ಬಯಲರಸಿ ಹೊರಟವರು

Author : ಛಾಯಾ ಭಟ್

Pages 125

₹ 120.00




Year of Publication: 2020
Published by: ಛಂದ ಪುಸ್ತಕ
Address: ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76
Phone: 9844422782

Synopsys

‘ಬಯಲರಸಿ ಹೊರಟವರು’ ಛಾಯಾ ಭಟ್ ಅವರ ಕತಾಸಂಕಲನ. ಇದು ಛಂದ ಪುಸ್ತಕ ಬಹುಮಾನ ಪಡೆದು ಪ್ರಕಟಗೊಂಡ ಕೃತಿ. ಈ ಕೃತಿಗೆ ಲೇಖಕಿ, ಚಿಂತಕಿ ಡಾ. ಆರ್. ತಾರಿಣಿ ಶುಭದಾಯಿನಿ ಬೆನ್ನುಡಿ ಮಾತುಗಳನ್ನು ಬರೆದಿದ್ದಾರೆ. 'ಛಾಯಾ ಭಟ್ ಅವರ ಕತೆಗಳು ಸಮಕಾಲೀನ ಸಮಾಜದ ಸಂಸಾರ, ಸಂಬಂಧಗಳನ್ನು ಒಡಲಲ್ಲಿಟ್ಟುಕೊಂಡ ಕತೆಗಳು, ಇವು ಮಡಂಬ ಪತ್ತನ ದ್ರೋಣಾಮುಖಗಳ ಸಂಚಾರವನ್ನು ಉದ್ದೇಶಿಸಿ ಹೊರಟ ಮಹತ್ವಾಕಾಂಕ್ಷಿ ಕತೆಗಳಲ್ಲವಾದರೂ ದೂರದಲ್ಲೆಲ್ಲೋ ಸುನಾಮಿ ಎದ್ದರೆ ಅದರ ಪರಿಣಾಮೀ ಅಲೆಗಳು ಅದರ ಪ್ರತಿನಾಡಿನಲ್ಲೆಲ್ಲೊ ಕಂಪನ ಎಬ್ಬಿಸಿದಂತೆ ಪುಟ್ಟ ಜಗತ್ತಿನಲ್ಲೆ ಎದ್ದ ಅಲೆಗಳನ್ನು ಕಾಣುವಂಥವು. ಈ ಕಾಣುವ ರೀತಿ ತನ್ನ ಕಣ್ಣಿನ ಸತ್ಯವನ್ನೇ ಅಂತಿಮ ಎಂದು ನಂಬುವ ರೀತಿಯಲ್ಲಿಲ್ಲ. ಸ್ತ್ರೀವಾದ, ಪ್ರಾದೇಶಿಕತೆ, ಜಾತಿ, ವರ್ಗ ಮುಂತಾದ ಸಿದ್ಧಾಂತಗಳ ನೆಲೆಗಟ್ಟುಗಳನ್ನು ಬಳಸಿ ಹೇಳಬೇಕೆನ್ನುವ strategy writing ಕೂಡಾ ಅಲ್ಲ.

ಈ ಬಗೆಯ ಮಹತ್ವಾಕಾಂಕ್ಷೆಯ ಗುರಿಯಿರಿದ ಕತೆಗಳು ಏಕಾಂತದಲ್ಲಿ ಕೆಲವು ಮಾನವೀಯ ಪ್ರಶ್ನೆಗಳನ್ನು ಎತ್ತಬಲ್ಲವು'  ಎನ್ನುತ್ತಾರೆ ತಾರಿಣಿಶುಭದಾಯಿನಿ. ಜೊತೆಗೆ 'ಛಾಯಾ ಭಟ್ ಅವರ ಕತೆಗಳು ಸಮಕಾಲೀನ ಬರವಣಿಗೆಯಲ್ಲಿರುವ ಕೆಲವು ಚಹರೆಗಳನ್ನು ಬಿಟ್ಟುಕೊಟ್ಟಿವೆ. ಉದಾಹರಣೆಗೆ ಅವರಿಗೆ ಸ್ತ್ರೀವಾದಿ ನೆಲೆಯಲ್ಲಿ ಕಥೆ ಕಟ್ಟುವ ಅವಕಾಶವಿತ್ತಾದರೂ ಅವರು ಅದನ್ನು ಬಿಟ್ಟುಕೊಟ್ಟು ಕಥೆ ಹೇಳುವ ರೀತಿಯನ್ನು ರೂಢಿಸಿಕೊಂಡಿದ್ದಾರೆ. ಜಾತಿ, ಲಿಂಗ ಮತ್ತು ವರ್ಗಗಳ ನೆಲೆಗಳಲ್ಲಿ ನಿಂತು ಲೋಕ ನೋಡುವುದು ಒಂದು ಬಗೆಯ ಜಾಡನ್ನು ನಿರ್ಮಿಸುತ್ತದೆ. ಅದು ಹಾಗೆ ಆಗಬೇಕೆಂದೇ ಆ ಅಸ್ಮಿತೆಗಳು ಮುನ್ನೆಲೆಗೆ ಬಂದಿದ್ದು, ಆದರೆ ಕ್ರಮೇಣ ಈ ಅಸ್ಮಿತೆಗಳು ಸ್ಥಿರಗೊಳ್ಳುತ್ತಾ ಜಡವಾಗತೊಡಗಿದವು. ಉದ್ದೇಶಪೂರ್ವಕವಾಗಿ ಐಡೆಂಟಿಟಿಗಳನ್ನು ಹೇರಿಕೊಳ್ಳುವುದು ಕತೆಗೆ ತೊಡಕಾಗುತ್ತದೆ. ಹೊಸ ತಲೆಮಾರಿನ ಕೆಲವು ಲೇಖಕ/ಲೇಖಕಿಯರಾದರೂ ತಂತಮ್ಮ ಅಸ್ಮಿತೆಗಳ ಭಾರಗಳನ್ನು ಒತ್ತರಿಸಿ ಏನಾದರೂ ಹೇಳಬೇಕು ಎನ್ನುವ ತಹತಹ ಹೊಂದಿದ್ದಾರೆ. ಛಾಯಾ ಭಟ್ ಅವರಂತಹ ಹೊಸ ತಲೆಮಾರಿನ ಲೇಖಕಿ ಈ ದಿಸೆಯಲ್ಲಿ ಹೆಜ್ಜೆಯಿಟ್ಟಿದ್ದಾರೆ ಎನಿಸುತ್ತದೆ ಇದರಿಂದ ಪೊಲಿಟಿಕಲಿ ಕರೆಕ್ಟ್ ಅನ್ನಿಸುವ ಧಾಟಿಯಿಂದಲೂ ಹೊರಬರಲು ಸಾಧ್ಯವಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ಛಾಯಾ ಭಟ್

ಛಾಯಾ ಭಟ್‌ ಅವರು ಮೂಲತಃ ಕುಮಟಾ ತಾಲೂಕಿನ ಹೊಲನಗದ್ದೆ ಊರಿನವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಈಗ ಬೆಂಗಳೂರಿನ ಶ್ರೀ ಕುಮರನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದತ್ತ ಒಲವಿರುವ ಅವರ ಮೊದಲ ಪ್ರಕಟಿತ ಕೃತಿ ಬಯಲರಸಿ ಹೊರಟವಳು. ಈ ಕೃತಿ ಛಂದ ಪುಸ್ತಕ ಬಹುಮಾನ ಪಡೆದು ಪ್ರಕಟಗೊಂಡಿದೆ.  ...

READ MORE

Related Books