ಯೇಟ್ಸ್ ನ “The Indian upon the God”- ದೇವರ ಕುರಿತಾದ ಭಾರತೀಯ ಚಿಂತನೆ

Date: 17-03-2023

Location: ಬೆಂಗಳೂರು


“ನಮ್ಮನ್ನು ಶಕ್ತರನ್ನಾಗಿ ಅಶಕ್ತರನ್ನಾಗಿ ಮಾಡಿ ಈ ಜಗತ್ತನ್ನು ತನ್ನ ಚೊಂಚಲ್ಲಿ ಹಿಡಿದಿರುವವನು ಯಾರು ಗೊತ್ತೇ? ಅವನು ಅದೇ ಚೀರಂಜೀವಿಯಾದ ಬಾತು. ಅವನಿರುವುದು ಆಕಾಶದಾಚೆ, ಅವನ ಹನಿಯುವ ರೆಕ್ಕಗಳಿಂದ ಮಳೆಯೂ, ಅವನ ಕಣ್ಣುಗಳಿಂದ ಚಂದಿರನೂ ಹೊಳೆಯುತ್ತಾನೆ” ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ‘ಯೇಟ್ಸ್ ನ “The Indian upon the God”- ದೇವರ ಕುರಿತಾದ ಭಾರತೀಯ ಚಿಂತನೆ’ ಕುರಿತು ಕಟ್ಟಿಕೊಟ್ಟಿದ್ದಾರೆ.

ಭಾರತೀಯ ಪರಂಪರೆ ಕುರಿತು ಪ್ರಶ್ನೆ ಎದ್ದಾಗಲೆಲ್ಲಾ ಭಾರತೀಯರಾದ ನಾವು ಒಪ್ಪುವ ಸಂಗತಿ ದೇವರ ಅಸ್ತಿತ್ವದ ಪ್ರಶ್ನೆ ಬಹುಮುಖ್ಯವಾಗಿ ಕಂಡುಬರುತ್ತದೆ. ಇದು ನಮ್ಮ ನಂಬಿಕೆಯಲ್ಲಿದೆ. ಹಾಗಾಗಿ ನಂಬಿಕೆಯೇ ದೇವರು. ನಮ್ಮ ಹಿರಿಯರ ನಂಬಿಕೆಗಳನ್ನು ನಾವು ಉಳಿಸಿಕೊಂಡು ಬರುವುದನ್ನು ನಮ್ಮ ಪರಂಪರೆ ಬಯಸುತ್ತದೆ. ಮತ್ತು ಅದನ್ನೆ ಸತ್ಯವೆಂದು ನಡೆಯುತ್ತೇವೆ. ದೇವಾಲಯಗಳಲ್ಲಿ ವಾಸ್ತವದ ದೇವರಿಲ್ಲ ಎಂಬುದು ಗೊತ್ತಿದ್ದೂ ಕಲ್ಲು ವಿಗ್ರಹದ ದೇವಾಲಯಗಳ ಎಡತಾಕುತ್ತೇವೆ. ಇಂತಹ ಯಾವುದೋ ಒಂದು ನಿರ್ದಿಷ್ಟ ನಂಬಿಕೆಗಳಿಗೆ ನಾವು ಬದ್ಧರಾದೆವೆಂದರೆ ಪೂರ್ವಾಗ್ರಹ್ಕಕೆ ಒಳಗಾದೆವೆಂದೇ ಅರ್ಥ ಎನಿಸುತ್ತದೆ ನನಗೆ. ಹಾಗಾದರೆ ಭಾರತೀಯ ಅಥವಾ ಮಾನವ ಸಂಸ್ಕೃತಿ ಈ ವಿಗ್ರಹ, ಪ್ರತಿಮೆ, ಸಂಕೇತಗಳನ್ನು ಈ ನೆಲೆಯಲ್ಲಿ ಪರಿಗ್ರಹಿಸುತ್ತಾ ಸಾಗುತ್ತಿರುವುದೆಲ್ಲಿ? ಎಂಬ ಪ್ರಶ್ನೆ ಕೂಡಾ ಕಾಡುತ್ತಿದೆ.

ಆದರೆ ಮನುಷ್ಯ ತನ್ನ ಬದುಕಿನಲ್ಲಿ ಎದುರಿಸುವ ಹಲವು ಸಂಕಷ್ಟಗಳಿಗೆ ಪರಿಹಾರವಾಗಿಯೋ ಅಥವಾ ಸಾಂತ್ವನಕ್ಕಾಗಿಯೋ ಕಟ್ಟಿಕೊಂಡ ಅದೆಷ್ಟೋ ನಂಬಿಕೆಗಳಿವೆ. ಮತ್ತು ಈ ನಂಬಿಕೆಗಳು ಜೀವನೋಲ್ಲಾಸಕ್ಕೆ, ಸಕಾರಾತ್ಮಕತೆಗೆ ಪ್ರೇರಣೆಯಾಗುತ್ತವೆ ಎಂಬುವುದನ್ನು ನಮಗೆ ಅಲ್ಲಗಳೆಯಲಾಗುವುದಿಲ್ಲ. ದೇವರು, ಧರ್ಮ, ಇದಕ್ಕೆ ಪೂರಕವಾಗಿರುವ ಹಲವು ಆಚರಣೆಗಳು, ವಿಧಿವಿಧಾನಗಳು, ಪೂಜೆ, ಪ್ರಸಾಧನಗಳು ಪರಂಪರೆಯ ಹೆಸರು ಹೊತ್ತು ಮುಂದಿನ ಜನಾಂಗಕ್ಕೆ ರವಾನೆಯಾಗುತ್ತದೆ. ಇದೊಂದು ರೀತಿಯ ಸಿದ್ಧ ಮಾದರಿಯಲ್ಲಿ ಬದುಕನ್ನು ನೋಡುವ ಪರಿಪಾಠವನ್ನು ಮುಂದಿನ ಜನಾಂಗಕ್ಕೆ ನಾವು ಉಣಬಡಿಸುತ್ತಾ ಹೋಗುತ್ತೇವೆ. ಹಾಗಾದರೆ ದೇವಾಲಯದಲ್ಲಿ ದೇವನಿರುವನೇ? ಪ್ರತಿಮೆಗಳಿಗೆ ಪುತ್ಥಳಿಗಳಿಗೆ ಸಲ್ಲಿಸುವ ಪೂಜೆ, ಪುರಸ್ಕಾರಗಳಿಂದ ನಿಜದ ದೇವನು ಒಲಿವನೇ? ಇದೊಂದು ನಂಬಿಕೆಯೋ ಅಥವಾ ಮೂಢನಂಬಿಕೆಯೋ? ಇತ್ಯಾದಿ ಪ್ರಶ್ನೆಗಳು ಎದ್ದಾಗಲೆಲ್ಲ ನನಗೆ ರವಿಂದ್ರನಾಥ ಟ್ಯಾಗೋರರ ‘Leave this Chanting’ ಕವಿತೆ ನೆನಪಾಗುತ್ತದೆ. ಭಾರತೀಯ ಮೂಲ ಸಾಂಸ್ಕೃತಿಕ ಹಿರಿಮೆ ಎಂದರೆ ಅದು ಪ್ರಕೃತಿಯೊಂದಿಗಿನ ಅವರ ಅನುಬಂಧ ಮತ್ತು ಪ್ರಕೃತಿ ಪೂರ್ಣಧ್ಯಾನಿತ ಫಿಲಾಸಫಿಯನ್ನು ಬದುಕಿಗೆ ಸಮೀಕರಿಸಿಕೊಂಡಿರುವುದು. ಇದಕ್ಕೆ

ಸಂವಾದಿಯಾದಂತಹ ಆಶಯವನ್ನು ಡಬ್ಲೂ. ಬಿ. ಯೇಟ್ಸ್ ತನ್ನ “The Indian upon the God” ಕವಿತೆಯಲ್ಲಿ ಹೇಳಿದ್ದಾನೆ. ದೇವರ ಸರ್ವಶಕ್ತತೆಗಿಂತ ದೈವತ್ವದ ಸರ್ವವ್ಯಾಪಿ ತತ್ವವು ಭಾರತೀಯರದ್ದು. ನಿಸರ್ಗದ ಪ್ರಾಣಿ, ಪಕ್ಷಿ, ನದಿ, ಬೆಳಕು ಎಲ್ಲವೂ ದೈವತ್ವದ ಸಂಕೇತಗಳು. ಸ್ವಯಂ ಶಕ್ತ ಮಾದರಿಗಳು. ಅದನ್ನು ಯೇಟ್ಸ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

“I passed along the waters’ edge below the humid trees.
My spirit rocked in evening light, the rushes round my knees
My spirit rocked in sleep and sighes: and saw the moorflow pace
All dripping on a grassy slope, and saw them cease to chese
Each other round in circles, and heard the eldest speak:
Who holds the world between his bill and made us strong or weak
Is an undying moorfowl, and he lives beyond the sky
The rains are from his dripping wing, the moonbeams from his eyes''

ಸಂಜೆಬೆಳಕಿನ ಹೊತ್ತಲ್ಲಿ ಒದ್ದೆ ಮರದ ಕೆಳಗೆ ನೀರಿನಂಚಿನಲ್ಲಿ ನಡೆಯುತ್ತಾ ಹೊರಟ ಕವಿಯ ಆತ್ಮ ನಿದ್ದೆ ನಿಟ್ಟುಸಿರಿನಲ್ಲಿ ತೂಗಾಡಿತ್ತಿತ್ತು. ಅಗ ಕವಿಯ ಕಣ್ಣಿಗೆ ಇಳಿಜಾರಿನಲ್ಲಿ ಹರಡಿದ ಹುಲ್ಲಿನ ಮೇಲೆ ಹನಿತೊಟ್ಟಕ್ಕುವ ಮೈಯಲ್ಲಿ ಒಂದಕ್ಕೊಂದು ಅಂಟಿಕೊಂಡ ಬಾತುಕೋಳಿಗಳು ಕಂಡವು. ಅದರಲ್ಲೊಂದು ಹಿರಿಯ ಬಾತು ನುಡಿಯುತ್ತಿದ್ದ ಮಾತು ಕವಿಗೆ ಕಿವಿಗೆ ಬೀಳುತ್ತದೆ.

“ನಮ್ಮನ್ನು ಶಕ್ತರನ್ನಾಗಿ ಅಶಕ್ತರನ್ನಾಗಿ ಮಾಡಿ ಈ ಜಗತ್ತನ್ನು ತನ್ನ ಚೊಂಚಲ್ಲಿ ಹಿಡಿದಿರುವವನು ಯಾರು ಗೊತ್ತೇ? ಅವನು ಅದೇ ಚೀರಂಜೀವಿಯಾದ ಬಾತು. ಅವನಿರುವುದು ಆಕಾಶದಾಚೆ, ಅವನ ಹನಿಯುವ ರೆಕ್ಕಗಳಿಂದ ಮಳೆಯೂ, ಅವನ ಕಣ್ಣುಗಳಿಂದ ಚಂದಿರನೂ ಹೊಳೆಯುತ್ತಾನೆ” ಎನ್ನುತ್ತದೆ ಅದು.

ಹೀಗೆ ಮುಂದೆ ಕವಿಗೆ ಕೇಳುವ ಕಮಲ ಮತ್ತು ಜಿಂಕೆಯ ಮಾತುಗಳು ಇದನ್ನೇ ಪ್ರತಿಧ್ವನಿಸುತ್ತದೆ. ಯೇಟ್ಸ ಪ್ರಕೃತಿಯ ರಮಣೀಯತೆಯನ್ನು ದೃಶ್ಯಕಾವ್ಯವಾಗಿಸುತ್ತಾನೆ. ಕವಿ ಮತ್ತೆ ಮುಂದುವರೆಯುತ್ತಾನೆ. ಅಗ ನವಿಲಿನ ಮಾತು ಕೇಳಿಬರುತ್ತದೆ.

I passed a little further on and heard a peocock say:
who made the grass and made the worms and made my feathers gay,
he is a monstrous peacock, and he waveth all the night
his languid tail above us, lit with myriad spots of light.

“ಈ ಹುಲ್ಲನ್ನು, ಹುಳಹುಪ್ಪಟೆಯನ್ನು ಮಾಡಿದವನೇ ನನ್ನ ಕುಣಿಯುವ ಗರಿಗಳನ್ನು ಮಾಡಿದ್ದಾನೆ. ಅವನೊಬ್ಬ ಅತಿದೊಡ್ಡ ನವಿಲು, ಹೊಳೆಯುವ ಬೆಳಕಿನ ಚುಕ್ಕಿಗಳನ್ನು ಹೊತ್ತು ರಾತ್ರಿಯಿಡಿ ನಮ್ಮ ಮೇಲೆ ತನ್ನ ಪುಕ್ಕವನ್ನು ಜೋಲಾಡಿಸುತ್ತಿರುತ್ತಾನೆ” ಎನ್ನುತ್ತದೆ ಆ ನವಿಲು.

ಈ ಕವಿತೆಯಲ್ಲಿ ಬರುವ ಈ ಎಲ್ಲ ಪಾಕೃತಿಕ ಪ್ರತಿಮೆಗಳು ದೇವರ ಸರ್ವವ್ಯಾಪಿ ಗುಣವನ್ನು, ಮತ್ತು ಸೃಷ್ಟಿಯ ಪ್ರತಿಯೊಂದು ಜೀವಿಯೂ ತನ್ನ ಮುಖಾಂತರವೇ ತನ್ನ ಕಾಣ್ಕೆಯನ್ನು ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಪ್ರತಿಧ್ವನಿಸುತ್ತವೆ. ಕುವೆಂಪು ಕೂಡಾ “ಸ್ವರ್ಗವೇ ಭೂಮಿಯೊಳಗಿರದಿರೆ ನೀನು” ಕವಿತೆಯಲ್ಲಿ ವೈಯಕ್ತಿಕ ದರ್ಶನವನ್ನು, ಕಾಣ್ಕೆಯನ್ನು ಉದಾಹರಿಸುತ್ತಾರೆ.

“ಸ್ವರ್ಗವೇ ಭೂಮಿಯೊಳಿರದಿರೆ ನೀನು
ಮೇಣೆಲ್ಲಿಯೂ ನೀನಿಲ್ಲಾ ಇಲ್ಲಾ!
ದೇವತೆಗಳು ನಾವಾಗಲಾರದಿರೆ
ಅಪ್ಸರೆಯರು ನಾವಾಗಲಾರದಿರೆ
ಅಪ್ಸರೆಯರು ಬೇರಿಲ್ಲಾ ಇಲ್ಲಾ!”

ಇದು ದೇವರು ಮತ್ತು ಸತ್ಯದ ನಿಜ ಸ್ವರೂಪವನ್ನು ಕಟ್ಟಿಕೊಡುತ್ತವೆ. ಪ್ರಕೃತಿಯ ಮಹತ್‌ನ್ನು ಅರಿತುಕೊಳ್ಳಲು, ಮತ್ತು ನಿಸರ್ಗವೇ ಬಹುದೊಡ್ಡ ಚೈತನ್ಯದ ಮಿಶ್ರಣ ಎಂಬುದನ್ನು ಮನಗಾಣಿಸುತ್ತದೆ. ಅಂತೆ ಮನುಷ್ಯ ಜಗತ್ತು ಅದರಲ್ಲೂ ಭಾರತೀಯರು ದೇವರಿಗೆ ಮನುಷ್ಯನ ಗುಣದೋಷಗಳನ್ನು ಸಮೀಕರಿಸಿ ದೇವತ್ವವನ್ನು ಉಪಮೀಕರಿಸುತ್ತಾರೆ. ಇತರ ಧರ್ಮಗಳಲ್ಲಿ ದೇವರು ನಿರಾಕಾರಿ. ಸರ್ವಶಕ್ತನಾಗಿದ್ದರೆ ಭಾರತೀಯರಿಗೆ ಮಾನವ ರೂಪಿ ರಾಮ, ಸೀತೆ, ಕೃಷ್ಣರೂ ದೇವರಾಗುತ್ತಾರೆ.

ಯೇಟ್ಸ್ ಭಾರತೀಯರು ದೇವರನ್ನು ಗ್ರಹಿಸುವ ಬಗೆಯನ್ನು ಈ ರೀತಿ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾನೆ. ಈ ಕವಿತೆಯಲ್ಲಿ ನಿಸರ್ಗದ ಬಾತು, ಕಮಲ, ನವಿಲು, ಜಿಂಕೆಗಳು ದೇವರಾಗುತ್ತವೆ.ಎಲ್ಲವೂ ಪ್ರಕೃತಿಯೊಂದಿಗೆ ತಮ್ಮ ದರ್ಶನವನ್ನು ಕಂಡುಕೊಳ್ಳುತ್ತವೆ. ಅವರವರ ಭಾವಕ್ಕೆ ತಕ್ಕಂತೆ ತ್ರಿಭುವನವನ್ನೂ ಒಳಗೊಳ್ಳುತ್ತವೆ. ತಮ್ಮ ಮಿತಿಯಲ್ಲಿಯೇ ಅಪರಿಮಿತವಾದದ್ದನ್ನು ಸಾಧಿಸುತ್ತವೆ ಎಂಬುದನ್ನು ಈ ಕವಿತೆ ಧ್ವನಿಸುತ್ತದೆ.

“ತನ್ನ ತಾನರಿದಂಗೆ ಭಿನ್ನ ಭಾವನೆಯಿಲ್ಲ,
ತನ್ನವರು ಇಲ್ಲ ಪರರಿಲ್ಲ
ತ್ರಿಭುವನ ತನ್ನೊಳಗೆ ಇಹುದು ಸರ್ವಜ್ಞ.” ಎಂದಿದ್ದಾನೆ ಸರ್ವಜ್ಞ.

ಆದರೆ ಇಂದಿನ ಬದುಕು ಆಡಂಬರದ ಭಕ್ತಿಯನ್ನು, ಭಕ್ತರನ್ನು ಪೋಷಿಸುತ್ತಿದೆ. ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ದೇವಸ್ಥಾನಗಳು, ಅಲ್ಲಿಯ ಪೂಜಾ ವಿಧಿವಿಧಾನಗಳು, ಕಂದಾಚಾರಗಳು ಒಂದೇ ಎರಡೇ.. ಒಂದು ರೀತಿಯ ಸಮೂಹ ಸನ್ನಿಯಂತೆ ಈ ದೇವಾಲಯ ಮಠ, ಚರ್ಚು,ಮಸೀದಿಗಳಿಗೆ ಎಡತಾಕುವ ನಾವುಗಳು. ದೇವರು ಧರ್ಮದ ಅಮಲು ಗೀಳಾಗಿ, ಕೀಳು ಅಭಿರುಚಿಯಾಗಿ ಹಲವು ವಿಕೃತಿಗಳಿಗೆ ದಾರಿಯಾಗುತ್ತಿದೆ. ಧರ್ಮದ ವ್ಯಸನ ಸಾಮಾಜಿಕ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಇದೊಂದು ರೀತಿಯಲ್ಲಿ ಹಗಲುಗುರುಡು ಅನ್ನಿಸುವುದಿಲ್ಲವೇ? ಇದು ಪೂರ್ವಾಗ್ರಹ ಪೀಡಿತ ನಂಬುಗೆಗಳ ಪರಿಣಾಮ. ಅವುಗಳ ಕಪಿಮುಷ್ಠಿಯಿಂದ ನಾವು ನಮ್ಮನ್ನು ಬಿಡಿಸಿಕೊಳ್ಳಬೇಕಾಗಿದೆ. ಸಹಜವೂ, ಸಮಗ್ರವೂ ಅದ ಮತ್ತು ಸರ್ವರಲ್ಲೂ ಇರುವ ದೈವತ್ವವನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಹೊಂದಬೇಕಾಗಿದೆ.

- ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಕವಿ ವಿಲಿಯಂ ವರ್ಡ್ಸ್‌ವರ್ತ್ ಸಾಹಿತ್ಯ ಪ್ರೇಮ
ಸ್ತ್ರೀತ್ವದ ಹಿರಿಮೆ ಸಾರುವ ಕಿಶ್ವರ ನಹೀದ ಕವಿತೆ “THE GRASS IS REALLY LIKE ME”
ಸಿಡಿಮದ್ದಿನ ದನಿ ಮಾಯಾ ಎಂಜೆಲ್ಲೋರ “I KNOW WHY THE CAGE BIRD SINGS''
ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ್ಲವಗಳು- ಹಕಲ್ಬರಿ ಫಿನ್
ಜನರೇಶನ್ ಗ್ಯಾಪ್‌ನ ಮೇಲೊಂದು ಟಿಪ್ಪಣಿ “ಫಾದರ್ ವಿಲಿಯಮ್” ಕವಿತೆ.
ಬ್ರೆಕ್ಟ್‌ನ ’THE CRUTCHES’ - ಪರಾವಲಂಬಿ ಬದುಕಿಗೆ ಒಂದು ಪಾಠ
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ

27-03-2023 ಬೆಂಗಳೂರು

'ಪಂಚಾಚಾರ ಶುದ್ಧವಾದ ಸದ್ಭಕ್ತನಿಗೆ ಮಾತ್ರ ಕಾಯಕ ಒಲಿಯುತ್ತದೆ. ಆದುದರಿಂದ ಕಾಯಕವೆಂದರೆ ಕೇವಲ ವೃತ್ತಿಯಲ್ಲ, ದುಡಿಮೆ...

ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.

26-03-2023 ಬೆಂಗಳೂರು

''ನಾನು ಓದಿಲ್ಲವಾದ್ದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಗೊತ್ತಿಲ್ಲ. ಯಾರನ್ನಾದರೂ ಕೇಳಿಕೊಂಡು ಮಾಡಿ...

ತೋರುಗವೆಂಬ ಮಾಯಕ

25-03-2023 ಬೆಂಗಳೂರು

''ಸಾಮಾನ್ಯವಾಗಿ ಇವುಗಳನ್ನು ದೂರ ಎಂಬ ಪರಿಕಲ್ಪನೆಯ ಮೇಲೆ ಕನ್ನಡದಲ್ಲಿ, ದ್ರಾವಿಡದಲ್ಲಿ ರೂಪಿಸಿಕೊಂಡಿದೆ. ಸಮೀಪ...