ಗೋಪಾಲಕೃಷ್ಣ ಅಡಿಗರ ಅನುವಾದಗಳ ನೋಟ

Date: 14-12-2021

Location: ಬೆಂಗಳೂರು


‘ಗೋಪಾಲಕೃಷ್ಣ ಅಡಿಗರ ಸಮಗ್ರ ಕೃತಿಗಳನ್ನು ಸಂಪಾದಿಸಿದ ಸುಮತೀಂದ್ರ ನಾಡಿಗರು ಬರೆಯುವಂತೆ, ‘ಅಡಿಗರು ಸುಮಾರು ಮೂರುಸಾವಿರ ಪುಟಗಳಷ್ಟು ಅನುವಾದಿಸಿದ್ದಾರೆ’ಎನ್ನುತ್ತಾರೆ ಲೇಖಕಿ, ವಿಮರ್ಶಕಿ ತಾರಿಣಿ ಶುಭದಾಯಿನಿ. ಅವರು ತಮ್ಮ ಅಕ್ಷರ ಸಖ್ಯ ಅಂಕಣದಲ್ಲಿ ಗೋಪಾಲಕೃಷ್ಣ ಅಡಿಗರ ಅನುವಾದಗಳ ಕುರಿತು ವಿಶ್ಲೇಷಿಸಿದ್ದಾರೆ.

ಬಹಳ ಹಿಂದೆ ಹರ್ಮನ್ ಮೆಲ್ವಿಲ್ ಎಂಬ ಅಮೆರಿಕನ್ ಕಾದಂಬರಿಕಾರನ ‘ಟೈಪೀ’ ಕಥನವು ಹೇಗೊ ನನ್ನ ಓದಿಗೆ ಸಿಕ್ಕುಬಿಟ್ಟಿತ್ತು . ಅದನ್ನು ಬಾಲ್ಯದಲ್ಲಿ ಓದಿದ ನನಗೆ ನಿಜವಾಗಿಯೂ ಅದು ಕವಿ ಗೋಪಾಲಕೃಷ್ಣ ಅಡಿಗರ ಅನುವಾದ ಎಂದು ಗೊತ್ತೇ ಇರಲಿಲ್ಲ. ಓದುವ ಹುಚ್ಚಿನಲ್ಲಿ ಅದನ್ನು ಓದಿ ಮುಗಿಸಿದ್ದೆ. ಹಿಡಿದರೆ ಬಿಡಲಾಗದಷ್ಟು ರೋಮಾಂಚಕಾರಿ ಜಗತ್ತು ಆ ಕಾದಂಬರಿಯದು. ಹಡಗಿನಲ್ಲಿ ಹೋಗುವಾಗ ದಾರಿತಪ್ಪಿ ನರಭಕ್ಷಕ ಜನಾಂಗವಾದ ಟೈಪೀಗಳ ನಾಡನ್ನು ಸೇರಬೇಕಾಗ ಬರುತ್ತದೆ. ಹೇಳಿ ಕೇಳಿ ನರಭಕ್ಷಕರ ಜೊತೆ ಜೀವನ ಎಂದರೆ ಸಾವಿನ ಸನಿಹದಲ್ಲೇ ಬದುಕುವುದು! ಯಾವಾಗ ಕರೆ ಬರುವುದೊ ಗೊತ್ತಿರದ ಸನ್ನಿವೇಶದಲ್ಲಿ ಬದುಕು ಎನ್ನುವುದು ಅತ್ಯಮೂಲ್ಯ ಎನ್ನಿಸುವುದು ಸಹಜ. ಇದನ್ನು ಸಾಹಸಗಾಥೆಯಾಗಿ ಓದಿದ ನನಗೆ ಬಿಳಿಯರ ಪೊಲಿಟಕಲ್ ಧೋರಣೆಗಳು, ವಸಾಹತೋತ್ತರ ಚಿಂತನೆಗಳ ಸುಳಿವೂ ಇರಲಿಲ್ಲ. ಅದನ್ನು ರೊಮಾನ್ಸ್ ಆಗಿಯೇ ಓದಿದ್ದೆ. ಸಾಹಿತ್ಯದ ವಿದ್ಯಾರ್ಥಿಯಾದ ಮೇಲೆ ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಓದುವಾಗ ಅವರು ಮಾಡಿದ ಅನುವಾದಗಳ ಬಗ್ಗೆ ಗಮನ ಹರಿಯಿತು. ಮೇಲ್ನೋಟಕ್ಕೆ ಕವಿಯಾದ ಅಡಿಗರಿಗು ಅವರು ಮಾಡಿದ ಅನುವಾದಗಳಿಗೂ ನನಗೆ ಯಾವ ಸಂಬಂಧವೂ ಕಾಣುತ್ತಿರಲಿಲ್ಲ. ಅಡಿಗರು ಒಂದು ಕಾಲಕ್ಕೆ ಹೆಸರಾಂತ ಕವಿಯಾಗಿದ್ದವರು. ಆದರೆ ಅವರ ಅನುವಾದಗಳ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗದ್ಯ ಕೃತಿಗಳಿದ್ದವು. ಅಡಿಗರು ಕವಿಯಾಗಿ ಇಂತದಕ್ಕೆ ಯಾಕೆ ತೊಡಗಿಕೊಂಡರು? ಎಂಬ ಪ್ರಶ್ನೆ ಕಾಡುತ್ತಿತ್ತು. ಅಡಿಗರ ಕಟ್ಟಾ ಅಭಿಮಾನಿಯಾಗಿದ್ದ ನನ್ನ ತಂದೆ ಮಾತ್ರ ಅಡಿಗರ ಗದ್ಯವನ್ನು ಓದಿಕೊಳ್ಳದಿದ್ದರೆ ನನಗೆ ಕನ್ನಡದ ಮೇಲೆ ಹಿಡಿತ ಬರುವುದಿಲ್ಲವೆಂದು ಹೇಳಿ ಅವರ ಗದ್ಯವನ್ನು ಓದಲು ಹೇಳುತ್ತಿದ್ದರು. ಆಗ ನನಗೆ ಇದು ಇನ್ನೂ ವಿಚಿತ್ರವಾಗಿ ಕಾಣಿಸುತ್ತಿತ್ತು. ಕವಿಯಾದ ಅಡಿಗರ ಪದ್ಯಗಳನ್ನು ಓದು ಎನ್ನದೆ ಗದ್ಯವನ್ನೇಕೆ ಓದಲು ಹೇಳುತ್ತಿದ್ದಾರೆ ಎಂಬ ಆಶ್ಚರ್ಯ ನನ್ನನ್ನು ಕಾಡಿತ್ತು. ಈಗ ಹಿಂತಿರುಗಿ ನೋಡಿದರೆ ಅಡಿಗರು ಹೊಸತನ್ನು ಬರೆಯಬೇಕೆನ್ನುವ ತಮ್ಮ ನಿರಂತರವಾದ ಚಡಪಡಿಕೆಯನ್ನು ಒಂದು ಸೃಜನಶೀಲ ಕುರುಹನ್ನಾಗಿಸಿಕೊಂಡಿದ್ದರು ಎನ್ನುವುದು ಅರಿವಿಗೆ ಬರುತ್ತದೆ. ಪರಂಪರೆಯನ್ನು ತಮ್ಮ ದೃಷ್ಟಿಕೋನದಲ್ಲಿ ಗ್ರಹಿಸಿದ ಈ ಕವಿ-ಲೇಖಕ ಪರಂಪರೆಯನ್ನು ಮುಂದುವರೆಸುವುದು ಒಂದರ್ಥದಲ್ಲಿ ಅಗತ್ಯ ಹಾಗು ಅದನ್ನು ಮುರಿದು ಕಟ್ಟಬೇಕಾದುದು ಸಹ ಅತ್ಯಗತ್ಯ ಎಂದು ಭಾವಿಸಿದ್ದರು. ಇದರಿಂದ ಸಾಹಿತ್ಯದ ಬಹುಪ್ರಕಾರಗಳನ್ನು ಪ್ರಯತ್ನಿಸಿದರು. ಅಡಿಗರ ಕಾವ್ಯಪ್ರತಿಭೆಯ ಪ್ರಖರತೆಯ ಮುಂದೆ ಮಬ್ಬಾದ ಅವರ ಕತೆಗಳು, ಕಾದಂಬರಿಗಳಂತೆ ಅವರ ಅನುವಾದಗಳೂ ಹಿಂದಿನ ಸಾಲಿನಲ್ಲಿ ಕುಳಿತು ಬಿಟ್ಟಿದ್ದವು! ಪ್ರಾಯಶಃ ಬರಹಗಾರರಾಗಿ ಅನುವಾದವನ್ನು ಒಂದು ಉಪಪ್ರವೃತ್ತಿಯಂತೆಯೂ ವೃತ್ತಿಪರವಾಗಿಯೂ ಭಾವಿಸಿದ ಅಡಿಗರ ಅನುವಾದಕನ ಮುಖವು ಅನಾಮಿಕವಾಗಿಯೇ ಇದೆ. ಅವರ ಅನುವಾದಗಳು ಸಾಕಷ್ಟು ಸಂಖ್ಯೆಯಲ್ಲಿ(ಸುಮಾರು ಹದಿದನೆಂಟು ಕೃತಿಗಳು) ಬಂದಿದ್ದರೂ ಅವು ಅಷ್ಟಾಗಿ ಮುಂಚೂಣಿಗೆ ಬರಲಿಲ್ಲ.

ಅನುವಾದಗಳ ಬಗ್ಗೆ ಅಡಿಗರ ದೃಷ್ಟಿಧೋರಣೆ ಹಾಗಾದರೆ ಹೇಗಿತ್ತು? ಅವರು ಅನುವಾದಗಳನ್ನು ಹೇಗೆ ಗ್ರಹಿಸಿದ್ದರು? ಎಂಬುದಕ್ಕೆ ಖಚಿತವಾದ ಉತ್ತರ ದೊರೆಯುವುದಿಲ್ಲ. ಇದಕ್ಕೆ ಉತ್ತರ ಎಂಬಂತೆ ಇರುವ ಆಚಾರ್ಯ ಬಿ.ಎಂ.ಶ್ರೀ ಅವರನ್ನು ಟೀಕಿಸುವ ಅವರ ಪದ್ಯವನ್ನು ಗಮನಿಸಬೇಕು. ಅದು ಹೀಗಿದೆ:

ಭಾವಗೀತಕ್ಕಷ್ಟೆ ಹೊಸಗನ್ನಡ;
ರುದ್ರಕ್ಕೆ ಗಂಭೀರಕ್ಕೆ, ಸುದೀರ್ಘಕ್ಕೆ ಹಳಗನ್ನಡ;
ಸೊನ್ನೆವ್ಯಂಜನದ ರುಚಿ ಹತ್ತಿತೇಕೆ?
ಅರ್ಥಗೌರವವಿರದ ವಾಗಾಡಂಬರಕ್ಕೆ
ನಾಂದಿ ಹೇಳಿದ್ದೇಕೆ ಹೇಳಿ ಗುರುವೇ?

ಹೀಗೆ ಅಡಿಗರು ಎತ್ತಿದ ಅನುವಾದದ ಸಂದಿಗ್ಧದ ಪ್ರಶ್ನೆಯು ಸ್ವತಃ ಅನುವಾದಕರಾದ ಅವರನ್ನು ಕಾಡಲಿಲ್ಲವೇ? ಅವರು ಅನುವಾದಕ್ಕೆಂದು ಯಾವ ಭಾಷೆ ಬಳಸಿದರು? ಎಂದು ನೋಡಿದರೆ ಅಡಿಗರ ಅನುವಾದದ ಭಾಷೆ ಅವರ ಕಾವ್ಯಭಾಷೆಯ ಮೊನಚು ಕಳೆದುಕೊಂಡ ಭಾಷೆ. ಓದುಗರಿಗೆ ತಲುಪಿಸಲು ಅಗತ್ಯವಿರುವ ಭಾಷೆಯನ್ನು ಬಳಸುವುದಕ್ಕೆ ಅವರು ಬದ್ಧರಾಗುತ್ತಾರೆ. ಯಾವ ಬಗೆಯ ಪ್ರಯೋಗಗಳೂ ಅವರ ಅನುವಾದಗಳಲ್ಲಿ ಕಾಣುವುದಿಲ್ಲ. ಇದನ್ನು ಗಮನಿಸಿದರೆ ಅಡಿಗರ ಅನುವಾದಗಳು ಅವರು ಮಹತ್ವಾಕಾಂಕ್ಷೆಯಿಂದ ಮಾಡಿದವಲ್ಲ ಎನ್ನಿಸುತ್ತದೆ.

ಗೋಪಾಲಕೃಷ್ಣ ಅಡಿಗರ ಸಮಗ್ರ ಕೃತಿಗಳನ್ನು ಸಂಪಾದಿಸಿದ ಸುಮತೀಂದ್ರ ನಾಡಿಗರು ಬರೆಯುವಂತೆ, ‘ಅಡಿಗರು ಸುಮಾರು ಮೂರುಸಾವಿರ ಪುಟಗಳಷ್ಟು ಅನುವಾದಿಸಿದ್ದಾರೆ. ಇದರಿಂದ ಅಡಿಗರ ಆಸಕ್ತಿಗಳು, ಉದ್ದೇಶಗಳು, ಅವರ ವ್ಯಕ್ತಿತ್ವದ ಕೆಲವು ಅಂಶಗಳನ್ನು ತಿಳಿಯುವುದಕ್ಕಾಗಿಯೂ ಇವುಗಳನ್ನು ಓದುವುದರಿಂದ ಲಾಭವಿದೆ’(ಪು. vii). ಇದರ ಜೊತೆಗೆ ಕೆಲವು ಅಂಶಗಳನ್ನು ಗಮನಿಸಬಹುದು. ಅಡಿಗರ ಅನುವಾದ ಪ್ರವೃತ್ತಿಯ ಹಿಂದೆ ಅವರ ಬೆನ್ನ ಹಿಂದಿದ್ದ ಇಂಗ್ಲಿಷ್ ಎಂ.ಎ.ಪದವಿ ಮೂಲವಾಗಿದ್ದರೆ ನವ್ಯ ಪಂಥದ ಧೋರಣೆಗಳು ಅವರನ್ನು ಪಾಶ್ಚಾತ್ಯ ಸಾಹಿತ್ಯದತ್ತ ಸೆಳೆಯಿತು. ಅಡಿಗರು ನಡೆಸುತ್ತಿದ್ದ ‘ಸಾಕ್ಷಿ’ ಪತ್ರಿಕೆಯ ಭಾಗವಾಗಿ ಅನುವಾದಗಳು ಬಂದವು. ಎಲ್ಲಕ್ಕು ಮಿಗಿಲಾಗಿ ಅಡಿಗರು ಅನುವಾದಗಳನ್ನು ಇನ್ನೂ ವಿಭಿನ್ನ ಉದ್ದೇಶಗಳಿಂದ ಮಾಡಿರಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಅಡಿಗರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿರುವ ಮಾತುಗಳಿವೆ. 1947-48ರ ಸುಮಾರಿಗೆ ಮೈಸೂರಿನಲ್ಲಿ ಪರಿಚಯವಾದ ‘ಮೈಸೂರು ಪ್ರಿಂಟರ್ಸ್ & ಪಬ್ಲಿಷಿಂಗ್ ಹೌಸಿ’ನ ಮಾಲಿಕರಾದ ರಾಮರಾಯರು ಅಡಿಗರಿಗೆ ತಾವು ತಮ್ಮ ಮುದ್ರಣಾಲಯದ ಮೂಲಕ ‘ವಿಶ್ವಸಾಹಿತ್ಯ ಮಾಲೆ’ ಎಂಬ ಹೆಸರಿನಲ್ಲಿ ಇಂಗ್ಲಿಷಿನಲ್ಲಿರುವ ಉತ್ತಮ ಸಾಹಿತ್ಯ ಕೃತಿಗಳ ಅನುವಾದಗಳನ್ನು ಪ್ರಕಟಿಸಬೇಕೆಂಬ ಉದ್ದೇಶ ಹೊಂದಿರುವುದಾಗಿಯೂ ಆ ಕೆಲಸವನ್ನು ಅಡಿಗರು ಮಾಡಿಕೊಡಬೇಕಾಗಿಯೂ ಕೇಳುತ್ತಾರೆ. ಅದರಿಂದ ಒಂದಿಷ್ಟು ಆರ್ಥಿಕ ಅನುಕೂಲವೂ ಇದ್ದ ಕಾರಣಕ್ಕಾಗಿಯೊ ಏನೊ ಅಡಿಗರು ಈ ಕೆಲಸವನ್ನು ಮಾಡಲು ಒಪ್ಪಿಕೊಳ್ಳುತ್ತಾರೆ. ಇದನ್ನು ಅಡಿಗರು ತಮ್ಮ ಆತ್ಮಚರಿತ್ರೆಯಲ್ಲಿ(ನೆನಪಿನ ಗಣಿಯಿಂದ, 617À) ಹೇಳಿಕೊಂಡಿದ್ದಾರೆ. ಆದರೆ ‘ವಿಶ್ವಸಾಹಿತ್ಯಕ್ಕಾಗಿ ಮಾಡುತ್ತಿದ್ದ ಅನುವಾದ ಕಾರ್ಯ ‘ಜನತೆಯ ಶತ್ರು’ವಿನ ಜೊತೆಗೇ ಮುಗಿಯಿತು. ‘ಕಾವ್ಯಾಲಯ’ಕ್ಕಾಗಿ ಜೂಲ್ಸ್ ವರ್ನ್ ಎಂಬ ಸಾಹಸ ಕತೆಗಳನ್ನು ಬರೆದು ಪ್ರಸಿದ್ಧನಾದ ಸಾಹಿತಿಯ ‘A Journey to the Centre of the Earth’ ಎಂಬ ಗ್ರಂಥವನ್ನು ‘ಭೂಗರ್ಭ ಯಾತ್ರೆ’ ಎಂದು ಅನುವಾದಿಸಿಕೊಟ್ಟೆ. ಅದು 1950ರಲ್ಲಿ ಪ್ರಕಟವಾಯಿತು’(ನೆನಪಿನ ಗಣಿಯಿಂದ, 621) ಎಂದು ಹೇಳಿಕೊಂಡಿದ್ದಾರೆ. ಅಡಿಗರ ಸಮಗ್ರ ಸಾಹಿತ್ಯವನ್ನು ಸಂಪಾದಿಸಿರುವ ಸುಮತೀಂದ್ರ ನಾಡಿಗರು ಮಾತ್ರ ಅಡಿಗರ ಅನುವಾದಗಳ ಬಗ್ಗೆ ತಮ್ಮ ಮುನ್ನಿನ ಮಾತುಗಳಲ್ಲಿ, ‘1986ರಲ್ಲಿ ಅಡಿಗರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿರುವಾಗ ಆರ್ಥಿಕವಾಗಿ ಯಾರನ್ನೂ ಅವಲಂಬಿಸಬಾರದು, ತನ್ನ ಅನ್ನವನ್ನು ತಾವೇ ದುಡಿಯಬೇಕೆನ್ನುವ ಹಟದಿಂದ ವಿಶ್ವಸಾಹಿತ್ಯದ ಅನೇಕ ಕೃತಿಗಳನ್ನು ಅನುವಾದಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು..ಅಡಿಗರು ಆರಿಸಿದ ಪುಸ್ತಕಗಳಲ್ಲಿ ಕೆಲವನ್ನು ಅವರೇ ಅನುವಾದಿಸಿದರು. ಇನ್ನು ಕೆಲವನ್ನು ಬೇರೆಯವರಿಂದ ಭಾಷಾಂತರ ಮಾಡಿಸಿದರು. ಈ ಸಂದರ್ಭದಲ್ಲಿ ಪ್ರಕಟವಾದ ಪುಸ್ತಕ “ಕಾವ್ಯ ಜಗತ್ತು”. ಇದರಲ್ಲಿ ನೊಬೆಲ್ ಪ್ರಶಸ್ತಿ ಪಡೆದ 27ಕವಿಗಳ ಕಾವ್ಯವನ್ನು ಪರಿಚಯಿಸಲಿಕ್ಕೆ ಹೊರಟಿದ್ದು ಒಂದು ಸಾಹಸ ಅನ್ನಬೇಕು. ಆ ಕವಿಗಳ ಬಗ್ಗೆ ಏನೇನು ಮಾಹಿತಿ ಸಿಗುತ್ತದೆಯೋ ಅವನ್ನೆಲ್ಲವನ್ನೂ ತರಿಸಿಕೊಂಡು, ಓದಿ, ಆಯ್ಕೆ ಮಾಡಿ ಈ ಅನುವಾದಗಳನ್ನು ಮಾಡಿದರು...’(ಎಂ.ಗೋಪಾಲಕೃಷ್ಣ ಅಡಿಗರ ಸಮಗರ ಸಾಹಿತ್ಯ-7, ಪು.v)ಎಂದು ಉಲ್ಲೇಖಿಸಿದ್ದಾರೆ. ಈ ಉಲ್ಲೇಖಗಳನ್ನು ಸಮನಾಂತರವಾಗಿಟ್ಟು ನೋಡುವುದಾದರೆ ಅಡಿಗರು ಅನುವಾದ ಮಾಡಿದ್ದು ವಿಶ್ವಸಾಹಿತ್ಯವನ್ನು ಅನುಸಂಧಾನ ಮಾಡಬಲ್ಲ ತಮ್ಮ ಪ್ರತಿಭೆಯನ್ನು ಇನ್ನಷ್ಟು ಒರೆಗೆ ಹಚ್ಚುವುದಕ್ಕೆ ಹಾಗು ಅಲ್ಪ ಆರ್ಥಿಕ ಸಹಾಯಕ್ಕೆ ಎನ್ನುವುದು ಮೇಲ್ನೋಟಕ್ಕೆ ಒಪ್ಪುವಂತಿದೆ.

ಅಡಿಗರು ಮೂಲತಃ ಇಂಗ್ಲಿಷ್ ಅಧ್ಯಾಪಕರಾದ ಕಾರಣ ಮತ್ತು ಒಂದು ಉದ್ಯೋಗ ನೆಚ್ಚಿ ಎಲ್ಲಿಯೂ ಬಹಳ ಕಾಲ ನೆಲೆ ನಿಲ್ಲದೆ ಓಡಾಟ ಮಾಡುತ್ತಿದ್ದುದರಿಂದ ಅವರಿಗೆ ಸಹಜವಾಗಿಯೇ ಅನುವಾದ ಆಸಕ್ತಿ ಮತ್ತು ದುಡಿಮೆಗಳನ್ನು ಒದಗಿಸುವ ಕ್ಷೇತ್ರವಾಗಿತ್ತು ಎಂದು ಊಹಿಸಬಹುದು. ಮುಂದೆ ಕಾಕತಾಳೀಯ ಎಂಬಂತೆ ಅವರಿಗೆ ನ್ಯಾಷನಲ್ ಬುಕ್‍ ಟ್ರಸ್ಟ್ ಸಂಸ್ಥೆಯಲ್ಲಿ ಸಂಪಾದಕೀಯ ಬಳಗದಲ್ಲಿ ಡೆಪ್ಯುಟಿ ಡೈರೆಕ್ಟರ್ ಕೆಲಸಕ್ಕೆ 1972ರಲ್ಲಿ ಆಹ್ವಾನ ಬಂದಿತು. ನ್ಯಾಷನಲ್ ಬುಕ್ ಟ್ರಸ್ಟ್ ಕೆಲಸವೆಂದರೆ ಭಾರತದ ಬೇರೆ ಬೇರೆ ಭಾಷೆಗಳ ಪುಸ್ತಕಗಳನ್ನು ಭಾಷಾಂತರಿಸಿ ಪ್ರಕಟಿಸುವುದು ಮತ್ತು ಅದನ್ನು ಕಡಿಮೆ ದರದಲ್ಲಿ ಓದುಗರಿಗೆ ಕೊಡುವುದು. ಇಲ್ಲಿ ಕೆಲಸ ಮಾಡಿದ ಅವಧಿ ಕೇವಲ ಆರೇಳು ತಿಂಗಳುಗಳಾದರೂ ಕೆಲಸದ ಉದ್ದೇಶವು ಭಾಷಾಂತರವನ್ನು ಪ್ರೋತ್ಸಾಹಿಸುವ ಕೆಲಸವೇ ಆದುದರಿಂದ ಅಲ್ಲಿ ಪುನಾ ಅಡಿಗರು ಭಾಷಾಂತರವನ್ನು ಎದುರ್ಗೊಳ್ಳುವುದು ಅನಿವಾರ್ಯವಾಗಿತ್ತು. ಇದಾದ ನಂತರ ಅಡಿಗರು ಆರಂಭಿಸಿದ ‘ಸಾಕ್ಷಿ’ ಪತ್ರಿಕೆಯು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಜಗತ್ತಿನ ಸಾಹಿತ್ಯವನ್ನೂ ಗಮನಿಸುವ ನಿಟ್ಟಿನಲ್ಲಿ ರೂಪುಗೊಂಡಿತ್ತಾದ್ದರಿಂದ ಅಲ್ಲಿಯೂ ಅನುವಾದ/ಮರುಬರವಣಿಗೆಗಳು ಇರುವುದನ್ನು ಗಮನಿಸಬಹುದು.

ಗೋಪಾಲಕೃಷ್ಣ ಅಡಿಗರು ಮಾಡಿದ ಅನುವಾದಗಳು ತಮ್ಮ ಆಸಕ್ತಿಯ ಫಲವಾಗಿ ಮಾಡಿದ ಅನುವಾದಗಳಿಗಿಂತಲು ಹೆಚ್ಚಾಗಿ ಸಾಂದರ್ಭಿಕವಾಗಿ ಅವರಿಗೆ ಒದಗಿ ಬಂದ ಅವಕಾಶಗಳು ಹಾಗು ಒತ್ತಡಗಳ ಕಾರಣದಿಂದ ಮಾಡಿದ ಅನುವಾದಗಳು ಮೇಲುಗೈಯಾಗಿವೆ ಎನ್ನಿಸುತ್ತದೆ. ಅಡಿಗರು ಅನವಾದಕ್ಕೆ ಎತ್ತಿಕೊಂಡ ಪಠ್ಯಗಳು ವೈವಿಧ್ಯಮಯವಾಗಿದ್ದು ಅವು ಕಾವ್ಯ, ನಾಟಕ, ಸಣ್ಣಕತೆ, ಇತಿಹಾಸ, ಜೀವನ ಚರಿತ್ರೆ, ನೈಜಕಥನ, ಕಾದಂಬರಿ, ಪ್ರಬಂಧಗಳೇ ಮೊದಲಾದ ಜಾನರ್‍ಗಳನ್ನು ಒಳಗೊಂಡಿವೆ. ಬಹುತೇಕ ಈ ಎಲ್ಲಾ ಜಾನರ್‍ಗಳಲ್ಲಿ ಅಡಿಗರು ಪರ್ಯಾಯವಾಗಿ ಎಂಬಂತೆ ತಮ್ಮ ಸ್ವಂತ ಬರವಣಿಗೆಗಳನ್ನೂ ಮಾಡಿದ್ದಾರೆ. ನವ್ಯದ ಪ್ರಾತಿನಿಧಿಕ ಕವಿ ಎಂದು ಅಡಿಗರನ್ನು ಬಿಂಬಿಸಿದ್ದರಿಂದ ಅಡಿಗರನ್ನು ಕವಿಯಾಗಿ ವೈಭವೀಕರಿಸಿ ಅವರ ಇನ್ನಿತರ ಸೃಜನಶೀಲ ಪ್ರಕಾರಗಳ ಬರವಣಿಗೆಯನ್ನು ಹಿನ್ನೆಲೆಗೆ ತಳ್ಳಿದಂತಾಗಿದೆ. ನವೋದಯ ಕಾಲದ ಬರಹಗಾರರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವುದಕ್ಕೆಂಬಂತೆ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿದ್ದಂತೆ ಅಡಿಗರಿಗೂ ತುಡಿತ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಅವರ ಕತೆ, ಕಾದಂಬರಿಗಳು, ಲೇಖನಗಳು ಸಾಕ್ಷಿಯಾಗಿವೆ. ಅಡಿಗರ ಅನುವಾದ ಸಾಹಿತ್ಯದಲ್ಲಿಯೂ ವೈವಿಧ್ಯಮಯವಾದ ಪ್ರಕಾರಗಳು ಸೇರಿವೆ. ಈ ಅನುವಾದಗಳ ಗುಣಮಟ್ಟವು ಒಂದೇ ತೆರನಾಗಿಲ್ಲ.

ಅಡಿಗರ ಅನುವಾದ ಸಾಹಿತ್ಯ ಸಂಗ್ರಹದಲ್ಲಿ ಅಮೆರಿಕನ್ ಸಾಹಿತ್ಯವೇ ಪ್ರಧಾನವಾಗಿದೆ. ವಾಲ್ಟ್ ವಿಟ್‍ಮನ್ ಕವಿತಾ ಸಂಗ್ರಹ, ಎಡ್ಗರ್ ಅಲೆನ್ ಪೋನ ಸಣ್ಣಕತೆಗಳು, ಅಮೆರಿಕಾದ ಕರಿಯ ವಿಜ್ಞಾನಿ ಜಾರ್ಜ್ ವಾಷಿಂಗ್ಟನ್ ಕಾರ್ವರ್ ಜೀವನ ಚರಿತ್ರೆ, ಹರ್ಮನ್ ಮೆಲ್ವಿಲ್‍ನ ನರಭಕ್ಷಕ ಜೊತೆಗಿನ ಕಥನ, ನೆಥಾನಿಯಲ್ ಹಾಥಾರ್ನ್‍ನ ಕಾದಂಬರಿ, ಥೋರೊ ಪ್ರಬಂಧಗಳು ಹೀಗೆ ಅವರ ಆಯ್ಕೆಗಳು ಇವೆ. ಇವನ್ನು ಹೊರತು ಪಡಿಸಿ ಐರೋಪ್ಯ ಭಾಷೆಗಳಾದ ಫ್ರೆಂಚ್, ಜರ್ಮನ್, ಇಟಾಲಿಯಾ ಮುಂತಾದ ಭಾಷೆಗಳ ಸಾಹಿತ್ಯ ಪಠ್ಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಇಂಗ್ಲಿಷ್ ಬರಹಗಾರರ ಅನುವಾದಗಳು ಬೆರಳೆಣಿಕೆಯಷ್ಟು. ಎಲಿಯೆಟ್‍ನ ‘ವೇಸ್ಟ್ ಲ್ಯಾಂಡ್’ ನ ದಟ್ಟ ಪ್ರಭಾವ ಇದೆ ಎಂದೇ ಓದುವ ‘ಭೂಮಿಗೀತ’ವನ್ನು ಬರೆದ ಅಡಿಗರು ಅನುವಾದದಲ್ಲಿ ಎಲಿಯಟ್‍ನ ‘Four Quartets’ ಬಿಟ್ಟರೆ ಬೇರೆ ಪಠ್ಯಗಳಿಲ್ಲ. ಅಲ್ಲದೆ ಮಾಡರ್ನಿಸ್ಟ್ ಪಂಥ/ಕವಿಗಳಿಂದ ಪ್ರೇರೇಪಿತವಾಗಿದೆ ಎನ್ನಲಾದ ಕನ್ನಡ ನವ್ಯಪಂಥವು ಪ್ರಾರ್ದುಭಾವದಲ್ಲಿದ್ದಂತಹ ಸಂದರ್ಭದಲ್ಲಿಯೂ ಅಡಿಗರ ಅನುವಾದದ ಆಸಕ್ತಿ ಈ ಪಂಥದ ಕವಿಗಳ ಮೇಲೆ ಬಿದ್ದಿಲ್ಲ.

ಕಾವ್ಯಾನುವಾದ:
ಗೋಪಾಲಕೃಷ್ಣ ಅಡಿಗರು ಮಾಡಿದ ಕಾವ್ಯಾನುವಾದಗಳಲ್ಲಿ ಅಮೆರಿಕನ್ ಕವಿ ವಾಲ್ಟ್ ವಿಟ್‍ಮನ್‍ನ ‘‘Leaves of Grass’ (ಕನ್ನಡದಲ್ಲಿ ‘ಹುಲ್ಲಿನ ದಳಗಳು’) ಹಾಗು ಜಗತ್ತಿನ ನೊಬೆಲ್ ಪುರಸ್ಕೃತ ಕವಿಗಳ ಕಾವ್ಯಗಳನ್ನು ಅನುವಾದ ಮಾಡಿರುವುದು ಪ್ರಮುಖವಾಗಿವೆ. ಗೋಪಾಲಕೃಷ್ಣ ಅಡಿಗರ ಸಮಗ್ರ ಸಾಹಿತ್ಯ ಮಾಲಿಕೆಯ ಸಂಪಾದಕರಾದ ಸುಮತೀಂದ್ರ ನಾಡಿಗರು ‘ಕನ್ನಡದಾಚೆಗಿನ ಕಾವ್ಯ ಜಗತ್ತನ್ನು ನಮ್ಮ ಕವಿಗಳು ಓದಿ, ಕಾವ್ಯವಸ್ತುವನ್ನು, ವಸ್ತುವಿನ ಬಗ್ಗೆ ಸಾಧ್ಯವಾಗುವ ಧೋರಣೆಗಳನ್ನೂ, ಅನುಭವವನ್ನೂ ಗ್ರಹಿಸುವ ಕ್ರಮವನ್ನು, ಆಲೋಚಿಸಿ ತಮ್ಮ ಸ್ವಂತಿಕೆಗೆ ಹೊಸ ಆಯಾಮಗಳನ್ನು ಸೇರಿಸಿಕೊಳ್ಳುವುದಕ್ಕೆ ಈ ಅನುವಾದಗಳು ಉಪಯೋಗವಾಗಬಹುದಾದ ಉತ್ತೇಜಕಗಳಾಗಬಹುದೆನ್ನುವುದು ಅಡಿಗರ ಮನಸ್ಸಿನಲ್ಲಿತ್ತು ಎನ್ನಿಸುತ್ತದೆ’(ಎಂ.ಗೋಪಾಲಕೃಷ್ಣ ಅಡಿಗರ ಸಮಗರ ಸಾಹಿತ್ಯ-7, ಪು.v). ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ 1966ರಲ್ಲಿ ವಾಲ್ಟ್ ಮಿಟ್‍ಮನ್ ಕವಿಯ ‘Leaves of Grass’ ಎನ್ನುವ ಕವನ ಸಂಕಲನದಿಂದ ಆಯ್ದ ನೂರಾ ಒಂದು ಕವಿತೆಗಳನ್ನು ಅನುವಾದಿಸಿದರು. ವಿಟ್‍ಮನ್ನಿನ ಕಾವ್ಯದ ಲಯಗಳನ್ನು ಹಿಡಿಯುವಂತೆ ಅಡಿಗರ ಅನುವಾದ ಸಾಗುತ್ತದೆ., ‘ವಾಲ್ಟ್ ವಿಟ್‍ಮನ್‍ನ ಲಯಬದ್ಧ ವಾಕ್ಯಖಂಡಗಳ ಬೀಸು, ಮತ್ತು ಉದ್ದೀಪಕ ಗುಣವನ್ನು ‘ಗೊಂದಲಪುರ’ದಲ್ಲಿ ಕಾಣುವುದರಿಂದ, ಬಹುಷಃ ಅಡಿಗರು ಈ ಅನುವಾದಕ್ಕೆ ಕೈಹಾಕುವ ಮುಂಚೆ ವಿಟ್‍ಮನ್‍ನನ್ನು ಓದಿರಬೇಕು ಎನ್ನಿಸುತ್ತದೆ’(ಎಂ.ಗೋಪಾಲಕೃಷ್ಣ ಅಡಿಗರ ಸಮಗರ ಸಾಹಿತ್ಯ-7, ಪು.v).

‘ಕಾವ್ಯ ಜಗತ್ತು’ ಅಡಿಗರು ಅನುವಾದಿಸಿದ ವಿವಿಧ ದೇಶಗಳ ನೊಬೆಲ್ ಪುರಸ್ಕೃತ ಕವಿಗಳ ಕಾವ್ಯಗಳ ಸಂಕಲನ. ‘ಕಾವ್ಯ ಜಗತ್ತು’ 26 ಕವಿಗಳ ಆಯ್ದ ಕವಿತೆಗಳ ಅನುವಾದ ಸಂಕಲನ. ಇದರ ವಿಶೇಷ ಎಂದರೆ ಈ ಕವಿಗಳು ನೊಬೆಲ್ ಪುರಸ್ಕೃತರು. ಸುಲ್ಲಿ ಪ್ರೂಧಮ್(ಫ್ರೆಂಚ್), ಪೆರ್ಸ್(ಫ್ರೆಂಚ್), ಕಾರ್ದುಚಿ(ಇಟಾಲಿಯನ್), ರುದ್‍ಯಾರ್ದ್ ಕಿಪ್ಲಿಂಗ್(ಇಂಗ್ಲಿಷ್), ಪಾಲ್‍ವಾನ್ ಹೇಸೆ(ಜರ್ಮನ್), ರವೀಂದ್ರನಾಥ ಟಾಗೂರ್(ಬಂಗಾಲಿ), ವೆರ್ನರ್ ವಾನ್ ಹೈದೆನ್‍ಸ್ತಾಮ್(ಸ್ವೀಡಿಷ್), ಕಾರ್ಲ್ ಸ್ಪಿಟೆಲರ್(ಸ್ವೀಡಿಷ್), ಎರಿಕ್ ಕಾರ್ಲ್‍ಫೆಲ್ತ್(ಸ್ವೀಡಿಷ್), ಪಾರ್ ಲಾಗರ್ ಕ್ವಿಸ್ಟ್(ಸ್ವೀಡಿಷ್), ಇವಾನ್ ಬುನಿನ್(ರಷ್ಯನ್), ಹರ್ಮನ್ ಹೆಸ್(ಜರ್ಮನ್), ಡಬ್ಲ್ಯೂ.ಬಿ.ಯೇಟ್ಸ್(ಐರಿಷ್/ಇಂಗ್ಲಿಷ್), ಟಿ.ಎಸ್.ಎಲಿಯಟ್(ಅಮೆರಿಕನ್/ಇಂಗ್ಲಿಷ್), ಗೇಬ್ರಿಯೆಲಾ ಮಿಸ್ತ್ರರ್(ದಕ್ಷಿಣ ಅಮೆರಿಕಾ), ಯುವಾನ್ ರಮೊನ್ ಯಿಮೆನೇಸ್(ಸ್ಪ್ಯಾನಿಷ್), ಪಾಸ್ತರ್‍ನಾಕ್(ರಷ್ಯನ್), ಜಾರ್ಜ್ ಸೆಫರೀಸ್(ಗ್ರೀಕ್), ನೆಲ್ಲಿ ಲಿಯೊನಿ ಸ್ಯಾಕ್ಸ್(ಜರ್ಮನ್), ಮೀಗೆಲ್ ಏಂಜೆಲ್ ಅಸ್ತೂರಿಯಾಸ್(ಗ್ವಾಟೆಮಾಲಾ), ಪಾಬ್ಲೊ ನೆರೂಡ(ಚಿಲಿ), ಯೂಜಿನಿಯೊ ಮೊಂತಾಲೆ(ಇಟಾಲಿಯನ್), ಜೆಸ್ಲಾ ಮಿಲೋತ್ಸ್(ಪೋಲಿಷ್), ಯಾರೊಸ್ಲಾವ ಸಿಫರ್ತ್(ಪ್ರೇಗ್)-ಈ ಎಲ್ಲ ಮಹನೀಯರ ಕೆಲವು ಆಯ್ದ ಕವಿತೆಗಳನ್ನು ಅಡಿಗರು ಅನುವಾದ ಮಾಡಿದ್ದಾರೆ. –ಈ ಕವಿಗಳ ಗುಚ್ಛದಲ್ಲಿ ಅಭಿಜಾತ ಪರಂಪರೆಗೆ ಹಿಂದಿರುಗಿ ಬರೆಯಬೇಕೆನ್ನುವ ಕವಿಗಳಿದ್ದಾರೆ; ರಮ್ಯವಾದದಿಂದ ದೂರ ಸರಿದು ತಮ್ಮದೇ ಆದ ನವ ರಾಷ್ಟ್ರೀಯತೆ, ಆಧುನಿಕತಾವಾದದ ಪ್ರಭಾವದಲ್ಲಿ ಬರೆಯಬೇಕೆಂಬ ಧೋರಣೆಯ ಕವಿಗಳಿದ್ದಾರೆ. ಇವರ ಧೋರಣೆಗಳನ್ನು ಅರಿಯುವುದಕ್ಕೆ ಕವಿತೆಗಳ ಪೂರ್ವದಲ್ಲಿ ಪುಟ್ಟ ಪರಿಚಯಾತ್ಮಕ ಟಿಪ್ಪಣಿಗಳಿವೆ. ಇಲ್ಲಿ ಅನುವಾದಕ್ಕಾಗಿ ಅವರು ಆಯ್ಕೆ ಮಾಡಿಕೊಂಡ ಕವಿಗಳಲ್ಲಿ ಬಹುತೇಕ ರೊಮ್ಯಾಂಟಿಕ್ ಪಂಥವನ್ನು ವಿಮರ್ಶಾತ್ಮಕವಾಗಿ ನೋಡುವ ಕವಿಗಳಾಗಿದ್ದು ಅವರ ಅನುವಾದಗಳು ಪ್ರಾಯಶಃ ಅಡಿಗರ ಕಾವ್ಯದ ನಿಲುವಿಗೆ ಪೂರಕವಾಗಿರಬಹುದು.

ಈ ಕಾವ್ಯಾನುವಾದವನ್ನು ಕವಿಗಳ ಮೇಲಿನ ಗೌರವದಿಂದ ಓದುವಾಗ ಕೆಲವೊಮ್ಮೆ ಪೇಲವವಾದ, ದುರ್ಬಲವಾದ ಅನುವಾದದ ಸಾಲುಗಳಿವೆ. ಇವನ್ನು ಅಡಿಗರ ಕೈಯಿಂದ ಆದ ಅನುವಾದಗಳೆಂದು ನಂಬುವುದು ಕಷ್ಟ. ಉದಾ: ‘ಪ್ರತಿಗಾಳಿಯೆಲೆಯಲ್ಲು ಹೊಸ ಒಲವ ಸವಿಯುತ್ತಿದ್ದ ಓವೃದ್ಧ ಕಚ್ಛೆಹರುಕ’, ‘ಇಲ್ಲಿ ಯಾವಯಾವುದು ಗರ್ಭ ನಿಂತು, ಹುಟ್ಟಿ ಸಾಯುತ್ತದೋ ಅವನ್ನು’(ಯೇಟ್ಸ್); ‘ಕಾಬೂಲು ನದಿಯ ಹಾಯ್ಗಡ’, ‘ಆನಂತರ ನಾನು ನನ್ನ ಸಂಶೋಧನೆಯ ಒಳನುಗ್ಗಿದೆ’, ‘ಅನಂತರ ನಡೆದ ಸ್ಥೂಲ ಸರ್ವೇ ನನ್ನ ಮರಗಳನ್ನಾಯ್ದು ಉಂಗುರಾಕೃತಿಯಲ್ಲಿ ಬರೆಹಾಕಿದೆ’, ‘ನಾನೂಹಿಸಿಟ್ಟಿದ್ದ ಪಟ್ಟಣತಾಣಗಳ ಕಂಡುಕೊಳ್ಳುವುದು’(ಕಿಪ್ಲಿಂಗ್)- ಈ ತರದ ಸಾಲುಗಳು ಪದಶಃ ಅನುವಾದದ ಮಾದರಿಗಳು. ಇವನ್ನು ಓದುವುದಕ್ಕೆ ಹಿಂಸೆಯೆನಿಸುತ್ತದೆ. ಇಷ್ಟೊಂದು ಕಷ್ಟದಿಂದ ನೊಬೆಲ್ ಪುರಸ್ಕೃತರ ಸಾಹಿತ್ಯವನ್ನು ಓದಿ ತಿಳಿದುಕೊಳ್ಳಬೇಕೇಕೆ? ಎನ್ನಿಸಿಬಿಡುತ್ತದೆ. ಇವಕ್ಕೆ ಮೂಲ ಪ್ರಾಯಶಃ ಇಂಗ್ಲಿಷ್ ಆಗಿರುವುದರಿಂದ ಇವು ಎರಡೆರಡು ಬಾರಿ ಅನುವಾದಗೊಂಡು ಅರ್ಥ, ಭಾವಗಳಲ್ಲಿ ಇನ್ನಷ್ಟು ಆಳ್ಳಕವಾಗಿವೆ. ಮೂಲಪದ್ಯಗಳ ಆಯ್ಕೆ ಯಾಕಾಗಿ ಉತ್ಕೃಷ್ಟ? ಅವುಗಳ ಸಮರ್ಥನೆಯನ್ನು ಅನುವಾದಕರು ಮಾಡಬಹುದಾಗಿತ್ತು ಎನ್ನಿಸುತ್ತದೆ.

ಗದ್ಯಾನುವಾದಗಳು:
ಅಡಿಗರ ಅನುವಾದಗಳಲ್ಲಿ ಕಾವ್ಯಕ್ಕಿಂತ ಗದ್ಯಾನುವಾದಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಕಾದಂಬರಿಗಳು, ಸಣ್ಣಕತೆಗಳು, ಪ್ರಬಂಧಗಳು, ಜೀವನ ಚರಿತ್ರೆಗಳು, ಲೇಖನಗಳು, ವೈಚಾರಿಕ ಬರಹಗಳು ಇತ್ಯಾದಿ ಪ್ರಕಾರಗಳ ಅನುವಾದಗಳು ಅವರ ಹೆಸರಿನಲ್ಲಿವೆ. ಇವು ಮೂಲಭೂತವಾಗಿ ಅಡಿಗರ ಆಸಕ್ತಿಯನ್ನು ವಿವರಿಸುವುದಕ್ಕಿಂತ ಹೆಚ್ಚಿನದಾಗಿ ಅವರು ವಿವಿಧ ಸಂಘ/ಸಂಸ್ಥೆಗಳ ಜೊತೆ ಮಾಡಿಕೊಂಡ ಒಪ್ಪಂದಗಳ ಸಲುವಾಗಿ ಮಾಡಿದಂತವು. ಆದುದರಿಂದ ಇವುಗಳ ಹಿಂದೆ ಅವರ ಧೋರಣೆಯನ್ನು ಹುಡುಕುವುದು ಉಚಿತವೆನಿಸದು. ಆದರೆ ಇಲ್ಲಿ ಗಮನಿಸಬೇಕಾದುದು ಅಡಿಗರು ತಮ್ಮನ್ನು ತಾವು ಅನುವಾದದಲ್ಲಿ ತೊಡಗಿಸಿಕೊಂಡಿರುವಾಗ ಕನ್ನಡದಲ್ಲಿ ಯಾವುದು ಹೆಚ್ಚಾಗಿ ಅನುವಾದಗೊಳ್ಳುತ್ತಿದ್ದವೊ ಅಂತಹ ಸಾಹಿತ್ಯವನ್ನು ಅವರು ಎತ್ತಿಕೊಂಡಿಲ್ಲ. ಕನ್ನಡದಲ್ಲಿ ಮೇಲಿಂದ ಮೇಲೆ ಅನುವಾದಗೊಳ್ಳುತ್ತಿದ್ದ ಇಂಗ್ಲಿಷ್/ಯುರೋಪಿನ ಪಠ್ಯಗಳಲ್ಲಿ ಷೇಕ್ಸ್‍ಪಿಯರ್, ರೊಮ್ಯಾಂಟಿಕ್ ಹಾಗು ವಿಕ್ಟೋರಿಯನ್ ಸಾಹಿತ್ಯ, ಚೆಕಾಫ್, ಟಾಲ್‍ಸ್ಟಾಯ್, ದೊಸ್ತೊವಸ್ಕಿ, ಯೇಟ್ಸ್, ವಿಕ್ಟರ್ ಹ್ಯೂಗೊ ಮುಂತಾದವನ್ನು ಅಡಿಗರ ಅನುವಾದ ಭಂಡಾರದಲ್ಲಿ ಕಾಣುವುದಿಲ್ಲ. ಇದರ ಬದಲಾಗಿ ಯಾವುದು ಕನ್ನಡಕ್ಕೆ ಅದುವರೆಗು ಮರೆಯಲ್ಲಿತ್ತೊ ಅಂತಹದಕ್ಕೆ ಅಲ್ಲಿ ಪ್ರಾಶಸ್ತ್ಯ ಸಿಕ್ಕಿದೆ. ವಿಶೇಷವಾಗಿ ಅಮೆರಿಕನ್ ಸಾಹಿತ್ಯವನ್ನು ಕನ್ನಡದಲ್ಲಿ ಇಂಗ್ಲಿಷ್ ಸಾಹಿತ್ಯದ ಭಾಗವಾಗಿಯೇ ಓದಲ್ಪಡುತ್ತಿತ್ತು. ಅಮೆರಿಕನ್ ಸಾಹಿತ್ಯವೆನ್ನುವುದು ವಿಶೇಷವಾಗಿ ಅಲ್ಲಿನ ನೆಲದ ಸ್ವಾದವನ್ನು ಒಳಗೊಂಡ, ಅನೇಕ ಹೋರಾಟಗಳ ಸಂಕಥನಗಳನ್ನು ಒಳಗೊಂಡ ಸಾಹಿತ್ಯ. ಮೇಲ್ನೋಟಕ್ಕೆ ಇಂಗ್ಲಿಷ್ ಆಗಿದ್ದರೂ ಅಮೆರಿಕನ್ನರ ಇಂಗ್ಲಿಷೇ ವಿಭಿನ್ನ. ಹಾಗೆಯೇ ಅವರ ಸಂಸ್ಕೃತಿಯೂ ಸಹ ವಿಭಿನ್ನವಾಗಿರುವಂತದ್ದು. ಇಂತಹ ಸಾಹಿತ್ಯವನ್ನು ಅಡಿಗರು ಅನುವಾದಕ್ಕೆ ಎತ್ತಿಕೊಂಡಿದ್ದರಿಂದ ಕನ್ನಡದ ಓದುಗರಿಗೆ ನೆಥಾನಿಯಲ್ ಹಾಥಾರ್ನ್, ಮೆಲ್ವಿಲ್ ಮುಂತಾದ ಲೇಖಕರನ್ನು ಕನ್ನಡದಲ್ಲಿ ಓದುವುದು ಸಾಧ್ಯವಾಯಿತು.

ಅಡಿಗರು ಮೂರು ಕಾದಂಬರಿಗಳನ್ನು ಅನುವಾದ ಮಾಡಿದ್ದಾರೆ. ನೆಥಾನಿಯಲ್ ಹಾಥಾರ್ನ್ ‘ದ ಸ್ಕಾರ್ಲೆಟ್ ಲೆಟರ್’ ಅನ್ನು ‘ಕೆಂಪು ಅಕ್ಷರ’ ಎಂದೂ ಅಲೆಕ್ಸಾಂಡರ್ ಡ್ಯೂಮಾನ -‘ಟ್ವೆಂಟಿ ಇಯರ್ಸ್ ಆಫ್ಟರ್’ ಅನ್ನು ‘ನಾಲ್ಕು ಮಂದಿ ಗೆಳೆಯರ ಕಥೆ’ ಎಂದೂ ಅನುವಾದ ಮಾಡಿದ್ದಾರೆ. ಹರ್ಮನ್ ಮೆಲ್ವಿಲ್‍ನ ‘ಟೈಪೀ’ ಎನ್ನುವ ರೊಮಾನ್ಸ್ ಅನ್ನೂ ಕನ್ನಡದಲ್ಲಿ ತಂದಿದ್ದಾರೆ. ಹಾಥಾರ್ನ್‍ನ ‘ದ ಸ್ಕಾರ್ಲೆಟ್ ಲೆಟರ್’ ಅಮೆರಿಕನ್ ಪ್ಯೂರಿಟನ್ ಸಮಾಜದ ಕಠಿಣ ಕಟ್ಟುಕಟ್ಟಳೆಗಳ ನಡುವೆ ಅನೀತಿಯುತವಾಗಿ ಬಸಿರಾಗುವ ಹೆಣ್ಣು ಜೀವನ ಪರ್ಯಂತ ತನ್ನ ಎದೆಯ ಮೇಲೆ ‘ಎ’(ಅಡಲ್ಟ್ರೆಸ್ ಎಂಬ ಸೂಚಕವಾಗಿ ಇರುವ ಅಕ್ಷರ) ಎಂಬ ಅಕ್ಷರವನ್ನು ಧರಿಸಬೇಕೆನ್ನುವ ಶಿಕ್ಷೆಗೆ ಗುರಿಯಾಗುತ್ತಾಳೆ. ಇದರಲ್ಲಿ ಭಾಗಿಯಾಗಿರುವವನು ಸ್ವತಃ ಆ ಕಠಿಣ ನಿರ್ಬಂಧದ ಸಮಾಜಕ್ಕೆ ಉಪದೇಶ ಮಾಡುವ ಪಾದ್ರಿ ಡಿಮ್ಮೆಸ್‍ಡೇಲ್. ಈ ಬಗೆಯ ಸಮಾಜವೇ ಒಂದು ಅಪರಿಚಿತವಾದ ಸಮಾಜವನ್ನು ತೆರೆದಿಡುವಂತದ್ದು. ಇನ್ನೊಬ್ಬ ಅಮೆರಿಕನ್ ಕಾದಂಬರಿಕಾರನಾದ ಹರ್ಮನ್ ಮೆಲ್ವಿಲ್‍ನ ರೋಮಾಂಚಕಾರಿ ಕಥನವಾದ ‘ಟೈಪೀ’ ಯ ಕನ್ನಡಾನುವಾದವನ್ನು ಅಡಿಗರು ಮಾಡಿದ್ದಾರೆ. ರೊಮಾನ್ಸ್ ಬರಹದ ತೀವ್ರತೆ ಅದರ ರೋಮಾಂಚಕಾರಿ ಅಂಶಗಳನ್ನೆಲ್ಲ ಹಿಡಿದಿಡುವಂತೆ ಅಡಿಗರ ಅನುವಾದವು ಬಂದಿದೆ. ಅಡಿಗರ ಇನ್ನೊಂದು ಕಾದಂಬರಿ ಆಯ್ಕೆ ಎಂದರೆ ಅಲೆಕ್ಸಾಂಡರ್ ಡ್ಯೂಮಾ ಕಾದಂಬರಿ-‘ಟ್ವೆಂಟಿ ಇಯರ್ಸ್ ಆಫ್ಟರ್’ ಅನ್ನು ‘ನಾಲ್ಕು ಮಂದಿ ಗೆಳೆಯರ ಕಥೆ’ ಎಂಬುದಾಗಿ ಸಂಗ್ರಹಿಸಿ ಅನುವಾದ ಮಾಡಿದ್ದಾರೆ. ಇದೊಂದು ಐತಿಹಾಸಿಕ ಕಾದಂಬರಿ. ಹೀಗೆ ಮೂರು ಒಂದೇ ಜಾನರ್‍ನಲ್ಲಿದ್ದರೂ ಅದರೊಳಗೆ ವಿಭಿನ್ನವಾದ ಜಾನರ್‍ಗಳು. ಇವುಗಳನ್ನು ಕನ್ನಡಕ್ಕೆ ಪರಿಚಯಿಸಿದ್ದು ಉಪಯುಕ್ತವಾಗಿದೆ.

ವಿಶ್ವ ಸಾಹಿತ್ಯ ಮಾಲಿಕೆಗಾಗಿ ಅಡಿಗರು ಎಡ್ಗರ್ ಅಲೆನ್ ಪೋ ಸಣ್ಣಕತೆಗಳನ್ನು ‘ಸುವರ್ಣಕೀಟ’ ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಅದರಲ್ಲಿ ಅಮೆರಿಕನ್ ಕತೆಗಾರನಾದ ಅಲೆನ್ ಪೋನ ಮೂರು ಕತೆಗಳನ್ನು ಅನುವಾದಿಸಲಾಗಿದೆ. ಪೋನ ಶೈಲಿಯ ಕತೆಗಳನ್ನು ಪ್ರಾತಿನಿಧಿಕವಾಗಿ ಆಯ್ದು ಅನುವಾದ ಮಾಡಿರುವುದು ವಿಶೇಷ. ಇವುಗಳಿಗೆ ಮತ್ತೆ ಬೇಡಿಕೆ ಬಂದಿದ್ದರಿಂದ ಮರುಮುದ್ರಣಗೊಂಡವು. ಅಡಿಗರು ಅನುವಾದಕ್ಕೆ ಎತ್ತಿಕೊಂಡ ಇನ್ನೊಬ್ಬ ಕತೆಗಾರನೆಂದರೆ ಫ್ರೆಂಚ್ ಕತೆಗಾರನಾದ ಮೊಪಾಸ. ಸಣ್ಣಕತೆಗಳನ್ನು ಸೊಗಸಾಗಿ ಹೆಣೆಯುವ ಕೌಶಲವುಳ್ಳ ಮೊಪಾಸನನ್ನು ಅನುವಾದಕ್ಕೆ ತೆಗೆದುಕೊಂಡಿರುವುದು ಸ್ವಾಗತಾರ್ಹವೆನಿಸುತ್ತದೆ. ವಿಶೇಷ ಎಂದರೆ ಅಡಿಗರ ಅನುವಾದಗಳು ಮೊಪಾಸನ ಹೆಚ್ಚು ಪರಿಚಿತವಲ್ಲದ ಕತೆಗಳನ್ನು ಅನುವಾದಿಸಿರುವುದು. ಇವು ಕನ್ನಡದಲ್ಲಿ ಪ್ರಾಯಶಃ ಅನುವಾದಗೊಳ್ಳದ ಕತೆಗಳು. ಇವುಗಳ ರಮಣೀಯತೆಯನ್ನು ಸರಳವಾದ ಕನ್ನಡದಲ್ಲಿ ಅಡಿಗರು ಭಾಷಾಂತರ ಮಾಡಿದ್ದಾರೆ. ಇದಲ್ಲದೆ ‘ದೆವ್ವದ ಕತೆಗಳು’ ಎನ್ನುವ ಹೆಸರಿನಲ್ಲಿ ಸಮ್ಮೋಹಿನಿಗೆ ಒಳಗಾದವರ ಕಥನಗಳನ್ನು ಅನುವಾದಿಸಿದ್ದಾರೆ. ಇದು ಕೂಡ ಅಡಿಗರ ಅನುವಾದದ ವಿಶೇಷವೆಂದೇ ಹೇಳಬೇಕು. ಏಕೆಂದರೆ ಈ ಬಗೆಯ ಜಾನರ್ ಕನ್ನಡದ ಮಟ್ಟಿಗೆ ಹೊಸದಾಗಿದ್ದು ತಾಜಾತನದಿಂದ ಗಮನ ಸೆಳೆಯುತ್ತದೆ. ಅಡಿಗರ ನವನವೋನ್ಮೇಷ ಪ್ರಜ್ಞೆಯು ಅವರ ಅನುವಾದದ ಆಯ್ಕೆಗಳಲ್ಲಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.

ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಬಂಧದ ಪ್ರಕಾರ ಹೊಸತಾಗಿ ಆರಂಭವಾದಾಗ ಅದಕ್ಕೆ ಪತ್ರಿಕೆಗಳಲ್ಲಿ ಒಳ್ಳೆಯ ಸ್ವಾಗತ ಸಿಕ್ಕಿತು. ಅಲ್ಲದೆ ಆ ಜಾನರ್ ಅನ್ನು ಬಳಸಿ ಪ್ರಬಂಧ ಬರೆದ ಅನೇಕ ಪ್ರತಿಭಾಶಾಲಿ ಲೇಖಕರ ಪ್ರಬಂಧಗಳು ಇಂದಿಗೂ ಸರ್ವಮಾನ್ಯವಾಗಿವೆ. ಪ್ರಬಂಧಗಳ ಮೊದಲ ಬೀಡಿನ ಪಠ್ಯಗಳನ್ನು ಆಯ್ದು ಅನುವಾದಿಸುವ ಪ್ರಯತ್ನವನ್ನು ಅಡಿಗರು ಮಾಡಿದ್ದಾರೆ. ಅವುಗಳು ಆಯ್ದ ಪ್ರಬಂಧಗಳು ಭಾಗ-1 & 2 ರಲ್ಲಿ ಪ್ರಕಟಗೊಂಡಿವೆ. ಇವುಗಳಲ್ಲಿ ಇಂಗ್ಲಿಷಿನ ಸಾಹಿತ್ಯ ಚರಿತ್ರೆಯಲ್ಲಿ ಪ್ರಬಂಧಕಾರರೆಂದೇ ಹೆಸರಾದ ಬೇಕನ್, ಗೋಲ್ಡ್ ಸ್ಮಿತ್, ಹ್ಯಾಝಲಿಟ್, ಚಾರ್ಲ್ಸ್ ಲ್ಯಾಂಬ್, ಜಾನ್ ರಸ್ಕಿನ್, ರಾಬರ್ಟ್ ಲೂಯಿ ಸ್ಟೀವನ್‍ಸನ್, ಜೋಸೆಫ್ ಎಡಿಸನ್, ಲೇ ಹಂಟ್, ರಿಚರ್ಡ್ ಸ್ಟೀಲ್, ಥಾಮಸ್ ಡಿಕ್ವೆನ್ಸಿ, ಡಬ್ಲ್ಯೂ.ಎಚ್. ಹಡ್ಸನ್, ಮಾಂಟೇನ್, ಆರ್.ಡಬ್ಲ್ಯೂ ಎಮರ್‍ಸನ್, ಅಬ್ರಾಹಂ ಕೌಲಿ ಮುಂತಾದವರ ಆಯ್ದ ಪ್ರಬಂಧಗಳ ಅನುವಾದಗಳಿವೆ. ಈ ಪ್ರಬಂಧಗಳ ಧಾಟಿ ಮೂಲ ಪ್ರಬಂಧಗಳ ಬನಿಯನ್ನು ಕಾಪಾಡುವ ಯತ್ನವನ್ನೇನೊ ಮಾಡುತ್ತದೆ ನಿಜ, ಆದರೆ ಮೂಲ ಓದಿ ಈ ಪ್ರಬಂಧಗಳನ್ನು ಓದುವವರಿಗೆ ಕೊಂಚ ನಿರಾಸೆ ಎನ್ನಿಸಬಹುದು. ಹಲವಾರು ಕಡೆ ಅನುವಾದವು ಪದಶಃ ಅರ್ಥಗಳನ್ನೇ ಬಳಸಿದೆ.

ಅಡಿಗರು ಅನುವಾದ ಮಾಡಿದ ಇನ್ನೊಂದು ಮಹತ್ವದ ಪುಸ್ತಕ ಎಂದರೆ ‘ಕೆಸರಿನಿಂದ ಶಿಖರಕ್ಕೆ’. ಇದು ಖ್ಯಾತ ಕೃಷಿ ವಿಜ್ಞಾನಿಯಾದ ಜಾರ್ಜ್ ವಾಷಿಂಗ್‍ಟನ್ ಕಾರ್ವರ್‍ನ ಜೀವನ ಚರಿತ್ರೆ. ಬಹುಶಃ ಅಡಿಗರ ಅನುವಾದಕ್ಕೆ ರಾಕ್‍ಹಾಮ್ ಹಾಲ್ಟ್ 1963ರಲ್ಲಿ ಬರೆದ ‘ಜಾರ್ಜ್ ವಾಷಿಂಗ್ಟನ್ ಕಾರ್ವರ್: ಅನ್ ಅಮೆರಿಕನ್ ಬಯಾಗ್ರಫಿ’ ಕೃತಿಯೇ ಆಧಾರವಾಗಿದ್ದಿರಬೇಕು. ಇದರ ಸಂಗ್ರಹಾನುವಾದವನ್ನು ಅಡಿಗರು 1979ರಲ್ಲಿ ಮಾಡಿದ್ದಾರೆ. ಈ ಅನುವಾದ ಮನೋಹರವಾದ ಭಾಷೆಯಲ್ಲಿ ಮಾಡಲ್ಪಟ್ಟಿದ್ದು ಓದುವವರಿಗೆ ಮುದವನ್ನು ನೀಡುತ್ತದೆ. ಅನುವಾದವೆಂದು ಬೇರ್ಪಡಿಸಿ ಹೇಳಲಾರದಷ್ಟು ನೈಜವಾದ ಭಾಷೆಯಲ್ಲಿ ಅನುವಾದ ಆಗಿದೆ. ಗುಲಾಮ ಹಿನ್ನೆಲೆಯಿಂದ ಬಂದ ಕಪ್ಪು ಹುಡುಗನೊಬ್ಬ ತನ್ನ ಒಳಗಿನ ಸಸ್ಯಪ್ರೇಮ, ಮಣ್ಣುಪ್ರೇಮದಿಂದ ದರ್ಶನ ಪಡೆಯುತ್ತಾನೆ. ಅದನ್ನು ಶಾಲಾಶಿಕ್ಷಣದಿಂದ ಇನ್ನಷ್ಟು ಉಜ್ವಲಗೊಳಿಸಿಕೊಂಡು ಮೇರು ವಿಜ್ಞಾನಿಯಾಗಿ ಮಾರ್ಪಡುವ ಯಶಸ್ಸಿನ ಕಥನ ಇದು. ಇದನ್ನು ಚಿಣ್ಣರು, ಯುವಕರು, ವಯಸ್ಕರೆಲ್ಲ ಸಮಾನವಾಗಿ ಆಸಕ್ತಿಯಿಂದ ಓದಬಹುದಾದ ಪುಸ್ತಕವಾಗಿ ಮಾರ್ಪಡಿಸಿದೆ ಅಡಿಗರ ಅನುವಾದ. ಓದಿನ ರುಚಿ ಹೆಚ್ಚಿಸಲು ಇಂತಹ ಸರಳ, ಸುಂದರ ನಿರೂಪಣೆಯ ಪುಸ್ತಕಾನುವಾದಗಳು ಬೇಕು ಎನ್ನುವಂತೆ ಈ ಪುಸ್ತಕ ಇದೆ. ಅಡಿಗರ ಈ ಅನುವಾದ ವೃತ್ತಿಪರವಾಗಿ ಮಾಡಿದ್ದಾದರೂ ಕನ್ನಡಕ್ಕೆ ಇದೊಂದು ಅಪರೂಪದ ಜೀವನ ಚರಿತ್ರೆಯಾಗಿ ಮೂಡಿಬಂದಿದೆ.

ಅಡಿಗರು ಮಾಡಿದ ಅಪರೂಪದ ಅನುವಾದಗಳಲ್ಲಿ ರಾಮಮನೋಹರ ಲೋಹಿಯಾರ ಚರಿತ್ರೆಗೆ ಸಂಬಂಧಪಟ್ಟ ಲೇಖನ ರೂಪದ ಭಾಷಣಗಳ ಸಂಗ್ರಹ-‘ಇತಿಹಾಸ ಚಕ್ರ’(1955). ಇದನ್ನು ಅನುವಾದಿಸುವ ಮೂಲಕ ನವ್ಯರಿಗೆ ಇದ್ದ ಸಮಾಜವಾದಿ ಆಸಕ್ತಿಗೆ ಇಂಬುಕೊಟ್ಟಂತಾಗಿದೆ. ಅಡಿಗರ ನಂತರ ಬಂದ ಅನಂತಮೂರ್ತಿ, ಲಂಕೇಶ, ತೇಜಸ್ವಿ ಈ ಮೂರೂ ಲೇಖಕರು ಲೋಹಿಯಾರ ವಿಚಾರಧಾರೆಯಿಂದ ಪ್ರಭಾವಿತರಾದವರು. ಲೋಹಿಯಾ ಚಿಂತನೆಗಳು ತಮ್ಮ ಮೇಲೆ ಬೀರಿದ ಪ್ರಭಾವ ಎಂತಹುದು ಎಂದು ಅಡಿಗರು ವಿವರಿಸಿಲ್ಲ. ಆದರೆ ಅವರಿಗೆ ನೆಹರೂ ರಾಜಕಾರಣ ಉಂಟು ಮಾಡುತ್ತಿದ್ದ ಭ್ರಮನಿರಸನಗಳು ಅವರನ್ನು ಲೋಹಿಯಾರ ಸಮಾಜವಾದದತ್ತ ಸೆಳೆದಿರಲಿಕ್ಕೆ ಸಾಕು. ಅವರು ಮಾಡಿದ ಲೋಹಿಯಾ ಅನುವಾದಗಳಲ್ಲಿ ಇತಿಹಾಸ ಗತಿಯಲ್ಲಿ ಜನಾಂಗಗಳು, ನಾಗರಿಕತೆಗಳ ಅಭ್ಯುದಯ ಪತನಗಳ ಸರ್ವವ್ಯಾಪಕವಾದ ಚಿಂತನೆಗಳಿವೆ. ಇವು ಅಡಿಗರ ಅನುವಾದದ ಮೇಲಿನ ಆಸಕ್ತಿಯು ಸತೃಣಾಭ್ಯಹಾರಿ ಎನ್ನುವುದನ್ನು ತೋರಿಸುತ್ತದೆ.

ಅಡಿಗರು ಅನುವಾದ ಮಾಡಿದ ಮನೋಜ್ ದಾಸ್ ಅವರ ‘ಸಾರ್ವಕಾಲಿಕ ಪುಸ್ತಕಗಳು’ ಚಿಣ್ಣರಿಗೆ ಮತ್ತು ಹೊಸ ಸಾಕ್ಷರರಿಗೆ ಉಪಯುಕ್ತವಾಗಬಲ್ಲ ಪರಿಚಯಾತ್ಮಕ ಗದ್ಯಬರಹಗಳಿವೆ. ಇದರಲ್ಲಿ ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಪುರಾಣಗಳು, ತಿರಕ್ಕುರಳ್, ಕಥಾಸರಿತ್ಸಾಗರ, ಪಂಚತಂತ್ರ, ಅರ್ಥಶಾಸ್ತ್ರ ಮುಂತಾದ ಕೃತಿಗಳ ಪರಿಚಯವನ್ನು ಮಾಡಿಕೊಡಲಾಗಿದೆ. ಇದು ಅಡಿಗರ ಅನುವಾದಗಳ ಪಟ್ಟಿಯಲ್ಲಿ ಇರಲೇಬೇಕಾದ ಕೃತಿಯೇನೂ ಅಲ್ಲ. ಆದರೆ ಅವರ ಹೆಸರಿನಲ್ಲಿ ಪ್ರಕಟವಾದ ಕಾರಣ ಅದನ್ನು ಗಮನಿಸಬೇಕಾಗಿದೆ. ಇದೊಂದು ಪರಿಚಯಾತ್ಮಕ ಪಠ್ಯವಷ್ಟೆ.

ಅಡಿಗರ ಅನುವಾದ ಭಂಡಾರದಲ್ಲಿ ನಾರ್ವೆಯ ನಾಟಕಕಾರನಾದ ಹೆನ್ರಿಕ್ ಇಬ್ಸನ್ ರಚಿಸಿದ ‘ದ ಪೀಪಲ್ಸ್ ಎನಿಮಿ’ ನಾಟಕದ ಅನುವಾದ ಕೂಡ ಇದೆ. ಸಾಧಾರಣವಾಗಿ ನಾಟಕಗಳತ್ತ ಗಮನ ಹರಿಸದ ಅಡಿಗರು ಈ ಕೃತಿಯೊಂದನ್ನು ಮಾತ್ರ ಅನುವಾದಕ್ಕೆ ಎತ್ತಿಕೊಂಡಿದ್ದಾರೆ. ‘ ಪ್ರಜಾಪ್ರಭುತ್ವ ಎದುರಿಸಬೇಕಾಗಿರುವ ಅಪಾಯಗಳನ್ನೂ ಅದು ಬಿಡಿಸಬೇಕಾಗಿರುವ ಸಮಸ್ಯೆಗಳನ್ನೂ ಎದೆ ಕಲಕುವಂತೆ ಚಿತ್ರಿಸುವ ಈ ನಾಟಕ ಈಗ ಸಮಯೋಚಿತವಾದುದೆಂದು ಭಾವಿಸಿ ಇದನ್ನು ಅನುವಾದ ಮಾಡಲಾಗಿದೆ’ಎಂದು ಅಡಿಗರು ನಿವೇದಿಸಿಕೊಂಡಿದ್ದಾರೆ(ಎಂ. ಗೋಪಾಲ ಕೃಷ್ಣ ಅಡಿಗ ಸಮಗ್ರ ಸಾಹಿತ್ಯ. ಸಂಪುಟ-6, ಪು.239). ಅದೇ ಮುನ್ನುಡಿಯಲ್ಲೇ ‘ಅನುವಾದ ಕಾರ್ಯ ಯಾವಾಗಲೂ ಕಷ್ಟವಾದುದು, ಅದರಲ್ಲೂ ನಾಟಕಗಳ ಅನುವಾದ ಇನ್ನಷ್ಟು ಕಷ್ಟ. ಇಂಥ ಕೆಲಸ ಕೈಕೊಂಡುದು ಧಾಷ್ಟ್ರ್ಯವೇ ಹೌದು.. ..’(ಅದೇ) ಎಂದು ಹೇಳಿಕೊಂಡಿರುವುದನ್ನು ಗಮನಿಸಿದರೆ ನಾಟಕದ ಅನುವಾದ ಅವರಿಗೆ ತ್ರಾಸದಾಯಕವಾಗಿತ್ತೆಂದು ಊಹಿಸಬಹುದು.

ಹೀಗೆ ಅಡಿಗರ ಅನುವಾದಗಳ ಲೋಕದಲ್ಲಿ ಅನೇಕ ಪ್ರಕಾರಗಳೂ ಅನೇಕ ಲೋಕದೃಷ್ಟಿಗಳೂ ಇವೆ. ಅವುಗಳ ಹಿಂದಿನ ಐಡಿಯಾಲಾಜಿಯು ಖಚಿತವಾಗಿ ಅನುವಾದಗಳ ಮೂಲಕ ತಮ್ಮ ಧೋರಣೆಗಳನ್ನು ಹೇಳುವ ಉದ್ದೇಶ ಇರುವಂತದ್ದಲ್ಲ. ಈ ಮೊದಲೇ ಹೇಳಿದಂತೆ ಅವರು ಆರ್ಥಿಕ ಪ್ರಯೋಜನಕ್ಕಾಗಿ ಮಾಡಿದ ಅನುವಾದಗಳು ಹೆಚ್ಚಿನ ಜಾಗ ಪಡೆದಿವೆ. ಅವರ ಆಸಕ್ತಿಯನ್ನು ಪ್ರತಿಫಲಿಸುವ ಅನೇಕ ಅನುವಾದಗಳು ಸಹ ಅವಕಾಶ ಪಡೆದಿವೆ. ಒಟ್ಟಾರೆ ಅವರ ಅನುವಾದಗಳನ್ನು ಓದಿದಾಗ ಅವರ ಕಾವ್ಯಾನುವಾದಗಳಿಗಿಂತ ಹೆಚ್ಚು ಮನಮುಟ್ಟುವಂತಿರುವುದು ಅವರ ಗದ್ಯಾನುವಾದಗಳು. ಅದರಲ್ಲೂ ಮೆಲ್ವಿಲ್‍ನ ರೊಮಾನ್ಸ್, ಹಾಥಾರ್ನ್‍ನ ಕಾದಂಬರಿ, ಮೊಪಾಸನ ಕತೆಗಳು, ಜಾರ್ಜ್ ವಾಷಿಂಗಟನ್ ಕಾರ್ವಿನ್‍ನ ಜೀವನ ಚರಿತ್ರೆಗಳ ಅನುವಾದಗಳು ವಾಚನಾಭಿರುಚಿ ಹೆಚ್ಚಿಸುವ ಕೆಲಸವನ್ನು ಮಾಡುವಂತವು. ಸಾಮಾನ್ಯವಾಗಿ ಅನುವಾದಗಳು ಒಂದು ನಿರ್ದಿಷ್ಟ ಯುಗದಲ್ಲಿ ಒಂದೇ ಕೃತಿ, ಒಬ್ಬನೇ ಲೇಖಕನನ್ನು ಆಯ್ಕೆ ಮಾಡಿಕೊಂಡು ಅವನ್ನೇ ಕೇಂದ್ರೀಕರಿಸುತ್ತಿರುತ್ತವೆ. ಆದರೆ ಅಡಿಗರ ಅನುವಾದಗಳು ಆ ರೂಢಿಯನ್ನು ಮುರಿದು ಕನ್ನಡದ ಓದುಗರು ಓದಬೇಕಾದ ಅನೇಕ ಒಳ್ಳೆಯ ಕೃತಿಗಳನ್ನು ಅವರ ಗಮನಕ್ಕೆ ತಂದಿವೆ. ಅಮೆರಿಕನ್ ಸಾಹಿತ್ಯದ ಕಡೆ ವಿಶೇಷ ಗಮನ ಸೆಳೆಯುತ್ತವೆ. ಅಡಿಗರು ಮಾಡಿದ ಅನುವಾದಗಳು ಬೇಂದ್ರೆ, ಕುವೆಂಪು ಅವರಂತೆ ತಮ್ಮ ಆಸಕ್ತಿಗೆ ಪೂರಕವಾಗಿ/ವಿಸ್ತರಣೆಯಾಗಿ ಇರುವಂತಿಲ್ಲ. ಮುಂದೆ ಬಂದ ಲಂಕೇಶ, ಅನಂತಮೂರ್ತಿ, ತೇಜಸ್ವಿ ಮುಂತಾದವರ ಅನುವಾದಗಳು ವಿಸ್ತರಣೆ ಮಾಡಿಕೊಂಡ ಸೃಜನಶೀಲತೆಯ ಅಂಶಗಳು, ಹೊಸ ಹೊಸ ಜಾನರ್‍ಗಳನ್ನು ಶೋಧಿಸಿಕೊಂಡ ರೀತಿ, ಇವುಗಳಿಗೆ ಕೊಂಡಿಯಾಗಿ ಅಡಿಗರ ಅನುವಾದಗಳನ್ನು ಗಮನಿಸಬಹುದು.

*********
ಆಕರಗಳು
ಸುಮತೀಂದ್ರ ನಾಡಿಗ(ಸಂ). ಗೋಪಾಲಕೃಷ್ಣ ಅಡಿಗರ ಸಮಗ್ರ ಸಾಹಿತ್ಯ 5, 6 &7. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 2011

ಈ ಅಂಕಣದ ಹಿಂದಿನ ಬರೆಹಗಳು:
ಹಿಂದುತ್ವ ಮತ್ತು ಭಾಷಾಂತರ: ಕೆಲವು ಟಿಪ್ಪಣಿಗಳು
ಕುವೆಂಪು ಅನುವಾದಗಳ ಧೋರಣೆ…
ಕನ್ನಡದ ಕೆಲಸ ಮಾಡಿದ ಭಾಷಾಂತರಗಳು:
ಟಾಲ್‍ಸ್ಟಾಯ್ ಎಂಬ ಬೂರ್ಜ್ವಾ ವೃಕ್ಷದ ನೆರಳು- (ಟಾಲ್‍ಸ್ಟಾಯ್ ಕನ್ನಡಾನುವಾದಗಳು)
ಕನ್ನಡ ಬೌದ್ಧಸಾಹಿತ್ಯದ ಭಾಷಾಂತರಗಳ ಸ್ವರೂಪ ಹಾಗೂ ರಾಜರತ್ನಂ ಭಾಷಾಂತರಗಳು
ಶ್ರದ್ಧೆಯ ಬೆಸೆವ ಭಾಷಾಂತರ
ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ
ಬೇಂದ್ರೆ ಅನುವಾದಗಳ ಅನುಸಂಧಾನ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ
ಇಂಗ್ಲಿಷ್ ಗೀತಗಳ ಪಯಣ
ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು
ಸ್ತ್ರೀ ಮಲಯಾಳ ಹಾಗೂ ಸ್ತ್ರೀ ವಿವೇಕದ ಕಥನಗಳು


MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...