ಆಕ್ರಮಣಕಾರಿ ನಿಲುವನ್ನು ವಿಡಂಬಿಸುವ ಕವಿತೆ “The Robin and the worm”

Date: 04-05-2023

Location: ಬೆಂಗಳೂರು


''ಮನುಕುಲದ ಚರಿತ್ರೆಯಲ್ಲಿ ಕಾಣುವ ಎಲ್ಲ ಹೋರಾಟ, ಯುದ್ಧ, ದಿಗ್ವಿಜಯಗಳು ಇನ್ನೊಬ್ಬನ ವಶದಲ್ಲಿರುವ ವಸ್ತುವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದ ನೆಲೆಯಲ್ಲಿಯೇ ನಡೆದಂತದ್ದು. ನೈಸರ್ಗಿಕ ಜಗತ್ತಿನ ನಿಯಮವೂ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟದ ಹಿನ್ನೆಲೆಯಲ್ಲಿಯೇ ಅಲ್ಲವೇ?,'' ಎನ್ನುತ್ತಾರೆ ಅಂಕಣಗಾರ್ತಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ‘ಆಕ್ರಮಣಕಾರಿ ನಿಲುವನ್ನು ವಿಡಂಬಿಸುವ ಕವಿತೆ The Robin and the worm’ ಕುರಿತು ಕಟ್ಟಿಕೊಟ್ಟಿದ್ದಾರೆ.

ಕವಿತೆಯ ಬಗ್ಗೆ, ಅದರ ರಾಚನಿಕ ವಿನ್ಯಾಸದ ಬಗ್ಗೆ, ಧ್ವನಿಯ ಬಗ್ಗೆ, ಛಂದೋಗತಿ, ಲಯ ಹೀಗೆ ಕವಿತೆ ಬಗ್ಗೆ ನಾನಾ ವ್ಯಾಖ್ಯಾನಗಳು ಇವೆ. ಕವಿತೆ ನೀತಿಯ ಪಾಠ ಹೇಳಬಾರದು. ಬೋಧನೆ ಕವಿತೆಯ ಉದ್ದೇಶವಲ್ಲ. ಅದು ತಟ್ಟಬೇಕು, ಮುಟ್ಟಬೇಕು, ಎದೆಗಿಳಿಯಬೇಕು ಎನ್ನುವವರಿದ್ದಾರೆ. ಆದರೆ ಎಲ್ಲ ಕವಿತೆ ಯಾ ಬರಹ ಅಥವಾ ಅಕ್ಷರವೂ ಒಂದಲ್ಲಾ ಒಂದು ಸಿದ್ಧಾಂತವನ್ನು ಮೂರ್ತ ಅಥವಾ ಅಮೂರ್ತತೆಯಲ್ಲಿ ಹೊಂದಿರುತ್ತದೆ ಇದು ಸಾಹಿತ್ಯದ ಸಹಜ ಲಕ್ಷಣ. ಬದುಕಿನ ರೀತಿಯನ್ನು ಹೇಳುವುದು, ಬದುಕಿನ ಮರ್ಮವನ್ನು ಮನಗಾಣಿಸುವುದು, ಆದರ್ಶತೆಯ ಅಗತ್ಯತೆಯನ್ನು ನಿರೂಪಿಸುವುದು, ಅನ್ಯಾಯವನ್ನು ಬಯಲಿಗೆಳೆಗೆಯುವುದು, ಅನಾಚಾರಗಳನ್ನು ಕಂಡರಿಸುವುದು, ನೀತಿಯ ತತ್ವವನ್ನು ಮನಗಾಣಿಸುವುದು ಅಕ್ಷರದ ಗುರಿ.

ಡಾನ್ ಮರ್ಕಿಸ್ ಬರೆದ ಕವಿತೆ “The Robin and the worm” ಹಲವು ಮಾರ್ಮಿಕ ಸತ್ಯಗಳ ಮನಗಾಣಿಸುವ ಒಂದು ಅದ್ಭುತ ಕವಿತೆ. “One man’s neck is another man’s life” ಎಂಬ ಮಾತಿದೆ. ಜಗತ್ತಿನ ನಿಯಮವೇ ಈ ಸಿದ್ಧಾಂತದ ಮೇಲೆ ನಿಂತಿದೆ. ಇದು ಆಹಾರ ಚಕ್ರದ ಸಂಗತಿಯನ್ನು ಒಳಗೊಂಡು, ಸಾಮಾಜಿಕ ಬದುಕಿನಲ್ಲಿ ಒಬ್ಬರ ಕಾಲೆಳೆದು ಕೆಡವಿ ಇನ್ನೊಬ್ಬ ಮೇಲೇರುವ ಪ್ರಯತ್ನಕ್ಕೂ ಉದಾಹರಿಸಬಹುದಾಗಿದೆ. ಮನುಕುಲದ ಚರಿತ್ರೆಯಲ್ಲಿ ಕಾಣುವ ಎಲ್ಲ ಹೋರಾಟ, ಯುದ್ಧ, ದಿಗ್ವಿಜಯಗಳು ಇನ್ನೊಬ್ಬನ ವಶದಲ್ಲಿರುವ ವಸ್ತುವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದ ನೆಲೆಯಲ್ಲಿಯೇ ನಡೆದಂತದ್ದು. ನೈಸರ್ಗಿಕ ಜಗತ್ತಿನ ನಿಯಮವೂ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟದ ಹಿನ್ನೆಲೆಯಲ್ಲಿಯೇ ಅಲ್ಲವೇ? ನೈಸರ್ಗಿಕ ಸಿದ್ಧಾಂತದ ಹಿನ್ನೆಲೆಯಲ್ಲಿ ಅಂದು ಡಾರ್ವಿನ್ ವ್ಯಾಖ್ಯಾನಿಸಿದ ‘Struggle for the Existence, Survival of the Fittest’ಎಂಬ ಮಾತು ಸಾಮಾಜಿಕರಣಗೊಂಡ ಆಧುನಿಕ ಜಗತ್ತಿನಲ್ಲಿ ಮಾನವನ ಬದುಕಿನ ಎಲ್ಲ ಕ್ಷೇತ್ರಗಳಿಗೆ ಅನ್ವಯಿಸುತ್ತದೆ.

A robin said to an
Angleworm as he ate him
I am sorry but a bird
Has to live somehow the
Worm being slowwitted could
Not gather his
Dissent into a wise crack
And resort he was
Effectually swallowed
Before he could turn
a phrase

ಹಸಿದ ರಾಬಿನ್ ಬೇಟೆ ಸಿಗಬಹುದೆಂದು ಕಾಯುತ್ತಿತ್ತು. ಅದೇ ಹೊತ್ತಿಗೆ ಸಿಕ್ಕ ಎರಹುಳು ಗಬಕ್ಕನೇ ಹಿಡಿದು ‘ನಾನು ಬದುಕಬೇಕಲ್ಲವೇ ಹಾಗಾಗಿ ನಿನ್ನನ್ನು ತಿನ್ನಬೇಕಾಯಿತು’ ಎಂದು ಹೇಳುತ್ತ ಗಬಕ್ಕನೇ ನುಂಗೇ ಬಿಟ್ಟಿತು. ಅದಾದರೋ ಪಾಪ ಜಾಣ ಉತ್ತರ ನೀಡಿ ಹೇಗಾದರೂ ತನ್ನ ಬಚಾವು ಮಾಡಿಕೊಳ್ಳಲು ಆಗದಂತಹ ಮಂದಬುದ್ಧಿಯ ಹುಳು. ಚುರುಕು ಗುಣದ ರಾಬಿನ್ ಎದುರು ನಿಧಾನ ಪ್ರವೃತ್ತಿಯ ಎರೆಹುಳು ಸೋಲುತ್ತದೆ.

ಚಾಲಾಕಿ ಸ್ವಭಾವವುಳ್ಳವರು, ಬುದ್ಧಿವಂತರು, ಮುಗ್ಧರನ್ನು ಹೇಗೆ ತಮ್ಮ ಮಾತುಗಳ ಮೂಲಕ ವಂಚಿಸಬಲ್ಲರು. ತಮ್ಮ ತಪ್ಪುಗಳಿಗೆ ಹೇಗೆ ಸಮಜಾಯಿಷಿ ನೀಡಬಲ್ಲರು ಎಂಬುದನ್ನು ಕವಿ ಈ ಮೂಲಕ ಹೇಳುತ್ತಾರೆ.

ತಿಂದು ತೃಪ್ತಿಗೊಂಡ ರಾಬಿನ್ ಸಂತೃಪ್ತಭಾವದಲ್ಲಿ ಮರದ ಕೊಂಬೆಯನೇರಿ ದೇವರಿಗೆ ತನ್ನ ಕೃತಜ್ಞತೆಯ ಹಾಡು ಹೇಳತೊಡಗಿತು. ದೇವರಿರುವುದು ಸತ್ಯ. ಸ್ವರ್ಗದಲ್ಲಿ ನಿಜಕ್ಕೂ ಇರುವನು. ಹಾಗಾಗಿ ಈ ಜಗತ್ತಿನಲ್ಲಿ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ಜಗತ್ತು ಸುಂದರವಾಗಿದೆ ಎಂದು ಹಾಡತೊಡಗಿತು. ಆದರೆ ಇದೇ ರಾಬಿನ್ ನಿನ್ನೆ ದಿನ ತನಗೆ ಊಟ ಸಿಗದೇ ಇರುವಾಗ ದೇವರನ್ನು ನಿಂದಿಸಿತ್ತು. ದೇವರ ಅಸ್ತಿತ್ವವನ್ನೇ ನಿರಾಕರಿಸಿತ್ತು. ಹಾಗೇ ಮಾಡಿದ ಪ್ರಮಾದವನ್ನು ಇಂದು ತಪ್ಪೆಂದು ತಿಳಿದು ತಾನು ಕಪಟಿ ಎಂದು ಆರೋಪಿಸಿಕೊಳ್ಳುತ್ತದೆ. ಕವಿ ಮನುಷ್ಯನ ಕಪಟ ಬುದ್ಧಿಯನ್ನು, ನಾವೇ ಸೃಷ್ಟಿಸಿಕೊಂಡ ದೇವರು ಧರ್ಮದ ಅನುಕೂಲ ಸಿಂಧು ಸ್ವಭಾವವನ್ನು ಅಸ್ತಿತ್ವವನ್ನು ವ್ಯಂಗ್ಯೋಕ್ತಿಯಲ್ಲಿ ಬಹಳ ಅರ್ಥಗರ್ಭಿತವಾಗಿ ಕಟ್ಟಿಕೊಡುತ್ತಾರೆ.

on his own sweet song
that he did not notice
mehitable the cat
sneaking toward him
she pounced just as he
had extended his larynx
in a melodious burst of
thanksgiving

ಈಗ ರಾಬಿನ್ ಎಷ್ಟು ಮಧುರವಾಗಿ ಹಾಡುತ್ತಿತ್ತೆಂದರೆ ಆ ಹಾಡಿಗೆ ಹೂಗಳು ಆನಂದ ಪರವಶಗೊಂಡು ತಲೆಯಾಡಿಸುತ್ತಿದ್ದವು. ರಾಬಿನ್ ದೈವಭಕ್ತಿ ಉಳ್ಳದ್ದೇ, ಆದರೆ ಅಷ್ಟೇ ಆಕ್ರಮಣಕಾರಿ ಕೊಲೆಪಾತಕ ಸ್ವಭಾವ ಹೊಂದಿರುವುದು ಎನ್ನುತ್ತಾನೆ ಕವಿ. ಇಂತಹ ರಾಬಿನ್ ತನ್ನ ಖುಷಿಯ ಈ ಕ್ಷಣಗಳಲ್ಲಿ ಮೈಮರೆತು ಹಾಡುತ್ತಿದ್ದು, ಜಗದ ಗೊಡವೆ ಮರೆತು ಹಾಡುತ್ತಿತ್ತು. ಆಗಲೇ ಮೆಹಿಟೇಬಲ್ ಎಂಬ ಬೆಕ್ಕು ರಾಬಿನ್ ಪಕ್ಷಿಯನ್ನು ಹಿಡಿಯಲು ನಿಧಾನವಾಗಿ ಹೊಂಚುತ್ತಿತ್ತು. ಗಾಯನದಲ್ಲಿ ಮೈಮರೆತ ರಾಬಿನ್ ತನ್ನ ಕಂಠವನ್ನು ಇನ್ನಷ್ಟು ಮೇಲಕ್ಕೆರಿಸಿ ಹಾಡಿ ದೇವರನ್ನು ಖುಷಿಪಡಿಸಬೇಕು ಎಂದುಕೊಂಡಾಗಲೇ ಮೆಹಿಟೇಬಲ್ ಈ ಹಕ್ಕಿಯನ್ನು ಹಿಡಿದು ಬಿಟ್ಟಿತು.

ಇಲ್ಲಿ ಬರುವ ರಾಬಿನ್ ಪಕ್ಷಿಯೂ ಹಾಗೂ ಮೆಹಿಟೆಬಲ್ ಬೆಕ್ಕು ಎರಡು ಸರ್ವಾಧಿಕಾರಿ ಧೋರಣೆಯುಳ್ಳವು. ತನ್ನ ಹಸಿವಿಗೆ ಎರೆಹುಳುವನ್ನು ತಿನ್ನುವ ರಾಬಿನ್, ರಾಬಿನ್‌ನ ಪುಕ್ಕದ ಕೊನೆಯ ಗರಿಯನ್ನು ಬಿಡದೇ ಮುಕ್ಕುವ ಮೆಹಿಟೇಬಲ್ ಭಿನ್ನ ಮನಸ್ಥಿತಿಯುಳ್ಳವು ಎಂದೆನ್ನಿಸುವುದಿಲ್ಲ. ರಾಬಿನ್‌ನನ್ನು ತಿಂದು ಮುಗಿಸಿದ ಮೆಹಿಟೇಬಲ್ ಉದ್ಗರಿಸುವ ಈ ಮಾತು ಅದನ್ನು ವ್ಯಕ್ತಗೊಳಿಸುತ್ತದೆ. ತನ್ನ ಸಂತೃಪ್ತಿಯೇ ಜಗದ ಸಂತೃಪ್ತಿ ಎಂದು ಭಾವಿಸುವ ಗುಣ ಸ್ವಾರ್ಥದ ಪರಮಾವಧಿ. ರಾಬಿನ್, ಮೆಹಿಟೇಬಲ್ ಎರಡೂ ಅದಕ್ಕೆ ಯೋಗ್ಯ ರೂಪಕಗಳು.

Peace and joy in the world
And over all the provident skies
How beautiful is the universe
When something digestible meets
With an eager digestion...

ಕರುಣೆಯ ಲವಲೇಶವೂ ಅವುಗಳಲ್ಲಿಲ್ಲ. ಅಂತಹ ವಿನಾಶಕಾರಿ ಆಕ್ರಮಣಕಾರಿ ಧೋರಣೆಯೇ ಅವುಗಳ ಅವನತಿಗೆ ಕಾರಣ. ಯಾರಿಗೆ ಗೊತ್ತು ಮೆಹಿಟೇಬಲ್ ಕೂಡಾ ರಾಬಿನ್‌ನಂತೆ ಇನ್ನೊಂದು ಆಕ್ರಮಣಕ್ಕೆ ಬಲಿಯಾಗಬಹುದು. ಯಾಕೆಂದರೆ ಈ ಜಗದಲ್ಲಿರುವುದೆಲ್ಲ ನನ್ನ ಸಲುವಾಗಿಯೇ ಎಂಬ ಧೋರಣೆ ನಾನು ಇನ್ನೊಂದಕ್ಕೆ ಬಲಿಯಾಗುವವರೆಗೂ ಅರಿವಿಗೆ ಬರುವುದಿಲ್ಲ ಎಂಬರ್ಥದ ಈ ಕೆಳಗಿನ ಸಾಲುಗಳು ಅದೆಷ್ಟು ಕಾಡುತ್ತವೆ ನೋಡಿ.

“Something to be said
For the lyric and imperial
Attitude
Believe that everything is for
You until you discover
That you are for it”

ಆಕ್ರಮಣಕಾರಿ ನಿಲುವು ಅಥವಾ ಪ್ರವೃತ್ತಿ ಪ್ರಾಣಿ ಜಗತ್ತಿನಲ್ಲಿ ಸಹಜವಾಗಿರಬಹುದು. ಅದು ನೈಸರ್ಗಿಕ ನಿಲುವು ಆಗಿರಬಹುದು. ಆದರೂ ಈ ಆಕ್ರಮಣಕಾರಿ ನಿಲುವು ಮತ್ತು ಸುಖ ದಕ್ಕಿದ ಖುಷಿಯಲ್ಲಿ ಮೈ ಮರೆಯುವ ಆ ಮೂಲಕ ಇನ್ನೊಂದಕ್ಕೆ ಆಹಾರವಾಗಿ ಬಲಿಯಾಗುವ ಈ ಚಿತ್ರಣ ಬದುಕಿಗೆ ಬೇಕಾದ ಅಗತ್ಯ ಜೀವನ ಸಂದೇಶವನ್ನು ನೀಡುತ್ತದೆ. ‘ಬದುಕು ಮತ್ತು ಬದಕುಲು ಬಿಡು’ ಎಂಬ ಆಶಯದೆಡೆಗೆ ನಮ್ಮನ್ನು ಸೆಳೆಯುತ್ತದೆ. ಸುಖದ ಅಹಂಕಾರದಲ್ಲಿ ಮೈಮರೆತರೆ ಆಗುವ ಅನಾಹುತವನ್ನು ಮನಗಾಣಿಸುತ್ತದೆ. ಸಾಮಾಜಿಕ ಬದುಕನ್ನು ಕಟ್ಟಿಕೊಂಡ ಪ್ರಾಜ್ಞನಾದ ಮನುಷ್ಯ ಕೂಡಾ ಇಂತಹ ಗುಣಗಳಿಂದಲೇ ಸರ್ವನಾಶಕ್ಕೆ ಗುರಿಯಾಗುವ ಸಾಧ್ಯತೆಗಳಿವೆ ಎಂಬ ಮಾರ್ಮಿಕ ಸತ್ಯವನ್ನು ಈ ಕವಿತೆ ತೆರೆದಿಡುತ್ತದೆ.

-ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಯೇಟ್ಸ್ ನ “THE INDIAN UPON THE GOD”- ದೇವರ ಕುರಿತಾದ ಭಾರತೀಯ ಚಿಂತನೆ
ಕವಿ ವಿಲಿಯಂ ವರ್ಡ್ಸ್‌ವರ್ತ್ ಸಾಹಿತ್ಯ ಪ್ರೇಮ
ಸ್ತ್ರೀತ್ವದ ಹಿರಿಮೆ ಸಾರುವ ಕಿಶ್ವರ ನಹೀದ ಕವಿತೆ “THE GRASS IS REALLY LIKE ME”
ಸಿಡಿಮದ್ದಿನ ದನಿ ಮಾಯಾ ಎಂಜೆಲ್ಲೋರ “I KNOW WHY THE CAGE BIRD SINGS''
ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ್ಲವಗಳು- ಹಕಲ್ಬರಿ ಫಿನ್
ಜನರೇಶನ್ ಗ್ಯಾಪ್‌ನ ಮೇಲೊಂದು ಟಿಪ್ಪಣಿ “ಫಾದರ್ ವಿಲಿಯಮ್” ಕವಿತೆ.
ಬ್ರೆಕ್ಟ್‌ನ ’THE CRUTCHES’ - ಪರಾವಲಂಬಿ ಬದುಕಿಗೆ ಒಂದು ಪಾಠ
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಪ್ರಸಾರಿತ ಪದೋತ್ತಸನ ಮತ್ತು ಅರ್ಧ ಚಂದ್ರಾಸನ

19-05-2024 ಬೆಂಗಳೂರು

"ಪ್ರಸಾರಿತ ಪದೋತ್ತಸನ ಆಸನ ಸದಾ ತಲೆನೋವಿನಿಂದ ಬಳಲುವವರಿಗೂ ಹಾಗೂ ಶೀರ್ಷಾಸನ ಮಾಡಲಾಗದವರು ಈ ಆಸನದ ಅಭ್ಯಾಸದಿಂದ ಶೀ...

ಕನ್ನಡಮುಂ ಸಕ್ಕದಮುಂ 

18-05-2024 ಬೆಂಗಳೂರು

"ಸಂಸ್ಕೃತವು ಪ್ರಾಕ್ರುತಗಳ ಸಂಸ್ಕರಿಸಿದ ರೂಪ, ಪ್ರಾಕ್ರುತವು ಸಂಸ್ಕೃತದ ಬಳಕೆಯ ರೂಪ ಎಂಬ ಎರಡೂ ವಿಚಾರಗಳಿರುವಂತೆ, ...

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...