ಮನೆಗೆ ಮರಳಿದ ಮಹಾರಾಜ

Date: 21-10-2021

Location: ಬೆಂಗಳೂರು


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗೀಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರು. ಅವರು ತಮ್ಮ ಏರೋ ಪುರಾಣ ಅಂಕಣದಲ್ಲಿ ಈ ಬಾರಿ ಏರ್ ಇಂಡಿಯಾ ವಿಮಾನ ಸಂಸ್ಥೆ ಜಾಹಿರಾತಿನ ಶಾಂತ ಸಾತ್ವಿಕ ಪ್ರತಿಮೆಯಾದ " ಮಹಾರಾಜ"ನ ಕುರಿತು ವಿಶ್ಲೇಷಿಸಿದ್ದಾರೆ.

ವಿಮಾನಯಾನಕ್ಕೆ ಸಂಬಂಧಿಸಿದ ಕಳೆದ ವರ್ಷದ ಗಣತಿಯೊಂದು ಭಾರತದಲ್ಲಿ ಇರುವ ಒಟ್ಟು ನಾಗರಿಕ ವಿಮಾನಗಳ ಸಂಖ್ಯೆ ಸುಮಾರು ಎಂಟುನೂರು ಎಂದು ಸೂಚಿಸುತ್ತದೆ. ಈ ವಿಮಾನಗಳಲ್ಲಿ ಸಣ್ಣದು ದೊಡ್ಡದು, ದೂರಗಾಮಿ ಸಮೀಪ ವಿಹಾರಿ , ಸೇವೆಯಲ್ಲಿರುವುದು ದುರಸ್ತಿಯಲ್ಲಿ ವಿರಮಿಸುತ್ತಿರುವುದು ಎಲ್ಲವೂ ಸೇರಿವೆ. ಭಾರತದಲ್ಲಿ ಕೋವಿಡ್ ಬರುವ ಮೊದಲಿನ ವಿಮಾನ ಜನಸಂಚಾರ ವರ್ಷಕ್ಕೆ ಹದಿಮೂರು ಕೋಟಿಗಿಂತ ಹೆಚ್ಚು ಅವರಲ್ಲಿ ಹತ್ತು ಕೋಟಿ ಯಾತ್ರಿಗಳು ದೇಶದೊಳಗಿನ ಪ್ರಯಾಣದಲ್ಲಿ ಭಾಗವಹಿಸುವವರು ಎಂದು ಇನ್ನೊಂದು ಲೆಕ್ಕಾಚಾರ ತಿಳಿಸುತ್ತದೆ. ಇನ್ನು ಅಮೆರಿಕದ ಬೋಯಿಂಗ್ ಹಾಗು ಯೂರೋಪಿನ ಏರ್ಬಸ್ ಎನ್ನುವ ವಿಮಾನ ತಯಾರಕರು ನಿರಂತರವಾಗಿ ನಡೆಸುವ ಮಾರುಕಟ್ಟೆಯ ಸಮೀಕ್ಷೆಗಳು,ಮುಂದಿನ ಇಪ್ಪತ್ತು ವರ್ಷಗಳಲ್ಲಿ ಈಗಿನ ಲೆಕ್ಕಕ್ಕೆ ಇನ್ನೂ ಎರಡು ಸಾವಿರಕ್ಕಿಂತ ಹೆಚ್ಚು ವಿಮಾನಗಳು ಭಾರತದಲ್ಲಿ ಸೇರಲಿವೆ ಎಂದೂ ಅಂದಾಜಿಸುತ್ತವೆ. ವಿಮಾನಯಾನ ಜಗತ್ತಿನ ಕ್ಷಿಪ್ರ ಬೆಳವಣಿಗೆಯ ಹಸನು ಭೂಮಿ ಹುಲುಸು ಆಕಾಶ ಭಾರತದಲ್ಲಿದೆ ಎನ್ನುವುದು ಜನಪ್ರಿಯ ಸತ್ಯ. ವಿಮಾನ ತಯಾರಿಸುವ ಕಂಪೆನಿಗಳು ಜಗತ್ತಿನ ಯಾವ ಮೂಲೆಯಲ್ಲಿಯೇ ಇರಲಿ ಅವರೆಲ್ಲರ ಮಟ್ಟಿಗೆ ಭಾರತ, ವಿಮಾನಗಳ ಬೇಡಿಕೆ ಖರೀದಿ ಬಳಕೆಗಳ ಅತ್ಯಂತ ಆಕರ್ಷಕ ತಾಣ. ಹಾಗಾಗಿಯೇ ಭಾರತದೊಳಗಿನ ವಿಮಾನ ಚಟುವಟಿಕೆಗಳನ್ನು ಪ್ರಭಾವಿಸುವ ಯಾವುದೇ ಘಟನೆಯು ಭೌಗೋಳಿಕವಾಗಿ ದೂರದಲ್ಲಿರುವ ವಿಮಾನ ವ್ಯವಹಾರಸ್ಥರ ಗಮನವನ್ನು ಸೆಳೆಯುತ್ತದೆ. ಅಮೆರಿಕ ಹಾಗು ಚೈನಾಗಳ ನಂತರ ವಿಮಾನಗಳ ಅತಿದೊಡ್ಡ ಮಾರುಕಟ್ಟೆಯೆಂದು ಗುರುತಿಸಲ್ಪಡುವ ಭಾರತದಲ್ಲಿ ಈಗಷ್ಟೇ ಮಹತ್ವದ ಘಟನೆಯೊಂದು ನಡೆದು ಹೋಗಿದೆ. ಸರಳವಾಗಿ ಸುಲಭದಲ್ಲಿ ವ್ಯಾಖ್ಯಾನಿಸುವುದಾದರೆ "ಮಹಾರಾಜ ಮನೆಗೆ ಮರಳಿದ್ದಾನೆ". ವಿಮಾನಗಳನ್ನು ಆಕಾಶ ಕನ್ಯೆ, ಗಗನಸುಂದರಿ ಎಂದೆಲ್ಲ ಬಣ್ಣಿಸುವ ಪರಿಪಾಠ ಇದ್ದರೂ ಭಾರತದ "ಏರ್ ಇಂಡಿಯಾ" ಸಂಸ್ಥೆಯ ವಿಮಾನಗಳನ್ನು "ಮಹಾರಾಜ" ಎಂದು ಸಂಬೋಧಿಸುವುದೇ ಹೆಚ್ಚು ಸೂಕ್ತವೇನೋ.

ಏರ್ ಇಂಡಿಯಾ ವಿಮಾನ ಸಂಸ್ಥೆಯ ಜಾಹಿರಾತಿನ ಶಾಂತ ಸಾತ್ವಿಕ ಪ್ರತಿಮೆಯಾಗಿ " ಮಹಾರಾಜ" 1950ರ ದಶಕದಿಂದ ಪ್ರಚಲಿತ ಇದ್ದಾನೆ. ವಿಮಾನಗಳಲ್ಲಿ ಬಳಸುವ "ನೋಟ್ಪ್ಯಾ ಡ್" ಗಳಲ್ಲಿ ಅಚ್ಚಾದ ಕಂಪೆನಿಯ ಚಿಹ್ನೆಯಾಗಿ ಉಗಮವಾದ "ಮಹಾರಾಜ", ಮುಂದೆ ಏರ್ ಇಂಡಿಯಾ ಸಂಸ್ಥೆಯ ಟಿಕೆಟ್ ಬುಕಿಂಗ್ ಕೌಂಟರ್, ನವೀನ ಮಾರ್ಗದ ಜಾಹಿರಾತು, ಹೊಸ ದೇಶಕ್ಕೆ ಅಲ್ಲಿನ ವಿಮಾನ ನಿಲ್ದಾಣಕ್ಕೆ ಪ್ರವೇಶ, ಪ್ರಚಾರಗಳ ಸಲುವಾಗಿ ಜನಜನಿತವಾದವನು. ಏರ್ ಇಂಡಿಯಾದ ವಿಮಾನಗಳು ಇರುವಲ್ಲೆಲ್ಲ ತಲುಪುವಲ್ಲೆಲ್ಲ ಮಹಾರಾಜನ ಚಿತ್ರ, ಪ್ರತಿಮೆ ಅಲ್ಲಲ್ಲಿಗೆ ಹೊಂದುವ ಪೋಷಾಕು ತೊಟ್ಟು ಸಂಚರಿಸಿದೆ. ಬಾಗಿಲಲ್ಲಿ ನಿಲ್ಲುವ ಸಾಂಪ್ರದಾಯಿಕ ಸ್ವಾಗತಕಾರ ಅಥವಾ ಪಂಚೆ ಉಟ್ಟ ದಕ್ಷಿಣ ಭಾರತೀಯ ಉಡುಗೆಯ ವ್ಯಕ್ತಿ ಅಥವಾ ಸೂಟುಬೂಟಿನ ಸೇವಕನಾಗಿ ಭಾರತದೊಳಗಿನ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೆ ಭಾರತದ ಹೊರಗೆ, ಮಧ್ಯ ಏಷ್ಯಾ ಬ್ರಿಟನ್ ಯುರೋಪ್ ಅಮೇರಿಕ ಆಸ್ಟ್ರೇಲಿಯಾ ಇತ್ಯಾದಿ ದೇಶಗಳ ಸಂಸ್ಕೃತಿ ಸಂದರ್ಭಗಳಿಗೆ ಹೊಂದುವಂತೆ ವೇಷ ಉಡುಪುಗಳಲ್ಲಿ ವಿವಿಧ ಅವತಾರ ತಾಳಿ ಗಮನ ಸೆಳೆದಿದ್ದಾನೆ. ಆಕರ್ಷಕ ಹಾವ ಭಾವ, ನಗೆಯುಕ್ಕಿಸುವ ಶೀರ್ಷಿಕೆ, ಹಾಸ್ಯ ಚಟಾಕಿಗಳನ್ನೊಳಗೊಂಡ ಜಾಹಿರಾತುಗಳ ಮೂಲಕ ಏರ್ ಇಂಡಿಯಾದ ವಿಮಾನ ಸೇವೆಯನ್ನು ಪರಿಚಯಿಸುವಲ್ಲಿ ಜನಪ್ರಿಯಗೊಳಿಸುವಲ್ಲಿ ಸಹಕರಿಸಿದ್ದಾನ. ಸುಖ ಐಷಾರಾಮಗಳಿಗೆ ಸಂಕೇತವಾಗಿರುವ ಭಾರತೀಯ ಶಬ್ದವಾದ "ಮಹಾರಾಜ", ವಿಮಾನವೊಂದರ ಪ್ರಚಾರ ಪ್ರತಿನಿಧಿಯಾಗಿ ರೂಪಾಂತರ ಪಡೆಯುವಾಗ ಕಾರ್ಯನಿರ್ವಹಿಸುವಾಗ ರಾಜಪದವಿ, ಓಲಗ, ಆಡಂಬರಗಳು ಇರದೇ ವಿಮಾನ ಸೇವೆಯ ವಿನಮ್ರ ಸಂಕೇತವಾಗಿದ್ದಾನೆ. ಕತ್ತು ಬಗ್ಗಿಸಿ ಕಣ್ಮುಚ್ಚಿ ಮೀಸೆಯಡಿಯಲ್ಲಿ ಕಿರುನಗೆ ಬೀರಿ ವಿನೀತ ಭಾವದಲ್ಲಿ ಸ್ವಾಗತಿಸುವ ಮಹಾರಾಜನ ಪ್ರತಿಮೆ ಅಥವಾ ಚಿತ್ರ "ಏರ್ ಇಂಡಿಯಾ" ವಿಮಾನಗಳ ಸಹವಾಸ ಮಾಡಿದವರಿಗೆಲ್ಲ ಗೊತ್ತು.1989ರಲ್ಲಿ ಮಹಾರಾಜ ನ ಲೋಗೋ ಭಾರತದ ಸಮಾಜವಾದಿ "ಇಮೇಜ್ "ಗೆ ಸರಿ ಹೊಂದುವುದಿಲ್ಲ, ಬದಲಾಯಿಸಬೇಕು ಎನ್ನುವ ಸಲಹೆ ಬಂದಾಗ ವಿಮಾನ ಬಳಕೆದಾರರಿಂದ ತೀವ್ರ ಪ್ರತಿರೋಧ ಬಂದು "ಮಹಾರಾಜ"ನನ್ನೇ "ಮಾರ್ಕೆಟಿಂಗ್ ಲೋಗೋ" ಆಗಿ ಮುಂದುವರಿಸಲು ನಿರ್ಧರಿಸಲಾಯಿತು. ಏರ್ ಇಂಡಿಯಾ ಸಂಸ್ಥೆಯ ಮೂಲ ಮಾಲಕರಾಗಿದ್ದ ಟಾಟಾ ಕಂಪೆನಿಯವರು ಬಯಸಿದಂತೆ ಮಾರುಕಟ್ಟೆಯನ್ನು ವಿಸ್ತರಿಸಲು ಅನುಕೂಲಕರನಾಗಿ (Mascot) ಹೊಸ ಹೊಸ ರೂಪ ಲಕ್ಷಣಗಳೊಂದಿಗೆ "ಮಹಾರಾಜ" ಸಂದರ್ಭ ಸನ್ನಿವೇಶಗಳಿಗೆ ತಕ್ಕಂತೆ ಮರುನಿರ್ಮಿಸಲ್ಪಟ್ಟಿದ್ದಾನೆ. ಏರ್ ಇಂಡಿಯಾದ ಆರಂಭದ ದಿನಗಳಿಂದ ಇತ್ತೀಚಿನ ತನಕದ ಬದಲಾವಣೆ ಗೆಲುವು ಸೋಲುಗಳು ಲಾಭ ನಷ್ಟಗಳನ್ನು ಹತ್ತಿರದಿಂದ ಮೂಕನಾಗಿ ಎಂದಿನ ನಸುನಗೆ ಬೀರುತ್ತಾ ನೋಡಿ ನುಂಗಿದ್ದಾನೆ. ನಿರ್ಜೀವ ಚಿತ್ರ, ನಿಶ್ಚಲ ಪ್ರತಿಮೆ ತಾನಾದರೂ ಏರ್ ಇಂಡಿಯಾ ದ ಜೀವಂತಿಕೆಯ ಭಾಗವಾಗಿದ್ದಾನೆ. ಸಂಸ್ಥೆಯ ಏಳು ದಶಕಗಳ ಜೀವನಯಾನಕ್ಕೆ ಸಾಕ್ಷಿಯಾಗಿದ್ದಾನೆ.

ಭಾರತದ ವಿಮಾನ ಚರಿತ್ರೆಯ ಅತ್ಯಂತ ಮಹತ್ವಪೂರ್ಣ ಘಟನೆಗಳಲ್ಲಿ 1932ರಲ್ಲಿ "ಟಾಟಾ ಏರ್ಲೈನ್ಸ್" ನ ಸ್ಥಾಪನೆ ,1946ರಲ್ಲಿ "ಏರ್ ಇಂಡಿಯಾ" ಎನ್ನುವ ಹೆಸರಿನಲ್ಲಿ ನಾಮಕರಣಗೊಂಡದ್ದು, 1953ರಲ್ಲಿ ಸರಕಾರವು ವಿಮಾನಯಾನವನ್ನು ರಾಷ್ಟ್ರೀಕರಣಗೊಳಿಸುವ ಉದ್ದೇಶದಿಂದ ಬಹುಭಾಗದ ಷೇರುಗಳನ್ನು ಖರೀದಿಸಿದ್ದು, 2000ರದ ಸಮಯದ ಆರ್ಥಿಕ ಉದಾರೀಕರಣ, ಜಾಗತಿಕ ಮಾರುಕಟ್ಟೆ ಹೆಚ್ಚು ತೆರೆದುಕೊಂಡದ್ದು, ಖಾಸಗಿ ವಿಮಾನಯಾನ ಸಂಸ್ಥೆಗಳ ಸ್ಪರ್ಧೆ ಎದುರಿಸಿದ್ದು ದಾಖಲಾಗುತ್ತವೆ. ಮತ್ತೆ ಇವೆಲ್ಲ ಮೈಲಿಗಲ್ಲುಗಳ ಹಿನ್ನೆಲೆಯಲ್ಲಿ ಟಾಟಾ ಏರ್ಲೈನ್ಸ್ ನ ಸ್ಥಾಪಕ ದಿವಂಗತ ಜೆ ಆರ್ ಡಿ ಟಾಟಾ 1929ರಲ್ಲಿ ವಿಮಾನ ಚಾಲನೆಯ ಪರವಾನಿಗೆ ಪಡೆದ ಮೊತ್ತ ಮೊದಲ ಭಾರತೀಯ ಪೈಲಟ್ ಕ್ಷಣವೂ ಇದೆ. ನಾಗರಿಕ ಪ್ರಯಾಣ ಹಾಗು ಸರಕು ಸಾಗಾಣಿಕೆಗಳಲ್ಲಿ ಎತ್ತಿನ ಗಾಡಿ, ಕುದುರೆಬಂಡಿ , ಟ್ರಾಕ್ಟರ್ , ಲಾರಿಗಳಿಂದ ಹಿಡಿದು ಬಸ್ಸು, ಹಡಗು, ರೈಲುಗಳ ತನಕ ಎಲ್ಲ ಮಾಧ್ಯಮಗಳೂ ಜೊತೆಜೊತೆಗೇ ತಮ್ಮ ತಮ್ಮ ಹಾದಿಯಲ್ಲಿ ಚಾಲ್ತಿಯಲ್ಲಿ ಇದ್ದ ಕಾಲದಲ್ಲಿಯೇ ವಿಮಾನ ಪ್ರಯಾಣವೂ ಭಾರತದಲ್ಲಿ ಆರಂಭವಾಯಿತು. 1932ರ ಅಕ್ಟೋಬರ್ ಹದಿನೈದರಂದು ಅಂಚೆ ಸಾಗಾಟಕ್ಕೆಂದು ಕರಾಚಿಯಿಂದ ಮುಂಬೈಗೆ ನಡೆದ ಹಾರಾಟ ಭಾರತೀಯ ವಿಮಾನಸೇವೆಯ ಮೊದಲ ಯಾನ. ಪ್ರತಿ ಅಡುಗೆಮನೆಯ ಅತಿ ಅವಶ್ಯಕ ವಸ್ತುವಿಶೇಷವಾದ ಉಪ್ಪಿನಿಂದ ಹಿಡಿದು ವಿಭಿನ್ನ ವೈವಿಧ್ಯಮಯ ಸಣ್ಣ ದೊಡ್ಡ ಉತ್ಪನ್ನ ವ್ಯವಹಾರ ಉದ್ಯಮಗಳಲ್ಲಿ ತೊಡಗಿಸಿಕೊಂಡ ಟಾಟಾ ಸಂಸ್ಥೆ, ವಿಮಾನ ಸಂಸ್ಥೆಯನ್ನು ಹುಟ್ಟು ಹಾಕಿದ ವಿವರಗಳು ಏರ್ ಇಂಡಿಯಾದ ಕಥನದ ಮೊದಮೊದಲ ಪುಟಗಳಲ್ಲಿದೆ. ಮತ್ತೆ ಅದೇ ಟಾಟಾ ಕಂಪೆನಿ, ಸರಕಾರದ ಸ್ವಾಮ್ಯದಲ್ಲಿ ದೀರ್ಘ ಕಾಲದ ಹಾರಾಟ ಮಾಡಿ, ಅಳಿವು ಉಳಿವಿನ ಹೋರಾಟ ನಡೆಸಿದ ಏರ್ ಇಂಡಿಯಾ ವನ್ನು ಮರಳಿ ಪಡೆದದ್ದೂ ಅದೇ ಇತಿಹಾಸ ಪುಸ್ತಕದ ತೀರ ಇತ್ತೀಚಿನ ಹೊಚ್ಚ ಹೊಸ ಹಾಳೆಯಲ್ಲಿ ಈಗಷ್ಟೇ ಬರೆಯಲ್ಪಡುತ್ತಿದೆ.

ಟಾಟಾ ಕೇಂದ್ರಿತ ಈ ಎರಡು ಮಹತ್ವದ ಮೈಲಿಗಲ್ಲುಗಳ ನಡುವೆ ಏರ್ ಇಂಡಿಯಾದ ಜಾಲ ದೇಶದ ಹಲವು ನಗರಗಳನ್ನು ಜೋಡಿಸಿದ್ದು, ಹೊಸ ಬಗೆಯ ಉದ್ಯೋಗ ಸೃಷ್ಟಿಸಿದ್ದು ,"ಮಹಾರಾಜ " ಎನ್ನುವ ಜಾಹಿರಾತು ಪ್ರತಿನಿಧಿ ಜೀವಪಡೆದದ್ದು, ಅಂತಾರಾಷ್ಟ್ರೀಯ ಸಂಚಾರ ಶುರು ಆದದ್ದು, ಮುಂದೆ ರಾಷ್ಟ್ರೀಕರಣಗೊಂಡು ಸರಕಾರದ ಆಡಳಿತಕ್ಕೆ ಸೇರಿದ್ದು, ಯಶಸ್ಸಿನ ಮೆಟ್ಟಿಲು ಏರಿದ್ದು, ತೀವ್ರ ಆರ್ಥಿಕ ವೈಫಲ್ಯ ಕಂಡಿದ್ದು, ಖಾಸಗಿ ಮಾಲಿಕರನ್ನು ಹುಡುಕಲು ಸರಕಾರ ಪ್ರಯಾಸ ಪಟ್ಟದ್ದು ಮತ್ತೆ ಇದೀಗ ಮರಳಿ ತನ್ನ ಮೂಲ ಒಡೆಯನ ಸುಪರ್ದಿಗೆ ಬಿದ್ದದ್ದು ಎಲ್ಲವೂ ಸೇರಿವೆ.

ಏರ್ ಇಂಡಿಯಾದ ಬಗೆಗಿನ ಕಳೆದ ಎರಡು ದಶಕಗಳ ಚರ್ಚೆಗಳೆಲ್ಲ ಅದರ ಆರ್ಥಿಕ ನಷ್ಟದ ಬಗೆಗೆ, ಸಂಸ್ಥೆಯನ್ನು ಅಸ್ತಿತ್ವದಲ್ಲಿಡಲು ಸುರಿದ ಸಾವಿರಾರು ಕೋಟಿಗಳ ಬಗೆಗೆ, ಸರಕಾರ ತನ್ನ ಸ್ವಾಮ್ಯವನ್ನು ಕಳೆದುಕೊಳ್ಳಲು ಮಾಡಿದ ನಿರಂತರ ಮತ್ತು ವಿಫಲ ಪ್ರಯತ್ನಗಳ ಕುರಿತಾಗಿಯೇ ಇವೆ. ವಿಮಾನಯಾನವನ್ನು ನಿರ್ವಹಿಸುವ ಎಲ್ಲ ಸಂಸ್ಥೆಗಳಿಗೂ ಸಾಮಾನ್ಯ ಎನಿಸುವ ಕೆಲವು ಕಠಿಣ ಸವಾಲುಗಳಿವೆ, ಆ ಸಮಸ್ಯೆಗಳು ಏರ್ ಇಂಡಿಯಾವನ್ನೂ ಸತಾಯಿಸದೆ ಬಿಟ್ಟಿರುವುದು ಸಾಧ್ಯ ಇಲ್ಲ. ಯಾವ ಮಾರ್ಗಗಳನ್ನು ಆಯ್ದುಕೊಳ್ಳಬೇಕು, ಎಷ್ಟು ಸೀಟಿನ, ಯಾವ ಬಗೆಯ ಎಂಜಿನ್ ಇರುವ ವಿಮಾನ ಹಾಕಬೇಕು, ಹೊಸ ವಿಮಾನಗಳನ್ನು ತಾವೇ ಕೊಂಡು ಓಡಿಸಬೇಕೋ ಅಲ್ಲ ಸೆಕೆಂಡ್ ಹ್ಯಾಂಡ್ ವಿಮಾನಗಳನ್ನು ಗುತ್ತಿಗೆಯಲ್ಲಿ ಪಡೆಯಬೇಕೋ, ನಿತ್ಯ ಎಷ್ಟು ಬಾರಿ ಹಾರಾಟ, ಯಾವ ಸೇವೆಗಳನ್ನು ಟಿಕೇಟು ದರದಲ್ಲಿ ಸೇರಿಸಬೇಕು, ಯಾವುದು ಪ್ರತ್ಯೇಕವಾಗಿ ಕೊಳ್ಳುವಂತೆ ಮಾಡಬೇಕು, ಮಾರುಕಟ್ಟೆಯ ಬದಲಾವಣೆಗಳಿಗೆ ಹೇಗೆ ಸ್ಪಂದಿಸಬೇಕು, ಒಳ್ಳೆಯ ಚಾಲಕರು ಸಿಬ್ಬಂದಿಗಳನ್ನು ಸೇರಿಸಿಕೊಳ್ಳುವ ಉಳಿಸಿಕೊಳ್ಳುವ ಬಗೆ ಹೇಗೆ , ಇಂಧನ ಬೆಲೆಯ ವೈಪರಿತ್ಯವವನ್ನು, ಆಕಸ್ಮಿಕ ಜಾಗತಿಕ ಬಿಕ್ಕಟ್ಟನ್ನು ಎದುರಿಸುವ ದಾರಿ ಯಾವುದು ಇತ್ಯಾದಿ ಇತ್ಯಾದಿ.

ಭಾರತದ ವಿಮಾನಯಾನದ ಪ್ರಮುಖ ಹೆಸರುಗಳಾದ ಏರ್ ಇಂಡಿಯಾ, ಜೆಟ್, ಕಿಂಗ್ ಫಿಷರ್ ಹಾಗು ಇತ್ತೀಚಿನ ಇಂಡಿಗೋಗಳ ಅಧ್ಯಯನ ವಿಮಾನಯಾನವನ್ನು ನಡೆಸುವುದರ ಬಗೆಗಿನ ಬೇರೆ ಬೇರೆ ವಿವರಗಳನ್ನು ಮಾಲಕರ ಸಂಕಷ್ಟಗಳ ಸರಮಾಲೆಯನ್ನು ಅನಾವರಣಗೊಳಿಸುತ್ತವೆ. ರಾಜ್ಯ ದೇಶಗಳ ಸೀಮೆಯನ್ನು ಮೀರಿ "ಸರಕಾರಿ ಸಂಸ್ಥೆ" ಎನ್ನುವ ಕಾರಣಕ್ಕೆ ಹುಟ್ಟಿಕೊಳ್ಳುವ ಸಂಕೀರ್ಣ ಆಡಳಿತ ವ್ಯವಸ್ಥೆ , ಜಡ ಭ್ರಷ್ಟ ಅಧಿಕಾರಶಾಹಿ, ಬೇಷರತ್ ಉದ್ಯೋಗ ಭದ್ರತೆಯ ದುರುಪಯೋಗ, ಬದಲಾವಣೆಗಳಿಗೆ ನೀರಸ ಪ್ರತಿಸ್ಪಂದನೆ ಇತ್ಯಾದಿಗಳು ಏರ್ ಇಂಡಿಯಾವನ್ನು ಸಹ ಕಾಡಿಸಿ ಪೀಡಿಸಿದವು. ಸರಕಾರವೊಂದು ಯಾವ ವ್ಯವಹಾರ ವ್ಯವಸ್ಥೆಗಳನ್ನು ತನ್ನ ನೇರ ಅಧಿಕಾರದಲ್ಲಿ ಇಡಬೇಕು ಇಡಬಾರದು ಎನ್ನುವುದು ಮತ್ತೆ ಮತ್ತೆ ಎಲ್ಲ ದೇಶಗಳಲ್ಲಿ ಚರ್ಚೆಯಾಗುವ ವಿಚಾರ. ಇನ್ನು ಜಗತ್ತಿನ ಬೇರೆ ದೇಶಗಳನ್ನು ಗಮನಿಸಿದರೆ ವೈರುಧ್ಯ ವ್ಯತಿರಿಕ್ತ ತೀರ್ಮಾನಗಳನ್ನು ಸೂಚಿಸುವ ವಿಷಯವೂ ಹೌದು. ಸರಕಾರಿ ಅಥವಾ ಖಾಸಗಿ ಎನ್ನುವ ಜಿಜ್ಞಾಸೆಯ ಪರ ವಿರೋಧಗಳು ಏನಿದ್ದರೂ, ಒಂದು ದೇಶದಲ್ಲಿರುವ ಪ್ರತಿಯೊಬ್ಬರ ಬದುಕಿಗೆ ಅತ್ಯಂತ ಮೂಲಭೂತವಾದ ಶಿಕ್ಷಣ ಹಾಗು ಆರೋಗ್ಯ ವ್ಯವಸ್ಥೆಗಳು ಸರಕಾರದ ನಿಯಂತ್ರಣದಲ್ಲಿ ಇರುವುದು ಸಂವೇದನಾಶೀಲ ಹಾಗು ಸಮರ್ಪಕ ಅಂತ ಹೆಚ್ಚು ಸುಲಭವಾಗಿ ವಾದಿಸಬಹುದು, ಆದರೆ ವಿಮಾನಯಾನ ಸಂಸ್ಥೆಯ ನೇರ ನಿರ್ವಹಣೆಯ ಹೊಣೆ ಸರಕಾರದ್ದೇ ಆಗಿರಬೇಕು ಅಂತ ಪ್ರತಿಪಾದಿಸುವುದು ಕಷ್ಟ. ವಿಮಾನಯಾನ ಸಂಸ್ಥೆಯೊಂದನ್ನು ಸರಕಾರದ ನಿಯಂತ್ರಣದಲ್ಲಿ ಇಟ್ಟುಕೊಂಡು ಸಮರ್ಥವಾಗಿ ನಿಭಾಯಿಸಿಸುತ್ತಿರುವ ದೇಶಗಳು ಹಲವಿವೆ ಮತ್ತೆ ನಿರ್ವಹಿಸಲಾಗದೆ ಖಾಸಗಿ ಒಡೆತನಕ್ಕೆ ಮಾರಾಟ ಮಾಡಿ ನಿಟ್ಟುಸಿರು ಬಿಟ್ಟ ದೃಷ್ಟಾಂತಗಳೂ ತುಂಬ ಇವೆ. ಜನಸಾಮಾನ್ಯರ ಮೂಲಭೂತ ಅವಶ್ಯಕತೆ ಸೌಕರ್ಯ ಅಲ್ಲದ ವಿಮಾನ ಸಂಸ್ಥೆಯ ಒಡೆತನ ಸರಕಾರ ನಿಭಾಯಿಸಬೇಕೋ ಇಲ್ಲವೋ ಎನ್ನುವುದಕ್ಕಿಂತ, ಆ ವಿಮಾನ ಸಂಸ್ಥೆ ಹೇಗೆ ನಿರ್ವಹಿಸಲ್ಪಡುತ್ತಿದೆ, ಎಷ್ಟು ಸುರಕ್ಷಿತ ಜನಪ್ರಿಯ ಸೇವೆ ನೀಡುತ್ತಿದೆ ಎನ್ನುವುದು ಮುಖ್ಯ ಆಗುತ್ತದೆ . ಏರ್ ಇಂಡಿಯಾದ ಎಲ್ಲಾ ವೈಫಲ್ಯಗಳನ್ನೂ ಸರಕಾರಿ ಯಂತ್ರದ ಮೇಲೆ ಮಾತ್ರ ಹೇರುವಂತಿಲ್ಲ . ಜೆಟ್ ಹಾಗು ಕಿಂಗ್ ಫಿಷರ್ ಗಳಂತಹ ಖಾಸಗಿ ಒಡೆತನದ ವಿಮಾನಯಾನ ಸಂಸ್ಥೆಗಳೂ ತಾವು ತೆಗೆದುಕೊಂಡ ಕೆಲವು ತಪ್ಪು ವ್ಯಾವಹಾರಿಕ ನಿರ್ಧಾರಗಳು, ಅಸಮರ್ಥ ನಿರ್ವಹಣೆ, ವಿಮಾನಯಾನ ನೀತಿ, ಅತಿಯಾದ ತೆರಿಗೆಗಳು, ವೆಚ್ಚಗಳನ್ನು ಸರಿಯಾಗಿ ನಿಭಾಯಿಸುವಲ್ಲಿನ ನಿರ್ಲಕ್ಷ್ಯಗಳ ಕಾರಣಕ್ಕೆ ವೈಫಲ್ಯವನ್ನು ಕಂಡಿವೆ. ಹದಿನಾರು ವರ್ಷಗಳ ಹಿಂದೆ ಶುರು ಆದ, ಸದ್ಯಕ್ಕೆ ಭಾರತದ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಂಚೂಣಿಯಲ್ಲಿ ಇರುವ, ಮುನ್ನೂರಕ್ಕಿಂತ ಹೆಚ್ಚು ವಿಮಾನಗಳನ್ನು ಹೊಂದಿದ "ಇಂಡಿಗೊ" ಸಂಸ್ಥೆ ಕೂಡ ನಷ್ಟದಲ್ಲಿಯೇ ನಡೆಯುತ್ತಿದೆ. ಹಾಗಾಗಿ ಖಾಸಗಿ ಆಡಳಿತಕ್ಕೆ ಮತ್ತು ತನ್ನ ಮೂಲಮನೆಗೆ ಮರಳಿದೆ ಎನ್ನುವ ಕಾರಣಗಳಿಗೆ ಏರ್ ಇಂಡಿಯಾದ ಭವಿಷ್ಯ ಸುಭಧ್ರ ಸುಲಲಿತ ಎಂದು ನಿರಾಳವಾಗುವ ಹಾಗಿಲ್ಲ . ಅತಿ ದೊಡ್ಡ ಮತ್ತು ಬಗೆಬಗೆಯ ವ್ಯಾಪಾರಗಳನ್ನು ನಿರ್ವಹಿಸುವ ಅನುಭವಿ ವ್ಯವಹಾರಸ್ಥ ಟಾಟಾದ ಮನೆಗೆ "ಮಹಾರಾಜ" ಮರಳಿ ಬಂದುದು ಚಾರಿತ್ರಿಕ ಭಾವನಾತ್ಮಕ ಘಳಿಗೆಯಾದರೂ, ಅದು ಕ್ಷಣಿಕವಾದದ್ದು. ದೀರ್ಘಕಾಲಿಕವಾದದ್ದು "ಮಹಾರಾಜ" ನ ಮನೆಯ ಬಾಗಿಲಲ್ಲಿ ಕಾಯುತ್ತಿರುವ ವಿಮಾನಯಾನದ ಇಂದಿನ ಎಂದಿನ ಸಾರ್ವತ್ರಿಕ ಹಾಗು ಸ್ಥಳೀಯ ಸವಾಲುಗಳು ಹಾಗು ಪಾರಂಪರಿಕ ಎಡರು ತೊಡರುಗಳು. ತನ್ನ ಎಂದಿನ ವಿನಮ್ರ ವಿನೀತ ಹಾವಭಾವದಲ್ಲಿ ಕಣ್ಮುಚ್ಚಿ ಕೈಜೋಡಿಸಿ ತಿಳಿನಗೆ ಬೀರಿ ಹೊಸಕಾಲವನ್ನು ಸ್ವಾಗತಿಸಿ, ,ಹಳೆಯ ಪಂಥಗಳನ್ನು ಸ್ವೀಕರಿಸಿ ಮುನ್ನಡೆಯುವುದಷ್ಟೇ "ಮಹಾರಾಜ"ನ ಸದ್ಯದ ಆಯ್ಕೆ. ಮಹಾರಾಜನ ಮುಂದಿನ ಯಾತ್ರೆ ಹಿಂದಿಗಿಂತ ಸುಖಕರವಾಗಿರಲಿ ಎನ್ನುವುದಷ್ಟೇ ಈ ಸಮಯದ ಹಾರೈಕೆ.

ಈ ಅಂಕಣದ ಹಿಂದಿನ ಬರಹಗಳು
ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್ಕಿ
ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು
ವಿಮಾನ ನಿಲ್ದಾಣಕ್ಕೆ ಸ್ವಾಗತ
ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು
ಒಂದು ಆಕಾಶ ಹಲವು ಏಣಿಗಳು
ಆಗಸದ ಬಂಡಿಗಳ ಅಂಗರಚನಾಶಾಸ್ತ್ರ
ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ
ಗಗನಯಾನದ ದೈತ್ಯ ಹೆಜ್ಜೆಗಳು

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...