ಬಣ್ಣದ ತಗಡಿನ ತುತ್ತೂರಿ (ಮಕ್ಕಳಿಗಾಗಿ ನೀಳ್ಗವಿತೆಗಳು)

Author : ಸಿ.ಎಂ.ಗೋವಿಂದರೆಡ್ಡಿ

Pages 256

₹ 200.00




Year of Publication: 2014
Published by: ಸಿ.ವಿ.ಜಿ. ಇಂಡಿಯಾ , ಬೆಂಗಳೂರು
Address: CVG INDIA, Kasturaba bhavana, Gandhi Bhavana Campus,Kumara Park East,Bengaluru- 560001
Phone: 9481908555

Synopsys

ಲೇಖಕರ ಮಾತು ನನಗೆ ಚಿಕ್ಕಂದಿನಿಂದಲೂ ಪುಸ್ತಕಗಳೆಂದರೆ ಬಲು ಪ್ರೀತಿ. ಮುಂದೆ ಸಾಹಿತ್ಯ ವಿದ್ಯಾರ್ಥಿಯಾದ ನನ್ನಲ್ಲಿ ಬರೆಯುವ ಬಯಕೆ ಸಹಜವಾಗಿ ಮೂಡಿಬಂತು. ಇದರ ಫಲವೆಂಬಂತೆ ಕೆಲವು ಮಕ್ಕಳ ಸಾಹಿತ್ಯ ಕೃತಿಗಳನ್ನು ಹೊರತಂದೆ. ಈ ‘ಬಣ್ಣದ ತಗಡಿನ ತುತ್ತೂರಿ’ ನಾನು ರಚಿಸಿದ ಮಕ್ಕಳ ಕವನಸಂಕಲನಗಳಲ್ಲಿ ಪ್ರಕಟಗೊಂಡಿರುವ ನೀಳ್ಗವಿತೆಗಳನ್ನು ಒಂದೆಡೆ ಕಲೆಹಾಕಿ ಅವುಗಳ ಜೊತೆಗೆ ಇನ್ನೂ ಪ್ರಕಟವಾಗದಿರುವ ಕೆಲವು ನೀಳ್ಗವಿತೆಗಳನ್ನು ಸೇರಿಸಿ ಹೊರತರುತ್ತಿರುವ ಮಕ್ಕಳಸಾಹಿತ್ಯ ಕೃತಿ. ಈ ಕೃತಿಯಲ್ಲಿನ ‘ರಾಮಧಾನ್ಯ’ ಮತ್ತು ‘ಭೀಮನ ಮದುವೆ’ ಕವಿತೆಗಳನ್ನು ಕುರಿತು ಶ್ರೀಯುತ ಬೊಳುವಾರು ಮಹಮದ್ ಕುಂಞರವರು ‘ಪದ್ಯ ಹೇಳುವ ಮರ’ ಕೃತಿಯ ಮುನ್ನುಡಿಯಲ್ಲಿ “ಇವು ಈಗಾಗಲೇ ಜನಪ್ರಿಯವಾಗಿರುವ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಪೌರಾಣಿಕ ಕಥಾವಸ್ತುವನ್ನೊಳಗೊಂಡ ಪದ್ಯಗಳು. ಈ ಪದ್ಯಗಳನ್ನು ಪುಟ್ಟಪುಟ್ಟ ಮಕ್ಕಳೆದುರು ಗಟ್ಟಿಯಾಗಿ ಹಾಡುತ್ತ ಸಂದರ್ಭ ಸಹಿತವಾಗಿ ವಿವರಿಸಿದರೆ ಮಕ್ಕಳು ಖಂಡಿತವಾಗಿ ಸಂತೋಷ ಪಡುತ್ತಾರೆ” ಎಂಬ ಮಾತುಗಳನ್ನೂ, ಇದೇ ಕೃತಿಯ ಬೆನ್ನುಡಿಯಲ್ಲಿ ಶ್ರೀಯುತ ಸುಬ್ಬು ಹೊಲೆಯಾರ್ ರವರು “ಸರಳವಾಗಿದೆಯೆಂದರೆ ಸಹಜವಾಗಿದೆಯೆಂದೇ ಅರ್ಥ. ಎಷ್ಟು ಸಹಜವೆಂದರೆ ಮನಸ್ಸು ಮಗುವಾಗಿಬಿಡುವ ಹಾಗೆ. ಪುಟ್ಟ ಕಂದಮ್ಮಗಳ ಮನಸ್ಸಿಗೆ ಇದೊಂದು ಪುಳಕ. ಇಂತಹ ಈ ಪುಳಕ ಮತ್ತು ಲವಲವಿಕೆಯ ನಡುವೆ ವಿವೇಕ, ಎಚ್ಚರವೆಂಬ ಧಾತು ಈ ಸಂಕಲನದುದ್ದಕ್ಕೂ ಇದೆ. ರಾಮಧಾನ್ಯ, ರಾಗಿಧಾನ್ಯದ ಜೀವಕಾಳುಗಳನ್ನು ಬಿತ್ತುವ ಕ್ರಿಯೆಯೂ ಇದೆ. ಇದು ನಮ್ಮನ್ನು ಅರಿವಿನ ಆಸ್ಥೆಗೂ ಕೊಂಡೊಯ್ಯುತ್ತದೆ. ಬಣ್ಣದ ಕನಸುಗಳನ್ನು ಕಾಣುವ ಮಗು ಹೇಗೆ ಜಗತ್ತನ್ನು ಬೆರಗುಗಣ್ಣಿಂದ ನೋಡುತ್ತ ಬೆಳೆಯುತ್ತದೆಯೋ ಹಾಗೆ ಇಲ್ಲಿನ ಪದ್ಯಗಳು ಜಗತ್ತನ್ನು ಬೆರಗುಗೊಳಿಸುತ್ತ ಹೋಗುತ್ತವೆ” ಎಂದು ಹೇಳಿದ್ದಾರೆ. ಚಿಣ್ಣರಲೋಕ ಕವಿತೆಯನ್ನು ಕುರಿತು ಡಾ.ನಾ.ಡಿಸೋಜರವರು ‘ಚಿಣ್ಣರಲೋಕದ ಬಣ್ಣದ ಹಾಡು’ ಕೃತಿಯ ಮುನ್ನುಡಿಯಲ್ಲಿ “ಈ ಕವಿತೆ ಮಕ್ಕಳ ಫ್ಯಾಂಟಸಿ ಲೋಕದ ಪರಿಚಯ ಮಾಡಿಕೊಡುತ್ತದೆ. ಅಲ್ಲಲ್ಲಿ ‘ಗಲೀವರನ ಪ್ರವಾಸ’ವನ್ನು ನೆನಪಿಗೆ ತರುವ ಈ ಕವಿತೆ ಮಕ್ಕಳಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ ಎಂಬ ಮಾತನ್ನೂ, ‘ಜಲಗಾರ ಮತ್ತು ಶಿವ’ ಕವಿತೆಯನ್ನು ಕುರಿತು “ಕುವೆಂಪು ಬರೆದ ‘ಜಲಗಾರ’ ನಾಟಕವನ್ನು ಸರಳ ರೀತಿಯಲ್ಲಿ ಮಕ್ಕಳಿಗೆ ಕಟ್ಟಿಕೊಡುವ ಒಂದು ಪ್ರಯತ್ನ. ಮಹಾಕವಿ ನಾಟಕದ ಮೂಲಕ ಸಾರಿದ ಸತ್ಯವನ್ನು ಇಲ್ಲಿ ಮಕ್ಕಳ ಪದ್ಯದ ಮೂಲಕ ಹೇಳಿದ್ದಾರೆ” ಎಂದು ಹೇಳಿರುವುದನ್ನು ನೆನಪಿಸಿಕೊಳ್ಳಲಿಚ್ಚಿಸುತ್ತೇನೆ. ಡಾ.ಎಚ್.ಎಸ್.ವೆಂಕಟೇಶಮೂರ್ತಿರವರು ‘ಬಾರೆಲೆ ಹಕ್ಕಿ ಬಣ್ಣದ ಹಕ್ಕಿ’ ಕೃತಿಯ ಮುನ್ನುಡಿಯಲ್ಲಿ ‘ಜೀವಮರ’ ಕವಿತೆಯನ್ನು ಕುರಿತು “ನಮ್ಮಲ್ಲಿ ಪದ್ಯಕಥೆಗಳನ್ನು ಮಕ್ಕಳಿಗಾಗಿ ಬರೆದವರು ಬಹಳ ಕಮ್ಮಿ. ಆ ಅರಕೆಯನ್ನು ಕೂಡ ರೆಡ್ಡಿಯವರ ಕೃತಿಗಳು ತುಂಬಿ ಕೊಡುವಂತಿವೆ. ಹಾಗೆಯೇ ಅದ್ಭುತ ರಮ್ಯ ಕಥೆಗಳನ್ನು ರೆಡ್ಡಿಯವರು ತಮ್ಮ ಈ ಸಂಗ್ರಹದಲ್ಲಿ ನೀಡಿದ್ದಾರೆ. ಕುರುಡರ ರಾಜ್ಯದ ಕಥೆ ಅಂಥವುಗಳಲ್ಲಿ ಒಂದು ಮತ್ತು ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯುವಂಥದ್ದು” ಎಂದು ಹೇಳಿದ್ದಾರೆ. ಡಾ.ಚಂದ್ರಶೇಖರ ನಂಗಲಿಯವರು ‘ಜಂಗಮಜೋಗಿ’ ಕವಿತೆಯನ್ನು ಕುರಿತು ಅದೇ ಹೆಸರಿನ ಕೃತಿಯ ಮುನ್ನುಡಿಯಲ್ಲಿ “ಈ ನೀಳ್ಗವನ ಬೊಮ್ಮನಹಳ್ಳಿಯ ಕಿಂದರಿಜೋಗಿ ಮಾದರಿಯಲ್ಲಿ ರಚಿತವಾಗಿರುವ ಮೈಮ್ ಕಾವ್ಯವೆನ್ನಬಹುದು. ಇಲಿಗಳ ಬದಲಿಗೆ ಇಲ್ಲಿ ಕೋತಿಗಳಿವೆ. ಬಣ್ಣದಚಿಟ್ಟೆ ಸಂಕಲನದಲ್ಲಿರುವ ‘ಕಾಡಿನ ಮಂಗ’ದಲ್ಲಿ ಕೋತಿಯೊಂದು ನಾಡಿಗೆ ಬಂದು ಫಜೀತಿಪಡುವ ವಿವರಗಳಿವೆ. ಜಂಗಮಜೋಗಿಯಲ್ಲಿ ಕೋತಿಗಳೆಲ್ಲ ಒಗ್ಗೂಡಿ ನಾಡಿಗೆ ಧಾಳಿಯಿಡುವ ವಿವರಗಳಿವೆ. ಜನತೆಯನ್ನು ಫಜೀತಿಗೀಡುಮಾಡುವ ವಿವರಗಳಿವೆ. ಇಂಥ ಕವನಗಳಲ್ಲಿ ಪರಿಸರ ವಿನಾಶ ಭೂಮಿ ವಿನಾಶದ ಸೂಚನೆಗಳಿದ್ದು ಇಂದಿನ ಯುಗಧರ್ಮದ ಮುಖವಾಣಿಗಳಂತೆ ತೋರುತ್ತವೆ” ಎಂದೂ ಹೇಳಿರುವುದನ್ನು ಸಹ ನೆನಪಿಸಿಕೊಳ್ಳುತ್ತೇನೆ. ಶ್ರೀಯುತ ಕೃಷ್ಣಮೂರ್ತಿ ಬಿಳಿಗೆರೆರವರು ‘ಚಿಣ್ಣರಲೋಕದ ಬಣ್ಣದ ಹಾಡು’ ಕೃತಿಯ ಬೆನ್ನುಡಿಯಲ್ಲಿ “ಮಕ್ಕಳ ಮನೋಭಿತ್ತಿಗೆ ಕಾಲದೇಶಗಳ ಹಂಗಿಲ್ಲವೆಂದೂ ಅವರ ಕಲ್ಪನಾಗ್ರಹಿಕೆಗಳು ಅನೂಹ್ಯವೆಂದೂ ತಿಳಿದು ನಾವು ದೊಡ್ಡವರು ಅವರಿಗಾಗಿ ಕತೆ, ಕವಿತೆ, ನಾಟಕ ಇತ್ಯಾದಿಗಳನ್ನು ಭಯ-ಭಕ್ತಿಯಿಂದ ರೂಪಿಸಬೇಕಾದ್ದು ಅಗತ್ಯ” ಎಂದು ತಿಳಿಸಿದ್ದಾರೆ. ಇಲ್ಲಿನ ನೀಳ್ಗವಿತೆಗಳಲ್ಲಿ ಅಂತಹ ಕೆಲಸವಾಗಿದೆಯೆಂದು ಭಾವಿಸಿದ್ದೇನೆ. ಈ ಇಪ್ಪತ್ತೊಂದನೆಯ ಶತಮಾನದ ಆದಿಭಾಗದಲ್ಲಿ ನಿಂತು ಒಮ್ಮೆ ಹಿಂದಿರುಗಿ ನೋಡಿದರೆ ಪಂಜೆ, ರಾಜರತ್ನಂ, ಕುವೆಂಪು, ಕಾರಂತ.. ಇವರೆಲ್ಲರೂ ಪ್ರಯಾಣ ಇನ್ನೂ ಇರುವಾಗಲೇ ಗಾಡಿ ಇಳಿದುಹೋದವರಂತೆ ಭಾಸವಾಗುತ್ತಿದ್ದಾರೆ. ನಾನೀಗ ಅವರು ನಡೆದಾಡಿ ಉಳಿಸಿದ ದಾರಿ ತುಳಿಯುತ್ತಿದ್ದೇನಷ್ಟೆ. ಆ ದಾರಿಯ ಇಕ್ಕೆಲಗಳಲ್ಲಿ ಅವರಿಂದ ಕಲಿತ ಒಂದಿಷ್ಟು ಅಕ್ಷರಗಳನ್ನೇ ಬೀಜವಾಗಿಸಿ ಕನ್ನೆಭೂಮಿಯೊಳಗೆ ಬಿತ್ತಿದ್ದೇನೆ. ಇವುಗಳೆಲ್ಲವೂ ಮಕ್ಕಳಿಗೆ ಪ್ರಿಯವಾಗಬಹುದೆಂದು ಭಾವಿಸಿದ್ದೇನೆ. ನಮಸ್ಕಾರ. - ಡಾ.ಸಿ.ಎಂ.ಗೋವಿಂದರೆಡ್ಡಿ ನವೆಂಬರ್ ೧, ೨೦೧೪

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Excerpt / E-Books

ರಾಮಧಾನ್ಯ ಕನ್ನಡನಾಡಿನ ಮಕ್ಕಳೆ ಕೇಳಿ ಮನದಲಿ ಉತ್ತಮ ಶ್ರದ್ಧೆಯ ತಾಳಿ ಕನಕದಾಸರು ಹಾಡಿದರಂದು ರಾಮಧಾನ್ಯದ ಚರಿತೆಯನು ಆ ಚರಿತೆಯನು ಸಂಗ್ರಹಗೊಳಿಸಿ ಅಂದಿಗೆ ಇಂದಿನ ಸಂಗತಿ ಬೆರೆಸಿ ಸರಳವಾಗಿ ನಾ ಹೇಳುವೆನಿಂದು ದಾಸರ ಕಾವ್ಯದ ಸಾರವನು -೧- ರಾಮ-ರಾವಣರ ಯುದ್ಧವು ಮುಗಿಯೆ ಸೀತಾಮಾತೆಯ ಬಂಧನ ಕಳೆಯೆ ವಿಭೀಷಣನಿಗೆ ಪಟ್ಟವ ಕಟ್ಟಿ ಶಾಂತಿ, ನೆಮ್ಮದಿಯ ಬೀಜವ ಬಿತ್ತಿ ರಾಮನು ಹೊರಟ ಅಯೋಧ್ಯೆ ಕಡೆ ಜೊತೆಯಲಿ ವಾನರ ವೀರ ಪಡೆ ಲಕ್ಷ್ಮಣ, ಸೀತಾರಾಮರು ಮುಂದೆ ವಾನರ ವೀರರ ಸೇನೆಯು ಹಿಂದೆ ಸೇತುವೆ ದಾಟುತ ದಶರಥ ತನಯ ಸೀತೆಗೆ ಹೇಳುತ ಸಾಹಸ ಕಥೆಯ ವಿಜಯದ ಸಂತಸದಿಂದಲಿ ಬೀಗಿ ಎಲ್ಲರೂ ಒಟ್ಟಿಗೆ ನಡೆಯುತ ಸಾಗಿ ರಾಮೇಶ್ವರವನು ತಲುಪಿದರು ಪರಮೇಶ್ವರನಿಗೆ ನಮಿಸಿದರು ನಂತರ ಪಯಣವ ಬೆಳೆಸುತ್ತಿರಲು ಗೌತಮ ಮುನಿಗಳ ಆಶ್ರಮ ಸಿಗಲು ಋಷಿಗಳ ಕೋರಿಕೆ ಮೇರೆಗೆ ಅಲ್ಲಿ ಉಳಿದರು ಗೌತಮನಾಶ್ರಮದಲ್ಲಿ ಕಳೆಯುತ ಅಂದಿನ ಒಂದಿರುಳು ಎಲ್ಲರೂ ಋಷಿಗಳ ಅತಿಥಿಗಳು ರಾಮನು ಬಂದಿಹ ವಿಷಯವ ತಿಳಿದು ಅವನನು ಕಾಣುವ ಆಸೆಯು ಬೆಳೆದು ಸುತ್ತಮುತ್ತಲಿನ ಆಶ್ರಮದಿಂದ ಬಂದಿತು ಸಂತಸದಲಿ ಮುನಿವೃಂದ ಹಿರಿಯರು ರಾಮನ ಹರಸಿದರು ಕಿರಿಯರು ಅವನಿಗೆ ನಮಿಸಿದರು -೨- ರಾಮನ ಸಂಗಡ ಬಂದಿದ್ದವರಿಗೆ ಅವನನು ಕಾಣಲು ನೆರೆದಿದ್ದವರಿಗೆ ಸಿದ್ಧತೆಗೊಂಡವು ಬಗೆ ಬಗೆ ತಿಂಡಿ ಪಂಚಭಕ್ಷ್ಯ ಪರಮಾನ್ನವು ಬಂಡಿ ಪಂಕ್ತಿಯಲೆಲ್ಲ ಒಟ್ಟಿಗೆ ಕುಳಿತರು ವಾನರರೊಂದಿಗೆ ಗಬಗಬ ತಿಂದರು ಹೊಟ್ಟೆಗಳನ್ನು ಸವರುತ್ತ ಢರ್ರನೆ ತೇಗನು ಬರಿಸುತ್ತ ಎಲ್ಲರೂ ಊಟದ ಸವಿಯುಂಡಿರಲು ತಾಂಬೂಲವ ಮೆಲ್ಲುತ ಕುಳಿತಿರಲು ರಾಮನು ಕೇಳಿದ ಹನುಮನ ಹೀಗೆ- “ ವಾಯುಪುತ್ರನೆ, ಔತಣ ಹೇಗೆ? ಯಾವ ತಿನಿಸು ಮನ ಗೆದ್ದದ್ದು ಹೇಳುವೆಯಾ ನಿನಗನಿಸಿದ್ದು?” ಹನುಮನು ಹೇಳಿದ ಶ್ರೀರಾಮನಿಗೆ ಎರಡೂ ಕೈಗಳ ಜೋಡಿಸಿ ಹೀಗೆ- “ ರಾಮಚಂದ್ರ ಔತಣ ಸೊಗಸಿತ್ತು ನಾಲಿಗೆ ಸವಿಯನು ಚಪ್ಪರಿಸಿತ್ತು ತಿನಿಸಿಗೆ ಬಳಸಿದ ಮೂಲಧಾನ್ಯವನು ಒಮ್ಮೆ ಕಣ್ಣಿನಲಿ ನೋಡಬಯಸುವೆನು ತರಿಸಬೇಕು ಆ ಧಾನ್ಯವನು ಕಂಡು ಧನ್ಯ ನಾನಾಗುವೆನು” ರಾಮನು ಕೋರಿದ ಮುನಿವರರನ್ನು ಅಲ್ಲಿಗೆ ತರಿಸಲು ಧಾನ್ಯಗಳನ್ನು ಶಿಷ್ಯ ಸಮೂಹವು ಓಡುತ ಆಗ ಹೊತ್ತು ತಂದು ಕೆಲ ಧಾನ್ಯವ ಬೇಗ ರಾಮನ ಎದುರಲಿ ಇರಿಸಿದರು ಪರಿಶೀಲಿಸಲು ತಿಳಿಸಿದರು ಗೋಧಿ, ಭತ್ತ, ತೊಗರಿ, ಹೆಸರು, ಕಡಲೆ, ಅವರೆ, ಎಳ್ಳು, ಉದ್ದು, ಹುರುಳಿಗಳೆಂಬ ನವಧಾನ್ಯಗಳು ಹಾರಕ, ನವಣೆ, ಸಾಮೆ, ಬರುಗು, ಜೋಳ, ಕಂಬು, ರಾಗಿಗಳೆಂಬ ವಿಧವಿಧ ರೀತಿಯ ದಿನಸಿಗಳು ರಾಮನು ಧಾನ್ಯಗಳೆಲ್ಲವ ಕಂಡು ಮನದಲಿ ಬಹಳ ಸಂತಸಗೊಂಡು ಹನುಮನ ಕೇಳಿದ-“ನೋಡಿದೆಯಾ ನಿನ್ನಯ ಮನವನು ತಣಿಸಿದೆಯಾ?” ಹನುಮನು ನುಡಿದನು-“ರಾಮನೆ ಹೌದು ಆದರೂ ಮನಸಿಗೆ ತೃಪ್ತಿಯು ಸಿಗದು ಪಾಮರನಾದೆನಗಾಗದು ಸ್ಪಷ್ಟ ಎಲ್ಲ ಧಾನ್ಯದಲಿ ಯಾವುದು ಶ್ರೇಷ್ಠ? ಮನದಿ ಕುತೂಹಲ ಮೂಡಿಹುದು ದೇವರು ಕರುಣಿಸಿ ತಿಳಿಸುವುದು” ದಶರಥ ರಾಮನು ಮುಗುಳುನಗುತ್ತ ನೋಡಿದನಲ್ಲಿಯ ಮುನಿವರರತ್ತ ರಾಮನ ಮನಸಿನ ಇಂಗಿತವರಿತ ಮುನಿಗಳು ನುಡಿದರು ಅಳುಕಳುಕುತ್ತ ಕೆಲವರು ಗೋಧಿಯ ಅಧಿಕವೆಂದರು ಕೆಲವರು ಭತ್ತವು ಉತ್ತಮವೆಂದರು ಕೆಲವರು ರಾಗಿಯ ಕೆಲವರು ಸಾಮೆಯ ಕೆಲವರು ಹಾರಕ ಕೆಲವರು ನವಣೆಯ ಹೀಗೆಯೇ ವಾದವು ಸಾಗಿತ್ತು ಒಮ್ಮತವೇ ಬರದಾಗಿತ್ತು ರಾಮನು ಕೇಳಿದ ಗೌತಮನನ್ನು- “ಮುನಿವರ, ನಿನ್ನಯ ಅಭಿಮತವೇನು?” ಕೂಡಲೆ ಗೌತಮ ನಿಂತನು ಎದ್ದು ಒಮ್ಮೆಲೆ ಸಭೆಯಲಿ ಅಡಗಿತು ಸದ್ದು ಹೇಳಿದ- “ರಾಗಿಯೇ ಉತ್ತಮವು ಇದುವೇ ನನ್ನಯ ಅಭಿಮತವು” - ೩ - ಭತ್ತವು ಕೂಡಲೆ ಕೋಪದಿ ಎದ್ದು ನೆಲವನ್ನೊಮ್ಮೆ ಜಾಡಿಸಿ ಒದ್ದು ಕೇಳಿತು ಕೆರಳುತ ಗೌತಮನನ್ನು ರಾಗಿಯ ಉತ್ತಮವೆಂದವನನ್ನು- “ಉತ್ತಮ ನಾನಿರೆ ಈ ಜಗದೊಳಗೆ ರಾಗಿಯು ಮೊದಲಲಿ ನಿಲುವುದು ಹೇಗೆ? ಎಲ್ಲ ಧರ್ಮಗಳ ತಿಳಿದವರಾಗಿ ಸಕಲ ಶಾಸ್ತ್ರಗಳ ಬಲ್ಲವರಾಗಿ ಈ ಪರಿ ನುಡಿವುದು ಸರಿಯಲ್ಲ ನಿಮ್ಮಂಥವರಿಗೆ ತರವಲ್ಲ” ಭತ್ತವು ಋಷಿಯನು ಪ್ರಶ್ನೆಯ ಮಾಡಿ ರಘುರಾಮನ ಕಡೆ ದಿಟ್ಟಿಸಿ ನೋಡಿ ಹೆಗಲಿನ ರೇಶಿಮೆ ಶಾಲನು ಎತ್ತಿ ಚೆಲುವಿನ ದೇಹದ ಸೊಂಟಕೆ ಸುತ್ತಿ ತಿರುಗಿತು ರಾಗಿಯು ಇರುವ ಕಡೆ ಅಲ್ಲಿಯೇ ಕತ್ತಲೆ ಮೂಲೆಯೆಡೆ “ಏನೋ ರಾಗಿಯೆ, ಮೂರ್ಖಶಿಖಾಮಣಿ ಬುದ್ಧಿಯೇ ಇಲ್ಲದ ದಡ್ಡರ ಕಣ್ಮಣಿ ನಡೆನುಡಿ ಅರಿಯದ ಕುಲಹೀನ ನಿನಗೇತಕ್ಕೋ ಸನ್ಮಾನ? ಮುನಿಗಳು ಮಾತಿನ ವರಸೆಗೆ ನುಡಿದರೆ ಸುಮ್ಮನೆ ಭಿಮ್ಮನೆ ಕುಳಿತಿಹೆಯಾ? ಉತ್ತಮನಾದೆನು ಲೋಕದೊಳೆನ್ನುತ ಹಮ್ಮಿನಿಂದ ಎದೆ ಬೀಗುವೆಯಾ? ನಿನ್ನೊಳಗೇನಿದೆ ಅಂಥ ಮಹತ್ತು ಗೊತ್ತಿದೆಯಲ್ಲವೆ ನನ್ನಂತಸ್ತು? ನಾನೋ ಉತ್ತಮರೆಲ್ಲರ ಸೊತ್ತು ನೀನೋ ಶೂದ್ರರು ತಿನ್ನುವ ತುತ್ತು ಮೂಗನಂತೆ ನೀನಿರಬೇಡ ನನ್ನೆದುರಲ್ಲಿ ನಿಲಬೇಡ” ಭತ್ತವು ರಾಗಿಯ ನಿಂದನೆ ಮಾಡಿ ಭಂಗಿಸಿ ಹಂಗಿಸಿ ನುಡಿದಿತ್ತು ಎಲ್ಲರೂ ಸುಮ್ಮನೆ ಇರುವುದ ನೋಡಿ ತನ್ನನ್ನೇ ತಾ ಹೊಗಳಿತ್ತು “ಉಪನಯನಕ್ಕೆ ಮಂತ್ರಾಕ್ಷತೆಗೆ ಬಳಸುವರೆನ್ನನು ಶ್ರದ್ಧೆಯಲಿ ನೈವೇದ್ಯವನು ಅರ್ಪಿಸಿ ಇಡುವರು ದೇವರಿಗೆನ್ನನು ಭಕ್ತಿಯಲಿ ಮದುವೆಯ ಜೋಡಿಯ ಆಶೀರ್ವದಿಸಲು ಹೊಸಮನೆಯನ್ನು ಶುದ್ಧೀಕರಿಸಲು ಅಕ್ಷತೆ ರೂಪದಿ ಬಳಸುವರು ಆಶೀರ್ವಾದವ ಗಳಿಸುವರು ಬ್ರಾಹ್ಮಣೋತ್ತಮರ ಅಂಗೈಯಲ್ಲಿ ಉತ್ತಮೋತ್ತಮರ ಭ್ರೂಮಧ್ಯದಲಿ ಗಂಧದ ಜೊತೆಯಲಿ ನಾನಿರುವೆ ಗಂಧಾಕ್ಷತೆ ನಾನಾಗಿರುವೆ ನಿನ್ನಯ ಮೊಗವನು ನೋಡಲು ಕೂಡ ಅಸಹ್ಯವೆನಿಸುವುದೆನಗೆ ಸುಮ್ಮನೆ ನಿನ್ನೊಡನೇತಕೆ ವಾದ ನಿಲ್ಲದೆ ನೀ ನಡೆ ಹೊರಗೆ ನನ್ನೆದುರಲ್ಲಿ ನಿಲ್ಲಲು ಕೂಡ ಯೋಗ್ಯತೆ ಇರದವ ನೀನು ನಿನ್ನಂಥವನಿಗೆ ನೀತಿಯ ಹೇಳಿ ಲಾಭವು ತಾನೆ ಏನು? ನನ್ನಂಥವರ ಸಂಗಡ ನೀನು ಸ್ಫರ್ಧೆಗೆ ನಿಲ್ಲದೆ ದೂರ ನಡೆ ಎಲ್ಲರೂ ಛೀ...ಥೂ... ಎನ್ನುವ ಮೊದಲು ಸಭೆಯನು ಬಿಟ್ಟು ಹೊರಗೆ ನಡೆ” ಭತ್ತವು ತನ್ನಯ ತಾನೇ ಹೊಗಳಿ ರಾಗಿಯ ನಿಂದನೆ ಮಾಡಿತ್ತು ಹೆಚ್ಚಿಗೆ ಮಾತನ್ನಾಡಿದ್ದಕ್ಕೆ ಬುಸಬುಸ ಉಬ್ಬಸ ಬಂದಿತ್ತು ! - ೪ - ಭತ್ತದ ಸೊಕ್ಕಿನ ಮಾತನು ಕೇಳಿ ರಾಗಿಯ ಮೊಗವು ಕೋಪದಿ ಕೆರಳಿ ರಕುತವು ಕೊತಕೊತ ಕುದಿದಿತ್ತು ತೋಳು ಮಡಚಿ ಮೇಲೆದ್ದಿತ್ತು ಹುರಿಗೊಂಡಂತಹ ಮಾಂಸಖಂಡಗಳು ಮಿರಮಿರನೆಂದು ಮಿರುಗುತ್ತಿರಲು ಕರಿಮೊಗದಲ್ಲಿ ಕೆಂಡಗಣ್ಣುಗಳು ಬೆಂಕಿ ಉಂಡೆಗಳ ಉಗುಳುತ್ತಿರಲು ಗಿರಿಜಾಮೀಸೆಯ ಹುರಿಗೊಳಿಸುತ್ತ ಭತ್ತದ ಎದುರಿಗೆ ಬಂದಿತ್ತು ಹಿರಿಯರಿಗೆಲ್ಲ ವಂದನೆ ಸಲ್ಲಿಸಿ ಭತ್ತವ ಖಂಡಿಸಿ ನುಡಿದಿತ್ತು- “ ಸತ್ವಹೀನ ಮುಖ ಹೊತ್ತ ಭತ್ತವೆ ಏಕೆ ಹೀಗೆ ನೀ ಹೊಗಳಿಕೊಳ್ಳುವೆ? ದನಿಕರ ಬೆಂಬತ್ತುವುದನು ಬಿಡದ ಬಡವರನ್ನು ಕಣ್ಣೆತ್ತಿಯೂ ನೋಡದ ಪಕ್ಷಪಾತವಿದೆ ನಿನ್ನಲ್ಲಿ ನಿಷ್ಕರುಣಿಯು ನೀ ಲೋಕದಲಿ ಬಡವ-ಬಲ್ಲಿದರ ಬೇಧವನೆಣಿಸಿ ಜಾತಿ-ಮತಗಳ ಅಂತರ ಬೆಳೆಸಿ ಹೀನ ಗುಣವ ನೀ ಮೆರೆಯದಿರು ನಾನೇ ಎನ್ನುತ ಬೀಗದಿರು ರೋಗಿಯು ತಿನ್ನುವ ಆಹಾರಕ್ಕೆ ಬಾಣಂತಿಯ ಸಪ್ಪೆಯ ಊಟಕ್ಕೆ ಬರುವೆ ನೀನು ಉಪಯೋಗಕ್ಕೆ ಆದರೂ ಈ ಪರಿ ಕೊಚ್ಚುವೆಯೇಕೆ? ಹೆಣದ ಬಾಯಿಗೆ ತುತ್ತನ್ನಿಟ್ಟು ಸತ್ತ ಹಿರಿಯರಿಗೆ ಪಿಂಡವ ಕೊಟ್ಟು ಎಳ್ಳು ದರ್ಬೆಗಳ ಸಂಗಡ ಬೆರೆಸಿ ಕಾಗೆಯ ಗುಂಪಿಗೆ ಔತಣಗೊಳಿಸಿ ನಿನ್ನನು ಬಿಸಿಲಲಿ ಬಿಸುಡುವರು ತಣ್ಣಗೆ ಮನೆಯನು ತಲುಪುವರು ನಾನೋ ಕ್ಷಾಮದ ಕಾಲವು ಬರಲು ಜನತೆಯು ಹಸಿವಲಿ ನಲುಗುತಲಿರಲು ಸ್ನೇಹದ ಹಸ್ತವ ನೀಡುವೆನು ಎಲ್ಲರ ನಾ ಕಾಪಾಡುವೆನು ನೀನೋ ಉಳ್ಳವರಲ್ಲಿ ಅಡಗುವೆ ಬಡವರ ಕಣ್ಣಿಗೆ ಸುಣ್ಣವನಿಡುವೆ ನಿನ್ನಂಥವರಿಗೆ ಬೆಲೆಯೇನು? ನಿಷ್ಕರುಣಿಯು ನೀ ತೊಲಗಿನ್ನು” ಹೀಗೆಯೇ ಜಗಳವು ನಡೆಯುತ್ತಿತ್ತು ವಾದ ವಿವಾದವು ಜರುಗುತಲಿತ್ತು ಗೌತಮ ಇಬ್ಬರ ಮಧ್ಯದಿ ಬಂದು ‘ಸಾಕುಮಾಡಿ ಈ ಜಗಳವ’ ಎಂದು ತಡೆದು, ಅವರ ಮನವೊಲಿಸಿದನು ರಾಮನಲ್ಲಿ ಭಿನ್ನವಿಸಿದನು- “ ರಘುಕುಲ ಸೋಮನೆ, ನೀನೇ ಹೇಳು ಇಬ್ಬರಲ್ಲಿ ಯಾರಿರುವರು ಮೇಲು? ತೀರ್ಮಾನವ ನೀ ಹೇಳಿಬಿಡು ಕಲಹಕೆ ಅಂತ್ಯವ ಹಾಡಿಬಿಡು” ರಾಮನು ಅರೆಕ್ಷಣ ಯೋಚನೆ ಮಾಡಿ ಸಭೆಯಲ್ಲಿದ್ದವರೆಲ್ಲರ ನೋಡಿ ಗಾಂಭೀರ್ಯದಲಿ ನುಡಿದನು ಹೀಗೆ- “ ಸಭೆಯ ಗೌರವವ ಮರೆತಂಥವರಿಗೆ ಶಿಕ್ಷೆಯ ಕೊಡುವುದು ಒಳ್ಳೆಯದು ರಾಜನೀತಿಯೂ ಹೇಳುವುದು ಜಗಳವ ಮಾಡಿದ ರಾಗಿ-ಭತ್ತಗಳು ಸೆರೆಯಲಿ ಇರಲಿ ಆರು ತಿಂಗಳು ಆ ನಂತರ ನಾ ಕರೆಸುವೆನು ಜಗಳವನ್ನು ಪರಿಹರಿಸುವೆನು” ಕೂಡಲೆ ಆಶ್ರಮದಲ್ಲಿನ ಶಿಷ್ಯರು ರಾಗಿ-ಭತ್ತಗಳ ಸೆರೆಯಲ್ಲಿಟ್ಟರು ರಾಗಿ-ಭತ್ತಗಳು ಮುಖ ಮುಖ ನೋಡಿ ಮುಂದೇನೆಂದು ಚಿಂತೆಯ ಮಾಡಿ ಕುಳಿತವು ಮಂಡಿಗೆ ತಲೆಕೊಟ್ಟು ದಾರಿಯ ಕಾಣದೆ ದಿಕ್ಕೆಟ್ಟು! ರಾಮ ಎಲ್ಲರಿಗೆ ವಿದಾಯ ತಿಳಿಸಿ ರಾಜಧಾನಿಯೆಡೆ ಪಯಣವ ಬೆಳೆಸಿ ಅಯೋಧ್ಯೆ ಪಟ್ಟಣ ತಲುಪಿದನು ರಾಜ್ಯವನ್ನು ಸ್ವೀಕರಿಸಿದನು - ೫ - ಆರು ತಿಂಗಳಿನ ಗಡುವು ಮುಗಿಯಲು ಧಾನ್ಯದ ಜಗಳವು ನೆನಪಿಗೆ ಬರಲು ರಾಮನು ಹನುಮನ, ಆಶ್ರಮದೆಡೆಗೆ ಕಳುಹಿದ ಧಾನ್ಯವು ಸೆರೆಯಿರುವಲ್ಲಿಗೆ ನಗರಕೆ ಅವುಗಳ ಕರೆತರಲು ಜಗಳಕೆ ನ್ಯಾಯವ ದೊರಕಿಸಲು ಗೌತಮ ಮುನಿಗಳು ಹನುಮನೊಂದಿಗೆ ರಾಜಸಭೆಗೆ ಆಗಮಿಸಿದರು ಬಂಧಿಸಿ ಇರಿಸಿದ ರಾಗಿ-ಭತ್ತಗಳ ರಾಮನ ಎದುರಲಿ ನಿಲಿಸಿದರು ಸಭೆಯಲಿ ಅವುಗಳು ತಲೆಯನು ಬಾಗಿ ವಿನಯ ವಿಧೇಯತೆ ತೋರುತ ಸಾಗಿ ರಾಮನ ಪಾದಕೆ ಎರಗಿದವು “ರಾಮನೆ ರಕ್ಷಿಸು” ಬೇಡಿದವು ರಾಮನು ಧಾನ್ಯಕೆ ಕರುಣೆಯ ತೋರಿ ಕೈಹಿಡಿದೆತ್ತಿ ತಲೆಯನು ಸವರಿ ಮಂದಹಾಸವನು ಬೀರಿದನು ನಂತರ ಈ ಪರಿ ಹೇಳಿದನು- “ ಕೇಳಿರಿ ಸಭಿಕರೆ ರಾಗಿಯು ಭತ್ತವು ಮೇಲು-ಕೀಳುಗಳ ಸ್ಫರ್ಧೆಗೆ ನಿಂತವು ತಿಂಗಳಾರು ಸೆರೆಮನೆಯೊಳಗಿದ್ದು ಇಲ್ಲಿಗೆ ಬಂದಿವೆ ಇಲ್ಲದೆ ಸದ್ದು ಅವುಗಳ ಸತ್ವ ಪರೀಕ್ಷಿಸಲೆಂದೆ ಸೆರೆಮನೆಯಲ್ಲಿ ಇರಲೆಂದಿದ್ದೆ ಇಂದಿಗೆ ಅವಧಿಯು ಮುಗಿದಿಹುದು ತೀರ್ಪನು ನೀಡಲು ಸಮಯವಿದು ತಿಂಗಳಾರು ಸೆರೆಮನೆಯಲ್ಲಿರಲು ಸೊರಗಿಹೋಗಿದೆ ಭತ್ತದ ಒಡಲು ರಾಗಿಯ ಕಾಂತಿಯು ತಗ್ಗಲೇ ಇಲ್ಲ ಕೈಕಾಲಲಿ ಶಕ್ತಿಯು ಕುಗ್ಗಿಲ್ಲ ಕಣ್ಣೆದುರೇ ಎಲ್ಲವೂ ಸುಸ್ಪಷ್ಟ ರಾಗಿಯೇ ಎಲ್ಲಾ ಧಾನ್ಯದಿ ಶ್ರೇಷ್ಠ ಇದುವೇ ನನ್ನಯ ತೀರ್ಮಾನ ರಾಗಿಗೆ ನಡೆಯಲಿ ಸನ್ಮಾನ” ಸಭಿಕರು ರಾಗಿಗೆ ಜೈ ಜೈ ಎನಲು ರಾಗಿಯು ಸಭೆಗೆ ಕೈಮುಗಿದಿರಲು ರಾಮನು ಕರೆದನು ರಾಗಿಯನು ಮಾನ್ಯತೆ ಹೊಂದಿದ ಧಾನ್ಯವನು ರಾಗಿಯು ರಾಮನ ಹತ್ತಿರ ಬಂದು ‘ಧನ್ಯವಾಯಿತು ಜೀವವು’ ಎಂದು ರಾಮನ ಪಾದದಿ ದಿಂಡುರುಳುತ್ತ ನೀಡಿದ ತೀರ್ಪನು ಕೊಂಡಾಡುತ್ತ ಸುರಿಸಿತು ಹರುಷದ ಕಣ್ಣೀರು ರಾಮನ ಪಾದಕೆ ಪನ್ನೀರು! ರಾಮನು ರಾಗಿಯ ಕೈಹಿಡಿದೆತ್ತಿ ಪ್ರೀತಿಯ ತೋರಿ ಸವರುತ ನೆತ್ತಿ “ಕಷ್ಟಸಹಿಷ್ಣುತೆ ಹೊಂದಿದ ರಾಗಿ ಲೋಕದಿ ಉಳಿದಿರು ಶಾಶ್ವತವಾಗಿ ನನ್ನಯ ಹೆಸರನು ನಿನಗಿತ್ತಿರುವೆ ‘ರಾಘವಧಾನ್ಯ’ವು ನೀನಾಗಿರುವೆ ಬಡವರ ಬಂಧುವು ನೀನಾಗು ದನಿಕರಿಗೂ ನೀ ಹಿತವಾಗು” ಹರಸಿದ ರಾಮನು ಸಭೆಯಲ್ಲಿ ರಾಗಿಯು ಮುಳುಗಿತು ಖುಷಿಯಲ್ಲಿ! ಸೀತೆಯು ಮುತ್ತಿನ ಆರತಿ ಎತ್ತಿ ರಾಘವ ಧಾನ್ಯಕೆ ಬೆಳಗಿದಳು “ಬಡವರ ಬಂಧುವು ನೀನೇ” ಎಂದು ರಾಮಧಾನ್ಯವನು ಹೊಗಳಿದಳು ಆಂಜನೇಯನು ಹತ್ತಿರ ಬಂದು “ರಾಗಿಯೇ ನೀನೇ ಧನ್ಯನು” ಎಂದು ಆಲಂಗಿಸಿದನು ಪ್ರೀತಿಯಲಿ ಅಭಿನಂದಿಸಿದನು ಹರುಷದಲಿ - ೬ - ಭತ್ತವು ನಾಚಿಕೆ ಅಪಮಾನದಲಿ ಬತ್ತದ ದುಃಖದ ದುಮ್ಮಾನದಲಿ ತಲೆಯನು ತಗ್ಗಿಸಿ ನಿಂತಿತ್ತು ಕಣ್ಣೀರಿನ ಹೊಳೆ ಹರಿಸಿತ್ತು ರಾಮನು ಭತ್ತವ ಹತ್ತಿರ ಕರೆದು ದುಃಖದ ತಾಪಕೆ ತಂಪನ್ನೆರೆದು- “ಅಯ್ಯಾ ಭತ್ತವೆ ಏತಕೆ ಕೊರಗುವೆ ರಾಗಿಯ ಹರಸಿದೆವೆಂದೆ? ಕ್ಷಾಮ ಕಾಲದಲಿ ನಾಡನು ಉಳಿಸುವ ರಾಗಿಯ ಹೊಗಳಿದೆವೆಂದೆ? ಅರಿಯದೆಹೋದೆಯಾ ಸತ್ಯವನು ರಾಜಕಾರಣದ ತತ್ವವನು?ದೀನ ದಲಿತರಲಿ ದಯೆಯಿರದವನು ಎಂದು ನಿನ್ನ ನಾ ಕಡೆಗಣಿಸಿದೆನು ಅಷ್ಟು ಮಾತ್ರಕ್ಕೆ ಕೊರಗುವೆಯೇಕೆ? ಇಷ್ಟವಾದವನು ಈ ಲೋಕಕ್ಕೆ ನೀನು ದೇವರಿಗೆ ಪರಮಾನ್ನ ರಾಗಿ ಮನುಜರಿಗೆ ಪಕ್ವಾನ್ನ ಇಬ್ಬರೂ ಒಟ್ಟಿಗೆ ಭೂಮಿಯೊಳಿದ್ದು ಬಡವ-ಬಲ್ಲಿದರ ಭೇದವ ತೊರೆದು ಬಾಳಿರಿ ಲೋಕದಿ ನೆಮ್ಮದಿಯಾಗಿ ಉಳಿಯಿರಿ ಇಳೆಯಲಿ ಶಾಶ್ವತವಾಗಿ ಹರಸಿದ ರಾಮನು ಮನತುಂಬಿ ನಮಿಸಿತು ಭತ್ತವು ಕಣ್ತುಂಬಿ ರಾಗಿ-ಭತ್ತಗಳು ಆಗಿನಿಂದಲೂ ಒಟ್ಟಿಗೆ ಬದುಕಲು ಯತ್ನಿಸಿವೆ ಆದರೂ ಭೇದವು ಉಳಿದುಬಂದಿದೆ ತೊಡೆಯಲು ಬಹಳ ಪ್ರಯತ್ನಿಸಿವೆ! ಮಕ್ಕಳೆ ನಾಡಿನ ಮಾನವರಲ್ಲಿ ಮೇಲು-ಕೀಳುಗಳ ಎಣಿಸದಿರಿ ಭೇದ ಭಾವಗಳ ಬಂಧನದಲ್ಲಿ ನ್ಯಾಯ ನೀತಿ ಕಡೆಗಣಿಸದಿರಿ! ---

Related Books