ಕಾಕಾಸುರ, ವಿರಾಧ ಪ್ರಸಂಗಗಳ ರಾಜಕಾರಣ

Date: 27-10-2023

Location: ಬೆಂಗಳೂರು


''ಸೀತೆಯನ್ನು ಬಯಸಿ ಬಂದ ರಕ್ಕಸರನ್ನು ರಾಮಲಕ್ಷ್ಮಣ ಇಬ್ಬರೂ ಸೇರಿ ಶಿಕ್ಷಿಸಿದ ಮತ್ತು ವಧಿಸಿದ ಕಥೆಗಳನ್ನೆ ಸಂಕ್ಷಿಪ್ತವಾಗಿ ಇಲ್ಲಿ ನಿರೂಪಿಸಲಾಗಿದೆ. ಕಾಕರಾಜ ಮತ್ತು ವಿರಾಧ ಈ ಇಬ್ಬರ ದೇಹವನ್ನು ವಿರೂಪಗೊಳಿಸುವುದನ್ನು ಲೈಂಗಿಕ ದಾಳಿಗೆ ಶಿಕ್ಷೆ ನೀಡುವ ಒಂದು ವಿಧಾನವೆಂದೆ ರಾಮಾಯಣದಲ್ಲಿ ಆಚರಿಸಲಾಗಿದೆ. ಶೂರ್ಪನಖಿ ದೇಹ ಕೂಡ ಆಕೆಯ ಲೈಂಗಿಕ ಸಾಹಸಕ್ಕೆ ವಿರೂಪಗೊಂಡು ಶಿಕ್ಷೆಗೆ ಗುರಿಯಾಗುತ್ತದೆ,'' ಎನ್ನುತ್ತಾರೆ ಅಂಕಣಕಾರ ಬೇಗೂರು ರಾಮಲಿಂಗಪ್ಪ. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ಕಾಕಾಸುರ, ವಿರಾಧ ಪ್ರಸಂಗಗಳ ರಾಜಕಾರಣ' ವಿಚಾರದ ಕುರಿತು ಬರೆದಿದ್ದಾರೆ.

ಕಾಕಾಸುರ ಮತ್ತು ವಿರಾಧ ಇಬ್ಬರೂ ರಾಮಾಯಣ ಕಾವ್ಯಗಳಲ್ಲಿ ಬರುವ ರಕ್ಕಸರು. ಇವರು ಪ್ರಮಾದವಶಾತ್‌ ಶಾಪಗ್ರಸ್ಥರಾಗಿ ರಕ್ಕಸ ಜನ್ಮ ಪಡೆದಿರುತ್ತಾರೆ. ಇವರಿಬ್ಬರೂ ಸೀತೆಯ ಮೇಲೆ ರಾವಣನಿಗು ಮೊದಲೆ ಲೈಂಗಿಕ ದಾಳಿಗಳನ್ನು ನಡೆಸಿದವರು. ಈ ಇಬ್ಬರ ಪ್ರಸಂಗಗಳನ್ನು ಸಂಕ್ಷಿಪ್ತವಾಗಿ ಮತ್ತು ರೂಪಕಧಾಟಿಯಲ್ಲಿ ನಮ್ಮ ಕಾವ್ಯಗಳು ಪ್ರಸ್ತಾಪಿಸುತ್ತವೆ. ರಾಮಾಯಣ ಕಥನಗಳಲ್ಲಿ ಅಲ್ಲಲ್ಲಿ ಕನ್ನಡದಲ್ಲಿ ಹತ್ತು ಮಂದಿ ಈವರೆಗೆ ಈ ಪ್ರಸಂಗಗಳನ್ನು ಕಥಿಸಿದ್ದಾರೆ. ಯಾವ ಕಾವ್ಯಗಳಲ್ಲು ಈ ಪ್ರಸಂಗಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿಲ್ಲ.

ತೊರವೆ ನರಹರಿಯಲ್ಲಿ ಈ ಪ್ರಸಂಗ ಕುರಿತ ನಿರೂಪಣೆ ಮೊದಲಿಗೆ ಕಂಡು ಬರುತ್ತದೆ. ಕಾಲದ ದೃಷ್ಟಿಯಿಂದ ತೊರವೆ ನರಹರಿಯದೆ ಕನ್ನಡದ ಮೊದಲ ಲಭ್ಯ ವೈದಿಕ ರಾಮಾಯಣ ಕಾವ್ಯ. ಇವನಿಗು ಮೊದಲಿನವು ಜೈನ ರಾಮಾಯಣಗಳು. ಅವುಗಳಲ್ಲಿ ಈ ವಿರಾಧ, ಕಾಕಾಸುರ ಪ್ರಸಂಗಗಳು ಇಲ್ಲ.

ತೊರವೆಯಲ್ಲಿ ಅಯೋಧ್ಯಾಕಾಂಡದ ಏಳನೆ ಸಂಧಿಯಲ್ಲಿ ಈ ಪ್ರಸಂಗ ಬರುತ್ತದೆ. ಅಲ್ಲಿನ ಕಥನ ಹೀಗಿದೆ: ತನ್ನ ಹಿಂದಿನ ಜನ್ಮದಲ್ಲಿ ಜಯಂತನಾಗಿದ್ದವನು ಶಾಪ ಕಾರಣದಿಂದ ಕಾಕರಾಜನಾಗಿ ಜನ್ಮ ತಾಳಿರುತ್ತಾನೆ. ಸೀತೆಯ ಪಾದಧೂಳಿಯಿಂದಲೆ ವಿಮೋಚನೆ ಎಂಬುದನ್ನು ಅತ್ರಿಮಹರ್ಷಿ ಹೇಳಿರುತ್ತಾನೆ. ಹಾಗಾಗಿ ಸೀತೆಯ ಪಾದಸ್ಪರ್ಶಕ್ಕಾಗಿ ಬಂದಾಗ ಈತನ ರೂಪ ನೋಡಿ ಸೀತೆ ಹೆದರಿ, ಚೀರಿ ರಾಮನನ್ನು ತಬ್ಬಿಕೊಳ್ಳುತ್ತಾಳೆ. ಆಗ ಕಾಕರಾಜನ ಕಾಲುಗುರು ತಾಕಿ ಸೀತೆಯ ಭುಜಕ್ಕೆ ಗಾಯವಾಗಿ ರಕ್ತ ಬರುತ್ತದೆ. ಅದನ್ನು ಕಂಡ ರಾಮ ಅವನ ಮೇಲೆ ತೃಣಾಸ್ತ್ರವನ್ನು ಮಂತ್ರಿಸಿ ಪ್ರಯೋಗಿಸುತ್ತಾನೆ. ಅದು ಅವನನ್ನು ಕೊಲ್ಲಲ್ಲು ಬೆನ್ನಟ್ಟುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಆತ ಶಿವ, ಬ್ರಹ್ಮ, ಇಂದ್ರ ಹೀಗೆ ಹಲವರನ್ನು ಮೊರೆಹೋಗುತ್ತಾನೆ. ಯಾರಿಂದಲು ಅವನನ್ನು ರಕ್ಷಿಸಲು ಆಗುವುದಿಲ್ಲ. ಕೊನೆಗೆ ರಾಮನ ಬಳಿಗೇ ಬಂದು ಶರಣಾಗುತ್ತಾನೆ. ಆಗ ಬಿಟ್ಟ ಬಾಣ ಏನೂ ಬಲಿಯಿಲ್ಲದೆ ವಿಫಲವಾಗಬಾರದು ಎಂದು ರಾಮ ಅವನ ಒಂದು ಕಣ್ಣನ್ನು ಬಲಿ ಪಡೆದು ಇನ್ನೊಂದು ಕಣ್ಣನ್ನೆ ಎರಡೂ ಕಡೆ ಕಾಣಿಸುವಂತೆ ಅಗಲಿಸಿ ಕಳಿಸುತ್ತಾನೆ.

ಕಾಕರಾಜನ ಪ್ರಸಂಗದ ನಂತರ ಕೂಡಲೆ ವಿರಾಧನ ಪ್ರಸಂಗವೂ ಇಲ್ಲಿ ನಿರೂಪಣೆ ಆಗಿದೆ. ವಿರಾಧನು ಕತ್ತಲೆಯ ಮೈಯನ್ನೆ ಹೊಂದಿರುತ್ತಾನೆ. ಕೆದರಿದ ತಲೆ, ಕೋರೆಹಲ್ಲುಗಳಿಂದ ಕೂಡಿದ ಆತನ ಮುಖ ವಿಕಾರವಾಗಿ ಇರುತ್ತದೆ. ಅವನದೆ ಹೆಸರಿನ ವಿರಾಧವನಕ್ಕೆ ಬಂದಾಗ ಆತನ ರೂಪವನ್ನು ಕಂಡು ಸೀತೆ ಬೆಚ್ಚುತ್ತಾಳೆ. ಆದರೆ ಸೀತೆಯ ರೂಪವನ್ನು ಕಂಡು ವಿರಾಧ ಮನಸೋಲುತ್ತಾನೆ. ಸೀತೆಯನ್ನು ಬಯಸಿ ಬರುತ್ತಾನೆ. ಅದನ್ನು ಕಂಡ ರಾಮ ಅವನ ಕೈಗಳನ್ನು ಕತ್ತರಿಸುತ್ತಾನೆ. ಆನಂತರ ತಲೆಯನ್ನೆ ಕತ್ತರಿಸುತ್ತಾನೆ. ಆದರೂ ಅವನ ಮುಂಡ ದಾಳಿಗಾಗಿ ಮುನ್ನುಗ್ಗಿ ಬರುತ್ತದೆ. ಆಗ ಲಕ್ಷ್ಮಣ ಅವನನ್ನು ಭೂಮಿಗೆ ಬೀಳುವಂತೆ ಹೊಡೆದು ಉರುಳಿಸುತ್ತಾನೆ. ಶಾಪವಿಮೋಚನೆಯಾಗಿ ಆತ ತುಂಬುರನಾಗಿ ಎದ್ದು ಬರುತ್ತಾನೆ. ರಾಮನನ್ನು ವಂದಿಸುತ್ತಾನೆ. ವಾಲ್ಮೀಕಿಯಲ್ಲಿ ವಿರಾಧನನ್ನು (ಅರಣ್ಯಕಾಂಡದಲ್ಲಿ) ಸೀತೆಯನ್ನು ಮೋಹಿಸುವಂತೆಯೆ ಚಿತ್ರಿಸಲಾಗಿದೆ. ಆದರೆ ತೊರವೆಯಲ್ಲಿ ವಾಲ್ಮೀಕಿ ಕಥನವನ್ನು ಸ್ವಲ್ಪ ಬದಲಿಸಲಾಗಿದೆ.

ಸೀತೆಯ ಸ್ತನಗಳ ಮೇಲೆ ಕಾಕಾಸುರ ಇಲ್ಲಿ ದಾಳಿ ಮಾಡುವುದಿಲ್ಲ. ಆದರೆ ಆತ ಆಕೆಯ ಭುಜದ ಮೇಲೆ ಗಾಯ ಮಾಡುತ್ತಾನೆ. ಅದೂ ಆಕಸ್ಮಿಕವಾಗಿ. ಸೀತೆಯ ಪಾದದ ಧೂಳನ್ನು ಸ್ಪರ್ಶಿಸಲು ಬಂದ ಕಾಕರಾಜ ಆಕಸ್ಮಿಕವಾಗಿ ಆಕೆಯ ಭುಜಕ್ಕೆ ತನ್ನ ಕಾಲು ತಾಕಿಸಿದರೆ ರಾಮ ಅವನನ್ನು ಯಾಕೆ ಕೊಲ್ಲಲು ಯತ್ನಿಸಬೇಕು! ಸೀತೆಯ ಮೇಲೆ ಲೈಂಗಿಕ ದಾಳಿ ನಡೆಯಿತು ಎಂಬ ಪ್ರಸಂಗವನ್ನು ತಿದ್ದಿ ಸೀತೆಯು ಲೈಂಗಿಕವಾಗಿ ಅನ್ಯರಾದ ಯಾರಿಂದಲೂ ಸ್ಪರ್ಶಕ್ಕೆ ಗುರಿಯಾಗಲಿಲ್ಲ ಅಥವಾ ಲೈಂಗಿಕ ಕಿರುಕುಳಕ್ಕೆ ಆಕೆ ಗುರಿಯಾಗಲಿಲ್ಲ ಎಂದು ನಂಬಿಸುವುದು ತೊರವೆ ರಾಮಾಯಣದ ಉದ್ದೇಶ ಆಗಿರುವಂತೆ ತೋರುತ್ತದೆ.

ಸೀತೆಯನ್ನು ಬಯಸಿ ಬಂದ ರಕ್ಕಸರನ್ನು ರಾಮಲಕ್ಷ್ಮಣ ಇಬ್ಬರೂ ಸೇರಿ ಶಿಕ್ಷಿಸಿದ ಮತ್ತು ವಧಿಸಿದ ಕಥೆಗಳನ್ನೆ ಸಂಕ್ಷಿಪ್ತವಾಗಿ ಇಲ್ಲಿ ನಿರೂಪಿಸಲಾಗಿದೆ. ಕಾಕರಾಜ ಮತ್ತು ವಿರಾಧ ಈ ಇಬ್ಬರ ದೇಹವನ್ನು ವಿರೂಪಗೊಳಿಸುವುದನ್ನು ಲೈಂಗಿಕ ದಾಳಿಗೆ ಶಿಕ್ಷೆ ನೀಡುವ ಒಂದು ವಿಧಾನವೆಂದೆ ರಾಮಾಯಣದಲ್ಲಿ ಆಚರಿಸಲಾಗಿದೆ. ಶೂರ್ಪನಖಿ ದೇಹ ಕೂಡ ಆಕೆಯ ಲೈಂಗಿಕ ಸಾಹಸಕ್ಕೆ ವಿರೂಪಗೊಂಡು ಶಿಕ್ಷೆಗೆ ಗುರಿಯಾಗುತ್ತದೆ.

ಕೌಶಿಕ ರಾಮಾಯಣದಲ್ಲಿ ಈ ಇಬ್ಬರ ದಾಳಿಗಳನ್ನೂ ಒಟ್ಟಿಗೇ ಒಂದರ ನಂತರ ಒಂದು ನಡೆದುವು ಎಂಬಂತೆ ಹೇಳಲಾಗಿದೆ. ಕಥನದ ಎಳೆಗಳನ್ನು ಬಿಡಬಾರದು, ಎಲ್ಲವನ್ನೂ ಸಂಕ್ಷಿಪ್ತವಾಗಿ ಆದರೂ ನಿರೂಪಿಸಬೇಕು ಎಂಬ ಹಠದಿಂದ ಅವುಗಳ ರೂಪಕ ಸಾಧ್ಯತೆಯನ್ನು ಲೆಕ್ಕಿಸದೆ ಇಲ್ಲಿ ನಿರೂಪಿಸಲಾಗಿದೆ.

ಬತ್ತಲೇಶ್ವರ ರಾಮಾಯಣದ ಪ್ರಕಾರ ರಾಮಸೀತೆಯರು ವನವಾಸಕ್ಕೆ ಹೊರಟ ಹೊಸತರಲ್ಲೆ ಈ ಎರಡೂ ಪ್ರಸಂಗಗಳು ಜರುಗುತ್ತವೆ. ಒಂದು ಮರದ ಕೆಳಗೆ ವಿಶ್ರಮಿಸಲು ತೊಡಗಿ ಆಯಾಸದಿಂದ ರಾಮನು ಸೀತೆಯ ತೊಡೆಯ ಮೇಲೆ ಮಲಗಿ ನಿದ್ರೆ ಹೋಗಿರುತ್ತಾನೆ. ಆಗ ಸೀತೆ ತೊಟ್ಟಿದ್ದ (ಮೇಲುದ) ಕುಪ್ಪುಸ ಸರಿದು ಆಕೆಯ ಸ್ತನಭಾಗಗಳು ಹೊರಗೆ ಕಾಣತೊಡಗುತ್ತವೆ. ಅದನ್ನು ಕಂಡ ವಾಯಸಾಸುರನು (ವಾಯಸ-ಕಾಗೆ) ಸೀತೆಯ ಸ್ತನಗಳನ್ನು ಸೋಂಕುವ ಆಸೆಯಿಂದ ಅವನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾನೆ. ಆಗ ಆತನ ಕಾಲಿನ ಉಗುರುಗಳು ತಾಕಿ ಸೀತೆಯ ಸ್ತನಗಳು ಗಾಯಗೊಳ್ಳುತ್ತವೆ. ಸೀತೆ ಶಿವಶಿವಾ ಎಂದು ಬೆದರುತ್ತಾಳೆ. ಆಗ ರಾಮನಿಗೆ ಎಚ್ಚರ ಆಗುತ್ತದೆ. ಸ್ತನಗಾಯ ಕಂಡು ವಾಯಸಾಸುರನ ಮೇಲೆ ರಾಮ ಬಾಣಪ್ರಯೋಗ ಮಾಡುತ್ತಾನೆ.

ಆ ಬಾಣವು ವಾಯಸನನ್ನು ಬೆನ್ನಟ್ಟಿ ಅದರಿಂದ ತಪ್ಪಿಸಿಕೊಳ್ಳಲು ಅವನು ಮೂರು ಲೋಕಗಳನ್ನು ಅಲೆದರೂ ಸಾಧ್ಯವಾಗದೆ ಮರಳಿ ಆತ ರಕ್ಷಣೆಗೆ ರಾಮನಿಗೇ ಮೊರೆಹೋಗುತ್ತಾನೆ. ರಾಮನು ನೀನು ಮಾಡಿದ ತಪ್ಪಿಗೆ ದಂಡ ತೆರಲೇಬೇಕು ನಿನ್ನ ಶಿಕ್ಷೆಯನ್ನು ನೀನೇ ಆಯ್ದುಕೊ ಎನ್ನುತ್ತಾನೆ. ಆಗ ಆತ ತನ್ನ ಒಂದು ಕಣ್ಣನ್ನು ಕಳೆದುಕೊಳ್ಳಲು ಸಿದ್ದನಾಗುತ್ತಾನೆ. ಅದರಂತೆ ಬಾಣವು ಆತನ ಒಂದು ಕಣ್ಣನ್ನು ಬಲಿ ಪಡೆದು ವಿರಮಿಸುತ್ತದೆ. ಅಪರಾಧ ಮತ್ತು ಶಿಕ್ಷೆ ಎಂಬ ನೆಲೆಯಲ್ಲಿಯೆ ಇಲ್ಲಿ ಈ ನಿರೂಪಣೆ ಇದೆ. ಸೀತೆಯನ್ನು ಪಕ್ಷಿರೂಪಿ ಚಂಡಾಲನಾದ ರಕ್ಕಸನು ಮುಟ್ಟಿದ್ದರಿಂದ ಆಕೆಯನ್ನು ಶುದ್ಧೀಕರಿಸುವುದು ಹೇಗೆಂದು ಮುನಿಗಳನ್ನು ಕೇಳಲಾಗಿ ಅವರು ಈಕೆಯನ್ನು ವಿಂದ್ಯಾಚಲದ ಬಳಿಯ ತೀರ್ಥಗಳಲ್ಲಿ ಮೀಯಿಸು ಎಂದು ಹೇಳುತ್ತಾರೆ. ಆನಂತರ ರಾಮ ಆಕೆಯನ್ನು ಪುಣ್ಯತೀರ್ಥಗಳಲ್ಲಿ ಮೀಯಿಸಿ ಶುದ್ಧೀಕರಿಸಿ ಕರೆತರುತ್ತಾನೆ.

ಈ ಪ್ರಸಂಗ ಮುಗಿಯುತ್ತಿದ್ದಂತೆಯೆ ವಿರಾಧನ ಪ್ರಸಂಗವನ್ನೂ ಇಲ್ಲಿ ನಿರೂಪಿಸಲಾಗಿದೆ. ಪುಣ್ಯತೀರ್ಥಗಳಲ್ಲಿ ಮಿಂದು ಬರುತ್ತಿದ್ದಂತೆಯೆ ಅಡವಿ ಮಧ್ಯದಲ್ಲಿ ವಿರಾಧನು ಸೀತೆಯನ್ನು ಕಂಡು ಕಾಮಿಸಿ ಆಕೆಯನ್ನು ಅಪಹರಿಸಿ ಆಕಾಶಮಾರ್ಗಕ್ಕೆ ಎತ್ತಿಕೊಂಡು ಹೋಗುತ್ತಾನೆ. ಆಗ ಸೀತೆಯು ಕಿರುಚಿಕೊಳ್ಳುತ್ತಾಳೆ. ರಾಮನು ಬಾಣ ಹೂಡಿ ವಿರಾಧನಿಗೆ ಹೊಡೆದಾಗ ಆತ ನೆಲಕ್ಕೆ ಉರುಳಿ ಬೀಳುತ್ತಾನೆ. ಶಾಪವಿಮೋಚನೆಯಾಗಿ ತುಂಬುರನಾಗಿ ಹರಿಗೆ (ರಾಮನಿಗೆ) ನಮಸ್ಕರಿಸುತ್ತಾನೆ. ಕೌಶಿಕ ರಾಮಾಯಣದಲ್ಲಿ ಎರಡೆ ಪದ್ಯಗಳಲ್ಲಿ ಈ ನಿರೂಪಣೆ ಯಾವುದೇ ಪ್ರಾಶಸ್ತ್ಯವಿಲ್ಲದೆ ಮುಗಿದುಹೋಗುತ್ತದೆ.

ಇಲ್ಲಿ ವಾಯಸಾಸುರ ಸೀತೆಯ ಮೇಲೆ ನೇರವಾಗಿ ಲೈಂಗಿಕ ದಾಳಿ ನಡೆಸಿದರೆ ವಿರಾಧ ಕಾಮಿಸಿ ಆಕೆಯನ್ನು ಲೈಂಗಿಕವಾಗಿ ಬಳಸಲಿಕ್ಕೆಂದೆ ಅಪಹರಿಸಲು ಯತ್ನಿಸುತ್ತಾನೆ. ಇಬ್ಬರ ಕೃತ್ಯಗಳೂ ರಾಮನ ಮಧ್ಯಪ್ರವೇಶದಿಂದ ವಿಫಲವಾಗುತ್ತವೆ. ಬತ್ತಲೇಶ್ವರನು ನೇರವಾಗಿ ಸೀತೆಯ ಸ್ತನಗಳ ಮೇಲೆ ಕಾಕರಾಜ ದಾಳಿ ಮಾಡಿದ ಎಂದು ಹೇಳಿದರೆ ತೊರವೆ ನರಹರಿಯು ಸೀತೆಯ ಭುಜದ ಮೇಲೆ ಗಾಯವಾಯಿತು ಎಂದು ಅದನ್ನು ಬದಲಿಸಿದ್ದಾನೆ! ಅಷ್ಟಾದರು ಸೀತೆಯ ಮರ್ಯಾದೆ (ಆ ಮೂಲಕ ಶ್ರೀಲಕ್ಷ್ಮಿಯ ಮರ್ಯಾದೆ) ಉಳಿಯಲಿ ಎಂಬ ಉದ್ದೇಶ ಈ ಬದಲಾವಣೆಯ ಹಿಂದಿದೆ.

ಅಳಿಯಲಿಂಗರಾಜನು ತನ್ನ ಚಿಕ್ಕಪಟ್ಟಾಭಿಷೇಕದಲ್ಲಿ ಕೌಶಿಕ ರಾಮಾಯಣದ ಪ್ರಸಂಗವನ್ನು ಯಥಾವತ್‌ ಅನುಸರಿಸುತ್ತಾನೆ. ಹಾಗೆ ಅನುಸರಿಸುವಾಗ ಆಕೆಯ ಸ್ತನಗಳನ್ನು ಬೆಟ್ಟಗಳಿಗು ಅಲ್ಲಿಂದ ಸುರಿಯುವ ರಕ್ತವನ್ನು ನೀರ ಝರಿಗೂ ಹೋಲಿಸುತ್ತಾನೆ. ನಿದ್ರೆಯಿಂದ ತಿಳಿದೆದ್ದ ರಾಮ, ಹೀಗೆ ಧಾರಾಕಾರವಾಗಿ ರಕ್ತ ಸುರಿಯುತ್ತಿದ್ದರೂ ನೀನೇಕೆ ಇದನ್ನು ಸೈರಿಸಿಕೊಂಡೆ ಎಂದಾಗ ನಿಮ್ಮ ನಿದ್ರೆಗೆ ಭಂಗ ಬರಬಾರದು ಎಂದೆ ನಾನು ಸೈರಿಸಿಕೊಂಡೆ ಎನ್ನುತ್ತಾಳೆ!

ಲಕ್ಷ್ಮಣನು ಇಲ್ಲದಾಗ, ರಾಮನು ಸೀತೆಯ ತೊಡೆಯ ಮೇಲೆಯೆ ಮಲಗಿ ನಿದ್ರಾವಶ ಆಗಿರುವಾಗ ರಕ್ತ ಧಾರಾಕಾರವಾಗಿ ಸುರಿಯುವಂತೆ ಆಕೆಯ ಎರಡೂ ಸ್ತನಗಳ ಮೇಲೆ ದಾಳಿಯಾದರೆ ಆಕೆ ಸಹಿಸಿಕೊಳ್ಳುವುದನ್ನು ಪತಿಹಿತ ಚಿಂತನೆ ಎಂದೆ ಕರೆಯಲಾಗಿದೆ. ತನಗೆ ಏನೆ ಆದರೂ ಗಂಡನ ನಿದ್ರೆಗೆ (ಸುಖಕ್ಕೆ) ಹೆಂಡತಿ ಭಂಗ ತರಬಾರದು ಎಂಬ ನೀತಿಯನ್ನು ಪ್ರತಿಪಾದಿಸಲು ಈ ಪ್ರಸಂಗವನ್ನು ಬಳಸಲಾಗಿದೆ. ಆದರೆ ಇದರ ನಿಕಟ ಓದು ಮಾತ್ರ ಬೇರೆಯೇ ಸುಳಿವನ್ನು ನೀಡುತ್ತದೆ. ಅಂದರೆ ಇದು ಸೀತೆಯ ಮೇಲೆ ಆದ ಲೈಂಗಿಕ ದಾಳಿ. ಅದನ್ನು ಮೊದಲಿಗೆ ಆಕೆ ಸಹಿಸಿಕೊಂಡಳು. ಒಂದು ವೇಳೆ ಅದು ಗುಪ್ತ ದಾಳಿ ಆಗಿದ್ದಿದ್ದರೆ? ರಕ್ತ ಬಾರದೆ ರಾಮನಿಗೆ ತಿಳಿಯದೆ ಇದ್ದರೆ?

ಈ ಘಟನೆ ಮುಗಿಯುತ್ತಿದ್ದಂತೆಯೆ ರಾಮಸೀತಾ ಲಕ್ಷ್ಮಣರು ಅತ್ರಿ ಮಹರ್ಷಿಯ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಅನಸೂಯೆಯಿಂದ ಸೀತೆಗೆ ಪತಿವ್ರತಾ ಧರ್ಮದ ಬೋಧೆ ಆಗುತ್ತದೆ. ಅಂದರೆ ಅನಸೂಯೆಯು ಪತಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಬೋಧೆಯನ್ನು ಸೀತೆಗೆ ಮಾಡುವುದು ಕಾಕತಾಳೀಯವೇನೂ ಅಲ್ಲವಷ್ಟೆ.

ಅತ್ರಿಯ ಆಶ್ರಮದಿಂದ ಮುಂದೆ ಬರುತ್ತ ಇದ್ದಂತೆಯೆ ನಮ್ಮ ನೆಲಕ್ಕೆ ನೀವೇಕೆ ಪ್ರವೇಶ ಮಾಡಿದಿರಿ ಎಂದು ವಿರಾಧ ಬಂದು ಪ್ರಶ್ನೆ ಮಾಡುತ್ತಾನೆ. ಸೀತೆಯ ರೂಪ ಕಂಡು ಮೋಹಿತನಾಗಿ ಆಕೆಯನ್ನು ಬಯಸುತ್ತಾನೆ. ಅಂದರೆ ಇವರು ಅಸುರನೆಲಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಹಾಗಾಗಿ ವಿರಾಧ ಇವರನ್ನು ವಿರೋಧಿಸಿದ್ದಾನೆ. ಆತನ ವಿರೋಧಕ್ಕೆ ಸಕಾರಣವಿದೆ. ಅವನು ಅದೆ ಕೋಪದಲ್ಲಿ ಸೀತೆಯನ್ನು ಅಪಹರಿಸಲು ಯತ್ನಿಸುತ್ತಾನೆ. ಆಗ ವಿರಾಧನಿಗು ರಾಮನಿಗು ಯುದ್ಧವಾಗುತ್ತದೆ. ಯುದ್ಧದಲ್ಲಿ ವಿರಾಧ ಮೇಲುಗೈಯಾಗಿ ರಾಮ ಸೀತೆಯರನ್ನು ಇಬ್ಬರನ್ನೂ ಭುಜದ ಮೇಲೆ ಹೊತ್ತು ತಿನ್ನಲೆಂದೆ ಹೊರಡುತ್ತಾನೆ. ಲಕ್ಷ್ಮಣನ ಮಧ್ಯಪ್ರವೇಶದಿಂದ ಸೋತು ಸಾಯುತ್ತಾನೆ. ಆಗ ಅವನ ನಿಜದ ಪೂರ್ವ ರೂಪ ಅಂದರೆ ಗಂಧರ್ವ (ತುಂಬುರ) ರೂಪ ಪಡೆಯುತ್ತಾನೆ. ಇಲ್ಲಿ ವಿರಾಧ ಸೀತೆಯನ್ನು ಅಪಹರಿಸಲು ಯತ್ನಿಸುತ್ತಾನೆ ಎಂಬ ಕಥನ ಮುಖ್ಯವಾದುದು.

ಇನ್ನು ಜನಪದ ಮತ್ತು ಗೊಂಡರ ರಾಮಾಯಣದಲ್ಲಿ ನೇರವಾಗಿ ಕಾಕರಾಜ ವಿರಾಧರ ಪ್ರಸಂಗಗಳು ಬರುವುದಿಲ್ಲವಾದರೂ ಎರಡೂ ಕಡೆ ಆಕಾಸಕಾಕಿಯನ್ನು ಹೊಡೆದು ಸೀತೆಯನ್ನು ವರಿಸುವ ಪ್ರಸಂಗಗಳು ಬರುತ್ತವೆ. ಜನಪದರ ಈ ಆಕಾಸಕಾಕಿಯನ್ನು ವಧಿಸುವ ವಿಚಾರಕ್ಕು ಹಲವು ಶಿಷ್ಟ ರಾಮಾಯಣಗಳಲ್ಲಿ ಬರುವ ಕಾಕರಾಜನ ವಧಾಪ್ರಸಂಗಕ್ಕು ನೇರಾನೇರ ಸಂಬಂಧ ಇಲ್ಲದಿದ್ದರೂ ಕಾಕರಾಜ ಮತ್ತು ಆಕಾಸ ಕಾಕಿ ಇವರ ನಡುವೆ ದೂರದ ಸಂಬಂಧ ಇದ್ದಿರಬಹುದು. ಅಂದರೆ ಆಕಾಸಕಾಕಿ ಕಾವ್ಯದಲ್ಲಿ ಕಾಗೆಯ ಪ್ರತಿನಿಧಿ ಆದರೂ ಅದು ಮಾನವ ಕುಲದ ಪ್ರತೀಕ ಆಗಿಯೆ ಬಂದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಜನಪದರಲ್ಲಿ ಆಕಾಸಕಾಕಿ ಜನಕನ ಕಾರ್ಯಗಳಿಗೆ ತೊಂದರೆ ಕೊಡುತ್ತದೆ. ಅದರಿಂದ ಕುಪಿತನಾದ ಜನಕ ಅದನ್ನು ಕೊಂದವರಿಗೆ ನನ್ನ ಮಗಳು ಸೀತೆಯನ್ನು ಧರ್ಮಕ್ಕೆ (ಕನ್ಯಾಶುಲ್ಕವಿಲ್ಲದೆ ಪುಕ್ಕಟೆ) ಮದುವೆ ಮಾಡಿಕೊಡುತ್ತೇನೆ ಎಂದು ಡಂಗುರ ಹಾಕಿಸುತ್ತಾನೆ. ಅಂದರೆ ಸೀತೆಯ ಮದುವೆಗು ಆಕಾಸಕಾಕಿಯ ವಧೆಗು ಸಂಬಂಧ ಇದೆ ಎಂದಾಯಿತು. ನಿಕಟ ಓದನ್ನು ಸ್ವಲ್ಪ ಅನ್ವಯಿಸುವುದಾದರೆ ಈ ಆಕಾಸಕಾಕಿ ಒಂದು ನಿರ್ದಿಷ್ಟ ಸಮುದಾಯದ ಪ್ರತೀಕ ಆಗಿದ್ದು, ಆ ಸಮುದಾಯಕ್ಕೆ ಹೆಣ್ಣು ಕೊಡಲು ಇಚ್ಛೆಯಿಲ್ಲದೆ ಜನಕ ಹೀಗೆ ಸೀತೆಯನ್ನು ಗೆಲ್ಲುವ ಸವಾಲು ಇಟ್ಟಿರಬಹುದು. ಕೆಲವೊಮ್ಮೆ ಕಥನಗಳು ತೀರಾ ಸಾಂಕೇತಿಕ ಆಗಿ ಹ್ರಸ್ವ ಆಗಿಬಿಟ್ಟಾಗಿ ನಾವು ಸಾಲುಗಳ ನಡುವೆ ಕಥನವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಕಥನದ ಸಾಂಕೇತಿಕ ಆಯಾಮಗಳನ್ನು ಶೋಧಿಸಿಕೊಳ್ಳಬೇಕಾಗುತ್ತದೆ. ಎಮ್ಮೆಯ ಕುಲದ ಮಹಿಶಾಸುರನನ್ನು ರಕ್ಕಸನನ್ನಾಗಿ ಮಾಡಿದವರು ಕಾಗೆಯ ಕುಲದವರನ್ನು ರಕ್ಕಸರನ್ನಾಗಿ ಮಾಡಿಲ್ಲ ಎಂದು ಹೇಗೆ ಹೇಳುವುದು? ಕಾಗೆಯ ಕುಲದವರು ಸೀತೆಯನ್ನು ಬಯಸಿಲ್ಲ ಎಂದು ಹೇಗೆ ಹೇಳುವುದು.

ಕುವೆಂಪು ಕೊಡುವ ವಿರಾಧನ ಚಿತ್ರ ವಿಶಿಷ್ಟವಾದುದು. ಮಿಕ್ಕವರೆಲ್ಲರೂ ಕಥನವನ್ನು ಮರುನಿರೂಪಿಸಲು ಹೆಚ್ಚು ಗಮನ ನೀಡಿದರೆ ಕುವೆಂಪು ಅದನ್ನು ಮರುನಿರ್ಮಿಸಲು ಯತ್ನಿಸುತ್ತಾರೆ. ವಿರಾಧನ ಕೈಗಳು ತೆಂಗಿನ ಮರದಂತೆಯೂ, ಅವನ ಬಣ್ಣ ಕೃಷ್ಣವರ್ಣವೂ ಆಗಿದ್ದು ಅವನೊಬ್ಬ ʼಹೆಗ್ಗಣ್ಣ, ಹೆಬ್ಬಾಯ, ಹೇರೊಡಲʼ ಬಲಶಾಲಿ ರಕ್ಕಸ ಆಗಿರುತ್ತಾನೆ. ಸಿಂಹ, ಹೆಬ್ಬುಲಿ, ಜಿಂಕೆ, ಮದ್ದಾನೆ, ಕಾಡುಕೋಣಗಳ ಚರ್ಮಗಳಿಂದ ಮಾಡಿದ ವಸ್ತ್ರ ಉಟ್ಟಿರುತ್ತಾನೆ. ಎರಡೂ ಕೈಯಲ್ಲಿ ಎರಡು ಕೋರೆದಾಡೆಗಳಿದ್ದ ಕಾಡುಹಂದಿಗಳನ್ನು ಶೂಲಕ್ಕೆ ಸಿಕ್ಕಿಸಿಕೊಂಡು ತೊನೆದಾಡುತ್ತ ಬಂದ ಇವನು ಸೀತೆಯನ್ನು ತನ್ನ ತಲೆ ಮೇಲಕ್ಕೆ ಎತ್ತಿ ಇರಿಸಿಕೊಳ್ಳುತ್ತಾನೆ. ಆಕೆ ಭಯದಿಂದ ಮೂರ್ಛೆ ಹೋಗುತ್ತಾಳೆ. ರಾಮಲಕ್ಷ್ಮಣರನ್ನು ಕಂಡು ಜಟಾಧಾರಿಗಳಾಗಿದ್ದೀರಿ, ನಾರುಮಡಿ ಉಟ್ಟಿದ್ದೀರಿ, ಹರಯದಲ್ಲಿದ್ದೀರಿ, ತಾಪಸಿಗಳಂತೆ ಕಾಣುತ್ತಿದ್ದೀರಿ, ಆದರೂ ಏತಕ್ಕೆ ಈ ವರಾರೋಹೆಯನ್ನು (ಒಳ್ಳೆಯ ನಿತಂಬಿನಿಯನ್ನು, ಸುಂದರ ಹೆಣ್ಣನ್ನು) ಜೊತೆ ಇರಿಸಿಕೊಂಡಿದ್ದೀರಿ? ನಿಮಗೆ ಈ ತಾಪಸಿಗಳ ನಾಟಕವೇಕೆ? ಎಂದು ಮೂದಲಿಸುತ್ತಾನೆ. ಇಬ್ಬರೂ ಇವನಿಗೆ ಬಾಣ ಪ್ರಯೋಗ ಮಾಡುತ್ತಾರೆ. ಲೆಕ್ಕಿಸದೆ ಸೀತೆಯನ್ನು ಕೆಳಕ್ಕೆ ಇಳಿಸಿ, ಈ ಇಬ್ಬರನ್ನೂ ತೋಳಲ್ಲಿ ಹಿಡಿದು ಇರುಕಿಸಿಕೊಂಡು ಹೊರಡುತ್ತಾನೆ. ಸೀತೆ ಗಾಬರಿಯಾಗಿ ರಕ್ಷಣೆಗೆ ಕೂಗಿಕೊಳ್ಳುತ್ತಾಳೆ. ಆಗ ರಾಮಲಕ್ಷಮಣರು ಅವನ ತೋಳುಗಳನ್ನು ಕತ್ತರಿಸುತ್ತಾರೆ. ಆನಂತರ ಅವನ ಕಣ್ಣು ಕುರುಡಾಗಿಸುತ್ತಾರೆ. ಸಾಯಿಸುತ್ತಾರೆ.

ಉರುಳಿಬಿದ್ದ ವಿರಾಧನ ದೇಹದಿಂದ (ರಂಭೆಯ ನಿಮಿತ್ತ ಶಾಪಗ್ರಸ್ಥನಾಗಿದ್ದ ಕುಬೇರನ ಆಳು) ತುಂಬುರ ಆಗ ಪ್ರತ್ಯಕ್ಷನಾಗುತ್ತಾನೆ. ನನಗೆ ನೀವು ಶಾಪವಿಮೋಚನೆ ಮಾಡಿದಿರಿ ಎಂದು ನಮಿಸುತ್ತಾನೆ. ಕುವೆಂಪು ಇಲ್ಲಿ ಕವಿತ್ವದ ದೃಷ್ಟಿಯಿಂದ ಶ್ರೇಷ್ಠರೂ ವಿಭಿನ್ನರೂ ಆಗಿ ಕಾಣುತ್ತಾರಾದರೂ ಈ ಪ್ರಸಂಗದ ಹಿಂದಿನ ಉದ್ದೇಶಗಳನ್ನು ಗ್ರಹಿಸುವಲ್ಲಿ ಸೋತು ಇವರೂ ಕಥೆಯನ್ನು ಮತ್ತೆ ಪುನರ್ನಿರ್ಮಿಸಿದ್ದಾರೆಯಷ್ಟೆ. ಅಲ್ಲದೆ ಸೀತೆಯ ಮೇಲಿನ ಲೈಂಗಿಕ ದಾಳಿ ಮತ್ತು ಅದಕ್ಕೆ ಆದ ಶಿಕ್ಷೆ ಎಂಬ ಕಥನವನ್ನು ಸ್ಪಷ್ಟವಾಗಿ ಬದಲಿಸಿ; ರಕ್ಕಸವಧೆಯನ್ನು, ಶಾಪ ಕಥನವನ್ನು ಬದಲಿಸದೆ ರಾಮಲಕ್ಷ್ಮಣರ ಆತ್ಮರಕ್ಷಣೆಯ ಪ್ರಸಂಗವನ್ನಾಗಿ ಇದನ್ನು ಮಾರ್ಪಡಿಸಿದ್ದಾರೆ. ಅದೂ ಅಲ್ಲದೆ ಕಾಕರಾಜನ ಪ್ರಸಂಗವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ.

ಬೇರೆಲ್ಲ ಕವಿಗಳೂ ವನವಾಸದಲ್ಲಿ ಇದ್ದಾಗ ನಡೆದ ಘಟನೆಗಳನ್ನು ಅಲ್ಲಲ್ಲೆ ಚಿತ್ರಿಸಿದರೆ ವೀರಪ್ಪ ಮೊಯ್ಲಿಯವರು ಕಾಕರಾಜನ ಪ್ರಸಂಗವನ್ನು ತನಗು ರಾಮನಿಗು ಮಾತ್ರ ಗೊತ್ತಿರುವ ಸಂಗತಿಗಳ ಗುರುತನ್ನು ಅಶೋಕವನದಲ್ಲಿದ್ದ ಸೀತೆ ಹನುಮಂತನಿಗೆ ಹೇಳಿ ಕಳಿಸಿದಂತೆ ಬರೆದಿದ್ದಾರೆ. ಕಾಕರಾಜನು ಎದೆಯನ್ನು ಕುಕ್ಕುತ್ತಿರಲು ನಾನು ರಾಮನಿದ್ರೆಗೆ ಭಂಗ ಬಾರದಿರಲಿ ಎಂದು ಸಹಿಸಿ ಅಲುಗಾಡದೆ ಕುಳಿತಿದ್ದೆ; ಆನಂತರ ರಕ್ತ ಹರಿಯುವಾಗ ರಾಮನಿಗೆ ಎಚ್ಚರವಾಯ್ತು. ಆಗ ರಾಮನು ತೃಣಾಸ್ತ್ರ ಅಭಿಮಂತ್ರಿಸಿ ವಾಯಸನ ಮೇಲೆ ಪ್ರಯೋಗಿಸಿದ. ಆತ ಶರಣಾದ. ಈ ಕಥೆಯನ್ನು ರಾಮನಿಗೆ ಹೇಳು, ನೀನು ನನ್ನನ್ನು ಭೇಟಿ ಮಾಡಿರುವಿ ಎಂದು ಆತ ನಂಬುತ್ತಾನೆ ಎಂದು ಸೀತೆ ಹನುಮನಿಗೆ ಹೇಳುತ್ತಾಳೆ. ಅಂದರೆ ಇಲ್ಲಿ ಇದು ರಾಮಸೀತೆಯರಿಗೆ ಮಾತ್ರ ಗೊತ್ತಿರುವ ಖಾಸಗಿ ಪ್ರಸಂಗ. ಎದೆಯನ್ನೆ ಗುರಿಮಾಡಿ ಕುಕ್ಕುತ್ತಿದ್ದ ಕಾಕರಾಜ ಏತಕ್ಕೆ ಹಾಗೆ ಕುಕ್ಕುತ್ತಿದ್ದ? ಅವನು ಶಾಪಗ್ರಸ್ಥನೆ ಎಂಬೆಲ್ಲ ವಿವರಗಳು ಇಲ್ಲಿಲ್ಲ. ಆದರೆ ಆತ ಸೀತೆಯ ಮೇಲೆ ಖಚಿತವಾಗಿ ಲೈಂಗಿಕ ದಾಳಿ ಮಾಡುತ್ತಿದ್ದ, ಸೀತೆ ಅದನ್ನು ಸಹಿಸಿಕೊಂಡಿದ್ದಳು, ರಾಮ ಆಕೆಯನ್ನು ಸಂಕಷ್ಟದಿಂದ ಪಾರುಮಾಡಿದ ಎಂಬ ವಿವರಗಳು ಇಲ್ಲಿವೆ.

ಕಾಕರಾಜನ ಪ್ರಸಂಗವನ್ನು ಅಶೋಕವನದಲ್ಲಿ ಸೀತೆ ನೆನಪಿಸಿಕೊಂಡಂತೆ ಚಿತ್ರಿಸಿರುವ ಮೊಯ್ಲಿಯವರು ವಿರಾಧ ಪ್ರಸಂಗವನ್ನು ಮಾತ್ರ ವನವಾಸ ಸಂದರ್ಭದಲ್ಲೆ ದಂಡಕಾರಣ್ಯದಲ್ಲೆ ರಾಮಕುಟುಂಬ ಇದ್ದಾಗ ಘಟಿಸಿತೆಂದು ಚಿತ್ರಿಸುತ್ತಾರೆ. ರಾಮ ದಂಡಕಾರಣ್ಯ ಪ್ರವೇಶಿಸಿದಾಗ ಅಲ್ಲೊಂದು ಮಾನವರ ಮೂಳೆಗಳ ಪರ್ವತವೆ ಎದುರಾಗುತ್ತದೆ. ನರಭಕ್ಷಕನಾಗಿ ವಿರಾಧನನ್ನು ಇಲ್ಲಿ ಚಿತ್ರಿಸಲಾಗಿದೆ. ಸೀತೆಯನ್ನು ಕಂಡ ಆತ ʼಕಲ್ಪಲತಾ ಕುಚಭಾರಭರಾನ್ವಿತೆ ಯಾರಿವಳು? ಎನಗೆ ತಕ್ಕವಳಿವಳು ಕರೆದೊಯ್ದು ಸುಖಿಸುವೆನುʼ ಎನ್ನುತ್ತಾನೆ. ಸೀತೆಯನ್ನು ಹಿಡಿದು ಓಡುತ್ತ ಆಕೆಯನ್ನು ಅಪಹರಿಸಲು ಯತ್ನಿಸುತ್ತಾನೆ. ಆಗ ರಾಮಲಕ್ಷ್ಮಣರು ಅವನನ್ನು ಹೊಡೆದು ಉರುಳಿಸುತ್ತಾರೆ. ಆನಂತರ ಅವನು ಸಾಯುವ ಮುನ್ನ ಆತ ಶಾಪಗ್ರಸ್ತ ಎನ್ನುವುದು ತಿಳಿಯುತ್ತದೆ. ಆನಂತರ ರಾಮಲಕ್ಷ್ಮಣರೆ ಅವನ ಶವಸಂಸ್ಕಾರ ಮಾಡುತ್ತಾರೆ. ಈ ಪ್ರಸಂಗದಲ್ಲಿ ಮೊಯ್ಲಿಯವರು ಬಹುಪಾಲು ಕುವೆಂಪುವನ್ನೆ ಅನುಕರಿಸಿದ್ದಾರೆ. ಮುಂದುವರಿದು ವಿರಾಧನನ್ನು ಲೋಭಿ, ಅತ್ಯಾಚಾರಿ, ನರಭಕ್ಷಕ ಮತ್ತು ಕಾಮುಕನನ್ನಾಗಿಯೂ ಚಿತ್ರಿಸಿದ್ದಾರೆ.

ಹೆಳವನಕಟ್ಟೆ ಗಿರಿಯಮ್ಮ (ಸೀತಾಕಲ್ಯಾಣ), ಹರಪನಹಳ್ಳಿ ಭೀಮವ್ವ (ಶ್ರೀರಾಮ ಭಜನೆ), ಸುಂದರಕಾಂಡದ ಅಂಬಾಬಾಯಿ (ಶ್ರೀರಾಮ ಕಥಾಮೃತ) , ಜನಪದ ಹಾಡುಗಾರ್ತಿ ಹೊನ್ನಾಜಮ್ಮ

(ಜನಪದ ರಾಮಾಯಣ) ಹೀಗೆ ಹಲವು ಹೆಣ್ಣುಮಕ್ಕಳು ರಾಮಾಯಣಗಳನ್ನು ಕನ್ನಡದಲ್ಲಿ ನಿರೂಪಿಸಿದ್ದಾರೆ. ಆದರೆ ಅಂಬಾಬಯಿ ಒಬ್ಬಾಕೆ ಮಾತ್ರ ತುಂಬಾ ಸಂಕ್ಷಿಪ್ತವಾಗಿ ಯಾವುದೆ ವಿವರಗಳಿಲ್ಲದೆ ವಿರಾಧನ ವಧೆಯನ್ನು ನಿರೂಪಿಸಿದ್ದಾರೆ. ಮಿಕ್ಕವರು ಯಾರೂ ಈ ಕಾಕರಾಜ, ವಿರಾಧ ಪ್ರಸಂಗಗಳನ್ನು ಕಥಿಸಿಲ್ಲ. ಲತಾ ರಾಜಶೇಖರ್‌ ಅವರು ತಮ್ಮ ಶ್ರೀರಾಮದರ್ಶನದಲ್ಲಿ ವಿರಾಧ ಪ್ರಸಂಗವನ್ನು ಸ್ವಲ್ಪಮಟ್ಟಿಗೆ ಕಥಿಸಿದ್ದಾರೆ.

ಲತಾರವರ ಕಾವ್ಯದಲ್ಲಿ ವಿರಾಧ ಸೀತೆಯನ್ನು ಗಮನಿಸದೆ ರಾಮಲಕ್ಷ್ಮಣರನ್ನೆ ಭಕ್ಷಿಸಲು ಉದ್ದೇಶಿಸಿ ಅವರ ಮೇಲೆಯೆ ದಾಳಿ ಮಾಡುತ್ತಾನೆ. ಸಾಯುತ್ತಾನೆ. ಆನಂತರ ಆತ ಶಾಪಗ್ರಸ್ತ ವಿದ್ಯಾಧರ ಎಂಬುದು ತಿಳಿಯುತ್ತದೆ. ಆತ ರಾಮನಿಂದಲೆ ಮುಕ್ತಿ ಪಡೆದು ದೇವಲೋಕಕ್ಕೆ ಹೋಗುತ್ತಾನೆ. ತಾನೊಬ್ಬಳು ಹೆಣ್ಣಾಗಿ ಹಳೆಯ ಕಥನದ ಬಗ್ಗೆ ಯಾವುದೆ ವ್ಯಾಖ್ಯಾನ ಅಥವಾ ತಕರಾರು ಇಲ್ಲದೆ ನಿಯತ ಲಯದಲ್ಲಿ ಲತಾರವರು ವಿರಾಧ ಪ್ರಸಂಗವನ್ನು ಕಟ್ಟಿದ್ದಾರೆ. ಹೆಣ್ಣೊಬ್ಬಳು ಬರೆದ ಕಾವ್ಯವಾಗಿ ಇಲ್ಲಿ ಈ ಪ್ರಸಂಗದಲ್ಲಿ ಯಾವ ಬಗೆಯ ವಿಶಿಷ್ಟತೆಗಳೂ ಇಲ್ಲ. ಹಾಗೆಯೆ ಇಲ್ಲಿ ಕಾಕರಾಜ ಪ್ರಸಂಗವೂ ಇಲ್ಲ.

ಶಾಪ ಮತ್ತು ವಿಮೋಚನೆಯ ಸಂಕಥನಗಳು ಕಾವ್ಯಗಳಲ್ಲಿ ತಮಗೆ ಬೇಕಾದ ಪಾತ್ರಗಳನ್ನು ಕಾಪಾಡಿಕೊಳ್ಳಲು ನಮ್ಮ ಸಮಾಜ ಕಟ್ಟಿಕೊಂಡ ಕಾವ್ಯಸಮರ್ಥನೆಗಳು ಮಾತ್ರ. ಕಾಕರಾಜ ಮತ್ತು ವಿರಾಧರ ವಿಚಾರದಲ್ಲಿಯು ಅಂತಹ ಶಾಪದ ಕಥೆಗಳನ್ನು ಇಲ್ಲಿ ಕಟ್ಟಲಾಗಿದೆ. ಯಾರಾದರು ಯಾರಿಗಾದರು ಶಾಪ ಹಾಕಿ ಅದು ನಿಜ ಆಗುವುದುಂಟೆ?

ಈ ಎರಡೂ ಪ್ರಸಂಗಗಳಲ್ಲಿ ಒಬ್ಬೊಬ್ಬರ ನಿರೂಪಣೆಯಲ್ಲು ಅಲ್ಪಸ್ವಲ್ಪ ವ್ಯತ್ಯಾಸಗಳು ಇವೆಯಾದರೂ ಎರಡೂ ಸೀತೆಯ ಮೇಲೆ ನಡೆದ ಲೈಂಗಿಕ ದಾಳಿಗಳು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ರಾಮಾಯಣ ಕಥನಗಳಲ್ಲಿ ಇವಕ್ಕೆ ಹೆಚ್ಚಿನ ಪ್ರಾಶಸ್ತ್ರ ಸಿಕ್ಕಿಲ್ಲವಷ್ಟೆ. (ವಾಲ್ಮೀಕಿಯಲ್ಲಿ ಮಯಂಕ ಎಂಬ ರಕ್ಕಸ ಸೀತೆ ಸ್ನಾನ ಮಾಡುತ್ತಿರುವಾಗ ಇಣುಕಿನೋಡಿ ಲಕ್ಷ್ಮಣನಿಂದ ಶಿಕ್ಷಿತನಾದ ಪ್ರಸಂಗವಿದೆ)

ತಮ್ಮ ತಪ್ಪಿಗಾಗಿ ಪಡೆದ ಶಾಪಕಾರಣದಿಂದ ಪಡೆಯುವ ಜನ್ಮಗಳಲ್ಲಿ ಕಾಗೆಯ ಜನ್ಮವನ್ನು ಪಡೆಯುವುದು ಕನಿಷ್ಠಾತಿಕನಿಷ್ಠ ಜನ್ಮಗಳಲ್ಲಿ ಒಂದು ಎಂಬ ನಂಬಿಕೆ ನಮ್ಮಲ್ಲಿದೆ. ಕಾಗೆಯನ್ನು ಪಿಂಡ ತಿನ್ನುವ ಪಕ್ಷಿ, ಅಪಶಕುನದ ಪಕ್ಷಿ ಎಂದೆ ನಮ್ಮವರು ನಂಬುತ್ತ ಬಂದಿದ್ದಾರೆ. ನಮ್ಮ ಸಮಾಜದಲ್ಲಿ ಕೀಳಿಗೆ ಇದು ಪ್ರತೀಕ. ಕೆಲ ಜನಸಮುದಾಯವನ್ನು ಕೀಳಿನ ಪ್ರತೀಕವಾಗಿ ರಾಕ್ಷಸರು ಎಂದು ನಾಮಕರಣ ಮಾಡಲಾಗಿದೆ. ಕಾಗೆಯ ರೂಪದ ರಾಕ್ಷಸ ಎಂದರೆ ಅದು ಇನ್ನೂ ದುಪ್ಪಟ್ಟು ಕೀಳಿನ ಪ್ರತೀಕ. ಇಂತಹ ಕೀಳಾದ ಜೀವರೂಪ ಪಡೆದ ಕಾಕರಾಜನನ್ನು ಕೆಲವೆಡೆ ಕಾಕರಾಜ ಎನ್ನಲಾಗಿದ್ದರೆ ಕೆಲವೆಡೆ ಕಾಕಾಸುರ, ವಾಯಸಾಸುರ ಎನ್ನಲಾಗಿದೆ. ತಮಗೆ ಆಗದೆ ಇರುವ ಜನಸಮುದಾಯವನ್ನು ಹೀಗಳೆಯಲು (ಕೀಳಾಗಿ ಬಿಂಬಿಸಲು, ಬೀಳುಗಳೆಯಲು) ನಮ್ಮ ಪ್ರಾಚೀನರು (ವಿಶೇಷವಾಗಿ ಶೈವ ಪಂಥೀಯರನ್ನು ಹೀಗಳೆಯಲು ವೈಷ್ಣವ ಪಂಥೀಯರು) ಇಂತಹ ಕಾವ್ಯರೂಪಕಗಳನ್ನು ಆಶ್ರಯಿಸಿದ್ದಾರೆ. ಕಾಕರಾಜ ಎಂದರೆ ಆತ ಒಬ್ಬ ರಕ್ಕಸ ಸಮುದಾಯದ ದೊರೆಯೆ ಇರಬಹುದು. ಸೀತೆಯನ್ನು ರಾವಣ ಅಪಹರಿಸುವ ಮುನ್ನ ಆಕೆಯನ್ನು ಪಡೆಯಲು ಈತ ದಾಳಿ ಮಾಡಿರಬಹುದು. ಅದನ್ನೆ ರೂಪಕ ಭಾಷೆಯಲ್ಲಿ ಹೀಗೆ ಕತೆ ಕಟ್ಟಲಾಗಿದೆ. ಹೆಣ್ಣು ಅಂದರೆ ಭೋಗಸಾಮಗ್ರಿ ಮಾತ್ರವೇನಾ!

ರಾಮಾಯಣದಲ್ಲಿ ಮಾತ್ರವಲ್ಲ ಮಹಾಭಾರತದಲ್ಲು ಶ್ರೀಕೃಷ್ಣನನ್ನು ಕೊಲ್ಲಲು ಕಾಕಾಸುರ ಎಂಬ ರಾಕ್ಷಸ ಬಂದು ಕೃಷ್ಣನಿಂದಲೆ ಹತನಾಗುವ ಪ್ರಸಂಗವೊಂದಿದೆ. ಇಂದಿಗು ನಮ್ಮಲ್ಲಿ ಮೈಸೂರು ಸೀಮೆಯಲ್ಲಿ ಕಾಕಾಸುರ ಎಂಬ ಉಪನಾಮದ ಹಲವರಿದ್ದಾರೆ. ಮೈಸೂರು ಪಾಕ್‌ ಕಂಡುಹಿಡಿದ ಮೈಸೂರು ಅರಸರ ಬಾಣಸಿಗ ಮಾದಪ್ಪನವರು ಕಾಕಾಸುರ ಮಾದಪ್ಪ ಎಂದೆ ಪ್ರಸಿದ್ಧರು. ಹೀಗಾಗಿ ಈ ಕಾಕಾಸುರ ಹೆಸರು ಒಂದು ಸಮುದಾಯದ ಪ್ರತೀಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ತಮಗೆ ಆಗದ ಸಮುದಾಯಗಳನ್ನು ಹೀಗೆ ಹೆಣ್ಣುಬಾಕರೆಂದೂ, ನರಭಕ್ಷಕರೆಂದೂ, ಕರಿಯರೆಂದೂ, ಅತ್ಯಾಚಾರಿ ಕಾಮುಕರೆಂದೂ, ಹೆಣ್ಣುಗಳ ಅಪಹರಣಕಾರರೆಂದೂ, ಜನ್ಮಜನ್ಮಾಂತರದ ಶಾಪಗ್ರಸ್ಥರೆಂದೂ,

ರಕ್ಕಸರೆಂದೂ, ಮಾನವರೇ ಅಲ್ಲವೆಂದೂ, ಪಶುಸಮಾನರೆಂದೂ, ಪಕ್ಷಿಸಮಾನರೆಂದೂ ನಂಬಿಸುವ, ಬ್ರ್ಯಾಂಡು ಮಾಡಿ ಚಿತ್ರಿಸುವ; ವಲಸೆ ಬಂದೂ ಸ್ಥಳೀಯರ ನೆಲವನ್ನು ಆಕ್ರಮಿಸಿಕೊಂಡೂ, ಸ್ಥಳೀಕರ ಭಾವನೆಗಳಿಗೆ ಬೆಲೆಕೊಡದ ತಮ್ಮ ಕಡೆಯವರನ್ನು ಶಾಪವಿಮೋಚಕರೆಂದೂ, ದೇವಮಾನವರೆಂದೂ ಚಿತ್ರಿಸುವ ರಾಜಕಾರಣವನ್ನು ಏನೆಂದು ಕರೆಯೋಣ?! ಲೈಂಗಿಕ ದಾಳಿಯನ್ನು ಲೈಂಗಿಕ ದಾಳಿ ಎನ್ನದೆ ಶಾಪಗ್ರಸ್ತತೆ ಎನ್ನುವ ರಾಜಕಾರಣವನ್ನು ಏನೆಂದು ಕರೆಯೋಣ? ಕೊಲೆ ಮತ್ತು ದೈಹಿಕ ವಿರೂಪೀಕರಣದ ಅಪರಾಧವನ್ನೆ ಆತ್ಮರಕ್ಷಣೆ ಮತ್ತು ಶಾಪವಿಮೋಚನೆ ಎನ್ನುವ ರಾಜಕಾರಣವನ್ನು ಜನಾಂಗೀಯ ಹುನ್ನಾರ ಎನ್ನದೆ ಇನ್ನೇನೆನ್ನೋಣ!?

ಈ ಅಂಕಣದ ಹಿಂದಿನ ಬರೆಹಗಳು:
ರಾಮಾಯಣ ಸಂಕಥನ -03
ರಾಮಾಯಣ ಸಂಕಥನ 2
ರಾಮಾಯಣ ಸಂಕಥನ-1
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ

ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...