿದಿತ್ತು. ಅದೆಷ್ಟೋ ತಾಸು ದಿನಗಟ್ಟಲೇ ಕಷ್ಟಪಟ್ಟು ತನ್ನ ಎಡಗೈಯಲ್ಲಿ ನನಗೆ ಎರಡು ಪುಟದ ಪತ್ರ ಬರೆದಿದ್ದ. ಆ ನೆನಪು ನನ್ನ ಕಣ್ಣುಗಳನ್ನು ಮತ್ತೊಮ್ಮೆ ಒದ್ದೆ ಮಾಡಿದವು. ಮಿತ್ರ ವೇಣು ಬರೆದ ಪತ್ರ ನಾನು ಈಗಲೂ ಜತನವಾಗಿಟ್ಟು ಕೊಂಡಿದ್ದೇನೆ.

ಒಂದೆರಡು ವರ್ಷಗಳ ಹಿಂದೆಯೇ ನನ್ನ ಎಡಗಣ್ಣಿಗೆ ದಟ್ಟಪೊರೆ ಬಂದು ದೃಷ್ಟಿ ಕಾಣಿಸದಷ್ಟು ಮಬ್ಬಾಗಿತ್ತು. ಕಾಣದಿದ್ದರೂ ಕಣ್ನೋಟದ ಜೀವನೋತ್ಸಾಹಕ್ಕೆ ಕಿಂಚಿತ್ತೂ ಶಕ್ತಿ ಕುಂದಿರಲಿಲ್ಲ. ಲೋಕದ ಎಲ್ಲ ಕಂಡರಿಕೆಗಳಿಗೆ ಒಂಟಿಕಣ್ಣ ಬೆಳಕೇ ಸಾಕಿತ್ತು. ಒಂಟಿ ಕಣ್ಣಲ್ಲೇ ಓದುವುದು ರೂಢಿಯಾಗಿದೆ. ಬರೆಯುವುದು ರೂಢಿಯಾಗಿದೆ. ಒಮ್ಮೊಮ್ಮೆ ಕಣ್ಣಿಗೆ ಕಣ್ಣೇ ಒಣಗಿದಂತಾಗಿ ತುಂಬಾ ತ್ರಾಸಾದಾಗ ಓದುವುದು ಬರೆಯುವುದನ್ನು ನಿಲ್ಲಿಸುತ್ತೇನೆ. ಓದಲು ಬರೆಯಲು ನಾನು ಬಳಸುವ ಮೊಬೈಲ್ ಬಳಕೆ ಅಪಾಯವೆಂದು ಅನೇಕರು ಎಚ್ಚರಿಸಿದ್ದಾರೆ. ಇಷ್ಟರಲ್ಲೇ ಕಂಪ್ಯೂಟರ್ ಸಾಧನಕ್ಕೆ ಎಗರ ಬೇಕಿದೆ. ಆದರೆ ಸಧ್ಯಕ್ಕೆ ಬಲಭುಜಕ್ಕೆ ಮಹಾಪೆಟ್ಟು ಬಿದ್ದಿದೆ. ನನ್ನ ಜಂಘಾಬಲವೇ ಉಡುಗುವಂತೆ ಬಲಗೈಗೆ ಬಲುದೊಡ್ಡ ಆತಂಕ ಎದುರಾಗಿ ನಿಜಕ್ಕೂ ಚಿಂತಾಕ್ರಾಂತನಾದೆ. ಒಬ್ಬರಲ್ಲ ಮೂರ್ನಾಲ್ಕು ಮಂದಿ ಕೀಲುಮೂಳೆ ತಜ್ಞ ವೈದ್ಯರ ಸಲಹೆ ಪಡೆದು ಅನಿವಾರ್ಯ ಎಂಬಂತೆ ಆಪರೇಷನ್ ಮೊರೆಹೋದದ್ದು.

ನಾಕೈದು ತಾಸು ಆಪರೇಷನ್. ನನ್ನ ಜೀವಂತಿಕೆಯ ಪ್ರಜ್ಞೆಯೇ ನನಗಿರಲಿಲ್ಲವೆಂದರೆ ಆಪರೇಷನ್ ಪ್ರಕ್ರಿಯೆ ಕಿಂಚಿತ್ತೂ ನೆನಪಿಲ್ಲ. ಪ್ರಾಯಶಃ ಆಗ ಉಸಿರಾಡುತ್ತಿದ್ದ ನೆನಪು, ಅರಿವು ಕೂಡಾ ನನಗಿರಲಿಲ್ಲ. ಅವತ್ತು ಸಂಜೆ ಹೊತ್ತಿಗೆ ನನಗೆ ಮನುಷ್ಯ ಜೀವದರಿವು ಮರು ಕಳಿಸಿದ್ದು. ಅಂದು ರಾತ್ರಿ ಮೂತ್ರ ಬಂದ್ ಆಗಿ ರಾತ್ರಿಯೆಲ್ಲ ಯಮಯಾತನೆ ಅನುಭವಿಸಿದೆ. ಉಪಚರಿಸಲೆಂದೇ ಮೈಸೂರಿನಿಂದ ಬಂದಿದ್ದ ಅಳಿಯ ಡಾ. ಮುರಳಿ (ಜಯದೇವ ಹೃದ್ರೋಗ ಆಸ್ಪತ್ರೆಯವೈದ್ಯ ) ಅಂದು ರಾತ್ರಿ ಇರದೇ ಹೋಗಿದ್ರೆ ನನ್ನ ಆರೋಗ್ಯ ಸ್ಥಿತಿ ಅಯೋಮಯವಾಗುತ್ತಿತ್ತು.

ಅದು ಬಗೆ ಹರಿಯಿತು ಎನ್ನುವುದರೊಳಗೆ ಕೆಲದಿನ ಮಲಬದ್ಧತೆಯ ತೀವ್ರ ಕಾಟ. ಆಫ್ಕೋರ್ಸ್ ಅದು ನನ್ನ ಜನ್ಮಕ್ಕಂಟಿದ ಜನ್ಮಜಾತ ಸಂಗಾತಿಯಾದರೂ ಅದೀಗ ಬಲಾಢ್ಯವಾಗಿ ಬಾಧಿಸುತ್ತಿದೆ. ಅದರೊಂದಿಗೆ ವಾರದಿಂದ ತಲೆಸುತ್ತು ಆವರಿಸಿಕೊಂಡಿದೆ. ರಕ್ತದೊತ್ತಡದಲ್ಲಿ ಏರುಪೇರಿಲ್ಲ ನಾರ್ಮಲ್ ಆಗೇ ಇದೆ. ವೈದ್ಯರ ಪರೀಕ್ಷೆ ಪ್ರಕಾರ ಅದು 'ವರ್ಟಿಗೋ' ಎಂಬ ತಾತ್ಕಾಲಿಕ ಕಾಯಿಲೆ. ಅದರ ಹೆಸರು ಕೇಳುತ್ತಿದ್ದಂತೆ ಅವ್ವನಿಗೆ ಅದು ಇತ್ತೆಂಬ ದ್ಯಾಸ ಧುತ್ತನೆ ಎದುರಾಯಿತು. ಅದೀಗ ನನಗೆ ಅಮರಿಕೊಂಡಿದೆ. ಅವಳಿಂ ವಂಶವಾಹಿನಿ ಕೊಡುಗೆಯೇ ಇರಬಹುದೇನೋ.? ನಿದ್ರೆಯೇ ಬರುತ್ತಿಲ್ಲ. ವಾಕ್ ಮಾಡಿದರೆ ತಟಕು ತುಸುವಾದರೂ ನಿದ್ದೆ ಬರುತ್ತಿತ್ತು. ವಾಕ್ ಮಾಡುವಾಗ ತಲೆಸುತ್ತು ಬಂದು ಬೀಳಬಹುದೆಂಬ ತೀವ್ರಭಯ. ಮನೆಬಿಟ್ಟು ಹೊರಗೆ ಹೋಗುವಂತಿಲ್ಲ. ನಿದಿರೆಯಿಲ್ಲದೇ ಓದು ಮತ್ತು ಸಂಗೀತದ ಮೊರೆ ಹೋಗುವುದು ನನ್ನ ಖಯಾಲಿ ಮಾತ್ರವಲ್ಲ ಅದು ಅನಿವಾರ್ಯ ಸ್ಥಿತಿ.

ಉರ್ದು, ಹಿಂದಿ, ಪಂಜಾಬಿ ಲೋಕ ಸಂಗೀತ, ಶಲೋಕಗಳು ನನನ್ನು ಆವರಿಸಿಕೊಂಡಿವೆ. ಅದಕ್ಕಾಗಿ ಮತ್ತೆ ಮತ್ತೆ ಮೊಬೈಲಿಗೆ ಮಾರು ಹೋಗಬೇಕಿದೆ. "ಚಲೋ ಏಕಬಾರ್ ಫಿರ್ಸೇ ಅಜನಬೀ ಬನ್ ಜಾಯೇ... ಬತಾದೇ ಅಜನಬಿ ಕೈಸೇ ಬನ್ ಜಾಯೇ... ಇಂತಹ ಮಧುರ ಮೋಹಕ ಗಝಲುಗಳಲ್ಲಿ ಮುಳುಗುತ್ತೇನೆ. ಹಂದಿಗನೂರ ರವೀಂದ್ರ ಕಾಕಾ ಎಡಬಿಡದೇ ಕಾಡುತ್ತಾನೆ. ನನಗೆ ಲಾಹೋರಿನ ಗುಲಾಮಲಿಯ ಸ್ವರ ಮಾಧುರ್ಯಕ್ಕಿಂತ ಕಾಕಾನ ಸಿರಿಕಂಠದಲ್ಲಿ ಚುಪ್ಕೆ ಚುಪ್ಕೇ ರಾತ್ ದಿನ್ ಆಲಿಸುವುದೇ ಖಂಡುಗ ಖುಷಿ. ಆದರೆ ಗುಲಾಮಲಿಯ ಹಮ್ ತೇರೆ ಶಹರ ಮೇ ಆಯೇ ಹೈ ಮುಸಾಫಿರ್ ಕೆ ತರಹ... ಅಷ್ಟೇ ಪಸಂದ.

ಮತ್ತು ಮೆಹ್ದಿ ಹಸನ್ ರೇಷ್ಮಾ ಜೋಡಿಯ ಲೋಕಸಂಗೀತದ 'ಗೋರಿಯೆ ಜಾಣಾ ಪರ್ದೇಸ್.... ಮಾಹೀರೇ, ಗಝಲಿಗಿಂತ ಸಾವಿರಪಟ್ಟು ಸಂತಸ ಉಕ್ಕಿಸುತ್ತದೆ. ರೇಷ್ಮಾಳ ಬಾಯ್ತುಂಬಾ ತಾಂಬೂಲ ತುಂಬಿದ ಚೆಂಗುಲಾಬಿ ಆಲಾಪನೆಗಳೇ ನನ್ನ ನಿದ್ರೆ ಬಾರದ ರಾತ್ರಿಗಳ ಅಂತರಾತ್ಮದ ತುಂಬೆಲ್ಲಾ ಚುಕ್ಕಿಯೊಳಗಿನ ಸ್ವಪ್ನಗಳಂತೆ ಗುದುಮುರಗಿ ಹಾಕುತ್ತವೆ. ಈಗ ಮಾತ್ರವಲ್ಲ ನನ್ನ ನೋವಿನ ಅನಂತ ಗಳಿಗೆಗಳಲ್ಲಿ ನಾನು ನಿತಾಂತ ಮೊರೆ ಹೋಗುವುದೇ ಇಂತಹ ಸೂಫಿ ಸಂಗೀತ ಮತ್ತು ದೇಸಿತನದ ಪಕ್ಕಾ ಪ್ಯಾಥೋಸ್ವರ ಗೀತೆಗಳಿಗೆ. ಅವುಗಳಿಗೆ ನನ್ನ ಸಾವಿರ ಸಲಾಮುಗಳು.

ಅದರಲ್ಲೂ ನನಗೆ ಕನ್ನಡದ ತತ್ವಪದಗಳೆಂದರೆ ಪಂಚಪ್ರಾಣ. ಏಕತಾರಿ ಹಿಡಿದು ಏಕಾಂತದಲಿ ತದೇಕ ಕುಂತು ನನ್ನಪ್ಪ ಸಾಧು ಶಿವಣ್ಣ, ಮಠದ ಹಿರಿಯ ಗುರುಗಳು ಮತ್ತು ಮಹಾಂತಪ್ಪ ಸಾಧು ಅನುಭಾವ ಆವಾಹಿಸಿಕೊಂಡು ಜೀವತುಂಬಿ ನಾಭಿಯಿಂದಲೇ ಹಾಡುವುದು ಹೂಬಾ ಹೂಬಾ ಎಂಬಂತೆ ಕಾಡುತ್ತವೆ. ಅವು ಯಾವತ್ತೂ ನನ್ನಿಂದ ಬಿಡಿಸಿಕೊಳ್ಳಲಾರದ ಗಂಡಭೇರುಂಡ ಸ್ವರಪ್ರಭಾವಗಳು ನನಗೆ. ಯಾಕೋ ಮತ್ತೆ ಮತ್ತೆ ಅದೇ ಪ್ರಭಾವಗಳು. ಜನನ ಮರಣರಹಿತ ಜೀವ ಸಂವೇದನೆಗಳ ಚುಳುಕು ಚುಂಬನದಂತೆ ಅದೇ ಧ್ವನಿ ಪ್ರಭಾವಗಳು.

ಕೋಶೀಸುಗಳೇನೇ ಇದ್ರೂ ನಸೀಬದಾಗ ಇದ್ದದ್ದು ತಪ್ಪೋದಿಲ್ಲ. ಅವ್ವ ತನ್ನ ಮುಪ್ಪಿನ ಕಾಲದಲ್ಲಿ ಬರುವ ಜಡ್ಡು ಜಾಪತ್ರಿಯಿಂದ ಪಾರು ಮಾಡೋದು ದುಸ್ತರ ಅಂತಿದ್ದಳು. ನಿದ್ರಾಹೀನತೆ ನಡುವೆ ಆ ಎಲ್ಲ ನೆನಪುಗಳು ಎಚ್ಚರದ ನುಡಿಗಳಾಗಿ ದ್ಯಾಸಗೊಳ್ಳುತ್ತವೆ. ಅವ್ವನಷ್ಟೇ ಗಾಢವಾಗಿ ನನ್ನೊಂದಿಗಿರುವವಳು ಈಗ ಮಡದಿ ಅನಸೂಯಾ. ಚಿಕ್ಕ ಮಕ್ಕಳಿಗೆ ಜಳಕ ಮಾಡಿಸುವಂತೆ ಅವಳೇ ನನಗೆ ಜಳಕ ಮಾಡಿಸುತ್ತಾಳೆ. ಮೈ ಒರೆಸಿ ಅಂಗಿ ಲುಂಗಿ ತೊಡಿಸುತ್ತಾಳೆ. ತುತ್ತುಮಾಡಿ ಕೈ ತುತ್ತು ಉಣಿಸುತ್ತಾಳೆ. ತಾಯ್ತನದ ಸಂಪ್ರೀತಿ ಉಕ್ಕಿ ಹರಿಯುತ್ತಲಿದೆ.

ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...