‘ಹಾರುವ ಹಕ್ಕಿ ಮತ್ತು ಇರುವೆ’ ಲೇಖಕ ಮಿರ್ಜಾ ಬಷೀರ್ ಅವರ ಕತಾಸಂಕಲನ. ಈ ಕೃತಿಗೆ ಹಿರಿಯ ವಿಮರ್ಶಕ, ಲೇಖಕ ರಾಜೇಂದ್ರ ಚೆನ್ನಿ ಅವರು ಬೆನ್ನುಡಿ ಬರೆದಿದ್ದಾರೆ. ಮಿರ್ಜಾ ಬಷೀರ್ ಅವರು ತಮ್ಮದೇ ಆದ ಸಣ್ಣಕತೆಗಳ ಮಾರ್ಗವೊಂದನ್ನು ಹುಡುಕಿಕೊಂಡಿದ್ದಾರೆ. ಅದನ್ನು ಹೀಗೆ ವಿವರಿಸಬಹುದೇನೋ ಅನ್ನುತ್ತಾರೆ ರಾಜೇಂದ್ರ ಚೆನ್ನಿ.
ಇಲ್ಲಿಯ ಕತೆಗಳು ಭಾವನಾತ್ಮಕ ನೆಲೆಯೊಂದರಲ್ಲಿ ತಮ್ಮ ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಕತೆಗಳು ಸರಳ ಎನಿಸಿದರೂ ತೀವ್ರವಾದ ಭಾವನೆಗಳೇ ಈ ಕತೆಗಳ ಆಧಾರವಾಗಿವೆ. ಸ್ನೇಹ, ಪ್ರೀತಿ, ದ್ವೇಷ, ಕೃತಜ್ಞತೆ, ದುಃಖ ಇವೇ ಮುಂತಾದ ಸಾಮಾನ್ಯವೆನ್ನುವ ಭಾವನೆಗಳು ಇವು. ತುಂಬಾ ಸಂಕೀರ್ಣವಲ್ಲದ ದಿನನಿತ್ಯದ ಸನ್ನಿವೇಷಗಳಲ್ಲಿ ಈ ಭಾವನೆಗಳ ಅಭಿವ್ಯಕ್ತಿಯಾಗುತ್ತದೆ. ಹೆಚ್ಚು ಕಡಿಮೆ ಸ್ಥಾಯಿಯಾಗಿರುವ ಅಂಶವೆಂದರೆ ಕತೆಗಳು ಸುಖಾಂತದೊಂದಿಗೆ ಮುಗಿಯುತ್ತವೆ.
ʼಹಾರುವ ಹಕ್ಕಿ ಮತ್ತು ಇರುವೆʼ ಕೃತಿಯ ಪುಸ್ತಕ ವಿಮರ್ಶೆ- ಹೊಸ ಮನುಷ್ಯ
ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿದ್ದು, ಗ್ರಾಮೀಣ ಪ್ರದೇಶದ ಹಿಂದೂ ಮುಸ್ಲಿಂ ಸಹಬಾಳ್ವೆ ಮತ್ತು ಅವರ ಬದುಕಿನ ರೀತಿನೀತಿಗಳು ಈ ಕಥೆಗಳಲ್ಲಿ ಅನಾವರಣಗೊಂಡಿವೆ. ಮೊದಲ ಕಥೆ “ಶರ್ಪಜ್ಜಿಯ ವಿಲ್ಲು', ಅತ್ತೆಯನ್ನು ವಿನಾಕಾರಣ ದ್ವೇಷಿಸುವ ಸೊಸೆ, ಅದೇ ಕಾರಣಕ್ಕಾಗಿ ಅತ್ತೆ ಸಾಯುವಂತಾಗಿ, ಅವಳು ಬರೆದಿಟ್ಟ ಪತ್ರ ಓದಿ ಪಶ್ಚಾತ್ತಾಪ ಪಡುವುದನ್ನು ಹೇಳುತ್ತದೆ. ಅತ್ತೆಯನ್ನು ದ್ವೇಷಿಸುವುದಕ್ಕೆ, ಆಮೇಲೆ ಪಶ್ಚಾತ್ತಾಪ ಪಡುವುದಕ್ಕೆ ಸಮರ್ಥನೆ ಕಥೆಯಲ್ಲಿ ಸಿಗುವುದಿಲ್ಲ. ಹಳ್ಳಿಯ ಜನ ಜಾತಿಭೇದವಿಲ್ಲದೆ ಪರಸ್ಪರರ ನೋವು ನಲಿವುಗಳಿಗೆ ಸ್ಪಂದಿಸುವುದು ಮುಖ್ಯವೆನಿಸುತ್ತದೆ. ಮುಸ್ಲಿಮರಲ್ಲೇ ಅಲ್ಪಸಂಖ್ಯಾತರಾದ ಪಿಂಜಾರ್ ಪಂಗಡದವರು ಮುಸ್ಲಿಂ ಮುಖ್ಯವಾಹಿನಿಯೊಂದಿಗೆ ಒಂದಾಗಲು, ಪರಕೀಯ ಪ್ರಜ್ಞೆಯಿಂದ ಹೊರಬರಲು ಹಾತೊರೆಯುವ ಚಿತ್ರಣ 'ಶರ್ಪಜ್ಜಿಯ ವಿಲ್ಲು', 'ಮುಂಜಿ', 'ಜುಗುಣಮ್ಮನ ಜಿಗಿತ' ಕಥೆಗಳಲ್ಲಿವೆ.
'ಬಟ್ಟೆಮೆತ್ತಿಕೊಂಡ ಊರಿನಲ್ಲಿ ಒಂದು ಫ್ಯಾಂಟಸಿ ನಿರೂಪಣೆ. ಹಲವಾರು ಹಳ್ಳಿಗಳನ್ನು ನುಂಗಿ 'ಅಭಿವೃದ್ಧಿ ಹೊಂದಿದ ಆ ನಗರದಲ್ಲಿ ಇದ್ದಕ್ಕಿದ್ದಂತೆ ಒಂದೇ ಸಮನೆ ಜನರ ಮೇಲೆ ಬಟ್ಟೆಗಳು ಮೆತ್ತಿಕೊಂಡು ಬಟ್ಟೆ ತೆಗೆಯಲಾರದೇ ಮಲಮೂತ್ರ ಎಲ್ಲಾ ಅಲ್ಲೇ ಮಾಡಿಕೊಂಡು ಒದ್ದಾಡುವ ಪರಿಸ್ಥಿತಿ ಬರುತ್ತದೆ. ಇದಕ್ಕೆ ಪರಿಹಾರವನ್ನೂ ಇನ್ನೊಂದು ವಿನಾಶದ ಮೂಲಕವೇ ಅಂದರೆ ಎಲ್ಲದಕ್ಕೂ ಬೆಂಕಿ ಹಚ್ಚುವುದರ ಮೂಲಕ ಕೊಡುತ್ತಾರೆ. ನಂತರ ಮಳೆ ಬಂದು ಮಳೆಯಲ್ಲಿ ನಗರವಾಸಿಗಳು ಕುಣಿಯತೊಡಗಿದರೆಂದು ಕಥೆ ಮುಕ್ತಾಯವಾಗುತ್ತದೆ. ಹಿಂದಿರುಗಿ ಹೋಗಲಾರದ ಈ 'ಅಭಿವೃದ್ಧಿ ಹೊಂದಿದ ಜಗತ್ತನ್ನು ಈ ಅತಿಕಾಲ್ಪನಿಕ ಕಥೆ ಮಾರ್ಮಿಕವಾಗಿ ಚಿತ್ರಿಸುತ್ತದೆ.
ಸುಶಿಕ್ಷಿತ ಸರ್ಕಾರಿ ಅಧಿಕಾರಿಗೂ ತನ್ನ ಮುಸ್ಲಿಂ ಅಸ್ಮಿತೆಯನ್ನು ಕಂಡುಕೊಳ್ಳುವುದು ಎಷ್ಟು ಮುಖ್ಯವಾಗುತ್ತದೆ ಎಂಬುದರ ನಿರೂಪಣೆ 'ಸಲಾಮಲೈಕುಂ' ಕಥೆಯಲ್ಲಿದೆ. ಇದು ಇನ್ನೂ ಒಳ್ಳೆಯ ಕಥೆಯಾಗಬಹುದಾಗಿದ್ದು ನಿರೂಪಕರ ಪ್ರವೇಶದಿಂದಾಗಿ ಕಥೆ ಮೊಟಕುಗೊಂಡಿದೆ. 'ಜುಗುಣಮ್ಮನ ಜಿಗಿತ' ಕಥೆಯ ಜುಗುಣಮ್ಮನ ಬಡತನದ, ಅವಮಾನಿತ ಬದುಕಿನಿಂದ ಯಶಸ್ಸಿನ ಜಿಗಿತ ಸಾಧಿಸುವ ದಾರಿ ಮಾತ್ರ ಮನಕಲಕುವಂತಹದು. 'ಕಡಲಿನ ನೀರು ಸಿಹಿಯಿತ್ತು ಮೊದಲು..' ಮತ್ತು 'ಸ್ವರೂಪ' ಕಥೆಯನ್ನು ಹೊರತುಪಡಿಸಿ ಈ ಸಂಕಲನದ ಎಲ್ಲಾ ಕಥೆಗಳೂ ಕಥೆಗಾರರ ಸದಾಶಯವನ್ನು ಬಿಂಬಿಸುವ ಸುಖಾಂತ್ಯದ ಕಥೆಗಳೇ.
ಪಶುವೈದ್ಯರಾದ ಲೇಖಕರು 'ಹಾರುವ ಹಕ್ಕಿ ಮತ್ತು ಇರುವೆ ಸಾಲು' ಕಥೆಯಲ್ಲಿ ಹಸು ಈಯುವಾಗ ಹಸು ಮತ್ತು ಹಸುವನ್ನು ಸಾಕಿದವರು ಅನುಭವಿಸುವ ನೋವುತಳಮಳವನ್ನು ನಿರೂಪಿಸಿದ್ದಾರೆ. ಆಗ ಹಾರುತ್ತಿರುವ ಹಕ್ಕಿ, ಸಾಲಿನಲ್ಲಿ ಸಾಗುತ್ತಿದ್ದ ಇರುವೆ. ತೆಂಗಿನಮರ, ಓತಿಕ್ಯಾತ ಇವೆಲ್ಲಾ ಹಸುಕರುಗಳ ಕ್ಷೇಮಕ್ಕೆ ಹಾರೈಸುವುದು, ಪಶುಪಕ್ಷಿಗಳೊಂದಿಗಿನ ಹಳ್ಳಿಗರ ಬದುಕನ್ನು ತೆರೆದಿಡುತ್ತದೆ.
'ಒಂದು ನಾಟಿ ಸವಾಲು' ಕಥೆ ಇಂಗ್ಲಿಷ್ ಭಾಷೆಯ ವ್ಯಾಮೋಹವನ್ನು ಬಂಡವಾಳಮಾಡಿಕೊಂಡು ಭ್ರಷ್ಟ ಅಧಿಕಾರಿಗಳನ್ನು ಓಲೈಸಿ ಖಾಸಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯೊಬ್ಬ ಇಡೀ ವ್ಯವಸ್ಥೆಗೇ ಸವಾಲು ಹಾಕುವಂತಹ “ಹೂಸು ಎಂಬುದಕ್ಕೆ ಇಂಗ್ಲಿಷಿನಲ್ಲಿ ಏನು” ಎಂದು ತಪಾಸಣೆಗೆ ಬಂದ ಅಧಿಕಾರಿಗಳೆದುರು ಪ್ರಶ್ನೆ ಕೇಳುವುದು ಮಾತ್ರ ಇಡೀ ವ್ಯವಸ್ಥೆಯ ಕೊಳಕನ್ನೇ ಬಿಂಬಿಸುತ್ತದೆ.
ಈ ಸಂಕಲನದಲ್ಲಿ ಸದ್ಯದ ನಮ್ಮ ಪರಿಸ್ಥಿತಿಯಲ್ಲಿನ ಮುಖ್ಯ ವಿಷಯಗಳನ್ನೇ ಕಥೆಯಾಗಿಸಿರುವುದರಿಂದ ತುಂಬಾ ಪ್ರಸ್ತುತವಾದ ಕಥೆಗಳೆನಿಸುತ್ತವೆ. ಈ ಕಥೆಗಳಲ್ಲಿ ಗ್ರಾಮೀಣ ಭಾಗದ ಪ್ರಾದೇಶಿಕ ಭಾಷೆಯ ಸೊಗಡನ್ನು ಕಾಣಬಹುದು. ಆದರೆ ಕೆಲವು ಕಥೆಗಳಲ್ಲಿ ತಿರುಳೇ ಪ್ರಧಾನವಾಗಿ ಕಥೆಯನ್ನು ಕಟ್ಟುವ ಆವರಣ ದುರ್ಬಲವಾಗಿದೆ ಎಂದೆನಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಕಥೆಗಳು ನಮ್ಮ ಕಾಲದ ತಲ್ಲಣಗಳಿಗೆ ಕನ್ನಡಿ ಹಿಡಿಯುವಂತಿವೆ.
(ಕೃಪೆ: ಪುಸ್ತಕಾವಲೋಕನ ನವೆಂಬರ್ ೨೦೨೦, ಬರಹ- ಪದ್ರಾಕ್ಷಿ ಕೆ.)
©2023 Book Brahma Private Limited.