ಜೇನು ಮಲೆಯ ಹೆಣ್ಣು

Author : ಹೆಚ್.ಆರ್. ಸುಜಾತಾ

Pages 106

₹ 90.00




Year of Publication: 2020
Published by: ನಗುವನ ಕ್ರಿಯೇಷನ್ಸ್
Address: ನಂ 170, 11ನೇ ಕ್ರಾಸ್, 3ನೇ ಮುಖ್ಯ ರಸ್ತೆ, ರಾಜಾಮಹಲ್ ವಿಲಾಸ್ 2ನೇ ಹಂತ, ಬೆಂಗಳೂರು - 560094

Synopsys

ಜೇನು ಮಲೆಯ ಹೆಣ್ಣು-ಕವಯತ್ರಿ ಹೆಚ್. ಆರ್. ಸುಜಾತ ಅವರ ಕಾವ್ಯ ಸಂಕಲನ. ಇಲ್ಲಿಯ ಕಾವ್ಯಗಳಲ್ಲಿ ತಮಿಳು ಅಭಿಜಾತ ಸಂಗಂ ಸಾಹಿತ್ಯದ ದಟ್ಟ ಪ್ರಭಾವದಲ್ಲಿ ಹುಟ್ಟಿ ಬೆಳೆದಿದೆ. ಕೃತಿಗೆ ಮುನ್ನುಡಿ ಬರೆದಿರುವ ಕವಯತ್ರಿ ಲಲಿತ ಸಿದ್ಧಬಸವಯ್ಯ ಅವರು “ಸಂಗಂ ಸಾಹಿತ್ಯವೆಂಬುದು ತಮಿಳು ಕನ್ನಡವೆನ್ನದೆ ಒಟ್ಟಾರೆ ದ್ರಾವಿಡ ಅಸ್ಮಿತೆಯಾಗಿ ಭಾವಿಸಬೇಕಾದ್ದು ಎಂಬುದು ನನ್ನ ಅನಿಸಿಕೆ, ಎರಡು ಸಾವಿರ ವರ್ಷಗಳ ಹಿಂದಿನ ಈ ಕಾವ್ಯಚಿತ್ರಗಳು ಮನುಕುಲವನ್ನು ಯಾವತ್ತೂ ಕುಣಿಸುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಅಷ್ಟೂ ಮುಖಗಳನ್ನು ಅಷ್ಟೂ ಸಮರ್ಥವಾಗಿ ನಮ್ಮ ಮುಂದೆ ಕೆತ್ತಿ ನಿಲ್ಲಿಸಿವೆ. ಸುಜಾತಾ ಉಲ್ಲೇಖಿಸಿರುವ “ನಿಚ್ಚಂ ಪೊಸತು'' - ಸಂಗಂ ಸಾಹಿತ್ಯದ ಕಿರುಭಾಗದ ಕನ್ನಡ ಅನುವಾದದಲ್ಲಿ ನನ್ನದೂ ಕಿಂಚಿತ್ ಭಾಗಿತ್ವವಿತ್ತು. ಅದರ ಗುಂಗುನಿಂದ ಅಂದರೆ ಸಂಗಂ ಸಾಹಿತ್ಯದ ಅಮಲು ಗುಂಗಿನಿಂದ ಹೊರಬರಲು ನನಗಿನ್ನೂ ಆಗಿಲ್ಲ. ಇಲ್ಲಿ ಕವಯಿತ್ರಿ ವಿನೀತವಾಗಿ ಹೇಳಿಕೊಂಡಂತೆ ಈ ಕಾವ್ಯಗುಚ್ಚವು ದೀಪದಿಂದ ದೀಪ ಹಚ್ಚಿಕೊಂಡು ಸ್ವತಂತ್ರ ದೀಪವಾಗುವ ಬಗೆಯದು” ಎಂದಿದ್ದಾರೆ.

About the Author

ಹೆಚ್.ಆರ್. ಸುಜಾತಾ

ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿ ಸುಜಾತರ ಹುಟ್ಟೂರು. ಓದಿದ್ದು ಬಿಎಸ್ಸಿ, ಆದರೆ ಆಸಕ್ತಿ ಮಾತ್ರ ಅಪ್ಪಟ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ. ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ ಅನುಭವ, ಮಲೆನಾಡ ಬದುಕಿನ ಗಾಢ ಅನುಭವಗಳೇ ಬರಹಕ್ಕೆ ಸ್ಪೂರ್ತಿ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಅಂಕಣಬರಹಗಳ ಆಯ್ದ ಸಂಗ್ರಹ, ‘ನೀಲಿ ಮೂಗಿನ ನತ್ತು’ ಸುಜಾತ ಅವರ ಚೊಚ್ಚಲ ಕೃತಿ. ಮೊದಲ ಕೃತಿಗೆ ಅಮ್ಮ ಪ್ರಶಸ್ತಿ ಪುರಸ್ಕೃತರು. ಮಂಗಳೂರು ವಿವಿ ಪಠ್ಯಪುಸ್ತಕದಲ್ಲೂ ಸೇರ್ಪಡೆ. ...

READ MORE

Reviews

ವರ್ಣನೆಯಲ್ಲಿ ಹುದುಗಿದ ಕಾವ್ಯ

“ಜೇನುಮಲೆಯ ಹೆಣ್ಣು' ಕಾವ್ಯಗುಚ್ಛವು ಹೆಚ್.ಆರ್.ಸುಜಾತಾ ಅವರ ಪ್ರಾಯೋಗಿಕ ಕಾವ್ಯ. ತಮಿಳು ಸಂಗಂ ಕಾವ್ಯದಿಂದ ಪ್ರಭಾವಿತಗೊಂಡ ಜಾನಪದೀಯ ಶೈಲಿಯಲ್ಲಿರುವ ಪ್ರೇಮಕಥೆಗಳ ನಿರೂಪಣಾ ಕಾವ್ಯ, ತಮಿಳು ಕಾವ್ಯ ಮೀಮಾಂಸೆಯಲ್ಲಿ ಸೂಚಿಸುವ ಅಗ(ಅಹಂ) ಕಾವ್ಯವು ಪ್ರೇಮವು ಪ್ರಕೃತಿಯ ಸಾಂಗತ್ಯದಲ್ಲಿ ಉಜ್ವಲವಾಗುವ ರಮ್ಯ ಕಾವ್ಯದ ಮಾದರಿ, ಗಂಡು ಹೆಣ್ಣುಗಳ ಅನಾದಿ ಕಾಲದ ಆಕರ್ಷಣೆ, ಪ್ರೇಮ, ವಿರಹಗಳೆಂಬ ಭಾವಗಳು ಆದಿಮವಾದ ಭಾವಗಳು, ಈ ವಸ್ತುನಿಷ್ಠ ಕಾವ್ಯವಾಗಿಸುವ ನಿಟ್ಟಿನಲ್ಲಿ ಇಲ್ಲಿನ ಕಾವ್ಯಗುಚ್ಛವು ವಿನ್ಯಾಸಗೊಂಡಿದೆ. ಪ್ರಸ್ತುತ ಕಾವ್ಯಗುಚ್ಚದಲ್ಲಿ ಸಾಹಿತ್ಯಕ ಲಾವಣಿ ರೂಪದ ಕವಿತೆಗಳು ಒಂದೊಂದು ತೆನೆಯಲ್ಲಿಯೂ ಸಂಕಲಿತಗೊಂಡಿವೆ.

ಜೇನುಮಲೆಯ ಗಂಡು 'ಹೊಳೆ ಮಿತ್ರ' ಮತ್ತು ಜೇನುಮಲೆಯ ಹೆಣ್ಣಿನ ಪ್ರೇಮ ಮತ್ತು ಅವರ ಸುತ್ತ ಕವಿದುಕೊಂಡ ಪ್ರಕೃತಿಯೇ ಇಲ್ಲಿ ಮೂಲಕಥೆ, ಆ ಗಂಡುಹೆಣ್ಣುಗಳ ನಡುವೆ ಮಿಂಚುಳ್ಳಿ, ಪಿಕಳಾರಗಳಂತಹ ಪಕ್ಷಿಗಳು ದೂತ ಕೆಲಸವನ್ನು ಮಾಡುತ್ತವೆ. ಪಕ್ಷಿಸಂಕುಲದ ಸಂಸಾರದ ಮಾದರಿಯಲ್ಲಿಯೇ ಅಲ್ಲಿಂದ ಇಲ್ಲಿಗೆ ವಲಸೆ ಬರುವ ಗಂಡು ಹೆಣ್ಣ ತಮ್ಮ ಬದುಕು ಪ್ರೇಮದಲ್ಲಿ ಸಾಗಿಸುತ್ತಾರೆ. ಪ್ರೇಮಕ್ಕೆ ಸಂಚಾರಿ ಭಾವವಾದ ವಿರಹ ಮತ್ತು ಸಣ್ಣ ಸಣ್ಣ ಆತಂಕಗಳು ಈ ಕವಿತೆಗಳಲ್ಲಿ ಉಸಿರಾಡಿವೆ. ಆದ್ದರಿಂದಲೇ 'ಕಣ್ಣಲ್ಲೇ ದೀಪ ಹಚ್ಚಿ ಎನ್ನ/ಕಾದಳೋ ಏನೋ'/ 'ನನ್ನುದ್ದಕ್ಕೂ ಹೊದ್ದು ಮಲಗುವವಳ', `ಮುಟ್ಟಬೇಕು ಮುಟ್ಟಿ | ಮುತ್ತ ಮತ್ತಿನ ವಿಷವುಟ್ಟಬೇಕು' ಎನ್ನುವ ಗಾಢ ವ್ಯಾಮೋಹೀ ಸಾಲುಗಳು ಈ ಕಾವ್ಯಗಳದ್ದಕ್ಕೂ ಕಾಣಸಿಗುತ್ತವೆ. ಗಂಡುಹೆಣ್ಣುಗಳ ಪ್ರೇಮದ ರಮ್ಯತೆಯು ಅತಿರೇಕವಾಗಿ, ಅವರ ಬದುಕಿನ ಒಲುಮೆಯೊಂದೇ ಮುನ್ನೆಲೆಗೆ ಬರುತ್ತದೆ. ಉಪ್ಪಾರ ಹುಡುಗ-ಬೆಸ್ತರ ಹುಡುಗಿ, ರಾತ್ರೋರಾತ್ರಿ ಉಳಿಯಲು ಬಂದ ಅತಿಥಿ ಗಂಡಿನೊಡನೆ ಓಡಿಹೋಗುವ ಹುಡುಗಿ ತಂತಮ್ಮ ಪ್ರೀತಿಗಳಲ್ಲಿ ಆಸೀನರಾಗಿದ್ದಾರೆ. ಆದರೆ ಕೊನೆಯ ತೆನೆ ಮಾತ್ರ ಪ್ರೇಮದಾಚೆ ಯುದ್ಧವನ್ನು ಕಾವ್ಯದ ಕೇಂದ್ರವಾಗಿಸಿಕೊಂಡಿದೆ. ಅಲ್ಲಿ ಯುದ್ಧದ ಬಗೆಗಿನ ಹೇವರಿಕೆಯ ಪದ್ಯಗಳಿವೆ. ಹೆಣ್ಣುಕುಲಕ್ಕೆ ಯುದ್ಧ ಬೇಕಿಲ್ಲ ಎನ್ನುವುದನ್ನು ಪ್ರತಿಪಾದಿಸುತ್ತವೆ. ಯುದ್ಧ ಬೇಡವೆನ್ನುತ್ತಾಳೆ / ಒಲವ ಹಂಬಲದ ಹುಡುಗಿ / ಸನಿಹವೊಂದಿದ್ದರೆ ಸಾಮ್ರಾಜ್ಯದಿ ಕನಸೆಕೆ? ಎನ್ನುವ ಸಾಲುಗಳು ಅಲ್ಲಿ ಕಾಣುತ್ತವೆ.

ಈ ಕಾವ್ಯವು ಪ್ರೇಮದ ನವಿರಾದ ಭಾವಗಳನ್ನು ಸೊಗಸಾಗಿ ಹಿಡಿದಿಟ್ಟಿದೆಯಾದರೂ ವರ್ಣನೆಯೇ ಸಂವೇದನೆಯನ್ನಾಗಿ ಭಾವಿಸಿ ಬಿಟ್ಟಿದೆ. ಇಡೀ ಕಾವ್ಯವು ವರ್ಣಕ ಕಾವ್ಯದ ಮಾದರಿಯಲ್ಲಿದ್ದು ವರ್ಣನೆಗಳೇ ತುಂಬಿಕೊಂಡಿವೆ. ಎಲ್ಲ ವರ್ಣಕ ಕಾವ್ಯಗಳಂತೆ ಇಲ್ಲಿಯೂ ವರ್ಣನೆಗಳು ಅನುಪಮವೆನಿಸಿದರೂ ಕೇಂದ್ರವಿಲ್ಲದೆ ಅವು ಶಬ್ದಾಡಂಬರಗಳಾಗಿ ತೋರುತ್ತವೆ. ಇನಿದಾದ ಸಾಲುಗಳು ಮಾಧುರ ಹಾಗು ಭಾವತೀವ್ರತೆಯು ರಮ್ಯತೆಯನ್ನು ಹೆಚ್ಚಿಸಿವೆ ನಿಜ, ಆದರೆ ಅವು ಅನೇಕ ಬಾರಿ ಶಿಷ್ಟಾಚಾರದ ಪ್ರೇಮಾಭಿವ್ಯಕ್ತಿಯನ್ನು ಮೀರಿ ಸಾಗುವುದಿಲ್ಲ. ವ್ಯಾಮೋಹವಿಲ್ಲದೆ ವೃತ್ತಿಪರವಾಗಿ ಬರೆಯುವ ಕಾವ್ಯದ ಸಾಲುಗಳ ಮರಗಟ್ಟುವಿಕೆ ಇಲ್ಲಿಯೂ ಇದೆ. ಕವಿತೆಯ ಮಾಂತ್ರಿಕ ಸ್ಪರ್ಶದ ಪ್ರಶ್ನೆ ಸುಜಾತಾ ಅವರ ಪ್ರಸ್ತುತ ಕಾವ್ಯದ ಪ್ರಶ್ನೆಯೇ ಅಲ್ಲ ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ಇರುವ ಕಾವ್ಯ ಮಾದರಿಗಳನ್ನು ಬಳಸಿಕೊಂಡು ಕಟ್ಟುವ ಕಾವ್ಯಗಳು ಎದುರಿಸುವ ಸವಾಲೇ ಇದು. ಶಿಷ್ಟಾಚಾರಗಳ ಚೌಕಟ್ಟಿನಲ್ಲಿಯೇ ಸೃಜನಶೀಲತೆಯನ್ನು ನಿರೂಪಿಸುವ ಒತ್ತಡವನ್ನು ಎದುರಿಸಬೇಕಾಗುತ್ತದೆ. ಕ್ಲಾಸಿಕಲ್ ಕಾವ್ಯಗಳಲ್ಲಿ ಅಷ್ಟಾದಶ ವರ್ಣನೆಯ ನಿಯಮವು ಅವರನ್ನು ಕುಂಟುವಂತೆ ಮಾಡುವ ಹಾಗೆ ಶಿಷ್ಟಾಚಾರವನ್ನು ಅನುಸರಿಸಿ ಬರೆಯಲೆತ್ನಿಸಿರುವ ಈ ಕವಿತೆಗಳ ಗುಚ್ಚಗಳಲ್ಲಿಯೂ ಇಂತಹ ತೊಡಕುಗಳಿವೆ.

ಇಷ್ಟಾದರೂ ಕನ್ನಡ ಕಾವ್ಯದ ಅಸ್ತಿತ್ವದ ಪ್ರಶ್ನೆ ಎತ್ತುತ್ತಿರುವ ಸಂದರ್ಭದಲ್ಲಿ ಕನ್ನಡದ ಕವಯತ್ರಿಯರು ಕಾವ್ಯವನ್ನು ಗಂಭೀರವಾಗಿ ತೆಗೆದುಕೊಂಡು ಮಹಾಕಾವ್ಯ, ದೀರ್ಘ ಕಾವ್ಯ, ಪರ್‌ಫಾರ್ಮೆನ್ಸ್ ತರದ ಅನೇಕ ಪ್ರಯೋಗಗಳನ್ನು ಮಾಡುತ್ತಿರುವುದು ಆಶಾದಾಯಕವೆಂತಲೇ ಹೇಳಬಹುದು. ಆ ನಿಟ್ಟಿನಲ್ಲಿ ಸುಜಾತಾ ಅವರ ಪ್ರಯೋಗವು ಸ್ವಾಗತಾರ್ಹ.

-ಆರ್. ತಾರಿಣಿ ಶುಭದಾಯಿನಿ

ಕೃಪೆ: ಹೊಸ ಮನುಷ್ಯ-ಅಕ್ಟೋಬರ್‌ 2020

---

ಕುರು ಹಿಲ್ಲದಂತೆ ಕೂಡಿದ ಪ್ರೇಮಕಾವ್ಯ 

ಉತ್ತರದ ಮೀಮಾಂಸೆಗೆ ಪ್ರೇಮ-ಕಾಮಗಳು ನೈವೇದ್ಯಕ್ಕಿಟ್ಟ ರಸ. ಇಲ್ಲಿ ತಯಾರಾಗುವ ಎಲ್ಲಕ್ಕೂ ಪರವೇ ಗಂತವ್ಯ, ಇಲ್ಲಿ ನಡೆಯುವುದೇನಿದ್ದರೂ ಅಭಿನಯ. ಸತ್ಯ ಸಂಭವಿಸುವುದು ಪ್ರತ್ಯಭಿಜ್ಞೆಯಲ್ಲಿ ಮಾತ್ರ. ಈ ನಿಲುವಿನ ಕಾವ್ಯವೇ 'ಭಾರತೀಯ ಕಾವ್ಯ', - ಇಂತಹ ಪೊಳ್ಳು ಸಮೀಕರಣಗಳ ಉತ್ತರ ಮಾರ್ಗದ' ಕಾವ್ಯ ಮತ್ತು ಮೀಮಾಂಸೆಗಳನ್ನು ದಕ್ಷಿಣ ಒಪ್ಪಿಕೊಂಡಿಲ್ಲ.

ಇದು ಸ್ವೀಕಾರ-ನಿರಾಕರಣೆಯಾಚೆಗಿನ ನಿಸರ್ಗದೊಂದಿಗೆ ಸಮರಸದಿಂದ ಬಾಳುವುದನ್ನು ಸರಿ-ತಪ್ಪು ಎಂಬ ತಕ್ಕಡಿಗೆ ಇಡದ ವಿವೇಕ. ಇದು 'ಸಂಗಂ ಸಾಹಿತ್ಯದ ನಿಲುವು, ತಾನು ಮತ್ತು ಇದಿರನ್ನು ಅವಿರುವಂತೆ ಸರಿಯಾಗಿ ಅರಿತುಕೊಂಡರೆ ಬಾಳುವ ಸರಿಯಾದ ದಾರಿ ತೆರೆದುಕೊಳ್ಳುತ್ತದೆ ಎನ್ನುವ ವಿವೇಕ. ಎರಡನ್ನೂ ಬಿಟ್ಟು ಮೇಲಕ್ಕೆ ದೃಷ್ಟಿ ನೆಟ್ಟರೆ ಇಲ್ಲಿಯ ಎರಡನ್ನೂ ಕಳೆದುಕೊಳ್ಳುವುದು ಖಾತರಿ, ಹಾಗಾಗಿ ದಕ್ಷಿಣದ ಕಾವ್ಯ ಮೀಮಾಂಸೆಯ ಪ್ರಧಾನ ನಿಲುವು ಇದೇ ಆಗಿರುವುದು ಸಹಜವೇ ಇದೆ.

ಜೇನುಮಲೆಯ ಹೆಣ್ಣು – ಎಂಬ 'ಸಂಗಂ' ಕಾವ್ಯ ಪ್ರಭಾವದಿಂದ ರೂಪುತಳೆದ ಈ ಕೃತಿಗೆ ಮೇಲಿನ ಪ್ರವೇಶದ ಸಾಲುಗಳು ಕೈಮರ ಎಂದು ಭಾವಿಸಬಹುದು. - 'ಎಟ್ಟುತ್ತೊಗೆ' ಮತ್ತು 'ಪತ್ತುಪಾಟ್ಟು' ಎಂಬ ಎರಡು ವಿಭಾಗಗಳಲ್ಲಿ ಹರಿದಿರುವ 'ಸಂಗಂ' ಕಾವ್ಯ ಹಾಗೂ ದಕ್ಷಿಣದ ಕಾವ್ಯ ಮೀಮಾಂಸೆಯ ಮುಖ್ಯ ಪರಿಕಲ್ಪನೆಗಳನ್ನು ಸೂತ್ರೀಕರಿಸಿರುವ 'ತೋಲ್ಲಾಪ್ಪಿಯಂ ಎಂಬ ಮೀಮಾಂಸಾ ಕೃತಿ ಪ್ರಸ್ತುತ ಕಾವ್ಯಕೃತಿಯ ತಾತ್ವಿಕ ಆಕರವಾಗಿದೆ. ಕವಿಯತ್ರಿ ಇವುಗಳಿಂದ ಒದಗಿದ ಸ್ಪುರಣೆಗೆ ಋಣಿಯಾಗಿದ್ದಾರೆ. ಅವರಿಗೆ ಅದೊಂದು ಚಿಮ್ಮುಹಲಗೆಯಾಗಿ ಒದಗಿಬಂದಿದೆ.

ನಾವು ಬದುಕುವ ಆವರಣವು ಮೀಮಾಂಸೆಯ ನಿಲುವುಗಳನ್ನು ನಿರ್ದೇಶಿಸುತ್ತದೆ. ಅಂತೆಯೇ 'ತೋಲ್ಲಾಪ್ಪಿಯಂ' ಕಡಲದಂಡೆಯನ್ನು ಬೇರೆಯದೇ ಆದ ಮೀಮಾಂಸೆ ಆವರಣ ಎನ್ನುತ್ತದೆ. ಆ ಆವರಣದ 'ಅಗಂ'ನ ಒಂದು ತುಣುಕನ್ನು ಕವಿಯತ್ರಿ ಸುಜಾತಾ ಅವರು ಕಾವ್ಯವಾಗಿಸಿರುವ ಪರಿ ಇದು:

 ಬೇಸಿಗೆಯಲ್ಲಿವರು ಬಂದೇ
ಬರುವರು ಮೀನುಬುಟ್ಟಿಯ ನಾತ!
ಹೊತ್ತವರ ಹಿಂದೆಯೇ ಉಪ್ಪು ಬೆವರ ಮೂಟೆ ಹೊತ್ತವರು
ಕಡಲ ತಡಿಯವಳು, ಮೀನ
ಕಣ್ಣವಳು, ಉಪ್ಪು ಮೈಯ್ಯಿನ
ಹುಡುಗಿಗೆ ಒಪ್ಪು ಆ ಉಪ್ಪಾರ ಹುಡುಗನ ಸ್ನೇಹ!

..

ಇಬ್ಬರಿಗೂ ತಪ್ಪದು ಕೂಗು
ತಾಗು! ಉಪ್ಪುಮೂಟೆ ಹೊತ್ತು ಬರುವನಿವನು
ಮೀನುಬುಟ್ಟಿಯ ವೈಯ್ಯಾರದಿ ತರುವಳಿವಳು
 ನಿಧಾನದಲ್ಲಿ ಬಿಡಿಸಬೇಕು ಮೀನಮುಳ್ಳ!
ಕೊಕ್ಕರೆ ತನ್ನ ಕೊಕ್ಕಲ್ಲಿ
ಮೀನ ಜಾರಿಹೋಗದೆ ಹಿಡಿವಂತೆ ಬಾಯಿಗಿಡಬೇಕು! ಮಾತು ಮರೆತು ಮೌನದಲ್ಲಿ.. (ಕಡಲ ಮೀನೂ ಉಪ್ಪಾರ ಹುಡುಗನೂ)

ಏಳು ತೆನೆಗಳ ಈ ಸಂಕಲನದಲ್ಲಿ ಆರು 'ಅಗಂ', ಒಂದು ಮಾತ್ರ 'ಪರಂ' ಕುರಿತಾದ ನಿರೂಪಣೆಗಳು. 'ಅಗಂ' ಅಂತರಂಗವನ್ನು ಕುರಿತ ನಿರೂಪಣೆಯಾದರೆ 'ಪರಂ ಬಾಹ್ಯಲೋಕವನ್ನು ಉದ್ದೇಶಿಸಿದ ಕಾವ್ಯ, ಪ್ರೇಮ, ವಿರಹ, ಅಪ್ಪುಗೆ, ಕಾಮದ ಮಾಧುರ್ಯಗಳು ಒಂದರ ಜಗತ್ತಾದರೆ, ಅಸೂಯೆ, ದಂಗೆ, ಮತ್ಸರ, ದ್ವೇಷ, ಕೊಲೆ, ಸುಲಿಗೆ, ಹಿಂಸೆ ಇನ್ನೊಂದರ ಜಗತ್ತು. ಎರಡೂ ಒಂದೇ ಜೀವದ ಒಳ-ಹೊರಗು.

'ಅಗಂ' ಕುರಿತ ಕಾವ್ಯವೇ ಜಾಸ್ತಿ ಇರುವ ತಾರತಮ್ಯಕ್ಕೆ ಕವಿಯತ್ರಿ ಮತ್ತು ಓದುಗರು ಒಪ್ಪಿಗೆ ಸೂಚಿಸುವುದೇನೂ ಆಶ್ಚರ್ಯವಲ್ಲ. ಆದರೆ, ಲೋಕವಾಸ್ತವ ಹಾಗಿಲ್ಲ. ಅಂತರಂಗವು ಪ್ರೀತಿಯಲ್ಲಿ ಮಿಂದೇಳುತ್ತಿದ್ದರೆ ಹೊರಜಗತ್ತು ಯುದ್ಧಕ್ಕೆ ಕುದಿಯುತ್ತಿದೆ. ಈ ಹೊತ್ತಂತೂ ಮನುಷ್ಯರ, ದೇಶಗಳ ಮತ್ತು ಧರ್ಮಗಳ ನಡುವೆ ಕುದಿಯುತ್ತಿರುವ ವೈಷಮ್ಯದ ಕುದಿಗೆ ಚಿಮುಕಿಸುವ ತಣ್ಣೀರು ನಾ ಹನಿಯಾದರೂ ಸರಿ, ಅತ್ಯಗತ್ಯವೆನ್ನುವುದರಲ್ಲಿ ಸಂಶಯವಿಲ್ಲ. ಮೈತ್ರಿಗೇ ತುಡಿಯುವ ಕಾವ್ಯಕ್ಕೆ ಮತ್ತು ಓದುವ ಮನಸ್ಸಿಗೆ ಯುದ್ಧರಂಗ ಬೇಗ ದಣಿವಾಗಿಸುತ್ತದೆನ್ನುವುದನ್ನು ಒಪ್ಪಬೇಕು.

ಇಡಿಯಾಗಿ ಮಲೆನಾಡಿನ ಜೀವಾವರಣವನ್ನು ದುಡಿಸಿಕೊಂಡಿರುವ ಕವಿಯತ್ರಿಗೆ ಅಲ್ಲಿಯ ನುಡಿವಿಶೇಷ, ಅನ್ನಾಹಾರ, ಬದುಕಿನ ಲಯಗಳೊಡನೆ ಗಾಢವಾದ ಅಂತಸ್ಸಂಬಂಧವಿದೆ. ಹಾಗಾಗಿ ಆ ನೆಲಕ್ಕೆ ಒಪ್ಪುವ ಛಂದಸ್ಸಿನ ನಡೆಯೊಂದು ತಾನಾಗಿ ಬಂದು ಜೊತೆಯಾಗಿದೆ. ಹರೆಯದ ಹೆಣ್ಣಿನ ತಿರುಗಿ ನೋಡದೆಯೂ ಹಿಂದನ್ನು ನೋಡುತ್ತ ಮುಂದೆ ನಡೆಯುವ ನಡೆಯೊಂದು ಚರಣದಿಂದ ಚರಣಕ್ಕೆ ಸಿದ್ಧಿಸಿದೆ. ಇದರ ಒಂದು ಮಾದರಿಯನ್ನು ಗಮನಿಸಬಹುದು:

 ನಿನ್ನ ಶ್ರದ್ಧೆಗೆ ಮನಸಾರೆ
ಮಣಿದಿಹೆನು ಅಲುಗದಂತೆ!
ಒಮ್ಮೆ ಕಿರುಬೆರಳಿನುಗುರ ತಾಕಿಸಿ ಕೂತಾಗ
'ತಾಕಬೇಕು, ತಾಕದಂತಿರಬೇಕು'

ಎಂದವನ ಕಂಡು ಬಿದ್ದು ಬಿದ್ದು ನಕ್ಕವಳ
ಮರೆಯಬಹುದೇನೇ? ತುಟಿಗಿಟ್ಟ ತುಟಿಯ ಸವರು
ನವಿರಿಗೆ ... ಅಲುಗಿ ಹೋದ
ನಿನ್ನ ಕಣ್ಣರೆಪ್ಪೆಗಂಟಿ ನೀರ ಹರಳನ್ನಿಡಿದ
'ಆ ಚಣವೊಂದೆನಗೆ ದಿಟದ ಕಾಣೆ!' ಜಗದೊಲವಿನ (ನನ್ನವಳೇ.. ಕಕ್ಕೆ ಹೂವಿನ ಚೆಲುವೆ)

ಗಂಡು ಹೆಣ್ಣಿನ ಪ್ರೇಮದಲ್ಲಿ ನಿಸರ್ಗವೇ ಇಡಿಯಾಗಿ ಪಾಲ್ಗೊಳ್ಳುವುದು ಈ ಕಾವ್ಯದ ವಿಶೇಷ. 'ಸಂಗಂ' ಕಾವ್ಯವು ಕೂಡ ಒಳಗನ್ನು ಪ್ರತಿಫಲಿಸಲು ತನ್ನ ಸುತ್ತಲಿನ ಜೀವಾಜೀವ ಪ್ರಾಣಿ ಸಸ್ಯ ಸಂಕುಲವನ್ನೆಲ್ಲ ಬಳಸಿಕೊಳ್ಳುತ್ತದೆ. ಒಳಗಿನ ಪ್ರೇಮ, ವಿರಹಾದಿಗಳಾಗಲೀ ಹೊರಗಿನ ಶೌರ್ಯ ಸಾಹಸಗಳಾಗಲೀ ಸಂಬಂಧವೇ ಎಲ್ಲವನ್ನೂ ರೂಪಿಸುವ ಕೊಂಡಿಯಾಗಿರುವುದರಿಂದ ಪ್ರತೀ ನಡೆಯಲ್ಲಿ ಎಲ್ಲವೂ ಪಾಲ್ಗೊಳ್ಳುತ್ತವೆ. ನಾಯಿಗುತ್ತಿ, ಪೀಂಚಲು, ತಿಮ್ಮಿಯರು ಹೇಗೆ ಕುವೆಂಪು ಅವರನ್ನು ತಮ್ಮ ನಡೆದಾಟಕ್ಕೆ ಜೊತೆಯಾಗಿಸಿಕೊಂಡರೋ ಹಾಗೇ ಜೇನುಮಲೆಯ ಹೆಣ್ಣು, ಬೆಸ್ತರ ಹುಡುಗಿ, ಉಪ್ಪಾರ ಹುಡುಗರು ಈ ಕವಿಯತ್ರಿಯನ್ನು ಕರೆದುಕೊಂಡು ಹೋಗಿದ್ದಾರೆ.

ಮೀನು, ಮಿಂಚುಳ್ಳಿ, ಮೂಗೇ ಹೂಬಿಟ್ಟಂತಿರುವ ಮೂಗುಬೊಟ್ಟು, ನೆಲಸಂಪಿಗೆ, ಹರಿಣದರಳುಗಣ್ಣು, ತೂಗಾಡುವ ಕರಿದುಂಬಿ, ಕಚ್ಚಾಡುವ ಗಿಳಿಗೊರವಂಕಗಳು ಇಡಿಕಿರಿದಿರುವ 'ಇಲ್ಲಿಯ' ಮಾತೇ ಎಲ್ಲ. ಬನದವ್ವ, ಬೆಟ್ಟದ ಭೈರವನ ಹೊರತಾಗಿ ಎಲ್ಲೂ 'ಅಲ್ಲಿಯ' ಮಾತಿಲ್ಲ. ಪ್ರೇಮಕ್ಕಿಂತ ದೊಡ್ಡದು ಇನ್ನೊಂದು ಇದೆ ಎನ್ನುವವರು ಯಾರೂ ಇಲ್ಲ. ಒಂದಿಷ್ಟು 'ಇದಿರಿನ' ಮಾತು, ಕರುಣಾಮೈತ್ರಿಯ ಸಹಜ ನಿಸರ್ಗಕ್ಕೆ ಯುದ್ಧ ಸಹ್ಯವಲ್ಲ. ಯುದ್ಧ ಹೊರಗಷ್ಟೇ ಇಲ್ಲ. ಪ್ರೇಮವಿಲ್ಲದ ಒಳಗು ರಣರಂಗ ದ್ವೇಷಿಸಲೂ ಜಾಗವಿಲ್ಲದಂತೆ ಪ್ರೇಮದಿಂದ ತುಂಬಿಹೋಗಿರುವ ಮನಸ್ಸು ಈ ಕೃತಿಯ ಜೀವದ್ರವ್ಯ, ಯುದ್ಧವನ್ನು ಕುರಿತು ಹೆಚ್ಚು ಮಾತಾಡಲೂ ಬಯಸದು.

ಗೆದ್ದವರುಂಟೇ? ಇದ್ದಲ್ಲೇ
ಸುದ್ದಿ ಇರುವ ಭೂಮಿಯನ್ನು ಇದುವರೆಗೂ...
ಕಚ್ಚಾಡಿ ಸತ್ತವರನ್ನು ಯುಗಯುಗವೂ ಕಂಡಿಹುದು
ಭೂಮಿಯ ಕರುಳಲ್ಲಿ ಗೆರೆ ಎಳೆಯ ಬಂದವರು, ಹುಗಿದ ಕುಣಿಯಲ್ಲಿ
ಅಟ್ಟೆಗಳನ್ನೊಟ್ಟಿ ನೆಲಪದರದಲ್ಲಿ ಕಣ್ಣುಮುಚ್ಚಿ ಮಲಗಿಹರು.

ಕಾವ್ಯ, ಕವಿಯತ್ರಿ ಮತ್ತು ನುಡಿ ಮೂರೂ ಕುರುಹಿಲ್ಲದಂತೆ ಬೆರೆತು ಕರಗಿಹೋಗಿರುವ ಕಾವ್ಯದ ಉದಾಹರಣೆಯನ್ನಾಗಿಸಲು ಈ ಕೃತಿಯ ಯಾವೊಂದು ಪುಟದ ಮೇಲೂ ಬೆರಳಿಡಬಹುದು. ಆದರೂ ನನಗೆ ಸಿಕ್ಕ ಕೊನೆಯ ಪ್ರಾಶಸ್ತ್ರವೆನ್ನುವ ಸಾಲುಗಳು ಕೂಡಾ ಹೀಗೆ ಇವೆ:

ಒಲವೆಂಬುದು ಒಂಬತ್ತು
ಸುತ್ತಿನ ಕೋಟೆ! ಹತ್ತೊಂಬತ್ತು
ದಾರಂದದಲಿ ನೇದ ಮಧುರ ನೋವು! ಹಾಯಬೇಕದನು
ಒಳಸೇರಬೇಕು! ಗಾಳಿ ಮುಟ್ಟನು
ತಟ್ಟಿ ಒಳಮೈ ಮುಟ್ಟಬೇಕು!
ಹೊರಗೆ ಸುಳಿದಾಡುವ ಗಾಳಿಯ ಒಳಮುಟ್ಟನ್ನು ಮುಟ್ಟಿ
ಗಂಧ ಬಟ್ಟಲ ತಾಕಿ
ಉಸಿರುಸಿರ ಒಳಹೊರಗೆ
ಹೆಣೆದು ಜೀವಜೀವದ ಗುಟ್ಟನ್ನೊಡೆಯಬೇಕು (ಒಲವೆಂದರೆ ವಿರಹವೇ ನಲ್ಲೆ)

ಕವನಗಳನ್ನು ಓದಿದ ಮೇಲೆ ಈ ನೆಲದ ತಾಯಿಬೇರನ್ನು ಕಂಡು ಮಾತನಾಡಿಸಿಕೊಂಡು ಬಂದ ಕವಿಯತ್ರಿಯ ಬಗೆಗೆ ಅಭಿಮಾನವೆನ್ನಿಸುತ್ತದೆ.

(ಕೃಪೆ : ಪ್ರಜಾವಾಣಿ, ಬರಹ : ಎಸ್. ನಟರಾಜ್ ಬೂದಾಳು)

 

Related Books