ನಮ್ಮನ್ನು ಕಾಣಿಸಲು ನಡುಹಗಲೇ ಬೇಕಿಲ್ಲ!

Date: 25-04-2023

Location: ಬೆಂಗಳೂರು


“ಹನಿ ಹುಟ್ಟಿದ ಮೇಲೆ ಶ್ಯಾಮು ತುಂಬಾ ಬದಲಾಗಿದ್ದಳು. ಹಾಗೆ ನೋಡಿದರೆ ವಿವರಿಸಲಿಕ್ಕೆ ತುಂಬಾ ಸಂಗತಿಗಳಿದ್ದವು. ಮುಟ್ಟದೆಯೂ ಮುಟ್ಟುವ ಹೇಳಿದರೂ ಹೇಳದ ಅನೇಕ ಮಾತುಗಳ ಜೊತೆ ಅವಳು ಸದಾ ಸಂವಾದಿಸುತ್ತಲೆ ಇದ್ದಳು-ಅದೂ ಅವಳ ಇಚ್ಚೆಯನ್ನು ಮೀರಿ,” ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ನಡೆಯದ ಬಟ್ಟೆ ಅಂಕಣದಲ್ಲಿ ‘ನಮ್ಮನ್ನು ಕಾಣಿಸಲು ನಡುಹಗಲೇ ಬೇಕಿಲ್ಲ!’ ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

ಹೌದು ಆ ನೋಟದಲ್ಲಿ ಎಂಥಾ ಆಘಾತ ಇತ್ತು- ಅನಾಹುತವೊಂದು ಜರುಗಿದೆ ಎನ್ನುವಂತೆ! ನಾನು ಹನಿಯ ತುಟಿಯ ಜೊಲ್ಲು ವಜ್ರವಾಗುತ್ತಿರುವುದು ಹೇಗೆಂದು ಹುಡುಕುತ್ತಿದ್ದರೆ, ಚಂದ್ರಾ ನನ್ನ ನಡೆಯಲ್ಲಿ, ನುಡಿಯಲ್ಲಿ, ಒಟ್ಟಾರೆ ನನ್ನಲ್ಲಿ ಅತಿಗಳನ್ನು ಹುಡುಕುತ್ತಿದ್ದ. ನಾನವನಿಗೆ ಅರ್ಥ ಮಾಡಿಸಲು ತುಂಬಾ ನೋಡಿದೆ, `ಚಂದ್ರಾ ನಾನೊಬ್ಬ ತಾಯಿ, ಮಗುವಿನ ಬಗ್ಗೆ ಒಂದು ಜಗತ್ತನ್ನೇ ಸೃಷ್ಟಿಸಿಕೊಳ್ಳುವುದು ಸಹಜ. ನಿನಗೆ ಅತಿ ಎನ್ನಿಸಿದರೆ ನಾನೇನು ಮಾಡಲಿ? ನಿನಗಿಂತ ಭಿನ್ನ ನಾನು. ಆದ್ದರಿಂದಲೇ ನಾವು ಒಂದೇ ಜಗತ್ತಿನ ಜೀವಿಗಳಲ್ಲ. ನನ್ನ ದೇಹ, ಮನಸ್ಸು ಹೇಳಿದಂತೆ ಕೇಳಬೇಕಲ್ಲವೇ!’ ಇಕ್ಕಿರಿದ ಕಾಡಿನಲ್ಲಿ ಹೆಣೆದ ಕೊಂಬೆಗಳು ಒಂದರೊಳಗೊಂದು ಹೆಣೆದುಕೊಂಡೇ ಬೆಳೆದ ಹಾಗಿತ್ತು ನನ್ನ ಸ್ಥಿತಿ. ನನ್ನ ಮಾಡುವಾಗಲೇ ಪ್ರಕೃತಿ ಹೀಗೆ ಗಲಿಬಿಲಿಗೊಂಡುಬಿಟ್ಟಿತ್ತೇ? ತೇಜೂ ನನ್ನ ಮನಸಿನಲ್ಲಿ ಏನಿದೆ ಎಂದು ಇಣುಕಿ ನೋಡುವವರಿಗೆ ನಾನ್ಯಾಕೆ ಅರ್ಥವಾಗಲಿಲ್ಲವೇ? ಅಥವಾ ಇಣುಕಿ ನೋಡುವವರಿಗೆ ನಾನು ಅರ್ಥವಾಗುವುದು ಬೇಕಿರಲಿಲ್ಲವೋ ಏನೋ.

ಚಂದ್ರಾ ಹೀಗೆ ಗಲಿಬಿಲಿಸಿದ್ದು ಒಂದೇ ಸಂಗತಿಗಾಗಿದ್ದರೆ ನನಗೆ ನೋವಾಗುತ್ತಿರಲಿಲ್ಲ. ಹೊರಗೆ ಕಾಣುವ ಚಂದ್ರ ಒಳಗಿನ ಚಂದ್ರನನ್ನು ಪ್ರತಿ ಸಲ ಸಂಧಿಸಿದಾಗ ತುಂಬಾ ಸಾಂಪ್ರದಾಯಿಕನಾಗಿ ಬಿಡುತ್ತಿದ್ದ ಅನ್ನಿಸುತ್ತೆ. ನಾನು ಹೀಗಿರಬೇಕು ಎನ್ನುವ ಅವನ ನಿರೀಕ್ಷೆಗಳು ಖಾಲಿ ಬಾಟಲಿಯಲ್ಲೂ ಗಾಳಿಯೂದಿ ಹೊರಡಿಸುವ ನಾದವಾಗಿರುತ್ತಿತ್ತು. ಎಷ್ಟೋ ಸಲ ಪಾಪ ಅವನ ನಿರೀಕ್ಷೆಗಳಿಗೆ ತಕ್ಕ ಹಾಗೆ ಇದ್ದುಬಿಟ್ಟರೆ ನಾನು ಕಳಕೊಳ್ಳುವುದಾದರೂ ಏನೆಂದು ಅನ್ನಿಸಿದ್ದೂ ಉಂಟು’ ಎಂದು ಶ್ಯಾಮು ಹೇಳುತ್ತಿದ್ದರೆ, ಕಂಗಳ ಆಳದಲ್ಲಿ ಅನಿಮಿಷರ ಹಾಗೆ ಜಗತ್ತಿನ ಯಾವ ಕ್ಷಣವನ್ನೂ ಬಿಡದೆ ಇವಳು ತುಂಬಿಕೊಳ್ಳುತ್ತಿದ್ದಾಳೆ ಅನ್ನಿಸಿಬಿಟ್ಟಿತ್ತು.

ಶ್ಯಾಮು ಎನ್ನುವ ಹೆಸರು ನನಗೆ ಸುನಾದದ ಹಾಗೆ ಕೇಳುತ್ತದೆ. ಬಂಧನದ ಜೊತೆ ಬಿಡುಗಡೆ ಸೇರಿದಂತೆ, ಅಂಕೆ ಇದೆ ಎಂದರೆ ಅದರ ಲಕ್ಷ್ಯ ಮೀರುವುದು ಮಾತ್ರವೇ. ಒಂದೆಡೆಗೆ ಚಂದ್ರಾ ಅವಳ ವರ್ತನೆಗೆ ಕಾರಣಗಳನ್ನು ಹುಡುಕಿ ಅವಳ ಹಿಂದನ್ನು ಕೆದಕಲು ತೊಡಗಿದ್ದರೆ, ಶ್ಯಾಮು ಎಲ್ಲವನ್ನೂ ಕಳಚಿಕೊಂಡು ಪೂರ್ಣತೆಯತ್ತ ಸಾಗುತ್ತಿದ್ದಳು. ಶ್ಯಾಮು ಪಾಪ ಎಂದು ಬಿಟ್ತ ಡಾಕ್ಟರ್ ಚಂದ್ರನ ಪಾಲಿನ ನಿಧಿ. ತನ್ನೊಂದಿಗೆ ಇದ್ಯಾವುದನ್ನು ಶ್ಯಾಮು ಹೇಳಲಿಲ್ಲ ಎನ್ನುವ ಕೋಪ. `ಚಂದ್ರನ ಹುಡುಕಾಟಕ್ಕೆ ಅರ್ಥ ಇಲ್ಲ ಅಂತ ಹೇಳಲಾರೆ ತೇಜೂ. ನಾನೂ ಹೇಳಬೇಕಿತ್ತೋ ಏನೋ ಚಿಕ್ಕಂದಿನಲ್ಲಿ ಹೀಗೆಲ್ಲಾ ಆಗಿತ್ತು ಎಂದು ಅದನ್ನು ನಾನು ನೆನಪಿಸಿಕೊಳ್ಳದಿರಲು ಮನಸ್ಸನ್ನು ಅಣಿ ಮಾಡಿಬಿಟ್ಟಿದ್ದೆ. ನನಗೇನೋ ಆಗಿದೆ ಎನ್ನುವುದೇ ನನ್ನೊಳಗಿಲ್ಲದಿದ್ದಾಗ ಉಳಿದದ್ದನ್ನು ತೆಗೆದುಕೊಂಡು ಯಾಕೆ ಮಾತಾಡಲಿ? ನೋಯುವುದು ನನಗಿಷ್ಟವಿಲ್ಲ ಕಣೆ’ ಎಂದಾಗಲೂ ಸುಶಾಂತವಾಗೇ ಇದ್ದಳು. ಚಂದ್ರಾ ಅವಳಿಗೆ ಸ್ಕಿಜೋಫ್ರೇನಿಯ ಅನ್ನುವುದನ್ನು ಪೂರ್ಣ ನಂಬಿದ್ದ ಯಾಕೆಂದರೆ ರೆಕಾರ್ಡ್ ಅದನ್ನೇ ಹೇಳಿದ್ದವು. ಡಾಕ್ಟರ್‌ಗೆ ತಾನು ನಂಬಿದ್ದನ್ನು ಪ್ರೂವ್ ಮಾಡಲಿಕ್ಕೆ ಮಾತ್ರ ನಾನು ಬೇಕಿದ್ದದ್ದು ಎಂದರೆ ಅವನಿಗೀ ನಂಬಿಕೆ ಇರಲಿಲ್ಲ. ನನಗೇನೋ ಆಗಿತ್ತು ಈಗ ಅದರಿಂದ ಹೊರಬಂದಿದ್ದೇನೆ ಎನ್ನಬೇಕಿತ್ತು. ಆದರೆ ನನಗೆ ಏನೂ ಆಗೇ ಇರಲಿಲ್ಲ, ಸುಮ್ಮನೆ ಎಲ್ಲಾ ಹಡಾವಿಡಿ ಎಬ್ಬಿಸಿದ್ದರು ಎಂದರೆ ಅದು ಸುಳ್ಳಾಗಿ ಕಾಣುತ್ತದೆ. ನಂಬುಗೆ ಎನ್ನುವುದು ಗೌಪ್ಯವಾದ ಭಾವ. ದಕ್ಕೆ ಪದ ಯಾಕೆ ಬೇಕು?’. ಶ್ಯಾಮುವಿಗೆ ಕುರುಡನಿಗೆ ಯಾವತ್ತೂ ಕಣ್ಣೇ ಇರಲಿಲ್ಲ ಎಂದುಕೊಳ್ಳುವುದು ಆಗುತ್ತಿರಲಿಲ್ಲ. ಕಣ್ಣಿದ್ದಾಗಿನ ಅವನ ಅನುಭವದ ಮೇಲೆ ಅವನು ಜಗತ್ತನ್ನು ಲೆಕ್ಕಾಚಾರ ಹಾಕುತ್ತಾನೆ. ವಾಸ್ತವ ಅರ್ಥವಾಗದೆ ತೊಂದರೆಗೀಡಾಗುತ್ತಾನೆ. ಇರಬಹುದು ಅವಳ ಲಾಜಿಕ್ಕು ಸರಿಯೇ! ಆದರೆ ಚಂದ್ರನ ಒಳಗಿನ ಅಹಮ್ಮಿಗೆ ಮಾತ್ರ ಪೆಟ್ಟುಕೊಡಬಲ್ಲ ಏಕೈಕ ವ್ಯಕ್ತಿಯಾಗಿ ಶ್ಯಾಮು ಯಾಕೆ, ಹೇಗೆ ಬೆಳೆದು ನಿಂತಳು? ದಾಂಪತ್ಯವನ್ನು ಮೀರಿ ಬೆಳೆದ ಸಂಬಂಧಗಳಲ್ಲಿ ಈಗೋ ಪ್ರಾಬ್ಲಂ ಬರಬಾರದು ಎಂದೇನಿಲ್ಲವಲ್ಲ. ಕತ್ತಲೆ ಎಲ್ಲೋ ಒಂದು ಕಡೆಗೆ ಇದ್ದೇ ಇರುತ್ತದೆ- ಅದು ನೆರಳಾಗಿಯಾದರೂ ಸರಿಯೇ.

ಹನಿ ಹುಟ್ಟಿದ ಮೇಲೆ ಶ್ಯಾಮು ತುಂಬಾ ಬದಲಾಗಿದ್ದಳು. ಹಾಗೆ ನೋಡಿದರೆ ವಿವರಿಸಲಿಕ್ಕೆ ತುಂಬಾ ಸಂಗತಿಗಳಿದ್ದವು. ಮುದ ಮೇಟ್ಟದೆಯೂ ಮುಟ್ಟುವ ಹೇಳಿದರೂ ಹೇಳದ ಅನೇಕ ಮಾತುಗಳ ಜೊತೆ ಅವಳು ಸದಾ ಸಂವಾದಿಸುತ್ತಲೆ ಇದ್ದಳು-ಅದೂ ಅವಳ ಇಚ್ಚೆಯನ್ನು ಮೀರಿ. ಮರ ಇಳಿಯುವಾಗ ಗುರಿ ಮುಟ್ಟುವ ವರೆಗೂ ಕಾಲಲ್ಲಿ ಸಣ್ಣ ನಡುಕದ ಹಾಗೆ ಭೂಮಿಗೆ ಸ್ಪರ್ಷಿಸಿಲೂ ನಡುಗುತ್ತಲೇ ಉಳಿವ ಭಾವದಂತೆ. ಮಳೆ ತೊಯ್ದ ಮರದ ಕೆಳಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವಂತೆ ಸದಾ ಇರುತ್ತಿದ್ದ ಅವಳೀಗ ತಾನು ಮಾತ್ರವಲ್ಲ ತನ್ನೊಂದಿಗೆ ಇನ್ನೊಂದು ಜೀವವೂ ಇದೆ ಎನ್ನುವುದರ ಸ್ಪಷ್ಟತೆಗೆ ಬಂದ ಹಾಗಿತ್ತು. `ಹನಿಯ ಹುಟ್ಟಿನ ನಂತರ ಚಂದ್ರನಲ್ಲಿ ಒಂದು ಕಾಂಪ್ಲೆಕ್ಸ್ ಬಂತು ಅನ್ನಿಸುತ್ತೆ, ಜೈವಿಕವಾಗಿ ತಾನು ಹನಿಯ ತಂದೆ ಆದರೂ ಹನಿಯ ಹುಟ್ಟಿನ ನೋವಿನ ಅನುಭವ, ನಿರಾಳತೆ ಯಾವುದೂ ಅವನದ್ದಾಗಿರಲಿಲ್ಲ. ಅದರಲ್ಲಿ ಅವನು ಹಾದು ಬಂದಿರಲೂ ಇಲ್ಲ. ಅಗ್ನಿ ದಿವ್ಯವೊಂದನ್ನು ಹಿಡಿದಂತೆ ಹನಿಯನ್ನು ಗರ್ಭೀಕರಿಸಿಕೊಂಡ ನಾನು ನನ್ನ ಹೆಣ್ತನದ ಅಸ್ತಿತ್ವವನ್ನು ಸಲೀಸಾಗಿ ಸಾಧಿಸಿಬಿಟ್ಟಿದ್ದೆ. ಅದನ್ನು ಚಂದ್ರಾ ಸಾಧಿಸಲಿಕ್ಕೆ ತನ್ನ ಕುಂಚದ ಜೊತೆ ಜೀವಮಾನವಿಡೀ ಏಗಬೇಕಿತ್ತು. ಆ ಅನುಭವವನ್ನು ತನ್ನದನ್ನಾಗಿಸ್ಕೊಳ್ಳಲಿಕ್ಕೆ ಸದಾ ಹೆಣಗುತ್ತಿದ್ದ ಅವನು `ಶ್ಯಾಮು ಆಗ ಹೇಗನ್ನಿಸಿತೇ?’ ಎಂದು ಪದೇ ಪದೇ ಕೇಳುತ್ತಿದ್ದ. ಮೊದ ಮೊದಲು ಉತ್ಸಾಹದಲ್ಲಿ ವಿವರಿಸುತ್ತಿದ್ದ ನನಗೆ ಬರಬರುತ್ತಾ ಎಲ್ಲವನ್ನು ಕಾಲ್ಪನಿಕ ಮಾಡ್ತಾ ಇದೀನಿ ಅನ್ನಿಸಲಿಕ್ಕೆ ಶುರುವಾಯಿತು. ಕಲ್ಪನೆಯ ಜೊತೆ ಸದಾ ಇರುವ ರೋಚಕತೆಯಂತೆ ವಿವರಿಸುವ ಹೆಬ್ಬಯಕೆ ಬಂದುಬಿಟ್ಟಿತ್ತು. ಇದೊಂದು ಗುಣವನ್ನು ನನಗೂ, ನಿನಗೂ ಬಹುಶಃ ಎಲ್ಲ ಮಕ್ಕಳಿಗೂ ಬಾಲ್ಯ ತಂದುಕೊಟ್ಟುಬಿಡುತ್ತದೆ. ನೆನಪಿದೆಯಾ ತೇಜೂ ನಾವು ಚಿಕ್ಕವರಿದ್ದಾಗ ಯಾರಾದರೂ ಕಥೆ ಹೇಳುತ್ತಾರೆ ಎಂದರೆ ದೊಡ್ಡಕಥೆಯನ್ನು ಹೇಳಲಿ, ಆ ಕಥೆ ಮುಗಿಯದೇ ಇರಲಿ ಎಂದುಕೊಳ್ಳುತ್ತಿದ್ದೆವು. ಕಥೆ ಕೇಳುತ್ತಾ ನಿದ್ದೆಗೆ ಜಾರಿದ ನಮಗೆ ನಮ್ಮ ಬಗ್ಗೆಯೇ ಎಚ್ಚರವಿರುತ್ತಿರಲಿಲ್ಲ. ಸಣ್ಣ ಕಥೆ ಹೇಳಿದರೆ ನಿರಾಸೆಯಾಗುತ್ತಿತ್ತು. ಕಥೆ ಮುಗಿದ ಮೇಲೂ ಮತ್ತೆ ಕಥೆ ಕೇಳುವ ಹಂಬಲಕ್ಕೆ ಬೀಳುತ್ತಿದ್ದೆವು. ಹನಿ ಹುಟ್ಟಿದಾಗಿನ ಅನುಭವವನ್ನು ಚಂದ್ರಾ ಹೀಗೆ ಬಯಸಲಿಕ್ಕೆ ಶುರು ಮಾಡಿಬಿಟ್ಟ. ಅದು ನನಗೆ ಸಹಜ. ಅವನಿಗೆ ಯಾವುದೋ ಅದ್ಭುತ. ಮಡಚಿದ್ದ ಕಾಲ ಮೇಲೆ ಹನಿಯನ್ನು ಕೂರಿಸಿಕೊಂಡು ಕುದುರೆ ಆಡಿಸುತ್ತಿದ್ದರೆ ಅವನು ಗಮ್ಯದ ಕಡೆಗಲ್ಲ ಸಾಗುವುದಲ್ಲ, ಗಮ್ಯವನ್ನೇ ಹೊತ್ತು ನಡೆಯುವ ಹಾಗೆ ಅನ್ನಿಸುತ್ತಿತ್ತು. ಹನಿ ಮಧ್ಯ ಮಧ್ಯೆ ಅವನನ್ನು ನಿಲ್ಲಿಸಿ, `ನೀನು ಯಾರು’ ಎನ್ನುತ್ತಿದ್ದಳು. ಆಗ ಅವನು ಪದೇ ಪದೇ ಬೇರೆ ಬೇರೆ ಹೆಸರುಗಳನ್ನು ಹೇಳಬೇಕಿತ್ತು. ಒಂದೇ ಹೆಸರನ್ನು ಹೇಳಿದ್ದರೆ ಅವಳಿಗೆ ಬೇಸರ ಬಂದು ನನಗೆ ಬೇಸರ ಆಗುತ್ತೆ ಬೇರೆ ಹೆಸರು ಹೇಳು ಅಪ್ಪಾ’ ಎನ್ನುತ್ತಿದ್ದಳು. ಆಗೆಲ್ಲಾ ಚಂದ್ರ ನನ್ನೆಡೆಗೆ ನೋಡುತ್ತಿದ್ದ. ಅವನಿಗೆ ಗೊತ್ತು ನಾನು ಹಾಗೆ ಅವನ ಪಂಥಾಹ್ವಾನವನ್ನು ಸ್ವೀಕರಿಸುವುದಿಲ್ಲವೆಂದು. ಆದರೆ ನನಗೆ ನಿನ್ನ ಮಗಳೂ ವಿಕ್ಷಿಪ್ತ ಎನ್ನುವ ವಿಷಯ ದಾಟಿಸುವುದು ಅವನ ಅನಿವಾರ್ಯತೆಯಲ್ಲಿ ಒಂದಾಗಿತ್ತು.

ನನ್ನ ಎಲ್ಲಾ ಚಹರೆಗಳೂ ಹನಿಯಲ್ಲಿ ಕಾಣತೊಡಗಿದಾಗ ಇನ್ನಷ್ಟು ಕಂಗಾಲಾಗಿದ್ದ- ಎಲ್ಲಿ ನನ್ನಂತೆ ಅವಳೂ ಆಗಿಬಿಡುತ್ತಾಳೆಂದು. ಅವನು ಹೇಳದೆಯೂ ನನಗೆಲ್ಲಾ ಅರ್ಥವಾಗುತ್ತಿತ್ತು. ನನಗೂ ಹನಿ ನನ್ನ ಥರಾ ಆಗುವುದು ಇಷ್ಟವಿರಲಿಲ್ಲ- ಯಾಕೆಂದರೆ ಜಗತ್ತಿಗೆ ನನ್ನಂಥವಳು ಬೇಕಿಲ್ಲ. ಸತ್ಯಕ್ಕೂ ಒಂದು ಸಹನೆ ಇರುತ್ತೆ ತೇಜೂ. ಕಣ್ಣು ಮುಚ್ಚಿ ಬಿಡುವುದರ ನಡುವೆ ಒಂದು ಉದ್ದೇಶ ಇದ್ದೇ ಇರುತ್ತೆ. ನನ್ನಂಥವಳನ್ನು ಪ್ರಕೃತಿ ಸೃಷ್ಟಿ ಮಾಡಿರುವುದಕ್ಕೆ ಕೂಡಾ. ಜಗತ್ತಿನ ಹುಡುಕಾಟದ ಹೆಗ್ಗುರುತಾಗಿ ನಾನಿದ್ದೇನೆ ಎಂದರೆ ಹೆಮ್ಮೆ ಪಡಬೇಕಲ್ಲವೇ ನಾನು. ಇಲ್ಲ ನನ್ನ ವಿಷಯಕ್ಕೆ ಹಾಗಾಗಲಿಲ್ಲ. ನನ್ನ ಸುತ್ತಲಿನ ಲೋಕ ನನ್ನನ್ನು ಒತ್ತೆ ಇಟ್ಟುಕೊಂಡಂತೆ ನಡೆಸಿಕೊಂಡು ಬಿಟ್ಟಿತ್ತು.

ಚಂದ್ರಾ ನನ್ನನ್ನು ಅವನ ವಿರೋಧಿ ಎಂದು ಭಾವಿಸಿದ್ದೇ ಅತ್ಯಂತ ಪ್ರಕ್ಷುಬ್ಧ ಸ್ಥಿತಿ ಅನ್ನಿಸಿದ್ದು. ಈಗಲೂ 32ನೆಯ ವಯಸ್ಸಿನಲ್ಲೂ ನನಗೆ ನಾನೇ ಅಪರಿಚಿತಳಾಗಿ, ನನ್ನನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಾ? ಎನ್ನುವ ಹುಡುಕಾಟದಲ್ಲಿದ್ದೇನೆ. ಹಸಿದ ಹೊಟ್ಟೆಗೆ ನಿದ್ದೆ ಎಲ್ಲಿ ಸಾಧ್ಯ. ಮೊದಲು ಹೊಟ್ಟೆಯ ಮಾತು ನಂತರ ದೇಹದ ವಿಶ್ರಾಂತಿ. ಇದು ಸಹಜ ನಾನಿನ್ನೂ ಹಸಿವೆಗೆ ಅನ್ನ ಹುಡುಕುತ್ತಿರುವೆ ಮಲಗುವುದು ಹೇಗೆ ಸಾಧ್ಯ? ಒಟ್ಟಾಗಿ ಬದುಕಲು ಎಳೆಸುವವರು ನಮ್ಮ ಉಸುರುಗಳನ್ನೇ ಹೂವಿನ ಸುಗಂಧದ ಹಾಗೆ ಚೆಲ್ಲವರೆದು ಹಂಚಿಕೊಳ್ಳಲು ಯತ್ನಿಸುವವರು ಒಬ್ಬರನ್ನೊಬ್ಬರು ಯಾಕೆ ದೂರುತ್ತಿದ್ದೇವೆ ಎನ್ನುವುದಕ್ಕೆ ಕಾರಣವೇ ಇರುವುದಿಲ್ಲ. ಚಂದ್ರನಿಗೆ ನನ್ನ ಮೇಲೆ ಅನುಮಾನ ಶುರುವಾಗಿದೆ ಎಂದು ನನ್ನ ಮನಸ್ಸಿಗೆ ಅನ್ನಿಸಿದ್ದಿದೆಯಲ್ಲಾ ಅದು ಇನ್ನೂ ವಿಚಿತ್ರ. ಅಂದರೆ ನಾನು ಅವನನ್ನು ನಂಬಿಲ್ಲ; ನಂಬಿದ ಹಾಗೆ ನಟಿಸುತ್ತಿದ್ದೆನೆ ಎಂದಲ್ಲವೇ ಅರ್ಥ. ಸ್ನೋ ಪೌಡರ್ ಬಳೆದುಕೊಳ್ಳುತ್ತಾ ಹೊರ ಮುಖದಲ್ಲಿ ಎಷ್ಟು ಸುಂದರವಾಗಿ ಕಾಣಬೇಕೆಂದು ಬಯಸುತ್ತೇವೋ ಒಳಗಿನ ಕುರೂಪಗಳಿಗೆ ಏನೆನ್ನೆವುದು ನೀನೇ ಹೇಳು. ಕಥೆಯನ್ನೇ ಹೇಳುತ್ತೇನೆ ಎಂದರೆ ನನ್ನದೊಂದು ಕೋನ, ನಿನ್ನದೊಂದು. ಕೊನೆಗೆ ಚಂದ್ರನದ್ದೂ. ಎಲ್ಲರೂ ನಮ್ಮ ನಮ್ಮ ಕಣ್ಣಳತೆಯಲ್ಲಿ ಕಾಣುವ ನಮ್ಮನ್ನು ಮತ್ತು ಲೋಕ ಮೆಚ್ಚುವ ನಮ್ಮನ್ನು ಮಾತ್ರಾ ಹೇಳಲಿಕ್ಕೆ ಹೊರಟುಬಿಡುತ್ತೇವೆ. ಸುಮ್ಮನೆ ಯೋಚಿಸು, ನಾನು ಮೊದಲ ಸಲ ಗೆರೆಯನ್ನು ಎಳೆದದ್ದಕ್ಕೂ ಇವತ್ತು ಗೆರೆ ಎಳೆಯುತ್ತಿರುವುದಕ್ಕೂ ಎಂಥಾ ದೊಡ್ಡ ವ್ಯತ್ಯಾಸವಿದೆ. ಅವತ್ತು ಒಂದು ಕೋಲು ಸಿಕ್ಕರೆ ನೆಲವೇ ಕ್ಯಾನ್ವಾಸ್. ಇವತ್ತು ಏನು ಸಿಕ್ಕಲಿ ಕ್ಯಾನ್ವಾಸಿಗೇ ಹುಡುಕುತ್ತೇನೆ. ಬಾಲ್ಯಕ್ಕೆ ಸಾಧಿತವಾಗುವ ಆ ಮೀರುವಿಕೆ ಈಗ ಇಲ್ಲವಾಗಿದೆ.

ನಿಜ ಹೇಳಬೇಕೆಂದರೆ ಚಂದ್ರ ಹೆಣ್ಣಿನ ನಗ್ನ ಚಿತ್ರವನ್ನು ಬರೆದ ಎಂದು ನಾನು ಗಂಡಿನ ನಗ್ನಚಿತ್ರ ಬರೆಯಲಿಲ್ಲ. ನಾನದನ್ನು ಬರೆದಾಗ ಚಂದ್ರನಿಗೆ ಹಾಗನ್ನಿಸರಲಿಕ್ಕೆ ಸಾಕು. `ನನ್ನನ್ನು ನಕಲು ಮಾಡುವುದರಿಂದ ನೀನು ದೊಡ್ಡವಳಾಗಲ್ಲ ಶ್ಯಾಮು’ ಅವನೆಂದಾಗ ನಾನು ಬಿಕ್ಕಿದ್ದೆ. `ಜಗತ್ತಿನ ಯಾರ ಜೊತೆಗೂ ಕಂಪಿಟ್ ಮಾಡಲಾರೆ ಚಂದ್ರಾ. ಇನ್ನು ನಿನ್ನ ಜೊತೆಗೆ ಹೇಗೆ ಸಾಧ್ಯ?’ ಎಂದಿದ್ದೆ. ಚಂದ್ರ, `ನೀನು ಎಲ್ಲವನ್ನೂ ದಾಟಿದವಳು ಅಂದುಕೊಂಡುಬಿಟ್ಟರೆ ಜಗತ್ತಿನ ಸ್ಪರ್ಧೆ ಇರುವುದೇ ಸುಳ್ಳೇ. ಎಲ್ಲವನ್ನೂ ಮರೆಮಾಚಿ ನಿನಗೆ ನೀನೆ ಸಮ ಎನ್ನುವ ಭ್ರಾಂತಿಯನ್ನು ಬಿಟ್ಟುಬಿಡು’ ಎಂದಿದ್ದ. `ಬರೆಯುವಾಗ ವಿನಮ್ರವಾಗುವ ನನ್ನ ಕೈಗಳಿಗೆ ಅಹಮ್ಮಿನ ಬಣ್ಣ ಅಂಟದೋ. ಹಿಡಿದ ಚಿಟ್ಟೆಯ ರೆಕ್ಕೆಯ ಹುಡುಯ ಬಣ್ಣವನ್ನು ಈಚೆಗೆ ಅದು ಬಯಸುತ್ತಲೂ ಇಲ್ಲ. ತನ್ನದೇ ಬಣ್ಣದ ಹುಡುಕಾಟದಲ್ಲಿ ತೊಡಗಿದ ಹಾಗೆ ಅನ್ನಿಸುತ್ತಿದೆ’ ಎಂದೆ. ಕೆಲವೊಮ್ಮೆ ಕಾರಣಗಳೇ ಇಲ್ಲದೆ ಕೆರಳುವ ಚಂದ್ರ ಕೆಲವೊಮ್ಮೆ ಮೌನವಾಗಿಬಿಡುತ್ತಾನೆ.’

`ಮತ್ಯಾಕೆ ಬರೆದೆ ಆ ಗಂಡಸಿನ ನಗ್ನ ಚಿತ್ರವನ್ನು?’ ಶ್ಯಾಮುವನ್ನು ಕುತೂಹಲದಿಂದ ಕೇಳಿದ್ದೆ. `ಹೌದೇ, ಅಲ್ಲವೇ ತೇಜೂ, ನಾನದನ್ನು ಯಾರನ್ನೋ ಗೆಲ್ಲಲಿಕ್ಕೆ ಬರೆಯಲಿಲ್ಲ. ಗೆಲುವೆನ್ನುವುದು ಇನ್ನೊಬ್ಬರ ಜೊತೆ ಇದೆ ಎಂದು ನಾನು ಎಂದೂ ಭಾವಿಸಲಿಲ್ಲ. ನಾನು ಬರೆದದ್ದನ್ನು ಗೆಲ್ಲಲಿಕ್ಕಾಗಿ ಇನ್ನೊಂದನ್ನು ನಾನೇ ಬರೆಯುವ ಹುಕಿಗೆ ಬೀಳುತ್ತೇನೆ. ನಾನೇ ಪರ, ನಾನೇ ವಿರೋಧ. ನಿನಗೆ ನೆನಪಿದ್ದರೆ ಆ ಘಟನೆ ನಿಜ ಶ್ಯಾಮೂ ನೀನು ಹೇಳುವುದು ಸರಿ ಎನ್ನುತ್ತೀಯ’. ಮನಸ್ಸು ಹುರಿಗೊಂಡAತೆ ಕೇಳಿದ್ದೆ, `ಹೇಳೇ ಹೇಳೇ ಅದ್ಯಾವ ಘಟನೆ ನಿನ್ನ ಕಣ್ಣಾಳಕ್ಕೆ ನಟ್ಟು ಜ್ವಾಲಾಮುಖಿಯಾಗಿದ್ದು? ನನ್ನೊಳಗೆ ಹರಿದು ಮುರಿದು ಚೂರು ಚೂರಾದ ಚಿತ್ರಗಳೆಲ್ಲಾ ನಿನ್ನೊಳಗೆ ಅನೂಚಾನವಾಗಿ ಉಳಿದು ಬಂದದ್ದು? ಅದೇ ಇಂದು ನಿನ್ನಲ್ಲಿನ ಚಿತ್ರಗಳ ಕೇಂದ್ರವಾಗುತ್ತಿರುವುದು?

ನನ್ನ ಮಾತಿಗೆ ನಕ್ಕಳು ಶ್ಯಾಮು, `ಮರೆವು ದೇವರು ಕೊಟ್ಟ ವರ ತೀವ್ರವಾಗಿ ಎಲ್ಲವನ್ನೂ ಹೊತ್ತು ಓಡಾಡುವ ಶಾಪ ಯಾಕೆ ಬೇಕು ಹೇಳು. ಮೈತುಂಬಾ ನೆನಪ ಗಾಯಗಳನ್ನೇ ಹೊತ್ತ ಅಶ್ವತ್ಥಾಮನಿಗೆ ಸಾವು ಬಾರದೇ ಇರುವುದು ವರವೋ ಶಾಪವೋ? ನಾನೂ ಒಂಥರಾ ಅಶ್ವತ್ಥಾಮನೇ- ಶಾಪಗ್ರಸ್ತಳೇ. ಯಾವುದನ್ನು ನಿಜವೆಂದು ಜಗತ್ತನ್ನು ನಂಬಿಸಲಿಕ್ಕೆ ನೋಡುತ್ತೇವೋ ಅದು ಸುಳ್ಳು. ಇದು ನಮ್ಮ ಅರಿವಿಗೆ ಬಂದಾಗಲೂ ನಾವದನ್ನು ನಂಬಿಸಿಬಿಟ್ಟರೆ ಆಟದಲ್ಲಿ ಅರ್ಧ ಗೆದ್ದಂತೆ. ಈಗ ಹೇಳು ನಮ್ಮಂಥಾ ಅಪ್ರಾಮಾಣಿಕರು ಯಾರಿದ್ದಾರೆ? ಎಷ್ಟೋ ಸಲ ಎಲ್ಲವನ್ನೂ ಹೇಳಿಕೊಂಡು ಬಿಡಬೇಕು ಎಂದು ಚಂದ್ರನನ್ನು ಎದುರು ಕೂರಿಸಿಕೊಂಡಿದ್ದೆ. ಆಟದಲ್ಲಿ ಮೊದಲ ಕಾಯನ್ನು ನಡೆಸುವ ಹುಮ್ಮಸ್ಸು ಎರಡನೆಯ ಕಾಯನ್ನು ಇಡುವಾಗ ಕಡಿಮೆಯಾಗಿಬಿಡುತ್ತೇನೆ. ಅವನಿಗೆ ಹೇಳಬೇಕೆಂದುಕೊಂಡದ್ದನ್ನು ಹೇಳಲೇ ಇಲ್ಲ. ಯಾಕೆಂದರೆ, ನಾನು ಹೇಳಲಿಕ್ಕೆ ಹೊರಟ ಯಾವುದರಲ್ಲೂ ನಾನಿಲ್ಲ. ಗಂಡಸುತನ ಎಂದರೆ ನನ್ನ ಸೀಳಿಹಾಕಬಲ್ಲ, ನನ್ನೊಳಗೆ ಬಲವಂತವಾಗಿ ಇಳಿಯಬಲ್ಲ, ನನ್ನ ಹಂಗನ್ನೂ ಮೀರಿ ಕೈವಶ ಮಾಡಿಕೊಳ್ಳಬಲ್ಲ, ನನ್ನ ಪ್ರಾರ್ಥನೆಯನ್ನೂ ಬದಿಗಿರಿಸಬಲ್ಲ, ಒಳಗಿನ ವೇದನೆಯ ನದಿಗೆ ದಿಟ್ಟವಾಗಿ, ಏನೂ ಅಲ್ಲ ಎಂಬಂತೆ ಎದುರಾಗಬಲ್ಲ... ಹೀಗೇ ಏನೂ ಆಗಬಲ್ಲ, ಆವರಿಸಲ್ಪಡುವ ಶಕ್ತಿ ಎನ್ನುವ ಸೂಚನೆ ಸಿಕ್ಕಿದ್ದು ಅವತ್ತಿನ ಆ ಘಟನೆ. ಘಟಿಸಿತ್ತೋ ಇಲ್ಲವೋ ಎನ್ನುವ ಭ್ರಮೆಯನ್ನು ಈಗಲೂ ಹುಟ್ಟಿಸುತ್ತಲೆ ಇದೆ ತೇಜೂ. ಇಲ್ಲೇ ನಾನು ಸಿಕ್ಕಿ ಬಿದ್ದಿದ್ದು. ಒಂದಾಗಿದ್ದು ಎರಡಾಗುವುದು ಎಂದರೆ ಅದು ನನ್ನನ್ನು ನಾನು ಛಿದ್ರ ಗೊಳಿಸಿಕೊಳ್ಳುವ ಕ್ರಿಯೆ. ಹಾಗಾದ್ರೆ ಛಿದ್ರವಾದದ್ದು ಮತ್ತೆ ಒಂದಾಗುವುದು ಸುಲಭವೇ? `ಮೊದಲು ಎರಡಿದ್ದರೆ ಮಾತ್ರಾ ಒಂದಾಗುವ ಅನುಭವ ಬರಲಿಕ್ಕೆ ಸಾಧ್ಯ’ ಚಂದ್ರಾ ಅತ್ಯಂತ ಪ್ರೇಮದಿಂದ ಹೇಳಿದ ಈ ಮಾತುಗಳು ನನ್ನಲ್ಲಿ ಎಂಥಾದ್ದೋ ಆತ್ಮ ವಿಶ್ವಾಸವನ್ನು ಕಾಣಲಿಕ್ಕೆ ಸಾಧ್ಯ ಆಯ್ತು.

`ಅವತ್ತು ದಸರೆಯ ಹಬ್ಬಕ್ಕೆ ಆಕಾಶ ಮಲ್ಲಿಗೆಯನ್ನು ತರಲಿಕ್ಕೆ ನಾನೂ ನೀನೂ ಇಬ್ಬರೂ ಆ ಪೊದೆಗಳಾಚೆಯ ಮರದ ಹತ್ತಿರಕ್ಕೆ ಹೋದೆವಲ್ಲಾ ನೆನಪಿದೆಯಾ?’ ಎಂದು ಕೇಳಿದ್ದಳು ಶ್ಯಾಮು ನಾನು ಯೋಚಿಸುತ್ತಾ ಕುಳಿತೆ. `ನೀನು ಹುಂ ಎನ್ನದಿದ್ದರೆ ನಾನಾದರೂ ಹೇಗೆ ಮುಂದಕ್ಕೆ ಹೇಳಲೇ? ಹೂಂ ಎನ್ನೆ’ ಎಂದಳು. ಅವಳ ಮುಖವನ್ನು ನೋಡಿದೆ ಪುಟ್ಟ ಹುಡುಗಿಯ ಹಾಗೆ ಕಂಡಳು. ಅವಳ ಕಣ್ಣುಗಳಲ್ಲಿನ ದಿವ್ಯತ್ವಕ್ಕೆ ಸಂದ ಏನೋ ಕಾಣಿಸಿ ನಾನು ಅಯಾಚಿತವಾಗಿ `ಹುಂ’ ಎಂದೆ- ಸಂದ ಕಾಲದ ಕುರುಹುಗಳನ್ನು ವಾಪಾಸ್ಸು ಬಾ ಎಂದು ಕರೆದಂತೆ. ಇಬ್ಬರು ಪುಟ್ಟ ಹುಡುಗಿಯರ ಮಧ್ಯೆ ಅವತ್ತಿನ ಘಟನೆ ಮತ್ತೊಮ್ಮೆ ತೆರೆದುಕೊಳ್ಳುತ್ತಾ ಹೋಯಿತು.

ಅಮ್ಮಾ ಸಂಜೆಯಾಗ್ತಾ ಇದೆ ಇನ್ನೂ ಆಕಾಶ ಮಲ್ಲಿಗೆಯ ತರಲಿಕ್ಕೆ ಹೋಗಲಿಲ್ಲವೇ, ಬೇಗ ಹೋಗಿ ಬನ್ನಿ ಎಂದದ್ದು ಕೇಳಿದ್ದೇ ಚೌಕ ಬಾರ ಆಡುತ್ತಿದ್ದ ಇಬ್ಬರೂ ಆಕಾಶ ಮಲ್ಲಿಗೆ ಹೂವನ್ನು ತರಲು ಓಡಿದ್ದೆವು. ಪೊದೆಗಳು... ಪೊದೆಗಳು, ಸೂರಿಲ್ಲದ ಆಕಾಶದಲ್ಲಿ ಲಕ್ಷಾಂತರ ಪಕ್ಷಿಗಳು. ಅವುಗಳಲ್ಲಿ ಬೆಳ್ಳಕ್ಕಿಗಳು ಸಾವಿರ. ನಿನ್ನುಂಗ್ರ ಕೊಡು ನನ್ನುಂಗ್ರ ಕೊಡುವೆ ಎಂದು ಕೈಗಳನ್ನು ಉಜ್ಜುತ್ತಾ ಅವುಗಳ ಹಿಂದೆ ಓಡುತ್ತಿದ್ದೆವು. ಶ್ಯಾಮುವಿನ ಉಗುರುಗಳಲ್ಲಿ ಉಂಗುರ ಮೂಡಿ ನೋಡೇ ಎಂದು ತೋರಿದ್ದಳು. ಅವಳು ಅದೃಷ್ಟವಂತೆ ಅನ್ನಿಸಿ ಹೊಟ್ಟೆಕಿಚ್ಚಾಗಿತ್ತು. ಅವಳು ಮಂತ್ರ ದಂಡ ಹಿಡಿದವಳಂತೆ ತಗೊಳ್ಳೆ ನಿನಗೂ ಕೊಡ್ತೇನೆ ಎಂದು ಬೆಳ್ಳಕ್ಕಿ ಕೊಟ್ಟ ಉಂಗರವನ್ನು ನನ್ನ ಕೈಗೂ ವರ್ಗಾಯಿಸಿದ್ದಳು. ನನ್ನ ಬೆರಳ ಮೇಲೂ ಬೆಳ್ಳಗಿನ ಚುಕ್ಕಿ ಮೂಡಿತ್ತು. ಅಕಸ್ಮಾತ್ ಮೂಡಿಲ್ಲ ಅಂದರೆ ಬ್ಲೇಡನ್ನು ತೆಗೆದುಕೊಂಡು ತೆಳುವಾಗಿ ಉಗುರ ಮೇಲೆ ಕೆತ್ತುಕೊಳ್ಳುತ್ತಿದ್ದೆವು. ಹಾ ನಂಗೂ ಬೆಳ್ಳಕ್ಕಿ ಉಂಗ್ರ ಕೊಡ್ತು ಎಂದು ಸಂಭ್ರಮಿಸುತ್ತಿದ್ದೆವು. ಶ್ಯಾಮುವೇ ಹಾಗೆ ಏನನ್ನು ಬೇಕಾದರೂ ನನಗೆ ಕೊಡಬಲ್ಲವಳಾಗಿದ್ದಳು. ಅವಳು ಇಡಿಇಡಿಯಾಗಿ ನನಗೆ ಅನುಭವಗಳನ್ನು, ಕನಸುಗಳನ್ನೂ ವರ್ಗಾಯಿಸಿದ್ದಳು. ಅವೋ ಒಮ್ಮೊಮ್ಮೆ ಎರಡು ಕನ್ನಡಿಗಳನ್ನು ಎದುರಾಗಿರಿಸಿ ಒಂದರೊಳಗೊಂದು ಕಾಣುತ್ತಾ ಸಿಕ್ಕಾಪಟ್ಟೆ ಕನ್ನಡಿಗಳಾಗುತ್ತವಲ್ಲಾ ಹಾಗನ್ನಿಸಿಬಿಡುತ್ತಿದ್ದವು.

ಗಮ್ಯಗಳು ಹಾಗೇ ಇರುತ್ತವೆ ಆದರೆ ಅದನ್ನು ತಲುಪುವಾಗ ಮಾತ್ರ ಹಾದಿಗಳು ಬದಲಾಗುತ್ತಲೇ ಇರುತ್ತದೆ. ನಮ್ಮ ನಾನಾ ನಿಲ್ದಾಣಗಳನ್ನು ದಾಟಿ ಆಕಾಶ ಮಲ್ಲಿಗೆ ಮರದ ಹತ್ತಿರ ಬರುವಾಗ, ನೀರಿನೆಳೆಯಂತೆ ಯಾವಾಗ ಕೆಳಗೆ ಬೀಳಲಿ ಎಂದು ತೊಟ್ಟು ಕಳಚಿಕೊಂಡರೂ ಕೊಂಬೆಗೆ ತನ್ನದೇ ಕುಸುಮೆಯ ದಾರದಿಂದ ಜೋತಾಡುತ್ತಾ ಗಾಳಿಗೆ ಕಾಯುತ್ತಿದ್ದ ಆ ಮರ ದೂರದಿಂದ ಕೈ ಬೀಸಿತ್ತು. ಹಾಗೆ ಕೈ ಬೀಸಿದಾಗ ಅದರೊಂದಿಗೆ ಹರಡಿದ್ದ ಸುವಾಸನೆಯೂ ನಮ್ಮನ್ನು ಇನ್ನಷ್ಟು ಆಕರ್ಷಿಸಿತ್ತು. ಮಬ್ಬು ಮಬ್ಬಾದ ಕತ್ತಲು ಆವರಿಸುವಾಗ ಗರದ ಹಿಂದೆ ಬಿದ್ದು ಚೌಕಾಬಾರ ಆಡುವುದ ಬಿಟ್ಟು ಸ್ವಲ್ಪ ಬೇಗ ಹೊರಡಬೇಕಿತ್ತು ಅನ್ನಿಸಿತ್ತು. ಆಗ ಆವರಿಸುವ ಕತ್ತಲು ನಮ್ಮಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿತ್ತು. ಆತುರಾತುರವಾಗಿ ಹೂವನ್ನು ಆಯುವಾಗ ಕೈಗೆ ಹತ್ತಿದ ಸುಗಂಧವ ಮೂಸುತ್ತಾ ಆಹಾ ಎನ್ನುತ್ತಿದ್ದೆವು. ಆ ವಾಸನೆ ಈಗಲೂ ಕೈಗಳಲ್ಲೇ ಇದೆ ಎನ್ನಿಸಿ ಆಗಾಗ ಕೈಗಳನ್ನು ಮೂಸಿಕೊಳ್ಳುತ್ತೇನೆ. ಸಣ್ಣದಾಗಿ ಹಿಸುಕಿದ ದಳಗಳನ್ನು ತುಟಿಯ ಮಧ್ಯೆ ನಾಲಿಗೆಗೆ ತಾಕುವ ಹಾಗೆ ಇಟ್ಟು ಉಸಿರನ್ನು ಎಳೆದುಕೊಳ್ಳುವಾಗ ದಳದಲ್ಲಿ ಸಣ್ಣ ಗುಳ್ಳೆ ಮೂಡುತ್ತಿದ್ದವು ಅವುಗಳನ್ನು ಒಡೆಯುವಾಗ ಟುಪ್ಪೆನ್ನುವ ಸಣ್ಣ ಶಬ್ದ ಕೇಳಿ ನಮಗೆ ನಾವೇ ಆನಂದ ತುಂದಿಲರಾಗುತ್ತಿದ್ದೆವು. ನನ್ನ ಚಿತ್ರಗಳಲ್ಲಿ ಆ ಹೂವಿಗೆ ಮಾತ್ರ ಮೂಲೆಯಲ್ಲಾದರೂ ಸರಿಯೆ ಈಗಲೂ ಒಂದು ಜಾಗ ಇದ್ದೇ ಇರುತ್ತೆ. ಅದು ಹೀಗೆಲ್ಲಾ ನೆನಪುಗಳನ್ನು ಉಳಿಸಿದೆ ಅಂತ ಅಲ್ಲ ಅಂದಿನ ಆ ಘಟನೆಯಲ್ಲಿ ಕೋಮಲತೆಯನ್ನು ಒಡೆದು ಹಾಕಿದ ಅದೊಂದು ಸಂಗತಿ ಮೂರ್ತವಾಗಿ ಎದುರು ನಿಂತು ದಿಗ್ಭಾçಂತಿಗೆ ದೂಡಿತ್ತಲ್ಲ ಅದರಿಂದಾಗಿ!

ಹೌದು ನಾವು ಆಯುತ್ತಾ ಹೋಗಿದ್ದ ಆ ಹೂವು ನಮ್ಮನ್ನು ಯಾವುದೋ ಪೊದೆಯ ಹತ್ತಿರಕ್ಕೆ ಕರೆದೊಯ್ದಿತ್ತು. ಪೊದೆಯ ಅಲುಗಾಟ, ನಟನಾಪೂರ್ವಕವಾದ ಸಂಗತಿಯೊಂದನ್ನು ತೆರೆದಿಟ್ಟಿತ್ತು. ನಮಗೋ ಕುತೂಹಲ- ಸಣ್ಣ ಹುಡುಗರು ಬೇರೆ. ಪೊದೆಯ ಒಳಗಿನ ಗೊಗ್ಗರು ಧ್ವನಿ ಯಾವುದೋ ಪ್ರಾಣಿಯದ್ದೆಂದು ಅನಿಸಿತ್ತು. ಪೊದೆ ಸರಿಸಿ ನೋಡುವ ಧೈರ್ಯ ಇಲ್ಲವಾದ್ದರಿಂದ ಪೊದೆಯು ಕಾಣುವಂತೆ ಎತ್ತರದ ಜಾಗಕ್ಕೆ ಓಡಿದೆವು. ಒಳಗೆ ಗಂಡಸೊಬ್ಬ ಹೆಣ್ಣಿನ ಮೇಲೆ ಮಲಗಿದ್ದ. ಅವಳು ಕೂಗದಂತೆ ಬಾಯನ್ನು ಅದುಮಿಟ್ಟು. ಅವಳ ಗಂಟಲಿಂದ ಹೊರಬರುತ್ತಿದ್ದ ಗೊಗ್ಗರು ಧ್ವನಿಯೆ ಅದು ಸ್ವಲ್ಪ ಹೊತ್ತಿನ ನಂತರ ಗಂಡಸು ಶಕ್ತಿ ಸೋರಿದಂತೆ ಬಿದ್ದ ನಂತರ ಎದ್ದು ಹೆಂಗಸಿನ ಮೇಲೆ ಉಗಿದು ನಮ್ಮೆಡೆಗೆ ತಿರುಗಿದ. ಆಗ ಅವನ ಬೆತ್ತಲೆ ದೇಹ ನಮಗೆ ಕಂಡಿದ್ದು. ಅವನನ್ನು ಹಾಗೆ ನೋಡಿದ್ದು ನಮಗೆ ಅವಮಾನಕರವಾಗಿ ಕಾಡಿತ್ತು. ನೆಲದ ಮೇಲೆ ದೇಹವನ್ನು ಹೇಗೆಂದರೆ ಹಾಗೆ ಚೆಲ್ಲಿದ್ದ ಆ ಹೆಂಗಸು ನಮ್ಮನ್ನು ನೋಡಿ ಹೊರಟುಬಿಡುವಂತೆ ಸನ್ನೆ ಮಾಡಿದ್ದಳಲ್ಲಾ. ಆಗ ಮಡಿಲಲ್ಲಿದ್ದ ಎಲ್ಲಾ ಆಕಾಶ ಮಲ್ಲಿಗೆಯನ್ನೂ ನೆಲಕ್ಕೆ ಚೆಲ್ಲಿ ಅಲ್ಲಿಂದ ಓಡಿಬಿಟ್ಟಿದ್ದೆವು. ತೇಜೂ ಗಂಡಸು ಅಂದರೆ ನನಗೆ ನೆನಪಾಗುವುದು ಇದೇ ಕಣೆ. ಹೆಣ್ಣಿನ ಕಡೆಗೆ ಗಂಡಿಗೆ ರಮ್ಯತೆ ಇರುತ್ತೆ. ಆದರೆ ಗಂಡಿನ ಕಡೆಗೆ ಹೆಣ್ಣಿಗೆ ಸದಾ ಭಯ ಇರುತ್ತೆ ತೋರಿಸಿಕೊಳ್ಳದಿದ್ದರೂ ಕೂಡಾ. ಅವನು ಸುಂದರ ಅಲ್ಲ, ಲಲಿತನೂ ಅಲ್ಲ ಸಾಯುವ ಪ್ರತಿಬಿಂಬಗಳು ಒಂದು ಗಳಿಗೆ ನಕ್ಕು ಸಾವನ್ನೂ ತೋರುತ್ಟೇನೆ ಬಾ ಎಂದು ಕರೆದ ಹಾಗೆ. ಚಂದ್ರಾ ನಕ್ಕಿದ್ದ `ಶ್ಯಾಮೂ ಆ ಘಟನೆ ಹಾಗಿರಬಹುದು ಆದರೆ ಗಂಡಸರೆಲ್ಲಾ ಹಾಗಿರಲ್ಲ’ ನಿಜವಿರಲೂ ಬಹುದು, ಆದರೆ ಅಂದು ನಾವು ನೋಡಿದ ಆ ಚಿತ್ರ ಅದರ ಬಗ್ಗೆ ಏನು ಹೇಳಲಿ? ಆರ್ಥವಾಗಿ ಅವನೆಡೆ ನೋಡಿ, `ನನಗೆ ನಿದ್ದೆ ಬರುತ್ತಿದೆ ನಾನೀಗ ಮಲಗಬೇಕು’ ಎಂದಿದ್ದೆ. ಮನಸ್ಸು ದುಃಖ ತಪ್ತವಾಗಿತ್ತು. ಅವನು ಹಾಗ್‌ಂದ ಅನ್ನುವುದಕ್ಕಲ್ಲ. ಎಷ್ಟು ಪರದೆಗಳನ್ನು ಮುಖಕ್ಕೆ ಹಾಕಿಕೊಳ್ಳುವುದು? ಸತ್ಯ ಇದೇನಾ ಎಂದು ಒಂದೊAದೆ ಸರಿಸುತ್ತಾ ಸರಿಸುತ್ತಾ ಕೊನೆಗೆ ಏನೂ ಇಲ್ಲದ ಖಾಲಿ ಸ್ಥಿತಿಗೆ ತಲುಪಿದಂತೆ. ಅರೆ ಈ ಪರದೆಗಳನ್ನು ಹಾಕಿದ್ದು ಯಾರು? ಸತ್ಯ ಯಾಕೆ ಎಲ್ಲೋ ಅಡಗಿ ಕುಳಿತಿದೆ? ಅವತ್ತು ಆಕ್ರಮಣಕಾರಿಯಾಗಿ ವರ್ತಿಸಿದ್ದ ಆ ಗಂಡಸಿನ ಅಂಗ ನನ್ನ ಜೀವನದಲ್ಲಿ ಎಂಥಾ ಬೆಲೆ ಕೇಳಿತು. ಪ್ರೀತಿಗೂ ಕಾಮಕ್ಕೂ ಮಧ್ಯೆ ದೊಡ್ಡ ಕಂದಕ ಇದೆ ಎನ್ನುವ ಭ್ರಮೆಯನ್ನು ತುಂಬಿ ಇರುವುದನ್ನು ಇದ್ದಂತೆ ನೋಡಲು ಸಾಧ್ಯವಾಗದೆ ವಿಚಿತ್ರವಾದ ಹಿಂಸೆಯನ್ನು ತುಂಬಿತ್ತು. ಇದು ಕಣೆ ನನಗೆ ನೆನಪಾದದ್ದು.

ನೆನಪುಗಳೆ ಹೀಗೆ ನಮ್ಮನ್ನು ಕೆಲವೊಮ್ಮೆ ಕೆಟ್ಟದಾಗಿ ತಿದ್ದುತ್ತವೆ. ಹಚ್ಚಿದ್ದ ಬಣ್ಣ ಸರಿಯಾಗಲಿಲ್ಲವೆಂದು ಇನ್ನೊಂದೇ ಬಣ್ಣವನ್ನು ಹಚ್ಚಿದಾಗಲೂ ಅದು ಇನ್ನಷ್ಟು ಹದಗೆಟ್ಟು ವಿಚಿತ್ರವಾಗುತ್ತಲ್ಲ. ಅದರ ಅರಿವು ನಮಗೆ ಇದ್ದೇ ಇರುತ್ತೆ. ಯಾರು ಏನೇ ಹೇಳಿದರೂ ಬರೆದ್ದದ್ದ ಮೊದಲ ನೋಡುಗರು ನಾವೇ ಆಗಿರುತ್ತೇವೆ. ಸೂರ್ಯಸ್ಪಷ್ಟವಾಗುವಂತೆ ನಮ್ಮನ್ನು ನಾವು ತೋರಿಕೊಳ್ಳಲು ನಡು ಹಗಲಲ್ಲಿ ನಿಲ್ಲಬೇಕಿಲ್ಲ. ಕತ್ತಲೆಯೂ ತೋರುವ ನಾವು ನಾವೇ ಆಗಿರುತ್ತೇವೆ. ಅದಕ್ಕೆ ಚಂದ್ರನಿಗೆ ನಾನು ಹೇಳಿದ್ದು ನನ್ನ ಬರವಣಿಗೆ ಅನಿಸಿದ್ದಲ್ಲ, ಅನುಭವದಿಂದ ಆಗಿರುವುದು ಎಂದು. ಅವನಿಗೆ ತನ್ನೊಂದಿಗೆ ಸ್ಪರ್ಧೆಗಿಳಿದೆ ಎನ್ನುವುದಕ್ಕಿಂತ ನಾನು ಹೀಗೆ ನಗ್ನ ಚಿತ್ರವನ್ನು ಬರೆಯಬಹುದೇ ಎನ್ನುವ ಆತಂಕ ಕಾಡಿತ್ತು ಎನ್ನಿಸುತ್ತೆ. `ಸಮಾಜ ನಿನ್ನ ಹೇಗೆ ನೋಡುತ್ತೆ ಗೊತ್ತಾ? ಪರಿಣಾಮ ಎದುರಿಸಬೇಕಾಗುತ್ತೆ. ಹೆಣ್ಣು ಏನನ್ನು ಬರೆಯಲಿ ಅಲ್ಲಿ ಅವಳ ಆತ್ಮಕಥನವನ್ನು ಮಾತ್ರ ಹುಡುಕುತ್ತಾರೆ’ ಎಂದಿದ್ದ. `ಇದು ಮಾತ್ರವಲ್ಲ ಇನ್ನು ಯಾವ ಪರಿಣಾಮವನ್ನು ಎದುರಿಸುವವಳು ನಾನೇ ಅಲ್ಲದೆ, ನೀನಲ್ಲ. ಯಾಕೆಂದರೆ ನಾನು ಹೆಂಗಸು, ಅಪ್ಪಟ ಹೆಂಗಸು. ಈಗಿನ್ನೂ ಕಿಟಕಿಗಳು ತೆರೆದುಕೊಳ್ಳುತ್ತಿವೆ, ಇನ್ನು ಬಾಗಿಲುಗಳನ್ನು ಹುಡುಕಬೇಕಿದೆ’ ಎಂದೆ. ನನ್ನ ಆ ಚಿತ್ರಗಳಿಗೆ ಹೆಸರು ಸಿಕ್ಕಿಬಿಟ್ಟಿತ್ತು. ಈಗ ನೆಮ್ಮದಿ, ನಿರಾಳ. ಹುಡುಕಾಟ ನನ್ನದು ಜಗತ್ತು ಏನನ್ನಾದರೂ ಹೇಳಿಕೊಳ್ಳಲಿ!

- ಪಿ. ಚಂದ್ರಿಕಾ

ಈ ಅಂಕಣದ ಹಿಂದಿನ ಬರೆಹಗಳು:
ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು
ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು.
ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...