ಕುವೆಂಪು ಅನುವಾದಗಳ ಧೋರಣೆ…

Date: 11-10-2021

Location: ಬೆಂಗಳೂರು


‘ಕುವೆಂಪು ಅವರ ಇಂಗ್ಲಿಷ್ ಹಾಗೂ ಯುರೋಪಿಯನ್ ಸಾಹಿತ್ಯದ ಓದು ವಿಸ್ತಾರವಾಗಿತ್ತು. ಅದರಿಂದ ಬಹಳಷ್ಟನ್ನು ಪಡೆದುಕೊಂಡೆನೆಂದು ಕುವೆಂಪು ಅವರು ಹೇಳಿಕೊಂಡಿದ್ದಾರೆ’ ಎನ್ನುತ್ತಾರೆ ಲೇಖಕಿ ತಾರಿಣಿ ಶುಭದಾಯಿನಿ. ಅವರು ತಮ್ಮ ಅಕ್ಷರಸಖ್ಯ ಅಂಕಣದಲ್ಲಿ ಅನುವಾದಗಳ ಕುರಿತು ಕುವೆಂಪು ಅವರ ಧೋರಣೆಗಳ ಕುರಿತು ವಿಶ್ಲೇಷಿಸಿದ್ದಾರೆ.

ಕುವೆಂಪು ಅವರಿಗೆ ಜೆ.ಎಚ್. ಕಸಿನ್ಸ್ ಅವರು ಇಂಗ್ಲಿಷಿನಲ್ಲಿ ಯಾಕೆ ಬರೆಯುತ್ತೀರಿ? ಕನ್ನಡದಲ್ಲಿ ಬರೆಯಬಹುದಲ್ಲ? ಎಂದು ಕೇಳಿದ ಪ್ರಶ್ನೆ ಅವರನ್ನು ಕನ್ನಡದ ಮೇರು ಕವಿಯಾಗಿಸಿತು ಎನ್ನುವುದನ್ನು ನಾವಿಂದು ಬಹಳ ರಮ್ಯವಾಗಿ ಕತೆಕಟ್ಟಿ ಹಂಚಿಕೊಳ್ಳುತ್ತೇವೆ. ಈ ಕಥೆ ಕುವೆಂಪು ಕನ್ನಡದ ಹುಟ್ಟಾ ದ್ವೇಷಿಯಾಗಿ ನಂತರ ಕಣ್ತೆರೆದು ಕನ್ನಡವನ್ನು ಅಪ್ಪಿಕೊಂಡರು ಎನ್ನುವುದು ಪ್ರಸ್ತುತ ವಸಾಹತೋತ್ತರ ಸಂಕಥನಗಳ ಅರಿವಿನಿಂದ ಒಂದು ಸಾಂಸ್ಕೃತಿಕ ವಿದ್ಯಮಾನವನ್ನು ಸೂಚಿಸುವಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಕಸಿನ್ಸ್ ಅವರು ಕುವೆಂಪು ಅವರನ್ನು ಕನ್ನಡದಲ್ಲಿ ಬರೆಯುವಂತೆ ಹೇಳಿದ್ದು ಪ್ರಾಯಶಃ ಅವರ ಸ್ವಾತಂತ್ರ್ಯ ಹೋರಾಟದ ಬದ್ಧತೆಯ ಹಿನ್ನೆಲೆಯಿಂದ ಆಗಿರಬಹುದು. ಏಕೆಂದರೆ ಕಸಿನ್ಸ್ ಅವರು ಐರಿಷ್ ಕವಿ. ಅವರ ನಾಡು ಆಗ ಇಂಗ್ಲೆಂಡಿನ ವಿರುದ್ಧ ತನ್ನ ಸ್ವಾತಂತ್ರ್ಯವನ್ನು ಸ್ಥಾಪಿಸಿಕೊಳ್ಳಲು ಹೋರಾಟ ಮಾಡುತ್ತಿತ್ತು. ನಿರ್ವಸಾಹತೀಕರಣಗೊಳ್ಳುವ ಸಲುವಾಗಿ ಐರಿಷ್ ಲೇಖಕರಾದ ಜೆ.ಎಂ.ಸಿಂಗ್, ಯೇಟ್ಸ್ ಮೊದಲಾದವರು ನೆಲದ ಜಾನಪದದತ್ತ ತಿರುಗಿದರು. ತಮ್ಮ ಭಾಷೆಯ ಸಂಪತ್ತನ್ನು ಅಭಿವ್ಯಕ್ತಿಸುವ ಮೂಲಕ ತಮ್ಮ ಅಸ್ಮಿತೆಯನ್ನು ತೋರಬೇಕು ಎಂಬ ಪ್ರಯತ್ನಕ್ಕೆ ಕೈಹಾಕಿದರು. ಈ ಹಿನ್ನೆಲೆಯಲ್ಲಿ ಕಸಿನ್ಸ್ ಅವರು ಆಡಿದ ಮಾತು (ಭಾರತೀಯರಾದ) ಕನ್ನಡಿಗರಾದ ಕುವೆಂಪು ದಾಸ್ಯಕ್ಕೆ ಸಂಕೇತವಾದ ಇಂಗ್ಲಿಷಿನಲ್ಲಿ ಯಾಕೆ ಬರೆಯಬೇಕು? ಎನ್ನುವುದು ದುಃಖಿಗೆ ನೆರಂ ದುಃಖಿ ಎನ್ನುವ ಕವಿವಾಣಿ ಗೇ ಹತ್ತಿರವಿದ್ದಂತಿದೆಯಲ್ಲವೆ? ಚರಿತ್ರೆಯ ಯಾವುದೋ ಒಂದು ಸಣ್ಣ ಕ್ಷುಲ್ಲಕ ಕುಮ್ಮಕ್ಕು ಹೀಗೆ ಯುಗಧರ್ಮದ ಅರಿವನ್ನು ಉಂಟು ಮಾಡುವುದೇ ಒಂದು ಸೋಜಿಗದ ಸಂಗತಿ. ಕುವೆಂಪು ಅದರಾಚೆಗೆ ಬರೆದದ್ದು ಕನ್ನಡದಲ್ಲಿ. ಇಂಗ್ಲಿಷನ್ನು ಹೀಗಳೆದು ಕೆಲವು ಪದ್ಯಗಳನ್ನೂ ಸಹ ಕುವೆಂಪು ಬರೆದಿದ್ದಾರೆ. ಆದರೆ ಈ ಅರ್ಥದಲ್ಲಿ ಕುವೆಂಪು ಅವರನ್ನು ಗ್ರಹಿಸಿದರೆ ಮೋಸ ಹೋದಂತೆ. ಅವರೊಬ್ಬ ವೈರುಧ್ಯಗಳ ಶಕ್ತಿಯುಳ್ಳ ಲೇಖಕ. ಕುವೆಂಪು ಇಂಗ್ಲಿಷ್ ದ್ವೇಷಿಯಾಗಿದ್ದರು ಎನ್ನುವುದೊಂದು ಮಿಥ್ಯೆ. ಕೊಬ್ಬಿನಲ್ಲಿ ಕೆಟ್ಟ ಕೊಬ್ಬು, ಒಳ್ಳೆಯ ಕೊಬ್ಬು ಎನ್ನುವುದು ಇರುವಂತೆ ಇಂಗ್ಲಿಷ್ ಎನ್ನುವುದು ಮಾಧ್ಯಮವಾಗಿ ಬಂದಾಗ ಕುವೆಂಪು ಅವರಿಗೆ ಒಲ್ಲದ ಸಂಗತಿ; ಆದರೆ ಇಂಗ್ಲಿಷ್ ಸಾಹಿತ್ಯ (ಇಂಗ್ಲಿಷ್ ಮೂಲಕ ಯುರೋಪಿಯನ್ ಸಾಹಿತ್ಯ)ದ ಸಾರವನ್ನು ಅವರೆಂದೂ ನಿರಾಕರಿಸಿದವರಲ್ಲ. ಬೆಳಕಿಂಡಿಯಾಗಬಲ್ಲ ಯಾವುದೇ ಭಾಷೆಯ ಸತ್ವವನ್ನು ಕುವೆಂಪು ಸ್ವಾಗತಿಸುತ್ತಿದ್ದರು. ಕುವೆಂಪು ರಾಮಾಯಣದ ಆದಿಪದ್ಯಗಳು ಕನ್ನಡದ ಕವಿಗಳನ್ನು ನೆನೆವಂತೆ ವಿಶ್ವದ ಕವಿಗಳನ್ನೂ ಸಮನಾಗಿ ನೆನೆದು ಅವರ ಸಾರವು ತನ್ನ ಕಾವ್ಯಕ್ಕೆ ಬರಲಿ ಎಂಬ ಪ್ರಾರ್ಥನೆ ಸಲ್ಲಿಸುತ್ತವೆ ಎನ್ನುವುದನ್ನಿಲ್ಲಿ ನೆನಪು ಮಾಡಿಕೊಳ್ಳಬಹುದು. ಕನ್ನಡಕ್ಕೆ ಎರವಾಗುವ ಭಾಷೆಗಳೆಂದು ಆತಂಕ ಹುಟ್ಟಿಸುವ ಇಂಗ್ಲಿಷ್ ಮತ್ತು ಸಂಸ್ಕೃತಗಳು ಕನ್ನಡದಲ್ಲಿ ಮಿಳಿತಗೊಂಡು ಬರಬೇಕಾದ ಭಾಷೆಗಳು ಎನ್ನುವುದರಲ್ಲಿ ಬಿ.ಎಂ.ಶ್ರೀಕಂಠಯ್ಯನವರ ಅಭಿಮತಕ್ಕಿಂತ ಕುವೆಂಪು ಅವರ ಮತ ಭಿನ್ನವಾಗಿಲ್ಲ. ಕುವೆಂಪು ತಮ್ಮ ಗದ್ಯಬರಹಗಳ ಉಲ್ಲೇಖ ನೋಡುವುದಾದರೆ; “ರಾಜಕೀಯ ಪ್ರಪಂಚದಲ್ಲಿ ಪಾಶ್ಚಾತ್ಯದೇಶಗಳ ಪ್ರಾಬಲ್ಯವು ಸರ್ವಶಕ್ತವೂ ಸರ್ವವ್ಯಾಪಿಯೂ ಆಗಿರುವ ಈ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ, ಸಾಹಿತ್ಯದ ಸರ್ವವ್ಯಾಪಿಯೂ ಆಗಿರುವ ಈ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ, ಸಾಹಿತ್ಯದ ಮತ್ತು ವಿಜ್ಞಾನದ ಪ್ರಭಾವದಿಂದ ದೂರವಾಗುವುದಾಗಲಿ, ತಪ್ಪಿಸಿಕೊಳ್ಳುವುದಾಗಲಿ ಸಾಧ್ಯವೂ ಅಲ್ಲ, ಶ್ರೇಯಸ್ಸೂ ಅಲ್ಲ. ಈಗಾಗಲೇ ಇಂಗ್ಲಿಷ್ ವಿದ್ಯೆಯ ಥೇಮ್ಸ್ ನದಿ ಸಂಸ್ಕೃತದ ಭಾಗೀರಥಿ ಮತ್ತು ಕನ್ನಡದ ಕಾವೇರಿಗಳೊಡನೆ ಸಂಗಮಿಸಿ ಹರಿಯತೊಡಗಿದೆ. ಹೊಸ ನೀರಿನ ಮಹಿಮೆಯಿಂದ ಹೊಸ ಹೊಸ ಪೈರು ಹಸುರಾಗಿ ಹುಲುಸಾಗಿ ಬೆಳೆಯಲಾರಂಭಿಸಿದೆ”(ಕುವೆಂಪು, 53).

ಈ ಪೀಠಿಕೆ ಏಕೆಂದರೆ ಕುವೆಂಪು ಹಲವು ಭಾಷೆಗಳ ಅನುಸಂಧಾನ ಮಾಡುವುದರಿಂದ ಸಾಹಿತ್ಯದ ಸತ್ವವು ಹೆಚ್ಚುತ್ತದೆ ಎನ್ನುವುದನ್ನು ಅರಿತವರಾಗಿದ್ದರು. ಪ್ರಾಯಶಃ ಆದಕಾರಣದಿಂದಲೇ ಭಾಷಾಂತರವನ್ನು ಒಂದು ಸೃಜನಶೀಲ ಅಳವಡಿಕೆಯನ್ನಾಗಿ ಅವರು ತಮ್ಮ ಸಾಹಿತ್ಯ ಅಭಿಯಾನದಲ್ಲಿ ಸ್ವೀಕರಿಸಿದ್ದರು ಎನ್ನುವುದನ್ನು ಗುರುತಿಸುವುದಕ್ಕಾಗಿ. ಕುವೆಂಪು ಗುರುಗಳಾದ ಎ.ಆರ್.ಕೃಷ್ಣಶಾಸ್ತ್ರಿಗಳು ಕುವೆಂಪು ಅವರ ‘ರಕ್ತಾಕ್ಷಿ’ ನಾಟಕಕ್ಕೆ ಮುನ್ನುಡಿ ಬರೆಯುವಾಗ, ‘ಇಂಗ್ಲಿಷ್ ಭಾಷೆಯ ಮೂಲಕ ಪರಿಚಯವಾದ ವಿಶ್ವಸಾಹಿತ್ಯವು, ಆಧುನಿಕ ಕನ್ನಡ ಸಾಹಿತ್ಯಕ್ಕೆ, ಅಷ್ಟೇಕೆ ಆಧುನಿಕ ಸಕಲ ಭಾರತೀಯ ಸಾಹಿತ್ಯಕ್ಕೂ ಪ್ರಾಣದಾಯಕವಾಗಿದೆ. ರಘುವಂಶ ನೈಷಧಗಳನ್ನು ಓದಿ ರವೀಂದ್ರನಾಥರೂ, ಹರ್ಷಚರಿತೆ ಕಾದಂಬರಿಗಳನ್ನು ಓದಿ ಆಪ್ಟೆ ಬಂಕಿಮಚಂದ್ರೂ ಎಂದಿಗೂ ಆಗುತ್ತಿರಲಿಲ್ಲ. ಹಾಗೆಯೇ ಶಾಕುಂತಲ ಪ್ರತಿಮಾನಾಟಕಗಳನ್ನು ಗಟ್ಟಿಮಾಡಿ ಪುಟ್ಟಪ್ಪನವರೂ “ರಕ್ತಾಕ್ಷಿ”ಯನ್ನೂ ಬರೆಯಲಾಗುತ್ತಿರಲಿಲ್ಲ’(ಕೃಷ್ಣಶಾಸ್ತ್ರಿ, 566) ಎಂದು ಬರೆದಿರುವುದು ಕುವೆಂಪು ಅವರಿಗೆ ವಿಶ್ವಸಾಹಿತ್ಯದ ಸತ್ವವು ದೊರೆತಿರುವುದು ಬಹುಭಾಷಿಕತೆಯ ಸಂಸರ್ಗದಿಂದಲೇ ಎನ್ನುವುದನ್ನು ಸೂಚಿಸುತ್ತದೆ.

ಕುವೆಂಪು ಅವರಿಗಿದ್ದ ಭಾಷಾ ಸಂಪತ್ತು ಕನ್ನಡದ ಹೊರತಾಗಿ ಇಂಗ್ಲಿಷ್ ಮತ್ತು ಸಂಸ್ಕೃತಗಳು. ಹಾಗೆ ನೋಡಿದರೆ ಕುವೆಂಪು ತಮ್ಮ ಮೊದಲ ಕವನ ಸಂಕಲನವನ್ನು ಇಂಗ್ಲಿಷಿನಲ್ಲಿ ಬರೆದಿದ್ದರು(Beginner’s Muse). ಆನಂತರವೂ ಅವರ ‘ಏಲಿಯನ್ ಹಾರ್ಪ್’(Alien Harp) ಸಂಕಲನ ಬಂದಿದೆ. ಕುವೆಂಪು ಅವರ ಇಂಗ್ಲಿಷ್/ಯುರೋಪಿಯನ್ ಸಾಹಿತ್ಯದ ಓದು ವಿಸ್ತಾರವಾಗಿತ್ತು. ಅದರಿಂದ ಬಹಳಷ್ಟನ್ನು ಪಡೆದುಕೊಂಡೆನೆಂದು ಕುವೆಂಪು ಅವರು ಹೇಳಿಕೊಂಡಿದ್ದಾರೆ. ಕುವೆಂಪು ಅವರೇ ಹೇಳಿಕೊಂಡಂತೆ, ‘ಸಾಹಿತ್ಯಭೂಮಿಕೆಯನ್ನು ಅನುಲಕ್ಷಿಸಿ ಹೇಳುವುದಾದರೆ 1924ನೆಯ ಸಂವತ್ಸರವು ನನ್ನ ಜೀವಮಾನದಲ್ಲಿ ಒಂದು ಕ್ರಾಂತಿಕಾರಕ ಸಂಧಿಕಾಲವಾಗಿತ್ತು.. ಅನೇಕ ಸಾಹಿತ್ಯಕ್ಷೇತ್ರಗಳಲ್ಲಿ ವಿಶೇಷವಾಗಿ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಇಂಗ್ಲಿಷ್ ಭಾಷಾಂತರಗಳ ಮೂಲಕ ರಷ್ಯನ್, ಫ್ರೆಂಚ್, ಜರ್ಮನ್, ಇಟಾಲಿಯನ್ ಮತ್ತು ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಕವಿಪ್ರಜ್ಞೆ ಯಾತ್ರಿಯಾಗಿ ತನ್ನ ವಿಕಾಸದ ಸಿದ್ಧಿಗೆ ಅವಶ್ಯಕವಾದ ಚಿಂತನಾಂಶ, ಕಲ್ಪನಾಂಶ, ಭಾವಾಂಶ, ರೂಪಾಂಶಗಳನ್ನು ಸಂಪಾದಿಸಿತು’(ಕುವೆಂಪು, 1066). ಅಷ್ಟಲ್ಲದೆ ಕುವೆಂಪು ಅವರು ಇಂಗ್ಲಿಷಿನಿಂದ ಬ್ಲಾಂಕ್ ವರ್ಸ್ ಅನ್ನು ಪಡೆದುಕೊಂಡು ಕನ್ನಡದಲ್ಲಿ ಅದನ್ನು ಮರುಕಟ್ಟಿಕೊಳ್ಳುತ್ತಾರೆ. ಇದರಿಂದ ಹೊಸಗನ್ನಡವು ಅರಸುತ್ತಿದ್ದ ಮುಕ್ತ ಆದರೆ ಲಯ ಇರುವ ಛಂದಸ್ಸಿನ ರೂಪ ದೊರಕಿದೆ. ಜಿ.ಎಸ್.ಶಿವರುದ್ರಪ್ಪನವರು ಕುವೆಂಪು ಸಮಗ್ರ ಕಾವ್ಯಕ್ಕೆ ಬರೆದ ಮುನ್ನುಡಿಯಲ್ಲಿ ಉಲ್ಲೇಖಿಸುವಂತೆ, ‘ಇಂಗ್ಲಿಷಿನ ಸಾಹಿತ್ಯ ಪ್ರಪಂಚವೂ ರಾಮಕೃಷ್ಣ-ವಿವೇಕಾನಂದ-ಗಾಂಧಿ-ಅರವಿಂದರ ವಿಚಾರಗಳೂ ಅವರ ಮನಃಕೋಶವನ್ನು ಮೊಟ್ಟಮೊದಲು ಪ್ರವೇಶಿಸಿದ್ದು ಇಂಗ್ಲಿಷಿನ ಮೂಲಕವೇ. ಹಾಗೆಯೇ ಪ್ರಾಚ್ಯ ಪಾಶ್ಚಾತ್ಯ ತತ್ವಜ್ಞಾನವೂ ಅವರ ಬುದ್ಧಿಯ ಒಂದು ಭಾಗವಾದದ್ದು ಇಂಗ್ಲಿಷಿನ ಮೂಲಕವೇ. ಈ ಎಲ್ಲ ತಿಳಿವಿನ ಹಿನ್ನೆಲೆಯಿಂದ ಮತ್ತು ತಾವು ಹುಟ್ಟಿಬಂದ ಶೂದ್ರ ಸಮುದಾಯದ ಒಂದು ಭಾಗವಾಗಿ ತಾವು ಪಡೆದ ಸ್ವಾನುಭವಗಳಿಂದ ಕುವೆಂಪು ಹಿಂದೂಧರ್ಮದ ಶೋಷಕ ಶಕ್ತಿಗಳನ್ನು ಗುರುತಿಸಿ ವೈಚಾರಿಕ ಚಿಕಿತ್ಸೆಗೆ ಗುರಿಪಡಿಸಲು ಸಾಧ್ಯವಾಯಿತು’ (ಶಿವರುದ್ರಪ್ಪ, xxxi ). ಒಟ್ಟಿನಲ್ಲಿ ಕುವೆಂಪು ಅವರಿಗೆ ಆಕರಗಳಾಗಿ ಅನ್ಯಭಾಷೆಗಳನ್ನು ಸ್ವೀಕರಿಸುವುದರಲ್ಲಿ ಆಸಕ್ತಿ ಇತ್ತು ಎನ್ನುವುದು ವಿವಿಧ ಆಯಾಮಗಳಿಂದ ವ್ಯಕ್ತವಾಗುತ್ತದೆ.

ಕುವೆಂಪು ಅವರಿಗಿದ್ದ ಭಾಷೆಗಳ ಅನುಸಂಧಾನದ ಕುಶಲತೆಯು ಅವರನ್ನು ಭಾಷಾಂತರಕಾರರನ್ನಾಗಿಸುವತ್ತ ಸೆಳೆದಿರಬಹುದು. ಕುವೆಂಪು ಭಾಷಾಂತರಕಾರರಾಗಿದ್ದವರು; ಆದರೆ ಅವರು ತಮ್ಮನ್ನು ತಾವು ಭಾಷಾಂತರಕಾರರೆಂದು ಸ್ಫುಟವಾಗಿ ಗುರುತಿಸಿಕೊಂಡಿರಲಿಲ್ಲ. ಭಾಷಾಂತರದ ಬಗ್ಗೆ ಕ್ವಚಿತ್ತಾಗಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹಾಗು ಅವರ ಎರಡು ಷೇಕ್ಸ್ ಪಿಯರ್ ನಾಟಕಾನುವಾದಗಳ ಬಗ್ಗೆ ಬಂದ ಚರ್ಚೆಗಳು ಅವರನ್ನು ಒಬ್ಬ ಭಾಷಾಂತರಕಾರರನ್ನಾಗಿ ನೋಡಲು ಪ್ರೇರೇಪಿಸುವಂತವು. ಕಾವ್ಯಕೃತಿಯ ನಿರ್ಮಾಣದ ಬಗ್ಗೆ, ಕಾವ್ಯದ ವಸ್ತು, ವಿಷಯಗಳ ಬಗ್ಗೆ, ಕವಿ ಸಾಮರ್ಥ್ಯದ ಬಗ್ಗೆ ಕಾವ್ಯ ಮೀಮಾಂಸೆಯ ಚಿಂತನೆಗಳನ್ನು ಕುರಿತು ತಮ್ಮ ಗದ್ಯಬರಹಗಳಲ್ಲಿ ಕುವೆಂಪು ಸಾಕಷ್ಟು ಬರೆದಿದ್ದು ಅದರಲ್ಲಿ ಕೆಲವು ವಿವೇಚನೆಗಳನ್ನು ಕುವೆಂಪು ಭಾಷಾಂತರಕ್ಕೆ ಅನ್ವಯಿಸಿ ನೋಡಬಹುದು ಎನ್ನುವ ಸುಳಿವನ್ನು ಎಂ.ಉಷಾ ಅವರ ‘ರಕ್ತಾಕ್ಷಿ’ ಓದು ನೀಡುತ್ತದೆ. ಅವರು ಕುವೆಂಪು ಅವರ ‘ಕವಿ ಕೃತಿಯಲ್ಲಿ ಅನನ್ಯ ಪರತಂತ್ರತೆ’ ಲೇಖನದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಪರೋಕ್ಷವಾಗಿ ಭಾಷಾಂತರದ ಕೆಲಸವನ್ನು ಸೂಚಿಸುತ್ತವೆ ಎಂದು ಗುರುತಿಸುತ್ತಾರೆ. ಕುವೆಂಪು ಆ ಲೇಖನದಲ್ಲಿ ಕವಿಯೆಂಬ ಪ್ರಿಸಂ ಮೂಲಕ ಹಾದು ಬರುವ ಲೋಕದ ಅನುಭವವು ಹೇಗೆ ಅನೇಕ ಬಣ್ಣಗಳಾಗಿ ಹೊರಹೊಮ್ಮುತ್ತವೆ ಎನ್ನುವುದನ್ನು ವಿವರಿಸುತ್ತಾರೆ. ಅದರಲ್ಲಿ ಕವಿ ತೆಕ್ಕೆಗೆ ಬರುವ ಅನೇಕ ಸಾಹಿತ್ಯ ಕೃತಿಗಳು ಹೇಗೆ ಕವಿಯ ‘ತನ್ನತನದ’ ಶಕ್ತಿರಸಗಳಲ್ಲಿ ಜೀರ್ಣವಾಗಿ ತಾನೇ ಒಂದು ಹೊಸ ರೂಪ ಧರಿಸಿ ಹೊಸ ಜನ್ಮವೆತ್ತಬೇಕಾಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ಈ ಮಾತು ಭಾಷಾಂತರದ ಒಂದು ಆಯಾಮವನ್ನು ನೆನಪಿಸುತ್ತದೆ. ಕುವೆಂಪು ಅವರ ಭಾಷಾಂತರದ ಕಲ್ಪನೆಯು ತಾವು ಪ್ರೇರಣೆ ಪಡೆದ ಕೃತಿಗಳು, ಕೇಳಿದ, ಓದಿದ ಕೃತಿಗಳನ್ನು ತಮ್ಮ ಜೀರ್ಣಾಗ್ನಿಯಲ್ಲಿ ಹಾಯಿಸಿ ನಂತರ ಅದನ್ನು ಹೊಸ ಕಲಾಕೃತಿಯನ್ನಾಗಿಸುವುದು ಎನ್ನುವುದಕ್ಕೆ ಹತ್ತಿರವಿದೆ. ಭಾಷಾಂತರ ಎನ್ನುವುದು ಕುವೆಂಪು ಅವರಿಗೆ ಅನುಸೃಷ್ಟಿಯ ಕೆಲಸ. ಆದಿಕವಿ ಪಂಪನಿಂದ ಮೊದಲಾದ ಅನುಸೃಷ್ಟಿಯ ಕೆಲಸವನ್ನು ಕಾವ್ಯ ಪರಂಪರೆಯನ್ನು ಅನುಸರಿಸುವ ಕುವೆಂಪು ಮಾಡುತ್ತಾ ಹೋಗಿದ್ದಾರೆ. ಅಂದರೆ ಕುವೆಂಪು ಆಕರ ಪಠ್ಯಗಳನ್ನು ತಮ್ಮ ಕವಿಪ್ರತಿಭೆಯ ಮೂಲಕ ಹೊಸದನ್ನು ಕಟ್ಟುವುದಕ್ಕೆ ತೊಡಗುತ್ತಾರೆ. ಷೇಕ್ಸ್ ಪಿಯರ್‍ನಂತಹ ಕವಿಯೂ ತನಗೆ ಸಿಕ್ಕ ತುಣುಕು ಚರಿತ್ರೆ, ಸ್ಥಳೀಯ ಇತಿಹಾಸದ ಬರಹಗಳನ್ನು ಇಟ್ಟುಕೊಂಡು ನಾಟಕಗಳನ್ನು ತನ್ನಕಾಲದ ಇಂಗ್ಲೆಂಡಿನ ಪುನರುಜ್ಜೀವನ ಸಂಸ್ಕೃತಿಗೆ ಒಗ್ಗಿಸಿ ಬರೆದ. ಪ್ರಾಯಶಃ ಕುವೆಂಪು ಅವರದು ಈ ಹಾದಿ.

ಕುವೆಂಪು ಅವರ ಭಾಷಾಂತರದ ಮಾದರಿಯು ಒಮ್ಮುಖವಾದುದಲ್ಲ. ಆಚಾರ್ಯ ಬಿ.ಎಂ.ಶ್ರೀ ಅವರ ‘ಇಂಗ್ಲಿಷ್ ಗೀತೆಗಳು’ ಹಾಗು ‘ಅಶ್ವತ್ಥಾಮನ್’ ನಾಟಕದ ಭಾಷಾಂತರಗಳಲ್ಲಿ ಇರುವ ಭಾಷಿಕ ಪ್ರಯೋಗ, ವಸ್ತು ಗ್ರಹಿಕೆ ಮತ್ತು ನಿರ್ವಹಣೆಗಳು ಭಿನ್ನವಾಗಿದ್ದು ಒಬ್ಬನೇ ಭಾಷಾಂತರಕಾರ ಹಲವು ತೆರನಾಗಿ ಭಾಷಾಂತರ ಮಾಡುವ ತಂತ್ರಗಳನ್ನು ಬಳಸಬಲ್ಲ ಎನ್ನುವುದಕ್ಕೆ ಉದಾಹರಣೆಯಂತಿದೆ. ಹಾಗೆಯೇ ಕುವೆಂಪು ಕವಿಯಾಗಿ ಭಾಷಾಂತರಕಾರರಾದಾಗ ಅವರ ಭಾಷಾಂತರಗಳು ನೇರಾನುವಾದ, ಭಾವಾನುವಾದ, ಪ್ರೇರಣೆ, ಪುನರ್ಲೇಖದ ಮಾದರಿಗಳನ್ನು ಅನುಸರಿಸಿದರೆ ನಾಟಕಗಳ ಭಾಷಾಂತರಗಳಲ್ಲಿ ಪರ್ಯಾಯ ಪಠ್ಯಗಳನ್ನು ಸೃಜಿಸುವ ಬಗೆಯಿದೆ. ಇನ್ನು ಶ್ರೀರಾಮಕೃಷ್ಣಾಶ್ರಮದ ತತ್ವಸಿದ್ಧಾಂತಗಳನ್ನು ಕನ್ನಡಕ್ಕೆ ತರುವಾಗ ಪ್ರಚಾರಕನ ಹುರುಪು ಇದ್ದು ಅದರೊಳಗೆ ತಮ್ಮ ಧೋರಣೆಯನ್ನು ಸೇರಿಸಿ ಪಠ್ಯಗಳನ್ನು ಭಾಷಾಂತರ ಮಾಡುತ್ತಾರೆ. ಸಾಧ್ಯವಾದಲ್ಲಿ ತಮ್ಮ ಸೃಜನಶೀಲ ರಚನೆಯನ್ನೂ ಸೇರಿಸುತ್ತಾರೆ. ಹೀಗಾಗಿ ಕುವೆಂಪು ಅವರದು ಬಹುಸ್ತರದ ಭಾಷಾಂತರ ತಂತ್ರಗಳಿವೆ.

ಕುವೆಂಪು ಅವರ ಸಮಗ್ರಕಾವ್ಯದ ಸರಣಿಯಲ್ಲಿ ಹಲವಾರು ಭಾಷಾಂತರಗೊಂಡ ಕವಿತೆಗಳು ಇರುವುದನ್ನು ಗಮನಿಸಬಹುದು. ಕೆಲವು ಪದ್ಯಗಳ ಕೆಳಗೆ ಕುವೆಂಪು ಅವರೇ ತಾವು ಯಾರಿಂದ/ಯಾವ ಪದ್ಯಗಳನ್ನು ಭಾಷಾಂತರ ಮಾಡುತ್ತಿದ್ದೇನೆ ಎನ್ನುವುದನ್ನು ಅಡಿಟಿಪ್ಪಣ ಹಾಕಿದ್ದಾರೆ. ಕೆಲವು ಕಡೆ ಪ್ರೇರಣೆ/ಭಾವಾನುವಾದ ಎಂದು ಹಾಕಿದ್ದಾರೆ. ಕುವೆಂಪು ಅವರು ತಮ್ಮ ಮನೋಧರ್ಮ, ಸಂವೇದನೆಗೆ ಹತ್ತಿರವೆನಿಸಿದ ಕವಿಗಳ ಹಲವು ಕವಿತೆಗಳನ್ನು ತಮ್ಮ ಅನೇಕ ಕವಿತಾಸಂಕಲನಗಳಲ್ಲಿ ಭಾಷಾಂತರಿಸಿದ್ದಾರೆ. ಈ ಭಾಷಾಂತರಗಳು ಸ್ವಸಂತೋಷ ಹಾಗು ಸಂವೇದನೆಯ ಸಮಾನ ಆಸಕ್ತಿಯನ್ನು ಸಮಕಾಲೀನಗೊಳಿಸಿಕೊಳ್ಳುವ ಪ್ರಯತ್ನಗಳಾಗಿವೆ. ಇಂಗ್ಲಿಷಿನ ರಮ್ಯಪಂಥದ ಕವಿಗಳ ಹಾಗು ವಿಕ್ಟೋರಿಯನ್ ಪಂಥದ ಕವಿಗಳ ಅನೇಕ ಕವಿತೆಗಳು ಕುವೆಂಪು ಮನೋಧರ್ಮದ ಮೂಸೆಯಲ್ಲಿ ಹೊಕ್ಕು ಬಂದಿವೆ. ಮೊದಲ ಸಂಕಲನವಾದ ‘ಕೊಳಲು’(1930)ವಿನಲ್ಲಿ ವರ್ಡ್ ವರ್ತ್ ಕವಿಯ ಜನಪ್ರಿಯ ಕವಿತೆಯಾದ ‘‘The Solitary Reaper’ ‘ಹೊಲದ ಹುಡುಗಿ’ ಎಂದು ಭಾಷಾಂತರಿಸಿದ್ದಾರೆ. ಇದರ ಸೊಬಗು ಮೂಲ ಕವಿತೆಯ ಜೊತೆ ಸ್ಪರ್ಧೆ ಮಾಡುವಂತಿದೆ. ಕುವೆಂಪು ಕವಿತೆ ಎನ್ನುವಷ್ಟು ಸಹಜವಾಗಿ ಭಾಷಾಂತರಗೊಂಡಿದೆ. ‘ಕಲಾಸುಂದರಿ’(1934) ಸಂಕಲನದಲ್ಲಿ ಅನಾ ಹೆಂಪಸ್ಟೀಡ್ ಬ್ರಾಂಚ್‍ಳ Stone ಕವಿತೆಯನ್ನು ‘ಕಲ್ಲು’ ಎಂದು ಭಾಷಾಂತರ ಮಾಡಿದ್ದಾರೆ. ಫ್ರೆಂಚ್ ಕವಿ ಗಾಯ್ಟರ್‍ನ ಕವಿತೆಯೊಂದನ್ನು ‘ಚಿರಕಲೆ’ ಎಂದು ಭಾಷಾಂತರಿಸಲಾಗಿದೆ. ಪ್ರಾಯಶಃ ಗಾಯ್ಟರ್ ಫ್ರೆಂಚಿನ ರಮ್ಯಕವಿಗಳ ಪೂರ್ವಸೂರಿಯಾಗಿದ್ದುದರಿಂದ ಕುವೆಂಪು ಅವರ ಗಮನ ಸೆಳೆದಿರಬಹುದು. ‘ನವಿಲು’(1934) ಸಂಕಲನದಲ್ಲಿ ಶೆರ್ಲಿಯ ‘Death the Leveller’ ಕವಿತೆಯ ಅನುವಾದ ಎಂದು ‘ಸಾವಿನ ಸಮತೆ’ ಕವಿತೆಯನ್ನು ಬರೆಯಲಾಗಿದೆ. ‘ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ’(1944) ಸಂಕಲನದಲ್ಲಿ ಸಾರ್ಟ್ಸ್ ಬ್ರೌನ್ ಅವರು ಸಾಯುವ ಮೊದಲು ಬರೆದ ಕವಿತೆ ಎಂದು ಉಲ್ಲೇಖಿಸಿ ‘ಸಾಯುವ ಸಂದೇಹವಾದಿ’ ಎನ್ನುವ ಕವಿತೆಯನ್ನು ನೀಡಿದೆ. ‘ಅಗ್ನಿಹಂಸ’(1946) ಸಂಕಲನದಲ್ಲಿ ಫ್ರಾನ್ಸಿಸ್ ಥಾಮ್ಸನ್ ಕವಿಯ ‘The Hound of Heaven’ ಎಂಬ ಕವಿತೆಯ ರೂಪಾಂತರ ಎಂದು ‘ದೇವಕೇತು’ ಕವಿತೆಯ ಕೆಳಗೆ ಉಲ್ಲೇಖಿಸಲಾಗಿದೆ. ಪುನಃ ‘ಪ್ರೇಮ ಕಾಶ್ಮೀರ’(1946)ದಲ್ಲಿ ಲೀ ಹಂಟ್ ಕವಿಯ ‘Rondeau’ ಭಾವಾನುಕರಣ ಎಂದು ‘ರಾಧೆ ನನ್ನ ಕೆನ್ನೆಗೆ’ ಎಂಬ ಕವಿತೆ ಇದೆ. ‘ಕಥನ ಕವನಗಳು’(1936) ಸಂಕಲನದಲ್ಲಿ ವರ್ಡ್ಸ್ ವರ್ತ್ ಕವಿಯ ‘Laodomia’ಕವಿತೆಯ ಭಾವವನ್ನು ಗ್ರಹಿಸಿ ರಚಿಸಿದ್ದು ಎಂದು ‘ಕುಮುದಿನಿ’ ಕವಿತೆಯ ಕೆಳಗೆ ಟಿಪ್ಪಣಿ ಬರೆದಿದ್ದಾರೆ.

‘ಷೋಡಶಿ’(1947) ಸಂಕಲನದಲ್ಲಿಯೂ ಬೌನಿಂಗ್ ಕವಿಯ ಒಂದು ಕವನ ಭಾಗದ ಅನುಕರಣೆ ಎಂದು ‘ಚೆಂದುಟಿ ಮುತ್ತು’ ಎಂಬ ಕವಿತೆಯನ್ನು ಬರೆದಿದ್ದಾರೆ ಕವಿ ಕುವೆಂಪು. ಈ ಎಲ್ಲಾ ಕವಿತೆಗಳನ್ನು ಉಲ್ಲೇಖಿಸಿದ ಉದ್ದೇಶ ಕುವೆಂಪು ಅವರಲ್ಲಿ ಭಾಷಾಂತರದ ಹಲವು ರೀತಿಗಳು ಒಟ್ಟೊಟ್ಟಿಗೆ ಕೆಲಸ ಮಾಡುತ್ತವೆ ಎನ್ನುವುದನ್ನು ವಾಚಕರು ಗಮನಿಸಲಿ ಎಂದು. ಒಂದೆಡೆ ಕವಿತೆಯ ನೇರ ಭಾಷಾಂತರ ಮಾಡಿದರೆ ಇನ್ನೊಂದೆಡೆ ಅದರ ಭಾವಾನುವಾದವನ್ನು ಮಾಡುತ್ತಾರೆ. ಕೆಲವು ಕಡೆ ಮೂಲ ಕವಿತೆಯ ಹೆಸರನ್ನೂ ಕವಿಯ ಹೆಸರನ್ನೂ ಉಲ್ಲೇಖಿಸಿ ಭಾಷಾಂತರ ಮಾಡಿದರೆ ಇನ್ನೊಂದೆಡೆ ಕವಿಯ ಹೆಸರಿನ ಉಲ್ಲೇಖ ಮಾತ್ರವಿದೆ. ಕೆಲವು ಕವಿತೆಗಳ ಕೆಳಗೆ ಪ್ರೇರಣೆಯೆಂದು ಉಲ್ಲೇಖಿಸಲಾಗಿದೆ.

ಕುವೆಂಪು ಭಾಷಾಂತರ ಪ್ರವೃತ್ತಿಯಲ್ಲಿ ರೂಪಾಂತರಿಸುವ, ಸ್ಥಳೀಯಗೊಳಿಸುವ ಪ್ರಕ್ರಿಯೆಯು ಸಕ್ರಿಯವಾಗಿದೆ. ಮೂಲವನ್ನು ತಮ್ಮ ಅಭಿರುಚಿ, ಸಂಸ್ಕೃತಿಗೆ ತಕ್ಕಂತೆ ಮಾರ್ಪಡಿಸಿ ಪುನರ್ಲೇಖ ಮಾಡುವುದು ಕುವೆಂಪು ಅವರಿಗೆ ದತ್ತವಾಗಿದೆ. ಅವರು ತಮ್ಮನ್ನು ತಾವು ಅನುವಾದಕರೆಂದು ಕರೆದುಕೊಂಡು ಅದನ್ನೊಂದು ವಿಭಿನ್ನ ವ್ಯಕ್ತಿತ್ವವನ್ನಾಗಿ ಭಾವಿಸುವುದಿಲ್ಲ. ತಮ್ಮೊಳಗಿನ ಭಾಷಾಂತರಕಾರ ಜೀವಂತವಾಗಿರುವುದು ವಿಶ್ವಸಾಹಿತ್ಯದ ವಿಶ್ವಾತ್ಮಕ ಮೌಲ್ಯಗಳನ್ನು ಅನುಸಂಧಾನ ಮಾಡಲು ಎಂದು ಅವರು ಬಲವಾಗಿ ನಂಬಿದ್ದರು. ‘ಕಥನ ಕವನಗಳು’(1936) ಸಂಕಲನದಲ್ಲಿ ಟೆನಿಸನ್ ಕವಿಯ Morte D’Arthur’ ‘ಜಯಸಿಂಹನ ಕೊನೆಗಾಲ’ ಎನ್ನುವ ಕವಿತೆಯನ್ನು ಕನ್ನಡಕ್ಕೆ ತಂದಿದ್ದಾರೆ ‘ಹೊನ್ನ ಹೊತ್ತಾರೆ’(1976) ಸಂಕಲನದಲ್ಲಿ ಟೆನಿಸನ್ ಕವಿಯಿಂದ ಎಂಬ ಹೆಸರಿನಲ್ಲಿ ‘ಮೂಡುವನು ರವಿ; ಮೂಡುವನು ಶಶಿ’ ಎನ್ನುವ ಕವಿತೆಯ ಭಾಷಾಂತರವಿದೆ. ಇದು ಅಪ್ಪಟವಾದ ಪ್ರಕೃತಿ ಕವನವಾಗಿದ್ದು ಇದು ಕುವೆಂಪು ಅವರಿಗೆ ಪ್ರಿಯವಾದ ವಸ್ತು ಮತ್ತು ಸ್ವಾನುಭವದ ಉತ್ಕೃಷ್ಟ ಸ್ವಾದದ ಮರು ನಿರೂಪಣೆಯಂತಿದೆ. ಇದೇ ಸಂಕಲನದಲ್ಲಿ ರಾಬರ್ಟ್ ಸೌತೀಯ ‘Bishop Hatto’ಕವನದ ಅನುವಾದ ಎಂದು ಉಲ್ಲೇಖಿಸಿರುವ ಕವಿತೆ ಶುದ್ಧ ಸ್ಥಳೀಯತೆಯಲ್ಲಿ ಮೈದಳೆದ ಕವಿತೆಯಾಗಿದೆ. ಮೂಲದಲ್ಲಿ ಬಿಷಪ್ ಕ್ರೂರಿಯಾಗಿದ್ದು ಚರ್ಚಿನಲ್ಲಿರುವ ಧಾನ್ಯವನ್ನು ಜನರಿಗೆ ನಿರಾಕರಿಸುತ್ತಾನೆ. ಅದನ್ನು ಇಲ್ಲಿ ಮಠಾಧಿಪತಿ ಎಂದು ಮಾರ್ಪಡಿಸಿ ದೇಶೀಯವಾಗಿಸಿದೆ. ಬೆಂಕಿಯಲ್ಲಿ ಸಿಲುಕಿ ರೈತರೆಲ್ಲ ‘ಹರಿ!’ ಎಂದು ಗೋಳಾಡುತ್ತಿದ್ದಾರೆ. ‘ಮಠದ ಗುರು ಬೇಗ ತುಂಗೆಯನು ದಾಟಿ/ ಹೊಳೆಯಾಚೆಯಾ ಮಠದ ಶಿಖರವನು ಸೇರಿ’ ಓಡಿಹೋದನಂತೆ.

ಹೀಗೆ ಪುನನಿರ್ಮಾಣ ಮಾಡಿಕೊಳ್ಳುವುದು ‘ಬೊಮ್ಮನಹಳ್ಳಿಯ ಕಿಂದರಿಜೋಗಿ’(1926) ಕವಿತೆಯಲ್ಲಿ ಸುಸಂಪನ್ನವಾಗುತ್ತದೆ. ಬ್ರೌನಿಂಗ್ ಕವಿಯ ‘The Pide Piper of Hamelin’ ಕವಿತೆಯ ಭಾಷಾಂತರವಿದು ಎಂತಲೇ ಗುರುತಿಸಲ್ಪಡುವ ಈ ಗೀತೆ ಕನ್ನಡದ ಜನಪ್ರಿಯ ಶಿಶುಗೀತೆಯಾಗಿಬಿಟ್ಟಿತು (‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯು ಬ್ರೌನಿಂಗ್ ಕವಿಯ ‘ದ ಪೈಡ್ ಪೈಪರ್ ಆಫ್ ಹಾಮಿಲಿನ್’(The Pide Piper of Hamelin) ಕವಿತೆಯ ಪ್ರಭಾವದಿಂದ ರಚಿತವಾದ ನೀಳ್ಗಾವ್ಯ) ಆದರೆ ಕುವೆಂಪು ಈ ಕವಿತೆಯನ್ನು ಭಾಷಾಂತರ ಎಂದು ಒಪ್ಪುವುದಿಲ್ಲ. ಅದನ್ನು ಎಂದೊ ಕೇಳಿದ್ದು ಬರೆಯುವಾಗ ಅದು ತನ್ನಿಂತಾನೆ ಸಹಜವಾದ ಲಯದಲ್ಲಿ ಉದ್ಭವಿಸಿತು ಎಂದು ಹೇಳಿಕೊಂಡಿದ್ದಾರೆ. ಇದು ಕುವೆಂಪು ಅವರ ಭಾಷಾಂತರಗಳ ಮಾದರಿಗಳಲ್ಲಿ ವಿವಾದಾತ್ಮಕ ಎನ್ನಿಸುವ ರೀತಿಯದು. ಮೂಲದ ಕವಿತೆಯನ್ನು ಬಹುವಾಗಿ ಹೋಲುವ ಈ ಕವಿತೆ ಹೇಗೆ ಸ್ವತಂತ್ರ ಎಂದು ಅನೇಕರು ಪ್ರಶ್ನೆ ಎತ್ತಿದ್ದಾರೆ. ಇದನ್ನು ಕುವೆಂಪು ನಿರಾಕರಿಸಿ ಇದು ತಮ್ಮದೇ ಭಾವಕೋಶದಲ್ಲಿ ಮೈದಳೆದ ಕವಿತೆಯೆಂದೂ ಮೂಲಪದ್ಯವು ಬರೆಯುವ ಹೊತ್ತಲ್ಲಿ ತಮ್ಮ ಬಳಿ ಇರಲೇ ಇಲ್ಲವೆಂದು ಹೇಳುತ್ತಾರೆ. ಅದೇನೆ ಇರಲಿ ಕುವೆಂಪು ಅವರ ಭಾವಸೃಷ್ಟಿಯು ಪ್ರೇರಣೆಯಿಂದ ಒಂದು ಕವಿತೆಯನ್ನು ಪುನಾ ಸೃಜಿಸುವ ಅನುಸೃಷ್ಟಿಯ ರೂಪದ್ದು ಎಂದು ಹೇಳಬಹುದು.

ಕುವೆಂಪು ಭಾಷಾಂತರಕ್ಕೆ ಎತ್ತಿಕೊಂಡಿರುವ ಕವಿತೆಗಳಲ್ಲಿ ಭಾರತೀಯ ಹಾಗು ಪಾಶ್ಚಾತ್ಯ ಕಾವ್ಯಗಳೆರಡೂ ಸೇರಿವೆ. ಬಂಗಾಳಿ ಆಧ್ಯಾತ್ಮಿಕ ಪರಂಪರೆಯಲ್ಲಿ ಆಸಕ್ತಿ ಹೊಂದಿದ್ದ ಕುವೆಂಪು ಅವರಿಗೆ ಶ್ರೀರಾಮಕೃಷ್ಣರು ಮತ್ತು ವಿವೇಕಾನಂದರು ಪ್ರಚಾರ ಮಾಡಿದ ಭಾರತೀಯ ಆಧ್ಯಾತ್ಮಿಕ ಸಾರವನ್ನು ಭಾಷಾಂತರಿಸುವ ಬಲವಾದ ಪ್ರೇರಣೆ ಇದ್ದ ಕಾರಣ ವಿವೇಕಾನಂದರ ಕವಿತೆಗಳನ್ನು ಭಾಷಾಂತರ ಮಾಡುವ ಜೊತೆಗೆ ತಮ್ಮ ಪ್ರೇರಿತ ಕವಿತೆಗಳನ್ನೂ ಭಾಷಾಂತರದ ನೆಲೆಯಲ್ಲಿಯೇ ನೋಡಬಹುದು ಎಂಬ ಸೂಚನೆ ನೀಡುತ್ತಾರೆ. ‘ವಿವೇಕವಾಣಿ’ಯಲ್ಲಿ ಕುವೆಂಪು ಅವರು ಮಾಡಿದ ಭಾಷಾಂತರಗಳಿವೆ. ಇನ್ನು ಕುವೆಂಪು ಅರವಿಂದರಿಂದ ಸಮಾನವಾಗಿ ಪ್ರೇರಿತರಾದವರು. ಅವರ ಮೇಲೆ ಹಲವಾರು ಕವಿತೆಗಳನ್ನೂ ಲೇಖನಗಳನ್ನೂ ಕುವೆಂಪು ಬರೆದಿದ್ದಾರೆ. ಆದರೆ ಬೇಂದ್ರೆಯವರಂತೆ ಅರವಿಂದರ ಕಾವ್ಯ/ವಿಚಾರಗಳನ್ನು ಅನುವಾದಕ್ಕೆ ಎತ್ತಿಕೊಂಡಂತೆ ತೋರುವುದಿಲ್ಲ. ಆದರೆ ರಮ್ಯಕವಿಯಾದ ರವೀಂದ್ರನಾಥ ಠಾಗೂರರ ಕವಿತೆಗಳನ್ನು ತಮ್ಮ ಕಾವ್ಯದ ದಾರಿಯಲ್ಲಿ ಅನೇಕ ಬಾರಿ ಭಾಷಾಂತರಗಳನ್ನು ಮಾಡಿದ್ದಾರೆ. ‘ಗೀತಾಂಜಲಿ’ ಸೇರಿದಂತೆ ಹಲವು ರವೀಂದ್ರನಾಥ ಠಾಗೂರರ ಅನೇಕ ಕವಿತೆಗಳನ್ನು ಬಿಡಿಬಿಡಿಯಾಗಿ ಕುವೆಂಪು ಭಾಷಾಂತರ ಮಾಡಿದ್ದಾರೆ. ‘ನನ್ನ ಮನೆ’(1946) ಸಂಕಲನದಲ್ಲಿರುವ ‘ಹಿರೇತನ’ ಎನ್ನುವ ಕವಿತೆಯನ್ನು ರವೀಂದ್ರನಾಥ ಠಾಕೂರರಿಂದ ಎಂದು ಪದ್ಯದ ಕೆಳಗೆ ಬರೆದಿದ್ದಾರೆ. ‘ಕುಟೀಚಕ’(1967)ರಲ್ಲಿ ರವೀಂದ್ರರ ‘ನಮಸ್ಕಾರ’ ಹಾಗು ‘ಸತ್ಯದ ಸಂಯಮ’ ಮತ್ತು ‘ಮೋಹ’ ಎನ್ನುವ ಸಣ್ಣದಾದ ಕವಿತೆಗಳನ್ನು ಭಾಷಾಂತರಿಸಿದ್ದಾರೆ. ‘ಗೀತಾಂಜಲಿ’ಯಿಂದ 45, 69, 103, 4 ಕವಿತೆಗಳನ್ನು ಭಾಷಾಂತರಿಸಿದ್ದಾರೆ. ಈ ಎಲ್ಲಾ ಕವಿತೆಗಳು ಮೂವತ್ತರ ದಶಕದ ಸುಮಾರಿಗೆ ಭಾಷಾಂತರ ಮಾಡಲಾಗಿದೆ. ಕುವೆಂಪು ಇವನ್ನು ಭಾಷಾಂತರಿಸಿದ ದಿನಾಂಕಗಳನ್ನು ಆಯಾ ಕವಿತೆಗಳ ಅಡಿಯಲ್ಲಿ ನೀಡಿದ್ದಾರೆ.

ಈ ಕವಿತೆಗಳ ಭಾಷಾಂತರಗಳು ಕುವೆಂಪು ಕಾವ್ಯದ ಯಾನದಲ್ಲಿ ನಿರಂತರವಾಗಿ ನಡೆದಿವೆ. ಕುವೆಂಪು ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಕವಿತೆಯ ವಸ್ತುವಷ್ಟೆ ಅಲ್ಲದೆ ಅದರ ಸಂರಚನೆಯ ಬಗೆಗೂ ಆಸಕ್ತಿ ವಹಿಸಿದ್ದಾರೆ. ಸ್ವತಃ ಕವಿಯೂ ಆದ ಅವರಿಗೆ ಪದ್ಯವು ಸಶರೀರವಾಗಿ ಅದರ ಪಂಕ್ತಿ, ಲಯ, ಪ್ರಾಸಗಳೊಂದಿಗೆ ಬರಬೇಕೆನ್ನುವ ಧೋರಣೆ ಇದೆ ಎನ್ನಿಸುತ್ತದೆ. ಈ ದೃಷ್ಟಿಯಿಂದಲೂ ಅವರ ಭಾಷಾಂತರದ ಧೋರಣೆಯನ್ನು ಗಮನಿಸಬಹುದಾಗಿದೆ.

ಕುವೆಂಪು ಭಾಷಾಂತರವು ಅತಿಹೆಚ್ಚು ಚರ್ಚೆಯಾಗಿರುವುದು ಅವರು ಮಾಡಿದ ಎರಡು ಷೇಕ್ಸ್ ಪಿಯರ್ ನಾಟಕಗಳಿಂದ. ‘ಬಿರುಗಾಳಿ’ ‘ಟೆಂಪೆಸ್ಟ್’ ನಾಟಕದ ರೂಪಾಂತರವಾದರೆ ‘ರಕ್ತಾಕ್ಷಿ’ ‘ಹ್ಯಾಮ್ಲೆಟ್’ ಕಥಾ ಹಂದರಕ್ಕೆ ಬಿದನೂರಿನ ಇತಿಹಾಸವನ್ನು ಅಳವಡಿಸಿ ರಚಿಸಿರುವ ಸರಳ ರಗಳೆಯ ನಾಟಕ. ಈ ಎರಡೂ ನಾಟಕಗಳಲ್ಲಿ ಕುವೆಂಪು ಅನುಸರಿಸಿರುವ ತಂತ್ರಗಳು ಮತ್ತೆ ವಿಭಿನ್ನ. ಪ್ರತಿ ನಾಟಕದ ಭಾಷಾಂತರವೂ ವಿಶಿಷ್ಟವಾಗಿ ಭಿನ್ನವಾಗುತ್ತದೆ.

ಭಾಷಾಂತರದ ದೃಷ್ಟಿಯಿಂದ ಮೊದಲ ಹಂತದಲ್ಲಿ ಕನ್ನಡದಲ್ಲಿ ಭಾಷಾಂತರಗೊಂಡ ಷೇಕ್ಸ್ ಪಿಯರನ ದುರಂತ ನಾಟಕಗಳಲ್ಲಿ ಹ್ಯಾಮ್ಲೆಟ್, ಮ್ಯಾಕ್‍ಬೆತ್, ರೊಮಿಯೊ ಅಂಡ್ ಜೂಲಿಯೆಟ್, ಕಿಂಗ್ ಲಿಯರ್, ಒಥೆಲೊ ಇವು ಕ್ರಮವಾಗಿ ಭಾಷಾಂತರಗೊಳ್ಳುತ್ತಿದ್ದ ನಾಟಕಗಳು. ಸುಖಾಂತ್ಯ ನಾಟಕಗಳಲ್ಲಿ ಟೇಮಿಂಗ್ ಆಫ್ ದ ಶ್ರೂ, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್, ಟೆಂಪೆಸ್ಟ್, ಮರ್ಚೆಂಟ್ ಆಫ್ ವೆನಿಸ್ ಮುಂತಾದವು ಮುಂಚೂಣಿಯಲ್ಲಿದ್ದಂತವು. ಮೊದಲ ಭಾಷಾಂತರಗಳು ಎದುರಿಸಿದ ವಸಾಹತುಶಾಹಿ ಕಾಲದ ಸಾಂಸ್ಕೃತಿಕ ಪಲ್ಲಟಗಳು ನಾಟಕಗಳ ಯಥಾವತ್ತು ಭಾಷಾಂತರವನ್ನು ಬಿಡುವಂತೆ ಮಾಡಿದವು. ಪರಿಣಾಮವಾಗಿ ಬಹುತೇಕ ನಾಟಕಗಳು ಸ್ಥಳೀಯ ಸಂಸ್ಕೃತಿಗಳಿಗೆ ಹೊಂದುವ ಅಳವಡಿಕೆಗಳನ್ನು ಮಾಡಿಕೊಂಡವು; ಮರುನಿರೂಪಣೆ ಮಾಡಿದವು ಹಾಗು ಪುನರ್ಲೇಖವನ್ನು ಮಾಡಿದವು. ಈ ಹಿನ್ನೆಲೆಯಲ್ಲಿ ಕುವೆಂಪು ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲಿ ಮಾಡಿದ ಎರಡು ಷೇಕ್ಸ್ ಪಿಯರನ ನಾಟಕಗಳನ್ನು ಗಮನಿಸಬೇಕು. ಕುವೆಂಪು ತಮ್ಮ ಸಮಕಾಲೀನ ಮತ್ತು ಪೂರ್ವಸೂರಿಗಳ ಹೆಜ್ಜೆಯನ್ನು ಅನುಸರಿಸಿ ಪಾಶ್ಚಾತ್ಯ ನಾಟಕ ಪ್ರಕಾರವನ್ನು ಒಪ್ಪಿಕೊಂಡರು; ಆದರೆ ಅದನ್ನು ಬದಲಾಯಿಸಿಕೊಂಡರು. ಹಾಗಾಗಿ ಇಡೀ ಕಥೆಯನ್ನು ಷೇಕ್ಸ್ ಪಿಯರ್ ನಾಟಕದ ಕಥಾಸಂರಚನೆಗೆ ಹೊಂದಿಸಿ ಪುನರ್ಲೇಖ ಮಾಡಿದರು. ನಾಟಕ ಪ್ರಕಾರವನ್ನು ಆಧುನಿಕಗೊಳಿಸುವುದು ಎಂದರೆ ತಮ್ಮಲ್ಲಿಯೆ ಇರುವ ಕಥಾವಸ್ತುಗಳನ್ನು ಹೊಸದಾಗಿ ಹೇಳುವುದು ಎಂದು ಅರ್ಥೈಸಿದರು. ಅದರಿಂದಾಗಿ ಅವರಿಗೆ ಶಂಭೂಕವಧೆಯನ್ನು ಸಮಕಾಲೀನ ವರ್ಣಾಶ್ರಮ ಪದ್ಧತಿಗೆ ಹೋಲಿಸಿ ಹೇಳಬಹುದಾದ ಕಥಾವಸ್ತುವಾಗಿ ಕಾಣಿಸಿತು. ಏಕಲವ್ಯನ ಬೆರಳಿನ ಅರ್ಪಣೆಯು ಶೂದ್ರತ್ವದ ಪ್ರಶ್ನೆಯನ್ನು ವರ್ತಮಾನದಲ್ಲಿ ಎತ್ತುವುದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿತಲ್ಲದೆ ಆತ್ಮಶ್ರೀಗಾಗಿ ಇರಬೇಕಾದ ಆಧ್ಯಾತ್ಮಿಕ ಮನೋಧೋರಣೆಯನ್ನು ಪ್ರತಿಪಾದಿಸಿತು. ಕುವೆಂಪು ಅವರಿಗೆ ಭಾಷಾಂತರವು ಎಂದಿಗು ಶುಷ್ಕವಾದ ಯಥಾವತ್ತು ಕ್ರಿಯೆ ಅಲ್ಲವೇ ಅಲ್ಲ. ಅವರಿಗೆ ಈ ಹಿಂದೆ ಕನ್ನಡ ಪರಂಪರೆ ಹೇಗೆ ತನ್ನ ಹಿರಿಕಿರಿಯ ಭಾಷೆಗಳ ಜೊತೆ ಅನುಸಂಧಾನ ಮಾಡಿ ತನ್ನದೇ ಆದ ಅನುಸೃಷ್ಟಿಗೆ ಅವಕಾಶ ಮಾಡಿಕೊಳ್ಳುತ್ತಿತ್ತು ಅದು ಮುಖ್ಯವಾಗುತ್ತದೆ. ನಮ್ಮತನ ಬಿಟ್ಟುಕೊಡದೆ ಆಕರವನ್ನು ಒಗ್ಗಿಸಿಕೊಳ್ಳುವುದು ಕುವೆಂಪು ಅವರಿಗೆ ಸೃಜನಶೀಲ ಸವಾಲು. ಬಂಡಾಯ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದಾಗ ಅವರು ಹಳೆಯ ಒಡವೆಗಳೆಂದು ಚಿನ್ನವನ್ನು ಎಸೆಯಬಾರದು ಅದನ್ನು ಕರಗಿಸಿ ಅಚ್ಚು ಬದಲಾಯಿಸಿ ಹೊಸ ಒಡವೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದ ಮಾತನ್ನು ಇಲ್ಲಿ ಭಾಷಾಂತರಕ್ಕೆ ಅನ್ವಯಿಸಿ ಹೇಳಬಹುದಾದರೆ ಸಂಸ್ಕೃತಿಯನ್ನು ಮಾರ್ಪಡಿಸಿ ಸಮಕಾಲೀನಗೊಳಿಸಿಕೊಳ್ಳುವುದು ಸೂಕ್ತ ಹೌದು ಆದರೆ ಹಳೆಯದನ್ನು ಬಿಟ್ಟುಕೊಡಬಾರದು ಎಂಬ ನಿಲುವು. ಹಾಗಾಗಿ ಅವರದು ಅನುಸೃಷ್ಟಿಯ ಮಾದರಿ. ಕನ್ನಡ ವಿಮರ್ಶೆ ಬಹುತೇಕ ಅವರ ‘ರಕ್ತಾಕ್ಷಿ’ ನಾಟಕವನ್ನು ಸ್ವತಂತ್ರ ಕೃತಿ ಎಂಬ ಧೋರಣೆ ಹೊಂದಿದೆ ಎನ್ನವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು.

ಷೇಕ್ಸ್ ಪಿಯರ್ ನ ಟೆಂಪೆಸ್ಟ್ ನಾಟಕವು ಸುಖಾಂತ್ಯದ ನಾಟಕ. ಬಿರುಗಾಳಿ(1930) ನಾಟಕಕ್ಕೆ ಮುನ್ನುಡಿ ಬರೆದ ಟಿ.ಎಸ್.ವೆಂಕಣ್ಣಯ್ಯನವರು ‘ಒಂದು ಭಾಷೆಯಲ್ಲಿರುವ ನಾಟಕವನ್ನು ಇನ್ನೊಂದು ಭಾಷೆಗೆ ತರುವವರು ಮೂಲದಲ್ಲಿ ಇದ್ದುದನ್ನು ಇದ್ದಂತೆ ಶಬ್ದಶಃ ಭಾಷಾಂತರ ಮಾಡಬಹುದು; ಅಥವಾ ಮೂಲದಲ್ಲಿರುವುದನ್ನು ಹೆಚ್ಚು ಬದಲಾಯಿಸದೆ ಅದು ತಾವು ಬರೆಯುವ ಭಾಷೆಯನ್ನಾಡುವ ಜನರ ನಡೆನುಡಿಗೆ ಹೊಂದುವಂತೆ ಅವಶ್ಯಕವಾದಷ್ಟು ವ್ಯತ್ಯಾಸವನ್ನು ಮಾತ್ರ ಮಾಡಿಕೊಂಡು ಸ್ವಲ್ಪ ಹೆಚ್ಚು ಕಡಿಮೆ ಮೂಲ ನಾಟಕದ ಭಾವವೆಲ್ಲವೂ ಬರುವಂತೆ ಅನುವಾದಿಸಬಹುದು. ಪುಟ್ಟಪ್ಪನವರು ಈ ಎರಡು ವಿಧಾನಗಳನ್ನೂ ಅನುಸರಿಸಿಲ್ಲ. ಅವರು ಮೂಲಗ್ರಂಥವನ್ನು ಓದಿ ಅದನ್ನು ಓದಿದ್ದರಿಂದ ತಮ್ಮ ಮನಸ್ಸಿನಲ್ಲಿ ಉಂಟಾದ ಮುಖ್ಯಮುಖ್ಯವಾದ ಚಿತ್ರಗಳನ್ನೂ ಭಾವಗಳನ್ನೂ ಆಧಾರವಾಗಿಟ್ಟುಕೊಂಡು ಒಂದು ಹೊಸ ನಾಟಕವನ್ನು ನಿರ್ಮಿಸುತ್ತಾರೆ. ಇದನ್ನು ಮೂಲನಾಟಕದ ಭಾಷಾಂತರ ಅಥವಾ ಅನುವಾದ ಎಂದು ಹೇಳಲಾಗದು; ಆ ನಾಟಕವನ್ನು ಈ ನಾಟಕ ರಚನೆಗೆ ಪ್ರೇರಕವೆಂದು ಹೇಳಬಹುದು. ಅದರಲ್ಲಿರುವ ಭಾವಗಳು ರೂಪಾಂತರವನ್ನು ಹೊಂದಿ ಇದರಲ್ಲಿ ಸೇರಿರುವುದು ಸ್ವಾಭಾವಿಕ’(ವೆಂಕಣ್ಣಯ್ಯ, 471) ಎಂದು ಕುವೆಂಪು ಅವರ ಭಾಷಾಂತರವನ್ನು ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವತಃ ಕುವೆಂಪು ಅವರು ‘“ಬಿರುಗಾಳಿ” “ಟೆಂಪೆಸ್ಟ್” ನಾಟಕದ ಅನುವಾದವಾದರೂ ಇಂಗ್ಲಿಷ್ ಬಾರದ ಜನರಿಗೆ ಸ್ವತಂತ್ರ ಕೃತಿಯೆಂದೇ ಕಾಣಬಹುದು. ಬಹುಮಟ್ಟಿಗೆ ಮೂಲವನ್ನೇ ಅನುಸರಿಸಿದ್ದರೂ ಅಲ್ಲಲ್ಲಿ ಸ್ವಾತಂತ್ರ್ಯ ವಹಿಸಿ ಒಂದೆರಡು ದೃಶ್ಯಗಳನ್ನು ಬದಲಾಯಿಸಿಕೊಂಡಿದೆ(ಮೂಲದ ಮೊದಲನೆಯ ದೃಶ್ಯಕ್ಕೂ ಇಲ್ಲಿಯ ಮೊದಲನೆಯ ದೃಶ್ಯಕ್ಕೂ ಸಂಬಂಧವೇ ಇಲ್ಲ); ಹಾಸ್ಯದ ಸನ್ನಿವೇಶಗಳಲ್ಲಿ ಸಂಭಾಷಣೆಗಳಲ್ಲಿ ಮತ್ತು ಹಾಡುಗಳಲ್ಲಿ ಒಮ್ಮೊಮ್ಮೆ ಸ್ವತಂತ್ರ ಸೃಷ್ಟಿಯೇ ಆಗಿದೆ’(ಕುವೆಂಪು, 555) ಎಂದು ಹೇಳಿಕೊಂಡಿದ್ದಾರೆ. ಎಷ್ಟೇ ಕೊಸರಾಡಿ ಹೇಳಿದರೂ ಈ ನಾಟಕದ ಮೂಲ ಟೆಂಪೆಸ್ಟ್ ಅಲ್ಲವೇ? ಎಂದು ಕೇಳಿದರೆ ಹೌದು ಮತ್ತು ಇಲ್ಲ ಎಂದು ಎರಡೂ ಉತ್ತರಗಳನ್ನು ನೀಡಬಹುದು! ಏಕೆಂದರೆ ಇದೊಂದು ಅನುಸೃಷ್ಟಿಯ ಕೆಲಸ. ಆಕರ ಇದೆ; ಆದರೆ ಹೂರಣಕ್ಕೆ ತಮಗೆ ಬೇಕಾದ ಲವಾಜಮ್ಮನ್ನು ತುಂಬಿಕೊಂಡಿದೆ.

ಮಾನವತೆ ಮತ್ತು ವಿಶ್ವಾತ್ಮಕ ಮೌಲ್ಯವನ್ನು ಒಪ್ಪುವ ಅವರ ಸಾಹಿತ್ಯ ಒಟ್ಟಾರೆ ವಿಶ್ವಸಾಹಿತ್ಯವನ್ನು ಭಾಷೆಯ ದೃಷ್ಟಿಯಿಂದ ನಿರಾಕರಿಸುವುದಿಲ್ಲ. ಒಂದು ಹಂತದಲ್ಲಿ ಭಾರತೀಯ ದರ್ಶನವು ಎತ್ತಿಹಿಡಿಯುವುದು ಉದಾರವಾದೀ ಮಾನವತೆಯನ್ನೇ ಎನ್ನುವುದು ಕುವೆಂಪು ನಿಲುವು. ಹಾಗಾಗಿ ‘ಬಿರುಗಾಳಿ’ ನಾಟಕವನ್ನು ಭಾಷಾಂತರಿಸುವಾಗ ಅವರು ಕೊನೆಯಲ್ಲಿ ಟಿಪ್ಪಣಿಕೆಯನ್ನು ಬರೆದು ತಮ್ಮ ಭಾಷಾಂತರವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ; ‘ಇಲ್ಲಿ ನಿರೂಪಣೆಗೊಂಡಿರುವ ಜೀವನದರ್ಶನ ಭಾರತೀಯ ದರ್ಶನದಿಂದ ಅಭಿನ್ನವಾದುದು. ಆದುದರಿಂದ ಪಾತ್ರಸೃಷ್ಟಿ ಸನ್ನಿವೇಶ ಕಲ್ಪನೆ ಮತ್ತು ನಾಟಕದ ವಾತಾವರಣ ಭಾರತೀಯ ಸಂಪ್ರದಾಯಕ್ಕೂ ಅಭಿರುಚಿಗೂ ತುಂಬ ಹೊಂದಿಕೊಂಡಿರುವಂತೆ ಕಾಣುತ್ತದೆ. ಪ್ರಾಸ್ಪರೊನಲ್ಲಿ ವಿಶ್ವಾಮಿತ್ರ ಕಣ್ವಮುನಿಗಳನ್ನೂ ಮಿರಾಂಡಳಲ್ಲಿ ಶಕುಂತಲೆಯಂಥ ಮುಗ್ಧ, ಋಷಿಕನ್ಯೆಯನ್ನೂ ಸುಲಭವಾಗಿ ಗುರುತಿಸಬಹುದಾಗಿದೆ’(ಕುವೆಂಪು, 555). ಕುವೆಂಪು ಅವರಿಗೆ ತಕರಾರು ಉಂಟಾಗುವುದು ಸಂಸ್ಕೃತಿಯ ಪಲ್ಲಟಗೊಳಿಸುವ ಧೋರಣೆಯಲ್ಲಿ. ಭಾಷಾಂತರವನ್ನು ಸ್ವತಃ ಕುವೆಂಪು ಅವರು ಕೇವಲ ಪದಶಃ ಕ್ರಿಯೆ ಎಂದು ಭಾವಿಸುವುದಿಲ್ಲ ನಿಜ ಆದರೆ ಭಾರತೀಯ ಸಂಸ್ಕೃತಿಯ ಪಲ್ಲಟವು ಅವರಿಗೆ ಹಿಡಿಸದು ಎನ್ನುವಂತಿದೆ ಅವರು ಬಿ.ಎಂ.ಶ್ರೀ ಅವರ ‘ಅಶ್ವತ್ಥಾಮನ್’ ನಾಟಕದ ಬಗ್ಗೆ ಮಾಡಿದ ಟೀಕೆ. ಮೊಟ್ಟಮೊದಲಿಗೆ ಮೊದಲ ಹಂತದ ನಾಟಕದ ಭಾಷಾಂತರಗಳು ನಡೆಯುತ್ತಿರುವಾಗ ಇಲ್ಲಿನ ಭಾಷಾಂತರಕಾರರು ಪಾಶ್ಚಾತ್ಯ ಸಾಹಿತ್ಯ ಪಠ್ಯಗಳಲ್ಲಿ ಇರುವ ವಸ್ತು ಮತ್ತು ಸಂರಚನೆಗಳೆರಡನ್ನೂ ವಿಮರ್ಶೆಗೆ ಒಳಪಡಿಸಿದ್ದಾರೆ. ಉದಾಹರಣೆಗೆ, ಶ್ರೀಕಂಠೇಶಗೌಡರು ತಮ್ಮ ಮ್ಯಾಕ್‍ ಬೆತ್ ಭಾಷಾಂತರದಲ್ಲಿ ಲೇಡಿ ಮ್ಯಾಕ್‍ಬೆತ್ ಡಂಕನ್ ಮಹಾರಾಜಾನನ್ನು ಆತಿಥೇಯಳಾಗಿ ಕೈಗೆ ಮುತ್ತಿಕ್ಕುವುದು ಸಂಸ್ಕೃತಿಗೆ ಹೊರತಾದುದೇ ಎನ್ನುವ ಬಗ್ಗೆ ತಮ್ಮ ಭಾಷಾಂತರಕ್ಕೂ ಪೂರ್ವದಲ್ಲಿ ಸಾಕಷ್ಟು ಜಿಜ್ಞಾಸೆಯನ್ನು ಮಾಡುತ್ತಾರೆ. ಇದೇ ಮನೋಭಾವ ಕುವೆಂಪು ಅವರ ತನಕವೂ ಮುಂದುವರೆದಿದೆ! ಷೇಕ್ಸ್ ಪಿಯರನ ನಾಟಕಗಳನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡು ಭಾಷಾಂತರಿಸಿದ ಕುವೆಂಪು ಅವರಿಗೆ ಬಿ.ಎಂ.ಶ್ರೀ ಅವರ ಅಶ್ವತ್ಥಾಮನ್ ಸಾಯುವುದು ಸರ್ವಥಾ ಇಷ್ಟವಾಗುವುದಿಲ್ಲ. ಅದರಲ್ಲಿಯೂ ‘ದ್ರೋಣಾಚಾರ್ಯರರ ಪುತ್ರನೂ ರುದ್ರಾವತಾರಿಯೂ ಜ್ಞಾನಿಯೂ ಸಾಲದ್ದಕ್ಕೆ ಚಿರಂಜೀವಿಯೂ ಆಗಿರುವ ಅಶ್ವತ್ಥಾಮನನಿಂದ ನಡೆಯಿತೆನ್ನುವುದು (ಕುವೆಂಪು, 455).

ಇನ್ನು ಬಹುಚರ್ಚಿತ ಭಾಷಾಂತರವೆಂದರೆ ‘ರಕ್ತಾಕ್ಷಿ’(1932). ಇದನ್ನು ಎ.ಆರ್.ಕೃಷ್ಣಶಾಸ್ತ್ರಿ ಇದು ಷೇಕ್ಸ್ ಪಿಯರ್ ಮಹಾಕವಿಯ ರೂಪಕ ರತ್ನಗಳಲ್ಲೊಂದಾದ ‘ಹ್ಯಾಂಲೆಟ್’ನ ಸಾರವನ್ನು ಹೀರಿಕೊಂಡು ಅಪೂರ್ವ ತೇಜಸ್ಸಿನಿಂದ ಕಳಕಳಿಸುವ ಹೊಸ ಮಾದರಿಯ ಗ್ರಂಥವಾಗಿದೆ’(ಕೃಷ್ಣಶಾಸ್ತ್ರಿ, 566). ‘ರಕ್ತಾಕ್ಷಿ’ ನಾಟಕವು ಮೂಲದ ಸೊಲ್ಲೆತ್ತದೆ ಓದಿದರೆ ಒಂದು ಸ್ವತಂತ್ರ ನಾಟಕವೇ. ಕಥೆಯ ಅನುಕರಣೆ ಕೆಲವೆಡೆ ಷೇಕ್ಸ್ ಪಿಯರ್ ನಾಟಕವನ್ನು ಅನುಸರಿಸಿದಂತೆ ಕಾಣಬಹುದು. ಆದರೆ ಕುವೆಂಪು ‘ರಕ್ತಾಕ್ಷಿ’ಯು ದೇಶೀಯ ಚೈತನ್ಯವನ್ನೂ ರಾಷ್ಟ್ರೀಯತೆಯ ಬಿಸುಪನ್ನೂ ತುಂಬಿಕೊಂಡಿರುವ ನಾಟಕ (‘ಬಿರುಗಾಳಿ’ ನಾಟಕವನ್ನು ಕುರಿತು ಅದೊಂದು ‘ಸಾಮ್ರಾಜ್ಯಶಾಹಿಯ ರಾಷ್ಟ್ರೀಯ ಮನೋಭಾವನೆಯನ್ನು ಮಾತ್ರ ನಾವು ಗುರುತಿಸಿದರೆ ಅದು ವಿಶ್ವಕೃತಿಯ ಮಟ್ಟಕ್ಕೆ ಏರುವುದಿಲ್ಲ’(ಕುವೆಂಪು, 557) ಎನ್ನುವ ಕುವೆಂಪು ಸ್ವತಃ ‘ರಕ್ತಾಕ್ಷಿ’ಯಲ್ಲಿ ಕನ್ನಡದ ದೇಸೀ ರಾಜಕಾರಣದ ಕತೆಯನ್ನು ರಾಷ್ಟ್ರೀಯತೆಯ ಸ್ಪರ್ಶದೊಂದಿಗೆ ಕತೆ ಮಾಡಿದ್ದಾರೆ! ಹಾಗೆ ನೋಡಿದರೆ ‘ರಕ್ತಾಕ್ಷಿ’ ನಾಟಕವು ಒಂದು ಪರ್ಯಾಯ ಪಠ್ಯವಾಗಿ ರೂಪುಗೊಳ್ಳುತ್ತಾ ಹೋಗಿದೆ. ಸ್ಥಳೀಯ ರಾಜಕಾರಣದ ಒಳಸುಳಿಗಳನ್ನು ವಸಾಹತುಶಾಹಿ ಹಿನ್ನೆಲೆಯಲ್ಲಿ ರೂಪುಗೊಂಡ ನಾಟಕ ‘ರಕ್ತಾಕ್ಷಿ’. ನಾಯಕ ಪ್ರಧಾನ ನಾಟಕವು ನಾಯಕಿ ಪ್ರಧಾನವಾದ ದುರಂತ ನಾಟಕವಾಗಿಸಿದ್ದಾರೆ. ಕುವೆಂಪು ಈ ಮೂಲಕ writing back to empire ಮಾಡುತ್ತಿದ್ದಾರೆ. ‘ರಕ್ತಾಕ್ಷಿ’ಯ ವೇಷಾಂತರಕ್ಕೆ ದತ್ತುಪುತ್ರರಿಗೆ ಹಕ್ಕಿಲ್ಲ ಎನ್ನುವ ಮೂಲಕ ಸಣ್ಣ ಸಂಸ್ಥಾನಗಳ ರಾಜಕಾರಣದಲ್ಲಿ ವಸಾಹತುಶಾಹಿ ಮಧ್ಯೆಪ್ರವೇಶ ಮಾಡುತ್ತಿದ್ದ ಚರಿತ್ರೆಯನ್ನು ಮರುಕಟ್ಟುತ್ತಿದ್ದಾರೆ ಕುವೆಂಪು. ಕಾಳಿಯ ಅವತಾರದಲ್ಲಿ ಅದು ಪ್ರಳಯವಾಗುವುದನ್ನೂ ರಾಷ್ಟ್ರೀಯತೆಯ ದೃಷ್ಟಿಯಿಂದ ಹೆಣೆದಿದ್ದಾರೆ. ‘ಕಾನೂರು ಹೆಗ್ಗಡತಿ’ ಕಾದಂಬರಿಯ ಕೊನೆಗೆ ಬರುವ ಕಾಳಿಸ್ತುತಿಯು ಇಲ್ಲಿಯೂ ಬಂದಿದೆ.

ಕುವೆಂಪು ಭಾಷಾಂತರಗಳಲ್ಲಿ ಮಹತ್ವವನ್ನು ಪಡೆದಿರುವುದು ಅವರು ಮಾಡಿರುವ ವಿವೇಕಾನಂದರು ಮತ್ತು ಶ್ರೀರಾಮಕೃಷ್ಣ ಪರಮಹಂಸರ ಸಾಹಿತ್ಯ/ವಾಣಿ /ಭಾಷಣ/ಬದುಕು-ಬರಹಗಳ ಭಾಷಾಂತರ. ಕುವೆಂಪು ಅವರ ನಂಟು ಶ್ರೀರಾಮಕೃಷ್ಣಾಶ್ರಮದ ಜೊತೆಗೆ ಇದ್ದುದರಿಂದ ಶ್ರೀರಾಮಕೃಷ್ಣ ಹಾಗು ವಿವೇಕಾನಂದರ ತತ್ವಸಿದ್ಧಾಂತಗಳಿಂದ ಬಹುವಾಗಿ ಪ್ರೇರಣೆ ಪಡೆದಿದ್ದಾರೆ. ವಿವೇಕಾನಂದರ ತತ್ವಸಿದ್ಧಾಂತಗಳು ಕುವೆಂಪು ಅವರನ್ನು ಒಬ್ಬ ಭಾರತೀಯ ಲೇಖಕರನ್ನಾಗಿಸಿತಲ್ಲದೆ ವೇದಾಂತದ ಬಗ್ಗೆ ಆಸಕ್ತಿಯನ್ನು ಮೂಡಿಸಿ ಅವರನ್ನು ತತ್ವಶಾಸ್ತ್ರದತ್ತ ಸೆಳೆಯಿತು. ಇದರಿಂದ ಕುವೆಂಪು ತಮ್ಮ ಕಿಂಚಿತ್ ಸೇವಾ ಕೈಂಕರ್ಯ ಎನ್ನುವಂತೆ ವಿವೇಕಾನಂದರ ಬರಹಗಳು/ಭಾಷಣಗಳನ್ನು ಭಾಷಾಂತರಿಸಿದ್ದಾರೆ. ಅದು ಸ್ವಯಂ ತೃಪ್ತಿಗೆ ಅಷ್ಟೇ ಅಲ್ಲದೆ ವಿವೇಕಾನಂದರ ತತ್ವಸಿದ್ಧಾಂತದ ಪ್ರಚಾರದ ಅಂಗವಾಗಿಯೂ ಮಾಡಿದಂತಿದೆ. ವಿವೇಕಾನಂದರ ಹಿಂದೂಧರ್ಮದ ವೇದಾಂತ ವಾಣಿಯು ಕುವೆಂಪು ಅವರಿಗೆ ‘ಪಾಂಚಜನ್ಯ ಸ್ವರೂಪ’ದ್ದಾಗಿ ತೋರುತ್ತದೆ. ಮೂಲತಃ ಶ್ರೀರಾಮಕೃಷ್ಣಾಶ್ರಮವು ಒಂದು ಮಿಷನ್. ಅದರ ಉದ್ದೇಶವೇ ತಮ್ಮ ತತ್ವಪ್ರಚಾರ ಮತ್ತು ಪ್ರಸರಣಗಳು. ವಿವೇಕಾನಂದರು ಉದ್ದೇಶಿಸಿದ ಈ ಕಾರ್ಯವನ್ನು ಕುವೆಂಪು ಶ್ರದ್ಧೆಯಿಂದ ಪಾಲಿಸಿದ್ದಾರೆ. ಇವುಗಳನ್ನು ಕುವೆಂಪು ಮಾಡಿದ್ದು ಮೂವತ್ತರ ದಶಕದಲ್ಲಿ. ಕುವೆಂಪು ಅವರ ಸಾಹಿತ್ಯವೂ ಸೃಜನಶೀಲತೆಯ ಹದ ಕಂಡುಕೊಳ್ಳುತ್ತಿದ್ದ ಏರುಗಾಲವಾಗಿತ್ತು ಎನ್ನುವುದು ಗಮನಾರ್ಹ.

ವಿವೇಕಾನಂದರು ಸಾರಿದ ಭಾರತೀಯ ವೇದಾಂತದ ಸಾರವನ್ನು ಕುವೆಂಪು ಕನ್ನಡದಲ್ಲಿ ಸಂಗ್ರಹಿಸಿ/ಭಾಷಾಂತರಿಸಿ ಹೇಳಿದ್ದಾರೆ. ಅದು ‘ವಿವೇಕವಾಣಿ’(1933) ಎನ್ನುವ ಪುಟ್ಟ ಕೃತಿ. ಅದರಲ್ಲಿ ವಿವೇಕಾನಂದರ ಬರಹಗಳಿಂದ ಆಯ್ದಭಾಗಗಳ ಭಾಷಾಂತರ ಮತ್ತು ಪ್ರೇರಿತ ಕವಿತೆ ಮತ್ತು ಗದ್ಯಚಿತ್ರಗಳಿವೆ. ಇದರಲ್ಲಿ ಗದ್ಯ ಮತ್ತು ಪದ್ಯಭಾಗಗಳೆರಡೂ ಇವೆ. ಇವುಗಳಲ್ಲಿ ಬಹುತೇಕ ಭಾಷಾಂತರಗಳು. ಕುವೆಂಪು ಅವರೇ ತಮ್ಮ ಮುನ್ನುಡಿಯಲ್ಲಿ ವಿವರಿಸಿದಂತೆ ಗದ್ಯಭಾಗಗಳು ಸ್ವಾಮಿ ವಿವೇಕಾನಂದರ ಭಾಷಣಗಳಿಂದ ಆಯ್ಕೆ ಮಾಡಿಕೊಂಡಂತವು. ಪದ್ಯಗಳಲ್ಲಿ ಸ್ವಾಮಿ ವಿವೇಕಾನಂದರು ಬರೆದ ‘The Hymn of Samadhi’(ಸಮಾಧಿ), ‘The Song of the Sanyasin’(ಸಂನ್ಯಾಸಿ ಗೀತೆ) ಪದ್ಯಗಳ ಭಾಷಾಂತರಗಳು ಈ ಪುಸ್ತಕದಲ್ಲಿ ಅಡಕಗೊಂಡಿವೆ. ‘ನಿರ್ವಾಣಷಟ್ಕಂ’ ಎನ್ನುವುದು ಶಂಕರಾಚಾರ್ಯ ವಿರಚಿತ ಸಂಸ್ಕೃತ ಪದ್ಯ. ಅದರ ಭಾಷಾಂತರವನ್ನು ಸಹ ಇಲ್ಲಿ ಮಾಡಿದ್ದೇನೆ ಎಂದು ಕುವೆಂಪು ಹೇಳಿಕೊಂಡಿದ್ದಾರೆ. ‘ಆರ್ಯಮಾತೆಯ ಅಮೃತ ಪುತ್ರರಿರಾ’, ‘ಓ ನನ್ನ ಭರತಮಾತೆ’, ‘ನವೀನ ಭಾರತವೇಳಲಿ’, ‘ಸಂನ್ಯಾಸವೆಂದರೇನು?’ ಇತ್ಯಾದಿ ಅನುವಾದಗಳಿವೆ. ಮುಖ್ಯವಾಗಿ ವಿವೇಕಾನಂದರ ‘ಸಾಧುಧೈರ್ಯ’ ಮತ್ತು ಶ್ರೀಮಾತೆ ಶಾರದಾದೇವಿಯವರ ಪಾವಿತ್ರ್ಯತೆಯ ಹಿರಿಮೆಯನ್ನು ಎತ್ತಿಹಿಡಿಯಲೆಂದು ಇರುವ ಬರಹಗಳು.

‘ಋಷಿವಾಣಿ ಮತ್ತು ವೇದಾಂತ’(1934) ಇವು ಕುವೆಂಪು ಅವರ ವೇದಾಂತದ ಆಸಕ್ತಿಯನ್ನು ತೋರುವ ಭಾಷಾಂತರಗಳು. ಭಾರತೀಯ ಆಧ್ಯಾತ್ಮ ಸಂಸ್ಕೃತಿಯ ಬಗೆಗೆ ಅವರಿಗಿದ್ದ ಆಸಕ್ತಿಯನ್ನು ಹೇಳುವಂತೆ ಇಲ್ಲಿನ ಬರಹಗಳಿವೆ. ವಾಸ್ತವವಾಗಿ ಇವು ವೇದೋಪನಿಷತ್ತುಗಳು ಜನಸಾಮಾನ್ಯರಿಗೆ ತಲುಪಲಿ ಎನ್ನುವ ಉದ್ಧೇಶದಿಂದ ಬರೆದಂತವು. ಕುವೆಂಪು ಅವರು ಅರಿಕೆ ಮಾಡಿಕೊಂಡಂತೆ, ‘ಈ ಅನುವಾದವು ಪಂಡಿತರಿಗೊಪ್ಪುವ ಭಾಷಾಂತರವಲ್ಲ. ಆದ್ದರಿಂದ ಇದು ಪಂಡಿತರಿಗಾಗಿ ಬರೆದುದಲ್ಲ. ಪಂಡಿತರಿಗೆ ಮೂಲಗಳೂ ಭಾಷಾಂತರಗಳೂ ಟೀಕೆವ್ಯಾಖ್ಯಾನ ಭಾಷೆಗಳೂ ಲೆಖ್ಖವಿಲ್ಲದಷ್ಟಿವೆ”. ಆದುದರಿಂದ ಇದೊಂದು ಸಾರಸಂಗ್ರಹ ರೂಪದ ಭಾಷಾಂತರ ಎನ್ನಬಹುದು. ‘ವೇದಾಂತ’ ಎನ್ನುವುದು ವಿವೇಕಾನಂದರು ಲಾಹೋರಿನಲ್ಲಿ ಮಾಡಿದ ಉಪನ್ಯಾಸದ ಅನುವಾದ. ವಿವೇಕಾನಂದರ ಮಾತುಗಳು “ಈಗತಾನೇ ಕಣ್ದೆರೆದು ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಕನ್ನಡನಾಡಿಗೆ ಸ್ವಾಮಿಗಳ ಧೀರೋಪದೇಶವು ಸಹಕಾರಿಯಾಗುವುದರಲ್ಲಿ ಸಂದೇಹವಿಲ್ಲ’ ಎನ್ನುತ್ತಾರೆ ಭಾಷಾಂತರಕಾರರಾದ ಕುವೆಂಪು.

ಶ್ರೀರಾಮಕೃಷ್ಣಾಶ್ರಮದ ನಂಟಿನಲ್ಲಿ ಹುಟ್ಟಿದ ಇನ್ನೊಂದು ಭಾಷಾಂತರದ ಪುಸ್ತಕವೆಂದರೆ-‘ಗುರುವಿನೊಡನೆ ದೇವರೆಡೆಗೆ’(1964). ಇದು ವಿವೇಕವಾಣ , ಋಷಿವಾಣ , ವೇದಾಂತ ಮುಂತಾದ ಭಾಷಾಂತರಗಳ ಮೂವತ್ತು ವರ್ಷಗಳ ನಂತರ ಬಂದಿರುವಂತದ್ದು. ಇದರ ಮೂಲ ಸ್ವಾಮಿ ಶಿವಾನಂದರ ಕೃತಿ(ಬಂಗಾಳಿಯಲ್ಲಿ ಶಿವಾನಂದವಾಣಿ ; ಇಂಗ್ಲಿಷಿನಲ್ಲಿ For Seekers of God). ಶ್ರೀರಾಮಕೃಷ್ಣ ಪರಮಹಂಸರ ಹತ್ತಿರದ ಶಿಷ್ಯರೆಂದೇ ಹೆಸರಾದ ಶ್ರೀಸ್ವಾಮಿ ಶಿವಾನಂದರು ಪರಮಹಂಸರೊಂದಿಗೆ ನಡೆಸಿದ ಮಾತುಕತೆಯನ್ನು ಹೊಂದಿದ ಕೃತಿಯನ್ನು ಕುವೆಂಪು ಭಾಷಾಂತರಿಸಿದ್ದಾರೆ. ಶಿವಾನಂದರು ಕುವೆಂಪು ಅವರಿಗೆ ಪ್ರೇರಣೆ ನೀಡಿ, ವಿವೇಕಾನಂದರ ಮಾರ್ಗಕ್ಕೆ ಒಯ್ದ ಮಹನೀಯರು. ಆದುದರಿಂದ ಕುವೆಂಪು ಇದನ್ನು ವಿಶೇಷ ಆಸಕ್ತಿಯಿಂದ ಮಾಡಿದ್ದಾರೆ. ಭಾಷಾಂತರದ ಉದ್ದೇಶವೂ ‘ತಮ್ಮ ಗುರುಗಳ ಸಂವಾದ ಸಾನ್ನಿಧ್ಯಗಳು ಸೂಸುವ ಶಾಂತಿಗೆ ಇತರರೂ ಪಾಲುದಾರರಾಗಿ ಉದ್ಧಾರವಾಗಲಿ ಸುಖಿಗಳಾಗಲಿ’ ಎನ್ನುವುದಾಗಿದೆ.

ಕುವೆಂಪು ಭಾಷಾಂತರಗಳಲ್ಲಿ ಮರೆಗೆ ಸರಿದಂತೆ ಇರುವ ಕೃತಿ ಎಂದರೆ ‘ಜನಪ್ರಿಯ ವಾಲ್ಮೀಕಿ ರಾಮಾಯಣ’(1950). ಈ ವೇಳೆಗೆ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಮೊದಲ ಸಂಪುಟ ಬಂದಿತ್ತು. ಎರಡನೇ ಸಂಪುಟವು 1951ರಲ್ಲಿ ಬಂದಿತು. ಈ ನಡುವಿನ ಅವಧಿಯಲ್ಲಿ ಕುವೆಂಪು ಯಾಕಾಗಿ ಮೂಲರಾಮಾಯಣದ re-telling ಇಟ್ಟುಕೊಂಡರು ಎನ್ನುವುದು ಕುತೂಹಲಕಾರಿಯಾಗಿ ಕಾಣುತ್ತದೆ. ಆದರೆ ಭಾಷಾಂತರ ಮಾಡುವಾಗ ಕುವೆಂಪು ಅವರಿಗೆ ತಾವು ಯಾರಿಗಾಗಿ ಮಾಡುತ್ತಿದ್ದೇನೆ ಎನ್ನುವುದರ ಅರಿವಿದೆ. ಪ್ರಸ್ತುತ ‘ಜನಪ್ರಿಯ ವಾಲ್ಮೀಕಿ ರಾಮಾಯಣ’ವನ್ನು ಅವರು ಉದ್ದೇಶಿಸಿದ್ದು ಅವರೇ ಹೇಳುವಂತೆ, ‘ಹೊಸದಾಗಿ ಓದಲು ಕಲಿತ ವಯಸ್ಕರಿಗಾಗಿ’. ಪಂಡಿತೋತ್ತಮರ ಪಠ್ಯ ಇದಲ್ಲ. ಆದರೆ ಇದಕ್ಕೆ ಸರಳತೆಯೇ ಕೃತಿಯನ್ನು ಆಳ್ಳಕವಾಗಿಸದಂತೆ ‘ಮೂಲರಾಮಾಯಣದ ರಸವತ್ತಾದ ಪದ ಮತ್ತು ಪದಪುಂಜ ಪ್ರಯೋಗಗಳನ್ನು ಹೆಚ್ಚು ಬದಲಾಯಿಸದೆ ಜನಪ್ರಿಯ ರಾಮಾಯಣ ರಚಿಸಿದ್ದೇನೆ’ ಎಂದು ಕುವೆಂಪು ಹೇಳಿಕೊಂಡಿದ್ದಾರೆ. ಜನಸಾಮಾನ್ಯರ ಪಾರಾಯಣಕ್ಕೆ, ಜ್ಞಾನಕ್ಕೆ ಎಂದು ಉದ್ದೇಶಿಸಲ್ಪಟ್ಟ ಭಾಷಾಂತರ ಇದು.

ಒಟ್ಟಿನಲ್ಲಿ ಕುವೆಂಪು ಭಾಷಾಂತರದ ಬಗ್ಗೆ ಆಸಕ್ತಿ ಹೊಂದಿದ್ದ ಲೇಖಕರಾಗಿದ್ದು ಅವರ ಅಪಾರ ಪ್ರಮಾಣದ ಸಾಹಿತ್ಯದಲ್ಲಿ ಭಾಷಾಂತರಕ್ಕೂ ಜಾಗವಿದೆ ಎನ್ನುವುದು ತಿಳಿಯುತ್ತದೆ. ಮೊದಲನೆಯದಾಗಿ, ಅಪಾರವಾದ ಓದು, ಪಾಂಡಿತ್ಯವ ಬೆನ್ನಿಗಿಟ್ಟುಕೊಂಡಿದ್ದ ಕುವೆಂಪು ತಮ್ಮ ಸೃಜನಶೀಲತೆ ಮತ್ತು ಪಾಂಡಿತ್ಯವನ್ನು ತೌಲನಿಕವಾಗಿ ನೋಡಬೇಕೆಂದರೆ ಅನೇಕ ಭಾಷೆಗಳ ಅನುಸಂಧಾನ ಮಾಡುವುದು ಅವಶ್ಯಕ ಎಂದು ಭಾವಿಸಿದ್ದರು. ತಮ್ಮ ಸೃಜನಶೀಲತೆಗೆ ಇಂಬುಕೊಡುವ ಪ್ರೇರಣೆಯಾಗಿ ಭಾಷಾಂತರವನ್ನು ಒಪ್ಪಿಕೊಂಡಿದ್ದಾರೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಭಾಷಾಂತರವನ್ನು ಸೃಜನಶೀಲತೆಯ ಭಾಗವಾಗಿ ನೋಡಿದಂತೆಯೇ ತಾವು ನಂಬಿದ ವಿವೇಕಾನಂದರ ವಾಣಿಯ ಪ್ರಚಾರಕ್ಕೆ ಬಳಸಲು ಹಿಂಜರಿಯಲಿಲ್ಲ. ಇನ್ನು ಕುವೆಂಪು ತಮ್ಮ ನಾಟಕಗಳಲ್ಲಿ ಪುನರ್ಲೇಖದ ಹೊಸ ಮಾದರಿಯನ್ನು ಹುಟ್ಟುಹಾಕಿದರು. ನವೋದಯದ ಮುಖ್ಯ ಲೇಖಕರಾದ ಕುವೆಂಪು ತಮ್ಮ ಜ್ಞಾನಾರ್ಜನೆಗೆ, ಸೃಜನಶೀಲತೆಗೆ ಭಾಷಾಂತರವನ್ನು ಮಾಡಿದ್ದು ಅವರ ಒಟ್ಟಾರೆ ಸೃಜನಶೀಲತೆಯ ಭಾಗವಾಗಿಯೇ ಇದೆ.

-ಡಾ.ಆರ್.ತಾರಿಣಿ ಶುಭದಾಯಿನಿ

ಆಕರಗಳು:
ಅರವಿಂದ ಮಾಲಗತ್ತಿ(ಸಂ). ಕುವೆಂಪು ಕೃತಿ ವಿಮರ್ಶೆ. ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮಾನಸ ಗಂಗೋತ್ರಿ, 2006
ಉಷಾ, ಎಂ. ಭಾಷಾಂತರ ಮತ್ತು ಲಿಂಗ ರಾಜಕಾರಣ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2012
ಕರೀಗೌಡ ಬೀಚನಹಳ್ಳಿ. ಭಾಷಾಂತರದ ಸಾಂಸ್ಕøತಿಕ ನೆಲೆಗಳು. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 1999
ಕರೀಗೌಡ ಬೀಚನಹಳ್ಳಿ. ಕನ್ನಡದಲ್ಲಿ ಶೇಕ್ಸ್‍ಪಿಯರ್. ಬೆಂಗಳೂರು: ಸಪ್ನ ಬುಕ್ ಹೌಸ್, 2005
ಕೀರ್ತಿನಾಥ ಕುರ್ತಕೋಟಿ. ಬಯಲು-ಆಲಯ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 1992
ತಾರಕೇಶ್ವರ, ವಿ.ಬಿ. ವಸಾಹತುಶಾಹಿ ಮತ್ತು ಭಾಷಾಂತರ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2006
ನರಹಳ್ಳಿ ಬಾಲಸುಬ್ರಮಣ್ಯ. ಕುವೆಂಪು ನಾಟಕಗಳ ಅಧ್ಯಯನ. ಬೆಂಗಳೂರು: ಅಂಕಿತ ಪುಸ್ತಕ, 2002
ನಾಗಭೂಷಣ, ಡಿ.ಎಸ್.(ಸಂ). ಕುವೆಂಪು: ಒಂದು ಪುನರನ್ವೇಷಣೆ. ಬಳ್ಳಾರಿ: ಲೋಹಿಯಾ ಪ್ರಕಾಶನ, 2005
ನಾಗರಾಜ್, ಡಿ.ಆರ್. ಸಾಹಿತ್ಯ ಕಥನ. ಸಾಗರ: ಅಕ್ಷರ ಪ್ರಕಾಶನ, 1996
ಶಿವಾರೆಡ್ಡಿ, ಕೆ.ಸಿ(ಸಂ). ಕುವೆಂಪು ಸಮಗ್ರ ಕಾವ್ಯ ಸಂಪುಟ-1. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2000
ಶಿವಾರೆಡ್ಡಿ, ಕೆ.ಸಿ(ಸಂ). ಕುವೆಂಪು ಸಮಗ್ರ ಕಾವ್ಯ-2. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2000
ಶಿವಾರೆಡ್ಡಿ, ಕೆ.ಸಿ(ಸಂ). ಕುವೆಂಪು ಸಮಗ್ರ ಗದ್ಯ.ಸಂಪುಟ-1. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2003
ಶಿವಾರೆಡ್ಡಿ, ಕೆ.ಸಿ(ಸಂ). ಕುವೆಂಪು ಸಮಗ್ರ ಗದ್ಯ.ಸಂಪುಟ-2. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2004
ಶಿವಾರೆಡ್ಡಿ, ಕೆ.ಸಿ(ಸಂ). ಕುವೆಂಪು ಸಮಗ್ರ ನಾಟಕ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2004
ಶಿವಾರೆಡ್ಡಿ, ಕೆ.ಸಿ(ಸಂ). ಕುವೆಂಪು ಸಮಗ್ರ ಗದ್ಯ.ಸಂಪುಟ-2. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2004

ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡದ ಕೆಲಸ ಮಾಡಿದ ಭಾಷಾಂತರಗಳು:
ಟಾಲ್‍ಸ್ಟಾಯ್ ಎಂಬ ಬೂರ್ಜ್ವಾ ವೃಕ್ಷದ ನೆರಳು- (ಟಾಲ್‍ಸ್ಟಾಯ್ ಕನ್ನಡಾನುವಾದಗಳು)
ಕನ್ನಡ ಬೌದ್ಧಸಾಹಿತ್ಯದ ಭಾಷಾಂತರಗಳ ಸ್ವರೂಪ ಹಾಗೂ ರಾಜರತ್ನಂ ಭಾಷಾಂತರಗಳು
ಶ್ರದ್ಧೆಯ ಬೆಸೆವ ಭಾಷಾಂತರ
ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ

ಬೇಂದ್ರೆ ಅನುವಾದಗಳ ಅನುಸಂಧಾನ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ
ಇಂಗ್ಲಿಷ್ ಗೀತಗಳ ಪಯಣ
ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು
ಸ್ತ್ರೀ ಮಲಯಾಳ ಹಾಗೂ ಸ್ತ್ರೀ ವಿವೇಕದ ಕಥನಗಳು


MORE NEWS

ಬಿಡುಗಡೆಯ ಹಾದಿಯ ಪಿಸುಮಾತು It's O...

15-10-2021 ಬೆಂಗಳೂರು

‘ಬದುಕಿನ ತಿರುವುಗಳಿಗೆ ನಾವು ಹೇಗೆ ಪ್ರತಿಸ್ಪಂದಿಸುತ್ತೇವೆ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ನಿರ್ಧರಿಸಲ್ಪಡುವ...

ಮಹಿಳೆಯರ ಹಕ್ಕುಗಳು ಮತ್ತು ಸಂವಿಧಾನ...

15-10-2021 ಬೆಂಗಳೂರು

‘ಇಂದು ಮಹಿಳಾ ಹಕ್ಕುಗಳ ಗುರುತಿಸುವಿಕೆಗೆ ಮೂಲ ಶಕ್ತಿ ಎಂದೇ ಹೇಳಬಹುದಾದ ಅನುಚ್ಛೇದ 15 (3)[ii] ರ ಚರ್ಚೆ ಸೋಜಿಗ ...

ಪ್ರದಿ ಪೂವನ್ಕೋಳಿ: ಮೈ ಮುಟ್ಟುವವರಿ...

14-10-2021 ಬೆಂಗಳೂರು

'ಸಿನಿಮಾ ಎಂದರೆ ಅದು ಸಾಹಿತ್ಯದಿಂದ ದೂರಾದ ಒಂದು ಪ್ರತ್ಯೇಕ ಕಲಾ ಪ್ರಕಾರ ಅನ್ನುವ ಮೂಢನಂಬಿಕೆಗೆ ವಿರುದ್ಧವಾಗಿ ನಿಲ್...