ಅಮೃತ ಸುರಿಸುವ ರಾತ್ರಿಗಳು ಏನನ್ನು ಹೆಪ್ಪಾಗಿಸುತ್ತವೆ?

Date: 02-05-2023

Location: ಬೆಂಗಳೂರು


''ಜಗತ್ತು ಮಾತ್ರ ಇದನ್ನು ಮಾಡು, ಇದನ್ನು ಮಾಡಬೇಡ ಎನ್ನುವ ನಿಬಂಧನೆಗಳನ್ನು ಹೇರುತ್ತಲೇ ಇರುತ್ತದೆ. ನಿಮ್ಮ ನಿಬಂಧನೆಗಳು ನಮಗೆ ಬೇಕಿಲ್ಲ ಎಂದು ಅನಿಸುವ ಕ್ಷಣವಿದೆಯಲ್ಲ ಅದೇ ಉನ್ನತ. ಯಾವ ನೆರವೂ ಇಲ್ಲದೆ, ಏಕಾಕಿಯಾಗಿ ನಿಲ್ಲುವ ಶಕ್ತಿ ಅದೆಲ್ಲಿಂದ ಬಂದುಬಿಡುತ್ತದೋ ಕಾಣೆ,'' ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ನಡೆಯದ ಬಟ್ಟೆ ಅಂಕಣದಲ್ಲಿ ‘ಅಮೃತ ಸುರಿಸುವ ರಾತ್ರಿಗಳು ಏನನ್ನು ಹೆಪ್ಪಾಗಿಸುತ್ತವೆ?’ ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

ಹೌದು ಕಣೆ ನಗ್ನತೆಗೆ ಸೌಂದರ್ಯ ಮಾತ್ರವಲ್ಲ ಕ್ರೌರ್ಯತೆಯೂ ಇರುತ್ತದೆ ಎನ್ನುವುದನ್ನು ಹೇಳುವುದು ಬೇಕಿತ್ತು. ಅದಕ್ಕಾಗಿ ಆ ಸೀರೀಸ್ ಅನ್ನು ಬರೆದೆ, ಬರೆದದ್ದೆಲ್ಲಾ ಸಮಾಧಾನ ತರುತ್ತದೆ ಎಂದೂ ಅಲ್ಲ, ಒಳಗಿನ ತಲ್ಲಣಗಳನ್ನು ಬರೆದು ಹೊರಹಾಕುವುದು ಮಾತ್ರ. ಒಮ್ಮೆ ಬರೆದೆ ಮತ್ತೆ ಅದರ ಕಡೆಗೆ ನೋಡುವುದಿಲ್ಲ ಅನ್ನಲಿಕ್ಕಾಗಲ್ಲ. ಕಾಡಿಸುವ ಕೆಲ ಸಂಗತಿಗಳು ಹಾಗೇ ಮನಸ್ಸಿನ ಪದರಗಳಲ್ಲಿ ಉಳಿದುಬಿಡುತ್ತದೆ. ಇನ್ಯಾವಾಗಲೂ ನಾವು ಊಹಿಸದ ರೀತಿಯಲ್ಲಿ ಎದ್ದು ಬರುತ್ತವೆ. ಈ ಗೆರೆಗಳಿವೆಯಲ್ಲ ಮಹಾನ್ ಹಠಮಾರಿಗಳು ಅವುಗಳನ್ನು ಪಳಗಿಸಬೇಕು. ಅವುಗಳಿಗೆ ಕರಗುವ ಗುಣ ಬರಬೇಕು ಎಂದರೆ ಅದು ಸಾಮಾನ್ಯ ಸ್ಥಿತಿ ಅಲ್ಲ. ನಾನೂ ಎಷ್ಟೋ ಸಲ ಪ್ರಯತ್ನ ಪಟ್ಟಿದ್ದೇನೆ, ದೂರದ ಯಾವ ಶಬ್ದಕ್ಕೋ ಮಲಗಿದ್ದ ನಾಯಿ ಮರಿ ತನ್ನ ಕಿವಿಗಳನ್ನು ನಿಲ್ಲಿಸಿಕೊಂಡುಬಿಡುತ್ತಲ್ಲ ಹಾಗೆ ಮನಸ್ಸು ನಿಮಿರಿಕೊಳ್ಳುತ್ತದೆ. ಹಾಗೆ ಕೇಳಿಸಿಕೊಂಡ ಎಲ್ಲವೂ ಈ ಗೆರೆಗಳಿಗೆ ದಕ್ಕುತ್ತದೆ ಎಂದಲ್ಲ. ಮನಸಿನಿಂದ ಗೆರೆಗೆ ವರ್ಗಾವಣೆ ಆಗಬೇಕಲ್ಲ? ನೆಲದೆದೆಯ ಸಾರ ಹಣ್ಣಿನಲಿ ಕಾಣುತ್ತದಲ್ಲ ಹಾಗೆ. ಹೇಳುವವರು ನಿನಗದು ದಕ್ಕಿದೆ ಎನ್ನಬಹುದು, ಆದರೆ ನಾನೇ ಅಲ್ಲವೇ ನನ್ನ ಚಿತ್ರಗಳ ಮೊದಲ ನೋಡುಗಳು. ಕಲ್ಪನೆಯಲ್ಲಿ ಇರುವ ಚಿತ್ರಕ್ಕೂ ಕ್ಯಾನ್ವಾಸಿನ ಮೇಲೆ ಮೂಡುವ ಚಿತ್ರಕ್ಕೂ ಅಗಾಧವಾದ ವ್ಯತ್ಯಾಸಗಳಿರುತ್ತವೆ. ನನ್ನೊಳಗೆ ಅಸಮಾಧಾನ ಮೂಡಿ ಅರೆ ಇದು ಹೀಗಲ್ಲ ಅನ್ನಿಸಿಬಿಟ್ಟರೆ ಅದನ್ನು ಜಗತ್ತಿನ ಮುಂದೆ ಹೇಗೆ ಇಡಲಿ? ನನಗೂ ಚಂದ್ರನಿಗೂ ಇಂಥಾ ವಿಷಯಗಳಿಗೆ ಮಾತಾಗುತ್ತಿದ್ದುದು. ಒಮ್ಮೆ ವೇದಿಕೆಯಲ್ಲಿ, `ಕಲಾವಿದನಿಗೆ ಪ್ರತಿ ದಿನವೂ ಹೆರಿಗೆಯ ಬೇನೆ’ ಎಂದಿದ್ದ. ನಾನು ನಕ್ಕಿದ್ದೆ ಹೊಟ್ಟೆಯೊಳಗಿನ ಕಂದ ಕಾಲ ಮೇಲಿನ ಭಾರ ನರ ನರಗಳಲ್ಲೂ ನೋವು, ಮಿಲುಕಾಟ. ಇದು ಪೂರ ದೈಹಿಕ. ಸುಮ್ಮನೆ ಏನೋ ಹೇಳುವುದರಲ್ಲಿ ಅರ್ಥವಿಲ್ಲ. ನನ್ನ ನಗು ಅವನಲ್ಲಿ ಮಾತ್ರವಲ್ಲ ನನ್ನ ಸುತ್ತಲಿನ ಎಲ್ಲರಲ್ಲೂ ಅಸಮಾಧಾನ ಹುಟ್ಟುಹಾಕಿತ್ತು. ಯಾಕೆಂದರೆ ಅವರ ಅಭಿವ್ಯಕ್ತಿಗೆ ಅನುಭವದ ಆಯ್ಕೆಗಳೇ ಇರಲಿಲ್ಲ, ಅದನ್ನು ವಿವರಿಸಲು. ಒಂದು ಹೆರಿಗೆಗೆ ಸುಸ್ತಾಗುವ ನಮ್ಮ ಸ್ಥಿತಿಯನ್ನು ನಿತ್ಯದ ಹೆರಿಗೆಗೆ ವಿಸ್ತರಿಸಿ ನೋಡು, ಆಗ ನಿನಗೂ ಇಂಥಾ ಅರ್ಥವಿಲ್ಲದ ಮಾತುಗಳಲ್ಲಿ ಬೇಸರ ಮೂಡುತ್ತದೆ. `ಆಯಿತು ನಮ್ಮ ಹೋಲಿಕೆ ಸರಿಯಿಲ್ಲ ಅಂದರೆ ಮತ್ತೇನು ಹೇಳು?’ ಎಂದು ನನ್ನೇ ಕೇಳುತ್ತಾರೆ. ಅದೂ ನಿಜವೇ ತೇಜೂ, ಎರಡರ ಅನುಭವ ಇರುವ ನಾನಷ್ಟೇ ಅದರ ಬಗ್ಗೆ ವಿವರಣೆ ಕೊಡಬೇಕು.

ನಿಜ ಆ ಒಂದು ಕ್ಷಣ ಮನಸ್ಸು ವಿಕ್ಷಿಪ್ತವಾಗಿ ವರ್ತಿಸುತ್ತೆ - ಸಂದೇಹಗಳು ಎದೆಯಾಳದಿಂದೆದ್ದು ಎದುರು ಕೂತು ಹಠಮಾರಿಯಂತೆೆ ಹೊಕ್ಕುಳ ವಾಂಛೆಯ ಬಗ್ಗೆ ಕೇಳುತ್ತದಲ್ಲ ಹಾಗೆ. ಹುಟ್ಟುವ ಸಾಧ್ಯತೆಯು ಹುಟ್ಟಿಸುವ ಸಾಧ್ಯತೆಯಲ್ಲಿ ವಿರಮಿಸಿ, ಮುಂದೊಂದು ದಿನ ಮರಕೆ ತೊಟ್ಟಿಲ ಕಟ್ಟಿ, ಕಳೆದ ಲಾಲಿ ಹಾಡುಗಳ ಹುಡುಕಿ, ಇಲ್ಲದಿದ್ದರೆ ಕಟ್ಟಿ ಹಾಡುತ್ತೇವಲ್ಲ ಆಗ ಸೂರ್ಯನೂ ನಮ್ಮ ಕಡೆಗೆ ನೋಡುತ್ತಾ, ತನ್ನ ರತ್ನ ರಥದ ಗಾಲಿಗಳಿಗೆ ಮತ್ತಷ್ಟು ಕಾಂತಿ ತುಂಬಿ ಹೊರಡುತ್ತಾನೆ ನೋಡು ಆಗ ಬೀಸುವ ಮಾರುತ ಎಲ್ಲಿಂದಲೋ ಬಂದಳಿಕೆ ಬೀಜವನ್ನು ಹೊತ್ತು ತಂದು, ಮಣ್ಣಿಗಿಲ್ಲದ ಪರಧ್ಯಾನದಲಿ ನಿಂತ ಮರದ ತೇವದ ಎದೆಯಲ್ಲಿ ಇಟ್ಟು ಹುಟ್ಟಿಸು ಎನ್ನುತ್ತದೆ. ಹುಟ್ಟಿಸು ಎಂದ ತಕ್ಷಣ ಮರದೆದೆಯಲ್ಲಿ ಮೊಲೆ ಮೂಡುತ್ತದೆ. ಅದನುಂಡ ಬೀಜ ಹಗಲೂ ರಾತ್ರಿಗಳ ಎದೆಯನ್ನು ಹಠದ ಒಕ್ಕಲು ಮಾಡಿ ಚಂದದ ಎಲೆಗಳ ತೂಗಿಸಿಯೇ ಬಿಡುತ್ತದೆ. ಒಬ್ಬರು ಇನ್ನೊಬ್ಬರನ್ನು ಬಳಸಿಕೊಳ್ಳಬಾರದು ಬರೀ ಪ್ರೀತಿಸಬೇಕು ಎನ್ನುತ್ತಾರೆ. ತೇಜೂ ಆದರೆ ಪ್ರಕೃತಿ ಇದನ್ನು ಹೇಳಿಕೊಡುತ್ತದಲ್ಲೇ! ಮತೃತ್ವಕ್ಕೂ ಎದುರಾಗಿ ಇನ್ನೊಂದು ಮಾತೃತ್ವ ಹೀಗೆ ತನ್ನನ್ನು ಸರಿಹೊಂದಿಸಿಕೊಂಡು ಬಿಡುತ್ತದೆ.

ಜಗತ್ತು ಮಾತ್ರ ಇದನ್ನು ಮಾಡು, ಇದನ್ನು ಮಾಡಬೇಡ ಎನ್ನುವ ನಿಬಂಧನೆಗಳನ್ನು ಹೇರುತ್ತಲೇ ಇರುತ್ತದೆ. ನಿಮ್ಮ ನಿಬಂಧನೆಗಳು ನಮಗೆ ಬೇಕಿಲ್ಲ ಎಂದು ಅನಿಸುವ ಕ್ಷಣವಿದೆಯಲ್ಲ ಅದೇ ಉನ್ನತ. ಯಾವ ನೆರವೂ ಇಲ್ಲದೆ, ಏಕಾಕಿಯಾಗಿ ನಿಲ್ಲುವ ಶಕ್ತಿ ಅದೆಲ್ಲಿಂದ ಬಂದುಬಿಡುತ್ತದೋ ಕಾಣೆ. ಜಗತ್ತಿನ ಜೊತೆ ನಮ್ಮ ಜಗಳ ಇದೆಯಲ್ಲ ಅದು ನಮ್ಮನ್ನು ಮತ್ತಷ್ಟು ಬಲ ಮಾಡುತ್ತದೆ. ನನ್ನ ತನದತ್ತ ಕೈ ತೋರುತ್ತಾ ಅದನ್ನು ಬಲಗೊಳಿಸುತ್ತದೆ. ಅದಕ್ಕೆ ನಿಬಂಧನೆಗಳನ್ನು ನನಗಲ್ಲ ಎಂದು ದಾಟಿ ಹೋಗುವ ನಿರ್ಧಾರಕ್ಕೆ ಬಂದುಬಿಡುತ್ತೇವೆ-ಹತ್ತಿಯಂಥ ಬೆಳ್ಳಕ್ಕಿ ಹಸಿರು ಗಿಡದ ಮೇಲೆ ಕುಳಿತ ಹಾಗೆ ಒಡೆದು ತೋರುವ ಹಾಗೆ. ತುಂಬಾ ಸಂಪ್ರದಾಯವಾಗಿ ಕಾಣುವ ನಾನು ಬರೆಯುತ್ತಾ ಬರೆಯುತ್ತಾ ನನ್ನೊಳಗಿನ ಬಂಡಾಯಕ್ಕೆ ಎದುರಾಗಿಬಿಡುತ್ತೇನೆ. ಆಗ ಜಗತ್ತು ಮರೆತ ಅಥವಾ ಪಕ್ಕಕ್ಕಿಟ್ಟ ನಾನೆಂದೂ ಕಾಣದ ಬಣ್ಣವೊಂದು ತಟ್ಟನೆ ಮೈದೋರಿಬಿಡುತ್ತದೆ. ರೇಖೆಯ ಬೆನ್ನು ಬಿದ್ದವಳಿಗೆ ಬಣ್ಣದ ಬೆಡಗು ಸಹಜ. ಆದರೆ ಅಸಮಾನ್ಯ ಎಂದು ಪರಿಗಣಿಸುವ ಆ ಬಣ್ಣವ ನೋಡುತ್ತಾ ನಾನೇ ಕೆಂಡದುಂಡೆಯಾಗಿ ಬಿಡುತ್ತೇನೋ- ಅದನ್ನು ನನ್ನದನ್ನಾಗಿಸಿಕೊಳ್ಳದಿದ್ದರೆ- ನನಗೆ ಬೇರೆ ದಾರಿಯಿಲ್ಲವೆನ್ನಿಸಿಬಿಡುತ್ತದೆ. ಆಕಾಶದಲ್ಲಿ ಚೆಲ್ಲಿದ ವಜ್ರದಂಥಾ ನಕ್ಷತ್ರಗಳು ತುಂಬು ಸಂಯಮದಲ್ಲಿ ಕಣ್ಣನ್ನು ಪಿಳುಕಿಸುವಾಗ ಸಿಕ್ಕವರನ್ನು ಎದುರು ಕೂರಿಸಿಕೊಂಡು ನನಗೂ ಆ ಬಣ್ಣವನ್ನು ದಕ್ಕಿಸಿಕೊಳ್ಳುವ ದಾರಿ ತೋರಿಸಿ ಎಂದು ಬೇಡುತ್ತೇನೆ. ಅವರು, `ಹುಡುಕಿಕೊಳ್ಳಿ ಸಿಕ್ಕರೂ ಸಿಗಬಹುದು- ಅದೃಷ್ಟವಿದ್ದರೆ’ ಎಂದು ಮುಂದೆ ಸಾಗುತ್ತಾರೆ. ಬಣ್ಣವೊಂದು ಬೆಳಕಾಗಿ, ಬೆಳಕಿನ ದಾರವಾಗಿ ಸಿಕ್ಕ ಸಿಕ್ಕಲ್ಲೆಲ್ಲಾ ಸುತ್ತಿಕೊಳ್ಳುವಾಗ, ನೀಲಕಣ್ಣಿನ ಒಳಗೆ ತಂಪು ಬೆಳಕಿಗೆ ಕಾದವರು ಹೇಳುತ್ತಾರೆ, ಹಿರಿಯರು ಕೊಟ್ಟ ಕುದುರೆಯ ಹತ್ತಿ ಕುಳಿತ ಕತ್ತೆಗಳು ನೀವು ಎಂದು. ಮನಸ್ಸು ಹೇಳುತ್ತದೆ ಇರಬಹುದು, ಈ ಶಕ್ತಿ ನಮಗೆ ಸಿಕ್ಕಿದ್ದಾದರೂ ಹೇಗೆ ಒಮ್ಮೆ ಕೇಳಿಕೋ. ಕೆಂಡದಂಥಾ ನಕ್ಷತ್ರಗಳು ಈಗ ಇಜ್ಜಿಲಾಗಿವೆ. ಇಂದಲ್ಲಾ ನಾಳೆ ಅವು ಬೆಂಕಿಯ ಸ್ಪರ್ಷಕ್ಕೆ ನಿಗಿನಿಗಿಸುತ್ತವೆ ಖಂಡಿತಾ. ಈಗ ಚಿತ್ತದಾಳದಲ್ಲಿ ಎಚ್ಚೆತ್ತ ಎಲ್ಲವೂ ಸೋಜಿಗದ ಗೂಡು. ಹಾಡು, ಎಳೆ, ಬಣ್ಣ, ಪದ ಎಲ್ಲವೂ ವಿವಶಗೊಳ್ಳುವಾಗ ಮುಷ್ಟಿಯಲ್ಲಿ ಹಿಡಿದ ಜೀರುಂಡೆಯನ್ನು ಆಕಾಶಕ್ಕೆ ತೋರಿದಾಗ ಜುಯ್ಯೆಂದು ಹಾರಿತ್ತಲ್ಲವೆ! ಆಗಲೇ ಕಣೇ ಆ ಹಾಲಕ್ಕಿಯವನ ಶಕುನ ಕಿವಿಗೆ ಬಿದ್ದದ್ದು.

ಸದಾ ಮಾತುಗಳನ್ನು ತುಂಬಿಕೊಳ್ಳುತ್ತಿದ್ದ ನನಗೆ ನನಗೆ ಹೇಳಲು ಉಳಿದಿರುವ ಸಂಗತಿ ಇದೊಂದೆ ಅನ್ನಿಸಿದ್ದು ಅವತ್ತು ಮಾತ್ರವೇ. ಜಗತ್ತಿನಲ್ಲಿ ನಾನು ಯಾವತ್ತಾದರೂ ಘಟಿಸುತ್ತದೆ ಎಂದು ನಿರೀಕ್ಷಿಸದ, ನನ್ನೊಳಗಿನ ಧ್ಯಾನಕ್ಕಿಂತಲೂ ಮಿಗಿಲಾಗಿದ್ದ ಚಂದ್ರಾ ನನ್ನನ್ನು ನಾನೇ ಸಹಾನುಭೂತಿಯಿಂದ ನೋಡುವ ಹಾಗೆ ಮಾಡಿಬಿಟ್ಟಿದ್ದ. ಹನಿಯ ಕಿವಿಗೆ ಯಾವ ಸಂಗತಿ ಬೀಳಬಾರದಿತ್ತೋ ಅವತ್ತು ಅದು ಬಿದ್ದುಬಿಟ್ಟಿತ್ತು. ನಾನು ನನ್ನ ಜೀವವನ್ನೇ ನೂಲಾಗಿ ಮಾಡಿ ನುಲುಚಿ, ನುಲುಚಿ ಕೈ ಬೆರಳುಗಳಿಗೆ ಸುತ್ತಿಕೊಂಡಿದ್ದೆ. ಏಕತ್ರಗೊಂಡ ಮನಸ್ಸು ಮಾತನ್ನು ಬಯಸುವುದಿಲ್ಲ ಎನ್ನುವ ನಂಬಿಕೆ ಹುಸಿಯಾಗಿತ್ತು ಅಂದು. ಚಂದ್ರಾ ಮಾತಾಡುತ್ತಿದ್ದ, `ಶ್ಯಾಮು ನಾನೀಗ ಇನ್ನೊಂದೇ ಸಂಬಂಧಕ್ಕೆ ಬಿದ್ದಿದ್ದೇನೆ. ಬೇಕೆಂದೇನೂ ಅಲ್ಲ. ಅದು ಹಾಗೆ ಆಗಿಬಿಟ್ಟಿತು. ನಾನು ಎರಡರ ಮಧ್ಯೆ ಇರಲಾರೆ. ಆಯ್ಕೆ ಎಂದರೆ ಅವಳೇ ಎಂದು ಯಾಕೆ ಅನ್ನಿಸಿತೋ ಕಾಣೆ, ನಿನ್ನನ್ನು ನೀನು ನೋಡಿಕೊಳ್ಳಬಲ್ಲೆ. ಆದರೆ ಆ ಹುಡುಗಿ ನನಗಿಂತ ತೀರಾ ಚಿಕ್ಕವಳು...’ ಅವನ ಮಾತಿಗಳೂ ಒಂದೊಂದು ಹಾವ ಭಾವಗಳೂ ಕಣ್ಣ ಪಾಪೆಯ ಒಳನುಗ್ಗಿ ಹಿಂದಿನ ಎಲ್ಲ ಚಿತ್ರಗಳನ್ನು ಛಿದ್ರವಾಗಿಸುತ್ತಾ ಬಂದ ಹಾಗೆ ಸಂಕಟ ಸುತ್ತುತ್ತಿತ್ತು. ಬರೆದ ಚಿತ್ರಗಳನ್ನೆಲ್ಲ `ನಂದು ನನಗೆ ಕೊಟ್ಟುಬಿಡು’ ಎಂದು ಪುಟ್ಟ ಹುಡುಗನ ಹಾಗೆ ವಾಪಾಸು ತೆಗೆದುಕೊಳ್ಳುವಾಗ ಬಣ್ಣ, ರೇಖೆಗಳೆಲ್ಲವೂ ಭಾವದ ಜೊತೆಗೆ ಮಾಯವಾಗುತ್ತಾ, ಖಾಲಿ ಕ್ಯಾನ್ವಾಸ್ ಮಾತ್ರ ಉಳಿದುಬಿಟ್ಟಿತ್ತು. ಆ ಕ್ಷಣಕ್ಕೆ ಮತ್ತೆ ಬರೆಯಲಿಕ್ಕೆ ನನ್ನ ಬಳಿ ಏನೂ ಇರಲಿಲ್ಲವೇ. ಅತ್ಯಂತ ಸಂಕಟದಿಂದ ಕೇಳಿದ್ದೆ `ಇಷ್ಟೆಲ್ಲಾ ಆಗುವಾಗ ನಿನಗೆ ಹನಿ ನೆನಪಾಗಲಿಲ್ಲವೇ? ಜಗತ್ತೇ ನಿನ್ನ ಕೈಲಿರುವಾಗ ಯವುದೋ ಸಣ್ಣ ಚೂರಿಗಾಗಿ ಹಂಬಲಿಸುತ್ತಿದ್ದೀಯಲ್ಲಾ’ ಎಂದೆ. ಚಂದ್ರ ಉತ್ತರಿಸಲಿಲ್ಲ, ಉತ್ತರಿಸುವುದೂ ಇಲ್ಲ. ಮೌನಕ್ಕೆ ಮೊರೆ ಹೋಗುವುದು ಅತ್ಯಂತ ಸುರಕ್ಷಿತ ತಂತ್ರ. ನಾನು ಎಂದೂ ನಂಬದ, ಆದರೂ ಆಗಾಗ ಅಭ್ಯಾಸ ಬಲದಲ್ಲಿ ಮಾತನಾಡುವ ದೇವರು ಎನ್ನುವ ತುಂಟ ಹುಡುಗ ನನ್ನ ಕಣ್ಣಿನ ತುಂಬಾ ತಾನೇ ತುಂಬಿದ್ದ ಸುಂದರ ಕನಸುಗಳನ್ನು ತುಂಬಿದ್ದ. ಯಾಕೋ ಸರಿ ಇಲ್ಲ ಕಣೆ ಎಂದು ಅಳಿಸಿ ಹೊಸ ಕನಸು ಕೊಡುತ್ತೇನೆ ಇರು ಎಂದು ಎದ್ದು ಹೋಗಿದ್ದ. ನಾನು ಕಾಯುತ್ತಿದ್ದೆ ಅವನು ಮತ್ತೆ ತರುವ ಕನಸುಗಳಿಗಾಗಿ.

ಬೇಸಿಗೆಯ ಆ ರಾತ್ರಿ ಚಂದ್ರ ತನ್ನ ಇನ್ನೊಂದೆ ಸಂಬಂಧದ ಬಗ್ಗೆ ನನ್ನ ಬಳಿ ಹೇಳಿದಾಗ ನಾನು ದಂಗಾಗಿದ್ದೆ. ಯಾವತ್ತೂ ಅಂದುಕೊಂಡಿರಲಿಲ್ಲ ಚಂದ್ರ ಹೀಗೆ ಮಾಡಬಹುದೆಂದು. ನಾನು ಚಂದ್ರನನ್ನು ಯಾವಾಗಲೂ ತಮಾಷಿ ಮಾಡ್ತಿದ್ದೆ, `ಗಂಡಸರಿಗೆ ವಯಸ್ಸಾದಂತೆಲ್ಲಾ ಚಾರ್ಮ್ ಹೆಚ್ಚುತ್ತದೆ. ಹುಡುಗಿಯರ ದಂಡೇ ಸುತ್ತಾ ನೆರೆಯುತ್ತದೆ. ಅದೇ ಹೆಣ್ಣಿಗೆ ವಯಸ್ಸಾದಂತೆ ಅವಳು ಆದರಣೀಯಳಾಗುತ್ತಾಳೆ, ಕಾಮರಹಿತಳಾಗುತ್ತಾಳೆ’ ಎಂದು. ಅದು ಶುದ್ಧ ಸುಳ್ಳು ಎಂದು ತುಂಬಾ ಸಲ ಅನ್ನಿಸಿದೆ. ಬೇಕೆನ್ನುವ ಬಯಕೆಗೆ ಯಾವ ವಯಸ್ಸೂ ಲೆಕ್ಕವಲ್ಲ. ಹೆಣ್ಣೂ ಹೊರತಲ್ಲ. ಆದರೆ ಜಗತ್ತು ಹಾಗೆ ಭಾವಿಸುವುದರಿಂದ ನಮ್ಮ ಜೊತೆ ನಾವಷ್ಟೆ ಗುದ್ದಾಡುತ್ತಾ ಒಳಗಿನ ಲೋಕವನ್ನು ತಲ್ಲಣಗೊಳಿಸಿಕೊಂಡು ಬಿಡುತ್ತೇವೆ. ಕೋಪ ಬಂದಾಗ, ಕೀಟಲೆ ಮಾಡಬೇಕೆನ್ನಿಸಿದಾಗ ನಾನು ಅವನಿಗೆ, `ನಿನ್ನ ನೂರು ಜನ ಪ್ರೇಯಸಿಯರು ನಿನ್ನ ಒಟ್ಟಿಗೆ ಕಾಡಲಿ’ ಎನ್ನುತ್ತಿದ್ದೆ. ಆಗೆಲ್ಲ ಅವನು, `ಅಯ್ಯೋ ಶ್ಯಾಮು ನಿನಗೆಂಥಾ ಭ್ರಮೆಯೇ’ ಎನ್ನುತ್ತಿದ್ದ. ಎಂದಾದರೂ ಒಮ್ಮೆ, `ಇವತ್ತು ತುಂಬಾ ಉದಾರವಾಗಿರುವೆ, ನನ್ನ ಬಿಟ್ಟು ನಿನ್ನ ಕನಸಿಗೆ ಯಾರೂ ಬರಬಹುದು’ ಎನ್ನುತ್ತಿದ್ದೆ. ಹುಸಿಮುನಿಸಲ್ಲಿ ಅವನು, `ಉದಾರವಾಗುವುದೇನೂ ಬೇಡ, ನೀನೇ ಸಾಕು’ ಎನ್ನುತ್ತಿದ್ದ. ಅವನ ಮೀಸೆಯ ತುದಿಯಲ್ಲಿ ಅಡಗಿದ್ದ ನಗುವನ್ನು ನೋಡಿ, ಮತ್ತಷ್ಟು ಗೇಲಿ ಮಾಡುತ್ತಿದ್ದೆ. ಇವೆಲ್ಲವನ್ನೂ ನಾನು ನಿಜ ಎಂದೇನೂ ನಂಬಿಕೊಂಡಿರಲಿಲ್ಲ. ಆದರೂ ಅವನಿಗೆ ಕೆಲ ಜನರ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂದೂ, ಕೆಲವರ ಬಗ್ಗೆ ಪ್ರೀತಿ, ಮೋಹ ಇದೆ ಎಂದೂ ಗೊತ್ತಿತ್ತು. ಆದರೆ ನಾನೇನೂ ಮಾಡದವಳಾಗಿಬಿಟ್ಟಿದ್ದೆ. ನನ್ನೆದುರೇ ಅವನನ್ನು ತಬ್ಬಿಕೊಳ್ಳುತ್ತಿದ್ದ ಕೆಲ ಹೆಂಗಸರ ಬಗ್ಗೆ ನನಗೆ ಹೊಟ್ಟೆಕಿಚ್ಚಾಗುತಿತ್ತು. ನಾನು ಹೊರಗೆ ಸಾಭ್ಯಸ್ಥಳ ಹಾಗೆ ಮುಖವಾಡ ಹಾಕಿ ಅವರ ಜೊತೆಗೂ ನಗುತ್ತಿದ್ದೆ. ಒಳಗೆ ಬೆಂಕಿಯೊಂದು ಅವರನ್ನು ಹಿಡಿದು ಜಗಳ ಮಾಡಬೇಕೆನ್ನಿಸುತ್ತಿತ್ತು. ಎಷ್ಟೋ ವೇಳೆ, `ಸಾರವೇ ಇಲ್ಲದ ನಿನ್ನ ನಿರ್ಧಾರಗಳು ಕೆಲಸಕ್ಕೆ ಬರಲ್ಲ ಶ್ಯಾಮು’ ಅಂತ ಹೇಳುತ್ತಿದ್ದರೂ ನಾನು ರೋಗಿಯಂತೆ, ನನ್ನನ್ನು ನಾನೇ ನಿತ್ರಾಣಗೊಳಿಸಿಕೊಳ್ಳುತ್ತಿದ್ದೆ. ಹೆಂಡತಿಯಾಗುವುದು ಎಂದರೆ, ಅದರಲ್ಲೂ ಒಳ್ಳೆಯ ಹೆಂಡತಿಯಾಗುವುದೆಂದರೆ ಹುಚ್ಚು ಕುದುರೆಯನ್ನು ಏರಿದಂತೆ- ಬೀಳುತ್ತಾ, ಏಳುತ್ತಾ ಪೆಟ್ಟಾದರೂ ಮತ್ತೆ ಮತ್ತೆ ಅದರ ಮೇಲೇರುತ್ತಾ, ಅದರಲ್ಲೆ ಸುಖ ಕಾಣುತ್ತಾ ನನ್ನಷ್ಟು ದುರಾದೃಷ್ಟವಂತಳು ಬೇರೆ ಯಾರೂ ಇಲ್ಲವೇನೋ ಎಂದು ಮರುಕ ಪಡುವುದು. ಅದೊಂದು ದುಃಖಕರ ಸಂಗತಿಯೆಂದು ಈಗಲೂ ನನಗನ್ನಿಸುವುದಿಲ್ಲ ಯಾಕೇ?

ಚಂದ್ರನ ಮಾತು ನನ್ನ ಕಿವಿದೆರೆಗೆ ಬೀಳುವಾಗ ನಾನು ತುಂಬಾ ಆತಂಕದಿಂದಿದ್ದೆ. ಎಂದಿಗಾದರೂ ಸರಿಯೇ ನಿನ್ನ ಜೊತೆ ಮಾತ್ರ ನಾನು ಬಯಸುವುದು ಎಂದಿದ್ದ ಚಂದ್ರನಾ ಇದು? ನನ್ನ ಮೇಲಿದ್ದ ಪ್ರೀತಿ ಹೀಗೆ ಹೇಗೆ ಶಿಫ್ಟ್ ಆಗಿಬಿಟ್ಟಿತು? ತನ್ಮಯತೆಯಿಂದ ನಾನು ಬರೆಯುವ ಚಿತ್ರವನ್ನು ದೂರದಿಂದ ನೋಡುತ್ತಾ ಕೂತಿರುತ್ತಿದ್ದ ಅವನನ್ನು ಏನಾಯ್ತು ಎಂದು ಕೇಳಿದಾಗ ಸೀದಾ ನನ್ನ ಕೈಯಿಂದ ಕುಂಚವನ್ನು ತೆಗೆದುಕೊಂಡು ಕೆಂಪು ಬಣ್ಣದಲ್ಲಿ ಅದ್ದಿ ಖಾಲಿ ಇದ್ದ ನನ್ನ ಹಣೆಗಿಟ್ಟು, `ಈಗ ಪೂರ್ಣವಾಯಿತು ನೋಡು’ ಎಂದಿದ್ದ. ನನಗೆ ಹುಸಿಕೋಪ- `ನನ್ನ ಚಿತ್ರವನ್ನು ನೋಡುತ್ತೀಯ ಅಂದುಕೊಂಡರೆ ನನ್ನ ನೋಡುತ್ತಿದ್ದೆಯಾ ನೀನು’ ಎಂದು ರೇಗಿದ್ದೆ. ಅವನು ನನ್ನ ಕೈಗಳನ್ನು ತನ್ನ ಕೈಗೆ ತೆಗೆದುಕೊಂಡು ಕ್ಯಾನ್ವಾಸಿನ ಮೇಲೆ ಆಡಿಸುತ್ತಾ, ನಾಣು ಬರೆದ ಚಿತ್ರಕ್ಕೆ ಮತ್ತೇನನ್ನೋ ಸೇರಿಸುತ್ತಾ, `ನೀನು ಅದ್ಭುತ ಶ್ಯಾಮೂ’ ಎನ್ನುತ್ತಿದ್ದರೆ, ಕಿವಿಯ ಮೇಲಾಡುತ್ತಿದ್ದ ಅವನ ಉಸಿರ ಘಮಲಲ್ಲಿ ತೇಲಿಹೋಗಿ ಸುಖದಿಂದ ಹೂಂಗುಟ್ಟಿದ್ದೆ. ಅವತ್ತು ನಾವಿಬ್ಬರೂ ಸೇರಿ ಬರೆದ ಚಿತ್ರ ಅದಕ್ಕದೇ ಪ್ರಭೆ ಎನ್ನುವ ಹಾಗಿತ್ತ್ರು. ಎರಡು ಕೈಗಳು ಎರಡು ಮನಸ್ಸುಗಳು ಒಂದಾಗಿ ಆ ಚಿತ್ರವನ್ನು ಬರೆದವು ಎಂದರೆ ನಂಬಬೇಕು. ವಿನಮ್ರವಾಗುತ್ತಿದ್ದ ರೇಖೆಗಳು ತಟ್ಟನೆ ಸೆಟೆದೆದ್ದು ಹಠಮಾರಿಯ ಹಾಗೆ ನಿಲ್ಲುತ್ತಿದ್ದವು, ಅದನ್ನು ಬಾಗಿಸುವ ಜಿದ್ದಿಗೆ ಬಿದ್ದಾಗ ಅಂತ್ಯವೊಂದಿದೆ ಎನ್ನುವುದೇ ಮರೆತುಹೋಗುತ್ತಿತ್ತು. ಒಳಗೆ ನಿಲುಕದ ಭಾವಗಳನ್ನು ಕಾಣಬಯಸಿದ್ದ ರೇಖೆಗಳು ನರಳುತ್ತಿದ್ದವು ನಲಿಯುತ್ತಿದ್ದವು. ಅದರಲ್ಲಿ ಮುಳುಗಿಹೋಗಿದ್ದ ನಮ್ಮ ಅರಿವಿಗೇ ಬರಲಿಲ್ಲ. ಲೀಲೆಯೊಂದು ನಮ್ಮಿಬ್ಬರಲ್ಲಿ ಆಡುತ್ತಾ, ಜಗತ್ತಿಗೆ ಸವಾಲನ್ನು ಒಡ್ಡುತ್ತಾ ಅವೇ ನಮ್ಮನ್ನು ಅಚ್ಚರಿಯಿಂದ ನೋಡುತ್ತಿದ್ದವಲ್ಲ ತೇಜೂ. ನಮ್ಮ ಈ ಚಿತ್ರ ಸಾಧ್ಯತೆಯಾಗಿ ಜಗತ್ತಿಗೆ ಕಂಡುಬಿಟ್ಟಿತ್ತು. ಅದಾದ್ ಮೇಲೂ ಮತ್ತಷ್ಟು ಚಿತ್ರಗಳನ್ನು ಬರೆದೆವು. ಮೊದಲು ಬರೆದದ್ದು ಅಯಾಚಿತ, ಮುಂದೆ ಬರೆದದ್ದು ಪ್ರಯತ್ನ-ಪ್ರಯೋಗ. ಅದಕ್ಕೆ ಕೊಟ್ಟ ಹೆಸರೇ ಜುಗಲ್ಬಂದಿ.

ಈಗಲೂ ನಾನು ಆ ಹ್ಯಾಂಗೋವರ್‌ನಿಂದ ಹೊರಗೆ ಬಂದಿಲ್ಲ ತೇಜೂ. `ನೀನು ನನಗೆ ಬೇಡ’ ಎನ್ನುವುದು ಚಂದ್ರನ ಸ್ವಾತಂತ್ರ÷್ಯದ ಭಾಗವಾದರೂ ನನ್ನ ಜೀವಿತದ ಮಾರ್ಗಗಳನ್ನು ಮುಚ್ಚಿದ ಹಾಗನ್ನಿಸುತ್ತೆ. ಅಂದು ತುಂಬಾ ಅತ್ತೆ. ನನ್ನನ್ನು ಹೇಗೆ ಸಮಾಧಾನ ಮಾಡಬೇಕೆಂದು ಬಹುಶಃ ಚಂದ್ರನಿಗೂ ಅರ್ಥವಾಗಲಿಲ್ಲ. ಅವತ್ತೆ ಮಧ್ಯ ರಾತ್ರಿ ಆಕಾಶವನ್ನು ನೋಡುತ್ತಾ ಟೆರೇಸಿನ ಮೇಲೆ ಮಲಗಿದ್ದ ನನ್ನ ಬಳಿಗೆ ಚಂದ್ರ ಬಂದಿದ್ದ. `ಏಳು ಶ್ಯಾಮು, ನಾನು ಆ ಸಂಬಂಧದಲ್ಲಿ ತುಂಬಾ ಮುಂದೆ ಬಂದುಬಿಟ್ಟಿದ್ದೇನೆ ನಮ್ಮಿಬ್ಬರ ಪಯಣ ಇಲ್ಲಿಗೆ ಮುಗಿದ ಹಾಗೆ, ಅದನ್ನು ಅಕ್ಸೆಪ್ಟ್ ಮಾಡು’ ಎಂದಿದ್ದ. ಆಗಲೆ ಆ ಹಾಲಕ್ಕಿಯವನು, `ಶುಭವಾಗುತೈತೆ ಶುಭವಾಗುತೈತೆ ಹಾಲಕ್ಕಿ ಶಕುನ ನುಡಿತೈತೆ’ ಎಂದು ಬುಡಬುಡಿಕೆಯ ಸಹಿತ ಹೊರಟಿದ್ದು. ನಾನು ಟೆರೇಸಿನ ಅಂಚಿಗೆ ಓಡಿದ್ದೆ. ಚಂದ್ರ ಗಾಬರಿಯಾಗಿದ್ದ- ನಾನೆಲ್ಲಿ ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೋ ಎಂದು. ಆದರೆ ನಾನು ಅಂಚಲ್ಲಿ ನಿಂತು ಮೂಕ ವಿಸ್ಮಿತಳಾಗಿ ನೋಡುತ್ತಿದ್ದೆ. ಚಂದ್ರಾ ನಾನು ಏನು ನೋಡುತ್ತಿದ್ದೇನೆ ಎಂದು ಬಗ್ಗಿ ನೋಡಿದ ಅವನಿಗೆ ಏನೂ ಕಾಣಲಿಲ್ಲ. ಆದರೆ ನನಗೆ ಮಾತ್ರ ಬಾಯನ್ನು ತೆರೆದು ಬೆಳದಿಂಗಳ ಜೊಲ್ಲನ್ನು ಸುರಿಸುತ್ತಾ ಕುಳಿತಿದ್ದ ಅದೇ ಹಾಲಕ್ಕಿ ಕಂಡಿತ್ತು. ಶಕುನ ನುಡಿವವ ತಿರುಗಿ ನೋಡಿದ್ದ, ಅರೆ ಅವನು ಯಾರಂತೀಯೇ! ಅದೇ ನಮ್ಮೂರ ಬುಡುಬುಡಿಕೆ ಕೃಷ್ಣಪ್ಪನೇ!! ನನ್ನ ಕಂಡವನೇ, `ಶುಭವಾಗತೈತೆ ತಾಯಿ ಶುಭವಾಗತೈತೆ ಎಂದಿದ್ದ’ ಶ್ಯಾಮು ಕಂಠದಲ್ಲಿ ಇದ್ದಕ್ಕಿದ್ದ ಹಾಗೆ ಉತ್ಸಾಹ ತುಂಬಿಬಿಟ್ಟಿತ್ತು. `ಹಾಲಕ್ಕಿ ಜೊಲ್ಲನ್ನು ಸುರಿಸುತ್ತಾ ನನ್ನ ಮನೆಯ ಹೊರ ಸಜ್ಜೆಗೆ ಕೂತಿತ್ತಲ್ಲ, ಅದರ ಬಾಯಿಂದ ಸುರಿಯುತ್ತಿದ್ದ ಬೆಳದಿಂಗಳ ಜೊಲ್ಲ ಧಾರೆ ನನ್ನ ಮನೆಯನ್ನು ಬೆಳಕಾಗಿಸಿತ್ತೇ. ನಿನಗೆ ಗೊತ್ತೆ ತೇಜೂ ಆ ಬೆಳಕಲ್ಲಿ ನಾನೂ ಹನಿ ಇಬ್ಬರೂ ಮಕ್ಕಳ ಹಾಗೆ ಆಟವಾಡಿದೆವು. ಹನಿಯಂತೂ, `ಅಮ್ಮಾ ಇದೆಂಥಾ ಬೆಳಕೆ? ನಾನು ಇದುವರೆಗೂ ನೋಡೇ ಇಲ್ಲ’ ಎಂದಳು. ಅಂಥಾ ಪ್ರಸನ್ನವಾಗಿದ್ದ ಬೆಳಕಾಗಿತ್ತು ಅದು. ಅಮೃತ ಸುರಿವ ರಾತ್ರಿಗಳು ಏನನ್ನು ಹೆಪ್ಪಾಗಿಸುತ್ತವೆ, ಸಾಕ್ಷಿಗಳೇ ಇಲ್ಲದೆ ಜತನದಿಂದ ಕಾಪಿಟ್ಟುಕೊಂಡು ಬಂದ ಗುಟ್ಟನ್ನಾ? ನಮ್ಮಿಬ್ಬರ ಜಗತ್ತಿನಲ್ಲಿ ಚಂದ್ರ ಹೇಗೆ ಮಿಸ್ ಆದ! ಆ ಕ್ಷಣಕ್ಕೆ ನನಗೆ ಅವನ ನೆನಪು ಕೂಡಾ ಬರಲಿಲ್ಲ. ಅವನಿಲ್ಲದೆ ಹನಿ ಇಲ್ಲ, ಆದರೂ ಅವನು ನನ್ನ ಜಗತ್ತಿನಿಂದ ಹೊರಹೋಗುತ್ತಾನೆ? ಯಾವುದರ ಅರಿವೂ ಇಲ್ಲದೆ ಹೀಗೆ ಆಡುವಾಗ ಆ ಹಾಲಕ್ಕಿಯು ನನ್ನ ಮನೆಯ ಸಜ್ಜಾದ ಮೇಲಿಂದ ಹಾರಿ ಹೋಯಿತು. ಇದ್ದಕ್ಕಿದ್ದ ಹಾಗೆ ಕತ್ತಲು ಕಗ್ಗತ್ತಲು. `ಅರೆ ಹಾಲಕ್ಕಿ ಕೃಷ್ಣಪ್ಪ ಎಲ್ಲಿ ಹೋದೆಯಯ್ಯಾ? ನಿನ್ನ ಹಾಲಕ್ಕಿಯನ್ನು ವಾಪಾಸು ಕಳಿಸೋ’ ಎಂದು ಕೂಗಿದ್ದೆ. ಅವನ ಬುಡಬುಡಿಕೆಯ ಸದ್ದು ಅವನ ವಾಕ್ಕುಗಳೆರಡು ದೂರದಲ್ಲಿ ಕೇಳುತ್ತಿತ್ತು. `ಹಾಲಕ್ಕಿ ಶಕುನ ನುಡಿತೈತೆ ಹಾಲಕ್ಕಿ ಶಕುನ ನೂರಿದ್ದು ಆರಾಗಿ, ಆಕಾಶದಲ್ಲಿ ಕಂಡ ಮಿಂಚೊಂದು ಮನೆಯ ಮುಂದಿನ ಮರವ ಸೀಸಿ, ಹುಟ್ಟಬಾರದ ನಕ್ಷತ್ರದ ಹುಟ್ಟು ಒಡಲಲ್ಲಿ ಮಡಿಲಲ್ಲಿ...’ ಬೇಡ ಕಣೋ ಅಪದ್ಧವಾದುದ್ದನ್ನು ಎಂದೂ ನುಡಿಯ ಬೇಡ ಕೃಷ್ಣಪ್ಪ ಮನಸ್ಸು ರೋಧಿಸುತ್ತಿತ್ತು.

ಚಂದ್ರ ಅವತ್ತು ಹಾಲಕ್ಕಿಯವ ಬಂದೇ ಇರಲಿಲ್ಲ, ನೀನು ಟೆರೇಸಿನಲ್ಲಿ ಮಲಗೇ ಇರಲಿಲ್ಲ ಎಂದ ಮೇಲೆ ನಾನು ಟೆರೇಸಿಗೆ ಹೇಗೆ ಬರಲಿ?, ಹನಿ ತಾನು ಬೆಳದಿಂಗಳಲ್ಲಿ ಆಟವಾಡಲಿಲ್ಲ ಎಂದಳು. ಆದರೆ ಆ ತಣ್ಣನೆಯ ಬೆಳದಿಂಗಳಲ್ಲಿ ತೊಯ್ದೆದ್ದ ನನಗೆ ಮಾರನೆಯ ದಿನ ಜ್ವರ ಕಾಡಿತ್ತು. ಅದು ಶಾಕ್‌ಗೆ ಎಂದು ನಮ್ಮ ಫ್ಯಾಮಿಲಿ ಡಾಕ್ಟರ್ ಹೇಳಿದ್ದರು. ಅವತ್ತು ನಾನು ಸೋತಿದ್ದೆನೆ. ಅವನು ಅತ್ಯಂತ ಕರುಣೆಯಿಂದ ನನ್ನ ಕೈಗಳನ್ನು ಹಿಡಿದು, `ನನಗೆ ನೀನು ಜನ್ಮಕ್ಕಾಗುವಷ್ಟು ಪ್ರೀತಿಯನ್ನು ಕೊಟ್ಟಿರುವೆ. ಹಾಗೆ ನೋಡಿದರೆ ನನಗೆ ಇನ್ನೊಬ್ಬ ಹೆಣ್ಣು ಬೇಕಿರಲಿಲ್ಲ. ನೀನು ಇದನ್ನು ಪ್ರತಿಭಟಿಸಬಹುದು’ ಎಂದಿದ್ದ. ಪ್ರತಿಭಟನೆ ! ಅದರಷ್ಟು ಬಾಲಿಶವಾದ ಪದ ನನಗೆ ಜನ್ಮದಲ್ಲಿ ಮತ್ತೊಂದು ಗೊತ್ತಿಲ್ಲ. ನಿನಗೆ ಗೆಲ್ಲುವುದಷ್ಟೇ ಗೊತ್ತು ಚಂದ್ರಾ, ಆದರೆ ನಿನ್ನ ಆ ಗೆಲುವನ್ನು ನನ್ನ ದಾಗಿಸಿಕೊಳ್ಳಲು ಬೆಂಕಿಯಾದ ಅದನ್ನು ದೀಪದ ಹಾಗೆ ಬೆಳಕಾಗಿಸಿಕೊಳ್ಳುವುದು ಮಾತ್ರ ನನ್ನ ಜವಾಬ್ದಾರಿ’ ಎಂದೆ. `ಮನುಷ್ಯಳ ಹಾಗೆ ಬದುಕು ಶ್ಯಾಮು, ನೀನು ಹಾಗಿದ್ದಿದ್ದರೆ ನನಗೆ ಹೀಗೆ ನಿನ್ನ ಬಿಟ್ಟು ಹೋಗುವ ಅವಶ್ಯಕತೆ ಬೀಳುತ್ತಿರಲಿಲ್ಲ’ ಎಂದ ಕೋಪದಿಂದ. ಚಂದ್ರ ಅವತ್ತೇ ನನ್ನ ಮೇಲೆ ಅಷ್ಟು ಕೋಪ ಮಾಡಿಕೊಂಡಿದ್ದು. ಆದರೂ ನಾನು ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದೆ, ಜಗತ್ತಿನ ಯಾವುದನ್ನೂ ನಾನು ಅಸಮ್ಮತಿಸಬಾರದೆಂದು’ ಶ್ಯಾಮು ಮಾತಾಡುತ್ತಿದ್ದರೆ ಅವಳ ಧ್ವನಿ ಮೊಳಗಿ ಮಳೆಯಾಗಿ ಜಗತ್ತನ್ನೆಲ್ಲ ತೊಯ್ಯುತ್ತಿದೆ ಅನ್ನಿಸಿತ್ತು. ಮೆಲ್ಲಗೆ ನುಡಿದೆ, `ಶ್ಯಾಮೂ ಕೃಷ್ಣಪ್ಪ ಸತ್ತು ಎರಡು ಮೂರು ದಶಕಗಳೇ ಕಳೆದಿವೆ’. ಅವಳಿಗೆ ಅದು ಕೇಳಲಿಲ್ಲವೆನ್ನಿಸುತ್ತೆ. ಇಲ್ಲ ಕೆಲ ಸಂಗತಿಗಳಿಗೆ ಅವಳು ತನ್ನ ಕಿವಿಗಳನ್ನು ತೆರೆಯುವುದೇ ಇಲ್ಲ.

ನಾವಿಬ್ಬರೂ ಹೊಳೆಯಲ್ಲಿ ನಿಧಾನಕ್ಕೆ ಕಾಲನಿಡುತ್ತಾ ಆಚೆದಡಕ್ಕೆ ಹೋಗುವಾಗ ಲಂಗವನು ನೀರ ಹರಿವಿಗೆ ತಕ್ಕಂತೆ ಮೇಲೆತ್ತಿಕೊಂಡು ಸೊಂಟದ ವರೆಗೆ ಬರುವ ವೇಳೆಗೆ ಇನ್ನು ಮೇಲೆತ್ತಲಿಕ್ಕೆ ಸಾಧ್ಯವೇ ಇಲ್ಲವೆನ್ನಿಸಿದಾಗ ಆ ಪ್ರಯತ್ನ ಬಿಟ್ಟು ನೀರು ಗುಂಬಸ್ಸು ಮಾಡುತ್ತಿದ್ದ ನಮ್ಮ ಲಂಗವನ್ನು ಹೊಡೆಯುತ್ತಾ ಆಡಲು ತೊಡಗುತ್ತಿದ್ದೆವಲ್ಲಾ, ಆಗ ಶ್ಯಾಮು ಸುಮ್ಮ ಸುಮ್ಮನೆ ಅವಳನ್ನು ಕಾಡಿಸಿದ ಎಲ್ಲರ ಹೆಸರನ್ನೂ ಹೇಳಿ ಹೊಡೆಯುತ್ತಿದ್ದಳು. ಆಗವಳ ಮುಖದಲ್ಲಿ ತೃಪ್ತಿ ಕಾಣುತ್ತಿತ್ತು. ಈಗಾಗಿದ್ದರೆ ಚಂದ್ರನ ಹೆಸರನ್ನು ಹೇಳುತ್ತಿದ್ದಳೇ? `ತೇಜೂ ಸಿಲ್ಲಿಯಾಗಿ ಯೋಚನೆ ಮಾಡಬೇಡ, ಚಂದ್ರನನ್ನು ನಾನು ದ್ವೇಶಿಸುತ್ತೇನೆ ಎಂದು ಹೇಗೆಂದುಕೊಂಡೆ?’ ಎಂದಿದ್ದಳು. `ಅಲ್ಲವೆ ನಿನಗೆ ಇಷ್ಟೆಲ್ಲಾ ಆದರೂ ಸಿಟ್ಟು ಯಾಕೆ ಬರಲಿಲ್ಲ? ನೀನು ಸಿಟ್ಟು ಮಾಡಿಕೊಂಡಿದ್ದರೆ ಬಹುಶಃ ಚಂದ್ರಾ ನಿನ್ನ ಬಳಿಯೇ ಇರುತ್ತಿದ್ದ’ ಎಂದೆ. `ಎಲ್ಲ ಭ್ರಮೆ ತೇಜೂ, ಹೋಗಬೇಕು ಎಂದುಕೊಂಡವನು ಎಂದಿದ್ದರೂ ಹೋಗಿಯೇ ಹೋಗುತ್ತಾನೆ. ಹೋಗುವಾಗ ನಂಬಿದವರ ಬಗ್ಗೆ ಕರುಣೆಯಿಂದ ಇದೆಲ್ಲಾ ಮಾತಾಡುತ್ತಾನೆ. ಕೋಪ ಮಾಡಿಕೊಂಡರೆ, ನೀನು ಕೋಪ ಮಾಡಿಕೊಂಡೆ, ಅದಕ್ಕೆ ನನ್ನೊಳಗಿನ ಹಠಕ್ಕೆ ಮತ್ತಷ್ಟು ಬಲ ಬಂತು ಎನ್ನುತ್ತಾನೆ. ತಿಳಿಯದೇ ತೇಜೂ? ನಾನು ಸಣ್ಣ ಮಗುವಲ್ಲ. ಆದರೆ ನನಗೆ ಆ ಮಾತುಗಳನ್ನು ಹನಿ ಕೇಳಿಸಿಕೊಳ್ಳಬಾರದಿತ್ತು ಎನ್ನಿಸುತ್ತದೆ. ನಮ್ಮ ಬಾಲ್ಯ ಕೊಟ್ಟ ಕೆಟ್ಟ ಅನುಭವ ಅವಳಿಗೆ ದಕ್ಕುವುದು ಬೇಕಿರಲಿಲ್ಲ ಅನ್ನಿಸಿತ್ತೆ. ಆದರೂ ಅದೆಂಥಾ ನೋಟವೇ ದುಃಸ್ವಪ್ನದ ಹಾಗೆ ನಮ್ಮನ್ನು ಹಿಂಬಾಲಿಸಿದ್ದು?’

`ಅವತ್ತು ಆ ಗಂಡಸು ಅವಳಲ್ಲಿ ಇಳಿದು ನಿರಾಳವಾದ ಅಲ್ಲವಾ. ಆದರೆ ಅದನ್ನು ತುಂಬಿಕೊಂಡ ಹೆಣ್ಣು ಯಾವ ನಿರೀಕ್ಷೆಯನ್ನು ಹೊತ್ತುಕೊಂಡಿದ್ದಳು? ಎಷ್ಟು ಭಿನ್ನತೆ ಇದೆ ನೋಡು! ತುಂಬಿಕೊಂಡಿದ್ದು ತುಳುಕದಿರುತ್ತದೆಯೇ? ನಮ್ಮ ಕಲ್ಪನೆಯ ವಿಸ್ತಾರವನ್ನು ನಾವೇ ಅಳೆಯಲು ಸಾಧ್ಯವೇ ಹೇಳು. ನನಗೆ ಅದು ಯಾವಾಗಲೂ ಒಂದು ಎಚ್ಚರದ ಸ್ಥಿತಿ. ಹೊಳೆಯಿಸುವುದು ಎನ್ನುವುದು ಒಂದು ಅಪರೂಪದ ಸ್ಥಿತಿ ತೇಜೂ. ನೀರಿನಾಳದಲ್ಲಿ ಭೂಮಿಯನ್ನೂ ಸರಿಸಿ ಮೇಲೆದ್ದ ಗಾಳಿ ಹೊರಬರುವಾಗ ಗುಳ್ಳೆಯನ್ನು ಸೃಷ್ಟಿ ಮಾಡುತ್ತದಲ್ಲ ಹಾಗೆ. ಚಂದ್ರನಿಗೂ ಅವನಿಗೂ ಎಲ್ಲಿಯ ಸಂಬಂಧ ಆದರೂ ಈಗ ನೆನೆಸಿಕೊಂಡರೆ ಆ ಗಂಡಸಿನ ಮುಖ ಚಂದ್ರನನ್ನು ಹೋಲುವುದು ಯಾಕೆ?’

ಕಲಕಿದಂತಿದ್ದ ಅವಳ ಧ್ವನಿಯಲ್ಲಿ ವಿಚಿತ್ರ ಕಂಪನವಿತ್ತು. ಪ್ರಕೃತಿಯೇ ಹೆಣ್ಣನ್ನು ಸೃಷ್ಟಿಸಿದ್ದು ಭೋಗಿಸಲೆಂದಲ್ಲವೆ? ಮಾಯಾ ಜಾಲವನ್ನು ಸೃಷ್ಟಿಸಿ ಅವಳನ್ನು ಆಕರ್ಷಿಸುವುದಕ್ಕೆ ಯಾಕೆ ಮುಂದಾಗುತ್ತಿತ್ತು? ಎಲ್ಲಾ ನನ್ನ ಕಲ್ಪನೆಯೇ ಆದರೆ ಅದಾದರೂ ಎಲ್ಲಿಂದ ಶುರುವಾಯಿತು? ನಿನಗೆ ಹೇಳಬೇಕಿದೆ ನನ್ನ ಬಗ್ಗೆ ಇದ್ದ ಕಥೆಯ’ ಎನ್ನುತ್ತಾ ಯಾವುದೋ ಪುರಾಣದ ಕಾಲಕ್ಕೆ ಸಂದವಳಂತೆ ನಿನಗೂ ಗೊತ್ತಿಲ್ಲದ ನನ್ನ ನೋಡು ಎನ್ನುವಂತೆ ಹೇಳುತ್ತಿದ್ದರೆ, ನಿಗೂಢವಾಗುತ್ತಿದ್ದ ಮುಗುಳು ನಗೆ ಲೋಕಕ್ಕೆ ಹಂಚುವಂತೆ ಅವಳ ತುಟಿಯಿಂದ ಜಿಗಿದೇಬಿಟ್ಟಿತು.

-ಪಿ. ಚಂದ್ರಿಕಾ

ಈ ಅಂಕಣದ ಹಿಂದಿನ ಬರೆಹಗಳು:
ನಮ್ಮನ್ನು ಕಾಣಿಸಲು ನಡುಹಗಲೇ ಬೇಕಿಲ್ಲ!
ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು
ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು.
ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...