ಶಾಶ್ವತ ಭಾವವೊಂದು ಎದೆಯಲ್ಲಿ ಮೊಳೆಯುವುದು ಅದೃಷ್ಟ

Date: 09-05-2023

Location: ಬೆಂಗಳೂರು


''ನಮ್ಮದಲ್ಲದ ಕಣ್ಣುಗಳು ನಮಗೆ ಏನನ್ನೂ ಹೇಳಲಾರವು. ದ್ವೇಶ, ಅಭಿಮಾನ ಕಡೆಗೆ ಕೃತಜ್ಞತೆಯನ್ನೂ ಕೂಡಾ. ಗೆಲ್ಲುವ ಅಗತ್ಯ ನಮಗ್ಯಾರಿಗೂ ಇಲ್ಲ. ಗೆಲುವು ನಮ್ಮ ಗುರಿಯೂ ಅಲ್ಲ. ಎಷ್ಟೋ ಸಲ ಗೆಲುವು ಎನ್ನುವ ಪದವೇ ಕಡ ಅನ್ನಿಸಿದೆ. ನಾನಲ್ಲದ ಸ್ಥಿತಿಯಲ್ಲಿ ಬದುಕುವುದು ನಾನಾರೆಂದು ಹುಡುಕಾಟ ನಡೆಸುವುದು ಯಾವುದಕ್ಕೂ ಅರ್ಥವಿಲ್ಲ ತೇಜೂ,'' ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ನಡೆಯದ ಬಟ್ಟೆ ಅಂಕಣದಲ್ಲಿ ‘ಶಾಶ್ವತ ಭಾವವೊಂದು ಎದೆಯಲ್ಲಿ ಮೊಳೆಯುವುದು ಅದೃಷ್ಟ' ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

ಹಕ್ಕಿಯ ರೆಕ್ಕೆಗೆ ಗಾಳಿಯನ್ನು ತಳ್ಳುವ ತಾಕತ್ತಿರುವುದರಿಂದಲೇ ಅದು ಮೇಲಕ್ಕೆ ಹಾರುತ್ತದೆ. ಮೇಲಕ್ಕೆ ಹಾರುತ್ತಾ ಗಾಳಿಯನ್ನು ವರ್ತುಲ ಮಾಡಿ ತಿರುಗಿಸುತ್ತಾ ಶೂನ್ಯಕ್ಕೆ ಆಕಾರ ಬರುವ ಹಾಗೆ ಮಾಡುತ್ತದಲ್ಲ ಆಗ ಅದು ಪ್ರಕೃತಿಯ ಪರಿಪೂರ್ಣ ರೂಪ ಅನ್ನಿಸಿಬಿಡುತ್ತೆ. ಮನಸ್ಸು ವಿರಮಿಸುತ್ತೆ, ಪ್ರಕೃತಿಯ ಈ ಪ್ರಬುದ್ಧತೆ ಆಕಸ್ಮಿಕವೇ ಅಥವಾ ಕೌಶಲ್ಯಪೂರ್ಣವೇ? ಯಾವ ಉತ್ಸಾಹ ಶ್ರದ್ಧೆಗಳು ಅದನ್ನು ಹೀಗೆ ಆಗು ಮಾಡಿತೇ? ಖಚಿತವಾಗುವ ಆ ಆಕೃತಿಯಲ್ಲಿ ಅಪಾರವಾದ ನಂಬಿಕೆಯಿದೆಯಲ್ಲಾ ಅದು ಯಾರದ್ದೆ? ಮೂಡುವ ಆಕಾರಗಳಿಗೆ ಯಾವುದು ಆಧಾರ; ಕಲ್ಪನೆಯೇ, ವಾಸ್ತವವೇ ಅಥವಾ ಎರಡರ ಅರ್ಥಪೂರ್ಣವಾದ ಹೊಂದಾಣಿಕೆಯೇ?

ಬಹುಹಿಂದೆ ನನಗೊಂದು ಕನಸು ಬಿದ್ದಿತ್ತು ತೇಜೂ ವಾಸ್ತವವಾಗಿ ಅದನ್ನು ನಾನು ಕನಸೆಂದು ಈಗಲೂ ನಂಬಲ್ಲ. ನಂಬ ಬೇಕಾಗೂ ಇಲ್ಲ ಯಾಕೆಂದರೆ ಕನಸಲ್ಲಿಯಾದರೂ ವಾಸ್ತವದಲ್ಲೇ ಆದರೂ ಎರಡೂ ಕಡೆ ನಾನೇ ಇರುವುದರಿಂದ ಇನ್ನೊಬ್ಬರನ್ನು ಒಪ್ಪಿಸುವ ಜರೂರು ಬೀಳುವುದೇ ಇಲ್ಲ. ಇಟ್ಸ್ ಪ್ಯೂರ್ಲಿ ಪರ್ಸನಲ್. ಹಾ ಕನಸಲ್ಲಿ ಏನಾಯಿತು ಎಂದೆನಲ್ಲಾ! ಮೊದಲ ಸಲ... ಮೊದಲ ಸಲ ಶ್ರದ್ಧೆ ಎಂದು ಅರಿವೂ ಆಗದ ವಯಸ್ಸಿನಲ್ಲಿ ಎದೆಯಲ್ಲಿ ಗೂಡುಕಟ್ಟಿದ ಸಾವಿರ ಆಪೇಕ್ಷೆಗಳು ನನ್ನ ಕೈಗಳಿಂದ ಗೆರೆಯನ್ನು ಬಯಸಿತಲ್ಲವೇ! ಚೋದ್ಯದ ಸಂಗತಿ ಎಂದರೆ ಆ ಕ್ಷಣ ನನ್ನನ್ನು ಯಾರೋ ಕರೆದರು. ಎಲ್ಲಾ ಅಸ್ಪಷ್ಟ. ನಾನದುವರೆಗೆ ಎಂದೂ ಕಂಡಿರದ ಆದರೆ ನೋಡಿದ ತಕ್ಷಣ ಆಪ್ತ ಎನ್ನಿಸುವ ಕಂಗಳು ಸಿಕ್ಕಾಪಟ್ಟೆ ಡಿಸ್ಟರ್ಬ್ ಅನ್ನಿಉವಂತಿತ್ತು. ಉದ್ದದ ಗಡ್ಡ, ಬಿಳಿಯದಾದ ಬಟ್ಟೆ ಮಾಸಲಾಗಿತ್ತು. ವಯಸ್ಸು ಊಹುಂ ಗೊತ್ತಿಲ್ಲ. ಈಗಲೂ ನನಗೆ ಗೊತ್ತಾಗಲ್ಲ. ಯಾರನ್ನು ನೋಡಿದರೂ ಎಷ್ಟು ವಯಸ್ಸೆಂದು ಹೇಳಲು ಬರುವುದಿಲ್ಲ. `ಯಪ್ಪಾ ದೇವ್ರೆ ಇಷ್ಟು ವಯಸ್ಸಾಗಿದ್ಯಾ ನಿಮ್ಗೆ?’ ಅಂತಲೋ `ಇಷ್ಟೊಂದು ಯಂಗಾ ನೀವು’ ಎಂದು ಹೇಳಿ ಎದುರಿರುವವರನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತೇನೆ. ಅವನ ಕೈಲೊಂದು ಕೋಲಿತ್ತಲ್ಲವೇ! ಅದೂ ಸೇಮ್ ನನ್ನ ಕೈಲಿದ್ದಂಥದ್ದೆ. ಹುಚ್ಚು ನಗೆ ಬೀರುತ್ತಾ ಅವನು ಹೇಳಿದ್ದ, `ಗೆರೆ ಹಾಕು ಅದು ನಿನ್ನ ಹಿಂಬಾಲಿಸುತ್ತದೆ’. ನಾನೂ ಅವನೂ ಇಬ್ಬರೂ ಸೇರಿ ಒಂದೊಂದು ಗೆರೆ ಹಾಕಿದ್ದೆವು. ಅವನು ಆ ಗೆರೆ ಹಾಕಿ ಎಲ್ಲೋ ಮಾಆಯವಾಗಿದ್ದ ಗೆರೆ ಮಾತ್ರ ಅವನು ಬಂದದ್ದು ಸತ್ಯ ಎನ್ನುವ ಹಾಗೆ ನನ್ನ ಮುಂದೆ ಮೂರ್ತವಾಗಿತ್ತು. ಅಂದು ಹಾಕಿದ ಆ ಗೆರೆ ನನ್ನ ಹಿಂಬಾಲಿಸುತ್ತಲೇ ಇತ್ತು. ಆದರೆ ಅದಕ್ಕೆ ಜೀವ ಕೊಡುವ ಶಕ್ತಿ ನನಗೆ ಇತ್ತೋ ಇಲ್ಲವೋ ಗೊತ್ತಿರಲಿಲ್ಲ. ಒಮ್ಮೆ ಬಂದದ್ದು ಹೋಗುತ್ತದೆಯೇ? ಗೆರೆ ಹಾಕುವುದನ್ನು ಕಲಿತೆನಲ್ಲವೆ? ಹಾಗೆ ಕಲಿತಿದ್ದರಿಂದ ಅದನ್ನು ಮತ್ತೆ ಮತ್ತೆ ಕಲಿಯುತ್ತಲೇ ಇದ್ದೇನೆೆ. ಕೆಲವೊಮ್ಮೆ ಅದು ಮಗುವಿನಂತೆ ಕೆಲವೊಮ್ಮೆ ಶಿಷ್ಯನಂತೆ, ಕೆಲವೊಮ್ಮೆ ಅಮ್ಮನಂತೆ ಕೆಲವೊಮ್ಮೆ ನಮ್ಮ ಗಣಿತದ ಮೇಷ್ಟçಂತೆ, ಚಂದ್ರನಂತೆ, ಹನಿಯಂತೆ, ನಿನ್ನಂತೆ- ಇನ್ನು ಕೆಲಮೊಮ್ಮೆ ಆಕ್ರಮಣ ಮಾಡುವ ಶತ್ರುವಿನಂತೆ, ಹೀಗೆ ಶಕ್ತಿ- ದೌರ್ಬಲ್ಯದಂತೆ, ಇನ್ನೂ ಮುಂದೆ ಹೋಗಿ ಆತ್ಮಘಾತಕನಂತೆ ಎಲ್ಲಾ ರಹಸ್ಯವನ್ನೂ ತನ್ನೊಳಗೆ ಅಡಗಿಸಿಕೊಂಡು ಒಂದೇ ಒಂದು ರೇಖೆಯಲ್ಲಿ ಜಗತ್ತಿನ ಶಕ್ತಿಯೆಲ್ಲವೂ ಸಂಚಯನವಾದಂತೆ... ಹೀಗೆ ಏನೇನೋ ಆಗಿ ನನ್ನೊಂದಿಗೆ ಬಂತಲ್ಲವೇ ತೇಜೂ ಅದು ನಾನೇ ಆಗಿ ನನ್ನ ಮೇಲಿನ ಗಮನವನ್ನು ನಾನೇ ಹರಿಸಿದಂತೆ ಏಕತ್ರಗೊಂಡಾಗ ನನ್ನೊಳಗಿನ ಆದಿಮ ರೇಖೆಯೊಂದು ಒಂದೇ ಆಯಮದಲ್ಲಿ ಪ್ರಕಟಗೊಂಡು ನನ್ನ ತಲ್ಲಣಗೊಳಿಸಿತ್ತು. ಆಗ ನಾನು ಪೂರ್ಣರೂಪದ ಬೆನ್ನು ಹತ್ತಿದ್ದೆ. ನನಗೆ ಗೊತ್ತಾದ ಸತ್ಯ ಏನು ಗೊತ್ತಾ, ಇಲ್ಲಿ ನಮಗೆ ಯಾವ ತಿಳುವಳಿಕೆಗಳೂ, ಯಾವ ಅಜ್ಞಾನವೂ ಕೆಲಸಕ್ಕೆ ಬರುವುದಿಲ್ಲ ಎಂದು. ಅವತ್ತು ಹಾಗೆ ಬಂದವ ಮತ್ತೆ ನನಗೆ ಯಾಕೆ ಕಾಣಿಸಿಕೊಳ್ಳಲಿಲ್ಲ?? ಇಷ್ಟಕ್ಕು ಅವನಾದರೂ ಯಾರೇ? ಎಷ್ಟೋ ಸಲ ಅನ್ನಿಸಿದೆ ನಾನು ನನಗೆ ಬೇಕಾದ ಯಾರಿಗೋ ಕಾಯುತ್ತಿದ್ದೇನೆ ಎಂದು. ಕಡೆಗೆ ಈ ಚಂದ್ರನೂ ನನ್ನವನಲ್ಲ ನನ್ನವ ಬೇರೆ ಯಾರೋ ಇದ್ದಾನೆ, ಅವನೊಂದಿಗೆ ಏನು ಮಾಡಿದರೂ- ಕಡೆಗೆ ಮಲಗುವುದಿದ್ದರೂ ಸರಿಯೇ ಅನ್ನಿಸಿಬಿಡುತ್ತೆ. ನಾವು ಹುಡುಕುವುದು ಏನನ್ನು? ಕೆಲವು ದಿನಗಳು ಇದು ನನ್ನ ಗೀಳಿನ ಹಾಗೆ ಕಾಡಿದ್ದು ನಿಜ ಕಣೇ. ಎಲ್ಲರಲ್ಲೂ ಹುಡುಕಾಟ ಇರುತ್ತೆ ಚಂದ್ರನ ಹುಡುಕಾಟ ಆ ಹುಡುಗಿಯೇ ಆಗಿದ್ದರೆ... ಇದ್ದಿರಲೂ ಬಹುದಲ್ಲವಾ? ಇದರಲ್ಲಿ ಯಾರದ್ದೇನು ತಪುö್ಪ. ಕಡೆಗೆ ಹೀಗೆ ಹೀಗೆ ಎಂದು ನಾವು ತಾನೆ ಎಲ್ಲವನ್ನೂ ಸೂತ್ರೀಕರಿಸಲಿಕ್ಕೆ ಹೊರಟುಬಿಡುವುದು. ಅದು ಅಲ್ಲ ಅಂತ ಇವತ್ತು ಕಂಡುಕೊಂಡಿಲ್ಲವಲ್ಲ ನಾವು!

ಬಾರೆಗೆ ದನಗಳನ್ನು ಕಟ್ಟಬಾರದು ಎನ್ನುವುದು ಸೂತ್ರವೇ ಅಥವಾ ಅನುಭವವೇ. ಉದ್ದಕ್ಕೆ ಬಿಟ್ಟ ಹಗ್ಗ ಅವುಗಳ ಕತ್ತಿಗೆ ಸುತ್ತಿ ಉರುಲಾಗಿದ್ದು ಎಷ್ಟು ನೋಡಿಲ್ಲ ನಾವು ಬಾಲ್ಯದಲ್ಲಿ? ಎಷ್ಟು ಸಹುಗಳು ಮಣ್ಣಲ್ಲಿ ಮಣ್ಣಾಗುವುದನ್ನೂ ಕೂಡಾ- ಹೀಗೆ ಕಟ್ಟಿದ್ದ ತಮ್ಮಯ್ಯಣ್ಣನ ಎಮ್ಮೆ ಹಾವನ್ನು ನೋಡಿ ಗಾಬರಿಯಿಂದ ಹಾರಿ ಅಲ್ಲೇ ಇದ್ದ ಕಲ್ಲಿಂದ ಏಣಿಗೆ ಗಾಯ ಮಾಡಿಕೊಂಡಿತ್ತಲ್ಲ ಅವತ್ತೆ ತಾನೆ ನಾನೂ ನೀನು ಆಶ್ಚರ್ಯ ಚಕಿತರಾದದ್ದು! ಅಲ್ಲಾ ಎಮ್ಮೆಗೂ ಭಯ ಆಗುತ್ತಾ? ಎಂದು ತಮ್ಮಣ್ಣಯ್ಯನನ್ನು ಕೇಳಿದಾಗ, ಅವನು ನಮ್ಮನ್ನು ಹುಚ್ಚರ ಥರ ನೋಡಿ ಜೀವ ಇರುವ ಯಾವುದಕ್ಕೂ ಭಯ ಇದ್ಡೇ ಇರುತ್ತೆ ಎಂದಿದ್ದನಲ್ಲವೇ, ಅವತ್ತಿನಿಂದ ತಾನೆ ನಾವು ಹುಡುಕಾಟ ಆರಂಭಿಸಿದ್ದು ಎಮ್ಮೆಗೆ ಭಯ ಆದರೆ ಅದು ಏನನ್ನು ಮಾಡುತ್ತೆ, ಜೋರಾಗಿ ಕೂಗುತ್ತಾ? ಹಲ್ಲುಗಳನ್ನು ಸ್ವಲ್ಪ ಸ್ವಲ್ಪವೇ ತೋರುತ್ತಾ ಮುಚ್ಚುತ್ತಾ ಗಂಟಲಾಳದಲ್ಲೇ ಧ್ವನಿಯನ್ನು ಅಡಗಿಸಿ ಮೇಲೆ ಮೇಲೆ ವಯ್ಯ್ ವಯ್ಯ್ ಅನ್ನುತ್ತಾ... ಹೀಗೆ ನಮ್ಮ ಪ್ರಶ್ನೆಗಳು ಉತ್ತರಗಳು ಸಾಲು ಸಾಲಿದ್ದವು. ಇಂಥಾ ಎಮ್ಮೆಗೆ ಹಾವು ಶತ್ರು ಎಂದು ಗೊತ್ತಾಗಿದ್ದು ಹೇಗೆ? ಸಣ್ಣ ಹಾವೊಂದು ಹರಿಯುತ್ತಿದ್ದರೆ ಏನೂ ಗೊತ್ತಿಲ್ಲದ ಎಮ್ಮೆಗೆ ಇರಲಿ, ಕರುವಿಗೂ ಅದು ಕಚ್ಚುತ್ತೆ ಅಂತ ಅರ್ಥ ಆಗುವುದು ಹೇಗೆ? ಎಲ್ಲಕ್ಕಿಂತ ಹೆಚ್ಚಾಗಿ ಅದು ತನಗಿಂತ ಬೇರೆಯೇ ಅದು ನಾನಲ್ಲ ಅಂತ ಅದಕ್ಕೆ ಗೊತ್ತಾದದ್ದು ಹೇಗೆ? ಎಂದು ಶ್ಯಾಮು ಕೇಳುತ್ತಿದ್ದರೆ ತೇಜುವಿಗೆ ಬೇರೆಯೇ ನೆನಪಾಗುತ್ತಿತ್ತು. ಹಾ ಶ್ಯಾಮು ನೀನು ಕೇಳಿದ್ದೆ ಅದ್ಯಾವ ಕನ್ನಡಿಯಲ್ಲಿ ಅದನ್ನು ನೋಡಿಕೊಂಡಿತೇ? ತಾನಲ್ಲದ ಇನ್ನೊಂದು ಜೀವ ಬಂದಿದೆ ಅಂದು ಅರಿವಾಗಲಿಕ್ಕೆ ಎಂದಿದ್ದೆಯಲ್ಲೇ? ಎಂದಾಗ ಶ್ಯಾಮು ಗಂಭೀರಳಾದಳು.

ಮೋಹಕತೆ ಯಾವತ್ತೂ ಉತ್ತರ ಅಂತ ನಾನು ಅಂದುಕೊಳ್ಳುವುದಿಲ್ಲ ತೇಜೂ, ಅವೆಲ್ಲವೂ ಸೆಣೆಸಾಟವಲ್ಲದೆ ಮತ್ತೇನು? ನನ್ನೊಳಗೆ ನಡೆವ ಯುದ್ಧಗಳಿಗೆ ಯಾವ ಹೆಸರನ್ನು ಕೊಡಲಿ? ಅಲ್ಲವೇ ನಾಯಿ, ಬೆಕ್ಕಿಗೆ ಹೆಸರಿಡುವವರು ನಾವಿಬ್ಬರೂ ಗಿಡದಲ್ಲಿ ಹಸುರಾಗಿ ಹತ್ತಿಕೊಂಡಿದ್ದ ಹುಳಕ್ಕೆ ಹೆಸರಿಟ್ಟಾಗ ಎಷ್ಟು ನಕ್ಕಿದ್ದರು ಹೇಳು? ಹಾಗೇ ನಾಯಿಗೆ ಮಾನ ಮರ್ಯಾದೆ ಇಲ್ಲ ಎಂದು ಯಾರೋ ಬೈದಾಗ ಅದಕ್ಕೆ ಬಟ್ಟೆ ಹಾಕಿ ನಮ್ಮ ಹಾಗೆ ಅದಕ್ಕೂ ಮರ್ಯಾದೆ ಬರುತ್ತೆ ಎಂದುಬಿಟ್ಟಿದ್ದೆನಲ್ಲಾ! ಬಟ್ಟೆ ಹಾಕಿದರೆ ಸಜ್ಜನಿಕೆ ಬರುತ್ತೆ ಅನ್ನುವುದಾದರೆ ನಮಗೆ ಇಷ್ಟು ಹೊತ್ತಿಗೆ ಎಂಥಾ ಎಚ್ಚರ ಬರಬೇಕಿತ್ತು ಗೊತ್ತಾ? ಬಾಲ್ಯವೇ ಹಾಗೆ ನೀನು ಎಷ್ಟು ಬಾಲ್ಯವನ್ನು ನೋಡು ಅಷ್ಟೂ ಬಾಲ್ಯಗಳು ಭಿನ್ನವೇ. ದೊಡ್ಡವರಾಗುತ್ತಾ ಏಕರೂಪವಾಗುವತ್ತ ಅವರಿವರನ್ನು ಅನುಕರಿಸುವತ್ತ ಸಾಗುತ್ತೇವೆ. ದೊಡ್ಡವರಾಗುತ್ತಾ ಮನೆಯ ತುಂಬಾ ಗೋಡೆಗಳೆದ್ದ ಹಾಗೆ ಮನಸ್ಸಿನ ತುಂಬಾ ಗೋಡೆಗಳನ್ನು ಎಬ್ಬಿಸಿಕೊಂಡು ಬಿಡುತ್ತೇವೆ. ಗೋಡೆಗಳನ್ನು ಛಿದ್ರ ಮಾಡದೆ ಏನೂ ಹುಟ್ಟಲಾರದು ಎನ್ನುವುದು ಗೊತ್ತಿದೆ ತೇಜೂ. ಜಗತ್ತಿನ ಎಲ್ಲವನ್ನೂ ನಾವು ಸುಂದರ ಮಾಡಲಿಕ್ಕೆ ಹೊರಟುಬಿಡುತ್ತೇವೆ, ಅದು ಎಂಥಾ ದೊಡ್ಡ ಅಪಾಯ ಗೊತ್ತಾ? ಕೊನೆಗೆ ಏನೂ ಸಿಗದೆ ಬೇಡಿಕೊಳ್ಳುವತ್ತ ಸಾಗಿಬಿಡುತ್ತೇವೆ. ನಮಗೆ ಚೆನ್ನಾಗಿಲ್ಲ ಅನ್ನಿಸಿಬಿಟ್ಟರೆ ಆಯಿತಲ್ಲಾ! ಅದನ್ನು ನಾವು ಒಪ್ಪುವುದೇ ಇಲ್ಲ. ಆದರೆ ಎಲ್ಲದಕ್ಕೂ ಒಂದೊಂದು ಜೀವ ಜೀವನ ಇದ್ದೇ ಇರುತ್ತದೆ. ಮುಖ್ಯ ಒಪ್ಪಿಕೊಳ್ಳಬೇಕು, ಆಗ ಯಾವ ಯುದ್ಧವೂ ಇರುವುದೇ ಇಲ್ಲ. ಆಗ ಹುಳಕ್ಕೆ ಇಡುವ ಹೆಸರೂ ಲೋಕ ಸಮ್ಮತವೇ.

ಏನು ಹೇಳುತ್ತಿದ್ದೆ ನಾನು ಕನಸಿನ ಬಗ್ಗೆ ಅಲ್ಲವಾ? ಹಾ ಮೊನ್ನೆಯಷ್ಟೇ ಅನಂತಕ್ಕೆ ತಾಕುವಂತೆ ಒಂದು ಗೆರೆಯನ್ನು ಹಾಕಿದ್ದೆ ಅದ್ಯಾಕೋ ಹಕ್ಕಿಯಾಗಿಬಿಟ್ಟಿತ್ತು. ಗೆರೆಯನ್ನು ಮತ್ತೆ ಮತ್ತೆ ಎಳೆಯುತ್ತಾ ಹೋದೆ ಆಗ ಒಂದೇ ಆಯಾಮದ ಆ ಹಕ್ಕಿ ಹಲವು ಆಯಾಮದಿಂದ ಆಕಾರ ಪಡೆದುಬಿಟ್ಟಿತ್ತು. ನೋಡಲಿಕ್ಕೆ ಹಕ್ಕಿಯೇ ಎದುರು ಕೂತಿದೆ ಎನ್ನುವ ಭ್ರಮೆ ಹುಟಿಸುವಷ್ಟು. ನನಗೆ ಅದರಲ್ಲಿ ಯಾಕೇ ಮೋಹಮೂಡಿತು ಗೊತ್ತಿಲ್ಲ. ನಾನು ಚಿಕ್ಕವಳಿದ್ದಾಗ ನನ್ನ ಹಕ್ಕಿ ಹಾರಬೇಕೆಂದುಕೊಳ್ಳುತ್ತಿದ್ದೆ. ಅದಕ್ಕೆ ದಾರಗಳನ್ನು ಕಟ್ಟಿ ಹಾರಿಸಿದ್ದೆ. ಹನಿ ಎರಡು, ಮೂರು ವರ್ಷದಾವಳಿದ್ದಾಗ ಅನ್ನಿಸುತ್ತೆ, ದಿನಾ ಸಂಜೆ ಆಕಾಶ ನೋಡುತ್ತಾ ಕುಳಿತುಕೊಳುತ್ತಿದ್ದ ಒಂದು ದಿನ ಅವಳು ಹಠ ಮಾಡಿ ತೆಗೆಸಿಕೊಂಡಿದ್ದ ಪಕ್ಷಿಗೆ, `ಬೆಲೂನನ್ನು ಕಟ್ಟಿಕೊಡು’ ಎಂದು ಕಾಡಿದ್ದಳು. `ಬೇಡ ಪುಟ್ಟ ಅಕಸ್ಮಾತ್ ಬೆಲೂನಿಗೆ ಕಟ್ಟಿದ್ದ ದಾರ ನಿನ್ನ ಕೈ ತಪ್ಪಿದರೆ ಪಕ್ಷಿ ಮತ್ತೆ ಸಿಗಲ್ಲ’ ಎಂದಿದ್ದೆ. `ಅದು ನನ್ನ ಕೈಗೆ ಸಿಗಬಾರದು, ಅಮ್ಮಾ ಅದು ಹಾರಿ ಹೋಗಬೇಕು, ಯಾಕೆಂದರೆ ಅದು ಪಕ್ಷಿ’ ಎಂದಿದ್ದಳು. ತೇಜೂ ನಾನು ದಂಗಾಗಿದ್ದೆ. ನಾನು ನನ್ನ ಕೈಲಿ ಎಲ್ಲವೂ ಸಿಗಬೇಕು ಎಂದು ಬಯಸಿದ್ದೆನಲ್ಲವೇ? ಪುಟ್ಟ ಹನಿ ನನಗಿಂತ ಭಿನ್ನ ಅನ್ನಿಸಿಬಿಟ್ಟಿತ್ತು. ಜಗತ್ತಿನ ಎಲ್ಲವೂ ಸ್ವತಂತ್ರ, ಎಲ್ಲವೂ ಲೀಲೆಗಳೆ. ಹಾಗೆ ಬಲೂನು ಕಟ್ಟಿ ಹಾರಿಬಿಟ್ಟ ಪಕ್ಷಿಯನ್ನು ನೋಡಿ ಟಾ ಟಾ ಎಂದು ಅವಳು ಕೈ ಆಡಿಸಿದ್ದ ಅವಳು ಮತ್ತೆಂದೂ ಅವಳು, `ಪಕ್ಷಿ ಬೇಕೆ’ ಎಂದು ಕೇಳಲಿಲ್ಲ. ಯಾರಾದರೂ ತಂದುಕೊಟ್ಟರೂ ಅವುಗಳ ಜೊತೆ ಆಡುತ್ತಿರಲಿಲ್ಲ. ಜೀವಂತ ಇಲ್ಲದ್ದರ ಮೇಲೆ ಅವಳು ಯಾವತ್ತೂ ಆಸೆ ಪಡಲೂ ಇಲ್ಲ. ಆಗ ನನ್ನೊಳಗೆ ಹುಟ್ಟಿದ್ದ ಬಯಕೆ ಜೀವಂತಿಕೆಯದ್ದು. ಎಳೆದ ಗೆರೆ ಗಾಢವಾಗುತ್ತಾ ದಟ್ಟವಾಗುತ್ತಾ ಜೀವಂತಿಕೆಯ ಭ್ರಮೆಯನ್ನು ಹುಟ್ಟಿಸುತ್ತಾ ನನ್ನೆದುರು ಕೂತಿತ್ತಲ್ಲ ಅದಕ್ಕೆ ಜೀವ ಹೇಗೇ ಕೊಡÀಲಿ? ಚಿಕ್ಕ ವಯಸ್ಸಿನಲ್ಲಿ ನಾವು ಕೇಳಿದ ಕಥೆಯಲ್ಲಿ ಆಯುಸ್ಸನ್ನು ದಾರೆ ಎರೆದು ಬದುಕಿಸುತ್ತಿದ್ದುದು ನೆನಪಾಯಿತು ಕಣೆ. ನಾನೂ ನೀನೂ ಮೊದಲ ಸಲ ಎಲೆ ಎಂದು ಹೆಸರಿಟ್ಟ ಆ ಪುಟ್ಟ ಹಸಿರು ಹುಳವನ್ನು ಬದುಕಿಸಲು ಯತ್ನಿಸಿದ್ದು. ಆಮೇಲೆ ಸತ್ತ ಪಕ್ಷಿಗಳ ಮುಂದೆ, ಹುಳು ಹುಪ್ಪಟೆಗಳ ಮುಂದೆ ಕುಳಿತು ನಮ್ಮ ಜೀವವನ್ನು ಅವುಗಳ ಎದೆಗಿಟ್ಟು ಬದುಕಿಸಲು ಶತ ಪ್ರಯತ್ನ ಮಾಡುತ್ತಿದ್ದೆವಲ್ಲಾ ನಿನಗೆ ನೆನಪಿರಬೇಕು, ಅಂಥಾ ಒಂದು ಗಿಳಿಯನ್ನು ತಂದು ನಮ್ಮ ರೂಂನಲ್ಲಿಟ್ಟುಕೊಂಡು ನ್ವೇ ಮಂತ್ರಗತ್ತಿಯರೇನೋ ಎನ್ನುವಂತೆ ಪ್ರಾಣ ಎರೆಯುವ ಪ್ರಯತ್ನ ಮಾಡಿದ್ದು. ಆ ಗಿಳಿ ಬೆಳಗಿನ ಹೊತ್ತಿಗೆ ದುರ್ನಾತ ಬೀರುತ್ತಾ, ಮಂಚದ ಕೆಳಗೆ ಬಿದ್ದಿದ್ದರೆ ಮನೆಯವರೆಲ್ಲಾ ಮೂಗು ಮುಚ್ಚಿಕೊಂಡು ಓಡಾಡಿದ್ದು, ಏನಿರಬಹುದು? ಎಂದು ಹುಡುಕಿದ ಅವರಿಗೆ, ಇದೆಲ್ಲಾ ನಮ್ಮ ಸಾಹಸ ಎಂದು ಗೊತ್ತಾದದ್ದೇ ತಡ, ಬೀಳುವ ಏಟನ್ನು ನೆನೆಸಿಕೊಂಡು ನಾವಿಬ್ಬರೂ ಫರಾರಿಯಾಗಿದ್ದು. ಆಚೆ ಮನೆ ಗೋವಿಂದು ಅಂತೂ ನಮ್ಮನ್ನು ಪರಾರಮ್ಮಗಳು ಎಂದೆ ಹೆಸರಿದ್ದನಲ್ಲಾ. ಎಂಥಾ ಸಾಹಸಮಯ ಬದುಕಲ್ಲವೇ ನಮ್ಮದು! ಇಂಥಾ ಹಿನ್ನೆಲೆಯ ನಾನು ಇನ್ನು ಹೇಗೆ ಅಂದುಕೊಳ್ಳಲು ಸಾಧ್ಯ ಅವತ್ತು ಸಾಧ್ಯವಾಗದ್ದು ಇಷ್ಟು ದೊಡ್ಡವಳಾದ ಮೇಲೂ ಇವತ್ತೇನಾದರೂ ಸಾಧ್ಯವಾಗಬಹುದೇ ಎಂದು ಮಗುವ ಮನಸ್ಸಿಂದಲೇ ಸುಮ್ಮನೆ, ನನ್ನ ಎದೆ ಮೇಲೆ ಕೈ ಇಟ್ಟು, `ನನ್ನೊಳಗಿನ ಆತ್ಮವೇ, ಈ ಹಕ್ಕಿಯೊಳಗೂ ಹೋಗು. ಈ ಹಕ್ಕಿ ಹಾರಿ ಹೋಗಲಿ’ ಎಂದೆ. ನನ್ನ ಇಚ್ಚೆ ಪ್ರಬಲವಾಗಿತ್ತ್ತು. ನಂಬಿಕೆ ದುರ್ಬಲವಾಗಿತ್ತು. ಜಗತ್ತು ಒಂದು ಕ್ಷಣ ಅಲುಗಿಬಿಟ್ಟಿತು ತೇಜೂ ನನ್ನ ಹಕ್ಕಿಯೊಳಗೆ ನನ್ನ ಜೀವ ಸೇರಿಹೋಗಿತ್ತು. ಹಕ್ಕಿ ಸಣ್ಣದಾಗಿ ತನ್ನ ರೆಕ್ಕೆಯನ್ನು ಆಡಿಸಿತಲ್ಲ ಎದೆ ತಲ್ಲಣಿಸಿಬಿಟ್ಟಿತ್ತು. ಇಚ್ಚೆಗೆ ಸಹಸ್ರ ಟಿಸಿಲ ಸಂಭ್ರಮ ಹುಟ್ಟುವ ಹಾಗೆ ರೆಕ್ಕೆಯ ಪಟಪಟಿಸಿ ಆಕಾಶಕ್ಕೆ ಏರಿತ್ತು. ನಾನು ತಣ್ಣಗೆ ಕುಳಿತುಬಿಟ್ಟೆ ಆ ಕ್ಷಣ ಇದೆಯಲ್ಲ ಅದು ಕಣೆ ನಿಜವಾಗಲೂ ನನಗೆ ನಾನೇ ವಿಕ್ಷಿಪ್ತಳು ಅನ್ನಿಸಿದ್ದು. ಜಗತ್ತಿನಲ್ಲಿ ನಡೆಯಲಾಗದ್ದು ನಡೆದದ್ದಕ್ಕೆ ನಾನು ಸಾಕ್ಷಿಯಾದೆನಲ್ಲಾ?!

ಆ ಪಕ್ಷಿ ಹಾರಿ ಹೋಗಲಿ ಎಂದೇ ನನಗೂ ಅನ್ನಿಸಿತ್ತು ಅದು ಹನಿ ಕಲಿಸಿದ ಪಾಠ, ಮನಸ್ಸು ಕಹಿಯಾಗಿತ್ತು ಅದು ಹೋಗಿದ್ದಕ್ಕೆ, ಅಷ್ಟು ಮಾತ್ರವಲ್ಲ ನನ್ನ ಜೀವಿತದ ಆಯುಷ್ಯದ ಒಂದಿಷ್ಟು ದಿನಗಳನ್ನು ಹೊತ್ತೊಯ್ದದ್ದಕ್ಕೆ. ಆದರೆ ಆ ಹಕ್ಕಿ ಮತ್ತೆ ನನ್ನ ಬಿಟ್ಟು ಹೋಗದ ಇಚ್ಚೆಯಲ್ಲಿ ನನ್ನ ಹುಡುಕಿ ಬಂದಿತ್ತು ಕಣೆ, ನಿಜ ಹೇಳಲಾ? ಅದರಲ್ಲಿ ನನ್ನ ರೇಖೆಗಳನ್ನು ಹುಡುಕಿದೆ ಸಿಗಲಿಲ್ಲ. ಹುಟ್ಟಿಗೆ ಕಾರಣವಾದ ಪುರಾವೆಯನ್ನು ಅಳಿಸಿಕೊಂಡು ಅದು ನನ್ನೆದುರೇ ಕುಳಿತಿತ್ತು. ನನಗೋ ಒಂದು ಕ್ಷಣ ವಿಶ್ವವನ್ನೇ ಗೆದ್ದು ಬೀಗುವ ಹಾಗಾಗಿತ್ತು. ಇದು ನನ್ನದೇ, ಆದರೆ ಇದರಲ್ಲಿ ನನ್ನ ಗೆರೆಗಳು ಕರಗಿಹೋಗಿವೆ, ಈಗ ಇದು ನನ್ನದಾಗಿ ಉಳಿದಿಲ್ಲ. ಇತ್ತು ಮತ್ತು ಇಲ್ಲಗಳ ನಡುವೆ ಎಂಥಾ ದೊಡ್ಡ ಗೆಲುವೂ ಅಲ್ಲದ ಸೋಲೂ ಅಲ್ಲದ ಇದ್ಯಾವ ಸ್ಥಿತಿ? ಆಗಲೇ ನೋಡು ಇನ್ನೊಂದು ಅಂಥಾದ್ದೆ ಹಕ್ಕಿ ನನ್ನ ಹಕ್ಕಿಗೆ ಜೊತೆಯಾಗಿದ್ದು. ನನಗೂ ಅಚ್ಚರಿಯಾಯಿತು ಇದ್ಯಾರು ನನ್ನ ಹಕ್ಕಿಯ ಹಾಗೆ ಗೆರೆ ಕೊರೆದು ಅನಂತಕ್ಕೆ ತಾಕುವ ಹಾಗೆ ಬರೆದದ್ದು? ಅದಕ್ಕೆ ಎದೆಯ ಉಸಿರ ಎರೆದು ಜೀವ ತುಂಬಿದ್ದು?! ಹೇಗೋ ಬಿಡು ನನ್ನ ಹಕ್ಕಿಗೂ ಒಂದು ಜೊತೆಯಾಯಿತಲ್ಲ ಅಂದುಕೊಂಡೆ. ಎರಡು ಅಂಗಳದಲ್ಲಿ ಆಡುತ್ತಲಿದ್ದವು. ಸೋಜಿಗ ಆಡಿದ ಗಾಳಿಗೆ ತನ್ನ ಕೆಳಗೆ ಏನಿದ್ದರೂ ಅದರ ಗಂಧವ ಹೊತ್ತು ತರುವ ಗುಣವಿರುವಂತೆ ಅವನು ಬಂದ ಎಲ್ಲಿಂದಲೋ - ನನ್ನ ಕೈಲಿ ರೇಖೆಗೆ ಆಳವನ್ನು ಕಲಿಸಿದವನು, ಜೀವಂತವಾಗಿ ಅದನ್ನು ನಾನು ಹೊತ್ತು ಸಾಗಲು ಹೇಳಿಕೊಟ್ಟವನು, ಸಫಲತೆಯ ಮಂತ್ರದಂಡವ ಕೈಗೆ ಕೊಟ್ಟವನು.

ದಿಕ್ಕೆಟ್ಟವನಂತೆ ಅವನು ಬಂದಿದ್ದ ಅದೇ ಮಾಸಲು ಬಿಳಿ ಬಣ್ಣದ ಬಟ್ಟೆ, ವಯಸ್ಸಾಗಿದ್ದಕ್ಕೆ ಸಾಕ್ಷಿಯಿಲ್ಲ. ಅಂದಿನಷ್ಟೇ ಅಲ್ಲಲ್ಲಿ ಅರೆನೆರೆತ ಕೂದಲು. ಅವನ ಕೈಲಿ ಅವತ್ತು ನನ್ನ ಕೈಲಿತ್ತಲ್ಲ ಅದೇ ಕೋಲು, ಡೌಟೇ ಇಲ್ಲ ಕಣೆ. ಅದರಲ್ಲಿ ಯಾರು ಯಾರಿಗೆ ಗೆರೆಯ ಪಾಠ ಹೇಳಿದ್ದಾನೋ, ಎಷ್ಟು ಜನರ ಎದೆಯಲ್ಲಿ ಇಂಥಾ ಹುಚ್ಚಿನ ಕಿಚ್ಚು ಹತ್ತಿಸಿ ವಿಕ್ಷಿಪ್ತಗೊಳಿಸಿದ್ದನೋ, ಅವನೇ ಗೆರೆಯಂತೆ ಬಂದು ನನ್ನೆದುರಿದ್ದ. ಅವನ ಕಣ್ಣುಗಳಲ್ಲಿ ಹುಡುಕಾಟವಿತ್ತು, ಏನನ್ನೊ ಕಳಕೊಂಡ ನೋವಿತ್ತು. ನನಗೆ ಅವ ಚೆನ್ನಾಗಿ ಗೊತ್ತಿತ್ತು, ಆದರೆ ನಾನು ಅವನ ಗುರುತಿಗೂ ಇರಲಿಲ್ಲ. ಅವನಿಗೆ ನನ್ನ ಕಡೆಗೆ ಗಮನವೂ ಇರಲಿಲ್ಲ. `ವ್ಯರ್ಥವಾಯಿತು’ ಎಂದು ಬಡಬಡಿಸುತ್ತಿದ್ದ. ನಾನು ತಡೆದೆ `ಏನಾಯಿತು?’ ಎಂದೆ. `ಇಲ್ಲಿ ನನ್ನ ಹಕ್ಕಿ ಬಂದಿತೆ?’ ಎಂದ. ನನಗೆ ಪೂರ್ಣ ಅರ್ಥವಾಗಿತ್ತು. ನನ್ನ ಹಾಗೆ ಹಕ್ಕಿಯ ಕೊರೆದು ಬರೆಯಲು ಅದರೆದೆಗೆ ಜೀವ ಇಡಲು ಇವನಲ್ಲದೆ ಬೇರೆ ಯಾರಿಗೆ ಸಾಧ್ಯವೆಂದು. ಅಂಗಳದಲ್ಲಿ ಆಡುತ್ತಿದ್ದ ಹಕ್ಕಿಗಳತ್ತ ತೋರಿಸಿ, `ನಿನ್ನ ಹಕ್ಕಿ ಇದಾ?’ ಎಂದೆ. ಹುಂ ಎಂದು ತಲೆ ಆಡಿಸಿದ. ನಿನ್ನ ಹಕ್ಕಿಯ ತೆಗೆದುಕೋ ಎಂದೆ. ಕ್ಷಣ ಕಾಲ ದಿಟ್ಟಿಸಿ ಬೇಡ ಎನ್ನುವಂತೆ ತಲೆ ಆಡಿಸಿ ಹೊರಟ. ನಾನು ಅವನನ್ನು ತಡೆದೆ ಅಷ್ಟು ದೂರದಿಂದ ಬಂದಿದ್ದೀಯ ನಾವಿಬ್ಬರೂ ಯಾಕೆ ಮಾತಾಡಬಾರದು ಎಂದೆ. ಅವನು ಮಾತಾಡುತ್ತಲೇ ಇದ್ದ. ನಾನು ಕಂಡುಕೊAಡಿದ್ದೆ ಆದಿಯಲ್ಲಿದ್ದುದನ್ನೂ ಅಂತ್ಯದಲ್ಲಿ ಉಳಿದದ್ದನ್ನೂ. ವಿವರಿಸಲು ಏನಿದೆ? ಎಲ್ಲವೂ ಸಹಾಜ ಸರಳ ಅವನು ಮಾತಾಡುತ್ತಲೇ ಬೆಳಕಾಗಿ ಹೋದ, ನಾನು ಅವನಲ್ಲಿ ಬೆರೆತು ಹೋದೆ. ಅಂಗಳದಲ್ಲಿ ಆಡುತ್ತಿದ್ದ÷ಹಕ್ಕಿಗಳಿಗೆ ಈಗ ನಾಕಾರು ಮರಿಗಳಿವೆ. ಒಳಗೇ ಆಡುವ ಮಾತುಗಳು ಕೊನೆಯಿಲ್ಲದವಾಗಿ ನಾವು ಲೋಕದಿಂದ ದೂರದವರಾಗಿಬಿಟ್ಟಿದ್ದೆವು.

ಕನಸು ಮುಗಿಯಿತೇ? ಇಲ್ಲ ಅದೂ ಅನವು ಬರೆಸಿದ ಗೆರೆಯ ಹಾಗೆ ಹಿಂಬಾಲಿಸಿ ಬೇರೆ ಬೇರೆ ಆಕಾರಗಳಲ್ಲಿ ಪ್ರಕಟವಾಗುತ್ತಾ ಈಗಲೂ ಕಾಡುತ್ತಿದೆ. ಶಾಶ್ವತವಾದ ಭಾವವೊಂದು ಎದೆಯಲ್ಲಿ ಮೊಳೆಯುವುದು ಅದೃಷ್ಟ. ಇಲ್ಲ ಕಣೆ ಇದನ್ನು ನೀನು ಕಲ್ಪನೆ ಎನ್ನು, ಚಂದ್ರಾ ಭ್ರಮೆ ಎನ್ನಲಿ, ಹನಿ, `ಅಮ್ಮಾ ವಾಸ್ತವದಲ್ಲಿ ಬದುಕು’ ಎಂದರೂ, ಯಾರೋ ನನಗೆ ದ್ರೋಹ ಮಾಡುತ್ತಿದ್ದಾರೆ ಎನ್ನುವ ಭಾವ ನನ್ನಲ್ಲಿ ಹುಟ್ಟುವುದಿಲ್ಲ. ಯಾಕೆಂದರೆ ನಾನು ಸದಾ ನನ್ನ ಸಂದೇಹಗಳನ್ನು ದಾಟುತ್ತಲೇ ಇರಬೇಕಾಗುತ್ತದೆ. ಒಪ್ಪಿಸಬೇಕಿರುವುದು ನನ್ನನ್ನು ಮಾತ್ರ.

ನಮ್ಮದಲ್ಲದ ಕಣ್ಣುಗಳು ನಮಗೆ ಏನನ್ನೂ ಹೇಳಲಾರವು. ದ್ವೇಶ, ಅಭಿಮಾನ ಕಡೆಗೆ ಕೃತಜ್ಞತೆಯನ್ನೂ ಕೂಡಾ. ಗೆಲ್ಲುವ ಅಗತ್ಯ ನಮಗ್ಯಾರಿಗೂ ಇಲ್ಲ. ಗೆಲುವು ನಮ್ಮ ಗುರಿಯೂ ಅಲ್ಲ. ಎಷ್ಟೋ ಸಲ ಗೆಲುವು ಎನ್ನುವ ಪದವೇ ಕಡ ಅನ್ನಿಸಿದೆ. ನಾನಲ್ಲದ ಸ್ಥಿತಿಯಲ್ಲಿ ಬದುಕುವುದು ನಾನಾರೆಂದು ಹುಡುಕಾಟ ನಡೆಸುವುದು ಯಾವುದಕ್ಕೂ ಅರ್ಥವಿಲ್ಲ ತೇಜೂ. ಇದೂ ಒಂದು ಥರದರಲ್ಲಿ ಹುಡುಕಾಟವೇ ಕಣೆ, ಮುಂದೇನಾಗುತ್ತೆ ಅಂತ ನಮಗೂ ಗೊತ್ತಿಲ್ಲ. ನಮ್ಮನ್ನು ನೋಡುವವರಿಗೂ ಗೊತ್ತಿಲ್ಲ. ಅಂದರೆ ಅಲ್ಲಿ ಇರುವುದೆಲ್ಲಾ ಕಲ್ಪನೆ ಮಾತ್ರವೇ ತಾನೇ. ಇಂಥಾ ಅದ್ಭುತ ಕಲ್ಪನೆ ಇಂದು ನೆನ್ನೆಯದಲ್ಲ.

ಓದಲು ಬೇಸರಿಸುತ್ತಿದ್ದ ನನಗೆ ಅಜ್ಜಿಯ ಊರಿನಲ್ಲಿ ಕತ್ತೆಯನ್ನು ಮೇಯಿಸಲು ಕಳಿಸುವೆ ಎಂದಿದ್ದಳಂತೆ ಅಮ್ಮ. ಐದು ವರ್ಷದ ಪುಟ್ಟ ಹುಡುಗಿಗೆ ಆ ಊರಿನ ತುಂಬೆಲ್ಲಾ ಕತ್ತೆಗೆಳೇ ಇರಬೇಕು ಎನ್ನುವ ಕಲ್ಪನೆ ಬಂದುಬಿಟ್ಟಿತ್ತೆಂದು ತೋರುತ್ತದೆ. ಅಜ್ಜಿಯ ಊರಿಗೆ ಹೋಗುವ ದಾರಿಯಲ್ಲಿ ಕೆರೆಯೊಂದು ಬರುತ್ತದೆ. ವಿಶಾಲವಾದ್ದು ಈಗಲೂ ಒಮ್ಮೊಮ್ಮೆ ಅದನ್ನು ನೋಡಬೇಕೆನ್ನಿಸುತ್ತದೆ. ಏರಿಯ ಮೇಲೆ ಹೋಗುವಾಗ ನಿಂತ ನೀರನ್ನು ನೋಡಿ ನಾನು, `ಅಮ್ಮ ನೋಡಲ್ಲಿ ಅಜ್ಜಿಯ ಊರಿನ ಎಲ್ಲಾ ಕತ್ತೆಗಳೂ ಬಂದು ಇಲ್ಲೇ ಉಚ್ಚೆ ಮಾಡಿವೆ’ ಎಂದಿದ್ದನಂತೆ. ಈ ಕಥೆಯನ್ನು ಅಮ್ಮ ನನಗೆ ಹೇಳಲಿಲ್ಲ. ಇಂಥಾದ್ದನ್ನು ಅಮ್ಮ ಯಾವತ್ತೂ ಸಂಭ್ರಮಿಸಲೂ ಇಲ್ಲ. ಚಿಕ್ಕಿ ಹೇಳುವಾಗ ಅವಳ ಕಣ್ಣುಗಳಲ್ಲಿ ನಕ್ಕೂ ನಕ್ಕೂ ನೀರಿತ್ತು. ಅಲ್ಲವೇ ನನಗೆ ಆ ಕಲ್ಪನೆ ಬಂದಿದ್ದಾರೂ ಎಲ್ಲಿಂದ? ಹುಟ್ಟಿನ ಮೂಲದಲ್ಲೇ ಇಂಥಾದ್ದು ನನ್ನೊಳಗೆ ಅಡಕವಾಗಿತ್ತಲ್ಲಾ, ಯಾರು ಏನು ಹೇಳಿದರೂ ಆ ವಿಚಾರ ಬಳ್ಳಿಯೊಂದು ಹಬ್ಬುವಂತೆ ನನ್ನೊಳಗೆ ಕಲ್ಪನೆಯಾಗಿ ಬಲೆ ಬಲೆಯಂತೆ ಹೆಣೆಯುತ್ತಾ ಹೋಯಿತಲ್ಲವೇ? ಅವೇ ಮೆಟ್ಟಿಲಾಗುತ್ತಾ ನನ್ನ ಇಲ್ಲಿಯವರೆಗೂ ತಲುಪಿಸಿಬಿಟ್ಟವಲ್ಲ! ಇವನ್ನೆಲ್ಲ ನನಗೆ ಹೇಳಿಕೊಟ್ಟಿದ್ದು ಯಾರು? ಆಗ ಇನ್ನೂ ಗೆರೆ ಎಳೆದು ಜೀವಂತವಾಗಿಟ್ಟುಕೊಳ್ಳಲು ಹೇಳಿಕೊಟ್ಟವನ ಪರಿಚಯವಿರಲಿ ಅಂಥಾ ಒಬ್ಬ ಇದ್ದಾನೆ ಎನ್ನುವ ತಿಳುವಳಿಕೆಯೂ ಇರಲಿಲ್ಲ. ಅಂದರೆ ಅವನೂ ಇವಕ್ಕೆಲ್ಲಾ ನೆಪವೆನ್ನಬಹುದೇ?

ಈ ಕಥೆಗಳು, ಕನಸುಗಳು, ಅವುಗಳ ವಿವರಣೆಗಳು ನನ್ನೊಳಗಿನ ಸುಳ್ಳುಗಳು ಎಂದು ನಿನಗೂ ಅನ್ನಿಸಿತ್ತಲ್ಲ. ಹಾಗೆ ಚಂದ್ರನಿಗೂ ಅನ್ನಿಸಿದ್ದರಲ್ಲಿ ತಪ್ಪಿಲ್ಲ. `ಚಂದ್ರಾ ನಿನ್ನೊಳಗನ್ನು ಕೇಳಿಕೋ, ನಿನ್ನದಲ್ಲದ ಅನುಭವವನ್ನು ಹೇಗೆ ಸತ್ಯವೆಂದು ಹೇಳುತ್ತೀಯಾ? ಎಷ್ಟೆಂದು ವಿವರಣೆಯನ್ನು ಕೊಡುತ್ತೀಯಾ? ಅಸಂಗತವಾದವುಗಳನ್ನು ಎದುರಿಗಿಡುವಾಗ, ನಮಗೆ ಗೊತ್ತಿಲ್ಲದೆ ಸುಳಿಗಳ ಸೃಷ್ಟಿಯಾಗಿಬಿಡುತ್ತದೆ. ತಿಳಿಯದೆ ಸಿಲುಕಿಕೊಂಡೂ ಬಿಡುತ್ತೇವೆ ಪಾರಾಗುವುದು ಮಾತ್ರ ನಮ್ಮ ಅದೃಷ್ಟ. ಸಮ್ಮೋಹನಗೊಳಿಸುವ ಸುಳ್ಳುಗಳೇ ನಮ್ಮ ಗಮ್ಯವೇನೋ ಎನ್ನುವಂತೆ ನಮ್ಮ ಪಯಣವನ್ನು ಆರಂಭಿಸುತ್ತೇವೆ. ಎಲ್ಲವನ್ನೂ ನಿಗೂಢ ಎನ್ನುವಂತೆ ಚಿತ್ರಿಸಿಬಿಟ್ಟರೆ ನಾವವುಗಳಿಂದ ತಪ್ಪಿಸಿಕೊಳ್ಳುತ್ತೇವೆ ಎಂದು ಅಂದುಕೊಂಡರೆ ಅದೂ ವಂಚನೆಯೇ ಅಲ್ಲವೆ? ಇಲ್ಲ ಚಿತ್ರ ಬರೆಯುವುದು ಹೆರಿಗೆಯಂತಲ್ಲ. ಮಗುವೊಂದರ ಕೆನ್ನೆಯನ್ನು ತಟ್ಟಿದಂತೆ, ಕನ್ನೆ ಪ್ರೇಮಕ್ಕೆ ನಾವೆ ಕದವಾದಂತೆ, ಕಣ್ಣೆದುರಿಗೇ ನಡೆದ ಅವಘಡವೊಂದು ನಡೆದಾಗ ಎದೆಯಲ್ಲಿ ಚಳಕು ಮೂಡಿದಂತೆ. ದಾರಿಯಲ್ಲದ ಕಡೆ ಕಾಲಿಟ್ಟು ಮುಳ್ಳೊಂದು ಕಸಕ್ಕೆಂದು ನಾಟಿದಂತೆ. ಅಬ್ಬಾ ಇಂತಲ್ಲಿ ಅನುಭವಿಸುವ ನೋವು ಸಂಕಟಗಳಿಗೆ ಪರಿಚಯ ಇರಬಹುದೋ ಏನೋ. ಆದರೆ ಹೊರಬರಲಿಕ್ಕೆ ಗರ್ಭ ಚೀಲದೊಳಗೇ ಮಗು ದಾರಿಯನ್ನು ಹುಡುಕುತ್ತಾ ತಲೆಯನ್ನು ತಿರುಗಿಸುತ್ತಲ್ಲ ಆಗ ಶುರುವಾಗುವ ನೋವು ಹೊಕ್ಕುಳಾಳಗಳನ್ನು ಅಳೆಯುತ್ತಾ ಎದೆಗೂಡಿನ ವರೆಗೂ ಹರಡುತ್ತಲ್ಲ, ಹೊರಬರುವ ಕಾತುರದಲ್ಲಿ ತಲೆಯನ್ನು ತೂರಿಸುತ್ತಾ ಯೋನಿ ಭಾಗವನ್ನು ದೊಡ್ಡದು ಮಾಡುತ್ತಲ್ಲ, ಎರಡನೆಯ ಬಾರಿಗೆ ನನ್ನ ದೇಹ ಛಿದ್ರವಾಗಿತ್ತಲ್ಲ -ಇದರ ಉಪದ್ವ್ಯಾಪ, ಜೀವ ತುಂಬುತ್ತೇನೆ ಎಂದುಕೊಳ್ಳುವ ಗೆರೆಗಳಿಗೂ, ಹಚ್ಚುವ ಬಣ್ಣಗಳಿಗೂ ಇರುವುದಿಲ್ಲ. ಹರಿವ ಕೆನ್ನೀರು ಹೂವರಳು ಹೊತ್ತಿನ ಓಕುಳಿಯೇನೋ ಎನ್ನುವಂತೆ ಹೊರಗಿನವರಿಗೆ ಭಾವವಾದರೆ ನನ್ನ ತಪ್ಪಲ್ಲ. ಅವರಿಗೂ ನನಗೂ ನಡುವೆ ಗೋಡೆಯೊಂದು ಎದ್ದಿದೆ ಎಂದೇ ಭಾವಿಸುತ್ತೇನೆ. ಆಗಲೇ ಜೀವವನ್ನೇ ಪಣಕ್ಕಿಟ್ಟಂತೆ ಉಸುರಿದ್ದು, ಇಷ್ಟು ದಿನ ನಾನು ಅದನ್ನು ನೋಡುತ್ತಿದೇನೆ ಎಂದುಕೊಂಡಿದ್ದೆ ಇಲ್ಲ ಅದು ನನ್ನ ನೋಡುತ್ತಿದೆ...’ ಬೇಸಿಗೆಯಲ್ಲಿ ಬೀಸುವ ಗಾಳಿಯೂ ಬಿಸಿಯಾಗುತ್ತದೆ. ವಿಚಿತ್ರ ಎಂದರೆ ಅಂತಾ ಬಿಸಿಗಳಿಯ ನಡುವೆಯೂ ತಣ್ನನೆಯ ಗಾಳಿ ಹೇಗೋ ಬೀಸಿಬಿಡುತ್ತದೆ. ಎರಡೂ ಸೇರಿ ಸುಳಿಗಾಳಿಯೊಂದು ಸಿಕ್ಕ ಸಿಕ್ಕ ತರಗು,

ದೂಳುಗಳನ್ನು ಮೈಗೇರಿಸಿಕೊಂಡು ಸುಳಿಸುಳಿಯಾಗಿ ಸುತ್ತುತ್ತಾ ಎಲ್ಲೋ ಒಂದು ಕಡೆ ಚೆಲ್ಲಲೇ ಬೇಕು ಎನ್ನುವ ಭಾರವನ್ನು ಹೊತ್ತು ಗಮ್ಯವೂ ಗುರಿಯೂ ಇಲ್ಲದ ಕಡೆಗೆ `ನನಗ್ಯಾರು ಯಾವ ಅದೇಶವನ್ನೂ, ಸಂದೇಶವನ್ನೂ ಕೊಡಲಾರರು ಎನ್ನುವಂತೆ ಚೆಲ್ಲುತ್ತಲ್ಲ, ಹಾಗೆ ಕಂಡಳು ಶ್ಯಾಮು. `ಇದೆಲ್ಲಾ ಆಗಿದ್ದು ನಿಜವಾಗಲೂ ಹೇಳುತ್ತೇನೆ `ಅದು ನನ್ನ ನೋಡಿದ್ದರಿಂದಲೇ ಕಣೇ’ ಎಂದ ಶ್ಯಾಮುವನ್ನು ದಿಟ್ಟಿಸಿ ಕೇಳಿಯೇಬಿಟ್ಟೆ ಯಾವುದೇ ಅದು?

ಈ ಅಂಕಣದ ಹಿಂದಿನ ಬರೆಹಗಳು:
ಅಮೃತ ಸುರಿಸುವ ರಾತ್ರಿಗಳು ಏನನ್ನು ಹೆಪ್ಪಾಗಿಸುತ್ತವೆ?
ನಮ್ಮನ್ನು ಕಾಣಿಸಲು ನಡುಹಗಲೇ ಬೇಕಿಲ್ಲ!
ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು
ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು.
ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...