About the Author

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್.

ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು.

ಕವಿ, ನಾಟಕಕಾರ, ಮಕ್ಕಳ ಸಾಹಿತ್ಯ ರಚನೆಕಾರರಾಗಿ ಕನ್ನಡ ಸಾಹಿತ್ಯದ ಪರಿಚಾರಿಕೆ ಮಾಡಿದ ಜಿ.ಪಿ.ರಾಜರತ್ನಂ ಅವರು ರಚಿಸಿದ ರತ್ನನ ಪದಗಳು, ಬುದ್ಧವಚನ ಪರಿಚಯ ಕೃತಿಗಳಿಗೆ ದೇವರಾಜ ಬಹಾದ್ದೂರ್ ಪ್ರಶಸ್ತಿ ದೊರಕಿತು. ರಾಜ್ಯಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1969), ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ (1970), ಮೈಸೂರು ವಿಶ್ವವಿದ್ಯಾಲಯವು ಗೌರವ ಡಿಲಿಟ್ ಪದವಿ (1977) ನೀಡಿ ಗೌರವಿಸಿದ್ದವು. ದೆಹಲಿಯಲ್ಲಿ ನಡೆದ 50ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (1978) ಅಧ್ಯಕ್ಷತೆ ವಹಿಸಿದ್ದರು. ಜಿ.ಪಿ.ರಾಜರತ್ನಂ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಿಂದ ಹಿಂದಿರುಗಿದ ಒಂದೆರಡು ದಿನಗಳಲ್ಲೇ 1979ರ ಮಾರ್ಚ್ 13ರಂದು ನಿಧನರಾದರು.

ಜಿ.ಪಿ. ರಾಜರತ್ನಂ ಅವರು ಮಕ್ಕಳಿಗಾಗಿ ಚಿಕ್ಕ ಹೊತ್ತಿಗೆಗಳನ್ನು ದೊಡ್ಡವರಿಗಾಗಿ ದೊಡ್ಡ ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಬುದ್ಧ ಸಾಹಿತ್ಯ, ಜೈನ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಚೀನಾದೇಶದ ಬೌದ್ಧಯಾತ್ರಿಕರು ಮೊದಲಾದ 20 ಬೌದ್ಧ ಸಾಹಿತ್ಯ ಕೃತಿಗಳು, ರತ್ನನ ಪದಗಳು, ಶಾಂತಿ, ನಾಗನ ಪದಗಳು, ಪುರುಷ ಸರಸ್ವತಿ (ಕಾವ್ಯ), ಗಂಡುಗೊಡಲಿ (ನಾಟಕ), ಹೊಸಗನ್ನಡ, ಯಶೋಧರ ಚರಿತ್ರೆ ಕೈಗನ್ನಡಿ, ಶ್ರೀಕವಿಪಂಪ, ತುತ್ತೂರಿ ಚುಟುಕ ಕಡಲೇಪುರಿ, ಗುಲಗಂಜಿ ಇತ್ಯಾದಿ ಮಕ್ಕಳ ಸಾಹಿತ್ಯ. ಜೈನಸಾಹಿತ್ಯಕ್ಕೆ ಸಂಬಂಧಿಸಿದ ಶ್ರೀ ಗೊಮ್ಮಟೇಶ್ವರ, ಭಗವಾನ್ ಮಹಾವೀರ, ಅಲ್ಲದೆ ವಿಚಾರರಶ್ಮಿ, ನಿರ್ಭಯಾಗ್ರಫಿ ಇತ್ಯಾದಿ ಇವರ ವಿಮರ್ಶಾ ಕೃತಿಗಳು.

ಜಿ.ಪಿ. ರಾಜರತ್ನಂ

(05 Dec 1904-13 Mar 1979)

Books by Author