ಕಳಚಿಕೊಳ್ಳುವುದೂ ಆಟದ ಭಾಗವೇ.  

Date: 14-07-2022

Location: ಬೆಂಗಳೂರು


“ಯಾವ ಮರವೂ ತಾನು ಬಿತ್ತಿದ ಬೀಜ ದೊಡ್ದದಾಗುತ್ತೋ ಸದೃಢವಾಗಿ ನಿಲ್ಲುತ್ತೋ ಇಲ್ಲವೋ ಅಂತ ಯೋಚಿಸುವುದೇ ಇಲ್ಲ. ನಾವು ಮಾತ್ರ ಹೀಗೆ. ಕಳಚಿಕೊಳ್ಳುವುದೂ ಜೀವದ ಆಟದ ಭಾಗವೇ ಎಂಬ ರಾಮುಡು ಮಾತು ಮುತ್ಯಾಳನ್ನು ನಿರ್ಮೋಹಿಯಾಗಿಸುತ್ತಿರುವುದು ಗಮನಕ್ಕೆ ಬಂತು” ಎನ್ನುತ್ತಾರೆ ಲೇಖಕಿ ಪಿ ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ, ಮುತ್ಯಾಳ ಕುರಿತ ನೆನಪುಗಳನ್ನು ತೆರೆದಿಟ್ಟಿದ್ದಾರೆ.

ತಾತ ಯಾವತ್ತೂ ಮುತ್ಯಾಳ ಮಾತನ್ನ ಕೇಳಲೇ ಇಲ್ಲ. ಅವಳಿಗೆ ಏನನ್ನಾದರೂ ಹೇಳಿದ್ದನ್ನೂ ನಾನು ಕಾಣಲಿಲ್ಲ. ತಾತನಿಗೆ ಮುತ್ಯಾಳ ಬಗ್ಗೆ ಇದ್ದದ್ದು ಅಸಡ್ಡೆಯಾ ಅಥವಾ ಭಯವಾ? ಗೊತ್ತಿಲ್ಲ. ಆದರೆ ಮುತ್ಯಾಳನ್ನ ತಾತ ಒಬ್ಬ ಹೆಂಗಸು ಎಂದು ಮಾತ್ರ ಗ್ರಹಿಸಿದ್ದ. ತಾನು ಬೈದರೆ ಆಕೆ ಮೂಲೆಯಲ್ಲಿ ಕೂರಬೇಕು ಎನ್ನುವುದು ಅವನ ನಿರೀಕ್ಷೆ ಇತ್ತು. ಮುತ್ಯಾ ತುಂಬಾ ಸ್ವತಂತ್ರ ವ್ಯಕ್ತಿತ್ವದವಳು. ಅವಳು ಯಾವುದನ್ನೂ ಯಾರ ಮೇಲೂ ಹೇರುತ್ತಿರಲಿಲ್ಲ. ನೋವಾದಾಗ ಹಿತ್ತಲಿನಲ್ಲಿ ಮರಗಳೇ ಆಗಿ ನಿಂತ ತನ್ನ ಮಕ್ಕಳ ಬಳಿ ಮಾತಾಡುತ್ತಿದ್ದಳು. ಅವಳಿಗೆ ಲೋಕವನ್ನು ಬಿಟ್ಟ ಆ ಮಕ್ಕಳು ಇನ್ನೂ ಎಳೆಗೂಸುಗಳೇ. `ನಿನಗೆ ನನ್ನ ಮೇಲೆ ಅಸಮಾಧಾನ. ನಿನ್ನ ಆ ಮಕ್ಕಳೇನಾದರೂ ಬದುಕಿದ್ದಿದ್ದರೆ ಅವು ನಿನ್ನ ಸುಮ್ಮನೆ ಬಿಡುತ್ತಿದ್ದವಾ? ನನಗಿಂತ ಹೆಚ್ಚು ಮಾತನಾಡುತ್ತಿದ್ದವು’ ಎಂದು ರೇಗಿದ ಹೊತ್ತಲ್ಲಿ ತಾತ ಕರುಳಬಳ್ಳಿಯನ್ನು ಹಂಚಿಕೊಂಡೂ ಜೊತೆಗೆ ಬೆಳೆಯಲಾಗದ ತನ್ನ ಅಣ್ಣ, ಅಕ್ಕಂದಿರ ಬಗ್ಗೆ ಮಾತನಾಡುತ್ತಿದ್ದ. `ಇದ್ದಿರಲೂ ಬಹುದು ಆದರೆ ಈಗ ಅವು ದೈವವಾಗಿಬಿಟ್ಟಿವೆ. ತನ್ನ ಅಹಮಿಕೆಯನ್ನು ಬೆಳೆಸಿಕೊಳ್ಳದೆ, ಭೂಮಿಕೊಟ್ಟ ಜೀವದ ಅವಕಾಶಕ್ಕಾಗಿ ಕೃತಜ್ಞತೆಯನ್ನು ಅರ್ಪಿಸುತ್ತಾ ನಿಂತಿವೆ. ಅವನ್ನ ಯಾಕೆ ಅನ್ನುತ್ತೀಯಾ’ ಎಂದು ಮುತ್ಯಾ ನೋವಿಂದ ಹೇಳಿದ್ದೂ ಇದೆ.

ಮುತ್ಯಾ ಮತ್ತು ತಾತನ ಸಂಬಂಧ ವಿಚಿತ್ರಎನ್ನಿಸುವುದು ಅವಳ ಹಾತೊರಿಕೆ ಮತ್ತು ಅವನ ಅವಜ್ಞೆಯಲ್ಲಿ. ಅದು ಅವಲಂಬನೆಯಂತೂ ಖಂಡಿತಾ ಅಲ್ಲ. ಹಾಗೆಂದು ಪ್ರತ್ಯೇಕವಾದ ಅಸ್ತಿತ್ವವೂ ಅಲ್ಲ. ಯಾಕೆಂದರೆ ಅವರಿಬ್ಬರ ನಡುವೆ ಪ್ರಕೃತಿಯೇ ಬಂಧವೊಂದನ್ನು ಹೆಣೆದುಬಿಟ್ಟಿದೆ. ಆದರೂ ಮುತ್ಯಾ ಆಕಾಶದಲ್ಲಿ ಹಾರುವ ಹಕ್ಕಿಯನ್ನು ತೋರಿಸಿ ಯಾವುದು ಯಾವುದಕ್ಕೆ ಸಂಬಂಧಿಯೋ ಗೊತ್ತಿಲ್ಲ. ಆದರೆ ಅವುಗಳಲ್ಲಿ ಸ್ವಚ್ಚಂದತೆ ಇದೆ. ಇಚ್ಚೆ ಬಂದೆಡೆ ಹೋಗಲು ಅವುಗಳು ಸಮರ್ಥವಿದ್ದಾವೆ ಎಂದಿದ್ದಳು. ಅವಳು ಅದನ್ನು ತನ್ನ ಜೀವನಕ್ಕೂ ಅಳವಡಿಸಿಕೊಂಡಿದ್ದಳು. ಅದಕ್ಕೆ ಮುತ್ಯಾ ಮನೆಯ ಮುಂದೆ ತಾತ ತಂದು ನಿಲ್ಲಿಸಿದ ಬಸ್ಸನ್ನು ನೋಡಿ ಮುಂದಿನ ಪರಿಣಾಮವನ್ನು ಊಹಿಸಿ ಗಾಢವಾದ ನೋವಿನ ನಡುವೆಯೂ ನಕ್ಕಿದ್ದಳು, `ಮೋಹವೋ, ಪ್ರೀತಿಯೋ, ಮಗನೆನ್ನುವ ಆಸ್ತೆಯೋ? ಬಲಿತ ರೆಕ್ಕೆಯ ಹಕ್ಕಿಗೆ ಬೆಚ್ಚಗಿನ ತಾಯ ರೆಕ್ಕೆ ಅಡ್ಡಿಯೆ’ಎಂದೆನ್ನುತ್ತಾ.

ಬಸ್ಸು ಬರುವ ದಿನ ಬೆಳಗ್ಗೆ ಗುಡೋಳ್ಳ (ಗುಡಿಯಲ್ಲಿ ಪೂಜೆ ಮಾಡುವ ಮನೆಯವರು) ಸುಶೀಲ ಓಡಿ ಬಂದಿದ್ದಳು. ಮುತ್ಯಾನ ಹತ್ತಿರ ಅವಳದ್ದು ಗುಸು ಗುಸು ನಡೆದಿತ್ತು. `ಬೆಳಗ್ಗೆ ಬೆಳಗ್ಗೆ ಇವಳ್ಯಾಕೆ ಬಂದಳು?’ ಎಂದು ಗಡಿಬಿಡಿಯ ತಯಾರಿಯಲ್ಲಿದ್ದ ಅಮ್ಮಮ್ಮ ಗೊಣಗಿದ್ದಳು. ಮುತ್ಯಾ ಸುಶೀಲಾಳ ಜೊತೆ ಹೊರಟಿದ್ದಳು.

ಸುಶೀಲಾಳ ತಾಯಿ ಹುಚ್ಚಿ ಸರೋಜಮ್ಮ ಎಂದೇ ಹೆಸರುವಾಸಿಯಾದವಳು. ಆಕೆಗೆ ನಾನು ನೋಡುವಾಗಲೇ ಐವತ್ತಾಗಿತ್ತು ಎನ್ನಿಸುತ್ತದೆ. ಎಂಟು ಮಕ್ಕಳ ತಾಯಿ. ಬದುಕಿನಲ್ಲಿ ಏನಾಯಿತೋ ಕಾಣೆ. ಲೋಕದ ಹಂಗಿಲ್ಲದಂತೆ, ತನ್ನದೇ ಲೋಕವನ್ನು ಕಟ್ಟಿಕೊಂಡು ಬದುಕಿದ್ದಳು. ಅವಳಿಗೆ ಬಟ್ಟೆ ಹಾಕುವುದೂ ಆ ಮನೆಯವರಿಗೆ ಕಷ್ಟವಾಗುತ್ತಿತ್ತು. ಅಷ್ಟೆಲ್ಲಾ ಪ್ರಯತ್ನದಿಂದ ಬಟ್ಟೆ ಹಾಕಿದರೂ, ಸ್ವಲ್ಪ ಹೊತ್ತಷ್ಟೆ. ಹಾಕಿದ್ದ ಬಟ್ಟೆ ಎತ್ತೆತ್ತಲೊ ಹೋಗಿ ಮೈ ಕಾಣುತ್ತಿತ್ತು. ರಾತ್ರಿಗಳಲ್ಲಿ ಅವಳನ್ನು ಮನೆಯ ಕಂಬಕ್ಕೆ ಕಟ್ಟಿಬಿಡುತ್ತಿದ್ದರು. ಇಲ್ಲದಿದ್ದರೆ ರಾತ್ರಿಗಳಲ್ಲಿ ಅವಳು ಎಲ್ಲೋ ಹೋಗಿಬಿಡುತ್ತಾಳೆ ಎಂದು. ವಾರಕ್ಕೊಮ್ಮೆ ಸ್ನಾನ ಮನೆಯ ಪಕ್ಕದ ಸಣ್ಣ ಜಾಗದಲ್ಲಿ ಹೊದಿಕೆಯಿಂದ ಮರೆಮಾಡಿ ಮಕ್ಕಳೇ ಮಾಡಿಸುತ್ತಿದ್ದರು. ಅವರಿಗೆ ಅವಳು ಮಗಳೋ ಇವರು ಅವರಿಗೆ ಮಕ್ಕಳೋ? ಊರ ಜನ ಮಾತ್ರ ಆ ಮಕ್ಕಳನ್ನು ಇದ್ದರೆ ಇಂಥಾ ಮಕ್ಕಳು ಇರಬೇಕೆಂದು ಹಾಡಿ ಹೊಗಳುತ್ತಿದ್ದರು.

ಹುಚ್ಚು ಹುಚ್ಚಾಗಿ ಯಾವಾಗಲೂ ನಗುತ್ತಾ ಗೊಣಗುತ್ತಾ ಓಡಾಡುತ್ತಿದ್ದ ಸರೋಜಮ್ಮ ದಾರಿಯಲ್ಲಿ ಬರುವಾಗ ಸಣ್ಣವರಾದ ನಮ್ಮನ್ನು ನೋಡಿ ಏನನ್ನೊ ಹೇಳಲಿಕ್ಕೆ ಬರುತ್ತಿದ್ದಳು. ನಮಗೇನೋ ಮಾಡಿಬಿಡುತ್ತಾಳೆ ಎನ್ನುವ ಭಯದಿಂದ ನಾವೂ ಕಲ್ಲುಗಳನ್ನು ತೆಗೆದುಕೊಂಡು ಹೊಡೆಯುತ್ತಿದ್ದೆವು. ಕಲ್ಲಿನ ಪೆಟ್ಟು ಬಿದ್ದಾಗ ಕೆರಳುತ್ತಿದ್ದ ಆಕೆ, ನಮ್ಮ ಕಡೆಗೂ ಕಲ್ಲುಗಳನ್ನು ತೂರುತ್ತಿದ್ದಳು. ಕೃಶವಾಗಿದ್ದ ಅವಳ ಕೈಗಳು ನಡುಗುತ್ತಿರುತ್ತಿದ್ದವು, ಕಟವಾಯಿಯಲ್ಲಿ ಸೋರುತ್ತಿದ್ದ ಜೊಲ್ಲನ್ನೂ ಒರೆಸಿಕೊಳ್ಳದೆ ಈ ಎಂದು ಕೋಪದಲ್ಲಿ ಹಲ್ಲುಗಳನ್ನು ಕಚ್ಚಿ ಚೀರುತ್ತಾ ನಮ್ಮೆಡೆಗೆ ಹಾಯುತ್ತಿದ್ದಳು. ಒಮ್ಮೊಮ್ಮೆ ಭಯವಾಗಿಯೂ, ಇನ್ನೊಮ್ಮೆ ತಮಾಷೆಯಾಗಿಯೂ ಅವಳ ಚರ್ಯೆಗಳು ಕಾಣುತ್ತಿದ್ದವು. ಮುತ್ಯಾ ಒಮ್ಮೆ ನಮ್ಮ ಚೇಷ್ಟೆಯನ್ನು ಗಮನಿಸಿ, ನೋಡದಂತೆ ಹೋಗಿದ್ದಳು. ತಪ್ಪು ಮಾಡಿದೆ ಎಂದು ನನಗೆ ಒಳಗೆ ಅಳುಕಾಗಿತ್ತು.

ಮುತ್ಯಾ ನನ್ನನ್ನು ಬೈಯಲಿಲ್ಲ. ರಾತ್ರಿಯೂ ಅವಳ ಜೊತೆ ಮಲಗಿ ನಾನದನ್ನು ಹೇಳಲಿಕ್ಕೆ ಪ್ರಯತ್ನಪಟ್ಟಿದ್ದೆ. `ಅಸಹಾಯಕಳಾಗಿದ್ದ ಅವಳಿಗೆ ಹೊಡೆದು ಏನು ಸಾಧಿಸಿದೆ ಮಗೂ’ ಎಂದಳು ನೋವಿನಿಂದ. ನನಗೂ ನಾನು ಮಾಡಿದ್ದ ಕೆಲಸದಿಂದ ಸಂಕಟವಾಯಿತು. `ಉತ್ತರ ನನಗೆ ಕೊಡಬೇಕಿಲ್ಲ ಮಗು ನಿನಗೆ ನೀನು ಕೊಟ್ಟುಕೋ. ನಿನ್ನ ಮನಸ್ಸಿನಲ್ಲಿ ಆಕೆಯ ಬಗ್ಗೆ ಪ್ರೇಮ ಘಟಿಸುತ್ತದೆ’ ಎಂದಿದ್ದಳು. ನನಗೆ ನಾಚಿಕೆಯಾಗಿತ್ತು. `ನಾಳೆಯೇ ಹೋಗಿ ಅವಳಲ್ಲಿ ಕ್ಷಮೆ ಕೇಳುತ್ತೇನೆ’ ಎಂದೆ. ಮುತ್ಯಾ ವಿಷಾದದಿಂದ ನಕ್ಕಳು, `ನೀನು ಹೊಡೆದದ್ದೇ ಅವಳ ತಲೆಯಲ್ಲಿ ಇಲ್ಲ. ಯಾರ ಕ್ಷಮೆ ಕೇಳುತ್ತೀಯಾ? ಕೇಳಿದರೂ ಅವಳಿಗೆ ಅರ್ಥವಾಗುತ್ತದೆಯೇ. ಬದಲಾವಣೆ ಬೇಕಿರುವುದು ಎದುರಿನಿಂದ ಅಲ್ಲ ನನ್ನ ಒಳಗೆ. ನನ್ನ ಒಳಗೆ ಬದಲಾಗದೇ ಜಗತ್ತು ಬದಲಾಗಲೀ ಎಂದು ಬಯಸಬಾರದು. ಪ್ರಾಣಿಗಳೂ ಕೂಡಾ ತಮ್ಮ ಮೇಲೆ ಆಕ್ರಮಣ ಮಾಡದೆ ಪ್ರತಿಕ್ರಿಯಿಸುವುದಿಲ್ಲ. ಮನುಷ್ಯನಿಗೆ ಮಾತ್ರ ಈ ಕುತ್ಸಿತ ಬುದ್ಧಿ. ಅದು ಎಲ್ಲರಲ್ಲೂ ಇರುತ್ತದೆ ನಿಜ, ಅದನ್ನು ಮೆಟ್ಟಬೇಕು’ ಎಂದಳು. ನಾನು ಅತ್ತಿದ್ದೆ, `ನಾನು ಕೆಟ್ಟವಳು’ ಎಂದು ಮತ್ತೆ ಮತ್ತೆ ಹೇಳಿಕೊಂಡಿದ್ದೆ. ಅವಳ ಮನಸ್ಸೂ ಕರಗಿತ್ತು. `ನೀರಿನ ಮೇಲೆ ಎದ್ದ ಅಲೆ ಅಲ್ಲೇ ನಿಲ್ಲುವುದಿಲ್ಲ. ವಯೋ ಸಹಜ ತುಂಟಾಟ ತಪ್ಪಲ್ಲ. ಪಶ್ಚಾತ್ತಾಪ ನಿನ್ನಲ್ಲಿ ಮಾರ್ಪಾಡನ್ನು ತರುತ್ತದೆ. ವಿನಾಕಾರಣವಾದ ಇಂಥಾ ಕ್ರೌರ್ಯಗಳನ್ನು ತಗ್ಗಿಸುತ್ತವೆ. ನೋವು ನಿನ್ನನ್ನು ತೀಕ್ಷ್ಣಗೊಳಿಸುತ್ತದೆ’ ಎಂದಳು. ಅವಳ ಮಾತುಗಳನ್ನು ನಾನು ಯಾವತ್ತೂ ತೆಗೆದು ಹಾಕಲಿಲ್ಲ, ಹಗುರವಾಗೂ ತೆಗೆದುಕೊಳ್ಳಲಿಲ್ಲ. ಕಳ್ಳರೂ ಸುಳ್ಳರೂ ಮಹಾತ್ಮರಾಗಿಬಿಡುತ್ತಾರೆ. ಮನುಷ್ಯನಿಗೆ ಮಾತ್ರ ದಕ್ಕಿರುವ ಸೌಭಾಗ್ಯ ಅದು ಎನ್ನುವುದು ನನ್ನ ಅರಿವಿಗೆ ಬಹು ಬೇಗ ಬಂತು.

ಹುಚ್ಚಿ ಸರೋಜಮ್ಮನನ್ನು ಯಾರೋ ಕರೆದೊಯ್ದು ದಾರುಣವಾಗಿ ಕೆಡಿಸಿಬಿಟ್ಟಿದ್ದರು. ಮಗಳು ಸುಶೀಲ ಅದೇ ಸುದ್ದಿಯನ್ನು ಮುತ್ಯಾಳಿಗೆ ತಂದೊಪ್ಪಿಸಿದ್ದು. `ಶಿವಾ ಶಂಕರಾ, ಹೆಣ್ಣು ಜನ್ಮ ಹೀಗೂ ಆಗುವುದುಂಟಾ, ಮೋಹವೇ ಇಲ್ಲದವಳ ಮೇಲೆ ಎಂಥವನಿಗೋ ಮೋಹ ಮೂಡಿದ್ದು?’ ಎನ್ನುತ್ತಾ ಕಿವಿಗಳನ್ನು ಮುಚ್ಚಿಕೊಂಡ ಮುತ್ಯಾ, `ಅಂಥಾ ಹೆಣ್ಣನ್ನೂ ಬಿಡುವುದಿಲ್ಲವಲ್ಲಾ ಈ ಗಂಡಸು ಜಾತಿ’ ಎಂದಾಗ, ಪರಮ ಅಸಹ್ಯ ಎನ್ನುವ ಭಾವವೊಂದು ಅವಳ ಮುಖದ ಮೇಲೆ ತೇಲಿತ್ತು. ಸುಶೀಲಾಳ ಸಂಕಟ ಅದೊಂದೇ ಅಲ್ಲ ಜೊತೆಗೆ ತನ್ನ ಮರ್ಯಾದೆ ಹೋಯಿತೆಂದು ಅವಳ ಅಣ್ಣ ಕೂಗಾಡುತ್ತಿದ್ದ. ಕಂಗಾಲಾಗಿದ್ದ ಸುಶೀಲಾಳ ಜೊತೆ ಹೊರಟ ಮುತ್ಯಾಳ ಹಿಂದೆ ನಾನೂ ಹೋಗಿದ್ದೆ

ಅಲ್ಲಿಗೆ ಹೋದ ಮುತ್ಯಾ, ದಾರುಣವಾಗಿ ಹರಿದ ಚರ್ಮ, ಆಳವಾದ ಗಾಯಗಳಾಗಿದ್ದ ಕೃಶ ದೇಹವನ್ನು ನೋಡುವಾಗ, ಸರೋಜಮ್ಮ ಅಂಥಾ ನೋವಿನ ನಡುವೆಯೂ ಮುತ್ಯಾಳ ಕಡೆಗೆ ನಗೆ ಬೀರಿದ್ದಳು. `ಇಂಥಾ ಕಟುಕರೂ ಇರುತ್ತಾರಾ?’ ಎಂದು ಮತ್ತೆ ಮತ್ತೆ ತನಗೆ ತಾನೇ ಹೇಳಿಕೊಂಡಿದ್ದಳು ಮುತ್ಯಾ. `ಎಂಥಾ ಅವಮಾನ ನಮಗೆ’ ಎಂದು ಅವಳ ಮಗ ಸಿಡಿದೆದ್ದಿದ್ದ. ಮುತ್ಯಾ ಸರೋಜಾಳ ತಲೆ ಸವರುತ್ತಾ, `ಇವಳು ನಿನ್ನ ತಾಯಿ ಇವಳು ಎನ್ನುವುದನ್ನು ಎಂದಿಗೂ ಮರೆಯಬೇಡ. ಇದೇ ಅವಮಾನವೇ ನಿನ್ನ ಹೆತ್ತಿರುವುದು. ನಿನಗೆ ಅಸಹ್ಯ ಬರಬೇಕಿರುವುದು ಇವಳನ್ನು ಈ ಸ್ಥಿತಿಗೆ ತಂದನಲ್ಲಾ ಆ ಗಂಡಸಿನ ಬಗ್ಗೆ, ಅವನಿಗೆ ಬೇಕಿರುವ ಸುಖ. ಈ ದೇಹದಿಂದಲೂ ಪಡೆಯಬಹುದು ಎಂದು ತೀರ್ಮಾನ ಮಾಡಿದನಲ್ಲಾ, ಅವನ ಮನಸ್ಸಿನ ಕೊಳಕುತನದ ಬಗ್ಗೆ. ಇನ್ನೆಂದಿಗೂ ನಿನ್ನ ತಾಯನ್ನು ದೂರಬೇಡ. ವಿಧಿ ಅವಳನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಅದಕ್ಕೆ ಅವಳು ಹೊಣೆಯೇ? ಎಂದಿದ್ದಳು ಕಟುವಾಗಿ. ಮತ್ತೆ ಮಗ ಮಾತಾಡಲಿಲ್ಲ.

ದುರ್ದೈವ ಎಂದರೆ ಆಕೆ ಈ ಘಟನೆಯಿಂದ ಗರ್ಭ ಧರಿಸಿದಳು. ತನ್ನೊಳಗೆ ಜೀವವೊಂದು ರೂಪು ಪಡೆಯುತ್ತಿದೆ ಎನ್ನುವ ಅರಿವೂ ಇಲ್ಲದೆ ಸುಮ್ಮನೆ ತನ್ನ ಪಾಡಿಗೆ ತಾನಿರುತ್ತಿದ್ದಳು. ಮುತ್ಯಾ ಆಗೀಗ ಕಾಳಜಿ ವಹಿಸಿ ಮಾಡಿದ ತಿಂಡಿಯನ್ನು ತೆಗೆದುಕೊಂಡು ಹೋಗಿ ತಿನ್ನಿಸಿಬರುತ್ತಿದ್ದಳು. ಸಮಯ ಸಿಕ್ಕಾಗಲೆಲ್ಲಾ ಅವಳ ಗರ್ಭದ ಜೊತೆ ಮಾತಾಡುತ್ತಿದ್ದಳು, `ನಿನ್ನ ಹುಟ್ಟಿಗೆ ಕಾರಣನಾದವನ ಯಾವ ಗುಣವೂ ನಿನಗೆ ಬಾರದಿರಲಿ’ ಎನ್ನುತ್ತಿದ್ದಳು. ಕೆಲವರು ಮುತ್ಯಾಳನ್ನು ಅವಹೇಳನ ಮಾಡಿ ನಕ್ಕಿದ್ದರು ಕೂಡ. ಅಮ್ಮಮ್ಮ ಊರವರ ಮಾತನ್ನು ತಂದು ಅತ್ತೆಯ ಎದುರು ನಿಂತು, `ಇದೇನು ಹುಚ್ಚಾಟ’ ಎಂದರೆ, `ನಗಲಿ ಬಿಡು ಮಗುವಿಗೆ ಐದು ತಿಂಗಳು ಎಂದರೆ ಶ್ರವಣ ಶಕ್ತಿ ಬಂದಿರುತ್ತೆ. ಹೇಳಿದರೆ ಗರ್ಭದ ಒಳಗಿನಿಂದಲೇ ಕೇಳುತ್ತೆ. ಅದಕ್ಕೆ ಒಳ್ಳೆಯದನ್ನೇ ಹೇಳಬೇಕು. ಪಾಪ ಆ ಹೆಂಗಸಿಗೆ ಜಗತ್ತೇ ಗೊತ್ತಿಲ್ಲ ಇನ್ನು ಅವಳು ಏನು ಮಾಡಲಿಕ್ಕೆ ಸಾಧ್ಯ? ದೊಡ್ಡವನಾದ ಮೇಲೆ ಏನಾಗುತ್ತದೆ ಎನ್ನುವುದು ಅದರ ಹಣೇಬರಹ. ಒಳ್ಳೆಯದನ್ನು ಬಯಸುವುದರಲ್ಲಿ ತಪ್ಪಿಲ್ಲವಲ್ಲಾ’ ಎಂದಿದ್ದಳು ಮುತ್ಯಾ. ಅತ್ತೆಗೆ ಏನೆಂದು ಉತ್ತರ ಕೊಡಬೇಕೆಂದು ತೋಚದೆ ಅಮ್ಮಮ್ಮ ಸುಮ್ಮನಾಗಿಬಿಟ್ಟಿದ್ದಳು.

ಸರೋಜಮ್ಮನಿಗೆ ಹೆರಿಗೆ ನೋವು ಶುರುವಾದಾಗಲೂ ಮುತ್ಯಾಳೆ ಹೋಗಿದ್ದಳು. ಭೂಮಿಗೆ ಬಿದ್ದ ಕಂದನನ್ನು ಕೈಲಿ ಹಿಡಿದು, `ಹರಿ... ನಿನ್ನ ಹಿಂದಿನ ಎಲ್ಲ ಸಂಬಂಧಗಳನ್ನೂ ಹರಿ. ನಿನ್ನ ಹಿಂದಿನ ಎಲ್ಲ ನೆನಪುಗಳನ್ನೂ ಹರಿ. ಇವತ್ತಿನಿಂದ ನೀನು ಸ್ವತಂತ್ರ’ ಎಂದಿದ್ದಳಂತೆ. ಆ ಮಗುವಿನ ಹುಟ್ಟೇ ಯಾರಿಗೂ ಬೇಕಿರದಿದ್ದಾಗ, ನಾಮಕರಣ ಯಾರು ಮಾಡುತ್ತಾರೆ ಅಂತಃಕರಣ ತುಂಬಿದ ಹೆಣ್ಣುಮಕ್ಕಳು, ತಾಯ ಹೊಟ್ಟೆಯಲ್ಲಿ ಹುಟ್ಟಿದವ ತಮ್ಮನೆಂದು ಭಾವಿಸಿ ಅವನ್ನು ಮುತ್ಯಾ ಇಟ್ಟ ಹೆಸರಿಂದಲೇ ಕರೆದರು. ಆರೋಗ್ಯ ಪೂರ್ಣವಾಗಿದ್ದ ಮಗುವಿಗೆ ಆ ತಾಯಿ ಹಾಲನ್ನೂ ಕೊಡಲಿಲ್ಲ. ಆದರೆ ಊರವರೆಲ್ಲಾ ತಮ್ಮ ಕರುಣೆಯ ಹಾಲನ್ನು ಅದಕ್ಕೆ ಕೊಟ್ಟಿದ್ದು ಮಾತ್ರ ಅಭೂತಪೂರ್ವ.

ಸರೋಜಮ್ಮನಿಗೆ ಅಂಥಾ ದಾರುಣವಾದ ಆಘಾತವನ್ನು ಉಂಟು ಮಾಡಿದ ದಿನ, ಕಿರು ಓಣಿಯಲ್ಲಿ ಹುಷಾರಾಗಿ ಬಸ್ಸನ್ನು ಅಕ್ಕ ಪಕ್ಕ ತಾಕದ ಹಾಗೆ ಊರ ಜನ ನೋಡುವಾಗ ಅಂಜಿ ಗಾಡಿಯನ್ನು ಡ್ರೈವ್ ಮಾಡುತ್ತಾ ಬಂದಿದ್ದ. ತಾತ ಆ ಬಸ್ಸಿನಲ್ಲಿ ಕೂತಿದ್ದ. ಅವನ ಮುಖದಲ್ಲಿ ಏನನ್ನೋ ಸಾಧಿಸಿದ ಹೆಮ್ಮೆ. ಅಮ್ಮಮ್ಮ ಹರಿಸಿನ ಕುಂಕುಮ, ಆರತಿಯ ತಟ್ಟೆಯನ್ನು ಹಿಡಿದು ಪದ್ದಿ ಚಿಕ್ಕಿಯ ಜೊತೆ ನಿಂತಿದ್ದಾಗಲೇ ಮುತ್ಯಾಗೆ ತನ್ನ ಮಗನ ಸಾಹಸ ಗೊತ್ತಾಗಿದ್ದು. ಮನೆಯ ಮುಂದೆ ನಿಂತ ಬಸ್ಸಿನಿಂದ ತಾತ ಇಳಿದು ಬಂದು ಮುತ್ಯಾಳ ಕಾಲಿಗೆ ನಮಸ್ಕರಿಸಿದ. ನಂತರ ಒಳಗೆ ಹೋಗಿ ನಾಗಪ್ಪ ಶಾಸ್ತ್ರಿಗಳು ಪೂಜೆ ಮಾಡಿಕೊಟ್ಟಿದ್ದ ಯಂತ್ರವೊಂದನ್ನು ತಂದು ಬಸ್ಸಿಗೆ ಕಟ್ಟಿದ. ಆ ಊರಿಗೆ ಬಂದ ಮೊದಲ ಬಸ್ಸು ಅದಾಗಿರಲಿಲ್ಲ. ಆದರೆ ಆ ಊರಿನವರೇ ತಂದ ಮೊದಲ ಬಸ್ಸು ಅದಾಗಿತ್ತು. ಊರವರೆಲ್ಲಾ ತಾತನನ್ನು ಹಾಡಿ ಹೊಗಳಿದ್ದರು. ತಾತನಿಗೂ ಅದು ಬೇಕಿತ್ತು. ಮುತ್ಯಾ ನಿರ್ಲಿಪ್ತವಾಗಿದ್ದರೆ ಅಮ್ಮಮ್ಮ ನಿಮಗೆ ಹೇಳಲಿಲ್ಲ ಸುಮ್ಮನೆ ಅಡ್ದಬಾಯಿ ಹಾಕುತ್ತೀರೆಂದು ಎಂದಿದ್ದಳು. ಗೃಹಸ್ಥ ಸಂನ್ಯಾಸಿ ಆಗಬಾರದು ನಿಜ, ಆದರೆ ಸಂಸಾರದಿಂದಲೇ ಓಡಿಹೋಗುವ ಹಾಗೆ ಆಗಬಾರದು. ಅವನ ವಿಷಯದಲ್ಲಿ ಅದೇ ನನ್ನ ಭಯ ಎಂದಳು. `ಶುಭವಾ ಎಂದು ಮನೆಗೆ ಲಕ್ಷ್ಮಿಯನ್ನು ತಂದರೆ ಇಲ್ಲೂ ನಿಮ್ಮದಿಂಥಾ ಮಾತು ತಪ್ಪಲಿಲ್ಲವಲ್ಲಾ’ ಎಂದು ರೇಗಿದ್ದಳು ಅಮ್ಮಮ್ಮ.

ತಾತನ ಅಹಂ ನೆತ್ತಿಗೆ ಹತ್ತಿದ್ದ ಕ್ಷಣಗಳವು. ಅವನು ಇದೇ ಬಸ್ಸನ್ನು ಕೊಳ್ಳಲಿಕ್ಕೆ ಮನೆಯಲ್ಲಿದ್ದ ಬಂಗಾರದ ಮೇರುವನ್ನು ಕಳೆದದ್ದು (ಮುತ್ಯಾನ ಪ್ರಕಾರ ಅದು ಅವನ ನಂಬಿಕೆಯ ಊರುಗೋಲನ್ನು ಕಳಕೊಂಡದ್ದು). ಬೇಡ ಎನ್ನುವ ಸೂಚನೆಯನ್ನು ಕೊಡುವಂತೆ ತಾತನಿಗೆ ಪೆಟ್ಟಿನ ಮೇಲೆ ಪೆಟ್ಟುಕೊಟ್ಟಿದ್ದು. ಇಷ್ಟಾಗಿಯೂ ತಾತನಿಗೆ ಬಸ್ಸನ್ನು ಕೊಳ್ಳುವ ಹುಚ್ಚು ತಪ್ಪಲಿಲ್ಲ. ಹಣವೆನ್ನುವುದನ್ನು ತುಂಬಾ ದೊಡ್ಡದು ಎಂದು ನೋಡುತ್ತಿದ್ದ ಅವನು ಒಳಗಿನ ಸಮಾಧಾನವನ್ನೂ ಅದರಿಂದಲೇ ಪಡೆಯಲು ಬಯಸಿದ್ದ. ಆದರೆ ಪರಮೋಚ್ಚವಾದ ಆನಂದ ಕಳಚಿಕೊಳ್ಳುವುದರಲ್ಲಿದೆ, ಕಳೆದುಕೊಳ್ಳುವುದರಲ್ಲಿದೆ. ಗಳಿಸಿಕೊಳ್ಳುವುದೂ ಕಳೆದುಕೊಳ್ಳುವುದರ ಒಂದು ಮೆಟ್ಟಿಲು. ಗಳಿಸಿಕೊಳ್ಳುವುದೇ ಆದರೆ ಅದು ಒಳ ಹೊರಗನ್ನು ಒಂದು ಮಾಡುವ ಸ್ಥಿತಿ. ಅದಕ್ಕೆ ಇರಬೇಕು ಮದುವೆಯಾಗಿ ಬಂದ ಮೇಲೆ ಮುತ್ಯಾ ತನ್ನ ಪುಟ್ಟಸಂಸಾರವನ್ನು ಬಿಟ್ಟು ಬೇರೆ ಯಾವುದರ ಕಡೆಗೂ ನೋಡಲಿಲ್ಲ. ಅದಕ್ಕೇ ಅವಳ ಜಗತ್ತಿನ ಎಲ್ಲವೂ ತೀಕ್ಷ್ಣವಾಗಿದ್ದವು, ತೀವ್ರವಾಗಿದ್ದವು.

ರಾಮುಡುವಿನ ಹತ್ತಿರ ಇದನ್ನೆಲ್ಲಾ ತೋಡಿಕೊಂಡಳು ಮುತ್ಯಾ. ಅವಳಿಗೆ ಯಾಕೋ ವಿಚಿತ್ರವಾದ ಸಂಕಟ ಇದ್ದ ಹಾಗಿತ್ತು. ರಾಮುಡೂ ಅವಳನ್ನು ಸಮಾಧಾನ ಮಾಡಲಿಕ್ಕೆ ನೋಡುತ್ತಿದ್ದ, `ಯಾವ ಮರವೂ ತಾನು ಬಿತ್ತಿದ ಬೀಜ ದೊಡ್ದದಾಗುತ್ತೋ ಸದೃಢವಾಗಿ ನಿಲ್ಲುತ್ತೋ ಇಲ್ಲವೋ ಅಂತ ಯೋಚಿಸುವುದೇ ಇಲ್ಲ. ನಾವು ಮಾತ್ರ ಹೀಗೆ. ಕಳಚಿಕೊಳ್ಳುವುದೂ ಜೀವದ ಆಟದ ಭಾಗವೇ’ ಅರ್ಥಗರ್ಭಿತವಾದ ಅದರೆ ಅರ್ಧಂಬರ್ಧ ಮಾತುಗಳು ಮುತ್ಯಾಳಿಗೆ ನನಗಿಂತಲೂ ಹೆಚ್ಚೇ ತಲುಪಿರಬೇಕು. ಅವನ ಹತ್ತಿರ ಅವಳನ್ನು ಸಮಾಧಾನ ಮಾಡುವ ಮಾತುಗಳಿರಲಿಲ್ಲ. ಆದರೆ ಅವನ ನಗುವೊಂದರಲ್ಲಿಯೇ ದಿವ್ಯೌಷಧವಿತ್ತು. ಮಾತು ಸೋತಾಗಲೆಲ್ಲಾ ನನ್ನೊಂದಿಗೆ ಪಾಪಾ ಎಂದು ಮಾತಾಡುತ್ತಿದ್ದ. ಉಸಿರನ್ನೇ ಹಂಚಿಕೊಂಡಿದ್ದವನೊಂದಿಗೆ ನೋವನ್ನು ಹಂಚಿಕೊಳ್ಳುವ ಪ್ರಯತ್ನದಲ್ಲಿದ್ದಳು ಮುತ್ಯಾ. ಇದು ಅವಳ ಪಾಲಿನ ಅತ್ಯಂತ ಸಂಕಷ್ಟದ ಕ್ಷಣಗಳೆಂದೇ ಭಾವಿಸುತ್ತೇನೆ. ಆಗಲೇ ಅವಳು ಕಳಚಿಕೊಳ್ಳುವ ಯೋಚನೆಗೆ ಬಿದ್ದಿದ್ದು.

ಬೆಳಗ್ಗೆ ಮುಚ್ಚಿದ ಕಿಟಕಿಯ ಹಿಂದೆ ನಿಂತು ಕಿಂಡಿಯಿಂದ ಏನನ್ನೋ ನೋಡುತ್ತಿದ್ದಳು. ಆ ಕಡೆಗೆ ಆದು ಹೋಗುವಾಗ ನಾನವಳನ್ನು ನೋಡಿದೆ. ಕುತೂಹಲ ಅನ್ನಿಸಿ ನಾನು ಅವಳ ಬಳಿ ಹೋಗಿ ನಿಂತೆ. ನನ್ನ `ನೋಡು ಬಾ’ ಎಂದು ಕರೆದು ತಾನು ಬಗ್ಗಿ ನೋಡುತ್ತಿದ್ದ ಕಿಂಡಿಯಲ್ಲಿ ತೋರಿಸಿದಳು. ಅಲ್ಲೊಂದು ಮರ, ಕಿಂಡಿಯಲ್ಲಿ ಅದರ ಕಾಂಡವಷ್ಟೇ ಗೋಚರವಾಗುತ್ತಿತ್ತು. ಅದರಲ್ಲೇನು ವಿಶೇಷತೆ ಎಂದು ಗೊತ್ತಾಗದೆ ಅವಳನ್ನೇ ನೋಡಿದೆ. `ದಿನಾ ಬಯಲಲ್ಲಿ ಇದೇ ಮರವನ್ನು ನೋಡುತ್ತಿದ್ದೆ ಏನೂ ಅನ್ನಿಸಲಿಲ್ಲ. ಈಗ ನೋಡು ಈ ಮರ ಅಕ್ಕ ಪಕ್ಕ ಏನನ್ನೂ ಕಾಣಿಸದೆ ತಾನೆ ಬೃಹತ್ ಎನ್ನುವ ಹಾಗೆ ನಿಂತಿದೆ’ ಎಂದಳು. ಅವಳ ಮಾತಿನ ಪರಿಣಾಮದಲ್ಲಿ ಬಗ್ಗಿ ನೋಡಿದೆ. ನಿಜ ಮರ ಬೃಹತಾಗಿತ್ತು ಅದರ ಬುಡದಿಂದ ಮೇಲೆ ನೋಡಲಿಕ್ಕೆ ಪ್ರಯತ್ನಿಸಿದೆ. ಕಾಣಲಿಲ್ಲ ಕಣ್ಣಿಗೆ ಎಟುಕಿಸಲಿಕ್ಕೆ ಪ್ರಯತ್ನಿಸಿದೆ. ಒಂದು ಕ್ಷಣ ಮರವಲ್ಲದೆ ಬೇರೆ ಏನೂ ನನ್ನ ಮನಸ್ಸಿನಲ್ಲಿ ಉಳಿಯಲಿಲ್ಲ. ಬಾ ಬಾ ಎಂದು ನನ್ನನ್ನು ಬಯಲಿಗೆ ಕರೆದೊಯ್ದು ನಿಲ್ಲಿಸಿದಳು. ಅದೇ ಮರ ಬಯಲಲ್ಲಿ ಸಾಧಾರಣವಾಗಿ ನಿಂತಿದೆ. ಮುತ್ಯಾ ಯಾವ ಆಟ ಆಡಿಸುತ್ತಿದ್ದಾಳೆ ಅನ್ನಿಸಿತು. ಹುಚ್ಚಿ ಸರೋಜನ ವಿಷಯಕ್ಕೆ, ತಾತನ ವಿಷಯಕ್ಕೆ ತೀರಾ ದೊಡ್ಡವಳಂತೆ ವರ್ತಿಸಿದ್ದ ಮುತ್ಯಾ ನನಗೆ ನನಗಿಂತಲೂ ಪುಟ್ಟ ಹುಡುಗಿಯಾಗಿ ಕಂಡಳು. `ನೋಡಿದ್ಯಾ ಒಳಗೆ ಕಂಡಿದ್ದಕ್ಕೂ ಹೊರಗೆ ಕಾಣುವುದಕ್ಕೂ ಇರುವ ವ್ಯತ್ಯಾಸ’ ಎಂದಳು. ನಾನು ಇದ್ಯಾವ ಪ್ರಶ್ನೆ ಅಥವಾ ಉತ್ತರ ಎಂದು ಅವಳನ್ನೇ ನೋಡಿದೆ. `ಕಿಂಡಿಯಲ್ಲಿ ನೋಡಿದಾಗ ನಿನ್ನ ತಾತ ನನ್ನ ಮಗ ಮಾತ್ರ ಕಾಣುತ್ತಿದ್ದ. ಬಯಲಿಗೆ ಬಂದಾಗ ಎಲ್ಲರಂತೆ ಅವನೂ ಒಂದು ಜೀವ. ಇನ್ನು ನಾನವನ ಬಗ್ಗೆ ಯೋಚಿಸಲಾರೆ. ಇನ್ನು ಅವನು ಏನಾಗುತ್ತಾನೆ ಅಂತ ಅಷ್ಟೇ ನೋಡುತ್ತೇನೆ. ರಾಮುಡೂ ಎಂಥಾ ದರ್ಶನ ಮಾಡಿಸಿದ’ ಎಂದಳು. ರಾಮುಡೂವಿನ ಮಾತುಗಳಿಂದ ಮುತ್ಯಾ ಹೇಗೆ ಮೋಹ ಮುಕ್ತಳಾಗುತ್ತಿದ್ದಾಳೆ? ಅವಳೇ ಹೇಳುವ ಹಾಗೆ ಒಳಗಿನ ಪಯಣ ಕಳಚಿಕೊಳ್ಳುವ ಸತ್ಯ ಬದುಕಿನಷ್ಟೇ ಮುಖ್ಯ ಎಂದಷ್ಟೇ ಯೋಚಿಸತೊಡಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು


MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...