‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು

Date: 21-05-2021

Location: ಬೆಂಗಳೂರು


‘ಉತ್ತರ ಕನ್ನಡ ನೆಲದ ಪಕ್ಕಾ ಆಡು ಭಾಷೆಯ, ಕೇಳದಿರದ, ಮಾಸಿ ಹೋಗಿ ಬಿಡುವ ಅಪಾಯವಿರುವ ಅಷ್ಟೂ ಶಬ್ದಮಣಿಗಳ ಭಂಡಾರವು “ಬಯಲರಸಿ ಹೊರಟವಳು” ಕೃತಿಯ ಕತೆಗಳಲ್ಲಿ ತೆರೆದುಕೊಳ್ಳುತ್ತವೆ’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ತಮ್ಮ ‘ಅನಂತಯಾನ’ ಅಂಕಣದಲ್ಲಿ ಈ ಕೃತಿ ಕಟ್ಟಿಕೊಡುವ ನೆನಪುಗಳು, ಪ್ರಾದೇಶಿಕ ಸೊಗಡು ಎಲ್ಲವುಗಳ ಕುರಿತು ವಿಶ್ಲೇಷಿಸಿದ್ದಾರೆ.

ಅದೊಂದು ದಿನ ಸಂಜೆ ಎಸ್.ದಿವಾಕರ್ ಸರ್ ಹಾಗೂ ಜಯಶ್ರೀ ಅಕ್ಕನವರ ಮನೆಯಲ್ಲಿದ್ದೆ. ಕತೆ-ಸಾಹಿತ್ಯ-ಸಂಗೀತದ ಕುರಿತಾಗಿ ದಿವಾಕರ್ ಸರ್ ಅವರೊಂದಿಗೆ ಮಾತುಕತೆಯು ಮುಂದುವರಿದಿತ್ತು. ಅಗಾಧ ಜ್ಞಾನ, ತಿಳಿವಿನ ಗಣಿ ಅವರು. ಪಕ್ಕದಲ್ಲಿ ಎಂದೂ ಬತ್ತದ ಜಯಶ್ರೀ ಅಕ್ಕನ ಪ್ರೀತಿಯೂ. ಸರಿಯಾದ ಪ್ರಮಾಣದಲ್ಲಿ ಹಾಲು-ಡಿಕಾಕ್ಷನ್ ಬೆರೆಸಿ ಜಯಶ್ರೀ ಅಕ್ಕ ತಂದ ಹಬೆಯಾಡುವ ಕಾಫಿಯನ್ನು ಹೀರುತ್ತಾ ಮಾತನಾಡುತ್ತಿರುವಾಗ-ಸರ್ ಮತ್ತು ಅಕ್ಕ ಇಬ್ಬರೂ ಒಟ್ಟಿಗೇ, "ಛಂದ ಪುಸ್ತಕ ಬಹುಮಾನ ಪಡೆದ ‘ಛಾಯಾ ಭಟ್’ ಅವರ ‘ಬಯಲರಸಿ ಹೊರಟವಳು’ ಕೃತಿಯು ಓದಲೇ ಬೇಕಾದದ್ದು..ನೀವು ತಪ್ಪದೆ ಓದಿ.." ಎಂದು ಹುಕುಂ ಮಾಡಿದರು. ಮರುದಿನ 'ನವ ಕರ್ನಾಟಕ'ದಿಂದ ‘ಥಟ್..’ ಎಂದು ‘ಬಯಲರಸಿ ಹೊರಟವಳನ್ನು' ತರಿಸಿಕೊಂಡೆ. ಒಟ್ಟು ಹತ್ತು ಕತೆಗಳಿರುವ ಸಂಕಲನವಿದು. ಉತ್ತರ ಕನ್ನಡ ನೆಲದ ಪಕ್ಕಾ ಆಡು ಭಾಷೆಯ, ಕೇಳದಿರದ, ಮಾಸಿ ಹೋಗಿ ಬಿಡುವ ಅಪಾಯವಿರುವ ಅಷ್ಟೂ ಶಬ್ದಮಣಿಗಳ ಭಂಡಾರವು ಇಲ್ಲಿನ ಕತೆಗಳಲ್ಲಿ ತೆರೆದುಕೊಳ್ಳುತ್ತದೆ.

ಹಾಗೆ ಬಯಲರಸಿ ಹೊರಟವಳ ಜೊತೆಯಲ್ಲಿ ಸಾಗುವಾಗ ಕಂಡದ್ದು: 'ನೆರೆ' ಕತೆಯಲ್ಲಿ ಬರುವ ಭಾಮಕ್ಕ ಮತ್ತು ಮಾಸ್ತರ ಪಾತ್ರಗಳು ತಲೆಯಲ್ಲಿ ಅಚ್ಚಾಗಿ ಕುಳಿತುಕೊಳ್ಳುತ್ತವೆ. ಮಾಸ್ತರರ ಪರವಾಗಿ ಊರ ಮಂದಿಯ ವಿರೋಧದ ನಡುವೆಯೂ ಮಾತನಾಡುವ ಭಾಮಕ್ಕಳ ಸಣ್ಣ ಬುದ್ದಿಯು ಊಟ ಬಡಿಸುವಾಗ ಆಕೆಯ ಕೈ ಗಿಡ್ಡವಾಗುವುದರಲ್ಲಿ ಕಂಡು ಬರುವ ಅಪ್ಪಟ ಚಿತ್ರಣವಿದೆ. ಸಾಮಾಜಿಕ ಭೇದಗಳನ್ನು, ಚೌಕಟ್ಟುಗಳನ್ನು ಮುಳುಗಿಸಿದ ನೆರೆಯು, ಎಲ್ಲರನ್ನೂ ಒಂದೇ ಸೂರಡಿಯಲ್ಲಿ ತಂದು ಪ್ರತಿಯೊಬ್ಬರೂ ಉಸಿರಾಡುವುದು ಒಂದೇ ಗಾಳಿ ಎನ್ನುವುದನ್ನು ತೋರಿಸಿಯೂ ಕೊಡುತ್ತದೆ. ನೆರೆ ಸೃಷ್ಟಿಸಿದ ಪರಿಸ್ಥಿತಿಯೊಳಗೆ ಎಲ್ಲರೂ ಏಕ ಸೂರ ಕೆಳಗೆ ಬಂದು ಸಮಾನರಾಗುತ್ತಾರೆ. ಕುಂಬಾರ ಗದ್ದೆಯ ಪಂಚಾಯಿತಿಯಲ್ಲಿ ಮಾಸ್ತರರ ಧ್ವನಿಯಾಗಿ ಭಾಮಕ್ಕ ಮಾತನಾಡುತ್ತಾಳೆ. ರಾತ್ರಿಯಿಡೀ ನಿದ್ದೆಗೆಟ್ಟು ಪಂಚಾಯಿತಿ ಮಾಡಿದ ಜನರು ಉಗ್ರಾಣದಲ್ಲಿ ಕೂರು ಬಡಿದರೆ; ಹುಣಸೇ ಮರದ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನೆರೆಯು ಪರಿಹರಿಸಿ ಮತ್ತೊಂದಿಷ್ಟು ಗೊಂದಲವನ್ನು ನಿರ್ಮಿಸಿ ಬಿಡುತ್ತದೆ. ಕತೆಯ ಕೊನೆಯಲ್ಲಿ ಉಪ್ಪಿನ ಮರಿಗೆ ಚೆಲ್ಲಿ ಹೋಗುವುದು ಅನೇಕ ಸಂದೇಶಗಳನ್ನು ಹೊಮ್ಮಿಸುತ್ತದೆ. ಕಂಬಳಿ ಕೊಪ್ಪೆ ಹೊದ್ದು ಓದುವ ಅನುಭವವನ್ನು 'ನೆರೆ' ಕತೆಯು ಕೊಡುತ್ತದೆ.

ಭಾಷೆ-ಆಡುಭಾಷೆ, ಮನೆಭಾಷೆ, ಅಟ್ಟದ ಭಾಷೆ, ಪ್ರದೇಶದ ಭಾಷೆಗಳ ತುಂಬಾ ಕಾಣುವ ಆಡು ಮಾತಿನ ಗ್ರಾಮ್ಯ ಶಬ್ದಗಳ ಸೊಗಡುಗಳು ನಿಜಕ್ಕೂ ಅಪೂರ್ವವಾದದ್ದು. ಒಂದು ಊರಿನ ಆಡು ಮಾತುಗಳಿಂದ ಹೆಣೆಯಲಾದ, ಹೇಳಲಾಗುವ ಕತೆಯು ಬದುಕಲ್ಲಿ ಕಳೆದುಕೊಂಡ ಯಾವುದೋ ಒಂದನ್ನು ಮತ್ತೆಮತ್ತೆ ನೆನಪಿಸಲು ಸಹಕರಿಸುತ್ತವೆ. ಅಂತಹ ಭಾಷೆ ಮತ್ತದರ ಪದಪುಂಜಗಳು ಮರೆತದ್ದನ್ನು ಮರಳಿ ಪಡೆಯುವ ಸಾಹಸ ಕಾರ್ಯಕ್ಕೆ ಟ್ರಿಗ್ಗರ್ ಆಗಿ ಬಿಡುತ್ತದೆ. ಹೀಗೆ ನಾವು ಓಡಾಡಿದ ಮಣ್ಣಿನ ಭಾಷೆ, ಶಬ್ದಪ್ರಯೋಗ, ಪರಿಸರವೆಲ್ಲವೂ ಕತೆಯಲ್ಲಿ ಕಾಣಿಸಿಕೊಂಡರೆ- ಅಲ್ಲೆಲ್ಲ ನಾವೂ ಸಂಚರಿಸಿ, ಆ ಪಾತ್ರಗಳ ಜೊತೆಯಲ್ಲೇ ನಡೆನಡೆದು..ಅವುಗಳಾಡುವ ಗ್ರಾಮ್ಯದ ಬೆರಗಿಗೆ ಸೋತೇ ಹೋಗಿ ಬಿಡುತ್ತೇವೆ. ಆ ಗಳಿಗೆಯಲ್ಲಿ ನಿಜಕ್ಕೂ ನಾವು ನಾವಾಗಿ ಬಿಟ್ಟಿರುತ್ತೇವೆ. ಮನೋಸಂಚಾರ ಮುಗಿಸಿ ಮತ್ತದೇ ರಾಗ, ತಾಳಕ್ಕೆ ಜೋತು ಬಿದ್ದಾಗ- ಊರು, ಭಾಷೆ, ಪಾತ್ರಗಳು ಕಟ್ಟಿಕೊಟ್ಟ ಭಾವುಕತೆಯು ಅಲೆಗಳಾಗಿ ಮನಸ್ಸಿನ ತೀರಕ್ಕೆ ಅಪ್ಪಳಿಸುತ್ತವೆ. ದಡದಲ್ಲಿ ಕುಳಿತವನಿಗೆ ದೊರಕುವ ಅಂತಹ ಸುಖದ ಅನುಭವವನ್ನು ಇಲ್ಲಿಯ ಕತೆಗಳು ನೀಡುತ್ತವೆ.

ಅತ್ತೆ-ಸೊಸೆಯ ಜಗಳ ಸಾರ್ವಕಾಲಿಕವಾದದ್ದು. ಅಂತಹ ಒಂದು ಬದುಕಿನೊಳಗೆ-ತಾನು ಹೇಳಿದ್ದೇ ನಡೆಯಬೇಕೆನ್ನುವ ಮನಸ್ಥಿತಿಯ ಅತ್ತೆ ಹಾಗೂ ಆಧುನಿಕ ಮನಸ್ಸಿನ ಸೊಸೆಯ ನಡುವಿನ ಸಂಘರ್ಷವನ್ನು 'ತೊಟ್ಟು ಕಳಚಿದ ಹೂವು' ಕತೆಯಲ್ಲಿ ಕಾಣಬಹದು. ಹೆದರಿಸುವ ತಂತ್ರವಾಗಿ ಬಾವಿಗಿಳಿಯುವ ಅತ್ತೆ/ಅಬ್ಬೆ ಪಾತ್ರ-ತನ್ನ ತಾಯಿಯನ್ನು ಊರವರ ಸಹಾಯದಿಂದ ‘ಕುಟ್ಟ’ ಬಾವಿಯಿಂದ ಮೇಲಕ್ಕೆತ್ತುತ್ತಾನೆ. “ಬೇಡವೆಂದರೂ ಅಪ್ಪನ ಜ್ಯೋತಿಷ್ಯದ ಮಾತನ್ನು ಕೇಳಿ ಸೊಸೆಯನ್ನಾಗಿ ಸುಮತಿಯನ್ನು ತಂದೆನ್ನಲ್ಲೋ” ಎಂದು ಕುಟ್ಟನ ತಾಯಿ ಬಾವಿಯಿಂದ ಮೇಲಕ್ಕೆ ಬಂದದ್ದೇ ಆಡಲು ಶುರು ಹಚ್ಚಿಕೊಳ್ಳುತ್ತಾಳೆ. ಒಟ್ಟಿಗೆ “ಸೊಸೆಯಲ್ಲ ಅವಳು, ತಾಟಕಿ ಮೋಹಿನಿ” ಎಂಬ ಡಯಲಾಗನ್ನೂ. ಅಲ್ಲಿಗೆ ಒಂದು ಸೀನ್ ಕ್ರಿಯೇಟ್ ಆಗಿ ಬಿಡುತ್ತದೆ. ಗಂಡನ ಕೈಯಿಂದ ಏಟು ತಿಂದ ಸುಮತಿಯು-“ಇವರು ಏನಾದರೂ ಮಾಡಿಕೊಂಡು ಸಾಯಲಿ”- ಸುಮ್ಮನಾಗುತ್ತಾಳೆ. ಅಷ್ಟಕ್ಕೂ ವಿಷಯ ಇಷ್ಟೇ- ಗಂಡು ಕರುವನ್ನು ಇರಿಸಿಕೊಳ್ಳುವ ಕುರಿತಾದದ್ದು. ಗುಡ್ಡದ ತುದಿಗೆ ಕಟ್ಟಿ ಬಂದರೆ ಯಾವ ಪಾಪವೂ ಇಲ್ಲ ಎನ್ನುವ ಅತ್ತೆ. ಅಲ್ಲಿ ಕಟ್ಟಿದ ಕರುವನ್ನು ನರಿ, ನಾಯಿ,ತೋಳವು ಕಚ್ಚಿ ತಿನ್ನುವ, ಹೊಟ್ಟೆಗಿಲ್ಲದೆ ಬಡಕಲಾಗಿ ಸಾಯುವ ಬದಲು ‘ನಾರ್ಣಿ’ಗೆ ಮಾರಿದರೆ ಅವನು ನಡೆಸುವ ಗೋಬರ್ ಗ್ಯಾಸ್ ಉದ್ಯಮಕ್ಕೆ ಸಹಾಯವಾದರೂ ಆಗುತ್ತದೆ ಎನ್ನುವ ಸೊಸೆ. ಕರುವನ್ನು ನಾರ್ಣಿಗೆ ಕೊಟ್ಟರೆ ಅದನ್ನು ಮಾಂಸದಂಗಡಿಗೆ ಮಾರುತ್ತಾನೆ ಎನ್ನುವ ಅತ್ತೆ. ಈ ಅಭಿಪ್ರಾಯಗಳ ನಡುವೆ ‘ಕುಟ್ಟ’ ಹೈರಾಣಾಗುತ್ತಾನೆ. ವಿಷಯ ತಾರಕಕ್ಕೇರಿ ಒಂದು ಹಗಲು ಕರುವಿನೊಂದಿಗೆ ಕುಟ್ಟನ ತಾಯಿ ಕಾಣೆಯಾಗುತ್ತಾಳೆ. ಜ್ಯೋತಿಷ್ಯದಲ್ಲಿ ನಂಬಿಕೆ ಇಲ್ಲದ ಕುಟ್ಟ ನಿರ್ವಾಹವಿಲ್ಲದೆ ಜ್ಯೋತಿಷ್ಯಕ್ಕೆ ಮೊರೆ ಹೋಗುತ್ತಾನೆ. ಅದೂ ಅವನ ಅಪ್ಪ ದತ್ತಣ್ಣನಿಂದ ಅಷ್ಟಿಷ್ಟನ್ನು ಕೇಳಿ, ಯಾಚಿಸಿ ಕಲಿತ ಕುಂಬಾರಗುಂಡಿಯ ಸುಭ್ರಾಯ ಜ್ಯೋತಿಷಿಯಿಂದ ಎನ್ನುವ ವಿಪರ್ಯಾಸವು ನಂಬಿಕೆಗೆ ಆಸರೆಯಾಗಿ ಬಿಡುತ್ತದೆ. ‘ಎಷ್ಟಾದರೂ ತನ್ನ ಅಪ್ಪನನ್ನು ನೋಡಿ ನೋಡಿ ಕಲಿತವನಲ್ಲವೇ ಆತ’ ಅಂದುಕೊಳ್ಳುವ ಕುಟ್ಟ ಪರಿಸ್ಥಿಗೆ ತಕ್ಕಂತೆ ಜ್ಯೋತಿಷಿ ಹೇಳುವವನೇ ಅವನು ಎಂಬ ಖಾತ್ರಿ ಮೂಡಿದ್ದೇ- ಬೇರೆ ದಾರಿ ಕಾಣದೆ ಅಬ್ಬೆಯನ್ನು ಹುಡುಕಲು ಸುಭ್ರಾಯ ಜ್ಯೋತಿಷಿಯ ಬಳಿಗೆ ಓಡುತ್ತಾನೆ. ಪರಿಸ್ಥಿತಿಯು ಸೃಷ್ಟಿಸುವ ಗೋಜಲು ನಂಬದಿರುವುದನ್ನೂ ನಂಬುವಂತೆ ಮಾಡಿ ಬಿಡುತ್ತದೆ ಎನ್ನುವುದು ಸುಳ್ಳಲ್ಲವೆಂದು 'ತೊಟ್ಟು ಕಳಚಿದ ಹೂವು' ಕತೆ ನಿರೂಪಿಸುವುದರ ಜೊತೆಗೆ . ಸಹಜವಾಗಿ ಮೂಡಿ ಬಂದ ಪಾತ್ರಗಳು ಗಟ್ಟಿಯಾಗಿ ಕುಳಿತುಕೊಳ್ಳುತ್ತವೆ.

ಮೊದಲ ಓದಲ್ಲೇ ಕತೆಯು ತಟ್ಟುವಂತಿರಬೇಕು. ಮನಸ್ಸಿನಾಳಕ್ಕೆ ಇಳಿಯುವಂತಿರಬೇಕು. ಅಂತಹ ಕತೆಗಳು ಕಾಡುತ್ತಲೂ, ಆಡುತ್ತಲೂ, ಬೆಳಕಾಗುತ್ತಲೂ ಇದ್ದು ಬಿಡುತ್ತವೆ. ಯಾವುದೇ ಪಂಥ, ನಿಲುವು, ವಾದ, ನೆಲೆಗಟ್ಟು, ಸಂಪ್ರದಾಯ,ಪರಂಪರೆಗಳ ಚೌಕಟ್ಟಿನ ಭಾರ ಕತೆಗಳಿಗೆ ಇರಬಾರದು. ಕತೆಯ ಮೂಲ ಉದ್ದೇಶ ಮುದಗೊಳಿಸುವುದು. ಅಷ್ಟೇ. ಕತೆ ಬರೆದ ಮನಸ್ಸಿನ ಹಿಂದಿನ ಸ್ಥಿತಿಗತಿಯನ್ನು ಅವಲೋಕಿಸ ಹೊರಟರೆ ವಿಮರ್ಶೆಯ ಅಡಿಗೋಲುಗಳು, ತರ್ಕದ ಕಟ್ಟುಪಾಡುಗಳು ಕತೆಯನ್ನು ಆವರಿಸಿಕೊಂಡು ಬಿಡುತ್ತವೆ. ಅಲ್ಲಿಗೆ ಕತೆಯನ್ನು ನಾವು ನಾವಾಗಿ ಓದಲಾಗದೆ- ಅಡಿಗೋಲುಗಳ, ಕಟ್ಟುಪಾಡುಗಳಡಿಯಲ್ಲಿ ಓದಬೇಕಾದ ಸ್ಥಿತಿಯೊಂದರ ನಿರ್ಮಾಣವಾಗಿ ಸ್ವಂತ ಓದಿನ ಸುಖದ ಅನುಭವವನ್ನು ಕಳೆದುಕೊಂಡು ಬಿಡಬೇಕಾಗುತ್ತದೆ.

'ಬಯಲರಸಿ ಹೊರಟವಳು' ಕತೆಯ ಪಾತಿಚಿಕ್ಕಿಯ ಪಾತ್ರವು ವಿಶಿಷ್ಟವಾದದ್ದು. ಪ್ರಸಾದವನ್ನು ಸ್ವೀಕರಿಸಿಯೇ ಭಕ್ತಿಯನ್ನು ಸಾಬೀತು ಪಡಿಸಬೇಕೆಂದೇನಿಲ್ಲ ಎನ್ನುವ ಪಾತಿಚಿಕ್ಕಿ ಅವಳಾಗಿಯೇ ಇದ್ದಂತಹ ಗಟ್ಟಿಗಿತ್ತಿ ಹೆಂಗಸು. ನಂಬಿಕೆಯನ್ನು ಅಲ್ಲಾಡಿಸುವ ಘಟನೆಗಳು ನಡೆದಾಗ ಕಲ್ಲಿಗೆ ಮಾತಾನಾಡಲಾಗದೆ ಒರಟೊರಟಾಗಿ ಆಡುವ ಪಾತಿಚಿಕ್ಕಿ ಸುಮುಹೂರ್ತದಲ್ಲಿ ಊರವರ ಮುಂದೆ ದೈವತ್ವಕ್ಕೇರಿ ಬಿಡುತ್ತಾಳೆ. ಅರಸುತ್ತಾ ನಡೆವಾಗ ಬುಗರಿ ಹಣ್ಣನ್ನು ಮಾರುವ ರುಕ್ಕುಬಾಯಿ, ಮನೆ ಬಿಟ್ಟು ಹೋಗುವ ಪಾತಿಚಿಕ್ಕಿಯ ಗಂಡ, ಕೊನೆಯ ಕ್ಷಣಗಳ ಇದಿರು ನೋಡುವ ಚಿಕ್ಕಿಯ ಅಪ್ಪ ಗೋಪಾಲಜ್ಜ, ಅಡುಗೆಯ ಮಾದೇವಿ ಪಾತ್ರಗಳೆಲ್ಲವೂ ಭಿನ್ನವಾಗಿ ತಂತಮ್ಮ ಪಾತ್ರವನ್ನು ಇರುವಂತೆಯೇ ನಿಭಾಯಿಸಿದ್ದೆಂದು ಅನಿಸಿಬಿಡುತ್ತದೆ. ಎಲ್ಲವನ್ನೂ ತೊರೆದು ನಡೆಯುವ ನಡೆಯ ಹಿಂದಿನ ಕಾರಣ ಮಾತುಗಳಲ್ಲಿ ಹಿಡಿದಿಡುವುದು ಸುಲಭವಲ್ಲ. ಎಷ್ಟೇ ಮನಸ್ಸು ಬಿಚ್ಚಿ ಆಡಿಕೊಂಡೆನೆಂದರೂ ಒಂದಷ್ಟು ಹೇಳದೆ ಉಳಿದದ್ದು ಒಳಗೆ ಇದ್ದೇ ಇರುತ್ತದೆ. ಋಣವೆಂಬ ಭಾರದಿಂದ ಕಳಚಿ ಗಂಗೆಯ ತಟದಲ್ಲಿರುವ ತನ್ನ ಗಂಡನನ್ನು ಹುಡುಕಲು ಪಾತಿಚಿಕ್ಕಿ ದಿಢೀರನೆ ಹೊರಟು ನಿಲ್ಲುತ್ತಾಳೆ. ಜನರ ಕಷ್ಟಕ್ಕಾಗಿ ಬಂದ ದೇವತೆ ಯಾವ ಸುಳಿವೂ ನೀಡದೆ ವಾರಣಾಸಿಗೆ -ಬಯಲರಸಿ ಹೊರಡುತ್ತಾಳೆ.

"ಕೋಲ್ಮಿಂಚು, ಆ ಕಡುಗಪ್ಪು ಕಣ್ಣುಗಳು, ಸುಳಿ..., ಹೂಸುಗಂಟು, ಶುಭ್ರಜ್ಯೋತ್ಸ್ನೆ, ಹುಲ್ಲಾಗು ಬೆಟ್ಟದಡಿ, ಮಾಕಬ್ಬೆ" ಕತೆಗಳು ತುದಿಗಾಲಲ್ಲಿ ನಿಲ್ಲಿಸಿ ಬಿಡುತ್ತವೆ.

ಕತೆಯು ಕೇವಲ ಕತೆ ಮಾತ್ರವಾಗಿರದೆ ಅದು ನಮ್ಮ ಮನೋನಗರಿಯಲ್ಲಿ ಸಂಚರಿಸುವ ನಮ್ಮದೇ ಒಂದು ಭಾಗವಾಗಿರುತ್ತದೆ. ಅದನ್ನು ದಾಟಿಸುವ ಬಗೆ ಭಿನ್ನವಾಗಿರುವುದುಂಟು. ತಪ್ಪಿಲ್ಲ. ಕತೆ ಹೇಳುವ ವಿಧಾನವು ಪರಿಷ್ಕಾರಗೊಳ್ಳುತ್ತಲೇ ಇದೆಯಲ್ಲ. ಹಾಗಾಗಿ ಇಂದು ಹೀಗಿರುವುದು ನಾಳೆಯೂ ಹಾಗೇ ಇರಬೇಕೆಂದೇನೂ ಇಲ್ಲ. ವಿಷಯದ ಗ್ರಹಿಕೆಗಳು, ಕಥನ ಕ್ರಮ, ಕತೆ ಕಟ್ಟುವ ರೀತಿಗಳಲ್ಲಿ ಭಿನ್ನತೆ ಇರುತ್ತದೆ. ಸಿದ್ದ ಸೂತ್ರಗಳಿಂದ ಹೊರಕ್ಕೆ ಚಾಚಿ ಸರಳ, ಸುಂದರ ರೂಪಕಗಳ ಮೂಲಕ ಕತೆಯನ್ನು ಹೊಸೆಯಬೇಕು. ಸುತ್ತಿ ಬಳಸದೆ, ಬಹು ಬಣ್ಣದ ಚಾದರವನ್ನು ಹೊದೆದುಕೊಳ್ಳದೆ ಹೇಳುವ ಕತೆಗಳು ಸಹಜತೆಯಿಂದ ಕೂಡಿರುತ್ತವೆ. ಕತೆ ಹೇಳಬೇಕೆಂಬ ತುಡಿತವಿದೆ ನೋಡಿ ಅದು ಮುಖ್ಯವಾಗಬೇಕು. ಅಂತಹ ತಹತಹಗಳಿಂದ ಮೂಡಿದ ಕತೆಗಳು ಪಟ್ಟನೆ ಮನಸ್ಸಿಗೆ ನಾಟುತ್ತವೆ. ಆ ಕತೆಗಳು ಬಹಳಷ್ಟು ಕಾಲ ನಮ್ಮೊಳಗಿದ್ದು ಬಿಡುತ್ತವೆ. ಕತೆಗೆ ವಸ್ತುವೇ ಜೀವಾಳ..ಭಾವುಕತೆಯೇ ಹರಿಗೋಲು..ಹಾಗೆಂದು ತಿಳಿದು ಅರಸುತ್ತಾ ಹೊರಟವನಿಗೆ ಸಿಕ್ಕವಳೇ- 'ಬಯಲರಸಿ ಹೊರಟವಳು'.

'ಕುಮಟೆ' ಸರ್ಕಾರಿ ಬಸ್ ನಿಲ್ದಾಣದಲ್ಲಿ ಇಳಿದು ಅಘನಾಶಿನಿಗೆ ಹೋಗುವ ಬಸ್ಸಿಗೆ ಕಾಯಲು- ಗಂಟೆಗೊಂದರಂತೆ ಅಥವಾ ಮನಸ್ಸಿಗೆ ತೋಚಿದಾಗ ಬರುವ ಸರ್ಕಾರಿ ಬಸ್ಸುಗಳು ತಾಳ್ಮೆಯ ಕಟ್ಟೆಯನ್ನು ಅದಾಗಲೇ ಒಡೆದು ಬಿಟ್ಟಿರುತ್ತದೆ. ಅಂತಹ ಗಳಿಗೆಯಲ್ಲಿ, "ಎಲ್ಲಿಗೆ? ಬರ್ತೀರಿss..?" ಎಂದು ಕತ್ತನ್ನು ಹೊರ ಚಾಚಿ ಬಲಗೈಯಲ್ಲಿ ರಿಕ್ಷಾದ ಎಕ್ಸಿಲೇಟರ್ ಅನ್ನು ‘ಟುರ್..ಟುರ್..’ ಎಂದು ತಿರುಪುತ್ತಾ ಶೇರಿಂಗ್ ರಿಕ್ಷಾದ ಡ್ರೈವರ ಕೇಳುತ್ತಾನೆ. ಲಗ್ಗೇಜನ್ನು, ಜೊತೆಗಿರುವವರನ್ನು ಕಟ್ಟಿಕೊಂಡು ನಾಲಕ್ಕರ ಜೊತೆಗೆ ಆರಾಗಿ ಕುಳಿತುಕೊಂಡು ಹೋಗುವುದಕ್ಕಾಗದೆ ರಿಕ್ಷಾವನ್ನು ಸಾಗ ಹಾಕುತ್ತೇನೆ. ಅಷ್ಟರಲ್ಲಿ ಜೋರಾದ ಹಾಡನ್ನು ಹಾಕಿಕೊಂಡು, ಖುಷ್ಬೂ-ರಂಭಾಳ ಫೋಟೊವನ್ನು ಅಂಟಿಸಿದ, ತುಸು ಹೆಚ್ಛೇ ಶೃಂಗರಿಸಿಕೊಂಡ ಟೆಂಪೋ ರೊಯ್ಯನೆ ಬಂದು ನಿಂತು 'ಪೊಂ... ಪೊಂ..' ಎಂದು ಹಾರ್ನು ಹಾಕಿ ಹೊಗೆಯನ್ನು ಕಾರುತ್ತಾ ನಿಂತಿರುತ್ತದೆ. ಒಳಗಿನ ಕುಳ್ಳ ದೇಹವೊಂದು, “ಅಘನಾಶಿನಿ-ಬಾಡ-ಅಘನಾಶಿನಿ”- ಕೂಗು ಹಾಕುತ್ತದೆ. ಅದನ್ನು ಕೇಳಿದ್ದೇ ರಪರಪನೆ ಲಗ್ಗೇಜ್ ಸಮೇತ ಪುಸುಕ್ಕನೆ ಟೆಂಪೊದೊಳಗೆ ಹೊಕ್ಕು ಎಡ ಬದಿಯ ಸೀಟಲ್ಲೇ ಆಸೀನನಾಗಿ ಬಿಡುತ್ತೇನೆ. ಮೂರ್ಕಟ್ಟೆಯ ಮಾರುಕಟ್ಟೆಯನ್ನು,ಕಾಮತರ ಹೆಂಚಿನ ಅಂಗಡಿಯನ್ನು, ಮಣಿ ಮಣಿ ಸರಗಳಿಂದ ಕತ್ತನ್ನು ಸಿಂಗರಿಸಿಕೊಂಡು ಬಸಳೆ,ಹರಿವೆ,ಬದನೆ, ಪಟ್ಲಾಕಾಯಿಯನ್ನು ಮಾರುವ ಹಾಲಕ್ಕಿ ಸೌಂದರ್ಯವನ್ನು ಕಣ್ಣೊಳಗಿಳಿಸಿಕೊಳ್ಳುತ್ತಾ.. ಚೌಡಿಗುತ್ತಿ, ಜಟಗನ ಮನೆಗಳನ್ನೂ ದಾಟುತ್ತಾ ಹೋದಂತೆ ಕಲ್ಲು-ಮರಗಳನ್ನೂ ಬಿಡದೆ ಮೆತ್ತಿಕೊಂಡ ಅರಶಿನ ಕುಂಕುಮವು ದಾರಿಯುದ್ದಕ್ಕೂ ಕಣ್ಣಿಗೆ ರಾಚುತ್ತವೆ. ದೇಹ-ಮನಸ್ಸುಗಳನ್ನು ಹೊತ್ತುಕೊಂಡು; ಮೂರ್ಕಟ್ಟೆ, ಸರ್ಕಾರೀ ಆಸ್ಪತ್ರೆ, ಹಳಕಾರು, ಕಡ್ಲೆ, ಹೊಲನಗದ್ದೆ, ಗುಡೇಅಂಗಡಿ, ಬಾಡ, ಕಾಗಾಲ,ಅಘನಾಶಿನಿಯತ್ತ ಚಲಿಸುವ ಟೆಂಪೋದೊಳಗೆ ನಾನೂ.

ಪ್ರಯಾಣದ ಉದ್ದಕ್ಕೂ ಎಡಕ್ಕೆ ಕಾಣ ಸಿಗುವ ಕಡಲು, ಸುಯ್ಯನೆ ಸದ್ದಿಸುತ್ತಾ ಬೀಸುವ ಗಾಳಿಮರ, ಕಡಲು ತೇಲಿಸುವ ಮೀನಿನ ವಾಸನೆ, ಟಾರ್ ರಸ್ತೆಯ ಬದಿಯಲ್ಲಿ ಶರಧಿಯು ಉಕ್ಕೇರಿದ ಕುರುಹುಗಳು.. ಮಳೆಗಾಲವಾದರೆ ಕೇಳುವುದೇ ಬೇಡ.. ಸಮುದ್ರ ಬದಿಯಲ್ಲಿ ಉಬ್ಬು ತಗ್ಗುಗಳ ರೂಪದಲ್ಲಿ ಮಲಗಿರುವ ಬಂಡೆ, ಮರಳುಗಳನ್ನು ಕಂಡಾಗ ಮರುಳಾಗದಿರುವುದಾದರೂ ಹೇಗೆ? ಮರೆತೇ ಹೋಗಿದ್ದ ಇವೆಲ್ಲವೂ ಬಯಲರಸಿದಾಗ ನೆನಪಾಯಿತು. ಜೊತೆಗೆ ಆಡು ಭಾಷೆಯಲ್ಲಿ ಪೋಣಿಸಿದ ಶಬ್ದಮಣಿಗಳು ನನ್ನ ಭಾವಕೋಶವನ್ನು ತಟ್ಟಿ ಬಿಟ್ಟವಲ್ಲ ಛಾಯ ಭಟ್ ಅವರೇ…ಅಷ್ಟಕ್ಕೇ ನಿಮಗೊಂದು ಪ್ಯಾರ್ ಕಾ ಸಲಾಂ..!

ಬಯಲರಸಿ ಹೊರಟವಳು ಕೃತಿಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈ ಅಂಕಣದ ಹಿಂದಿನ ಬರೆಹಗಳು:
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...