‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ

Date: 30-07-2021

Location: ಬೆಂಗಳೂರು


ಹಾರುವ ಹಕ್ಕಿ ಮತ್ತು ಇರುವೆ’ ಸಂಕಲನದ ಕತೆಗಳ ಸಾಮಾಜಿಕ ಆವರಣ ಪಿಂಜಾರ ಸಮುದಾಯದ ಅನುಭವ ಲೋಕದಿಂದ ಮೂಡಿದ್ದು' ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ಮಿರ್ಜಾ ಬಷೀರ್ ಅವರ ಈ ಕೃತಿಯ ಕುರಿತು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ಕಥೆಯೆಂಬುದು ಲೋಕವನ್ನು ನೋಡುವ ಕ್ರಮ. ನೋಡುವ ಸಾಧ್ಯತೆ ಹಾಗೂ ಅನನ್ಯತೆಗಳು ಕತೆಗಾರರನ್ನು ಭಿನ್ನ ನೆಲೆಗಳಲ್ಲಿ ನಿಲ್ಲಿಸುತ್ತವೆ. ಎಲ್ಲ ಸರಹದ್ದುಗಳಾಚೆ ಹಾಯುವ ಕಣ್ಣು ನಮ್ಮದಾಗಿದ್ದರೆ ಕಥನಕ್ಕೊಂದು ಘನತೆ ಒದಗುತ್ತದೆ. ಅಂಥ ಘನತೆ ಮಿರ್ಜಾ ಬಷೀರರ ಕತೆಗಳ ಸಹಜ ಸ್ವಭಾವ. ಹಾರುವ ಹಕ್ಕಿಯ ಅಸೀಮ ನೋಟ ಹಾಗೂ ನೆಲದಲ್ಲಿ ಹರಿಯುವ ಇರುವೆಯ ನೆಲಕ್ಕಂಟಿದ ನೋಟ ಎರಡೂ ಕತೆಗಾರನನ್ನು ಅನನ್ಯಗೊಳಿಸುತ್ತವೆ. ಹಾಗೆ ನೋಡಿದರೆ, ಈ ಎರಡೂ ನೋಟಗಳನ್ನು ಬೆಸೆಯುವಲ್ಲಿ ಕತೆ ಆಕೃತಿಗೊಳ್ಳುತ್ತದೆ. ಸದಾ ತೆರೆದ ಕಣ್ಣಿನಿಂದ ನೋಡುತ್ತ ಸಂವೇದಿಸುತ್ತ ನಡೆಯುತ್ತಿದ್ದವರಿಗೆ ಮಾತ್ರ ಕಾಣ್ಕೆ ಲಭಿಸುತ್ತದೆ. ಅದು ಒಳಗಣ್ಣಲ್ಲಿ ಹದಗೊಂಡು ಕಲಾಕೃತಿಯಾಗುತ್ತದೆ. ತಿರುಮಲೇಶರ ಕವಿತೆಯಲ್ಲಿ ಬರುವ ರಾಜಮಾರ್ಗ ಹಾಗೂ ಒಳಮಾರ್ಗಗಳ ಹೋಲಿಕೆ ಇಲ್ಲಿ ನೆನಪಾಗುತ್ತದೆ. ರಾಜಮಾರ್ಗದಲ್ಲಿ ವೇಗವಾಗಿ ಹೋಗುವಾಗ ಕಾಣದ ವಿವರಗಳು ಒಳಮಾರ್ಗದಲ್ಲಿ ಕಾಣುತ್ತ ಹೋಗುತ್ತವೆ. ಕಥನದ ರಾಜಮಾರ್ಗವನ್ನು ಬಿಟ್ಟು ಒಳಮಾರ್ಗಗಳ ಭಿನ್ನತೆಯನ್ನು ಇಂದಿನ ಅನೇಕ ಕತೆಗಾರರು ತೋರಿಸುತ್ತಿದಾರೆ. ಆದರೆ, ನಾವಿಂದು ಕಥನವು ಏನು ಹೊಮ್ಮಿಸುತ್ತಿದೆಯೆಂದು ತದೇಕಚಿತ್ತವಾಗಿ ಗಮನಿಸುವ ಬದಲು ಅದರಲ್ಲಿ ನಾವು ‘ಕಾಣಬಯಸುವುದನ್ನು’ ಹುಡುಕುತ್ತೇವೆ. ಬರೆಯುತ್ತಿರುವವರು ಯಾರೆಂಬುದನ್ನು ಕೆದಕುತ್ತಾ, ಅವರಿಗೊಂದು ಸಾಮೂಹಿಕ ಗುರುತನ್ನು ದಯಪಾಲಿಸಿಬಿಡುತ್ತೇವೆ. ಮುಸ್ಲಿಂ ಸಂವೇದನೆ, ಸ್ತ್ರೀಸಂವೇದನೆ ಎಂದೆಲ್ಲ ಬ್ರಾಂಡ್ ಮಾಡುತ್ತ ಅದಕ್ಕೊಗ್ಗದ ಮಾದರಿಗಳನ್ನು ನಿರಾಕರಿಸುತ್ತೇವೆ. ಪೊಲಿಟಿಕಲ್ ಕರೆಕ್ಟನೆಸ್ ಬರಹದ ಕೇಂದ್ರವಾದಂತೆಲ್ಲ ಕತೆಯೊಳಗಿನ ನಿರಂತರ ಹರಿವೊಂದು ನಿಂತುಹೋಗುತ್ತದೆ. ಅದು ಚೌಕಟ್ಟಿಗೊಗ್ಗಿಸಿದ ಪೇಲವ ಚಿತ್ರದಂತೆ ಉಳಿದುಕೊಳ್ಳತ್ತದೆ. ಮಿರ್ಜಾ ಬಷೀರರ ಕತೆಗಳು ಈ ಚೌಕಟ್ಟಿನಾಚೆ ಜಿಗಿಯಬಯಸುವುದರಿಂದಲೇ ಮಾನವೀಯತೆಯ ಮುಗ್ಧ ಹುಡುಕಾಟವೊಂದು ಅವರ ಕತೆಗಳಲ್ಲಿ ಉಸಿರಾಡುವುದು ಕೇಳಿಸುತ್ತದೆ. ಕತೆ ವಾಸ್ತವದಲ್ಲಿ ನೆಲೆಯೂರಿಯೂ ಅದರಾಚೆಗಿನ ಜೀವಮಿಡಿತವನ್ನು ಕಾಪಿಟ್ಟುಕೊಂಡಿದೆ.

‘ಹಾರುವ ಹಕ್ಕಿ ಮತ್ತು ಇರುವೆ’ ಸಂಕಲನದ ಕತೆಗಳ ಸಾಮಾಜಿಕ ಆವರಣ ಪಿಂಜಾರ ಸಮುದಾಯದ ಅನುಭವ ಲೋಕದಿಂದ ಮೂಡಿದ್ದು. ಅಲ್ಲಿನ ಕೌಟುಂಬಿಕ ಹಾಗೂ ಸಾಂಸ್ಕೃತಿಕ ಆವರಣದ ಬಹು ಸೂಕ್ಷ್ಮವಾದ ಇರುವೆ ಕಣ್ಣೋಟ ಕತೆಗಳಲ್ಲಿ ಸಾಧಿತವಾಗಿದೆ. ಇಸ್ಲಾಂನೊಳಗಿದ್ದೂ ಅದರ ಧಾರ್ಮಿಕ ಹೆಣಿಗೆಯೊಳಗೆ ಸೇರಿಕೊಳ್ಳದಂತೆ ಹೊರಗಿರುವ ಅತಿಚಿಕ್ಕ ಸಮುದಾಯ ಪಿಂಜಾರರದು. ತಮ್ಮ ಧರ್ಮದೊಳಗೇ ಅಸ್ಮಿತೆಯ ಪ್ರಶ್ನೆಯನ್ನೆದುರಿಸುತ್ತಿರುವ ಈ ಸಮುದಾಯ ಎದುರಿಸುವ ಅನ್ಯತೆಯ ಅನುಭವ ಹೆಚ್ಚು ತೀಕ್ಷ್ಣವಾದುದು. “ಅತ್ತ ಅರ್ಧ ಮುಸ್ಲಿಂ ಈ ಅರ್ಧ ಹಿಂದು ಎಂಬ ಎರಡುಜೀವನ ಕ್ರಮಗಳಿಗೆ ಸಿಕ್ಕು ಹೊರಳಾಡುವ ಈ ಕತೆಗಳು ತಬ್ಬಲಿ ಪಿಂಜಾರ ಸಮಾಜವನ್ನು ಅರಿಯಲು ದಾರಿತೋರುತ್ತವೆ” ಎಂದು ಮುನ್ನುಡಿಯಲ್ಲಿ ಮೊಗಳ್ಳಿ ಗಣೇಶ್ ಅವರು ಹೇಳುವ ಮಾತು ಇಲ್ಲಿನ ಕತೆಗಳ ಒಳತೋಟಿಯ ಮೇಲೆ ಬೆಳಕು ಚೆಲ್ಲುತ್ತದೆ. ಶರ್ಪಜ್ಜಿಯವಿಲ್ಲು ಕತೆಯಲ್ಲಿ ಹಬ್ಬದ ದಿನ ಓದಿಕೆ ಮಾಡಲು ಬಂದ ಮಿಯಾ ಸಾಹೇಬರು ಕುರಾನಿನ ಸಾಲುಗಳನ್ನು ಉಲ್ಲೇಖ ಮಾಡುತ್ತ ಎದುರಿಗಿದ್ದವರನ್ನು ಗಪ್ಚಿಪ್ ಮಾಡಬಲ್ಲವರು. ಅವರಿಗೆ ಈ ತಾಕತ್ತು ಒದಗಿದ್ದು “ಪಿಂಜಾರರಾದರೂ ಕುರಾನನ್ನು ಕರತಾಮಲಕ ಮಾಡಿಕೊಂಡು” ಸುತ್ತು ಹಳ್ಳಿಗಳಲ್ಲಿ ಏಕಮೇವಾದ್ವಿತೀಯರಾಗಿದ್ದರಿಂದ. ಪಿಂಜಾರರ ಈ ಅನ್ಯತೆಯ ಅನುಭವ ಹಲವು ಸಂದರ್ಭಗಳಲ್ಲಿ ಎದುರಾಗುತ್ತಲೇಹೋಗುತ್ತದೆ. ಮುಂಜಿ ಕತೆಯೂ ಇದೇ ಆಂತರಿಕ ಆಕರ್ಷಣೆಯನ್ನು ಹೊಂದಿದೆ. ಅಲೆಮಾರಿಯಂತೆ ತಿಂಗಳುಗಟ್ಟಲೇ ಕಾಣೆಯಾಗಿ ಬಿಡುವ ಹುಸೇನಪ್ಪನನ್ನು ಕಟ್ಟಿಕೊಂಡ ಜೂಣಮ್ಮ, ತಮ್ಮ ಪರಿಸರದಲ್ಲೇ ಮುಸ್ಲಿಂ ಆಗಿ ತಮ್ಮ ಅಸ್ಮಿತೆ ಪಡೆದುಕೊಳ್ಳಲು ಒದ್ದಾಡುವ ಚಿತ್ರ ಮನಕಲಕುತ್ತದೆ. ಮಗ ದಾದನಿಗೆ ಮುಂಜಿಮಾಡಿಸಲು ಹೆಣಗುವ ಅವಳ ಬಡತನ ಹಾಗೂ ಒಂಟಿಹೋರಾಟದ ಅಸಹಾಯಕ ಅವಸ್ಥೆಗಳು ಧರ್ಮದ ಅರ್ಥಹೀನ ಕಟ್ಟುಪಾಡುಗಳು ಹಾಗೂ ಬೇಜವಾಬ್ದಾರಿ ಗಂಡನ ಇರುವಿಕೆಯಿಂದ ಒದಗಿದ್ದು. ನಾಲ್ಕುಜನ ಒಪ್ಪುವಂತೆ ಬಾಳಬೇಕೆಂಬ ಅವಳಿಗೆ ಧರ್ಮವೆಂಬುದು ಕೊನೆಗೂ ಅರ್ಥವಾಗದ ವಿಷಯವೇ. “ ಪಿಂಜಾರಾದ್ರೇನು ಸಾಬ್ರೇ ತಾನೆ? ಅದಕ್ಕೇ ಅವನದನ್ನು ಕೊಯ್ಸಿ ಮುಂಜಿ ಅಂತ ಮಾಡ್ಬಿಟ್ರೆ ಸಾಕು ಸಾಬ್ರ ಲೆಕ್ಕಕ್ಕೆ ಜಮಾ ಆಗ್ತಾನೆ” ಎಂಬುದು ಅವಳ ಲೆಕ್ಕಾಚಾರ. ಮಗ ದಾದನ ಪುಟ್ಟ ಜಗತ್ತು ಈ ಅಸ್ಮಿತೆಯ ಗೊಂದಲಗಳಿಂದ ತಲ್ಲಣಿಸುತ್ತದೆ. ತನ್ನ ಸ್ನೇಹಿತರುಗಳಿಗಿಲ್ಲದ ಈ ಕ್ರಿಯೆ ತನಗೇಕೆ? ಎಂದು ಆತ ಯೋಚಿಸುತ್ತಾನೆ. ಅವರು ಹಿಂದೂಗಳು ತಾವು ಮುಸ್ಲಿಂರು ಅಂದಾಗ ಅದರಲ್ಲಿ ಏನು ವ್ಯತ್ಯಾಸ ಎಂದೇ ಆತನಿಗೆ ಅರಿವಾಗುವುದಿಲ್ಲ. “ಓಗಮ್ಮೋ ಆ ಉರ್ದು ಮಾತಾಡೋ ಅಂಗಡಿ ಅಮೀರ್ ಸಾಬು ನಿಮ್ಗೆ ನಮ್ದು ಮಾತು ಬರಾಕಿಲ್ಲ ನೀವ್ಯಾತ್ರು ಸಾಬ್ರು ಅಂತಾನೆ” ಅನ್ನುವಲ್ಲಿ ಅವನ ಅತಂತ್ರತೆಯಿದೆ. ಹಿಂದೂಗಳಲ್ಲಿ ಇಲ್ಲದ ಮುಂಜಿ ತನಗೇಕೆ? ಎಂಬ ಪ್ರಶ್ನೆ ಅವನನ್ನು ಶಾಲೆಯ ಪರಿಸರದಲ್ಲಿ ಮುಜುಗರದ ಮುದ್ದೆಯಾಗಿಸಿದೆ. ಇಂಥ ಪ್ರಶ್ನೆಗಳಿಗೆ ಜೂಣಮ್ಮನಲ್ಲಿಯೂ ಉತ್ತರವಿಲ್ಲ. ಆ ವಿಷಯದಲ್ಲಿ ನಮ್ಮ ದೇವರು ಕಟ್ಟುನಿಟ್ಟು ಎಂದಷ್ಟೇ ಅವಳು ಹೇಳಬಲ್ಲಳು. “ ಹಂಗಾದ್ರೆ ನಮ್ದೇವ್ರು ಅವುರ ದೇವ್ರು ಬ್ಯಾರೆ ಏನವ್ವ?” ಎಂದಾಗ ಜೂಣಮ್ಮ “ಊಂಕಣಪ್ಪ ಅವುರ್ದು ತಿಪ್ಪೇಸ್ವಾಮಿ ನಮ್ದು ಅಲ್ಲಾಸ್ವಾಮಿ” ಎಂದು ಉತ್ತರಿಸುತ್ತಾಳೆ. ದೇವರೊಬ್ಬನೇ ಎಂದು ಕಲಿಸಿದ ಪುಸ್ತಕ ಲೋಕ, ದರ್ಗಾಕ್ಕೂ ಹೋಗುವ ಚೌಡಮ್ಮನಿಗೂ ಹಣ್ಣುಕಾಯಿ ಮಾಡಿಸುವ ಅವ್ವನ ವಾಸ್ತವ ಲೋಕಗಳು ತಾಳೆಯಾಗದೇ ಆತ ಗೊಂದಲಗೊಳ್ಳುತ್ತಾನೆ. ಹಲವು ಲೋಕಗಳನ್ನು ಎದುರುಬದುರು ಮಾಡುತ್ತಾ ಕತೆಗಾರರು ಅಸ್ಮಿತೆಯ ಆತಂಕಗಳನ್ನು ಹಾಗೇ ನಮ್ಮಮುಂದೆ ಇಟ್ಟುಬಿಡುತ್ತಾರೆ. ಬಾಲ್ಯದ ಮುಗ್ಧತೆಗೆ ಸಹಜ ಸುಂದರವಾಗಿ ತೋರಬೇಕಿದ್ದ ಈ ಬಹುಸಂಸ್ಕೃತಿಯ ಲೋಕ ಆತಂಕದ ವಿಷಯವಾಗಿ ಪರಿವರ್ತಿತವಾಗಿರುವುದು ಪ್ರಸ್ತುತ ಧರ್ಮರಾಜಕಾರಣದ ಸೂಕ್ಷ್ಮವನ್ನು ಅರುಹುತ್ತದೆ.

ಕತೆಯಲ್ಲಿ ತಾಯ್ತನದ ಮೌಲ್ಯವೇ ಧರ್ಮವಾದ ಒಂದು ಜಗತ್ತಿದೆ. ಅದು ಅರಾಜಕೀಯವಾದ ಜಗತ್ತು. ಅಲ್ಲಿ ಮನುಷ್ಯ ಸಹಜ ಮಮತೆ, ಮರುಗುವಿಕೆ, ಹಸಿವುಗಳಿಗೆ ಮಾತ್ರ ಅರ್ಥವಿದೆ. ಅದು ವಿಭಜಿತಗೊಳ್ಳದ ಮನುಷ್ಯಾನುಭವಗಳ ಮೂಲಜಗತ್ತು. ಆ ಜಗತ್ತನ್ನು ಭಗ್ನಗೊಳಿಸುತ್ತಿರುವ ಮೂಲಭೂತವಾದದ ಕುರಿತ ಆತಂಕಗಳನ್ನು ಕಥೆಯ ಹೊರ ಭಿತ್ತಿಯು ವ್ಯಕ್ತಪಡಿಸುತ್ತದೆ. ಕತೆಯನ್ನು ರೂಪಿಸುತ್ತಿರುವ ಪಾತ್ರಗಳ ಒಳತೋಟಿಯಲ್ಲಿ ಅನಾವರಣಗೊಳ್ಳುವ ಈ ಭಗ್ನತೆಯ ಭಾವವು ವಾಸ್ತವದ ಬಡತನ, ಅನಕ್ಷರತೆ ಗಳಿಂದ ತುಂಬಿದ ಸಮುದಾಯದ ನೋವಿನೊಂದಿಗೆ ಬೆರೆತುಹೋಗಿದೆ. ಮಗನಿಗೆ ಇಷ್ಟವಾದ ಹುರಿದ ಕಲೀಜದ ತುಂಡುಗಳನ್ನು ಒಮ್ಮೆಯಾದರೂ ಉಣಿಸಿ ಸಂತೋಷಪಡಿಸುವ ಕನಸು ಜೂಣಮ್ಮನದು. ಅದು ಅವಳ ಬಡತನಕ್ಕೆ ಬಲು ದುಬಾರಿಯಾದ ಸಂಗತಿ. ಕೊನೆಗೂ ಟೀಪಣ್ಣನ ಬಳಿ ಕುರಿಮಾಂಸವನ್ನು ಕೊಳ್ಳುವ ಅವಳು ಅದು ‘ಹಲಾಲ್ ಮಾಡಿರದ ಹರಾಮ್ ಮಾಂಸ’ ಎಂಬ ಗುಲ್ಲೆದ್ದು ಅದು ವಿಪರೀತಕ್ಕೆ ಹೋಗಿ ಅರ್ಥವಾಗದ ಧರ್ಮಸೂಕ್ಷ್ಮಗಳಲ್ಲಿ ನಲುಗುತ್ತಾಳೆ. ಇದು ಧರ್ಮದೊಳಗಿನ ಆಂತರಿಕ ಪ್ರಹಾರ. ಈ ಆಹಾರ ರಾಜಕೀಯವು ಧರ್ಮರಾಜಕಾರಣದೊಂದಿಗೆ ಬೆರೆತು ದ್ವೇಷ ಹೊತ್ತಿಸುವ ಸೂಕ್ಷ್ಮ ನಿರೂಪಣೆಯು ‘ಹಾರುವ ಹಕ್ಕಿ ಮತ್ತು ಇರುವೆ ಸಾಲು’ ಕತೆಯಲ್ಲಿಯೂ ಇದೆ. ಗೋಮಾಂಸ ಸೇವನೆ ಹಾಗೂ ಗೋರಕ್ಷಣೆಯ ಕುರಿತು ಉಂಟಾಗಿರುವ ಭಾವೋದ್ರಿಕ್ತ ಮನಸ್ಥಿತಿಯನ್ನು ಎದುರಿಸುವ ಮುಸ್ಲಿಂ ಪಶುವೈದ್ಯನ ಸುತ್ತ ಈ ಕತೆ ನಡೆಯುತ್ತದೆ. ಈಯುವ ಸಂದರ್ಭದಲ್ಲಿ ಸಂಕಟಪಡುತ್ತಿರುವ ಹಸುವನ್ನು ರಕ್ಷಿಸುವ ತನ್ನ ವೃತ್ತಿಧರ್ಮವನ್ನು ಪಾಲಿಸುವ ಪಶುವೈದ್ಯನಿಗಾಗಲೀ, ತಮ್ಮ ಹಸುವನ್ನು ಉಳಿಸಿಕೊಳ್ಳಬೇಕೆಂಬ ಜೀವಕಾರುಣ್ಯ ಹೊತ್ತ ಭೈರಪ್ಪನ ಮನೆಯವರಿಗಾಗಲೀ ಇದೊಂದು ಸಮಸ್ಯೆಯೇ ಅಲ್ಲ. ಆದರೆ ಮಧ್ಯಪ್ರವೇಶಿಸುವ ಉನ್ಮತ್ತ ಗುಂಪೊಂದು ಅಲ್ಲಿ ಸಂಶಯ ಹಾಗೂ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಹಸುವಿನ ನೋವನ್ನು ತನಗೇ ವರ್ಗಾಯಿಸಿಕೊಂಡಂತೆ, ಅದೊಂದು ಧ್ಯಾನವೆಂಬಂತೆ ಗರ್ಭಚೀಲದಿಂದ ಕರು ಹೊರಬರುವಂತೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗುತ್ತಾರೆ. ಹುನ್ನಾರಗಳು ತಂತಾನೇ ಸೋತು ಒರಗುತ್ತವೆ. ಇಂಥ ಆಶಾವಾದದಲ್ಲಿ ಮಿರ್ಜಾ ಬಷೀರರು ಕತೆಯನ್ನು ಕಟ್ಟುತ್ತಾರೆ. ಸದ್ಯದ ರಾಷ್ಟ್ರೀಯತೆಯ ಕಲ್ಪನೆಯೊಳಗಿರುವ ಒಡಕಲು ಬಿಂಬಗಳನ್ನು ಸ್ಥಳೀಯ ಅನುಭವಲೋಕದ ಮೂಲಕವೇ ಒಡಮೂಡಿಸುತ್ತಾರೆ. ಒಳಜೀವದ ಕಾರುಣ್ಯವನ್ನು ಧ್ಯಾನಿಸುತ್ತಾ ಹೊರಗಿನ ಕೇಡುಗಳನ್ನು ಮೀರುವ ಆಶಾವಾದ ಇಲ್ಲಿನ ಅನೇಕ ಕತೆಗಳಲ್ಲಿ ಮಡುಗಟ್ಟಿದೆ.

ಇಲ್ಲಿನ ‘ಸಲಾಮಲೈಕುಂ’ ಕತೆ ಧಾರ್ಮಿಕ ಸೌಹಾರ್ದದ ಭಾವವನ್ನು ಆಳವಾದ ಆಧ್ಯಾತ್ಮಿಕ ತಿಳಿವಿನಲ್ಲಿ ಕಟ್ಟಿಕೊಡುತ್ತದೆ. ಮಾತಿನ ಮಿತಿಯನ್ನೂ ಮೌನದ ಸೌಂದರ್ಯವನ್ನೂ ಕಾಣಿಸುವ ಕತೆ ಮಾತು ಹುಟ್ಟುವ ಮುಂಚಿನ ಅಖಂಡ ಅನುಭೂತಿಯನ್ನು ಕಲಾಂ ಸಾಹೇಬರ ವೃದ್ಧ ತಂದೆಯ ಮೂಲಕ ಮಿಡಿದು ತೋರಿಸುತ್ತದೆ. ಸಂಪ್ರದಾಯಸ್ಥರಾದ ಕಲಾಂ ಸಾಹೇಬರು ಹಿಂದೂ ಹಾಗೂ ಮುಸ್ಲಿಂ ಸಹೋದ್ಯೋಗಿಗಳಿಬ್ಬರನ್ನೂ ಮನೆಗೆ ಕರೆದು ತಂದೆಗೆ ಪರಿಚಯಿಸುವ ಒಂದು ಚಿಕ್ಕ ಘಟನೆಯಷ್ಟೇ ಆಗಿರುವ ಈ ಕತೆಯು ಎಷ್ಟೆಲ್ಲ ಸಂಗತಿಗಳನ್ನು ಧ್ವನಿಪೂರ್ಣವಾಗಿ ಕಾಣಿಸುತ್ತದೆ. ಕಿವಿಕೇಳದ ತಂದೆ ಮಗನ ಸಹೋದ್ಯೋಗಿ ಗುರುಮೂರ್ತಿಯ ನಾಮವನ್ನು ಗಮನಿಸಿ ಇಬ್ಬರಿಗೂ ನಮಸ್ಕರಿಸುತ್ತಾರೆ. ಅವರು ಹಯಾತ್ ಸಾಹೇಬರು ಅವರಿಗೆ ಸಲಾಂ ಹೇಳಿ ಎಂದು ಕಲಾಂ ಸಾಹೇಬರು ಗದರುತ್ತಲೇ ಇರುತ್ತಾರಾದರೂ ಅದು ಅವರ ತಂದೆಗೆ ಕೇಳಿಸುವುದೇ ಇಲ್ಲ. “ಎಲ್ಲರೂ ಆರೋಗ್ಯವೇ? ನಮ್ಮೆಲ್ಲರ ಮೇಲೆ ಶಿವನ ಆಶೀರ್ವಾದವಿರಲಿ” ಎನ್ನುತ್ತಾ ಬೊಗಸೆಯಾಕಾರದಲ್ಲಿ ಕೈಜೋಡಿಸಿ ಮನಸ್ಸಿನಲ್ಲಿ ಕುರಾನಿನ ಸೂರಾಗಳನ್ನು ಹೇಳುತ್ತಾ ಕಣ್ಣುಮುಚ್ಚಿ ಅಲೌಕಿಕ ಅನುಭೂತಿಯೊಂದನ್ನುಆ ಪರಿಸರದಲ್ಲಿ ಮೂಡಿಸುತ್ತಾರೆ. “ದೇವರ ಭಾಷೆ ಮೌನವೇ ಇರಬೇಕು” ಎಂಬುದು ಕಥೆಯ ಸೂತ್ರಸ್ವರದಂತೆ ಕೇಳಿಸುತ್ತದೆ. ಆತ್ಮದ ಸಂವಹನದಲ್ಲಿ ಭಾಷೆಯ ದ್ವಂದ್ವಗಳು ಮರೆಯಾಗುವ ಕಾಣ್ಕೆ ಈ ಕತೆಯದು. ಒಳಜೀವದ ಗುರುತು ಸಂಕೇತಗಳಾಚಿನದು ಎಂಬುದನ್ನು ಅರಿಯಲು ಬೇಕಾದ ಮೌನ ಈ ಕತೆಯಲ್ಲಿದೆ.

ಮುಸ್ಲಿಂ ಜಗತ್ತಿನೊಳಗಿನ ಹೆಣ್ಣು ದೇಹ ಮತ್ತು ಮನಸ್ಸಿನ ತಲ್ಲಣಗಳನ್ನು ‘ಜುಗುಣಮ್ಮನ ಜಿಗಿತ’ ಕತೆ ವಿಶಿಷ್ಟವಾಗಿ ನಿರೂಪಿಸಿದೆ. ಅಸಡ್ಡೆಯಲ್ಲೇ ಬೆಳೆದ ಜುಗುಣಮ್ಮನ ದೇಹ ಮಾತ್ರ ಪಕೃತಿಯ ವಿಸ್ಮಯದಂತೆ ಸಶಕ್ತವಾಗಿ, ನೋಡುವವರಲ್ಲಿ ಕಾಮನೆಯುಕ್ಕಿಸುವಂತೆ ಬೆಳೆಯುತ್ತದೆ. ಆಟಗಳಲ್ಲಿ ಅಪಾರ ಆಸಕ್ತಿ ಮತ್ತು ಪ್ರತಿಭೆಹೊಂದಿದ ಆಕೆಗೆ ತನ್ನ ದೇಹವೇ ಮುಜುಗರದ ವಸ್ತು. ಮೇಲಿಂದ ದೇಹಕ್ಕೆ ಧರ್ಮದ ದಿಗ್ಬಂಧನ ಹಾಕುವ ಬುರ್ಖಾ. ಮುಸಲ್ಮಾನರ ಹೆಣ್ಣುಮಕ್ಕಳು ಒಂಟಿಯಾಗಿ ಹೊರಹೋಗಬಾರದು, ಸಿನಿಮಾ ನೋಡಬಾರದು, ಸಾವಿರಾರು ಜನರ ಮುಂದೆ ಜಿಗಿಯುವುದು ಕುಣಿಯುವುದು ಮಾಡಬಾರದೆಂದು ಬಲವಾಗಿ ನಂಬಿದ್ದ ಚಿಗಪ್ಪ ಖಾಜಾಸಾಹೇಬರು ಉದ್ದಜಿಗಿತದಲ್ಲಿ ಸಾಧನೆಮಾಡಬೇಕೆಂಬ ಅವಳ ಕನಸಿನ ರೆಕ್ಕೆ ಕತ್ತರಿಸುತ್ತಾನೆ. ಸುಭದ್ರ ಮೇಡಂ ಬೆಂಬಲದಿಂದಾಗಿ ಲಂಗಹಾಕಿಕೊಂಡೇ ಆಟೋಟಗಳಲ್ಲಿ ಭಾಗವಹಿಸಬೇಕೆಂಬ ತಾಕೀತಿನೊಂದಿಗೆ ಆಕೆ ಕಣಕ್ಕಿಳಿಯುತ್ತಾಳೆ. ಜಿಗಿಯುವಾಗ ಲಂಗದೊಳಗೆ ಗಾಳಿನುಗ್ಗಿ ಅದು ಕೊಡೆಯಂತೆ ಮೇಲೆದ್ದು ಅವಳ ಬೆತ್ತಲೆ ಅಂಗಗಳು ಬಯಲಾಗುತ್ತವೆ. ಬಲಾಡ್ಯ ಜುಗುಣಮ್ಮ ದೇಹದ ಕಾರಣದಿಂದ ಆಘಾತಕ್ಕೊಳಗಾಗಿ ಅವಮಾನದ ಮುದ್ದೆಯಾಗುತ್ತಾಳೆ. ‘ಅವಳಿಗೊಂದು ಚಡ್ಡಿಗೂ ಗತಿಯಿರಲಿಲ್ಲ’ ಎಂಬುದು ಬಡ ಮುಸ್ಲಿಂ ಹೆಣ್ಣುಮಕ್ಕಳ ಬದುಕಿನ ವಾಸ್ತವ. ಬುರ್ಖಾ ತೊಡಿಸುವ ಸಮಾಜ ಚಡ್ಡಿ ಕೊಡಲಿಲ್ಲವೆಂಬುದು ಕತೆಯ ವ್ಯಂಗ್ಯ. ಆದರೆ ಕತೆಯ ಗೆಲುವಿರುವುದು ಅವಳ ಜಿಗಿತದಲ್ಲಿ. ‘ಅವಳು ಓಡಿಬಂದು ಜಿಗಿದಳೆಂದರೆ ಭೂಮಿಯೇ ತನ್ನ ಗುರುತ್ವಾಕರ್ಷಣೆಯನ್ನು ಮರೆತು ಜಿಗಿಯಲು ಅನುವು ಮಾಡಿಕೊಟ್ಟಂತೆ ಅನಿಸುತ್ತಿತ್ತು.’ ಅದು ಅವಳ ಪ್ರಾಕೃತಿಕ ಶಕ್ತಿ. ಅದನ್ನು ಬಳಸಿ ಅವಳು ಜಿಗಿದ ಜಿಗಿತ ಅವಳನ್ನು ಎಲ್ಲ ಸಂಕಷ್ಟಗಳಿಂದ, ಸಂಕೋಲೆಗಳಿಂದ ಪಾರುಮಾಡಿತೆಂಬುದು ಕಥೆಯ ಆಶಯ. ಇಂಥದೊಂದು ಜಿಗಿತವನ್ನು ಮುಸ್ಲಿಂ ಹೆಣ್ಣುಗಳ ಬದುಕಲ್ಲಿ ಆಗಬಯಸುವ ಕತೆ ನಮ್ಮನ್ನು ಕಲಕುತ್ತದೆ.

ಆಧುನಿಕೋತ್ತರ ನಗರ ಬದುಕಿನ ನರಕವನ್ನು ಫ್ಯಾಂಟಸಿಯ ತಂತ್ರದ ಮೂಲಕ ಕಟ್ಟಿಕೊಡುವ ಕತೆ ‘ಬಟ್ಟೆಮೆತ್ತಿಕೊಂಡ ಊರಿನಲ್ಲಿ’. ಸಹಜವಾದುದನ್ನು ಮರೆಮಾಚಿ ಕೃತಕ ಸರಕುಲೋಕದಲ್ಲಿ ಕೊಳೆತು ಹೋಗುತ್ತಿರುವ ಮನುಷ್ಯತ್ವದ ಕ್ಷೀಣ ಧ್ವನಿಯನ್ನು ಕತೆ ಎಚ್ಚರದಿಂದ ಆಲಿಸಿ ಬದುಕಿಸಿಕೊಳ್ಳ ಬಯಸುತ್ತದೆ. ಕತೆಯ ಅಸಂಗತ ನಿರೂಪಣೆ ಬದುಕಿನ ಅಸಂಗತತೆಗೆ ಹಿಡಿದ ಕನ್ನಡಿಯೂ ಹೌದು. ಆಕಸ್ಮಿಕವಾಗಿ ಬಟ್ಟೆಗಳು ಒಂದರಮೇಲೊಂದು ಮೆತ್ತಿಕೊಳ್ಳುತ್ತಾ ನಗರದ ಜನ ಉಸಿರು ಕಟ್ಟತೊಡಗುತ್ತಾರೆ. ಅವರ ಆಕೃತಿಯು ಹಳೆಯ ಆಲದ ಮರದಂತಾಗಿ ಲಿಫ್ಟುಗಳಿಂದ, ಆಫೀಸುಗಳಿಂದ ಹೊರಬರಲಾಗದೇ ಒದ್ದಾಡುತ್ತಾರೆ. ಅಲ್ಲಲ್ಲೇ ಮಲಮೂತ್ರಗಳನ್ನು ವಿಸರ್ಜಿಸಿಕೊಂಡು ತಮ್ಮನ್ನು ಕಂಡು ತಾವೇ ಹೇಸುತ್ತಾರೆ. ಕೊನೆಗೆ ಚಲನೆಯೇ ನಿಂತು ಹೋಗಿ “ಬೆನ್ನು ಮೇಲಾಗಿ ಬಿದ್ದ ಜೀರುಂಡೆಗಳಂತೆ ಬಿದ್ದುಕೊಂಡಿದ್ದರು” ಎಂಬುದು ಆಧುನಿಕ ಬದುಕಿನ ಭವಿಷ್ಯದ ರೂಪಕವಾಗಿದೆ. ಮುಟ್ಟಿದರೆ ಮುರಿದು ಹೋಗುವಂಥ ಕೃತಕ ಜೀವನ ನಡೆಸುತ್ತಿದ್ದ ಜನಗಳು ಈ ಆಘಾತದಿಂದ ಹುಚ್ಚರಂತಾಗುತ್ತಾರೆ. ಮಾಲ್, ಬಿಗ್ ಬಜಾರ್, ಮಲ್ಟಿಪ್ಲೆಕ್ಸ್, ಆಸ್ಪತ್ರೆ, ಐಟಿ ಕಂಪನಿಗಳು,ಸ್ಟಾರ್ ಹೊಟೇಲ್ಲುಗಳು ಏಕಾಏಕಿಯಾಗಿ ಖಾಲಿಯಾಗಿಬಿಡುತ್ತವೆ. ತಮ್ಮ ಭ್ರಮೆಗಳೆ ಬೆಟ್ಟಗಳಾಗಿ ತಮ್ಮಮೇಲೆ ಕುಸಿದಾಗ ಸಾಮೂಹಿಕವಾಗಿ ರೋಧಿಸುವ ಜನತೆ, ಇಂಥ ಸ್ಥಿತಿಯಲ್ಲಿ ಮನುಷ್ಯ ಪ್ರೇಮದ ನಿಜ ಸ್ಪರ್ಷಕ್ಕಾಗಿ ಹಂಬಲಿಸತೊಡಗುತ್ತಾರೆ. ಆದರೆ ಅವರೆಲ್ಲ ಈ ಭ್ರಮೆಯೆಂಬ ಬಟ್ಟೆಯ ಬೆಟ್ಟದಿಂದಾಗಿ ಆ ಸ್ಪರ್ಷದಿಂದ ವಂಚಿತರಾಗಿದ್ದಾರೆ. ಈ ಬಟ್ಟೆ ಕಳಚದೇ ಅವರಿಗೆ ಮುಕ್ತಿಯಿಲ್ಲ. ನಗರ ಬದುಕಿನ ಬ್ರಾಂಡೆಡ್ ಸುಳ್ಳುಗಳನ್ನು, ಮೋಸ ಹಾಗೂ ಭಾವರಾಹಿತ್ಯವನ್ನು ಕತೆ ಸಾಂಕೇತಿಕವಾಗಿ ಗೇಲಿಮಾಡುತ್ತಾ ಆಳವಾದ ಅರಿವೊಂದನ್ನು ಒಳಗೆ ಕದಲುವಂತೆ ಮಾಡುತ್ತದೆ. ಬಟ್ಟೆಗಳೆಲ್ಲ ಸುಟ್ಟು, ಮಳೆಯಲ್ಲಿ ಬೆತ್ತಲಾಗಿ ಕುಣಿಯುವ ಜನರ ಬಿಡುಗಡೆಯ ಭಾವದಲ್ಲಿ ಕೊನೆಯಾಗುವ ಕತೆ ಮನುಷ್ಯನ ಸಹಜ ಸೊಲ್ಲುಗಳನ್ನು ಉತ್ಕಟವಾಗಿ ಹಿಡಿದಿಡುತ್ತದೆ.

ಮಿರ್ಜಾ ಬಷೀರರ ಕತೆಗಳ ಲೋಕ ಹಲವು ನೆಲೆಗಳಲ್ಲಿ ಇಂಥ ಬಿಡುಗಡೆಯನ್ನು ಬಯಸುವ ಹಂಬಲದಿಂದ ಕೂಡಿದೆ. ಮೌಢ್ಯಗಳಿಂದ, ಮೂಲಭೂತವಾದದಿಂದ, ದುರಾಸೆಯಿಂದ ಮುಚ್ಚಿಹೋದ ಬದುಕಿನ ಸಹಜ ಸೌಂದರ್ಯವನ್ನು ಮರಳಿ ತರಲು ಅದು ಬಯಸುತ್ತದೆ. ಸಂಕೇತಗಳೇ ಮುಖ್ಯವಾಗಿ ಮನುಷ್ಯಾನುಭವಗಳ ಜಗತ್ತು ಕುಬ್ಜಗೊಳ್ಳುತ್ತಿರುವ ಇಂದಿನ ಸಂಸ್ಕೃತಿ ರಾಜಕಾರಣಕ್ಕೂ ಈ ಕತೆಗಳು ಕನ್ನಡಿಯಾಗುತ್ತವೆ. ಆದರೂ, ಮನುಷ್ಯರು ತಮ್ಮ ಮೂಲ ಒಳ್ಳೆಯತನಕ್ಕೆ ಮರಳಬಲ್ಲರು ಎಂಬ ಆಶಾವಾದವನ್ನು ಕತೆಗಾರರು ಕಳೆದುಕೊಳ್ಳುವುದಿಲ್ಲ. ಇದನ್ನು ರಾಜೇಂದ್ರ ಚೆನ್ನಿಯವರೂ ತಮ್ಮ ಮುನ್ನುಡಿಯಲ್ಲಿ ಗುರುತಿಸಿದ್ದಾರೆ. ಅಂಥ ಸರಳರೇಖಾತ್ಮಕ ತೀರ್ಮಾನಗಳು ಕೆಲವೆಡೆ ಕತೆಯ ಮಿತಿಯಾಗಿರುವಂತೆ, ಬದುಕಿನ ವೈರುಧ್ಯಗಳ ಮೂಲಕವೇ ಒಳಿತನ್ನು ಶೋಧಿಸುವ ದೃಢತೆ ಅವರ ಕತೆಗಳ ಶಕ್ತಿಯಾಗಿದೆ.

ಹಾರುವ ಹಕ್ಕಿ ಮತ್ತು ಇರುವೆ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈ ಅಂಕಣದ ಹಿಂದಿನ ಬರೆಹಗಳು

ಹೊತ್ತು ಗೊತ್ತಿಲ್ಲದ ಕಥೆಗಳು

ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ

ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು

ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ

ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...