ಜಂಗು ಹಿಡಿದ ಹಳೆಯ ಡಬ್ಬ ಗುರುತಿಲ್ಲದಂತೆ ಕರಗುವುದು

Date: 16-05-2023

Location: ಬೆಂಗಳೂರು


''ಅವನು ಮೀನಿಗೆ ಬಲೆ ಬೀಸಿ, ಸಮುದ್ರಕ್ಕೆ ಹೋಗಿದ್ದ ಅಪ್ಪನನ್ನು ಹುಡುಕಿ ಬಂದಿದ್ದ. ಅಲ್ಲೇ ಹತ್ತಿರದಲ್ಲೆ ಅವನ ಮನೆ. ಅವನ ತಾಯಿ ಎಷ್ಟೇ ಹೇಳಿದರೂ ಅಪ್ಪನಿಗೆ ದಾರಿ ತೋರುತ್ತೇನೆಂದು ರಾತ್ರಿಗಳಲ್ಲೂ ತೀರವಿಲ್ಲಿದೆ ಎಂದು ಲಾಂದ್ರ ಹಿಡಿದು ಆಡಿಸುತ್ತಾ ನಿಲ್ಲುತ್ತಿದ್ದನಂತೆ,” ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ನಡೆಯದ ಬಟ್ಟೆ ಅಂಕಣದಲ್ಲಿ ‘ಜಂಗು ಹಿಡಿದ ಹಳೆಯ ಡಬ್ಬ ಗುರುತಿಲ್ಲದಂತೆ ಕರಗುವುದು' ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

ನನ್ನ ಪ್ರಶ್ನೆ ಅವಳ ಕಿವಿಗೆ ಬೀಳಲಿಲ್ಲವೇ ಅಥವಾ ಅವಳ ಮಾತಿನ ಓಘದಲ್ಲಿ ಕೇಳಲಿಲ್ಲವೇ? ನನ್ನ ಕುತೂಹಲ ಇಮ್ಮಡಿಯಾಗುತ್ತಾ ಹೋಯಿತು. ಅವಳೊ ನೋವನ್ನೂ ಉತ್ಸಾಹದಲೇ ಸ್ವೀಕರಿಸುವ ಹಂತಕ್ಕೆ ಹೋಗಿಬಿಟ್ಟಿದ್ದಳು ಅನ್ನಿಸತೊಡಗಿ ನಾನು ಗಲಿಬಿಲಿಗೊಂಡೆ. `ತೇಜೂ ವಿಚ್ಚೇದನಕ್ಕೂ ಮುನ್ನ ಇನ್ನೊಮ್ಮೆ ಪ್ರಯತ್ನ ಪಡು. ಆ ಹುಡುಗಿಯನ್ನು ಭೇಟಿಯಾಗೋಣ. ಅವಳ ವಯಸ್ಸು ತುಂಬಾ ಸಣ್ಣದು. ಚಂದ್ರನಿಗೇನು ಗಂಡಸು, ಸಿಕ್ಕರೆ ಸಿಗಲಿ ಪುಟ್ಟ ಹುಡುಗಿ ಅನ್ನಿಸಿರಬಹುದು. ಆದರೆ ಹನಿಗಿಂತ ಐದಾರು ವರ್ಷಗಳಿಗೆ ದೊಡ್ಡವಳಿರಬೇಕು. ಅವಳ ಭವಿಷ್ಯ ಕೂಡಾ ನೋಡಬೇಕಲ್ಲವೇ?’ ಎಂದಿದ್ದೆ. ಅದಕ್ಕವಳು ಮೊದಲು ಒಪ್ಪಲಿಲ್ಲ. `ಅದು ಅವಳದ್ದೇ ಆಯ್ಕೆ ಆದರೆ ನಾನು ಯಾರು ಹೇಳಲಿಕ್ಕೆ?’ ಎಂದುಬಿಟ್ಟಳು. ಖಾಲಿತನ ಅವಳ ಕಣ್ಣುಗಳಲ್ಲಿ ಎದೆಯಲ್ಲಿದ್ದುದಕ್ಕಿಂತ ಜಾಸ್ತಿ ಇತ್ತು ಎನ್ನುವುದು ನನಗಷ್ಟೇ ಗೊತ್ತಿತ್ತು. ಯಾಕೆಂದರೆ ಅವಳು ಎಲ್ಲ ವಿರೋಧಾಭಾಸದ ಮಧ್ಯೆಯೂ ಚಂದ್ರನನ್ನು ಆರಾಧಿಸುತ್ತಿದ್ದಳು, ಎಷ್ಟೋ ಬಾರಿ ತನ್ನ ಐಡೆಂಟಿಟಿಯನ್ನೂ ಮರೆತು. ಕ್ರಿಯೆಯಲ್ಲದ ಕ್ರಿಯೆಯೊಂದು ಹೇಗೆ ಜರುಗಲು ಸಾಧ್ಯ? ಎನ್ನುವುದು ಅವಳ ಪ್ರಶ್ನೆ. ಅದನ್ನು ಮುಗ್ಧತೆ ಎನ್ನಬೇಕೋ, ಅಮಾಯಕತೆ ಎನ್ನಬೇಕೋ ಎಲ್ಲಾ ತಿಳಿದೂ ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುವುದು ಎಂದುಕೊಳ್ಳಬೇಕೋ! ಬಹುಶಃ ಕೊನೆಯದ್ದೇ ಸರಿಯಿರಬೇಕು. ನಾನು ವಿವರಣೆಯ ಹಂಗಿಗೆ ಬಿದ್ದರೆ, ಅವಳು ಮೋಡಿಗೆ ಬಿದ್ದಂತೆ ಒಂದೊಂದೇ ಗೆರೆಗಳನ್ನು ದಾಟುತ್ತಲೇ ಇದ್ದಳು. ನಾನು `ಶ್ಯಾಮೂ ಎಲ್ಲಿಗೇ ಹೊರಟೆ?’ ಎಂದೆ ನನ್ನ ನೋಡಿದ ಆ ನೋಟ ಇದೆಯಲ್ಲ ದಿಕ್ಕೆಡಿಸುವಂತಿತ್ತು. `ನೀನು ಬೇಕಿದ್ದರೆ ಇಲ್ಲೇ ಇರು. ನಾನೆಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಿ ನಿಲ್ಲುವೆ’

ನನ್ನ ಪ್ರಶ್ನೆಯನ್ನು ಮತ್ತೆ ಜೋರಾಗೇ ಕೇಳಿದೆ. ಕೇಳದಿದ್ದರೆ ನನಗೆ ಉಳಿಗಾಲವಿರಲಿಲ್ಲ. ಜೀವ ಛಿದ್ರವಾಗುವ ಹಾಗೆ ಪ್ರತಿಸಲವೂ ಅವಳ ನಡೆಯಿರುತ್ತದೆಯಲ್ಲ ಅದು ಆಳದಿಂದ ಕಲಕಿ ಬಿಡುತ್ತೆ. `ನಿನ್ನ ನೋಡಿತೆಂದೆಯಲ್ಲಾ ಯಾವುದೇ ಅದು?’ ಎಂದ ನನ್ನ ನೋಡಿ ನಕ್ಕಳು ಶ್ಯಾಮು. ನೆತ್ತಿಯಿಂದ ಅಂಗಾಲಿನ ತನಕ ಚಳುಕು. ಉಸಿರನ್ನು ಅಂಗೈಲಿಟ್ಟುಕೊಂಡು ಮುಷ್ಟಿ ಕಟ್ಟಿ ಆಟ ಆಡುವ ತವಕ ಅವಳಿಗೆ. ನನ್ನ ಪ್ರಶ್ನೆ ಅವಳಿಗೆ ಯಾವ ಬಾಗಿಲನ್ನು ತೆರೆಯಿತೋ ಗೊತ್ತಿಲ್ಲ. ಎಂದಿಗೂ ರಹಸ್ಯಮಯವಾದ ಸಂಗತಿ ಎನ್ನುವಂತೆ ನನ್ನ ದಿಟ್ಟಿಸಿ `ನಾನೆಂದದ್ದು ನಿನಗೂ ಕೇಳಿತೇ’ ಎಂದಳು. ಇಂಥಾ ಅತಿರೇಕಗಳನ್ನು ನಾನು ಶ್ಯಾಮುವಿನಿಂದ ನಿರೀಕ್ಷಿಸಲ್ಲ, ಆಗಲೇ ಕೋಪ ಬರುವುದು. ನನ್ನ ಕೋಪ ಅವಳಿಗೆ ಅರ್ಥವಾಗಲ್ಲ ಎಂದಲ್ಲ. ಅರ್ಥದ ಹಿಂದೆ ಬಿದ್ದು ಓಡುವ ವ್ಯರ್ಥ ಪ್ರಯತ್ನವನ್ನು ಅವಳು ನಿಲ್ಲಿಸಿದ್ದಾಳೆ. ಅದಕ್ಕೆ ಅವಳ ವ್ಯಕ್ತಿತ್ವದಲ್ಲಿ ಎಂಥದೋ ಆಕರ್ಷಣೆ ಕಾಣುತ್ತಿದೆ. ಜಗತ್ತು ಕಾಣಲಾಗದ್ದು ನನ್ನನ್ನು ಕಂಡಿತೇ! ನನಗೆ ಅದರ ಜೊತೆ ನಡೆಯದೆ ಈಗ ಗತ್ಯಂತರವೇ ಇಲ್ಲ. ಏನದು ಅವಳು ಹೇಳಿದ್ದು? ಗೆರೆಯ ಬೆನ್ನು ಬಿದ್ದು ಓಡುತ್ತಿದ್ದ ಅವಳು, ತಾನೇ ಗೆರೆಯಾಗಿ ತಾದ್ಯಾತ್ಮವನ್ನು ಅನುಭವಿಸುತ್ತಿದ್ದ ಅವಳು ಈಗ ಹೇಳುತ್ತಿದ್ದಾಳೆ ಗೆರೆಯೇ ನನ್ನನ್ನು ನೋಡುತ್ತಿದೆ ಎಂದು!

ಅವಳು ಹಾಗಂದಳಾ? ಅರೆ ಹಾಗೆ ಅವಳು ಹೇಳಲೇ ಇಲ್ಲ! ಆದರೂ ಅವಳು ಹಾಗೆ ಹೇಳಿದಂತೆ ನನಗೆ ಅನ್ನಿಸಿದ್ದಾದರೂ ಯಾಕೆ? ನಾನೂ ಶ್ಯಾಮು ಹೋಗುವಂಥಾ ಕಲ್ಪನಾ ಲೋಕಕ್ಕೆ ಹೋಗುತ್ತಿರುವೆನಾ? ಅಥವಾ ಅವಳ ಒಳಗು ನನಗೆ ಪೂರ್ಣ ಅರ್ಥವಾಗುತ್ತಿದೆಯಾ? ಯಾತನೆ, ಬೇಗುದಿಗಳನ್ನೇ ಜೇಡದ ನೂಲಂತೆ ನೇಯುತ್ತಾ... ನೇಯುತ್ತಲೇ, ಮೇಲಕ್ಕೆ... ಮೇಲಕ್ಕೆ ಹೋಗುವ ಪ್ರಯತ್ನದಂತೆ, ಶ್ಯಾಮುವಿನ ವ್ಯಕ್ತಿತ್ವ ನೆಲದಿಂದ ಮೇಲಕ್ಕೆ ಸಾಗುತ್ತಿದೆ ಎನ್ನಿಸಿದಾಗಲೆಲ್ಲಾ, ಅವಳು ಆಕಾಶವನ್ನು ನೋಡುತ್ತಿಲ್ಲ, ಬದಲಿಗೆ ಉಪ್ಪುಗಾಳಿಯ ಬಯಲಲ್ಲಿ ಒಂದು ಹೊಂಗೆ ಕಡ್ಡಿಯನ್ನು ಹಿಡಿದು ನೆಲದಾಳದ ಸಿಹಿ ನೀರನ್ನು ಹುಡುಕುತ್ತಾ,…ಹುಡುಕುತ್ತಾ, ಸುಸ್ತಾದವಳಂತೆ ಕುಳಿತಿದ್ದಾಳೆ ಅನ್ನಿಸುತ್ತದೆ. ಯಾವುದು ಸತ್ಯವೋ? ಯಾವುದು ಮಿಥ್ಯವೋ?

`ಅದೊಂದು ಗಳಿಗೆ ನನ್ನ ಜೀವನದಲ್ಲಿ ಬಾರದೇ ಹೋಗಿದ್ದರೆ ಅಂಥಾದ್ದೊಂದು ಅನುಭವ ನನ್ನೊಳಗೆ ಇಳಿಯುತ್ತಿರಲಿಲ್ಲ ತೇಜೂ, ಉಪ್ಪುನೀರಿನ ನಂಟಲ್ಲಿ ನೆಲಕ್ಕೆ ಬಿದ್ದ ಬಲಿತ ಮರ ಹಾಳಾಗುವುದಿಲ್ಲ. ಎಲೆಯನ್ನು, ತೊಗಟೆಯನ್ನೂ ಕಳಚಿಕೊಳ್ಳುತ್ತಾ ನಗ್ನವಾಗುತ್ತಾ, ಗಟ್ಟಿಗೊಳ್ಳುತ್ತಾ ಇನ್ನೊಂದೇ ಪಯಣಕ್ಕೆ ಅಣಿಯಾಗಿಬಿಡುತ್ತದೆ. ಆದರೆ ಯಾರೋ ಎಸೆದುಹೋದ ತೂತುಬಿದ್ದ ಕಬ್ಬಿಣದ ಡಬ್ಬ ಉಪ್ಪುಗಾಳಿಯ ತೇವಾಂಶವನ್ನು ಹೀರಿ ಜುಂಗು ಹತ್ತಿ ಕೊನೆಗೊಮ್ಮೆ ತನ್ನ ಗುರುತೂ ಉಳಿಯದೆ ಕರಗಿಹೋಗುತ್ತೆ. ಅದೊಂದು ಪಾಯಿಂಟ್ ಕಣೆ, ಮನುಷ್ಯ ಗಟ್ಟಿಯಾಗಬೇಕೋ ಇಲ್ಲ ಕರಗಿ ಹೋಗಬೇಕೋ? ನಾವು ಯಾವ ಉದ್ದೇಶಕ್ಕೆ ಆತುಕೊಳ್ಳಬೇಕು ಎಂದು ಯೋಚಿಸುತ್ತಲೇ ಕಾಲವನ್ನು ನೂಕಿಬಿಡುತ್ತೇವೆ. ಆದರೆ ಕಾಲ ಹಾಗಲ್ಲ ಅದು ನಮ್ಮೆದುರು ನಿಲ್ಲುತ್ತೆ, ನನ್ನ ತಪ್ಪಿಸಿಕೊಂಡು ಹೇಗೆ ಮುಂದೆ ಹೋಗುತ್ತೀಯ ಅನ್ನುತ್ತೆ, ಹಾಗೆ ಅನ್ನುತ್ತಲೇ ನಮ್ಮನ್ನು ಸಾವಿನತ್ತ ನೂಕುತ್ತೆ. ಸತ್ತರೂ ನೆನಪಾಗುವ ಏನನ್ನೋ ಉಳಿಸಿಬಿಡುತ್ತೆ’ ಶ್ಯಾಮು ಮಾತುಗಳು ಒಂದೊಂದೇ ಬಾಗಿಲುಗಳಾಗುತ್ತಾ ತೆರೆಯುತ್ತಾ ಹೋಗುತ್ತಿದೆ ಎನ್ನಿಸಿ, ನನ್ನ ಅನುಮಾನಗಳನ್ನು ಪಕ್ಕಕ್ಕಿಟ್ಟು, `ಹಾಗಾದರೆ ನಿನ್ನನ್ನು ನೋಡಿದ್ದು ಕಾಲವೇನೇ?’ ಎಂದೆ. ಅವಳು ನಗುತ್ತಾ ಇಲ್ಲವೆಂಬಂತೆ ತಲೆ ಆಡಿಸಿದಳು- ಗತಕಾಲದ ಘಟನೆಯೊಂದಕ್ಕೆ ಜೀವ ತುಂಬುವವಳಂತೆ.

`ಅಪ್ಸರಕೊಂಡ ನೆನಪಿದೆಯೇನೆ? ಅತ್ತೆ ಮನೆಯಿದೆಯೆಂದೂ ನೀನೇ ನನ್ನ ಬೇಸರ ಕಳೆಯಲಿಕ್ಕೆ ಕರೆದೊಯ್ದಿದ್ದೆಯಲ್ಲಾ?’ ಎಂದಳು ಶ್ಯಾಮು. ನಾನೂ ನೆನಪಿಸಿಕೊಳ್ಳುವವಳಂತೆ ಹೌದಲ್ಲಾ? ಆ ಜಾಗ ನನ್ನ ಚಿಕ್ಕಂದಿನಿಂದ ಸೆಳೆಯುತ್ತಲೇ ಇತ್ತು. ಅಪ್ಸರ ಕೊಂಡದ ವೈಭವ ಆಗ ಬೇರೆಯದ್ದೇ ಇತ್ತು. ಪೂರ್ತಿ ಕಾಡು. ಅಲ್ಲಿ ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇರುತ್ತಿರಲಿಲ್ಲ. ನಮ್ಮ ಕಾವಲಿಗೆ ಅಂತ ಆಳು ಮಕ್ಕಳನ್ನು ಅತ್ತೆ ಕಳಿಸುತ್ತಿದ್ದರು. ಆ ತಿಳಿ ನೀರಲ್ಲಿ ಆಳವಿಲ್ಲದ ಕಡೆ ಈಜು ಬಾರದ ನಾವು ಈಜುವಂತೆ ನಟಿಸುತ್ತಾ ... ಓಹ್ ಆ ದಿನಗಳು ಮತ್ತೆ ಬರಬಾರದೆ ಅನ್ನಿಸುತ್ತದೆ. ಈಗ ಬಿಡು ಸುತ್ತಾ ಕಟ್ಟಡಗಳು ಎದ್ದುಬಿಟ್ಟಿವೆ. ಒಬ್ಬರೇ ಹೋದರೂ ಒಚಿಟಿ ಅನ್ನಿಸಲ್ಲ ಸಮುದ್ರದಲ್ಲಿ ಮುಳುಗೆದ್ದು ಉಪ್ಪಿಂದ ಅಂಟು ಅಂಟಾದ ಮೈಯ್ಯನ್ನು ತೊಳೆದುಕೊಳ್ಳಲು ಓಡುತ್ತಿದ್ದೆವಲ್ಲಾ! ಮಳೆಗಾಲ ಕಳೆದು ಸ್ವಲ್ಪ ದಿನಗಳಾಗಿದ್ದರಂತೂ ಆ ಪುಟ್ಟ ಜಲಪಾತದ ಸೊಬಗೇ ಬೇರೆ. ನೀನೂ ಖುಷಿ ಪಟ್ಟಿದ್ದೆಯಲ್ಲೇ. ಆದರೆ ನನಗೆ ನೆನಪಿರುವ ಹಾಗೆ ನೀನು ಹೇಳುವ ಥರದ್ದು ಅಲ್ಲೇನೂ ನಡೆಯಲೇ ಇಲ್ಲವಲ್ಲ’ ಎಂದೆ. `ನಡೆಯುವುದು ಎಂದರೆ ದಂಡೆಯಲ್ಲಿ ನಮ್ಮ ಕಾಲ ಗುರುತುಗಳು ಮೂಡುವಂತೆ ಎಂದುಕೊಂಡೆಯಾ ತೇಜೂ? ನಮಗಾದರೂ ದಂಡೆಯ ತುಂಬಾ ಓಡಾಡುವುದನ್ನು ಬಿಟ್ಟರೆ ಮತ್ತೆ ಏನಿದೆ ಹೇಳು? ಆ ಅಗಾಧತೆಯ ಎದುರು ನಾನೂ ನೀನೂ ಅವತ್ತು ಚಿಕ್ಕ ಮಕ್ಕಳ ಹಾಗೆ ನಮ್ಮ ಹೆಜ್ಜೆಯನ್ನು ಊರಿ ಸಮುದ್ರಕ್ಕೆ ಅಳಿಸಬೇಡ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದೆವಲ್ಲಾ! ಆಗಲೇ ತಾನೆ ಆ ಹುಡುಗ ನಮಗೆ ಸಿಕ್ಕಿದ್ದು!’ `ಶ್ಯಾಮು ಯಾವ ಕಥೆ ಹೇಳುತ್ತಿದ್ದೀಯಾ, ಯಾವ ಹುಡುಗ ಅವನು? ನನಗೆ ನೆನಪಿಲ್ಲವಲ್ಲೇ’ ಎಂದೆ. `ನೆನಪಾಗಲಾರ ಅವನು. ಯಾಕೆಂದರೆ ಅವನಾಡಿದ ಆ ಮಾತನ್ನು ನೀನು ನೆನಪಿಟ್ಟುಕೊಂಡಿಲ್ಲ. ಯಾರನ್ನಾದರೂ ಸರಿಯೆ ನೆನಪಿಟ್ಟುಕೊಳ್ಳಬೇಕೆಂದರೆ ಅಂಥಾದ್ದು ಏನೋ ನಡೆದಿರುತ್ತದೆ. ನಮ್ಮ ಹೆಜ್ಜೆಗಳನ್ನೂರಿ ಅಳಿಸಬೇಡ ಎಂದು ಪ್ರಾರ್ಥನೆ ಸಲ್ಲಿಸುವಾಗ, ಅಲೆಗಳು ತೇಲಿಸಿ ತಂದು ದಡಕ್ಕೆಸೆದ ಲಡ್ಡಾದ ಕಡ್ಡಿಯನ್ನು ತಂದು ಚಂದ್ರನ ಹೆಸರನ್ನು ಬರೆದು ಮತ್ತೆ ಕಣ್ಣನ್ನು ಮುಚ್ಚಿದೆ. ನಮ್ಮ ಪ್ರಾರ್ಥನೆ ಸಮುದ್ರಕ್ಕೆ ಮುಟ್ಟುವ ಮೊದಲೇ ಎಳವೆಯ ಒಂದು ಧ್ವನಿ ಕೇಳಿತ್ತು, `ಬಾ ಅಳಿಸು, ಯಾರ ಮಾತನ್ನೂ ಕೇಳಬೇಡ, ಏನು ಬರೆದರೂ ಸಹಿತಾ’. ಒಂದು ಕ್ಷಣ ಜಗತ್ತಿನ ಎಲ್ಲವೂ ಮುಗಿದೇ ಹೋಯಿತು ಎನ್ನುವಂತೆ ದಿಗ್ಮೂಢಳಾಗಿ ಕಣ್ಣನ್ನು ಬಿಟ್ಟೆ. ಅಲೆಗಳಿಗೆ ಪಂಥಾಹ್ವಾನವನ್ನು ಕೊಡುತ್ತಿದ್ದನಲ್ಲ ಆ ಪುಟ್ಟ ಹುಡುಗ

ಆಗ ಕಾಣಿಸಿದ್ದ. ನನ್ನ ಕಣ್ಣ ನೀರನ್ನು ನೋಡಿ ಅವನ ತಾಯಿ, `ಮಗೂ ಹಾಗೆಲ್ಲಾ ಹೇಳಬೇಡ’ ಎಂದು ಅವನನ್ನು ಸುಮ್ಮನಿರಿಸಲು ನೋಡಿದಳು. ಅದಕ್ಕೆ ಆ ಹುಡುಗ ಖಚಿತವಾಗಿ ಹೇಳಿದ್ದ, `ಅಳಿಸದಿದ್ದರೆ ಅದು ಅಲೆ ಹೇಗಾಗುತ್ತದೆ’. ಆ ತಾಯಿಗೆ ನನ್ನ ಸಂಕಟ ಅರ್ಥವಾಗಿದೆ, ಆದರೆ ಆ ಹುಡುಗ ಊಹುಂ ಕರಗುವ ಲಕ್ಷಣವೂ ಇಲ್ಲ. ನಾನು ಆ ತಾಯಿಗೆ ಹೇಳಿದೆ, `ಬಿಡಿ ಆ ಮಗುವನ್ನು ಅವನಿಚ್ಚೆಯಂತೆ, ನಮ್ಮ ಒಡಲ ಸಂಕಟಗಳು ಅವನಿಗೆ ಹೇಗೆ ಅರ್ಥವಾಗಬೇಕು? ವಯಸ್ಸಿನ್ನೂ ಸಣ್ಣದು’. ಹುಡುಗ ಕೆರಳಿದ, `ನಿಮಗೆ ನೋವಾಗುತ್ತೆ ಅಂತ ಅಲೆಗಳಿಗೆ ಸುಮ್ಮನಿರುವಂತೆ ಹೇಳುತ್ತೀರಾ? ಅವುಗಳ ಕೆಲಸ ಮಾಡದಿದ್ದರೆ ಅವುಗಳಿಗೆ ನೋವಾಗುವುದಿಲ್ಲವಾ?’ ಎಂದ. ಸಮುದ್ರಕ್ಕೆ ನೋವಾಗುತ್ತಾ?! ಎಂಥಾ ಮಾತನ್ನು ಹೇಳಿಬಿಟ್ಟ!! ಅದರ ಬದುಕಿನ ಲಯಗಳನ್ಣೇ ಕೆಡಿಸಲು ಹೊರಟುಬಿಟ್ಟಿದ್ದೆನಲ್ಲಾ? ಅವನು ನನಗೆ ತತ್ವಜ್ಞಾನಿಯ ಹಾಗೆ ಕಂಡುಬಿಟ್ಟ ಕಣೆ. ಆ ಒಂದು ಘಟನೆ ನನ್ನೊಳಗೆ ಹುಟ್ಟಿದ್ದ ನೋವು, ಸಂಕಟ ಎಲ್ಲವನ್ನೂ ಲಯ ಮಾಡಿಬಿಟ್ಟಿತ್ತು. ನಾನು ಆ ಕ್ಷಣಕ್ಕೆ ಬರುವ ಅಲೆಗಳಿಗೆ ಎದೆಯೊಡ್ಡಿ ನಿಂತ ದಂಡೆ ಆಗಿಬಿಟ್ಟಿದ್ದೆ, ನನ್ನ ಬಗ್ಗೆ ನನಗೆ ಹೆಮ್ಮೆ ಮೂಡಿತ್ತು -ನಾನಿಲ್ಲದಿದ್ದರೆ ಈ ಸಮುದ್ರವಾದರೂ ಎಲ್ಲಿ ಹೋದೀತು?

ಅವನು ಮೀನಿಗೆ ಬಲೆ ಬೀಸಿ, ಸಮುದ್ರಕ್ಕೆ ಹೋಗಿದ್ದ ಅಪ್ಪನನ್ನು ಹುಡುಕಿ ಬಂದಿದ್ದ. ಅಲ್ಲೇ ಹತ್ತಿರದಲ್ಲೆ ಅವನ ಮನೆ. ಅವನ ತಾಯಿ ಎಷ್ಟೇ ಹೇಳಿದರೂ ಅಪ್ಪನಿಗೆ ದಾರಿ ತೋರುತ್ತೇನೆಂದು ರಾತ್ರಿಗಳಲ್ಲೂ ತೀರವಿಲ್ಲಿದೆ ಎಂದು ಲಾಂದ್ರ ಹಿಡಿದು ಆಡಿಸುತ್ತಾ ನಿಲ್ಲುತ್ತಿದ್ದನಂತೆ. ಬಂದರಲ್ಲದ ತೀರಕ್ಕೆ ಹಡಗು ಬರುವುದಾದರೂ ಹೇಗೆ? ಅವನು ಹಾಗೆ ಲಾಂದ್ರ ಆಡಿಸಿದ ಪ್ರತಿಸಲ ಮಾರನೆ ದಿನ ಅವನ ಅಪ್ಪ ಬರುತ್ತಿದ್ದನಂತೆ. ಈ ಸಲ ಮಾತ್ರ ಅದಾಗಿಲ್ಲ. ಹಾಗಾಗಿ ಹಗಲಲ್ಲೂ ಅಪ್ಪನ ಕನವರಿಕೆಯಲ್ಲೇ ಅವನು ತೀರಕ್ಕೆ ಬಂದಿದ್ದ. ಎಲ್ಲರದ್ದೂ ಒಂದೊಂದು ಹುಡುಕಾಟ ಒಂದೊಂದು ಶೋಧ. ನಿಜ ಹೇಳೇ ಅವನ ದುಃಖದ ಎದುರು ನನ್ನ ದುಃಖ ಸಮವೇ?’ ಎಂದಳು ಶ್ಯಾಮು. `ಯಾವ ದುಃಖಕ್ಕೆ ಯಾವ ದುಃಖವನ್ನು ಈಕ್ವಲ್ಸ್ ಅಂತ ತೋರುತ್ತಿದ್ದೀಯ ಶ್ಯಾಮೂ?’ ಎಂದೆ. ಅವಳು ನಕ್ಕಳು, `ಇದು ಲೆಕ್ಕ ಅಲ್ಲ ಜೀವನ. ಯಾವುದಕ್ಕೆ ಯಾವುದೂ ಸಮ ಆಗಬಲ್ಲದು. ಪ್ರೀತಿ, ದುಃಖ ಎಲ್ಲವೂ ತಮ್ಮ ಪಾಡಿಗೆ ಸಂಭವಿಸುತ್ತಲೇ ಇರುತ್ತದೆ ಅಲೆಗಳಂತೆ’ ಎನ್ನುತ್ತಾ ನನ್ನನ್ನು ಯಾವುದೋ ಲೋಕಕ್ಕೆ ದೂಡಿದ್ದಳು. ಇಂಥಾ ಮಾತುಗಳು ಇವಳಿಗೆ ಎಲ್ಲಿ ಸಿಕ್ಕವು? ನಿಗೂಢ ಮತ್ತಷ್ಟು ಇನ್ನಷ್ಟು ನಾನು ಯೋಚಿಸುತ್ತಲೇ ಇದ್ದೆ. `ಅಪ್ಸರ ಕೊಂಡದಿಂದ ಸ್ನಾನ ಮುಗಿಸಿ ಇನ್ನೊಮ್ಮೆ ಸಮುದ್ರ ನೋಡಿ ಹೋಗೋಣ ಅಂತ ಬಂದೆವಲ್ಲ ಆಗಲೇ ಕಂಡಿದ್ದು ಅದು’ ಇದ್ದಕ್ಕಿದ್ದಂತೆ ಅವಳ ಮಾತುಗಳು ನನ್ನ ಯೋಚನೆಗಳನ್ನು ಸೋಪಿನ ಗುಳ್ಳೆಗಳಂತೆ ಒಡೆದುಹಾಕಿದವು ನಾನು ಕುತೂಹಲದಿಂದ ಅವಳೆಡೆಗೆ ತಿರುಗಿದ್ದೆ.

ಅವಳು ತನ್ನ ಪಾಡಿಗೆ ತಾನು ಮಾತಾಡುತ್ತಲೇ ಇದ್ದಳು, `ಆಗಲೇ ಕಂಡಿದ್ದು ಅದು... ಅಲ್ಲಲ್ಲ ಅದು ನನ್ನ ನೋಡಿದ್ದು, ನಕ್ಕಿದ್ದು. ಅದುವರೆಗೂ ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಬಿದ್ದುಕೊಂಡಿದ್ದ ಅದು ನನ್ನೊಂದಿಗೆ ಮಾತಿಗಿಳಿದಿದ್ದು. ಅದು ಹಾಗೆ ಘಟಿಸಿದ್ದು ಸುಮ್ಮನೆ ಅಲ್ಲವೇ. ಹುಡುಗನ ಮಾತು ನನ್ನ ಎದೆಯೊಳಗೆ ನೆಟ್ಟು ಬೆಳಕಿನ ಬಿತ್ತವೊಂದಕ್ಕೆ ಮೊಳಕೆ ಬಂತಲ್ಲ ಆ ಕ್ಷಣ, ಸಮುದ್ರದ ಮೇಲಿನ ಗಾಳಿಗೂ ನಾದದ ಹುಕಿ ಬರುತ್ತಲ್ಲ, ದಡಕ್ಕೆ ಅಲೆಯೊಂದು ತಂದೆಸೆದ ಶಂಖವನ್ನು ಕಿವಿಗೆ ಹಿಡಿದುಕೊಂಡರೆ ಗಾಳಿಯ ಹುಕಿ ಶಂಖದ ಒಳಗೆ ಸೇರಿ ಸಮುದ್ರದ ಭೋರ್ಗರೆತವನ್ನೇ ಸೃಷ್ಟಿಸುತ್ತದಲ್ಲ ಹಾಗಾಯಿತು ಕಣೆ.. ನಾನು ಪ್ರಜ್ಞೆಯೇ ಇಲ್ಲದವಳ ಹಾಗೆ ಓಡುತ್ತಿದ್ದರೆ ನೀನು ನನ್ನ ಹಿಂದೆ ಓಡಿ ಬಂದಿದ್ದೆ. ಇಡೀ ದಂಡೆಗೆ ದಂಡೆಯೇ ಹುಚ್ಚು ಹತ್ತಿದಂತೆ ತನ್ನ ಮೈಮೇಲೆ ಚಿತ್ರ ಬರೆದುಕೊಂಡಿತ್ತಲ್ಲೇ! ಇಷ್ಟೊಂದನ್ನು ಯಾರೇ ಬರೆದದ್ದು? ಎಂದು ಕೂಗಿದ್ದೆನಲ್ಲೇ’ ಅವಳು ಓಡುವ ಆವೇಶದಲ್ಲೇ ಮಾತನಾಡುತ್ತಿದ್ದಳು. ಅರೆ! ಅವತ್ತು ನಾನೂ ಇದ್ದೆ. ಅದನ್ನು ನಾನೂ ನೋಡಿದ್ದೆ ಆದರೆ ನನಗೆ ಅಚ್ಚರಿಯಾಗಿತ್ತೇ ವಿನಾ ಬೇರೇನೂ ಅನ್ನಿಸಿರಲೇ ಇಲ್ಲ. ಸಮುದ್ರಕ್ಕೆ ಸಿಹಿನೀರ ತೊರೆ ಬಂದು ಸೇರುವ ಜಾಗದಲ್ಲಿ ಹರಿವಿನ ದಾರಿ ಅಂತ ಇರಲ್ಲ. ಮರಳಿನಲ್ಲಿ ನೀರು ಸಿಕ್ಕ ಜಾಗ ಮಾಡಿಕೊಂಡು ಸಮುದ್ರದ ಕಡೆಗೆ ಓಡುವಾಗ ತಾನೇ ಮಾಡಿಕೊಳ್ಳುವ ದಾರಿಗಳಲ್ಲಿ ನೀರು ಸೆಳೆದು ಚಿತ್ರಗಳಾಗಿ ಮಾರ್ಪಡುತ್ತವೆ. ಆದರೆ ಇವಳ ವರ್ಷನ್ ಬೇರೆಯದ್ದೇ ಇದೆಯಲ್ಲಾ!

ಹಾ ತೇಜೂ ಆ ಅದ್ಭುತವಾದ ಚಿತ್ರಗಳನ್ನು ಸಮುದ್ರದ ವಿಶಾಲವಾದ ದಂಡೆಯನ್ನೇ ಕ್ಯಾನ್ವಾಸ್ ಮಾಡಿಕೊಂಡು ಬರೆದ ಚಿತ್ರಗಳನ್ನು ಕಣ್ತುಂಬಿಕೊಳ್ಳುವಾಗ ಏನಾಗಿತ್ತೆ ನನಗೆ, ನನ್ನ ಕೈಯ್ಯಲ್ಲಿ ಅಷ್ಟು ವರ್ಷಗಳು ಗೀಚಿಸಿಕೊಂಡ ಗೆರೆಗಳೆಲ್ಲವೂ ಶಕ್ತಿ ಹೀನವಾಗಿ ಬಿಕ್ಕುತ್ತಾ ಕುಳಿತವಲ್ಲೇ! ಗೊತ್ತಿಲ್ಲದ ನಾನು, ಮೊದಲಿಗೆ ಬರೆದವನು ಯಾರೆಂದು ಹುಡುಕುತ್ತಾ ಹೊರಟೆನಲ್ಲಾ! ಹೋಗುತ್ತಾ ಹೋಗುತ್ತಾ ಇಲ್ಲ ಇದು ಮನುಷ್ಯ ಮಾತ್ರರು ಬರೆಯಲಾರದ್ದು ಅನ್ನಿಸಿತ್ತಲ್ಲ, ಸಮುದ್ರ ನಕ್ಕಿತು. ಆಗಲೇ ಕಣೆ ಸಂಭವಿಸಿದ್ದು ಅದು. ಆಳವಾದ ಸಾಮರಸ್ಯ ಭಾವದಲ್ಲಿ ಸಮುದ್ರದ ಜೊತೆ ತಾದಾತ್ಮ್ಯವನ್ನು ಸಾಧಿಸಬಯಸಿದಾಗ ಉದ್ಭವಿಸಿದ್ದ ಆ ಗೆರೆಗಳು ಒಂದಾಗಿ ಇಡೀ ದಂಡೆಯಲ್ಲಿ ನೀರು ತನ್ನ ಕಿರು ಬೆರಳುಗಳ ಚಾಚಿ ಚಾಚಿ ಬೆಳಗಿನಿಂದ ಬರೆದುಕೊಂಡಿದ್ದ ಚಿತ್ರಗಳೆಲ್ಲಾ ಒಂದಾಗಿ, ಒಂದೇ ಎಂದು ಹೇಳುತ್ತಾ ಕೂಡಿಕೊಂಡು, ಕಳೆಯುವ ಆಟ ಬೇಡವೇ ಬೇಡ ಎಂದು ನನ್ನ ಕಡೆ ನೋಡಿತು. ಅದೂ ನಾನೂ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳಬೇಕೆಂಬ ತವಕಕ್ಕೆ ಬಿದ್ದಿದ್ದೆವಲ್ಲಾ! ಆಗ `ನೀನೇನಾಗಿದ್ದೀಯೋ ಅದು ಮಾತ್ರ ನಿನಗೆ ಸಿಗುತ್ತೆ, ನೀನು ನಾನೇ ಆದ್ದರಿಂದ ನಿನ್ನ ಕಡೆಗೆ ನಾನು ನೋಡಿದೆ’ ಎಂದು ಹೇಳಿತಲ್ಲವೇ ಅದು! ಇಷ್ಟು ದಿನ ನಾನು ಅದನ್ನು ನೋಡುತ್ತೇನೆ ನೋಡಿ ಬರೆಯುತ್ತೇನೆ ಎಂದುಕೊಂಡಿದ್ದೆ. ಅದು ನನ್ನ ಕಡೆಗೆ ನೋಡದೆ ನನಗೆ ಅದು ಕಾಣುವುದಾದರೂ ಹೇಗೆ? ಈ ಸತ್ಯ ನನಗ್ಯಾಕೆ ಗೊತ್ತಾಗಲಿಲ್ಲ! ತೀರ್ಮಾನಗಳ ರಾತ್ರಿಗಳಲ್ಲಿ ಹಗಲುಗಳಿಗೆ ಕಾಯುವಂತೆ ಅದು ನನಗಾಗಿ ಕಾಯುತ್ತಿತ್ತಲ್ಲೇ-ಹತ್ತು ದಿಕ್ಕುಗಳನ್ನೂ ಕಣ್ಣಾಗಿಸಿ.

ಸೂರ್ಯ ಮುಳುಗುವ ಹೊತ್ತಲ್ಲಿ ನೀನು ನೆನಪಿಸುತ್ತಿದ್ದೆ ನಾವು ಚಿಕ್ಕಂದಿನಲ್ಲಿ ಕೆರೆಯ ಏರಿಯ ಮೇಲೆ ಕುಳಿತು ಸೂರ್ಯ ಮುಳುಗುತ್ತಾನೆ ಕೆರೆಯ ನೀರು ಕಾಯುತ್ತೆ, ದಂಡೆಯೂ ಕಾಯಲಿಟ್ಟ ಪಾತ್ರೆಯಂತೆ ಬಿಸಿಯಾಗುತ್ತೆ ಎಂದು ನಾನು ಹೇಳಿದ್ದ ಆ ಘಟನೆಯನ್ನುನೆನಪಿಸಿ , `ಶ್ಯಾಮು ತೋರಿಸೇ ಈಗ ಆ ಮ್ಯಾಜಿಕ್ ಅನ್ನು’ ಎಂದೆಯಲ್ಲವೇ? ಅದಕ್ಕಿಂತಲೂ ಅದ್ಭುತವೊಂದು ಹೊಸದಾದ ಅನುಭವವಾಗಿ ನನಗೆ ಸಿಗುತ್ತಿರುವಾಗ ಹೇಗೆ ಹೇಳಲಿ? ಏನನ್ನೇ ಹೇಳಲಿ? ಅವು ನಿನಗಾಗಿ ಹೇಗೆ ಕಾಯುತ್ತಿದ್ದವು ಅಂತ ನನ್ನ ಕೇಳಿದರೆ ನನ್ನ ಹತ್ತಿರ ಉತ್ತರವಿಲ್ಲ, ಆದರೆ ಸಾಕ್ಷಿ ಎನ್ನುವ ಹಾಗೆ ಬೆಳಗ್ಗೆಯಿಂದ ದಂಡೆ ಬರೆದುಕೊಂಡ ಚಿತ್ರಗಳು ಅಲೆಗಳ ಬರತ ಜಾಸ್ತಿ ಆಗಿ ಎಲ್ಲವನ್ನೂ ನಮ್ಮ ಕಣ್ಣೆದುರೇ ಅಳಿಸಿಹೋಗಿತ್ತಲ್ಲವೇ. ಸಂಜೆ ಆರರ ಮೇಲೆ ಒಂದೂ ಚಿತ್ರ ಇರಲಿಲ್ಲ. ಹಾಗೆ ಅಳಿಸಿಕೊಳ್ಳುವಾಗ, `ನಾನು ಕಾಣದೆ ನೀನು ಹೇಗೆ ಕಾಣುತ್ತೀಯೇ ಎಂದಿದ್ದವಲ್ಲವೇ?’ ಎಂದಾಗ ಹನಿಯ ಪುಟ್ಟ ಪಾದ ನನ್ನ ಎದೆಯ ಮೇಲೆ ನಿಂತು ತಕ ಪಕ ಕುಣಿದ ಹಾಗಾಯಿತು. ಮಗುವಿನ ಕುಣಿತದ ಖುಷಿಯನ್ನು ನೋಡಲೇ ಹಾಲು ತುಂಬಿದ ಎದೆಯ ಮೇಲೆ ಅವಳು ಇಡುತ್ತಿದ್ದ ಹೆಜ್ಜೆಗಳಿಂದ ಆದ ನೋವನ್ನು ಹೇಳಲೇ? ಆದರೆ ಅದು ನನ್ನ ನೋಡುತ್ತದೆ ಎನ್ನುವ ಎಚ್ಚರ ಮಾತ್ರ ಎದೆ ತುಂಬಿ ವಿನಮ್ರ ಭಾವ ಮೂಡಿಬಿಟ್ಟಿತ್ತು.

ಎಷ್ಟು ಹೊರಳುಗಳು, ಎಷ್ಟೊಂದು ಮರಳುಗಳು! ಆ ಗೆರೆಗಳಲ್ಲಿ ನನ್ನನ್ನೇ ನಾನು ಕಂಡಿದ್ದು ಅದೇ ಮೊದಲು ಕಣೆ. ಇಲ್ಲಿಲ್ಲ ಅದೇ ನಾನಾಗಿದ್ದು ಕೂಡಾ. ಅದು ನನ್ನ ನಾನೇ ನೋಡಿಕೊಳ್ಳುವ ಒಂದು ಕನ್ನಡಿಯಾಯಿತು. ಸಣ್ಣಗಿನ ದೀಪವಾಯಿತು. ಗಾಳಿಗಲುಗದ ಹಾಗೇ ಅಡ್ಡಗಟ್ಟಿದ ಲಾಂದ್ರದ ಗಾಜಾಯಿತು. ಆಗಿಂದಲೇ ಚಿತ್ರದೊಳಗೂ ಜೀವಂತವಾದದ್ದು ಮಗುವಿನ ನಗು ಕಾಣುವುದಲ್ಲ ಕೇಳುವುದು ಕೂಡಾ ಎನ್ನುವುದು ಅರ್ಥವಾಗಿದ್ದು’. ಶ್ಯಾಮು ಚಿತ್ರ ಬರೆಯುವವಳೋ ಚಿತ್ರವೇ ತಾನಾದವಳೋ ದಿಟ್ಟಿಸಿದೆ, ಅವಳ `ಸಮುದ್ರ ಬರೆದ ಚಿತ್ರ’ದ ಸೀರೀಸ್ ನಲ್ಲಿ ಇವಳು ಎಲ್ಲಿದ್ದಾಳೆ ಎಂದು ಹುಡುಕಾಡಿದ್ದೆ.

ಇಲ್ಲ ಶ್ಯಾಮುವನ್ನು ಹೇಗಾದರೂ ಸರಿಯೇ ಕಾಪಾಡಿಕೊಳ್ಳಬೇಕು. ಅಪರೂಪದಲ್ಲಿ ಅಪರೂಪದ ನನ್ನ ಸ್ನೇಹಿತೆಯನ್ನು ಕಣ್ಬೆಕಿನಂತೆ, ಅನರ್ಘ್ಯ ರತ್ನದಂತೆ ನೋಡಿಕೊಂಡಿಲ್ಲವೆಂದರೆ ಜಗ್ಗತ್ತಿಗೆ ನಾನು ಮಾಡುವ ಅನ್ಯಾಯ ಎಂದು ಭಾವಿಸಿ, ನಾನೇ ಚಂದ್ರ ಮೆಚ್ಚಿದ್ದ ಆ ಹುಡುಗಿ ಯಾರೆಂದು ಪತ್ತೆ ಮಾಡಿದೆ. ಒಂದು ಸಂಸಾರ ಉಳಿಯುತ್ತೆ ಅಂದರೆ ಆ ಪ್ರಯತ್ನ ಮಾಡಬೇಕಲ್ಲವೇ? `ನಾನ್ಯಾಕೆ ಅವರನ್ನು ಮಾತಾಡಲಿ? ಅವರಿಗೂ ನನಗೂ ಏನು ಸಂಬಂಧ? ಅದನ್ನೆಲ್ಲಾ ಅವರವರು ಬಗೆ ಹರಿಸಿಕೊಳ್ಳಲಿ, ಇಷ್ಟಕ್ಕೂ ನನಗೆ ಬುದ್ಧಿ ಹೇಳಲು ಬರುವುದಾದ್ರೆ ಅವರು ಭೇಟಿಯಾಗುವುದೇ ಬೇಡ’ ಎಂದೆಲ್ಲಾ ಆಹುಡುಗಿ ಮಾತಾಡುತ್ತಾಳೆ ಎಂದುಕೊಂಡಿದ್ದೆ. ಬದಲಿಗೆ, `ನಾನೂ ಅವರನ್ನು ಭೇಟಿಯಾಗಬೇಕು’ ಎಂದಿದ್ದಳು ತಣ್ಣಗೆ ಮತ್ತು ಅತ್ಯಂತ ಖಚಿತವಾಗಿ. ಅವಳ ಹೆಸರು ನಿಹಾರಿಕಾ. ಶ್ಯಾಮು ನಕ್ಕಿದ್ದಳು, `ಆಕಾಶದಲ್ಲಿರುವವರು ಆಕಾಶದಲ್ಲಿರುವವರನ್ನೇ ಹುಡುಕಿಕೊಳ್ಳುತ್ತಾರೆ ಅಲ್ಲವೇನೇ’ ಎಂದು. ನನಗೆ ಕೋಪ ಬಂದಿತ್ತು ಅವಳ ತಲೆಗೆ ಮೊಟಕಿ, `ಅಲ್ಲವೇ ಪೆದ್ದು ಹೆಸರಿಟ್ಟುಕೊಂಡ ಮಾತ್ರಕ್ಕೆ ಅವರು ಆಕಾಶವೇ ಆಗಿಬಿಡುವುದಿಲ್ಲ. ಈಗಲೂ ಪ್ರಯತ್ನಿಸಿಲ್ಲ ಅಂದರೆ ನಡುರಸ್ತೆಯಲ್ಲಿ ನಿಲ್ಲುತ್ತೀಯ ಎಂದೆ. ಬದುಕೇ ಹಾಗೆ ತೇಜೂ ಎಲ್ಲೆಲ್ಲೋ ತನಗಿಷ್ಟ ಬಂದ ಕಡೆ ನಿಂತು ಬಿಡುತ್ತೆ -ನಮ್ಮನ್ನೂ ನಿಲ್ಲಿಸಿಕೊಂಡು. ಅದಕ್ಕೆ ಯಾರ ಮಾತೂ ಕೇಳುವುದಿಲ್ಲ, ಯಾವ ಹಂಗೂ ಇರುವುದಿಲ್ಲ’ ಎಂದಳು. ನಿನಗೆ ಹೇಳಲು ಬಂದೆನಲ್ಲವೇ ಎಂದು ಕೋಪಿಸಿಕೊಂಡೆ. ಶ್ಯಾಮುವಿಗೆ ನನ್ನ ಮೇಲೆ ಕನಿಕರ ಹುಟ್ಟಿರಬೇಕು. `ಅಲ್ಲವೇ ನಾನು ಆ ಹುಡುಗಿಯನ್ನು ಮಾತಾಡಿಸಿ, ಎಲ್ಲಾ ಶ್ರಮ ಹಾಕಿ ಯಾಶಸ್ವಿಯೂ ಆದೆ ಅಂದು ಇಟ್ಟುಕೋ, ನಾನು ಸುಖಿಯಾಗುತ್ತೇನಾ? ಚಂದ್ರನನ್ನು ನೋಡಿದಾಗಲೆಲ್ಲಾ ಇವನು ಆ ಹುಡುಗಿಯ ಹಿಂದೆ ಹೋಗಿದ್ದ ಎನ್ನುವ ನೆನಪು ಬಾರದೇ ಹೋಗುತ್ತದೆಯೇನೇ. ಅಷ್ಟಕ್ಕೂ ಆ ಹುಡುಗಿಯಿಂದ ಚಂದ್ರನನ್ನು ಬಿಡಿಸಿಕೊಂಡು ಬಂದೆ ಅಂದಿಟ್ಟುಕೋ...’ ಎಂದು ಸ್ವಲ್ಪವೇ ಶ್ವಾಸವನ್ನು ತೆಗೆದುಕೊಂಡು, `ಅವಳೇನು ಅವನ ಸೆರೆಮನೆಯಾ? ಪಂಜರವಾ? ಬಿಡಿಸಿಕೊಂಡು ಬರಲಿಕ್ಕೆ? ಇವನೇನು ಗಿಳಿಯಾ ಸಿಂಹವಾ, ಕಳ್ಳನಾ? ಇದೂ ಭ್ರಮೆಯೇ ಅಲ್ಲವೇ ತೇಜೂ? ಆಯಿತು ಅದು ಗೆಲುವೇ ಇರಬಹುದು. ಆದರೆ ಮತ್ತೆ ಮತ್ತೆ ಗೆಲ್ಲುವ ಅನಿವಾರ್ಯತೆ ಹುಟ್ಟಿಕೊಂಡು ಬಿಟ್ಟರೆ ಏನೇ ಮಾಡಲಿ? ಯಾಕೆಂದರೆ ಬಿಟ್ಟು ಬಂದದ್ದರ ಕಡೆಗೆ ಸೆಳೆತ ಸದಾ ಇರುತ್ತದೆ ಕಣೇ’ ಎಂದಿದ್ದಳು.

ಅಗ್ನಿಯೂ ಮಲಿನವಾಗುವ ಹೊತ್ತೊಂದಿದೆ ಎಂದು ಜಗತ್ತು ಭಾವಿಸಲ್ಲ. ಸಂಬಂಧಗಳ ಪಾವಿತ್ಯ್ರತೆಯಲ್ಲಿ ಶ್ಯಾಮು ಯಾವತ್ತೂ ನಂಬಿಕೆ ಇಟ್ಟಿದ್ದಳು. ಕಳಚಿಬಿಡು ಸಂಬಂಧದ ಹಂಗು ಅಲ್ಲಿ ನಾನೂ ನೀನು ಎಲ್ಲವೂ ದೇಹಗಳು ಮಾತ್ರವೇ. ವ್‌ಂಛೆಗಳು ಬಂದಾಗ ಆಳದಲ್ಲಿ ಮಲಗಿದ್ದ ಅಹಂ ಸರ್ಪದ ಹಾಗೆ ತಲೆ ಎತ್ತಿ ಯಾರನ್ನು ಕಚ್ಚಿ ಒಳಗಿನ ವಿಷವನ್ನು ಖಾಲಿ ಮಾಡಿಕೊಳ್ಳಲಿ ಎಂದು ಕಾಯುತ್ತದೆ’ ಎಂದಿದ್ದಳು. `ಆಯ್ತಮ್ಮಾ ನಿನ್ನ ಮಾತನ್ನು ನಾನೂ ಒಪ್ಪುತ್ತೇನೆ. ಇರುವೆಗಳು ತನಗಿಂತ ಹೆಚ್ಚಿನ ಭಾರವನ್ನು ಹೊರಬಲ್ಲವು ನಿಜ, ಹಾಗಂತ ಮನುಷ್ಯನನ್ನೋ, ಆನೆಯನ್ನೋ ಹೊತ್ತೊಯ್ಯಲು ಸಾಧ್ಯವೇ? ಯಾವುದನ್ನು ಯಾವಾಗ ಯೋಚಿಸಬೇಕೋ ಅದನ್ನು ಮಾತ್ರ ಯೋಚಿಸು ಶ್ಯಾಮು’ ಎಂದು ಎಚ್ಚರಿಸಿದ್ದೆ. ಬಹುಶಃ ಇದೊಂದೇ ಹೊತ್ತಲ್ಲಿ ಅನ್ನಿಸುತ್ತೆ ನಾನು ಶ್ಯಾಮುವನ್ನು ಆ ಪಾರಿ ಬೈದದ್ದು, ಖಡಕ್ಕಾಗಿದ್ದು.

ಈ ಅಂಕಣದ ಹಿಂದಿನ ಬರೆಹಗಳು:
ಶಾಶ್ವತ ಭಾವವೊಂದು ಎದೆಯಲ್ಲಿ ಮೊಳೆಯುವುದು ಅದೃಷ್ಟ
ಅಮೃತ ಸುರಿಸುವ ರಾತ್ರಿಗಳು ಏನನ್ನು ಹೆಪ್ಪಾಗಿಸುತ್ತವೆ?
ನಮ್ಮನ್ನು ಕಾಣಿಸಲು ನಡುಹಗಲೇ ಬೇಕಿಲ್ಲ!
ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು
ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು.
ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...