ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ 

Date: 05-08-2022

Location: ಬೆಂಗಳೂರು


“ತಾತ ಇತ್ತೀಚೆಗೆ ಮನೆಯಲ್ಲೇ ಇರುತ್ತಿರಲಿಲ್ಲ. ಮುತ್ಯಾಳಿಗೆ ಮುಖ ತೋರಿಸುವುದು ಅವನಿಗೆ ಕಷ್ಟವಾಗುತ್ತಿತ್ತು. ಅವಳಿಗೆ ಮಾತ್ರ ಮಗನಲ್ಲಿ ಸ್ವಲ್ಪವೂ ಕರುಣೆ ಕಡಿಮೆಯಾಗಿರಲಿಲ್ಲ. ಹಾಗೆಂದು ಮರುಗುತ್ತಿರಲಿಲ್ಲ” ಎಂದು ನೆನಪಿನ ಸುರುಳಿ ಬಿಡಿಸಿಡುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ ದುಡ್ಡು ಜೋರಾಗಿ ಓಡಾಡತೊಡಗಿದ ಬೆನ್ನಲ್ಲೇ ತಾತನ ಬದುಕು ಏನೇನೆಲ್ಲ ಬದಲಾವಣೆ ಕಂಡಿತೆಂಬುದನ್ನು ವಿವರಿಸಿದ್ದಾರೆ.

ತಾತ ಖುಷಿಯಲ್ಲಿ ತೇಲುತ್ತಿದ್ದ ಅವನ ಜೀವಮಾನದ ಕನಸಾದ ಹಣ ಮಾಡುವ ಬಸ್ಸು ಎನ್ನುವ ಯಂತ್ರ ಅವನ ಬಳಿಯಿತ್ತು. ಊರ ಜನರೆದುರು ಬಸ್ಸಿನ ಸಾಹುಕಾರ ಎನ್ನುವ ನಾಮಾಂಕಿತವಾದ ಬಿರುದು ಅವನನ್ನು ಸುತ್ತುವರೆದಿತ್ತು. ಆಂಜಿಯಂತೂ ತಾತನಿಗೆ ತಾನು ಡ್ರೈವ್ ಮಾಡುವಾಗ ಊರ ಜನರು ಆಡುವ ಮಾತುಗಳನ್ನು ತಂದು ಹೇಳುತ್ತಿದ್ದರೆ ತಾತನ ಮುಖದಲ್ಲಿ ಬೆಳಕು ಹರಡುತ್ತಿತ್ತು. ಅಮ್ಮನ ಲೆವೆಲ್ ಕೂಡಾ ಬೇರೆಯದೇ ಆಗಿತ್ತು. ಊರ ಮದುವೆ ಮುಂಜಿ ನಾಮಕರಣ ಪೂಜೆಗಳಲ್ಲಿ ತುಸು ಹೆಚ್ಚೇ ಎನಿಸುವ ಪ್ರಾಮುಖ್ಯತೆ ದೊರೆತು ಅವಳ ಅಹಂ ಅನ್ನು ಮೇಲೆತ್ತಿದ್ದವು. ಈಗ ಅಮ್ಮನಿಗೆ ಮನೆಯಲ್ಲಿ ಕೆಲಸ ಮಾಡಲಿಕ್ಕೆ ಅಂತ ಒಬ್ಬ ಆಳೊಬ್ಬಳನ್ನು ತಾತ ಗುರ್ತು ಮಾಡಿದ್ದ. ಇನ್ನು ನೀನು ಯಾವ ಕೆಲಸವನ್ನೂ ಮಾಡಬೇಕಿಲ್ಲ ತರಕಾರಿ ಹೆಚ್ಚುವುದು ಕಾಯಿ ತುರಿಯುವುದರಿಂದ ಹಿಡಿದು ಎಲ್ಲವನ್ನೂ ಅವಳೇ ಮಾಡುತ್ತಿದ್ದಳು. ನನಗೂ ತಾತ ಸಾಹುಕಾರನಾಗಿಬಿಟ್ಟಿದ್ದಾನೆ ಅನ್ನಿಸಿತ್ತು - ನನಗಾಗಿ ಮನೆಗೆ ಬರುವಾಗ ತಿಂಡಿಗಳನ್ನು ತರುತ್ತಿದ್ದುದನ್ನು ಕಂಡಾಗಲೆಲ್ಲಾ.

ಹಣ ಕೈಲಿ ಓಡಾಡಿದಂತೆಲ್ಲಾ ತಾತನ ವ್ಯಸನಗಳು ಹೆಚ್ಚಾಗತೊಡಗಿದವು. ದಿನಾ ಲೈನ್ ಮೇಲೆ ಹೋಗುತ್ತಿದ್ದವನು ನಿಧಾನವಾಗಿ ಎಲ್ಲವನ್ನೂ ಅಂಜಿಯ ಕೈಗೆ ಒಪ್ಪಿಸಿಬಿಟ್ಟಿದ್ದ. ತಾನು ಇಸ್ಪೀಟು ಆಡುವವರ ಸಂಗ ಮಾಡಿ, ಅದರಲ್ಲೂ ಹಣ ಸಿಗಲಿಕ್ಕೆ ಶುರುವಾಗಿ ತನ್ನ ಅದೃಷ್ಟವನ್ನು ಭಾರಿಯಾಗಿ ನಂಬಿಯೂ ಬಿಟ್ಟ. ಮೊದಮೊದಲು ಅಮ್ಮಮ್ಮ ವಿರೋಧಿಸಿದರೂ ತನಗಾಗಿ ಗಂಡ ತಂದುಕೊಟ್ಟಿದ್ದ ವಡವೆ ಸೀರೆಗಳು ಅವಳ ಬಾಯನ್ನು ಕಟ್ಟಿಬಿಟ್ಟಿತ್ತು. ಊರವರ ಮುಂದೆ ಸಾಹುಕಾರ್ತಿ ಎನ್ನಿಸಿಕೊಳ್ಳುವುದು ತುಂಬಾ ಹೆಮ್ಮೆಯ ವಿಷಯವಾಗಿ ಅವಳಿಗೆ ತೋರತೊಡಗಿತ್ತು. ದೂರದ ಊರುಗಳಿಂದ ಮಗಳಿಗೆ ಸಂಬಂಧಗಳೂ ಕೂಡಿ ಬರ್ತಾ ಇದ್ದುದ್ದಕ್ಕೆ ಅವಳಿಗೆ ಹೆಮ್ಮೆ ಅನ್ನಿಸುತ್ತಿತ್ತು.

ಎಲ್ಲರ ಜೀವನ ಬದಲಾದರೂ ಮುತ್ಯಾಳ ಜೀವನ ಬದಲಾಗಲಿಲ್ಲ. ಯಾರು ಬಂದರೂ ಹೋದರೂ ಅವಳಿಗೆ ಯಾವ ವ್ಯತ್ಯಾಸ? ದಿನನಿತ್ಯ ಅವಳ ಅಡುಗೆಯ ಕಾಯಕ ನಡೆದೇ ಇತ್ತು. ಹಬ್ಬ-ಹರಿದಿನ, ವ್ರತಗಳ ದಿನಗಳಂದು ಮಾತ್ರ ಅಮ್ಮಮ್ಮ ಅಡುಗೆ ಮನೆಗೆ ಬರುತ್ತಿದ್ದಳು. ಅವಳು ತಂದಿಡುತ್ತಿದ್ದ ಅನ್ನದ ಮೇಲೆ ತುಳಸಿದಳ ಮತ್ತು ನೀರನ್ನು ತಾತ ಹಾಕುತ್ತಿದ್ದ. ಬಿಳಿಯ ಅನ್ನದ ಮೇಲೆ ಹಸುರೂ ಎಲೆ ಮುದ್ದಾಗಿ ಕಂಡು ವಿಶೇಷವಾದ ಭಾವವನ್ನು ಹುಟ್ಟಿಸಿಬಿಡುತ್ತಿತ್ತು.

ಒಂದು ದಿನ ಮುತ್ಯಾಳ ಬಳಿ ಬಂದ ತಾತ ತನ್ನ ಬಳಿಯಿದ್ದ ಹಣದ ಕಂತೆಯನ್ನು ತೋರಿಸಿ, `ನೋಡು ನನ್ನ ಹತ್ತಿರ ಈಗ ತುಂಬಾ ಹಣ ಇದೆ ನಿನಗೆ ಏನು ಬೇಕೋ ಅದನ್ನು ತಂದುಕೊಡುತ್ತೇನೆ’ ಎಂದಿದ್ದ. ತನ್ನ ಬೋಳುತಲೆಗೆ ಕೆಂಪು ಸೀರೆಯನ್ನು ಸರಿಯಾಗಿ ಕೂರಿಸಿಕೊಳ್ಳುತ್ತಾ. `ಈ ಒಂದು ಸೀರೆ ಮೈಮೇಲೆ ಇದೆ ಸತ್ತ ಮೇಲೆ ತೆಗೆಯಲಿಕ್ಕೆ ಏನನ್ನು ಹಾಕಿಕೊಳ್ಳಲಿ ನಾರಾಯಣಾ? ಆಕಾಶಕ್ಕೆ ಹಾರಿಬಿಟ್ಟ ಹಕ್ಕಿ ನಾನು. ಗೂಡೂ ಮಾಡೂ ಎರಡೂ ನನ್ನದಲ್ಲ. ಇರೋದನ್ನೇ ಬಿಡಬೇಕೂ ಅನ್ನೋ ಪ್ರಯತ್ನದಲ್ಲಿದ್ದೀನಿ. ನಿನ್ನನ್ನು ಏನು ಬೇಕು ಅಂತ ಕೇಳಲಿ? ಈ ದುಡ್ಡಿನಿಂದ ನಿನಗೆ ನೆಮ್ಮದಿ ಸಿಕ್ಕರೆ ಅಷ್ಟೇ ಸಾಕು’ ಎಂದಿದ್ದಳು ಅವಳ ಧ್ವನಿಯಲ್ಲಿ ಇದ್ದದ್ದು ನೋವಾ? ವ್ಯಂಗ್ಯವಾ? ಸತ್ಯದ ಹುಡುಕಾಟವಾ? ಆದರೆ ಅವಳು ನನಗೆ ಹೇಳಿದ ಕಥೆಯನ್ನು ಈಗಲೂ ಬೇರೆ ಬೇರೆ ಸಂದರ್ಭಗಳಲ್ಲಿ ನೆನಪಿಸಿಕೊಳ್ಳುತ್ತಲೇ ಇದ್ದೇನೆ.

ನದಿಗಳೆಲ್ಲಾ ಸಮುದ್ರ ರಾಜನ ಕಡೆಗೆ ಓಡೋಡಿ ಬರುತ್ತವಂತೆ. ಹಾಗೆ ಬರುವಾಗ ತಮ್ಮ ಜೊತೆಗೆ ದೊಡ್ಡ ದೊಡ್ದ ಮರಗಳನ್ನೂ ಕಿತ್ತು ತರುತ್ತಿದ್ದವಂತೆ. ಅದನ್ನು ನೋಡಿದ ಸಮುದ್ರ ರಾಜ ನದಿ ದೇವತೆಯನ್ನು ನಿಲ್ಲಿಸಿ, `ನಿಮ್ಮ ಜೊತೆಗೆ ಈ ದೊಡ್ಡ ದೊಡ್ದ ಮರಗಳನ್ನು ಎಳೆದು ತರುತ್ತಿದ್ದೀರಿ. ಆದರೆ ನದೀ ದಂಡೆಯಲ್ಲಿ ಸೊಂಪಾಗಿ ಬೆಳೆದಿರುವ ಒಂದೇ ಒಂದು ಜೊಂಡು ಹುಲ್ಲನ್ನು ಕೂಡಾ ತರುವುದಿಲ್ಲವಲ್ಲಾ’ ಎಂದು. ಆಗ ನದೀ ದೇವತೆ, `ನಿಜ ಈ ಮರಗಳು ನನ್ನನ್ನು ನೀನೇನು ಮಾಡಬಲ್ಲೆ ಎನ್ನುತ್ತಾ ಎದೆಸೆಟೆಸಿ ನಿಲ್ಲುತ್ತವೆ. ಅವನ್ನು ಬೇರು ಸಹಿತ ಕಿತ್ತು ತರುತ್ತೇವೆ. ಅದೇ ಜೊಂಡು ಹುಲ್ಲುಗಳು ನಿನ್ನ ಪ್ರವಾಹದ ಎದುರು ನಿಲ್ಲಲಾರೆ ಎನ್ನುತ್ತಾ ತಲೆಯನ್ನು ಬಾಗುತ್ತವೆ. ಹೀಗಾಗಿ ಅವುಗಳನ್ನು ಬಿಟ್ಟು ಬರುತ್ತೇವೆ’ ಎನ್ನುತ್ತಾಳೆ. ವಿನಯವಿಲ್ಲದ ಮನುಷ್ಯ ಯಾವತ್ತೂ ದೊಡ್ದವನಾಗಲಾರ. ಮಗೂ ನೀನು ಎಷ್ಟು ಎತ್ತರಕ್ಕಾದರೂ ಬೆಳಿ, ಆದರೆ ವಿನಯವನ್ನು ಮಾತ್ರ ಬಿಡಬೇಡ. ಮುತ್ಯಾಳ ಕಣ್ಣಲ್ಲಿ ಆಗಿದ್ದದ್ದು ದೃಢತೆ- ಈ ಜಗತ್ತನ್ನು ಹೀಗೆ ನಾನು ನೋಡಬಲ್ಲೆ ಎನ್ನುವ ದೃಢತೆ.

ನಾಕು ದಿನಗಳು ಬಸ್ಸು ಯಾವ ಕಷ್ಟವನ್ನೂ ಕೊಡಲಿಲ್ಲ. ಸಂಜೆ ಟ್ರಿಪ್ಪು ಮುಗಿಸಿ ಊರಮಧ್ಯದಲ್ಲಿ ನಿಂತ ಬಸ್ಸನ್ನು ಹತ್ತಿ ಇಳಿದು ಸಂತೋಷ ಪಡುತ್ತಿದ್ದೆವು. ಕೆಲವು ಸಲ ಬಸ್ಸಿನಲ್ಲಿ ಪ್ರಯಾಣಿಸುವಾಗ ನಮಗಾಗಿ ಸೀಟುಗಳನ್ನು ಕಾಯ್ದಿರಿಸುತ್ತಿದ್ದರು ಕೂಡಾ. ಯಾರಾದರೂ ಕೂತಿದ್ದರೆ ಕ್ಲೀನರ್ ಬಂದು ಅವರನ್ನು ಎಬ್ಬಿಸಿಬಿಡುತ್ತಿದ್ದ. ಆಗೆಲ್ಲಾ ನನಗೆ ನಾನೇ ಬಸ್ಸಿನ ಓನರ್ ಅನ್ನಿಸಿ ಹೆಮ್ಮೆ ಪಡುತ್ತಿದ್ದೆ.

ತಾತ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ. ಇನ್ನು ಮಿಕ್ಕ ಹೆಣ್ಣುಮಕ್ಕಳ ಮದುವೆ ಮಾಡುವುದು ಕಷ್ಟವಲ್ಲ. ಐಶ್ವರ್ಯ ಒಂದಿದ್ದರೆ ಎಲ್ಲಾ ಒಳ್ಳೆಯದ್ದೂ ನನ್ನ ಹತ್ತಿರ ಬರುತ್ತದೆ ಎನ್ನುವ ನಂಬಿಕೆ ಅವನದ್ದು. ಅದಕ್ಕೆ ತಕ್ಕ ಹಾಗೆ ಪೇಟೆಯಿಂದ ಸಂಬಂಧ ಕೂಡಿ ಬಂದು, ಚಿಕ್ಕಿಯ ಮದುವೆಯೂ ಪಕ್ಕಾ ಆಯಿತು. ಊರವರೆಲ್ಲಾ ತಾತನ ಅದೃಷ್ಟದ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು. ಚಿಕ್ಕಿಯ ಮದುವೆಯನ್ನು ವಿಜೃಂಭಣೆಯಿಂದ ಮಾಡಿದ. ಗಂಡಿನವರು ಕೇಳಿದ್ದಕ್ಕಿಂತ ಜೋರಾಗಿ. ಊರಿಗೂರೇ ಮೂಗಿನ ಮೇಲೆ ಬೆರಳನ್ನಿಟ್ಟಿತ್ತು.

ಈಗವನಿಗೆ ಪೂಜೆಯೂ ಕೂಡಾ ತೋರಿಕೆಯ ಸಂಗತಿಯಾಗಿತ್ತು. ಬರೀ ಅನ್ನದ ಬದಲು ಗೋಡಂಬಿ ದ್ರಾಕ್ಷಿ, ಬದಾಮಿ ಹಾಕಿದ ಸಣ್ಣಕ್ಕಿಯ ಪಾಯಸ ತುಪ್ಪದಲ್ಲೆ ಮುಳುಗೇಳುತ್ತಿತ್ತು. ಮನೆಗೆ ಬಂದವರಿಗೆ ಅಮ್ಮಮ್ಮ ಅದನ್ನು ಕೊಟ್ಟು ತಮ್ಮ ಮನೆಯ ಶ್ರೀಮಂತಿಕೆಯನ್ನು ಸಾರುತ್ತಿದ್ದಳು.

ಅಂಜಿಯನ್ನು ಅತಿಯಾಗಿ ನಂಬತೊಡಗಿದ್ದ ತಾತನಿಗೆ ಅವನ ಪ್ರಾಮಾಣಿಕತೆ ನಿಷ್ಠೆಗಳು ಎದ್ದುಕಾಣುತ್ತಿತ್ತು. ಅವನೂ ಅದಕ್ಕೆ ಸರಿಯಾಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ತಾತ ಬಸ್ಸಿನ ಟ್ರಿಪ್ಪುಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದ. ಹಣದ ರುಚಿಗೆ ಬಿದ್ದ ಅವನು ಮತ್ತೆ ಮತ್ತೆ ಅದರ ಹಿಂದೆ ಮಾತ್ರ ಹೋಗುತ್ತಿದ್ದ. ಓಸಿ ಆಯ್ತು, ಹಣವನ್ನು ದುಪ್ಪಟ್ಟು ಮಾಡಿದ್ದಾಯ್ತು, ಈಗ ಇಸ್ಪೀಟು. ಕಡೆಗೆ ಊರ ಜನ ಅವನ ಬೆನ್ನ ಹಿಂದೆ ಇಸ್ಪೀಟು ಶಾಸ್ತ್ರಿ ಅನ್ನಲಿಕ್ಕೆ ಶುರು ಮಾಡಿದ್ದರು. ಅದು ಖಂಡಿತಾ ಅವನ ತಪ್ಪಲ್ಲ. ಜಗತ್ತು ತಾಳತಪ್ಪುತ್ತಿದ್ದುದರ ಎಲ್ಲಾ ಲಕ್ಷಣಗಳೂ ಅವನಲ್ಲಿ ಕಾಣುತ್ತಿತ್ತು.

ಅಂಜಿ ಸಂಜೆಯಾಯಿತೆಂದರೆ ಹಣ ತಂದುಕೊಡುತ್ತಿದ್ದ. ಎಲ್ಲರಿಗೂ ಕಾಣುವ ಹಾಗೆ ತಾತ ಅದನ್ನು ಎಣಿಸಿಡುತ್ತಿದ್ದ. ಅಕ್ಕ ಪಕ್ಕದವರು ಸಣ್ಣ ಪುಟ್ಟ ಕೈಸಾಲಗಳಿಗೆ ತಾತನ ಹತ್ತಿರ ಎಡತಾಕುತ್ತಿದ್ದರು. ಹಣದ ಉನ್ಮಾದ ಉಂಟಾಗಿಬಿಟ್ಟರೆ, ಮುಂದಿನ ಮೂರುತಲೆ ಮಾರುಗಳ ಯೋಚನೆಯೂ ಶುರುವಾಗುತ್ತದೆ. ನನ್ನ ಮಗ ಮೊಮ್ಮಗ ಎಲ್ಲರೂ ಕೂತು ತಿಂದರೂ ಕರಗಬಾರದು ಅಂಥಾ ಆಸ್ತಿಯನ್ನು ಮಾಡಿಡುತ್ತೇನೆ ಎನ್ನುವ ಹಠವೂ ಬಂದುಬಿಟ್ಟಿತ್ತು.

ಹಿತ್ತಲಿನಲ್ಲಿ ಮುತ್ಯಾ ಲಘುವಾಗಿ ಉಪ್ಪು ಹಾಕಿ ಬೇಯಿಸಿದ ಅಕ್ಕಿಗೆ ಸೂತ್‍ಬೆಳಗಾರ ಬೆರೆಸಿ, ಒಣಗಿಸಿ, ಅದನ್ನು ಮರಳಲ್ಲಿ ಹುರಿಯುತ್ತಿದ್ದಳು. ಹುರಿಯಲಿಕ್ಕೆ ತೆಂಗಿನ ಗರಿಯ ಕಡ್ಡಿಯನ್ನು ಹಿಡಿ ಮಾಡಿ ಇಟ್ಟುಕೊಂಡಿದ್ದಳು. ಮರಳಲ್ಲಿ ಬಿದ್ದ ಅಕ್ಕಿ ಸಣ್ಣದಾಗಿ ಶಬ್ದಮಾಡುತ್ತಾ ಅರಳುತ್ತಿತ್ತು. ಅವಳು ಮಾಡುವ ಹುರಿಯಕ್ಕಿಯ ರುಚಿ ನನಗೆ ಮತ್ಯಾವುದರಲ್ಲೂ ಕಂಡಿಲ್ಲ. ಅಲ್ಲೇ ಕೂತಿದ್ದ ರಾಮುಡೂ ಮತ್ತವಳ ನಡುವೆ ಏನು ಮಾತು ಕಥೆ ನಡೆದಿತ್ತೋ ತಿಳಿಯದು. ನಾನು ಹೋಗುವಾಗ ಮುತ್ಯಾ ಅವನಿಗೆ, `ಬೆಚ್ಚನೆಯ ಬೂದಿಯಲ್ಲಿ ಮಲಗಿದ್ದರೂ, ಬಯಲಲ್ಲಿ ಮಲಗಿದರೂ ಬೆಕ್ಕು ಮಿಯಾವ್ ಅನ್ನುವುದನ್ನು ಬಿಡೋದಿಲ್ಲ’ ಎನ್ನುತ್ತಿದ್ದಳು. ನನ್ನನ್ನು ನೋಡಿ `ಬಾ’ ಎಂದು ಕರೆದು ಅಕ್ಕಿ ಮಂಡಕ್ಕಿಯ ಹಾಗೆ ಅರಳುತ್ತಿದ್ದುದನ್ನು ಜರಡಿಗೆ ಹಾಕಿ ಜಾಲಿಸುತ್ತಿದ್ದ ರಾಮುಡು `ತಗೋ’ ಎಂದು ಹುರಿಯಕ್ಕಿಯನ್ನು ಕೊಟ್ಟ. ಹದವಾಗಿ ಉಪ್ಪು ಹಿಡಿದ ಹುರಿಯಕ್ಕಿ ಘಂ ಎನ್ನುತ್ತಾ ನಾಲಿಗೆಗೆ ಹಿತವೆನ್ನಿಸುತ್ತಿತ್ತು. ಬೆಕ್ಕು ಮಿಯಾಂವ್ ಎನ್ನದೆ ಮತ್ತೇನನ್ನು ಅನ್ನಲು ಆಗುತ್ತದೆ ಎಂದುಕೊಂಡೆ. ಮುತ್ಯಾ ಯಾಕೋ ಮೌನಕ್ಕೆ ಶರಣಾಗಿದ್ದಳು. ತಿನ್ನುತ್ತಿದ್ದ ಹುರಿಯಕ್ಕಿಯ ಕರುಂ ಕರುಂ ಎನ್ನುವ ಶಬ್ದ ಜೋರಾಗೇ ಕೇಳುತ್ತಿತ್ತು. ಇತ್ತಿತ್ತಲಾಗಿ ಮುತ್ಯಾ ಅಮ್ಮನಿಗಾಗಲೀ ತಾತನಿಗಾಗಲೀ ಏನನ್ನೂ ಹೇಳುತ್ತಿರಲಿಲ್ಲ. ಹೇಳುವ ಅಗತ್ಯ ಇಲ್ಲವೆಂದು ತೀರ್ಮಾನಿಸಿದ್ದ ಹಾಗಿತ್ತು.

ಎಲ್ಲವೂ ಹೀಗೆ ನಡೆಯುತ್ತದೆ ಎನ್ನುವ ಉಮೇದಿನಲ್ಲಿದ್ದ ತಾತನಿಗೆ ವಾಸ್ತವ ಅರಿವಾಗತೊಡಗಿದ್ದೇ ನಿಧಾನವಾಗಿ. ಅಂಜಿ ಬಸ್ಸಿನ ಬಗ್ಗೆ ಕಂಪ್ಲೇಂಟು ತರಲು ಶುರು ಮಾಡಿದಾಗ. ಮೊದಮೊದಲು ಬಸ್ಸಿನ ಬಿಡಿ ಭಾಗಗಳಿಗೆ ತಗುಲುತ್ತಿದ್ದ ಸಣ್ಣ ಪುಟ್ಟ ಖರ್ಚುಗಳನ್ನು ತೂಗಿಸುವುದು ಅಂಥಾ ಕಷ್ಟದ ಕೆಲವೂ ಆಗಿರಲಿಲ್ಲ. ಎರಡು ವರ್ಷಗಳಲ್ಲಿ ತಾತ ತುಂಬಾ ಬದಲಾಗಿದ್ದ - ಮನೆವಾರ್ತೆಗಳನ್ನೆಲ್ಲಾ ಅಮ್ಮಮ್ಮನೇ ನಿಭಾಯಿಸುತ್ತಿದ್ದಳು. ಮನೆಗೆ ರೇಡಿಯೋ, ಗ್ರಾಮಾಫೋನ್, ಹೊಲಿಗೆಮಿಷನ್, ಗಡಿಯಾರ, ವಾಚು ಇಂಥಾ ಸುಮಾರು ವಸ್ತುಗಳು ಬಂದು ಕೂತು ಶ್ರೀಮಂತಿಕೆಯನ್ನು ಸಾರುತ್ತಿದ್ದವು.

ಮೀನುಗಾರ ಗಾಳದ ದಾರವನ್ನು ಬಿಟ್ಟು ನೋಡುವುದು ಸುಮ್ಮನೆ ಅಲ್ಲ-ಮೀನಿನ ಆಸೆಗೇ. ಮೊದ ಮೊದಲು ಪ್ರಾಮಾಣಿಕನಾಗಿದ್ದ ಅಂಜಿಯೂ ಎಷ್ಟು ಹಣ ಕೀಳಬಹುದು ಎನ್ನುವ ಆಸೆಗೆ ಬಿದ್ದ. ತಾತನಿಗೆ ಸುಳ್ಳು ಲೆಕ್ಕವನ್ನು ಕೊಡತೊಡಗಿದ. ಅವನಿಗೆ ತನ್ನ ಮೇಲೆ ತಾತನ ನಂಬಿಕೆ ತಾನೇನನ್ನು ಬೇಕಾದರೂ ಮಾಡಲು ಸಾಧ್ಯ ಎನ್ನುವ ತೀರ್ಮಾನಕ್ಕೆ ಬಂದಂತಿತ್ತು. ದಾರಿಯಲ್ಲೇ ಗಾಡಿ ಕೆಟ್ಟಿತೆಂದೂ, ಇಂಜಿನ್, ಬ್ರೇಕ್, ವೀಲ್ ಅಂತ ರಿಪೇರಿಗೆ ಬರುತ್ತಲೇ ಇತ್ತು. ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ರಿಪೇರಿ ತಿಂಗಳಿಗೆ ವಾರಕ್ಕೆ ಇಳಿದುಬಿಟ್ಟಿತ್ತು.

ತಾತ ಹೈರಾಣಾದ, ಅಂಜಿ ಹೇಳುತ್ತಿದ್ದ ದೊಡ್ದ ರಿಪೇರಿಗಳಿಗೆ ಹಣ ಹೊಂದಿಸಲಾಗದೆ ಸಾಲದ ಮೇಲೆ ಸಾಲ ಮಾಡಿದ. ನಾಗಪ್ಪ ಶಾಸ್ತ್ರಿಗಳ ಹತ್ತಿರ ಮತ್ತೆ ಭವಿಷ್ಯ ಕೇಳುವ ಪೂಜೆ ಮಾಡಿಸುವ ಹುಚ್ಚಿಗೂ ಬಿದ್ದ. ಅವನಿಗೆ ತಾನು ಕರಗಿಸಿ ಮಾರಿದ್ದ ಶ್ರೀಚಕ್ರ ಮೇರುವಿನ ನೆನಪಾಗಿತ್ತು. ಆದರೆ ಸರಿ ಮಾಡಲಾಗದ ತಪ್ಪನ್ನು ಮಾಡಿಬಿಟ್ಟಿದ್ದ. ಆ ಕೊರಗಲ್ಲೇ ಅವನ ತಲೆಕೆಟ್ಟಿತ್ತು. ಅಸಹಾಯಕನಾದ ಅವನು ಅಂಜಿಯ ಜೊತೆ ಜಗಳಕ್ಕೆ ನಿಂತ. ತಾರಕಕ್ಕೆ ಹೋದ ಜಗಳದಿಂದ ಅಂಜಿ ಕೆಲಸ ಬಿಟ್ಟ. ಆಮೇಲೆ ಬಂದ ಡ್ರೈವರ್‌ಗಳು ಸರಿ ಮಾಡಲಿಕ್ಕೆ ನೋಡಿದರೂ ಸರಿ ಮಾಡಲಾಗದ ಸ್ಥಿತಿಗೆ ತಲುಪಿಬಿಟ್ಟಿತ್ತು. ಕಡೆಗೆ ಅದನ್ನು ಮಾರುವ ನಿರ್ಧಾರಕ್ಕೆ ತಾತ ಬಂದಿದ್ದ. ಇಲ್ಲದಿದ್ದರೆ ಸಾಲವನ್ನು ತೀರಿಸುವುದಾದರೂ ಎಲ್ಲಿಂದ?

ಊರ ಮಧ್ಯೆ ತುಕ್ಕು ತಿನ್ನುತ್ತಾ ನಿಂತಿದ್ದ ಬಸ್ಸನ್ನು ಯಾರೋ ಒಬ್ಬನನ್ನು ಹಿಡಿದು ಮಾರುವ ಹೊತ್ತಿಗೆ ತಾತ ಇನ್ನಷ್ಟು ಹಣ್ಣಾಗಿದ್ದ. ಅಂತೂ ಇಂತೂ ಸಾಲ ತೀರಿ ಮತ್ತೆ ಮಾಮೂಲಿನ ಸ್ಥಿತಿಗೆ ಬರುವ ಹೊತ್ತಿಗೆ ತಾತನ ತಲೆಯ ಮೇಲೆ ಕೊನೆಯ ಮಗಳ ಮದುವೆಯ ಭಾರ ಮಾತ್ರ ಇತ್ತು. ಶ್ರೀಮಂತಿಕೆಯ ಕುರುಹಾಗಿ ಮನೆಯ ವಸ್ತುಗಳು ಮಾತ್ರ ಉಳಿದಿತ್ತು.

ತಾತ ಇತ್ತೀಚೆಗೆ ಮನೆಯಲ್ಲೇ ಇರುತ್ತಿರಲಿಲ್ಲ. ಮುತ್ಯಾಳಿಗೆ ಮುಖ ತೋರಿಸುವುದು ಅವನಿಗೆ ಕಷ್ಟವಾಗುತ್ತಿತ್ತು. ಅವಳಿಗೆ ಮಾತ್ರ ಮಗನಲ್ಲಿ ಸ್ವಲ್ಪವೂ ಕರುಣೆ ಕಡಿಮೆಯಾಗಿರಲಿಲ್ಲ. ಹಾಗೆಂದು ಮರುಗುತ್ತಿರಲಿಲ್ಲ. ಎಂದಿನಂತೆ ಇರುಳುಗಳಲ್ಲಿ ನಾನು ಮುತ್ಯಾ ಇಬ್ಬರೂ ಮಾತಾಡುತ್ತಲೇ ಇದ್ದೆವು, `ನಿನ್ನ ತಾತನ ದಶಾವತಾರ ಇಲ್ಲಿಗೇ ನಿಂತಿಲ್ಲ. ನೋಡುವುದನ್ನು ಬಿಟ್ಟರೆ ನನಗೆ ಬೇರೆ ದಾರಿಯಿಲ್ಲ’ ಎಂದಿದ್ದಳು. `ಮುತ್ಯಾ ಮುಂದೆ ಏನಾಗುತ್ತೆ’ ಎಂದೆ ಕುತೂಹಲದಿಂದ. ಮುತ್ಯ ನನ್ನನ್ನು ದಿಟ್ಟಿಸಿದ್ದು ನಕ್ಷತ್ರಗಳ ಬೆಳಕಲ್ಲಿ ಸ್ಪಷ್ಟವಾಗಿತ್ತು. ಹಾದಿ ತಪ್ಪಿದ ಎರಡು ನಕ್ಷತ್ರಗಳು ಮುತ್ಯಾನ ಕಣ್ಣುಗಳಲ್ಲಿ ಮಿನುಗಿದ್ದವು. ನಮ್ಮಿಬ್ಬರ ಜಗತ್ತು ಮತ್ತಷ್ಟು ಗಾಢವಾಗಿತ್ತು.

ನೆಲದಾಳದ ಚಿನ್ನ, ವಜ್ರ ವೈಡೂರ್ಯ ನೀರಿನಾಳದ ಮುತ್ತುಗಳಿಂದ ಮಾಡಿದ ಕಿರೀಟವನ್ನು ರಾಜ ನೆತ್ತಿಯ ಮೇಲಿರಿಸಿಕೊಳ್ಳುತ್ತಾನೆ. ತನ್ನ ಪಾಡಿಗೆ ತಾನಿದ್ದ ಅವೆಲ್ಲವೂ ಅಹಮ್ಮಿನ ಸಂಕೇತವಾಗುತ್ತಾ ಅವು ಕೂಡಾ ಮಾನುಷತ್ವ ಪಡೆದುಕೊಂಡು ಬಿಡುತ್ತವೆ. ಅಹಂ ನಾಶವಾಗದೆ ಕಿರೀಟದಲ್ಲಿರುವ ಮುತ್ತು ರತ್ನಗಳ ಮಾನುಷತ್ವವೂ ನಾಶವಾಗದು- ಸ್ತಬ್ಧವಾಗುವ ಜಗತ್ತನ್ನು ಅಲುಗಿಸಲು ಒಂದು ಸಣ್ಣ ಉಸಿರು ಸಾಕು. ನಾಳಿನ ಬಿರುಗಾಳಿಗೆ ಅದು ಮುನ್ಸೂಚನೆ. ಇದನ್ನೆ ಇರಬೇಕು ಅವತ್ತು ಮುತ್ಯಾ ನನಗೆ ಹೇಳಿದ್ದು. ಮೌನದೊಳಗಿನ ಮಾತು ಎಷ್ಟು ಗೂಢ ಮತ್ತು ಸ್ಪಷ್ಟ!

ಈ ಅಂಕಣದ ಹಿಂದಿನ ಬರೆಹಗಳು:
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಚಾಲಕನೆಂಬ ದೊಡ್ಡಪ್ಪನೂ..!...

12-08-2022 ಬೆಂಗಳೂರು

“ಚಾಲಕ ಅಪ್ಪ-ಅಮ್ಮನಂತೆ ಜೀವ ಕಾಯುವವನು, ಪ್ರಾಣ ಉಳಿಸುವವನು, ಸರಕು ತರುವವನು, ಜಗತ್ತು ತೋರಿಸುವವನು, ಮನೆ-ಮನ ಬೆಳ...

ಸಮಕಾಲೀನ ಪುಸ್ತಕಲೋಕದ ಅಘಟಿತ ಘಟನೆ...

11-08-2022 ಬೆಂಗಳೂರು

“ಶಾಸನ ಪ್ರಕಟಣೆಯ ಇತಿಹಾಸದಲ್ಲಿ ದಶಕಗಳ ಅವಧಿಯಲ್ಲಿ ಆಗೊಂದು ಈಗೊಂದು ಸಂಪುಟಗಳು ಬೆಳಕು ಕಾಣುತ್ತಿದ್ದ ಸಾಂಸ್ಥಿಕ ಪ...

ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡ...

10-08-2022 ಬೆಂಗಳೂರು

“ಪ್ರೇಮ ವಿಮುಖತೆಗೆ ಒಳಗಾದ ಎರಡು ಕವಿ ಹೃದಯಗಳ ಒಳ ತುಡಿತ, ನೋವು, ನಿರಾಶೆ, ಪ್ರಕಲ್ಪಗಳು ವಿರಹಿ ಹೃದಯಗಳ ತಟ್ಟುತ್...